ನಾವು ಹುಡುಗರು, ವಯಸ್ಸಾಗಿ ಕಣ್ಣು ಮಂಜಾದವರಿಗೆ ಚಂದ್ರನನ್ನು ತೋರಿಸುವ ಕೆಲಸ ಮಾಡುತ್ತಿದ್ದೆವು. ಅವರ ಬೆನ್ನಹಿಂದೆ ನಿಂತು, ಅವರ ಎಡಹೆಗಲ ಮೇಲೆ ನಮ್ಮ ಕೈಯಿಟ್ಟು, ಬಲಗಿವಿಯ ಪಕ್ಕ ನಮ್ಮ ಕೆನ್ನೆಯನ್ನು ತಂದು, ನಮ್ಮ ತೋರುಬೆರಳನ್ನು ನಿಮಿರಿಸಿ ಚಂದ್ರನಿರುವ ಜಾಗಕ್ಕೆ ಅವರ ದಿಟ್ಟಿಯನ್ನು ಮುಟ್ಟಿಸಲು ಯತ್ನಿಸುತ್ತಿದ್ದೆವು; “ಅಗೋ ಆ ಕರೇ ಮಾಡ ಐತಲ್ಲಜ್ಜಿ, ಅದರ ಪಕ್ಕ, ಮೊಸಳೆ ತರಹ ಒಂದು ಮಾಡ ಎದ್ದೀತಲ್ಲ,  ಅದರ ಬಲಗಡೆ” ಎಂದು ವೀಕ್ಷಕ ವಿವರಣೆ ಕೊಡುತ್ತಿದ್ದೆವು. ರಹಮತ್ ತರೀಕೆರೆ ಅಂಕಣ

 

ತರೀಕೆರೆಯ ಕೆರೆಕೋಡಿ ಪಕ್ಕದ ಒಂದು ಬೀದಿಯಲ್ಲಿ ನನ್ನ ಬಾಲ್ಯ ಕಳೆಯಿತು. ಅಲ್ಲಿ ತಮಿಳು ಬೆಸ್ತರು, ತೆಲುಗು ಮಾತಿನ ಈಡಿಗರು, ಬಡಗಿ ಕೆಲಸ ಮಾಡುವ ಆಚಾರಿಗಳು, ಕಮ್ಮಾರರು, ಮಂಡಕ್ಕಿ ಹುರಿಯುವ ಮರಾಠಿಗರು, ಬಿದಿರಬುಟ್ಟಿ ಮಾಡುವ ಮೇದಾರರು ಇದ್ದರು. ಹೆಚ್ಚಿನವರು ಅವತ್ತು ದುಡಿದು ಅವತ್ತೇ ತಿನ್ನುವವರು. ಆದರೂ ಒಬ್ಬರ ಮನೆಯ ಹಬ್ಬವೆಂದರೆ, ಇಡೀ ಬೀದಿ ಹಂಚಿಕೊಳ್ಳುತ್ತಿತ್ತು. ರಂಜಾನ್ ಹಬ್ಬದ ದಿನ ಶೀರ್ ಕುರುಮಾ ಬಟ್ಟಲನ್ನು ಬೀದಿಯ ಎಲ್ಲರ ಮನೆಗೆ ತಲುಪಿಸಿ ಬರುವುದೇ ಹುಡುಗರಾದ ನಮ್ಮ ಕೆಲಸ. ಉಗಾದಿಯ ದಿನ ಬೇರೆಯವರ ಮನೆಗಳಿಂದ ತಟ್ಟೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಹೋಳಿಗೆ, ಕೋಸಂಬರಿ, ಹೋಳಿಗೆ ಸಾರು, ಚಿತ್ರಾನ್ನ, ಕರಿದ ಮಜ್ಜಿಗೆ ಮೆಣಸಿನಕಾಯಿ ಸಂಡಿಗೆಗಳನ್ನು ಬಾಗಿಲಲ್ಲಿ ನಿಂತು ಸ್ವಾಗತಿಸುವ ಕೆಲಸವೂ ನಮ್ಮದೇ. ನಾವು ಅವರಿವರ ಮನೆಯ ಅಡಿಗೆಗೆ ಕಾಯಬಾರದೆಂದು ಅಮ್ಮ ಕೂಡ ಹೋಳಿಗೆ ಮಾಡುತ್ತಿದ್ದಳು. ಆದರೆ ಹೊರಗಿಂದ ಬಂದ ಹೋಳಿಗೆಗೆ ಬೇರೆಯೇ ರುಚಿ ಇರುತ್ತಿತ್ತು.

