“ಓದುವವರಿಗಿಂತ ಬರೆಯುವವರೇ ಹೆಚ್ಚಾಗಿದ್ದಾರೆ’, ‘ಜಗತ್ತಿನ ನಶಿಸುತ್ತಿರುವ ಭಾಷೆಗಳಲ್ಲಿ ಕನ್ನಡವೂ ಮುಂಚೂಣಿಯಲ್ಲಿದೆ’, ‘ಕನ್ನಡ ಪುಸ್ತಕ ಪ್ರಕಟಣೆ ಎಂಬುದು ನಷ್ಟದ ಬಾಬ್ತು’ ಎಂಬೆಲ್ಲಾ ಮಾತುಗಳು ಸತ್ಯಕ್ಕೆ ಹತ್ತಿರವಾಗಿರುವ ಈ ಕಾಲಘಟ್ಟದಲ್ಲಿ; “ನಾವು ಬರೆದು ಸಾಧಿಸುವುದಾದರೂ ಏನು? ಬರೆದದ್ದನ್ನು ಓದುವವರಾದರೂ ಯಾರು?” ಎನ್ನುವ ಪ್ರಶ್ನೆ ಉಳಿದೆಲ್ಲ ಪ್ರಶ್ನೆಗಳಿಗಿಂತ ಮುಖ್ಯವೆನಿಸಿಬಿಡುತ್ತದೆ. ಎಂತೆಂಥ ಸಮಾಧಾನಕರ ಉತ್ತರ ಕೂಡ ಅನೇಕಬಾರಿ ಗೌಣವೆನಿಸುತ್ತದೆ. ‘ನಾನೇಕೆ ಬರೆಯುತ್ತೇನೆ’ ‘ಸಾಹಿತ್ಯದ ಪ್ರಸ್ತುತತೆಯೇನು’ ಎನ್ನುವುದನ್ನೆಲ್ಲ ಮನತಟ್ಟುವಂತೆ ವಿವರಿಸುವ ಹಿರಿಯರ ಹಲವು ಲೇಖನಗಳು ಎಲ್ಲರಿಗೂ ಎಲ್ಲ ಕಾಲಕ್ಕೂ ಒಪ್ಪಿತವಾಗಬೇಕು ಎಂಬುದೇನೂ ಇಲ್ಲ”

ತರುಣ ಲೇಖಕ ಕರ್ಕಿ ಕೃಷ್ಣಮೂರ್ತಿ ಬರೆದ ಬರಹ ಮತ್ತು ಬದುಕಿನ ಕುರಿತ ಸಾಲುಗಳು

 

ಘಟನೆ ೧: ಆತ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನಾಲ್ಕೈದು ವರ್ಷಗಳಾಗಿವೆ. ಆಟೋ ಓಡಿಸುತ್ತಿದ್ದಾನೆ. ಫೀನಿಕ್ಸ್ ಮಾಲಿನಿಂದ ಎರಡೆರಡು ಕೈಗಳಲ್ಲಿ ಸಂಭಾಳಿಸಲಾಗದಷ್ಟು ಶಾಪಿಂಗ್ ಚೀಲಗಳನ್ನು ಹಿಡಿದ ಯುವತಿ ಈತನ ಆಟೋ ಹತ್ತಿದ್ದಾಳೆ. ಹತ್ತಿದಾಗಿನಿಂದ ಯಾರೊಡನೆಯೋ ತುಂಬಾ ರೋಮಾಂಟಿಕ್ ಆಗಿ ಫೋನಿನಲ್ಲಿ ಮಾತನಾಡುತ್ತಿದ್ದವಳು ಒಮ್ಮೆಲೇ ಫೋನ್ ಕಟ್ ಮಾಡಿ ಇವನ ಮೇಲೆ ರೇಗತೊಡಗಿದ್ದಾಳೆ. ಹಿಂದಿ ಇಂಗ್ಲೀಷಿನಲ್ಲಿ ಬೇಕಾಬಿಟ್ಟಿ ಬೈಯ್ಯುತ್ತಿದ್ದಾಳೆ. ಈತನಿಗೆ ಸರಿಯಾಗಿ ಅರ್ಥವಾಗುತ್ತಿಲ್ಲ. ಯಾವುದೋ ತಪ್ಪು ದಾರಿಯಲ್ಲಿ ಕರೆದುಕೊಂಡು ಹೋಗಿ ಹೆಚ್ಚು ಮೀಟರ್ ಬಿಲ್ ಮಾಡಲು ಪ್ರಯತ್ನಿಸುತ್ತಿದ್ದೀಯಾ ಎಂದು ತಕರಾರು ಮಾಡುತ್ತಿದ್ದಾಳೇನೋ ಎಂದು ಅಸ್ಪಷ್ಟವಾಗಿ ಅರ್ಥೈಸಿಕೊಂಡು ತಮಿಳು ಕನ್ನಡದಲ್ಲಿ ಸಮಝಾಯಿಶಿ ಕೊಡಲು ಪ್ರಯತ್ನಿಸುತ್ತಿದ್ದಾನೆ ಆತ. ‘ಹಿಂದೀ ನಹೀ ಆತೀ? ಹಿಂದೀ ಮೆ ಬಾತ್ ಕರೋ’ ಎಂದು ಆಕೆ ಆದೇಶಿಸುತ್ತಿದ್ದಾಳೆ. ಪೋಲೀಸು, ಫೇಸ್ ಬುಕ್ಕು, ಟೀವಿ, ನ್ಯೂಸ್ ಪೇಪರ್ ಎಂದೆಲ್ಲಾ ಹೆದರಿಸುತ್ತಿದ್ದಾಳೆ. ಪರಿಸ್ಥಿತಿಯನ್ನು ನಿಭಾಯಿಸಲಾಗದೇ ಆತ ಕಂಗಾಲಾಗಿದ್ದಾನೆ.

