ಶಾಲೆ ಹಿಂಭಾಗದಲ್ಲಿ ಆಟದ ಮೈದಾನವಿತ್ತು. ಸಂಜೆ ಶಾಲೆ ಬಿಟ್ಟ ಮೇಲೆ ಮನೇಲಿ ಚೀಲ ಇಟ್ಟು, ಒಂದಿಬ್ಬರು ಗೆಳತೀರ ಜೊತೆ ಮತ್ತೆ ಇಸ್ಕೂಲಿಗೆ ಬಂದು ಹಳದಿ ಪಟುಕದ ಮೊಗ್ಗು ಕೀಳೋದು. ನಮ್ ತೋಟ್ದಲ್ಲಿ ತರಹೇವಾರಿ ಹೂವಿನ ಗಿಡವಿದ್ರೂ ಇದ್ರ ಮೇಲೇ ಕಣ್ಣು. ಪೈಪೋಟಿ ಮೇಲೆ ಮೊಗ್ಗು ಕೊಯ್ಯೋದು. ಗಿಡದ ತುಂಬಾ ಮುಳ್ಳುಗಳು. ‌ಕೈ ಎಲ್ಲ ತರಚಿ ಹೋಗ್ತಿತ್ತು. ಅದರ ನೆದರೇ ಇರ್ತಿರಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಶಾಲಾದಿನಗಳ ಕುರಿತ ಬರಹ

ನಾನು ಓದು ಶುರು ಹಚ್ಕೊಂಡಿದ್ದು ಇಂಗ್ಲಿಷ್ ಮೀಡಿಯಮ್ಮು.‌ ಹೂ ದಿಟಾನೇಯಾ. ಕೊನೆಮಗಳೂಂತ ಅಪ್ಪಂಗೆ ವಸಿ ಶ್ಯಾನೆ ಪಿರೂತಿ. ಚೆಂದಾಗಿ ಓದ್ಲಿ ಅಂತ ತುಮಕೂರಿನಾಗಿರೋ ತಂಗಿ ಮನೆಗೆ ತಂದು ಬಿಟ್ಟರು. ಅತ್ತೆ ಮಗಳು ಅನಿತಾನೂ ನನ್ನ ವಾರಗೆಯವಳೆ. ಅವಳು ಎಲ್ ಕೆ ಜಿ ಓದುತ್ತಿದ್ದಳು. ನನ್ನೂ ಕೆಜಿ ಹೊರಲು ಸೇರಿಸಿದರು. ಅಪ್ಪ ವಾಪಸಾಗುವಾಗ ಅಳುವೋ ಅಳು. ನಾಲ್ಕರ ಅರಿಯದ ವಯಸ್ಸು. ಅಪ್ಪ ಅಮ್ಮನ್ನ ಬಿಟ್ಟು ಇರೋದು ಕಷ್ಟ ಆಗ್ತಿತ್ತು. ನಂಗೆ ಆ ಸ್ಕೂಲು, ಎಬಿಸಿಡಿ ಏನೂ ನೆಪ್ಪಿಲ್ಲ.‌ ಒಂದೇ ನೆಪ್ಪು ಅಂದ್ರೆ ಅಪ್ಪ ಬಿಟ್ಟು ಹೋಗುವಾಗ ಸ್ಕೂಲ್‌ ಗೇಟು ಹತ್ತಿ ಧುಮುಕಲು ಸಿದ್ಧಳಾಗಿದ್ದು. ಯಾರೋ ಎಳೆದು ಕೆಳಗೆ ಹಾಕಿದ್ದು. ಉಹೂ, ಬೇಕೂ ಅಂತ ಪಾತಾಳ ಗರಡಿ ಹಾಕಿ ನೆನಪಿನ ಆಳ ಜಾಲಾಡಿದ್ರೂ ಇನ್ನೊಂದು ತುಣುಕೂ ಮೇಲೇಳುತ್ತಿಲ್ಲ. ಬಿಡಿ ಅತ್ಲಾಗೆ.‌ ಸ್ಯಾನೆ ದಿನಾ ಏನೂ ನಾ ಅಲ್ಲಿರ್ಲಿಲ್ಲ. ನಮ್ಮ‌ ತಾತ ತೀರಿಕೊಂಡ್ರು ಅಂತ ಎರಡು ಮೂರು ತಿಂಗಳಿಗೇ ಅತ್ತೆ ಪರಿವಾರ ಸಮೇತ ಊರಿಗೆ ಬಂದ್ರು. ನಾನು ಅಪ್ಪಯ್ಯ ಜಪ್ಪಯ್ಯ ಅಂದ್ರೂ ವಾಪಸ್ಸಾಗಲಿಲ್ಲ. ನಮ್ಮತ್ತೆ ಹೊಂಡ್ತಾರೆ ಅಂತ ಗೊತ್ತಾದ್ದೆ‌ ನಾಗಮ್ಮನ ಹಟ್ಟಿ ಒಳಗೆ ಬಚ್ಚಿಟ್ಟುಕೊಂಡಿದ್ದೆ. ಪಾಪ, ನಮಪ್ಪ ಸ್ಕೂಲ್ ಗೆ ಕಟ್ಟಿದ್ದ ದುಡ್ಡು ಕಳಕೊಂಡಿದ್ದೊಂದೇ ಭಾಗ್ಯ. ಎಬಿಸಿಡಿ ಮಾತ್ರ ಎದೆಗೆ ಬೀಳಲೇ ಇಲ್ಲ. ಸರಿ ಇನ್ನೇನು ಮಾಡೋದು ಅಂತ ಸುಮ್ಮನಾದ್ರು. ನಾನು ಇಲ್ಲೇ ಇಸ್ಕೂಲ್‌ಗೋಗ್ತೀನಿ ಅಂತ ಹಠ ಹಿಡಿದೆ. ಆರು ವಯಸ್ಸಿಗೆ ಮೊದ್ಲು ಆವಾಗೆಲ್ಲಾ ಸರ್ಕಾರಿ ಶಾಲೆಗೆ ಸೇರಿಸಿಕೊಳ್ತಿರ್ಲಿಲ್ಲವಲ್ಲ. ಕೆಜಿಗಾದ್ರೆ ಬ್ಯಾಗ್ನೆ ಹೊತ್ತಾಕ್ತಾರೆ. ನಂಗೂ ಮನೇಲಿ ಕುಂತು ಬ್ಯಾಸ್ರ ಬೇರೆ. ನಮ್ಮಪ್ಪ ಚಿಕ್ಕದರಿಂದ್ಲೇ ಕತೆ ಪುಸ್ತಕ ತುಂಬಾ ತರ್ತಿದ್ದರು. ಅವ್ರು ಓದುವಾಗ ಪಕ್ಕದಲ್ಲಿ ಕೂತು ನಾನೂ ನೋಡ್ತಾ ಇದ್ದೆ. ಅಕ್ಷರ ತೋರಿಸ್ತಾ ಹೇಳಿಕೊಡ್ತಿದ್ದರು. ನಂಗೋ ಅದೇನೋ ಪುಸ್ತಕ ನೋಡಿದ್ರೆ ಹುಚ್ಚು ಹಿಡೀತಿತ್ತು. ಅಂಗಾಗಿ ಅಕ್ಷರಗಳು ಬೇಗಬೇಗ ಎದೆಗೆ ಬೀಳ್ತಾ ಹೋದ್ವು. ಚಂದಮಾಮ, ಬಾಲಮಿತ್ರ, ಬೊಂಬೆಮನೆಗಳಲ್ಲಿ ಚೆಂದ ಚೆಂದದ ಚಿತ್ರಗಳು ಇರುತ್ತಿದ್ದವು. ಅದನ್ನು ನೋಡಿ ನಂಗೆ ಕುತೂಹಲ. ಕತೆ ತಿಳ್ಕೋಬೇಕೂಂತ ನಾನೇ ಒನೊಂದೇ ಅಕ್ಷರ ಕೂಡಿಸ್ಕೊಂಡು ಓದೋಕೆ ನೋಡ್ತಿದ್ದೆ. ಇಸ್ಕೂಲ್ಗೆ ಹೋಗ್ತೀನಿ ಅಂತ ಅಪ್ಪನತ್ರ ನಾನೇ ಗಲಾಟೆ ಮಾಡ್ತಿದ್ದೆ. ಅಪ್ಪ‌ ಅಷ್ಟೊತ್ತಿಗಾಗ್ಲೇ ಊರ್ನಾಗೆ ಬೋಮುಖ್ಯ ನಾಯಕರೂಂತ ಗುರ್ತಿಸಿಕೊಂಡಿದ್ರು. ಆದ್ರೂವೇ ಅದ್ರ ಲಾಬ ತಕಂತಿರ್ಲಿಲ್ಲ. ತೋಟ ನೋಡಿಕೊಳ್ಳೊ ದಾಳಪ್ಪನ್ನ ಜೊತೆ ಮಾಡಿ ‘ಇಸ್ಕೂಲ್ ತಾವ ಬಿಟ್ಟು ಮೇಷ್ಟ್ರಿಗೆ ಯೋಳ್ ಬಿಡು, ಸುಮ್ಕೆ ಕುಂತ್ಕಂತಾಳೆ. ಆಲೇ ಅರ್ಧ ವರ್ಸ ಆಗ್ತಾ ಬಂತು. ಚಿಕ್ಕ ಪರೀಕ್ಸೆ ಬ್ಯಾರೆ ಹತ್ರ ಬರ್ತಾ ಐತೆ. ಈ ಕಿತ ಫ಼ೇಲ್ ಮಾಡ್ಲಿ. ಮುಂದ್ಲೊರ್ಸ ತಿರ್ಗಾ ಒಂದ್ನೇ ಕ್ಲಾಸ್ನಾಗೆ ಓದ್ಲಿ’.

