ಬ್ರಾಹ್ಮಣ ಕೇರಿಯ ಹುಡುಗಿಯರ ಸಂಕಟವು ಕೇವಲ ಮಾರುಕಟ್ಟೆಯಲ್ಲಿ ಗುಲಾಬಿ ಹೂವು ನೋಡುವುದರಲ್ಲೇ ಕಳೆದುಹೋಗುತ್ತಿತ್ತು. ಮನೆಯಲ್ಲಿ ಕಿರಿಯಳಾದ ನನಗೆ ಮೊಸರಿನ ಸರ್ಕಲ್ಲನ್ನು ಹಾದು ಜಮಾಲನ ಅಂಗಡಿಗೆ ಪ್ರತಿ ಶುಕ್ರವಾರ ಹೋಗಿ ಹೂವು ತರುವ ಜವಾಬ್ದಾರಿ ಹೆಗಲೇರಿತ್ತು. ಅದೊಂದು ಪುಟ್ಟ ವೃತ್ತಕ್ಕೆ ಮೊಸರಿನ ಸರ್ಕಲ್ ಎಂಬ ಹೆಸರು ಬರಲು ಕಾರಣ ಸುತ್ತಲ ಹತ್ತಾರು ಹಳ್ಳಿಗಳಿಂದ ಬಂದು ವೃತ್ತಾಕಾರವಾಗಿ ಕೂರುತ್ತಿದ್ದ ಗೌಳಿಗರು. ಹಳ್ಳಿಗಳಿಂದ ಬರುತ್ತಿದ್ದ ತಾಜಾ ಹಾಲು ಮೊಸರು ಬೆಣ್ಣೆ ಹಾಗೂ ತುಪ್ಪ ಅಲ್ಲಿನ ಸರಕು.
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕದಲ್ಲಿ ಗುಲಾಬಿ ಹೂವಿನ ಕಥೆ

 

ಅದು ಕೇರಿಗೆ ಅಂಟಿಕೊಂಡ ತರಕಾರಿ ಮಾರ್ಕೆಟ್ಟು. ಕಾಲದಿಂದ ಬ್ರಾಹ್ಮಣಗೇರಿಯ ಎಲ್ಲ ಅಗತ್ಯಗಳನ್ನೂ ಅಗತ್ಯವಾಗಿ ಪೂರೈಸುತ್ತಿದ್ದ ಜಾಗ. ಯಾವ ವಾರ ಯಾವ ದಿನ ಯಾವ ತರಕಾರಿಯು ಯಾವ ಅಡುಗೆಮನೆಯಲ್ಲಿ ಬೇಯುತ್ತಿತ್ತೋ ಆ ದಿನಕ್ಕೆ ತಕ್ಕಂತೆ ಫ್ರೆಶ್ ತರಕಾರಿ ಮಾಲು ಬಂದು ಬೀಳುತ್ತಿದ್ದ ಜಾಗ ಅದು. ಮಾರ್ಕೇಟಿನ ಶೇಕಡಾ 95 ಭಾಗ ಮುಸ್ಲಿಮರೇ ತುಂಬಿರುತ್ತಿದ್ದರು. ಈ ತರಕಾರಿಯ ದೆಸೆಯಿಂದಾಗಿ ಎರಡು ಪಂಗಡಗಳ ನಡುವೆ ಎಂಥ ಸ್ನೇಹ ಏರ್ಪಟ್ಟಿತ್ತೆಂದರೆ “ಮುಲ್ಲಾ ಆ ಕುಂಬಳಕಾಯಿ ಕೊಡು-ತಗೊಳಿ, ನಿಮ್ಗೇಂತಾನೆ ಪೆಸಲ್‌ ತಂದಿರೋದು: ಶೇಕುದ್ಧೀನ ಒಂದು ಕೆಜಿ ಹುರುಳಿಕಾಯಿ ಕೊಡು-ಎರಡು ಕೆಜಿ ತಗೊಳಿ ನಿಮ್ಮನೆಗೆ ಬೇಕು, ಜಮೀಲ್ ಸಾಬಿ ಕೊತ್ತಂಬರಿ ಎರಡು ಕಂತೆ ಕೊಡು-ಇವತ್ತು ಪ್ರೆಶ್ ಇಲ್ಲ, ಒಂದೇ ಕಟ್ಟ್ ತಗೊಳಿ ಸಾಕು..” ಹೀಗೆ ಲೋಕಾಭಿರಾಮವಾದ ಸುಂದರ ಸೌಹಾರ್ದವನ್ನು ತಲೆತಲಾಂತರಗಳಿಂದ ಹಿಡಿದಿಟ್ಟುಕೊಂಡಿದ್ದ ಜಾಗವದು.

