ಆಸ್ಟ್ರೇಲಿಯಾದಲ್ಲಿ ಇನ್ನೂ ಜೀವಂತವಿರುವ ಸಮಷ್ಟಿಯನ್ನು ಅರ್ಥಮಾಡಿಕೊಳ್ಳುವುದು ಸುಲಭದ ಮಾತಲ್ಲ. ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ಹೊರದೇಶದವರಿಗೆ ಆಸ್ಟ್ರೇಲಿಯ ಅಂದರೆ ಆಂಗ್ಲೋ-ಆಸ್ಟ್ರೇಲಿಯಾ ಎಂಬ ಏಕತ್ವ ಮಾತ್ರ ಕಾಣುವುದು. ಎಲ್ಲವೂ ಆಂಗ್ಲೋ-ಯೂರೋಪಿಯನ್-ಅಮೇರಿಕನ್ ಆಗಿರುವ ಈ ದೇಶದಲ್ಲಿ ಈ ಮಣ್ಣಿನ ಮಕ್ಕಳಾದ ಅಬೊರಿಜಿನಲ್ ಜನರ ಸಂಸ್ಕೃತಿ ಮತ್ತು ತಿಳಿವಳಿಕೆಯ ಮಹತ್ವ ಬೆಳಕಿಗೆ ಬರಲು ಸಾಕಷ್ಟು ಅವಕಾಶವಾಗಿಲ್ಲ. ಇಂಥಾ ಸನ್ನಿವೇಶದಲ್ಲಿ ಮಹಿಳಾ ಕ್ರೀಡಾಪಟುವೊಬ್ಬರು ರೂಪುಗೊಳ್ಳುವುದು ಸರಳ ಮಾತಲ್ಲ.
ವಿನತೆ ಶರ್ಮಾ ಬರೆದ ‘ಆಸ್ಟ್ರೇಲಿಯ ಪತ್ರ’ ಇಲ್ಲಿದೆ.

 

ಇದು ಹುಡುಗಿಯರಿಗೆ ಸಲ್ಲುವ ವರ್ಷ ಎನ್ನುವುದರಲ್ಲಿ ಎರಡು ಮಾತಿಲ್ಲ, ಬಿಡಿ! ಕ್ರೀಡೆಗಳ ಮಟ್ಟಿಗೆ ಹೇಳುವುದಾದರೆ ಆಸ್ಟ್ರೇಲಿಯನ್ ಹುಡುಗಿಯರು ಸ್ಪರ್ಧೆಗಳಲ್ಲಿ ಗೆಲ್ಲುತ್ತಾ, ಮಿಂಚುತ್ತಾ ತಾರೆಗಳಾಗಿ ಮಿನುಗುತ್ತಿದ್ದಾರೆ. ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಸ್ಪರ್ಧೆಗಳ ಮೊದಲನೆ ವಾರದ ಕೊನೆಯಲ್ಲಿ ಆಸ್ಟ್ರೇಲಿಯಾ ಒಟ್ಟು ಮೂವತ್ತು ಪದಕಗಳನ್ನು ಗೆದ್ದು ಐದನೇ ಸ್ಥಾನದಲ್ಲಿತ್ತು. ಅವಲ್ಲಿ ಇದ್ದದ್ದು ೧೩ ಚಿನ್ನದ ಪದಕಗಳು. ಹದಿಮೂರರಲ್ಲಿ ಒಂಭತ್ತನ್ನು ತಮ್ಮದಾಗಿಸಿಕೊಂಡದ್ದು ಹುಡುಗಿಯರು. ಬಹುತೇಕ ಮಂದಿ ಈಜುಗಾರ್ತಿಯರು. ಚಿನ್ನಕ್ಕೆ ಮತ್ತಷ್ಟು ಮೆರುಗು ಕೊಟ್ಟದ್ದು ಎಮ್ಮಾ ಮಕಿಯನ್. ಇಪ್ಪತ್ತೇಳು ವರ್ಷದ ಎಮ್ಮಾ ಟೋಕಿಯೋ ಒಲಂಪಿಕ್ ಸ್ಪರ್ಧೆಗಳ ಮೊದಲನೇ ವಾರದಲ್ಲೇ ಬರೋಬ್ಬರಿ ಏಳು ಪದಕಗಳನ್ನು ಗೆದ್ದು, ಅಂತಹ ಸಾಧನೆಯನ್ನು ಮಾಡಿದ ಮೊತ್ತಮೊದಲ ಮಹಿಳೆ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ. ಇಲ್ಲಿಯವರೆಗೂ ೧೧ ಪದಕಗಳನ್ನು ಗಳಿಸಿ ಆಕೆ ಅತಿ ಹೆಚ್ಚು ಒಲಂಪಿಕ್ ಪದಕಗಳನ್ನು ಪಡೆದ ಆಸ್ಟ್ರೇಲಿಯನ್ ಎಂಬ ಖ್ಯಾತಿಗೆ ಕೂಡ ಪಾತ್ರರಾಗಿದ್ದಾರೆ. ಕ್ರೀಡೆಗಳಲ್ಲಿ ಹುಡುಗಿಯರ ಸಾಧನೆ ಅಪೂರ್ವವಾಗಿದೆ, ಗಗನಕ್ಕೇರಿದೆ. ಈ ಬಾರಿಯ ಒಲಂಪಿಕ್ಸ್ ನಿಜಕ್ಕೂ ಹುಡುಗಿಯರಿಗೆ ಸೇರಿದ್ದೆ ಹೌದು.

