ಜಾತಿಯು ಮೊದಲು ಪರಿಕಲ್ಪನೆಯಾಗಿ, ನಂತರ ಪದ್ಧತಿಯಾಗಿ ಹುಟ್ಟಲು, ಬೆಳೆಯಲು, ಊರಲು, ಮನುಷ್ಯನನ್ನು ನಂಬಿಸಲು “ಇತರೆ”ಯವರ ಕಲ್ಪನೆ ಸಕ್ರಿಯವಾಗಿ ಕೆಲಸ ಮಾಡಿದೆ. ಇತರೆಯವರಿಗೆ ಯಾವತ್ತೂ ನಮ್ಮಷ್ಟು ಸೂಕ್ಷ್ಮತೆ, ಅಭಿರುಚಿ, ಸಾಮರ್ಥ್ಯ ಇದೆಯೆಂದು ಯಾವ ಜಾತಿಯವರೂ ಒಪ್ಪುವುದಿಲ್ಲ. ಮೇಲು ಮತ್ತು ಕೀಳು ಜಾತಿಗಳಲ್ಲಿರುವ ತುದಿ ನಿಲುವಿನ ಮಂದಿ ಮಾತ್ರವಲ್ಲ, ಈ ಎರಡು ತುದಿ-ತುದಿಗಳ ನಡುವೆ ಇರುವ ಸಾವಿರಾರು ಜಾತಿಗಳಲ್ಲಿ ಪ್ರತಿಯೊಂದು ಜಾತಿಯವರಿಗೂ “ಇತರೆ”ಯವರ ಅಗತ್ಯವಿದೆ – ದ್ವೇಷಿಸಲು, ವಿನಾಶ ಬಯಸಲು, ಭ್ರಮಾಲೋಕದಲ್ಲಿ ಬದುಕಲು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹದಿಮೂರನೆಯ ಪ್ರಬಂಧ ನಿಮ್ಮ ಓದಿಗೆ
ನೀವು ಈ ಪ್ರಬಂಧ ಓದುವ ಹಳೆ ಮೈಸೂರು ಸೀಮೆಯ ಬ್ರಾಹ್ಮಣ ಓದುಗರಾಗಿದ್ದರೆ, ಇತರೆಯವರು, ಇದ್ದರೆ ಜನ, ಇತರೆ ಜನ ಎಂಬ ಪದದ ಉಪಯೋಗ, ಸಂದರ್ಭ, ಸಾಂಸ್ಕೃತಿಕ ಮಹತ್ವ ಎಲ್ಲವೂ ತಕ್ಷಣ ಹೊಳೆದುಬಿಡುತ್ತದೆ. ಬಾಲ್ಯದಲ್ಲಿ ನನಗೆ ಈ ಪದದ ಬಳಕೆ, ಅದು ನಿಂದನಾತ್ಮಕವಾಗಿ, ನಿಷೇಧಾತ್ಮಕವಾಗಿ, ನಿರ್ದೇಶಿಸುವ, ಗುರುತಿಸುವ ಜನವರ್ಗ ಇದೆಲ್ಲ ಸಹಜವಾಗಿ, ಅಪ್ರಜ್ಞಾಪೂರ್ವಕವಾಗಿ ಗೊತ್ತಾಗುತ್ತಿತ್ತು. ಬ್ರಾಹ್ಮಣರನ್ನು ಬಿಟ್ಟು ಉಳಿದವರನ್ನೆಲ್ಲ ಕರೆಯುತ್ತಿದ್ದುದು ಇತರೆ ಜನವೆಂದೇ! ಜೀವನಶೈಲಿ, ಊಟ-ತಿಂಡಿ, ಆಚರಣೆ, ಆಕಾಂಕ್ಷೆ ಯಾವುದರಲ್ಲೂ ನಮಗೆ ಇತರರು ಸಮೀಪರಲ್ಲ, ಸಮಾನರಲ್ಲ ಎಂದು ಹೇಳಿಕೊಡುತ್ತಿದ್ದ, ಹೇಳಿಕೊಳ್ಳುತ್ತಿದ್ದ ರೀತಿ ಇದೇ. ಹೀಗೆಲ್ಲ ಹೇಳಿಕೊಡುತ್ತಿರುವುದರಲ್ಲಿ ಉದ್ದೇಶಪೂರ್ವಕವಾದದ್ದೇನೂ ಇರಲಿಲ್ಲ. ಪರಂಪರೆಯಿಂದ ಬಂದ ಮನೋಗತವನ್ನು ಮುಂದಿನ ತಲೆಮಾರಿಗೆ ರವಾನಿಸುತ್ತಿದ್ದರು. ಹಾಗಾಗಿ, ಇದೆಲ್ಲ ತೀರಾ ಸಹಜ ಎಂದು ನಮಗೆ, ನನಗನಿಸುತ್ತಿತ್ತು.
ಆದರೆ ಮುಂದೆ ಓದಿ-ಬರೆದು ಮಾಡಿದ ಮೇಲೆ, ಪ್ರವಾಸ ಮಾಡಿದ ಮೇಲೆ, ಬೇರೆ ಬೇರೆ ರೀತಿಯ ಭಾಷೆಗಳ, ದೇಶಗಳ ಒಡನಾಡಿಗಳು ದೊರಕುತ್ತಿದ್ದಂತೆ, “ಇತರೆ”ಯವರ ಪದದ ಪರಿಕಲ್ಪನೆಯ ಬಳಕೆ ಸರ್ವವ್ಯಾಪಿಯಾದದ್ದು ಎಂಬುದು ತಿಳಿಯಿತು. “ಇತರೆ”ಯವರು ಇರಲೇಬೇಕಾದವರು. ಅವರಿಲ್ಲದೆ ಹೋದರೆ ನಮ್ಮ ಮನಸ್ಸಿಗೆ ಆಗುವ ಆತಂಕ, ಅಭದ್ರತೆ ತಿಳಿದು ಆತಂಕವಾಯಿತು. ಈಗನಿಸುತ್ತಿದೆ, ಜಗತ್ತು ಪ್ರತಿ ಕ್ಷಣವೂ ನನಗೆ ಬೇಕಾದ “ಇತರೆ” ಜನರನ್ನು ನಿರಂತರವಾಗಿ ಸೃಷ್ಟಿಸುತ್ತಾ, ಕಲ್ಪಿಸುತ್ತಾ ಹೋಗುತ್ತದೆ. ಕಳೆದ ಮೂರು-ನಾಲ್ಕು ದಶಕಗಳ ಬೆಳವಣಿಗೆ, ವಿದ್ಯಮಾನಗಳಂತೂ ಈ ವಿದ್ಯಮಾನಕ್ಕೆ ಸಂಬಂಧಪಟ್ಟ ಹಾಗೆ ಭಯಾನಕವಾಗಿದೆ.
