ಮೃದುಭಾಷಿ ಮಹಾದೇವಪ್ಪನವರ ವ್ಯಕ್ತಿತ್ವದ ಒಂದು ಮಹತ್ವದ ಅಂಶ ಎಂದರೆ, ಅವರು ಯಾವ ಕಾಲಕ್ಕೂ ಹೊಸದನ್ನು ಬಯಸುವವರು. ತಮ್ಮದೇ ಆದ ವಿಚಾರಕ್ಕೆ ಅಂಟಿಕೊಂಡವರಲ್ಲ. ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ತಮಗಿಂತಲೂ ಬೇರೆಯವರು ಚೆನ್ನಾಗಿ ತಿಳಿಸಿದರೆ ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವಂಥ ಸುಸಂಸ್ಕೃತರು. ಅವರ ಬಗ್ಗೆ ನನಗಿರುವ ಬಹುದೊಡ್ಡ ಆಕರ್ಷಣೆ ಎಂದರೆ ಇದೇ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 97ನೇ ಕಂತು ನಿಮ್ಮ ಓದಿಗೆ
ಡಾ. ಎನ್.ಜಿ. ಮಹಾದೇವಪ್ಪ ಅವರ “ವಚನೋಕ್ತ ಲಿಂಗಾಯತ, ಆಗಮೋಕ್ತ ವೀರಶೈವ” ಪುಸ್ತಿಕೆ ನನ್ನನ್ನು ಬಹಳ ಆಕರ್ಷಿಸಿತು. ಆ ಪುಸ್ತಿಕೆ ಬಂದ ಹೊಸದರಲ್ಲಿ ಅವರನ್ನು ನೋಡುವ ತವಕ ಹೆಚ್ಚಾಯಿತು. ಆಗ ನಾನು ಬೀದರಲ್ಲಿ ಇದ್ದೆ. ಧಾರವಾಡಕ್ಕೆ ಬಂದ ಕೂಡಲೆ ಅವರನ್ನು ನೋಡಲು ಹೋದೆ.
ಅರ್ಧ ಶತಮಾನದಷ್ಟು ಹಿಂದೆಯೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ವಿದ್ಯಾರ್ಥಿಯಾಗಿದ್ದೆ. ಅವರು ತತ್ತ್ವಜ್ಞಾನದ ಪ್ರಾಧ್ಯಾಪಕರಾಗಿದ್ದರಿಂದ ಮತ್ತು ಅವರ ವಿಭಾಗ ಮುಖ್ಯ ಕಟ್ಟಡದಲ್ಲಿ ಇದ್ದ ಕಾರಣ ಹಾಗೂ ಅವರು ಎಲೆಯ ಮರೆಯ ಕಾಯಿಯ ಹಾಗೆ ಬದುಕುವ ಸ್ವಭಾವದವರಾಗಿದ್ದರಿಂದ, ಅಲ್ಲದೆ ಕಲಿಯುವಾಗಿನ ನನ್ನ ತಾಪತ್ರಯಗಳಿಂದ ಅವರ ಬಗ್ಗೆ ತಿಳಿದುಕೊಳ್ಳಲಿಕ್ಕಾಗಲಿಲ್ಲ.
