‘ಬಗ್ದಾದಿಗೆ ಬಂದ ಮೃತ್ಯು ದೂತ’ ಎಂಬ ಸೂಫಿ ಕಥೆ
ಬಗ್ದಾದಿನ ಒಬ್ಬಾನೊಬ್ಬ ಸೂಫಿ ಗುರುವಿನ ಶಿಷ್ಯ ಒಂದು ದಿನ ತನ್ನ ಎಂದಿನ ಪದ್ಧತಿಯಂತೆ ಅಲ್ಲಿನ ಸತ್ರವೊಂದರ ಮೂಲೆಯಲ್ಲಿ ಕುಳಿತಿದ್ದ. ಪಕ್ಕದಲ್ಲೇ ಇನ್ನಿಬ್ಬರು ಕುಳಿತು ಏನೋ ಮಾತಾಡಿಕೊಳ್ಳುತ್ತಿದ್ದರು. ಅವರ ಮಾತು ಕೇಳಿಸಿಕೊಂಡ ಶಿಷ್ಯನಿಗೆ ಅವರ ಪೈಕಿ ಒಬ್ಬ ಮೃತ್ಯುದೂತನೆಂದು ಎಂದು ಅರಿವಾಯಿತು.
‘ಬರುವ ಮೂರು ದಿನಗಳಲ್ಲಿ ನಾನು ಇಲ್ಲಿ ಅನೇಕರನ್ನು ಕಾಣಬೇಕಾಗಿದೆ’ ಎಂದ ಮೃತ್ಯುದೂತ ತನ್ನ ಜೊತೆಗಾರನಿಗೆ.
ಅದನ್ನು ಕೇಳಿದ ಶಿಷ್ಯ ಕುಳಿತಲ್ಲೇ ಗಡಗಡ ನಡುಗಿದ. ಅವರು ಅಲ್ಲಿಂದ ಹೋಗುವವರೆಗೂ ಅವರ ಕಣ್ಣಿಗೆ ಕಾಣದಂತೆ ಎಲ್ಲೋ ಹುದುಗಿಕೊಂಡಿದ್ದು, ಅವರು ಅಲ್ಲಿಂದ ಹೋದಮೇಲೆ ತಾನು ಅವರಿಂದ ಬಚಾವಾಗುವುದು ಹೇಗೆ ಎಂದು ಯೋಚಿಸಿದ. ಬಗ್ದಾದಿನಿಂದ ಎಷ್ಟು ದೂರವಿದ್ದರೆ ಅಷ್ಟು ಕ್ಷೇಮ ಎನ್ನಿಸಿತು ಅವನಿಗೆ. ಕೂಡಲೆ ಹೋಗಿ ಅತಿ ವೇಗವಾಗಿ ಓಡುವ ಕುದುರೆಯೊಂದನ್ನು ಕೊಂಡು ಅದೇ ರಾತ್ರಿ ಅಲ್ಲಿಂದ ದೂರದ ಸಮರ್ಕಂಡ್ ಕಡೆಗೆ ದೌಡಾಯಿಸಿದ.
ಮಾರನೆ ದಿನ ಮೃತ್ಯುದೂತ ಆ ಶಿಷ್ಯನ ಗುರುವನ್ನು ಕಂಡು ಅವರಿವರ ಬಗ್ಗೆ ಮಾತಾಡುತ್ತ, ‘ಅಂದ ಹಾಗೆ ಆ ನಿಮ್ಮ ಶಿಷ್ಯ ಒಬ್ಬನಿದ್ದಾನಲ್ಲ, ಎಲ್ಲಿ ಅವನು?’ ಎಂದು ಕೇಳಿದ.
‘ಓ ಅವನೇ, ಇಲ್ಲೇ ಎಲ್ಲೋ ಇರುತ್ತಾನೆ. ಬಹುಶಃ ಊರೊಳಗೆ ಯಾವುದೋ ಕಾರವಾನ್‌ಸೆರಾಯ್‌ನಲ್ಲಿ ಕುಳಿತು ಏನೋ ಧ್ಯಾನಮಾಡುತ್ತಿರುತ್ತಾನೆ,’ ಎಂದ ಗುರು.
