ಬರಬರುತ್ತಾ ಓದು, ವ್ಯುತ್ಪತ್ತಿ, ಭಾಷಾ ಪ್ರೌಢಿಮೆಗಳ ಬಗೆಗಿನ ಆಸ್ಥೆ ಕಡಿಮೆಯಾಗಿ `ಹಾಗೂ ಹೀಗೂ ಒಂದಿಷ್ಟು ಪಾಠ ಮಾಡೋದು, ಸಂತೆ ಹೊತ್ತಿಗೆ ಮೂರು ಮೊಳ ಆದ್ರೆ ಸಾಕು’ ಎಂಬ ಮನಃಸ್ಥಿತಿ ಮೂಡಿತು. ಇದೊಂದು ರೀತಿಯ ಸುಲಭೀಕರಣ. ಇದಕ್ಕೆ ಕನ್ನಡ ಅಧ್ಯಾಪಕರು ಮಾತ್ರ ಕಾರಣ ಅಲ್ಲ. ಜಾಗತೀಕರಣದ ನಂತರ, ಭಾರತ ದೇಶದ ಬದುಕು ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳವಾಗಿ ಬದಲಾಯಿತು. ಉಪಗ್ರಹ ಪ್ರಸಾರದ ಅಂತಾರಾಷ್ಟ್ರೀಯ ಚಲನಚಿತ್ರ ವಾಹಿನಿಗಳು, ಅಂತರ್ಜಾಲ, ಮುಂದೆ ಸರ್ವವ್ಯಾಪಿಯಾದ ಚಲನವಾಣಿಗಳ ಬಳಕೆ ಇವುಗಳಿಂದಾಗಿ ಓದುಸಂಸ್ಕೃತಿ ಹಿಂದೆ ಸರಿದು ನೋಡುಸಂಸ್ಕೃತಿ ಮುನ್ನೆಲೆಗೆ ಬಂದಿತಲ್ಲವೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತಾರನೆಯ ಬರಹ
ಕನ್ನಡದ ಹೆಮ್ಮೆಯಾದ ರಾಷ್ಟ್ರಕವಿ ಕುವೆಂಪು ಅವರು `ನಮಗೆ ಬೇಕಾದ ಇಂಗ್ಲಿಷ್’ ಎಂಬ ಒಳ್ಳೆಯ ಪ್ರಬಂಧವೊಂದನ್ನು ಬರೆದಿದ್ದಾರೆ. ಇದರಲ್ಲಿ ಕನ್ನಡ ನಾಡಿನ ಮಕ್ಕಳಿಗೆ ಯಾವ ರೀತಿಯಲ್ಲಿ, ಎಷ್ಟು ಇಂಗ್ಲಿಷನ್ನು ಕಲಿಸಬೇಕು ಎಂಬ ಚಿಂತನೆ ಇದೆ. ಈ ಪ್ರಬಂಧದಲ್ಲಿನ ಒಂದು ಮುಖ್ಯ ಅಂಶವೆಂದರೆ, `ಕನ್ನಡ ನಾಡಿನ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಇಂಗ್ಲಿಷನ್ನು ಕಲಿಸಬಹುದು’ ಎಂಬುದು. `ಕನ್ನಡ ನಾಡಿನ ಎಲ್ಲ ಮಕ್ಕಳೂ ಇಂಗ್ಲಿಷ್‌ನಲ್ಲೇ ಇಂಗ್ಲಿಷನ್ನು ಓದಬೇಕಿಲ್ಲ, ಇಂಗ್ಲಿಷ್‌ನ ಉತ್ತಮ ಸಾಹಿತ್ಯ ಕೃತಿಗಳನ್ನು ಅಥವಾ ಬೇರೆ ವಿಷಯಗಳನ್ನು ಕನ್ನಡ ಅನುವಾದದ ಮೂಲಕ ಅವರಿಗೆ ಕಲಿಸಬಹುದು, ಆದರೆ ಮುಂದೆ ಇಂಗ್ಲಿಷ್ ಅಧ್ಯಾಪಕರಾಗುವ ವಿದ್ಯಾರ್ಥಿಗಳು ಇಂಗ್ಲಿಷನ್ನು ಒಂದು ಭಾಷೆಯಾಗಿ ಗಂಭೀರವಾಗಿ ಕಲಿಯಬೇಕಾಗುತ್ತದೆ ಹಾಗೂ ಇಂಗ್ಲಿಷ್ ವಿಷಯಗಳನ್ನು ಇಂಗ್ಲಿಷ್‌ನಲ್ಲೇ ಓದುವ, ಗ್ರಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ’ ಎನ್ನುವುದು ಈ ಪ್ರಬಂಧದ ಸಾರ.