ಮೊದಮೊದಲು ಕೇವಲ “ಜಾತಿ” ಸೂಚಕವಾಗಿ ಕಾಣುತ್ತಿದ್ದುದು ಈಗ ಹೀಗೆ ಇತರರನ್ನು ಕಾಣುವುದು, ಸೃಷ್ಟಿಸಿಕೊಳ್ಳುವುದು, ಇತರೆಯವರನ್ನು ಸದಾ “ಇತರೆ”ಯವರಾಗಿಯೇ ಇರುವಂತೆ ನೋಡಿಕೊಳ್ಳುವುದು, ಈ ಕುರಿತು ನಮ್ಮ ಮನಸ್ಸನ್ನು ಸದಾ ಜಾಗೃತವಾಗಿ, ಉದ್ವಿಗ್ನವಾಗಿ ಇಟ್ಟುಕೊಂಡಿರುವ ರೀತಿಯನ್ನು ನೋಡಿದರೆ, ಮನುಷ್ಯ ಜನ್ಮಕ್ಕೆ ಇದು ತೀರಾ ಅಗತ್ಯ, ಅನಿವಾರ್ಯ ಮಾನಸಿಕ ಪ್ರವೃತ್ತಿ ಎನಿಸಿದೆ. ನಮ್ಮ ಮಾನಸಿಕ ಸುಖಕ್ಕೆ “ಇತರ”ರನ್ನು ಸದಾ ಸೃಷ್ಟಿಸಿಕೊಳ್ಳುವ ಅಗತ್ಯವನ್ನು ನಮ್ಮ ಮಹಾಕಾವ್ಯ, ಇತಿಹಾಸ, ಪುರಾಣಗಳು ಕೂಡ ಒಪ್ಪಿವೆ. ಪ್ರತಿನಾಯಕರ ಸೃಷ್ಟಿಯಲ್ಲಿ ಸಾಹಿತ್ಯ ಕೃತಿಗಳು ಈ ವಿದ್ಯಮಾನವನ್ನು ಸ್ಪಷ್ಟಪಡಿಸುತ್ತವೆ. ರಾಮ-ರಾವಣರ ಕಲ್ಪನೆ, ಪಾಂಡವರು-ಕೌರವರ ಕಲ್ಪನೆಗಳಲ್ಲಿ ಇದು ಗೊತ್ತಾಗುತ್ತದೆ, ಶಿಶುಪಾಲ ನಿಜವಾಗಿ ಇದ್ದನೋ, ಇಲ್ಲ ಕೃಷ್ಣನ್ನು ದೊಡ್ಡವನನ್ನಾಗಿ ಮಾಡಲು ಸೃಷ್ಟಿಸಲಾಯಿತೋ?
ನಾವು ಭಾವಿಸಿದಂತೆ ಯಾರೊಬ್ಬರೂ ಇರುವುದಿಲ್ಲ, ಇರಬೇಕಾಗಿಲ್ಲ ಎಂಬುದು ಈ ಸೃಷ್ಟಿಯ ಪ್ರಾಥಮಿಕ ಸತ್ಯ. ಆದರೆ ಮನಸ್ಸು ಈ ಸರಳ ಸಂಗತಿಯನ್ನು ಒಪ್ಪಿಕೊಳ್ಳುವುದಿಲ್ಲ. ನಾನು/ನಾವು/ನನ್ನಂಥವರು ಮಾತ್ರ ಶ್ರೇಷ್ಠವಾದದ್ದನ್ನು, ಅತ್ಯುತ್ತಮವಾದದ್ದನ್ನು ಪ್ರತಿನಿಧಿಸುತ್ತೇವೆ; “ಇತರ”ರೆಲ್ಲ ಇದರ ವಿರೋಧಿಗಳು, ವಿನಾಶಕರು. ಹಾಗಾಗಿ ಇವರು ಈ ಸೃಷ್ಟಿಯಲ್ಲಿ ಇರುವುದು ಅಗತ್ಯವಿಲ್ಲ. ಅವರೆಲ್ಲ ಹುಟ್ಟಿರುವುದು, ಬದುಕಿರುವುದು ನಾವು ನಂಬಿರುವ, ಆಚರಿಸುತ್ತಿರುವ ಜೀವನಶೈಲಿ, ಪರಿಕಲ್ಪನೆಗಳನ್ನೆಲ್ಲ ನಾಶ ಮಾಡಲೆಂದು. ಹಾಗಾಗಿ “ಇತರ”ರು ಭೂಮಿಯ ಮೇಲೆ ಇರಲೇಬಾರದು.
ಇತರರು ಅನ್ನುವ ಕಲ್ಪನೆಗೂ “ಅ” ಅಕ್ಷರದ ಬಳಕೆಗೂ ಒಂದು ರೀತಿಯ ಸಂಬಂಧವಿದೆಯೆಂದು ಕಾಣುತ್ತದೆ. ಅಬ್ರಾಹ್ಮಣರು, ಅಲ್ಪಸಂಖ್ಯಾತರು, ಅಲ್ಪರು ಎನ್ನುವ ಪದಗಳು ಹುಟ್ಟುವುದಕ್ಕೆ ಇತರರು ಅನ್ನುವ ಕಲ್ಪನೆಯೇ ಕಾರಣ. ನಮಗಾಗಿ “ಇತರ”ರನ್ನು ಸದಾ ಸೃಷ್ಟಿಸಿಕೊಡಲು ನಮ್ಮ ಮನಸ್ಸು ಸದಾ ಅವರ ಬಗ್ಗೆಯೇ ಯೋಚಿಸುತ್ತಿರುವಂತೆ, ಗೀಳಿಗೆ ಸಿಕ್ಕಿಹಾಕಿಕೊಳ್ಳುವಂತೆ ಪ್ರೇರೇಪಿಸಲು ಒಂದು ಕೈಗಾರಿಕೆಯೇ ಇದೆ. ಈ ಕೈಗಾರಿಕೆಯಲ್ಲಿ ಎಲ್ಲ ರೀತಿಯ ಜನ ಕೆಲಸ ಮಾಡುತ್ತಾರೆ. ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು, ತಂತ್ರಜ್ಞರು, ರಾಜಕಾರಣಿಗಳು, ಸೇನಾಧಿಪತಿಗಳು, ಪ್ರಚಾರ ಪರಿಣತರು, ಎಲ್ಲರೂ ಇರುತ್ತಾರೆ. ನಿರಂತರವಾಗಿ ಇವರು ಕೆಲಸ ಮಾಡುತ್ತಲೇ ಇರುತ್ತಾರೆ. ನಮ್ಮ ಮನಸ್ಸು ವಿರಾಮವಾಗಿರಲು ಬಿಡುವುದೇ ಇಲ್ಲ. ಒಂದು ಹಂತದ ನಂತರ ನಾವು ಕೂಡ ಈ ಮನೋಸ್ಥಿತಿಯನ್ನೇ ಇಷ್ಟಪಡುವಂತೆ ನೋಡಿಕೊಳ್ಳುತ್ತಾರೆ. ವಿಧೇಯರಾಗಿ ನಾವು ಕೂಡ ಬೇರೇನೂ ಬಯಸುವುದಿಲ್ಲ.
ನಾವು ಶಾಲಾ-ಕಾಲೇಜುಗಳಲ್ಲಿ ಓದುವಾಗ, ರಷ್ಯಾ-ಅಮೆರಿಕ ಬಣಗಳು ಜಗತ್ತಿನ ತುಂಬೆಲ್ಲಾ ಪ್ರಸಿದ್ಧವಾಗಿದ್ದವು. ಮಾಧ್ಯಮಗಳು, ಸಾಹಿತ್ಯ ಕೃತಿಗಳು, ಸಾರ್ವಜನಿಕ ವೇದಿಕೆಗಳು ಕೂಡ ಈ ಎರಡೂ ಬಣಗಳ ರೀತಿ ನೀತಿಗಳನ್ನು ಕುರಿತು ನಿರಂತರ ಪ್ರಚಾರ ಮಾಡುತ್ತಲೇ ಇದ್ದವು. ಪ್ರತಿಯೊಬ್ಬರೂ ಒಂದಲ್ಲ ಒಂದು ಬಣಕ್ಕೆ ಸೇರಲೇಬೇಕಿತ್ತು. ಇಂಥವರು ಏರ್ಪಡಿಸುತ್ತಿದ್ದ ವೈಚಾರಿಕ ಶಿಬಿರಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ಇಂಥ ಶಿಬಿರಗಳಲ್ಲಿ ಆಯಾಯ ಬಣದ ಶಕ್ತಿ, ಸಾಮರ್ಥ್ಯ, ಒಲವುಗಳನ್ನು ಮಾತ್ರ ಹೇಳುವುದಿಲ್ಲ. ಹೇಳಿಕೊಟ್ಟರೂ ಅದಕ್ಕೆ ಸ್ವಲ್ಪವೇ ಸಮಯ ಕೊಡುತ್ತಾರೆ. ಉಳಿದಂತೆ ತನು-ಮನ-ಧನಪೂರ್ವಕವಾಗಿ “ಇತರ”ರನ್ನು, ಇನ್ನೊಬ್ಬರನ್ನು ನಕಾರಾತ್ಮಕವಾಗಿ ವರ್ಣಿಸುವ, ಅವರಿಂದಾಗುವ ಅಪಾಯ, ತೊಂದರೆಗಳನ್ನು ವಿವರಿಸುವುದಕ್ಕೆ ಶಿಬಿರಾರ್ಥಿಗಳನ್ನು ಒಪ್ಪಿಸುವುದಕ್ಕೆ, ಒಪ್ಪಿಸಿ ಅವರನ್ನು ಸದೇಹ-ಮನಸ್ಸು ಸಮೇತವಾಗಿ ಪರಿವರ್ತಿಸಿ ದ್ವಿಜರನ್ನಾಗಿ ಮಾಡುವುದಕ್ಕೇ ಸೀಮಿತವಾಗಿರುತ್ತದೆ.