ಘಟನೆ ೨: ಆಕೆ ಮಣಿಪುರದವಳು. ರೈಲಿನಲ್ಲಿ ಸೀಟಿನ ಅಡಿಯಲ್ಲಿ, ಕಸ ತುಂಬುವ ಜಾಗದಲ್ಲಿ ಅಡಗಿ ಕುಳಿತು ಬೆಂಗಳೂರಿಗೆ ಬಂದು ಮೂರ್ನಾಲ್ಕು ತಿಂಗಳಾಗಿದೆ ಅಷ್ಟೇ. ‘ಹೇ ದೀದಿ’ ಎನ್ನುವ ಆನ್-ಲೈನ್ ಶಾಪಿಂಗ್ ಕಂಪನಿಯಲ್ಲಿ ಡೆಲಿವರಿ ಗರ್ಲ್ ಆಗಿ ಸೇರಿಕೊಂಡಿದ್ದಾಳೆ. ಕಾಲೇಜು ಮುಗಿಸಿದ್ದಾಳಾದ್ದರಿಂದ ಅಲ್ಪ ಸಲ್ಪ ಇಂಗ್ಲೀಷು ಮಾತು, ಓದು ಬಲ್ಲಳು. ಬೆಂಗಳೂರಿನ ಪ್ರತಿಷ್ಟಿತ ಐಟಿ ಕ್ಯಾಂಪಸ್ಸಿನೊಳಗಿನ ಆರ್ಡರುಗಳ ಸರಬರಾಜು ಜವಾಬ್ದಾರಿ ಆಕೆಗೆ ನೀಡಲಾಗಿದೆ. ಆರಂಭದಲ್ಲಿ ಇಲ್ಲಿಗೆ ಬಂದಾಗ ಆಫೀಸಿನಲ್ಲಿ ಆಕೆಯ ಸಹೋದ್ಯೋಗಿಗಳು ಆಕೆಯ ಮುಖ ಚಹರೆ ನೋಡಿ, ‘ನೀನು ನೇಪಾಳಿಯಾ?’ ‘ಟಿಬೇಟಿಯನ್ನಾ?’ ಎಂದೆಲ್ಲಾ ಕೇಳಿ ತಾನು ಈ ದೇಶಕ್ಕೆ ಸಂದುವವಳಲ್ಲವೇನೋ ಎನ್ನುವಂತ ಭಾವನೆ ಉಂಟುಮಾಡಿದ್ದು; ಆಕೆಗೀಗ ನಿಜವಾಗಿಯೂ ಅನುಭವಕ್ಕೆ ಬರತೊಡಗಿದೆ. ಐಟಿ ಕ್ಯಾಂಪಸ್ಸು ಆಕೆಗೆ ಬೇರೆಯದೇ ದೇಶದಂತೆ ಗೋಚರವಾಗುತ್ತಿದೆ. ತಲುಪಿಸಬೇಕಿರುವ ಪಾರ್ಸಲ್ಲಿನ ಮೇಲೆ ಬರೆದಿರುವ ‘Mauna Kiea’ ‘Atunyote Peninsula’ ಎನ್ನುವ ಹೆಸರಿನ ಕಟ್ಟಡಗಳನ್ನು ಅಲ್ಲಿ ಹುಡುಕುವುದು ಆಕೆಗೆ ದುಸ್ಸಾಹಸವೆನಿಸುತ್ತಿದೆ. ಅಲ್ಲಿ ಓಡಾಡುತ್ತಿರುವ ಜನರನ್ನು ನಿಲ್ಲಿಸಿ ಈ ವಿಳಾಸಗಳನ್ನು ಕೇಳೋಣವೆಂದರೆ ಏನೋ ಒಂಥರಾ ಭಯ. ಕೀಳರಿಮೆ ಕಿತ್ತು ಬರುತ್ತದೆ. ಮೇಲಾಗಿ ಈ ಶಬ್ದಗಳನ್ನು ಹೇಗೆ ಉಚ್ಛರಿಸುವುದು ಎಂದು ಆಕೆ ತಬ್ಬಿಬ್ಬಾಗಿದ್ದಾಳೆ.

