ಬಿ.ಎ. ಮೊಹಿದೀನ್ ಅವರು ಜೀವನದಲ್ಲಿ ಇಟ್ಟುಕೊಂಡ ಮೌಲ್ಯಗಳು ಅನುಕರಣೀಯವಾದುದು. ತಾನು ಚುನಾವಣೆಗೆ ನಿಂತಾಗ ಮಸೀದಿ ದೇವಾಲಯ ಚರ್ಚುಗಳಿಗೆ ಮತಕೇಳಲು ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅದನ್ನು ಹಟಬಿಡದೇ ಪಾಲಿಸಿದವರು ಅವರು. ತಾವು ಹುಟ್ಟಿಬಂದ ಸಮುದಾಯದ ಏಳಿಗೆಗಾಗಿ ಮೊಹಿದೀನ್ ಅವರಿಗಿದ್ದ ಕಾಳಜಿ ಪ್ರಶ್ನಾತೀತವಾದುದು. ಆದರೆ ಆಧುನಿಕ ಮನೋಭಾವದೊಂದಿಗೆ ಶಿಕ್ಷಣದ ಮೂಲಕ ಸಮುದಾಯದ ಅಭಿವೃದ್ಧಿಗೆ ಪ್ರಯತ್ನಪಟ್ಟವರು.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

ಹೆಚ್ಚಿನ ರಾಜಕಾರಣಿಗಳ ಬಗ್ಗೆ ಅಭಿನಂದನಾ ಗ್ರಂಥಗಳು, ಇಂದ್ರ ಚಂದ್ರ ಎಂದು ವಾಚಾಮಗೋಚರವಾಗಿ ಹೊಗಳಿದ ಬರಹಗಳು ಬೇಕಾದಷ್ಟು ಸಿಗುತ್ತವೆ. ಹೊಗಳುಭಟ್ಟರಿಂದ ಬರೆಯಿಸಿಕೊಂಡ ಬರಹಗಳೂ ಧಂಡಿಯಾಗಿ ಸಿಗುತ್ತವೆ. ಆದರೆ ಪ್ರಾಮಾಣಿಕವಾಗಿ ಆತ್ಮವಿಮರ್ಶೆ ಮಾಡಿಕೊಂಡು ಬರೆದ ಆತ್ಮಕಥೆ ಬಹಳ ವಿರಳವೇ. ಅಥವಾ ನನ್ನ ಕಣ್ಣಿಗೆ ಬಿದ್ದಿಲ್ಲವೋ. ಆದರೆ ಒಂದು ವರ್ಷದ ಹಿಂದೆ ಮಾಜಿ ಉನ್ನತ ಶಿಕ್ಷಣ ಸಚಿವ  ಬಿ.ಎ. ಮೊಹಿದೀನ್ ಅವರ ಆತ್ಮಕಥನ ‘ನನ್ನೊಳಗಿನ ನಾನು’ ಓದುವ ಅವಕಾಶ ಸಿಕ್ಕಿತ್ತು. ಇದು ನೇರವಾಗಿ ಅವರಿಂದ ಬರೆಯಲ್ಪಡದಿದ್ದರೂ ಶ್ರೀ ಮುಹಮ್ಮದ್ ಕುಳಾಯಿ ಮತ್ತು ಮುಹಮ್ಮದ್ ಅಲಿ ಕಮ್ಮರಡಿ ಅವರುಗಳು ಮೊಹಿದೀನ್ ಅವರ ಮಾತುಗಳನ್ನು ಅಕ್ಷರ ರೂಪಕ್ಕೆ ತಂದಿದ್ದಾರೆ.

