ಹಗಲ ಚಂದ್ರ
ಹಾಲು ಹೆಪ್ಪಾಗುವ ಹೊತ್ತು…
ದೀಪಕೊನೆಯೇರುತಿದೆ
ಎತ್ತ ಹೋದೆಯೋ ನಲ್ಲ
ಬರಲಿಲ್ಲವಲ್ಲ!
ಅತ್ತತ್ತು ಕಣ್ಣುರಿಯುತಿದೆ
ತತ್ತರಿಸುತಿದೆ ಚಿತ್ತ
ಕತ್ತಲಿಳಿಯುತಿದೆ
ಹಗಲು ಹಸೆಯಿಡುತಿದೆ…
ಹೊರಟಗಳಿಗೆಯಲಿ
ಬಲಗಣ್ಣು ಅದುರಿತ್ತೆ?
ಅಪಶಕುನ ಬೇಡವೆನ್ನಬಹುದಿತ್ತೆ?!
ಯಾವಾಪ್ಪತ್ತೋ ಏನೋ…
ಚಿಂತೆ ಹೊಗೆಯಲಿ ಒಡಲು
ಮೈಮುರಿಯುತಿದೆ ಇರುಳು
ಫೋನಿಲ್ಲ ಏನಿಲ್ಲ
ಜೀವ ಮೀನಿಗೆ ನೀರಿಲ್ಲ…
ಹೇಳದೆಯ ನಿಲ್ಲುವವನಲ್ಲ…
ಸುದ್ದಿ-ಸುಳಿವಿಲ್ಲ ಯಾವುದೂ ಮುನ್ನಿನಂತಿಲ್ಲ
ನಮ್ಮ ಮದುವೆಗೆ ವರುಷ ಮೂವತ್ತಾಯಿತಲ್ಲ!
ಇರುಳೆಲ್ಲ ಬಿರಿದ ಮಲ್ಲಿಗೆಯೆದೆಗೆ
ಬೆಳಗಾಗ ಇಬ್ಬನಿ ಸುರಿದಂತೆ
ತಬ್ಬಿಕೊಳ್ಳುವ ಹೊಂಗಿರಣ ಕನಸುತಿರೆ
ಶೈತ್ಯಖಡ್ಗವ ಹಿರಿದು ಇರಿದೆಯಲ್ಲ!
ಹೂವಿನೆದೆ ಕನಸುಗಳ ತರಿದೆಯಲ್ಲ!
ಹಾಲು ಬಂದಿತು ಹೊರಗೆ
ನೀರು ತುಂಬಿತು ಕಣ್ಗೆ
ಬಿಮ್ಮನೆಯ ಮನೆಯಲ್ಲಿ ಹುರುಪಾಡಿತು!
ಮಾತುಗಳ ಮರೆತಂತೆ
ಎವೆಬಿರಿಯೆ ಕನಸಂತೆ
ಹಗಲ ಚಂದ್ರನ ಹಾಗೆ
ಹೊಸಲ ಹೊಕ್ಕಿಹ‘ನಲ್ಲʼ!
ಉಷಾ ನರಸಿಂಹನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು
‘ಅಂಗರಾಗʼ, ‘ಗಂಧವಾಹ’ ಪಯಣಕ್ಕೆ ಮುನ್ನ’ (ಕವನ ಸಂಕಲನಗಳು), ‘ಮಾಮಿ ಮತ್ತು ಇತರ ಕಥೆಗಳು’‘ತಾವರೆದೇಟುʼ, ‘ಹರಿವನೀರುಕೊರೆವಬಂಡೆʼ, ಸರಸ್ವತಿಯ ಸಾಕ್ಷಿ (ಕಥಾ ಸಂಕಲನ), ‘ಕಾಮಿನೀ ತಲ್ಪʼ, ‘ಕೃಷ್ಣಮೃಗʼ, ‘ಪರ್ಷಿಯಾಪರಿಮಳ( ಕಾದಂಬರಿಗಳು) ಒಂದು ನಾಟಕ ಹಾಗೂ ಹಲವು ಬಿಡಿ ಕತೆಗಳು ಪ್ರಕಟವಾಗಿವೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