ಅವರನ್ನು ಸಾರ್ವಜನಿಕ ಸಮಾರಂಭಗಳಲ್ಲಿ ವೇದಿಕೆ ಮೇಲೆ ನೋಡಿದ್ದೆ, ಹಿಂದೆ ಅವರು ಅರ್ಥಮಂತ್ರಿ ಆಗಿದ್ದಾಗ ರಾಜಾಜಿನಗರದ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿನ ಒಂದು ಕಾರ್ಯಕ್ರಮಕ್ಕೆ ಬಂದಿದ್ದಾಗ ನೋಡಿದ್ದೆ ಮತ್ತು ಅವರ ಭಾಷಣ ಕೇಳಿದ್ದೆ. ಮಂಗಳಾರತಿ ತಟ್ಟೆಗೆ ಪಕ್ಕದವರಿಂದ ನೋಟು ಕೇಳಿ ಪಡೆದು ಹಾಕಿದ್ದರು. ನೋಡಿ ನಾನು ದೇಶದ ಅರ್ಥಮಂತ್ರಿ, ನನ್ನ ಪರಿಸ್ಥಿತಿ ಇದು ಎಂದು ಜೋಕು ಮಾಡಿದ್ದರು! ಕುಳ್ಳ ಹುಟ್ಟು ಮೈ ಬೊಜ್ಜಿನದ್ದಲ್ಲ, ತೆಳು ದೇಹ, ಕನ್ನಡಕದ ಒಳಗೆ ತೀಕ್ಷ್ಣ ಕಣ್ಣು.. ಒಟ್ಟಿನಲ್ಲಿ ಅವರಲ್ಲೇನೋ ಒಂದು ಸೆಳೆತ ಇತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತನೆಯ ಕಂತು ನಿಮ್ಮ ಓದಿಗೆ

……ಹೀಗೆ ತುರ್ತು ಪರಿಸ್ಥಿತಿ ದೇಶದ ಮೇಲೆ ಜಾರಿ ಆಯಿತಾ..

ಹಲವಾರು ನಾಯಕರ ಸಂಗಡ ಜೇಪೀ ಅವರು ಈ ಸಂದರ್ಭದಲ್ಲಿ ಅರೆಸ್ಟ್ ಆದರು. ದೇಶ ತುರ್ತು ಪರಿಸ್ಥಿತಿಗೆ ಒಳಗಾಯಿತು ಮತ್ತು ಕ್ರೋಧ ಎಷ್ಟೇ ಇದ್ದರೂ ಅದನ್ನು ಹೊರಕ್ಕೆ ಬಿಡುವ ಯಾವ ದಾರಿಯೂ ಇಲ್ಲದಂತಹ ಪತ್ರಿಕಾ ಸೆನ್ಸಾರ್ ಜಾರಿಗೆ ಬಂದಿತು. ಜೂನ್ ೨೪,೧೯೭೫ ನಲ್ಲಿ ಜಾರಿ ಆದ ತುರ್ತು ಪರಿಸ್ಥಿತಿ ಮುಗಿದು ಚುನಾವಣೆ ನಡೆದದ್ದು, ಹೊಸ ಸರ್ಕಾರ ಬಂದದ್ದು…. ಅದೆಲ್ಲಾ ಈಗ ಕಳೆದುಹೋದ ನೆನಪುಗಳು……

ಕರ್ನಾಟಕದಲ್ಲಿ ಆಗ ಶ್ರೀ ದೇವರಾಜು ಅರಸು ಅವರು ಮುಖ್ಯ ಮಂತ್ರಿಯಾಗಿದ್ದರು. ಶ್ರೀಮತಿ ಇಂದಿರಾ ಗಾಂಧಿ ಅವರ ಕಟ್ಟಾ ಬೆಂಬಲಿಗರಾಗಿದ್ದ ಅರಸು ಅವರು ರಾಜಕೀಯ ವಿರೋಧಿಗಳನ್ನು ಮತ್ತು ಕಾಂಗ್ರೆಸ್ ಸಿದ್ಧಾಂತದ ವಿರೋಧಿಗಳನ್ನು ಸಹ ಜೈಲಿಗೆ ದೂಡಿದರು… ಹೀಗಾಗಿ ಇಡೀ ವಿರೋಧ ಪಕ್ಷ ಜೈಲಿಗೆ ಸೇರಿತು. ಬೆಂಗಳೂರಿನಲ್ಲೇ ಯಾವುದೋ ಸಮಾವೇಶಕ್ಕೆ ಬಂದಿದ್ದ ಅಡ್ವಾಣಿ, ವಾಜಪೇಯಿ ಮುಂತಾದ ರಾಷ್ಟ್ರ ನಾಯಕರು ಬೆಂಗಳೂರಿನ ಸೆಂಟ್ರಲ್ ಜೈಲು ಸೇರಿದರು. ಜೈಲಿನಲ್ಲಿ ಮೆದು ನಿಲುವು ಇರಲಿ ಎಂದು ಆದೇಶಿಸಿದ್ದರು ಎಂದು ನಂತರ ತಿಳಿಯಿತು. ಈ ಕಾರಣದಿಂದ ತೀಕ್ಷ್ಣ ಅನಿಸಬಹುದಾದ ವಿಚಾರಣೆ ಕೆಲವರಿಗೆ ನಡೆಯಲಿಲ್ಲ.

(ಇಂದಿರಾ ಗಾಂಧಿ)

ಎಮರ್ಜೆನ್ಸಿಯ ಕೆಲವು ಸ್ಯಾಂಪಲ್ ಕತೆ ಹೇಳಿ ಮುಂದುವರೆಯುತ್ತೇನೆ. ಇದು ಅಷ್ಟು ಸೀರಿಯಸ್ ಪ್ರಕರಣಗಳು ಅಲ್ಲ. ಪ್ರೆಸ್ ಸೆನ್ಸಾರ್ ಇದ್ದದ್ದರಿಂದ ಯಾವುದೇ ಸುದ್ದಿ ಪೊಲೀಸರ ಮೂಲಕ ಹಾದು ನಂತರ ಪ್ರಕಟ ಆಗಬೇಕಿತ್ತು. ಸುಮಾರು ಸಂಗತಿಗಳು ಎಮರ್ಜೆನ್ಸಿ ಮುಗಿದ ನಂತರ ರೋಚಕ ಸುದ್ಧಿಗಳಾಗಿ ಪತ್ರಿಕೆಗಳಲ್ಲಿ ಬಂದವು. ಸಂಜಯ ಗಾಂಧಿ, ರಾಜೀವ್ ಗಾಂಧಿ ಅವರ ತಮ್ಮ, ಇಂದಿರಾ ಗಾಂಧಿ ಅವರ ಎರಡನೇ ಮಗ, ಎಮರ್ಜೆನ್ಸಿ ಸಮಯದಲ್ಲಿ ಒಬ್ಬ esp ಆಗಿದ್ದ ಅನ್ನುವುದು ದೊಡ್ಡ ಸುದ್ದಿ. esp ಅಂದರೆ ex tra super power ಅಂತ ಅರ್ಥೈಸಿದ್ದರು. ಸಂವಿಧಾನಕ್ಕೆ ಮೀರಿದ ಕೆಲಸ ಕಾರ್ಯ ಮಾಡುವವರಿಗೆ ಈ esp ಪದ ಅನ್ವಯ ಆಗುತ್ತಿತ್ತು. ಮತ್ತೊಂದು ಪದ ಅಂದರೆ eca. eca ಅಂದರೆ extra constitutional authority ಅಂತ. ಇದೂ ಸಹ ಸಂಜಯ ಗಾಂಧಿ ಅವರಿಗೆ ಇದ್ದ ಮತ್ತೊಂದು ಅಡ್ಡ ಹೆಸರು. ಕಾನೂನಿಗೆ, ಸಂವಿಧಾನಕ್ಕೆ ಮೀರಿದ ಕೆಲಸಗಳನ್ನು ಮಾಡುತ್ತಿದ್ದರಿಂದ ಈ ವಿಶೇಷಣ. ದೆಹಲಿಯ ಸ್ಲಂ ಪ್ರದೇಶದಲ್ಲಿ ಇರುವ ನಿವಾಸಿಗಳನ್ನು ರಾತ್ರೋ ರಾತ್ರಿ ಒಕ್ಕಲೆಬ್ಬಿಸಿ ಅಲ್ಲಿ ಬುಲ್ಡೋಜರ್ ಓಡಿಸಿ ನೆಲ ಮಟ್ಟ ಮಾಡಿಸಿದ್ದು ಒಂದು ಸುದ್ದಿ. ಮತ್ತೊಂದು ಅಂದರೆ ಕುಟುಂಬ ನಿಯಂತ್ರಣ ಯೋಜನೆ ಯಶಸ್ವಿ ಮಾಡಲು ಆತ ಕಾರ್ಯೋನ್ಮುಖನಾದ ಒಂದು ಕತೆ. ಬಸ್ಸಿನಲ್ಲಿ ಕೂತಿದ್ದ ಜನರನ್ನು ಒಂದು ಅಜ್ಞಾತ ಸ್ಥಳಕ್ಕೆ ಹೈಜಾಕ್ ಮಾಡಿ ಎಲ್ಲರಿಗೂ ಫ್ಯಾಮಿಲಿ ಪ್ಲಾನಿಂಗ್ ಆಪರೇಶನ್ ಮಾಡಿದ್ದು.. ಇಂತಹ ರೋಚಕ ಸುದ್ದಿಗಳು ತುರ್ತು ಪರಿಸ್ಥಿತಿ ನಂತರ ಹರಿದಾಡಿತು. ಆಗ ಡಿಕೆ ಬರುವಾ ಎನ್ನುವ ಕಾಂಗ್ರೆಸ್ ಪಾರ್ಟಿ ಎಂ ಪಿ ಒಂದು ಸ್ಲೋಗನ್ ಹುಟ್ಟಿಸಿದ್ದ. ಇಂದಿರಾ ಇಸ್ ಇಂಡಿಯಾ ಅಂತ. ಇನ್ನೂ ಮುಂದುವರೆದು ದೇಶದಲ್ಲಿ ಸರ್ಕಾರಿ ಕೆಲಸ ಕಾಂಗ್ರೆಸ್‌ನವರಿಗೆ ಮಾತ್ರ ನೀಡಬೇಕು ಎನ್ನುವ ಭಾಷಣಗಳನ್ನೂ ಬೇರೆ ಮಾಡಿದ್ದ. ಕುಲದೀಪ್ ನಾಯರ್ ಎನ್ನುವ ಪತ್ರಕರ್ತರು ಎಮರ್ಜೆನ್ಸಿ ಕತೆ ಬರೆದು ಅತ್ಯಂತ ಜನಪ್ರಿಯರಾದರು.

