ಮಹಾರಾಜರ ಆಧುನಿಕ ಮೈಸೂರಿನಿಂದ ಹೊರಟು ಐದನೇ ಶತಮಾನದ ಎಲ್ಲೋರಾ ಗುಹೆಗಳಿರುವ ಮಹಾರಾಷ್ಟ್ರದ ಔರಂಗಾಬಾದಿನವರೆಗೆ ಜೀಪು ಓಡಿಸಿಕೊಂಡು ಹೋಗಿ ಬಂದೆವು. ದಾರಿಯ ಉದ್ದಕ್ಕೂ ಮಳೆಯ ನೆರಳು, ಕಣ್ಣಿನ ಹಸಿವು ಇಂಗಿ ಹೋಗುವಷ್ಟು ಹಚ್ಚಹಸಿರು ಹೊಲಗಳು,ಮನಸ್ಸು ತೊಯ್ದು ಹೋಗುವಷ್ಟು ಒಳ್ಳೆ ಒಳ್ಳೆ ಮನುಷ್ಯರು,ಉದ್ದಕ್ಕೂ ರಾಚುವ ರಾಜಕಾರಣ ಮತ್ತು ಧಾರ್ಮಿಕತೆಯ ಖೂಳಕೃತ್ಯಗಳು, ಸಾವಿರಾರು ವರ್ಷಗಳಿಂದ ಇದೆಲ್ಲವನ್ನು ನೋಡಿ ಸಹಿಸಿ ಇನ್ನೂ ಒಳ್ಳೆಯವರಾಗಿಯೇ ಉಳಿದಿದ್ದೇವೆ ಎಂಬಂತೆ ಹೊಲಗದ್ದೆಗಳಿಂದ ಎತ್ತಿನ ಬಂಡಿಯೇರಿ ಅನಾಮಿಕರಾಗಿ ಹೊರಬರುತ್ತಿರುವ ರೈತಾಪಿ ಜನಗಳು. ಅವರ ಆತ್ಮಬಲವೋ ಎಂಬಂತೆ ತಮ್ಮ ದಷ್ಟಪುಷ್ಟ ಮೈಯನ್ನು ಕುಣಿಸುತ್ತಾ ಸಾಗುವ ಬಲಿಷ್ಟ ಎತ್ತುಗಳು.
ಸಿಂದನೂರಿನಲ್ಲಿ ಸಿಕ್ಕಿದ ಗೆಳೆಯನಂತಹ ಯುವಕನೊಬ್ಬ ಕುಗ್ಗಿಹೋಗಿದ್ದ. ಊರಿಗೆಲ್ಲಾ ಭತ್ತ ಬೆಳೆದು ಹಂಚುವ ಈ ಊರಿನಲ್ಲಿ ಹುಟ್ಟಿರುವ ಈತ ಅಸಾಧಾರಣ ಪಾಳೇಗಾರಿಕೆಯನ್ನೂ, ಅಷ್ಟೇ ಧಾರುಣವಾದ ಬಡತನವನ್ನೂ ಉಂಡೇ ಬೆಳೆದಿದ್ದ. ಈತ ಎಷ್ಟು ಒಳ್ಳೆಯವನು ಅಂದರೆ ಈತನಿಗೆ ತನಗಾಗುತ್ತಿರುವುದು ಹಸಿವು ಎಂದು ಅರಿವಾಗುವ ಹೊತ್ತಿಗೆ ಎಷ್ಟೋ ಮಂದಿಯ ಹಸಿವು ನೀಗಿಸಿಬಿಡುತ್ತಿದ್ದ. ಚಂದದ ಕವಿತೆಗಳನ್ನೂ ಬರೆಯುವ ಈತ ಓದಿದ್ದು ಹತ್ತನೇ ಇಯತ್ತೆ. ಆದರೆ ಒಳ್ಳೆಯ ಕಾವ್ಯವನ್ನು ಅಷ್ಟು ದೂರದಿಂದಲೇ ಗುರುತಿಸಿ ಅದನ್ನು ತನ್ನೊಳಗೆ ಆವಾಹಿಸಿಕೊಂಡು ಸುಖಪಡುತ್ತಿದ್ದ. ಕೆಟ್ಟ ಬರಹಗಳನ್ನು ಕಂಡು ಅಷ್ಟೇ ಉರಕೊಳ್ಳುತ್ತಿದ್ದ. ಮೊನ್ನೆ ಇವನ ಊರಿನಲ್ಲಿ ಕಂಡಾಗ ಈತ ಹತಾಶೆಯಿಂದ ಕುಗ್ಗಿಹೋಗಿದ್ದ.