ಇಂಗೆ ಸುಮ್ಕೆ ಇಸ್ಕೂಲ್ಗೆ ಸೇರ್ಕೊಂಡೋಳು, ದಿಟ್ವಾಗ್ಲೂ ಕಲಿಯಾಕೆ ಸುರು ಮಾಡ್ದೆ. ಕನ್ನಡದ ಅಕ್ಷರ ಆಗ್ಲೇ ಎದ್ಯಾಗೆ ಬಿದ್ದಿದ್ವಲ್ಲ. ಜೊತ್ಯಾಗಿದ್ದೋರು ಅವನು ಬಸವ, ಇವಳು ಕಮಲ ಅಂತ ಉರು ಹೊಡೀತಿದ್ರೆ, ನಾನು ಮುಂದ್ ಮುಂದ್ಕೆ ಹೋಗ್ತಿದ್ದೆ. ಎಂಗಾನಾ‌ ಮಾಡಿ ಪಾಸಾಗ್ಲೇ ಬೇಕು ಅಂತ ಹಠ. ‘ಅಲ್ಲ ಕಣಮ್ಮಿ ಇದೆಲ್ಲ ನಾಕೊರ್ಸುದ ಮಗೀನಾಗಿಂದು. ನಿಂಗೆ ಅದೆಂಗ್ ನೆಪ್ಪಿದ್ದಾತು’ ಅಂತ ಅನುಮಾನ‌ ಬೇಡ. ಇಸ್ಕೂಲ್ ಅಂಬೋ ಬೆರಗಿನ ಲೋಕ‌ ಎದೆಯಾಗೆ ಹಚ್ಚೆ ತರ ಕೂತೈತೆ. ಓದಿನ ಲೋಕ ಬೇಗ್ನೆ ತೆರಕೊಂಡಿದ್ದು ನೆನಪಿನ ಬುತ್ತಿಯನ್ನ ಅಮೃತ ಮಾಡಿದೆ. ನಮ್ಮೂರಿನ್ ಸರ್ಕಾರಿ ಇಸ್ಕೂಲೇ ನನ್ ಪಾಲಿಗೆ ಬೆರಗು ತುಂಬಿದ ವಿಸ್ಮಯ ಲೋಕ. ಇಸ್ಕೂಲ್ ಅಂದ ತಕ್ಷಣ ಇವತ್ಗೂ ಮನಸಲ್ಲಿ ಕೂತಿರೋ ವಿಷ್ಯಗಳ್ನ ಹಂಚ್ಕೋತೀನಿ.

