“ಚೈತ್ರಕಾಲದ ಆರಂಭವನ್ನು ಪ್ರತಿನಿಧಿಸುವ, ವಸಂತ ಮಾಸದ ದೇವತೆಯನ್ನು ಆರಾಧಿಸುವ ಹಬ್ಬ ಅಂದು ಇದಾಗಿತ್ತಂತೆ. ಇಲ್ಲಿನ ವರ್ಷದ ಆರು ತಿಂಗಳುಗಳ ಕಳೆಗೆಟ್ಟ ಪ್ರಕೃತಿಗೆ ಒಮ್ಮೆಲೇ ಚೇತನ ಬರಲಾರಂಭಿಸಿದರೆ ಅದು ಹಬ್ಬವೂ ಹೌದು ಪೂಜೆಯೂ ಹೌದು. ಅನಾದಿಕಾಲದ ಈ ಸಂಭ್ರಮ ಒಂದಾನೊಂದು ಕಾಲದಲ್ಲಿ ಪೆಗನ್ ಜನರು ಎಂದು ಕರೆಸಿಕೊಳ್ಳುವ ಯೂರೋಪಿನ ಪೂರ್ವಜ “ಮಣ್ಣಿನ ಮಕ್ಕಳ” ಹಬ್ಬ ಆಗಿತ್ತು. ಈಗೆಲ್ಲ ಈಸ್ಟರ್ ಅಂದರೆ ಚಾಕಲೇಟ್ ನಿಂದ ಮಾಡಿದ ಮೊಟ್ಟೆಯನ್ನು ಎಲ್ಲೋ ಅಡಗಿಸಿಟ್ಟು ಅದನ್ನು ಮಕ್ಕಳು ಹುಡುಕುವ, ಆಮೇಲೆ ತಿನ್ನುವ “ಮೊಟ್ಟೆಬೇಟೆ ” ವಾಡಿಕೆ ಆಗಿದೆ.”
ಯೋಗೀಂದ್ರ ಮರವಂತೆ ಬರೆವ ಅಂಕಣ.
ಪ್ರತಿ ವಾರವೂ ಹೀಗೇ. ಸೋಮವಾರದಿಂದ ಶುಕ್ರವಾರ ಮತ್ತೆ ಮತ್ತೆ ಬರುವುದು ಹಾಗೇ ಹಾಗೇ ಕಳೆಯುವುದು. ಆಮೇಲೆ ಇನ್ನೇನು ವಾರಾಂತ್ಯ ಬಂತು ಬಂತು ಎನ್ನುವಾಗ ಕಚೇರಿ ಮುಗಿಸಿ ನಾವೆಲ್ಲಾ ಹೆಗಲಿಗೆ ಬ್ಯಾಗ್ ನೇತಾಡಿಸಿ ಎದುರು ಸಿಕ್ಕವರಿಗೆಲ್ಲ ವಾರಾಂತ್ಯ ಒಳ್ಳೆಯದಾಗಲಿ, ಶುಭವಾಗಲಿ ಅಂತ ಹರಸುತ್ತ ಕಚೇರಿಯಿಂದ ಹೊರ ನಡೆಯುವುದು. ಅಲ್ಲಿಂದ ಮುಂದೆ , ಪ್ರತಿ ಹೆಜ್ಜೆಗೂ ಕಚೇರಿಯ ಒಳಗಿನ ವಿಷಯಗಳೆಲ್ಲ ಮೆತ್ತಗೆ ತಲೆಯಿಂದ ಜಾರಿ ವಾರಾಂತ್ಯದ ಯೋಚನೆಗಳೆಲ್ಲ ದೇಹ ಮನಸುಗಳಿಗೆ ಆವಾಹನೆ ಆಗುವುದು. ಎಲ್ಲ ವಾರಾಂತ್ಯಗಳ ಆರಂಭವೂ ಹೀಗೆಯೇ.