ನಮ್ಮ ಬೀದಿಯ ಜನ, ಉಗಾದಿಯಂದು ಹೊತ್ತು ಕಂತುವ ಸಮಯಕ್ಕೆ ಮಂಡಕ್ಕಿ ಅಕ್ಕಿ ಒಣಗಿಸಲು ಮಾಡಿದ್ದ ಕಣದಲ್ಲಿ ಜಮಾಯಿಸುತ್ತಿತ್ತು. ಜಮಾಯಿಸಿ ಕೆರೆಯ ಕೆಳಗಿನ ಅಡಿಕೆ ತೋಟಗಳ ತಲೆಯ ಮೇಲೆ, ಹೊಂಬಣ್ಣ ತುಂಬಿದ ಪಡುವಣದ ಆಗಸದಲ್ಲಿ, ಬೆಳ್ಳಿಯ ಕುಡುಗೋಲಿನಂತಹ ಉಗಾದಿ ಚಂದ್ರನನ್ನು ಹುಡುಕುವ ಕೆಲಸವನ್ನು ಮಾಡುತ್ತಿತ್ತು. ನಾವು ಹುಡುಗರು, ವಯಸ್ಸಾಗಿ ಕಣ್ಣು ಮಂಜಾದವರಿಗೆ ಚಂದ್ರನನ್ನು ತೋರಿಸುವ ಕೆಲಸ ಮಾಡುತ್ತಿದ್ದೆವು. ಅವರ ಬೆನ್ನಹಿಂದೆ ನಿಂತು, ಅವರ ಎಡಹೆಗಲ ಮೇಲೆ ನಮ್ಮ ಕೈಯಿಟ್ಟು, ಬಲಗಿವಿಯ ಪಕ್ಕ ನಮ್ಮ ಕೆನ್ನೆಯನ್ನು ತಂದು, ನಮ್ಮ ತೋರುಬೆರಳನ್ನು ನಿಮಿರಿಸಿ ಚಂದ್ರನಿರುವ ಜಾಗಕ್ಕೆ ಅವರ ದಿಟ್ಟಿಯನ್ನು ಮುಟ್ಟಿಸಲು ಯತ್ನಿಸುತ್ತಿದ್ದೆವು; “ಅಗೋ ಆ ಕರೇ ಮಾಡ ಐತಲ್ಲಜ್ಜಿ, ಅದರ ಪಕ್ಕ, ಮೊಸಳೆ ತರಹ ಒಂದು ಮಾಡ ಎದ್ದೀತಲ್ಲ,  ಅದರ ಬಲಗಡೆ” ಎಂದು ವೀಕ್ಷಕ ವಿವರಣೆ ಕೊಡುತ್ತಿದ್ದೆವು. ಚಂದ್ರನನ್ನು ಹುಡುಕಿ ಕೊಡುವ ಕೆಲಸ ನಮಗೇನು ಹೊಸತಲ್ಲ. ರಂಜಾನ್ ತಿಂಗಳಲ್ಲಿ ಕೂಡ ಚಂದ್ರನನ್ನು ನಾವು ಹೀಗೇ ಹುಡುಕಿಕೊಡುತ್ತಿದ್ದೆವು. ಉಗಾದಿ ಚಂದ್ರನನ್ನು ತೋರಿಸುವಾಗ ಈಡಿಗರ ಅಜ್ಜಿಗೆ ಕಾಣದಿದ್ದರೂ ಮೋಡದ ಯಾವುದೊ ಚೂರನ್ನು ಕಂಡು `ಹ್ಞೂಕಣಪ್ಪಾ, ಕಾಣ್ತುಕಾಣ್ತು, ಸ್ವಾಮಿ ನಮಪ್ಪಾ. ಈಸಲ ಒಳ್ಳೆ ಮಳೆಬೆಳೆ ಕೊಡಪ್ಪಾ’ ಎಂದು ಅದು ಚಂದ್ರನಿರುವ  ದಿಕ್ಕಿಗೆ ಕೈಮುಗಿಯುತ್ತಿತ್ತು. ಅದೇ ಹೊತ್ತಲ್ಲಿ ಅಪ್ಪ, ಬೀದಿಯಲ್ಲಿ ಹಿರೀಕನಂತೆ ಅಂಗಳದಲ್ಲಿ ಒಂದು ಕುರ್ಚಿ ಹಾಕಿಕೊಂಡು ಜಗದ್ಗುರುವಿನಂತೆ ಪಾದಗಳನ್ನು ನೀಟಾಗಿ ಜೋಡಿಸಿಕೊಂಡು ಕೂರುತ್ತಿದ್ದ. ನಮ್ಮ ಬೀದಿಯ ಚಿಕ್ಕವರೆಲ್ಲರೂ ಅಪ್ಪನಿಗೆ `ಸಾಬರೇ ಆಶೀರ್ವಾದ ಮಾಡ್ರಿ’ ಎಂದು ಕಾಲುಮುಟ್ಟಿ ಹಾರೈಕೆ ಪಡೆಯುತ್ತಿದ್ದರು.