ವಿದ್ಯಾರ್ಥಿಗಳ ದೃಷ್ಟಿಯಿಂದ ನಮ್ಮ ಎರಡನೆಯ ರಾಷ್ಟ್ರಕವಿಯ ಈ ಸಲಹೆ ಸರಿಯಿರಬಹುದು. ಆದರೆ ಇಂದಿನ ಕನ್ನಡ ಅಧ್ಯಾಪಕರ ದೃಷ್ಟಿಯಿಂದ ಈ ಬಗ್ಗೆ ಗಂಭೀರ ಮರುಚಿಂತನೆ ಅಗತ್ಯವಿದೆ ಅನ್ನಿಸುತ್ತದೆ. ಕುವೆಂಪು ಅವರ ಪ್ರಬಂಧದ ಶೀರ್ಷಿಕೆಯ ಪದಗಳನ್ನೇ ಒಂದಿಷ್ಟು ಮರುಜೋಡಣೆ ಮಾಡಿ ಹೇಳುವುದಾದರೆ, `ಕನ್ನಡ ಅಧ್ಯಾಪಕರಿಗೆ ಬೇಕಾದ ಇಂಗ್ಲಿಷ್’ನ ಸ್ವರೂಪದ ಬಗ್ಗೆ ಈಗ ಮತ್ತೊಮ್ಮೆ ಜಿಜ್ಞಾಸಿಸುವ ಸನ್ನಿವೇಶ ಇದೆ ಅನ್ನಿಸುತ್ತದೆ. ಜಾಗತೀಕರಣವಾಗಿಯೇ ಮೂವತ್ತು ವರ್ಷಗಳಾಗಿರುವ ಹಾಗೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದಿಂದಾಗಿ ಗಮನೀಯ ಮಟ್ಟದ ಬದಲಾವಣೆಗಳಾಗಿರುವ ಈ ದಿನಮಾನದಲ್ಲಿ ಇದು ತುಂಬ ಜರೂರಾಗಿ ಆಗಬೇಕಾದ ಕೆಲಸ.
****
ಈ ವಿಷಯ ಆಗಾಗ ನನ್ನನ್ನು ಕಾಡುತ್ತಿದ್ದದ್ದು ನಿಜವಾದರೂ ಈಚೆಗೆ ಆದ ಒಂದು ಅನುಭವ ಇದನ್ನು ತುಂಬ ಗಂಭೀರವಾಗಿ ಯೋಚಿಸುವಂತೆ ಮಾಡಿತು.
ಈಗ್ಗೆ ಸುಮಾರು ಹದಿನೈದು ದಿನಗಳ ಹಿಂದೆ ಒಂದು ಯಂತ್ರಜ್ಞಾನ ಮಹಾವಿದ್ಯಾಲಯ(ಇಂಜಿನಿಯರಿಂಗ್ ಕಾಲೇಜು)ದವರು ನಡೆಸಿದ, ಕನ್ನಡ ವಿಷಯದ ಅತಿಥಿ ಉಪನ್ಯಾಸಕರ ನೇಮಕಾತಿಯ ಸಂದರ್ಭದ ಸಂದರ್ಶನಕ್ಕೆ, ವಿಷಯತಜ್ಞೆಯಾಗಿ ನಾನು ಹೋಗಿದ್ದೆ. ಅಲ್ಲಿನ ಕನ್ನಡ ಅಧ್ಯಾಪಕರು ಕನ್ನಡ ಸ್ವಲ್ಪವೂ ಬರದ, ಅಂದರೆ ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಬೇಕಾಗುತ್ತದೆ. ಭಾರತದ ಉದ್ದಗಲದಿಂದ ವಿದ್ಯಾರ್ಥಿಗಳು ಬಂದು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡುವಾಗ ಅವರಿಗೆ ಕನಿಷ್ಠ ಮಟ್ಟದ ಕನ್ನಡಜ್ಞಾನವಾದರೂ ಇರಬೇಕೆಂಬ ಉದ್ದೇಶವು ವಿದ್ಯಾಸಂಸ್ಥೆಗಳ ವ್ಯಾಸಂಗಕ್ರಮದಲ್ಲಿದೆ. ಇದು ಒಳ್ಳೆಯ ವಿಷಯ.
ಆದರೆ ಇಲ್ಲಿ ಅಷ್ಟೇನೂ ಒಳ್ಳೆಯದಲ್ಲದ ಒಂದು ವಿಷಯಕ್ಕೆ ನಾನು ಮುಖಾಮುಖಿಯಾದೆ. ಸಂದರ್ಶನಕ್ಕೆ ಬಂದಿದ್ದ ಅಭ್ಯರ್ಥಿಗಳು ಕನಿಷ್ಠ ಮಟ್ಟದ ಇಂಗ್ಲಿಷ್ ಸಂಭಾಷಣೆಯನ್ನು ಅರಿತಿರಬೇಕು ಎಂಬುದು ಅಲ್ಲಿನ ಒಂದು ಅಗತ್ಯವಾಗಿತ್ತು. ಏಕೆಂದರೆ ಕನ್ನಡ ತುಸುವೂ ಬಾರದ ವಿದ್ಯಾರ್ಥಿಗಳ ಜೊತೆ ಅವರು ಸಂಭಾಷಿಸುತ್ತಾ ಕನ್ನಡ ಕಲಿಸಬೇಕಲ್ಲವೆ? ಹೀಗಾಗಿ ನಾನು ಅವರ ಇಂಗ್ಲಿಷ್ ಜ್ಞಾನವನ್ನು ಪರೀಕ್ಷಿಸಬಯಸಿ ಕೆಲವು ಸರಳ ಇಂಗ್ಲಿಷ್ ವಾಕ್ಯಗಳನ್ನು ಹೇಳಿ ಅದನ್ನು ಕನ್ನಡಕ್ಕೆ ಭಾಷಾಂತರಿಸುವಂತೆ ಸೂಚಿಸಿದೆ. ಉದಾಹರಣೆಗೆ, `ಐ ಸಾ ಮೆನಿ ಕ್ಲೋತ್ಸ್ ಇನ್ ದ ಮಾರ್ಕೆಟ್, ಬಟ್ ದೆ ವರ್ ನಾಟ್ ಆಫ್ ಗುಡ್ ಕ್ವಾಲಿಟಿ(ನಾನು ಮಾರುಕಟ್ಟೆಯಲ್ಲಿ ಅನೇಕ ಉಡುಪುಗಳನ್ನು ನೋಡಿದೆ, ಆದರೆ ಅವು ಒಳ್ಳೆಯ ಗುಣಮಟ್ಟದವಾಗಿರಲಿಲ್ಲ) ಎಂಬ ವಾಕ್ಯ. ಆದರೆ ನಡೆದಿದ್ದೇನು ಗೊತ್ತೆ!? ಈ ವಾಕ್ಯವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ಆ ಅಭ್ಯರ್ಥಿಗಳಲ್ಲಿ ಒಬ್ಬರಿಗೂ ಸಾಧ್ಯವಾಗಲಿಲ್ಲ. ಅವರಲ್ಲಿ ಕೆಲವರಿಗೆ ಎಂಟು-ಹತ್ತು ವರ್ಷಗಳ ಬೋಧನಾನುಭವ ಇತ್ತು, ಕೆಲವರು ಕನ್ನಡದಲ್ಲಿ ಪಿ.ಎಚ್‌ಡಿ. ಪದವಿಯನ್ನೂ ಕೂಡ ಗಳಿಸಿದ್ದರು. ಆದರೆ ಸರಳ ಇಂಗ್ಲಿಷ್ ವಾಕ್ಯಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಅವರಿಗೆ ಸಾಧ್ಯ ಆಗಲಿಲ್ಲ. ನನಗೆ ಬಹಳ ನಿರಾಸೆ ಮತ್ತು ಬೇಸರ ಉಂಟು ಮಾಡಿದ ವಿಷಯವಾಯಿತು ಇದು.
****
ಇದು ಯಾರೋ ಕೆಲವು ಕನ್ನಡ ಅಧ್ಯಾಪಕರಿಗೆ ಇಂಗ್ಲಿಷ್ ಬರಲಿಲ್ಲ ಅನ್ನುವ ಪ್ರಶ್ನೆ ಮಾತ್ರ ಅಲ್ಲ. ಈ ಸಮಸ್ಯೆಯು ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ. ಕನ್ನಡ ಅಧ್ಯಾಪಕರು ಮತ್ತು ಇಂಗ್ಲಿಷ್‌ನ ಸಂಬಂಧವು ಹೀಗೆ ಶ್ರುತಿ ತಪ್ಪಲು ಅನೇಕ ಕಾರಣಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಲು ಕಾಲದ ದೃಷ್ಟಿಯಿಂದ ನಾವು ಸುಮಾರು ನೂರು ವರ್ಷ ಹಿಂದಕ್ಕೆ ಚಲಿಸಬೇಕು.
20ನೇ ಶತಮಾನದ ಪ್ರಾರಂಭ ಅದು. ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲ. ಕನ್ನಡ ಪಂಡಿತರ ಪರಂಪರೆ – ಛಂದಸ್ಸು, ವ್ಯಾಕರಣ ಮುಂತಾದ ಶಾಸ್ತ್ರ ವಿಷಯಗಳಲ್ಲಿ ಪರಿಣತರಾಗಿದ್ದು ಹಳಗನ್ನಡ ಪದ್ಯಗಳನ್ನು ಲೀಲಾಜಾಲವಾಗಿ ಬಿಡಿಸುತ್ತಾ ರಾಗವಾಗಿ, ಭಾವತುಂದಿಲವಾಗಿ ಕನ್ನಡ ಪಾಠ ಮಾಡುತ್ತಿದ್ದ ಪಂಡಿತ ಪರಂಪರೆಯೊಂದು ಆಗ ನಿರ್ಮಾಣವಾಯಿತು. ಕನ್ನಡ ಪಂಡಿತರಿಗೆ ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಪರಿಣತಿ ಇರಬೇಕು ಎಂಬ ನಂಬಿಕೆ ಇತ್ತು ಆಗ. ಅದೂ ಅಲ್ಲದೆ ಆಗ ತಾನೇ ಸ್ವಾತಂತ್ರ್ಯ ಬಂದ ಮೇಲೂ ಕೆಲವು ವರ್ಷ ಇಂಗ್ಲಿಷ್‌ನ ಪ್ರಭಾವ ಹೆಚ್ಚಾಗಿಯೇ ಇತ್ತು. ಒಳ್ಳೆಯ ಇಂಗ್ಲಿಷ್ ಕಲಿಯಬೇಕು ಎಂಬುದು ಆ ಕಾಲದಲ್ಲೂ ಎಲ್ಲರೂ ಒಪ್ಪಿದ ವಿಷಯವಾಗಿತ್ತು. ಎ.ಆರ್.ಕೃಷ್ಣಶಾಸ್ತ್ರಿ, ಜಿ.ವೆಂಕಟಸುಬ್ಬಯ್ಯ, ಟಿ.ವಿ.ವೆಂಕಟಾಚಲ ಶಾಸ್ತ್ರಿ, ಜಿ.ಪಿ.ರಾಜರತ್ನಂ ಮುಂತಾದವರನ್ನು ನೆನಪಿಸಿಕೊಳ್ಳಬೇಕು ನಾವು.
