Advertisement
ಉಸಿರೇ….. ಉಸಿರು……: ಸುಮಾವೀಣಾ ಸರಣಿ

ಉಸಿರೇ….. ಉಸಿರು……: ಸುಮಾವೀಣಾ ಸರಣಿ

‘ಉಸಿರಿ’ನ ಹೇಳಿಕೆ ಇಲ್ಲಿಗೆ ಮುಗಿಯಲಿಲ್ಲ, ಇನ್ನೂ ಇದೆ. ‘ಉಸಿರು’ ಈ ಪದದ ಅಕ್ಷರಗಳನ್ನು ಕೊಂಚ ಅದಲು-ಬದಲು ಮಾಡಿದರೆ‘ಉರು(ಸು)ಸ್’ ಆಗುತ್ತದೆ. ಅಂದರೆ ಮುಸಲ್ಮಾನರ ಧಾರ್ಮಿಕ ಆಚರಣೆ ಎಂದಾಗುತ್ತದೆ. ಇನ್ನೂ ಉಸಿರಿನ ಅಕ್ಷರಗಳನ್ನು ಅದಲು ಬದಲು ಮಾಡುತ್ತೇವೆ ಎಂದರೆ ‘ಉರಿಸು’ ಎಂದಾಗುತ್ತದೆ. “ಮನೆಮನೆಯಲ್ಲಿ ದೀಪ ಉರಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ?’’ ಎಂಬ ಜಿ.ಎಸ್. ಎಸ್ ಅವರ ಕವನದ ಸಾಲುಗಳು ನೆನಪಾಗದೆ ಇರುತ್ತವೆಯೇ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹನ್ನೊಂದನೆಯ ಬರಹ ನಿಮ್ಮ ಓದಿಗೆ

ಹೀಗೆ ಸುಮ್ಮನೆ ಕುಳಿತು ಮೊಬೈಲ್ ತೀಡುವಾಗ “ನಾವು ಮಕ್ಕಳನ್ನು ಸರಿಯಾಗಿ ಬೆಳೆಸುವ ನಿಟ್ಟಿನಲ್ಲಿ ಅತೀಕಾಳಜಿ ಮಾಡ ಹೋಗಿ ನಾವು ಹಿರಿಯರು ಉಸಿರು ಕಟ್ಟಿಸುತ್ತಿದ್ದೇವೆ… ಸಮಯ ಕೊಡುತ್ತಿಲ್ಲ…..” ಇತ್ಯಾದಿ ಮಕ್ಕಳ ಬಗೆಗಿನ ಕಾಳಜಿಯುಕ್ತ ಬರಹ ಕಣ್ಣಿಗೆ ಬಿತ್ತು. ಮಕ್ಕಳ ಬಾಲ್ಯವನ್ನು ನಾವು ಕಸಿಯುತ್ತಿದ್ದೇವೆ, ಮಕ್ಕಳ ನಾಳೆಗಳಿಗಳಿಗೋಸ್ಕರ ಇಂದಿನ ಸುಮಧುರತೆಯನ್ನು ಅವುಗಳಿಗೆ ಸಿಗದಂತೆ ಮಾಡುತ್ತಿದ್ದೇವೆ. ಮಕ್ಕಳನ್ನು ಮಕ್ಕಳಾಗಿ ನಾವು ಬಿಡುತ್ತಿಲ್ಲ. ನಮ್ಮ ಒತ್ತಡಗಳ ಗೂಡೆಗಳಲ್ಲಿ ಅವುಗಳು ಉಸಿರು ಕಟ್ಟುತ್ತಿವೆ ಎಂಬುದೇ ಆ ಬರಹದ ಸಾರಾಂಶವಾಗಿತ್ತು. ನನಗೂ ಸತ್ಯ ಅನ್ನಿಸಿತು. ಹಾಗೆ ನೋಡುತ್ತಿದ್ದಂತೆ ‘ಉಸಿರು ಕಟ್ಟಿಸು’ ಎನ್ನುವ ಪದ ನನ್ನನ್ನು ಬಹುವಾಗಿ ಸೆಳೆಯಿತು. ಉಸಿರೇ… ಉಸಿರೇ…… ಎನ್ನುವ ಹಾಡನ್ನು ತಟ್ಟನೆ ಗುನುಗುನಿಸಲು ಆರಂಭಿಸಿದೆ. ಅಯ್ಯೋ ಉಸಿರೇ…. ಉಸಿರೇ ಎಂದು ಹಾಡುವುದರ ಬದಲು ಉಸಿರನ್ನು ಕುರಿತ ಹಾಗೆಯೇ ಒಂದಷ್ಟು ಚಿಂತನೆ ನಡೆಸಿದರೆ ಚನ್ನಾಗಿರುತ್ತದೆ ಎಂದು ಉಸಿರನ್ನೇ ಧ್ಯಾನಿಸಿದೆ.