ಇಡೀ ಹನ್ನೆರಡು ತಿಂಗಳಲ್ಲಿ ಐವತ್ತೆರಡೋ ಐವತ್ಮೂರೋ ವಾರಾಂತ್ಯಗಳು ಅಂತ ಲೆಕ್ಕ ಇಟ್ಟವರು ಹೇಳುತ್ತಾರೆ. ವಾರಗಳ ಲೆಕ್ಕ ಎಷ್ಟೇ ಆದರೂ, ವರ್ಷವಿಡೀ ಬಂದು ಹೋಗುವ ವಾರಾಂತ್ಯಗಳಲ್ಲಿ ಮಾರ್ಚ್ ತಿಂಗಳ ಆಸುಪಾಸಿಗೆ ಸಂಕ್ರಾಂತಿ, ಹುಣ್ಣಿಮೆ ಅಂತ ಲೆಕ್ಕ ಇಡುತ್ತ “ಈಸ್ಟರ್ ವೀಕೆಂಡ್” ಕೂಡ ಬರುತ್ತದೆ. ಈಸ್ಟರ ಯಾವ ದಿನ ಬರುತ್ತದೆ ಎನ್ನುವುದು ಇಲ್ಲಿನ ಇತರ ಆಚರಣೆಗಳ ದಿನಗಳಂತೆ ತಾರೀಕು ಲೆಕ್ಕದಲ್ಲಿ ಹೇಳಲು ಸಾಧ್ಯ ಇಲ್ಲ.. ಒಂದು ವರ್ಷ ಯಾವ ದಿನ ಬಂದಿದೆಯೋ ಇನ್ನೊಂದು ವರ್ಷ ಅದೇ ದಿನ ಬರುವುದಿಲ್ಲ. ಪ್ರತಿವರ್ಷ ತಪ್ಪಿಲ್ಲದೇ ಅದೇ ತಾರೀಖಿಗೆ ಬರುವ ಕ್ರಿಸ್ಮಸ್ ಇವರ ಪಾಲಿಗೆ “ಸ್ಥಿರ ಹಬ್ಬ”; ಆದರೆ ಪ್ರತಿ ವರ್ಷವೂ ಚಲಿಸುವ ಈಸ್ಟರ್ ಇಲ್ಲಿನ “ಚರ ಹಬ್ಬ”. ಒಟ್ಟಾರೆ ವಾರಾಂತ್ಯದಲ್ಲಿ ಬರುವ ಹಬ್ಬ. ವರ್ಷ ವರ್ಷವೂ ಹೀಗೆ ಬಂದು ಹಾಗೆ ಹೋಗುವ ಹೆಚ್ಚಿನ ವಾರಾಂತ್ಯಗಳಿಗೆ ಇಂತಹದ್ದೇ ಹೆಸರೋ, ವಿಶೇಷ ಗುರುತೋ ಇಲ್ಲದಿದ್ದರೂ ಈಸ್ಟರ್ ವೀಕೆಂಡ್ ಗೆ ಕ್ಯಾಲೆಂಡರ್ ನಲ್ಲೂ, ವರ್ಷದ ರಜೆಗಳ ಪಟ್ಟಿಯಲ್ಲೂ, ಶಾಲೆಯಲ್ಲೂ, ಕಚೇರಿಯಲ್ಲೂ ಎಲ್ಲ ಕಡೆ ಅನನ್ಯ ಸ್ಥಾನ. ಅಷ್ಟೇ ಯಾಕೆ ಮುರುಟಿದ ಮುದುರಿದ ಗಿಡ ಮರ ಬಳ್ಳಿಗಳೂ ಈಸ್ಟರ್ ಬರುವ ಸಮಯಕ್ಕೆ ಚಿಗುರೊಡೆಯುತ್ತವೆ. ನಮ್ಮ ಮನೆಯ ಹಿಂದೋಟದಲ್ಲಿ ಹೂವಿನ ಗಿಡಗಳ ನಡುವೆ ಹಾಯಾಗಿ ಮನೆ ಮಾಡಿಕೊಂಡಿರುವ ಮುಳ್ಳಿನ ಗಿಡವೂ ತನ್ನ ಒಣಮುಳ್ಳುಗಳಿಗೆ ಜೀವ ತುಂಬಿ ಹಸಿರಾಗಿ ಈಸ್ಟರ್ ಸಮಯದ ತಂಗಾಳಿಗೆ ನಗುತ್ತದೆ. ಶನಿವಾರ ಆದಿತ್ಯವಾರಗಳ ಮಾಮೂಲಿ ವಾರಾಂತ್ಯವೊಂದರ ಹಿಂದೆ ಮುಂದೆ ಬರುವ ಶುಕ್ರವಾರವೂ ಸೋಮವಾರವೂ ರಜೆ, ಆದರೆ ಅದೇ ಈಸ್ಟರ್ ರಜೆಯ ವಾರಾಂತ್ಯ. ಮತ್ತೆ ಇಂತಹದ್ದೊಂದು ದೀರ್ಘ ವಾರಾಂತ್ಯ ವರ್ಷದಲ್ಲಿ ಇದೊಂದೇ ಆದ್ದರಿಂದ ಈಸ್ಟರ್ ಎಲ್ಲರಿಗೂ ಇಷ್ಟ ಆಗುವ, ನೆನಪಿನಲ್ಲಿರುವ ವಾರಾಂತ್ಯ.