ಕನ್ನಡದಲ್ಲಿ ಅದ್ಭುತವಾಗಿ ಬರೆದ ಇಂಗ್ಲಿಷ್ ಅಧ್ಯಾಪಕರ ಶ್ರೀಮಂತ ಪರಂಪರೆ ಇದೆ. ಬಿ.ಎಂ.ಶ್ರೀಕಂಠಯ್ಯ, ಯು.ಆರ್.ಅನಂತಮೂರ್ತಿ, ಎಂ.ಗೋಪಾಲಕೃಷ್ಣ ಅಡಿಗ, ಜಿ.ಕೆ.ಗೋವಿಂದ ರಾವ್, ಶಾಂತಿನಾಥ ದೇಸಾಯಿ, ವೀಣಾ ಶಾಂತೇಶ್ವರ …. ಹೀಗೆ ಅನೇಕರು. ಇವರು ಎಷ್ಟೊಂದು ವಿಪುಲ ಸಂಖ್ಯೆಯಲ್ಲಿದ್ದರೆಂದರೆ `ಕನ್ನಡ ಲೇಖಕರಿಗೆ/ಕನ್ನಡಕ್ಕೆ ಕೊಡುಗೆ ಕೊಡುವವರಿಗೆ ಇಂಗ್ಲಿಷ್ ಜ್ಞಾನ ಸಹಜವೇನೊ’ ಎಂದು ಜನ ಭಾವಿಸುವಷ್ಟರ ಮಟ್ಟಿಗೆ!
ನಲವತ್ತು-ನಲವತ್ತೈದು ವರ್ಷಗಳ ಹಿಂದೆ ಕೂಡ ಕನ್ನಡ ಅಧ್ಯಾಪಕರು/ಲೇಖಕರು ಅಂದರೆ ಅವರಿಗೆ ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಬರಬೇಕು. ಎಷ್ಟು ಹೆಚ್ಚು ಭಾಷೆ ಬಂದರೆ ಅಷ್ಟು ಒಳ್ಳೆಯದು ಎಂಬ ಗಾಢ ಅಭಿಪ್ರಾಯವು ಬುದ್ಧಿಜೀವಿಗಳಲ್ಲಿ ಚಾಲ್ತಿಯಲ್ಲಿಯೇ ಇತ್ತು. ಅಧ್ಯಾಪಕರ ಸಾಮಾನ್ಯ ಮಾತುಕತೆಯಲ್ಲಿ `ಈಗ ಏನು ಓದ್ತಿದೀರಿ? ಯಾವ ಹೊಸ ಪುಸ್ತಕ ತಗೊಂಡ್ರಿ? ಈ ಪುಸ್ತಕ ನೋಡಿದ್ರಾ?’ ಎಂಬ ಪ್ರಶ್ನೆಗಳು ಇದ್ದೇ ಇರುತ್ತಿದ್ದವು. ಜೊತೆಗೆ ತರಗತಿಗಳಿಗೆ ಹೋಗುವಾಗ ಕನ್ನಡ ಅಧ್ಯಾಪಕರು ಎಷ್ಟು ಹೆಚ್ಚು ಪೂರ್ವಸಿದ್ಧತೆ ಮಾಡುತ್ತಾರೋ ಅವರು ಅಷ್ಟು ಹೆಚ್ಚು ಉತ್ತಮವಾದ ಅಧ್ಯಾಪಕರು ಎಂಬ ಗಾಢವಾದ ಭಾವನೆ ಇತ್ತು. ಡಿ.ಎಲ್.ನರಸಿಂಹಾಚಾರ್, ತಿ.ನಂ.ಶ್ರೀಕಂಠಯ್ಯ, ಜಿ.ಪಿ.ರಾಜರತ್ನಂ, ಸ್ವಲ್ಪ ನಂತರದ ತಲೆಮಾರು ಅಂದರೆ ಎಂ.ಎಚ್.ಕೃಷ್ಣಯ್ಯ, ಎಚ್.ಎಸ್.ರಾಘವೇಂದ್ರ ರಾವ್. ಪಿ.ವಿ.ನಾರಾಯಣ, ಕೆ.ವಿ.ನಾರಾಯಣ ಮುಂತಾದ ಹಿರಿಯ ಅಧ್ಯಾಪಕರು ತಮ್ಮ ವಿಪುಲವಾದ, ವಿದ್ವತ್ಪೂರ್ಣವಾದ ಪೂರ್ವಸಿದ್ಧತೆಗೆ ಹೆಸರಾಗಿದ್ದವರು. `ಒಂದು ಗಂಟೆ ಪಾಠಕ್ಕೆ ಕನಿಷ್ಠ ಮೂರು ಗಂಟೆಯಾದರೂ ಪೂರ್ವಸಿದ್ಧತೆ ಬೇಕು, ಅಂತಹ ಪೂರ್ವಸಿದ್ಧತೆ ಇಲ್ಲದಿದ್ದರೆ ಅಂದು ಮಹಾವಿದ್ಯಾಲಯಕ್ಕೆ(ಕಾಲೇಜಿಗೆ) ರಜೆ ಹಾಕಬೇಕು’ ಎಂಬ ನಂಬಿಕೆ ಇಟ್ಟುಕೊಂಡು ಪಾಠ ಮಾಡುತ್ತಿದ್ದ ಅಧ್ಯಾಪಕ ಸಮುದಾಯ ಇದು! `ಪಂಪಭಾರತ’ದ ನಾಲ್ಕು ಪದ್ಯಗಳನ್ನು