ಆಸ್ಟ್ರೇಲಿಯದ ಹೊಸ ಪ್ರಧಾನಿಗಳು ಚುನಾಯಿತರಾದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ನಾಲ್ಕು ವಾರಗಳಲ್ಲಿ ಊರೂರು, ಅಂದರೆ ವಿದೇಶಗಳನ್ನು, ಸುತ್ತಿದ್ದಕ್ಕೆ ದೇಶದ ಜನರ ಮತ್ತು ವಿರೋಧಪಕ್ಷದ ಟೀಕೆಗೆ ಗುರಿಯಾದರು. ಆದರೂ ಕೂಡ ತಮ್ಮ ಪರದೇಶ ಸುತ್ತಾಟವನ್ನು ಸಮರ್ಥಿಸಿಕೊಂಡು ‘ನೆರೆಹೊರೆಯವರೊಂದಿಗೆ ಆಸ್ಟ್ರೇಲಿಯದ ರಾಜಕೀಯ ಸಂಬಂಧ ಕುಂಟುತ್ತಿತ್ತು, ನಾವು ಆ ದೇಶದ ನಾಯಕರ ವಿಶ್ವಾಸವನ್ನು ಕಳೆದುಕೊಂಡಿದ್ದೆವು. ಹಾಗಾಗಿ ಅವರೊಂದಿಗಿನ ಸಂಬಂಧವನ್ನು ಕುದುರಿಸಿಕೊಳ್ಳುವುದಷ್ಟೇ ಅಲ್ಲದೆ ಪಕ್ಕದ ಪುಟ್ಟ ಪುಟ್ಟ ದ್ವೀಪದೇಶಗಳಲ್ಲಿ ತಳವೂರುತ್ತಿದ್ದ, ವಾಣಿಜ್ಯ ಬಲವನ್ನು ಸ್ಥಾಪಿಸುತ್ತಿದ್ದ ದೇಶವೊಂದಕ್ಕೆ ನಾವೂ ಇದ್ದೀವಿ ಎಂದು ತೋರಿಸುವುದು ಅಗತ್ಯವಾಗಿತ್ತು. ಇದರಿಂದ ನಮ್ಮೆಲ್ಲರಲ್ಲೂ ವಿಶ್ವಾಸ ಕುದುರುತ್ತದೆ’ ಎಂದಿದ್ದಾರೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ನಮ್ಮೂರಲ್ಲಿ ಹಾಗೂ ದೇಶ ಪೂರ್ತಿ ಇನ್ನೂ ಚಳಿಗಾಲದ ಹೆಚ್ಚುವರಿ ಚಳಿ ಹಾಗೇ ಮುಂದುವರೆದಿದೆ. ಬ್ರಿಸ್ಬೇನ್ ನಗರದಲ್ಲಿ ದಿನದ ಹಗಲಿನ ಸಮಯದಲ್ಲಿ ಒಮ್ಮೊಮ್ಮೆ ಹದಿನೈದು ಡಿಗ್ರಿ ತಾಪಮಾನಕ್ಕೆ ಇಳಿದು, ರಾತ್ರಿ ನಾಲ್ಕು ಡಿಗ್ರಿಗೆ ಜಾರಿದಾಗ ನಾವೆಲ್ಲ ಹೌಹಾರುತ್ತೀವಿ. ಸಮಶೀತೋಷ್ಣ ಹಾಗೂ ಉಷ್ಣವಲಯದ ಪ್ರದೇಶವಾದ ನಮ್ಮ ರಾಣಿರಾಜ್ಯವಂತೂ ಇಷ್ಟೆಲ್ಲಾ ಕಂಡಾಪಟ್ಟೆ ಚಳಿಯನ್ನು ಅನುಭವಿಸಿದ್ದು ಯಾವಾಗ ಎಂದು ಎಲ್ಲರೂ ಪ್ರಶ್ನೆಯೆತ್ತಿ ಮಾಹಿತಿ ಹುಡುಕುತ್ತಿದ್ದಾರೆ. ಭೂಗೋಳವನ್ನು ತಿರುಗಿಸಿ ಆ ಕಡೆ ನೋಡಿದರೆ ಬ್ರಿಟನ್ನಿನಲ್ಲಿ, ಯುರೋಪಿನಲ್ಲಿ ಬಿಸಿಲಿನ ಧಗೆಗೆ, ತೀವ್ರವಾಗಿರುವ ಬೇಗೆಯಿಂದ ಜನ ಬೆಂದು ಬಸವಳಿದಿದ್ದಾರೆ. ಈ ಪಾಟಿ ಬಿಸಿಲು, ಉಷ್ಣ, ಧಗೆ ಯಾವ ಓಬೀರಾಯನ ಕಾಲದಲ್ಲಿತ್ತು ಎಂದು ಅವರುಗಳೂ ಕೇಳುತ್ತಿದ್ದಾರೆ.