ವರ್ಷ ವರ್ಷವೂ ಹೀಗೆ ಬಂದು ಹಾಗೆ ಹೋಗುವ ಹೆಚ್ಚಿನ ವಾರಾಂತ್ಯಗಳಿಗೆ ಇಂತಹದ್ದೇ ಹೆಸರೋ, ವಿಶೇಷ ಗುರುತೋ ಇಲ್ಲದಿದ್ದರೂ ಈಸ್ಟರ್ ವೀಕೆಂಡ್ ಗೆ ಕ್ಯಾಲೆಂಡರ್ ನಲ್ಲೂ, ವರ್ಷದ ರಜೆಗಳ ಪಟ್ಟಿಯಲ್ಲೂ, ಶಾಲೆಯಲ್ಲೂ, ಕಚೇರಿಯಲ್ಲೂ ಎಲ್ಲ ಕಡೆ ಅನನ್ಯ ಸ್ಥಾನ. ಅಷ್ಟೇ ಯಾಕೆ ಮುರುಟಿದ ಮುದುರಿದ ಗಿಡ ಮರ ಬಳ್ಳಿಗಳೂ ಈಸ್ಟರ್ ಬರುವ ಸಮಯಕ್ಕೆ ಚಿಗುರೊಡೆಯುತ್ತವೆ. ನಮ್ಮ ಮನೆಯ ಹಿಂದೋಟದಲ್ಲಿ ಹೂವಿನ ಗಿಡಗಳ ನಡುವೆ ಹಾಯಾಗಿ ಮನೆ ಮಾಡಿಕೊಂಡಿರುವ ಮುಳ್ಳಿನ ಗಿಡವೂ ತನ್ನ ಒಣಮುಳ್ಳುಗಳಿಗೆ ಜೀವ ತುಂಬಿ ಹಸಿರಾಗಿ ಈಸ್ಟರ್ ಸಮಯದ ತಂಗಾಳಿಗೆ ನಗುತ್ತದೆ. ಶನಿವಾರ ಆದಿತ್ಯವಾರಗಳ ಮಾಮೂಲಿ ವಾರಾಂತ್ಯವೊಂದರ ಹಿಂದೆ ಮುಂದೆ ಬರುವ ಶುಕ್ರವಾರವೂ ಸೋಮವಾರವೂ ರಜೆ, ಆದರೆ ಅದೇ ಈಸ್ಟರ್ ರಜೆಯ ವಾರಾಂತ್ಯ.
ಆಪ್ತ, ಪರಿಚಿತ, ಜನಪ್ರಿಯ ಎಲ್ಲವೂ ಹೌದಾದ ಈಸ್ಟರ್ ನ ಆಚರಣೆ ಎಲ್ಲಿಂದ ಶುರುವಾಯಿತು ಎಂದು ಹುಡುಕುತ್ತ, ವಿಷಯ ಕೆದಕಿದರೆ ಸಾವಿರ ವರ್ಷಗಳು ಹಿಂದೆ ಸರಿದು, ಅಂದರೆ ಕ್ರಿಸ್ತನು ಹುಟ್ಟುವ ಮೊದಲಿನ ಕಾಲದ ರೈತರ ಬದುಕು ಬೇಸಾಯದ ಕಥೆಗಳು ನಮ್ಮೆದುರು ಬಿಡಿಸಿಕೊಳ್ಳುತ್ತವೆ. ಚೈತ್ರಕಾಲದ ಆರಂಭವನ್ನು ಪ್ರತಿನಿಧಿಸುವ, ವಸಂತ ಮಾಸದ ದೇವತೆಯನ್ನು ಆರಾಧಿಸುವ ಹಬ್ಬ ಅಂದು ಇದಾಗಿತ್ತಂತೆ. ಇಲ್ಲಿನ ವರ್ಷದ ಆರು ತಿಂಗಳುಗಳ ಕಳೆಗೆಟ್ಟ ಪ್ರಕೃತಿಗೆ ಒಮ್ಮೆಲೇ ಚೇತನ ಬರಲಾರಂಭಿಸಿದರೆ ಅದು ಹಬ್ಬವೂ ಹೌದು ಪೂಜೆಯೂ ಹೌದು. ಅನಾದಿಕಾಲದ ಈ ಸಂಭ್ರಮ ಒಂದಾನೊಂದು ಕಾಲದಲ್ಲಿ ಪೆಗನ್ ಜನರು ಎಂದು ಕರೆಸಿಕೊಳ್ಳುವ ಯೂರೋಪಿನ ಪೂರ್ವಜ “ಮಣ್ಣಿನ ಮಕ್ಕಳ” ಹಬ್ಬ ಆಗಿತ್ತು. ಈಗೆಲ್ಲ ಈಸ್ಟರ್ ಅಂದರೆ ಚಾಕಲೇಟ್ ನಿಂದ ಮಾಡಿದ ಮೊಟ್ಟೆಯನ್ನು ಎಲ್ಲೋ ಅಡಗಿಸಿಟ್ಟು ಅದನ್ನು ಮಕ್ಕಳು ಹುಡುಕುವ, ಆಮೇಲೆ ತಿನ್ನುವ “ಮೊಟ್ಟೆಬೇಟೆ ” ವಾಡಿಕೆ ಆಗಿದೆ. ಅಂದೆಂದೋ ಮರಗಿಡಗಳಿಗೆ ತುಂಬಿದ ಉತ್ಸಾಹವನ್ನು ಮನುಷ್ಯರೂ ಉಲ್ಲಾಸಿತರಾಗಿ ಸ್ವೀಕರಿಸುತ್ತಿದ್ದ ದಿನ, ಮುಂದೆ ಕಾಲಾಂತರದಲ್ಲಿ ಕ್ರೈಸ್ತನ ಪುನರುತ್ಥಾನದ ಪ್ರತೀಕವಾಯಿತು. ಹೊಸ ಜೀವದ ಹೊಸ ಹುಟ್ಟಿನ ಸಂಕೇತವಾಗಿ ಮೊಟ್ಟೆ ಹುಡುಕುವ ಆಟವೂ ಪ್ರಚಲಿತವಾಯಿತು. ಚಾಕಲೇಟ್ ನಿಂದ ಮಾಡಿದ ಮೊಟ್ಟೆಯನ್ನು ಹುಡುಕುವ ಆಟ, ಈಸ್ಟರ್ ಕಾರಣಕ್ಕೆ ಎಂದೇ ವಿಶೇಷ ಚಾಕಲೇಟ್ ಖರೀದಿ ನಡೆಯುವುದರ ಮೂಲಕ ಈಸ್ಟರ್ ವ್ಯಾಪಾರೀಕರಣವನ್ನೂ ಕಂಡಿತು. ಅಂಗಡಿಗಳಲ್ಲಿ ಸಣ್ಣ, ಹದ, ದೊಡ್ಡ ಗಾತ್ರದ, ಮಕ್ಕಳ ಬಾಯಲ್ಲಿ ನೀರೂರಿಸುವ ಚಾಕೋಲೇಟ್ ನಿಂದ ಮಾಡಿದ ಮೊಟ್ಟೆಗಳು ಮಾರಲ್ಪಡುತ್ತವೆ. ಇಲ್ಲಿನ ಶಾಲೆ, ಮನೆಗಳಲ್ಲಿ ಈಸ್ಟರ್ ಎಗ್ ಹಂಟ್ (Easter Egg Hunt) ನಡೆಯುತ್ತದೆ . ಮಕ್ಕಳಿಗೆ ಗೊತ್ತಾಗದಂತೆ ಎಲ್ಲೋ ಅಡಗಿಸಿಟ್ಟ ಚಾಕಲೇಟ್ ಮೊಟ್ಟೆಯನ್ನು ಮಕ್ಕಳು ಸುಳಿವು ಬಿಡಿಸುತ್ತ ಜಾಡು ಹಿಡಿಯುತ್ತಾ ಹುಡುಕುತ್ತಾರೆ. ಈಸ್ಟರ್ ಅನ್ನು ಹಬ್ಬ ಎಂದು ಕೊಂಡಾಡಿ, ಚಾಕಲೇಟ್ ಬೇಟೆ ಎಂದು ಹೆಸರಿಡಿ, ಚೈತ್ರಮಾಸದ ಆಗಮನ ಎನ್ನಿ, ಪುನರುತ್ಥಾನ ಅನ್ನಿ, ರಜೆ ಎಂದು ಕರೆಯಿರಿ ವಿರಾಮ ಎಂದು ತಿಳಿಯಿರಿ. ಹೇಗಾದರೂ ಅಡ್ಡಿಯಿಲ್ಲ. ಇಡೀ ವರ್ಷದಲ್ಲಿ ಕ್ರಿಸ್ಮಸ್ ಸಮಯ ಬಿಟ್ಟರೆ ಸಿಗುವ ಇನ್ನೊಂದು ಉದ್ದದ ರಜೆಯ ಕಾಲ ಇದಾದ್ದರಿಂದ, ಈಸ್ಟರ್ ಎಂದು ಬರುವುದೋ ಎಂದು ಕಾಯುವವರಂತೂ ಬಹಳ ಇದ್ದಾರೆ.
