Advertisement
ಆಸ್ಟ್ರೇಲಿಯಾದ ಐತಿಹಾಸಿಕ ಮೈಲಿಗಲ್ಲು: ಡಾ. ವಿನತೆ ಶರ್ಮಾ ಅಂಕಣ

ಆಸ್ಟ್ರೇಲಿಯಾದ ಐತಿಹಾಸಿಕ ಮೈಲಿಗಲ್ಲು: ಡಾ. ವಿನತೆ ಶರ್ಮಾ ಅಂಕಣ

ಒಂದೆಡೆಯಿಂದ ಇನ್ನೊಂದು ಎಡೆಗೆ ಹೋಗುವ ದಾರಿಯ ಬಗ್ಗೆ ಹೇಳಲು ಕರಾರುವಾಕ್ಕಾದ ಸೂಚನೆಗಳನ್ನು ಹಾಡುಗಳಲ್ಲಿ ಅಡಕಿಸಿದ್ದಾರೆ. ಎಲ್ಲಿ ಕುಡಿಯಲು ನೀರು ಸಿಗುತ್ತದೆ, ತಿನ್ನಲು ಗೆಡ್ಡೆಗೆಣಸು, ತಂಗಲು ಸ್ಥಳ ಸಿಗುತ್ತದೆ, ಅನ್ನುವುದೂ ಈ ಹಾಡುಗಳಲ್ಲಿ ತಿಳಿಯುತ್ತದೆ. ಆಕಾಶದಲ್ಲಿ ಬೆಳಗಿನ ಸೂರ್ಯರಶ್ಮಿ ಇನ್ನೂ ಕೆಳಗಿರುವಾಗ ಈ ನೀರಿನ ತೊರೆಯಿಂದ ನಡೆಯುತ್ತಾ, ಓಡುತ್ತಾ ಹೊರಟು ಆ ದೊಡ್ಡ ಗಮ್ ಮರದ ಉತ್ತರಕ್ಕಿರುವ ಕುರುಚಲು ಪೊದೆಕಾಡು ದಾಟಿ ಬಿಸಿಲು ನಡುನೆತ್ತಿಯ ಮೇಲಿದ್ದಾಗ ಆ ಕಿರುದಿಣ್ಣೆ ಸಿಗುತ್ತದೆ. ಅದೇ ದಾರಿಯಲ್ಲಿ ಸೂರ್ಯನ ಇಳಿಬಿಸಿಲಿನ ಜಾಡನ್ನು ಹಿಂಬಾಲಿಸುತ್ತಾ ಹೋದರೆ ಬಂಡೆರಾಶಿ ಕಾಣುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಮುನ್ನೋಟದ ಸಂದೇಶವಿರುವ NAIDOC ವಾರ