ಇಲ್ಲಿ ಬರೆದಿರುವ ಅಭಿಪ್ರಾಯಗಳು ಪ್ರಾಮಾಣಿಕವಾಗಿರಬಹುದು ಅನ್ನಿಸಲು ನನ್ನದೇ ಆದ ಒಂದು ತರ್ಕವಿದೆ. ಬಾಲಿಶವಾದದು ಅನ್ನಿಸಲೂಬಹುದು. ನನಗೆ ೧೪-೧೫ ವರ್ಷಗಳಾದಾಗಿನಿಂದ ನಿಧಾನವಾಗಿ ರಾಜಕೀಯ ಸುದ್ದಿಗಳನ್ನು ಆಸಕ್ತಿಯಿಂದ ಓದಲು ಆರಂಭಿಸಿದೆ. ಆದರೆ ಮೊಹಿದೀನ್ ಅವರ ಬಗ್ಗೆ ಯಾವುದೇ ಮುಖ್ಯ ಸುದ್ದಿ ಓದಿದ ನೆನಪಿಲ್ಲ. ಅವರ ಕಾರ್ಯಕ್ಷೇತ್ರವಾಗಿದ್ದ ದಕ್ಷಿಣಕನ್ನಡದಲ್ಲಿ‌ ಮೂರು ವರ್ಷ ಪದವಿ ಓದಿದ್ದೆ, ಆಗ ಕೂಡ ಯಾರೂ ಇವರ ಬಗ್ಗೆ ಚರ್ಚಿಸಿದ್ದು ಕೇಳಿರಲಿಲ್ಲ. ಅವರ ಮಕ್ಕಳಾಗಲೀ ಇಲ್ಲಾ ಹತ್ತಿರದ ಕುಟುಂಬಸ್ಥರು ರಾಜಕೀಯಕ್ಕೆ ಪ್ರವೇಶಿಸಿದ ಬಗ್ಗೆಯೂ ಕೇಳಿರಲಿಲ್ಲ. ಒಂದು ಕಾಲದಲ್ಲಿ ಉನ್ನತ ಶಿಕ್ಷಣದಂತಹ ಮಹತ್ವದ ಖಾತೆ ನಿರ್ವಹಿಸಿದವರು ಹೀಗೆ ನೇಪಥ್ಯಕ್ಕೆ ಸರಿದರು ಅನ್ನುವುದು ಪರೋಕ್ಷವಾಗಿ ಒಂದು ಅರ್ಹತೆಯನ್ನೇ ತೋರಿಸುತ್ತದೆ ಎಂದು ಅನ್ನಿಸಿತು. ಅವರ ಬರಹ ಪ್ರಾಮಾಣಿಕವಾಗಿರಬಹುದೆಂಬ ನಂಬಿಕೆ ಬಂದಿತು.

(ಬಿ.ಎ. ಮೊಹಿದೀನ್)

ಆತ್ಮಕಥೆಗಳು ತಮಗೆ ಗೊತ್ತಿಲ್ಲದಂತೇ ಒಂದು ಪ್ರದೇಶದಲ್ಲಿ, ಒಂದು ಸಂಸ್ಕೃತಿಯಲ್ಲಿ ಅಥವಾ ಒಂದು ಸಮುದಾಯದಲ್ಲಿ ೬೦-೭೦ ವರ್ಷಗಳಲ್ಲಾದ ಬದಲಾವಣೆಯನ್ನು ತೋರಿಸುತ್ತದೆ. ಹಳೆಕಾಲದ ಸಂಪ್ರದಾಯಗಳು ಹೇಗಿದ್ದವು ಎಂದು ತಿಳಿಯಪಡಿಸುವುದು ಮಾತ್ರವಲ್ಲದೇ ಈಗಿನದರೊಂದಿಗೆ ಹೋಲಿಸಿಕೊಂಡು ಅಲ್ಲಾದ ವ್ಯತ್ಯಾಸಗಳನ್ನು ಪರಾಮರ್ಶಿಸಲು ಅವಕಾಶ ಮಾಡಿಕೊಡುತ್ತದೆ. ಅದೇ ತರಹ ಈ ಹೊತ್ತಿಗೆ ಕೂಡಾ ಅಂದು ಬ್ಯಾರಿ ಸಮುದಾಯ ಹೇಗಿತ್ತು, ಅಲ್ಲಿನ ಆಚರಣೆಗಳು ಹೇಗಿದ್ದವು, ಅವಿಭಜಿತ ದಕ್ಷಿಣಕನ್ನಡದ ಸ್ಥಿತಿಗತಿ ಹೇಗಿತ್ತು ಇವೆಲ್ಲದಕ್ಕಿಂತ ಬಹುಮುಖ್ಯವಾಗಿ ಅಂದಿನ ರಾಜಕಾರಣ ಹೇಗಿತ್ತು, ಅಂದಿನ ರಾಜಕಾರಣಿಗಳು ಹೇಗಿದ್ದರು ಅನ್ನುವುದನ್ನು ಅತ್ಯಂತ ನಿರ್ಲಿಪ್ತವಾಗಿ ಹೇಳುತ್ತದೆ.