(ಎಮ್ಮಾ ಮಕಿಯನ್)

ಆಸ್ಟ್ರೇಲಿಯನ್ ಹುಡುಗಿಯರು ಬರೀ ಈಜುಗಾರ್ತಿಯರಷ್ಟೇ ಅಲ್ಲ. ಆ ಕಡೆ ನೋಡಿ, ನಮ್ಮ ಆಶ್ ಬಾರ್ಟಿ ಟೆನಿಸ್ ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಕಂಚಿನ ಪದಕವನ್ನು ಹಿಡಿದಿದ್ದಾರೆ. ಮರೆಯಬೇಡಿ, ಇದೆ ಹುಡುಗಿ ಹೋದ ತಿಂಗಳು ಮಹಿಳೆಯರ ವಿಂಬಲ್ಡನ್ ಟೆನಿಸ್ ಸಿಂಗಲ್ಸ್ ಪಂದ್ಯವನ್ನು ಗೆದ್ದು ವಿಶ್ವ ಚಾಂಪಿಯನ್ ಪ್ರಸಿದ್ಧಿಗೆ ಭಾಜನರಾಗಿದ್ದರು. ಆ ಸಾಧನೆಯನ್ನು ಮಾಡುವ ಮೂಲಕ ಈ ಇಪ್ಪತೈದು ವರ್ಷ ವಯಸ್ಸಿನ ಆಷ್ಲೀ ಬಾರ್ಟಿ ಆಸ್ಟ್ರೇಲಿಯಾದ ಅಬೊರಿಜಿನಲ್ ಸಮದಾಯಗಳ ಹುಡುಗಿಯರಲ್ಲಿ ಹೊಸ ಪುಳಕವನ್ನುಂಟು ಮಾಡಿದ್ದಾರೆ. ಕಾರಣ ಆಶ್ ಬಾರ್ಟಿ ತಾನೇ ಸ್ವತಃ ಆಸ್ಟ್ರೇಲಿಯನ್ ಅಬೊರಿಜಿನಲ್. ಆಕೆಯ ಯಶೋಗಾಥೆಯಲ್ಲಿ ಹಲವಾರು ರೋಚಕ ಉಪಕಥೆಗಳಿವೆ. ಮುಖ್ಯ ಎಳೆಯೆಂದರೆ ಅವರು ವಿಂಬಲ್ಡನ್ ಟೆನಿಸ್ ಸಿಂಗಲ್ಸ್ ಪಂದ್ಯವನ್ನು ಗೆದ್ದ ಎರಡನೇ ಆಸ್ಟ್ರೇಲಿಯನ್ ಮಹಿಳೆ. ಮೊದಲು ಗೆದ್ದಿದ್ದು ಯಾರು ಎನ್ನುವಿರಾ? ಆಕೆಯ ಹೆಸರು Evonne Goolagong Cawley. ಕನ್ನಡದಲ್ಲಿ ಅವರ ಹೆಸರನ್ನು ಬರೆಯುವುದು ಕಷ್ಟ.