ಯಾವುದಾದರೂ ಪದವಿಯ ಪಠ್ಯಭಾಗದಲ್ಲಿ ಇಟ್ಟಿದ್ದರೆ ಆ ಪದ್ಯಗಳಿರುವ ಇಡಿಯಾದ ಮೂಲಕಾವ್ಯವನ್ನು ತರಗತಿಗೆ ತೆಗೆದುಕೊಂಡು ಹೋಗಿ, ಪಾಠಕ್ಕೆ ಇಟ್ಟಿರುವ ಭಾಗವು ಮೂಲದಲ್ಲಿ ಎಲ್ಲಿ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟು ಅದರ ಹಿನ್ನೆಲೆಯನ್ನು ಪರಿಚಯಿಸಿ ನಂತರ ಪಾಠ ಮಾಡುವ ಅಧ್ಯಯನ, ತಾಳ್ಮೆ ಇದ್ದಂತಹ ಅಧ್ಯಾಪಕರಿವರು. ಇದರ ಜೊತೆಗೆ ಅದು ವಾರ್ಷಿಕ ಪರೀಕ್ಷೆಗಳ ಕಾಲ(ವರ್ಷಕ್ಕೆ ಒಂದೇ ದೊಡ್ಡ ಪರೀಕ್ಷೆ). ಈಗಿನಂತೆ ವರ್ಷಕ್ಕೆ ಎರಡು ಪರೀಕ್ಷೆಗಳಿರುವ ಅರ್ಧವಾರ್ಷಿಕ ಕಾಲವಾಗಿರಲಿಲ್ಲ. ಸಮಯವೂ ಆಗ ಅಧ್ಯಾಪಕರಿಗೆ ಸಹಕರಿಸುತ್ತಿತ್ತು.
ಪದವಿ ಕಾಲೇಜುಗಳಲ್ಲಿ ಅರ್ಧವಾರ್ಷಿಕ ಪದ್ಧತಿ ಬಂದದ್ದು ಸಹ ಓದಿಗೆ ವ್ಯವಧಾನ ಇಲ್ಲದ ಸನ್ನಿವೇಶ ಉಂಟಾಗಲು ಒಂದು ಕಾರಣ. ಗಡಿಬಿಡಿಯ ಕನ್ನಡ ಪಾಠಗಳು, ಮೂಲಸಾಹಿತ್ಯ ಓದದೆಯೇ ಒಂದಿಷ್ಟು ಸಿದ್ಧ ವಿಮರ್ಶೆ ಓದುವುದು-ಓದಿಸುವುದು, ಹಿಂದಿನ ವರ್ಷದ ವಿದ್ಯಾರ್ಥಿಗಳು ಕೊಟ್ಟ ಟಿಪ್ಪಣಿ ಸಂಗ್ರಹವಷ್ಟನ್ನು ಓದಿ ಪರೀಕ್ಷೆಯಲ್ಲಿ ಏನೋ ಒಂದು ಬರೆಯುವುದು ಇಂತಹ ರೀತಿಗಳು ಪ್ರಾರಂಭ ಆದವು. ಬರಬರುತ್ತಾ ಓದು, ವ್ಯುತ್ಪತ್ತಿ, ಭಾಷಾ ಪ್ರೌಢಿಮೆಗಳ ಬಗೆಗಿನ ಆಸ್ಥೆ ಕಡಿಮೆಯಾಗಿ `ಹಾಗೂ ಹೀಗೂ ಒಂದಿಷ್ಟು ಪಾಠ ಮಾಡೋದು, ಸಂತೆ ಹೊತ್ತಿಗೆ ಮೂರು ಮೊಳ ಆದ್ರೆ ಸಾಕು’ ಎಂಬ ಮನಃಸ್ಥಿತಿ ಮೂಡಿತು. ಇದೊಂದು ರೀತಿಯ ಸುಲಭೀಕರಣ. ಇದಕ್ಕೆ ಕನ್ನಡ ಅಧ್ಯಾಪಕರು ಮಾತ್ರ ಕಾರಣ ಅಲ್ಲ. ಜಾಗತೀಕರಣದ ನಂತರ, ಭಾರತ ದೇಶದ ಬದುಕು ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳವಾಗಿ ಬದಲಾಯಿತು. ಉಪಗ್ರಹ ಪ್ರಸಾರದ ಅಂತಾರಾಷ್ಟ್ರೀಯ ಚಲನಚಿತ್ರ ವಾಹಿನಿಗಳು, ಅಂತರ್ಜಾಲ, ಮುಂದೆ ಸರ್ವವ್ಯಾಪಿಯಾದ ಚಲನವಾಣಿಗಳ ಬಳಕೆ ಇವುಗಳಿಂದಾಗಿ ಓದುಸಂಸ್ಕೃತಿ ಹಿಂದೆ ಸರಿದು ನೋಡುಸಂಸ್ಕೃತಿ ಮುನ್ನೆಲೆಗೆ ಬಂದಿತಲ್ಲವೆ? ಅಧ್ಯಾಪಕರು ಸಹ ಈ ದೊಡ್ಡಚಿತ್ರದ ಅಂದರೆ ಸಮಾಜದ ಭಾಗವಾದ್ದರಿಂದ ಅವರಲ್ಲೂ ಓದುವಿಕೆ ಕಡಿಮೆ ಆಯಿತು. ಇದಕ್ಕೆ ಅಪವಾದಗಳಿವೆಯಾದರೂ ಇದು ಸರ್ವೇಸಾಮಾನ್ಯ ಸನ್ನಿವೇಶ ಎಂಬುದು ನಿಜ. ಭಾಷೆ ನಮ್ಮ ಕರಗತವಾಗುವುದು ನಿರಂತರ ಓದು, ಬರಹ ಮತ್ತು ಅಭ್ಯಾಸದಿಂದ. ವ್ಯವಧಾನ ಹಾಗೂ ತಾಳ್ಮೆಯುಳ್ಳ ಓದು, ಬರಹ, ಅಭ್ಯಾಸಗಳಿಗೆ ಕ್ಷಣಕ್ಕೊಮ್ಮೆ ಬೆರಳು ಜಾರಿಸಿ ಪರದೆ ಬದಲಿಸುವ ಜೀವನಶೈಲಿಯು ಎಲ್ಲಿ ಅವಕಾಶ ಕೊಡುತ್ತದೆ? `ತುಂಬ ಪುಸ್ತಕ ಓದಿಕೊಂಡಿದ್ದಾರೆ’ ಎಂಬುದು ನೋಡು ಸಂಸ್ಕೃತಿಯಲ್ಲಿ ಹೆಮ್ಮೆಯ ವಿಷಯವಾಗೇನೂ ಕಾಣಿಸುತ್ತಿರಲಿಲ್ಲ. ಕನ್ನಡವನ್ನು ಜಾಳುಜಾಳಾಗಿ, ನೀರುನೀರಾಗಿ ಬಳಸುತ್ತಾ ಅದು ಕಂಗ್ಲಿಷೊ, ಕನ್ನಡವೊ, ಇಂಗ್ಲಿಷೊ ಎಂದು ಅರಿಯಲಾರದಂತೆ ಬಳಸುವವರು ಹೆಚ್ಚಾದಾಗ ಸಹಜವಾಗಿ ಉನ್ನತ ಶಿಕ್ಷಣದಲ್ಲಿ ಕನ್ನಡ ಪಾಠಗಳ ಗುಣಮಟ್ಟ ಕಡಿಮೆಯಾಗುತ್ತಾ ಬಂತು, ಇನ್ನು ಕನ್ನಡ ಅಧ್ಯಾಪಕರ ಹೆಚ್ಚಿನ ಓದು ಮತ್ತು ಇಂಗ್ಲಿಷ್ ಭಾಷೆಗಳ ಮೇಲಿನ ಪ್ರಭುತ್ವ ಅನ್ನುವುದು ಹಿನ್ನೆಲೆಗೆ ಸರಿಯುವ ಸನ್ನಿವೇಶ ನಿರ್ಮಾಣ ಆಯಿತು.
ಭಾಷೆ ಹಾಗೂ ಭಾಷೆಯಲ್ಲೇ ಅರಳಿ ಕಲೆಯಾಗುವ ಸಾಹಿತ್ಯಗಳು ಹಿಂದಿನ ಶತಮಾನದಲ್ಲಿದ್ದಂತೆ ಇಂದಿನ ಮಾಹಿತಿ ತಂತ್ರಜ್ಞಾನಾಧಾರಿತ, ಜಾಗತೀಕರಿತ, ಬಂಡವಾಳಶಾಹಿ ಸಮಾಜದಲ್ಲಿ ಕೇಂದ್ರಸ್ಥಾನ ಇಲ್ಲ ಎಂಬುದು ಸಹ ಕನ್ನಡ ಅಧ್ಯಾಪಕರ ಸದರಿ ದುರವಸ್ಥೆಗೆ ಒಂದು ಮುಖ್ಯ ಕಾರಣ. `ಭಾಷೆಯು ಕೇವಲ ಒಂದು ಉಪಕರಣ’ ಎಂದುಕೊಳ್ಳುವ ಮನಸ್ಥಿತಿಯಿಂದಾಗಿ ಶಾಲೆ, ಕಾಲೇಜುಗಳಲ್ಲಿ ಅದನ್ನು ನಿರ್ಲಕ್ಷಿಸುವ ಸನ್ನಿವೇಶವು ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಕನ್ನಡ ಅಧ್ಯಾಪಕರ ನೇಮಕಾತಿಯಲ್ಲೂ ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳದ ಮನಃಸ್ಥಿತಿಯನ್ನು ತರುತ್ತದೆ. ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಕಲಿಸುವ ಅವಧಿಯನ್ನು(ಗಂಟೆಗಳು – ಪೀರಿಯೆಡ್ಸ್) ಕಡಿಮೆ ಮಾಡುತ್ತಿರುವುದು ಇದಕ್ಕೆ ಕಂಡುಬರುವ ಪ್ರಬಲ ಸಾಕ್ಷಿ.