ಪಾಸಾಗಿದ್ದು

ಇಸ್ಕೂಲ್‌ನಲ್ಲಿ ಜಾಣೆ ಅಂತ ಎಲ್ಲ ಮೇಷ್ಟ್ರು, ಮೇಡಮ್ಮುಗಳು ನನ್ನ ಆಸೆ ಮಾಡೋರು. ಒಂದೇ ಕೋಣೇನಲ್ಲಿ ಒಂದ್ನೇ ಕ್ಲಾಸು, ಎರಡ್ನೇ ಕ್ಲಾಸು ನಡೀತಿತ್ತು. ನಾನೇ ಮಾನೀಟ್ರು. ಯಾರೂ ಇಲ್ದಿದ್ರೆ ನಂದೇ ಕಾರುಬಾರು. ಅಂಗೂ ಇಂಗೂ ಆ ವರ್ಷ ಕಳೀತು. ಆಗೆಲ್ಲಾ ಏಪ್ರಿಲ್ಲು ಅಂದ್ರೆ ಬಲು ದೊಡ್ಡದು. ಪಾಸು ಪೇಲು ಹೇಳ್ತಾರಲ್ಲ‌. ಹತ್ತನೇ ತಾರೀಕು‌ ಬಂತು.‌ ಪೇಲು ಮಾಡಿದ್ರೆ ಅನ್ನೋ ಯೋಚ್ನೇನೇ ನಂಗೆ ತಡ್ಕಣಾಕಾಗ್ದೆ, ಸ್ನೇಹಿತರ ಮುಂದೆ ಅವ್ಮಾನ‌ ಆಗೋದ್ರೆ ಅಂತ ಅಳು ಬರ್ತಿತ್ತು. ‘ನೀನು ಪಾಸು’ ಅಂದಿದ್ದು ಹೋಳಿಗೆ ಮೇಲೆ ಹಾಲು‌ ಸುರಿದಂಗಾಯ್ತು. ಅದ್ರೆ ನಮ್ಮಪ್ಪ ಅಲ್ಲಿಗೇ ಬಿಟ್ಟಾರೆ? ನನ್ನೂ ಎಳ್ಕೊಂಡು ಹೊಂಟ್ರು.‌ ಮೇಷ್ಟ್ರು ಎದುರ್ಗೇ ಸಿಕ್ರು. ‘ನನ್ ಮಗ್ಳು ಅಂತ ಪಾಸು ಮಾಡಿದೀರಲ್ಲ, ಸರೀನಾ?’ ಅಂದು ರೇಗುದ್ರು. ಮೇಷ್ಟ್ರು ‘ನಿಮ್ ಮಗ್ಳು ಆಗ್ಲೇ ಎರಡನೇ ಕ್ಲಾಸಿನ್ ಪಾಠಾನೂ ಹೇಳ್ತಾಳೆ. ನಾವಿಲ್ಲದಿದ್ರೆ ಅವ್ಳೇ ಮೇಡಮ್ಮೂ. ಎಲ್ಲಾ ಬರುತ್ತೆ’ ಅಂದ್ ಮೇಲೇನೆ ಸುಮ್ಕಾದ್ದು. ಇಂಗಾಗಿ ಮೇಷ್ಟ್ರು ಅವರ ಮನಸಿಗ್ ಬಂದಿದ್ ಯಾವ್ದೋ ಒಂದು ದಿನಾಂಕ, ವರ್ಷ ಹಾಕಿ ಸೇರಿಸ್ಕೊಂಡ್ರು. ಎರಡು ವರ್ಷ ಜಾಸ್ತಿ ಹಾಕಿದ್ರು. ಆ ದಿನಾಂಕ ಮಹಿಳಾ ದಿನಾಚರಣೇದು‌ ಅನ್ನೋ ಇಶೇಷ ಆಗ ತಿಳಿದಿರ್ಲಿಲ್ಲ ಬಿಡಿ.

ನಾವಂತೂ ಬರೆ ಕಾಲ್ನಾಗೆ ಇಸ್ಕೂಲ್‌ಗೆ ಹೋಗ್ತಿದ್ವು. ಚಪ್ಪಲಿ‌ ಅನ್ನೋದು ನಮ್ಗೆ ಬ್ಯಾರೆ ಊರ್ಗೋದ್ರೆ ಮಾತ್ರ ಆಕ್ಕೋಬೇಕು ಅಂತ. ಅವಾಯ್ ಚಪ್ಪಲಿ ಒಂದಿತ್ತು. ಇಸ್ಕೂಲ್, ಆಟ, ಜಮೀನು ಇವುಕ್ಕೆಲ್ಲಾ ಮೆಟ್ಟು ಆಕ್ಕಂತಿರ್ಲಿಲ್ಲ. ಬರೇ ಕಾಲ್ನಾಗೆ ನಮ್ಮ ಸುತ್ತಾಟ. ನೀಲಿ ಲಂಗ ಬಿಳೇ ಜಾಕೀಟು ಶಾಲೇನಾಗೆ ನಮ್ಮುನ್ನೆಲ್ಲಾ ಒಂದ್ ಮಾಡೋ ಸಮವಸ್ತ್ರ. ತಲೇಗೆ ಕೆಂಪು ಟೇಪು. ಶನಿವಾರ ಬಿಳೇ ಟೇಪು. ಹುಡುಗುರ್ಗೆ ನೀಲಿ ಚಡ್ಡಿ, ಬಿಳೇ ಅಂಗಿ.‌ ಮಿಡಲ್ ಇಸ್ಕೂಲ್‌ನಲ್ಲಿ ಉದ್ದಕಿರೋರ್ಗೆ ಮಾತ್ರ ಪ್ಯಾಂಟು. ನಮ್ಗೆ‌ ಮಾತ್ರ ಯಾವಾಗ್ಲೂ ಲಂಗ್ವೇಯಾ. ಶೆಟ್ಟಿ ಮೇಷ್ಟ್ರು ನಾಕ್ನೇ ಕ್ಲಾಸಿನ್ ತಂಕ ಲೆಕ್ಕ ಹೇಳ್ಕೊಡೋರು. ಅವುರ್ನ ಕಂಡ್ರೆ ಎಲ್ರೂ ನಡುಗೋರು. ಶಿಕ್ಷೆ ಕೊಡೋದ್ರಾಗೆ ಎತ್ತಿದ ಕೈ. ಮಗ್ಗಿ ಹೇಳ್ದಿದ್ರೆ ಕುರ್ಚಿ ಕೂಡ್ಸೋರು, ಗೆಣ್ಣಿನ ಮೇಲೆ ರೂಲುದೊಣ್ಣೆ ತಕೊಂಡು ಬಾರ್ಸೋರು. ಒಂಟಿ ಕಾಲ್ನಾಗೆ ನಿಲ್ಸೋರು. ಎರಡೊಂದ್ಲ ಎರಡು, ಎರಡೆರ್ಡ್ಲ ನಾಕು ಅಂತ ರಾಗವಾಗಿ ಸೂರು ಕಿತ್ತೋಗೋ ಅಂಗೆ ಕಿರುಚ್ಕೊಂತಿದ್ವಿ. ಪಕ್ಕದಾಗೇ ಇನ್ನೊಂದು ಕ್ಲಾಸಿನವು ಕ ಕೊಂಬು ಕ, ಕ ಗುಡಿಸಿನ್ ದೀರ್ಘ ಕಾ ಅಂತ ಅರಚೋರು. ಎಲ್ಲ ಸೇರಿ ಸಂತೆಯಾಗ್ತಿತ್ತು. ಇಂಗೇ ಒಂದ್ ಸಲ ನಮ್‌ ಚಿಕ್ ತಾತ ಶಿವರಾಮಯ್ಯ ಬೆಂಗ್ಳೂರಿಂದ ಬಂದಿದ್ದರಂತೆ. ಅವ್ರು ತುಂಬಾ ಅನುಕೂಲವಾಗಿದ್ರು. ಮಿಡ್ಲ್ ಇಸ್ಕೂಲ್ ಮರದ ಕೆಳಗೆ ನಡೆಯೋದ್ನ ನೋಡಿ, ಒಂದು ರೂಮು ಕಟ್ಟಿಸ್ಕೊಟ್ರು. ಇನ್ನೆರಡು ರೂಮ್ನ ಸರ್ಕಾರ ಕಟ್ಟಿಸ್ತು.

