`ಪ್ಯಾರಿಸ್’…… ಹೆಸರಲ್ಲೇ ಏನೋ ಮಾಂತ್ರಿಕತೆ…. ಕೇಳಿದವರೆಲ್ಲ ಕನಸು ಕಟ್ಟುವ ನಗರ…. ನೋಡಿದಾಗ ಇನ್ನಷ್ಟು ಕನಸನ್ನ ಪ್ರೇರೇಪಿಸುವ ನಗರ. ಎಲ್ಲರಂತೆ ಈ ಹೆಸರಿನ ಸೆಳೆತಕ್ಕೆ ನಾನೂ ಒಳಗಾದವಳು…. ಯಾರಿಗೂ ಗೊತ್ತಾಗದಂತೆ ಮನಸ್ಸಿನಲ್ಲೇ ಮಂಡಿಗೆ ತಿಂದವಳು. ಈ ಮನದ ಮಂಡಿಗೆ ನಿಜವಾಗಿ ತಿನ್ನಲು ಅವಕಾಶವಾದಾಗ ಸುತ್ತಮುತ್ತ ಯಾರೂ ಇಲ್ಲವೆಂದು ಗಟ್ಟಿಪಡಿಸಿಕೊಂಡು ಖುಷಿಯಲ್ಲಿ ಕುಣಿದಾಡಿದೆ. ಅಂದೇ ಶುರು… ಕುಳಿತಲ್ಲಿ… ನಿಂತಲ್ಲಿ… ಅಲ್ಲಿ ಇಲ್ಲಿ ಹೋದಲ್ಲಿ ಇದೇ ಕೀಟ ತಲೆಯೊಳಗೆ… ಎಲ್ಲಿಗೆಲ್ಲ ಹೋಗಬೇಕು, ಏನೆಲ್ಲ ನೋಡಬೇಕು ಎಂದೆಲ್ಲ ಕೊರೆಯಲು ಪ್ರಾರಂಭವಾಗಿತ್ತು. ಪಟ್ಟಿ ಬೆಳೆಯುತ್ತಾ ಹೋಗಿ ಹನುಮಂತನ ಬಾಲವಾಯ್ತು… ಮನಸ್ಸು ಗೊಂದಲದ ಗೂಡಾಯ್ತು. ಸರಿ… ಇನ್ನು ಹೀಗೇ ಬಿಟ್ಟರೆ ಉಳಿಗಾಲವಿಲ್ಲವೆಂದು ಅರಿತ ನನ್ನ ತಮ್ಮ ನನ್ನ ಕೈಯ ಲಗಾಮನ್ನು ತನ್ನ ಕೈಗೆ ತಗೊಂಡ… ಪೂರ್ತಿ ಮೂರು ದಿನಗಳ ಸಮಯವಿದೆ… ನಿನ್ನ ಪಟ್ಟಿಯನ್ನು ಇಷ್ಟಕ್ಕೇ ಇಳಿಸಿಕೊ… ಎಂದು ತಲೆ ಮೇಲೆ ಮೊಟಕಿದ. ಅಲ್ಲಿಗೆ ನಾನು ಕನಸಿನ ಮೋಡದ ಮೇಲೆ ತೇಲುತ್ತಿದ್ದವಳು ವಾಸ್ತವಿಕತೆಗೆ ಇಳಿದೆ… ನನ್ನ ಪುಸ್ತಕದ ರಾಶಿಯಿಂದ ಪ್ಯಾರಿಸ್ ಬಗೆಗಿನ ಪುಸ್ತಕವನ್ನು ಹುಡುಕಿ ತೆಗೆದೆ… ಪುಸ್ತಕದಂಗಡಿ ಸುತ್ತಾಡಿ ಒಂದು ಟೂರಿಸ್ಟ್ ಗೈಡ್ ಪಡೆದೆ. ಕಂಪ್ಯೂಟರ್ ಎದುರು ದಿನ ರಾತ್ರಿ ಎನ್ನದೆ ಕುಳಿತು ಇಂಟರ್ ನೆಟ್ ನಲ್ಲಿ ಜಾಲಾಡಿದೆ…
ಸುಮಾರು ಎರಡು-ಮೂರು ವಾರದ ಈಜಾಟದ ಕೊನೆಗೆ ಹನುಮಂತನ ಬಾಲವನ್ನು ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸಿದೆ. ಹೊರಡುವ ವಾರ ಮೊದಲಿಂದ ಪ್ಯಾರಿಸ್ ನಗರದ ನಕಾಶೆ ನೋಡಿ ಎಲ್ಲೆಲ್ಲಿ ತಿರುಗಬೇಕು, ಹೇಗೆಲ್ಲ ಹೋಗಬೇಕು ಎಂದು ಗುರುತು ಹಾಕಿಕೊಂಡೆವು. ಹತ್ತಿರದ ಜಾಗಗಳನ್ನು ಒಟ್ಟು ಹಾಕಿ ಗುಂಪು ಮಾಡಿ ಮೂರು ದಿನಕ್ಕೆ ಹಂಚಿ ಹಾಕಿದೆವು. ಉಳಕೊಂಡಿರುವ ಹೊಟೇಲ್ ನಿಂದ ಒಂದು ನಿರ್ದಿಷ್ಟ ಜಾಗಕ್ಕೆ ಹಾಗೂ ದಿನ ಮುಗಿಸಿ ವಾಪಾಸಾಗುವಾಗ ಮಾತ್ರ ಮೆಟ್ರೊ ರೈಲು ಪಯಣ… ಬಾಕಿ ದಿನವಿಡೀ ಕಾಲ್ನಡಿಗೆಯಿಂದಲೇ ಎಲ್ಲ ನೋಡಿ ಅಲ್ಲಿಯ ಬದುಕನ್ನು ಅಲ್ಲಿಯ ಜನರನ್ನು ನಿಜವಾಗಿ ಅನುಭವಿಸಬೇಕೆಂದು ನಿರ್ಧಾರವಾಯಿತು. ಇನ್ನು ನಮ್ಮೆದುರಿಗಿದ್ದ ಇನ್ನೊಂದು ಸಮಸ್ಯೆ ಎಂದರೆ ಆಹಾರದ್ದು. ವಿಧವಿಧದ ಬ್ರೆಡ್, ಬನ್ನು, ಪಿಜಾ ಇದ್ದರೂ ಅವರ ಉಪ್ಪು, ಖಾರ, ಮಸಾಲೆ ಇಲ್ಲದ ಆಹಾರ ನಮಗೆ ಹೆಚ್ಚು ಆತ್ಮೀಯವಾಗದಾಯ್ತು. ಹಾಗಾಗಿ ದಿನದಲ್ಲಿ ಒಪ್ಪೊತ್ತಾದರೂ ಮನೆ ಊಟ ಇರಲಿ ಎಂದು ಪರೋಟ, ಪಾವ್ ಬಾಜಿ ಹಾಗೂ ರೈಸ್ ಗಳ ಪ್ಯಾಕೆಟ್ಟುಗಳನ್ನು ಹೊತ್ತುಕೊಂಡೆವು. ಈ ಅನುಕೂಲಕ್ಕಾಗಿ ಕಿಚನ್ ಇರುವಂತಹ ಹೊಟೇಲ್ ರೂಮನ್ನೂ ಪಡಕೊಂಡಿದ್ದೆವು. ಅಂತೂ ಎಲ್ಲ ತಯಾರಿಯ ನಂತರ ಒಂದು ದಿನ ಸಂಜೆ ನಾವಿದ್ದ ಜರ್ಮನಿಯಿಂದ ಪ್ಯಾರಿಸ್ ಗೆ ಟ್ರೈನ್ ಹಿಡಿದೆವು. ಸೂಪರ್ ಫಾಸ್ಟ್ ಟ್ರೈನೂ ಸೇರಿದಂತೆ ಒಟ್ಟು ಐದು ಟ್ರೈನ್ ಬದಲಿಸಿ ಪ್ಯಾರಿಸ್ ಸೇರಿದೆವು. ವಿವಿಧ ಹಳ್ಳಿ, ಗುಡ್ಡಕಾಡು, ವಿಶಾಲ ಬಯಲು ಎಂದೆಲ್ಲಾ ಸಾಗಿದ ಈ ಪ್ರಯಾಣ ಬಹಳ ಖುಷಿ ಕೊಟ್ಟಿತು. ಬಯಲಲ್ಲಿ ಮೇಯುತ್ತಿರುವ ನೂರಾರು ದನಗಳು, ಕುರಿ ಮಂದೆ, ಸಂತೋಷವಾಗಿ ಕೆನೆಯುತ್ತಾ ಆಡುವ ಕುದುರೆಗಳು… ಕೊನೆಗೆ ಒಂದು ಬಂಡೆಯ ಮೇಲೆ ತನ್ನ ಭಾರವಾದ ಗರಿಗಳ ಗುಚ್ಛವನ್ನು ಹೊತ್ತು ನಿಂತ ನವಿಲನ್ನೂ ಕಂಡೆ. ಸುಮಾರು ಆರು ತಾಸುಗಳ ಪ್ರಯಾಣದ ನಂತರ ಪ್ಯಾರಿಸ್ ನ ಮುಖ್ಯ ನಿಲ್ದಾಣಕ್ಕೆ ಬಂದೆವು. ಅಲ್ಲಿಂದ ಪ್ಯಾರಿಸ್ನ ನಾಡಿಗಳಂತೆ ಓಡಾಡುವ ಮೆಟ್ರೊ ರೈಲನ್ನು ಹಿಡಿದು ಹೊಟೇಲ್ ತಲುಪಿ ಕೋಣೆ ಸೇರಿದಾಗ ಅದಾಗಲೇ ಪ್ಯಾರಿಸ್ ನಲ್ಲಿ ಇದ್ದೇವೆ ಎಂಬ ಏನೋ ಹೇಳಲಾಗದ ಪುಳಕ. ಅಂದು ಹಾಸಿಗೆಗೆ ಒರಗಿದ್ದೊಂದೇ ಗೊತ್ತು… ಮತ್ತೆ ನಾವೆಲ್ಲಿದ್ದೇವೆಂಬ ಅರಿವೂ ಇಲ್ಲದಂತೆ ನಿದ್ರೆ ಆವರಿಸಿತ್ತು.