ಮುಂದೆ ನಾನು ಸಾಹಿತ್ಯದ ವಿದ್ಯಾರ್ಥಿಯಾಗಿ ಬೇಂದ್ರೆಯವರ `ಯುಗಾದಿ’ ಕವನ ಓದಿದೆ (ಅದನ್ನು ಪಿ.ಸುಶೀಲಾ ಕಂಠದಲ್ಲಿ ಕೇಳಿದೆ ಎನ್ನುವುದೇ ಸರಿ.) ಪ್ರತಿ ಉಗಾದಿ ಹಬ್ಬದ ದಿನ ಭದ್ರಾವತಿ ಆಕಾಶವಾಣಿಯವರು ಬೆಳಗಿನ ಕನ್ನಡ ವಾರ್ತೆಯ ಬಳಿಕ, ಸರಿಯಾಗಿ 7.45ಕ್ಕೆ `ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’  ಹಾಕುತ್ತಿದ್ದರು. ನಮ್ಮೂರಲ್ಲಿ ಹೊಂಗೆಗಿಡಗಳು ಬಹಳವಾದ್ದರಿಂದ “ಹೊಂಗೆಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ” ಎಂಬ ಸಾಲು ಚೆನ್ನಾಗಿ ಮನವರಿಕೆ ಆಗುತಿತ್ತು.

ಈ ಸಾಲನ್ನು ನಾನು ಮೈಸೂರಿನಲ್ಲಿದ್ದಾಗ ಕುಕ್ಕರಹಳ್ಳಿ ಕೆರೆಯ ಏರಿಯ ಬಳಿ ಇನ್ನೂ ಚೆನ್ನಾಗಿ ಅನುಭವಿಸಿದೆ. ಬಹಳ ದಿನಗಳ ಮೇಲೆ ನನಗೆ ಗೊತ್ತಾಗಿದ್ದು ಈ ಕವನ ಉಗಾದಿಯ  ನಿಸರ್ಗದ ಸಂಭ್ರಮಾಚರಣೆಯ ಹಾಡು ಮಾತ್ರವಲ್ಲ, ವಿಷಾದಗೀತೆ ಕೂಡ ಆಗಿದೆಯೆಂದು. ಅದರಲ್ಲಿರುವ  “ವರುಷಕೊಂದು ಹೊಸ ಜನುಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ; ಒಂದೇ ಜನ್ಮದಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೆ?” ಎಂಬ ಸಾಲು ಸಾವಿಗೆ ಕಂಪಿಸುವ ನನ್ನಲ್ಲಿ ವಿಚಿತ್ರ ಅಸಹಾಯಕತೆಯನ್ನು ಹುಟ್ಟಿಸಿಬಿಟ್ಟಿತು. ಹೌದಲ್ಲ? ಯಾಕೀ ಅನ್ಯಾಯ? ಎಂದು ಆಕ್ರೋಶ ಬರುತ್ತಿತ್ತು. ಯುಗದ ಆದಿಯನ್ನು ಸೂಚಿಸುವ ಈ ಹಬ್ಬ, ಕಾಲನ ಕಠೋರತೆಯನ್ನೂ ಸೂಚಿಸುತ್ತ ತಳಮಳಕ್ಕೆ ಕಾರಣವಾಗಿಬಿಟ್ಟಿತು.