ಈ ಮಾರ್ಕೆಟಿನ ಹೊರ ಆವರಣದಲ್ಲಿ ಹೂವಿನ ಅಂಗಡಿಗಳದೇ ದೊಡ್ಡ ಸಾಲು. ಸುಮಾರು ಹತ್ತು ಹೂವಿನ ಅಂಗಡಿಗಳು ಸಾಲಾಗಿ ನಳನಳಿಸುತ್ತಿದ್ದವು. ಪ್ರತಿ ಅಂಗಡಿಯಲ್ಲೂ ಗುಲಾಬಿ ಮಲ್ಲಿಗೆಯಿಂದ ಹಿಡಿದು ವಿಶೇಷ ಪೂಜೆಗಾಗಿ ಕಮಲದ ಹೂವಿನವರೆಗೂ ಎಲ್ಲವೂ ಅಲ್ಲಿ ಹಾಜರ್! ಋತುಮಾನಕ್ಕೆ ಹಬ್ಬಗಳಿಗೆ ಹಾಗೂ ಆಚರಣೆಗಳಿಗೆ ತಕ್ಕಂತೆ ಹಲವು ಹೂವಿನ ಪರಿಮಳವನ್ನು ಹೊತ್ತ ಹೊರಾಂಗಣ ಮಾರುಕಟ್ಟೆ ನನಗಂತೂ ಬಹಳ ಆಕರ್ಷಣೀಯವಾಗಿ ಕಾಣುತ್ತಿತ್ತು. ಬೇರೆಲ್ಲಾ ಗುಲಾಬಿ ಅಂಗಡಿಗಳಿಗೆ ಹೋಲಿಸಿದರೆ ಜಮಾಲನ ಗುಲಾಬಿ ಅಂಗಡಿ ಮಾರುಕಟ್ಟೆಯಲ್ಲಿಯೇ ವಿಶೇಷವಾದದ್ದು. ಹೆಬ್ಬೆರಳು ಗಾತ್ರದ ಹಳದಿ ಬಣ್ಣದ ಬಟನ್ ರೋಜ್‌ನಿಂದ ಹಿಡಿದು ಅಂಗೈಯಗಲದ ಕೆಂಪು ವೆಲ್ವೆಟ್ ಗುಲಾಬಿಯವರೆಗೂ ಎಲ್ಲ ತರದ ಗುಲಾಬಿಗಳೂ ಅವನ ಅಂಗಡಿಯಲ್ಲಿ ಲಭ್ಯವಿದ್ದವು. ಮಾರ್ಕೆಟ್ಟಿಗೆ ಹೋದರೆ ಸುಮ್ಮನಾದರೂ ಒಮ್ಮೆ ಜಮಾಲನ ಅಂಗಡಿಯನ್ನು ಹಾದು ಹೋಗುವ ಚಟ ನನಗೆ. ಅಲ್ಲಿ ಕಾಣುವ ಬಣ್ಣಬಣ್ಣದ ತರಹೇವಾರಿ ಗುಲಾಬಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಲವು ಹೂವುಗಳನ್ನು ಬಳಸುತ್ತಿದ್ದ ನಮ್ಮ ಮನೆಯಲ್ಲಿ ಅದೇಕೋ ಗುಲಾಬಿಯನ್ನು ಮಾತ್ರ ಮೈಲಿಗೆ ಎಂಬಂತೆ ದೂರವಿಟ್ಟಿದ್ದರು. ಮಂಟಪದ ಅಲಂಕಾರಕ್ಕೋ ಹಾರದ ಮಧ್ಯೆ ಅಲಂಕಾರಿಕವಾಗಿಯೋ ಉಪಯೋಗಿಸುತ್ತಿದ್ದುದು ಬಿಟ್ಟರೆ ಕಲಶಕ್ಕೂ ಮುಡಿಗೂ ಗುಲಾಬಿ ನಿಷಿದ್ಧ.