ಹತ್ತಿದಾಗಿನಿಂದ ಯಾರೊಡನೆಯೋ ತುಂಬಾ ರೋಮಾಂಟಿಕ್ ಆಗಿ ಫೋನಿನಲ್ಲಿ ಮಾತನಾಡುತ್ತಿದ್ದವಳು ಒಮ್ಮೆಲೇ ಫೋನ್ ಕಟ್ ಮಾಡಿ ಇವನ ಮೇಲೆ ರೇಗತೊಡಗಿದ್ದಾಳೆ. ಹಿಂದಿ ಇಂಗ್ಲೀಷಿನಲ್ಲಿ ಬೇಕಾಬಿಟ್ಟಿ ಬೈಯ್ಯುತ್ತಿದ್ದಾಳೆ. ಈತನಿಗೆ ಸರಿಯಾಗಿ ಅರ್ಥವಾಗುತ್ತಿಲ್ಲ. ಯಾವುದೋ ತಪ್ಪು ದಾರಿಯಲ್ಲಿ ಕರೆದುಕೊಂಡು ಹೋಗಿ ಹೆಚ್ಚು ಮೀಟರ್ ಬಿಲ್ ಮಾಡಲು ಪ್ರಯತ್ನಿಸುತ್ತಿದ್ದೀಯಾ ಎಂದು ತಕರಾರು ಮಾಡುತ್ತಿದ್ದಾಳೇನೋ ಎಂದು ಅಸ್ಪಷ್ಟವಾಗಿ ಅರ್ಥೈಸಿಕೊಂಡು ತಮಿಳು ಕನ್ನಡದಲ್ಲಿ ಸಮಝಾಯಿಶಿ ಕೊಡಲು ಪ್ರಯತ್ನಿಸುತ್ತಿದ್ದಾನೆ ಆತ.

(ಚಿತ್ರ: ಉಷಾ ಬಿ. ಎನ್)

ಘಟನೆ ೩: ಆತ ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರೇ. ಈಗ ಒಳ್ಳೆಯ ಎಮ್.ಎನ್.ಸಿ ಕಂಪನಿಯಲ್ಲಿ ಕೆಲಸದಲ್ಲಿದ್ದಾನೆ. ಕೈತುಂಬಾ ಸಂಬಳವಿದೆ. ಆದಿನ ಬೆಳಿಗ್ಗೆ ಯಾವುದೋ ಅತಿ ಮುಖ್ಯ ಮಿಟಿಂಗಿದೆಯೆಂದು ಮಾಮೂಲಿಗಿಂತ ಅರ್ಧಗಂಟೆ ಮುಂಚೆಯೇ ಮನೆಯಿಂದ ಹೊರಟವನಿಗೆ ಹೆಬ್ಬಾಳ ಮೇಲ್ಸೇತುವೆಯ ಮೇಲೆ ಚಲಿಸದೇ ಸಾಲುಗಟ್ಟಿ ನಿಂತ ವಾಹನಗಳ ಸಾಗರ ನೋಡಿ ಎದೆ ಧಸಕ್ ಅಂದಿದೆ. ಏನೋ ಉಪಾಯ ಮಾಡಿ ಕಾರನ್ನು ಬೇರೆಡೆ ತಿರುವಿಸಿಕೊಂಡು ಒಳದಾರಿಯಲ್ಲಿ ಹೋದರೆ ಅಲ್ಲಿ ಯಾವುದೋ ಕಾಮಗಾರಿಗಾಗಿ ರಸ್ತೆ ಅಗೆದು ಹಾಕಿದ್ದಾರೆ. ಪುನಃ ಹೆಬ್ಬಾಳ ಮೇಲ್ಸೇತುವೆಗೇ ಬರಬೇಕಾಗಿದೆ. ಸಣ್ಣ ದಾರಿಯಲ್ಲಿ ಕಾರು ವಾಪಸ್ ತರುವಷ್ಟರಲ್ಲಿ ಜೀವ ಹೈರಾಣಾಗಿ ಹೋಗಿದೆ ಆತನಿಗೆ. ನಂತರ ಪ್ರತಿ ಕ್ಷಣವೂ ಉದ್ವೇಗ. ಒತ್ತುವ ಪ್ರತಿ ಬ್ರೇಕಿಗೂ ಅಸಮಾಧಾನ. ಅಂಬುಲನ್ಸಿಗೆ ದಾರಿ ಬಿಡಬೇಕಾದರೂ ಕೋಪ. ಹೇಗೇಗೋ ಮಾಡಿ ಮುಕ್ಕಾಲು ತಾಸು ತಡವಾಗಿ ಆಫೀಸು ತಲುಪಿದವನಿಗೆ ಮೀಟಿಂಗು ಕೋಣೆ ಪ್ರವೇಶಿಸಲು ಭಯ, ಮುಜುಗರ, ಅವಮಾನ ಎಲ್ಲವೂ ಒಟ್ಟೊಟ್ಟಿಗೇ. ಅರೆಪಾರದರ್ಶಕ ಗಾಜಿನ ಬಾಗಿಲ ಎದುರು ನಿಂತ ಅವನಿಗೆ ಒಳಗಿರುವ ಹದಿನೈದು ಜನರನ್ನು ಎದುರಿಸುವ ಬದಲು ಇಲ್ಲೇ ನೆಲದಲ್ಲಿ ಹೊಂಡ ತೋಡಿ, ಹಾರಿ, ಮೈಮೇಲೆ ಮಣ್ಣು ಎಳೆದುಕೊಳ್ಳಲೇ ಎನ್ನುವಂಥ ಭಾವ.