ಹೀಗೆ ಇತರರನ್ನು ಸೃಷ್ಟಿಸುವವರು, ಅವರ ಬಗ್ಗೆ ನಮ್ಮ ತಿಳುವಳಿಕೆಯನ್ನು ರೂಪಿಸುವವರು ಸಾಮಾನ್ಯವಾಗಿ ಯುವಕರನ್ನು, ಮುಗ್ಧರನ್ನು, ಭಾವನಾತ್ಮಕ ಸೆಲೆಗಳನ್ನೇ ತಮ್ಮ ವ್ಯಕ್ತಿತ್ವದಲ್ಲಿ ಪ್ರಧಾನ ಧಾರೆಯಾಗಿ ಇರುವವರನ್ನು ಚಿಕ್ಕ ವಯಸ್ಸಿನಲ್ಲೇ ಪ್ರಭಾವಿಸಲು, ಪ್ರಭಾವಿಸಿ ಜೀವನಪರ್ಯಂತ ತಮ್ಮ ಮಾನಸಿಕ ಹಿಡಿತದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಒಮ್ಮೆ ಇಂಥವರ ಕೈವಶವಾದರೆ, ಜೀವನಪರ್ಯಂತ ಇನ್ನೊಬ್ಬರನ್ನು ಕುರಿತು “ಅನ್ಯರು” ಎಂದು ಯೋಚಿಸುತ್ತಲೇ, ಅವರಿಂದಾಗುವ ಪ್ರತಿಕೂಲಗಳನ್ನು ಕುರಿತು ಗೀಳು ಮಾಡಿಕೊಂಡು ನಮ್ಮ ಇಡೀ ಬದುಕನ್ನು ಕಳೆಯಬೇಕಾಗುತ್ತದೆ. ಯಾವ ಯಾವುದೋ ಕಾರಣಗಳಿಗಾಗಿ ಇಂಥವರ ಪ್ರಭಾವದಿಂದ ಹೊರಬಂದಮೇಲೂ ಜನ ಇಂಥವರನ್ನು ವಿರೋಧಿಸುತ್ತಲೇ, ಇವರ ಬಗ್ಗೆ ಮಾತ್ರವೇ ಯೋಚಿಸುತ್ತಲೇ ಬದುಕನ್ನು ಸವೆಸುತ್ತಾರೆ. ಈ ಜಗತ್ತಿನಲ್ಲಿ “ಇತರೆ”ಯವರಲ್ಲದೆ ಇವರಿಗೆ ಬೇರೇನೂ ಕಾಣುವುದಿಲ್ಲ. ಪ್ರೀತಿಸುವಾಗಲೂ ಅಷ್ಟೇ! ವಿರೋಧಿಸುವಾಗಲೂ ಅಷ್ಟೇ! ವಾಸ್ತವದ ಬಹುಭಾಗ ಇವರ ಮನಸ್ಸಿನ ಪರಿಧಿಯ ಹೊರಗೇ ಉಳಿಯುತ್ತದೆ. ವಿಶಾಲ, ವೈವಿಧ್ಯಮಯ ಜಗತ್ತು ತನ್ನ ಪಾಡಿಗೆ ತಾನು ಚಲಿಸುತ್ತಿರುತ್ತದೆ. ಸಂಘಪರಿವಾರದ ತೆಕ್ಕೆಯಲ್ಲಿದ್ದವರು, ಅದರ ಪ್ರಭಾವದಿಂದ ಹೊರಬಂದ ಮೇಲೂ ಮತ್ತೆ ಜೀವನದುದ್ದಕ್ಕೂ ನಿರಂತರವಾಗಿ ಅವರನ್ನು ವಿರೋಧಿಸುತ್ತಲೇ ಇನ್ನು ಯಾರ ಬಗ್ಗೆಯೂ ಮತ್ತು ಯಾವುದಾದರೂ ಸಮಸ್ಯೆಯ ಬಗ್ಗೆಯೂ ಯೋಚಿಸದೆ ಹಿಂದಿನಂತೆಯೇ ಉಳಿದುಬಿಡುತ್ತಾರೆ. ಹೀಗೆ ತನಗೆ ಬೇಕಾದಾಗ ಬೇಕಾದ ರೀತಿಯಲ್ಲಿ “ಇತರ”ರನ್ನು ಸೃಷ್ಟಿಸುತ್ತಾ ಪತ್ರಿಕೋದ್ಯಮ ಮಾಡುತ್ತಿದ್ದ ಪ್ರತಿಭಾವಂತರ ಸುಪರ್ದಿನಲ್ಲಿ ಹಲವು ವರ್ಷ ಜೀವನ ಕಳೆದುಕೊಂಡಮೇಲೆ, ಕ್ರಮೇಣ ಅವರ ಪ್ರಭಾವದಿಂದ ಹೊರಬಂದ ಗೆಳೆಯನೊಬ್ಬ ಹೇಳಿದ – ಹೀಗೆ ಇತರರ ಬಗ್ಗೆ ಯಾವಾಗಲೂ ಯೋಚಿಸುವುದನ್ನೇ ಮಾನಸಿಕ ಗೀಳನ್ನಾಗಿ ಮಾಡಿಕೊಂಡಿರುವವರು ವಾಸ್ತವದ ಬೇರೆ ಯಾವ ಆಯಾಮಗಳನ್ನೂ ತಮ್ಮ ಶಿಷ್ಯಗಣ ಗಮನಿಸದಂತೆ ಮಾಡುತ್ತಾರಂತೆ.
ಒಮ್ಮೆ ಈ ಗೆಳೆಯನ ಮಗುವಿಗೆ ತೀವ್ರ ಆಮಶಂಕೆಯಾಗಿ ತುಂಬಾ ದಿನ ಮುಂದುವರೆದು ಜೀವನ್ಮರಣದ ಪ್ರಶ್ನೆಯಾದಾಗಲೂ ಗೆಳೆಯನಿಗೆ ಎದುರಿಗೇ ಸಾಯುತ್ತಿರುವ ಮಗುವನ್ನು ಕುರಿತು ಯೋಚಿಸುವುದಕ್ಕಿಂತ ಗೀಳಿನ ಪ್ರವೃತ್ತಿಯನ್ನು ಕಲಿಸಿಕೊಟ್ಟ ಮಹಾನುಭಾವರ ಬಗ್ಗೆಯೇ ಮನಸ್ಸಿನ ತುಂಬಾ ಯೋಚನೆಯಿತ್ತಂತೆ.
“ಇತರ”ರೆಲ್ಲ ಇದರ ವಿರೋಧಿಗಳು, ವಿನಾಶಕರು. ಹಾಗಾಗಿ ಇವರು ಈ ಸೃಷ್ಟಿಯಲ್ಲಿ ಇರುವುದು ಅಗತ್ಯವಿಲ್ಲ. ಅವರೆಲ್ಲ ಹುಟ್ಟಿರುವುದು, ಬದುಕಿರುವುದು ನಾವು ನಂಬಿರುವ, ಆಚರಿಸುತ್ತಿರುವ ಜೀವನಶೈಲಿ, ಪರಿಕಲ್ಪನೆಗಳನ್ನೆಲ್ಲ ನಾಶ ಮಾಡಲೆಂದು. ಹಾಗಾಗಿ “ಇತರ”ರು ಭೂಮಿಯ ಮೇಲೆ ಇರಲೇಬಾರದು.