ದೇಶದಲ್ಲಿ ಎಮರ್ಜೆನ್ಸಿ ಕಾರಣದಿಂದ ರಾಜಕೀಯ ವಿರೋಧಿಗಳನ್ನು ಸರ್ಕಾರ (ಕೇಂದ್ರ ಹಾಗೂ ರಾಜ್ಯದ)ಜೈಲುಗಳಲ್ಲಿ ತುಂಬಿಸಿತ್ತು. ಜೈಲುಗಳಲ್ಲಿ ಹುಷಾರು ತಪ್ಪಿದವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಕೆಲವು ರಾಜಕೀಯ ಕೈದಿಗಳಿಗೆ ರಹಸ್ಯ ಸಂಗತಿ ಹೇಳುವಂತೆ ಬಲಾತ್ಕಾರ ಮತ್ತು ಹಿಂಸೆ ನೀಡಲಾಯಿತು. ಕನ್ನಡದ ಸಂಸ್ಕಾರ ಚಿತ್ರದ ಸ್ನೇಹಲತಾ ರೆಡ್ಡಿ ಅವರು ಬಂಧನಕ್ಕೆ ಒಳಗಾಗಿದ್ದರು. ಆಗ ಭೂಗತರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರ ಅಡಗು ತಾಣ ತಿಳಿಯಲು ಇವರಿಗೆ ಚಿತ್ರಹಿಂಸೆ ನೀಡಲಾಯಿತು. ನಂತರ ಫರ್ನಾಂಡಿಸ್ ಅವರನ್ನು ಬರೋಡಾ ಡೈನಾಮಿಟ್ ಕೇಸಿನಲ್ಲಿ ಆರೋಪಿಯನ್ನಾಗಿ ಮಾಡಿ ಮುಜಾಫರ್ ನಗರದ ಜೈಲಿಗೆ ಹಾಕಲಾಯಿತು. ಜೈಲಿನಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಆರೋಗ್ಯ ಪೂರ್ಣ ಹದಗೆಟ್ಟು ಅವರ ಕಿಡ್ನಿ ನಿಷ್ಕ್ರಿಯ ಆಗುವ ಸನ್ನಿವೇಶ ಸೃಷ್ಟಿ ಆಗಿತ್ತು. ಇದು ಕೆಲವು ಸ್ಯಾಂಪಲ್ ಅಷ್ಟೇ.. ತುರ್ತು ಪರಿಸ್ಥಿತಿ 21 ಮಾರ್ಚ್ 1977 ರಂದು ಕೊನೆಗೊಂಡಿತು. ಈ ಬಗ್ಗೆ ಒಂದು ಪುಟ್ಟ ವರದಿ ಹೀಗಿದೆ..

ತುರ್ತು ಪರಿಸ್ಥಿತಿ ಮುಕ್ತಾಯ

ಭಾರತದಲ್ಲಿ ತುರ್ತು ಪರಿಸ್ಥಿತಿಯು 1975 ರಿಂದ 1977 ರವರೆಗಿನ 21 ತಿಂಗಳ ಅವಧಿಯಾಗಿದ್ದು, ಪ್ರಧಾನಿ ಇಂದಿರಾ ಗಾಂಧಿಯವರು ದೇಶಕ್ಕೆ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳನ್ನು ಉಲ್ಲೇಖಿಸಿ ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಪ್ರಧಾನಿ ಇಂದಿರಾ ಗಾಂಧಿಯವರ ಸಲಹೆಯ ಮೇರೆಗೆ ಅಧ್ಯಕ್ಷ ಫಕ್ರುದ್ದೀನ್ ಅಲಿ ಅಹ್ಮದ್ ಅವರು 25 ಜೂನ್ 1975 ರಂದು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

ಚಾಲ್ತಿಯಲ್ಲಿರುವ “ಆಂತರಿಕ ಅಡಚಣೆ”ಯ ಕಾರಣದಿಂದ ಸಂವಿಧಾನದ 352 ನೇ ವಿಧಿಯ ಅಡಿಯಲ್ಲಿ ಅಧ್ಯಕ್ಷ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಅಧಿಕೃತವಾಗಿ ಈ ಆಜ್ಞೆ ಹೊರಡಿಸಿದರು, ತುರ್ತು ಪರಿಸ್ಥಿತಿಯು 25 ಜೂನ್ 1975 ರಿಂದ ಜಾರಿಯಲ್ಲಿತ್ತು ಮತ್ತು 21 ಮಾರ್ಚ್ 1977 ರಂದು ಕೊನೆಗೊಂಡಿತು. ಈ ಆದೇಶವು ಪ್ರಧಾನ ಮಂತ್ರಿಗೆ ಆದೇಶದ ಮೂಲಕ ಆಡಳಿತ ನಡೆಸುವ ಅಧಿಕಾರವನ್ನು ನೀಡಿತು. ಇದು ಚುನಾವಣೆಗಳನ್ನು ರದ್ದುಗೊಳಿಸಲು ಮತ್ತು ನಾಗರಿಕ ಸ್ವಾತಂತ್ರ್ಯವನ್ನು ಅಮಾನತುಗೊಳಿಸಲು ಅವಕಾಶ ನೀಡುತ್ತದೆ. ಇಂದಿರಾ ಗಾಂಧಿಯವರ ರಾಜಕೀಯ ವಿರೋಧಿಗಳನ್ನು ಜೈಲಿನಲ್ಲಿರಿಸಲಾಯಿತು ಮತ್ತು ಪತ್ರಿಕಾ ಮಾಧ್ಯಮವನ್ನು ಸೆನ್ಸಾರ್ ಮಾಡಲಾಯಿತು. ಈ ಸಮಯದಲ್ಲಿ, ಸಂಜಯ್‌ ಗಾಂಧಿ (ಇಂದಿರಾ ಗಾಂಧಿ ಅವರ ಪುತ್ರ ಸಂಜಯ್‌ ಗಾಂಧಿ)ಯವರ ನೇತೃತ್ವದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಯ ಸಾಮೂಹಿಕ ಅಭಿಯಾನವನ್ನು ನಡೆಸಲಾಯಿತು. ತುರ್ತು ಪರಿಸ್ಥಿತಿಯನ್ನು ಹೇರುವ ಅಂತಿಮ ನಿರ್ಧಾರವನ್ನು ಇಂದಿರಾ ಗಾಂಧಿಯವರು ಪ್ರಸ್ತಾಪಿಸಿದರು, ಇದನ್ನು ಭಾರತದ ಅಧ್ಯಕ್ಷರು ಒಪ್ಪಿದರು ಮತ್ತು ಜುಲೈನಿಂದ ಆಗಸ್ಟ್ 1975 ರವರೆಗೆ ಕ್ಯಾಬಿನೆಟ್ ಮತ್ತು ಸಂಸತ್ತಿನಿಂದ ಅಂಗೀಕರಿಸಲ್ಪಟ್ಟಿತು. ಇದು ಸನ್ನಿಹಿತವಾದ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳ ತರ್ಕವನ್ನು ಆಧರಿಸಿದೆ.

352 ನೇ ವಿಧಿಯನ್ನು ಬಳಸಿಕೊಂಡು ಭಾರತದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಇಂದಿರಾ ಗಾಂಧಿಯವರು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರಿಗೆ ಸಲಹೆ ನೀಡಿದರು.

ಜೂನ್ 25 ರ ಮಧ್ಯರಾತ್ರಿ ಯಾವುದೇ ಮುನ್ಸೂಚನೆ ಇಲ್ಲದೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಮತ್ತು ದೇಶವು ಪ್ರಜಾಪ್ರಭುತ್ವದ ಹಾಗೂ ನಮ್ಮ ಸಂವಿಧಾನದ ಮತ್ತೊಂದು ಮಗ್ಗುಲನ್ನು ನೋಡುವಂತಾಯಿತು.