ಲೆಕ್ಕ ಮೊದ್ಲು ಮಾಡ್ದೋರು, ಮಾಡ್ದೆ ಇರೋರ್ಗೆ ಮೂಗು ಹಿಡ್ದು ಕೆನ್ನೇಗೆ ಬಾರಿಸ್ಬೇಕಿತ್ತು. ಈ ಕೆಲ್ಸ ಯಾವಾಗ್ಲೂ ನಂಗೇ ಬರ್ತಿತ್ತು. ನಾನು ಮೆತ್ತಕೆ ಏಟು ಕೊಡ್ತಿದ್ದೆ. ಮೇಷ್ಟ್ರು ನಂಗೆ ಸರ್ಯಾಗಿ ಬಯ್ಯೋರು. ಮೂಗು ಹಿಡ್ಕೊಂಡ್ರೆ ಗೊಣ್ಣೆ ಸುರೀತಿತ್ತಲ್ಲ. ನಮ್ ಕಷ್ಟ ನಮ್ಗೆ. ಜೊತೇಗೆ ಮಾವಿನ ಕಾಯಿ, ಕಾರೆ ಹಣ್ಣು, ಬುಡಮೆ ಹಣ್ಣು, ತೊಂಡೆ ಹಣ್ಣು ಕೊಡ್ತೀವೀಂತ ಬ್ಯಾರೆ.. ಎಲ್ಲದ್ಕಿಂತ ಜಾಸ್ತಿ ನಮ್ಮಪ್ಪ, ಅಮ್ಮ ಒಂದಿನ್ವೂ ಹೊಡೆದಿದ್ದಿಲ್ಲ. ಬಯ್ಯೋರು. ಅಷ್ಟುಕ್ಕೇ ಹೆದರ್ತಿದ್ವಿ. ಹೊಡೆಯೋದು ಅಂದ್ರೆ ಅವ್ಮಾನ ಅಂತ. ಅದುಕ್ಕೇ ಪಾಪ ಅಂತ ಮೆಲ್ಲಕೆ ತಟ್ಟೋದು.

ಅಜ್ಜಿ ಕೂರ್ಲು

ಶನಿವಾರ ಬಂದ್ರೆ ಖುಷಿನೋ ಖುಷಿ. ಬೆಳಗ್ಗೆ ಡ್ರಿಲ್ಲು ಇರ್ತಿತ್ತು. ಆಮೇಲೆ ಸ್ವಲ್ಪ ಹೊತ್ತು ಪಾಠ. ಹನ್ನೊಂದು ಗಂಟೆಗೆ ಇಸ್ಕೂಲ್ ಕತಂ. ಇಸ್ಕೂಲ್ ಮುಂದೆ ತಿಂಡಿ ಮಾರೋರ ಸಂತೆ. ಐಸ್ ಕ್ಯಾಂಡಿ, ಬೊಂಬಾಯಿ ಮಿಠಾಯಿ, ಟ್ಯೂಬೈಸು, ಅಜ್ಜಿ ಕೂರ್ಲು ಮಾರೋನು (ಗಾಜಿನ ಡಬ್ಬದಾಗೆ ಬಿಳೆ ಕೂದ್ಲು ತರ ಉದ್ದುಕಿರೋ ಸೀ ತಿಂಡಿ. ಈಗಿನ್ ಸೋನ್ ಪಾಪಡಿ ತರ) ಗಂಟೆ ಸದ್ದು ಮಾಡ್ತಾ ಬರ್ತಿದ್ರೆ ಮನಸ್ನಾಗೆ ಆಸೆ ಸದ್ದು ಮಾಡ್ತಿತ್ತು. ಇನ್ನೊಬ್ಬ ಸೈಕಲ್ ಮೇಲೆ ದೊಡ್ಡದಾಗಿರೋ ಬಣ್ಣದ ರಟ್ಟಿನ ಡಬ್ಬ ಇಟ್ಕೊಂಡು, ಬಾಂಬೇ ನೋಡು ಐಸಾ, ಡೆಲ್ಲಿ ನೋಡೂ ಐಸಾ, ಕಲ್ಕತ್ತಾ ನೋಡೂ, ಮದ್ರಾಸ್ ನೋಡೂ ಅಂತ ಹಾಡ್ತಾ ಬರ್ತಿದ್ದ. ಕಾಸಿದ್ರೆ ಕೈಲಾಸ ತೋರ್ತಿದ್ದ. (ಡಬ್ಬದಾಗಿರೋ ತೂತುಗಳಲ್ಲಿ ಡೆಲ್ಲಿ, ಬೊಂಬಾಯಿ ಎಲ್ಲಾ ಒಂದು ಕಣ್ಣು ಮುಚ್ಕೊಂಡು ಇನ್ನೊಂದು ಕಣ್ಣ ಅರಳಿಸಿ ನೋಡೋದು)ಇಲ್ದಿದ್ರೆ ಸುಮ್ನೆ ಎಲ್ರನ್ನೂ ನೋಡ್ತಾ ಖುಷಿ ಪಟ್ಕೊಂಡು ಮನೇಗೆ ಹೋಗಿ ಪುಸ್ತಕದ ಚೀಲ ಮೂಲೇಗೆ ಹಾಕಿ ಆಡೋಕೆ ಹೋದ್ರೆ ಮುಗೀತು. ಸೋಮವಾರದ ತನಕ ಆಟವೇ.