ಮಧ್ಯಪ್ರಾಚ್ಯ ದೇಶಗಳಲ್ಲಿ ನೂರಾರು ವರ್ಷಗಳ ಕಾಲ ನಡೆದ “ಧರ್ಮಯುದ್ಧ”ದ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಮುಸ್ಲಿಮರು, ಕ್ರೈಸ್ತರು, ಯಹೂದಿಗಳು ಯಾವಾಗಲೂ ಪರಸ್ಪರ “ಇತರೆ”ಯವರೆಂದು ಸಾರುತ್ತಲೇ ನೂರಾರು ವರ್ಷಗಳು ನಡೆದ ಈ ಯುದ್ಧಮಾಲಿಕೆಯನ್ನು “Crusades” ಎಂಬ ಪರಿಭಾಷೆಯ ಮೂಲಕ ವಿವರಿಸುತ್ತಾರೆ. ಈವತ್ತಿಗೂ ಈ ಸೀಮೆಯಲ್ಲಿ “ಇತರ”ರ ಕಲ್ಪನೆ, ಪರಿಕಲ್ಪನೆಗಳಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ರಾಜಕೀಯ, ಸಾಹಿತ್ಯ, ಸಂಸ್ಕೃತಿ ಹೀಗೆ ಯಾವುದೇ ಕ್ಷೇತ್ರದಲ್ಲೂ ನೀವು ಪ್ರಭಾವಿಗಳಾಗಬೇಕಾದರೆ ಅನುಯಾಯಿಗಳು ಬೇಕು. ನಿಮಗೆ ತೀವ್ರ ನಿಷ್ಠೆಯಿರುವ ಅನುಯಾಯಿಗಳು ಬೇಕಾದರೆ, ಜನರಿಗೆ, ಹಿಂಬಾಲಕರಿಗೆ ಆಕರ್ಷವಾಗುವಂತಹ “ಇತರ”ರನ್ನು ಸೃಷ್ಟಿಸಿ, ಜನರ ಮುಂದೆ ಇಡಬೇಕು. ಅವಾಗ ಗುರಿ ಸ್ಪಷ್ಟವಾಗುತ್ತದೆ. ಹಿಟ್ಲರ್ “ಇತರ”ರನ್ನು ಸೃಷ್ಟಿಸಿದ್ದು ಹೀಗೇ, ಇದೇ ಕಾರಣಕ್ಕೇ.
ಜಗತ್ತಿನ ಇತಿಹಾಸವನ್ನು, ಖಂಡಾಂತರ ವಲಸೆಗಳನ್ನು ಪರಿಶೀಲಿಸುತ್ತಾ ಹೋದರೆ, ಯಾವೊಂದು ಜನಾಂಗವೂ, ದೇಶವೂ ತಾನು ಭಾವಿಸುವಂತೆ, ಭಾವಿಸುವಷ್ಟು ಶುದ್ಧವಾಗಿಲ್ಲ, ಶ್ರೇಷ್ಠವಾಗಿಲ್ಲ, ಏಕಮುಖವಾಗಿಲ್ಲ; ಒಬ್ಬರು ಇನ್ನೊಬ್ಬರೊಡನೆ ಬರೆಯುತ್ತಾ ಬದಲಾಯಿಸುತ್ತಾ ಕಲಿಯುತ್ತಲೇ ಈ ಜಗತ್ತು ರೂಪುಗೊಂಡಿದೆ ಮತ್ತು ಮುಂದೆಯೂ ಹೀಗೇ, ಇದೇ ಕಾರಣಕ್ಕೆ ಬದಲಾಗುತ್ತಲೂ ಹೋಗುತ್ತದೆ. ಶಾಲಾ ಬಾಲಕರಿಗೂ ಗೊತ್ತಿರುವ ಈ ಸರಳ ಸತ್ಯವನ್ನು ಒಪ್ಪಲು ಮನುಷ್ಯನ ಹಡಬೆ ಮನಸ್ಸು ನಿರಾಕರಿಸುವುದಿಂದ, ತಳಿ ವಿಜ್ಞಾನ ಎಂಬ ಶಾಸ್ತ್ರವು ರೂಪುಗೊಂಡು, ನೂರಾರು ಪ್ರಯೋಗಾಲಯಗಳು, ಕೋಟ್ಯಾಂತರ ಡಾಲರ್ಗಳನ್ನು ವೆಚ್ಚಮಾಡಿ ಸಂಶೋಧನೆ, ಸಂಕಿರಣ, ಉತ್ಖನಗಳು ನಡೆಯುತ್ತಲೇ ಇವೆ. ನೇರ ಸರಳ ಸತ್ಯವನ್ನು ಒಪ್ಪಲಾಗದಷ್ಟು ವಿವೇಕ, ಸಮತೋಲನೆ ಇಲ್ಲದ ಮನುಷ್ಯನ ಮನಸ್ಸನ್ನು ಸಂಶೋಧನೆಗಳ ಮೂಲಕ ಒಲಿಸಿಕೊಳ್ಳಬಹುದು, ಒಪ್ಪಿಸಬಹುದು ಎಂದು ಭಾವಿಸುವುದು ಕೂಡ ಮೂರ್ಖತನ. ಇರಲಿ! ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ.
ನನ್ನ ಗೆಳೆಯನೊಬ್ಬನಿಗೆ ತಳಿ ವಿಜ್ಞಾನದಲ್ಲಿ ಆಸಕ್ತಿ ಮೂಡಿತು. ಸಾಕಷ್ಟು ಪರಿಶ್ರಮ ಕೂಡ ಹಾಕಿದ. ಆದರೆ ಇದರಲ್ಲೇ ಎಷ್ಟು ಮುಳುಗಿದ ಎಂದರೆ, ತಳಿ ವಿಜ್ಞಾನವೊಂದೇ, ಅದೊಂದೇ ನಿಜವಾದ ವಿಜ್ಞಾನ, ಅದೊಂದೇ ನಿಜವಾದ ಅಧ್ಯಯನ ಎಂದು ಹಠ ಹಿಡಿಯಲು ಶುರುಮಾಡಿದ. ತಳಿ ಶಾಸ್ತ್ರದ ಬಗ್ಗೆ ಆಸಕ್ತಿಯಿಲ್ಲದವರು, ಕುತೂಹಲವಿಲ್ಲದವರೆಲ್ಲ ಈ ಗೆಳೆಯನಿಗೆ “ಇತರೆ”ಯವರಾಗಿ ಕಂಡರು. ಈ ಜಗತ್ತಿನಲ್ಲಿ ಯಾವ ಕಾರಣಕ್ಕೆ, ಯಾವಾಗ, ಯಾರು “ಇತರ”ರನ್ನು ಸೃಷ್ಟಿಸುತ್ತಾರೆ ಎಂದು ಹೇಳುವುದು ಕಷ್ಟವೇ ಸರಿ.
ಜಾತಿಯು ಮೊದಲು ಪರಿಕಲ್ಪನೆಯಾಗಿ, ನಂತರ ಪದ್ಧತಿಯಾಗಿ ಹುಟ್ಟಲು, ಬೆಳೆಯಲು, ಊರಲು, ಮನುಷ್ಯನನ್ನು ನಂಬಿಸಲು “ಇತರೆ”ಯವರ ಕಲ್ಪನೆ ಸಕ್ರಿಯವಾಗಿ ಕೆಲಸ ಮಾಡಿದೆ. ಇತರೆಯವರಿಗೆ ಯಾವತ್ತೂ ನಮ್ಮಷ್ಟು ಸೂಕ್ಷ್ಮತೆ, ಅಭಿರುಚಿ, ಸಾಮರ್ಥ್ಯ ಇದೆಯೆಂದು ಯಾವ ಜಾತಿಯವರೂ ಒಪ್ಪುವುದಿಲ್ಲ. ಮೇಲು ಮತ್ತು ಕೀಳು ಜಾತಿಗಳಲ್ಲಿರುವ ತುದಿ ನಿಲುವಿನ ಮಂದಿ ಮಾತ್ರವಲ್ಲ, ಈ ಎರಡು ತುದಿ-ತುದಿಗಳ ನಡುವೆ ಇರುವ ಸಾವಿರಾರು ಜಾತಿಗಳಲ್ಲಿ ಪ್ರತಿಯೊಂದು ಜಾತಿಯವರಿಗೂ “ಇತರೆ”ಯವರ ಅಗತ್ಯವಿದೆ – ದ್ವೇಷಿಸಲು, ವಿನಾಶ ಬಯಸಲು, ಭ್ರಮಾಲೋಕದಲ್ಲಿ ಬದುಕಲು.
