Advertisement
ಇಲ್ಲಿ ಎಲ್ಲ ಥರದವರೂ ಇದ್ದಾರೆ…: ಎಸ್ ನಾಗಶ್ರೀ ಅಜಯ್ ಅಂಕಣ

ಇಲ್ಲಿ ಎಲ್ಲ ಥರದವರೂ ಇದ್ದಾರೆ…: ಎಸ್ ನಾಗಶ್ರೀ ಅಜಯ್ ಅಂಕಣ

ಇದು ಸರಿತಪ್ಪಿನ ತಕ್ಕಡಿಯಲ್ಲಿ ತೂಗಲಾರದ, ತೂಗಬಾರದ ವಿಷಯ. ವಿಧಿ ಒಬ್ಬೊಬ್ಬರ ಪಾಲಿಗೆ ನೀಡಿದ ಷಡ್ರಸಗಳ ಭೋಜನ. ಅವರುಂಡ ಸಿಹಿ-ಕಹಿ-ಹುಳಿ- ಒಗರು ಅವರಿಗಷ್ಟೇ ವೇದ್ಯ. ಬಹಳಷ್ಟು ಸಲ ನಾವು ದೂರ ನಿಂತು ಕಂಡಿದ್ದರ ಬಗ್ಗೆ, ಅನಿಸಿದ್ದರ ಬಗ್ಗೆ ಆತ್ಮವಿಶ್ವಾಸದಿಂದ ನಿರ್ಣಯಗಳನ್ನು ಹೊರಡಿಸುತ್ತೇವೆ. ದುಡ್ಡು ದುಡ್ಡು ಅಂತ ಸಾಯ್ತಾನೆ‌. ಹೋಗುವಾಗ ಹೊತ್ಕೊಂಡು ಹೋಗುವ ಹಾಗಿದ್ದರೆ ಇನ್ನು ಹೇಗಾಡ್ತಿದ್ದನೋ ಅಂದವರೆ ಚಿಲ್ಲರೆಗಾಗಿ ತಳ್ಳುಗಾಡಿಯವನ ಬಳಿ ಗುದ್ದಾಡುತ್ತಾರೆ. ಮಕ್ಕಳಿಗೆ ಸಂಸ್ಕಾರ ಕಲಿಸಿಲ್ಲ ಎಂದ ಮಹಾಮಾತೆಯ ಮಕ್ಕಳು ಬಂದವರೆದುರೇ ಕಾಲುಚಾಚಿ ಕೂತು, ಮೂತಿ ತಿರುವುತ್ತಾರೆ. ಏಕೆಂದರೆ ನಾವು ಮನುಷ್ಯ ಮಾತ್ರರು. ತಪ್ಪುಗಳು ಘಟಿಸುತ್ತಲೇ ಇರುತ್ತವೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

“ನಿನಗೆ ಈಗ ಗೊತ್ತಾಗಲ್ಲ.‌ ಒಳ್ಳೆಯ ಸಂಪಾದನೆ, ರಮಿಸುವ ಗಂಡ, ಮುದ್ದಾದ ನಾಯಿಮರಿ, ಹೂಬಿಟ್ಟು ನಳನಳಿಸುವ ತೋಟ, ಅಯ್ಯೋ ಎನ್ನುವ ಅಪ್ಪ ಅಮ್ಮ… ಇವೆಲ್ಲ ಹೀಗೇ ಇರಲ್ಲ. ಮಧ್ಯವಯಸ್ಸಿನಲ್ಲಿ ಎಲ್ಲರೂ ತಮ್ಮ ಮಕ್ಕಳ ಮುಂಜಿ, ಮದುವೆ, ಮೊಮ್ಮಕ್ಕಳ ನಾಮಕರಣ ಅಂತ ಓಡಾಡುವಾಗ ಬಿಕೋ ಅನ್ನಿಸುತ್ತೆ. ನಮಗೊಬ್ಬ ಮಗನೋ ಮಗಳೋ ಇದ್ದಿದ್ದರೆ ಚೆನ್ನಾಗಿತ್ತು. ಸಂಭ್ರಮಿಸಲು, ಕಷ್ಟಸುಖಕ್ಕೆ ಜೊತೆಯಾಗಲು, ಮನೆತನದ ಪರಂಪರೆ ಮುಂದುವರೆಸಲು ಸ್ವಂತ ಕುಡಿಯೊಂದು ಬೇಕು ಅನ್ನಿಸುತ್ತೆ. ವಯಸ್ಸು ಇದ್ದಾಗಲೇ ಮಗು ಮಾಡ್ಕೊಂಬಿಡಿ.” ಎಂದು ಅರವತ್ತರ ಆಕೆ ಪಕ್ಕದ ಮನೆಯ ಹುಡುಗಿಗೆ ಉಪದೇಶ ಕೊಡುತ್ತಿದ್ದರು. ಮುಂದೆಂದೋ ಕಷ್ಟಸುಖಕ್ಕೆ ಬೇಕಾಗುತ್ತೆ ಅಂತ ಹೂಡಿಕೆಯ ರೀತಿ ಮಕ್ಕಳನ್ನು ಕಾಣುವ ಚಿಂತನೆಯೇ ಕ್ರೂರವಲ್ಲವೆ? ಈಗ ನಿಮಗಾದರೂ ಮಗ/ಮಗಳು, ಸೊಸೆ/ಅಳಿಯ ಮಾಡಿದ್ದು ಅಷ್ಟರಲ್ಲೇ ಇಲ್ಲವೆ? ಎಂದು ವಾದಿಸುವ ಮನಸ್ಸಾದರೂ ಆಕೆ ಕೆಲಸದ ನೆಪ ಹೇಳಿ ಜಾರಿಕೊಂಡಳು.

ಬಸುರಿ ಎಂದರೆ ಮನೆಗೆ ಕರೆದು ಊಟವಿಕ್ಕಿ, ಉಡಿ ತುಂಬುವ, ಬಾಣಂತನಕ್ಕೆ ಬೆಳ್ಳುಳ್ಳಿ ಚಟ್ನಿಪುಡಿ, ಸೌಭಾಗ್ಯ ಶುಂಠಿ ಲೇಹ್ಯ ಮಾಡಿ ಕಳಿಸುವ, ಹಸಿಗೂಸಿನ ಆರೈಕೆಗೆ ಕರೆಯದೆಯೂ ಬಂದು ಜೊತೆಯಾಗುವ, ಆಸ್ಪತ್ರೆಗೆ ಸೇರಿದ್ದಾರೆಂದರೆ ಫ್ಲಾಸ್ಕಿನಲ್ಲಿ ಕಾಫಿ, ಬ್ರೆಡ್ಡು, ಮೂಸಂಬಿ ಹಿಡಿದು ಓಡಿಬರುವ, ರಾತ್ರಿಪಾಳಿಗೆ ನಾನಿದ್ದೇನೆಂದು ಧೈರ್ಯಕೊಡುವ, ಮನೆಯ ಯಾವುದೇ ಸಮಾರಂಭಕ್ಕೂ ನಾಲ್ಕು ದಿನ ಮುಂಚಿತವಾಗಿ ಬಂದು ಒಪ್ಪ ಮಾಡುವ, ಸೆರಗು ಸೊಂಟಕ್ಕೆ ಸಿಕ್ಕಿಸಿದರೆ ನಮ್ಮನೆಯ ಬಚ್ಚಲು ತೊಳೆಯಲೂ ಹಿಂಜರಿಯದ ಜನರು ಒಂದು ಕಾಲಕ್ಕೆ ಆಗಿ ಹೋಗಿದ್ದಾರೆ. ಈಗೇನಿದ್ದರೂ ನಮ್ಮದು ನಾವು ನೋಡ್ಕೊಂಡ್ರೆ ಸಾಕಾಗಿದೆ ಕಾಲ. ನೆಂಟರಿರಲಿ… ಮನೆಯಲ್ಲಿರುವ ಮೂರು ಜನರೇ ಮೂರು ಬಾಗಿಲಿನ ಹಿಂದುಳಿದು, ನಿನ್ನ ನೋವು ನಿನ್ನದು. ನಿನಗಾಗಿ ನಮಗೆ ಸಮಯವಿಲ್ಲ ಎನ್ನುವ ಕಾಲ. ಕೇಳುವ ಕಿವಿಗಾಗಿ ಕೌನ್ಸಿಲರ್‌ಗಳನ್ನು ಹುಡುಕಿ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿಸಿರುವ ದಿನಮಾನ.