ಅದು ಬೇರೆ ದೇಶದ ಹೂವೆಂದೂ ಅದಕ್ಕೆ ನಮ್ಮ ದೇವರ ಮನೆಯೊಳಗೆ ಜಾಗವಿಲ್ಲವೆಂದೂ ಹೇಳಲಾಗುತ್ತಿತ್ತು. ಆದರೆ ಅಂದಿನ ಚಲನಚಿತ್ರಗಳಲ್ಲಿ ಗುಲಾಬಿಯನ್ನು ವಿಶೇಷವಾಗಿ ಬಳಸುವ ಸಂದರ್ಭಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ನಮಗೆ ಕೆಂಪು ಗುಲಾಬಿ ಎಂದರೆ ಏನೋ ಪುಳಕ. ಅದರಲ್ಲೂ ನಾಯಕಿ ಗುಲಾಬಿ ಮುಡಿದು ಬೆಟ್ಟದ ಮೇಲೆ ಹಾಡಿ ಕುಣಿಯುವಾಗ ನೆಟ್ಟ ದೃಷ್ಟಿಯಿಂದ ಅವಳನ್ನೇ ನೋಡುತ್ತಿದ್ದೆವು. ಮಲ್ಲಿಗೆಯನ್ನೂ ಕನಕಾಂಬರ-ಜಾಜಿಗಳನ್ನೂ ಎಗ್ಗಿಲ್ಲದೆ ಮುಡಿಯಬಹುದಾಗಿದ್ದ ನಾವು ಮನೆಯಲ್ಲಿ ಗುಲಾಬಿ ಬೇಕೆಂದು ಕೇಳಲು ಹಿಂಜರಿಯುತ್ತಿದ್ದೆವು.

ಸ್ಕೂಲು ಕಾಲೇಜಿಗೆ ಸ್ನೇಹಿತೆಯರು ಗುಲಾಬಿಯನ್ನು ಮುಡಿದು ಬಂದರೆ ಅದನ್ನು ನೋಡುವುದೇ ಒಂದು ಸಂಭ್ರಮ. ಇಷ್ಟಲ್ಲದೇ ಆಗಾಗ ಕಿವಿಗೆ ಬೀಳುತ್ತಿದ್ದ ಪಕ್ಕದ ಬೀದಿಯ ಹುಡುಗನೊಬ್ಬ ಕೊಡುತ್ತಿದ್ದನಂತೆ, ಅವಳು ಕೊಟ್ಟ ಗುಲಾಬಿಯನ್ನು ಮುಡಿದು ಕಾಲೇಜಿಗೆ ಹೋದಳಂತೆ, ಅದಾಗಿ ಮೂರೇ ವಾರಕ್ಕೆ ಮನೆಬಿಟ್ಟು ಅವನೊಂದಿಗೆ ಓಡಿ ಹೋದಳಂತೆ, ಇಂತಹ ಸುದ್ದಿಗಳು ಲೀಲಾಜಾಲವಾಗಿ ಗಾಳಿಯಲ್ಲಿ ಹರಡಿ ಅಡ್ಡಾಡುತ್ತಾ ಎಲ್ಲರ ಕಿವಿಗೂ ಬಿದ್ದು ಗುಲಾಬಿ ಮುಡಿದವರೇ ಏನೋ ಮನೆಹಾಳರು ಎಂಬ ಪರಿಸ್ಥಿತಿ ಉಂಟಾಗಿತ್ತು. ಹಾಗಾಗಿ ಕಣ್ಣಿಗೆ ಎಷ್ಟು ಚೆಂದ ಕಂಡು ಮನಸ್ಸಿಗೆ ಆಸೆಯಾದರೂ ಗುಲಾಬಿಯನ್ನು ನೋಡುವುದರಲ್ಲಿ ಆಸೆಗಳನ್ನೆಲ್ಲ ತುಂಬಿಕೊಳ್ಳಬೇಕಿತ್ತೇ ವಿನಃ ಮುಡಿದು ತೀರಿಸಿಕೊಳ್ಳುವಂತಿರಲಿಲ್ಲ, ಅಥವಾ ಮದುವೆಯಾಗಿ ಗಂಡ ತಂದುಕೊಡುವವರೆಗೂ ಕಾಯಬೇಕಿತ್ತು.