1975ರಲ್ಲಿ ಕನ್ನಡ ವಿಭಾಗದಿಂದ ವಿದ್ಯಾರ್ಥಿ ಭಾರತಿ ತ್ರೈಮಾಸಿಕ ಪತ್ರಿಕೆ ಡಾ. ಎಂ.ಎಂ. ಕಲಬುರ್ಗಿ ಅವರ ಸಂಪಾಕತ್ವದಲ್ಲಿ ಪ್ರಾರಂಭವಾಯಿತು. ಅದರಲ್ಲಿ ನನ್ನ ‘ಸಾಹಿತ್ಯ ಮತ್ತು ಸಮಾಜ’ ಲೇಖನ ಮೊದಲ ಸಂಚಿಕೆಯಲ್ಲಿ ಮೊದಲ ಲೇಖನವಾಗಿ ಪ್ರಕಟವಾಯಿತು. ಆಗ ಲೇಖನದ ಒಂದು ಭಾಗ ಹೀಗೆ ಇದೆ: “ಬಸವಣ್ಣನವರ ತೀವ್ರ ಸಂವೇದನೆ ಹಾಗೂ ಹೊಸ ಸಮಾಜವನ್ನು ಕಟ್ಟುವ ಲವಲವಿಕೆಗಳ ಹಿನ್ನೆಲೆಯಲ್ಲಿ ಸಮಾಜ ಪರಿವರ್ತನೆಯ ಕಾರ್ಯ ಅಪಕ್ವ ಸ್ಥಿತಿಯಲ್ಲೇ ನಡೆಯಿತು. ಹರಳಯ್ಯ ಮಧುವಯ್ಯರ [ಮಕ್ಕಳ ಮದುವೆಯ] ಪ್ರಸಂಗ ಅದಕ್ಕೆ ನಾಂದಿಯಾಯಿತು. ಅಷ್ಟೇ ಅಲ್ಲ ದುರಂತ ಅಂತ್ಯವೂ ಆಯಿತು. ಇದನ್ನೇ ಕಾಯುತ್ತ ಕುಳಿತ ಮೇಲು ವರ್ಗದವರು ಮುಂದೆಂದೂ ಶರಣರು ಕ್ರಾಂತಿಕಾರಿಯಾಗಿ ಉಳಿಯದ ಹಾಗೆ ತುಳಿದರು. ವೀರಶೈವರ ಹೆಸರಲ್ಲಿ ಒಳಹೊಕ್ಕು ಅದಕ್ಕೆ ಹೊಸ ಜಾತಿಯ ಬಣ್ಣ ಬಳಿದರು. ಅಷ್ಟೇ ಅಲ್ಲ, ಅಲ್ಲಿಯೂ ನೂರೆಂಟು ಒಳಜಾತಿಗಳನ್ನು ಮಾಡಿ ಹಳೆಯ ರೀತಿನೀತಿಗಳನ್ನೇ ತುಂಬಿದರು.”
ಕಳೆದ 50 ವರ್ಷಗಳಿಂದ ನನ್ನ ಚಿಂತನಾ ಕ್ರಮ ಇದೇ ಆಗಿದೆ. ಆದರೆ ಅನೇಕ ಲಿಂಗಾಯತ ವಿದ್ವಾಂಸರು ವೀರಶೈವವನ್ನೇ ಮುಂದುವರಿಸಿದರು. ಹಳೆ ಮೈಸೂರು ಕಡೆಯ ಎನ್. ಜಿ. ಮಹಾದೇವಪ್ಪ ಅವರಿಗೆ ಆ ಪ್ರದೇಶದಲ್ಲಿನ ರೂಢಿ ಪ್ರಕಾರ ಲಿಂಗಾಯತ ಮತ್ತು ವೀರಶೈವ ಸಮಾನಾರ್ಥಕ ಪದಗಳಾಗಿದ್ದವು. ಆದರೆ ಉತ್ತರ ಕರ್ನಾಟಕದ ಲಿಂಗಾಯತರಿಗೆ ಅವು [ಒಳರ್ಥದಲ್ಲಿ] ಸಮಾನಾರ್ಥಕ ಪದಗಳಾಗದೆ ವರ್ಗ ಸಂಬಂಧಿ ಪದಗಳಾದವು. ರೈತಾಪಿ ಜನರು, ಬಡವರು, ನಿರಕ್ಷರಿಗಳು, ವಿವಿಧ ಕಾಯಕ ಜೀವಿಗಳು, ಸಣ್ಣ ವ್ಯಾಪಾರಿಗಳು ಲಿಂಗಾಯತರಾಗಿ ಉಳಿದರು. ಶಿಕ್ಷಣ ಕಲಿತು ಉನ್ನತ ಹುದ್ದೆ ಪಡೆದವರು, ದೊಡ್ಡ ವ್ಯಾಪಾರಿಗಳು, ಪ್ರಾಧ್ಯಾಪಕರು, ಉನ್ನತ ಅಧಿಕಾರಿಗಳು ಮುಂತಾದವರಿಗೆ ವೀರಶೈವ ಆಕರ್ಷಿಸಿತು. ವೀರಶೈವರೆಂದರೆ ಗೌರವಾನ್ವಿತರು ಎಂಬ ಭಾವ ಅವರಲ್ಲಿ ಮೂಡಿತು. ಹೀಗಾಗಿ ಅವರ ಪಾಲಕರು ಲಿಂಗಾಯತರಾಗಿ ಉಳಿದರೆ ಅವರು ವೀರಶೈವರಾಗಿ ಬೆಳೆದರು.