‘ಆಶ್ಚರ್ಯ! ನಾನು ನೋಡಬೇಕಾದವರ ಪಟ್ಟಿಯಲ್ಲಿ ಅವನ ಹೆಸರೂ ಇದೆ. ಇದೋ, ಇಲ್ಲಿ ನೋಡಿ, ಅನುಮಾನವೇ ಇಲ್ಲ! ಆದರೆ ನಾನು ಅವನನ್ನು ಇನ್ನು ನಾಲ್ಕು ವಾರ ಕಳೆದು ಎಲ್ಲ ಬಿಟ್ಟು ಸಮರ್ಕಂಡ್‌ನಲ್ಲಿ ಕಾಣಬೇಕು ಎಂದು ಆಜ್ಞೆಯಾಗಿದೆಯಲ್ಲ ನನಗೆ, ಏನು ವಿಚಿತ್ರ!’ ಎಂದ ಮೃತುದೂತ.
[ಒಂಬತ್ತನೆ ಶತಮಾನದಲ್ಲಿ ಗತಿಸಿದ ಸೂಫೀ ಫಿದಾಯಿಲ್ ಇಬ್ನ್ ಅಯಾದ್ ಹೇಳಿದ ಈ ಕತೆ ಮಧ್ಯಪ್ರಾಚ್ಯದಲ್ಲೆಲ್ಲ ಒಂದು ಜಾನಪದ ಕತೆಯಾಗಿ ಪ್ರಖ್ಯಾತವಾಗಿದೆ.]
ಎಚ್ ವೈ ರಾಜಗೋಪಾಲ್ ಹೇಳಿದ ಸೂಫಿ ಕಥೆ: ಸ್ವರ್ಗದ ಬಾಗಿಲು
ಹಿಂದೆ ಒಬ್ಬಾನೊಬ್ಬ ಸತ್ಪುರುಷನಿದ್ದ. ತನ್ನ ಜೀವಿತವನೆಲ್ಲ ಅವನು ಮುಂದೆ ಸ್ವರ್ಗ ಪ್ರಾಪ್ತಿಯಾಗಲು ಏನೇನು ಸತ್ಕಾರ್ಯಗಳನ್ನು ಮಾಡಬೇಕೆಂದು ಹೇಳಿದೆಯೋ ಅವನ್ನೆಲ್ಲ ಮಾಡುವುದರಲ್ಲಿ ತೊಡಗಿಸಿದ್ದ. ಬಡಬಗ್ಗರಿಗೆ ಧಾರಾಳವಾಗಿ ದಾನ ಮಾಡುತ್ತಿದ್ದ. ಎಲ್ಲರನ್ನೂ ಪ್ರೀತಿಯಿಂದ ಕಂಡು ಅವರಿಗೆ ಸೇವೆ ಸಲ್ಲಿಸುತ್ತಿದ್ದ. ಜೀವನದಲ್ಲಿ ಸಹನೆ ಎಂಬುದು ಎಷ್ಟು ಮುಖ್ಯ ಎಂಬುದನ್ನು ಅರಿತುಕೊಂಡು, ಎಂತೆಂಥ ಕಷ್ಟಗಳು ಬಂದರೂ ಅದನ್ನೆಲ್ಲ-ಎಷ್ಟೋ ಸಲ ಇತರರ ಸಲುವಾಗಿ ಕೂಡ-ತಾಳಿಕೊಂಡು ಇರುತ್ತಿದ್ದ. ಜ್ಞಾನಾರ್ಜನೆಗೆಂದು ಆಗಾಗ ದೇಶಪರ್ಯಟನೆ ಮಾಡಿಬರುತ್ತಿದ್ದ. ಅವನ ವಿನಯ ಹಾಗೂ ಆದರ್ಶಪ್ರಾಯ ನಡವಳಿಕೆಯಿಂದಾಗಿ ಅವನ ಖ್ಯಾತಿ ನಾಲ್ಕು ದಿಕ್ಕುಗಳಲ್ಲೂ ಹರಡಿತ್ತು.