ಎರಡನೇ ದಿನದ ಸುತ್ತಾಟ ಮತ್ತು ಸಸ್ಯಾಹಾರಿಗಳ ಗೋಳಾಟ!
ಮರುದಿನ ಎದ್ದು ಕಿಟಿಕಿ ಬಳಿ ನಿಂತರೆ… ನೋಡುವುದೇನು… ಅರೆ… ‘ಐಫೆಲ್ ಟವರ್’… ಪ್ಯಾರಿಸ್ ನ ಯಾವುದೇ ಹೊಟೇಲ್ ನ ಕಿಟಿಕಿಯಿಂದ ‘ಐಫೆಲ್ ಟವರ್’ನ್ನು ಕಾಣಿಸುವ ಇಂಗ್ಲಿಷ್ ಸಿನೆಮಾಗಳನ್ನು ಸಂಶಯದಿಂದಲೇ ಆವರೆಗೆ ನೋಡಿದ್ದೆವು… ಆ ಸಂಶಯ ಇಲ್ಲಿ ಪರಿಹಾರವಾಯ್ತು. ಬ್ಯಾಗು ಬೆನ್ನಿಗೆ ಏರಿಸಿ ಹುರುಪಿನಿಂದಲೇ ನಗರ ಸುತ್ತಲು ಹೊರಟೆವು. ಮೆಟ್ರೊ ರೈಲು ಹಿಡಿದು ಪಲೈಸ್ ರಾಯಲ್ ಸ್ಟೇಷನ್ ಗೆ ಬಂದು ಮೆಟ್ಟಿಲೇರಿ ಹೊರಗೆ ಬಂದಾಗ ಬಲ ಬದಿಯಲ್ಲಿಯೇ ಕಂಡದ್ದು ‘ಆರ್ಕ್ ಡಿ ಟ್ರಯಂಫ್’. ಸುಮಾರು 12 ವಿಶಾಲ ರಸ್ತೆಗಳ ಬಳಸು ಹಾದಿಯ ಮಧ್ಯೆ ತಲೆ ಎತ್ತಿ ನಿಂತ ಈ ಕಮಾನಿರುವ ಜಾಗ ಜಗತ್ತಿನ ಅತ್ಯಂತ ದೊಡ್ಡ ವೃತ್ತ. 1805ರಲ್ಲಿ ನೆಪೊಲಿಯನ್ ತಾನು ಯುದ್ಧಗಳಲ್ಲಿ ಸಾಧಿಸಿದ ಗೆಲುವಿನ ಪ್ರತೀಕವಾಗಿ ಈ ವಿಜಯದ ಕಮಾನನ್ನು ಕಟ್ಟಲು ಪ್ರೇರೇಪಿಸಿದ… ವೆನಿಸಿನ ಸುಂದರವಾದ ಬೃಹತ್ ಶಿಲ್ಪ ‘ಸೈಂಟ್ ಮಾರ್ಕ್ ನ ಕುದುರೆ’ಯನ್ನೂ ಇದರ ಮೇಲೆ ಕಲಶದಂತೆ ಇರಿಸಿದ… ನಂತರ ಒಂದೊಂದೇ ಯುದ್ಧದಲ್ಲಿ ಆತ ಸೋಲುಂಡಂತೆ ಕಮಾನಿನ ಕೆಲಸವೂ ಅರ್ಧಕ್ಕೇ ನಿಲ್ಲುವಂತಾಯ್ತು. ವಾಟರ್ ಲೂ ಕದನದ ಭಾರೀ ಸೋಲಿನ ಹಿಂದೆಯೇ ಕುದುರೆಗಳ ಶಿಲ್ಪವನ್ನು ಪುನ: ವೆನಿಸಿಗೇ ಹಿಂತಿರುಗಿಸಿದ ನೆಪೋಲಿಯನ್. ಕೊನೆಗೂ ಈ ಕಮಾನು ಪೂರ್ಣಗೊಂಡಿತು. ನಂತರದ ಯುದ್ಧಗಳಲ್ಲಿ ವಿಜಯಿಯಾದ ಸೈನಿಕರು ಇದರ ಸುತ್ತ ತಮ್ಮ ವಿಜಯದ ನಡಿಗೆ ನಡೆಸುತ್ತಿದ್ದರು. ಈ ಕಮಾನಿನೊಳಗಿಂದ ಮೆಟ್ಟಿಲು ಏರಿದರೆ ನೋಡ ಸಿಗುವುದು ಇಡೀ ಪ್ಯಾರಿಸನ್ನು ಜೋಡಿಸುವ ಹನ್ನೆರೆಡು ಅಗಾಧ ರಸ್ತೆಗಳು ಹಾಗೂ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಪೂರ್ಣ ಪ್ಯಾರಿಸ್ ನ ವಿಹಂಗಮ ದೃಶ್ಯ.
ಇಲ್ಲಿಂದ ನಕಾಶೆ ನೋಡುತ್ತಾ ಸಾಗಿದೆವು ‘ಗ್ರಾಂಡ್ ಪಲೈಸ್’ ಕಡೆಗೆ… 1900 ರಲ್ಲಿ ನಡೆದ ಜಾಗತಿಕ ಪ್ರದರ್ಶನಕ್ಕಾಗಿ ಕಟ್ಟಿದ ಈ ಬೃಹತ್ ಅರಮನೆಯ ಒಳಗೆ ಪುನರ್ ನಿರ್ಮಾಣದ ಕೆಲಸ ನಡೆಯುತ್ತಿದ್ದುದರಿಂದ ಬರೇ ಹೊರಗಿನಿಂದಷ್ಟೇ ನೋಡಬೇಕಾಯ್ತು. ನೆಗೆಯುವ ನಾಲ್ಕು ಕುದುರೆಗಳ ರಥದ ಮೇಲೆ ಆಲಿವ್ ಎಲೆಯ ಕಿರೀಟ ಹಿಡಿದು ನಿಂತ ಯೋಧನ ಅದ್ಭುತ ಕಂಚಿನ ಶಿಲ್ಪ ಈ ಅರಮನೆಯ ತಲೆ ಮೇಲಿದೆ. ಈ ಅರಮನೆಯ ಎದಿರು ‘ಪೆಟಿಟ್ ಪಲೈಸ್’ ಎಂಬ ಇನ್ನೊಂದು ಅರಮನೆ ಇದೆ. ಇದು ಕೂಡಾ ಜಾಗತಿಕ ಪ್ರದರ್ಶನಕ್ಕಾಗಿ ನಿರ್ಮಿಸಿದ್ದು. ಕೇವಲ ಪ್ರದರ್ಶನದ ಸಲುವಾಗಿ ನಿರ್ಮಿತವಾದ ಈ ಎರಡು ಅತಿ ಸುಂದರ ಅಗಾಧ ಅರಮನೆಗಳನ್ನು ಕಟ್ಟಿದವರ ಹುಚ್ಚಿಗೆ ತಲೆ ಬಾಗಿದೆ. ಇಂದು ಈ ‘ಪೆಟಿಟ್ ಪಲೈಸ್’ ಪ್ಯಾರಿಸ್ ನಗರಪಾಲಿಕೆಯವರ ‘ಮಧ್ಯಯುಗ’ ಹಾಗೂ ‘ರಿನೈಸಾನ್ಸ್’ ಕಾಲದ ಕಲಾಕೃತಿ ಹಾಗೂ ಶಿಲ್ಪಗಳ ಅತಿ ಮಹತ್ವದ ಸಂಗ್ರಹಾಲಯವಾಗಿದೆ. ಪುರಾತನ ಕಾಲದ ಇಲ್ಲಿಯ ಸಂಗ್ರಹಗಳು ನೋಡುಗರನ್ನು ಮೋಡಿಗೊಳಿಸುತ್ತದೆ. ಅಲ್ಲಿರುವ ಹಿಂದಿನ ರಾಜ ಮನೆತನದ ವಿವಿಧ ಆಭರಣಗಳ ಸಂಗ್ರಹ ಕಂಡು ಮೂಕರಾದೆವು. ಇಂತಹ ಕುಸುರಿ ಕೆಲಸಗಳನ್ನು ಸಂತೋಷದಿಂದ ಮಾಡಿದ ಕೆಲಸಗಾರನಿಗೂ ಹಾಗೂ ಹೆಮ್ಮೆಯಿಂದ ತೊಟ್ಟು ನಲಿದವರಿಗೂ ಇದು ಎಂತಹ ಖುಷಿ ಕೊಟ್ಟಿರಬಹುದು ಎಂದು ಕಲ್ಪಿಸಲು ಯತ್ನಿಸಿದೆ. ಸುಮಾರು 15 ರಿಂದ 17ನೇ ಶತಮಾನಕ್ಕೆ ಸೇರಿದ ಡಚ್, ಫ್ಲೆಮಿಷ್ ಹಾಗೂ ಯುರೋಪಿಯನ್ ಕಲಾವಿದರು ಜಗತ್ತಿಗೆ ನೀಡಿದ ಅಮೂಲ್ಯ ಕಲಾಕೃತಿಗಳ ದೊಡ್ಡ ಸಂಗ್ರಹವನ್ನು ಇಲ್ಲಿ ಕಂಡೆವು.