ಇದೇನೂ ಸಾಮಾಜಿಕ ವಿದ್ಯಮಾನ ಮಾತ್ರವಲ್ಲ, ಮನುಷ್ಯನ ಸ್ವಭಾವದಲ್ಲೇ ಅಂತರ್ಗತವಾದದ್ದು. ಒಂದು ಪ್ರವೃತ್ತಿ, ಒಂದು ಸ್ವಭಾವದವರಿಗೆ ಇನ್ನೊಂದು ಪ್ರವೃತ್ತಿಯವರು, ಸ್ವಭಾವದವರು ಯಾವಾಗಲೂ ಕೀಳಾಗಿಯೇ, ಇತರೆಯವರಾಗಿಯೇ ಕಾಣುತ್ತಾರೆ.
ನಮ್ಮ ಕಾಲದ ಪ್ರಭಾವಿ ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್ನ್ನು ಸೂಕ್ಷ್ಮವಾಗಿ ಗಮನಿಸಿದರೆ, ಒಂದಂಶ ಸ್ಪಷ್ಟವಾಗುತ್ತದೆ. ಕೆಲವರಿಗೆ ಬೆಳಿಗ್ಗೆ ಎದ್ದಾಗಿನಿಂದಲೂ ದಿನದ ಇಪತ್ತುನಾಲ್ಕು ಘಂಟೆಯುದ್ದಕ್ಕೂ ಇನ್ನೊಬ್ಬರದೇ ಧ್ಯಾನ. ಇನ್ನೊಬ್ಬರು ಎಂದರೆ ಇತರೆಯವರು ಎಂದೇ ಅರ್ಥ. ಇನ್ನೊಬ್ಬರು ಏನು ಮಾಡುತ್ತಿದ್ದಾರೆ, ಮಾಡುತ್ತಿಲ್ಲ, ಅವರು ಹೇಗಿರಬೇಕು, ಏಕೆ ಹಾಗಿಲ್ಲ, ಹಾಗಾಗಿ ಈ ಜಗತ್ತು ಹೇಗೆ ವಿನಾಶದೆಡೆಗೆ ಸಾಗುತ್ತಿದೆ ಎಂಬುದೇ ಕಾಳಜಿ. ತಾನು ಮತ್ತು ತಾನು ಅಪಾಯಕಾರಿಯೆಂದು ಭಾವಿಸುವ ಇತರೆಯವರು ಈ ವಿಶಾಲ ಜಗತ್ತಿನ ಒಂದು ಸಣ್ಣ ಭಾಗ ಮಾತ್ರ. ಇವರಿಬ್ಬರು ಇಲ್ಲದೆಯೂ ಈ ಜಗತ್ತು ನಡೆದುಕೊಂಡು ಹೋಗಬಲ್ಲದು ಎಂಬುದು ಇವರಿಗೆ ಹೊಳೆಯುವುದೇ ಇಲ್ಲ. ಇವರು ಯಾರನ್ನು ವಿರೋಧಿಸುತ್ತಾರೋ ಅವರು ಕೂಡ ಇವರನ್ನೇ, ಇಂಥವರನ್ನೇ ಕುರಿತು ಯೋಚಿಸುತ್ತಿರುತ್ತಾರೆ. ಇನ್ನೂ ಒಂದಂಶವನ್ನು ಕೂಡ ನೀವು ಗಮನಿಸಿರಬಹುದು. ಇದರಲ್ಲೆಲ್ಲ ತೊಡಗಿರುವವರು ಕೆಲವೇ ಮಂದಿ. ಅವರೇ ಬರೆಯುತ್ತಾರೆ. ಅವರಂಥವರೇ ಓದುತ್ತಾರೆ. ಅವರು ಬಯಸಿದ್ದನ್ನು ಇವರು ಬರೆಯುತ್ತಾರೆ. ಇವರು ಬರೆದದ್ದನ್ನು ಅವರು ಮಾತ್ರ ಓದುತ್ತಾರೆ. ಈಗಾಗಲೇ ಸಿದ್ಧರಾಗಿರುವ ಓದುಗರಿಗೆ, ಈಗಾಗಲೇ ಸಿದ್ಧವಾಗಿರುವ ತಿಂಡಿ-ತಿನಿಸುಗಳನ್ನು ಬಡಿಸಿದ ಹಾಗೆ. ಇದನ್ನು ವಿಮರ್ಶೆಯ ಪರಿಭಾಷೆಯಲ್ಲಿ Bad faith writing ಎಂದು ಕರೆಯುವರು. ಕೆಲವರಿಗೆ ದಿನವೂ ಅಮೆರಿಕವನ್ನು ದ್ವೇಷಿಸಬೇಕು. ಇನ್ನು ಕೆಲವರಿಗೆ ಬ್ರಾಹ್ಮಣರನ್ನು ಮತ್ತು ಕೆಲವರಿಗೆ ಹಿಂದೂಗಳನ್ನು, ಕೆಲವರಿಗೆ ಮುಸ್ಲಿಮರನ್ನು, ಇನ್ನೆಲ್ಲೋ ಪ್ಯಾಲೆಸ್ಟಿನೀಯರನ್ನು, ಯಹೂದಿಗಳನ್ನು. ಒಮ್ಮೊಮ್ಮೆ ಅನುಮಾನ ಬರುತ್ತದೆ. ಇವರೆಲ್ಲರೂ ಸೇರಿ ಒಬ್ಬರನ್ನೊಬ್ಬರು ಪರಸ್ಪರ ಪೋಷಿಸುತ್ತಿರಬಹುದೆಂದು.