ಈ ಸತ್ಕಾರ್ಯಗಳನ್ನೆಲ್ಲ ಅವನು ಮಾಡುತ್ತಿದ್ದುದು ಅವನ ಮನಸ್ಸಿನಲ್ಲಿ ಅದರ ಬಗ್ಗೆ ಎಚ್ಚರವಿದ್ದಾಗ ಮಾತ್ರ. ಆದರೆ ಆಗಾಗ ಅವನಿಗೆ ಆ ಎಚ್ಚರ ತಪ್ಪುತ್ತಿತ್ತು. ಅದೊಂದು ಲೋಪ ಅವನಲ್ಲಿ. ಅದರಿಂದಾಗಿ ನೆರೆಹೊರೆಯಲ್ಲಿದ್ದ ಹಲವು ಬಡಜನರ ಕಷ್ಟಕ್ಕೆ ಅವನೂ ಏನೂ ಮನಸ್ಸು ಕೊಟ್ಟಿರಲಿಲ್ಲ. ಅವರಿಗೆ ಅವನಿಂದ ಏನೂ ಸಹಾಯ ಸಿಕ್ಕಿರಲಿಲ್ಲ. ಒಂದೊಂದು ಸಲ ತನ್ನ ಸ್ವಂತ ಆಸೆ-ಆಕಾಂಕ್ಷೆಗಳು, ಕೆಲಸಗಳು ಇವೇ ಹೆಚ್ಚು ಮುಖ್ಯವಾಗಿ ಇತರರ ಬಗೆಗೆ ಸಲ್ಲಿಸಬೇಕಾದ ಪ್ರೀತಿ, ಸೇವೆಗಳು ಹಿಂದೆ ಬೀಳುತ್ತಿದ್ದವು. ಇಷ್ಟಾದರೂ ಅವನ ಮನಸ್ಸಿನಲ್ಲಿ ತಾನು ಇದುವರೆಗೆ ಮಾಡಿರುವ ಸತ್ಕಾರ್ಯಗಳನ್ನೆಲ್ಲ ಎಣಿಸಿದರೆ ಇದೇನೂ ಅಷ್ಟು ದೊಡ್ಡ ಲೋಪವಲ್ಲ ಎಂಬ ಭಾವನೆ ಇತ್ತು.
ಅವನಿಗೆ ನಿದ್ದೆಯೆಂದರೆ ಮಹಾಪ್ರೀತಿ. ಅದರಿಂದಾಗಿ ಎಷ್ಟೋ ಸತ್ಕಾರ್ಯಗಳನ್ನು ಮಾಡುವ, ಜ್ಞಾನಾರ್ಜನೆ ಮಾಡುವ, ಉತ್ತಮ ಆದರ್ಶಗಳನ್ನು ಪರಿಪಾಲಿಸುವ, ತನ್ನ ನಡವಳಿಕೆಯನ್ನು ಉತ್ತಮಪಡಿಸಿಕೊಳ್ಳುವ ಸದವಕಾಶಗಳು ಅವನ ಕೈಬಿಟ್ಟುಹೋಗಿದ್ದವು. ಒಂದು ಸಲ ಹೋದ ಅವಕಾಶ ಮತ್ತೆ ಬಂದೀತೇ? ಅವನ ಸದ್ಗುಣಗಳ ಹಾಗೇ ಈ ಒಂದು ದುರ್ಗುಣವೂ ಅವನ ಜೀವಿತದ ಮೇಲೆ ತನ್ನ ಮುದ್ರೆಯೊತ್ತಿತ್ತು.
ಕಡೆಗೊಂದು ದಿನ ಆ ಸತ್ಪುರುಷ ಸತ್ತ. ಇಹಲೋಕದ ಬದುಕನ್ನು ದಾಟಿಹೋದ ಅವನು ದೇವರ ತೋಟದ ಮಹಾಪ್ರಾಕಾರದ ಬಳಿಗೆ ಬಂದು ನಿಂತ. ತೋಟದ ಬಾಗಿಲು ಮುಚ್ಚಿತ್ತು. ಅಲ್ಲಿ ನಿಂತಾಗ ಅವನ ಮನಸ್ಸು ಆತ್ಮಪರೀಕ್ಷೆಯಲ್ಲಿ ತೊಡಗಿತು. ಈ ಎತ್ತರದ ಪ್ರಾಕಾರದ ಬಾಗಿಲನ್ನು ಪ್ರವೇಶಿಸುವ ಅರ್ಹತೆ ತನ್ನಲ್ಲಿದೆಯೇ ಎಂದು ಅವನ ಮನಸ್ಸು ಕೇಳಿತು. ಹಾಗೇ ಚಿಂತಿಸಿ ಕಡೆಗೆ ಆ ಸತ್ಪುರುಷ ನಾನು ಸಾಕಷ್ಟು ಪುಣ್ಯಕಾರ್ಯಗಳನ್ನು ಮಾಡಿದ್ದೇನೆ, ಅದರಿಂದ ಈ ಬಾಗಿಲನ್ನು ಪ್ರವೇಶಿಸುವ ಅರ್ಹತೆ ನನ್ನಲ್ಲಿದೆ ಎಂಬ ತೀರ್ಮಾನಕ್ಕೆ ಬಂದು ಸಮಾಧಾನಪಟ್ಟುಕೊಂಡ.