ಇದು ಭಾರತದಲ್ಲಿ ಘೋಷಿಸಲಾದ ಮೂರನೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯ. ಮೊದಲ ಎರಡು ಬಾರಿ ಕ್ರಮವಾಗಿ 1962 ಮತ್ತು 1971 ರಲ್ಲಿ ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಯುದ್ಧಗಳ ಸಮಯದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು.

(ಜಾರ್ಜ್ ಫರ್ನಾಂಡಿಸ್)

1971 ರಲ್ಲಿ ಇಂದಿರಾ ಗಾಂಧಿ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆದ್ದರು. ಬ್ಯಾಂಕ್‌ಗಳ ರಾಷ್ಟ್ರೀಕರಣ ಮತ್ತು ಖಾಸಗಿ ಪರ್ಸ್‌ನ ರದ್ದತಿಯಂತಹ ಬಡವರ ಪರ ಮತ್ತು ಎಡಪಂಥೀಯ ನೀತಿಗಳೊಂದಿಗೆ ಅವರು ಜನಪ್ರಿಯ ಯೋಜನೆ ಜಾರಿ ಮಾಡಿ ಜನತೆಯ ಬೆಂಬಲವನ್ನು ಗಳಿಸಿದ್ದರು. ಖಾಸಗಿ ಪರ್ಸ್ ಎಂದರೆ ರಾಜಧನ. ಅಂದರೆ ಭಾರತ ೧೯೪೭ ರಲ್ಲಿ ಒಗ್ಗೂಡಿದಾಗ ಆಗ ಆಳ್ವಿಕೆ ನಡೆಸುತ್ತಿದ್ದ ಹಲವು ಅರಸೊತ್ತಿಗೆ ಸಂಗಡ ಒಂದು ಒಪ್ಪಂದ ಆಗಿತ್ತು. ಅದರ ಅನ್ವಯ ಭಾರತದ ಒಗ್ಗೂಡಿ ಕೆಗೆ ಸಹಿ ಹಾಕಿದ್ದ ರಾಜ ಮನೆತನಗಳಿಗೆ ನಿಯತವಾಗಿ ಒಂದು ನಿರ್ದಿಷ್ಟ ಮೊತ್ತ ಕೊಡುವ ಒಡಂಬಡಿಕೆ. ಇದಕ್ಕೆ ರಾಜಧನ Privy Purse ಎನ್ನುವ ಹೆಸರಿಟ್ಟು ಮಾನ್ಯ ಮಾಡಲಾಗಿತ್ತು. ಇಂದಿರಾ ಗಾಂಧಿ ಅವರು ಇದನ್ನು ದೇಶಕ್ಕೆ ಆರ್ಥಿಕ ಹೊರೆ ಮತ್ತು ಇದರಿಂದ ಬಡವರ ಏಳಿಗೆಗೆ ರಾಷ್ಟ್ರದ ಮುಂದುವರಿಕೆಗೆ ಆರ್ಥಿಕ ತಡೆ ಎಂದು ಪರಿಗಣಿಸಿದ್ದರು. ವಿರೋಧ ಪಕ್ಷಗಳು ಈ ನಡೆಯನ್ನು ವಿರೋಧಿಸಿದ್ದವು. ರಾಜಮನೆತನಗಳಿಗೆ ಸರ್ಕಾರ ಹಿಂದೆ ಕೊಟ್ಟ ವಾಗ್ದಾನ ಇದು ಇದನ್ನು ಅಮಾನ್ಯ ಮಾಡುವಹಾಗಿಲ್ಲ ಎಂದು ಅವರ ವಾದ.

ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಭಗವಂತನು..

ಮಂತ್ರಿಮಂಡಲದ ಹಾಗೂ ಸರ್ಕಾರದ ಮೇಲೆ ಇಂದಿರಾ ಗಾಂಧಿಯವರು ಬಹುತೇಕ ನಿರಂಕುಶ ನಿಯಂತ್ರಣವನ್ನು ಹೊಂದಿದ್ದರು. 1971 ರ ಯುದ್ಧವು ದೇಶದ ಜಿಡಿಪಿಯನ್ನು ಕಡಿಮೆ ಮಾಡಿತು. ದೇಶವು ಅನೇಕ ಕ್ಷಾಮಕ್ಕೆ ಈಡಾಯಿತು ಮತ್ತು ತೈಲ ಬಿಕ್ಕಟ್ಟನ್ನು ಎದುರಿಸಿತು. ಇದೇ ಸಮಯದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿತು.

1974ರಲ್ಲಿ ಜಾರ್ಜ್ ಫರ್ನಾಂಡಿಸ್ ನೇತೃತ್ವದಲ್ಲಿ ನಡೆದ ರೈಲ್ವೇ ನೌಕರರ ಮುಷ್ಕರವನ್ನು ಸರಕಾರ ತೀವ್ರವಾಗಿ ಹತ್ತಿಕ್ಕಿತು. ರೈಲ್ವೆ ವಲಯದಲ್ಲಿ ಅಸಂತೃಪ್ತಿ ಹೆಚ್ಚಿತು. ನ್ಯಾಯಾಂಗ ವಿಷಯಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸುವ ಪ್ರಯತ್ನಗಳೂ ನಡೆಯಿತು.

ಚುನಾವಣಾ ಅವ್ಯವಹಾರದ ಕಾರಣದಿಂದ ಲೋಕಸಭೆಗೆ ಗಾಂಧಿಯವರ ಆಯ್ಕೆ ಅನೂರ್ಜಿತವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಘೋಷಿಸಿತು. ಜನತಾ ಪಕ್ಷದ ನಾಯಕ ಜಯಪ್ರಕಾಶ್ ನಾರಾಯಣ್ (ಜೆಪಿ) ಸರ್ಕಾರವನ್ನು ಕಿತ್ತೊಗೆಯುವಂತೆ ಕರೆ ನೀಡಿದರು. ಅವರು ಸಂಪೂರ್ಣ ಕ್ರಾಂತಿ (ಸಂಪೂರ್ಣ ಕ್ರಾಂತಿ) ಎಂಬ ಕಾರ್ಯಕ್ರಮವನ್ನು ಬೆಂಬಲಿಸಿದರು. ಅಸಂವಿಧಾನಿಕ ಆದೇಶಗಳಿಗೆ ಅವಿಧೇಯರಾಗುವಂತೆ ಅವರು ಪೊಲೀಸ್ ಮತ್ತು ಮಿಲಿಟರಿಯನ್ನು ಕೇಳಿದರು.

ಸರ್ಕಾರಕ್ಕೆ ಈ ವಿಷಯಗಳು ಸುಡು ಬಿಸಿಯಾಗಿ ನುಂಗಲಾರದ ತುಪ್ಪವಾಯಿತು. ಅಧಿಕಾರದ ಹಿಡಿತ ತಮ್ಮ ನಿಯಂತ್ರಣದಲ್ಲಿ ಇರಲು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು ಮತ್ತು ತಕ್ಷಣವೇ ಜೆಪಿ, ಮೊರಾರ್ಜಿ ದೇಸಾಯಿ, ಚರಣ್ ಸಿಂಗ್, ಆಚಾರ್ಯ ಕೃಪಲಾನಿ ಸೇರಿದಂತೆ ಎಲ್ಲಾ ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಬಂಧಿಸಿದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಅವರದೇ ಪಕ್ಷದ ಅವರದೇ ಕಾಂಗ್ರೆಸ್‌ನ ನಾಯಕರನ್ನು ಸಹ ಬಂಧಿಸಲಾಯಿತು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಾಗರಿಕ ಸ್ವಾತಂತ್ರ್ಯಗಳನ್ನು ತೀವ್ರವಾಗಿ ನಿರ್ಬಂಧಿಸಲಾಗಿತ್ತು. ಪತ್ರಿಕಾ ಸ್ವಾತಂತ್ರ್ಯವನ್ನು ಕಟ್ಟುನಿಟ್ಟಾಗಿ ಮೊಟಕುಗೊಳಿಸಲಾಯಿತು ಮತ್ತು ಪ್ರಕಟ ಪೂರ್ವ ಮಾಹಿತಿಗಳನ್ನು ಪ್ರಸಾರ ಸಚಿವಾಲಯಕ್ಕೇ ರವಾನಿಸಬೇಕಾಗಿತ್ತು. ಪ್ರಕಟಣೆಗೆ ಮುನ್ನ ಅನುಮತಿ ಬೇಕಿತ್ತು. ಹಿಂದೆ ಜಾರಿಯಲ್ಲಿ ಇಲ್ಲದ ಹಲವು ಕಾನೂನುಗಳು ಮತ್ತು ಆದೇಶಗಳು ಚಾಲ್ತಿಗೆ ಬಂದವು.

ದೆಹಲಿಯ ಅನೇಕ ಕೊಳೆಗೇರಿಗಳು ನಾಶವಾದವು. ಸಹಜವಾಗಿ ಇದು ಅಲ್ಪ ಸಂಖ್ಯಾತರು (ಅದರಲ್ಲೂ ಕೊಳೆಗೇರಿ ನಿವಾಸಿಗಳಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಜನಾಂಗವನ್ನು) ಮತ್ತು ಇತರರನ್ನು ಕೆರಳಿಸಿತು. ಇದು ತುರ್ತು ಪರಿಸ್ಥಿತಿ ನಂತರ ನಡೆದ ಚುನಾವಣೆಯಲ್ಲಿ ಸ್ಫೋಟಗೊಂಡಿತು. ಕಾಂಗ್ರೆಸ್ಸೇತರ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಲಾಯಿತು.