ಮೊಹಿದೀನ್ ಅವರು ಹುಟ್ಟಿದ್ದು ಮಂಗಳೂರು ಸಮೀಪದ ಬಜಪೆ ಬಳಿಯ ಪೇಜಾವರ ಅನ್ನುವ ಚಿಕ್ಕ ಗ್ರಾಮದಲ್ಲಿ. ಮಧ್ಯಮ ವರ್ಗದ ಬ್ಯಾರಿ‌ ಕುಟುಂಬದಲ್ಲಿ. ಮನೆಯಿಂದ ದೊರೆತ ಉತ್ತಮ ಸಂಸ್ಕಾರ, ಓದಲು ಮನೆಯವರು ಕೊಟ್ಟ ಪ್ರೋತ್ಸಾಹ ಅವರಲ್ಲಿ ಮುಂದಿನ‌ ಸಾಧನೆಗೆ ಬೇಕಾದ ಭದ್ರವಾದ ಅಡಿಪಾಯ ಹಾಕಿಕೊಡುತ್ತದೆ. ತಮ್ಮ ಬಾಲ್ಯ ಕಾಲದ ಸುಖ ದುಃಖಗಳನ್ನು ಮನಮುಟ್ಟುವಂತೆ ತಿಳಿಸಿಕೊಡುತ್ತಾರೆ. ತುಳುನಾಡ ಸಂಸ್ಕೃತಿಗಳ ಬಗ್ಗೆ, ಬ್ಯಾರಿ ಸಂಸ್ಕೃತಿಯ ಬಗ್ಗೆ ಬಹಳ ಚಂದದ ಚಿತ್ರಣ ಈ ಕೃತಿಯಲ್ಲಿದೆ .

ಅವರು ಯಾವುದೇ ವಿಷಯವನ್ನಾಗಲಿ ಒಮ್ಮುಖವಾಗಿ ನೋಡದೇ ಎಲ್ಲಾ ಕೋನಗಳಲ್ಲಿ ಪರಿಶೀಲಿಸಿ ನೋಡುವ ವಿಧಾನ ಬಹಳ ಇಷ್ಟವಾಗುತ್ತದೆ. ಉದಾಹರಣೆಗೆ ಬ್ಯಾರಿ ಸಮುದಾಯದ ಮದುವೆಗಳ ಬಗ್ಗೆ ಹೇಳಬೇಕಾದರೆ, ಸಮುದಾಯದಲ್ಲಿದ್ದ ವರದಕ್ಷಿಣೆ ಸಮಸ್ಯೆ ನಿರ್ಮೂಲನೆಗೊಂಡು ವಧುದಕ್ಷಿಣೆ ಬಂದದ್ದಕ್ಕೆ ಸಂತಸಪಡುತ್ತಾ ವಧುದಕ್ಷಿಣೆ ಅತಿಯಾದರೆ ತಂದೊಡ್ಡಬಹುದಾದ ಅಪಾಯದ ಬಗ್ಗೆಯೂ ವಿಮರ್ಶೆ ಮಾಡುತ್ತಾರೆ.