ಸದ್ಯದಲ್ಲೇ ಅವನಿಗೊಂದು ದನಿ ಕೇಳಿಸಿತು: ‘ಎಚ್ಚರವಾಗಿರು. ಈ ಬಾಗಿಲು ನೂರು ವರ್ಷಕ್ಕೊಂದು ಸಲ ಮಾತ್ರ ತೆರೆಯುವುದು.’ ಆ ಮಾತು ಕೇಳಿ ಅವನಿಗೆ ಸಂತೋಷವೇ ಆಯಿತು – ಒಳಗೆ ಹೋಗುವ ಅವಕಾಶವಿದೆಯಲ್ಲ ಎಂದು. ಆದರೆ ಅವನಿಗೆ ಜನರ ಒಳಿತಿಗಾಗಿ ಪ್ರತಿ ಕ್ಷಣವೂ ದುಡಿಯುತ್ತಿರಬೇಕೆಂಬ ಎಚ್ಚರ ಹೇಗೆ ಆಗಾಗ ತಪ್ಪುತ್ತಿತ್ತೋ ಹಾಗೇ ಈಗಲೂ ಎಚ್ಚರ ತಪ್ಪಿತು. ಒಂದು ಯುಗವೇ ಕಳೆದುಹೋಯಿತೇನೋ ಅನ್ನುವಷ್ಟು ಕಾಲ ಎಚ್ಚರವಾಗಿದ್ದ ಅವನಿಗೆ ಈಗ ನಿದ್ರೆ ಕವಿದು ಬಂತು. ಒಂದು ಕ್ಷಣ ಅವನ ಅವನ ಕಣ್ಣು ಮುಚ್ಚಿತು. ಆದರೆ ಅದೇ ಕ್ಷಣದಲ್ಲಿ ಆ ದಿವ್ಯನಂದನದ ಬಾಗಿಲು ತೆರೆಯಿತು. ಅವನು ಪೂರ್ತಿ ಕಣ್ಣುಬಿಟ್ಟು ನೋಡುವಷ್ಟರಲ್ಲಿ ಬಾಗಿಲು ಮತ್ತೆ ಮುಚ್ಚಿತು – ಸತ್ತವರನ್ನೂ ಎಚ್ಚರಿಸುವಂಥ ಮಹಾಶಬ್ದ ಮಾಡುತ್ತ.
(ಈ ಕತೆ ಜನರಲ್ಲಿ ಬಹಳ ಪ್ರಚಲಿತವಾಗಿದ್ದರೂ ಅದರ ಹುಟ್ಟಿನ ಬಗ್ಗೆ ಸಾಕಷ್ಟು ತಿಳಿಯದು. ಏಳನೆಯ ಶತಮಾನದಲ್ಲಿದ್ದ ನಾಲ್ಕನೆಯ ಕಲೀಫ್ ಹದ್ರತ್ ಅಲಿ ಹೇಳಿದ್ದು ಆ ಕತೆ ಎನ್ನುತ್ತಾರೆ ಕೆಲವರು. ಇನ್ನು ಕೆಲವರು ಸೂಫೀ ಪಂಥದಲ್ಲಿ ಈ ಕತೆ ಗಳಿಸಿರುವ ಪ್ರಾಮುಖ್ಯತೆಯನ್ನು ಗಮನಿಸಿ ಇದನ್ನು ಪ್ರವಾದಿ ಮಹಮ್ಮದನೇ ಹೇಳಿದನೆಂದೂ ಅನ್ನುತ್ತಾರೆ. ಇಲ್ಲಿ ಹೇಳಿರುವ ರೀತಿ ೧೭ನೇ ಶತಮಾನದ ಅಮಿಲ್ ಬಾಬಾ ಎಂಬ ಡರ್ವಿಷನದು. ‘ನಿಜವಾದ ಗ್ರಂಥಕರ್ತ ಎಂದರೆ ಹೆಸರು ಹೇಳಿಕೊಳ್ಳದೆ ಅನಾಮಿಕನಾಗಿ ಉಳಿದುಕೊಳ್ಳುವವನೇ, ಏಕೆಂದರೆ ಆಗ ಕಲಿಕೆಗೂ ಕಲಿಯುವವನಿಗೂ ಮಧ್ಯೆ ಯಾರೂ ಅಡ್ಡಿ ಇರುವುದಿಲ್ಲ’ – ಎನ್ನುತ್ತಿದ್ದನಂತೆ ಅವನು.)