ಬ್ರಿಟನ್ನಿನಲ್ಲಂತೂ ಪರಸ್ಪರ ಮಾತು ಆರಂಭವಾಗುತ್ತಿರುವುದೆ ‘ಅಬ್ಬಬ್ಬಾ, ಬಾಗಿಲು ಮುಚ್ಚು ಹೊರಗೆ ಅದೆಷ್ಟು ಚಳಿಯಿದೆ, ಇವತ್ತು ಸ್ವಲ್ಪ ಸೂರ್ಯ ಕಾಣಿಸಿದ್ದ, ನಿಧಾನವಾಗಿ ತಾಪಮಾನದಲ್ಲಿ ಶಾಖವೇರುತ್ತಿದೆ ಅಲ್ವಾ, ಅದ್ಯಾವಾಗ ಬೇಸಗೆ ಬರುತ್ತದೋ ಏನೋ, ಓಹೋ ನಮ್ಮನೆಯಲ್ಲಿ ಒಂದೆರೆಡು ಡಾಫೋಡಿಲ್ ಹೂಗಳು ಕಣ್ತೆರೆದಿವೆ, ವಸಂತ ಮಾಸ ಬರುತ್ತಿದೆ … ’ ಇತ್ಯಾದಿ ಉದ್ಗಾರಗಳಿಂದ. ಈಗ ಆ ಉದ್ಗಾರಗಳು ಬದಲಾಗಿವೆಯಂತೆ. ‘ಓಯ್, ಬಾಗಿಲು ಮುಚ್ಚು, ಹೊರಗಿನ ಬಿಸಿಲಿನ ಧಗೆ ಒಳಗಡೆ ಬಂದುಬಿಡುತ್ತದೆ! ಯಾರ ಮನೆಯಲ್ಲಾದರೂ ಈಜುಕೊಳವಿದೆಯೇ ಕೇಳಿ, ದುಡ್ಡು ಕೊಟ್ಟಾದರೂ ಸರಿ ಹೋಗಿ ನೀರಿನಲ್ಲಿ ಬಿದ್ದುಕೊಳ್ಳೋಣ…’ ಇತ್ಯಾದಿ ಮಾತುಗಳು ಹುಟ್ಟಿ ಜನಕ್ಕೆ ಪರಮಾಶ್ಚರ್ಯವಾಗುತ್ತಿದೆಯಂತೆ.
ಭೂಗೋಳದ ಆ ಕಡೆಯಿಂದ ಅವರ ಬಿಸಿಲಿನ ಕಥೆಗಳನ್ನು ಕೇಳುತ್ತ ಈ ಕಡೆಯಿಂದ ನಮ್ಮ ಅಧಿಕ ಚಳಿ ಕಥೆಗಳನ್ನು ರವಾನಿಸುತ್ತಾ ಇರುವುದು ತಮಾಷೆಯೆನ್ನಿಸಿದರೂ ಕ್ಲೈಮೇಟ್ ಚೇಂಜ್ ಎನ್ನುವುದು ಧೊಪ್ಪನೆ ಕಣ್ಮುಂದೆ ಬಿದ್ದುಕೊಂಡು ಅದರ ನಿಜರೂಪವು ಸಾಕಾರಗೊಂಡಿದೆ. ಹೀಗೇ ಮುಂದುವರೆದರೆ ಹೇಗೆ ಎನ್ನುವ ಆತಂಕ ಗೂಡುಕಟ್ಟಿದೆ.