(ಸಂಜಯ್‌ ಗಾಂಧಿ)

ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಯಾವುದೇ ಅಡೆತಡೆ ಇಲ್ಲದೆ ನಡೆಯಿತು. ದೇಶದ ಬಹುತೇಕ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಯಿತು ಮತ್ತು ಪೊಲೀಸರು ವಿಚಾರಣೆಯಿಲ್ಲದೆ ಜನರನ್ನು ಬಂಧಿಸಿದರು. ಬೆಂಗಳೂರಿನಲ್ಲಿ ಕೆಲವು ಸಮಯ ಸೆಕ್ಷನ್ ೧೪೪ ಜಾರಿಯಲ್ಲಿ ಇರುತ್ತಿತ್ತು. ಐದು ಜನರ ಮೇಲೆ ಸೇರುವುದು ಅಪರಾಧ ಮತ್ತು ವಿಚಾರಣೆ ಇಲ್ಲದೆ ಜೈಲಿಗೆ ದೂಡುವ ಅಧಿಕಾರ ಪೊಲೀಸರಿಗೆ ಇತ್ತು. ಸರ್ಕಾರವು ಅನೇಕ ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿತು (ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದ ನಂತರ, ಹೊಸ ಸರ್ಕಾರವು ಈ ತಿದ್ದುಪಡಿಗಳನ್ನು ರದ್ದುಗೊಳಿಸಿತು). ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳಿಗೆ ಒತ್ತು ನೀಡಲಾಯಿತು. “ಗರೀಬಿ ಹಟಾವೋ”ಗೆ ಒತ್ತು ಕೊಡುವ ಈ ಕಾರ್ಯಕ್ರಮಗಳು ಸರ್ಕಾರದ ಮತ್ತು ಕಾಂಗ್ರೆಸಿನ ಅತ್ಯಂತ ಜನಪ್ರಿಯ ಮ್ಯಾಜಿಕ್ ಎಂದು ಪರಿಗಣಿಸಲಾಗಿತ್ತು. ಹಲವು ಪ್ರಕಾಶನ ಸಂಸ್ಥೆಗಳು ಇಪ್ಪತ್ತು ಅಂಶದ ಕಾರ್ಯಕ್ರಮಗಳು ಎನ್ನುವ ಶೀರ್ಷಿಕೆ ಹೊತ್ತ ಪುಸ್ತಕಗಳನ್ನು ತಜ್ಞರಿಂದ ಬರೆಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟರು. IBH ನ ಒಂದು ಪ್ರಕಟಣೆ (ಎಚ್ಚೆಸ್ಕೆ ಅವರು ರಚಿಸಿದ್ದು ಅಂತ ನೆನಪು) ಸುಮಾರು ವರ್ಷ ನನ್ನ ಬಳಿಯಲ್ಲಿತ್ತು.

ಬ್ಯಾಂಕ್ ಉದ್ಯೋಗಿಗಳು ಅದರಲ್ಲೂ ಎಡ ಪಂಥೀಯ ಒಲವು ಇದ್ದ ಕಮ್ಯೂನಿಸ್ಟ್ ನಾಯಕತ್ವದ ಯೂನಿಯನ್‌ಗಳು ಈ ಕಾರ್ಯಕ್ರಮದಿಂದ ದೇಶದಲ್ಲಿ ಬಡತನ ಸಂಪೂರ್ಣ ನಿರ್ಮೂಲ ಆಗುವುದಾಗಿ ನಂಬಿಕೆಯನ್ನು ಬಿತ್ತಿದ್ದರು. ಅದೇ ಮಾನಸಿಕ ಸ್ಥಿತಿ ಕಾರ್ಖಾನೆಯ ಟ್ರೇಡ್ ಯೂನಿಯನ್‌ಗಳು ಹೊಂದಿದ್ದವು. ನನ್ನ ಗೆಳೆಯ ಒಬ್ಬ ಬ್ಯಾಂಕ್ ಉದ್ಯೋಗಿ ಆಗಿದ್ದವನು ಇಪ್ಪತ್ತು ಅಂಶಗಳ ಕಾರ್ಯಕ್ರಮವನ್ನು ಬಹುವಾಗಿ ಹೊಗಳುತ್ತಿದ್ದ ಮತ್ತು ಎಲ್ಲಾ ಇಪ್ಪತ್ತು ಅಂಶಗಳೂ ಸಹ ಅವನಿಗೆ ಬಾಯಿಪಾಠ ಆಗಿತ್ತು, ಅವನ ಸಹೋದ್ಯೋಗಿಗಳು ಸಹ ಬಾಯಿಪಾಠ ಮಾಡಿಕೊಂಡಿದ್ದರು. ಈ ಅತಿ ಅಂದರೆ extremity ಕಾರ್ಖಾನೆ ಸಂಘಟನೆಗಳಲ್ಲಿ (ಅವೂ ಸಹ ಎಡಪಂಥದ ನಾಯಕರ ಹಿಡಿತದಲ್ಲಿ ಇದ್ದವು) ಇರಲಿಲ್ಲ. ಯಾವುದೇ ಸಮಯದಲ್ಲಿ ಏಳನೇ ಪಾಯಿಂಟ್ ಯಾವುದು, ಹನ್ನೆರಡನೇ ಪಾಯಿಂಟ್ ಯಾವುದು, ಹದಿನೇಳನೇ ಪಾಯಿಂಟ್ ಯಾವುದು ಎಂದು ಅವನನ್ನು ಅಂದರೆ ಗೆಳೆಯನನ್ನು ಛೇಡಿಸುವ ಪ್ರಯತ್ನ ಮಾಡುತ್ತಿದ್ದೆ. ಅದು ಅವನಿಗೆ ಅರಿವಾಗುತ್ತಿತ್ತೋ ಇಲ್ಲವೋ ತಿಳಿಯದು. ಸರಕ್ಕನೆ ಮಕ್ಕಳು ಪಾಠ ಒಪ್ಪಿಸುವ ಹಾಗೆ ಪಾಯಿಂಟ್ ಹೇಳುತ್ತಿದ್ದ! ಇಂದಿರಾಗಾಂಧಿ ಅವರ ಮತ್ತು ಆ ಮೂಲಕ ಕಾಂಗ್ರೆಸ್ ಪಕ್ಷದ ವಕ್ತಾರರ ಹಾಗೆ ಮಾತಾಡುತ್ತಿದ್ದ. ತುರ್ತು ಪರಿಸ್ಥಿತಿ ಸಮಯದ ಅತಿರೇಕಗಳು ಪ್ರಚಾರ ಪಡೆಯುತ್ತಾ ಬಂದ ಹಾಗೆ ಅದನ್ನು ಸಮರ್ಥಿಸಿಕೊಳ್ಳಲು ಇವನು ಪಡುತ್ತಿದ್ದ ಪಾಡು ನಮಗೆ ಒಂದು ತಮಾಷೆಯ ವಸ್ತು ಆಗಿತ್ತು.

ಜೈಲಿನಲ್ಲಿದ್ದ ರಾಜಕೀಯ ನಾಯಕರಿಗೆ ದೇಶದಲ್ಲಿ ಏನಾಗುತ್ತಿದೆ ಎನ್ನುವ ಸುದ್ದಿ ತಿಳಿಸಲು ಒಂದು ಗುಂಪು ಕಾರ್ಯನಿರತವಾಗಿತ್ತು. ಈ ವಿಷಯದಲ್ಲಿ RSS ತುಂಬಾ ಸಕ್ರಿಯವಾಗಿತ್ತು. ನನ್ನ ಬಂಧು ವಿನೋಬಾ ಅವರ ಭೂದಾನ ಚಳವಳಿಯ ಕಾರ್ಯಕರ್ತ ಶ್ರೀ ಸತ್ಯವ್ರತ ಅವರು ಜೈಲಿನಲ್ಲಿದ್ದರು. ಅವರ ಶ್ರೀಮತಿ ಡಾಕ್ಟರ್ ಲಕ್ಷ್ಮೀ ಅವರು ಭೂಗತ ಸಾಹಿತ್ಯದ ಹಂಚುವಿಕೆಯನ್ನು ಜೈಲಿನಲ್ಲಿ ರಹಸ್ಯವಾಗಿ ಮಾಡುತ್ತಿದ್ದರು. ಅದು ಎಲ್ಲೋ ರಹಸ್ಯವಾಗಿ ಮುದ್ರಣವಾಗಿ ಹತ್ತಾರು ಕೈ ಬದಲಾಗಿ ಇವರಿಗೆ ಬರುತ್ತಿತ್ತು. ಎಲ್ಲವೂ ಪೊಲೀಸರ ಕಣ್ಣು ತಪ್ಪಿಸಿ ನಡೆಯುತ್ತಿದ್ದ ಕಾರ್ಯಾಚರಣೆ. ತುರ್ತು ಪರಿಸ್ಥಿತಿ ಹೇರಿಕೆಯನ್ನು ವಿರೋಧಿಸುವ ಕೆಲವು ಬಣಗಳು ಹೀಗೆ ಕ್ರಿಯೇಟಿವ್ ಆಗಿದ್ದವು. ಇವರು ಮುದ್ರಿಸಿದ ಅಂತಹ ಭೂಗತ ಪತ್ರಿಕೆಯ ಒಂದೆರೆಡು ಸಂಚಿಕೆ ಅಂದರೆ ಬಿಡಿ ಹಾಳೆಗಳು ನಾನೂ ನೋಡಿದ್ದೆ. ವಾಕ್ಯ, ವ್ಯಾಕರಣ ಇಲ್ಲ. ಅದೇನೋ ಕೋಡ್ ವರ್ಡುಗಳು, ಅರ್ಥ ಆಗದೇ ಹಾಗೇ ಬಿಟ್ಟಿದ್ದೆ!

