ರಜೆ ಮುಗಿದು ಕೆಲಸಕ್ಕೆ ವಾಪಸ್ಸಾದ ಸಹೋದ್ಯೋಗಿಗಳನ್ನು ‘ರಜೆಯಲ್ಲಿ ಏನೇನು ಮಾಡಿದಿರಿ’ ಎಂದು ಕೇಳುವುದು ಜನವರಿ ತಿಂಗಳ ಮೊದಲವಾರದ ಅತ್ಯಂತ ಮುಖ್ಯವಾದ ಕೆಲಸ. ಇದನ್ನು ಯಾರೂ ಮರೆಯುವಂತಿಲ್ಲ. ಹಾಗೆ ಕೇಳಿ ಅವರು-ನಾವು ಹೇಳುವ, ಹಂಚಿಕೊಳ್ಳುವ ಕಥೆಗಳು ರೋಚಕವೂ, ರಂಜನೀಯವೂ ಆಗಿರುತ್ತದೆ. ಈ ಬಾರಿ ಯಾತಕ್ಕೋ ಕೆಲವರು ರಜೆಯೆಲ್ಲ ಮನೆ ರಿಪೇರಿ ಕೆಲಸದಲ್ಲೇ ಕಳೆಯಿತು ಎಂದು ಉದ್ಗಾರವೆಳೆದರು. ಸ್ವಂತ ಮನೆಯಿದ್ದರೆ ನಾವು ಮಾಡುವ ರಿಪೇರಿ ಕೆಲಸಗಳಿಗೆ ಕೊನೆ-ಮೊದಲಿರುವುದಿಲ್ಲ. ಹೆಚ್ಚಿನ ಕೆಲಸಗಳನ್ನು ನಾವೇ ಮಾಡಬೇಕು. ಯಾಕೆಂದರೆ ಆಸ್ಟ್ರೇಲಿಯಾದಲ್ಲಿ ಟ್ರೇಡಿಗಳು ಬಹಳ ದುಬಾರಿ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಕ್ರಿಸ್ಮಸ್ ಹಬ್ಬ ಬಂದು ಹೋಯ್ತು. ಕ್ಯಾಲೆಂಡರ್ ಹೊಸವರ್ಷ ಕಣ್ತೆರೆದೂ ಆಯ್ತು. ಇನ್ನೂ ಕೆಲವರು ಕ್ರಿಸ್ಮಸ್ ಭರ್ಜರಿ ಸಂಜೆಯೂಟವನ್ನು ಮೆಲುಕು ಹಾಕುತ್ತಿದ್ದಾರೆ. ಆಸ್ಟ್ರೇಲಿಯಾದ ಬೇಸಿಗೆ ಕ್ರಿಸ್ಮಸ್ ಪದ್ಧತಿಯಂತೆ prawns, ಮೀನು, BBQ ಇರಬೇಕು. ಬ್ರಿಟನ್ನಿನ ಚಳಿಗಾಲದ ಪದ್ಧತಿಯಂತೆ ಟರ್ಕಿ ಕೋಳಿ ರೋಸ್ಟ್, ಕ್ರ್ಯಾನ್ಬೆರಿ ಸೌಸ್, ಆಲೂಗಡ್ಡೆ ರೋಸ್ಟ್, ಕ್ಯಾರೆಟ್, ಸ್ವೀಡ್/ಟೂರ್ನಿಪ್ ಮ್ಯಾಶ್, Yorkshire ಪುಡ್ಡಿಂಗ್ ಜೊತೆ ಗ್ರೇವಿ, ರೋಸ್ಟ್ ತರಕಾರಿಗಳು, ಕ್ರಿಸ್ಮಸ್ ಪುಡ್ಡಿಂಗ್ ಜೊತೆ ಕ್ರೀಮ್, ಇವೆಲ್ಲಾ ಇರಬೇಕು. ಇಷ್ಟೆಲ್ಲಾ ತಿಂದು ತೇಗಿ ಮರುದಿನ ಸುಧಾರಿಸಿಕೊಳ್ಳುತ್ತಾ ಕ್ರಿಸ್ಮಸ್ ಉಡುಗೊರೆಗಳ ಬಾಕ್ಸ್ ತೆಗೆದು, ಕೆಲವನ್ನು ಚಾರಿಟಿ ಹೋಮ್‌ಗಳಿಗೆ ದಾನ ಮಾಡಲು ತೆಗೆದಿಡಬೇಕು. ಭುಕ್ತಾಯಾಸವನ್ನು ಪರಿಹರಿಸಿಕೊಳ್ಳುತ್ತಾ ಮನೆಮಂದಿ, ಸ್ನೇಹಿತರೊಡನೆ ಆಟಪಾಟಗಳನ್ನು ಆನಂದಿಸಬೇಕು.