ಘಟನೆ ೪: ಆತ ಶಿವಮೊಗ್ಗದವ. ಬೆಂಗಳೂರಿನ ದೊಡ್ಡ ಖಾಸಗೀ ಸಂಸ್ಥೆಯೊಂದರ ಉದ್ಯೋಗಿ. ಆದಿನ ಕರ್ನಾಟಕ ಬಂದ್. ಮುಂದಿನ ಬಾಗಿಲು ಮುಚ್ಚಿ ಒಳಗೆ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಬಿಸಿಲೇರುವ ಹೊತ್ತಿಗೆ ಹೊರಗಡೆ ಒಂದಿಷ್ಟು ಜನ ಕನ್ನಡ ಹೋರಾಟಗಾರರು ಗದ್ದಲ ಶುರು ಮಾಡಿದ್ದಾರೆ. ಒಳಗಡೆ ಜನ ಕೆಲಸಮಾಡುತ್ತಿರುವುದು ಅವರಿಗೆ ಹೇಗೋ ಗೊತ್ತಾಗಿದೆ. ಗಲಾಟೆ ಜೋರೇ ಆಗಿದೆ. ಈತನ ಆಫೀಸಿನ ಗಾಜುಗಳಿಗೆ ಕಲ್ಲು ಬಿದ್ದಿವೆ. ಒಂದಿಷ್ಟು ಹೊಡೆದಾಟ, ಅದು-ಇದು ಮಾತುಕತೆ ಎಲ್ಲವೂ ಒಂದು ಗಂಟೆ ಆಮೇಲೆ ತಣ್ಣಗಾಗಿದೆ. ನಂತರ ಊಟದ ಸಮಯದಲ್ಲಿ ಕ್ಯಾಂಟೀನಿನಲ್ಲಿ ಅದರದೇ ಸುದ್ದಿ. ಎಲ್ಲರೂ ಕನ್ನಡ ಹೋರಾಟಗಾರರನ್ನು ಮನಬಂದಂತೆ ಹೀಯಾಳಿಸುತ್ತಿದ್ದಾರೆ. ವಸೂಲಿ ದಂಧೆಯನ್ನು ಕೆಟ್ಟ ಶಬ್ದಗಳಲ್ಲಿ ಬೈಯ್ಯುತ್ತಿದ್ದಾರೆ. ಅವರ ಮಾತುಕತೆಯಲ್ಲಿ ಕನ್ನಡ, ಕನ್ನಡಿಗ, ನಟ, ಬಾವುಟ, ದಕ್ಷಿಣ ಭಾರತ ಎಲ್ಲವೂ ಬಂದು ಹೋಗುತ್ತಿದೆ. ಈತ ಅಲ್ಲಿ ಅಲ್ಪಸಂಖ್ಯಾತ. ಸಂದಿಗ್ಧಕ್ಕೆ ಸಿಲುಕಿದ್ದಾನೆ. ಹೋರಾಟಗಾರರು ಮಾಡಿದ್ದು ಸರಿ ಎನ್ನಲೇ, ತಪ್ಪು ಎನ್ನಲೇ? ‘ಬೋಳಿ ಮಕ್ಕಳಿಗೆ ಮಾಡಿದ್ದು ಸರಿಯಾಗಿದೆ’ ಎಂದು ಮನದಲ್ಲಿ ಅಂದುಕೊಳ್ಳುತ್ತಿರುವಂತೆ, ಹಣೆಗೆ ಗಾಯ ಮಾಡಿಕೊಂಡ ಸೆಕ್ಯೂರಿಟಿ ನೆನಪಾಗಿ ಖೇದವಾಗುತ್ತಿದೆ. ಕ್ಯಾಂಟೀನಿನ ಆ ಉಸಿರುಗಟ್ಟುವ ವಾತಾವರಣದಲ್ಲಿ ಊಟ ಆತನ ಗಂಟಲಲ್ಲಿ ಇಳಿಯುತ್ತಿಲ್ಲ.

ಬೆಂಗಳೂರಿನ ಪ್ರತಿಷ್ಟಿತ ಐಟಿ ಕ್ಯಾಂಪಸ್ಸಿನೊಳಗಿನ ಆರ್ಡರುಗಳ ಸರಬರಾಜು ಜವಾಬ್ದಾರಿ ಆಕೆಗೆ ನೀಡಲಾಗಿದೆ. ಆರಂಭದಲ್ಲಿ ಇಲ್ಲಿಗೆ ಬಂದಾಗ ಆಫೀಸಿನಲ್ಲಿ ಆಕೆಯ ಸಹೋದ್ಯೋಗಿಗಳು ಆಕೆಯ ಮುಖ ಚಹರೆ ನೋಡಿ, ‘ನೀನು ನೇಪಾಳಿಯಾ?’ ‘ಟಿಬೇಟಿಯನ್ನಾ?’ ಎಂದೆಲ್ಲಾ ಕೇಳಿ ತಾನು ಈ ದೇಶಕ್ಕೆ ಸಂದುವವಳಲ್ಲವೇನೋ ಎನ್ನುವಂತ ಭಾವನೆ ಉಂಟುಮಾಡಿದ್ದು; ಆಕೆಗೀಗ ನಿಜವಾಗಿಯೂ ಅನುಭವಕ್ಕೆ ಬರತೊಡಗಿದೆ. ಐಟಿ ಕ್ಯಾಂಪಸ್ಸು ಆಕೆಗೆ ಬೇರೆಯದೇ ದೇಶದಂತೆ ಗೋಚರವಾಗುತ್ತಿದೆ. ತಲುಪಿಸಬೇಕಿರುವ ಪಾರ್ಸಲ್ಲಿನ ಮೇಲೆ ಬರೆದಿರುವ ‘Mauna Kiea’ ‘Atunyote Peninsula’ ಎನ್ನುವ ಹೆಸರಿನ ಕಟ್ಟಡಗಳನ್ನು ಅಲ್ಲಿ ಹುಡುಕುವುದು ಆಕೆಗೆ ದುಸ್ಸಾಹಸವೆನಿಸುತ್ತಿದೆ.