ಈ ವಿಷಯದ ಬಗ್ಗೆ, ಇಂಗ್ಲಿಷನ್ನು ಚೆನ್ನಾಗಿ ಬಲ್ಲ ಕೆಲವು ಅನುಭವಿ ಸಮಕಾಲೀನ ಕನ್ನಡ ಅಧ್ಯಾಪಕರೊಂದಿಗೆ ನಾನು ಚರ್ಚಿಸಲಾಗಿ ಇಲ್ಲಿನ ಮುಖ್ಯ ಸಮಸ್ಯೆ ನಾವು ಭಾಷೆಯನ್ನು ಕಲಿಸುತ್ತಿರುವ ರೀತಿಯಲ್ಲಿದೆ ಎಂಬ ಅನಿಸಿಕೆ ವ್ಯಕ್ತವಾಯಿತು. ಬಿಸಿಯೂಟ, ಕಾನೀಷುಮಾರಿ(ಸೆನ್ಸಸ್), ಚುನಾವಣೆ ಕೆಲಸ ಮುಂತಾದ `ಶೈಕ್ಷಣಿಕೇತರ’ ಕೆಲಸಗಳನ್ನು ಸದಾ ಮಾಡುವ ಪ್ರಾಥಮಿಕ/ಪ್ರೌಢ ಶಾಲಾ ಅಧ್ಯಾಪಕರಿಗೆ ಕನ್ನಡವನ್ನಾಗಲಿ, ಇಂಗ್ಲೀಷನ್ನಾಗಲಿ ಮನಸ್ಸಿಟ್ಟು ಕಲಿಸುವ ಶಕ್ತಿ, ವ್ಯವಧಾನಗಳು ಇರಬಹುದೆ? ಇನ್ನು ಕಾಲೇಜುಗಳಲ್ಲಿ ತೊಂಬತ್ತು – ನೂರು – ನೂರ ಹತ್ತು ವಿದ್ಯಾರ್ಥಿಗಳಿಗೆ `ಉಪನ್ಯಾಸ’ ನೀಡುವ ಅಧ್ಯಾಪಕರು ವಿದ್ಯಾರ್ಥಿಗಳತ್ತ ಗಮನ ಕೊಡುವುದು ಹೇಗೆ?
****
ಇರಲಿ. ಈಗ ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂದು ನೋಡೋಣ. ಮೊಟ್ಟಮೊದಲು ಕನ್ನಡ ಅಧ್ಯಾಪಕರಿಗೆ ಇಂಗ್ಲಿಷ್ ಭಾಷೆಯು ಎರಡು ಕಾರಣಗಳಿಗಾಗಿ ಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
1. ಇಂಗ್ಲಿಷ್ ಎಂಬುದು ನಾವೆಲ್ಲಾ ಬಲ್ಲಂತೆ ಪ್ರಪಂಚವನ್ನು ಮತ್ತು ಗಣಕಯಂತ್ರವನ್ನು ಆಳುತ್ತಿರುವ ಭಾಷೆ. ಪ್ರಪಂಚದ ಬಹುತೇಕ ಹೊಚ್ಚಹೊಸ ಜ್ಞಾನವು ಅದರಲ್ಲೇ ನಿರ್ಮಾಣ ಆಗುತ್ತಿರುವುದು. ನಮ್ಮ ದೇಶ ಇನ್ನೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಬ್ರಿಟನ್‌ನ ವಸಾಹತುವಾಗಿದ್ದ ದೇಶವಾಗಿದ್ದರಿಂದ ನಮ್ಮ ಜೀವನದ ಹಾಸುಹೊಕ್ಕುಗಳಲ್ಲಿ ಇಂಗ್ಲಿಷ್ ಸೇರಿಬಿಟ್ಟಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ `ಇಂಡಿಯನ್ ಇಂಗ್ಲಿಷ್’ ಎಂಬ ಪ್ರತ್ಯೇಕ ವಿಭಾಗವೇ ಇದೆ ಅಂದ ಮೇಲೆ ಇಂಗ್ಲಿಷ್ ಎಂಬುದು ಎಷ್ಟರ ಮಟ್ಟಿಗೆ ನಮ್ಮನ್ನು ವ್ಯಾಪಿಸಿದೆ ಎಂದು ನಾವು ಅರ್ಥ ಮಾಡಿಕೊಳ್ಳಬಹುದು. ಇಂಗ್ಲಿಷ್ ಬೇಡ ಅಂದರೆ ನಮ್ಮ ಮನೆಯು ಅತಿ ಮುಖ್ಯ ಕಿಟಕಿಯೊಂದನ್ನು ಮುಚ್ಚಿ ಕುಳಿತಂತೆಯೇ ಸರಿ. ನಿಜ ಪ್ರಪಂಚದಲ್ಲಿ ಮತ್ತು ಮಾಹಿತಿ ತಂತ್ರಜ್ಞಾನದ ನಿಜಭಾಸ(ರ‍್ಚುವಲ್) ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿಯಲು ಕನ್ನಡ ಅಧ್ಯಾಪಕರಿಗೆ ಇಂಗ್ಲಿಷ್ ಬೇಕೇ ಬೇಕು. ತಮ್ಮ ತಮ್ಮ ಸಂಶೋಧನೆಯ ಕ್ಷೇತ್ರದಲ್ಲಿ (ಉದಾಹರಣೆಗೆ ಸಮಾಜ-ಸಾಹಿತ್ಯಗಳ ಮೇಲೆ ಜಾಗತೀಕರಣದ ಪ್ರಭಾವ, ಸ್ತ್ರೀವಾದ, ಮೂರನೇ ಲಿಂಗಿಗಳ ಬದಲಾಗುತ್ತಿರುವ ಬದುಕು, ಮಕ್ಕಳ ಬೆಳವಣಿಗೆ, ಹೊಸ ಪೀಳಿಗೆಯ ಮನರಂಜನೆ ಶಿಕ್ಷಣ ಹೀಗೆ …..) ಆಗುತ್ತಿರುವ ಹೊಸ ಹೊಸ ಬದಲಾವಣೆಗಳನ್ನು ಅರಿಯಲು ಇಂಗ್ಲಿಷ್ ಬೇಕು. ಈ ದೃಷ್ಟಿಯಿಂದ ಮೊಗಳ್ಳಿ ಗಣೇಶ್ ಅವರ `ದಲಿತರು ಮತ್ತು ಇಂಗ್ಲಿಷ್’ ಪ್ರಬಂಧವನ್ನು ಗಮನಿಸಬಹುದು. ಇದರಲ್ಲಿ ಜಾಗತೀಕರಣೋತ್ತರ ಭಾರತದಲ್ಲಿ ದಲಿತರಿಂದ ಇಂಗ್ಲಿಷ್ ಭಾಷೆಯನ್ನು ದೂರವಿಟ್ಟರೆ ಅವರ ಅಭಿವೃದ್ಧಿ ಎಷ್ಟು ಕುಂಠಿತವಾಗುತ್ತದೆ ಎಂದು ವಿವರಿಸಲಾಗಿದೆ. ಇದೇ ಮಾತು ಕನ್ನಡ ಅಧ್ಯಾಪಕರಿಗೂ ಅನ್ವಯಿಸುತ್ತದೆ.