ಆಸ್ಟ್ರೇಲಿಯಾದ ಬಹಳಷ್ಟು ಉದ್ಯೋಗಸ್ಥಳಗಳಲ್ಲಿ ಕ್ರಿಸ್ಮಸ್ ದಿನದಿಂದ ಹಿಡಿದು ಜನವರಿ ಒಂದನೇ ತಾರೀಕಿನವರೆಗೆ ರಜೆಯಿರುತ್ತದೆ. ಮಾಮೂಲಾಗಿ retail, ವೈದ್ಯಕೀಯ ಮುಂತಾದ ವೃತ್ತಿಗಳವರಿಗೆ ಕೆಲಸ ತಪ್ಪಿದ್ದಲ್ಲ. ಜನರು ಒಂದು ವಾರ ಪೂರ್ತಿ ಸಿಕ್ಕುವ ರಜೆಯನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ಅನುಭವಿಸುತ್ತಾರೆ. ನಾವುಗಳು ಎರಡನೇ ಬಾರಿ Bundaberg ಊರಿಗೆ ಹೋದೆವು. ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕಬ್ಬು ಬೆಳೆಯುವ ಈ ಪ್ರದೇಶವು ಬಂದರು, Bundaberg Sugar, ಜಿಂಜರ್ ಬಿಯರ್, ರಮ್, ಮತ್ತು ಹಣ್ಣಿನ ತೋಟಗಳಿಗೆ ಹೆಸರುವಾಸಿ. ಇಲ್ಲಿದೆ ವಿಶ್ವಪ್ರಸಿದ್ಧ Mon Repos ಎಂಬ ಕಡಲಾಮೆಗಳ ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರ. ಇವರು ನಡೆಸುವ ಸಾರ್ವಜನಿಕ ಅರಿವು-ಶಿಕ್ಷಣ ಕಾರ್ಯಕ್ರಮಗಳಲ್ಲಿ ಒಂದು ಪ್ರತ್ಯಕ್ಷವಾಗಿ ಕಡಲಾಮೆ ಮೊಟ್ಟೆಯಿಡುವುದನ್ನು ನೋಡುವುದು.
ಅಲ್ಲಿನ ಸಮುದ್ರತೀರಕ್ಕೆ ಬಂದು ಮೊಟ್ಟೆಯಿಡುವ ಕಡಲಾಮೆಗಳನ್ನು ನೋಡಲು ಸುಲಭ. ರಾತ್ರಿಯ ಕತ್ತಲಲ್ಲಿ ಗರ್ಭಾವಸ್ಥೆಯಲ್ಲಿದ್ದ loggerhead, ಗ್ರೀನ್, leatherback ಆಮೆಗಳು ಅಲೆಗಳಿಂದ ಹೊರಬಂದು ನಿಧಾನವಾಗಿ ತೆವಳುವುತ್ತಾ ಹೋಗಿ ತೀರದಲ್ಲಿದ್ದ ಮರಳುಗುಡ್ಡೆಗಳಲ್ಲಿ ಒಂದನ್ನು ಆಯ್ದುಕೊಂಡು ಶ್ರಮಪಟ್ಟು ಗುಂಡಿ ತೋಡುತ್ತವೆ. ತಮ್ಮ ತೆವಳುವಿಕೆಗೆ ಏನಾದರೂ ಅಡ್ಡಿಯಾದರೆ, ಮರಳುಗುಡ್ಡೆಗಳು ಇಷ್ಟವಾಗದಿದ್ದರೆ ವಾಪಾಸ್ ಸಮುದ್ರಕ್ಕೆ ಹೋಗಿ, ಅಲ್ಲೇ ಅಲೆಗಳಲ್ಲಿದ್ದು ಪುನಃ ತೀರಕ್ಕೆ ಬರುತ್ತವೆ. ನಾವು ಹೋದಾಗ ಹೀಗೆ ಎರಡು ಆಮೆಗಳು ವಾಪಸ್ ಹೋದವು. ಕಡೆಗೂ ತಾನು ಆರಿಸಿಕೊಂಡ ಮರಳುಗುಡ್ಡೆಯಲ್ಲಿ ತೋಡಿದ ಗುಂಡಿಯೊಳಗೆ ತನ್ನ ಗರ್ಭದಿಂದ ಮೊಟ್ಟೆಗಳನ್ನು ಜಾರಿಸುವುದನ್ನು ನೋಡುವುದು ಮನುಷ್ಯರಿಗೆ ಕುತೂಹಲದ ಕಾರ್ಯಕ್ರಮ. ಈ ಕೆಟ್ಟ ಕುತೂಹಲವನ್ನು ಬೈದುಕೊಳ್ಳುತ್ತಲೆ ನೋಡಿದ್ದಾಯ್ತು.
Bundaberg ಇಂದ ಒಂದೂವರೆ ಗಂಟೆ ದೋಣಿ ಪ್ರಯಾಣ ಮಾಡಿ ದಕ್ಷಿಣ ಗ್ರೇಟ್ ಬ್ಯಾರಿಯರ್ ರೀಫ್‌ಗೆ ಹೋಗುವುದು ಇನ್ನೊಂದು ಕಾರ್ಯಕ್ರಮ. ಸಮುದ್ರದ ನೀರಿನಲ್ಲಿ snorkelling ಮಾಡುತ್ತಾ ಕಡಲ ಜೀವನವನ್ನು ವೀಕ್ಷಿಸುವುದು ಬಹಳ ಚೆನ್ನಾಗಿರುತ್ತದೆ. ಜೊತೆಗೊಂದಿಷ್ಟು tanning! ಕಡುಬೇಸಿಗೆ ಸೂರ್ಯನ ಕೃಪೆಯಿಂದ ಚರ್ಮ ಸುಟ್ಟು ಬೆಳ್ಳಗಿರುವವರು ಕೆಂಪಾಗುವುದು, ಕೆಂಪಾಗಿರುವವರು ಕಂದು ಬಣ್ಣ ಪಡೆಯುವುದು, ಕಂದು ಬಣ್ಣದವರು ಅಂದರೆ ನನ್ನಂತಹವರು ಅಚ್ಚ ಕಪ್ಪು ಬಣ್ಣವನ್ನು ಮುಖ, ಮೈಗಳಿಗೆ ಮೆತ್ತಿಕೊಳ್ಳುವುದು. ಈ ಗಂಭೀರವಾದ ನೈಸರ್ಗಿಕ sun-burn tanning ಹೋಗಲು ತಿಂಗಳುಗಳೇ ಬೇಕಾಗುತ್ತದೆ.
ರಜೆ ಮುಗಿದು ಕೆಲಸಕ್ಕೆ ವಾಪಸ್ಸಾದ ಸಹೋದ್ಯೋಗಿಗಳನ್ನು ‘ರಜೆಯಲ್ಲಿ ಏನೇನು ಮಾಡಿದಿರಿ’ ಎಂದು ಕೇಳುವುದು ಜನವರಿ ತಿಂಗಳ ಮೊದಲವಾರದ ಅತ್ಯಂತ ಮುಖ್ಯವಾದ ಕೆಲಸ. ಇದನ್ನು ಯಾರೂ ಮರೆಯುವಂತಿಲ್ಲ. ಹಾಗೆ ಕೇಳಿ ಅವರು-ನಾವು ಹೇಳುವ, ಹಂಚಿಕೊಳ್ಳುವ ಕಥೆಗಳು ರೋಚಕವೂ, ರಂಜನೀಯವೂ ಆಗಿರುತ್ತದೆ. ಈ ಬಾರಿ ಯಾತಕ್ಕೋ ಕೆಲವರು ರಜೆಯೆಲ್ಲ ಮನೆ ರಿಪೇರಿ ಕೆಲಸದಲ್ಲೇ ಕಳೆಯಿತು ಎಂದು ಉದ್ಗಾರವೆಳೆದರು. ಸ್ವಂತ ಮನೆಯಿದ್ದರೆ ನಾವು ಮಾಡುವ ರಿಪೇರಿ ಕೆಲಸಗಳಿಗೆ ಕೊನೆ-ಮೊದಲಿರುವುದಿಲ್ಲ. ಹೆಚ್ಚಿನ ಕೆಲಸಗಳನ್ನು ನಾವೇ ಮಾಡಬೇಕು. ಯಾಕೆಂದರೆ ಆಸ್ಟ್ರೇಲಿಯಾದಲ್ಲಿ ಟ್ರೇಡಿಗಳು ಬಹಳ ದುಬಾರಿ. ಟ್ರೇಡಿ ಅಂದರೆ tradesmen – ಕಾರ್ಪೆನ್ಟರ್, ಪ್ಲಮ್ಬರ್, ಎಲೆಕ್ಟ್ರಿಷಿಯನ್ ಇತ್ಯಾದಿ ವೃತ್ತಿಪರರು. ಇವರಿಗಿಂತ ಸ್ವಲ್ಪ ಭಿನ್ನವಾದವನು handiman – ಇವ ಎಲ್ಲಾ ರೀತಿಯ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡುತ್ತಾನೆ. ಇವರೆಲ್ಲರೂ hourly ರೇಟ್ ಪ್ರಕಾರ ಕೆಲಸ ಮಾಡುತ್ತಾರೆ. ಅಂದರೆ ಪ್ರತಿ ಒಂದು ಗಂಟೆ ಕೆಲಸಕ್ಕೂ ಇಷ್ಟು ಡಾಲರ್ ಚಾರ್ಜ್ ಇರುತ್ತದೆ. ಎಂಭತ್ತು ಡಾಲರ್ ಇಂದ ಹಿಡಿದು ನೂರೈವತ್ತು ಡಾಲರ್ ತನಕ. ಅವರದ್ದೇ ಸಲಕರಣೆಗಳನ್ನು (ಟೂಲ್ಸ್) ತಂದು ಉಪಯೋಗಿಸಿದರೆ ಇನ್ನೂ ಹೆಚ್ಚಿನ ಚಾರ್ಜ್.