‘ಸಾರ್, ಹಸಿವು ಬರಬಾರದೆಂದು ಬಾಗಿಲು ಹಾಕಿಕೊಂಡು ಮಲಗಿದ್ದೆ. ಅಷ್ಟು ಹೊತ್ತಿಗೆ ನೀವು ಬಂದಿರಿ’ಎಂದು ಪ್ರೀತಿಯಲ್ಲಿ ಹೇಳಿದ. ‘ಬಾರೋ ತಮ್ಮಾ,ಬಡತನ ಇದ್ದದ್ದೇ’ ಎಂದು ಆತನನ್ನೂ ಕೂಡಿಸಿಕೊಂಡು ಇನ್ನಷ್ಟು ದೂರ ಹೊರಟೆವು.
ದಾರಿಯಲ್ಲಿ ದೇವನಾಂಪ್ರಿಯ ಅಶೋಕನ ಶಿಲಾಶಾಸನ ಇರುವ ಮಸ್ಕಿ ಎಂಬ ಊರಿನ ಕಲ್ಲು ಬೆಟ್ಟಗಳನ್ನು ಹತ್ತಿದೆವು. ಬಿಸಿಲಲ್ಲಿ ಹೊಳೆಯುತ್ತ ಕಂದು ಬಣ್ಣದಿಂದ ಬಂಗಾರದ ಬಣ್ಣಕ್ಕೆ ತಿರುಗುತ್ತಿರುವ ಗೋಧಿಯ ತೆನೆಗಳ ಮೇಲಿಂದ ಕಾಣಿಸುವ ನೀಲ ಆಕಾಶ, ಮಹಾಕಾದಂಬರಿಯೊಂದರ ಪಾತ್ರಗಳಂತೆ ಮನುಷ್ಯಾಕೃತಿಯಲ್ಲಿ ಒಂದರ ಮೇಲೊಂದು ಸೆಟೆದು ನಿಂತುಕೊಂಡಿರುವ ಬಂಡೆಗಳು. ಅಂತಹದೊಂದು ಬಂಡೆಯ ಮೇಲೆ ಬ್ರಾಹ್ಮೀ ಲಿಪಿಯಲ್ಲಿ ಬರೆದಿರುವ ಅಶೋಕನ ಶಾಸನ. ಅದರ ಪಕ್ಕದಲ್ಲೇ ಇತ್ತೀಚೆಗಿನ ರಾಜಕಾರಣಿಗಳು ಅಮೃತಶಿಲೆಯಲ್ಲಿ ಬರೆಸಿರುವ ಅಡಿಗಲ್ಲೊಂದು ತಾನೇನೂ ಕಡಿಮೆ ಇಲ್ಲವೆಂಬಂತೆ ನಿಂತುಕೊಂಡಿತ್ತು.
‘ಇಲ್ಲೇ ಬನ್ನಿ ಸಾರ್’ ಎಂದು ಯುವಮಿತ್ರ ಬಂಡೆಗಳ ನಡುವೆ ತೋಡಲಾಗಿದ್ದ ಹೊಂಡವೊಂದನ್ನು ತೋರಿಸಿದ. ಆ ಹೊಂಡದೊಳಗೆ ಪುರಾತನ ಕಾಲದ ತಲೆಬುರುಡೆಗಳಿರುವ ಮಣ್ಣಿನ ಮಡಕೆಯೊಂದು ದೊರಕಿದೆಯಂತೆ. ಅದು ಯಾರ ಕಾಲದ ತಲೆಬುರುಡೆಗಳು ಎಂದು ತಿಳಿದುಕೊಳ್ಳಲು ಪ್ರೊಫೆಸರ್ ಒಬ್ಬರು ಕೊಂಡುಹೋಗಿರುವರಂತೆ. ‘ಅಲ್ಲೋ ಮಾರಾಯ ಈ ಊರಲ್ಲಿ ಇನ್ನಷ್ಟು ಕಾಲ ಒಳ್ಳೆಯವನಾಗಿ ಇದ್ದರೆ ನಿನ್ನ ತಲೆ ಪೂರ್ತಾ ಕೆಟ್ಟುಹೋಗುತ್ತದೆ. ಒಂದೋ ಊರು ಬಿಡು. ಇಲ್ಲಾ ಸ್ವಲ್ಪ ಕೆಟ್ಟವನಾಗು’ಎಂದೆ. ಆತ ಹೌದಲ್ಲಾ ಎನ್ನುವ ಹಾಗೆ ನಡೆಯುತ್ತಿದ್ದ. ಕೆಟ್ಟವನಾಗುವುದು ಹೇಗೆ ಎಂಬ ಕೆಲವು ನೀತಿಕತೆಗಳನ್ನು ಆತನಿಗೆ ಬೋಧಿಸಿ ಅಲ್ಲಿಂದ ಮುಂದಕ್ಕೆ ಹೋದೆವು.
