ಅದೇನು ಜಾದೂ ನಡೆಯಿತೋ ತಿಳಿಯದು, ಅಲ್ಲಿಂದ ತಿರುಗಿ ಬಂದ ಮಂಜಿಯ ಅಪ್ಪ ಗಡುಸಾಗಿ ಮಾತನಾಡತೊಡಗಿದ, “ಮಗಳು ನಂದು, ಏನು ಮಾಡಬೇಕಂತ ನಂಗೊತ್ತದೆ. ನೀವು ಇನ್ನೂ ಮೀಸೆ ಸರಿಯಾಗಿ ಬರದಿರೋರೆಲ್ಲ ಕಾನೂನು ಮಾತಾಡೂದು ಬ್ಯಾಡ. ಅವಳ ದೇಹ ಬಿಡುಗಡೆಗೆ ಕಾಯ್ತದೆ. ನಮ್ಮ ಕುಟುಂಬದ ದೆಯ್ಯಗಳು ಅವಳನ್ನು ಕಳಿಸಿಕೊಡು ಅಂತ ಕೂಗ್ತಿವೆ. ನೀವು ಪೋಲೀಸು, ಕಾನೂನು ಅಂತ ವರಾತ ಸುರುಮಾಡಿ ಅವಳ ದೇಹ ಕೊಳೆಯೂ ಹಾಗೆ ಮಾಡಬೇಡಿ. ನನ್ನ ಮಗಳನ್ನು ಕಳಸೂಕೆ ನಂಗೆ ದಾರಿಬಿಡಿ.” ಎಂದವನೇ ಮಗಳ ದೇಹವನ್ನು ಇಳಿಸಿಕೊಂಡು ಮನೆಯಂಗಳದಲ್ಲಿ ಮಲಗಿಸಿದ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ಆ ದಿನ ನೀಲಿ ಶಾಲೆಯಿಂದ ಮನೆಗೆ ಬಂದಾಗ ಇಡಿಯ ಹೊಳೆಸಾಲಿನ ತುಂಬಾ ದುಃಖ ಮಡುಗಟ್ಟಿತ್ತು. ಎಲ್ಲರೂ ಮಂಜಿಯ ಮನೆಯ ಅಂಗಳದಲ್ಲಿ ಸೇರಿದ್ದರು. ಗಹನವಾಗಿ ಒಬ್ಬರಿಗೊಬ್ಬರು ಚರ್ಚಿಸುತ್ತಿದ್ದರು. ಮಂಜಿಯ ಅಮ್ಮ ಮಾತ್ರ ಒಳಕೋಣೆಯಲ್ಲಿ ಇಡಿಯ ಹೊಳೆಸಾಲು ಕರಗಿಹೋಗುವಂತೆ ಆರ್ತವಾದ ದನಿಯಲ್ಲಿ ಚೀರುತ್ತಿದ್ದಳು. ಪೇಟೆಯ ಸಾಹುಕಾರರ ಮನೆಯಲ್ಲಿ ಕೆಲಸಕ್ಕಿದ್ದ ಮಂಜಿ ಇನ್ನಿಲ್ಲವೆಂಬ ಸುದ್ದಿ ಆ ಸಂಜೆ ಹೊಳೆಸಾಲಿಗೆ ಬಂದು ಅಪ್ಪಳಿಸಿತ್ತು. ಸ್ನಾನದ ಮನೆಯಲ್ಲಿ ವಿದ್ಯುತ್ ಹೀಟರ್‌ನಿಂದ ಶಾಕ್ ಹೊಡೆದು ಸತ್ತಿರುವಳೆಂದು ಹೊಳೆಸಾಲಿನ ಪಕ್ಕದೂರಿನಲ್ಲಿರುವ ಟೆಲಿಫೋನಿಗೆ ಫೋನ್ ಸಂದೇಶ ಬಂದಿತ್ತು. ಊರಿನಿಂದ ವಾರಸುದಾರರು ಯಾರಾದರೂ ಬಂದು ಆಸ್ಪತ್ರೆಯಲ್ಲಿ ಮಹಜರುಗಳಿಗೆ ಸಹಿ ಹಾಕಿದ ಮೇಲೆ ದೇಹವನ್ನು ಊರಿಗೆ ತರುವುದಾಗಿ ತಿಳಿಸಿದ್ದರು. ಅದರಂತೆ ಹೊಳೆಸಾಲಿನಲ್ಲಿಯೇ ಅತಿ ಧೀರರೆಂದು ಹೆಸರಾದ ಯುವಕ ಸಂಘದ ಮುಂದಾಳು ದೇವದಾಸ ಮತ್ತು ಧರ್ಮ ಅದಾಗಲೇ ಪಟ್ಟಣದ ದಾರಿ ಹಿಡಿದಿದ್ದರು. ಮಂಜಿಯ ಸಾವಿನ ದುಃಖದ ಕಾವು ಇಡಿಯ ಹೊಳೆಸಾಲನ್ನು ಬೇಯಿಸುತ್ತಿತ್ತು.
ಹೊಳೆಸಾಲಿನ ಹುಡುಗರೆಲ್ಲ ಹಂಚಿನ ಮಣ್ಣಿನ ಕೆಲಸ ಕೊನೆಗೊಂಡ ಬಳಿಕ ತುಂಡು ಭೂಮಿಯ ಕೃಷಿಯನ್ನು ಒಲ್ಲೆನೆನ್ನುತ್ತಾ ಪಟ್ಟಣ ಸೇರುತ್ತಿದ್ದರು. ಹೋಟೆಲ್ಲು, ಬೇಕರಿ, ಅಂಗಡಿಗಳಲ್ಲಿ ಕೆಲಸ ಮಾಡುತ್ತಾ ಒಂದಷ್ಟು ಹಣ ಕಮಾಯಿಸುತ್ತಿದ್ದರು. ಇತ್ತ ಶಾಲೆ ಬಿಟ್ಟ ಹೆಣ್ಣು ಮಕ್ಕಳು ತಾವೂ ಒಂದಷ್ಟು ಹಣ ಗಳಿಸುವ ಆಸೆಯಿಂದ ಪಟ್ಟಣದಲ್ಲಿರುವ ಶ್ರೀಮಂತರ, ನೌಕರಸ್ತರ ಮನೆಯ ಕೆಲಸಗಾರರಾಗಿ ಹೋಗಲಾರಂಭಿಸಿದ್ದರು. ಮೊದಮೊದಲು ಹೆಣ್ಣು ಮಕ್ಕಳನ್ನು ಮನೆಯಾಚೆಗೆ ಕಳಿಸಲು ತಾಯಂದಿರು ಅಂಜಿದರಾದರೂ, ಭತ್ತದ ಗದ್ದೆಗಳೆಲ್ಲ ನೀರಿಂಗಿಸುವ ಗುಂಡಿಗಳಾದ ಬಳಿಕ ಮನೆಯ ಖರ್ಚನ್ನು ನಿಭಾಯಿಸಲು ಮನೆಯ ಮಗಳನ್ನು ಕೆಲಸಕ್ಕೆ ಕಳಿಸತೊಡಗಿದರು. ಅವರ ಬಟ್ಟೆ-ಬರೆ, ಊಟ ಎಲ್ಲ ಕಳೆದು ಮದುವೆಯ ಖರ್ಚಿಗಾದರೂ ಒಂದಿಷ್ಟು ಹಣ ಉಳಿಯಲೆಂಬ ಕನಸು ಕಾಣತೊಡಗಿದರು. ಹೀಗೆ ಮನೆಯಿಂದ ಆಚೆಗೆ ಹೊರಟವಳು ಮಂಜಿ.
ಮಂಜಿಯ ಸಾಹುಕಾರರು ಹೊಳೆಸಾಲಿಗೆ ಪರಿಚಿತರೇನೂ ಅಲ್ಲ. ಯಾರದೋ ಮೂಲಕ ಪರಿಚಯ ಮಾಡಿಕೊಂಡು ಅರ್ಜಂಟಾಗಿ ಒಂದು ಕೆಲಸದ ಹುಡುಗಿ ಬೇಕೆಂದು ಮಂಜಿಯ ಮನೆಬಾಗಿಲಿಗೆ ಬಂದಿದ್ದರು. ಅವರ ಶ್ರೀಮಂತ ಹೆಂಡತಿಗೆ ಮದುವೆಯಾಗಿ ಹತ್ತು ವರ್ಷವಾದರೂ ಬಸಿರು ನಿಲ್ಲದೇ, ದೈವ, ನೇಮ, ಪೂಜೆ, ಹರಕೆ ಎಲ್ಲವನ್ನೂ ಮಾಡಿದ ಬಳಿಕ ಒಂದು ಸಾಲದೆಂಬಂತೆ ಒಟ್ಟಿಗೆ ಎರಡು ಮಕ್ಕಳು ಹುಟ್ಟಿದ್ದರು. ಮೊದಲೇ ತಡವಾದ ತಾಯ್ತನ, ಜತೆಯಲ್ಲಿ ಎರಡು ಮಕ್ಕಳ ಪಾಲನೆ, ಪೋಷಣೆಯೆಂದು ಅವರು ಹೈರಾಣಾಗುವ ವೇಳೆಗೆ ಮಂಜಿ ಅವರ ಮನೆಯನ್ನು ಹೊಕ್ಕಿದ್ದಳು.
ಹೊಳೆಸಾಲಿನ ಹುಡುಗಿ ಮಂಜಿ ತೊಳೆದಿಟ್ಟ ದಾಸವಾಳದ ಎಸಳಿನಂತವಳು. ಹೊಳೆಯುವ ಕಣ್ಣುಗಳು, ಹದವಾದ ತಿಳಿಬಿಳಿ ಬಣ್ಣ, ಮುಡಿಯಿಂದ ಅಡಿಯವರೆಗೆ ಹರಡಿರುವ ಕಪ್ಪು ಕೂದಲು, ಅವಳ ವಯಸ್ಸಿಗೆ ಹೆಚ್ಚೇ ಎನ್ನುವಷ್ಟು ಎತ್ತರ, ನೀಳ ಬೆರಳುಗಳ ಒಡತಿ. ಹೊಳೆಸಾಲಿನಲ್ಲಿರುವಾಗ ಆರೈಕೆ ಸಾಲದೇ ಹೆಂಚಿಕಡ್ಡಿಯಂತಿದ್ದವಳು ನಗರ ಸೇರಿದ್ದೇ ಸಿನೆಮಾ ನಟಿಯಂತೆ ಕಂಗೊಳಿಸುತ್ತಿದ್ದಳು. ಸದಾ ಮೊಣಕಾಲಿನಿಂದ ಚೂರೇ ಚೂರು ಕೆಳಗೆ ಬರುವ ಸ್ಕರ್ಟ್ ಧರಿಸಿ ತನ್ನ ನೀಳವಾದ ಕಾಲುಗಳನ್ನು ಬಳಕಿಸುತ್ತಾ ನಡೆದಾಡುತ್ತಿದ್ದಳು. ಆ ಅವಳಿ ಜವಳಿ ಕಂದಮ್ಮಗಳು ಮಂಜಿಯನ್ನು ಅದೆಷ್ಟು ಹಚ್ಚಿಕೊಂಡಿದ್ದವೆಂದರೆ ಅವಳು ವರ್ಷಕ್ಕೆರಡು ಬಾರಿ ರಜೆ ಮಾಡಿ ಒಂದು ವಾರದ ಮಟ್ಟಿಗೆ ಮನೆಗೆ ಬಂದರೂ ನಡುವೆ ಒಂದು ದಿನ ಅವಳನ್ನು ನೋಡಬೇಕೆಂದು ಹಠಮಾಡಿ ಹೊಳೆಸಾಲಿನವರೆಗೂ ಓಡಿಬರುತ್ತಿದ್ದರು. ಚೋಟು, ಮೋಟು ಎಂಬ ತನ್ನ ಪ್ರೀತಿಯ ಹೆಸರಿನಿಂದ ಅವರನ್ನು ಕರೆಯುತ್ತಾ ಮಂಜಿ ತನ್ನ ಮನೆಯ ಕೋಳಿಗೂಡಿನಲ್ಲಿದ್ದ ಕೋಳಿಗಳನ್ನು ಅವರಿಗೆ ತೋರಿಸುತ್ತಿದ್ದಳು. ಹಟ್ಟಿಯಲ್ಲಿದ್ದ ದನಗಳಿಂದ ಅವರ ಕೈಯ್ಯನ್ನು ನೆಕ್ಕಿಸುತ್ತಿದ್ದಳು. ಆಗೆಲ್ಲ ಅವಳೊಂದಿಗೆ ನಿಂತು ಮಕ್ಕಳ ಖುಶಿಯನ್ನು ಅವರ ಅಪ್ಪ ಆನಂದಿಸುತ್ತಿದ್ದರೆ ಅಮ್ಮ ಮಾತ್ರ ತನಗೆ ಈ ಹೊಲಸಿನಲ್ಲೆಲ್ಲ ನಡೆದು ರೂಢಿಯಿಲ್ಲವೆಂಬಂತೆ ಕಾರಿನಲ್ಲಿಯೇ ಕುಳಿತಿರುತ್ತಿದ್ದರು. ನೋಡಲು ಒಂದೇ ರೀತಿ ಕಾಣುವ ಈ ಚೋಟು, ಮೋಟುಗಳನ್ನು ನೋಡಲು ಹೊಳೆಸಾಲಿನ ಮಕ್ಕಳೆಲ್ಲ ಓಡೋಡಿ ಬರುತ್ತಿದ್ದರು. ಅವರನ್ನು ಮಂಜಿ ಅದು ಹೇಗೆ ಗುರುತು ಹಿಡಿಯುತ್ತಾಳೆ ಎಂಬುದೇ ಎಲ್ಲರಿಗೂ ಸೋಜಿಗವಾಗಿತ್ತು. ಮಂಜಿಯ ಅಪ್ಪ ಮನೆಯ ಮುಂದಿರುವ ಕೆಂದಾಳಿ ಮರವನ್ನೇರಿ ನಾಲ್ಕು ಬೊಂಡವನ್ನು ಇಳಿಸಿ ಅವರಿಗೆ ಕುಡಿಸುವುದರೊಂದಿಗೆ ಭೇಟಿಯು ಮುಗಿಯುತ್ತಿತ್ತು. ಸ್ಟ್ರಾ ಇರದೇ ಏನನ್ನೂ ಕುಡಿಯಲು ಬಾರದ ಆ ಮಕ್ಕಳ ಬಾಯಿಗೆ ಮಂಜಿ ಇಡಿಯ ಬೊಂಡವನ್ನು ಬಗ್ಗಿಸಿ ಚೂರುಚೂರೇ ನೀರು ಕುಡಿಸುವಾಗ ನಡುನಡುವಲ್ಲಿ ಕೆಮ್ಮುತ್ತಾ, ಸಾವರಿಸಿಕೊಳ್ಳುತ್ತಾ ಅವರದನ್ನು ಕುಡಿಯುವ ಚಂದವನ್ನು ಎಲ್ಲರೂ ಕಣ್ತುಂಬಿಕೊಳ್ಳುತ್ತಿದ್ದರು.