ಪ್ರಿಯ ಓದುಗರೆ,

ಇದೊಂದು . ಮತ್ತೆ ಬರುತ್ತಿದೆ ಮತ್ತೊಂದು NAIDOC ವಾರ. ಜುಲೈ ತಿಂಗಳ ಆರನೆ ತಾರೀಕಿನಿಂದ ಹದಿಮೂರರವರೆಗೆ ಅಂದರೆ ಎರಡು ಭಾನುವಾರಗಳ ನಡುವೆ NAIDOC ಸಂಭ್ರಮದಾಚರಣೆಗಳು ನಡೆಯಲಿವೆ. ಆಸ್ಟ್ರೇಲಿಯಾದ First Peoples ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿ ಜನರು ತಮ್ಮ ಭಾಷೆಗಳು ಮತ್ತು ಬಹುಸಂಸ್ಕೃತಿಗಳನ್ನು ಹೆಮ್ಮೆಯಿಂದ ಆಚರಿಸುವ ವಾರವಿದು. ಈ ವರ್ಷದ ವಿಶೇಷ ಸಂದೇಶ, ‘ಮುಂದಿನ ಪೀಳಿಗೆ: ಸಾಮರ್ಥ್ಯ, ಮುನ್ನೋಟ ಮತ್ತು ಪರಂಪರೆ’ ಎಂದಿದೆ. ಈ ಸಂದೇಶಕ್ಕೆ ಐವತ್ತು ವರ್ಷಗಳ ಹಿನ್ನೆಲೆಯಿದೆ. ಪೀಳಿಗೆಯಿಂದ ಪೀಳಿಗೆಗೆ ಹರಿದು ಬರುತ್ತಿರುವ ಹಿರಿಯರ ಅನುಭವಗಳಿಂದ ಅರಿವನ್ನು ಹೆಚ್ಚಿಸಿಕೊಳ್ಳುತ್ತಾ ಈಗಿನ ಸಮುದಾಯಗಳ ಅಭಿವೃದ್ಧಿಯ ಮುಂದಾಳತ್ವವನ್ನು ವಹಿಸಿಕೊಳ್ಳುವ ಮೂಲವಾಸಿಗಳು ಮುಂದಿನ ಪೀಳಿಗೆಗಳಿಗೆ ಮಾರ್ಗದರ್ಶನ ಕೊಡುವ ಅತ್ಯಗತ್ಯ ಕೆಲಸವಿದು.

ಐತಿಹಾಸಿಕ ಮೈಲಿಗಲ್ಲು ಅಂದೆ ಅಲ್ಲವೆ. ಈ ಬಾರಿ NAIDOC ವಾರಕ್ಕೆ ಐವತ್ತು ವರ್ಷಗಳು ತುಂಬುತ್ತಿದೆ. ಇದು ಸಾಮಾನ್ಯವಾದ ಮಾತೇನಲ್ಲ. ವಸಾಹತುಶಾಹಿ ಆಂಗ್ಲೊ-ಯುರೋಪೀಯನ್ ಬಿಳಿಯ ಜನರು ನೆಲೆಸಿ ಆಸ್ಟ್ರೇಲಿಯಾವನ್ನು ಆಳುತ್ತಿರುವಾಗ ಆಸ್ಟ್ರೇಲಿಯನ್ ಅಂದರೆ ಯಾರು ಎನ್ನುವ ಪ್ರಶ್ನೆಗೆ ಒಂದೇ ಒಂದು ಉತ್ತರವಿತ್ತು – ಆಸ್ಟ್ರೇಲಿಯನ್ ಅಂದರೆ ಬಿಳಿಯರು. ಮಿಕ್ಕವರೆಲ್ಲ natives-ಮೂಲಜನರು ಮತ್ತು migrants-ವಲಸಿಗರು. ಇಂಥ ಒಂದು ಸಮಾಜದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾ ತಮ್ಮ ಅಸ್ಮಿತೆಯನ್ನು ಗುರುತಿಸಿ ಎಂದು ಕೇಳುತ್ತಾ ಮೂಲಜನರು ಸಂಸ್ಕೃತಿ ಹಬ್ಬದಾಚರಣೆಯನ್ನು ಶುರುಮಾಡಿದರು. ಇದು ಬರೀ ಹಬ್ಬವಷ್ಟೇ ಅಲ್ಲ. ನ್ಯಾಯಕ್ಕಾಗಿ ಹೋರಾಟಗಳನ್ನು ಮುಂದುವರೆಸಿದ್ದು, ಸಮಾನತೆಗಾಗಿ ಆಗ್ರಹ, ತಮ್ಮ ಸಾಮರ್ಥ್ಯಗಳನ್ನು ಗುರುತಿಸಿ ಎನ್ನುವ ಅಹವಾಲು ಇದು.