ಇಂತಿಪ್ಪ ಬ್ರಾಹ್ಮಣ ಕೇರಿಯ ಹುಡುಗಿಯರ ಸಂಕಟವು ಕೇವಲ ಮಾರುಕಟ್ಟೆಯಲ್ಲಿ ಗುಲಾಬಿ ಹೂವು ನೋಡುವುದರಲ್ಲೇ ಕಳೆದುಹೋಗುತ್ತಿತ್ತು. ಮನೆಯಲ್ಲಿ ಕಿರಿಯಳಾದ ನನಗೆ ಮೊಸರಿನ ಸರ್ಕಲ್ಲನ್ನು ಹಾದು ಜಮಾಲನ ಅಂಗಡಿಗೆ ಪ್ರತಿ ಶುಕ್ರವಾರ ಹೋಗಿ ಹೂವು ತರುವ ಜವಾಬ್ದಾರಿ ಹೆಗಲೇರಿತ್ತು. ಅದೊಂದು ಪುಟ್ಟ ವೃತ್ತಕ್ಕೆ ಮೊಸರಿನ ಸರ್ಕಲ್ ಎಂಬ ಹೆಸರು ಬರಲು ಕಾರಣ ಸುತ್ತಲ ಹತ್ತಾರು ಹಳ್ಳಿಗಳಿಂದ ಬಂದು ವೃತ್ತಾಕಾರವಾಗಿ ಕೂರುತ್ತಿದ್ದ ಗೌಳಿಗರು. ಹಳ್ಳಿಗಳಿಂದ ಬರುತ್ತಿದ್ದ ತಾಜಾ ಹಾಲು ಮೊಸರು ಬೆಣ್ಣೆ ಹಾಗೂ ತುಪ್ಪ ಅಲ್ಲಿನ ಸರಕು. ದಿನದ ಬೆಳಗುಗಳಲ್ಲಿ ಮೊಸರಿನ ಸರ್ಕಲ್ಲು ಹಾಗೂ ಮಾರುಕಟ್ಟೆ ಸೇರಿ ಇಡೀ ಮಠದ ಕೆರೆಯ ಸುತ್ತಲೂ ದೊಡ್ಡ ಗೌಜಿನ ಗುಂಪೊಂದು ಉದ್ಭವವಾಗುತ್ತಿತ್ತು. ಸೂರ್ಯನು ನೆತ್ತಿಗೇರಿದಂತೆ ಮೆಲ್ಲನೆ ಆ ಗುಂಪು ಚದುರಿ ದಾರಿಗಳು ಮೊದಲಿನಂತೆ ಬಿಕೋ ಎನ್ನತೊಡಗುತ್ತಿದ್ದವು.