ಆತನನ್ನು ಬೀಳುಕೊಂಡಾಗ ಎದೆಯೊಳಗೆ ಏನೋ ಒಂದು ಹರಿದಂತಾಯಿತು. ಗುಲ್ಬರ್ಗಾ ತಲುಪಿದಾಗ ಖ್ವಾಜಾ ಬಂದೇನವಾಜರ ಉರೂಸು ಮುಗಿದು ಮೂರು ದಿನಗಳಾಗಿತ್ತು. ಭಾರತದ ಎಲ್ಲೆಲ್ಲಿಂದಲೋ ಹೊರಟು ಬಂದು ಆಧ್ಯಾತ್ಮ ಸಮಾವೇಶದಲ್ಲಿ ಭಂಗಿ ಎಳೆದು ಹಾಡಿ ನರ್ತಿಸಿ ಬಾಗವಹಿಸಿದ್ದ ಸೂಫಿ ಸಿದ್ದರು ಮರಳಿ ಭಿಕ್ಷುಕ ವೇಷಧಾರಿಗಳಾಗಿ ಹಿಂತಿರುಗುತ್ತಿದ್ದರು. ಏಳೆಂಟು ವರ್ಷಗಳ ಹಿಂದೆ ಅವರೊಡನೆ ಹೋಗಿ ಹಾಗೇ ಕುಳಿತುಕೊಂಡು ಕಥೆ ಕೇಳುತ್ತಿದ್ದ ನಾನು ಮತ್ತೆ ಅಲ್ಲಿ ತಲುಪಿದಾಗ ಅದೇ ಸಂಜೆಯ ಹಳೆಯ ಗಾಳಿ ಹಾಗೇ ಬೀಸುತ್ತಿತ್ತು. ದರ್ಗಾದ ಅಸಂಖ್ಯ ಗೋರಿಗಳ ಮೇಲಿನ ಒಂಟಿಮರಗಳಿಂದ ಹಾಗೇ ಚೀತ್ಕರಿಸುತ್ತಿರುವ ಹಕ್ಕಿಗಳು.
ಉರೂಸು ಮುಗಿದರೂ ಹೊರಟುಹೋಗಲು ಬಂದೇನವಾಜರ ಆದೇಶ ದೊರಕಿಲ್ಲವೆಂದು ಗೋರಿಗಳ ನಡುವೆಯೇ ಅಡುಗೆ ಮಾಡಿಕೊಂಡು ಉಳಿದುಕೊಂಡಿರುವ ಅಮಾಯಕ ಭಕ್ತರು. ತನಗೂ ಈ ಭಕ್ತಿಗೂ ಏನೂ ಸಂಬಂಧ ಇಲ್ಲವೆಂಬಂತೆ ಬಲಿಗೆಂದು ಕರೆತಂದಿದ್ದ ಗಂಡಾಡೊಂದು ಗೋರಿಯೊಂದರ ಮೇಲೆ ಸುರಿದಿದ್ದ ಚೆಂಡು ಹೂವುಗಳನ್ನು ತದೇಕಚಿತ್ತವಾಗಿ ಕಬಳಿಸುತ್ತಿತ್ತು. ‘ಅಯ್ಯೋ ಮಾರಾಯ ಬದುಕಿನ ಸೌಂದರ್ಯವನ್ನೂ ಮಂಕುಬುದ್ದಿಯನ್ನೂ ಏಕಕಾಲದಲ್ಲಿ ನೀನು ನನಗೆ ಕಲಿಸಿದೆ. ಇದೋ ನಿನಗೆ ನಮಸ್ಕಾರ’ ಎಂದು ಅದಕ್ಕೆ ಮನಸಿನಲ್ಲಿಯೇ ಕೈಮುಗಿದೆ.