ಹಾಗಾಗಿ ಕಷ್ಟವೋ ಸುಖವೋ ಒಟ್ಟು ಕುಟುಂಬವಾಗಿ ಸನ್ನಿವೇಶಗಳನ್ನು ಎದುರಿಸುವ ವ್ಯವಸ್ಥೆ ದಶಕಗಳ ಹಿಂದೆಯೇ ಶಿಥಿಲಗೊಂಡಿದೆ. ಇಂದು ವ್ಯಕ್ತಿಕೇಂದ್ರಿತ ಗುರಿಗೆ ಆದ್ಯತೆ. ಈ ಹೊತ್ತಿನ ಸಮಯ, ಅವಕಾಶ, ಮನ್ನಣೆಗಳನ್ನು ಕಳೆದುಕೊಂಡರೆ ಮತ್ತೆಂದೂ ಮರಳಿ ಸಿಗದೆಂಬ ಧಾವಂತದ ಓಟ. ಗೆಳತಿಯೊಬ್ಬಳ ಅತ್ತೆ, ಮಾವ ಒಟ್ಟೊಟ್ಟಿಗೆ ಗಂಭೀರ ಖಾಯಿಲೆಗೆ ತುತ್ತಾಗಿದ್ದರು. ಅಡುಗೆ, ಮನೆಕೆಲಸ, ರೋಗಿಗಳ ಆರೈಕೆಗೆ ಸಹಾಯಕರನ್ನು ನೇಮಿಸಿ ಗಂಡ-ಹೆಂಡತಿ ತಮ್ಮಷ್ಟಕ್ಕೆ ಉದ್ಯೋಗ ಮುಂದುವರೆಸಿದ್ದರು. “ನಿಮ್ಮ ಅಪ್ಪ-ಅಮ್ಮನ ಕಾಳಜಿ ನಿಮ್ಮ ಕರ್ತವ್ಯ. ಕೆಲಸ ಬಿಟ್ಟು ಅವರ ಚಾಕರಿ ಮಾಡಿದರೆ ಯಾವ ಪ್ರಶಸ್ತಿಯೂ ಸಿಕ್ಕಲ್ಲ. ಸಹಾಯಕರ ಸಂಬಳ, ಆಸ್ಪತ್ರೆ ಖರ್ಚು ಇವಕ್ಕೆಲ್ಲ ನಾನು ಕಾಸು ಬಿಚ್ಚಲ್ಲ. ಮಧ್ಯೆ ಎರಡು ವರ್ಷ ಕೆಲಸ ಬಿಟ್ಟು ಮನೆಯಲ್ಲಿದ್ದಾಗ ಸಿಕ್ಕ ಮರ್ಯಾದೆ ನೆನಪಿದೆ. ಈಗೀಗ ಟ್ರ್ಯಾಕಿಗೆ ಬರ್ತಿರೋ ಕರಿಯರ್ ನಾನಂತೂ ಹಾಳು ಮಾಡಿಕೊಳ್ಳಲು ಸಿದ್ಧವಿಲ್ಲ‌. ನಿಮ್ ಹಣೆಬರಹ ಇದ್ದಂಗೆ ನಡೆಸಿಕೊಂಡು ಹೋಗಿ.” ಎಂದಿದ್ದಳು.

ಮತ್ತೊಬ್ಬ ಗೆಳತಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿದ್ದಾಗ ಆಕೆಯ ಗಂಡ, ಕೈಗೆ ಬಂದ ಮಕ್ಕಳು ಫೋನಿನಲ್ಲೇ ಉಪಚಾರ ಮುಗಿಸಿ ಸುಮ್ಮನಾದರು. ಮನೆಯಿಂದ ದೂರ, ಆಸ್ಪತ್ರೆ ಸೋಂಕು, ಕಾಲೇಜು ಪಾಠಗಳು, ಸ್ಪೋರ್ಟ್ಸ್ ಕ್ಲಾಸ್, ತೀರ ಮುಖ್ಯವಾದ ಆಫೀಸ್ ಕೆಲಸ ಎಂಬ ನೆಪಗಳು ಸಿದ್ಧವಿತ್ತು.

ಹಾಗಿದ್ದರೆ ನೂರಕ್ಕೆ ನೂರು ಅಂತಹವರೇ ಇದ್ದಾರ?

ಕ್ಯಾನ್ಸರ್ ಕೊನೆಯ ಹಂತದಲ್ಲಿ ಹಾಸಿಗೆ ಹಿಡಿದು ಮಲಗಿದ್ದ ವ್ಯಕ್ತಿಯನ್ನು ಮನೆಯಲ್ಲಿದ್ದ ಮೂರು ಜನ ಪಾಳಿ ಪ್ರಕಾರ ಕಾದು, ಉಪಚರಿಸಿ, ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡವರೂ ಇದ್ದಾರೆ. ತಂದೆ ತಾಯಿಗಾಗಿ ವಿದೇಶದಲ್ಲಿದ್ದ ಉದ್ಯೋಗ ತ್ಯಜಿಸಿದ ಮಕ್ಕಳು, ಹೆಂಡತಿಯ ವಿದ್ಯಾಭ್ಯಾಸಕ್ಕೆ ಬೆಂಗಾವಲಾಗಿ ನಿಂತ ಗಂಡ, ಹೆಣ್ಣು ಕೊಟ್ಟ ಅತ್ತೆಯನ್ನು ತಾಯಿಯಂತೆ ಕಾಣುವ ಅಳಿಯ, ಸೊಸೆಯಲ್ಲ ನನ್ನ ತಾಯಿ ಎನಿಸಿಕೊಂಡ ಹುಡುಗಿ, ಚಿಕ್ಕವಯಸ್ಸಿಗೆ ಮನೆಯ ಜವಾಬ್ದಾರಿ ಹೆಗಲೇರಿಸಿಕೊಂಡ ಮಕ್ಕಳು, ತಮ್ಮ ಪುಟ್ಟ ಕೈಯಲ್ಲಿ ಅಜ್ಜಿ ತಾತನ ಮಾತ್ರೆ ಹಿಡಿದು ತರುವ ಮೊಮ್ಮಕ್ಕಳು, ಹಣಕ್ಕಿಂತ ನೆಮ್ಮದಿ ಮುಖ್ಯ ಎನ್ನುವ ಹಿರಿಯರು, ಸದಾ ನಿನ್ನೊಂದಿಗೆ ಎನ್ನುವ ಸ್ನೇಹಿತರು… ಇಂತಹವರೂ ಇದ್ದಾರೆ.