ಈಗ ಆ ರೋಚಕ ವಿಷಯಗಳಿಗೆ ಬರೋಣ. ಒಂದು, ಟೆನಿಸ್ ಸಾಧಕಿ Evonne ಕೂಡ ಅಬೊರಿಜಿನಲ್. ಇನ್ನೊಂದು, Evonne ೧೯೮೦ನೇ ವರ್ಷದಲ್ಲಿ ವಿಂಬಲ್ಡನ್ ಟೆನಿಸ್ ಸಿಂಗಲ್ಸ್ ಪಂದ್ಯದ ಟ್ರೋಫಿಯನ್ನು ಹಿಡಿದೆತ್ತಿದ್ದು. ಅವರ ವಿಜಯದ ಐವತ್ತನೇ ವರ್ಷದ ದಶಕವಿದು. ಅವರು ಜಯಿಸಿದ ನಂತರ ಮತ್ತೊಬ್ಬ ಆಸ್ಟ್ರೇಲಿಯನ್ ಟೆನಿಸ್ ಆಟಗಾರ್ತಿ ಟೆನಿಸ್ ಕಾಶಿಯೆಂದೇ ಹೆಸರಾದ ವಿಂಬಲ್ಡನ್ನಿನಲ್ಲಿ ಸಿಂಗಲ್ಸ್ ಪಂದ್ಯವನ್ನು ಜಯಿಸಿರಲಿಲ್ಲ. ಹಾಗಾಗಿ ವಿಜಯಿಗಳಾದ ಇಬ್ಬರೂ ಮಹಿಳೆಯರು ಆಸ್ಟ್ರೇಲಿಯನ್ ಅಬೊರಿಜಿನಲ್ ಆಗಿರುವುದು ಬಹು ಅಪರೂಪದ ಮತ್ತು ಅಪರಿಮಿತ ವಿಶೇಷದ ಸಂಗತಿ.

(ಆಶ್ ಬಾರ್ಟಿ)

ಆಶ್ ಮತ್ತು Evonne ಇಬ್ಬರೂ ಮನಃಪೂರ್ವಕವಾಗಿ ತಮ್ಮ ಅಬೊರಿಜಿನಲ್ ಅಸ್ಮಿತೆಯನ್ನು ಅಪ್ಪಿಕೊಂಡು, ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ಎತ್ತಿ ಹಿಡಿದಿದ್ದಾರೆ. ಆಶ್ ಬಾರ್ಟಿ ತಾನು ಚಿಕ್ಕಂದಿನಿಂದಲೂ Evonne ರನ್ನು ಅಭಿಮಾನವಿಟ್ಟು ಗಮನಿಸುತ್ತಾ, ಅವರನ್ನು ಆದರ್ಶವಾಗಿ ಇಟ್ಟುಕೊಂಡು ಟೆನಿಸ್ ಕಲಿತದ್ದನ್ನು ಸ್ಮರಿಸಿದ್ದಾರೆ. Evonne ರ ಜಯದ ಈ ಐದನೇ ದಶಕದಲ್ಲಿ ಒಬ್ಬ ಅಬೊರಿಜಿನಲ್ ಆಗಿ ತಾನೂ ಕೂಡ ವಿಂಬಲ್ಡನ್ ಟ್ರೋಫಿ ಗಳಿಸಿದ್ದು ತನ್ನ ಪುಣ್ಯ, ತನ್ನ ಸಮುದಾಯಕ್ಕೆ ಮತ್ತು ಕುಲಗಳ ಅಸ್ಮಿತೆಗೆ ಒದಗಿದ ಭಾಗ್ಯವೆಂದಿದ್ದಾರೆ.

ಮೂರನೇ ವಿಶೇಷ ಎಂದರೆ, ಆಶ್ ಬಾರ್ಟಿ ವಿಂಬಲ್ಡನ್ ಟ್ರೋಫಿ ಗಳಿಸಿದ್ದು NAIDOC ವಾರಾಂತ್ಯದಲ್ಲಿ. ಜುಲೈ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಮಾತ್ರ ನಡೆಯುವ NAIDOC ವಾರದ ವಿಶೇಷತೆಯ ಬಗ್ಗೆ ನಾನು ಈ ಹಿಂದೆ ಬರೆದಿದ್ದೆ.