ಚುನಾವಣೆ ಘೋಷಣೆ ಆಯಿತು. ರಾಜಕೀಯ ಪಕ್ಷದ ನಾಯಕರು ಜೈಲಿನಿಂದ ಬಿಡುಗಡೆ ಹೊಂದಿದರು. ಬೆಂಗಳೂರು ಜೈಲಿನಲ್ಲಿದ್ದ ಸಣ್ಣ ಪುಟ್ಟ ನಾಯಕರೂ ಸಹ ನಮಗೆ ಹೀರೋಗಳಾಗಿದ್ದರು. ಅದರಲ್ಲಿ ಭದ್ರಾವತಿಯ ಒಬ್ಬರು ನಾಯಕರು ಗರಿ ಗರಿ ಜುಬ್ಬಾ, ಪೈಜಾಮ, ವೇಸ್ಟ್ ಕೋಟು ಧರಿಸಿ ಸೆಂಟ್ ಪೂಸಿಕೊಂಡು ಕಣ್ಣಿಗೆ ಕಾಡಿಗೆ ಸವರಿಕೊಂಡು ಜೈಲಿನಲ್ಲಿ ಹರಿಕತೆ ಮಾಡುತ್ತಿದ್ದ ಕತೆ ಆಗ ಒಂದು ಜನಪ್ರಿಯ ಸಂಗತಿ. ಇವರೇ ಸಿ ಎಂ ಇಬ್ರಾಹಿಂ. ಕರ್ನಾಟಕ ರಾಜಕೀಯದ ಒಂದು ವರ್ಣ ರಂಜಿತ ವ್ಯಕ್ತಿ. ರಾಮಾಯಣ ಮಹಾಭಾರತದ ಪ್ರಸಂಗಗಳನ್ನು ಹರಿಕತೆ ಧಾಟಿಯಲ್ಲಿ ಹೇಳುತ್ತಾ ಆಗಿನ ರಾಜಕೀಯ ವಿರೋಧಿಗಳನ್ನು ಹಾಸ್ಯದ ವಸ್ತುವನ್ನಾಗಿ ಮಾಡಿಕೊಂಡು ಒಳ್ಳೆಯ ವಾಗ್ಮಿ ಎಂದು ಹೆಸರು ಮಾಡಿದ್ದರು. ರಾಜಕೀಯದಲ್ಲಿ ಹಂತ ಹಂತವಾಗಿ ಮೇಲೆ ಮೇಲೆ ಹತ್ತಿದವರು. ದೇವೇಗೌಡರ ಜನತಾ ದಳದ ಅಧ್ಯಕ್ಷರೂ ಆಗಿದ್ದರು. ಬೆಂಗಳೂರಿನಲ್ಲಿ ಒಂದು ದೊಡ್ಡ ಗಲಭೆಯ ಹಿನ್ನೆಲೆ ಈ ಮನುಷ್ಯ. ಅದರ ಬಗ್ಗೆ ಒಂದು ಟಿಪ್ಪಣಿ..

೧೯೮೬ರ ಡಿಸೆಂಬರ್ ನಲ್ಲಿ ಡೆಕ್ಕನ್ ಹೆರಾಲ್ಡ್ ಇಂಗ್ಲಿಷ್ ಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ PKN ನಂಬೂದರಿ ಎನ್ನುವವರು ಬರೆದ ಮೊಹಮ್ಮದ್ ದಿ ಈಡಿಯಟ್ ಎನ್ನುವ ಕತೆ ಪ್ರಕಟವಾಯಿತು. ಇದರ ಕಥಾನಾಯಕ ಒಬ್ಬ ದಡ್ಡ ಹಾಗೂ ಅಂಗವಿಕಲ. ಕತೆಯಲ್ಲಿ ಸಂಸಾರದ ಕಡುಬಡತನ ಮುಂತಾದ ವಿವರಗಳು ಬಂದು ಅಂತ್ಯದಲ್ಲಿ ಇವನ ಆತ್ಮಹತ್ಯೆ ಒಂದಿಗೆ ಕತೆ ಮುಕ್ತಾಯ ಕಾಣುತ್ತದೆ.

ತಮ್ಮ ಧಾರ್ಮಿಕ ಗುರುವಿನ ಬಗ್ಗೆ ಅವಹೇಳನ ಆಗಿದೆ ಎಂದು ಈ ಕತೆ ಒಂದು ಸಮುದಾಯವನ್ನು ರೊಚ್ಚಿಗೆ ಎಬ್ಬಿಸುತ್ತದೆ. ಈ ಗಲಭೆಯಲ್ಲಿ ಹದಿನಾರು ಜನ ಅಮಾಯಕ ನಾಗರಿಕರು ಪೊಲೀಸರ ಗುಂಡಿಗೆ ಬಲಿಯಾಗುತ್ತಾರೆ; 180 ರಷ್ಟು ಜನರ ಬಂಧನ ಮತ್ತು ಇನ್ನೂರಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿರುತ್ತಾರೆ. ಈ ಪ್ರಕರಣದ ಹಿಂದೆ ಇಬ್ರಾಹಿಂ ಅವರ ಕೈವಾಡ ಮತ್ತು ಜನರನ್ನು ಪ್ರಚೋದಿಸಿದ ಸುದ್ದಿ ಆಗ ಎದ್ದು ಕೇಳಿಸುತ್ತಾ ಇತ್ತು. ಡೆಕ್ಕನ್ ಹೆರಾಲ್ಡ್ ಪತ್ರಿಕೆ ಸಾರ್ವಜನಿಕವಾಗಿ ಸಮುದಾಯದ ಕ್ಷಮೆ ಕೇಳಿತು ಮತ್ತು ನಂತರದ ದಿನಗಳಲ್ಲಿ ಸಮುದಾಯದ ವಿರುದ್ಧ ಒಂದೇ ಒಂದು ಪದ ಪ್ರಕಟಿಸಿಲ್ಲ!

(ಎಲ್.ಕೆ. ಅಡ್ವಾಣಿ)

ಮಿಕ್ಕ ಪತ್ರಿಕೆಗಳಿಗೆ ಇದು ಒಂದು ಪಾಠ ಆಯಿತು ಮತ್ತು ಸಮುದಾಯದ ವಿರುದ್ಧ ಯಾವುದೇ ಟೀಕೆ ಟಿಪ್ಪಣಿ ಮಾಡದೇ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿವೆ! ಕ್ರಿಮಿನಲ್ ಕೇಸುಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ವ್ಯಕ್ತಿಗಳ ಹೆಸರನ್ನು ಸಹ ಪ್ರಕಟಿಸದಿರುವ ಹೊಸ ಹಾದಿ ಈಚಿನದ್ದು…

ಮತ್ತೆ ದೇಶದ ರಾಜಕಾರಣಕ್ಕೆ..

ಜನವರಿ 1977 ರಲ್ಲಿ, ಗಾಂಧಿಯವರು ಹೊಸ ಚುನಾವಣೆಗಳಿಗೆ ಕರೆ ನೀಡಿದರು. ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.

ಅಧಿಕೃತವಾಗಿ, ತುರ್ತು ಪರಿಸ್ಥಿತಿಯನ್ನು 21 ಮಾರ್ಚ್ 1977 ರಂದು ತೆಗೆದುಹಾಕಲಾಯಿತು. ಚುನಾವಣೆಗೆ ಭರದಿಂದ ವಿರೋಧ ಪಕ್ಷಗಳು ತಯಾರಿ ನಡೆಸಿದವು. ಕಾಂಗ್ರೆಸ್ ಕೂಡ ತಯಾರಿ ಚೆನ್ನಾಗಿ ನಡೆಸಿತು. ಇಂದಿರಾಗಾಂಧಿ ಅವರಿಗೆ ಕೇಂದ್ರ ಗುಪ್ತ ಇಲಾಖೆ ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೇ ಗೆಲುವು ಸಿಗುತ್ತೆ ಅಂತ ವರದಿ ಕೊಟ್ಟಿತ್ತು. ಈ ವರದಿ ಆಧರಿಸಿಯೇ ಚುನಾವಣಾ ಘೋಷಣೆ ಆಗಿದ್ದು.