ಕಾದದ್ದೂ ಆಗಿದೆ, ಈ ವರ್ಷದ ಈಸ್ಟರ್ ರಜೆ ಈಗ ಕಳೆದೂ ಹೋಗಿದೆ. ಆದರೂ ಈಸ್ಟರ ಬಗ್ಗೆ ಹೇಳಲಿಕ್ಕೆ ಇನ್ನೂ ಇದೆ. ಶುದ್ಧ ಇಂಗ್ಲಿಷ್ ರು ಈಸ್ಟರ್, ಕ್ರಿಸ್ಮಸ್ ನಂತಹ ಹಬ್ಬಗಳ ರಜೆಗೆ ಪ್ರವಾಸ, ದೂರಪ್ರಯಾಣ ಮಾಡುವುದಿಲ್ಲ. ಮನೆಯಲ್ಲಿ ಏನೋ ಮಾಡಿ ಅಥವಾ ಏನೂ ಮಾಡದೇ ದಿನ ಕಳೆಯುತ್ತಾರೆ. ನನ್ನ ಸಹೋದ್ಯೋಗಿಯೊಬ್ಬ ಈಸ್ಟರ್ ರಜೆಯ ನಾಲ್ಕು ದಿನ ತನ್ನ ಮತ್ತು ಹೆಂಡತಿಯ ಕಡೆಯ ತಂದೆ ತಾಯಿ ಅಜ್ಜ ಅಜ್ಜಿಯರನ್ನು ಭೇಟಿ ಮಾಡಿಬಂದಿದ್ದಾನೆ. ಹೆಂಡತಿ ಮಕ್ಕಳನ್ನು ಕಾರಲ್ಲಿ ಕೂರಿಸಿಕೊಂಡು ನಾಲ್ಕು ದಿನಗಳ ರಜೆಯಲ್ಲಿ ಅಜ್ಜ ಅಜ್ಜಿಯರ ಮನೆ ಸುತ್ತಿಬರಲೆಂದ ಹೋಗಿದ್ದ ಅಂವ, ಅಲ್ಲಿ ಹೋದಾಗ ಅವರ ಮನೆಯ ಮುರಿದ ಬೇಲಿಯನ್ನು ಎತ್ತಿ ನಿಲ್ಲಿಸಿದ್ದಾನೆ. ಅವರ ಮನೆಯ ಮಾಸಿ ಮಬ್ಬಾದ ಗೇಟಿಗೆ ಬಣ್ಣ ಹಚ್ಚಿದ್ದಾನೆ. ಆರು ತಿಂಗಳು ಬಿಟ್ಟು ಆವರಿಸಲಿರುವ ಚಳಿಗೆ ಮನೆಯೊಳಗಿರುವ ಅಗ್ಗಿಷ್ಟಿಕೆ ಹೊತ್ತಿಸಿ ಬೆಚ್ಚಗೆ ಮಾಡಿಕೊಳ್ಳಲು ಕಟ್ಟಿಗೆ ಕಡಿದು ಕೂಡಿಟ್ಟಿದ್ದಾನೆ. ಈ ಸಲದ ಈಸ್ಟರ್ ರಜೆಯಲ್ಲಿ ನಡೆಯಲಾರದೇ ಹಾಸಿಗೆಯಲ್ಲೇ ಮಲಗಿ ನಗುತ್ತಿದ್ದ ಅಜ್ಜ ಮುಂದಿನ ಈಸ್ಟರ್ ಹೊತ್ತಿಗೆ ಹಾಸಿಗೆ ಬಿಟ್ಟು ಇಳಿದಾನೋ ಅಥವಾ.. ಮತ್ತೆ ಬರದಲ್ಲಿಗೆ ನಡೆದಾನೋ ಎಂದು ಚಿಂತಿಸುತ್ತಿದ್ದಾನೆ.
