ಇವರ ಸ್ವಂತ ಮಕ್ಕಳು ಆಗಿನ ಕಾಲಕ್ಕೆ ಡಾಕ್ಟರ್, ಇಂಜಿನಿಯರ್, ಲೆಕ್ಚರ್ ಸ್ಥಾನ ಅಲಂಕರಿಸಿದ್ದರೂ ಇವರು ಮಾತ್ರ ತುಂಬಾ ಸಿಂಪಲ್ ಆಗಿ ಇದ್ರು. ಮನೇಲಿದ್ದಾಗ ವ್ಯವಸಾಯದ ಕೆಲಸವನ್ನು ಮಾಡ್ತಿದ್ರು. ಟ್ಯೂಷನ್ ಬಗ್ಗೆ ಇವರು ‘ಸ್ವ ಅಧ್ಯಯನವೇ ಮುಖ್ಯ’ ಎಂದು ಹೇಳುತ್ತಿದ್ದರು. ಇಂಗ್ಲೀಷ್ ಪದದ ಕನ್ನಡ ಅರ್ಥ ಬರೆಸಿ ಅರ್ಥ ಸಮೇತ ಸ್ಪೆಲ್ಲಿಂಗ್ ಕೇಳೋದು, ಪಾಠ ಓದಿಸೋದು, ಪ್ರಶ್ನೋತ್ತರ ಕೇಳೋದು ಹೀಗೆ ಪ್ರಾಮಾಣಿಕವಾಗಿ ಬೋಧಿಸ್ತಾ ಇದ್ರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ
“ಡಾಕ್ಟರ್ ಆದೋವ್ರು ಎಲ್ಲೇ ಹೋದ್ರೂ ಒಂದು ಸಿರಂಜ್ ಇಟ್ಕೊಂಡು ಜೀವನ ಮಾಡಬಹುದು. ಮೇಷ್ಟ್ರೂ ಅಷ್ಟೇ ಒಂದು ಚಾಕ್ ಪೀಸ್ ಇಟ್ಕೊಂಡು ಎಲ್ಲಿ ಬೇಕಾದ್ರೂ ಜೀವನ ಮಾಡಬಹುದು, ಚೆನ್ನಾಗಿ ಓದಬೇಕು ಅಷ್ಟೇ” ಅಂತಾ ನಾನು 6 ನೇ ಕ್ಲಾಸಲ್ಲಿ ಓದುವಾಗ ಊರಲ್ಲಿ ಕೆಲವರು ಹೇಳವ್ರು. ಇದೇ ಮಾತಿಗೆ ಪುಷ್ಟಿಯೆಂಬಂತೆ ನಲ್ಕುದ್ರೆಯಲ್ಲಿ ಆಗ ಒಬ್ರು ಮೇಷ್ಟ್ರು ಬಂದಿದ್ರು. ಗವರ್ನಮೆಂಟ್ ಮೇಷ್ಟ್ರು ಅಲ್ಲ. “ಓದಿದ್ದೇನೆ ಮಕ್ಕಳಿಗೆ ಪಾಠ ಹೇಳಿಕೊಡ್ತೇನೆ” ಅಂತಾ ಬಂದಿದ್ರು. ಅವರ ಹೆಸರು ಹನುಮಂತಪ್ಪ ಅಂತಾ. ಸದಾ ಬಿಳಿ ಅಂಗಿ ಬಿಳಿ ಪಂಜೆ ಧರಿಸ್ತಿದ್ದ ಅವರ ಊರಿನ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಬೆಳಗ್ಗೆ ಹಾಗೂ ಸಂಜೆ ಕ್ಲಾಸ್ ಮಾಡ್ತಿದ್ದ ಅವರನ್ನು ಕಂಡರೆ ಬಹಳ ಹುಡುಗರು ಹೆದರುತ್ತಾ ಇದ್ರು. ಅವರಿಗೆ ಊಟ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದು ನನ್ನ ಸಹಪಾಠಿ ಪ್ರದೀಪನ ತಂದೆ. ಆಗಿನ ಕಾಲಕ್ಕೆ ಅವರು ಮಕ್ಕಳ ಓದಿನ ಬಗ್ಗೆ ತುಂಬಾ ಆಸಕ್ತಿ ವಹಿಸಿದ್ದರು. ಅವರ ಮನೆಯ ಪಕ್ಕದಲ್ಲೇ ಟ್ಯೂಷನ್ ಮಾಡ್ತಿದ್ರು. ಅದರ ಫೀಸು ತಿಂಗಳಿಗೆ 20 ರೂ. ಇತ್ತು. ನಮ್ಮ ಶಾಲೆಯ ಕೆಲವರು ಹೋಗ್ತಾ ಇದ್ರು. ನನಗೂ ಹೋಗ್ಬೇಕು ಅಂತಾ ಆಸೆ ಇದ್ರೂ ನಮ್ಮ ಮನೆಯಲ್ಲಿ ಕಳಿಸಿರಲಿಲ್ಲ. ಟ್ಯೂಷನ್ನಿಗೆ ಹೋಗೋವ್ರು ಶಾಲೆಗೆ ಬಂದು ಇಂಗ್ಲೀಷಿನಲ್ಲಿ ‘ಒನ್, ಟೂ, ತ್ರೀ…..’ ಹೇಳ್ತಾ ಇದ್ರೆ ನಾವು ಆಶ್ಚರ್ಯಚಕಿತರಾಗಿ ಅವರನ್ನೇ ನೋಡ್ತಾ ಇದ್ವಿ. ನಮಗೆ ಸ್ವಲ್ಪ ಹೇಳೋಕೆ ಬರೋದೇ ವಿನಃ ಅವರಂಗೆ 100 ಕ್ಕಿಂತ ಹೆಚ್ಚಿನ ಸಂಖ್ಯೆ ಹೇಳೋಕೆ ಬರ್ತಾ ಇರಲಿಲ್ಲ. ಇದೇ ಅನೇಕ ಮಕ್ಕಳಿಗೆ ಟ್ಯೂಷನ್ನಿಗೆ ಹೋಗೋಕೆ ಪ್ರೇರಣೆ ಆಯ್ತು. ಕೆಲವರು ಟ್ಯೂಷನ್ನಿಗೆ ಹೋಗ್ತೀವಿ ಅಂತಾ ಹೆಮ್ಮೆಯಿಂದ ಹೇಳಿಕೊಳ್ತಾ ಇದ್ರು. ಇಂದು ಬಿಡಿ ಟ್ಯೂಷನ್ ಹೋಗೋದೇ ಕಡ್ಡಾಯವಾಗಿಬಿಟ್ಟಿದೆಯೇನೋ ಎಂಬ ವಾತಾವರಣ ನಿರ್ಮಾಣವಾಗಿದೆ!
ನಮ್ಮ ಶಾಲೆಯಲ್ಲಿ ಇದ್ದ ಸಿದ್ದಪ್ಪ ಮೇಷ್ಟ್ರ ಮನೆ ನಮ್ಮ ಮನೆಯ ಹತ್ತಿರವೇ ಇತ್ತು. ಅವರು ಕಚ್ಚೆ ಪಂಜೆ, ಬಿಳಿ ಅಂಗಿ, ಕಣ್ಣಿಗೆ ಕನ್ನಡಕ ಧರಿಸಿ ಬರ್ತಾ ಇದ್ರು. ಅವರು ಅಂಗಿಯ ಕೊರಳ ಪಟ್ಟಿಯ ಹಿಂದೆ ಒಂದು ಕರ್ಚೀಫನ್ನು ಮಡಚಿ ಯಾವಾಗ್ಲೂ ಇಟ್ಕೊಂಡಿರ್ತಾ ಇದ್ರು. ನಾವು ಮಕ್ಕಳಾಗಿದ್ದಾಗ ಇದರ ಬಗ್ಗೇನೇ ಚರ್ಚೆ ಮಾಡ್ತಾ ಇದ್ವಿ. “ಅವರೇಕೆ ಹಾಗೇ ಇಟ್ಕೊಂಡಿರ್ತಾರೆ? ಕೈ ಒರಿಸಿಕೊಳ್ಳಲಾದರೆ ಜೇಬಿನ ಒಳಗೆ ಇಟ್ಟುಕೊಳ್ಳಬಹುದಿತ್ತು. ಧೂಳು ಬೀಳುತ್ತೆ ಅನ್ನೋದಾದ್ರೆ ಕೈಯಲ್ಲಿ ಇಟ್ಕೊಳ್ಳಬಹುದಿತ್ತು” ಹೀಗೆ ನಮ್ಮ ಚರ್ಚೆ ಸಾಗಿತ್ತೇ ವಿನಃ ಯಾರೊಬ್ಬರೂ ಇದರ ಬಗ್ಗೆ ಅವರ ಬಳಿ ಪ್ರಶ್ನೆ ಮಾಡೋಕೆ ಹೋಗಿರಲಿಲ್ಲ. ಇವತ್ತಿಗೂ ನನಗೆ ಇಂಗ್ಲೀಷಿನ ‘ಪಾರ್ಟ್ಸ್ ಆಫ್ ಸ್ಪೀಚ್’ ಕೇಳಿದರೆ ಅವರ ನೆನಪೇ ಬರುತ್ತೆ. ನಮಗೆ ಅವರು ಇವುಗಳ ಬಗ್ಗೆ 6 ನೇ ಕ್ಲಾಸಲ್ಲೇ ಪಾಠ ಮಾಡಿದ್ರು. ಆದರೆ ನಮಗೆ ಯಾರಿಗೂ ಇದರ ಬಗ್ಗೆ ಅರ್ಥ ಆಗಿರಲಿಲ್ಲ ಅಷ್ಟೇ! ಇವರು ಇಂಗ್ಲೀಷ್ ಪಾಠ ಮಾಡುವಾಗಲೇ ಪಾಠದ ಮಧ್ಯದ ವಾಕ್ಯದಲ್ಲಿ ಬಂದ ಒಂದು ಪದವನ್ನು ಕೇಳಿ “ಇದು ಯಾವ ಪಾರ್ಟ್ಸ್ ಆಫ್ ಸ್ಪೀಚ್ ಹೇಳಿ ನೋಡೋಣ?” ಎಂದು ಪ್ರಶ್ನಿಸುತ್ತಿದ್ದರು. ನಾವು ಒಂದೊಂದೇ ಹೇಳ್ತಾ ಹೋಗ್ತಿದ್ವಿ. ಕೊನೆಗೆ ಯಾರದ್ದಾದರೊಬ್ಬರದು ಸರಿ ಇರೋದು!
ಇವರ ಸ್ವಂತ ಮಕ್ಕಳು ಆಗಿನ ಕಾಲಕ್ಕೆ ಡಾಕ್ಟರ್, ಇಂಜಿನಿಯರ್, ಲೆಕ್ಚರ್ ಸ್ಥಾನ ಅಲಂಕರಿಸಿದ್ದರೂ ಇವರು ಮಾತ್ರ ತುಂಬಾ ಸಿಂಪಲ್ ಆಗಿ ಇದ್ರು. ಮನೇಲಿದ್ದಾಗ ವ್ಯವಸಾಯದ ಕೆಲಸವನ್ನು ಮಾಡ್ತಿದ್ರು. ಟ್ಯೂಷನ್ ಬಗ್ಗೆ ಇವರು ‘ಸ್ವ ಅಧ್ಯಯನವೇ ಮುಖ್ಯ’ ಎಂದು ಹೇಳುತ್ತಿದ್ದರು. ಇಂಗ್ಲೀಷ್ ಪದದ ಕನ್ನಡ ಅರ್ಥ ಬರೆಸಿ ಅರ್ಥ ಸಮೇತ ಸ್ಪೆಲ್ಲಿಂಗ್ ಕೇಳೋದು, ಪಾಠ ಓದಿಸೋದು, ಪ್ರಶ್ನೋತ್ತರ ಕೇಳೋದು ಹೀಗೆ ಪ್ರಾಮಾಣಿಕವಾಗಿ ಬೋಧಿಸ್ತಾ ಇದ್ರು. ಉತ್ತರ ಹೇಳದೇ ಇರೋರಿಗೆ ಚೆನ್ನಾಗಿ ಬಾರಿಸುವುದರ ಜೊತೆಗೆ ಎರಡೂ ಕಿವಿ ಹಿಡ್ಕೊಂಡು ಮೇಲಕ್ಕೆತಿ ಹಾಗೇ ಕೆಳಗೆ ಬಿಡ್ತಾ ಇದ್ರು. ಇವರು ಆಗಾಗ್ಗೆ ಪಾಠದ ಮಧ್ಯೆ ತಾವು ಓದುವಾಗ ಇಂಗ್ಲೀಷಿನಲ್ಲಿ ತೆಗೆದ ಅಂಕಗಳ ಬಗ್ಗೆ ಹೇಳ್ತಾ ಇದ್ರು. ಇವರೇ ನಮಗೆ ಮುಖ್ಯೋಪಾಧ್ಯಾಯರಾಗಿದ್ರು. ಹಣದ ಉಳಿತಾಯದ ಬಗ್ಗೆ ನಾವು ಇವರನ್ನು ನೋಡಿ ಕಲಿಯಬಹುದಿತ್ತು.