ಸುಮಾರು ಅರವತ್ತೈದು ಸಾವಿರ ವರ್ಷಗಳಿಂದ ಈ ಆಸ್ಟ್ರೇಲಿಯಾ ಎಂಬ ನೆಲ-ನಾಡಿನಲ್ಲಿ ಜೀವನ ನಡೆಸುತ್ತಿರುವ ಅಬೊರಿಜಿನಲ್ ಜನರ ಜೀವನದೃಷ್ಟಿಗಳು ಹುಟ್ಟಿರುವುದು ನೆಲದೊಡನೆ ಇರುವ ಅವರ ಆಳವಾದ ಸಂಬಂಧಗಳಿಂದ. ಈ ವಿಶಾಲ ಖಂಡದ ಪೂರ್ತಿ ಹಬ್ಬಿದ್ದ ಪ್ರತಿಯೊಂದೂ ಅಬೊರಿಜಿನಲ್ ಜನಸಮುದಾಯವು ಆಯಾ ಪ್ರದೇಶದ ಪ್ರಾಕೃತಿಕ ಗುಣಲಕ್ಷಣಗಳನ್ನು ಅಭ್ಯಸಿಸುತ್ತಾ ನಿಧಾನವಾಗಿ, ಕ್ರಮೇಣ ತಂತಮ್ಮ ಜೀವನಕ್ರಮಗಳನ್ನು ರೂಪಿಸಿಕೊಂಡರು ಎಂದು ಅವರ ಹಿರೀಕರು ಹೇಳುತ್ತಾರೆ. ಈ ರೀತಿ ಅವರ ನೂರಾರು ಭಾಷೆಗಳು, ಜೀವನ ದೃಷ್ಟಿಕೋನಗಳು, ಆಹಾರ, ಹಾಡು-ನೃತ್ಯ ವಿಧಗಳು, ಚಿತ್ರಕಲೆ (ಡಾಟ್ ಪೇಂಟಿಂಗ್), ಮೌಖಿಕವಾಗಿ ಬೆಳೆದುಬಂದ ಅವರ ಕಥೆಗಳು, ಹಾಡುಗಳಲ್ಲಿ ಮತ್ತು ಕಥೆಗಳಲ್ಲಿ ಅಡಕವಾದ ನೆಲ-ನೀರು-ಆಕಾಶಗಳ ಬಗ್ಗೆ ಬೆಳೆದ ಅಪಾರ ಜ್ಞಾನಸಂಪತ್ತು ಎಲ್ಲವೂ ವಿಶಿಷ್ಟವಾದದ್ದು.