ಹೀಗೇ, ಇಂತಹುದೇ ಹತ್ತು ಹಲವು ಘಟನೆಗಳಲ್ಲಿ ಅಂತರ್ಗತವಾಗಿರುವ ತವಕ ತಲ್ಲಣಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಾನೂ ಸ್ಪಂದಿಸತೊಡಗಿದಾಗ ಅವುಗಳನ್ನು ಹಾಳೆಗಿಳಿಸಬೇಕು ಅನ್ನಿಸುತ್ತದೆ. ಹಾಳೆಗಿಳಿಸಿದ ಮೇಲೆ ನಿರಾಳವೆನ್ನಿಸುತ್ತೆ ಎಂಬುದು ಸುಳ್ಳಾದರೂ, ಹಾಗೆ ನಂಬುವುದರಲ್ಲಿ ಒಂಥರಾ ಸುಖವಿದೆ. (ಹಾಗೆ ನೋಡಿದರೆ ‘ಹಾಳೆಗಿಳಿಸು’ ಎನ್ನುವ ಪದ ಪ್ರಯೋಗವೇ ಇಂದಿನ ಮಟ್ಟಿಗೆ ತಪ್ಪು. ‘ಹಸ್ತಪ್ರತಿ ಕಳಿಸಿ’ ಎಂದು ಇಂದೂ ಕೆಲವರು ಬಳಸುತ್ತಿರುವಂತೆ ನಾನೂ ಬಳಸುತ್ತಿರುವೆ, ಕ್ಷಮಿಸಿ) ಹಾಳೆಗಿಳಿಸಿಯಾಯಿತು ಮುಂದೇನು? ಎನ್ನುವ ಪ್ರಶ್ನೆ ಇವತ್ತು ಉದ್ಭವಿಸುವುದೇ ಇಲ್ಲ. ಫೇಸ್ ಬುಕ್ ಇದೆಯಲ್ಲ! ನೇರ ಸಾಗರ ಸೇರುವುದೋ ಅಥವಾ ಯಾವುದಾದರೂ ನದಿಗೂಡಿ ಸೇರುವುದೋ ಎನ್ನುವುದು ಮಾತ್ರ ನಮ್ಮ ನಿರ್ಧಾರಕ್ಕೆ ಉಳಿದದ್ದು. ಬರೆದದ್ದು ಪತ್ರಿಕೆ, ಬ್ಲಾಗು, ಪುಸ್ತಕ ಯಾವುದರಲ್ಲೇ ಕಾಣಿಸಿಕೊಳ್ಳಲಿ ಕೊನೆಗೆ ಈ ಮುಖ ಪುಸ್ತಕ ಸೇರಲೇ ಬೇಕು. ಇಲ್ಲಿ ಒಂದಿಷ್ಟು ಲೈಕ್ಸು, ‘ಚೆನ್ನಾಗಿದೆ’ಗಳಿಗಂತೂ ಮೋಸವಿಲ್ಲ. ಗೊಂದಲ ಶುರುವಾಗುವುದೇ ಇಲ್ಲಿಂದ.