ಇದನ್ನೆಲ್ಲ ಧೇನಿಸುತ್ತ್ತ ನಾಳೆ ಬರಲಿರುವ ಉಗಾದಿಯನ್ನು ನೆನೆಯುತ್ತ, ಮನೆಯ ಮುಂದಿನ ಮರಗಳನ್ನು ಗಮನಿಸತೊಡಗಿದೆ. ರಸ್ತೆಬದಿ ನಾವೇ ನಟ್ಟಿದ್ದ ಹೊಂಗೆಯ ಗಿಡಗಳು ಸತ್ತೇಹೋಗುತ್ತವೆ ಎಂಬಂತೆ ಬರಲುಗೊಂಡಿದ್ದವು. ನಮ್ಮ ತಾಪತ್ರಯಗಳಲ್ಲಿ ಅವಕ್ಕೆ ನೀರುಣಿಸುವ ಪುರುಸೊತ್ತೂ ಸಿಕ್ಕಿರಲಿಲ್ಲ. ಕೆಲವು ಎಮ್ಮೆಗಳು ಕೋಡಿನ ತುರಿಕೆ ಕಳೆಯಲು ಈ ಗಿಡಗಳನ್ನು ತಿಕ್ಕಾಡಿದ್ದರಿಂದ, ಅವು ಲಾಠಿಚಾರ್ಜಿಗೆ ಒಳಗಾದ ಭಿಕ್ಷುಕರಂತಾಗಿದ್ದವು. ಆದರೆ ಈಗ ಗಾಯಗೊಂಡ ಅವುಗಳ ಕೊಂಬೆಗಳಿಂದ ಜೀವರಸ ಹೊಮ್ಮಿದಂತೆ ತೆಳುಕೆಂಬಣ್ಣದ ತಳಿರೆಲೆಗಳು ಮೂಡಿದ್ದವು-ಯಾರ ಕರುಣೆಯೂ ನಮಗೆ ಬೇಕಾಗಿಲ್ಲ ಎಂದು ಸೂಚಿಸುವಂತೆ.

ಕಳೆದೆರಡು ವಾರಗಳಿಂದ ನಮ್ಮ ಹಿತ್ತಿಲಿನ ಮರಗಿಡಗಳು ಎಲೆಯುದುರಿಸುವ ಆಟವನ್ನಾಡುತ್ತಿವೆ. ಬಾನು ಎಲೆಗಳನ್ನು ಗೊಣಗಿಕೊಂಡು ಗುಡಿಸುತ್ತ ಅವುಗಳ ಬುಡಕ್ಕೇ ಸುರಿಯುತ್ತಿದ್ದಾಳೆ. ಎಲೆಯುದುರುವ ಸದ್ದು ಸಾಮಾನ್ಯವಾಗಿ ಕೇಳುವುದಿಲ್ಲ. ಆದರೆ ನಮ್ಮ ದಿವಿಹಲಸಿನ ಗಿಡದ ದಪ್ಪನೆಯ ಎಲೆಯು ಕೊಂಬೆಯಿಂದ  ಕಳಚಿ ಬೀಳುವ ಖಳಕ್ ಸದ್ದು ಮಾತ್ರ ನನಗೆ ಕೇಳುತ್ತದೆ. ಮರವು ವರ್ಷವಿಡೀ ತನ್ನ ಜತೆಯಿದ್ದ ಎಲೆಯನ್ನು ಅದು ಹಣ್ಣಾಗಿದೆ ಎಂಬ ಕಾರಣಕ್ಕೆ ಎಷ್ಟು ನಿರ್ದಯವಾಗಿ  ಕೈಬಿಡುತ್ತಿದೆ! ಚಿಕ್ಕಂದಿನಲ್ಲಿ ಅಮ್ಮ ಹೇಳುತ್ತಿದ್ದಳು. ದೇವರ ಎದುರು ಒಂದು ಮರವಿದೆಯಂತೆ. ಅದರಲ್ಲಿ ನಮ್ಮೆಲ್ಲ ಹೆಸರಿನ ಎಲೆಗಳು ಇವೆಯಂತೆ. ಅದು ಉದುರಿದ ದಿನ ನಮ್ಮ ಪ್ರಾಣ ಇಲ್ಲಿ ಹೋಗುತ್ತದೆಯಂತೆ. ಉದುರಿದ ಎಲೆಯ ಜಾಗದಲ್ಲಿ ಹೊಸ ಚಿಗುರು ಬರಬಹುದು. ಆದರೂ ಅಕಾಲಿಕವಾಗಿ ಉದುರಿದ ಎಲೆಯ ತಬ್ಬಲಿತನ ಇನ್ನಿಲ್ಲದಂತೆ ಕಾಡುತ್ತದೆ.