ಇಲ್ಲಿಂದ ಹತ್ತು ಹೆಜ್ಜೆ ಮುಂದೆ ಸಾಗಿದರೆ ಸಿಗುವುದೇ ಪ್ಯಾರಿಸ್ ನ ಅತ್ಯಂತ ಸುಂದರವಾದ ಸೇತುವೆ ‘ಪಾಂಟ್ ಅಲೆಗ್ಸಾಂಡರ್ III’. ಶತಮಾನ ಹಳೆಯದಾದ ಈ ಸೇತುವೆ ನೋಡಿದಷ್ಟು ಮನ ಸೆಳೆಯುತ್ತದೆ. ಅಲ್ಲಲ್ಲಿ ಕಲ್ಲಿನ ಹಾಗೂ ಕಂಚಿನ ಶಿಲ್ಪಗಳು… ಮಧ್ಯದಲ್ಲಿ ಅಲಂಕಾರಕ್ಕಾಗಿ ಬಳಸಿದ ಚಿನ್ನದ ಹಾಳೆ ಸವರಿದ ಹೊಳೆವ ಚಿತ್ತಾರಗಳು… ಸೇತುವೆಯ ಮೇಲಿಂದ ಅತ್ತ ಕಡೆಗೆ ದಾಟುವುದನ್ನೂ ಮರೆತು ಇವುಗಳನ್ನು ನೋಡುತ್ತಾ ನಿಲ್ಲುವಂತಾಗುತ್ತದೆ. ಅಂತೂ ದಾಟಿ ಮುನ್ನಡೆದಾಗ ಕಣ್ಣೆದುರಿಗೆ ಹೊಳೆದದ್ದು `ಡೋಮ್ ಚರ್ಚ್’ನ ಕಣ್ಣು ಕೋರೈಸುವ ಚಿನ್ನದ ಬುರುಜು. ಇದಕ್ಕೂ ಮೊದಲು ಇಲ್ಲಿ ನಮಗೆ ಸಿಕ್ಕಿದ್ದು ಯುದ್ಧದಲ್ಲಿ ವಿಕಲಾಂಗರಾದವರ ವಾಸಕ್ಕಾಗಿ ಕಟ್ಟಿಸಿದ ವಿಶಾಲ ಕಟ್ಟಡ. ಇದರ ಸುತ್ತಿನಲ್ಲೇ ಒಂದು ಶಸ್ತ್ರಾಸ್ತ್ರಗಳ ಬೃಹತ್ ಸಂಗ್ರಹಾಲಯವಿದೆ. ಫ್ರೆಂಚ್ ಮಿಲಿಟರಿ ಪಡೆಯ ಶಸ್ತ್ರಗಳ ಅತ್ಯಂತ ದೊಡ್ಡ ಸಂಗ್ರಹ ಇಲ್ಲಿದೆ. ಯುದ್ಧದಲ್ಲಿ ಬಳಕೆಯಾದ, ನಮ್ಮ ಕಲ್ಪನೆಗೂ ಮೀರಿದ ಬಗೆಬಗೆಯ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು, ಫಿರಂಗಿ ತೋಪುಗಳನ್ನು ಕಂಡಾಗ ಒಂದು ಕ್ಷಣ ಬೆಚ್ಚಿ ಬೀಳುವಂತಾಯ್ತು. ಇಲ್ಲೇ ತೆಂಕು ದಿಕ್ಕಿನಲ್ಲಿದೆ ಚಿನ್ನದ ಗುಂಬಜು ಇರುವ ‘ಡೋಮ್ ಚರ್ಚ್’. ಈ ಚರ್ಚಿನ ಹಿಂಭಾಗದಲ್ಲೇ ನೆಪೋಲಿಯನ್ ನ ಸಮಾಧಿ ಇದೆ. ಸಮಾಧಿಯ ನಾಲ್ಕು ಸುತ್ತಲೂ ಈತನನ್ನು ವೈಭವೀಕರಿಸುವ ಕಲ್ಲಿನ ಶಿಲ್ಪಗಳಿವೆ. ಸುತ್ತಲೂ ಬೃಹತ್ ಶಿಲ್ಪಗಳು, ಮ್ಯೂರಲ್ ಗಳು, ಕಾಲಡಿಯಲ್ಲಿ ಸುಂದರವಾದ ಮೊಸೈಕ್ ಡಿಸೈನ್ ಗಳು, ತಲೆ ಎತ್ತಿದರೆ ಛಾವಣಿ ತುಂಬೆಲ್ಲಾ ಚೂರೂ ಜಾಗವಿಲ್ಲದಂತೆ ಬಿಡಿಸಿರುವ ಬಣ್ಣ ಬಣ್ಣದ ಚಿತ್ರಗಳು… ಎಲ್ಲವೂ ನೋಡುವವರನ್ನು ಕುಬ್ಜಗೊಳಿಸಲು ಯತ್ನಿಸಿದಂತಿತ್ತು. ಇಲ್ಲಿಯ ನೆನಪಿಗಾಗಿ ನೆಪೊಲಿಯನ್ ನ ಸಹಿ ಇರುವ ಎರಡು ಪೆನ್ಸಿಲ್ಗಳನ್ನು ಕೊಂಡೆ.