ಉದಾಹರಣೆಗೆ ಒಂದೆಡೆಯಿಂದ ಇನ್ನೊಂದು ಎಡೆಗೆ ಹೋಗುವ ದಾರಿಯ ಬಗ್ಗೆ ಹೇಳಲು ಕರಾರುವಾಕ್ಕಾದ ಸೂಚನೆಗಳನ್ನು ಹಾಡುಗಳಲ್ಲಿ ಅಡಕಿಸಿದ್ದಾರೆ. ಎಲ್ಲಿ ಕುಡಿಯಲು ನೀರು ಸಿಗುತ್ತದೆ, ತಿನ್ನಲು ಗೆಡ್ಡೆಗೆಣಸು, ತಂಗಲು ಸ್ಥಳ ಸಿಗುತ್ತದೆ, ಅನ್ನುವುದೂ ಈ ಹಾಡುಗಳಲ್ಲಿ ತಿಳಿಯುತ್ತದೆ. ಆಕಾಶದಲ್ಲಿ ಬೆಳಗಿನ ಸೂರ್ಯರಶ್ಮಿ ಇನ್ನೂ ಕೆಳಗಿರುವಾಗ ಈ ನೀರಿನ ತೊರೆಯಿಂದ ನಡೆಯುತ್ತಾ, ಓಡುತ್ತಾ ಹೊರಟು ಆ ದೊಡ್ಡ ಗಮ್ ಮರದ ಉತ್ತರಕ್ಕಿರುವ ಕುರುಚಲು ಪೊದೆಕಾಡು ದಾಟಿ ಬಿಸಿಲು ನಡುನೆತ್ತಿಯ ಮೇಲಿದ್ದಾಗ ಆ ಕಿರುದಿಣ್ಣೆ ಸಿಗುತ್ತದೆ. ಅದೇ ದಾರಿಯಲ್ಲಿ ಸೂರ್ಯನ ಇಳಿಬಿಸಿಲಿನ ಜಾಡನ್ನು ಹಿಂಬಾಲಿಸುತ್ತಾ ಹೋದರೆ ಬಂಡೆರಾಶಿ ಕಾಣುತ್ತದೆ. ಅಲ್ಲಿಂದ ರಾತ್ರಿ ಕತ್ತಲಲ್ಲಿ ಇಂತಿಂತಾ ನಕ್ಷತ್ರರಾಶಿಯನ್ನು ಗಮನಿಸುತ್ತಾ ಕತ್ತಲು ಹರಿದು ಬೆಳಕು ಮೂಡಿದಾಗ ಅಲ್ಲೊಂದು ಈ ಜನರ ಹಾಡಿ ಕಾಣುತ್ತದೆ. ಹೀಗೆ ಜನರು ತಂತಮ್ಮ ನೈಸರ್ಗಿಕ ಪರಿಸರದಲ್ಲಿರುವ ಎಲ್ಲವನ್ನೂ ಅರಿಯುವುದು ಅಗತ್ಯವಾಗುತ್ತದೆ. ಪರಿಸರದೊಡನೆ ಅವಿನಾವಭಾವ, ಅನನ್ಯ ಸಂಬಂಧ ಬೆಳೆಯುತ್ತದೆ. ಈ ರೀತಿ ಬೆಳೆದುಬಂದಿರುವ ಅಬೊರಿಜಿನಲ್ ಜನರದ್ದು ನಮ್ಮ ಪ್ರಪಂಚದ ಅತ್ಯಂತ ಪುರಾತನ ಸಂಸ್ಕೃತಿಗಳು, ಭಾಷೆಗಳು ಮತ್ತು ಜ್ಞಾನಭಂಡಾರ ಎನ್ನುವುದರಲ್ಲಿ ಸಂಶಯವಿಲ್ಲ.

ಅವರ Dreamtime Stories ನೆಲ-ನಾಡಿನ ಸಂಬಂಧಗಳ ದಾರ್ಶನಿಕತೆಯನ್ನು ಕುರಿತು ಹೇಳುತ್ತವೆ. ಆಸ್ಟ್ರೇಲಿಯನ್ ಅಬೊರಿಜಿನಲ್ Dreamtime Stories ಗಳಿಗೆ ನಮ್ಮ ಭಾರತೀಯ ಹಿಂದು ಸಂಸ್ಕೃತಿಗಳಲ್ಲಿ ಮತ್ತು ಆದಿವಾಸಿಗಳಲ್ಲಿ ಇರುವ ಅನೇಕಾನೇಕ ಕಥೆಗಳ ಜೊತೆ ಹೋಲಿಕೆಯಿದೆ. ಈ ಕಥೆಗಳಲ್ಲಿ ಕಾಣುವುದು spirit ಶಕ್ತಿಗಳು ಅಂದರೆ ನಮ್ಮ ಕರ್ನಾಟಕದಲ್ಲಿ ಕಾಣಸಿಗುವ ಬಗೆಬಗೆಯ ದೈವಗಳು, ಭೂತಗಳು, ಮಾರಿಗಳು, ದ್ಯಾವರುಗಳು, ಇತ್ಯಾದಿ. ಒಂದೊಂದು ಪರಿಸರಕ್ಕೆ ಅಲ್ಲಿರುವ ನೀರಿನ ಹೊಳ್ಳ, ತೊರೆ, ಬೆಟ್ಟಗುಡ್ಡಗಳು, ಕೊಳ್ಳಗಳು ಇವಕ್ಕೆ ತಕ್ಕಂತೆ spriti ಗಳಿವೆ. ವಸಾಹತುಶಾಹಿ ಬ್ರಿಟಿಷರಿಗೆ ಇವೆಲ್ಲ ಅರ್ಥವಾಗದೆ ತಿಣುಕಾಡಿ ಕಡೆಗೆ ಅವರು ಕೈಚೆಲ್ಲಿ ಆದಷ್ಟೂಮಟ್ಟಿಗೆ ಭಾಷಾನುವಾದ ಮಾಡಿದ್ದಾರೆ. ಇಂಗ್ಲೀಷಿನಲ್ಲಿ spirit ಅನ್ನುವ ಭಾಷಾನುವಾದವಿದ್ದರೂ ಅವರ ಕಥೆಗಳಲ್ಲಿ ಕಾಣುವ ಆ ಮಾನವಾತೀತ ಜೀವಿಗಳು ಭಾರತೀಯರಿಗೆ ಸುಲಭವಾಗಿ ಅರ್ಥವಾಗುತ್ತದೆ.

ಉದಾಹರಣೆಗೆ ನೋಡಿ ಈ ವರ್ಷದ NAIDOC Week ಪೋಸ್ಟರ್. ಈ ಕಲಾಕೃತಿಯ ಕರ್ತೃ Jeremy Morgan Worrall. ಕಲಾವಿದ ಜೆರೆಮಿ ಅವರು ತಮ್ಮ ಕೃತಿಗೆ ಕೊಟ್ಟಿರುವ ಹೆಸರು ‘Ancestral Lines’ ಎಂದು. ಅವರ ವಿವರಣೆ ಹೀಗಿದೆ. Ancestral Lines ಕೃತಿಯಲ್ಲಿ ಕಾಣುವುದು ಪೀಳಿಗೆಗಳಲ್ಲಿರುವ ಅನೂಚಾನ ಬಂಧಗಳು ಮತ್ತು ಅದರೊಡನೆ ಹುಟ್ಟುವ ಹಾಡುಗಳು. ಮುಂದಿನ ಪೀಳಿಗೆಯ ಬಗ್ಗೆ ಆಲೋಚಿಸಿದರೆ ಜೆರೆಮಿ ಅವರಿಗೆ ಹೊಳೆಯುವುದು ಅವರ ಹಿರೀಕರು. ತಮ್ಮ ಸಮುದಾಯವನ್ನು (mob ಅಂತಾರೆ) ನೆನಪಿಸಿಕೊಂಡರೆ ತಮಗೆ ಚೈತನ್ಯ ಮೂಡುತ್ತದೆ. ತನ್ನ ಜನರು ಅನುಭವಿಸಿರುವ ನೋವು, ದೌರ್ಜನ್ಯ, ಅನ್ಯಾಯಗಳ ನಡುವೆಯೇ ತಳವೂರಿದ ಅವರ ಬದುಕುಳಿಯುವ ಸಾಮರ್ಥ್ಯ, ಛಲ ತಮಗೆ, ಮುಂದಿನ ಪೀಳಿಗೆಗೆ ದಾರಿದೀವಿಗೆಯಾಗುತ್ತದೆ. ತಮ್ಮ ಚಿತ್ರದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಮುದಾಯಗಳ ಅರಿವು, ಅನುಭವ-ಸಂಪತ್ತು, ಜೀವನದೃಷ್ಟಿಗಳನ್ನು ನಿದರ್ಶಿಸುತ್ತಾರೆ. ಇವೆಲ್ಲಾ ತಮ್ಮ ಹುಟ್ಟು, ಇರುವಿಕೆ, ಸಮಷ್ಟಿ ಸಂಬಂಧಗಳು, ಆಹಾರ ಸಂಪಾದನೆಯ ವಿಧಗಳು (ಬೇಟೆ, ಮೀನು ಹಿಡಿಯುವುದು, ಹೆಣೆಯುವುದು ಇತ್ಯಾದಿ), ಮತ್ತು ಇವೆಲ್ಲಾ ಅರಿವು, ಅನುಭವ-ದೃಷ್ಟಿಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ತಲುಪಿಸುವುದು. ನಮ್ಮೆಲ್ಲರನ್ನೂ ಒಟ್ಟಾಗಿ ಹಿಡಿದಿಟ್ಟಿರುವುದು ನಮ್ಮ ನೆಲ-ನಾಡು. ಅದನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತಾ ಇದೇವೋ ಹಾಗೆಯೇ ಆ ನೆಲ-ನಾಡು ನಮ್ಮನ್ನು ಕಾಪಾಡುತ್ತಿದೆ. ನಾವೆಲ್ಲರೂ ಒಟ್ಟಾಗಿ ಸೇರುವುದು, ಕಥೆಗಳನ್ನು ಹೇಳಿಕೊಳ್ಳುವುದು ಬೆಂಕಿಯ ಸುತ್ತ. ಈ ನಮ್ಮ ಜೀವನಕ್ರಮ ಈಗಲೂ, ಮುಂದಿಗೂ ನಮ್ಮ ಕಿರಿಯರ ಕೈಹಿಡಿದು ನಡೆಸುತ್ತಿದೆ.