ಮಹಾದೇವಪ್ಪ ಅವರು ಇದನ್ನು ಮೀರಿ “ವಚನೋಕ್ತ ಲಿಂಗಾಯತ, ಆಗಮೋಕ್ತ ವೀರಶೈವ” ಎಂದು ಪುಸ್ತಿಕೆ ಬರೆದದ್ದು ನನಗೆ ರೋಮಾಂಚನವನ್ನುಂಟು ಮಾಡಿತು. ಈ ಕಾರಣದಿಂದಲೇ ಅವರ ಮನೆ ಹುಡುಕಿಕೊಂಡು ಹೋಗಿ ಭೇಟಿಯಾದೆ. (ಈ ನನ್ನ ಸಂತೋಷ ಕುರಿತು ಕಲಬುರ್ಗಿ ಸರ್ಗೆ ಹೇಳಿದೆ. ಮಹಾದೇವಪ್ಪನವರು ‘ವಚನೋಕ್ತ ವೀರಶೈವ, ಆಗೋಮೋಕ್ತ ವೀರಶೈವ’ ಎಂದು ಬರೆದಿದ್ದರು. ‘ವಚನೋಕ್ತ ವೀರಶೈವ ಬೇಡ, ವಚನೋಕ್ತ ಲಿಂಗಾಯತ ಇರಲಿ’ ಎಂದು ತಾವು ತಿಳಿಸಿದ್ದಾಗಿ ಹೇಳಿದರು. ಜೀವಿತದ ಕೊನೆಯ ದಶಕಗಳಲ್ಲಿ ಕಲಬುರ್ಗಿ ಅವರು ವೀರಶೈವ ಬಿಟ್ಟು ಲಿಂಗಾಯತಕ್ಕೆ ಹೊರಳಿದ್ದರು.)
ಮೃದುಭಾಷಿ ಮಹಾದೇವಪ್ಪನವರ ವ್ಯಕ್ತಿತ್ವದ ಒಂದು ಮಹತ್ವದ ಅಂಶ ಎಂದರೆ, ಅವರು ಯಾವ ಕಾಲಕ್ಕೂ ಹೊಸದನ್ನು ಬಯಸುವವರು. ತಮ್ಮದೇ ಆದ ವಿಚಾರಕ್ಕೆ ಅಂಟಿಕೊಂಡವರಲ್ಲ. ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ತಮಗಿಂತಲೂ ಬೇರೆಯವರು ಚೆನ್ನಾಗಿ ತಿಳಿಸಿದರೆ ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವಂಥ ಸುಸಂಸ್ಕೃತರು. ಅವರ ಬಗ್ಗೆ ನನಗಿರುವ ಬಹುದೊಡ್ಡ ಆಕರ್ಷಣೆ ಎಂದರೆ ಇದೇ.
ಅವರ ಇನ್ನೊಂದು ದೊಡ್ದ ಗುಣ ಎಂದರೆ ಬರವಣಿಗೆ ತಿದ್ದುವುದು, ಅದನ್ನು ಇಂಗ್ಲಿಷ್ಗೆ ಭಾಷಾಂತರಿಸುವುದು ಮುಂತಾದವುಗಳಿಗಾಗಿ ಯಾರಾದರೂ ಮನವಿ ಮಾಡಿದರೆ, ಆರೋಗ್ಯ ಕೈಕೊಡುತ್ತಿರುವ ಈ ವೃದ್ಧಾಪ್ಯದಲ್ಲೂ ಸಹಾಯ ಹಸ್ತ ಮುಂದೆ ಚಾಚುತ್ತ ಶ್ರಮವಹಿಸಿ ಮಾಡಿಕೊಡುವ ಉದಾತ್ತ ಭಾವವುಳ್ಳವರು.