ಇದೇ ಗುಲ್ಬರ್ಗಾದ ಇನ್ನೊಂದು ದಿಕ್ಕಿನಲ್ಲಿ ಇತ್ತೀಚೆಗೆ ನಿರ್ಮಿಸಲಾಗಿರುವ ಅತ್ಯಾಧುನಿಕ ಬೌದ್ಧ ವಿಹಾರವಿದೆ. ತನ್ನ ಸುತ್ತಲಿನ ರೌರವ ಬಡತನವನ್ನು ನಾಚಿಸುವಂತೆ ನಳನಳಿಸುತ್ತಿರುವ ಅಮೃತಶಿಲೆಯ ಬೌದ್ಧ ದೇಗುಲವಿದು. ನಾವು ತಲುಪಿದ ಮರುದಿನವೇ ಅಲ್ಲಿ ಲಕ್ಷ ಮೋಂಬತ್ತಿಗಳನ್ನು ಉರಿಸುವ ಉತ್ಸವವಿತ್ತು. ಅದಕ್ಕಾಗಿ ದೇಗುಲ ಸಜ್ಜಾಗುತಿತ್ತು. ದೇಗುಲದ ಹೊರಗಡೆಯೇ ಒಂದು ಸೂಚನಾ ಫಲಕವನ್ನು ತೂಗುಹಾಕಲಾಗಿತ್ತು. ಅದರ ಪ್ರಕಾರ ಈ ದೇಗುಲದ ಪರಿಸರದಲ್ಲಿ ಎಲ್ಲರೂ ಒಂದು ರೀತಿಯ ದಿವ್ಯಮೌನವನ್ನು ಪಾಲಿಸಬೇಕಿತ್ತು. ಜೊತೆಗೆ ಗಂಡಾಗಲೀ ಹೆಣ್ಣಾಗಲೀ ಪರಸ್ಪರ ಸ್ಪರ್ಶಿಸುವುದಾಗಲೀ ಮಾತನಾಡುವುದಾಗಲೀ ನಿಷಿದ್ಧವಾಗಿತ್ತು. ಫೋಟೋ ತೆಯುವುದನ್ನಂತೂ ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು.
ದೇಗುಲದ ನೆಲ ಅಂತಸ್ತಿನಲ್ಲಿ ದಲಿತ ಬೌದ್ಧ ಗುರುಗಳೊಬ್ಬರು ಬುದ್ಧನ ವಚನಗಳ ಕನ್ನಡ ಅನುವಾದವನ್ನು ತಮ್ಮ ನೋಟುಬುಕ್ಕಿಗೆ ವರ್ಗಾಯಿಸಿ ಬರೆಯುತ್ತಿದ್ದರು. ಅವರು ತಲೆಯೆತ್ತದೆ ಹಾಗೆ ಬಹಳ ಹೊತ್ತು ಬರೆಯುತ್ತಲೇ ಇದ್ದರು. ಅವರು ತಲೆಯೆತ್ತಿದಾಗ ಅವರಿಗೆ ಕೈಮುಗಿದೆ.
ಬಹಳ ದೂರದ ಮೈಸೂರಿನಿಂದ ಬಂದಿರುವೆನು ನಮ್ಮ ಊರಿನ ದಲಿತ ಗೆಳೆಯರಿಗೆ ಬುದ್ಧನ ದೇಗುಲದ ಚಿತ್ರ ತೋರಿಸಬೇಕು. ಒಂದು ಚಿತ್ರ ತೆಗೆಯಲು ಅನುಮತಿ ಕೊಡಿ ಎಂದು ಬೇಡಿಕೊಂಡೆ.
‘ಫೋಟೋ ತೆಗಿಯಂಗಿಲ್ಲಪ್ಪಾ. ಅದಕ್ಕೆ ಮೇಲಿನವರ ಅನುಮತಿ ಬೇಕಪ್ಪಾ’ ಅಂದರು. ‘ಗುರೂಜಿ, ಬೌದ್ಧರಲ್ಲಿ ಮೇಲಿನವರು ಮತ್ತು ಕೆಳಗಿನವರು ಯಾರೂ ಇಲ್ವಲ್ರೀ. ನೀವೇ ಅನುಮತಿ ಕೊಡಬಹುದಲ್ರೀ ಅಂದೆ. ‘ಓ ಹೌದು. ಲಗೂನೇ ತೆಗೀ’ ಅಂದರು. ಅಲ್ಲಿನ ಕತ್ತಲೆ ಬೆಳಕಿಗೆ ಹೊಂದಿಕೊಳ್ಳುವಂತೆ ಕ್ಯಾಮರಾ ರೆಡಿ ಮಾಡಿಕೊಳ್ಳುವುದರಲ್ಲಿ ಕೊಂಚ ತಡವಾಯಿತು. ಆ ಗುರುಗಳಿಗೆ ಸಿಟ್ಟು ಬಂದು ‘ನೀ ಫೋಟೊ ತೆಗೀದ್ರೊಳಗ ನಾಳಿ ಅಗ್ತೈತಿ. ಈಗ ನೀ ಹೊಂಟು ಹೋಗು’ ಅಂತ ಅಲ್ಲಿಂದ ಓಡಿಸಿಬಿಟ್ಟರು.
‘ನಿಂಗೇನು ಗೊತ್ತೈತಿ. ನಂ ಮೇಲೆ ಒಬ್ರು ದೊಡ್ಡವರಿರ್ತಾನ, ಅವನ್ ಮೇಲೆ ಇನ್ನೊಬ್ಬ. ಅವನ ಮೇಲೆ ಮತ್ತೊಬ್ಬಾತ ಇರ್ತಾನ. ನೀ ಫೋಟೋ ತೆಗೀದ್ರೊಳಗ ಅವ್ರೆಲ್ಲ ಬಂದು ನನ್ಗೆ ಫಜೀತಿ ಆಗೋದ್ರೊಳಗ ಹೋಗಪ್ಪಾ’ ಎಂದು ಅವರು ಗೊಣಗಿದ್ದು ಹಿಂದಿನಿಂದ ಕೇಳಿಸಿತು. ಹೊರಗಡೆಯಿಂದ ಲಕ್ಷ ಮೊಂಬತ್ತಿಗಳನ್ನು ತುಂಬಿದ್ದ ರಟ್ಟುಪೆಟ್ಟಿಗೆಗಳನ್ನು ಹೊತ್ತುಕೊಂಡು ಹುಡುಗರು ನಡೆದು ಬರುತ್ತಿದ್ದರು.. ಅಲ್ಲಿ ಮಂದಹಾಸದಲ್ಲಿ ನಗುತ್ತಿದ್ದ ಬುದ್ಧನ ಮೂರ್ತಿಗೆ ಕೈಮುಗಿದು ಹೊರಬಂದೆ.
ಗುಲ್ಬರ್ಗಾ ಬೀದರಿನ ನಡುವೆ ಬಸವಕಲ್ಯಾಣದ ಅನುಭವಮಂಟಪದ ಬಳಿ ನೂರಾಎಂಟು ಅಡಿಯ ಬಸವಣ್ಣನವರ ಪ್ರತಿಮೆ ಮಂದಹಾಸದಿಂದ ನೋಡುತ್ತಿತ್ತು. ‘ಏನು ಬಂದಿರಿ, ಹದುಳವಿದ್ದಿರೆ?” ಎಂದರೆ ನಿಮ್ಮ ಮೈಸಿರಿ ಹಾರಿಹೋಹುದೇ? ಕುಳ್ಳಿರೆಂದರೆ ನೆಲ ಕುಳಿಹೋಹುದೇ ? ಒಡನೆ ನುಡಿದರೆ ಶಿರ-ಹೊಟ್ಟೆ ಒಡೆವುದೆ? ಎಂದು ಮನದಲ್ಲೆ ನುಡಿಯುತ್ತ ಪ್ರತಿಮೆಯ ಬಳಿ ಹೋದರೆ ಅಲ್ಲೇ ಇದ್ದ ಸ್ವಯಂ ಸೇವಕರು ದೂರಹೋಗಿ ದೂರ ಹೋಗಿ ಎಂದು ಗದರುತ್ತಿದ್ದರು.