ಇಲ್ಲಿಂದ ಹೊರಬಂದು ಮಟಮಟ ಮಧ್ಯಾಹ್ನದ ಬಿಸಿಲಲ್ಲಿ ಶಾಕಾಹಾರಿ ತಿನಿಸಿಗಾಗಿ ಅಲೆದಾಡಿದೆವು. ಸ್ಯಾಂಡ್ ವಿಚ್, ಪಿಜಾ ಕಂಡರೂ ಅದರೊಳಗೆ ಏನೇನೆಲ್ಲಾ ತುಂಬಿದೆ ಎಂದು ಕೇಳಿ ಕೇಳಿ ಕೊನೆಗೂ ಬರೇ ಚೀಸ್ ತುರುಕಿದ ಸ್ಯಾಂಡ್ ವಿಚ್ ಹಾಗೂ ಚೀಸ್ ಸವರಿದ, ಆಲಿವ್ ಹಣ್ಣಿನಿಂದ ಅಲಂಕರಿಸಿದ ಪಿಜಾಗಳನ್ನೇ ಕಬಳಿಸಬೇಕಾಯ್ತು. ಬಿಸಿಲ ಬೇಗೆಗೆ ತಂಪೆರೆಯಲಿ ಎಂದು ಮೊಸರಿನ ಐಸ್ ಕ್ರೀಂಗಳನ್ನು ಮೆಲ್ಲುತ್ತಾ ನಮ್ಮ ಕಾಲುಗಳು ಪ್ಯಾರಿಸ್ ನ ದ್ಯೋತಕವಾದ ‘ಐಫೆಲ್ ಟವರ್’ ಕಡೆಗೆ ಸಾಗಿದವು. ಎದುರಿಗೇ ಸುಮಾರು 500 ಮೀ.ನಷ್ಟು ವಿಶಾಲವಾದ ಹಸಿರು ಹುಲ್ಲಿನ ಬಯಲು. ಕಣ್ಣೆದುರಿಗೇ ಗಗನಚುಂಬೀ ‘ಐಫೆಲ್ ಟವರ್’. ಫ್ರೆಂಚ್ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ 1889 ರಲ್ಲಿ ನಡೆದ ಜಾಗತಿಕ ಪ್ರದರ್ಶನಕ್ಕಾಗಿ ಈ ಟವರ್ ನ ನಿರ್ಮಾಣವಾದಾಗ ಇದು ಪ್ಯಾರಿಸಿನ ಸೌಂದರ್ಯವನ್ನು ಕೆಡಿಸುತ್ತಿದೆ ಎಂದು ಅಲ್ಲಿಯ ಕಲಾ ಹಾಗೂ ಸಾಹಿತ್ಯ ಜಗತ್ತಿನ ದಿಗ್ಗಜರು ವಿರೋಧ ವ್ಯಕ್ತಪಡಿಸಿದ್ದರಂತೆ… ಇದನ್ನು ಕಳಚಲೂ ತಯಾರಿ ನಡೆದಿತ್ತಂತೆ. ಆದರೆ ಮೊದಲ ವರ್ಷದಲ್ಲೇ 2 ಮಿಲಿಯ ಪ್ರವಾಸಿಗಳನ್ನು ತನ್ನೆಡೆಗೆ ಸೆಳೆದ ಇದರ ಜನಪ್ರಿಯತೆ ಇದನ್ನು ಉಳಿಸಿತು. ಗುಸ್ಟಾವ್ ಐಫೆಲ್ ನ ಈ ಅದ್ಭುತ ರಚನೆ 324 ಮೀ. ಎತ್ತರಕ್ಕೆ ಚಾಚಿದೆ. 7,500 ಟನ್ ಕಬ್ಬಿಣದಿಂದ ತಯಾರಾದ ಇದು ಸೆಖೆಗಾಲದಲ್ಲಿ 15 ಸೆಂ.ಮೀ.ನಷ್ಟು ಹಿಗ್ಗುತ್ತದೆ. ಇಂದು ಸುಮಾರು ಏನಿಲ್ಲೆಂದರೂ ಆರೇಳು ಮಿಲಿಯ ಪ್ರವಾಸಿಗರು ಪ್ರತಿ ವರ್ಷ ಇದನ್ನು ಕಾಣಲು ಬರುತ್ತಾರೆ. ಇದರ ಎದುರಿಗಿರುವ ಉದ್ಯಾನದಲ್ಲಿ ಆರಾಮವಾಗಿ ಮಲಗಿ ಬಿಸಿಲ ಸ್ನಾನ ಮಾಡುತ್ತಾ ಆಗಸವನ್ನೂ, ಆಗಸದೆತ್ತರಕೆ ಏರಿ ನಿಂತ ಈ ಗೋಪುರವನ್ನೂ ದಿನವಿಡೀ ಅನುಭವಿಸುತ್ತಿರುತ್ತಾರೆ. ರಾತ್ರಿಗೆ ಬೆಳಕಿನ ಮಾಲೆಯಿಂದ ಅಲಂಕರಿಸಿದ ಇದನ್ನು ನೋಡುವುದು ಇನ್ನೊಂದೇ ಚಂದ. ಈ ದೃಶ್ಯವನ್ನು ನಾವು ನಮ್ಮ ಹೊಟೇಲ್ ನ ಕಿಟಿಕಿಯಿಂದಲೇ ನೋಡಿ ತೃಪ್ತಿಪಟ್ಟೆವು.
ಮರುದಿನ ನಮ್ಮ ಸವಾರಿ ಹೊರಟಿದ್ದು 3ನೇ ಶತಮಾನದ ಪ್ಯಾರಿಸ್ ನ ಮೊತ್ತಮೊದಲ ಜನವಸತಿ ಕಂಡಂತಹ ಒಂದು ಪುಟ್ಟ ದ್ವೀಪಕ್ಕೆ. ‘ಸೈನ್’ ನದಿಗೆ ಅಡ್ಡವಾಗಿ ಕಟ್ಟಿದ ‘ಪಾಂಟ್ ನ್ಯೂಫ್’ ಎಂಬ ಪ್ಯಾರಿಸ್ ನ ಅತಿ ಹಳೆಯ ಸೇತುವೆಯನ್ನು ದಾಟಿ ದ್ವೀಪ ಸೇರಿದೆವು. ಏಳು ಕಮಾನಿರುವ ಈ ಸೇತುವೆಯ ಸೌಂದರ್ಯವಿರುವುದು ಇದರ ಹೊರಭಾಗದಲ್ಲಿರುವ ಕ್ಷೌರಿಕ, ದಂತವೈದ್ಯ, ಕಿಸೆಗಳ್ಳ, ಆಲಸಿ ತಿರುಕ ಮುಂತಾದ ನಿತ್ಯ ಬದುಕಿನ ವ್ಯಕ್ತಿಗಳ ಶಿಲ್ಪಗಳಲ್ಲಿ. ಇವುಗಳ ಪೂರ್ಣ ಅನುಭವವಾಗುವುದು ನದೀ ವಿಹಾರ ಮಾಡುವಾಗ… ಈ ಸೇತುವೆಯ ಮಧ್ಯಭಾಗದಲ್ಲಿ ‘ಹೆನ್ರಿ IV’ ತನ್ನ ಕುದುರೆ ಮೇಲೆ ಸವಾರಿ ಮಾಡುತ್ತಿರುವ ದೊಡ್ಡ ಪ್ರತಿಮೆ ಇದೆ. ಅಂದು ಸೇತುವೆ ಉದ್ಟಾಟಿಸಲು ಈತ ಇದೇ ರೀತಿ ಬಂದಿರಬೇಕು ಎಂದೆನಿಸಿತು. ಇಲ್ಲಿಂದ ಸಾಗುತ್ತಾ ನಾವು ‘ಕನ್ ಸಿಯರ್ಗಿರಿ’ಗೆ ಬಂದೆವು. ಹದಿನಾಲ್ಕನೆ ಶತಮಾನದಲ್ಲಿ ಅರಮನೆಯಾಗಿದ್ದ ಇದು ಫ್ರೆಂಚ್ ದಂಗೆಯ ಸಮಯದಲ್ಲಿ ಗಿಲೊಟಿನ್ ಶಿಕ್ಷೆ ಅನುಭವಿಸುವ ಕೈದಿಗಳ ಸೆರೆವಾಸವಾಯ್ತು. ಈ ಶಿಕ್ಷೆ ವಿಧಿಸುವ ವಿಚಾರಣಾ ಸಮಿತಿಯೆದುರು ಹಾಜರಾಗುವ ಮೊದಲು ದಂಗೆಕೋರರನ್ನು ಇಲ್ಲಿ ಬಂಧಿಸಿ ಇಡಲಾಗುತ್ತಿತ್ತು. ಫ್ರಾನ್ಸ್ ನ ಕುಪ್ರಸಿದ್ಧ ರಾಣಿ ಮೇರಿ ಆಂಟೊನೆಟ್ ಕೂಡಾ ತನ್ನ ತಲೆ ಕತ್ತರಿಸುವ ಮುಂಚಿನ 27 ದಿನಗಳ ಕಾಲ ಇಲ್ಲೇ ಕೈದಿಯಾಗಿದ್ದಳು. ಅವಳಿದ್ದ ಪುಟ್ಟ ಕೋಣೆ, ಚಿಕ್ಕ ಮಂಚ ಆಗಿನ ಸ್ಥಿತಿಯನ್ನು ನಮ್ಮೆದುರಿಗಿಟ್ಟಿತು. ಮಹಿಳಾ ಕೈದಿಗಳು ಸಂಜೆಯ ಹೊತ್ತು ಅಡ್ಡಾಡುವ ಚಿಕ್ಕ ಉದ್ಯಾನ, ನೀರು ಕುಡಿಯಲು ಬಳಸುವ ಚಿಕ್ಕ ಕೊಳ, ಆಹಾರ ಸೇವನೆಗಾಗಿ ಇದ್ದ ಒಂದು ಪುಟ್ಟ ಕಲ್ಲಿನ ಮೇಜು ಅಂದಿನ ಚಿತ್ರಣ ಕೊಟ್ಟಿತು. ಗಾಳಿ ಬೆಳಕು ಇಲ್ಲದ ವಿಶಾಲ ನೆಲ ಮಾಳಿಗೆಯ ಹಾಲ್, ಕೈದಿಗಳ ಕೈಕಾಲು ಚಾಚುವ ಅವಕಾಶವೂ ಇಲ್ಲದಂತಹ ಪುಟ್ಟ ಗೂಡು, ಸಿರಿವಂತ ಕೈದಿಗಳು ಹಣ ನೀಡಿ ಖರೀದಿಸಬಹುದಾಗಿದ್ದ ಸ್ವಲ್ಪ ದೊಡ್ಡ ಕೋಣೆ, ತಲೆ ಕತ್ತರಿಸುವ ಮುನ್ನಿನ ತಯಾರಿಯಾಗಿ ಕೂದಲು ಕತ್ತರಿಸುವ ಕೋಣೆ ಎಲ್ಲವನ್ನು ನೋಡಿ ಮನಸ್ಸು ಒಮ್ಮೆಲೇ ಹಿಡಿಯಾಯ್ತು… ಸ್ವರ್ಗದ ಜತೆ ನರಕದ ದರ್ಶನವೂ ಆಯಿತು.