ಹಳ್ದಿ ಪಟಿಕ

ಇಸ್ಕೂಲ್ ಸುತ್ತೂರ ಕತ್ತಾಳೆ ಗಿಡ‌ದ ಬೇಲಿ. ಒಳಗೆ ಹಳದಿ ಬಣ್ಣದ ಪಟಿಕದ(ಸ್ಫಟಿಕ) ಹೂವಿನ ಗಿಡಗಳು ತುಂಬಾನೆ ಇದ್ದವು. ಮಧ್ಯೆ ಪ್ರಾಥಮಿಕ ತರಗತಿಗಳು. ಎಡಕ್ಕೆ ಮಾಧ್ಯಮಿಕ ಶಾಲೆ ಬಲಕ್ಕೆ ಪ್ರೌಢ ಶಾಲೆ ಇತ್ತು. ಒಂದು ಮೂಲೆಯಲ್ಲಿ ಜ್ಯೂಸ್ ಹಣ್ಣಿನ ಬಳ್ಳಿಯಿತ್ತು. ಅದನ್ನು ಒಂದು ಕೋಲಿಗೆ ಆನಿಸಿದ್ದರು. ಪ್ರೌಢ ಶಾಲೆ ಹಿಂಭಾಗದಲ್ಲಿ ಹಾಲಿನ ಡೈರಿ ಇತ್ತು. ಅವೆರಡರ ಮಧ್ಯ ಆಕಾಶಮಲ್ಲಿಗೆ ಗಿಡಗಳಿದ್ದವು. ಶಾಲೆ ಹಿಂಭಾಗದಲ್ಲಿ ಆಟದ ಮೈದಾನವಿತ್ತು. ಸಂಜೆ ಶಾಲೆ ಬಿಟ್ಟ ಮೇಲೆ ಮನೇಲಿ ಚೀಲ ಇಟ್ಟು, ಒಂದಿಬ್ಬರು ಗೆಳತೀರ ಜೊತೆ ಮತ್ತೆ ಇಸ್ಕೂಲಿಗೆ ಬಂದು ಹಳದಿ ಪಟುಕದ ಮೊಗ್ಗು ಕೀಳೋದು. ನಮ್ ತೋಟ್ದಲ್ಲಿ ತರಹೇವಾರಿ ಹೂವಿನ ಗಿಡವಿದ್ರೂ ಇದ್ರ ಮೇಲೇ ಕಣ್ಣು. ಪೈಪೋಟಿ ಮೇಲೆ ಮೊಗ್ಗು ಕೊಯ್ಯೋದು. ಗಿಡದ ತುಂಬಾ ಮುಳ್ಳುಗಳು. ‌ಕೈ ಎಲ್ಲ ತರಚಿ ಹೋಗ್ತಿತ್ತು. ಅದರ ನೆದರೇ ಇರ್ತಿರಲಿಲ್ಲ. ಅಮ್ಮಂಗೆ ಹೇಳಿ ಒತ್ತಾಗಿ ಕಟ್ಟಿಸ್ಕೊಂಡು ಬೆಳಗ್ಗೆ ಚೆಂದವಾಗಿ ಅರಳಿರುತಿದ್ದ ಹೂವು ಮುಡಿದು ಶಾಲೆಗೆ ಬಂದಾಗ, ಗೆಳತೀರ ಜಡೆ ನೋಡೋದು. ನಂಗಿಂತ ಉದ್ದಕಿದ್ರೆ ಇವತ್ತು ಅವಳಿಗಿಂತ ಬೇಗ ಬರ್ಬೇಕು ಅಂತ ಉರ್ಕೊಳ್ಳೋದು. ಅರಿಶಿನ ಬಣ್ಣದ ಮಿಂಚುವ ಆ ಹೂಮಾಲೆ ಇವತ್ತೂ ಕಣ್ಮುಂದಿದೆ.

ಶಾಲೇನಲ್ಲಿ ಆಟಕ್ಕೇ ಅಂತ್ಲೇ ಒಂದು ಲಾಸ್ಟ್ ಪಿರ್ಡ್ ಇರ್ತಿತ್ತು. (ಪೀರಿಯಡ್) ಕುಂಟು ಮುಟ್ಟಿಸಾಟ, ಕೊಕ್ಕೊ, ಓಟ, ಕುಂಟೆ ಬಿಲ್ಲೆ ಆಡ್ತಿದ್ವಿ. ಶಾಲೆ ಶುರು ಆಗೋ ಮುಂಚೆ, ಮುಗಿದ ಮೇಲೂ ಆಟವೇ.