ಇನ್ನು ನಮ್ಮ ದೇಶದ ಹೊಸ ಪ್ರಧಾನಿಗಳು ಚುನಾಯಿತರಾದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ನಾಲ್ಕು ವಾರಗಳಲ್ಲಿ ಊರೂರು, ಅಂದರೆ ವಿದೇಶಗಳನ್ನು, ಸುತ್ತಿದ್ದಕ್ಕೆ ದೇಶದ ಜನರ ಮತ್ತು ವಿರೋಧಪಕ್ಷದ ಟೀಕೆಗೆ ಗುರಿಯಾದರು. ಮಾಧ್ಯಮದವರಂತೂ ಬಿಡದೆ ಪ್ರಶ್ನಿಸಿ ‘ನೀವು ದೇಶದೊಳಗಿನ ಸಮಸ್ಯೆಗಳನ್ನು ಅಲಕ್ಷಿಸಿದ್ದೀರ’ ಎಂದಾಗ ಹೊಸ ಪ್ರಧಾನಿಗಳು ಎಚ್ಚೆತ್ತುಕೊಂಡಿದ್ದಾರೆ. ಆದರೂ ಕೂಡ ತಮ್ಮ ಪರದೇಶ ಸುತ್ತಾಟವನ್ನು ಸಮರ್ಥಿಸಿಕೊಂಡು ‘ನೆರೆಹೊರೆಯವರೊಂದಿಗೆ ಆಸ್ಟ್ರೇಲಿಯದ ರಾಜಕೀಯ ಸಂಬಂಧ ಕುಂಟುತ್ತಿತ್ತು, ನಾವು ಆ ದೇಶದ ನಾಯಕರ ವಿಶ್ವಾಸವನ್ನು ಕಳೆದುಕೊಂಡಿದ್ದೆವು. ಹಾಗಾಗಿ ಅವರೊಂದಿಗಿನ ಸಂಬಂಧವನ್ನು ಕುದುರಿಸಿಕೊಳ್ಳುವುದಷ್ಟೇ ಅಲ್ಲದೆ ಪಕ್ಕದ ಪುಟ್ಟ ಪುಟ್ಟ ದ್ವೀಪದೇಶಗಳಲ್ಲಿ ತಳವೂರುತ್ತಿದ್ದ, ವಾಣಿಜ್ಯ ಬಲವನ್ನು ಸ್ಥಾಪಿಸುತ್ತಿದ್ದ ದೇಶವೊಂದಕ್ಕೆ ನಾವೂ ಇದ್ದೀವಿ ಎಂದು ತೋರಿಸುವುದು ಅಗತ್ಯವಾಗಿತ್ತು. ಇದರಿಂದ ನಮ್ಮೆಲ್ಲರಲ್ಲೂ ವಿಶ್ವಾಸ ಕುದುರುತ್ತದೆ’ ಎಂದಿದ್ದಾರೆ.
ಅದು ನಿಜವೇ ಇರಬೇಕು. ಏಕೆಂದರೆ ಎರಡು ವಾರಗಳ ಹಿಂದೆ ಆ ಪುಟ್ಟ ಪುಟ್ಟ ದ್ವೀಪದೇಶಗಳ ಒಕ್ಕೂಟದ ಸಮಾವೇಶದಲ್ಲಿ ಭಾಗವಹಿಸಿ ನಾಯಕರ ಕೈಕುಲುಕಿದ್ದಾರೆ. ಇನ್ನೊಂದು ನೆರೆ ರಾಷ್ಟ್ರವಾದ ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂತಾರವರೊಡನೆ ನಡೆಸಿದ ಭೇಟಿಯಲ್ಲಿ ತಾನೇ ಸೆಲ್ಫಿ ತೆಗೆದುಕೊಳ್ಳುತ್ತಾ ಕುಲುಕುಲು ನಕ್ಕಿದ್ದಾರೆ. ಕಳೆದೆರಡು ಮೂರು ವರ್ಷಗಳಲ್ಲಿನ ತಮ್ಮ ದೇಶ ಮತ್ತು ಆಸ್ಟ್ರೇಲಿಯಾ ನಡುವಿನ ಭೇಟಿಗಳಲ್ಲಿ ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂತಾ ಆರ್ಡರ್ನ ರವರ ಮುಖಾರವಿಂದ ಯಾವಾಗಲೂ ಗಂಟಿಕ್ಕಿತ್ತು. ಆಸ್ಟ್ರೇಲಿಯದ ಹಿಂದಿನ ಪ್ರಧಾನಿಯ ಧೋರಣೆಗೆ ಸಿಡುಕು ಮುಖ ಮಾಡುತ್ತಿದ್ದ ಜೆಸಿಂತಾರವರು ಈ ಬಾರಿ ಹೊಸ ಪ್ರಧಾನಿಯ ಮಾತುಕತೆಗೆ ಸ್ಪಂದಿಸಿ ಹರುಷದ ನಗೆ ಚೆಲ್ಲಿದ್ದಾರೆ. ರೆಫ್ಯೂಜಿಗಳ ವಿಷಯಕ್ಕೆ ಸಂಬಂಧಿಸಿದ ನಮ್ಮ ಪ್ರಧಾನಿಯ ರಾಜಕೀಯ ನಿಲುವುಗಳು ಅವರಿಗೆ ಇಷ್ಟವಾಗಿದೆಯೆಂದು ಕಾಣುತ್ತದೆ.