(ಎನ್.ಜಿ. ಮಹಾದೇವಪ್ಪ ಅವರಿಗೆ ಅರ್ಪಿಸಿದ “ದರ್ಶನ ದೀಪ್ತಿ” ಅಭಿನಂದನಾ ಗ್ರಂಥದ ಬಿಡುಗಡೆ ಸಮಾರಂಭ)
ಅವರೆಂದೂ ಹಣಕ್ಕಾಗಿ, ಪ್ರಶಸ್ತಿಗಾಗಿ, ಕೀರ್ತಿಗಾಗಿ ಮನಸ್ಸು ಮಾಡಿದವರಲ್ಲ. ಎಲೆಯ ಮರೆಯ ಕಾಯಿಯಂತೆ ಬದುಕಿದವರು.ಸಮಾಧಾನಕರವಾದ ಅವರ ಮಾತುಗಳು ನೇರ ಹಾಗೂ ಸ್ಪಷ್ಟವಾಗಿರುತ್ತವೆ.
ಲಿಂಗಾಯತ ಧರ್ಮದ ಬಗ್ಗೆ ಅವರು ಕನ್ನಡ ಮತ್ತು ಇಂಗ್ಲಿಷಲ್ಲಿ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ‘ಲಿಂಗಾಯತರು ವೀರಶೈವರಲ್ಲ, ಲಿಂಗಾಯತರು ಹಿಂದೂಗಳಲ್ಲ ಎಂದು ಬರೆದಿರುವಿರಿ. ನೀವೀಗ ಇನ್ನೊಂದು ಪುಸ್ತಕ ಬರೆಯಬೇಕುʼ ಎಂದೆ. ಅದಕ್ಕೆ ಅವರು ಯಾವ ಪುಸ್ತಕ ಎಂದರು. ‘ಲಿಂಗಾಯತರು ಲಿಂಗಾಯತರಲ್ಲ’ ಎಂದು ಬರೆಯಲು ಹೇಳಿ ನಕ್ಕೆ. ಅವರೂ ನಗುತ್ತ ‘ಹೌದು ಬರೆಯಬೇಕು’ ಎಂದರು. ಬಸವ ಪ್ರಣೀತ ಲಿಂಗಾಯತ ದರ್ಶನ ಅತ್ಯುನ್ನತಮಟ್ಟದ್ದಾಗಿದೆ. ಆದರೆ ಬಹುಪಾಲು ಲಿಂಗಾಯತರು ಆ ಕಡೆ ಗಮನ ಹರಿಸದಿರುವುದು ನಮ್ಮಿಬ್ಬರ ನೋವಾಗಿದೆ. ಕಲಬುರ್ಗಿ ಸರ್ ಆ ನೋವಿನೊಂದಿಗೆ ಹೋದರು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಲಿಂಗಾಯತದ ಅನನ್ಯತೆಯ ಬಗ್ಗೆ ಗಮನ ಹರಿಸುತ್ತಿರುವುದು ಸಮಾಧಾನದ ವಿಚಾರವಾಗಿದೆ. ಅದಕ್ಕೆ ಮುಖ್ಯ ಕಾರಣ ಕಲಬುರ್ಗಿ ಸರ್ ಬಲಿದಾನ.
ಎನ್.ಜಿ. ಮಹಾದೇವಪ್ಪ ಅವರು 1937ನೇ ನವೆಂಬರ್ 29 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿ ಜನಿಸಿದರು. ತಂದೆ ಜಿ. ರುದ್ರಪ್ಪ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ತಾಯಿ ಮರುಳಸಿದ್ಧಮ್ಮ. 1960ರಲ್ಲಿ ಮೈಸೂರು ಮಹಾರಾಜಾ ಕಾಲೇಜಲ್ಲಿ ತತ್ತ್ವಶಾಸ್ತ್ರದಲ್ಲಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅದೇ ಕಾಲೇಜಿನಲ್ಲಿ ತತ್ತ್ವಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದು ಪ್ರೊ. ಎಂ. ಹಿರಿಯಣ್ಣ ಸ್ವರ್ಣಪದಕ ವಿಜೇತರಾಗಿದ್ದರು. 