ಈ ಮೊಸರಿನ ಸರ್ಕಲ್ಲಿನ ಬಗ್ಗೆ ಮತ್ತೆ ಮಾತನಾಡೋಣ. ಹೂವಿನ ಹಾದಿಯಲ್ಲಿಯೇ ದೃಷ್ಟಿ ಬೊಟ್ಟಿನಂತೆ ಇರುತ್ತಿದ್ದ ಜಮಾಲನ ಅಂಗಡಿಗೆ ಪ್ರತಿ ಶುಕ್ರವಾರ ಬರುತ್ತಿದ್ದ ನಾನು ಮನೆಯಲ್ಲಿ ಆಣತಿಯಾದಂತೆ ಬೇಕಾದ ಹೂವುಗಳನ್ನೆಲ್ಲಾ ಬುಟ್ಟಿಗೆ ಹಾಕಿಸಿಕೊಳ್ಳುತ್ತಿದ್ದೆ. ಇನ್ನೇನು ಎಲ್ಲಾ ಮುಗಿಯಿತು, ದುಡ್ಡು ಕೊಡಬೇಕೆನ್ನುವಾಗ ನನಗೂ ಜಮಾಲನಿಗೂ ಸಣ್ಣದಾಗಿ ಜಗಳವೊಂದು ಶುರುವಾಗುತ್ತಿತ್ತು. ಎಲ್ಲಾ ಅಂಗಡಿಗಿಂತ ನಿನ್ನಲ್ಲಿ ಯಾಕೆ ಒಂದು ರೂಪಾಯಿ ಹೆಚ್ಚು ಎಂದು ಕಿರುಚಾಡುತ್ತಿದ್ದ ನನಗೆ ಒಂದು ಮುಗುಳ್ನಗೆ ನಕ್ಕು ಕಡೆಗೆ ಅವನೇ ಒಂದು ಉಪಾಯ ಸೂಚಿಸುತ್ತಿದ್ದ. “ಆಯ್ತು ಬಿಡಿ, ಬೆಲೆ ಜಾಸ್ತಿ ಅನ್ಸಿದ್ರೆ ಈ ಗುಲಾಬೀನ ಫಿರೀಯಾಗಿ ಕೊಡ್ತೀನಿ ತಗೊಂಡಿ ಹೋಗಿ.” ಅನ್ನುವನು. ಮಠದ ಕೇರಿಯ ಯಾವುದೋ ಒಂದು ರಹಸ್ಯವನ್ನು ಅರಿತುಕೊಂಡಂತೆ ದುಷ್ಟ ನಗೆಯೊಂದನ್ನು ನನ್ನಡೆಗೆ ಬೀರುವನು. ಗುಲಾಬಿಯ ನೋಟಕ್ಕೆ ಬೆಚ್ಚಿ ಬೀಳುತ್ತಿದ್ದ ನಾನು ಒಳಗೊಳಗೇ ಆಸೆಯಾದರೂ ಕೆಂಡಾಮಂಡಲವಾದಂತೆ ನಟಿಸುತ್ತಾ “ಗುಲಾಬಿ ಯಾಕೆ ಫ್ರೀಯಾಗಿ ಕೊಡ್ತೀರಿ? ನಿಮಗೇನು ಫ್ರೀಯಾಗಿ ಬರುತ್ತಾ…” ಎಂದು ಕಡಿಮೆ ದುಡ್ಡು ಕೊಟ್ಟು ಸಿಡಿಮಿಡಿಗೊಂಡು ಹೊರಟು ಬರುತ್ತಿದ್ದೆ. ವಾಪಸಾಗುವ ಹಾದಿಯಲ್ಲಿ ಗುಲಾಬಿಯನ್ನು ತೆಗೆದುಕೊಳ್ಳಬೇಕಿತ್ತೇ ಎಂಬ ಗೊಂದಲ ಇಡೀ ಶುಕ್ರವಾರ ಕಾಡುತ್ತಿತ್ತು. ಮತ್ತೊಂದು ಶುಕ್ರವಾರ ಬಂತೆಂದರೆ ಮತ್ತದೇ ಕಥೆ.

ಕಣ್ಣಿಗೆ ಎಷ್ಟು ಚೆಂದ ಕಂಡು ಮನಸ್ಸಿಗೆ ಆಸೆಯಾದರೂ ಗುಲಾಬಿಯನ್ನು ನೋಡುವುದರಲ್ಲಿ ಆಸೆಗಳನ್ನೆಲ್ಲ ತುಂಬಿಕೊಳ್ಳಬೇಕಿತ್ತೇ ವಿನಃ ಮುಡಿದು ತೀರಿಸಿಕೊಳ್ಳುವಂತಿರಲಿಲ್ಲ, ಅಥವಾ ಮದುವೆಯಾಗಿ ಗಂಡ ತಂದುಕೊಡುವವರೆಗೂ ಕಾಯಬೇಕಿತ್ತು.