ಮಂಜಿ ಅವರ ಮನೆಸೇರಿ ಅದಾಗಲೇ ವರ್ಷ ಐದಾಗುತ್ತ ಬಂದಿತ್ತು. ಮಕ್ಕಳಿಬ್ಬರೂ ಶಾಲೆಗೆ ಸೇರಿದ್ದರು. ತಾವು ಕಲಿಯುವ ಇಂಗ್ಲೀಷನ್ನು ಮಂಜಿಗೂ ಕಲಿಸಿದ್ದರು. “ನಮ್ ಮಂಜಿ ಇಂಗ್ಲೀಸಲ್ಲಿ ಹೊಟಾಯಿಸ್ತ್ಲು ಗೊತ್ತಾ?” ಎಂದು ಅವಳಪ್ಪ ಎಲ್ಲರೊಂದಿಗೂ ಹೆಮ್ಮೆಯಿಂದ ಹೇಳುತ್ತಿದ್ದರು. ಕೆಲಸಕ್ಕೆ ಸೇರಿದ ಮೊದಮೊದಲೆಲ್ಲ ತನ್ನ ಸಾಹುಕಾರ್ತಿಯ ಬಗ್ಗೆ ಅಮ್ಮನಲ್ಲಿ ರಾಶೀ ದೂರನ್ನು ಹೇಳುತ್ತಿದ್ದ ಮಂಜಿ ಇತ್ತೀಚಿನ ವರ್ಷಗಳಲ್ಲಿ ಏನೂ ಹೇಳುತ್ತಿರಲಿಲ್ಲ. ಮನೆಗೆ ಬಂದ ಒಂದು ವಾರದಲ್ಲಿಯೂ ಎಷ್ಟೊತ್ತಿಗೆ ಮರಳಿ ಹೋಗುವೆನೋ ಎಂಬ ಹವಣಿಕೆಯಲ್ಲಿರುವಂತೆ ಕಾಣುತ್ತಿದ್ದಳು. ಕಳೆದ ಬಾರಿ ಮಂಜಿಯನ್ನು ಬಿಡಲು ಕಾರು ಹೊಳೆಸಾಲಿಗೆ ಬಂದಾಗ ಮಂಜಿಯ ಅಮ್ಮ ಸಾಹುಕಾರ್ತಿಗೆ ಬೊಂಡವನ್ನು ಕೊಡಲೆಂದು ಕಾರಿನವರೆಗೂ ಹೋಗಿದ್ದಳು. ಆಗ ಅವಳು ಸಣ್ಣನೆಯ ದನಿಯಲ್ಲಿ, “ನೋಡಿ ಇವರೇ, ಈಗ ನಮ್ಮ ಮಕ್ಕಳು ದೊಡ್ಡವರಾಗಿದ್ದಾರೆ. ಇಡಿದಿನ ಶಾಲೆಯಲ್ಲಿ ಕಳೀತಾರೆ. ಮನೆಯಲ್ಲಿ ಬೇರೆಲ್ಲ ಕೆಲಸಕ್ಕೆ ಆಳು-ಕಾಳು ಇದ್ದಾರೆ. ಇನ್ನು ಮುಂದೆ ಮಂಜಿ ಮನೆಗೆ ಬರೋದು ಬೇಡ. ನಾನು ಹೇಳಿದ್ರೆ ಇವ್ರೆಲ್ಲಿ ಕೇಳ್ತಾರೆ? ನೀವೇ ಒಂಚೂರು ಏನಾದರೂ ಮಾಡಿ ಅವಳನ್ನು ಕಳಿಸಲಾಗದು ಎಂದು ಹೇಳಿ. ಹಾಂ, ಈ ವರ್ಷ ಮದುವೆ ಮಾಡ್ತೇವೆ ಅಂತ ಹೇಳಿದ್ರೂ ಅಡ್ಡಿಲ್ಲ. ಮದುವೆಗೆ ನಾನು ನಿಮಗೆ ಸಹಾಯ ಮಾಡ್ತೇನೆ.” ಎಂದು ಹೇಳಿ ಅವರ ಕೈಯ್ಯಲ್ಲಿ ನೂರರ ನೋಟನ್ನು ತುರುಕಿದ್ದರು. ಇದ್ಯಾಕೋ ಸರಿಯಿದ್ದಂತಿಲ್ಲ ಎಂದು ತಿಳಿದ ಮಂಜಿಯ ಅಮ್ಮ ಸಾಹುಕಾರರಲ್ಲಿ ಮೆಲ್ಲನೆ, “ಈ ಸಲ ಮಂಜಿಯ ಮದುವೆ ಮಾಡುವ ಅಂತಾ ಒಡೆಯಾ. ಹೇಂಗೂ ನಿಮ್ ಮಕ್ಳು ದೊಡ್ಡೋರಾದರಲ್ಲ. ಮತ್ತೆ ಅವಳನ್ನು ಕರೆಯಲು ಬರಬೇಡಿ.” ಎಂದಿದ್ದೇ ಹಾವು ತುಳಿದವರಂತೆ ಬೆಚ್ಚಿಬಿದ್ದ ಸಾಹುಕಾರರು, “ಅಯ್ಯೋ, ಅವಳಿನ್ನೂ ಚಿಕ್ಕವಳು. ಮದುವೆಗೇನು ಅವಸರ? ನೀವು ಹುಡುಕುವ ಹುಡುಗನನ್ನು ಅವಳು ಮದುವೆಯಾಗ್ತಾಳಾ? ಅವಳು ಮದುವೆಯಾಗ್ತಾಳೆ ಅಂದ್ರೆ ನಾನೇ ಪೇಟೆಯಲ್ಲಿ ಗಂಡು ಹುಡುಕ್ತೀನಿ ಬಿಡಿ.” ಎಂದವರೇ ಅವಳ ಅಪ್ಪನ ಕಿಸೆಯಲ್ಲಿ ನೂರರ ಹತ್ತು ನೋಟುಗಳನ್ನು ತುರುಕಿ ಮಗಳನ್ನು ಕಳಿಸುವಂತೆ ಮಾಡಿದ್ದರು.
“ಆ ರಂಡೆ ನನ್ನ ಮಗಳನ್ನು ನುಂಗಿಯೇ ಬಿಟ್ಲಲ್ಲೋ, ನನ್ನ ಮಗಳನ್ನು ನನ್ನ ಕೈಗೆ ಕೊಟ್ರೆ ನನ್ನ ಊಟದಲ್ಲಿ ನಾಕು ತುತ್ತು ಹಾಕಿ ಸಾಕ್ತಿದ್ನಲ್ಲೋ, ಚಂದದ ಗಿಳಿಯನ್ನ ಸಾಕಿ ಗಿಡುಗನ ಕೈಗೆ ಕೊಟ್ಟಬಿಟ್ನಲ್ಲೋ, ಅವ್ರಿಗೆ ನನ್ನ ನೆರಳು ಕಂಡ್ರೆ ಉರಿ ಅಂತ ಹೇಳಿದ್ರೂ ಆ ಮಗಳನ್ನು ಕಳಿಸಿದ್ನಲ್ಲೋ……” ಮಂಜಿಯ ಅಮ್ಮನ ರೋಧನೆ ನೆರೆದವರೆಲ್ಲರ ಮನಸ್ಸನ್ನು ಕಲುಕುತ್ತಿತ್ತು. ಹಗಲು ಇಳಿದು ರಾತ್ರಿಯಾದದ್ದೂ ಎಲ್ಲರಿಗೂ ಮರೆತುಹೋಗಿತ್ತು. ತಮ್ಮ, ತಮ್ಮ ಕಲ್ಪನೆಗಳಿಗೆ ರೆಕ್ಕೆ, ಪುಕ್ಕ, ಬಾಲವನ್ನು ಹಚ್ಚಿ ಕತೆಯಾಗಿಸುತ್ತ ಇರುಳನ್ನು ಕಳೆಯುತ್ತಿದ್ದರು. ಬೆಳಗಿನ ಜಾವದಲ್ಲಿ ನಗರಕ್ಕೆ ಹೋಗಿದ್ದ ವೀರರಿಬ್ಬರೂ ಮರಳಿ ಬಂದಕೂಡಲೇ ಮಂಜಿಯ ಸುದ್ದಿ ಕೇಳಲು ಅವರ ಸುತ್ತಲೂ ಮುಗಿಬಿದ್ದರು. ಅವರೆಲ್ಲಾದರೂ ತನ್ನ ಮಗಳು ಜೀವಂತವಿರುವ ಸುದ್ದಿ ತಂದಾರೇನೋ ಎಂಬ ಸಣ್ಣ ಭ್ರಮೆಯಲ್ಲಿದ್ದ ಮಂಜಿಯ ಅಮ್ಮನೂ ನಿಸ್ತೇಜವಾದ ದೇಹವನ್ನು ಎಳೆದುಕೊಂಡು ಹೊರಬಂದಳು. ಅವರ ಸೋತ ಕಣ್ಣುಗಳು, ಜೋಲು ಮುಖಗಳು ಅವಳಿಗೆ ಸತ್ಯವನ್ನು ಹೇಳಿದವು. ಸದ್ದಿಲ್ಲದೇ ಕಾಲೆಳೆಯುತ್ತ ಕೋಣೆಯೊಳಗೆ ಸೇರಿಕೊಂಡಳು. ಅವರ ಮಾತುಗಳಿಂದ ತಿಳಿದುಬಂದ ವಿಷಯಗಳೆಂದರೆ, ದೇಹವನ್ನು ಮಂಜಿನಲ್ಲಿ ಇಟ್ಟಿದ್ದಾರೆ, ಸತ್ತು ಎರಡು ದಿನವೇ ಆಗಿರಬೇಕು, ದೇಹದಲ್ಲೆಲ್ಲೂ ಗಾಯಗಳಿಲ್ಲ, ಕುತ್ತಿಗೆಯ ಸುತ್ತ ಕಪ್ಪುಗಟ್ಟಿದೆ, ಕೇಳಿದರೆ ಕರೆಂಟ್ ಶಾಕ್ ಹೊಡೆದಾಗ ಹಾಗಾಗುತ್ತದೆ ಎಂಬ ಸಮಜಾಯಿಸಿ ಬಂತು… ಈಗಲೂ ನಗುವಂತಿದೆ ಮುಖ ಎಂಬ ಮಾತಿನೊಂದಿಗೆ ಅವರಿಬ್ಬರೂ ಬಿಕ್ಕಳಿಸತೊಡಗಿದರು. ಸಾವಿನ ಸತ್ಯವು ಅದಾಗಲೇ ಗಾಳಿಗೂಡಿಹೋಗಿತ್ತು.
ಹೊಳೆಸಾಲಿನ ಹುಡುಗರ ರಕ್ತ ಮುಂಜಾನೆಯ ಬಿಸಿಲಿನೊಂದಿಗೆ ಬಿಸಿಯೇರತೊಡಗಿತು. ಹೆಣದ ಗಾಡಿ ಬಂದಾಗ ವಿಚಾರಿಸಿಕೊಳ್ಳಬೇಕು, ಅಂತಿಮ ಸಂಸ್ಕಾರಕ್ಕೆ ಒಪ್ಪಲೇಬಾರದು, ಪ್ರತಿಭಟನೆಯ ಕಿಚ್ಚು ಹಚ್ಚಿ ಪೋಲೀಸರು ಬರುವಂತಾಗಬೇಕು, ಇಲ್ಲಿಂದಲೇ ತನಿಖೆ ಮತ್ತೆ ಶುರುವಾಗಬೇಕು…. ಹೀಗೆಲ್ಲ ಮಾತಾಡುತ್ತ ಹೋರಾಟದ ಕಿಚ್ಚು ಹಚ್ಚತೊಡಗಿದರು. ಸೂರ್ಯ ಇನ್ನೇನು ನೆತ್ತಿಯ ಮೇಲೆ ಬರುವಾಗ ಪೋಂ… ಪೋಂ ಶಬ್ದ ಮಾಡುತ್ತ ಧೂಳು ತುಂಬಿದ ರಸ್ತೆಯಲ್ಲಿ ಮಂಜಿಯ ದೇಹವನ್ನು ಹೊತ್ತ ವಾಹನ ಬಂತು. ಅದರ ಹಿಂದೆಯೇ ನಾಲ್ಕೈದು ಕಾರುಗಳು ಬಂದವು. ಊರ ಯುವಕರೆಲ್ಲ ಘೋಷಣೆಗಳನ್ನು ಕೂಗುತ್ತ, ಕಾರಿನಲ್ಲಿ ಬಂದವರೊಂದಿಗೆ ವಾಗ್ವಾದ ನಡೆಸುತ್ತ ಬಿಸಿಲಿನ ಕಾವಿಗೆ ಇನ್ನಷ್ಟು ಬಿಸಿಯೇರಿಸಿದರು. ಇನ್ನೇನು ಪ್ರತಿಭಟನೆ ಕಾವು ಪಡೆಯುತ್ತದೆ ಎನ್ನುವಾಗಲೇ ಊರ ಹುಡುಗರಿಗೆಲ್ಲ ಕೆಲಸ ಕೊಡಿಸುವ ಬಿಳಿಯಂಗಿಯ ಸಾಹುಕಾರರು ಮಂಜಿಯ ಅಪ್ಪನ ಹೆಗಲ ಮೇಲೆ ಕೈಯ್ಯಿಟ್ಟು ಅಷ್ಟು ದೂರ ಕರೆದುಕೊಂಡು ಹೋದರು. ಅದೇನು ಜಾದೂ ನಡೆಯಿತೋ ತಿಳಿಯದು, ಅಲ್ಲಿಂದ ತಿರುಗಿ ಬಂದ ಮಂಜಿಯ ಅಪ್ಪ ಗಡುಸಾಗಿ ಮಾತನಾಡತೊಡಗಿದ, “ಮಗಳು ನಂದು, ಏನು ಮಾಡಬೇಕಂತ ನಂಗೊತ್ತದೆ. ನೀವು ಇನ್ನೂ ಮೀಸೆ ಸರಿಯಾಗಿ ಬರದಿರೋರೆಲ್ಲ ಕಾನೂನು ಮಾತಾಡೂದು ಬ್ಯಾಡ. ಅವಳ ದೇಹ ಬಿಡುಗಡೆಗೆ ಕಾಯ್ತದೆ. ನಮ್ಮ ಕುಟುಂಬದ ದೆಯ್ಯಗಳು ಅವಳನ್ನು ಕಳಿಸಿಕೊಡು ಅಂತ ಕೂಗ್ತಿವೆ. ನೀವು ಪೋಲೀಸು, ಕಾನೂನು ಅಂತ ವರಾತ ಸುರುಮಾಡಿ ಅವಳ ದೇಹ ಕೊಳೆಯೂ ಹಾಗೆ ಮಾಡಬೇಡಿ. ನನ್ನ ಮಗಳನ್ನು ಕಳಸೂಕೆ ನಂಗೆ ದಾರಿಬಿಡಿ.” ಎಂದವನೇ ಮಗಳ ದೇಹವನ್ನು ಇಳಿಸಿಕೊಂಡು ಮನೆಯಂಗಳದಲ್ಲಿ ಮಲಗಿಸಿದ. ಅಪ್ಪನಿಗೇ ಸರಿಯೆಂದಮೇಲೆ ತಮಗಿನ್ನೇನು ಎನ್ನುತ್ತಾ ಊರ ಮಕ್ಕಳು ಅಲ್ಲಿಂದ ಕಾಲು ಕಿತ್ತರು. ಬಂದ ಕಾರುಗಳೆಲ್ಲ ಹಾಗೆಯೇ ಹಿಂದಿರುಗಿದವು. ಅಷ್ಟರೊಳಗೆ ಊರಿನ ಮಕ್ಕಳು ಸಿಟ್ಟಿನಲ್ಲಿ ಗೀರಿದ ಒಂದಿಷ್ಟು ಗೆರೆಗಳಷ್ಟೇ ಕಾರಿನ ಮೇಲೆ ಆಕ್ರೋಶದ ಸಾಕ್ಷಿಯಾಗಿ ಉಳಿದವು. ದಿನವಿಡೀ ಉಪವಾಸವಿದ್ದು ಅತ್ತಿದ್ದ ಮಂಜಿಯ ಅಮ್ಮನಿಗೆ ಮೈಮೇಲಿನ ಎಚ್ಚರವೇ ಇರಲಿಲ್ಲ. ಮಂಜಿಯೆಂಬ ಹುಡುಗಿ ತಾಸೆರಡರಲ್ಲಿ ಬೂದಿಯಾಗಿ ಹರವಿಕೊಂಡಳು.