‘ಉಸಿರು’… ಪದಕ್ಕೆ ಶ್ವಾಸ, ಜೀವ, ಮಾತು, ಚೈತನ್ಯ, ಹೇಳು ಎಂಬಿತ್ಯಾದಿ ಅರ್ಥಗಳಿವೆ. ‘ಉಸಿರು’ ಅಂದರೆ ‘ಜೀವ’ ಎಂದೇ ಹೆಚ್ಚು ಪ್ರಚಲಿತ ಇರುವ ‘ಉಸಿರು ಹೋಯಿತು”, “ಉಸಿರು ಕಣ್ಣಲ್ಲಿ ಹೋಯಿತು”, “ಬಾಯಲ್ಲಿ ಹೋಯಿತು”, “ಉಸಿರು ನಿಲ್ಲಿಸಿದರು” ಎಂದರೆ “ಬದುಕಿನ ವ್ಯಾಪಾರ ನಿಲ್ಲಿಸಿದರು” ಎಂದರ್ಥ. “ಉಸಿರು” ಎಂದರೆ ಬರೆ ಗಾಳಿಯಲ್ಲ. ಅದು ‘ಜೀವ’, ‘ಪ್ರಾಣ’…… ಹಾಗೆ ಯೋಚಿಸಿದರೆ ನಮಗಿರುವ ಹೆಸರುಗಳು ಜೀವಕ್ಕೋ….? ದೇಹಕ್ಕೋ…..? ಎನ್ನುವ ಜಿಜ್ಞಾಸೆ ಕಾಡುತ್ತದೆ. ಕಡೆಯದಾಗಿ ಜೀವಕ್ಕೆ ಇರಬಹುದು ಅನ್ನಿಸುತ್ತದೆ. ಕಾರಣ ದೇಹಕ್ಕಾಗಿದ್ದಿದ್ದರೆ ಉಸಿರು ನಿಂತ ಮೇಲೆ ‘ತಗೊಂಡು ಹೋಗು’ ಎನ್ನುವ ಬದಲು ‘ಕರೆದುಕೊಂಡು ಹೋಗು’……. ಎನ್ನುತ್ತಿದ್ದರು. ‘ಇಡುತ್ತೇವೆ’ ಎನ್ನುವುದರ ಬದಲು ‘ಮಲಗಿಸುತ್ತೇವೆ’ ಎನ್ನುತ್ತಿದ್ದರು ಅಲ್ವೆ! ಬಿಡಿ ಇವೆಲ್ಲಾ ಲೋಕರೂಢಿ.

ಕರುಣಾರಸಕ್ಕೆಂದೆ ಮೀಸಲಾಗಿರುವ ಕಾವ್ಯ ರಾಘವಾಂಕನ ಹರಿಶ್ಚಂದ್ರ ಕಾವ್ಯ. ಅದರಲ್ಲಿನ ‘ಚಂದ್ರಮತಿಯ ವಿಲಾಪ’ ಕೇಳಬೇಕೆ? ಮಗ ಹಾವು ಕಚ್ಚಿ ಉಸಿರು ಚೆಲ್ಲಿದನೆಂದು ತಿಳಿದಾಗ ದಿಗ್ಭ್ರಾಂತಳಾಗುತ್ತಾಳೆ. ಲೋಹಿತಾಶ್ವ ಕಾಡಿನಲ್ಲಿ ಕಾಣದಿದ್ದಾಗ “ಪೇಳಾವ ಠಾವೊಳಕೊಂಡುದಯ್ಯ….. ಎನ್ನನೊಲ್ಲದಡೆ ಸಾಯೆಂಬುದೇನು ಸುರದಿರಲೇಕೆ” ಎಂದು ಒರಲುತ್ತಾಳೆ. ಮಗನ ಶವ ಸಿಕ್ಕಿದ ಮೇಲೂ ಇನ್ನೂ ಜೀವವಿದೆ ಎಂದು ಮುಂಡಾಡುತ್ತಾಳೆ ಮುದ್ದುಗರೆಯುತ್ತಾಳೆ. ಸರಿರಾತ್ರಿಯಲ್ಲಿ ಮಗನ ಶವವನ್ನು ಕಂಡ ಬಳಿಕ ಮಗ ಉಸಿರು ನಿಲ್ಲಿಸಿದ್ದಾನೆಂದು ನಂಬಲಾಗದೆ ನಾನಾ ಪರೀಕ್ಷೆಗಳನ್ನು ಮಾಡಲು ಮೊದಲಾಗುತ್ತಾಳೆ. ಅದನ್ನು ರಾಘವಾಂಕ ಈ ಮುಂದಿನಂತೆ ಹೇಳಿದ್ದಾನೆ.