ಸಾಮಾನ್ಯವಾಗಿ ಮಕ್ಕಳು ತಮ್ಮ ಮೇಷ್ಟ್ರನ್ನ ಅನುಕರಣೆ ಮಾಡ್ತಾರೆ. ಅದರಲ್ಲೂ ಇವರ ಫೇವರೇಟ್ ಮೇಷ್ಟ್ರು ಆದರಂತೂ ಮುಗೀತು. ಅವರ ಹೇರ್ ಸ್ಟೈಲ್, ಅವರ ಮಾತು, ನಡಿಗೆ ಹೀಗೆ ಅವರವರ ಇಷ್ಟಾನುಸಾರವಾಗಿ ತಮ್ಮಲ್ಲಿ ಅಳವಡಿಸಿಕೊಳ್ಳೋಕೆ ಶುರು ಮಾಡ್ತಾರೆ. ನಾವೂ ಸಹ ಇದೇ ರೀತಿ ಲೋಕಪ್ಪ ಮೇಷ್ಟ್ರ ಹೇರ್ ಸ್ಟೈಲನ್ನು ಬಹಳ ಇಷ್ಟ ಪಡ್ತಿದ್ವಿ. ಗುಂಗುರಗೂದಲಿನ ಹೇರ್ ಸ್ಟೈಲ್ ನಮಗೆ ಫಾಲೋ ಮಾಡೋಕೆ ನಮ್ಮ ಕೂದಲು ತುಂಬಾ ಮೃದು ಇದ್ದವು. ನಾವು ಮಹೇಶ್ವರಪ್ಪ ಮೇಷ್ಟ್ರ ಕೂದಲು ಬಾಚೋ ರೀತಿಯನ್ನು ತುಂಬಾ ಇಷ್ಟಪಟ್ಟು ಅನುಕರಣೆ ಮಾಡೋಕೆ ಶುರು ಮಾಡಿದ್ವಿ. ದಟ್ಟನೆಯ ಕೂದಲಲ್ಲಿ ಸ್ಕೇಲಿನಲ್ಲಿ ಗೆರೆ ಎಳೆದಂತೆ ಬಾಚಿದಂತಹ ಕ್ರಾಪು ನಮಗಂತೂ ಬಹಳ ಇಷ್ಟವಾಗುತ್ತಿತ್ತು. ಪ್ರದೀಪ ಅವರಂತೆ ಅನುಕರಣೆ ಮಾಡ್ತಿದ್ದ. ಇದರ ಜೊತೆ ನಮ್ಮ ಪಿ.ಇ ಸರ್ ಆದಂತಹ ಬಸವಂತಪ್ಪ ಮೇಷ್ಟ್ರ ಇನ್ ಶರ್ಟ್ ಮಾಡೋ ಸ್ಟೈಲು ಇಷ್ಟವಾಗಿತ್ತು. ಆದರೆ ಪ್ಯಾಂಟು ನನ್ನ ಬಳಿ ಇಲ್ಲದ ಕಾರಣ ನಾನು ಮಾಡೋಕೆ ಹೋಗಿರಲಿಲ್ಲ. ಆಗ ನಮಗೆ 7 ನೇ ಕ್ಲಾಸು ಆದ್ರೂ ಚಡ್ಡಿ ಅಂಗೀನೇ ಯೂನಿಫಾರಂ ಆಗಿತ್ತು.
ಇವತ್ತಿಗೂ ನನಗೆ ಇಂಗ್ಲೀಷಿನ ‘ಪಾರ್ಟ್ಸ್ ಆಫ್ ಸ್ಪೀಚ್’ ಕೇಳಿದರೆ ಅವರ ನೆನಪೇ ಬರುತ್ತೆ. ನಮಗೆ ಅವರು ಇವುಗಳ ಬಗ್ಗೆ 6 ನೇ ಕ್ಲಾಸಲ್ಲೇ ಪಾಠ ಮಾಡಿದ್ರು. ಆದರೆ ನಮಗೆ ಯಾರಿಗೂ ಇದರ ಬಗ್ಗೆ ಅರ್ಥ ಆಗಿರಲಿಲ್ಲ ಅಷ್ಟೇ! ಇವರು ಇಂಗ್ಲೀಷ್ ಪಾಠ ಮಾಡುವಾಗಲೇ ಪಾಠದ ಮಧ್ಯದ ವಾಕ್ಯದಲ್ಲಿ ಬಂದ ಒಂದು ಪದವನ್ನು ಕೇಳಿ “ಇದು ಯಾವ ಪಾರ್ಟ್ಸ್ ಆಫ್ ಸ್ಪೀಚ್ ಹೇಳಿ ನೋಡೋಣ?” ಎಂದು ಪ್ರಶ್ನಿಸುತ್ತಿದ್ದರು. ನಾವು ಒಂದೊಂದೇ ಹೇಳ್ತಾ ಹೋಗ್ತಿದ್ವಿ.