ನಾನು ಬರೆದದ್ದು ನಿಜವಾಗಿಯೂ ಚೆನ್ನಾಗಿದೆಯೋ? ಹೀಗೇ ಔಪಚಾರಿಕವಾಗಿ ಹೇಳಿದ್ದಾರೋ? ಅಥವಾ, ಆತ ನಾಳೆ ಬರೆಯುವದಕ್ಕೆ ನನ್ನಿಂದ ಚೆನ್ನಾಗಿದೆ ಬರಲಿ ಎನ್ನುವ ದೂರಾಲೋಚನೆಯಿಂದ ಇದು ಚೆನ್ನಾಗಿ ಕಾಣುತ್ತಿದೆಯೋ? ಅಥವಾ ಓದಿಯೇ ಇಲ್ಲವೋ? ಇವಿಷ್ಟು ಮೂಲಭೂತ ಪ್ರಶ್ನೆಗಳು. ಮೊದಲೆಲ್ಲಾ- ಏನಾದರೂ ಬರೆದು, ಅದನ್ನು ಪತ್ರಿಕೆಗೆ ಕಳಿಸಿ, ಅದು ಬಂತಾ ಇಲ್ಲವಾ ಎಂದು ಕಾದು ಕಾದು ಕೊನೆಗೊಂದು ದಿನ ಅದು ಪ್ರಕಟವಾದರೆ, ಲೇಖಕನ ವಿಳಾಸವನ್ನೂ ಪ್ರಕಟಿಸುವ ದಯೆ ಆ ಪತ್ರಿಕೆ ತೋರಿದ್ದರೆ, ಪುಣ್ಯವಂತರಿಗೆ ಪೋಸ್ಟ್ ಕಾರ್ಡಿನಲ್ಲಿ (ಹೆಚ್ಚು ಪುಣ್ಯವಂತರಾಗಿದ್ದರೆ ಅಂತರ್ದೇಶೀ ಕಾಗದದಲ್ಲಿ) ಪತ್ರ ಬರುತ್ತಿತ್ತು. ಹಾಗೆ ಬಂದ ಪತ್ರದಲ್ಲಿ ‘ಚೆನ್ನಾಗಿದೆ’ ಎನ್ನುವ ಸಾಲು ಕೊಡುವ ಖುಷಿಯನ್ನು ಫೇಸ್ಬುಕ್ಕಿನ ಈ ‘ಹೆಬ್ಬೆಟ್ಟು’ ಕಸಿದುಕೊಂಡಿದೆಯಾ? ಎನ್ನುವುದು ಎರಡನೇ ಪ್ರಶ್ನೆ. ಇದಕ್ಕೆ ಉತ್ತರ ನೇರ ಹಾಗೂ ದಿಟ್ಟವಲ್ಲ. ಇದೇ ಅಳಲನ್ನು ಫೇಸ್ ಬುಕ್ಕಿನಲ್ಲೇ ತೋಡಿಕೊಂಡರೆ ಸಾಕಷ್ಟು ಚರ್ಚೆಗೆ ಗ್ರಾಸವಾಗಬಹುದು. ನನ್ನ ಗೆಳೆಯನೊಬ್ಬ ಹೇಳುತ್ತಿದ್ದ ‘ಆ ಪೋಸ್ಟ್ ಕಾರ್ಡಿನಲ್ಲಿ ಪತ್ರ ಬರೆಯುತ್ತಿರುವವನೇ ಈಗ ಫೇಸ್ಬುಕ್ಕಿಗೆ ಶಿಫ್ಟ್ ಆಗಿದಾನೆ’. ಫೇಸ್ಬುಕ್ಕಿನಲ್ಲಿ ಪ್ರಕಟಿಸುವುದನ್ನು ಅವಗಣಿಸುವಂತಿಲ್ಲ ಎಂಬುದು ಅವನ ವಾದ. ಬರೆಯುವುದೇ ಇತರರು ಓದಲಿ ಎಂದಾದಾಗ, ಓದಿ ಪ್ರತಿಕ್ರಿಯಿಸಿದರೆ ಮತ್ತೂ ಖುಷಿ ಎಂತಾದಾಗ, ಈ ಎರಡೂ ಉದ್ದೇಶವನ್ನು ಕ್ಷಣ ಮಾತ್ರದಲ್ಲಿ ಸಾಧ್ಯವಾಗಿಸುವ ಫೇಸ್ಬುಕ್ಕನ್ನು ಏಕೆ ದೂರುವುದು? ಹೀಗೆಲ್ಲಾ ಇರುವಾಗ ಈ ವಿಷಯದ ತಂಟೆಗೆ ಹೋಗಿ ವಿವಾದ ಮಾಡಿಕೊಳ್ಳುವುದು ಬೇಡ ಬಿಡಿ. ಏನೇ ಆದರೂ ಈ ‘ಹೆಬ್ಬಟ್ಟು’ ಹಾಗೂ ‘ಚೆನ್ನಾಗಿದೆ’ ಲೇಖಕನನ್ನು ಒಂದು ಮಟ್ಟಿಗೆ ಮೋಸ ಮಾಡುತ್ತಿರುವುದು ನಿರ್ವಿವಾದ.