ಲಲನೆ ಮೂಗಿನೊಳುಸುರನಳ್ಳೆಯೊಳು ಹೋಯ್ಲನುಗು
ರೊಳು ರಜವನೆದೆಯೊಳಲ್ಲಾಟಮಂ ಕೈಯಮೊದ
ಲೊಳುಮುಡುಕನಂಗದೊಳು ನೋವನಕ್ಷಿಯೊಳು
ಬೆಳ್ಪಂ ಭಾಳದೊಳು ಬೆಮರನು
ಲಲಿತಕಂಠದೊಳುಲುಕನಂಘ್ರಿಯೊಳು ಬಿಸಿಯನಂ
ಗುಳಿಗಳೊಳು ಚಿಟುಕನುಂಗುಟದೊಳರುಣಾಂಬವಂ
ಸಲೆ ನಾಲಗೆಯೊಳಿಂಪ ರೋಮದಲಿಬಲ್ಪನಾರಯ್ದು ಕಾಣದೆ ನೊಂದಳು.

ಎಂಥ ಕರುಳು ಹಿಂಡುವ ಮಾತುಗಳನ್ನಾಡಿದ್ದಾನೆ ಅಲ್ವೆ! ಮಗ ಬದುಕಿದ್ದಾನೆ ಎಂಬ ಧನಾತ್ಮಕತೆಯಿಂದ ಚಂದ್ರಮತಿ ಮಗನಿಗೆ ಜೀವವಿದೆ ಎನ್ನುತ್ತಲೇ ಮೂಗಿನಲ್ಲಿ ಉಸಿರಾಟವಿದೆಯೇ? ಹೃದಯ ಮಿಡಿಯುತ್ತಿದೆಯೇ? ಉಗುರಲ್ಲಿ ರಕ್ತವಿದೆಯೇ? ಅಂಗದಲ್ಲಿ ಸಂವೇದನಾ ಶಕ್ತಿ, ಕಣ್ಣಿನಲ್ಲಿ ಬಿಳುಪು ಹಣೆಯಲ್ಲಿ ಬೆವರನ್ನು, ಕಂಠದಲ್ಲಿ ಅದುರುವಿಕೆಯನ್ನು, ಅಂಗಾಲಿನಲ್ಲಿ ಬಿಸಿಯನ್ನೂ ಕಾಣಲೆತ್ನಿಸಿ ಬೆರಳನ್ನೂ ನಾಲಗೆಯನ್ನೂ ನೋಡಿದಳು ಆದರೆ ಮಗನ ಜೀವಿತದ ಯಾವ ಕುರುಹೂ ಕಾಣದೆ ಮತ್ತೆ ರೋಧಿಸುತ್ತಾಳೆ. ಇಲ್ಲಿ ಉಸಿರು ಪದಕ್ಕೆ ‘ಹೇಳು’ ಮತ್ತು ‘ಉಸಿರು ಚೆಲ್ಲಿದ್ದಾನೆ’ ಎಂಬ ಅರ್ಥ ಸಾಮಯಿಕವಾಗಿರುವುದನ್ನು ಇಲ್ಲಿ ಗಮನಿಸಬಹುದು.

ಕಾವ್ಯಕಾಲ ಬಿಟ್ಟು ನಮ್ಮನೆ ಪಕ್ಕಕ್ಕೆ ಬಂದರೆ ಬಹಳ ಹಿಂದೆ ಪಕ್ಕದ ಮನೆಯರವರೊಬ್ಬರು ಮಗುವನ್ನು “ಉಸಿರ್ ಮುಚ್ಚು ಉಸಿರ್ ಮುಚ್ಚು’’ ಎಂದು ಹೊಡೆಯುತ್ತಿದ್ದರು. ಮಗು ಆ ನೋವಿಗೆ ಜೋರಾಗಿ ಅಳುತ್ತಿತ್ತು “ಹುಷಾರ್ ಉಸಿರ್ ಆಚೆ ಕೇಳಕೂಡ್ದು” ಎಂದು ತಂದೆ ಮತ್ತೆ ಗದರುತ್ತಿದ್ದರು. ನನಗೆ ಆ ಮಗು ಉಸಿರ್ ಮುಚ್ಚಿದರೆ ಇವರ ಕಥೆ ಏನು? ಎಂದು ಒಮ್ಮೆಗೆ ಅನ್ನಿಸಿದರೂ ಅವರು ‘ಸ್ವರ ಆಚೆ ಬರಬಾರದು’ ಎಂದು ಹೇಳಿದ್ದು ಎನ್ನಿಸಿತು. ಹಾಗಿದ್ದರೆ ‘ಉಸಿರು’ ಎಂದರೆ ‘ಧ್ವನಿ’ ಎಂಬ ಅರ್ಥವೂ ನಮ್ಮಲ್ಲಿದೆ ಎಂದಾಯಿತು. ಇನ್ನು ನಮ್ಮ ಕಾವ್ಯಗಳಿಗೆ ಬಂದರೆ ‘ಉಸಿರ್’ ಎಂಬ ಪದ ಹೆಚ್ಚೆಚ್ಚು ಬಾರಿ ಬಳಕೆಯಾಗಿದೆ. ಉದಾಹರಣೆಗೆ ಕುಮಾರವ್ಯಾಸನ ‘ವಿರಾಟಪರ್ವ’ದಲ್ಲಿ ಒಂದೆಡೆ ‘ತಳುವಿಲ್ಲದುಸುರಿರುಳೇಕೆ ಬಂದೆ ಲತಾಂಗಿ…’ ಎಂಬುದಾಗಿ ಬರುತ್ತದೆ. ಅಂದರೆ ಭೀಮನು ದ್ರೌಪದಿಯನ್ನು ಕುರಿತು ಇಷ್ಟು ದುಃಖದಲ್ಲಿದ್ದೀಯಲ್ಲ ಏನಾಯಿತು? ಕೀಚಕನ ಉಪದ್ರ ಅಷ್ಟಿತ್ತೇ? ಆದ ಕಷ್ಟವನ್ನು ನನ್ನಲ್ಲಿ ‘ಉಸುರು’ ಅಥವಾ ‘ಹೇಳು’ ಎಂದುಬಿಡುತ್ತಾನೆ.

ಇನ್ನೊಂದು ‘ಉಸಿರ್’ ಎಂದರೆ ನಮ್ಮ ದೇಹದಿಂದ ಆಚೆ ಬರುವ ಇಂಗಾಲದ ಡೈಆಕ್ಸೈಡ್ ಕೂಡ ಆಗುತ್ತದೆ. ಬೇಡ ಅದನ್ನು ಸಹಿಸುವ ಕಷ್ಟ. ಅವರ ಎದಿರು ನಿಂತು ಮಾತನಾಡಲಿಕ್ಕಾಗುತ್ತದೆಯ? ಅವರು ಉಸಿರು ಬಿಟ್ಟರೆ ದುರ್ವಾಸನೆ! ಎಂಬ ಮಾತುಗಳು ಕೇಳಿ ಬರುತ್ತವೆ. ಇದು ದೇಹದ ಸ್ವಚ್ಛತೆಗೆ ಸಂಬಂಧಿಸಿದ ವಿಷಯವಾದರೂ ಅವರ ದೇಹದ ಅನಾರೋಗ್ಯದ ವಿಷಯವೂ ಹೌದು!

ಈ ಕೆಟ್ಟವಾಸನೆಯ ಉಸಿರು ಬಹುತೇಕ ಬಾಯಿಯ ಅನಾರೋಗ್ಯಕ್ಕೆ ಕಾರಣವಾದರೆ, ಕೆಲವು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಮೂತ್ರಕೋಶಕ್ಕೆ ಸಂಬಂಧಿಸಿದವು ಆಗಿರುತ್ತವೆ. ಮಧುಮೇಹವೂ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ. ಇದು ಉಗುರಿನ ಬಣ್ಣವನ್ನು ತೆಗೆಯುವ ಎಸಿಟೋನ್ ವಾಸನೆಯಿಂದ ಕೂಡಿರುವಂತೆ ಇರುತ್ತದೆ. ಇದು ‘ಕೀಟೋಆಸಿಡೋಸಿಸ್’ ಎಂಬ ಮಧುಮೇಹ ಸಮಸ್ಯೆಯನ್ನು ಸೂಚಿಸುತ್ತದೆ. ಮಧುಮೇಹಿಗಳ ದೇಹದಲ್ಲಿ ಇನ್ಸುಲಿನ್ ಕೊರತೆಯಿರುವುದರಿಂದ ಅಗತ್ಯ ಶಕ್ತಿಗಾಗಿ ಕೊಬ್ಬನ್ನು ಬಳಸಿಕೊಳ್ಳುತ್ತದೆ ಮತ್ತು ಕೊಬ್ಬಿನ ವಿಭಜನೆಯ ಪ್ರಕ್ರಿಯೆಯಲ್ಲಿ ಈ ಉಸಿರು ಕೆಟ್ಟ ವಾಸನೆಯನ್ನು ಹೊಂದಬಹುದು. ಶ್ವಾಸಕೋಶ ಮತ್ತು ಉಸಿರಾಟದ ಕಾಯಿಲೆಗಳಿಂದ ಬಳಲುವವರು ಬಾಯಿಯಿಂದ ಉಸಿರಾಡುತ್ತಾರಾದ್ದರಿಂದ ಇವರಿಗೂ ಈ ಸಮಸ್ಯೆ ಬರಬಹುದು. ಉಸಿರು ಹಳಸಿದ ಆಹಾರದ ವಾಸನೆಯನ್ನು ಹೊಂದಿದ್ದರಂತೂ ಅದು ಯಕೃತ್ತಿ ತೊಂದರೆ ಎಂದೇ ತಿಳಿಯಬೇಕು. ಅಬ್ಬಾ! ಈ ಉಸಿರಿನಲ್ಲಿ ಎಷ್ಟು ವಿಚಾರ ಅಡಗಿದೆ ನೋಡಿ! ಈ ಉಸಿರಿನ ಸಮಸ್ಯೆಯಿಂದಲೇ ಕೆಲವರು ಸಮಾಜದೆದುರು ತಮ್ಮನ್ನು ಅಭಿವ್ಯಕ್ತಗೊಳಿಸಿಕೊಳ್ಳಲಾಗದ, ಹೆಚ್ಚು ಮಾತನಾಡಲಾಗದ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಮಾನಸಿಕವಾಗಿಯೂ ಹಿಂಸೆ ಅನುಭವಿಸುತ್ತಾ ತಮ್ಮ ತಮ್ಮ ಬಗ್ಗೆ ತಾವೇ ಬೇಸರ ವ್ಯಕ್ತಪಡಿಸಿಕೊಳ್ಳುತ್ತಿರುತ್ತಾರೆ. ಇಂಥವರು ಸೂಕ್ತ ವೈದ್ಯಕೀಯ ಔಷಧೋಪಚಾರ ಪಡೆಯುವುದು ಸೂಕ್ತ.

ಈ ಉಸಿರು ಇರಲಿ. ಇನ್ನು ‘ಉಸಿರು’ ಬಿಡುವುದು ಎಂದರೆ ಈ ಮಂಡಲದ ಹಾವುಗಳು. ಇವುಗಳು ಕಚ್ಚುವುದಕ್ಕಿಂತ ಉಸಿರು ಬಿಡುತ್ತವೆ. ಆ ಉಸಿರು ತಾಗಿಯೇ ಮೈಉರಿಯುವಂಥ, ಉಸಿರು ತಾಗಿದ ದೇಹದ ಭಾಗವೇ ಕೊಳೆಯುವಂಥ ಸ್ಥಿತಿಯೂ ಬರುತ್ತದೆ ಉಸಿರಲ್ಲೇ ವಿಷ! ‘ಉಸಿರು ವಿಷ’ ಎಂದಾಗ ಬಹಳ ಹಿಂದೆ ವಿಷಕನ್ಯೆಯರಿರುತ್ತಿದ್ದರು, ಶತ್ರು ರಾಜರನ್ನು ಸದೆಬಡಿಯಲು ಇವರನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈ ವಿಷಕನ್ಯೆಯರ ಉಸಿರು ತಾಗಿದ್ರೆ ಸತ್ತೇ ಹೋಗುತ್ತಿದ್ದರು… ಇತ್ಯಾದಿ ಮಾತುಗಳನ್ನು ಇತಿಹಾಸದಲ್ಲಿ ನಾವು ಅಧ್ಯಯನ ಮಾಡಿದ್ದೇವೆ. ಏನೇ ಆಗಲಿ ಉಸಿರಿನ ವಿಷಯ ಹುಷಾರಿನ ವಿಷಯ ಅಲ್ವೆ!

ಉಸಿರು ಇಲ್ಲಿಗೆ ನಿಲ್ಲದು! ಈಗೆಲ್ಲಾ ಬಹುಮಹಡಿ ಕಟ್ಟಡಗಳು ಲಿಫ್ಟ್ ವ್ಯವಸ್ಥೆ ಇದ್ದರೆ ಪರವಾಗಿಲ್ಲ. ಹಾಗೆ ನಡಿಗೆಯಿಂದ ಕಟ್ಟಡ ಏರಿದರೆ ಉಸಿರು ಮೇಲಾಗುತ್ತದೆ. ಅದನ್ನೆ “ಏದುಸಿರು ಬಿಡ್ತಾರೆ”, “ಉಸಿರು ಹುಯ್ಕೋತಾರೆ” ಎನ್ನುವುದು. ಈ ಆಸ್ತಮಾ ಕಾಯಿಲೆ ಇದ್ದರೂ ಉಸಿರು ಮೇಲಾಗುವುದು ಏನಂತೀರ?

ಹೀಗೆ ಉಸಿರಿನ ವಿಷ್ಯ ಒಂದೆರಡಲ್ಲ. ಈಗೆಲ್ಲಾ ಹವಾಮಾನ ವೈಪರೀತ್ಯದ್ದೆ ಮಾತು. ಅರಣ್ಯ ಪ್ರಮಾಣ ಭಾರೀ ಕಡಿತವಾಗಿದೆ. ಅದರ ಜಾಗೃತಿಗಾಗಿ ಜಾತಾಗಳನ್ನೆಲ್ಲ ಮಾಡುತ್ತೇವೆ ಎನ್ನುತ್ತಾರೆ. ‘ಹಸಿರೇ ಉಸಿರು’ ಎನ್ನುವ ಘೋಷಣೆಯನ್ನೂ ಕೂಗುತ್ತಾರೆ, ವನಮಹೋತ್ಸವವನ್ನೂ ಆಚರಿಸುತ್ತಾರೆ. ಆದರೆ ವನಮಹೋತ್ಸವ ಆಚರಿಸಿ ಗಿಡನೆಡುವಾಗಿದ್ದ ಕಾಳಜಿ ಆನಂತರ ಇರದೆ ವನಮಹೋತ್ಸವ -ಒಣಮಹೋತ್ಸವಾಗುತ್ತದೆ. ಮಳೆ ನಿಗದಿತ ಕಾಲಕ್ಕೆ ಬಾರದೆ ಇರುವುದು ಚಳಿಯ ಹೆಚ್ಚಳ ಇಲ್ಲವೆ ಕಡಿಮೆ, ತೀವ್ರ ಬಿಸಿಲು ಇವೆಲ್ಲಾ ಪಕೃತಿಯ ಅಸಮತೋಲನ, ಇದಕ್ಕೆ ಕಾರಣ ಮನುಷ್ಯ ಮಿತಿಮೀರಿ ಪ್ರಕೃತಿಯ ವಿಚಾರದಲ್ಲಿ ಮೂಗುತೂರಿಸುವುದು. ಈ ಮನುಷ್ಯ ಪ್ರಕೃತಿ ಮೇಲಲ್ಲದೆ ತನ್ನ ಸಮುದಾಯದೊಳಗೆ ಇಂಥ ಅಸಮತೋಲನ ಅರ್ಥಾತ್ ಲಿಂಗನುಪಾತದ ಅಸಮತೋಲನಕ್ಕೆ ಕಾರಣವಾಗುತ್ತಿದ್ದಾನೆ. “ಗಂಡೆಂದರೆ ಹೆಚ್ಚುಗಾರಿಕೆ ಹೆಣ್ಣೆಂದರೆ ಅವಜ್ಞೆ” ಎಂಬ ಭಾವ ಇಂದಿಗೂ ಅಲ್ಲಲ್ಲಿ ಇದೆ. ಸಮಾಜದಲ್ಲಿ ಲಿಂಗಾನುಪಾತ ಸರಿಯಾಗಿಲ್ಲದಿದ್ದರೆ ಅತ್ಯಾಚಾರಗಳು, ಅಪಹರಣಗಳು, ನೈತಿಕತೆಗೆ ಸಂಬಂಧಿಸಿದ ಸವಾಲುಗಳು ಎದುರಾಗುತ್ತವೆ.