ಕಲಾವಿದ ಜೆರೆಮಿ ಅವರ ಮಾತುಗಳಿಗೆ ಪುಷ್ಟಿ ಕೊಡುವುದು NAIDOC ಸಮಿತಿ ಹೇಳಿರುವ ಮಾತುಗಳು. ಕಳೆದ ಐವತ್ತು ವರ್ಷಗಳಲ್ಲಿ ತಮ್ಮ ಜನರು ಬದುಕುಳಿದಿದ್ದೂ ಅಲ್ಲದೇ ತಮ್ಮತನವನ್ನು ಕಾಪಿಟ್ಟುಕೊಂಡಿದ್ದಾರೆ. ನಮ್ಮ ಮುಂದಿನ ಹಾದಿಯಿರುವುದು ಇದನ್ನು ಮತ್ತಷ್ಟು ಗಟ್ಟಿಗೊಳಿಸುವುದು. ತಾವು ಕೇಳುತ್ತಿರುವ ಸ್ವಾತಂತ್ರ್ಯ, ಸ್ವನಿರ್ಧಾರ ಹಕ್ಕು ಪ್ರಯತ್ನಗಳನ್ನು ಮತ್ತಷ್ಟು ಆತ್ಮವಿಶ್ವಾಸದಿಂದ ಬಲಪಡಿಸುವುದು. ಕಿರಿಯರು ಮುಂದಿನ ಐವತ್ತು ವರ್ಷಗಳ ಹಾದಿಯಲ್ಲಿ ತಮ್ಮ ಸಮುದಾಯ-ಸಂಸ್ಕೃತಿಗಳ ಆಚರಣೆಗಳ ಮೂಲಕ ಸಮಾಜದ ಒಗ್ಗಟ್ಟನ್ನು ಸ್ಥಿರವಾಗಿರಿಸುವುದು. ನಮಗೆಲ್ಲ ಈ ಮುನ್ನಡೆ ಇನ್ನಷ್ಟು ಸ್ಪಷ್ಟವಾಗಬೇಕು. ಇದು ನಾವೆಲ್ಲರೂ ಒಟ್ಟಾಗಿ ಕೂಡಿ ನಡೆಯುತ್ತಿರುವ ದಾರಿ.

ಆಸ್ಟ್ರೇಲಿಯನ್ ಎಂದರೆ ಯಾರು ಎನ್ನುವ ಪ್ರಶ್ನೆ ಕಳೆದು ಈ ಮಾತುಗಳು ಆಸ್ಟ್ರೇಲಿಯಾದಲ್ಲಿರುವ ಎಲ್ಲರಲ್ಲೂ ಚೈತನ್ಯ ತರಲಿ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