[ಮೂಲ: ಇದ್ರೀಸ್ ಶಾ ಅವರ ‘Tales of the Dervishes’]
ಹಾರಲಾರದ ಹಕ್ಕಿ- ಒಂದು ಸೂಫಿ ಕಥೆ
ಒಂದಾನೊಂದು ಕಾಲದಲ್ಲಿ ಒಂದು ಹಕ್ಕಿ ಇತ್ತು. ಅದಕ್ಕೆ ಹಾರುವ ಸಾಮರ್ಥ್ಯವಿರಲಿಲ್ಲ. ಒಂದು ಕೋಳಿಮರಿಯಂತೆ ನೆಲದ ಮೇಲೆ ನಡೆದಾಡುತ್ತಿತ್ತೇ ವಿನಃ ಮೇಲಕ್ಕೆ ಹಾರುತ್ತಿರಲಿಲ್ಲ. ಆದರೆ ಅದಕ್ಕೆ ಗೊತ್ತಿತ್ತು ಅನೇಕ ಹಕ್ಕಿಗಳು ಆಕಾಶದಲ್ಲಿ ಹಾರಬಲ್ಲವು ಎಂದು.
ಹೀಗಿರುತ್ತ ಒಂದು ಸಲ ಏನೋ ವಿಚಿತ್ರ ಘಟನೆಗಳ ಸಂಯೋಗದಿಂದ ಒಂದು ಹಾರುವ ಸಾಮರ್ಥ್ಯವುಳ್ಳ ಹಕ್ಕಿಯ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವ ಸಂದರ್ಭ ಈ ಹಕ್ಕಿಗೆ ಒದಗಿತು.
ಈ ಹಕ್ಕಿ ಶ್ರದ್ಧೆಯಿಂದ ಕಾವು ಕೊಟ್ಟಿತು. ಆ ಮೊಟ್ಟೆ ಒಡೆದು ಚಿಕ್ಕ ಮರಿ ಹೊರಬಂತು. ಸಂತಸದಿಂದ ನೆಲದಮೇಲೆ ಓಡಾಡಿತು. ದಿನ ಕಳೆದಂತೆ ಅದು ತನ್ನ ಸಾಕುತಾಯನ್ನು ಕೇಳಲು ಮೊದಲಿಟ್ಟಿತು: “ಎಂದಿಗೆ ನಾನು ಹಾರುವುದು?”
ಸಾಕುತಾಯಿ ಹೇಳಿದಳು: “ಹಾರುವ ನಿನ್ನ ಪ್ರಯತ್ನ ನೀನು ಮಾಡುತ್ತಲೇ ಇರು ಇತರರಂತೆ. ಒಂದು ದಿನ ನೀನೂ ಹಾರುತ್ತೀಯೆ.”
ಆದರೆ ನಿಜದ ಸಂಗತಿ ಏನೆಂದರೆ ಆ ಸಾಕುತಾಯಿಗೆ ಈ ಮರಿಗೆ ಹಾರಲು ಹೇಳಿಕೊಡುವುದು ಹೇಗೆಂದು ತಿಳಿದಿರಲಿಲ್ಲ. ಹಾರುವ ಹಕ್ಕಿಗಳು ತಮ್ಮ ಮರಿಗಳನ್ನು ಗೂಡಿನಿಂದ ಹೊರನೂಕಿ ಹಾರುವುದನ್ನು ಕಲಿಸುವ ರೀತಿ ಈ ಹಾರಲಾರದ ಸಾಕುತಾಯಿಗೆ ತಿಳಿದಿರಲಿಲ್ಲ.