ತೀರ ದೊಡ್ಡವನೂ ಅಲ್ಲದ ನನ್ನಿಂದ ಬೈಸಿಕೊಳ್ಳುವಷ್ಟು ಚಿಕ್ಕವನೂ ಅಲ್ಲದ ಯೌವನಿಗ ಜಮಾಲನ ಹತ್ತಿರ ಒಂದು ಗುಲಾಬಿಗೆ ಗುದ್ದಾಡುವುದು ಬರುಬರುತ್ತಾ ಪರಿಪಾಠವಾಗಿತ್ತು. ಪ್ರತಿ ವಾರ ಅವನ ಗುಲಾಬಿಯನ್ನು ತಿರಸ್ಕರಿಸಿ ಬರುವುದು, ನಂತರ ಪಶ್ಚಾತ್ತಾಪ ಪಡುವುದು, ನನ್ನ ಬೆನ್ನ ಹಿಂದೆ ಜಮಾಲನು ಪಕ್ಕದ ಅಂಗಡಿಯ ಮುಜೀಬನ ಬಳಿ ಉರ್ದುವಿನಲ್ಲಿ ಏನೋ ಹೇಳಿ ನಗುವುದು ಅಭ್ಯಾಸವಾಗಿ ಹೋಯಿತು. ನನಗೆ ಗುಲಾಬಿ ಸಿಗಲಿಲ್ಲವಲ್ಲ ಎಂಬ ನೋವು ಒಂದು ಕಡೆಯಾದರೆ, ಅವನು ಮುಜೀಬನಿಗೆ ಹೇಳಿದ್ದೇನು ಎಂಬ ಕುತೂಹಲ ಇನ್ನೊಂದೆಡೆ. ಬಹುಕಾಲ ಕಳೆಯುವವರೆಗೂ ಜಮಾಲನ ಅಂಗಡಿಯಲ್ಲಿ ನಾನು ಕೊಳ್ಳುವ ಮಲ್ಲಿಗೆ ಹೂವಿಗೆ ಮಾತ್ರ ಮಾರಿಗೊಂದು ರೂಪಾಯಿ ಯಾಕೆ ಹೆಚ್ಚಿರುತ್ತಿತ್ತು ಆ ಲೆಕ್ಕ ಸರಿದೂಗಿಸಲು ಅವನು ‘ಫಿರೀ’ ಗುಲಾಬಿಯನ್ನು ನೀಡಲು ಯಾಕೆ ಮುಂದಾಗುತ್ತಿದ್ದ ಎನ್ನುವುದು ಹೊಳೆದಿರಲೇ ಇಲ್ಲ. ನನ್ನ ಮನಸ್ಸೆಲ್ಲಾ ಅವನು ನನಗೆ ಯಾಕೆ ಗುಲಾಬಿ ಕೊಡಬೇಕು? ಕೊಟ್ಟರೂ, ನಾನದನ್ನು ಮುಡಿಯುವುದು ಹೇಗೆ? ಎನ್ನುವ ಪ್ರಶ್ನೆ ಭೂತಾಕಾರವಾಗಿ ಕಾಡುತ್ತಿತೇ ಹೊರತು ಗುಲಾಬಿಯ ಮುಖಾಂತರ ಅವನು ಹೇಳಹೊರಟ ಸಂದೇಶ ಅರ್ಥವಾಗಲೇ ಇಲ್ಲ.