2. ಕನ್ನಡ ಬಾರದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಇಂಗ್ಲಿಷ್ ಭಾಷೆ ಒಂದು ಸೇತುವೆ ಆಗಬೇಕಾಗುತ್ತದೆ. ಇಂಗ್ಲಿಷ್‌ನ ಪ್ರಾಥಮಿಕ ಜ್ಞಾನವೂ ಇಲ್ಲದ ಅಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ಸಂಭಾಷಣೆ ಮಾಡಲು ಇಂಗ್ಲಿಷ್ ಬೇಕಲ್ಲವೆ?
ಹಾಗಾದರೆ, ಈ ಕನ್ನಡ ಅಧ್ಯಾಪಕರ ಕನ್ನಡ ಮತ್ತು ಇಂಗ್ಲಿಷ್‌ನ ಗುಣಮಟ್ಟವನ್ನು ಹೆಚ್ಚಿಸಲು ಈಗ ನಾವು ಮಾಡಬಹುದಾದದ್ದೇನು?
1. ಬಾಲವಾಡಿ ಮತ್ತು ಪ್ರಾಥಮಿಕ ಶಾಲಾ ಹಂತದಿಂದಲೇ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸುವಲ್ಲಿ ಇರುವ ಅಡ್ಡಿಗಳನ್ನು ನಿವಾರಿಸುವುದು.
2. ಪದವಿಪೂರ್ವ ಮತ್ತು ಪದವಿ ತರಗತಿಗಳಲ್ಲಿ ಕನ್ನಡ/ಇಂಗ್ಲಿಷ್ ಭಾಷೆಗಳಿಗೆ ಪ್ರಾಯೋಗಿಕ ತರಗತಿಗಳನ್ನು ಸಹ ಇಟ್ಟು ಒಂದು ಪ್ರಾಯೋಗಿಕ ತರಗತಿಯಲ್ಲಿ ಇಪ್ಪತ್ತು-ಇಪ್ಪತಾಲ್ಕು ವಿದ್ಯಾರ್ಥಿಗಳಿಗಿಂತ ಹೆಚ್ಚು ವಿದ್ಯಾರ್ಥಿಗಳಿಲ್ಲದಂತೆ ನೋಡಿಕೊಳ್ಳುವುದು. ಆಗ ಪ್ರತಿ ವಿದ್ಯಾರ್ಥಿಗೂ ಅಧ್ಯಾಪಕರು ವೈಯಕ್ತಿಕವಾಗಿ ಗಮನ ಕೊಡಲು ಸಾಧ್ಯವಾಗುತ್ತದೆ.
3. ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗುವವರಿಗೆ ಕನಿಷ್ಠ ಇಂಗ್ಲಿಷ್ ಜ್ಞಾನ ಇರುವ ಅಗತ್ಯವನ್ನು ಮನದಟ್ಟು ಮಾಡಿಸಿ ಇಂಗ್ಲಿಷ್ ಮಾತಾಡುವ ಒಂದು ಶಿಕ್ಷಣದ ಪ್ರಮಾಣಪತ್ರವು ಕಡ್ಡಾಯವಿರುವಂತೆ ನಿಯಮವನ್ನು ಜಾರಿ ಮಾಡುವುದು.
ಬಹುಶಃ ಈ ಕ್ರಮಗಳನ್ನು ಕೈಗೊಂಡರೆ ಕನ್ನಡ ಅಧ್ಯಾಪಕರ ಇಂಗ್ಲಿಷ್ ಗುಣಮಟ್ಟ ಸುಧಾರಿಸಬಹುದೆಂದು ಕಾಣುತ್ತದೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
ಡಾ. ಮೀರಾ ಅವರ ಬರಹ ಉತ್ತಮವಾಗಿದೆ. ಸಮಸ್ಯೆ ನಿಜವಾಗಿ ಗಂಭೀರವಾದುದು.. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ , ಎಲ್ಲಾ ಹಂತಗಲ್ಲೂ ಭಾಷೆಯನ್ನು ಅವಗಣಿಸಿದ್ದರಿಂದ ಆದ ಪರಿಣಾಮ ಘೋರ.