ಎಲೆಯುದುರಿಸಿದ ಮರಗಳೀಗ ಮುಂದಿನ ಉಗಾದಿಯ ತನಕ ಚಿಂತೆಬೇಡ ಎಂದು ಅಭಯ ಕೊಡುವಂತೆ ಚಿಗುರುತ್ತಿವೆ. ಮನೆಯೆದುರಿನ ಬೇವು ಸಣ್ಣನತ್ತಿನಂತಹ ಹೂಗಳನ್ನು ಗೊಂಚಲಾಗಿ ಬಿಟ್ಟಿದೆ. ಒಂದು ಗೊಂಚಲು ಅದರ ಬುಡದಲ್ಲಿಯೂ ಬಿಟ್ಟಿದೆ. ಆದರೆ ಋತುಚಕ್ರವನ್ನು ನಿರಾಕರಿಸಿದಂತಿರುವ ಬಾಳೆಗೆ ಎಲೆಬದಲಿಸುವ ಗರಜು ಇದ್ದಂತಿಲ್ಲ. ಕೆಂಡಸಂಪಿಗೆ ಗಿಡದಲ್ಲಿ ಉಳಿದಿರುವ ಕೊನೆಯ ಮೊಗ್ಗುಗಳು, ಬಡವರ ಹುಡುಗಿಯರಂತೆ ಸೊರಗಿ ಸಣ್ಣಗೆ ಅರಳುತ್ತಿವೆ. 

`ಇದು ಗೊಡ್ಡು ಬಿದ್ದಿದೆ ಕಂಡ್ರಿ, ಕಡಿದು ಎಸೀರಿ ಅತ್ಲಾಗೆ’ ಎಂಬ ಸಾರ್ವಜನಿಕ ಒತ್ತಾಯವಿದ್ದರೂ ನನ್ನ ವೀಟೊದಿಂದ  ಜೀವ ಉಳಿಸಿಕೊಂಡಿರುವ ಕಾಡುನೆಲ್ಲಿ, ಗಿಣಿಹಸುರಿನ ಚಿಗುರು ತಳೆದು ಇನ್ನೊಂದು ಅವಕಾಶ ಕೊಡಿ ಎಂದು ಅರ್ಜಿ ಹಾಕಿದಂತಿದೆ. ನುಗ್ಗೆ ಜೋಗಮ್ಮನ ಜಡೆಗಳಂತೆ ಕಾಯಿಬಿಟ್ಟು ನಿರಾಳವಾಗಿ ನಿಂತಿದೆ. ಅಂಜೂರ ಮಾತ್ರ ತನ್ನ ಎಮ್ಮೆಕಿವಿಯಂತಹ ತನ್ನ ಎಲೆಗಳ ಮೇಲೆ ಮೈನ್ಸಿನ ಕೆಂಧೂಳನ್ನು ಹೊತ್ತು, ನನ್ನಲ್ಲಿ ತಾಪವನ್ನು ಕೆರಳಿಸುತ್ತಿದೆ. ಜಂಬುನಾಥನ ಬೆಟ್ಟದಲ್ಲಿ ನಿಶ್ಯಬ್ದವಾಗಿ ಮಲಗಿದ್ದ ಅದಿರನ್ನು ಬಲಾತ್ಕಾರವಾಗಿ ಮೇಲೆಬ್ಬಿಸಿ ವಿದೇಶಗಳಿಗೆ ಹಡಗುಗಳಲ್ಲಿ ಕಳಿಸಿ ರೊಕ್ಕ ದುಡಿಯುವ ಧಣಿಗಳು ಎಲ್ಲಿದ್ದಾರೊ ಏನೊ, ಆದರೆ ಅವರು ಹಬ್ಬಿಸಿದ ಧೂಳು