ಒಂದು ಗಂಭೀರ ಸಂಗತಿಯ ಬಗ್ಗೆ ಹೀಗೆಲ್ಲ ಲಘುವಾಗಿ, ಸ್ಥೂಲವಾಗಿ ಪ್ರಬಂಧ ಶೈಲಿಯಲ್ಲಿ ಬರೆಯುವುದನ್ನು ವಿರೋಧಿಸುವವರು ಇದ್ದರೆ, ಸ್ವಲ್ಪ ಮಟ್ಟಿಗೆ ಅವರ ವಿರೋಧ ಸಕಾರಣವೂ ಆಗಿರುತ್ತದೆ. ಜನರ ನಡುವೆ ಹೀಗೆ ಇತರರನ್ನು ಕಾಣಲು, ಸೃಷ್ಟಿಸಲು ಜಗತ್ತಿನಲ್ಲಿ ಇದುವರೆಗೆ ಕೆಲವು ವರ್ಗಗಳಿಗೆ ಮಾತ್ರ ಸಾಧ್ಯವಾಗಿದೆ. ಹಾಗಾಗಿ ಇದುವರೆಗೆ “ಇತರೆ”ಯಾಗಿ ಮಾತ್ರ ಕಂಡಿದ್ದವರೆಲ್ಲ ಒಂದಾಗಿ, ಒಗ್ಗೂಡಿ ಹಿಂದೆ ಇತರರನ್ನು ಸೃಷ್ಟಿಸುತ್ತಿದ್ದವರನ್ನು ಈಗ “ಇತರೆ”ಯವರನ್ನಾಗಿ ಕಾಣುವ ಕಾಲ ಇದೀಗ ಬಂದಿದೆ ಮತ್ತು ಇದು ಈ ಕಾಲದ ಅಗತ್ಯ ಎಂದು ವಾದಿಸಬಹುದು. ವಾದವಾಗಿಯೂ ಮತ್ತು ಒಂದು ಹಂತದ ಸತ್ಯವಾಗಿಯೂ ಈ ಮಾತು ಸರಿಯೇ ಇದೆ. ಆದರೆ ನಮ್ಮನ್ನು “ಇತರೆ”ಯಾಗಿ ಸೃಷ್ಟಿಸಿದವರ ಮಾನಸಿಕ ಪ್ರವೃತ್ತಿ, ಕಾರ್ಯವಿಧಾನಗಳೇ ನಮ್ಮಲ್ಲೂ ಜಾಗೃತವಾಗುತ್ತವೆ. ಅವರನ್ನು ವಿರೋಧಿಸಲು, ತಿದ್ದಲು ಹೋಗಿ ನಾವೂ ಅವರಂತೆಯೇ ಆಗಿಬಿಡುತ್ತೇವೆ. ಶೋಷಿತರು, ಶೋಷಕರ ಪರಿಭಾಷೆ, ಮನೋಧರ್ಮವನ್ನು ತಮಗೇ ಗೊತ್ತಿಲ್ಲದಂತೆ ರೂಢಿಸಿಕೊಳ್ಳುವುದು ಕೂಡ ಅಪಾಯಕಾರಿಯೆಂದು ಮನಗಂಡೇ ನೆಲ್ಸನ್ ಮಂಡೇಲಾರಂಥವರು Truth and Reconciliation ಪರಿಕಲ್ಪನೆಯನ್ನು, ಸಂಸ್ಥೆಯನ್ನು ಕ್ರಿಯಾಶೀಲವಾಗಿ ಮಾಡಲು ಪ್ರಯತ್ನಿಸಿದರು. ಆದರೆ ಹಿಂದಿನ ಇತರೆಯವರು, ಈವತ್ತಿನ ಇತರೆಯವರು ಇಬ್ಬರೂ ಈ ಹೊಸ ವಿಚಾರಕ್ಕೆ ಸ್ಪಂದಿಸುವಷ್ಟು ಪ್ರಬುದ್ಧತೆ ತೋರಲಿಲ್ಲ. ಕ್ಷಮಿಸುವವರಿಗೆ, ಈವತ್ತಿನ ತನಕ ನಡೆದುಕೊಂಡು ಬಂದ ತಪ್ಪುಗಳನ್ನು ತಿದ್ದುವವರಿಗೆ, ಶೋಷಕರಿಗಿಂತ ಹೆಚ್ಚಿನ ಇತಿಹಾಸ ಪ್ರಜ್ಞೆ, ಜವಾಬ್ದಾರಿ ಇರಬೇಕೆಂದು ಹೇಳುವುದು ಇದೇ ಕಾರಣಕ್ಕೇ.
ಸಹಜೀವಿಗಳಲ್ಲಿ ಕೆಲವರನ್ನು ಮನುಷ್ಯರಾಗಿ, ವ್ಯಕ್ತಿಗಳಾಗಿ ನೋಡದೆ, ಒಂದು ಗುಂಪಾಗಿ, ಸಮೂಹವಾಗಿ ನೋಡುವುದೇ ಇದೆಲ್ಲ ತೊಂದರೆಗೂ ಕಾರಣ. ಮನುಷ್ಯರನ್ನು ಗುಂಪಾಗಿ, ಗುಂಪಿನ ಸದಸ್ಯರಾಗಿ ಕಾಣುವುದೇ ಸರಿಯೆಂದು ನಂಬುವವರು ಇಂದಿಗೂ ಇದ್ದಾರೆ. ಆರ್ವೆಲ್ರಂಥವರು ಹೇಳುವ ಹಾಗೆ ಯಾವುದೇ ಒಬ್ಬ ಮನುಷ್ಯನನ್ನು ವ್ಯಕ್ತಿಯಾಗಿ ದ್ವೇಷಿಸುವುದು ತಪ್ಪು ಮತ್ತು ಅನೈಸರ್ಗಿಕ. ನಾವು ಕಡುವಾಗಿ ದ್ವೇಷಿಸುವ ವ್ಯಕ್ತಿಯಲ್ಲೂ ನಾವೇ ಒಪ್ಪಬಹುದಾದ, ನಾವು ಬಯಸುವಂತಹ ಒಂದೆರಡು ಒಳ್ಳೆಯ ಗುಣಗಳು, ಸ್ವಭಾವಗಳು ಇದ್ದೇ ಇರುತ್ತವೆ (ಕೂಡಲಾರದೆದೆಯಾಳದಲ್ಲೂ ಕಂಡೀತು ಏಕಸೂತ್ರ – ಅಡಿಗ). ನಮ್ಮ ಜೊತೆ ಬದುಕುತ್ತಿರುವವರನ್ನೇ ಮನುಷ್ಯರಾಗಿ, ವ್ಯಕ್ತಿಗಳಾಗಿ ಕಾಣಲಾರದಂತೆ, ಒಂದು ಗುಂಪಾಗಿ, ಸಮೂಹವಾಗಿ ಮಾತ್ರ ನೋಡುವಂತೆ ನಮಗೆ ಹೇಳಿಕೊಟ್ಟು, ನಮಗೆಲ್ಲ ಸಮೂಹಸನ್ನಿ ಹಿಡಿಸುವವರ ಬಗ್ಗೆ, ನಮ್ಮನ್ನು ಸದಾ ಉದ್ವಿಗ್ನ, ಹಿಂಸಾತ್ಮಕ ಸ್ಥಿತಿಯಲ್ಲಿ ಇಡಲು ಬರೆಯುವವರ, ಚಿಂತಿಸುವವರ ಬಗ್ಗೆ ನಾವು ಏನೂ ಮಾಡಲಾಗದಂತಹ ಅಸಹಾಯಕ ಸ್ಥಿತಿಯಲ್ಲಿದ್ದೇವೆ.