ಬಿಸಿ ಬಿಸಿ ಉಪ್ಪಿಟ್ಟು

ಶಾಲೆ ಅಂದ್ ಕೂಡ್ಲೆ ನೆನ್ಪಾಗೋದು ಬಿಸಿ ಉಪ್ಪಿಟ್ಟು. ದಿನಾ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ, ಬಿಸಿ ಉಪ್ಪಿಟ್ಟಿಗೆ ಸರದೀಲಿ ನಿಲ್ಲುತ್ತಿದ್ವಿ. ಗೋಧಿಯ ದಪ್ಪ ನುಚ್ಚು ಅದು. ಗೋಧಿಯನ್ನು ಮೂರ್ನಾಕು ತುಂಡಷ್ಟೇ ಮಾಡಿದಂತಿರುತ್ತಿತ್ತು. ಅದಕ್ಕೇ ತರಕಾರಿ ದಪ್ಪ ದಪ್ಪಗೆ ಹೆಚ್ಚಿ ಹಾಕುತ್ತಿದ್ರು. ಯಾವ ತರಕಾರಿ ಕಮ್ಮಿ ರೇಟೋ ಅದನ್ನು ಬಳಸುತ್ತಿದ್ರು. ಶಾಲೆ ಹಿಂಭಾಗದಲ್ಲೇ ಮಾಡ್ತಿದ್ರು. ಅದಕ್ಕೇ ಬಿಸಿ ಸಿಗ್ತಿತ್ತು.‌ ನಮ್ಮಮ್ಮ ಅದನ್ನು ತಿನ್ನಬಾರ್ದು ಹೊಟ್ಟೆ ನೋವು ಬರುತ್ತೆ ಅಂತ ಬಯ್ಯುತ್ತಿದ್ದಳು. (ಗೋಧಿ ದಪ್ಪ ಇರ್ತಿತ್ತು.) ಆದ್ರೆ ಎಷ್ಟು ರುಚಿ ಇರ್ತಿತ್ತು ಅಂದ್ರೆ ನಾಲಗೇಲಿ ನೀರು ಬರ್ತಿತ್ತು. ಅದರ ಘಮಕ್ಕೇ ತಿಂದ್ಬಿಡಬೇಕು ಅಂಗಿತ್ತು. ಹಾಲಿನ ಡೈರೀಲಿ ನಲವತ್ತು ಲೀಟರ್ ಹಾಲು ಹಿಡಿಸೋ ಕ್ಯಾನುಗ್ಳು ಇರ್ತಿದ್ವು.‌ ಜಾಸ್ತಿ ಇದ್ವು ಅಂತ ಅವುನ್ನೇ ಉಪ್ಪಿಟ್ಟು ಹಾಕೋಕೆ ಬಳಸುತ್ತಿದ್ರು. ಅದು ಇಂಡಾಲಿಯಮ್ಮಿನದು. ಅದುಕ್ಕೆ ಸಿಲ್ವಾರ್ ತಟ್ಟೆ (ಅಲ್ಯೂಮಿನಿಯಂ) ಮುಚ್ಚುತಿದ್ರು. ತರಕಾರೀನ ಹಳ್ಳೀ ಜನ್ವೂ ತಂದು ಕೊಡ್ತಿದ್ರು. ಸರ್ಕಾರ ಗೋಧಿ, ಎಣ್ಣೆ, ಉಳಿದ ಸಾಮಾನು ಕೊಡ್ತಿತ್ತು. ಶಾಲೇಲಿ ಉದ್ದುಕೆ, ದಪ್ಪಗೆ ಇರೋ ಹುಡುಗ್ರು ಆ ಕ್ಯಾನುಗಳ್ನ, ಆಕಡೆ ಹಿಡಿ ಒಬ್ರು, ಈ ಕಡೆ ಹಿಡಿ ಒಬ್ರು ಹಿಡ್ಕೊಂಡು ತರುತ್ತಿದ್ದರು. ನನ್ನ‌ ಸಿನೇಹಿತೆ ಲಕ್ಷ್ಮಿದೇವಮ್ಮ ಬಡವ್ರ ‌ಮನೆಯೋಳು. ದಿನಾಲೂ ಅವಳಿಗೆ ನನ್ನ ಪಾಲಿನ ಉಪ್ಪಿಟ್ಟು ಕೊಡ್ತಿದ್ದೆ. ಅದಿಕ್ಕೇಂತಾನೆ ಹಳೆ ಬುಕ್ಕು ಇಟ್ಕೋತಿದ್ವಿ. ಹಾಳೆ ಹರಿದು ಅದರಲ್ಲಿ ಉಪ್ಪಿಟ್ಟು ಹಾಕಿಸಿಕೊಳ್ಳೋದು. ಅವ್ಳು ತನ್ನ ಪಾಲಿಂದು ತಿಂದು, ನಂದು ಮನೆಗೆ ಕೊಟ್ಟು ಬರ್ತಿದ್ಲು. ಹೊಟ್ತುಂಬೋ ಅಷ್ಟು ಘನವಾಗಿ ಕೊಡ್ತಿದ್ರು. ಕೆಲುವ್ರು ಇನ್ನಾ ವಸಿ ಬೇಕೂಂತ ಕೇಳಿ ಹಾಕುಸ್ಕೊಂತಿದ್ರು. ಸ್ವಲ್ಪ ತಿಂದು ಇನ್ನೊಂದು ಸ್ವಲ್ಪ ಅಂಗೇ ಮುದುರಿ ಬ್ಯಾಗ್ನಾಗೆ ಇಟ್ಕೊಂತಿದ್ರು. ನಾನೂ ಒಂದೆರಡು ಪಿಡಚೆ ತಿನ್ನೋದು. ಒಂದೊಂದು ಸರ್ತಿ ಇನ್ನೂ ಸ್ವಲ್ಪ ಜಾಸ್ತಿ ತಿಂದಾಗ ಮನೇಲಿ ಸರ್ಯಾಗಿ ಊಟ ಮಾಡ್ದೆ, ಅಮ್ಮಂಗೆ ಗೊತ್ತಾಗಿ ಬಯ್ತಿದ್ದಳು. ಇವತ್ತೂ ನಾಲಗೆಯಲ್ಲಿ ಇಸ್ಕೂಲು ಉಪ್ಪಿಟ್ಟು ಹೆಪ್ಪಿಟ್ಟಿದೆ. ಶಾಲೇ ಅಂದಕೂಡ್ಲೆ ನೆನಪಾಗೋ ಸಂಗ್ತಿಗಳು ತುಂಬಾ ಇವೆ.

ಸ್ವತಂತ್ರ ದಿನಾಚರಣೆ ಬೆಳಿಗ್ಗೆ ಬೇಗ ಎದ್ದು ಸಮವಸ್ತ್ರಾನ ದಪ್ಪನೆ ದುಪ್ಪಟಿ ( ಬೆಡ್ ಶೀಟ್) ಮೇಲೆ ಹಾಕಿ ತೀಡಿ, ಎಣ್ಣೆ ಹಚ್ಚಿ ತಲೆ ಬಾಚಿ ಹೊರಡುತ್ತಿದ್ವಿ. ಮೊದ್ಲು ಧ್ವಜಾರೋಹಣ ಮಾಡಿ, ಮೇಷ್ಟ್ರು ಭಾಷಣ ಮಾಡ್ತಿದ್ರು. ಆಮೇಲೆ ಮೂರು ಮೂರು ಜನ ಸಾಲು ಮಾಡಿ ಊರಿನ ಬೀದಿಗಳಲ್ಲಿ ಮೆರವಣಿಗೆ ಹೋಗೋದು.‌ ಶಾಲೇಲಿ ಗಾಂಧಿ ತಾತ, ಚಾಚಾ ನೆಹರೂ ಅವರ ದೊಡ್ಡ ಫೋಟೋಗಳು ಇದ್ದವು. ಅವುನ್ನ ಹೊತ್ತುಕೊಂಡು, ಧ್ವಜ ಹಿಡ್ಕೊಂಡು ಮೆರವಣಿಗೆ ಬರುತ್ತಿದ್ದರೆ ಜನ ಮನೆ ಮುಂದೆ ನಿಂತು ನೋಡೋರು. ಕೊನೇಲಿ ಲಾಡೂನೋ, ಬಿಸ್ಕತ್ತೋ, ಕಡಲೆಪಪ್ಪಿನ ಉಂಡೆನೋ ಕೊಡ್ತಿದ್ರು. ಪೂರ್ತಿ ರಜಾ ಇರ್ತಿರಲಿಲ್ಲ. ಒಂದೆರಡು ಗಂಟೆ ಮೆರವಣಿಗೆ ಕಡ್ಡಾಯ ಇರುತ್ತಿತ್ತು. ಆಮೇಲೆ ರಜಾ.