ಚೈತ್ರಕಾಲದ ಆರಂಭವನ್ನು ಪ್ರತಿನಿಧಿಸುವ, ವಸಂತ ಮಾಸದ ದೇವತೆಯನ್ನು ಆರಾಧಿಸುವ ಹಬ್ಬ ಅಂದು ಇದಾಗಿತ್ತಂತೆ. ಇಲ್ಲಿನ ವರ್ಷದ ಆರು ತಿಂಗಳುಗಳ ಕಳೆಗೆಟ್ಟ ಪ್ರಕೃತಿಗೆ ಒಮ್ಮೆಲೇ ಚೇತನ ಬರಲಾರಂಭಿಸಿದರೆ ಅದು ಹಬ್ಬವೂ ಹೌದು ಪೂಜೆಯೂ ಹೌದು. ಅನಾದಿಕಾಲದ ಈ ಸಂಭ್ರಮ ಒಂದಾನೊಂದು ಕಾಲದಲ್ಲಿ ಪೆಗನ್ ಜನರು ಎಂದು ಕರೆಸಿಕೊಳ್ಳುವ ಯೂರೋಪಿನ ಪೂರ್ವಜ “ಮಣ್ಣಿನ ಮಕ್ಕಳ” ಹಬ್ಬ ಆಗಿತ್ತು. ಈಗೆಲ್ಲ ಈಸ್ಟರ್ ಅಂದರೆ ಚಾಕಲೇಟ್ ನಿಂದ ಮಾಡಿದ ಮೊಟ್ಟೆಯನ್ನು ಎಲ್ಲೋ ಅಡಗಿಸಿಟ್ಟು ಅದನ್ನು ಮಕ್ಕಳು ಹುಡುಕುವ, ಆಮೇಲೆ ತಿನ್ನುವ “ಮೊಟ್ಟೆಬೇಟೆ ” ವಾಡಿಕೆ ಆಗಿದೆ. ಅಂದೆಂದೋ ಮರಗಿಡಗಳಿಗೆ ತುಂಬಿದ ಉತ್ಸಾಹವನ್ನು ಮನುಷ್ಯರೂ ಉಲ್ಲಾಸಿತರಾಗಿ ಸ್ವೀಕರಿಸುತ್ತಿದ್ದ ದಿನ, ಮುಂದೆ ಕಾಲಾಂತರದಲ್ಲಿ ಕ್ರೈಸ್ತನ ಪುನರುತ್ಥಾನದ ಪ್ರತೀಕವಾಯಿತು. ಹೊಸ ಜೀವದ ಹೊಸ ಹುಟ್ಟಿನ ಸಂಕೇತವಾಗಿ ಮೊಟ್ಟೆ ಹುಡುಕುವ ಆಟವೂ ಪ್ರಚಲಿತವಾಯಿತು.
ಇನ್ನು, ಹತ್ತಿರದಲ್ಲಿ ಅಜ್ಜ ಅಜ್ಜಿಯರ ಮನೆ ಇಲ್ಲದ ಎಷ್ಟೋ ಭಾರತೀಯರು ಎಲ್ಲಾದರೂ ಮನೆಯಿಂದ ದೂರದ ಗುಡ್ಡ ಬೆಟ್ಟ ಸಮುದ್ರ ಕಾಡು ಹುಡುಕಿಕೊಂಡು ಅಲ್ಲೇ ಎಲ್ಲೋ ಮೂರ್ನಾಲ್ಕು ದಿನ ಕಳೆದು ಬಂದಿದ್ದಾರೆ. ನಾಲ್ಕು ದಿನಗಳ ಅಮೂಲ್ಯ ರಜೆಯ ಈ ವಾರಾಂತ್ಯಕ್ಕೆ ಬಿಸಿಲಿರುವುದೋ ಮಳೆ ಬರುವುದೋ ಗಾಳಿ ಬೀಸುವುದೋ ತಿಳಿಯದೆ ಅಂದಾಜಿನ ಮೇಲೆ ಅಪೇಕ್ಷೆಯ ಮೇಲೆ ಮನೆ ಹಾಗು ಕೆಲಸದಿಂದ ದೂರ ಎಲ್ಲೋ ಕಾಟೇಜ್ ಅಥವಾ ಹೋಟೆಲ್ ವ್ಯವಸ್ಥೆ ಮಾಡಿ ಉಳಿದು ಬಂದಿದ್ದಾರೆ. ಹೀಗೆ ನಾನು ಕೂಡ ನವಿಲುಗೋಣ, ಕುಮಟಾ, ಸಿರ್ಸಿಯ ಸ್ನೇಹಿತರ ಜೊತೆ ಇಂಗ್ಲೆಂಡ್ ನ ನೆರೆಯ ವೇಲ್ಸ್ ಪ್ರಾಂತ್ಯದ ಹಸಿರು ಬೆಟ್ಟಗಳ ತಪ್ಪಲಿನ “ಪ್ಲೊ ಕಾಟೇಜ್” ಅಲ್ಲಿ ನಾಲ್ಕು ದಿನಗಳ ರಜೆ ಕಳೆದಿದ್ದೇನೆ.
ಮಳೆ ಹನಿ ಬಿದ್ದ ಎಲೆಗಳು, ಹಳೆಯ ಮರಕ್ಕೆ ಹಬ್ಬಿದ ಹಸಿರು ಬಳ್ಳಿಗಳು, ಇಬ್ಬನಿ ಬಿದ್ದ ಹುಲ್ಲು ಹಾಸುಗಳಿಂದಲೇ ಸುತ್ತುವರಿದ ಕಾಟೇಜ್ ರಜೆ ಕಳೆಯಲಿಕ್ಕೆ ಸೂಕ್ತವೂ ಹೌದು. ಬದಲಾಗುವ ಮನೋಧರ್ಮದ ಹವಾಮಾನ, ಊಹೆಗೂ ಸಿಗದ ವೈಪರೀತ್ಯದ ವಾತಾವರಣದ ಈ ದೇಶದಲ್ಲಿ ಬೇಸಿಗೆಯ ಆರಂಭದ ಈಸ್ಟರ್ ರಜೆ ಬಿಸಿಲೇ ಇಲ್ಲದೆ ಕಳೆದು ಹೋಗುವ ಸಾಧ್ಯತೆಯೇ ಹೆಚ್ಚು ಎನ್ನುವುದು ಈ ಸಲವೂ ರುಜುವಾತಾಗಿದೆ. ಸಮುದ್ರ ಗುಡ್ಡ ಕಣಿವೆ ಸುತ್ತಲು ಆಯಕಟ್ಟಿನ ರಜೆ, ವಾಸ್ತವ್ಯ ಇದೇ ಎಂದು ಹೊರಟ ನಾವು ಚಳಿ ಇಬ್ಬನಿ ತಂಗಾಳಿ ಮಳೆಯಲ್ಲೇ ರಜೆ ಕಳೆಯುವಂತಾಗಿದೆ. ದಿನವೂ ಮಾಡುವ ಕೆಲಸಗಳಿಂದ ದೊರಕುವ ಮುಕ್ತಿ, ನಿತ್ಯ ಕೇಳುವ ಸದ್ದುಗಳಿಂದ ದೂರ, ಎಲ್ಲೋ ಪರ್ವತ ಕಣಿವೆಯ ಹತ್ತಿರ, ಸ್ನೇಹಿತರ ಸಂಗ ಕೂಡಿ ಅಡುಗೆ ಮಾಡುವುದು, ಕಲೆತು ಉಣ್ಣುವುದು, ಹಗಲೂ ರಾತ್ರಿಯೂ ಹರಟೆ ಹೊಡೆಯುವುದು ಇವೆಲ್ಲವೂ ಜೊತೆಯಾದಾಗ ರಜೆ ಅಂದರೆ ಹೀಗಿದ್ದರೂ ಚಂದ ಅಂತ “ಪ್ಲೊ ಕಾಟೇಜ್ “ನ ವಾಸ ಕಲಿಸಿದೆ.
ಮಳೆ ಹನಿ ಬಿದ್ದ ಎಲೆಗಳು, ಹಳೆಯ ಮರಕ್ಕೆ ಹಬ್ಬಿದ ಹಸಿರು ಬಳ್ಳಿಗಳು, ಇಬ್ಬನಿ ಬಿದ್ದ ಹುಲ್ಲು ಹಾಸುಗಳಿಂದಲೇ ಸುತ್ತುವರಿದ ಕಾಟೇಜ್ ರಜೆ ಕಳೆಯಲಿಕ್ಕೆ ಸೂಕ್ತವೂ ಹೌದು. ಬದಲಾಗುವ ಮನೋಧರ್ಮದ ಹವಾಮಾನ, ಊಹೆಗೂ ಸಿಗದ ವೈಪರೀತ್ಯದ ವಾತಾವರಣದ ಈ ದೇಶದಲ್ಲಿ ಬೇಸಿಗೆಯ ಆರಂಭದ ಈಸ್ಟರ್ ರಜೆ ಬಿಸಿಲೇ ಇಲ್ಲದೆ ಕಳೆದು ಹೋಗುವ ಸಾಧ್ಯತೆಯೇ ಹೆಚ್ಚು ಎನ್ನುವುದು ಈ ಸಲವೂ ರುಜುವಾತಾಗಿದೆ. ಸಮುದ್ರ ಗುಡ್ಡ ಕಣಿವೆ ಸುತ್ತಲು ಆಯಕಟ್ಟಿನ ರಜೆ, ವಾಸ್ತವ್ಯ ಇದೇ ಎಂದು ಹೊರಟ ನಾವು ಚಳಿ ಇಬ್ಬನಿ ತಂಗಾಳಿ ಮಳೆಯಲ್ಲೇ ರಜೆ ಕಳೆಯುವಂತಾಗಿದೆ.