ಪುಸ್ತಕದ ಬಹುಮುಖ್ಯವಾದ ಭಾಗ ಅವರ ರಾಜಕೀಯ ಜೀವನದ್ದು. ವಿವಾಹಾ ನಂತರ ಓದನ್ನು ಮುಂದುವರೆಸದೆ ವ್ಯಾಪಾರ ಶುರುಮಾಡಿದ ಇವರು ನಿಧಾನಕ್ಕೆ ರಾಜಕೀಯ ಬದುಕಿಗೆ ಪ್ರವೇಶಿಸುತ್ತಾರೆ. ಕರ್ನಾಟಕ ರಾಜಕೀಯದ ಪ್ರಮುಖ ನಾಯಕರುಗಳಾದ ದೇವರಾಜ ಅರಸು, ಜೆ ಎಚ್ ಪಟೇಲ್, ರಾಮಕೃಷ್ಣ ಹೆಗಡೆ, ನಝೀರ್ ಸಾಬ್, ಡಿಬಿ ಚಂದ್ರೇಗೌಡ ಇತ್ಯಾದಿ ನಾಯಕರುಗಳ ಒಡನಾಟದ ಬಗ್ಗೆ ಬಹಳ‌ ಆಸಕ್ತಿಕರ ವಿವರಗಳನ್ನು ಕಟ್ಟಿಕೊಡುತ್ತಾರೆ. ಅದರಲ್ಲೂ ಅರಸು ಅವರ ಬಗ್ಗೆ, ಅವರ ಕಾರ್ಯವೈಖರಿಯ ಬಗ್ಗೆ ಬಹಳ ವಿವರವಾಗಿ ಹೇಳಿದ್ದಾರೆ. ಅರಸು ಅವರ ರಾಜಕೀಯ ಜೀವನ ಏಳು ಬೀಳುಗಳ ಬಗ್ಗೆ, ಅವರ ಸಾಮಾಜಿಕ ನ್ಯಾಯದ ಬಗ್ಗೆ, ಜನಪರ ಕಾಳಜಿಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಆನಂತರದ ದಿನಗಳಲ್ಲಾದ ಪಲ್ಲಟಗಳು, ಅವರಿಗಾದ ಹಿನ್ನಡೆ, ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದು ಕರ್ನಾಟಕ ಉನ್ನತ ಶಿಕ್ಷಣ ಸಚಿವರಾಗಿದ್ದು. ಸಚಿವರಾಗಿ ಅವರ ಕೆಲಸಗಳು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಅವರಿಗಿದ್ದ ಕಾಳಜಿ, ಎಲ್ಲೆಡೆ ಅವರು ಕಾಯ್ದುಕೊಂಡ ಸಾಮಾಜಿಕ ನ್ಯಾಯದ ರೀತಿಗಳ ಬಗ್ಗೆ ಹೇಳಿಸಿಕೊಡುತ್ತಾ ಹೆಚ್ಚುತ್ತಿರುವ ಮತೀಯವಾದದೆಡೆಗಿನ ಅವರ ವಿರೋಧ ಕೂಡಾ ಗಟ್ಟಿಯಾಗಿಯೇ ವ್ಯಕ್ತಗೊಂಡಿದೆ.

ರಾಜಕಾರಣದಲ್ಲಿ ತಮ್ಮ ಸಾಧನೆಯ ವಿಷಯವನ್ನು ಹೇಳಬೇಕಾದರೆ ಎಲ್ಲೂ ಅತಿಯಾದ ಆತ್ಮಪ್ರಶಂಸೆ ಮಾಡಿಕೊಳ್ಳದೇ ನಿರ್ಲಿಪ್ತರಾಗಿಯೇ ಹೇಳಿ ಮುಗಿಸುತ್ತಾರೋ ಅದೇ ಸಂಯಮವನ್ನು ಅವರ ರಾಜಕೀಯ ವಿರೋಧಿಗಳ ಬಗ್ಗೆ ಮಾತನಾಡುವಾಗ ಪಾಲಿಸುತ್ತಾರೆ. ಅವರೊಟ್ಟಿಗೇ ಇದ್ದ, ಅವರೇ ಬೆಳೆಸಿದ ವ್ಯಕ್ತಿಗಳೇ ಮುಂದೆ ಇವರಿಗೆ ಅಡ್ಡಗಾಲು ಹಾಕಿದ್ದನ್ನು ಹೇಳುವಾಗಲೂ ತಣ್ಣನೆಯ ವಿಷಾದ ಬಿಟ್ಟರೆ ಅದಕ್ಕಿಂತ ಹೆಚ್ಚೇನೂ ಕಾಣುವುದಿಲ್ಲ.

ಅವರು ಜೀವನದಲ್ಲಿ ಇಟ್ಟುಕೊಂಡ ಮೌಲ್ಯಗಳು ಅನುಕರಣೀಯವಾದುದು. ತಾನು ಚುನಾವಣೆಗೆ ನಿಂತಾಗ ಮಸೀದಿ ದೇವಾಲಯ ಚರ್ಚುಗಳಿಗೆ ಮತಕೇಳಲು ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅದನ್ನು ಹಟಬಿಡದೇ ಪಾಲಿಸಿದವರು ಅವರು. ತಾವು ಹುಟ್ಟಿಬಂದ ಸಮುದಾಯದ ಏಳಿಗೆಗಾಗಿ ಮೊಹಿದೀನ್ ಅವರಿಗಿದ್ದ ಕಾಳಜಿ ಪ್ರಶ್ನಾತೀತವಾದುದು. ಆದರೆ ಆಧುನಿಕ ಮನೋಭಾವದೊಂದಿಗೆ ಶಿಕ್ಷಣದ ಮೂಲಕ ಸಮುದಾಯದ ಅಭಿವೃದ್ಧಿಗೆ ಪ್ರಯತ್ನಪಟ್ಟವರು.