ವಿರೋಧ ಪಕ್ಷಗಳು ಒಗ್ಗೂಡಿದವು ಮತ್ತು ಸೈದ್ಧಾಂತಿಕವಾಗಿ ವಿಭಿನ್ನ ನಿಲುವು ವಿಭಿನ್ನ ಕಾರ್ಯಸೂಚಿ ಹೊಂದಿದ್ದ ಪಕ್ಷಗಳು ಸೇರಿ ಜನತಾ ಪಕ್ಷ ಎನ್ನುವ ಹೆಸರಿನ ಒಂದು ರಾಜಕೀಯ ಸಂಘಟನೆಯ ಹುಟ್ಟು ಹಾಕಿದವು. ಭಾರತೀಯ ಕಮ್ಯೂನಿಸ್ಟ್ ಪಾರ್ಟಿ ಇಂದಿರಾ ಗಾಂಧಿ ಅವರ ಬೆಂಬಲಕ್ಕೆ ನಿಂತಿತು. ಚುನಾವಣೆಯಲ್ಲಿ ತುರ್ತು ಪರಿಸ್ಥಿತಿಯ ಅತಿರೇಕದ ರೋಚಕ ಸಂಗತಿಗಳನ್ನು ಕಣ್ಣಿಗೆ ಕಟ್ಟುವಹಾಗೆ ಹೃದಯ ಹಿಂಡುವ ರೀತಿಯಲ್ಲಿ ವಿರೋಧ ಪಕ್ಷಗಳು ಬಿಂಬಿಸಿದವು. ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ಇಂದಿರಾ ಗಾಂಧಿ ಅವರು ನಿರೀಕ್ಷಿಸಿರದಿದ್ದ ಆಘಾತ ಅವರೆದುರು ಧುಮ್ ಎಂದು ಪ್ರತ್ಯಕ್ಷವಾಯಿತು.

ಜನರು ಗಾಂಧಿ ಮತ್ತು ಅವರ ಪಕ್ಷಕ್ಕೆ ಭಾರೀ ಸೋಲನ್ನು ನೀಡಿದರು. ಇಂದಿರಾ ಗಾಂಧಿ ಮತ್ತು ಅವರ ಮಗ ಸಂಜಯ ಗಾಂಧಿ ಇಬ್ಬರೂ ಚುನಾವಣೆಯಲ್ಲಿ ಸೋತರು. ಇಂದಿರಾ ಗಾಂಧಿ ವಿರುದ್ಧ ರಾಜನಾರಾಯಣ ಎನ್ನುವ ಸಮಾಜವಾದಿ ಪಕ್ಷದ ನಾಯಕ ಜಯಗಳಿಸಿದರು. ಜಾರ್ಜ್ ಫರ್ನಾಂಡಿಸ್ ಮುಜಾಫರ್ ನಗರದ ಜೈಲಿನಿಂದ ಸ್ಪರ್ಧಿಸಿ ಮೂರೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆಯಾದರು.

ಜನತಾ ಪಕ್ಷವು ಚುನಾವಣೆಯಲ್ಲಿ ಜಯ ಗಳಿಸಿತು ಮತ್ತು ಮೊರಾರ್ಜಿ ದೇಸಾಯಿ ಅವರು ಪ್ರಧಾನ ಮಂತ್ರಿಯಾಗಿ ಹೊಸ ಸರ್ಕಾರವನ್ನು ನಡೆಸಿದರು. ದೇಸಾಯಿ ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ.

(ಮೊರಾರ್ಜಿ ದೇಸಾಯಿ)

ಮೊರಾರ್ಜಿ ಅವರ ಬಗ್ಗೆ ಕೆಲವು ನೆನಪುಗಳು….

ಮೊರಾರ್ಜಿ ಅಂದರೆ ಆಗಿನ ಯುವಕರಿಗೆ ಅದೇನೋ ಒಂದು ರೀತಿಯ ಅಭಿಮಾನ. ಬಿಳಿ ಗರಿ ಗರಿ ಕಚ್ಚೆ ಪಂಚೆ ಅದರ ಮೇಲೆ ಅಷ್ಟೇ ಬಿಳಿಯ ಜುಬ್ಬಾ ಮತ್ತು ಅದರ ಮೇಲೆ ಒಂದು ದಂತದ ಬಣ್ಣದ ವೇಸ್ಟ್ ಕೋಟು, ತಲೆಗೆ ಒಂದು ಗಾಂಧಿ ಟೋಪಿ, ಕಾಲಿಗೆ ಕರಿಯ ಬಣ್ಣದ ಚಪ್ಪಲಿ ಇದು ಅವರ ಬಾಹ್ಯ ವೇಷ. ಅವರನ್ನು ಸಾರ್ವಜನಿಕ ಸಮಾರಂಭಗಳಲ್ಲಿ ವೇದಿಕೆ ಮೇಲೆ ನೋಡಿದ್ದೆ, ಹಿಂದೆ ಅವರು ಅರ್ಥಮಂತ್ರಿ ಆಗಿದ್ದಾಗ ರಾಜಾಜಿನಗರದ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿನ ಒಂದು ಕಾರ್ಯಕ್ರಮಕ್ಕೆ ಬಂದಿದ್ದಾಗ ನೋಡಿದ್ದೆ ಮತ್ತು ಅವರ ಭಾಷಣ ಕೇಳಿದ್ದೆ. ಮಂಗಳಾರತಿ ತಟ್ಟೆಗೆ ಪಕ್ಕದವರಿಂದ ನೋಟು ಕೇಳಿ ಪಡೆದು ಹಾಕಿದ್ದರು. ನೋಡಿ ನಾನು ದೇಶದ ಅರ್ಥಮಂತ್ರಿ, ನನ್ನ ಪರಿಸ್ಥಿತಿ ಇದು ಎಂದು ಜೋಕು ಮಾಡಿದ್ದರು! ಕುಳ್ಳ ಹುಟ್ಟು ಮೈ ಬೊಜ್ಜಿನದ್ದಲ್ಲ, ತೆಳು ದೇಹ, ಕನ್ನಡಕದ ಒಳಗೆ ತೀಕ್ಷ್ಣ ಕಣ್ಣು.. ಒಟ್ಟಿನಲ್ಲಿ ಅವರಲ್ಲೇನೋ ಒಂದು ಸೆಳೆತ ಇತ್ತು. ಅವರು ಆರ್ಥಮಂತ್ರಿ ಆಗಿದ್ದಾಗ ಗೋಲ್ಡ್ ಕಂಟ್ರೋಲ್ ಆಕ್ಟ್ ಎನ್ನುವ ಕಾನೂನು ತಂದಿದ್ದರು. ಅದೆಷ್ಟೋ ಕ್ಯಾರಟ್ ಮೇಲಿನ ಚಿನ್ನದ ಆಭರಣ ಮಾಡಬಾರದು ಎನ್ನುವ ಸ್ಥೂಲ ಅರ್ಥಬರುವ ಕಾನೂನು ಅದು. ಅದು ಜಾರಿ ಆದಾಗ ನಾವಿನ್ನೂ ಹೈಸ್ಕೂಲು ವಿದ್ಯಾರ್ಥಿಗಳು. ಏನು ಕಾನೂನು ಬಂದಿದೆ ಎನ್ನುವ ಸಂಪೂರ್ಣ ಅರಿವು ಇರಲಿಲ್ಲ. ಮನೆ ಮಂದಿ. ಸುತ್ತಮುತ್ತಲಿನ ಜನ ಹಾಗೂ ಸಭೆ ಸಮಾರಂಭಗಳಲ್ಲಿ ಸೇರಿದ ನಂಟರು ಇಷ್ಠರು ಇದರ ಬಗ್ಗೆ ಮಾತಾಡೋದು ಕೇಳಿದ್ದೆ. ಜತೆಗೆ ಅಕ್ಕಸಾಲಿಗ ತನ್ನ ಉದ್ಯೋಗ ಕಳೆದುಕೊಂಡ ಎನ್ನುವ ಮಾತು ಸಹ ಕೇಳಿದ್ದೆ. ಆಗ ಅದೊಂದು ಕ್ರಾಂತಿಕಾರಕ ತೀರ್ಮಾನ ಎನ್ನುವ ಹೆಸರೂ ಸಹ ಪಡೆದಿತ್ತು. ಮೊರಾರ್ಜಿ ಕಲೆಕ್ಟರ್ ಆಗಿದ್ದರಂತೆ ಅನ್ನುವ ಸುದ್ದಿ ಸಹ ಕೇಳಿದ್ದೆ. ನಾಲ್ಕು ವರ್ಷಕ್ಕೆ ಒಮ್ಮೆ ಇವರ ಹುಟ್ಟಿದ ದಿವಸ ಅನ್ನುವ ತಮಾಷೆ ಸಹ ಕೇಳಿದ್ದೆ. ಫೆಬ್ರವರಿ 29ಇವರು ಹುಟ್ಟಿದ ದಿವಸ. ಪ್ರತಿ ಲೀಪ್ ಇಯರ್‌ನಲ್ಲಿ ಮಾತ್ರ ಫೆಬ್ರವರಿ ತಿಂಗಳಲ್ಲಿ 29. ದಿವಸ….! ಅದರಿಂದ ನಾಲ್ಕು ವರ್ಷಕ್ಕೆ ಒಮ್ಮೆ ಇವರು ಹುಟ್ಟಿದ ದಿವಸ!