ಇನ್ನು- ‘ಓದುವವರಿಗಿಂತ ಬರೆಯುವವರೇ ಹೆಚ್ಚಾಗಿದ್ದಾರೆ’, ‘ಜಗತ್ತಿನ ನಶಿಸುತ್ತಿರುವ ಭಾಷೆಗಳಲ್ಲಿ ಕನ್ನಡವೂ ಮುಂಚೂಣಿಯಲ್ಲಿದೆ’, ‘ಕನ್ನಡ ಪುಸ್ತಕ ಪ್ರಕಟಣೆ ಎಂಬುದು ನಷ್ಟದ ಬಾಬ್ತು’ ಎಂಬೆಲ್ಲಾ ಮಾತುಗಳು ಸತ್ಯಕ್ಕೆ ಹತ್ತಿರವಾಗಿರುವ ಈ ಕಾಲಘಟ್ಟದಲ್ಲಿ; “ನಾವು ಬರೆದು ಸಾಧಿಸುವುದಾದರೂ ಏನು? ಬರೆದದ್ದನ್ನು ಓದುವವರಾದರೂ ಯಾರು?” ಎನ್ನುವ ಪ್ರಶ್ನೆ ಉಳಿದೆಲ್ಲ ಪ್ರಶ್ನೆಗಳಿಗಿಂತ ಮುಖ್ಯವೆನಿಸಿಬಿಡುತ್ತದೆ. ಎಂತೆಂಥ ಸಮಾಧಾನಕರ ಉತ್ತರ ಕೂಡ ಅನೇಕಬಾರಿ ಗೌಣವೆನಿಸುತ್ತದೆ. ‘ನಾನೇಕೆ ಬರೆಯುತ್ತೇನೆ’ ‘ಸಾಹಿತ್ಯದ ಪ್ರಸ್ತುತತೆಯೇನು’ ಎನ್ನುವುದನ್ನೆಲ್ಲ ಮನತಟ್ಟುವಂತೆ ವಿವರಿಸುವ ಹಿರಿಯರ ಹಲವು ಲೇಖನಗಳು ಎಲ್ಲರಿಗೂ ಎಲ್ಲ ಕಾಲಕ್ಕೂ ಒಪ್ಪಿತವಾಗಬೇಕು ಎಂಬುದೇನೂ ಇಲ್ಲ. ನನ್ನ ಗೆಳೆಯನೊಬ್ಬನಿದ್ದಾನೆ. ಸಿಕ್ಕಾಪಟ್ಟೆ ಓದುವ ಚಟ. ದಪ್ಪ ದಪ್ಪ ಟೆಕ್ನಿಕಲ್ ಪುಸ್ತಕಗಳನ್ನು ಸಾವಿರಾರು ರೂಪಾಯಿ ತೆತ್ತು ತರುತ್ತಾನೆ. ಆದರೆ ಆ ನಿರ್ದಿಷ್ಟ ತಾಂತ್ರಿಕ ವಿಷಯಗಳ ಹೊರತಾಗಿ ಮತ್ತೇನನ್ನೂ ಓದುವುದಿಲ್ಲ. ಇನ್ನೊಬ್ಬನಿದ್ದಾನೆ. ‘ಇಂಟು ವಿಂಡೋ’ ಎನ್ನುವ ಬ್ಲಾಗ್ ಮಾಡಿಕೊಂಡು ದಿನಕ್ಕೆರಡು ಮೂರು ಆರ್ಟಿಕಲ್ಲುಗಳನ್ನು ಬರೆಯುತ್ತಾನೆ. ಕೆಲವೊಂದು ಲೇಖನಗಳನ್ನು ಮೂರು ಜನರೂ (ಓದುವುದು ಬಿಟ್ಹಾಕಿ) ನೋಡಿರುವುದಿಲ್ಲ. ಓದಿದರೆ ಅರ್ಥವೂ ಆಗುವುದಿಲ್ಲ ಎನ್ನಿ. ಏನೇನೋ ಸಾಫ್ಟ್ವೇರ್ ಸಂಬಂಧೀ ಬರಹಗಳು ಅವು. ಇವರಿಬ್ಬರನ್ನೂ ಮೀರಿಸುವ ಇನ್ನೊಬ್ಬನಿದ್ದಾನೆ. ಆತನ ಮನೆಗೆ ಹೋದರೆ ಕಾಲಿಡಲು ಜಾಗವಿಲ್ಲ. ಬರೇ ವೃತ್ತ ಪತ್ರಿಕೆ, ಮ್ಯಾಗಜಿನ್ನು, ಪುಸ್ತಕಗಳ ರಾಶಿ! ಇಂಗ್ಲೀಷು, ಕನ್ನಡ, ಹಿಂದೀ, ಹೀಗೆ ಬಹುಭಾಷೆಯವು. ಟೇಬಲ್ಲು ಟೀಪಾಯಿ ಬಿಟ್ಟುಬಿಡಿ, ಟೀವಿ ಸೋಫಾ ಫ್ರಿಜ್ಜುಗಳ ಮೇಲೂ ಪೇರಿಸಿಟ್ಟ ಪತ್ರಿಕೆಗಳ ಪರ್ವತ. ಕಿಟಕಿಯ ಸರಳಿಗೆ ಮಡಚಿ ಸಿಕ್ಕಿಸಿಟ್ಟಿದ್ದೂ ಕಾಣಬಹುದು. ಅವನಿಗೋ ಈ contest ಗಳ ಹುಚ್ಚು. ಯಾವುದೇ ಪತ್ರಿಕೆಯಲ್ಲಿ ಯಾವುದೇ ರೀತಿಯ ಪ್ರಶ್ನೋತ್ತರಗಳ, ಪದಬಂಧಗಳ, ಸ್ಪರ್ಧೆಗಳು ಇರಲಿ ಆತ ಅದರಲ್ಲಿ ಭಾಗವಹಿಸುವವನೇ. ಹುಡುಕಿಕೊಂಡು ಹೋಗಿ ಪತ್ರಿಕೆಗಳ ಹತ್ತಾರು ಪ್ರತಿಗಳನ್ನು ಖರೀದಿಸಿ ಬೇರೆ ಬೇರೆ ಹೆಸರಿನಲ್ಲಿ ಕಳಿಸುತ್ತಿರುತ್ತಾನೆ. ಆ ಸ್ಪರ್ಧೆಗೆ ಲಾಗೂವಾಗುವುದೆಲ್ಲವನ್ನೂ ಚಾಚೂ ತಪ್ಪದೆ ಓದುತ್ತಾನೆ.

ಫೇಸ್ಬುಕ್ಕಿನಲ್ಲಿ ಪ್ರಕಟಿಸುವುದನ್ನು ಅವಗಣಿಸುವಂತಿಲ್ಲ ಎಂಬುದು ಅವನ ವಾದ. ಬರೆಯುವುದೇ ಇತರರು ಓದಲಿ ಎಂದಾದಾಗ, ಓದಿ ಪ್ರತಿಕ್ರಿಯಿಸಿದರೆ ಮತ್ತೂ ಖುಷಿ ಎಂತಾದಾಗ, ಈ ಎರಡೂ ಉದ್ದೇಶವನ್ನು ಕ್ಷಣ ಮಾತ್ರದಲ್ಲಿ ಸಾಧ್ಯವಾಗಿಸುವ ಫೇಸ್ಬುಕ್ಕನ್ನು ಏಕೆ ದೂರುವುದು? ಹೀಗೆಲ್ಲಾ ಇರುವಾಗ ಈ ವಿಷಯದ ತಂಟೆಗೆ ಹೋಗಿ ವಿವಾದ ಮಾಡಿಕೊಳ್ಳುವುದು ಬೇಡ ಬಿಡಿ. ಏನೇ ಆದರೂ ಈ ‘ಹೆಬ್ಬಟ್ಟು’ ಹಾಗೂ ‘ಚೆನ್ನಾಗಿದೆ’ ಲೇಖಕನನ್ನು ಒಂದು ಮಟ್ಟಿಗೆ ಮೋಸ ಮಾಡುತ್ತಿರುವುದು ನಿರ್ವಿವಾದ.