ಈ ದುಬಾರಿ ಫೀಸ್ ತೆರಲಾಗದ ಅನೇಕ ಮಧ್ಯಮವರ್ಗ ಜನರು ತಾವೇ ಮನೆ ರಿಪೇರಿ ಕೆಲಸ ಮಾಡುವುದನ್ನು ಕಲಿತು ಮಾಡುತ್ತಾರೆ. ಅವಲ್ಲಿ ಮುಖ್ಯವಾದವು ಮನೆಮಾಡಿನ ಮೇಲೆ ಹತ್ತಿ ಮಳೆನೀರು ಕಾಲುವೆಗಳನ್ನು (gutters) ಸ್ವಚ್ಛ ಮಾಡುವುದು, ಸುಣ್ಣಬಣ್ಣ ಮಾಡುವುದು, ಮನೆಗೆ alterations ಮಾಡುವುದು, ಕಟ್ಟಡಕ್ಕೆ ಇರುವೆ-ಗೆದ್ದಲು ಬರದಂತೆ ನೋಡಿಕೊಳ್ಳುವುದು, ನಲ್ಲಿ, ಬಿಸಿನೀರು ಟ್ಯಾಂಕ್ ಸರಿಯಾಗಿವೆಯೇ ಎಂದು ಗಮನಿಸುವುದು, ಕಟ್ಟಡಕ್ಕೆ ಹತ್ತಿಕೊಳ್ಳುವ ಜೇಡರಬಲೆಗಳನ್ನು ತೆಗೆಯುವುದು, ಹೀಗೇ ಅದೇನೇನೋ ಕೆಲಸಗಳಿರುತ್ತವೆ. ಇದಕ್ಕೆ Do It Yourself (DIY) ಅನ್ನುತ್ತಾರೆ.
ಕಟ್ಟಡಕ್ಕೆ ಸಂಬಂಧಿಸಿದ ಕೆಲಸಗಳಿಗೆ ಸಂಬಂಧಿಸಿದಂತೆ ಅನೇಕರು ಹೋಗುವುದು Bunnings Warehouseಗೆ. ಇದು ಆಸ್ಟ್ರೇಲಿಯಾದ ಬಹುಪ್ರಸಿದ್ಧ ಗುರುತು (icon). ಇಲ್ಲಿ ಏನಿದೆ, ಏನಿಲ್ಲ ಎಂದು ಹೇಳುವುದು ಕಷ್ಟ. ಪೇಯಿಂಟ್, ಗಾರ್ಡೆನಿಂಗ್, BBQ, ಹೊರಾಂಗಣ ಪೀಠೋಪಕರಣಗಳು, ಕಟ್ಟಡ ಕೆಲಸಕ್ಕೆ ಬೇಕಾದ ಎಲ್ಲಾ ತರಹದ ವಸ್ತುಗಳು, ಸಿದ್ಧಪಡಿಸಿದ ಮರ, ಸ್ಟೀಲ್, ಬಾತ್ರೂಮ್ ಮತ್ತು ಅಡುಗೆಮನೆ ಸೆಟ್‌ಗಳು ಮತ್ತು ಉಪಕರಣಗಳು, ಕ್ಯಾಂಪಿಂಗ್‌ಗೆ ಬೇಕಾದ ಸಾಧನಗಳು, ಆಫೀಸ್‌ಗೆ ಬೇಕಾದ ವಸ್ತುಗಳು, ವಾಟರ್ ಟ್ಯಾಂಕ್, ಎಲ್ಲಾ ನಮೂನೆ ಗಾತ್ರದ ಮೊಳೆ, ಸ್ಕ್ರೂ, ಎಲ್ಲವೂ ಸಿಗುತ್ತದೆ. ಹೆಚ್ಚುಕಡಿಮೆ ಪ್ರತಿ ಮೂರು-ನಾಲ್ಕು ಬಡಾವಣೆಗಳಿಗೊಂದು ಇದೆ. Bunnings ಗೆ ಹೋಗದಿರುವವರು ವಿರಳ. ಹಾಗೆ ಹೋಗದೇ ಇರುವವರು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು (ಹಿಂದೊಮ್ಮೆ ನನ್ನಂತೆ), ಬಾಡಿಗೆದಾರರು, ಪ್ರವಾಸಿಗರು ಮತ್ತು ಬಹಳ ಶ್ರೀಮಂತರು.