ಇಲ್ಲಿಂದ ಹೊರಟು ಪ್ಯಾರಿಸ್ ನ ವಾರದ ಸಂತೆ, ಪ್ರಾಣಿ-ಪಕ್ಷಿಗಳ ಮಾರ್ಕೆಟ್, ತೋಟಗಾರಿಕೆಗೆ ಸಂಬಂಧಿಸಿದ ಮಾರ್ಕೆಟ್ ಎಲ್ಲವನ್ನೂ ದಾಟಿಕೊಂಡು ‘ನೋಟ್ರೆಡೇಮ್’ ಕೆಥಿಡ್ರಲ್ ತಲುಪಿದೆವು. ‘ಅವರ್ ಲೇಡಿ ಆಫ್ ಪ್ಯಾರಿಸ್’ನ ಈ ಕೆಥಿಡ್ರಲ್ ನಿಜವಾದ ಅರ್ಥದಲ್ಲಿ ಪ್ಯಾರಿಸ್ ನ ಹೃದಯ. ಇದರ ಎದುರುಗಡೆ ನೆಲದ ಮೇಲೆ ಇರುವ ಕಂಚಿನ ನಕ್ಷತ್ರ ಪ್ಯಾರಿಸ್ ನ ನರನಾಡಿಗಳಂತೆ ಹರಡಿದ ಎಲ್ಲಾ ರಸ್ತೆಗಳ ಮೂಲ ಬಿಂದುವಾಗಿದೆ (ಪಾಂಟ್ ಜೀರೊ). ಗಾಥಿಕ್ ಶೈಲಿಯ ಉತ್ಕೃಷ್ಟ ನಮೂನೆಯಾಗಿ ಹೆಸರಿಸಲ್ಪಡುವ ಈ ಕೆಥಿಡ್ರಲ್ ಸುಮಾರು ಏಳು ಶತಮಾನಗಳ ಕಾಲ ಪ್ಯಾರಿಸ್ ನ ಕೆಥೊಲಿಕ್ ಪಂಥದವರ ಕೇಂದ್ರಬಿಂದುವಾಗಿತ್ತು. ಸಮತೋಲನದ ವಾಸ್ತುವಿಗೆ ‘ನೋಟ್ರೆಡೇಮ್’ ಹೆಸರುವಾಸಿಯಾಗಿದ್ದರೂ ಹತ್ತಿರದಲ್ಲಿ ಕಂಡಾಗ ಅಸಮತೋಲನದ, ಹೊಂದಾಣಿಕೆ ಇಲ್ಲದ ಹಲವು ಡಿಸೈನ್ ಗಳು ಮೂಡಿದ್ದನ್ನು ನೋಡಿದೆವು… ಆದರೆ ಇದು ಒಟ್ಟಿನಲ್ಲಿ ಕೆಥಿಡ್ರಲ್ ನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ ಎಂದೇ ಹೇಳಬೇಕು. ಆದರೆ ಈ ಕೆಥಿಡ್ರಲ್ ನ ನಿಜವಾದ ಸೌಂದರ್ಯ ಕಾಣಬೇಕಾದರೆ ಇದರ ಹಿಂಭಾಗಕ್ಕೆ ಹೋಗಬೇಕು. ಕೆಥಿಡ್ರಲ್ ನ ಗೋಪುರ ಹಾಗೂ ಅದರ ಮಾಡು, ಗೋಡೆಗಳಿಗಾಧಾರವಾಗಿ ಹೆಣೆದ ಸುಂದರವಾದ ‘ಹಾರುವ ಕಮಾನುಗಳು’… ಇನ್ನು ಕೆಥಿಡ್ರಲ್ ನ ಒಳಗೆ ಕಾಲಿಟ್ಟ ನಮಗೆ ಯಾವುದೋ ಬೇರೇ ಲೋಕಕ್ಕೆ ಬಂದ ಅನುಭವ. ಸುಮಾರು 6000 ಭಕ್ತರು ಪ್ರಾರ್ಥನೆ ಸಲ್ಲಿಸುವಷ್ಟು ವಿಶಾಲವಾಗಿದೆ. ಜೊತೆಗೆ ಬಣ್ಣ ಬಣ್ಣದ ಗಾಜಿನ ಚೂರು ಜೋಡಿಸಿ ರಚಿಸಿದ ಉರುಟು ಕಿಟಕಿಯ (ರೋಸ್ ವಿಂಡೋ) ಅದ್ಭುತ ನೋಟ ನಮ್ಮನ್ನು ಮಂತ್ರಮುಗ್ಧಗೊಳಿಸಿತು. ಇಲ್ಲಿ ಪ್ರಾರ್ಥನಾ ಗೀತೆ ನುಡಿಸುವ 7800 ಪೈಪಿನ ದೈತ್ಯಾಕಾರದ ಆರ್ಗನ್ ಬೆಚ್ಚಿ ಬೀಳಿಸಿತು. ಒಳಗೆ ಹೆಜ್ಜೆ ಹೆಜ್ಜೆಗೂ ಬೈಬಲ್ ಗೆ ಸಂಬಂಧಿಸಿದ ಕಲಾಕೃತಿಗಳು… ಅಸಂಖ್ಯಾತ ಶಿಲ್ಪಗಳು. ಇಲ್ಲಿಂದ ನಾವು ಸಾಗಿದ್ದು ‘ಪೇಂಥಿಯನ್’ಗೆ…
ಇಲ್ಲಿಗೆ ಬರುವ ಹಾದಿಯಲಿ ದಾರಿ ಬದಿಯ ಸಂಗೀತಗಾರರನ್ನು, ಚಿತ್ರಕಾರರನ್ನು ಕಂಡೆವು. ಒಂದು ಚಿಕ್ಕ ಸೇತುವೆಯ ನಡುವೆ ಜನರ ಗುಂಪಿನ ಮಧ್ಯೆ ಒಂದು ಪುಟ್ಟ ಆರ್ಕೆಸ್ಟ್ರಾ ಗ್ರೂಪನ್ನೂ ನೋಡಿದೆವು. ಎತ್ತರದ ಏರನ್ನು ಕಡು ಬಿಸಿಲಲ್ಲಿ ಏರಿ ಪೇಂಥಿಯನ್ ಸೇರಿದೆವು. 1750ರ ಸುಮಾರಿಗೆ ಚರ್ಚ್ ಎಂದು ಪ್ರಾರಂಭವಾದ ಇದರ ನಿರ್ಮಾಣ ಮುಂದಿನ ದಿನಗಳಲ್ಲಿ ಹಣದ ಕೊರತೆ ಹಾಗೂ ನಿರ್ಮಾಣದಲ್ಲಿ ಕಂಡ ತೊಂದರೆಗಳಿಂದಾಗಿ ಕುಂಟುತ್ತಾ ಸಾಗಿ ಸುಮಾರು 1789ರಲ್ಲಿ ಪೂರ್ಣಗೊಂಡಿತು. ಆದರೆ 1789 ಎಂಬುದು ಚರ್ಚ್ ಉದ್ಟಾಟನೆಗೊಳ್ಳಲು ಅಶುಭವಾದ ಕಾಲ ಎಂದು ಪ್ಯಾರಿಸಿಗರು ಭಾವಿಸಿದ್ದರು. ಹಾಗಾಗಿ ಸುಮಾರು ಎರಡು ವರ್ಷಗಳ ನಂತರ ಸ್ವತಂತ್ರ ಫ್ರಾನ್ಸ್ ನ ಖ್ಯಾತನಾಮರ ಗೋರಿಗಳನ್ನು ಇಡಲು ಇದನ್ನು ಬಳಸಲಾಯಿತು. ಇಂದು ಪ್ರಸಿದ್ದ ವ್ಯಕ್ತಿಗಳು ಇಲ್ಲಿ ಬಂದು ಸೇರಿದ್ದಾರೆ… ವೋಲ್ಟೇರ್, ರೋಸ್ಸಿಯೋ, ಲೂಯಿಸ್ ಬ್ರೈಲ್, ವಿಕ್ಟರ್ ಹ್ಯೂಗೋ, ಎಮಿಲಿ ಜೂಲಾ, ಮೇರಿ ಕ್ಯೂರಿ, ಪಿಯರಿ ಕ್ಯೂರಿ ಮುಂತಾದವರು ಇವರಲ್ಲಿ ಕೆಲವರು. ಪ್ಯಾರಿಸ್ ನ ಜನತೆಗೆ ತಮ್ಮ ನಾಡಿನ ಪ್ರಸಿದ್ಧ ಜನರ ನೆನಪನ್ನು ಚಿರಂತನವಾಗಿಡುವಲ್ಲಿ ಎಲ್ಲಿಲ್ಲದ ಉತ್ಸಾಹ… ಪ್ರತಿ ಚರ್ಚುಗಳು, ಉದ್ಯಾನಗಳು, ಸೇತುವೆಗಳು, ಕಟ್ಟಡಗಳು, ರಸ್ತೆಗಳು ಎಲ್ಲವೂ ಯಾರದರೊಬ್ಬನ ಸ್ಮಾರಕವಾಗಿರುತ್ತದೆ. ಪ್ಯಾರಿಸ್ ನ ಅತಿ ಚಿಕ್ಕ ಪಾರ್ಕಲ್ಲೂ… ಅತಿ ಕಿರಿದಾದ ಓಣಿಯಲ್ಲೂ… ಒಟ್ಟಿನಲ್ಲಿ ಯಾವುದೇ ಮೂಲೆಯಲ್ಲೂ ಒಬ್ಬ ಸಂದು ಹೋದ ವ್ಯಕ್ತಿಯ ಶಿಲ್ಪವೊ, ಸ್ಮಾರಕವೊ ಎದುರಾಗುತ್ತದೆ. ಪ್ಯಾರಿಸ್ ನ ಇನ್ನೊಂದು ವಿಶೇಷವೆಂದರೆ ರಸ್ತೆ ಬದಿಯ ಫುಟ್ ಪಾತ್ ಗಳಲ್ಲಿ ಬಿಸಿಲ ಚಪ್ಪರದಡಿಯಲ್ಲಿ ಆರಾಮಾಗಿ ಕುಳಿತು ಎದುರಲ್ಲಿ ಕಾಫಿಯೋ, ಬೀರಿನ ಮಗ್ಗೊ ಇಟ್ಟುಕೊಂಡು ಗಂಟೆಗಟ್ಟಲೆ ಪಟ್ಟಾಂಗ ಹೊಡೆಯುತ್ತಲೋ ಇಲ್ಲಾ ಎಲ್ಲೊ ದೃಷ್ಟಿ ಕೀಲಿಸಿ ಕಾಲ ಕಳೆಯುವುದು. ಇಂಥ ಒಂದು ಅನುಭವವನ್ನು ನಾವೂ ಫ್ರೆಂಚ್ ಕಾಫಿಯೊಂದಿಗೆ ಸವಿದೆವು… ಅಂದಿನ ಒಂದು ಸುಂದರ ಸಂಜೆಯ ನೆನಪಿಗಾಗಿ.