ಅದೇ ರೀತಿ ಆಸ್ಟ್ರೇಲಿಯಾದ ಈ ಹೊಸ ಪ್ರಧಾನಿಗೆ ನಗುನಗುತ್ತಾ ಸ್ವಾಗತ ಕೋರಿ, ಕೈಕುಲುಕಿದ್ದು ಫ್ರಾನ್ಸಿನ ಅಧ್ಯಕ್ಷರು. ಅಧ್ಯಕ್ಷ ಮ್ಯಾಕ್ರೋನ್ ನಮ್ಮ ಪ್ರಧಾನಿಯ ಗೆಳತಿಯ ಕೈ ಹಿಡಿದುಕೊಂಡು, ಆಕೆಯ ಕೈಗೆ ಮುತ್ತಿಕ್ಕಿ, ತಾವು ಹಿಡಿದುಕೊಂಡಿದ್ದ ಆ ಕೈ ಬಿಡದೆ ಕುಶಲೋಪರಿ ವಿಚಾರಿಸಿದ್ದು ಫೋಟೋಗಳಿಗೆ ಆಹಾರವಾಗಿದ್ದು ಆಸ್ಟ್ರೇಲಿಯಾದ ಮಾಧ್ಯಮಗಳಿಗೆ ರೋಮಾಂಚನವಾಗಿತ್ತು. ಫ್ರಾನ್ಸಿನ ಭೇಟಿ ಮುಗಿಸಿ ವಾಪಸ್ ಆಸ್ಟ್ರೇಲಿಯಕ್ಕೆ ಬಂದದ್ದೇ ತಡ ಕೂಡಲೇ ತಮ್ಮ ಸಲಹೆಗಾರರ ಮಾತಿನಂತೆ ಪ್ರಧಾನಿ ಮತ್ತು ಅವರ ಗೆಳತಿ ಮಾಧ್ಯಮಗಳಿಗೆ ಸಂದರ್ಶನ ಕೊಟ್ಟು ತಾವಿಬ್ಬರೂ ಪರಸ್ಪರ ಪ್ರೀತಿಸುತ್ತೀವಿ, ತಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಯಾವುದೇ ಸಮಸ್ಯೆಯಿಲ್ಲ, ಎಂದು ಸಮಜಾಯಿಷಿ ಹೇಳಬೇಕಾಯಿತು. ಹೊಸ ಪ್ರಧಾನಿಯ ಖಾಸಗಿ ಜೀವನದ ಬಗ್ಗೆ ಅಷ್ಟೊಂದು ತಿಳಿದಿಲ್ಲದಿದ್ದ ಆಸ್ಟ್ರೇಲಿಯನ್ ಸಾರ್ವಜನಿಕರಿಗೆ ಓಹೋ ಇವ ಸಭ್ಯಸ್ಥ ಎಂದು ತಿಳಿದು ಸಮಾಧಾನವಾಗಿತ್ತು.