ಆದರೆ ಆ ಚಿಕ್ಕ ಮರಿಗೆ ತನ್ನ ಸಾಕುತಾಯಿಗೆ ತನಗೆ ಹಾರಲು ಕಲಿಸುವ ಸಾಮರ್ಥ್ಯವೇ ಇಲ್ಲ ಎಂಬ ಸತ್ಯ ತಿಳಿದಿರಲಿಲ್ಲ. ಆ ಪುಟ್ಟ ಮರಿಯ ಹೃದಯದಲ್ಲಿ ತನಗೆ ಕಾವುಕೊಟ್ಟು ಹೊರತಂದ ಸಾಕುತಾಯಿಯ ಬಗ್ಗೆ ಕೃತಜ್ಞತೆಯೊಂದೇ ತುಂಬಿಕೊಂಡಿತ್ತು. “ಈ ತಾಯಿ ನನಗೆ ಶಾಖ ಕೊಡದೇ ಇದ್ದಿದ್ದರೆ, ನಾನಿನ್ನೂ ಮೊಟ್ಟೆಯೊಳಗೇ ಹುದುಗಿರುತ್ತಿದ್ದೆ,” ಎಂದುಕೊಳ್ಳುತ್ತಿತ್ತು ಮರಿ.
ಹಾಗೇ ತನ್ನ ಆಲೋಚನೆ ಮುಂದುವರೆಸುತ್ತ, ನನಗೆ ಕಾವು ಕೊಟ್ಟು ಹೊರತಂದವರಿಗೆ ನನಗೆ ಹಾರಲು ಹೇಳಿಕೊಡುವ ಸಾಮರ್ಥ್ಯವೂ ಇರಲೇಬೇಕು… ಆ ಕಾಲ ಬರಬೇಕು, ಅಷ್ಟೆ. ನಾನಾಗ ಹಾರುತ್ತೇನೆ… ಅಥವಾ ಅದಕ್ಕಾಗಿ ನಾನು ಸತತವಾಗಿ ಪ್ರಯತ್ನಿಸಬೇಕೇನೋ… ಅಥವಾ ಅದೊಂದು ವಿಶಿಷ್ಟ ಜ್ಞಾನವೋ! ಅದೆಲ್ಲ ಏನೇ ಇರಲಿ, ಇದಂತೂ ನನ್ನ ಮನಸ್ಸಿಗೆ ನಿಶ್ಚಯ: ನನ್ನನ್ನು ಇದುವರೆಗೆ ನಡೆಸಿರುವ ಶಕ್ತಿಯೇ ನನ್ನನ್ನು ಇನ್ನು ಮುಂದಿನ ಸ್ಥಿತಿಗೂ ಕರೆದೊಯ್ಯುತ್ತದೆ.”
ಹೀಗೆಂದುಕೊಳ್ಳುತ್ತ ಆ ಮರಿಹಕ್ಕಿ ತನ್ನ ಮುಂದಿನ ಸ್ಥಿತಿಯನ್ನು ಎದುರುನೋಡುತ್ತಲೇ ಇತ್ತು…
(ಹನ್ನೆರಡನೇ ಶತಮಾನದ ಸೂಫಿ ಸಂತ ಸುಹ್ರವರ್ದಿಯ ಕೃತಿಗಳಲ್ಲಿ ಈ ಕತೆ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುವುದಂತೆ. ಶಿಷ್ಯನ (ಸಾಧಕನ) ಆಧ್ಯಾತ್ಮಿಕ ಮಟ್ಟಕ್ಕೆ ಅನುಸಾರವಾಗಿ ಈ ಕತೆಯ ಸಂದೇಶ ಅರಿವಾಗುತ್ತದೆ.
ಮೂಲ: ಇದ್ರೀಸ್ ಷಾ ಅವರ Tales of the Dervishes]
ಅಮೇರಿಕಾದಲ್ಲಿ ನೆಲೆಸಿರುವ ಕನ್ನಡದ ಹಿರಿಯ ಲೇಖಕರು.‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರು.