ತೊಟ್ಟಿಕ್ಕುತ್ತಿದೆ ಕೆಂಪಾಗಿ ಒಂದೊಂದೇ ಹನಿ ಜಾರಿ
ಸಹನೆಮೀರಿ
ಧೋ ಎಂದು ಪ್ರಳಯವಾಗುವ ಮೊದಲು
ಅನಾದಿಕಾಲದಿಂದಲೂ ಕಣ್ತೆರೆದು ನೋಡಿ
ಅಸಹಾಕತೆ ಎದೆಯಲ್ಲಿ ಮೂಡಿ
ಹಲವು ಕಥೆಗಳ ಸಾಕ್ಷಿಯಾಗಿ
ಮಿಡುಕಾಡಿ ಮೂಕವೇದನೆಯಿಂದ
ಹೃದಯ ಒಡೆದು
ತೊಟ್ಟಿಕ್ಕುತ್ತಿದೆ ಹನಿ ಜಾರಿ
ಸುಮವರುಷ ಸುರಿಸಿ ಮಾತ್ರ ಗೊತ್ತು
ಪುಳಕಿಲಸಲು ಭುವಿಯ ಮಳೆಹನಿಯಲಿ
ಸೆಳೆದು, ಮನಗಳರಳಿಸಿ ದಿಗಂತದಂದಲಿ
ಒಂದುಕಾಲದಲಿ
ಹಲವು ಬಣ್ಣಗಳ ಜೊತೆಯಲಿ
ನಲಿಯುತ್ತಿತ್ತು
ಮುಗ್ದಮನದಿ ನಲಿವ ಜೀವಗಳು ಕೆಲವು
ಅಹಂಕಾರದಟ್ಟಹಾಸದಲಿ ಮೆರೆವ ಮನಗಳು ಕೆಲವು
ಎಲ್ಲೂ ನಿಲ್ಲದೆ, ಎಲ್ಲೂ ಸೇರದೆ ಮುದುಡಿದ ಮನಗಳು ಕೆಲವು
ತಮ್ಮ ನೆಲೆಯನ್ನರಿಯದೆ ನಿಟ್ಟುಸಿರು ಬಿಡುವ ಮನಗಳು ಕೆಲವು
ಎಲ್ಲಕ್ಕೂ ಸಾಕ್ಷಿಯಾಗಿ ನಿಂತಿರುವ ನೀಲಾಕಾಶ
ಎಲ್ಲ ಮನಗಳೂ ತನ್ನದೆನ್ನುವ ಆವೇಶ
ಒಲಿಸಬೇಕಿದೆ ಆಕಾಶಮನವ
ತಿಳಿಸಬೇಕಾಗಿದೆ ಒಲವ
ಸಂತೈಸಿ ಎದೆಯ ನೋವ
ಮರುಕಳಿಸಿ ಗತವೈಭವ
ಉಳಿಸಿಕೊಳ್ಳಬೇಕು ಸಂಭ್ರಮವ
ಮತ್ತೆ ನಗು ಬೀರಲು
ಎಂ.ವಿ. ಶಶಿಭೂಷಣ ರಾಜು, ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ
ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸಿ.
ಮೌನದ ಮೊರೆಹೊಕ್ಕಾಗ(ಕವನ ಸಂಕಲನ), ಐ ಸೀ ಯು ಗಾಡ್, ಲೈಫ್, ಅಂಡ್ ಡೆತ್ (ಕವನ ಸಂಕಲನ), “ಇಮಿಗ್ರೇಷನ್ ದಿ ಪೈನ್ (ನಾಟಕ) ಪ್ರಕಟಿತ ಕೃತಿಗಳು.
“ಲಾಸ್ಟ್ ಲೈಫ್” ಕಥನ ಕವನ ಮತ್ತು “ದ್ವಂದ್ವ” ಕವನ ಸಂಕಲನ ಅಚ್ಚಿನಲ್ಲಿವೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