ದಡವಾಗಿರುವೆ..
ಬೆರಳ ಬೆಸೆದು ಹೊರಟಿರುವಾಗ
ಈ ಆಷಾಢ ಗಾಳಿಗೇಕೆ ಇಷ್ಟು ಅವಸರ
ಕಾರ್ಮೋಡದ ಒಡಲ ಹನಿಗಳು ಒಲೆ ಮೇಲಿನ ಹಾಲಂತೆ ಉಕ್ಕಿ ಬರುವಾಗ
ಸೊಕ್ಕಿ ನಿಂತ ಯೌವನಕ್ಕೇಕೆ ಇಷ್ಟು ಬಾಯಾರಿಕೆ
ಒಡಲ ತುಂಬಾ ನದಿ ಹರಿಯುವಾಗ ಹಸಿರ ಮುಡಿದ ನೆಲಕ್ಕೇಕೆ ನಾಚಿಕೆ!
ಸಂಗೀತ ಕಲಿಯದ ಹಕ್ಕಿ ಎಂದೂ ರಾಗ ತಪ್ಪಲಿಲ್ಲ
ಗೂಡೊಳಗಿನ ಗುಟ್ಟ ಎಂದೂ ಬಿಟ್ಟು ಕೊಡಲಿಲ್ಲ,
ಏನೆಲ್ಲ ಕಲಿತ ನಾವೇಕೆ ಅರಿಯಲಿಲ್ಲ?
ಬೇರುಗಳ ಎದೆಯಲ್ಲಿ ನೀರ ತುಂಬಿ ಹಣ್ಣಿನೆದೆಗೆ ಸಿಹಿ ಹಂಚುವ ಕೆಲಸ ನಮಗೇಕೆ ಬರಲಿಲ್ಲ?
ಬೀಸುವ ಗಾಳಿಯ ವಿಳಾಸ ಹುಡುಕ ನಿಂತ ಹೆಜ್ಜೆ ನನ್ನದು
ಮರದೆಲೆಯ ಮೌನ ಆಲಿಸುವ ಕಿವುಡತನ ಬರಬೇಕಿದೆ
ಹೀಗೆ ಅಲೆ ಅಲೆದು ಅಲೆಮಾರಿಯ ಗುರುತಿಗೆ ಕಾಗದ ಬರೆದು, ಖಾಲಿಯಾಗಬೇಕಿದೆ!
ಬಿದ್ದ ಮಳೆಯ ಜೊತೆಗೆ ಎದ್ದ ಮೊಳಕೆಯಂತೆ ಸದ್ದಿಲ್ಲದೆ ಚಿಗುರಬೇಕಿದೆ!
ಹೀಗೆ ಮಳೆ ಹನಿಗಳ ಎಣಿಸಿ ಲೆಕ್ಕ ಬರೆಯುವ ಲೆಕ್ಕಿಗನ ಕೆಲಸ ಹುಡಕ ಹೊರಟಿರುವೆ!
ಆಕಾಶದ ಅಂಗೈಯಲ್ಲಿ ಗೆರೆ ನೋಡಿ ಭವಿಷ್ಯ ಹೇಳದೆ,
ವರ್ತಮಾನದ ಎದೆ ಬಡಿತವಾಗಿರುವೆ.
ಕಡಲ ಕಣ್ಣಲ್ಲೂ ಕಣ್ಣೀರು ಬರಬಹುದು
ಒರೆಸಲು ನಿಂತ್ತ ವಿರಹಿ ಪ್ರೇಮಿಯಂತೆ ದಡದಲ್ಲೇ ನಿಂತ್ತಿರುವೆ ಅವಳ ನೆನಪಲ್ಲಿ.
ಅಲೆ ಅಪ್ಪಳಿಸಿ ಹೋದ ಹಾಗೆ ಹೋದವಳ ನೆನೆಯುತ್ತಾ
ದಡವಾಗಿ ನಿಂತಿರುವೆ!
ಚಾಂದ್ ಪಾಷ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು.
ಪ್ರಸ್ತುತ ಬೆಂಗಳೂರು ವಾಸಿ.
“ಮೌನದ ಮಳೆ” ಇವರ ಚೊಚ್ಚಲ ಕವನ ಸಂಕಲನ.
ಚಾಂದ್ ಪಾಷ ಮೂಲತಃ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು. ಸಧ್ಯ ಬೆಂಗಳೂರು ವಾಸಿ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು, ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. “ಮೌನದ ಮಳೆ”, “ಚಿತ್ರ ಚಿಗುರುವ ಹೊತ್ತು” ಮತ್ತು “ಒದ್ದೆಗಣ್ಣಿನ ದೀಪ” ಇವರ ಪ್ರಕಟಿತ ಕವನ ಸಂಕಲನಗಳು