ನಮ್ಮಂತೆ ಹಳೆಮನೆಗಳನ್ನು ಕೊಂಡುಕೊಂಡವರಿಗೆ ಸದಾ ಮನೆರಿಪೇರಿ ಇದ್ದೇಇರುತ್ತದೆ. ನಾವು ಪ್ರತಿವಾರಾಂತ್ಯ Bunnings ಗೆ ಹೋಗುವುದು ಇದೆ. ಬರಿ ಕೊಳ್ಳುವುದಕ್ಕೆ ಅಂತೇನೂ ಅಲ್ಲ, ನಮಗೆ ತಿಳಿಯದ ಮನೆರಿಪೇರಿ ವಿಧಾನಗಳ ಬಗ್ಗೆ ಸಲಹೆ ಕೇಳುವುದು, ಮಾಹಿತಿ ಪಡೆಯುವುದು, ಕರಾರುವಕ್ಕಾದ ಅಳತೆಗಾಗಿ ಅವರಲ್ಲಿನ ಸಾಧನಗಳನ್ನು ಉಪಯೋಗಿಸುವುದು ಎಂಬಂತೆ ಏನೆಲ್ಲಾ ವಿಷಯಗಳಿಗಾಗಿ ನಾವು Bunnings ಗೆ ಹೋಗುತ್ತೀವಿ. ನಾವಂತೂ ಹಳೆಮನೆಯನ್ನು ಕೊಂಡಿದ್ದ ಹೊಸತರಲ್ಲಿ ಅದನ್ನು ದುರಸ್ತಿ ಮಾಡಲು ಹೆಣಗಾಡುತ್ತಾ ಬನ್ನಿಂಗ್ಸ್‌ಗೆ ಹೋಗಿದ್ದೇ ಹೋಗಿದ್ದು. ಅವರ ಲೋಕಕ್ಕೆ ನಮಗೆ ಎಂಟ್ರಿ ಕೊಟ್ಟ Bunnings ದೇವದೂತರಿಗೆ ಸಂಪೂರ್ಣವಾಗಿ ಶರಣಾಗತರಾಗಿದ್ದೆವು. ಅಲ್ಲಿ ಪಡೆದ ಸಲಹೆಗಳ ಪ್ರಕಾರ ನಾವೇ ಪೇಂಟಿಂಗ್ ಮಾಡಿದ್ದು, sandpit ತೋಡಿದ್ದು, deck ಕಟ್ಟಿದ್ದು, ಶೆಡ್ ಹಾಕಿದ್ದು, ಹೇಗೇಗೊ ಇದ್ದ ಹಳೆ ಗೋಡೆ ಒಡೆದು ಇಡೀ ಒಂದು ಹೊಸ ಬೆಡ್ ರೂಮ್ ಕಟ್ಟಿದ್ದು, ಇನ್ನೂ ಏನೇನೋ.
ಒಮ್ಮೆ ಒಂದು ಬಾರಿ Bunnings ದೇವದೂತರು ನನ್ನ ಗಂಡನಿಗೆ ಒಂದು ವರ ಕೊಟ್ಟರು. ‘ಹಾಯ್ ಮೇಟ್, ಪ್ರತಿ ಶನಿವಾರ, ಭಾನುವಾರ ಎಡಬಿಡದೆ ನೀನು ಬನ್ನಿಂಗ್ಸ್ ಪೂರ್ತಿ ಹಲವಾರು ಬಾರಿ ಓಡಾಡಿ ನಮ್ಮನ್ನು ಪ್ರಾರ್ಥಿಸುವ ಪರಿ ನಮಗೆ ಮೆಚ್ಚುಗೆಯಾಗಿದೆ. ನೀನು ಹೆಂಡತಿ ಮಾಡುವ ಫೋನ್ ಕಾಲ್ ಕಾಟದಿಂದ ಬೇಸತ್ತು ಒಲ್ಲದ ಮನಸ್ಸಿನಿಂದ ನಮ್ಮನ್ನು ಬಿಟ್ಟು