ಇದು ಸರಿತಪ್ಪಿನ ತಕ್ಕಡಿಯಲ್ಲಿ ತೂಗಲಾರದ, ತೂಗಬಾರದ ವಿಷಯ. ವಿಧಿ ಒಬ್ಬೊಬ್ಬರ ಪಾಲಿಗೆ ನೀಡಿದ ಷಡ್ರಸಗಳ ಭೋಜನ. ಅವರುಂಡ ಸಿಹಿ-ಕಹಿ-ಹುಳಿ- ಒಗರು ಅವರಿಗಷ್ಟೇ ವೇದ್ಯ. ಬಹಳಷ್ಟು ಸಲ ನಾವು ದೂರ ನಿಂತು ಕಂಡಿದ್ದರ ಬಗ್ಗೆ, ಅನಿಸಿದ್ದರ ಬಗ್ಗೆ ಆತ್ಮವಿಶ್ವಾಸದಿಂದ ನಿರ್ಣಯಗಳನ್ನು ಹೊರಡಿಸುತ್ತೇವೆ. ದುಡ್ಡು ದುಡ್ಡು ಅಂತ ಸಾಯ್ತಾನೆ‌. ಹೋಗುವಾಗ ಹೊತ್ಕೊಂಡು ಹೋಗುವ ಹಾಗಿದ್ದರೆ ಇನ್ನು ಹೇಗಾಡ್ತಿದ್ದನೋ ಅಂದವರೆ ಚಿಲ್ಲರೆಗಾಗಿ ತಳ್ಳುಗಾಡಿಯವನ ಬಳಿ ಗುದ್ದಾಡುತ್ತಾರೆ. ಮಕ್ಕಳಿಗೆ ಸಂಸ್ಕಾರ ಕಲಿಸಿಲ್ಲ ಎಂದ ಮಹಾಮಾತೆಯ ಮಕ್ಕಳು ಬಂದವರೆದುರೇ ಕಾಲುಚಾಚಿ ಕೂತು, ಮೂತಿ ತಿರುವುತ್ತಾರೆ. ಮಕ್ಕಳು ದೇವರ ಸಮಾನ ಎಂದು ಭಾಷಣ ಬಿಗಿಯುವ ಅಜ್ಜಿ, ಉಸಿರುಗಟ್ಟಿ ಅಳುತ್ತಿರುವ ಮೊಮ್ಮಗುವನ್ನು ತಿರುಗಿಯೂ ನೋಡಲ್ಲ. ಏಕೆಂದರೆ ನಾವು ಮನುಷ್ಯ ಮಾತ್ರರು. ತಪ್ಪುಗಳು ಘಟಿಸುತ್ತಲೇ ಇರುತ್ತವೆ. ಪರಿಪೂರ್ಣತೆಯೆಂಬುದು ಮರೀಚಿಕೆ. ಯಾರನ್ನೂ ಕಟುವಾಗಿ ವಿಮರ್ಶಿಸದೆ, ತೀರ್ಪುಗಳನ್ನು ಹೊರಡಿಸದೆ, ಸಾಧ್ಯವಾದಷ್ಟು ಉಪಕಾರಿಯಾಗುವುದು ನಮ್ಮೊಳಗಿನ ಪರಮಾತ್ಮನನ್ನು ಜೀವಂತವಿಡುವ ಬಗೆ ಇರಬಹುದು. ಮಿಕ್ಕಂತೆ ಅದೇ ಭೂಮಿ. ಅದೇ ಬಾನು. ಈ ನಯನ ನೂತನ.

About The Author

ಎಸ್. ನಾಗಶ್ರೀ ಅಜಯ್

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.

1 Comment

  1. Jayashree

    ತುಂಬಾ ಇಷ್ಟ ಆಯ್ತು ನಿಮ್ಮ ಬರಹ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