ದಿನ ಮೂರು, ಕಂಡ ಬಣ್ಣ ನೂರಾರು
ಮರುದಿನ… ಮೂರನೆಯ ದಿನ… ಪ್ಯಾರಿಸ್ಸಿನಲ್ಲಿ ನಮ್ಮ ಕೊನೆಯ ದಿನ. ಅಂದು ನಾವು ಸರಿಯಾಗಿ ಬೆಳಿಗ್ಗೆ ಒಂಬತ್ತಕ್ಕೆ ತಲುಪಿದ್ದು ಜಗತ್ತಿನ ಅತ್ಯುತ್ಕೃಷ್ಟ ಸಂಗ್ರಹಾಲಯವಾದ ‘ಲೂವ್ರೆ’ ಮ್ಯೂಸಿಯಂನ್ನು. 13ನೇ ಶತಮಾನದಲ್ಲಿ ಕೋಟೆಯಾಗಿ ಪ್ರಾರಂಭವಾದ ಇದು 16ನೇ ಶತಮಾನದ ಹೊತ್ತಿಗೆ ಅಂದಿನ ರಾಜಮನೆತನದವರ ಅರಮನೆಯಾಯ್ತು. ಇಂತಹ ವಿಶಾಲ ಅರಮನೆಯನ್ನು ಅಂದಿನ ಅದರ ವಾಸಿ ಖಂಡಿತವಾಗಿಯೂ ಪೂರ್ತಿ ತಿರುಗಿರಲಾರ. ಇಡೀ ಅರಮನೆಯ ಒಂದು ಮೂಲೆಯಲ್ಲಷ್ಟೆ ಆತನ ವಾಸ್ತವ್ಯ ಇದ್ದಿರಬೇಕು… ಅಷ್ಟು ಅಗಾಧವಿದೆ ಈ ಅರಮನೆ. 1793 ರಲ್ಲಿ ಇದನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಡಿಸಲಾಯ್ತು. ಇಲ್ಲಿರುವ ಸುಮಾರು 35 ಸಾವಿರ ಪ್ರದರ್ಶನದ ವಸ್ತುಗಳನ್ನು ವಿವರವಾಗಿ ವೀಕ್ಷಿಸುತ್ತಾ ಬಂದರೆ ಸುಮಾರು 9 ತಿಂಗಳುಗಳ ಕಾಲ ನೋಡುತ್ತಲೇ ಇರಬೇಕಾಗುತ್ತದೆ. ಹಾಗಾಗಿ ನಾವು ಪೂರ್ವ ತಯಾರಿ ನಡೆಸಿ ನೋಡಬೇಕಾದ ಶಿಲ್ಪಗಳು ಹಾಗೂ ಪೈಂಟಿಂಗ್ ಗಳು, ಅವುಗಳಿದ್ದ ವಿಭಾಗ, ಕೋಣೆಯ ಸಂಖ್ಯೆ ಎಲ್ಲವನ್ನೂ ಪಟ್ಟಿ ಮಾಡಿ ಇಟ್ಟುಕೊಂಡಿದ್ದೆವು. ನಾವು ಹೋದಾಗಲೆ ಬಹಳಷ್ಟು ಜನರು ಸರದಿಯಲ್ಲಿದ್ದರು. ನಮಗೋ ಜನ ಸಂದಣಿ ಹೆಚ್ಚಾಗುವುದರೊಳಗೆ ಒಳ ಸೇರಬೇಕೆಂಬ ತವಕ. ನಮ್ಮೊಡನಿದ್ದ ನನ್ನ ತಮ್ಮನ ಪುಟ್ಟ ಮಗನನ್ನು ಕಂಡ ಅಲ್ಲಿಯ ಅಧಿಕಾರಿ ನಮ್ಮನ್ನು ಸರದಿಯಿಂದ ತಪ್ಪಿಸಿ ‘ನೇರವಾಗಿ ಹೋಗಿ’ ಎಂದ… ಮ್ಯೂಸಿಯಂನ ಎದುರಿರುವ ಬೃಹತ್ ಗಾಜಿನ ಪಿರಮಿಡ್ ನ ಮೂಲಕ ಕೆಳಗಿಳಿದರೆ ಸಿಗುವುದೇ ಟಿಕೆಟ್ ಕೌಂಟರ್, ಮಾಹಿತಿ ಕೇಂದ್ರ, ಕೋಟು, ಬ್ಯಾಗುಗಳನ್ನಿಡುವ ಲಾಕರ್ ರೂಮ್… ಇತ್ಯಾದಿ. ಇಲ್ಲಿ ನಮ್ಮ ಬ್ಯಾಗುಗಳನ್ನೆಲ್ಲ ಜಮಾ ಮಾಡಿ ಹಗುರಾದೆವು… ಟಿಕೆಟ್ ಕೊಂಡು ಮ್ಯೂಸಿಯಂನ ಮಾರ್ಗಸೂಚಿ ಪಡೆದು ನಾವು ಪಟ್ಟಿ ಮಾಡಿಕೊಂಡ ಸಂಗ್ರಹಗಳು ಯಾವ ವಿಭಾಗದಲ್ಲಿನ ಯಾವ ಕೋಣೆಯಲ್ಲಿದೆ ಎಂದು ಮೊದಲು ಗುರುತು ಹಾಕಿಕೊಂಡೆವು. ನಂತರ ಇಲ್ಲಿನ ಅದ್ಭುತ ಲೋಕದ ನಮ್ಮ ಪಯಣ ಶುರು… ಮೊದಲು ಹೋಗಿದ್ದು ಗ್ರೀಕ್ ಶಿಲ್ಪಗಳ ವಿಭಾಗಕ್ಕೆ… ಮಾರ್ಬಲ್ ನಲ್ಲಿ ರಚಿತವಾದ ಶಿಲ್ಪಗಳ ಸಂಗ್ರಹ ಕಂಡ ಮನಸ್ಸು ತಣಿಯದಾಯ್ತು, ಯಾವುದು ನೋಡಲಿ ಯಾವುದು ನೋಡದೆ ಇರಲಿ ಎಂದು ನಿರ್ಧರಿಸಲಾಗದೆ ಗಲಿಬಿಲಿಯಾಯ್ತು. ಆದರೂ ಇದ್ದುದರಲ್ಲಿ ಪ್ರಸಿದ್ಧಿ ಪಡೆದ ‘ವೀನಸ್ ಡಿ ಮಿಲೋ’, ‘ವಿಂಗ್ ಡ್ ವಿಕ್ಟರಿ’, ‘ವಾರಿಯರ್’, ‘ವೇಲ್ಡ್ ಲೇಡಿ’… ಇನ್ನೂ ಎಷ್ಟೆಷ್ಟೊ ಶಿಲ್ಪಗಳನ್ನು ಕಂಡು ಅಚ್ಚರಿಗೊಂಡೆವು. ಇಲ್ಲಿಂದ ಮುಂದೆ ಸಾಗಿ ನಾ ಅತಿಯಾಗಿ ಪ್ರೀತಿಸುವ ಶಿಲ್ಪಿ ಮೈಕಲಾಂಜಲೋನ ಶಿಲ್ಪಿಗಳ ಬಳಿ ನಿಂತಾಗ ಆತನೇ ಅಲ್ಲಿನ ಶಿಲ್ಪಗಳ ಸುತ್ತ ನಿಂತುಕೊಂಡಿದ್ದಾನೆ… ಆ ಜಾಗದಲ್ಲೇ ನಾನೂ ನಿಂತಿದ್ದೇನೆ ಎಂಬ ಅತೀತ ಅನುಭವ … ಆತ ರಚಿಸಿದ ‘ಡೈಯಿಂಗ್ ಸ್ಲೇವ್’ ಎಂಬ ಶಿಲ್ಪವನ್ನು ನೋಡಿದಷ್ಟು ಸಾಲದಾಯ್ತು. ಕಲ್ಲಿನಲ್ಲಿ ಎಂತೆಂಥಹಾ ಶಿಲ್ಪಗಳನ್ನು ಕಡೆದು ಜೀವ ತುಂಬಿದ್ದಾರೆ ಎಂಬುದನ್ನು ಕಣ್ಣಾರೆ ಕಾಣದೆ ನಂಬಲು ಸಾಧ್ಯವಾಗದು. ಗಟ್ಟಿಯಾದ ಶಿಲೆಯಲ್ಲಿ ಮೈ ಮನಗಳ, ಕೊನೆಗೆ ಹೃದಯದ ಮೃದುತ್ವವನ್ನೂ ಮೂಡಿಸಿದ ಕಲಾವಿದನಿಗೆ ಮನದಲ್ಲೇ ತಲೆ ಬಾಗಿದೆ.
