ಮಳೆಯಲ್ಲಿ ಒದ್ದೆಯಾಗಿರುವ ಹೂವು
ನೆನಪಿಸುತ್ತಿದೆ ರಾತ್ರಿಯ
ನಕ್ಷತ್ರಗಳು ನಿನ್ನ ಕಣ್ಣುಗಳಲ್ಲಿ
ಬಂದು ಹೋಗುತ್ತಿದ್ದವು
ಬೆನ್ನ ಮಣಿ ಕಟ್ಟನ ಬದುವಿನಂಚಿನಿಂದ
ಬಿದ್ದ ಸುಖದಲ್ಲಿ
ಅವೂ ಭಾಗಿ
ನೆಲವನ್ನು ನಭವನ್ನು
ಬೆಸೆದು

******

ನಿನ್ನ ಕಣ್ಣ ಬೆಳಕಲ್ಲಿ
ಲೋಕದ ಆತ್ಮ ವಂಚನೆಗಳು
ಸೆರೆಯಾಗಿ
ತಪ್ಪಿಸಿಕೊಳ್ಳದೆ ಒದ್ದಾಡುತ್ತಿವೆ

******

ಸಿಗಬೇಕಾದ್ದು ಸಿಕ್ಕಾಗ ಸಿಗಬೇಕಾದಂತಿರಲಿಲ್ಲ
ಸಿಗದಿದ್ದುದು ಸುಳಿದು
ಲೋಕದ ಆಕರ್ಷಣೆಯಲ್ಲಿ
ಆಸೆಯ ಸಂಚು
ದುಃಖ ನಿರಂತರ
ಸೃಷ್ಟಿಯ ನಿಯಮ

******

ನಿನ್ನ ಎಳೆಗರುಕೆಯಂಥ
ಬೆರಳುಗಳು
ಮೈಯ ಮೇಲೆ
ತಂಗಾಳಿಯ ಹರಿಸುವುದ
ತಿರಸ್ಕರಿಸಿ
ಒಳ್ಳೆಯವನೆನಿಸಿಕೊಳ್ಳಲಾರೆ

******

ಯುದ್ಧದಲ್ಲಿ ತಲ್ಲೀನನಾಗಿರುವ ದೊರೆಯೇ
ಒಂದೇ ಒಂದು ಕವಿತೆಯಿದೆ
ಕೇಳಿಸಿಕೋ
ನಿನ್ನಾಜ್ಞೆ ಅವರನ್ನು ಸೀಳಿ ಚಲ್ಲನೆ ನೆತ್ತರು ಚಿಮ್ಮುವುದಕ್ಕೂ ಮುನ್ನ
ಮೆಲ್ಲನೆ ಪಿಸುನುಡಿವೆ ಸೋನೆಯಂತೆ ಸೃಷ್ಟಿಯ ಚೆಲುವೆಲ್ಲ ಕರಗಿರುವಂತಹವಳಿಂದ
ಸ್ಫೂರ್ತಿಗೊಂಡಂತ ಕವಿತೆ
ಕಂಗೊಳಿಸುತ್ತ ಮನಸೂರೆ ಗೊಳ್ಳುವ ಅವರಿಂದ ಚಿಮ್ಮುವ ನೆತ್ತರ ಬಣ್ಣದ ಹೂವಿನಂತಹ ಕವಿತೆ
ಕೇಳಿಸಿಕೋ ದೊರೆಯೇ ಯುದ್ಧಕ್ಕೂ ಮುನ್ನ

******

ಮಾತಿನ ಬಿರುಗಾಳಿ ಮಳೆಯಲ್ಲಿ ಒದ್ದೆಯಾದ ಹೂವಿನಂತಿರುವ ಮೌನವ ಕಂಡು
ಹಾಗೆ ನೆಲದಲ್ಲಿ ಕರಗಿಹೋಗುವುದು
ಸೋಲೂ ಅಲ್ಲ ಗೆಲುವೂ ಅಲ್ಲ

******

ಕೊನೆಗೂ ನೀನು
ದಕ್ಕಿದ್ದು ಬೊಗಸೆಯಷ್ಟು
ಆದರೆ ಅದರೊಳಗೆ
ಕಡಲು

******

ತೊಯ್ದಿದೆ ಹೂವು ಮಳೆಯಲ್ಲಿ ಅರಳಿ
ಕೇವಲ ಹೂವಷ್ಟೇ ಅಲ್ಲ
ಅಂದರೆ
ನಿನ್ನ ಕೆನ್ನೆಯಲಿ ಮೂಡಿ ಕಾಮನಬಿಲ್ಲು
ಕರಗಿ
ನಾಚಿಕೆಯ
ಜಿನುಗು

******

ಲೋಕದ ಕಣ್ಣಿಗೆ ಏಕಾಂಗಿ
ಆದರೆ ಎದೆಯಲ್ಲಿ ನಿನ್ನ
ನೆನಪುಗಳು
ಚಿಟ್ಟೆಗಳು
ಆಕಾಶವ ಆವರಿಸಿದೆ
ಮೋಡಗಳಾಗಿ
ಮಳೆ
ನನ್ನೊಳಗೆ ಈ ಪರಿ ತುಂಬಿರುವಾಗ
ನೀನು
ಏಕಾಂತದ ಮಾತೆಲ್ಲಿ

 

(ಕಲಾಕೃತಿ: ರೂಪಶ್ರೀ ಕಲ್ಲಿಗನೂರ್)