ನೀವು “ಇತರೆ”ಯವರನ್ನು ಸೃಷ್ಟಿಸುವ ತುಡಿತದಿಂದ ತಪ್ಪಿಸಿಕೊಳ್ಳಬೇಕಾದರೆ, ಪ್ರಬುದ್ಧರಾಗಬೇಕಿಲ್ಲ, ಪಂಡಿತರಾಗಬೇಕಿಲ್ಲ. ಈ ಕಾರಣಕ್ಕಾಗಿಯೇ ಬುದ್ಧನಿಗೆ ಜ್ಞಾನದ ಬಗ್ಗೆ, ತರ್ಕದ ಬಗ್ಗೆ, ಕೂದಲು ಸೀಳುವ ಪ್ರವೃತ್ತಿಯ ಬಗ್ಗೆ ಪ್ರತಿರೋಧವಿತ್ತು, ಭಯವಿತ್ತು, ಅಸಹಾಯಕತೆಯೂ ಇತ್ತು. ನೀವು ದೇವರನ್ನು ನಂಬಬೇಕಾದರೆ ನಂಬಿ. ದೇವರನ್ನು ಒಪ್ಪದಿದ್ದರೆ ಅದೂ ಸರಿ. ಆದರೆ ನಿಮ್ಮ ಅನುಭವವನ್ನು ನಂಬಿ ನಿಮ್ಮ ಒಳಮನಸ್ಸು, ವಿವೇಕವನ್ನು ನಂಬಿ, ಅದರ ಧ್ವನಿಗೆ ಕಿವಿಗೊಡಿ. ನಿಮ್ಮ ವಿಚಾರಗಳನ್ನು, ನಂಬಿಕೆಗಳನ್ನು ಇತರರ ಮೇಲೆ ಹೇರಲು ಹೋಗಬೇಡಿ. ಹಾಗೆ ಹೇರಲು ಬೇಕಾದ ಸಂಘ, ಸಂಸ್ಥೆಗಳನ್ನು ಸ್ಥಾಪಿಸಬೇಡಿ ಎಂದು ಊರೂರು ತಿರುಗುತ್ತಾ, ಮರದ ಕೆಳಗೆ ಕೂರುತ್ತಾ, ನದಿ ತೀರದುದ್ದಕ್ಕೂ ನಡೆದಾಡುತ್ತಾ, ಕಂಡ ಕಂಡವರನ್ನೆಲ್ಲ ಮಾತನಾಡಿಸುತ್ತಾ, ಹಾಗೆ ಮಾತನಾಡಿಸುವಾಗಲೂ ತನ್ನೊಳಗೇ ಮಾತನಾಡಿಕೊಳ್ಳುತ್ತಾ ಉಪದೇಶಾತ್ಮಕತೆಯಿಂದ ದೂರವಾದ. ಆದರೆ ಅವನ ಪರಮಶಿಷ್ಯರೇ ಎಲ್ಲವನ್ನು ಕ್ರೋಢೀಕರಿಸಿ, ಸಂಘ ಸಂಸ್ಥೆಗಳನ್ನು ರೂಪಿಸಿದರು. ದೇವರ ಬಗ್ಗೆ ಗೀಳೇ ಇಲ್ಲದವನನ್ನು ದೇವರಾಗಿ ರೂಪಿಸಿದರು. ಸಾಮಾನ್ಯನಂತೆ ಇರಲು ಬಯಸಿದವನನ್ನು ಬೃಹತ್ ಪ್ರತಿಮೆಯಾಗಿ ಕಡೆದರು. ಅವನ ಹೆಸರನ್ನೇ, ಚಿಂತನೆಯಲ್ಲದ ಚಿಂತೆಯನ್ನೇ ಮುಂದೆ ಮಾಡಿಕೊಂಡ ಎಷ್ಟೋ ರಾಜಮನೆತನಗಳೇ, ಎಷ್ಟೋ ದೇಶಗಳೇ ಹಿಂಸೆಗೆ, ಯುದ್ಧಕ್ಕೆ, ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾದವು.
ಗಾಂಧಿ ಇನ್ನೊಂದೆರಡು ಪುಟ್ಟ ಹೆಜ್ಜೆ ಇಟ್ಟು ಒಂದು ಎರಡು-ಮೂರು ಅಡಿ ಮುಂದೆ ಹೋದರು. ನೀವೇ ಹೋಗಿ ಅವರ ಮುಂದೆ ನಿಂತು ಎದೆತಟ್ಟಿ, ನೋಡಿ ನಾನು ಇತರೆಯವನು, ನಿಮಗಿಂತ ಶ್ರೇಷ್ಠ ಎಂದು ಬಡಬಡಿಸಿದರೂ ಸುಮ್ಮನೆ ನಕ್ಕುಬಿಡುತ್ತಿದ್ದರು. ನೀವು ಮೂರ್ಖರು ಎಂದು ಕೂಡ ಅವರು ಹೇಳುತ್ತಿರಲಿಲ್ಲ. ನೀವು ಬಿಡಿಯಪ್ಪಾ ಅತಿ ಜಾಣರು ಎಂದು ಮಾತ್ರ ಅವರು ಮೆಲುದನಿಯಲ್ಲಿ ಹೇಳುತ್ತಿದ್ದರು. ಬ್ರಿಟಿಷರನ್ನು ಬ್ರಿಟಿಷರು ಎಂದು ನಂಬಲು, ಬಿಳಿಯರನ್ನು ಬಿಳಿಯರು ಎಂದು ಒಪ್ಪಲು ಅವರು ಒಲ್ಲೆ ಎಂದರು. ಅಯ್ಯೋ ಮಾರಾಯರೆ! ಅದು ಹಾಗಲ್ಲ. ನೀವು ಕೂಡ ನೀವು ತಿಳಿದಿರುವಂತಹ ನೀವಲ್ಲ. ನಿಮ್ಮೊಳಗಿರುವ ಮನುಷ್ಯನನ್ನು ನೋಡಿ ಎಂದು ನಿಮ್ಮನ್ನೇ ಅಂಗಲಾಚುತ್ತಿದ್ದರು. ಅಂಬೇಡ್ಕರ್ರಂಥವರನ್ನು ಒಪ್ಪುವುದು ಮಾತ್ರವಲ್ಲ, ಅವರನ್ನು, ಅಂಥವರನ್ನು ತಮ್ಮೊಳಗೇ ಸೇರಿಸಿಕೊಂಡುಬಿಡುತ್ತಿದ್ದರು. ರಾಮಕೃಷ್ಣ ಪರಮಹಂಸರಂತೂ ಇತರರ ಸ್ವಭಾವ, ಮನೋಧರ್ಮ, ಅಂಗಾಂಗಗಳ ವೈಶಿಷ್ಟ್ಯಗಳನ್ನು ತಮ್ಮ ದೇಹದೊಳಗೇ ಸೃಷ್ಟಿಸಿಕೊಂಡುಬಿಡುತ್ತಿದ್ದರು. ನಾವು ಇವರ ಬಗ್ಗೆಯೆಲ್ಲಾ ಓದಿದರೂ, ಇವರ ಬಗ್ಗೆ ಬರೆದರೂ, ಇವರಂತಾಗಲಿಲ್ಲ. ಏಕೆಂದರೆ, ಇವರ ವಿಚಾರಗಳಿಗೆ ಮಾತ್ರ ನಾವು ಸ್ಪಂದಿಸಿದೆವು. ಇವರ ಪ್ರೀತಿ ಮಾಡುವ ರೀತಿ, ನುಡಿಗಟ್ಟು, ಬದುಕಿದ ಕ್ರಮದಿಂದ ಏನೂ ಕಲಿಯಲಿಲ್ಲ. ಇನ್ನೂ ಹೆಚ್ಚು ಹೆಚ್ಚು “ಇತರೆ”ಯವರನ್ನು ಸೃಷ್ಟಿಸುತ್ತಾ ಹೋದೆವು. ನಾವು ಮನುಷ್ಯರಲ್ಲಿ ಮಾತ್ರ “ಇತರೆ”ಯವರನ್ನು ಸೃಷ್ಟಿಸಲಿಲ್ಲ. ನಮ್ಮಿಂದ ದೂರವಿಡಲಿಲ್ಲ. ಸಸ್ಯಲೋಕ, ಪ್ರಾಣಿಲೋಕವನ್ನೂ “ಇತರೆ”ಯವರಂತೆ ಕಂಡೆವು. ಈ ಸೃಷ್ಟಿಯಿರುವುದೇ ಮನುಷ್ಯರಿಗಾಗಿ ಮಾತ್ರ ಎಂದು ನಮಗೆ ನಾವೇ ಸುಳ್ಳು ಹೇಳಿಕೊಂಡೆವು. “ಇತರೆ” ಎಂಬ ಕಲ್ಪನೆಯಿಲ್ಲದೆ ನಾವು ನಾಳೆಯ ಮಟ್ಟಿಗೆ ಕೂಡ ಬದುಕಲಾರೆವು.