ಪ್ರಧಾನಿ ಆದನಂತರ Too much Security is Insecurity ಅನ್ನುವ ಮಾತು ಇವರು ಯಾವುದೋ ಸನ್ನಿವೇಶದಲ್ಲಿ ಹೇಳಿದ್ದರು. ಒಂದು ವಿಮಾನದ ಆಕ್ಸಿಡೆಂಟ್ ಆಗುತ್ತೆ. ಅದರಲ್ಲಿದ್ದ ಕೆಲವರು ಸಾವನ್ನು ಅಪ್ಪುತ್ತಾರೆ. ಈ ಮೊರಾರ್ಜಿ ದೇಸಾಯಿ ವಿಮಾನದ ಅವಶೇಷಗಳ ಮಧ್ಯದಿಂದ ಎದ್ದು ಸಲೀಸಾಗಿ ನಡೆದುಕೊಂಡು ಬರುತ್ತಾರೆ…! ಆಗ ಅವರಿಗೆ ಎಂಭತ್ತೆರಡು ಅಥವ ಹೆಚ್ಚು. …

ಇನ್ನೊಂದು ಮೊರಾರ್ಜಿ ಅವರ ಬಗ್ಗೆ ಅತಿ ಚರ್ಚಿತ ಸುದ್ದಿ ಅಂದರೆ ಸ್ವಮೂತ್ರ ಪಾನ ಅಥವಾ ಚಿಕಿತ್ಸೆ. Auto urine therapy ಎಂದು ಈ ಚಿಕಿತ್ಸೆ ಆಗ ಹೆಸರು ಮಾಡಿತ್ತು. ಈ ವಿಷಯಕ್ಕೆ ಬರುವ ಮೊದಲು ಒಂದು ಪುಸ್ತಕದ ಬಗ್ಗೆ ಕೆಲವು ವಿಷಯ.

ಸರ್ವೋದಯ ಸಂಸ್ಥೆ ಅಥವಾ ಬೆಳಗಾಂ ಅಥವಾ ಧಾರವಾಡದ ಪಬ್ಲಿಕೇಶನ್ ಸಂಸ್ಥೆಯ ಒಂದು ಪುಸ್ತಕ ನೋಡಿದ್ದೆ. ಬಹುಶಃ ಅನಂತ ಅನ್ನುವವರು ಅದರ ಲೇಖಕರು. ಅನಂತ ಹೆಸರಿನ ನಂತರ ಯಾವುದೋ ಸರ್ ನೇಮ್ ಇತ್ತು. ಪುಸ್ತಕದ ಹೆಸರು ಸುದೀರ್ಘ ಆರೋಗ್ಯಕ್ಕಾಗಿ ಸ್ವಮೂತ್ರ ಚಿಕಿತ್ಸೆ ಎಂದು ಅದರ ಹೆಸರು ಇರಬೇಕು. ಸುಮಾರು ನೂರೈವತ್ತು ಪುಟಗಳ ಪುಸ್ತಕ ಅದು. ಅದರಲ್ಲಿ ಸ್ವಮೂತ್ರಚಿಕಿತ್ಸೆಯ ಸಂಪೂರ್ಣ ವಿವರಗಳು ಇದ್ದವು. ಅದರ ಪ್ರಕಾರ ಸ್ವಮೂತ್ರ ಪಾನ ಮಾಡುವವರಿಗೆ ಯಾವುದೇ ರೀತಿಯ ಖಾಯಿಲೆ ಕಸಾಲೆ ಬರುವುದಿಲ್ಲ. ಇದಕ್ಕೆ ಪೂರಕ ಎಂಬಂತೆ ಪುಸ್ತಕದ ಕೊನೆ ಐವತ್ತು ಪುಟಗಳು ಇಂತಹ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದ ಹಲವು ವೃದ್ಧರ (ಅನುಭವ ಹಂಚಿಕೊಂಡಿದ್ದವರು ಅರವತ್ತು ಪ್ಲಸ್ ನವರು) ಅನುಭವ. ಪುಸ್ತಕ ಓದಿದರೆ ಅದನ್ನು ಪ್ರಯೋಗಿಸಬೇಕು ಅನ್ನುವ ಟೆಂಪ್ಟ್ ಹುಟ್ಟಿಸುವ ಲೇಖನಗಳು! ಯಾವ ರೋಗಕ್ಕೆ ಯಾವ ರೀತಿ ಚಿಕಿತ್ಸೆ ಮಾಡಿಕೊಳ್ಳಬೇಕು ಎನ್ನುವ ವಿವರ. ಚರ್ಮ ರೋಗ ಅದರಲ್ಲೂ ತೊನ್ನು ಇದ್ದ ಒಬ್ಬರು ನೀಡಿದ್ದ ವಿವರಣೆ(ಇದು ಇನ್ನೂ ನನ್ನ ನೆನಪಿನಲ್ಲಿ ಇದೆ) ಸುಮಾರು ಈ ಧಾಟಿಯಲ್ಲಿತ್ತು..
“… ಬೆಳಿಗ್ಗೆ ಎದ್ದ ಕೂಡಲೇ ಬರುವ ಮೂತ್ರದ ಮೊದಲ ಒಂದು ಸ್ವಲ್ಪ ಭಾಗ ಬಿಟ್ಟು ಮಿಕ್ಕಿದ್ದು ಮೂರು ನಾಲ್ಕು ಲೋಟ ಹಿಡಿದು ಇಟ್ಟುಕೊಳ್ಳೋದು. ಒಂದು ಲೋಟ ಸ್ವಲ್ಪ ಸ್ವಲ್ಪ ನಿಧಾನಕ್ಕೆ ಗುಟುಕು ಗುಟುಕು ಕುಡಿಯೋದು. ಮಿಕ್ಕಿದ್ದನ್ನು ಅಂಗೈಗೆ ಸುರಿದುಕೊಂಡು ಇಡೀ ದೇಹಕ್ಕೆ ಹಚ್ಚಿಕೊಳ್ಳೋದು, ಹೀಗೆ ಎರಡು ತಿಂಗಳು ಮಾಡಿದೆ.. ಸಂಪೂರ್ಣ ಗುಣ ಆಗಿದೆ…. ”

ಇಂತಹ ಸುಮಾರು ಅನುಭವಗಳು ಪುಸ್ತಕದಲ್ಲಿ ಇದ್ದವು. ಮೊದಲು ಈ ಪುಸ್ತಕ ಓದಿದಾಗ ಸೈನ್ಸ್ ಇಷ್ಟು ಮುಂದುವರಿದಿರಬೇಕಾದ ಸಮಯದಲ್ಲಿ ಸಹ ಇಂತಹ ಚಿಕಿತ್ಸೆ ಮಾಡಿಕೊಳ್ಳುವವರು ಇದ್ದಾರಾ ಅನ್ನುವ ಸಂಶಯ ಕಾಡಿತ್ತು. ಕಾರ್ಖಾನೆಯಲ್ಲಿ ನನಗೆ ಒಬ್ಬರು ಕಟ್ಟಾ RSS ವರ್ಕರ್ ಬಾಬುರಂಗ ಕಾಮತ್ ಅಂತ ಫ್ರೆಂಡು. ಅವರ ಹತ್ತಿರ ಚರ್ಚೆ ಮಾಡದೇ ಇರುವ ವಿಷಯವೇ ಇರಲಿಲ್ಲ ಅನ್ನಬೇಕು. ಸುಮಾರು ಸಲ ಅವರನ್ನು ವಾದದಲ್ಲಿ ವೀಕ್ ಮಾಡಬೇಕು ಅನ್ನುವ ಯೋಜನೆಯಿಂದಲೇ ಚರ್ಚೆ ನಡೀತಿತ್ತು. ಅವರೆದುರು ಸ್ವ ಮೂತ್ರ ಪಾನದ ವಿಷಯ ತೆಗೆದೆ. ಅವರು ತುಂಬಾ ಸಹಜವಾಗಿ ಹೌದು ಅದರಲ್ಲೇನು ವಿಶೇಷ……? ಅಂದರು!

ಆಮೇಲೆ ಅವರೇ ಈ ಚಿಕಿತ್ಸೆ ಬಗ್ಗೆ ಸುಮಾರು ವಿವರ ನೀಡಿದರು ಮತ್ತು ಅವರೂ ಸಹ ಸ್ವ ಮೂತ್ರ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಅದರಿಂದ ಅವರಿಗೆ ಬಿಪಿ, ಶುಗರ್ ನಿಯಂತ್ರಣಕ್ಕೆ ಬಂದಿದೆ.. ಅವರ ಊರಿನಲ್ಲೂ ಸುಮಾರು ಜನ ಇದರ ಪ್ರಯೋಜನ ಪಡೆಯುತ್ತಾ ಇದ್ದಾರೆ. ನೀವೂ ಬೇಕಾದರೆ ಟ್ರೈ ಮಾಡಿ, ಹದಿನೈದು ದಿವಸ ಆದಮೇಲೆ ನಿಮ್ಮ ಬಾಡಿಯಲ್ಲಿನ ಚೇಂಜ್ ನಿಮಗೇ ತಿಳಿಯುತ್ತೆ…. ಅದರಲ್ಲೇನೂ ಅಸಹ್ಯ ಪಸಹ್ಯ ಪಡಬಾರದು. ಉತ್ತರದ ಕಡೆ ಕೆಲವು ಸಾಧುಗಳು ಅವರ ಮಲ ಅವರೇ ತಿನ್ನುತ್ತಾರೆ, ಸಾಧನೆಗೆ ಅಂತಲೇ… ಅಂತ ಹೇಳಿದ್ದರು!

ಸತ್ಯಕಾಮರ ಕೆಲವು ಪುಸ್ತಕ ಓದಿದ್ದೆ. ಅದರಲ್ಲಿನ ಕೆಲವು ಸಾಧುಗಳು ಅಘೋರಿಗಳು ಅಥವಾ ನಾಗಾ ಗಳು ಈ ಪ್ರಯೋಗ ಮಾಡುವುದು ಓದಿದ್ದೆ. ಸರಿ ಅಂತ ತಲೆ ಆಡಿಸಿದೆ.