“ಪ್ಲೊ ಕಾಟೇಜ್” ನ ಯಜಮಾನರು ಅಡ್ರಿಯನ್ ಮತ್ತು ಜೂಲಿ ಎನ್ನುವವರು ವೃದ್ಧಾಪ್ಯದ ಹೊಸ್ತಿಲಲ್ಲಿದ್ದಾರೆ. ಕಳೆದ ಮೂವತ್ತು ವರ್ಷಗಳ ಕಾಲ ಅವರು ಪಶ್ಚಿಮ ವೇಲ್ಸ್ ಅಲ್ಲಿ ಅಕ್ಕ ಪಕ್ಕದಲ್ಲಿರುವ ಮೂರು ಬೇರೆ ಬೇರೆ ಗಾತ್ರದ ಕಾಟೇಜ್ ಗಳನ್ನು ಬಾಡಿಗೆ ಕೊಡುತ್ತ ಬದುಕು ಸವೆಸಿದ್ದಾರೆ. ಕಾಟೇಜ್ ಸ್ವಚ್ಛ ಮಾಡುವುದು, ಅಣಿಗೊಳಿಸುವುದು, ನಿರ್ವಹಣೆ ಮಾಡುವುದು, ವಸತಿ ಹುಡುಕಿ ಬಂದವರಿಗೆ ಒದಗಿಸುವುದು ಬೇಕೆಂದರೂ ಬೇಡ ಎಂದರೂ ದಶಕಗಳಿಂದ ಆ ದಂಪತಿಗಳ ಉದರನಿಮಿತ್ತ ಕಾಯಕ. ಕೆಲವೊಮ್ಮೆ ತಮ್ಮ ಕಾಟೇಜುಗಳನ್ನು ಆಸರೆ ನೀಡುವ ಅಪ್ಪ ಅಮ್ಮನಂತೆಯೂ ಮತ್ತೆ ಕೆಲವೊಮ್ಮೆ ಪ್ರೀತಿ ಪಡೆಯುವ ಮಕ್ಕಳಂತೆಯೂ ಕಾಣುತ್ತ ತಮ್ಮ ಚಿನ್ನದ ಕೂದಲು ಬಿಳಿಯಾಯಿತು ಎಂದೂ ನಗುತ್ತಾ ಕಾಟೇಜು ಯಜಮಾನಿಕೆಯ ಅಥವಾ ನೌಕರಿಯ ಕತೆ ಹೇಳುತ್ತಾರೆ. ಎಂತಹ ಪ್ರೀತಿಯ ಉದ್ಯೋಗವೇ ಇರಲಿ ಎಷ್ಟು ಆಪ್ತ ಹಾದಿಯ ನಡಿಗೆಯೇ ಆಗಲಿ ಕಾಲಕ್ರಮೇಣ ಎಲ್ಲವೂ ಒಂದು ತರಹದ ದುಡಿಮೆಯೇ ಅನಿಸಿ ಈ ಜೀವನ ಇನ್ನು ಸಾಕು, ಮೂರು ಕಾಟೇಜುಗಳನ್ನು ಮಾರಿ ಸುಖವಾಗಿ ವಿಶ್ರಾಂತ ಜೀವನ ಮಾಡುವೆವು ಎಂದು ಬಯಸಿದ್ದಾರೆ. ಈ ವರ್ಷದ ಈಸ್ಟರ್ ಸಮಯದಲ್ಲಿ ನಮನ್ನು ಆವರಿಸಿದ ಚಳಿ ತುಂಬಿದ ಇಬ್ಬನಿ ಬೀಳುವ ರಾತ್ರಿಗಳನ್ನು, ಶಾಖನೀಡುವ ಇವರ ವಸತಿಯ ಒಲೆಗಳಲ್ಲಿ ಕಟ್ಟಿಗೆ ಇಟ್ಟು ಬೆಂಕಿ ಹೊತ್ತಿಸಿ ಸುತ್ತ ಕೂತು ಕೈಗಳನ್ನು ಉಜ್ಜುತ್ತ ನಾವು ಕಳೆದಿದ್ದೇವೆ. ಮತ್ತೆ ಅಡ್ರಿಯನ್ ಮತ್ತು ಜೂಲಿಯರ ಆಕಾಂಕ್ಷೆಗಳೂ ಆಶಯಗಳೂ ಪೂರ್ತಿಯಾಗಲಿ ಎಂದು ಹಾರೈಸಿದ್ದೇವೆ. ಮುಗಿದ ಈಸ್ಟರ್, ಆರಂಭವಾದ ವಸಂತ, ವೇಲ್ಸ್ ನ ಗುಡ್ಡ ಬೆಟ್ಟ, ಹಸಿರು, ಕಣಿವೆ, ಕಾಟೇಜ್ ಮೆಲುಕು ಹಾಕುತ್ತ ಬ್ರಿಸ್ಟಲ್ ಸೇರಿದ್ದೇವೆ; ತಣ್ಣಗೆ ಕೊರೆಯುವ ಚಳಿ ಬೆಚ್ಚಗೆ ಸುಡುವ ಬೆಂಕಿ ಎರಡೂ ಇನ್ನೆಂದು ಜೋಡಿಯಾಗುವವೋ ಕಾಯುತ್ತಿದ್ದೇವೆ.
ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ “ಏರ್ ಬಸ್” ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.