ಇಷ್ಟೆಲ್ಲ ಬರೆದ ಮೇಲೆ, ನಾನು ನನ್ನ ಬಗ್ಗೆ ಕೂಡ ಹೇಳಬೇಕು. ಇದನ್ನು ಓದುವ ನೀವು ಕೂಡ ನಿಮ್ಮ ಬಗ್ಗೆ ಹೇಳಿಕೊಳ್ಳಲೇ ಬೇಕು. ನನ್ನ ಆಯಸ್ಸಿನ ಹೆಚ್ಚು ಭಾಗ ಕಳೆದು ಹೋಗಿದೆ. ಅಥವಾ ನಾನೇ ಕಳೆದುಕೊಂಡಿದ್ದೇನೆ ಎನ್ನುವುದು ಹೆಚ್ಚು ನಿಜ. ಇದರಲ್ಲಿ ನಾನು ಬಹುಭಾಗವನ್ನು ಕಳೆದಿರುವುದೇ ನನಗಿಂತ “ಇತರ”ರು ಕೀಳೆಂದು, ಅಪಾಯಕಾರಿಯೆಂದು, ನಿರುಪಯುಕ್ತರೆಂದು ಭಾವಿಸಿ, ಭ್ರಮಿಸಿ, ನಂಬಿಕೊಂಡು. ನಾನು ಕಾಣುತ್ತಿದ್ದವರ “ಇತರೆ”ಯವರ ಸ್ವರೂಪದಲ್ಲಿ, ಬಣ್ಣದಲ್ಲಿ, ಆಕಾರದಲ್ಲಿ ಬದಲಾಗಿದೆ. ಇತರೆಯವರು ಎಂದು ನಾನು ಭಾವಿಸಿದ್ದವರು ಇಲ್ಲವೇ ಇಲ್ಲ – ಈ ಜಗತ್ತಿನಲ್ಲಿ. ಆದರೆ ನನ್ನ ಮನಸ್ಸಿನಲ್ಲಿ ಮಾತ್ರ ಇನ್ನೂ ಇವರೆಲ್ಲ “ಇತರೆ”ಯವರಾಗಿಯೇ ಉಳಿದುಬಿಟ್ಟಿದ್ದಾರೆ.
ಇಷ್ಟು ನನ್ನ ಮಾತು. ನಿಮ್ಮ ಮಾತನ್ನು, ನಿಮ್ಮ ಮನಸ್ಸನ್ನು ಹೇಳಿ; ನಂತರ ಪ್ರಬಂಧ ಬರೆಯುವುದು, “ಇತರ”ರ ಕೈಲಿ ಓದಿಸುವುದು ಮತ್ತು ಉಳಿದೆಲ್ಲ ಜಗತ್ತಿನ ವ್ಯಾಪಾರಗಳು.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
Very objective dissection of the existing practices. The bifurcation, division within humankind, living and non-living things is absolutely unnecessary. A society can be called truly progressive when there are no boundaries in mind and encourages open thinking. Prejudices and judgemental attitude creates division in society and much of the human energy is spent fighting them.
This article is very timely in view of the upcoming elections and constant effort put in by the aspirants in creating division in the minds of people in terms of caste, gender, age, class, geography etc.
The only solution being upbringing kids without this mindset.
Thanks for this detailed and incisive response,
I agree that the best solutionis to bring up childrenin a sensitive way.
Felt like discussing personally.If not inconvenient please call 8762300809.
ಸರ್,
ಒಳನೋಟಗಳು ಸ್ಪಷ್ಟವಾಗಿವೆ. ಈ ಲೇಖನದ ಆಶಯವನ್ನು ನಮ್ಮ ಪೀಳಿಗೆಯಲ್ಲಿಯೇ ಸಾಧಿಸಲಾಗುವ ಬಗ್ಗೆ ನನಗೆ ಅನುಮಾನ. ಬಹುಶಃ ನನ್ನ ಮನಸ್ಸು ಆಗಲೆ ಇತರೆಯವರನ್ನು ಸ್ಥಾಪಿಸಿಕೊಂಡಿದೆ.
ಆದರೆ ನಮ್ಮ ಮಕ್ಕಳ ಪೀಳಿಗೆಗಾದರೂ ಈ ಬೌಂಡರಿಗಳನ್ನ ಅಳಿಸುವ ಕೆಲಸ ಮಾಡಬೇಕು ಅಂತ ಹಂಬಲವಿದೆ. ಅದು ಎಷ್ಟು ಸಾಧ್ಯವಾಗಬಹುದೋ ಕಾಲವೇ ಹೇಳಬೇಕು.
“ಇತರೆ” ಮತ್ತು “ಅನ್ಯ” ಇದೇ ಮನುಕುಲದ ನಾಶ ಮತ್ತು ಪ್ರಗತಿ ಎರಡಕ್ಕೂ ಕಾರಣವಾದ ವೈಚಿತ್ರ್ಯವು ಈ ಲೇಖನವನ್ನು ಓದುತ್ತ ಓದುತ್ತ ನನ್ನ ಅರಿವಿಗೆ ಬಂತು.
ಬುದ್ಧ, ಗಾಂಧೀಜಿ, ಮತ್ತು ಪರಮಹಂಸರ ಕುರಿತು ನೀವು ಬರೆದ ವಾಕ್ಯಗಳು ಸತ್ಯಸ್ಯ ಸತ್ಯ. ಯಾವ ಮೌಲ್ಯವನ್ನು ಅವರು ಪ್ರತಿನಿಧಿಸಿದರೋ ಅದನ್ನ ಕಾಲೊರೆಸು ಮಾಡಿಕೊಂಡು ಅದರ ಮೇಲೆ ದೊಡ್ಡ ಪ್ರಾತಿನಿಧಿಕ ಭವನಗಳನ್ನು ಕಟ್ಟಿ ನಿಲ್ಲಿಸಿರುವ ಮತ್ತು ಆ ರೂಪಕಗಳೇ ನಿಜವಾದ ಮೌಲ್ಯಗಳು ಎಂದು ನಂಬಿಸುತ್ತಿರುವ ನಂಬುತ್ತಿರುವ ಸಮಾಜ ನಮ್ಮದು.
ಒಳ್ಳೆಯ ಲೇಖನಕ್ಕಾಗಿ ಧನ್ಯವಾದ.
Thanq so much.
ಈ ಸರಣಿಯಲ್ಲಿ ಬರುತ್ತಿರುವ ನಿಮ್ಮ ಎಲ್ಲಾ ಲೇಖನಗಳು ಒಂದಕ್ಕಿಂತ ಒಂದು ಚೆಂದ ಹಾಗೂ ಚಿಂತನೆಗೆ ಹಚ್ಚುವ ಲೇಖನಗಳು . ಇತರೆ ಜನ ಎಂಬ ಪದದ ಪ್ರಯೋಗವು ನೀವೆಂದಂತೆ ನಮ್ಮ ಹಳೆಯ ತಲೆಮಾರಿನಿಂದ ನಮಗೂ ದಾಟಿ ಬಂದಿದೆ ಅದನ್ನು ಪ್ರಯೋಗಿಸುವುದು ಹಾಗೂ ಅಸಮಾನತೆ ತೋರುವುದು ತಪ್ಪೇ ಅಲ್ಲವೇನೋ ಎನ್ನುವ ಭಾವ ಎಷ್ಟೋ ದಿನದವರೆಗೂ ನಮ್ಮಲ್ಲಿ ಮೂಡಿಬಿಟ್ಟಿತ್ತು . ಈಗಲೂ ಅದು ಸಮಾಜದಲ್ಲಿ ಪೂರ್ತಿಯಾಗಿ ನಿರ್ಮೂಲವಾಗಿದೆ ಎಂದು ಹೇಳಲಾಗದು.
ಅರ್ಥಗರ್ಬಿತ ಲೇಖನ.
thanks
ಇತರೆ ಭಾವನೆಯು ಮನುಕುಲವನ್ನು ವಿಭಾಗಿಸುವ ಅನಾರೋಗ್ಯಕರ ಪ್ರವೃತ್ತಿ. ನಮ್ಮ ದೇಶದಲ್ಲಿ ಇಯರೆ ಜಾತಿ ಆಧಸರಿತವಾಗಿದೆ ಕೋಮು ಆಧಸರಿತವಾಗಿದೆ Divisive force of mankind. ಇ್ರದರಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಎಬೇಕಿದೆ. ಇತರೆ .ಜನರು ನಮಗಿಂತ ಬೇರೆ ಭಿನ್ನ ಮತ್ತು ಸ್ವೀಕಾರಾರ್ಹರಲ್ಲ. ಈ ಭಾವನೆಯಿಂದ ದ್ವೇಷ ಮತ್ಸರ ತನ್ನಿಂದ ತಾನೆ ಉದ್ಭವವಾಗುತ್ತದೆ ಚಿಂತನಾರ್ಹ ಬರಹ.