7 ನೇ ಕ್ಲಾಸಿಗೆ ಬಂದಾಗ ನಮಗೆ ಶಾಲೆಗೆ ಬೆಲ್ ಹೊಡೆದಾಗ ಕೊನೆಗೆ ಬೀಗ ಹಾಕಿಕೊಂಡು ಬರೋದು, ಬೆಳಗ್ಗೆ ಬೇಗ ಹೋಗಿ ಶಾಲೆಯ ಕಸ ಗುಡಿಸೋದು, ಗಿಡಗಳಿಗೆ ನೀರು ಹಾಕೋದು, ಹೀಗೆ ಶಾಲೆಯ ಎಲ್ಲಾ ಕೆಲಸಗಳನ್ನು ಮಾಡುವ ಜವಾಬ್ದಾರಿ ನಮ್ಮದಾಗಿತ್ತು. ಈ ಕೆಲಸವನ್ನು ನಾವು ತುಂಬಾ ಪ್ರೀತಿಯಿಂದಾನೆ ಮಾಡ್ತಿದ್ವಿ. ಆಗ ತಾಲ್ಲೂಕಿನ ಟೀಚರ್ಸ್‌ಗಳೆಲ್ಲಾ ನಮ್ಮ ಶಾಲೆಗೆ ಬರ್ತಾರೆ, ನಮ್ಮ ಶಾಲೆಯಲ್ಲಿ ಮೀಟಿಂಗ್ ಇದೆ ಎಂಬ ಸುದ್ದಿ ಬಂತು. ಆಗ ನನಗೆ ನಮ್ಮ ಮೇಷ್ಟ್ರು ಇಂಗ್ಲೀಷಿನಲ್ಲಿ ಒಂದು ಟಾನ್ ಭಾಷಣ ಬರೆದುಕೊಟ್ಟಿದ್ರು. ಅದನ್ನು ಕಂಠಪಾಠ ಮಾಡಿ ಒಂದಕ್ಷರವೂ ಬಿಡದಂತೆ ಅವರ ಮುಂದೆ ಹೇಳಿ ಬಂದ ಅಧಿಕಾರಿಗಳಿಂದ ‘ಶಹಬ್ಬಾಸ್’ ಗಿಟ್ಟಿಸಿಕೊಂಡಿದ್ದೆ. ತಮಾಷೆ ಅಂದ್ರೆ ಅದರ ಅರ್ಥವು ಮಾತ್ರ ನನಗೆ ಒಂದಿಷ್ಟೂ ತಿಳಿದಿರಲಿಲ್ಲ! ಚರ್ಚಾಸ್ಪರ್ಧೆ ಯಲ್ಲಿ ನಾನು ಈ ವರ್ಷ ಗಿಟ್ಟಿಸಿಕೊಂಡಿದ್ದು ಮೊದಲ ಬಹುಮಾನ! ಈ ರೀತಿ ನನಗೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಹುಮಾನಗಳು ಬರ್ತಾ ಇದ್ದವೇ ಹೊರತು ಆಟ ಆಡೋದ್ರಲ್ಲಿ ನನಗೆ ಆಸಕ್ತಿಯೇ ಇರಲಿಲ್ಲ.
ರಜಾಕ್ಕೆ ಅಂತ ನಮ್ಮ ಊರಿಗೆ ಹೋದಾಗ ಅಲ್ಲಿ ನನ್ನ ತಮ್ಮನ ಜೊತೆಗೆ ಕ್ರಿಕೆಟ್ ಆಡ್ತಿದ್ದೆ. ಅದೂ ಬಾಲ್ ಇಲ್ಲದೇ! ನಾವು ಎಸೆದ ಪ್ಲಾಸ್ಟಿಕ್ ಕೊಬ್ಬರಿ ಎಣ್ಣೆ ಡಬ್ಬಿ, ಇತರೆ ಪ್ಲಾಸ್ಟಿಕ್ ಡಬ್ಬಿಗಳನ್ನು ಬಾಲನ್ನಾಗಿ ಮಾಡಿಕೊಂಡು, ತೆಂಗಿನ ಮಟ್ಟೆಯನ್ನು ಬ್ಯಾಟನ್ನಾಗಿ ಮಾಡಿಕೊಂಡು ಆಡುತ್ತಿದ್ವಿ. ಸ್ವಲ್ಪ ದುಡ್ಡು