ನಾ ಇತಿಹಾಸ ಓದುತ್ತಿದ್ದಾಗ ನಮ್ಮ ಅಧ್ಯಾಪಕರು ಮೆಸಪೋಟೇಮಿಯದ ಹಮುರಾಬಿ ದೊರೆಯ ಅಂದಿನ ದಿನಗಳ ಕಾನೂನು ವ್ಯವಸ್ಥೆಯನ್ನು ದಾಖಲಿಸಿದಂತಹ ಶಾಸನದ ಬಗ್ಗೆ ಬಾರಿ ಬಾರಿ ಹೇಳಿದ್ದರು… ಕಣ್ಣಿಗೆ ಕಣ್ಣು, ಕೈಗೆ ಕೈ ಎಂದು ಉರು ಹೊಡೆಸಿದ್ದರು. ಈ ಶಾಸನವನ್ನು ಇಲ್ಲಿ ಕಂಡು ನನ್ನ ಇತಿಹಾಸದ ಅಧ್ಯಾಪಕರನ್ನು ನೆನೆದೆ… ಹಮುರಾಬಿ ದೊರೆ ತನ್ನ ಕಾಲದಲ್ಲಿ ನಡೆದಂತಹ ಅಪರಾಧಗಳು ಹಾಗೂ ಅದಕ್ಕೆ ಆತ ನೀಡಿದ ತೀರ್ಪು ಹಾಗೂ ವಿಧಿಸಿದ ಶಿಕ್ಷೆ ಎಂದು ಸುಮಾರು ಮುನ್ನೂರಕ್ಕೂ ಹೆಚ್ಚು ಸಂದರ್ಭಗಳನ್ನು ಇಲ್ಲಿ ದಾಖಲಿಸಿದ್ದಾನೆ. ಇದು ಜಗತ್ತಿನ ಮೊತ್ತಮೊದಲ ಇಂತಹ ಲಿಖಿತ ದಾಖಲೆಯಾಗಿರುತ್ತದೆ. ಇಲ್ಲಿಂದ ನಮ್ಮ ಕಾಲು ಸಾಗಿದ್ದು ಪೈಂಟಿಂಗ್ಸ್ ವಿಭಾಗಕ್ಕೆ. ಇಲ್ಲಿರುವ ಸಹಸ್ರಾರು ಕಲಾಕೃತಿಗಳನ್ನು ಒಮ್ಮೆಲೇ ನೋಡುವುದು ಸಾಧ್ಯವಿಲ್ಲದ ಮಾತು. ಹಾಗಾಗಿ ಏನು ನೋಡಬೇಕೆಂದು ಮೊದಲೇ ನಿರ್ಧರಿಸಿದ್ದು, ನಮಗೊಂದು ವರವೇ ಆಗಿತ್ತು. ನಾ ಚಿಕ್ಕವಳಿದ್ದಾಗ ಪುಸ್ತಕಗಳಲ್ಲಷ್ಟೆ ಕಂಡು ವಿಸ್ಮಯ ಪಡುತ್ತಿದ್ದ ಕಲಾಕೃತಿಗಳು ಇಲ್ಲಿದ್ದವು. ರಿನೈಸಾನ್ಸ್, ಪ್ಲೊರಂಟೈನ್, ಡಚ್ ಮುಂತಾದ ಹಾಗೂ ನಂತರದ ಇಂಪ್ರೆಷನಿಸಂ ಶೈಲಿಯ ಚಿತ್ರಗಳು ಎಂದೆಂದಿಗೂ ನನ್ನ ಸ್ಫೂರ್ತಿಯಾಗಿದ್ದವು. ಇಲ್ಲಿ ಕಂಡದ್ದು ಈ ಎಲ್ಲ ಕಲಾವಿದರ ಕೃತಿಗಳ ಮೋಹಕ ಪ್ರಪಂಚ. ಇಲ್ಲಿದ್ದ ಡಾ ವಿಂಚಿಯ ಐದೂ ಕಲಾಕೃತಿಗಳು ಒಂದಕ್ಕಿಂತ ಇನ್ನೊಂದು ಸುಂದರ. ಆದರೆ ಜನಪ್ರಿಯತೆಯ ಪರಾಕಾಷ್ಟೆ ದೊರಕಿದ್ದು ‘ಮೊನಾಲೀಸಾ’ಳಿಗೆ. ಜನರ ನೂಕುನುಗ್ಗಲಿನಲ್ಲಿ ಮುನ್ನುಗ್ಗಿ ‘ಮೊನಾಲಿಸಾ’ಳ ನಗುವನ್ನು ಕಣ್ತುಂಬಿಕೊಂಡಿದ್ದಾಯ್ತು. ನನ್ನ ಮೆಚ್ಚಿನ ಕಲಾವಿದರುಗಳಾದ ರೆಂಬ್ರಾಂಟ್, ರೂಬನ್, ರಫಾಲ್, ಬಾಟಿಸೆಲ್ಲಿ, ವರ್ ಮಿಯರ್, ಫ್ರಾನ್ಸ್ ಹಾಲ್ಸ್, ಇಂಗ್ರಿಸ್, ಡ್ಯೂರರ್, ಕೆರವಾಗಿಯೋ, ಟಿಶಿಯನ್… ಮುಂತಾದವರ ಅದ್ಭುತ ಕಲಾಕೃತಿಗಳನ್ನು ನೋಡಿದೆ. ಪುಸ್ತಕಗಳಲ್ಲಷ್ಟೆ ಕಂಡ ಕೃತಿಗಳನ್ನು ಕಣ್ಣಾರೆ ಸವಿದೆ… ಜೊತೆಗೆ ಇನ್ನೂ ಹಲವು ಪ್ರದರ್ಶನಗಳ ರಾಶಿ ಮನದುಂಬಿತು. ತನ್ನ ಜೀವನದಲ್ಲಿ ಹುಚ್ಚು ಹಿಡಿಸಿಕೊಂಡ ಕಲಾವಿದ ಯಾವ ಪರಮಾವಧಿ ಎತ್ತರಕ್ಕೆ ಏರಬಹುದು ಎಂಬುದು ಗೊತ್ತಾಯಿತು… ಇವರೆಲ್ಲರೆದುರು ನಾ ಎಲ್ಲಿ ನಿಂತಿದ್ದೇನೆಂಬ ಪರಮ ಸತ್ಯ ಮನದಟ್ಟಾಯಿತು… ಎಲ್ಲರೂ ಸೇರಿ ‘ನೀನಿನ್ನೂ ಅದೆಷ್ಟೋ ಎತ್ತರಕ್ಕೆ ಏರಬೇಕಿದೆ… ಈಗ ನೀನಿರುವುದು ಮೊದಲ ಮೊಟ್ಟಿಲಷ್ಟೆ’… ಎಂದು ತಲೆ ಮೇಲೆ ಮೊಟಕಿ ಕಿವಿಯಲ್ಲಿ ಉಸುರಿದಂತಾಯ್ತು. ಹೌದೆಂದು ಒಪ್ಪಿದೆ… ನನ್ನ ಕನಸಿನ ಚೀಲಕ್ಕೆ ಇನ್ನಷ್ಟು ಕನಸುಗಳನ್ನು ಸೇರಿಸಿಕೊಂಡೆ.