ನಮ್ಮ ಜನಪದರೂ
ನಾಕು ಮಕ್ಕಳ ಕೊಟ್ಟು ಸಾಕು ಮಾಡೋ ಶಿವನೇ|
ನಾಕರಮ್ಯಾಲೆ ಆರತಿ| ಹಿಡಿಯೋಕೆ
ನಾರಿಯ ಕೊಟ್ಟು ಕಡೆ ಮಾಡೋ|
ಎಂದು ಹಾಡಿದ್ದಿದೆ. ಅಂದರೆ ಹೆಣ್ಣಿನ ಕುರಿತಾದ ಪ್ರೀತಿ, ಹೆಣ್ಣು ಸಂತಾನ ಬೇಕು ಎಂಬ ಹಂಬಲ ನಮ್ಮ ಹಿರಿಯರಿಗಿತ್ತು ಎಂದು ತಿಳಿದು ಬರುತ್ತದೆ. ಆದರೆ ಆಧುನಿಕ ಜಗತ್ತಿನಲ್ಲಿ ಹೆಣ್ಣು ಭಾರ, ಖರ್ಚಿನ ಬಾಬತ್ತು, ದ್ವಿತೀಯ ದರ್ಜೆಯ ನಾಗರಿಕರು ಎಂದೇ ತೀರ್ಮಾನಿಸಿ ತೀರಾ ಮುಂದುವರೆದ ರಾಷ್ಟ್ರಗಳಲ್ಲೂ 18ನೆ ಶತಮಾನದವರೆಗೂ ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು, ಸತತ ಹೋರಾಟದ ಪ್ರತ್ನವಾಗಿ ಈಗ ಎಲ್ಲವೂ ಸರಿಹೋಗುತ್ತಿದೆ! ಇಲ್ಲ! ಅನೇಕ ಸಂಚನೆಗಳನ್ನು ಇಂದಿಗೂ ಮಹಿಳಾ ವರ್ಗ ಎದುರಿಸುತ್ತಿದೆ ಎನ್ನುವ ಸಂದಿಗ್ಧತೆಯಲ್ಲಿಯೇ ನಾವಿದ್ದೇವೆ. ಈ ಸಂಚನೆಗಳಲ್ಲಿ ಒಂದು ಹೆಣ್ಣು ಭ್ರೂಣ ಹತ್ಯೆ, ಅವೈಜ್ಞಾನಿಕವಾಗಿ ಭ್ರೂಣ ಹತ್ಯೆಗಳನ್ನು ಮಾಡಿ ಕಾನೂನಿನ ಕೈಗೆ ಸಿಕ್ಕಿ ಬಿದ್ದಿರುವ ಉದಾಹರಣೆಗಳಿವೆ. ಇಷ್ಟರನಡುವೆಯೂ ಬೆಳೆಯುತ್ತಿರುವ ಭ್ರೂಣವೆ ಮಾತನಾಡಿದಂತೆ ಬರೆದಿರುವ ಕವಿತೆಯೊಂದು ಇಲ್ಲಿಗೆ ಸಂದರ್ಭೋಚಿತವಾಗಿದೆ. ಆ ಕವಿತೆಯ ಸಾಲು ಈ ಮುಂದಿನಂತಿದೆ:

ನನ್ನ ಮುದ್ದಿನವ್ವ
ವರವಕೊಡು ತಾಯಿ
ನನ್ನ ಉಸಿರಿಗೆ
ನಿನ್ನ ಬಾಳ ಹಸಿರಿಗೆ
ಹೂ ತರುವೆನೇ ನಿನ್ನ ಹೆಸರಿಗೆ
ನಾ ಬರಿ ಭ್ರೂಣವಲ್ಲ….

‘ನಾ ಬರಿ ಭ್ರೂಣವಲ್ಲ’ ಎಂಬ ಕವಿತೆಯಲ್ಲಿನ ಮಾಲತಿ ಪಟ್ಟಣಶೆಟ್ಟಿ ಅವರ ಸಾಲುಗಳು ಎಷ್ಟು ಆರ್ದ್ರವಾಗಿದೆ ಅಲ್ವೆ! ಈ ಕವಿತೆಯಲ್ಲಿ ಹೆಣ್ಣು ಭ್ರೂಣವೊಂದು ನನಗೆ ಉಸಿರು ಕೊಡು, ನನ್ನನ್ನು ಕಾಪಾಡು ಎಂದು ತಾಯಿಯಲ್ಲಿ ದೀನವಾಗಿ ಮೊರೆಯಿಡುತ್ತಿದೆ. ಸ್ವಗತದಲ್ಲಿರುವ ಈ ಸಾಲುಗಳು ಹೆಣ್ಣು ಭ್ರೂಣಹತ್ಯೆ ಮಾಡಬೇಡಿ ‘ಉಸಿರು’ ಅರ್ಥಾತ್ ‘ಬದುಕು ಕೊಡಿ’ ಎಂದು ಕೇಳುತ್ತಿದೆ. ಹೀಗೆ ಬದುಕಿಗೆ ಅವಲತ್ತುಕೊಳ್ಳುವ ಪ್ರಸಂಗ ಒಂದೆಡೆಯಾದರೆ ಉಸಿರು ಸಿಕ್ಕ ನಂತರ ಬಾಲ್ಯದ ಒತ್ತಡಗಳಲ್ಲಿ ಬಂಧಿಯಾಗುತ್ತಿರುವ ಪ್ರಸಂಗಗಳು ಎಂಥ ವಿಪರ್ಯಾಸ ಅಲ್ಲವೆ?