ಸಿಕ್ರೆ ಕಮ್ಮಿ ಬೆಲೆಯ ರಬ್ಬರ್ ಬಾಲ್ ತೆಗೆದುಕೊಂಡು ಬೌಂಡರಿ ಮ್ಯಾಚ್ ಆಡ್ತಿದ್ವಿ. ಟೆನ್ನೀಸ್ ಬಾಲು ನಮ್ಮ ಪಾಲಿಗೆ ಗಗನಕುಸುಮವಾಗಿತ್ತು. ಇದರ ಜೊತೆಗೆ ಆಡುತ್ತಿದ್ದುದು ಚಿನ್ನಿ ದಾಂಡು, ಗೋಲಿ, ಹಳೆಗುಣಿಮಣೆ ಆಟ, ಚೌಕಾಬಾರ. ಆಗ ಎಲ್.ಪಿ ಜಿ ಎಂಬುದೇ ಇರಲಿಲ್ಲ. ಹಾಗಾಗಿ ಅಡುಗೆಯನ್ನು ಕಟ್ಟಿಗೆಯಿಂದ ಮಾಡಬೇಕಾಗಿತ್ತು. ಸೀಮೆಎಣ್ಣೆ ಸ್ಟೌ ಇಟ್ಟುಕೊಂಡವರು ಅಂದ್ರೆ ಒಂದು ಹಂತ ಮೇಲಿರುವವರು ಎಂಬ ಭಾವನೆ ಇತ್ತು! ಹೊಲದಲ್ಲಿ ಇದ್ದ ಜಾಲಿ ಕಟ್ಟಿಗೆಯನ್ನು ನಮ್ಮಪ್ಪ ಕಡಿದುಕೊಂಡು ಕೊಡುತ್ತಿದ್ರು. ಇದರ ಜೊತೆಗೆ ಹತ್ತಿ ಕಡ್ಡಿ ನಮ್ಮನೆ ಒಲೆಯ ಉರುವಲಾಗಿತ್ತು. ಇನ್ನುಳಿದಂತೆ ಅಡುಗೆಗೆ ಬೇಕಾಗುವ ದಿನಸಿ ಪದಾರ್ಥಗಳನ್ನು ಮಾದಪ್ಪನ ಅಂಗಡೀಲಿ ತರುತ್ತಾ ಇದ್ವಿ. ಇಡೀ ವರ್ಷ ಉದ್ರಿ ತಂದು ವರ್ಷದ ಬೆಳೆ ಬಂದ್ಮೇಲೆ ಅವರ ಬಾಕಿ ಕೊಡುತ್ತಿದ್ದರು.
ಇತ್ತ ಮಳೆ ನಂಬಿ ಬದುಕೋ ಜನರಿರುವ ನಮ್ಮೂರು, ನೀರಾವರಿ ಸೌಲಭ್ಯ ಇರೋ ನಮ್ಮಜ್ಜಿ ಮನೆ ಹೀಗೆ ಎರಡೂ ವಿಭಿನ್ನ ಪ್ರದೇಶದ ಅನುಭವಗಳು ಬಾಲ್ಯದಲ್ಲಿ ನನಗಾದವು. ನಮ್ಮ ಸ್ವಂತ ಊರಲ್ಲಿ ಯಾವುದಾದರೂ ಮದುವೆ ಮನೆಗಳು ಇದ್ದರೆ ಅದೇ ಊರಿನ ಚಿಕ್ಕವರಿಗೆ ಊಟಕ್ಕೆ ಕೂರೋಕೆ ಅವಕಾಶ ಕೊಡ್ತಾ ಇರಲಿಲ್ಲ. ಆದರೆ ನಮ್ಮಜ್ಜಿ ಊರಲ್ಲಿ ಈ ವಾತಾವರಣ ಇರಲಿಲ್ಲ. ನಮ್ಮೂರಿಗೆ ಹೋಲಿಸಿದರೆ ಅಲ್ಲಿ ಸಿರಿವಂತಿಕೆಯ ವಾತಾವರಣ ಇತ್ತು. ಜನರೂ ಸಹ ಮೃದು ಆಗಿದ್ದರು. ನಾನು ಅಜ್ಜಿ ಮನೆಯಲ್ಲಿಯೇ ಇರಲು ಬಯಸುತ್ತಿದ್ದೆ. ಒಮ್ಮೆ ನನ್ನ ತಮ್ಮನೂ ಅಜ್ಜಿ ಮನೆಗೆ ಬಂದಿದ್ದ. ನಾವು ಧರ್ಮಸ್ಥಳಕ್ಕೆ ಹೋಗಿ ಬಂದ ಕಾರಣ ಇಬ್ಬರೂ ಗುಂಡರಾಗಿದ್ವಿ. ನಾನು ನನ್ನ ತಮ್ಮ ಹೊಲಕ್ಕೆ ಹೋಗಿ ಅಲ್ಲಿದ್ದ ದೊಡ್ಡ ಚಾನೆಲ್ಲಿನ ಬಳಿ ಕೂತಿದ್ದಾಗ ಮಿಸ್ಸಾಗಿ ಕಾಲು ಜಾರಿ ನಾನು ಚಾನೆಲ್ಲಿನಲ್ಲಿ ಹೋಗಿಬಿಟ್ಟೆ. ನನಗಿನ್ನೂ ನೆನಪಿದೆ. ಆಗ ‘ನಾನು ನೀರಲ್ಲಿ ಹೋದೆ; ನನ್ನ ಕಥೆ ಇಲ್ಲಿಗೆ ಮುಗೀತು’ ಎಂದು ಒದ್ದಾಡುತ್ತಿದ್ದಾಗ ನನ್ನ ದೊಡ್ಡ ಕಲ್ಲು ಸಿಕ್ಕು ಅದರ ಮೇಲೆ ಕಾಲು ಇಟ್ಟು ಮೇಲಕ್ಕೆ ಬಂದೆ. ಇದನ್ನು ನೋಡುತ್ತಿದ್ದ ಒಬ್ಬ ವ್ಯಕ್ತಿ ಸೀದಾ ಮನೆಗೆ ಹೋಗಿ “ನಿಮ್ಮ ಹುಡುಗ ನೀರಲ್ಲಿ ಬಿದ್ದು ಒದ್ದಾಡುತ್ತಿದ್ದ ನಾನೇ ಬದುಕಿಸಿದೆ” ಅಂತಾ ಹೇಳಿ ನಮ್ಮ ಮನೆಯವರ ಮುಂದೆ ಪೋಸು ತೆಗೆದುಕೊಂಡಿದ್ದ. ನಾನು ನನ್ ತಮ್ಮ ಮನೆಗೆ ಬರ್ತೀವಿ, ತಕ್ಷಣ ನಮ್ಮಜ್ಜಿ ಕೋಪದಿಂದ ಕೆರಳಿ “ನೀವು ಸತ್ತು ಹೋಗಿದ್ರೆ ನಮ್ಮನೇಲಿ ಇದ್ದು ಹೀಗಾಯ್ತು ಎಂದು ನಮ್ಮ ಹೆಸರಿಗೆ ಕಳಂಕ ತರ್ತಿದ್ರಿ. ದೇವರು ದೊಡ್ಡವನು, ನೀವು ಈಗಲೇ ಊರಿಗೆ ಹೊರಟು ಹೋಗಿ” ಎಂದು ಬೈದರು. ಆಗ ನಾವು ಊರಿಗೆ ವಾಪಾಸ್ಸು ಹೋಗೋಕೆ ರೆಡಿ ಆದ್ವಿ. ಅದ್ಯಾರು ಈ ಸುದ್ದಿಯನ್ನ ಊರ ತುಂಬೆಲ್ಲ ಹರಿಸಿದ್ರೋ ಗೊತ್ತಿಲ್ಲ, ಕಂಡ ಕಂಡವರು “ಏನಪ್ಪಾ ಚಾನೆಲ್ ಅಳತೆ ಮಾಡೋಕೆ ಹೋಗಿದ್ಯಂತೆ” ಎಂದು ಅಣಕಿಸೋಕೆ ಶುರು ಮಾಡಿದ್ದರು! ಇದರಿಂದ ತಪ್ಪಿಸಿಕೊಳ್ಳೋಕೆ 15 ದಿನ ನಮ್ಮೂರಿಗೆ ಹೋಗಿಬಿಟ್ಟಿದ್ದೆ. ಈ ಘಟನೆ ಆದ ಮೇಲೆ ನನಗೆ ವಾಟರ್ ಫೋಬಿಯಾ ಶುರುವಾಯ್ತು. ಇವತ್ತಿಗೂ ನೀರು ಅಂದ್ರೆ ಸ್ವಲ್ಪ ಹೆದರಿಕೇನೆ!
ನನ್ನ ಸ್ವಂತ ಊರಿಗೆ ಹೋದಾಗ ಅಲ್ಲಿದ್ದ ಊರ ಗ್ರಂಥಾಲಯವನ್ನು ಬಳಸಿಕೊಳ್ಳೋಕೆ ಶುರು ಮಾಡಿದೆ. ಆಗ ಇತ್ತೀಚಿನ ಮಕ್ಕಳಿಗೆ ರಜಾದಲ್ಲಿ ಬರೆಯಲೆಂದು ಕೊಡುವಷ್ಟು ಹೋಮ್ ವರ್ಕ್ ಕೊಡ್ತಾ ಇರಲಿಲ್ಲ. ರಜಾದಲ್ಲಿ ನೆಂಟರ ಮನೆಗೋ, ಪರಿಚಿತರ ಮನೆಗೋ ಹೋಗೋದು, ಊರಲ್ಲಿ ಕುಣಿಯೋದೋ ಮಾಡ್ತಿದ್ವಿ. ಶಾಲಾ ಪುಸ್ತಕಗಳು, ಬ್ಯಾಗು ಎಲ್ಲಿ ಬಿದ್ದಿರುತ್ತಿದ್ದವೋ? ಅವನ್ನು ಮುಟ್ಟುತ್ತಿದ್ದುದು ಶಾಲೆ ಶುರುವಾದ್ಮೇಲೇನೇ! ಆಗ ಈಗಿನಂತೆ ಸಮ್ಮರ್ ಕ್ಯಾಂಪುಗಳೂ ಸಹ ಇರಲಿಲ್ಲ. ಮಕ್ಕಳಿಗೆ ಸಂಬಂಧಗಳಲ್ಲಿ ಬಾಂಧವ್ಯವನ್ನು ಉಂಟು ಮಾಡಲು ಆಗಿನ ಕಾಲಾನೇ ಚೆನ್ನಾಗಿತ್ತೇನೋ ಅನಿಸುತ್ತೆ. ಆದರೇನು ಮಾಡಲಿ? ಜನರಿಗೆ ಕಾಂಚಾಣದ ಹಿಂದೆ ಹೋಗುವ ಚಾಳಿ ತುಸು ಹೆಚ್ಚೇ ಆಗಿದೆ. ಹಣ ಬೇಕಾದರೂ ಅದರಿಂದೆಯೇ ಬಿದ್ದು ಉಳಿದವನ್ನು ತೊರೆಯೋದು ಅಷ್ಟು ಒಳ್ಳೆಯದಲ್ಲ. ಯಾಕೆಂದರೆ ದೇವರು ಉಪಯೋಗಿಸಲು ವಸ್ತುಗಳನ್ನು, ಪ್ರೀತ್ಸೋಕೆ ವ್ಯಕ್ತಿಗಳನ್ನು ಸೃಷ್ಟಿಸಿದನಂತೆ. ಆದರೆ ಇಂದು ಅದು ಉಲ್ಟಾ ಆಗಿದೆ. ಇದು ಬದಲಾಗಲಿ. ನನಗೆ ಇಂಗ್ಲೀಷ್ ಕಲಿಸಿದ ಸಿದ್ದಪ್ಪ ಮೇಷ್ಟ್ರು ಇಂದು ಇಲ್ಲ. ಅವರ ಆಶೀರ್ವಾದ ಮಾತ್ರ ನಮ್ಮ ಮೇಲಿದೆ ಎಂದು ಆಶಿಸುತ್ತೇನೆ.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ಬಾಲ್ಯದಲ್ಲಿನ ಇಂತಹ ನೆನಪುಗಳು ನಮ್ಮ ಸಹಜ ವಯಸ್ಸನ್ನು ಮರೆಸಿ ಮತ್ತೆ ಆ ದಿನಗಳಿಗೆ ಕೊಂಡೊಯ್ಯುವ ಕೆಲಸ ಮಾಡುತ್ತವೆ.
ಅದ್ಭುತವಾದ ನೆನಪುಗಳು ಸರ್ ಚೆನ್ನಾಗಿ ಬರೆದಿದ್ದೀರಿ..!!
ಅಭಿನಂದನೆಗಳು 💐💐
I love your writing sir, Because it’s engaging and approachable.
ನಿಮ್ಕ ಬಾಲ್ಯದ ನೆನಪುಗಳು ನಮ್ಮವೇ ಎಂದೆನಿಸಿ ನಮ್ಮನ್ನೂ ಬಾಲ್ಕಕ್ಕೆ ಕರೆದೊಯ್ಯುತ್ತವೆ.
ಇನ್ನೂ ಏನೇನ್ ಮಾಡಿದಿರಿ ಗೌಡ್ರೆ ಬಾಲ್ಯದಲ್ಲಿ.. ಅಸಮಾನ್ಯ ಪ್ರತಿಭೆ ಬಿಡಿ ನೀವು.. ಸದ್ಯ ಚಾನೆಲ್ ನಿಂದ ಎದ್ದು ಬಂದ್ರಲ..ದೇವ್ರು ದೊಡ್ಡೋನು..ಆಮೇಲೆ ನಿಮ್ ಸರ್ ಶರ್ಟ್ ಕಾಲರ್ ನಲ್ಲಿ ಕರ್ಚಿಫ್ ಯಾಕೆ ಇಡ್ತಿದ್ರು ಕೇಳಿ ತಿಳ್ಕೊಂಡು ಹೇಳಿ.. ಒಳ್ಳೆದಾಗಲಿ ನಿಮ್ಗೆ👍💐