ಎಷ್ಟಾದರೂ ಆಸ್ಟ್ರೇಲಿಯನ್ ಸಮಾಜಕ್ಕೆ ಹಣೆಪಟ್ಟಿಯಿರುವುದು ‘ಮಧ್ಯಮ ವರ್ಗಿಗಳ, ಪುರುಷ ಪ್ರಾಬಲ್ಯವಿರುವ, ಕನಿಷ್ಠ ಶಿಕ್ಷಣವನ್ನು ಬೆಂಬಲಿಸುವ, ನವಉದಾರ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ದೇಶ’ ಎಂದು. ಆ ಹಣೆಪಟ್ಟಿಗೆ ತಕ್ಕಂತೆ ಬದುಕುತ್ತ ಯಾವುದೇ ಕ್ರಾಂತಿಗಳಿಗೆ ಎಡೆಕೊಡದೆ ತಣ್ಣಗೆ ದಿನದೂಡುತ್ತಿರುವ ಸಮಾಜವಿದು. ಒಮ್ಮೊಮ್ಮೆ ‘ಸತ್ತಂತಿರುವರ ಬಡಿದೆಚ್ಚರಿಸು’ ಎನ್ನುವ ಕವಿ ಸಂದೇಶ ನೆನಪಾಗುತ್ತದೆ. ನನ್ನ ಯಾವುದೇ ಕನಸಿನಲ್ಲೂ ಬಂದಿರದಿದ್ದ, ಸಂಪೂರ್ಣವಾಗಿ ಅಪರಿಚಿತವಾಗಿದ್ದ, ಯಾವುದೇ ನಿಶ್ಚಿತ ಮುನ್ನಾ ಯೋಜನೆಗಳಿಲ್ಲದೆ ದಿಢೀರೆಂದು ಆಸ್ಟ್ರೇಲಿಯಾಕ್ಕೆ ಕಾಲಿಟ್ಟ ಹೊಸತರಲ್ಲಿ ‘ಇದ್ಯಾಕೆ ಇಲ್ಲಿ ಜನ ಸತ್ತಂತ್ತಿದ್ದಾರಲ್ಲ’ ಎಂದು ಪ್ರಶ್ನಿಸಿಕೊಳ್ಳುತ್ತ ಚಡಪಡಿಸಿದ ದಿನಗಳು ನೆನಪಾಗುತ್ತವೆ. ಮಾಡುತ್ತಿರುವ ಈ ಎಲ್ಲವನ್ನೂ ಬಿಟ್ಟು ಎಲ್ಲೋ ದೂರದ ಒಂದು ಅಬೊರಿಜಿನಲ್ ಸಮುದಾಯಕ್ಕೆ ಹೋಗಿ ಅಲ್ಲೇ ವಾಸ ಮಾಡುತ್ತ ಅವರೊಡನೆ ಬದುಕುತ್ತ ಇದ್ದುಬಿಡುವ ಕನಸು ಹುಟ್ಟುತ್ತದೆ. ಅವರೇನು ಸುಖಾಸುಮ್ಮನೆ ನನ್ನನ್ನು ಸೇರಿಸಿಕೊಳ್ಳುತ್ತಾರೆಯೇ ಎಂದೆನಿಸಿ ಬೇರೆಯದೇ ತರಹದ ಚಡಪಡಿಕೆ ಹುಟ್ಟುತ್ತದೆ. ಅಂತಹ ನನ್ನ ಕನಸಿನಿಂದ ನಾನು ಅವರನ್ನು ಶೋಷಿಸುವ ಮತ್ತೊಬ್ಬ ವ್ಯಕ್ತಿಯಾಗುತ್ತೀನಿ ಅಷ್ಟೇ!
ಕಳೆದ ಎರಡು ಶತಮಾನಗಳಲ್ಲಿ ನಡೆದುಹೋದ ಅನ್ಯಾಯಗಳಿಂದ ಇನ್ನೂ ಚೇತರಿಸಿಕೊಳ್ಳದ, ಪರಕೀಯರನ್ನು ನಂಬದ ಅಬೊರಿಜಿನಲ್ ಸಮುದಾಯಗಳು ತಮ್ಮ ಸ್ವಯಂ-ನಿರ್ಣಯ ಹಕ್ಕುಗಳಿಗಾಗಿ ಎತ್ತುತ್ತಿರುವ ಹೋರಾಟದ ದನಿಗೆ ಇಂಬು ಕೊಟ್ಟರೆ ಸಾಕು ಎಂದುಕೊಂಡು ಸುಮ್ಮನಾಗುತ್ತೀನಿ.