ಆರು ಕೋಟಿ ಖರ್ಚು ಮಾಡಿ ಕಟ್ಟಿದ ಬಸವಣ್ಣನವರ ಪ್ರತಿಮೆ ಹೇಗೆ ಬರುತ್ತಿದೆ ಎಂದು ಪರಿಶೀಲಿಸಿ ಹೋಗಲು ಯಾರೋ ಮಂತ್ರಿ ಮಹೋದಯರು ಬರುತ್ತಿದ್ದರು. ಅಲ್ಲಿಂದ ಹೊರಟು ಬಸವಣ್ಣನವರ ದೇಗುಲಕ್ಕೆ ಬಂದರೆ ಜಂಗಮ ಸನ್ಯಾಸಿಯೊಬ್ಬರು ದಾರಿ ತಪ್ಪಿದ ಮಗುವಿನಂತೆ ಬಿಟ್ಟ ಕಣ್ಣು ಬಿಟ್ಟುಕೊಂಡು ದೇಗುಲದ ಗೋಡೆಗೊರಗಿಕೊಂಡು ಕುಳಿತಿದ್ದರು. ಅವರಿಗೆ ಕೈಮುಗಿದೆ.
ಅವರು ಮೊದಲು ಹಾಗೇ ನೋಡಿದವರು ಆಮೇಲೆ ತಮ್ಮ ಮುಖವನ್ನು ವ್ಯಗ್ರಗೊಳಿಸಿದರು. ‘ನಾನು ಹೇಳುವವರೆಗೆ ನೀನು ಇಲ್ಲಿಂದ ಹೋಗಬಾರದು. ನಿನ್ನ ದೆಶೆ ಸರಿಯಿಲ್ಲ’ ಎಂದು ಕರುಣೆಯಿಂದ ನೋಡಿದರು. ‘ಅಯ್ಯೋ ಹಾಗನ್ನಬೇಡಿ ಸ್ವಾಮಿ. ಹೆಂಡತಿ ಮಕ್ಕಳು ಹೊರಗೆ ಕಾಯುತ್ತಿರುವರು. ನಾ ಹೋಗದಿದ್ದರೆ ಈ ಬಸವಕಲ್ಯಾಣದಲ್ಲಿ ಅವರಿಗೆ ಯಾರು ಗತಿ? ದಯವಿಟ್ಟು ಅನುಮತಿ ಕೊಡಿ’ ಎಂದು ವಿನಂತಿಸಿಕೊಂಡೆ. ‘ಹೋಗಪ್ಪಾ ಹೋಗು. ಆದರೆ ತಲುಪಬೇಕಾದ ಜಾಗವನ್ನು ತಲುಪಿದಾಗ ನಾನು ನಿನ್ನ ಮುಂದೆ ಪ್ರತ್ಯಕ್ಷನಾಗುತ್ತೇನೆ’ ಎಂದು ಅವರೂ ಅಲ್ಲಿಂದ ಗದರಿ ಕಳಿಸಿದರು.
ಎಲ್ಲೋರಾದ ಗುಹೆಯನ್ನೂ, ಔರಂಗಾಬಾದಿನ ಬಳಿಯ ತುಘಲಕನ ಕೋಟೆಯನ್ನೂ, ತುಳಜಾಪುರದ ಅಂಬಾಭವಾನಿಯನ್ನೂ ನೋಡಿಕೊಂಡು ಈಗ ತಲುಪಬೇಕಾದ ಸ್ಥಳವನ್ನುತಲುಪಿ ಬಸವಕಲ್ಯಾಣದ ಆ ಜಂಗಮ ಸ್ವಾಮಿಯನ್ನು ಎದುರು ನೋಡುತ್ತಿದ್ದೇನೆ. ನನ್ನ ದೆಸೆ ಸರಿಯಿಲ್ಲವೆಂದು ಅವರು ಹೇಳಿದ್ದು ಒಮ್ಮೊಮ್ಮೆ ನಿಜದಂತೆಯೂ ಒಮ್ಮೊಮ್ಮೆ ಆಧ್ಯಾತ್ಮದಂತೆಯೂ ಕೇಳಿಸುತ್ತಿದೆ.
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.