1

ನನ್ನ ಕೃಷ್ಣ ನೀನು
ನೀನು ಸಿಕ್ಕ ಕಾರಣಕ್ಕೆ
ರಾಧೆಯಾದವಳು ನಾನು
ಅಂತರಾಳದ ಮುರಳಿಯನ್ನೊಮ್ಮೆ
ನುಡಿಸಿಬಿಡು
ಭವಸಾಗರಗಳ ಕ್ಷಣದಲ್ಲಿ
ದಾಟಿಬಿಡುವೆ ನಾನು

ರೆಪ್ಪೆಯಡಿಯಲ್ಲಿ ಮುತ್ತಾಗುವ
ಘಳಿಗೆಗೆ ಲೇಬರ್ ವಾರ್ಡಿನ
ಸಹವಾಸ ಸಾಕಾಗಿದೆ
ಮತ್ತಷ್ಟು ಹೊತ್ತು ಉಸಿರಾಡುತ್ತಾ
ಕೂರುವ ವ್ಯವಧಾನವೆಲ್ಲಿದೆ

ಕೃಷ್ಣ
ಎನ್ನುತ್ತಾ
ಕಳೆದುಕೊಳ್ಳುತ್ತೇನೆ
ನನ್ನೆ ನಾ

2
ಮುಗಿಲ ಸಂಗ ತೊರೆದ
ಮಳೆ ಹನಿಯಂತೆ
ನಾನಿಲ್ಲಿ ನೋಯುತ್ತಿರುವೆ
ನಿನ್ನನೇ ನೆನೆದು
ನಾನೇ ಹತ್ತಿರುವ ಚಕ್ರ
ತಿರುಗುತ್ತದೆ
ರೂಢಿಯಂತೆ
ಹಲವು ನಿಲ್ದಾಣಗಳಲ್ಲಿ
ಹಂಚಿಹೋಗಿರುವ
ಬದುಕಿನ ತುಣುಕುಗಳನ್ನು
ಆರಿಸಿಕೊಳ್ಳುತ್ತಾ
ಮುದ್ದಾಗಿ ಚಿತ್ರವನ್ನು
ಪೂರ್ಣಗೊಳಿಸುತ್ತಾ
ಸಣ್ಣದೊಂದು ಖಾಲಿತನವನ್ನು
ಚಿತ್ರದಡಿಯಲ್ಲಿ
ಮರೆಮಾಚುತ್ತಾ…
ಆ ಸಣ್ಣ ನೋವಾದರೂ
ಅದೆಷ್ಟು ಚಂದ
ಎದೆಯ ಗೆಸ್ಟ್ ಹೌಸಿನಲಿ
ಆಗಾಗ ಬಂದು
ಉಳಿದು
ಹೋಗುತ್ತಿರಲಿ

ನನ್ನದೇನೂ
ಅಭ್ಯಂತರವಿಲ್ಲ

3

ಆ ಒಣ ಮರ
ಸತ್ತೇ ಹೋಗಿದೆ ಎನಿಸುವಷ್ಟು
ಎಲ್ಲವನ್ನೂ ಒದರಿ ನಿಂತ ಮರ
ಈ ವಸಂತಕ್ಕೇ ಕಾದಿತ್ತೆಂಬಂತೆ
ಚಿಗುರಿದೆ ನೋಡು
ನನ್ನ ಎದೆ ನಿನ್ನ ಉಸಿರಿಗೆ
ನುಡಿದದ್ದು ಹಾಗೆಯೇ
ಮತ್ತದನ್ನು ಒಂಟಿ ಮಾಡಿ
ಬಿಟ್ಟು ಹೋದವನು ನೀನು
ಈಗದರ ಅಸ್ತಿತ್ವವೇನು
ಧ್ವನಿ ಸೋತ ಮೂಕಹಕ್ಕಿಗೆ
ಹಾಡಲು ಹೇಳಿದವರಾರು
ಸಣ್ಣ ತಂತುವಿನಷ್ಟು ನಾಜೂಕು
ಜೀವವೊಂದು ಬದುಕಲು ಹಂಬಲಿಸುತ್ತಿದೆ
ಹೂತ ಧ್ವನಿಯ ಹೊರತೆಗೆಯುತ್ತಿದೆ
ಎದೆಯ ಬಾಗಿಲಿಗೆ ತೋರಣ ಕಟ್ಟಿ
ರಂಗವಲ್ಲಿಯ ಹಾಕಿ ಕಾಯುತ್ತಾ
ನಿರೀಕ್ಷೆಗಳಿಗೆ ಸಾವಿಲ್ಲ
ಮತ್ತೆ ಮತ್ತೆ ಆಸೆಯ ತೆಕ್ಕೆಗೆ ಬೀಳುತ್ತವೆ

ಏನಾದರಿರಲಿ
ಒಣಗಿದ ಎದೆಗಳಿಗೆ
ಸಂಜೀವಿನಿಯಂಥ
ಉಸಿರಿನ ಭ್ಯಾಗ್ಯವೊಂದು
ಸಿಗುತ್ತಿರಲಿ
ನಿನ್ನ ಬೆರಳುಗಳ ಒತ್ತಡಕ್ಕೆ ಸಿಕ್ಕು
ಹಿತವಾಗಿ ನರಳುವಂತಾಗಲಿ