‘ಉಸಿರಿ’ನ ಹೇಳಿಕೆ ಇಲ್ಲಿಗೆ ಮುಗಿಯಲಿಲ್ಲ, ಇನ್ನೂ ಇದೆ. ‘ಉಸಿರು’ ಈ ಪದದ ಅಕ್ಷರಗಳನ್ನು ಕೊಂಚ ಅದಲು-ಬದಲು ಮಾಡಿದರೆ‘ಉರು(ಸು)ಸ್’ ಆಗುತ್ತದೆ. ಅಂದರೆ ಮುಸಲ್ಮಾನರ ಧಾರ್ಮಿಕ ಆಚರಣೆ ಎಂದಾಗುತ್ತದೆ. ಇನ್ನೂ ಉಸಿರಿನ ಅಕ್ಷರಗಳನ್ನು ಅದಲು ಬದಲು ಮಾಡುತ್ತೇವೆ ಎಂದರೆ ‘ಉರಿಸು’ ಎಂದಾಗುತ್ತದೆ. “ಮನೆಮನೆಯಲ್ಲಿ ದೀಪ ಉರಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ?’’ ಎಂಬ ಜಿ.ಎಸ್. ಎಸ್ ಅವರ ಕವನದ ಸಾಲುಗಳು ನೆನಪಾಗದೆ ಇರುತ್ತವೆಯೇ. ಇಲ್ಲಿ ‘ಹೆಣ್ಣು’ ಎಂದರೆ ಕುಟುಂಬದ ಉಸಿರೇ ಆಗಿದ್ದಾಳೆ, ಜೀವನಧ್ವನಿಯೇ ಆಗಿದ್ದಾಳೆ ಎನ್ನಬಹುದು. ‘ಉರಿಸು’ ಎಂದರೆ ‘ಒಲೆ ಉರಿಸು’ ಎಂಬ ಅರ್ಥವೂ ಬರುತ್ತದೆ ಕಡೆಗೆ ಬೇರೆಯವರ ‘ಹೊಟ್ಟೆ ಉರಿಸು’ ಅಂದರೆ ನೆಗೆಟಿವ್ ಶೇಡಿನಲ್ಲಿಯೂ ಬರುತ್ತದೆ.

‘ಉರ್ಕೊಂಡು ಬಿಟ್ಟ’, ‘ಅವರ ಮುಖ ನೋಡಿದ್ರೆ ಮೈಯೆಲ್ಲಾ ಉರಿಯುತ್ತೆ ನನಗೆ’ ಇತ್ಯಾದಿ ಮಾತುಗಳು ಅಸಹನೆಯನ್ನು, ಏಳಿಗೆ ಸಹಿಸಲಾಗದು ಎನ್ನುವ ಅರ್ಥದಲ್ಲಿಯೇ ಬಳಕೆಯಾಗುತ್ತದೆ. ಒಟ್ಟಾರೆಯಾಗಿ ‘ಉಸಿರು’ ಒಂದು ಪದವಲ್ಲ ಅದು ವಿಸ್ತಾರದ ಪರಿಭಾಷೆ. ಉಸಿರು ಜೀವದ ಶಕ್ತಿ. ಈ ಪ್ರಾಣವಾಯು ಎಂದು ಮಾಯವಾಗುತ್ತದೋ ತಿಳಿಯದು ಆದರೆ ಅಲ್ಲಿಯವರೆಗೆ ಬೇರೆಯವರನ್ನು ಉರಿಸದೆ ಅವರಿಗೆ ಉಸಿರಾಗಿರೋಣ! ಅದು ಸಾಧ್ಯವಿಲ್ಲವಾದರೆ ಸುಮ್ಮನಿದ್ದುಬಿಡೋಣ! ಏನನಿಸುತ್ತೆ?

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