ಕೇವಲ ಅರ್ಧ ದಿನದ ಈ ಭೇಟಿ ಬಹಳಷ್ಟು ಹೇಳಿದಂತಾಯ್ತು… ಅದೇ ಗುಂಗಿನಲ್ಲಿ ಹೊರ ಬಂದೆ… ದಾರಿಯುದ್ದಕ್ಕೂ ಸಾಗಿ ‘ಒಪೆರಾ ಹೌಸ್’, ‘ಪಲೈಸ್ ಡಿ ರೋಯಲ್’, 3200 ವರ್ಷ ಹಳೆಯದಾದ ಲಕ್ಸರ್ನ ‘ಒಬ್ಲಿಸ್ಕ್’ ನೋಡಿದೆವು. ಕೊನೆಯ ತಾಣವಾಗಿ ‘ಚರ್ಚ್ ಯುಸ್ಟೇಚ್’ಗೆ ಬಂದೆವು. ಇದು ಇಡೀ ಪ್ಯಾರಿಸ್ ನಲ್ಲೇ ಅತಿ ಸುಂದರವಾದ ಚರ್ಚ್. ಈ ಚರ್ಚಿನ ಒಳ ಹೋಗಿ ಕಂಡದ್ದೇನು… ಪೂರ್ಣ ಗಾಥಿಕ್ ಶೈಲಿಯ ಈ ಚರ್ಚಿನ ಒಳಾಂಗಣ ತುಂಬ ನಾನೆತ್ತರ ತಾನೆತ್ತರ ಎನ್ನುವ ರಾಶಿ ರಾಶಿ ಕಮಾನುಗಳು. ಇವುಗಳೆಡೆಯಲ್ಲಿ ಬಣ್ಣ ಬಣ್ಣದ ಗಾಜಿನ ಅಲಂಕೃತ ಕಿಟಿಕಿಗಳು. ವಾರದ ಮಾಸ್ ನ ಸಮಯದಲ್ಲಿ ಇಂದಿಗೂ ನುಡಿಸಲ್ಪಡುವ 8000 ಪೈಪಿಗಳ ಭೂತಾಕಾರದ ಆರ್ಗನ್…. ಎಲ್ಲವೂ ಒಂದು ಅತಿ ರಮ್ಯ ಹಾಗೂ ಪವಿತ್ರ ದೃಶ್ಯವಾಗಿ ಗಮನ ಸೆಳೆಯಿತು.
ಇವಿಷ್ಟೆಲ್ಲದರ ಜತೆಗೆ ನಮ್ಮ ಕೈಯಲ್ಲಿದ್ದ ಮೂರು ದಿನಗಳು ಮುಗಿದವು… ಹೇಗೆ… ಅರಿವಿಗೇ ಬರಲಿಲ್ಲ… ಮೂರು ದಿನಗಳು ಪ್ಯಾರಿಸ್ ನ್ನು ಅನುಭವಿಸಲು ಬಹಳ ಕಮ್ಮಿ ಎಂದೆನಿಸಿದರೂ ಸಾಧ್ಯವಾದಷ್ಟು ನೋಡಿದೆವು… ನೋಡಿದೆವು ಅನ್ನುವುದಕ್ಕಿಂತ ನೋಡಿದ ಕರ್ತವ್ಯ ಮಾಡಿದೆವು ಎಂದೇ ಹೇಳಬಹುದು. ಪ್ಯಾರಿಸ್ ನಲ್ಲಿರುವುದೆಲ್ಲವೂ ನೋಡಬೇಕಾದವುಗಳೇ… ನಾವು ನಮ್ಮ ಮೂರು ದಿನಕ್ಕಾಗಿ ಕೆಲವನ್ನಷ್ಟೇ ಹೆಕ್ಕಿದ್ದೆವು… ಅವಷ್ಟನ್ನೇ ನೋಡಿದೆವು… ಅವುಗಳೇ ನಮ್ಮ ಪಾಲಿಗೆ ಅಗಾಧವಾಯ್ತು… ನೋಡಿದ್ದನ್ನು ಮನದಲ್ಲಿ ಅಚ್ಚೊತ್ತಿಕೊಳ್ಳಲು ಹೆಣಗಾಡಬೇಕಾಯ್ತು… ಗೊಂದಲಗೊಳ್ಳದಂತೆ ಎಚ್ಚರಿಸಿಕೊಳ್ಳಬೇಕಾಯ್ತು. ನಾವು ಪಟ್ಟಿ ಮಾಡಿಕೊಂಡಿದ್ದಷ್ಟೇ ಪ್ಯಾರಿಸ್ ನಲ್ಲಿ ನೋಡಲಿರುವುದು… ಬೇರೇನೂ ಅಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂದು ನಮಗೆ ನಾವೇ ಬಾರಿ ಬಾರಿ ಹೇಳಿಕೊಂಡೆ ತಿರುಗಿದೆವು. ಇಲ್ಲವಾದಲ್ಲಿ ಪ್ಯಾರಿಸ್ ನ ನೋಡಬೇಕಾದ ಎಲ್ಲದರ ಅಗಾಧತೆಯ ಮಧ್ಯೆ ಅತೃಪ್ತಿ ಹೊಂದುತ್ತಿದ್ದೆವು… ಕಳೆದೇ ಹೋಗುತ್ತಿದ್ದೆವು.
ಅಂತೂ ಪ್ಯಾರಿಸ್ಸಿಗೆ ಬಂದೆವು… ಪ್ಯಾರಿಸ್ ಕಂಡೆವು… ಅದು ನಮ್ಮನ್ನು ಗೆದ್ದಿತು… ತಮ್ಮ ನಾಡಿನ ಬಗ್ಗೆ ಹೆಮ್ಮೆ, ತಮ್ಮ ನಾಡಿನ ಸಕಲವನ್ನೂ, ಸಕಲರನ್ನೂ ನಿಷ್ಠೆಯಿಂದ ಕಾಯುವ ಅಭಿಮಾನಿ ಪ್ಯಾರಿಸಿಗರು… ಮೆಚ್ಚುಗೆ ಮೂಡಿಸಿದರು. ಈ ವಿಷಯದಲ್ಲಿ ನಮ್ಮೊಳಗೆ ಒಂದು ಪ್ರಶ್ನಾರ್ಥಕ ಚಿಹ್ನೆಯನ್ನೂ ಇರಿಸಿದರು… ಹೊಸ ಊರು ಕಾಣುವುದು… ಹೊಸ ಜನರ ನೋಡುವುದು… ಇದಕ್ಕಿಂತ ದೊಡ್ಡ ಪಾಠ ಬದುಕಲ್ಲಿ ಇನ್ಯಾವುದಿದೆ…? ಮನದ ಕೋಣೆಯ ದೂಳು ಝಾಡಿಸಿ ಮುಚ್ಚಿದ್ದ ಎಲ್ಲ ಕಿಟಿಕಿ ಬಾಗಿಲು ತೆಗೆದು ಹೊಸ ಗಾಳಿ ಹೊಸ ಬೆಳಕಿಗೆ ತೆಗೆದುಕೊಳ್ಳುವುದರಲ್ಲೇ ಜೀವನದ ಸೊಗಸಿದೆ… ಶ್ರೀಮಂತಿಕೆ ಇದೆ ಎಂಬ ಅರಿವಾಗಿತ್ತು. ಕನಸಿನ ನಗರ ಬದುಕಿಗೆ ಹೊಸತೊಂದು ಕನಸನ್ನೇ ನೀಡಿತ್ತು…
ಮುಂಬಯಿಯಲ್ಲಿ ಬದುಕುತ್ತಿರುವ ಕನ್ನಡ ಕವಯಿತ್ರಿ ಮತ್ತು ಚಿತ್ರ ಕಲಾವಿದೆ. ಹುಟ್ಟೂರು ಮಂಗಳೂರು. ಸಾಂಪ್ರದಾಯಿಕ ಕಲಾ ಪ್ರಾಕಾರದಲ್ಲಿ ವಿಶೇಷ ಆಸಕ್ತಿ.
ಒಳ್ಳೆಯ ಕಲಾವಿದರು ಬರಹಗಾರರೂ ಆಗಬಹುದು ಎನ್ನುವ ಭಾವನೆ ಈ ಪ್ರವಾಸ ಕಥನ ಸಾಬೀತುಪಡಿಸಿತು. ಅನು ಪಾವಂಜೆಯವರ ಕನ್ನಡ ಲಲಿತ, ಸುಂದರ.