ಇನ್ನು ಈ ವಾರದ ತಾಜಾ ಸುದ್ದಿಯೆಂದರೆ ಮತ್ತೆ ಬಂದಿದೆ ಕೊರೋನ! ಕೋವಿಡ್-೧೯ ರ ಮೂರನೇ ಅಲೆ ದೇಶವನ್ನು ವ್ಯಾಪಿಸುತ್ತಿದೆ. ಕೊರೋನ ಪೀಡಿತರ ಸಂಖ್ಯೆ ಏರುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿ ಹೆಚ್ಚುತ್ತಿದೆ. ಪಾಸಿಟಿವ್ ಎಂದು ಗೊತ್ತಾದರೆ ಏಳು ದಿನಗಳ ಕಡ್ಡಾಯ ನಿರ್ಬಂಧವಿದ್ದೇ ಇದೆ. ರಾಜ್ಯ ಸರ್ಕಾರಗಳು ಮತ್ತೆ ಹೇಳಿಕೆಗಳನ್ನು ಹೊರಡಿಸಿವೆ – ಮಾಸ್ಕ್ ಧರಿಸಿ, ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಿ, ಎಂದು. ಇದಾಗಲೇ ನಾಲ್ಕನೆ ಕೊರೋನ ಲಸಿಕೆ ಬಂದಿದೆ. ಅರವತ್ತು ವರ್ಷ ವಯಸ್ಸಾದವರು ಕೂಡಲೆ ಈ ನಾಲ್ಕನೆ ಲಸಿಕೆ ಹಾಕಿಸಿಕೊಳ್ಳಿ ಎಂದು.
ದೇಶದ ರಾಜಧಾನಿಯಾದ ಕ್ಯಾನ್ಬೆರ್ರಾ ನಗರದಲ್ಲಿ ಮತ್ತು ವಿಕ್ಟೊರಿಯಾ ರಾಜ್ಯದ ರಾಜಧಾನಿಯಾದ ಮೆಲ್ಬೋರ್ನ್ ನಲ್ಲಿ ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಬೇರೆ ರಾಜ್ಯಗಳಲ್ಲಿ ಅದಕ್ಕೆ ಉತ್ತೇಜನವಿದೆ. ಜನರು ತಾವೇ ತಾವಾಗಿ ಮಾಸ್ಕ್ ಧರಿಸುತ್ತಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ವ್ಯಾಪಾರ ವಹಿವಾಟು, ಪ್ರವಾಸೋದ್ಯಮಗಳು ಆತಂಕಗೊಂಡಿವೆ. ಈ ಬಾರಿ ಕೊರೋನ ಹೇಗೆ ಕಾಡುತ್ತದೊ ಕಾದು ನೋಡಬೇಕು. ಅಥವಾ ಅದು ದೊಡ್ಡ ಮನಸ್ಸು ಮಾಡಿ ಈ ಹುಲುಮಾನವ ಪ್ರಪಂಚವನ್ನು ತೊರೆದು ಬೇರೊಂದು ಲೋಕಕ್ಕೆ ಹೊರಡಬಹುದು. ಹೋದವಾರ ತಾನೆ ಎಲ್ಲೆಡೆ ಪ್ರಕಟವಾದ ಅತ್ಯಾಕರ್ಷಕ ‘ಯೂನಿವರ್ಸ್’ ಫೋಟೋ ಕೊರೋನವನ್ನು ಕರೆದು ತನ್ನೊಳಗೆ ಇರುವ ಅನೇಕಾನೇಕ ಗ್ಯಾಲಕ್ಸಿಗಳಲ್ಲಿ ಒಂದನ್ನು ಆರಿಸಿ ಪುಕ್ಕಟೆ ಸದಸ್ಯತ್ವವನ್ನು ಕೊಟ್ಟು ಅದರ ರಾಜನಾಗಿಯೊ ಅಥವಾ ರಾಣಿಯಾಗಿಯೊ ಮಾಡಿ ಪಟ್ಟಕ್ಕೇರಿಸಬಹುದು. ಹಾಗೆಂದು ಆಶಿಸೋಣ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.