ಹೊರ ಸಂಚಾರ ನಾವೆಲ್ಲ “ವರಸ‌ಂಚಾರ” ಅಂತಾನೇ ಹೇಳ್ತಿದ್ವು. ಈಗಿನ ಒಂದು ದಿನದ ಪ್ರವಾಸ ಆಗ್ಲೂ ಇರುತ್ತಿತ್ತು. ಎಲ್ರೂ ಕಲೆತು ಬೆರೆತು ಬಾಳೋದ್ನ ಕಲಿಸೋಕೆ ಅಂತ ಹೊರ ಸಂಚಾರ ಕರೆದೊಯ್ಯುವ ರೂಢಿ ಇತ್ತು. ಮನೇಯಿಂದ ಬುತ್ತಿ ಕಟ್ಟಿಕೊಂಡು ಬರೋದು. ತೀರಾ ಬಡವರ ಮನೆ ಮಕ್ಕಳು ಏನೂ ತರ್ತಿರಲಿಲ್ಲ. ನಾವು ಜಾಸ್ತಿ ತಂದು ಹಂಚಿಕೊಂಡು ತಿಂತಿದ್ವು. ಯಾವುದೋ ಊರಿಗಲ್ಲಾ ನಮ್ಮ‌ ಪ್ರವಾಸ. ಜಯಮಂಗಲಿ ನದಿತಟಕ್ಕೆ. ಒಂದೆರಡು ಮೈಲಿ ಆಗ್ತಿತ್ತೇನೋ. ನಡ್ಕೊಂಡು ಹೋಗ್ತಿದ್ವಿ. ನೀರಲ್ಲಿ ಆಡೋದು, ಮರಳಲ್ಲಿ ಕಾಗಕ್ಕನ ಗೂಡು ಕಟ್ಟೋದು, ಉಪ್ಪುಪ್ಪು ಕಡ್ಡಿ ಆಡೋದು, ಹುಡುಗ್ರು ಕಬಡ್ಡಿ, ವಾಲಿಬಾಲ್ ಆಡೋರು. ಬುತ್ತಿ ತಿಂದು, ಭಜನೆ, ಹಾಡು ಹೇಳ್ಕೊಂಡು ಸಂಜೇಗೆ ವಾಪಸ್ ಆಗುತ್ತಿದ್ವಿ. ಸಾಲಿನಲ್ಲಿ ಬರೋವಾಗ ಮೆಲ್ಲಗೆ ಮಾಯ ಆಗೋದು. ಪಕ್ಕದಲ್ಲಿರೋ ಜಮೀನಿಗೆ ನುಗ್ಗಿ, ರೇಷ್ಮೆ ಹಣ್ಣು ಅಂಗೈಯಲ್ಲಿ ಹಿಡಿಸೋ ಅಷ್ಟು ತುಂಬಿಕೊಳ್ಳೋದು, ಬೇಲಿ ಹಣ್ಣು, ಹುಣಿಸೆ ಕಾಯಿ, ಕೆಂಕೇಶಿ ಹೂವ, ಗಸಗಸೆ ಹಣ್ಣು ಹೀಗೆ ದಾರೀಲಿ ಸಿಕ್ಕಿದ್ದೆಲ್ಲ ಕಬಳಿಸ್ಕೊಂಡು ‘ಮಳ್ಳಿ ಮಳ್ಳಿ‌ ಮಂಚುಕ್ಕೆಷ್ಟು ಕಾಲು ಅಂದ್ರೆ, ಮೂರೂ ಮತ್ತೊಂದು’ ಅನ್ನೋ ತರ ಅರೀದವ್ರಂಗೆ ಮೇಷ್ಟ್ರು ಬಂದಾಗ ಸುಮ್ಕೆ ನಿಂತ್ಕಣಾದು. ವರ್ಷಕ್ಕೆ ಎರಡು ದಪ ಹೋಗ್ತಿದ್ವಿ. ಅದ್ರಾಗೂ ಮಳೆ ಬಂದು ಜಯಮಂಗಲಿ ತುಂಬಿ ಹರೀತಾವ್ಳೆ ಅಂದ್ರೆ ಕರ್ಕೊಂಡು ಹೋಗ್ತಿದ್ರು.

ದೀಪಾವಳಿಗೆ ನಂಟರು ಬಂದಾಗ

ನಮ್ಮ‌ ಮನೇಲಿ ದೀಪಾವಳಿ ಹಬ್ಬ ಬಲು ಜೋರು. ಅತ್ತೆಯಂದಿರು, ಮಕ್ಕಳು, ಬೇರೆ ನಂಟರು ಸೇರಿ‌ ಮನೆ ತುಂಬಿ ಹೋಗುತ್ತಿತ್ತು. ಬಸ್ಸುಗಳು ಬಸ್ಸ್ಟಾಂಡಿನಲ್ಲಿ ಮಾತ್ರ ನಿಲ್ಲಿಸ್ತಿರಲಿಲ್ಲ.‌ ದೀಪಾವಳಿ ಸಮಯದಲ್ಲಿ ಶಾಲೇ ಮುಂದೇನೂ ನಿಲ್ಲಿಸ್ತಿದ್ರು. ನಮ್ಮನೇಗೆ ದಂಡು ದಂಡು ಬರ್ತಿದ್ರಲ್ಲ ಅದಕ್ಕೆ. ಒನ್ನೊಂದು ಸತಿ ಮಳೆ ಬಂದ್ರೆ ಇಸ್ಕೂಲು ಸೋರ್ತಿತ್ತು. ಇರುಚ್ಲು ಬೀಳ್ತಿತ್ತು. ಆಗ ರೂಮಿನ ಮುಂದೆ ಕೂಣಿಸಿ, ಪಾಠ ಮಾಡ್ತಿದ್ರು. ಬೇಲಿ ಸಂದೀಲಿ ಬಸ್ಸು ಬರೋದು, ನಿಲ್ಲೋದು, ಯಾರ್ಯಾರು ಇಳಿದ್ರು ಎಲ್ಲಾ ಕಾಣ್ತಿತ್ತು. ಬಗ್ಗಿ ಬಗ್ಗಿ ನೋಡೋದು. ಒಂದ್ಸಲ ನಮ್ಮ ಮೇಷ್ಟ್ರು ನಾನು ನೋಡ್ತಾನೆ ಇದ್ದಿದ್ದು ಗಮನಿಸಿ, ಮನೇಗೆ ಹೋಗು ಅಂತ ಕಳಿಸಿದ್ರು. ಖುಷೀಲಿ ಓಡಿ ಬಂದಿದ್ದೆ. ನಮ್ಮ ಚಿಕ್ಕತ್ತೆ ಬಂದಿತ್ತು. ಇಸ್ಕೂಲ್ ಮುಗೀತಾ ಅಂತು. ನೀನು ಬಂದಿದ್ದೀಯಾ ಅಂತ ಕಳಿಸವ್ರೆ ಅಂದೆ. ಮಾರನೇ ದಿನ ಇಸ್ಕೂಲಿಗೆ ನನ್ ಜೊತೆ ನಮ್ಮ ಚಿಕ್ಕತ್ತೆ ಮಗಳು ಲಕ್ಷ್ಮೀನೂ ಬರ್ತಿದ್ಲು.