1978ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ “ದಿ ಕಾನ್ಸೆಫ್ಟ್ ಆಫ್ ಶಕ್ತಿ ಇನ್ ವೀರಶೈವಿಸಂ” ಮಹಾಪ್ರಬಂಧ ಬರೆದು ಪಿಎಚ್.ಡಿ. ಪಡೆದರು. 1960 ರಿಂದ 1997ರ ವರೆಗೆ ಮೈಸೂರು ಮಹಾರಾಜಾ ಕಾಲೇಜು, ಹಾವೇರಿಯ ಜಿ.ಎಚ್. ಕಾಲೇಜು ಮತ್ತು ಕೊನೆಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
“ಧಾರ್ಮಿಕ ನಂಬಿಕೆಗಳು ಮತ್ತು ದಾರ್ಶನಿಕ ವಿಶ್ಲೇಷಣೆ”, “ವಚನಗಳಲ್ಲಿ ತತ್ವಮೀಮಾಂಸೆ”, “ವಚನೋಕ್ತ ಲಿಂಗಾಯತ ಮತ್ತು ಆಗಮೋಕ್ತ ವೀರಶೈವ”, “ಲಿಂಗಾಯತರು ಹಿಂದೂಗಳಲ್ಲ”, “ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು”, “ಅಲ್ಲಮನ ವಜ್ರಗಳು” (ಅಲ್ಲಮನ ಸಮಗ್ರ ವಚನಗಳಿಗೆ ವ್ಯಾಖ್ಯಾನ), “ಲಿಂಗಾಯತ ಧರ್ಮ ಮತ್ತು ದರ್ಶನ” ಮುಂತಾದ 37 ಪುಸ್ತಕಗಳನ್ನು ಬರೆದಿದ್ದಾರೆ.

(ಸಿಂಗಾಪುರದಲ್ಲಿ ಪತ್ನಿ ಸರ್ವಮಂಗಳಾ, ಮಗಳು ಕವಿತಾ, ಮೊಮ್ಮಗಳು ಆರಾಧನಾ, ಮೊಮ್ಮಗ ಅಭಿಲಾಷ ಮತ್ತು ಅಳಿಯ ವಿಜಯಕುಮಾರ ಬದಾಮಿ ಅವರೊಂದಿಗೆ)
2013ನೇ ಫೆಬ್ರುವರಿ 15ರಿಂದ 18ರ ವರೆಗೆ ಧಾರವಾಡದಲ್ಲಿ ಜರುಗಿದ ಆಲ್ ಇಂಡಿಯಾ ಫಿಲಾಸಾಫಿಕಲ್ ಕಾಂಗ್ರೆಸ್ನ 86ನೆಯ ಅಧಿವೇಶನದ ಸರ್ವಾಧ್ಯಕ್ಷರಾಗಿದ್ದ ಡಾ. ಎನ್.ಜಿ. ಮಹಾದೇವಪ್ಪ ಅವರು ಕರ್ನಾಟಕ ಸರ್ಕಾರದ 2024ನೇ ಸಾಲಿನ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ವಿಚಾರಗಳಲ್ಲಿ ನಾವು ಒಂದೇ ದಾರಿಯ ಪಯಣಿಗರು ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಮಹಾದೇವಪ್ಪ ಅವರ ಸಾಂಗತ್ಯ ನನಗೆ ಆಪ್ಯಾಯಮಾನವಾಗಿದೆ. ಮೊದಲು ನಾನು ಬೆಂಗಳೂರು, ಮೈಸೂರು, ಕಲಬುರಗಿ, ಬೀದರ, ಕಾರವಾರಗಳಲ್ಲಿ ಇದ್ದಾಗ, ಧಾರವಾಡಕ್ಕೆ ಬಂದಕೂಡಲೆ ಕಲಬುರ್ಗಿ ಸರ್ ಮನೆಗೆ ಹೋಗಿ ಗಂಟೆಗಟ್ಟಲೆ ಚರ್ಚೆ ಮಾಡುತ್ತಿದ್ದೆ. ಈಗ ನಾನು ಧಾರವಾಡ ನಿವಾಸಿಯಾಗಿರುವೆ. ಸಮಯ ಸಿಕ್ಕಾಗಲೆಲ್ಲ ಮಹಾದೇವಪ್ಪನವರನ್ನು ಭೇಟಿಯಾಗುತ್ತಲೇ ಇರುತ್ತೇನೆ. ನಮ್ಮ ಚರ್ಚೆಗೆ ಕೊನೆಯಿಲ್ಲ. ಅವರು ನೂರ್ಕಾಲ ಬಾಳಲಿ.

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.