ಮನೆಗೆ ಹೋಗುವುದು ನಮ್ಮ ಗಮನಕ್ಕೂ ಬಂದಿದೆ. ನಿನ್ನ ಬನ್ನಿಂಗ್ಸ್ ತಪಸ್ಸಿನಿಂದ ನಮಗೆ ಸಂತೋಷವಾಗಿದೆ. ನೀನು ಈ ಒಂದು ಚಿಕ್ಕ ಆನ್ಲೈನ್ ಟ್ರೇಡ್ ಕೋರ್ಸ್ ಮಾಡು. ನಾವು ನಿನಗೆ tradesman ಪಾಸ್ ಕೊಡುತ್ತೀವಿ. ಈ ಪಾಸ್‌ನಿಂದ ನಿನಗೆ ರಿಯಾಯಿತಿ ಸಿಗುತ್ತದೆ, ಒಂದಷ್ಟು ಉಳಿತಾಯವಾಗುತ್ತದೆ’ ಎನ್ನುವ ವರ. ಪಾಸ್ ಸಿಕ್ಕಿದ್ದು ಜೀಬಿಗೆ ಬಲು ಖುಷಿಯಾಯ್ತು. ‘ಬನ್ನಿಂಗ್ಸ್ ಗೆ ಹೋಗುವುದೆಂದರೆ ನಿಮಗೆ ವಾರಾಂತ್ಯದಲ್ಲಿ ಜನರು ದೇವಸ್ಥಾನಕ್ಕೊ ಇಲ್ಲಾ ಚರ್ಚ್‌ಗೆ ಹೋಗುವಂತೆ ಒಂದು ಧಾರ್ಮಿಕ ಭೇಟಿಯಾಗಿಬಿಟ್ಟಿದೆ’ ಎಂದು ನಾನು ಚುಡಾಯಿಸುತ್ತೀನಿ.
ಪ್ರತಿಯೊಂದು ಬೃಹತ್ ಗಾತ್ರದ ಬನ್ನಿಂಗ್ಸ್ warehouse ನಲ್ಲೂ Do It Yourself ವರ್ಕ್ ಶಾಪ್‌ಗಳನ್ನು ನಡೆಸುತ್ತಾರೆ. ತಲೆಕೆರೆದುಕೊಳ್ಳುತ್ತಾ ಬನ್ನಿಂಗ್ಸ್ ನಲ್ಲಿ ತಡಕಾಡುವ ಪೋಷಕರು ಮಕ್ಕಳನ್ನು ಕರೆತಂದಿದ್ದರೆ ಆ ಮಕ್ಕಳಿಗೆ ಜೂನಿಯರ್ ವರ್ಕ್ ಶಾಪ್‌ಗಳನ್ನೂ ನಡೆಸುತ್ತಾರೆ. ಮಕ್ಕಳಿಗೆ ಖುಷಿ ಕೊಡುವ ಅನುಭವಕಲಿಕೆ ಮತ್ತು ಆಟದ ಮೂಲಕ ಕಲಿಕೆ ಮುಂತಾದ ಮಕ್ಕಳ-ಸ್ನೇಹಿ ವಿಧಾನಗಳನ್ನು ಬಳಸುತ್ತಾರೆ. ನನ್ನ ಮಕ್ಕಳು ಇಂತಹ ಒಂದು ವರ್ಕ್ ಶಾಪ್ ನಲ್ಲಿ ತಾವೇ ಮಾಡಿದ್ದ toolbox ಈಗಲೂ ಇದೆ. ಇದಲ್ಲದೆ ಪ್ರತಿ warehouse ನಲ್ಲೂ ಕುಡಿಯುವ ನೀರಿನ ನಲ್ಲಿಗಳು, ಟಾಯ್ಲೆಟ್, ಚಿಕ್ಕದೊಂದು ಕೆಫೆ, ಓಡಾಡಿ ಸುಸ್ತಾದರೆ ಕುಳಿತು ಸುಧಾರಿಸಿಕೊಳ್ಳಲು ಬೆಂಚ್, ಇದೆ.