ಡಾನ್ಸು ಮಾಡುವಾಗ ಸೀರೆ ಉದುರಿದ್ದು

ನಮ್ಮನ್ನೆಲ್ಲ ಸೇರ್ಸಿ ಮಧುಗಿರಿಯಿಂದ ಬರ್ತಿದ್ದ ನಮ್ಮ ಶಿಶುವಾರದ (ಶಿಶುವಿಹಾರ) ಮೇಡಂ ಒಬ್ಬರು ಡಾನ್ಸು ಮಾಡ್ಸಿದ್ದರು. ಅದೇ ಮೊದಲನೇ ಸರ್ತಿ ಮಕ್ಕಳತ್ರ ಡಾನ್ಸು ಮಾಡ್ಸಿದ್ದು. ಬರೀ ನಾಟಕ, ಭಾಷಣ, ಹಾಡು, ಪದ್ಯ ಹೇಳೋದು ಇರ್ತಿತ್ತು. ಡಾನ್ಸು ಹೇಳಿಕೊಡೋರು ಇರ್ಲಿಲ್ಲ. ಡಾನ್ಸು ದಿನ ಅಮ್ಮನ ಸೀರೆಗಳಲ್ಲಿ ಚೆನ್ನಾಗಿರೋದು ಒಂದು ತಗೊಂಬನ್ನಿ ಅಂದಿದ್ದರು. ಅದೇ ವಿಶೇಷ ಉಡುಪು ಆ ಡಾನ್ಸಿಗೆ. ಮೊದಲೊಂದು ಸಲ ತರಬೇತೀನೂ ಇರಲಿಲ್ಲ. ಸೀರೆ ಉಟ್ಕೊಂಡು ಡಾನ್ಸು ಮಾಡೋಕೆ ಬಲು ಕಷ್ಟ ಪಟ್ವಿ. ನಾನೂ ಮೂರು ‌ಸೀರೆ ತಗೊಂಡು ಹೋಗಿದ್ದೆ. ನಮ್ಮ‌ ಮೇಡಮ್ಮೂ ಒಂದನ್ನು ನಂಗೆ ಉಡಿಸಿ, ಮಿಕ್ಕಿರೋ ಎರಡೂ ಸೀರೇನಾ ಚೆನ್ನಾಗಿರೋ ಸೀರೆ ಇಲ್ಲ ಅಂತ ಸಪ್ಪೆ ಮುಖ ಹಾಕ್ಕೊಂಡು ಬಂದವರಿಗೆ ಉಡ್ಸಿದರು.‌ ಎಲ್ರೂ ಹಾಗೂ ಹೀಗೂ ಕಷ್ಟ ಪಟ್ಟು ಕುಣೀತಿದ್ವಿ. ನನ್ನ ಸೀರೆ ಸಡಿಲ ಆಗಿ ಹೊರಗೆ ಬಂದೇ ಬಿಡ್ತು. ಅಂಗೇ ಕೈಯಲ್ಲಿ ಹಿಡ್ಕೊಂಡು ಕುಣಿದಿದ್ದಾಯ್ತು. ಲೇಲಾಲಿ ಲೋಲೇಸು ಲೇಲಾಲಿಲೋ ಅಂತ ಯಾವ್ದೋ ಹಾಡು ಅಂತ ನೆಪ್ಪು. ಒಟ್ಟಿಗೇ ಮೂರು ಹಾಡಿಗೆ ಕುಣೀಬೇಕಿತ್ತು. ಒಂದು ಹಾಡು ಮುಗೀತ್ಲೂ ನಮ್ಮ ಮೇಡಮ್ಮು ಹಿಂದೆ ಕರ್ಕೊಂಡು ಹೋಗಿ ಸೀರೆ ಸರಿ ಮಾಡಿ, ಮುಂದಿನ‌ ಕುಣಿತ ಶುರು ಮಾಡ್ಸಿದ್ದರು.

ಇನ್ನೊಂದು ಕಿತ ದೊಡ್ಡ ಮಕ್ಕಳಿಗೆ (ಏಳ್ನೇ ಕ್ಲಾಸು) ನಾಟಕ ಹೇಳಿಕೊಟ್ಟಿದ್ರು. ನಮ್ಮ ಅಣ್ಣಯ್ಯ ಆ ನಾಟ್ಕದಾಗೆ ವಾಮನನ‌ ಪಾರ್ಟು ಹಾಕಿದ್ದ. ಈಗ್ಲೂ ನನ್ನ ಕಿವೀಲಿ ನಮ್ಮ ಅಣ್ಣಯ್ಯನ ಆ ಪಾರ್ಟು, ಅಂಗೇ ಮಾತು ಗುಯ್ಗುಡ್ತಾ ಐತೆ. ‘ಭಕ್ತಾ ನನ್ನ‌ ಈ ಮೂರನೇ ಹೆಜ್ಜೆಯನ್ನು ಎಲ್ಲಿಡಲಿ’ ಅಂತ ಅಣ್ಣಯ್ಯ ಕೇಳಿದ್ಕೆ, ಆ ಬಲಿ ಮಾರಾಜನ ಪಾರ್ಟು ಹಾಕ್ದೋನು,‌ ‘ಹೇ, ಭಗವಂತಾ ನನ್ನ ಶಿರದ ಮೇಲಿಟ್ಟು ಈ ಪಾಮರನನ್ನು ಪಾವನ ಮಾಡುವಂತವರಾಗಿ’. ಅಂದಿದ್ದು ಸ್ನೇಹಿತ್ರ ಮುಂದ್ಲು ನಂಗೆ ಬೋ ಖುಸೀ ಅನ್ಸಿತ್ತು. ನಾಟ್ಕದಾಗೆ ನಮ್ಮಣ್ಣಯ್ಯ ಮೇನ್ ಪಾರ್ಟು ಹಾಕೌನೆ ಅಂತ ಎಲ್ರಿಗೂ ಸಾರ್ಕೊಂಡು ಬಂದಿದ್ದೆ. ಕಣ್ಣು ಬಾಯಿ ಬಿಟ್ಕೊಂಡು ನಾಟ್ಕ ನೋಡಿದ್ದು‌ ಈಗ್ಲೂ ಮರೆಯೋ ಹಂಗಿಲ್ಲ. ಮನೇನಲ್ಲಿ ಅಪ್ಪ‌ ಅಮ್ಮನ ಮುಂದೆ ಅದ್ರ ಮೆಹರ್ಬಾನಿ ಯೋಳಿದ್ದೂ ಯೋಳಿದ್ದೇ.

ಇವು ಪ್ರಾಥಮಿಕ ಶಾಲೇಲಿದ್ದಾಗಿನ ಕೆಲ ನೆನ್ಪುಗಳು. ಮುಂದಿನ ಕಿತ ಮಾಧ್ಯಮಿಕ ಶಾಲೇಲಿ‌ ನಡ್ದಿರೋ ಕೆಲ್ವು ಕುತೂಹಲಕಾರಿ ಸಂಗ್ತಿನಾ ಹಂಚಿಕೊಳ್ತೀನಿ.