ಮಾತ್ರ ಬಂದು ನಮ್ಮ ಮರದ ಎಲೆಗಳ ಮೇಲೆ ಕುಳಿತಿದೆ. ಆದರೆ ಗಣಿಯೂರಲ್ಲಿ  ಹುಟ್ಟಿದ ಬಳಿಕ ಕೆಂಧೂಳಿಗೆ ಅಂಜಿದೊಡೆ ಎಂತಯ್ಯಾ ಎಂದು ಸ್ವಾಂತನ ಹೇಳಿಕೊಂಡು, ಅಂಜೂರ ಗಿಡವು ಸಮಾಧಾನದಲ್ಲಿ, ನೀಳತೊಟ್ಟಿನ ಚಪ್ಪಟೆ ಮುಖದ ಹಸಿರು ಕಾಯಿಗಳನ್ನು ಮೈತುಂಬ ಕಚ್ಚಿಕೊಂಡು ನಿಂತಿದೆ.

ಬಹಳ ಬೇಜಾರಾಗಿರುವುದು ನಾವು ಇಷ್ಟಪಟ್ಟು ಹಾಕಿರುವ ಅಪೂಸ್ ಮಾವಿನ ಗಿಡವು ಚಿಗುರಿ ನಿರಾಶೆ ತಂದಿರುವುದು. ಅದರ ಕೆಂದಳಿರು ಎಷ್ಟೇ ಮೋಹಕವಾಗಿದ್ದರೂ ಅದು ಈ ಸಲ ಫಲವಿಲ್ಲ ಎಂಬುದರ ಸಂಕೇತವಾಗಿರುವುದರಿಂದ, ತೇರಿನಂತೆ ನಿಂತ ಇಡೀ ಮರವೇ ಅಪ್ರಿಯವಾಗಿ ಕಾಣುತ್ತಿದೆ. ವಸಂತಮಾಸದಲ್ಲಿ ಮಾವಿನ ಚಿಗುರು ತಿನ್ನಲು ಕೋಗಿಲೆಗಳು ಬಂದು ಕೂಗುತ್ತವೆ ಎಂದು ಯಾವ ಕವಿ ಹೇಳಿದನೊ ಕಾಣೆ. ನಮ್ಮ ಮಾವಿನ ಮರಕ್ಕೆ ಬೆಳಬೆಳಿಗ್ಗೆಯೇ ಎರಡು ಮೆರೂನ್ ಬಣ್ಣದ ಸುಂದರ ಕೆಂಬೂತಗಳು ಬಂದು ಗಂಟಲನ್ನು ಕ್ಯಾಕರಿಸುವಂತೆ ಖ್ ಖ್ ಖ್ ಎಂಬ ನಾದ ಹೊರಡಿಸುತ್ತ ಸುರತಕೇಳಿ ಮಾಡುತ್ತಿರುತ್ತವೆ. ಇಷ್ಟಾಗಿಯೂ ಮಾವಿನ ಮರದೊಳಗೆ ಎರಡು ಮೂರು ಕೊಂಬೆಗಳು ಚಿಗರದೆ ತಮ್ಮ ಹಳೆಯ ಕಪ್ಪುಹಸಿರಿನ ಎಲೆಗಳನ್ನು ಹಟಮಾಡಿ ಇಟ್ಟುಕೊಂಡು ಹೂತು, ಮಾವಿನ ಮಿಡಿಗಳನ್ನು ತಳೆದಿವೆ. ಒಂದಷ್ಟು ಬಲಿತ ಕಾಯಿ, ಒಂದಷ್ಟು ಮಿಡಿ, ಒಂದಷ್ಟು  ಹೂವು ಎಲ್ಲವೂ ಒಟ್ಟೊಟ್ಟಿಗೆ ಇವೆ. ಯಾಕೆ ಹೀಗೆ ಮಾವು ವಿಚಿತ್ರವಾಗಿ ವರ್ತಿಸುತ್ತಿದೆಯೊ? ಇದೆಲ್ಲ ಜಾಗತಿಕ ತಾಪಮಾನದ ಫಲವೆಂದು ಯಾರೊ ಹೇಳಿದರು. ಎತ್ತಣಿಂದೆತ್ತ ಸಂಬಂಧ?