ಬನ್ನಿಂಗ್ಸ್ ಗೆ ಪ್ರತಿ ವಾರಾಂತ್ಯವೂ ಜನರು ಬಂದೇಬರುತ್ತಾರೆ. ಹೀಗಾಗಿ sausage sizzle ಎಂಬ ಒಂದು ನಿಧಿಸಂಗ್ರಹಣಾ ಕಾರ್ಯಕ್ರಮವಿರುತ್ತದೆ. ಇದರಲ್ಲಿ ಪ್ರತಿ ಶನಿವಾರ ಅಥವಾ ಭಾನುವಾರ ಮುಂಚೆಯೇ ಗೊತ್ತುಪಡಿಸಿದಂತೆ ಒಂದು ಸಂಸ್ಥೆ ಸಿಬ್ಬಂದಿ ಅಥವಾ ಅದರ ಸ್ವಯಂಸೇವಕರು ಬನ್ನಿಂಗ್ಸ್ ವತಿಯಿಂದ ಕಟ್ಟಡ ಮುಂದೆ ಜಾಗ ಪಡೆದು, ಬನ್ನಿಂಗ್ಸ್ BBQ ಸೆಟ್-ಅಪ್ ಬಳಸಿ, sausage ಗಳನ್ನು ತಯಾರಿಸುತ್ತಾರೆ. ಒಂದು ಬ್ರೆಡ್ ತುಂಡಿನ ಜೊತೆ sausage ಇಟ್ಟು ಬೇಕಿದ್ದವರಿಗೆ ಬೇಯಿಸಿದ ಈರುಳ್ಳಿ ಹಾಕಿ ಕೊಡುತ್ತಾರೆ. ಅದರ ಮೇಲೆ ಸಿಂಪಡಿಸಲು ಸಾಸ್ ಇರುತ್ತದೆ. ಇಂತಹ ಒಂದು sausage ಗೆ ಎರಡೂವರೆ ಡಾಲರ್. ಬೇಕಿದ್ದರೆ ಪ್ರತ್ಯೇಕವಾಗಿ ಒಂದೂವರೆ ಡಾಲರ್ ಕೊಟ್ಟು ಒಂದು ತಂಪುಪಾನೀಯ ಕ್ಯಾನ್ ಕೊಳ್ಳಬಹುದು. ಖರ್ಚೆಲ್ಲಾ ಕಳೆದು ಈ sausage sizzle ಇಂದ ಬರುವ ಲಾಭವು ಆ ಸಂಸ್ಥೆಯ ನಿಗದಿತ ಅಭಿವೃದ್ಧಿ ಕೆಲಸಕ್ಕೆ ಸಲ್ಲುತ್ತದೆ. ಇದನ್ನೆಲ್ಲಾ ನಿಧಿಸಂಗ್ರಹಣಾ ಸಂಸ್ಥೆಯ ಸ್ವಯಂಸೇವಕರು sausage ತಯಾರಿಸುತ್ತಾ, ಆ BBQ ಬಿಸಿಯಿಂದ ಇಳಿಯುತ್ತಿರುವ ಬೆವರನ್ನು ಒರೆಸಿಕೊಳ್ಳುತ್ತಾ ನಗುಮುಖದಿಂದ ಸಾರ್ವಜನಿಕರಿಗೆ ಹೇಳುತ್ತಾರೆ. ಹೀಗೆ ಅವರು ಒಂದು ಒಳ್ಳೆ ಉದ್ದೇಶಕ್ಕಾಗಿ ತಮ್ಮ ವಾರಾಂತ್ಯದ ಸಮಯವನ್ನು ಕೊಟ್ಟಿರುವುದನ್ನು ಸಾರ್ವಜನಿಕರು ಪ್ರಶಂಸಿಸುತ್ತಾ ಥಾಂಕ್ಯೂ ಹೇಳುತ್ತಾರೆ. ಇದು ತಮ್ಮ ಆಸ್ಟ್ರೇಲಿಯನ್ ಬನ್ನಿಂಗ್ಸ್ ಸಂಸ್ಕೃತಿ ಎಂದು ಎಲ್ಲರೂ ಬೀಗುತ್ತಾರೆ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.