(Evonne Goolagong Cawley)

ಮರೆಯಬೇಡಿ, ಇದೆ ಹುಡುಗಿ ಹೋದ ತಿಂಗಳು ಮಹಿಳೆಯರ ವಿಂಬಲ್ಡನ್ ಟೆನಿಸ್ ಸಿಂಗಲ್ಸ್ ಪಂದ್ಯವನ್ನು ಗೆದ್ದು ವಿಶ್ವ ಚಾಂಪಿಯನ್ ಪ್ರಸಿದ್ಧಿಗೆ ಭಾಜನರಾಗಿದ್ದರು.

ಅಬೊರಿಜಿನಲ್ ಮತ್ತು ದ್ವೀಪವಾಸಿಗಳ ಅಸ್ಮಿತೆಯನ್ನು ಗೌರವಿಸುವ ಹಬ್ಬಗಳ ವಾರವಿದು. ಈ ವರ್ಷದ ಸಂದೇಶ ‘ಹೀಲ್ ಕಂಟ್ರಿ!’ ಎನ್ನುವುದಿತ್ತು. ಆಶ್ ಬಾರ್ಟಿಯ ವಿಂಬಲ್ಡನ್ ವಿಜಯ ಅದನ್ನು ಚಾಚೂತಪ್ಪದೆ ಪಾಲಿಸಿದಂತಿತ್ತು. ಟೆನಿಸ್ ಕಾಶಿಯಲ್ಲಿ ನೆಲೆಸಿದ್ದ ಸುದೀರ್ಘ ಆಸ್ಟ್ರೇಲಿಯನ್ ಮೌನವನ್ನು ಅವರು ಮುರಿದು, ಹೆಮ್ಮೆಯಿಂದ ತಮ್ಮ ಅಬೊರಿಜಿನಲ್ ಅಸ್ಮಿತೆಯನ್ನು ಹಿಡಿದೆತ್ತಿ ಎಲ್ಲರಿಗೂ ಬೇಕಿರುವ, ಸಲ್ಲುವ ಕುಶಲ/ಕ್ಷೇಮ ಸಂದೇಶವನ್ನು ಜಗತ್ತಿಗೇ ಹರಡಿಬಿಟ್ಟರು. ಅದು ಒಬ್ಬ ಅಬೊರಿಜಿನಲ್ ಯುವತಿಯ ಸಾಧನೆ ಮಾತ್ರವಾಗಿರಲಿಲ್ಲ; ಒಂದು ದೇಶದ ಮೂಲನಿವಾಸಿಗಳ ತಳಸಮುದಾಯದ ಸಂದೇಶದಲ್ಲಿ ಅಡಕವಾಗಿರುವ ಆಶಯ ಹೇಗೆ ಇಡೀ ಪ್ರಪಂಚದ ಎಲ್ಲಾ ಸಮಾಜಗಳ ಆಶಯವನ್ನು ಪ್ರತಿಬಿಂಬಿಸುತ್ತದೆ ಎನ್ನುವ ಸಮಷ್ಟಿ ಸಂಕೇತವಾಗಿತ್ತು.

ನೋಡಿ, ಆಸ್ಟ್ರೇಲಿಯಾ ಮಟ್ಟಿಗೆ ಹೇಳುವುದಾದರೆ, ಈ ನೆಲದಲ್ಲಿ ಇನ್ನೂ ಜೀವಂತವಿರುವ ಆ ಸಮಷ್ಟಿಯನ್ನು ಅರ್ಥಮಾಡಿಕೊಳ್ಳುವುದು ಸುಲಭದ ಮಾತಲ್ಲ. ಏಕೆಂದರೆ, ನಾವು ಬದುಕುತ್ತಿರುವ ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ಹೊರದೇಶದವರಿಗೆ ಆಸ್ಟ್ರೇಲಿಯ ಅಂದರೆ ಆಂಗ್ಲೋ-ಆಸ್ಟ್ರೇಲಿಯಾ ಎಂಬ ಏಕತ್ವ ಮಾತ್ರ ಕಾಣುವುದು ಮತ್ತು ಕೇಳಿಸುವುದು. ಎಲ್ಲವೂ ಆಂಗ್ಲೋ-ಯೂರೋಪಿಯನ್-ಅಮೇರಿಕನ್ ಆಗಿರುವ ಈ ದೇಶದಲ್ಲಿ ಈ ಮಣ್ಣಿನ ಮಕ್ಕಳಾದ ಅಬೊರಿಜಿನಲ್ ಜನರ ಸಂಗೀತ, ಕಲೆ, ನೃತ್ಯ, ಕಥೆಗಳು, ಅವರಿಗಿರುವ ಅಗಾಧ ಪ್ರಕೃತಿ ಜ್ಞಾನ, ಅರಿವು, ತಿಳುವಳಿಕೆ ಮತ್ತು ಜೀವನದೃಷ್ಟಿಗಳು ಬೆಳಕಿಗೆ ಬರಲು ಇರುವ ಆಸ್ಪದ ಇಂದಿಗೂ ಬಹಳ ಕಡಿಮೆ. ಇಂಥಾ ಸನ್ನಿವೇಶದಲ್ಲಿ, ಒಬ್ಬ ಆಶ್ ಬಾರ್ಟಿ ಕ್ರೀಡಾಪಟುವಾಗಿ ರೂಪುಗೊಂಡು, ಅಂತರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಕ್ರೀಡಾತಾರೆಯಾಗಿ ರಾರಾಜಿಸುವುದು ಅಪರೂಪದಲ್ಲಿ ಅಪರೂಪ! ಒಲಂಪಿಕ್ಸ್‌ನಲ್ಲೇ ಗಮನಿಸಿದರೆ, ಹತ್ತು ಬಿಳಿ ಹುಡುಗಿಯರಿಗೆ ಒಬ್ಬ ಅಬೊರಿಜಿನಲ್ ಹುಡುಗಿಯಿದ್ದಾಳೆ.

ವಿಪರ್ಯಾಸವೆಂದರೆ ಇದೆ ದೇಶದಲ್ಲಿ ಅಂತಹ ಅನೇಕ ಮಿನುಗುತಾರೆಯರಿದ್ದರೂ ಅವರು ಅಬೊರಿಜಿನಲ್ ಎಂಬ ಕಾರಣದಿಂದ ತಮಗೆ ಎದುರಾಗುವ ಅನೇಕ ಸವಾಲುಗಳನ್ನು ಎದುರಿಸಿ ಅವನ್ನು ಜಯಿಸಿ ನಂತರ ತಮ್ಮ ಕ್ರೀಡೆಯಲ್ಲಿ ವಿಜಯಿಗಳಾಗಬೇಕಾದ ಬಹು ಒತ್ತಡದ ಜೀವನವಿದೆ. ಅವೆಲ್ಲಾ ಒತ್ತಡಗಳನ್ನು ಸಮರ್ಪಕವಾಗಿ, ಸಾಮರ್ಥ್ಯದಿಂದ ನಿರ್ವಹಿಸುವುದು ಬಹು ಕಷ್ಟದ ಸಂಗತಿ. ಆ ನಿರ್ವಹಣೆಯಲ್ಲಿ ಬಲಿಪಶುಗಳಾಗುವ ಮಿನುಗುತಾರೆಗಳು ನಮ್ಮ ನಡುವೆಯೇ ಬದುಕುತ್ತಿದ್ದಾರೆ.

ಒಂದು ಮೇರು ಉದಾಹರಣೆಯೆಂದರೆ ಆಸ್ಟ್ರೇಲಿಯನ್ ಅಬೊರಿಜಿನಲ್ ಫುಟ್ಬಾಲ್ ಆಟಗಾರ ಆಡಮ್ ಗೂಡ್ಸ್. ‘ದಿ ಆಸ್ಟ್ರೇಲಿಯನ್ ಡ್ರೀಮ್’ ಎಂಬ ಸಿನೆಮಾ ಆಡಮ್ ಹೇಗೆ ತನ್ನ ನಾಡಿನಲ್ಲೇ, ತಾನು ಅತ್ಯಂತ ಪ್ರೀತಿಸುವ ಫುಟ್ಬಾಲ್ ಆಟವನ್ನು ಆಡುವಾಗಲೇ ಜನಾಂಗೀಯ ಭೇದಕ್ಕೆ, ದಳ್ಳುರಿಗೆ ಬಲಿಯಾದ ದುರಂತದ ವಿವರಣೆ ಕೊಡುತ್ತದೆ. ಒಬ್ಬ ಅಬೊರಿಜಿನಲ್ ತಾರೆ ಸೃಷ್ಟಿಯ ಸುತ್ತ ನಡೆಯುವ ಕಾರುಬಾರುಗಳನ್ನು ಗಮನಿಸಿದಾಗ ಮಾನವರ ಸಂಕುಚಿತ ಮನೋಭಾವನೆಗಳ ಬಗ್ಗೆ ಜಿಗುಪ್ಸೆಯಾಗುತ್ತದೆ.

ಪ್ರಿಯ ಓದುಗರೆ, ನಾನು ಆಸ್ಟ್ರೇಲಿಯಾಗೆ ಬರುವ ಮುನ್ನ ಈ ದೇಶವು ಒಂದು ಮುಂದುವರೆದ, ಸಮೃದ್ಧಿ ಪಡೆದ ಪಾಶ್ಚಾತ್ಯ ದೇಶವೆಂದೂ, ಇಲ್ಲಿನ ಮೂಲನಿವಾಸಿಗಳು ಇನ್ನೂ ಬದುಕಿ ಉಳಿದಿದ್ದಾರೆ ಎಂದು ಓದಿದ್ದಷ್ಟೇ ತಿಳಿದಿತ್ತು. ನಾನು ನನ್ನ ಪಿಎಚ್.ಡಿ ಅಧ್ಯಯನಕ್ಕೆಂದು ಇಲ್ಲಿನ ವಿಶ್ವವಿದ್ಯಾನಿಲಯಗಳನ್ನು ಸಂಪರ್ಕಿಸಿದಾಗ, ಅವರಿಂದ ಇಲ್ಲಿನ ಮೂಲನಿವಾಸಿಗಳ ಕುರಿತು ಅಧ್ಯಯನ ಮಾಡಬಹುದೆಂಬ ಸಲಹೆಯೂ ಬಂದಿತ್ತು. ಆಗ ನನಗೆ ಏನೇನೂ ಅರಿವಿರಲಿಲ್ಲದ ವಿಷಯದಲ್ಲಿ ನಾನು ಅಧ್ಯಯನ ಕೈಗೊಳ್ಳಲು ಮನಸ್ಸು ಒಪ್ಪಲಿಲ್ಲ. ಮಿಕ್ಕಂತೆ ನನಗೆ ಈ ದೇಶದ ಕರಾಳ ಇತಿಹಾಸದ ಬಗ್ಗೆ ಏನೇನೂ ತಿಳಿದಿರಲಿಲ್ಲ.

(ಆಡಮ್ ಗೂಡ್ಸ್)

ಕಳೆದೆರಡು ದಶಕಗಳಲ್ಲಿ ನಿಧಾನವಾಗಿ ಆಸ್ಟ್ರೇಲಿಯಾ ಎಂದರೆ ಮೂರು ವಿಭಿನ್ನ ನೆಲೆಗಳುಳ್ಳ ಮಾನವ ಸಮಾಜಗಳ ಸಂಗಮ ಎನ್ನುವುದು ಸ್ಪಷ್ಟವಾಗಿದೆ. ವಸಾಹತುಶಾಹಿಗಳಾಗಿ ಬಂದ ಆಂಗ್ಲರು (ಈಗ ಇವರು ಆಂಗ್ಲೋ-ಆಸ್ಟ್ರೇಲಿಯನ್ನರು), ಇದೆ ನೆಲದಲ್ಲಿ ಅನೇಕ ಸಾವಿರ ವರ್ಷಗಳು ಬದುಕಿ ಬಾಳುತ್ತ ಬಂದು ಬಹುಜನ/ಬಹುತ್ವ ಸಂಸ್ಕೃತಿಗಳನ್ನು ರೂಢಿಸಿಕೊಂಡಿದ್ದ ಅಬೊರಿಜಿನಲ್ ಜನಸಮಾಜಗಳು, ಮತ್ತು ಆಂಗ್ಲರು ಬರುವ ಮುನ್ನ ಮತ್ತು ನಂತರ ಈ ದೇಶಕ್ಕೆ ಬಂದು ಸೇರಿಕೊಂಡ ಬೇರೆಲ್ಲಾ ದೇಶಗಳವರು. ಅಂದರೆ, ಯುರೋಪಿಯನ್ನರಿಗೂ ಮೊದಲೇ ಬಂದು ನೆಲೆಸಿದ್ದ ಚೀನೀಯರು, ಭಾರತೀಯರು, ನಂತರ ಬಂದ ಆಂಗ್ಲೋ-ಯುರೋಪಿಯನ್ನರು, ಅವರು ಬರಮಾಡಿಕೊಂಡ ಇತರೆ ಯುರೋಪಿಯನ್ನರು, ತದನಂತರ ಹೊಸ ಜೀವನವನ್ನು, ಅವಕಾಶಗಳನ್ನು ಅರಸಿಕೊಂಡು ಬಂದ ಬೇರೆಲ್ಲಾ ದೇಶಗಳವರು.

ಈ ಮೂರೂ ಬಹುವಿಭಿನ್ನ ಬಹುಸಂಸ್ಕೃತಿಗಳ ಬಹುತ್ವ ಜನಸಮಾಜಗಳ ಸಂಗಮವೇ ಇಂದಿನ ಆಸ್ಟ್ರೇಲಿಯಾ ಎನ್ನುವುದು ನಮಗೆ ಮತ್ತಷ್ಟು ಕಾಣಿಸುವುದು ಈ ಬಾರಿಯ ಟೋಕಿಯೋ ಒಲಂಪಿಕ್ಸ್ ಸ್ಪರ್ಧೆಗಳಲ್ಲಿ. ಅಲ್ಲಿ ನಮ್ಮ ಆಂಗ್ಲೋ-ಆಸ್ಟ್ರೇಲಿಯನ್ ಈಜುಗಾರ್ತಿಯರಿದ್ದಾರೆ, ಅಬೊರಿಜಿನಲ್ ಟೆನಿಸ್ ತಾರೆ ಆಶ್ ಬಾರ್ಟಿ ಇದ್ದಾಳೆ, ಮತ್ತು ಸುಡಾನ್ ದೇಶದಿಂದ ನಿರಾಶ್ರಿತನಾಗಿ ಬಂದು ಆಸ್ಟ್ರೇಲಿಯಾದಲ್ಲಿ ನೆಲೆಸಿದ ಪೀಟರ್ ಬೋಲ್ ಒಲಂಪಿಕ್ಸ್ ಓಟಗಾರನಾಗಿ ಇದ್ದಾನೆ. ಇದು ನಿಜವಾಗಿಯೂ ಈಗಿನ multicultural ಆಸ್ಟ್ರೇಲಿಯಾವನ್ನು ಪ್ರತಿಬಿಂಬಿಸುತ್ತದೆ. ಮುಂದಿನ ವರ್ಷಗಳಲ್ಲಿ ಆಸ್ಟ್ರೇಲಿಯಾ ದೇಶವು ಇಂತಹ ಬಹುತ್ವಗಳನ್ನು ಗುರುತಿಸುವ, ಗೌರವಿಸುವ ಮತ್ತು ಅವನ್ನು ಹೆಮ್ಮೆಯಿಂದ ಒಂದು ಉತ್ತಮ ಉದಾಹರಣೆಯನ್ನಾಗಿ ಇತರರಿಗೆ ತೋರಿಸುವ ‘ಬಹುತ್ವದಲ್ಲಿ ಏಕತೆಯಿರುವ’ ರಾಷ್ಟ್ರವಾಗಲಿ ಎಂದು ಹಾರೈಸೋಣ. ಆಗಲಾದರೂ ಈ ನೆಲದಲ್ಲಿ ಬೇರೂರಿರುವ ಜನಾಂಗೀಯ ಭೇದವು ಕಡಿಮೆಯಾಗಬಹುದು. ಒಲಂಪಿಕ್ಸ್ ಕ್ರೀಡೆಗಳ ಮೌಲ್ಯಗಳು ಸಾಮಾನ್ಯ ಜನತೆಯಲ್ಲೂ ಹರಡಬಹುದು.