ನಮ್ಮ ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿಯಲ್ಲಿ ಆಡಿಬಂದಂತಿರುವ ಮಗುವಿನಂತಹ ಅಂಜೂರದ ಗಿಡವನ್ನೂ ನೋಡುತ್ತಿರುವಂತೆ, ಯಾಕೊ ಈ ಸಲದ ಉಗಾದಿ ನನ್ನಲ್ಲಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ. ಇದು ಬಾಲ್ಯದ ಮಧುರ ನೆನಪನ್ನೂ, ಬೇಂದ್ರೆ ಕವನದ ಕಾಲದ ಚಿಂತನೆಯನ್ನೂ ನಮ್ಮ ತಪ್ಪಿಲ್ಲದಿದ್ದರೂ ಕೆಂಧೂಳು ಕುಡಿಯಬೇಕಾಗಿರುವ ನಮ್ಮೂರಿನ ಸನ್ನಿವೇಶವನ್ನೂ ಅದು ನುಗ್ಗಿಸುತ್ತಿದೆ. ಪ್ರವಾಹ ಕಾಲದಲ್ಲಿ ನಾನು ನೋಡಿಬಂದ ಜನ, ತಮ್ಮ ಊರುಮನೆ ಬಿಟ್ಟು, ಸರ್ಕಾರಿ ಶೆಡ್ಡುಗಳಲ್ಲಿ  ಹೇಗೆ ಉಗಾದಿ ಮಾಡುತ್ತಿರಬಹುದು ಎಂಬುದನ್ನು ಊಹಿಸುವಂತೆ ಮಾಡುತ್ತಿದೆ.

ಆದರೆ ತಮ್ಮೆಲ್ಲ ದುಗುಡಗಳೊಳಗೆ ಬದುಕುವ ಯಾವುದೊ ಚೈತನ್ಯ ನಮ್ಮ ಜನರಲ್ಲಿ ಇದ್ದಂತಿದೆ. ಹಬ್ಬ ಬರುವುದೇ ದಣಿದ ಜೀವಗಳಿಗೆ ಚೈತನ್ಯವನ್ನು ತುಂಬಲು ತಾನೇ? ನಮ್ಮ ಮನೆಯೆದುರು, ಕಟ್ಟುತ್ತಿರುವ ಕಟ್ಟಡ ಕಾಯಲೆಂದು ಬಂದಿರುವ ಗದಗಿನ ಕಡೆಯ ವಾಚ್ ಮನ್ ಶೆಡ್ಡನ್ನು ನೋಡಿದೆ. ಬೇಂದ್ರೆ ಕವನದ ಮೊದಲ ಭಾಗದಲ್ಲಿರುವ `ಭೃಂಗದ ಕೇಳಿ’ಯೇ ಅಲ್ಲಿಂದ ಕೇಳಿಸುತ್ತಿದೆ. ಇದು ಕವನದ ಕೊನೆಯರ್ಧವನ್ನು ಕುರಿತು ವಿಷಾದಮುಖಿಯಾಗಿರುವ ನನ್ನನ್ನು ಅಣಕಿಸುವಂತಿದೆ.