ಇನ್ನೊಂದೆಡೆ, ತಮ್ಮ ವೃತ್ತಿಗೆ ಸಂಬಂಧವಾಗುವ ವಿಷಯಗಳನ್ನಷ್ಟೇ ಓದುವ, ಬರೆಯುವ ಹಲವರು ನಮಗೆ ಸಿಗುತ್ತಾರೆ. ‘ವ್ಯಕ್ತಿತ್ವ ವಿಕಸನ’ ‘ಯಶಸ್ಸಿನ ಮಾರ್ಗ’ ಇಂಥ ಪುಸ್ತಕಗಳ ಓದೇ ನಿಜವಾದ ಓದು, ಉಳಿದದ್ದೆಲ್ಲ ಕೆಲಸಕ್ಕೆ ಬಾರದ್ದು ಎಂದು ನಂಬಿದವರ ಸಂಖ್ಯೆಯೂ ಕಡಿಮೆಯಿಲ್ಲ. ಹಾಗಾದರೆ ಈ ಓದು ಬರಹಗಳನ್ನು ಸಾಹಿತ್ಯದ ಯಾವ ವಿಭಾಗಕ್ಕೆ ಸೇರಿಸೋಣ? ಅಥವಾ ಇವ್ಯಾವವೂ ಸಾಹಿತ್ಯದ ಪರಿಧಿಯೊಳಗೇ ಬರುವುದಿಲ್ಲವೇ? ಸಾಹಿತ್ಯದ ಸಾಂಗತ್ಯದಿಂದಾಗುವ ಅನುಕೂಲ, ಲಾಭಗಳು ವ್ಯಕ್ತಿಯೊಬ್ಬನಿಗೆ ಇಲ್ಲಿಯೂ ಆಗುತ್ತವೆ ಎಂದಾದಮೇಲೆ ಯಾವ ಮಾನದಂಡದ ಮೇಲೆ ಇವುಗಳ ತುಲನೆ ಮಾಡಬೇಕು?

ಹೀಗೆಲ್ಲಾ ಇಲ್ಲಸಲ್ಲದ ವಿಚಾರಗಳನ್ನು ಮಾಡತೊಡಗಿದರೆ, ನಾನು ನೆಚ್ಚಿಕೊಂಡಿರುವ ಸಾಹಿತ್ಯದ ಬರವಣಿಗೆ ಹಾಗೂ ಓದಿನ ಸಾರ್ಥಕ್ಯದ ಬಗ್ಗೆ ಸಂಶಯ ಶುರುವಾಗುತ್ತದೆ. ಅದರಲ್ಲೂ ಕನ್ನಡದ ವಿಷಯಕ್ಕೆ ಬಂದಾಗ ನೋವಾಗುತ್ತದೆ. ಆದಾಗ್ಯೂ ಇವನ್ನೆಲ್ಲ ಬದಿಗಿಟ್ಟು ನಾನು ಬರೆಯುತ್ತೇನೆ. ಆ ಪ್ರಕ್ರಿಯೆ ನನಗೆ ಖುಷಿ ಕೊಡುತ್ತದೆ. ಪ್ರಕಟವಾದ ಪತ್ರಿಕೆ ನನ್ನ ಕೈಗೆ ಸಿಕ್ಕಿದರೆ ನಾನು ಮೊದಲು ನೋಡುವುದು ನನ್ನ ಬರಹದ ರೂಪು ರೇಷೆಯನ್ನೇ ಎನ್ನುವ ಸತ್ಯದ ಹಿಂದೆ ಆ ಖುಷಿಯ ಗುಟ್ಟು ಅಡಗಿರಬಹುದು. ಒಟ್ಟಾರೆ, ಬರವಣಿಗೆಯೆನ್ನುವುದು ಒಂದು ರೀತಿಯ ಹಿತವಾದ ನೋವು. ಅಪರೂಪಕ್ಕೊಮ್ಮೆ ಜಿಮ್ಮಿಗೋ, ಚಾರಣಕ್ಕೋ, ರನ್ನಿಂಗಿಗೋ ಹೋದ ಮಾರನೇ ದಿನ ಮೈಕೈ ಎಲ್ಲಾ ನೋಯುತ್ತಿರುತ್ತಲ್ಲಾ? ಕಾಲೆತ್ತಿ ಇಡುವಾಗ “ಆsss” ಅನ್ನುತ್ತೇವೆ. ಆ ನೋವಿನಲ್ಲಿ ಒಂಥರಾ ಸುಖವಿರುತ್ತೆ. ಇದೂ ಹಾಗೇನೇ. ಎಲ್ಲವನ್ನೂ ಮರೆತು ಮುಂದಿನ ಚಾರಣಕ್ಕೆ ಹೊರಡುವ ಮಜವೇ ಬೇರೆ!

 

(ಚಿತ್ರಗಳು: ಉಷಾ ಬಿ.ಎನ್ ಮತ್ತು ಅಂತರ್ಜಾಲ)