ಸಂಜೆಯಿಂದ ಸಂಜೆಯವರೆಗೆ ಇದೆಲ್ಲವನ್ನೂ ಮೌನವಾಗಿ ನೋಡುತ್ತಿದ್ದ ನೀಲಿಯ ಎದೆಯೊಳಗೆ ಅಲೆಗಳ ಸುನಾಮಿಯೆದ್ದಿತ್ತು. ಹೆಣ್ಣಿನ ಜೀವನದ ಅನಿಶ್ಚಿತತೆಯ ಬಗ್ಗೆ ಗಾಢ ವಿಷಾಧ ಆವರಿಸಿಕೊಂಡಿತು. ರಾತ್ರಿ ಹಾಸಿಗೆಯಲ್ಲಿ ಮಲಗಿದರೂ ನಿದ್ದೆ ಹತ್ತಿರ ಸುಳಿಯದಾದಾಗ ಪುಸ್ತಕ ಪೆನ್ನು ಹಿಡಿದು ಬರೆಯತೊಡಗಿದಳು. ಅವರಳಿಗರಿವಿಲ್ಲದೇ ಕವಿತೆಯೊಂದು ಪುಟದ ತುಂಬಾ ಹರಡಿಕೊಂಡಿತು. ಮರುದಿನ ಶಾಲೆಗೆ ಬಂದರೂ ಮಂಜಿಯ ಮುಖವೇ ಕಣ್ಣೆದುರು ಬರುತ್ತಿತ್ತು. ಸಾಹುಕಾರರ ಕಾರನ್ನೇರಿ ಅವಳು ತನ್ನೆಡೆಗೆ ಕೈಬೀಸುವಾಗ ಹೊಳೆಯುತ್ತಿದ್ದ ಅವಳ ಕಣ್ಣುಗಳು ಕಾಡತೊಡಗಿದವು. ಏನಾದರಾಗಲಿ ಎಂದು ತಾನು ಬರೆದ ಕವನವನ್ನು ಇತಿಹಾಸದ ಅಧ್ಯಾಪಕರಿಗೆ ನೀಡಿ ಹಿಂದಿನ ದಿನ ನಡೆದ ಘಟನೆಯೆಲ್ಲವನ್ನೂ ವಿವರಿಸಿದಳು. ಕೊನೆಯಲ್ಲಿ ಅವಳ ಕಂಠ ತುಂಬಿಬಂದು ಗದ್ಗದಿತಳಾದಳು. ಅಧ್ಯಾಪಕರು ಅವಳ ಮಾತುಗಳೆಲ್ಲವನ್ನೂ ಮೌನವಾಗಿ ಕೇಳಿಸಿಕೊಂಡರು. ಕವನವನ್ನು ಕೈಯ್ಯಲ್ಲಿ ಹಿಡಿದು ನಿಧಾನವಾಗಿ ಓದಿದರು.
ಅವಳ ಮನದಾಳದ ನೋವುಗಳೆಲ್ಲ ಅಲ್ಲಿ ಹೆಪ್ಪುಗಟ್ಟಿದ್ದವು. ಕಣ್ಣೀರು ಕೆನ್ನೆಯನ್ನು ತೋಯಿಸಿ ಮುಗಿದ ಮೇಲೆ ನೀಲಿಯ ತಲೆಸವರಿ ಹೇಳಿದರು, “ನೀನು ಅಕ್ಷರದ ನಾವೆಯನ್ನೇರಿರುವೆ. ವಿದ್ಯೆ ನಿನ್ನನ್ನು ಸದಾ ಬೆಳಕಿನೆಡೆಗೆ ಕೊಂಡೊಯ್ಯುವುದು. ಸುತ್ತಲಿರುವ ಎಲ್ಲ ಕತ್ತಲೆಯನ್ನು ತೊಡೆಯಲು ಅಕ್ಷರದ ದೀವಿಗೆಗೆ ಮಾತ್ರವೇ ಸಾಧ್ಯ. ಎಷ್ಟು ಕಷ್ಟವಾದರೂ ಓದನ್ನು ನಿಲ್ಲಿಸಬೇಡ. ನಮ್ಮ ಮಿತಿಗಳನ್ನು ಮೀರಲು, ಜೀವನವನ್ನು ವಿಸ್ತರಿಸಿಕೊಳ್ಳಲು ಅನೇಕ ದಾರಿಗಳಿವೆ. ಅವುಗಳಲ್ಲಿ ಅತಿಸುಲಭದ ದಾರಿಯೆಂದರೆ ವಿದ್ಯೆ. ಕಲಿಯುತ್ತಾ ಹೋಗು, ಕತ್ತಲೆಯನ್ನು ತೊಡೆಯುವ ಬೆಳಕಾಗುವೆ. ಬೆಳಗುವ ದೀಪ ಮಾತ್ರವೇ ಇನ್ನೊಂದು ಹಣತೆಯನ್ನು ಹೊತ್ತಿಸಬಲ್ಲುದು.” ನೀಲಿಗೆ ಈಗ ಎಲ್ಲವೂ ಅರ್ಥವಾಗತೊಡಗಿತ್ತು. ತನ್ನ ಕೈಯ್ಯಲ್ಲಿರುವ ಪುಸ್ತಕವನ್ನು ಪ್ರೀತಿಯಿಂದ ತನ್ನೆದೆಗೆ ಅಪ್ಪಿಕೊಂಡಳು.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.