ಅಜ್ಜ
ನಿನ್ನ ನೋಡಿದ ನೆನಪಿಲ್ಲ ನನಗೆ,
ಅವರಿವರು ಹೇಳಿದ ಮಾತುಗಳಲ್ಲೇ
ಕಟ್ಟಿಕೊಂಡಿದ್ದೇನೆ ನಿನ್ನದೊಂದು ಚಿತ್ರ.
ನೀನು ದುಷ್ಟನಂತೆ, ನಿಷ್ಟನಂತೆ
ಬುದ್ಧಿವಂತನಂತೆ, ಆದರೂ ಅಪ್ರಯೋಜಕನಂತೆ.
ಮನೆಗೆ ಮಾರಿ ಊರಿಗೆ ಉಪಕಾರಿಯಂತೆ
ಆದರೂ ಒಳ್ಳೆಯ ಮನುಷ್ಯನಂತೆ.
ಎಲೆಯುದುರಿ, ಮೈ ಬಾಗಿ, ಕೊನೆಗೆ
ಬಿದ್ದು ಹೋದ ಮರ ನೀನು,
ಆರೋಪಗಳ ಸುರಿಮಳೆ ನಿನ್ನ ಮೇಲೆ.
ಆದರೂ ಮರೆತಿಲ್ಲ, ಒಂದು ಕಾಲಕ್ಕೆ
ನೀನಿತ್ತ ತಂಪು ನೆರಳು, ನಿಷ್ಕಾಮ ಪ್ರೇಮ.
ಒಡಕಲು ಬಿಂಬಗಳಲ್ಲೆ ನಿನ್ನ
ಬೆಳಕು ಹುಡುಕುವೆ ಅಜ್ಜ,
ನೀನಿದ್ದರೆ ಮೊಮ್ಮಕ್ಕಳ ಪರ ನಿಂತು
ಬೈಯ್ಯುತ್ತಿದ್ದೆಯೇನೊ ನಿನ್ನ ಮಕ್ಕಳಿಗೆ.
ನಿನ್ನ ಮಕ್ಕಳು ಬೈಯ್ಯುತ್ತಲೇ
ನಿನ್ನ ನೆನೆಯುತ್ತಾರೆ
ಕಣ್ಣಂಚಿನ ನೀರ ಒರೆಸುತ್ತಾರೆ.
ಲೌಕಿಕದ ಅಗತ್ಯಗಳ ಮೀರಿ
ನೀನು ಕಲಿಸಿದ ಮೌಲ್ಯಗಳೆ ಸಾಕೆನ್ನುತ್ತಾರೆ.
ಕೊನೆಗೂ ನೀ ನನಗೆ
ಬಿಡಿಸಲಾಗದ ಒಗಟು
ನಿಲುಕದ ಧ್ರುವತಾರೆ.
ನಿನ್ನ ಗೈರುಹಾಜರಿಯೆ
ತಂದಿದೆ ನೆನಪಿಗೊಂದು ಘನತೆ.
ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಅದ್ಬುತ ಬರವಣಿಗೆ, ನಾನು ನಿಮ್ಮ ಅಭಿಮಾನಿ, ನಿಮ್ಮ ಮುಂದಿನ ಬರವಣಿಗೆಗಾಗಿ ಸದಾ ಕಾಯುವೆ. ❤️
Thank you so much
What a lovely poem!!
Thank you so much