ಮತ್ತೆ ಮೊರಾರ್ಜಿ ದೇಸಾಯಿ ಅವರತ್ತ… ಚುನಾವಣೆಯಲ್ಲಿ ಜನತಾ ಪಕ್ಷ ಗೆದ್ದಿತು. ನಾಯಕತ್ವಕ್ಕೆ ಕಿತ್ತಾಟ ನಡೆದು ಯಾರೂ ತಮ್ಮ ಪಟ್ಟು ಹಕ್ಕು ಬಿಟ್ಟುಕೊಡಲು ತಯಾರು ಇರಲಿಲ್ಲ. ಕೊನೆಗೆ ಜಯಪ್ರಕಾಶ್ ನಾರಾಯಣ್ ಅವರು ಮಧ್ಯಸ್ಥಿಕೆ ವಹಿಸಿದರು ಮತ್ತು ಪ್ರಧಾನಿ ಹುದ್ದೆಗೆ ಪ್ರಬಲ ಆಕಾಂಕ್ಷಿ ಆಗಿದ್ದ ಮೊರಾರ್ಜಿ ದೇಸಾಯಿ ಪ್ರಧಾನಿ ಆದರು. ಆಗ ಅವರಿಗೆ ಎಂಬತ್ತು ಪ್ಲಸ್. ಈ ವಯಸ್ಸಿನಲ್ಲೂ ಹಟ ಹಿಡಿದು ಪ್ರಧಾನಿ ಹುದ್ದೆ ವಹಿಸಿಕೊಂಡ ಅವರ ಬಗ್ಗೆ ಒಂದು ಕಡೆ ಮೆಚ್ಚುಗೆ ಆದರೆ ಮತ್ತೊಂದು ಕಡೆ ಅಸಹ್ಯ. ಮೆಚ್ಚುಗೆಗೆ ಕಾರಣ ಈ ವಯಸ್ಸಲ್ಲಿ ಸಹ ಅಂತಹ ಜೀವನೋತ್ಸಾಹ ಇವರಲ್ಲಿದೆಯಲ್ಲಾ ಅಂತ. ಅಸಹ್ಯ ಯಾಕೆ ಅಂದರೆ ಒಂದು ಕಾಲು ಆಗಲೇ ಕಾಡಿನಲ್ಲಿದೆ, ಊರು ಹೋಗು ಅನ್ನುತ್ತಿದೆ ಕಾಡು ಬಾ ಅನ್ನುತ್ತಿದೆ, ತೆಪ್ಪಗೆ ಚಿಕ್ಕವರಿಗೆ ಜಾಗ ಬಿಟ್ಟು ರಾಮಾ ಕೃಷ್ಣಾ ಅಂತ ಮನೆಯಲ್ಲಿ ಇರಬಾರದೇ ಅಂತ.

ಜಯಪ್ರಕಾಶ್ ನಾರಾಯಣ್ ಅವರು ಜೈಲಿನಲ್ಲಿದ್ದಾಗ ಅವರ ಕಿಡ್ನಿ ಹಾಳಾಗುವ ರೀತಿ ಅವರಿಗೆ ವೈದ್ಯ ಚಿಕಿತ್ಸೆ ನೀಡಲಾಯಿತು ಎನ್ನುವ ಒಂದು ಸುದ್ದಿ ಚಾಲನೆಯಲ್ಲಿತ್ತು. ಸಿ ಆರ್ ಸಿಂಹ ಒಂದು ಚಲನಚಿತ್ರ ಕನ್ನಡ ಭಾಷೆಯಲ್ಲಿ ತೆಗೆದರು. ಚಿತೆಗೂ ಚಿಂತೆ ಎಂದು ಅದರ ಹೆಸರು. ಅದರಲ್ಲಿ ಒಂದು ಪಾತ್ರ ಮೈಕೈ ಎಲ್ಲೆಡೆ ಟ್ಯೂಬ್ ನಳಿಕೆ ರಬ್ಬರ್ ಪೈಪ್ ಅಳವಡಿಸಿಕೊಂಡು ಮಂಚದ ಮೇಲೆ ಮಲಗಿರುತ್ತೆ ಮತ್ತು ಆ ಸ್ಥಿತಿಯಲ್ಲೇ ದೇಶದ ರಾಜಕೀಯ ಕಂಟ್ರೋಲ್ ಮಾಡುತ್ತೆ. ನೋಡಿದ ಕೂಡಲೇ ಇದು ಜಯಪ್ರಕಾಶ್ ನಾರಾಯಣ್ ಅವರು ಎಂದು ಹೇಳಬಹುದು! ಚಿತೆಗೂ ಚಿಂತೆ ಬಗ್ಗೆ ಮುಂದೆ ಹೇಳುತ್ತೇನೆ. ಮೊರಾರ್ಜಿ ದೇಸಾಯಿ ಅವರ ಮೇಲೆ ಒಂದು ರೀತಿ ಅಭಿಮಾನ ಬೆಳೆಯಲು ಇದೂ ಸಹ ಒಂದು ಕಾರಣ.

ಈಗ ಮತ್ತೆ ಸ್ವ ಮೂತ್ರ ಚಿಕಿತ್ಸೆಗೆ. ಮೊರಾರ್ಜಿ ದೇಸಾಯಿ ಅವರು ಈ ಚಿಕಿತ್ಸೆ ಮಾಡಿಕೊಳ್ಳುತ್ತಾರೆ ಎಂದು ಅತಿ ಪ್ರಚಾರ ಪಡೆಯಿತು. ಈ ಅಭ್ಯಾಸದ ಮೇಲೆ ನಮ್ಮ ಮಾಧ್ಯಮಗಳು ಹಲವು ಅತಿ ರಂಜಿತ ಬರಹಗಳನ್ನು ಪ್ರಕಟಿಸಿದವು. ಮೊರಾರ್ಜಿ ದೇಸಾಯಿ ಅವರು ಫಾರಿನ್ ಟೂರು ಹೋದಾಗ ಹೇಗೆ ಈ ಪಾನ ಕಾರ್ಯ ನಡೆಸಿದರು ಎನ್ನುವ ಹಲವು ವಿಡಂಬನೆಯ ಬರಹಗಳು ಅಚ್ಚು ಕಂಡವು. ಅಮೆರಿಕದ ಅಧ್ಯಕ್ಷರ ಜತೆ ನಡೆದ ಒಂದು ಸಂವಾದದಲ್ಲಿ ಇವರ ಕೈಲಿ ಒಂದು ಗಾಜಿನ ಲೋಟ ಇರುತ್ತೆ, ಅಮೆರಿಕದ ಅಧ್ಯಕ್ಷರ ಕೈಲೂ ಅದೇ ರೀತಿಯ ಒಂದು ಲೋಟ ಇರುತ್ತೆ. ಇಬ್ಬರೂ ಮಾತು ಆಡಬೇಕಾದರೆ ಮೇಜಿನ ಮೇಲಿನ ಲೋಟ ಅದಲ್ ಬದಲು ಆಗುತ್ತೆ. ಅಮೆರಿಕದ ಅಧ್ಯಕ್ಷರು ಒಂದು ಗುಟುಕು ಹೀರಿ ವಯಕ ಅನ್ನಲು ಬಾತ್ ರೂಮಿಗೆ ಓಡುತ್ತಾರೆ. ಮೊರಾರ್ಜಿ ಪಾಪ ನನ್ನ ಇಂದಿನ ಡ್ರಿಂಕ್ ಮಿಸ್ ಆಯಿತು ಎಂದು ಬೇಜಾರಿನಿಂದ ಅವರ ಸೂಟ್‌ಗೆ ಬೇಸರದಿಂದ ನಡೆಯುತ್ತಾರೆ. ಇಂತಹ ಹಾಸ್ಯ ಲೇಖನಗಳು ಅಸಂಖ್ಯಾತ. ಹೆಚ್ಚಾಗಿ ಇಂಗ್ಲಿಷ್ ಭಾಷೆಯಲ್ಲಿ ಬಂದವು. ಕೆಲವರಿಗೆ ಇದು ತಲೆ ಹಗೂರ ಮಾಡಿಕೊಳ್ಳುವ ಒಂದು ಸಾಧನ ಆದರೆ ಸರ್ಕಾರಕ್ಕೆ ಭಾರಿ ಇರುಸು ಮುರಿಸಿನ ಸಂಗತಿ. ಆದರೆ ಬಿಸಿ ತುಪ್ಪ ಉಗುಳುವ ಹಾಗಿಲ್ಲ, ನುಂಗುವ ಹಾಗೂ ಇಲ್ಲ.

ಸರ್ಕಾರದ ಅಂಗ ಪಕ್ಷಗಳ ನಡುವೆ ಕಿತ್ತಾಟ ನಡೆಯುತ್ತಲೇ ಇತ್ತು. ಕೊನೆಗೆ ಇದು ವಿಕೋಪಕ್ಕೆ ಹೋಗಿ ದೇಶದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಬಿದ್ದು ಹೋಯಿತು. ಇಂದಿರಾ ಗಾಂಧಿ ಅವರು ಈ ಸರ್ಕಾರವನ್ನು ಕಿಚಡಿ ಸರ್ಕಾರ ಎಂದು ಕರೆದಿದ್ದು ಅನ್ವರ್ಥ ಆಯಿತು!

ಇನ್ನೂ ಇದೆ