ಇದೆಲ್ಲದಕ್ಕೆ ಕಳಶವಿಟ್ಟಂತ ಘಟನೆಯೇನೆಂದರೆ ಅವರ ಪತ್ನಿ ಅವರಿಗೆ ಕಲಿಸಿದ ಮರೆಯಲಾಗದ ಪಾಠ. ಮಿತಭಾಷಿಯಾದ, ಅಪ್ಪಟ ಗೃಹಿಣಿಯಾಗಿದ್ದುಕೊಂಡು ಸಂಸಾರದ ಹೊಣೆಗಾರಿಕೆ ತೆಗೆದುಕೊಂಡ ಅವರ ಪತ್ನಿ ಅತ್ಯಂತ ವಿಶಾಲವಾದ ಮನೋಭಾವ ಹೊಂದಿದ್ದವರು. ಅಂದು ಮೊಹಿದೀನ್ ಅವರು ಮಾಡಿದ ಒಂದು ತಪ್ಪಿಗೆ ಅತ್ಯಂತ ತಾಳ್ಮೆಯಿಂದ ಅವರು ಹೇಳಿದ ಬುದ್ಧಿಮಾತುಗಳು ಅವರ ಜೀವನದಲ್ಲಿ ಅಚ್ಚಳಿಯದ ಪರಿಣಾಮ‌ಬೀರಿತು. ಅದನ್ನು ವಿವರಿಸಿದ ಆ ಒಂದೆರಡು ಪುಟಗಳು ಮತ್ತೆ ಮತ್ತೆ ಓದಿಸಿದವು. ಅವರ ಪತ್ನಿ ಖತೀಜಾರ ಮಾತುಗಳು ಬಹಳ‌ ಕಾಲ ನನ್ನ ಕಿವಿಯಲ್ಲಿ ಕೇಳುತ್ತಿದ್ದವು. ಅದು ಯಾವ ಘಟನೆ ಎಂದು ತಿಳಿಯಬೇಕಾದರೆ ಪುಸ್ತಕವನ್ನೇ ಓದಿ.

ಅನೇಕ ದೃಷ್ಟಿಯಿಂದ ಈ‌ ಕೃತಿ ಮಹತ್ವದ್ದಾಗಿದೆ. ಆ ಪಕ್ಷ ಈ ಪಕ್ಷವೆನ್ನದೇ ಇಂದಿನ ರಾಜಕಾರಣ ಹೇಗಿದೆ ಅನ್ನುವುದು ನಮಗೆಲ್ಲರಿಗೂ ಗೊತ್ತು. ರಾಜಕಾರಣಿಗಳು ಮಾಡಬಾರದ ಅನೇಕ ತಪ್ಪು ಕೆಲಸಗಳನ್ನು ಇಂದು ಸಹಜವಾಗಿಯೇ ಸಮರ್ಥಿಸಿಕೊಂಡ ಜನಾಭಿಪ್ರಾಯಗಳು ಬರುತ್ತಿವೆ. ಹೀಗಿರಬೇಕಾದರೆ ಒಬ್ಬರು ಆದರ್ಶ ರಾಜಕಾರಣಿ ಹೇಗಿದ್ದರು, ಆ ಕಾಲದ ರಾಜಕೀಯ ಹೇಗಿತ್ತು ಅನ್ನುವುದನ್ನು ತಿಳಿಯುವುದು ಬಹುಮುಖ್ಯವಾಗುತ್ತದೆ. ಎಲ್ಲರೂ ಅವರ ಎಲ್ಲಾ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಅಭಿಪ್ರಾಯ ಬೇಧ ಸಹಜ. ಎಲ್ಲಾ ವೈಚಾರಿಕ ಬೇಧಗಳನ್ನು ಮೀರಿ ಗೌರವಿಸಬೇಕಾಗಿದ್ದ ವ್ಯಕ್ತಿ ಇವರು ಎಂದು ತಿಳಿಯುತ್ತದೆ. ಅವರಿಂದ ಈ ಎಲ್ಲಾ ವಿಷಯಗಳನ್ನು ಹೊರ ತೆಗೆಸಿದ ನಿರೂಪಕರ ಶ್ರಮ ಕೂಡಾ ಅಭಿನಂದನೀಯ. ದಯವಿಟ್ಟು ಕೊಂಡು ಓದಿ.