ಅವನು “ಕಚ್ಚಾ ನೀಬೂ ಹೇ ಜೀ” ಎಂದು ಮುಜೀಬನ ಮುಂದೆ ಆಡಿಕೊಂಡದ್ದು ನನ್ನನ್ನೇ ಎಂಬ ಸತ್ಯ ನಾನು ಮದುವೆಯಾಗಿ ಮಠದ ಕೇರಿ ಬಿಟ್ಟು ಬೆಂಗಳೂರು ಸೇರಿ ಒಂದು ಮಗುವಿನ ತಾಯಿಯಾದ ಮೇಲೆಯೇ ಅರ್ಥವಾದದ್ದು. ಹೂವಿನ ಅಂಗಡಿಗೆ ಹೋದಾಗ ಮಾತ್ರ ಇಂಥ ಗಂಭೀರವಾದ ಚುಡಾಯಿಸುವ ಆಟಗಳು ನಡೆಯುತ್ತಿದ್ದವೇ ವಿನಃ ಮತ್ತೆಲ್ಲೇ ಮುಖಾಮುಖಿಯಾದರೂ ಕತ್ತೆತ್ತಿ ಕೂಡಾ ನೋಡಿದ ಹುಡುಗರು ಅವರಲ್ಲ.

ಹಾಗೊಂದು ಶುಕ್ರವಾರ ಹೂವು ಕೊಂಡು ಮೊಸರಿನ ಸರ್ಕಲ್ ಅನ್ನು ಹಾದು ಮನೆಗೆ ಬರುವಾಗ ನಿತ್ಯ ಹಾಲು ಮೊಸರು ಕೊಡುತ್ತಿದ್ದ ನಿಂಗವ್ವನು “ಅವ್ವ ಮನೇಲಿ ಬೆಳೆದ ಹೂವ, ತಕೋ” ಎಂದು ಒಂದು ದೊಡ್ಡ ಗುಲಾಬಿಯನ್ನು ಕೈಗಿತ್ತಳು. ಮನೆಗೆ ಬಂದು ನಿಂಗವ್ವ ಕೊಟ್ಟಳೆಂದರೆ, ಆಬಾಲವೃದ್ಧರ ಸಮೇತ ಯಾರೂ ನಂಬಲು ತಯಾರಿಲ್ಲ! ಕಡೆಗೆ ನಿಂಗವ್ವನನ್ನು ಕರೆತಂದೇ ಒಪ್ಪಿಸಬೇಕಾಯಿತು. “ಐ.. ಅದ್ಯಾಕ್ ಅಂಗೆ ಕೇಳಿರಿ ಬುದ್ಧಿ… ಮಗ ಹೂವ ಮುಡೀಲಿ ಅಂತ ನಾನೇ ಕೊಟ್ಟೆನಪಾ. ಗುಲಾಬಿ ಮುಡದ್ರೆ ಏನು ತೆಪ್ಪು?” ಅಂದ ಪರಿಣಾಮ, ನಾಲ್ಕು ಶುಕ್ರವಾರಗಳು ನಾನು ಮಾರುಕಟ್ಟೆಯ ಕೆಲಸದಿಂದ ವಜಾಗೊಂಡಿದ್ದೆ!

ಚಿಕ್ಕಂದಿನಲ್ಲಿ ಒಂದು ಮಾಯಾಬಜಾರಿನಂತೆ ರಂಗುರಂಗಾಗಿ ಕಾಣುತ್ತಿದ್ದ ಆ ಪುಟ್ಟ ಮಾರುಕಟ್ಟೆಯು ಎಷ್ಟು ಜನರ ಹೊಟ್ಟೆ ಹೊರೆಯುತ್ತಿತ್ತೊ ಹಾಗೂ ಎಷ್ಟು ಜನರಿಗೆ ಆಪತ್ಬಾಂಧವನಾಗಿತ್ತೋ… ದಿನ ಬೆಳಗಾದರೆ ಸಾವಿರಾರು ಮಂದಿ ಜಾತ್ರೆಯಂತೆ ನೆರೆಯುತ್ತಿದ್ದ ಆ ಜಾಗವು ಮಧ್ಯಾಹ್ನದಿಂದ ಬೆಳಗಿನ ಜಾವದವರೆಗೂ ಮುಸುಕು ಹೊದ್ದ ಸುಂದರಿಯಂತೆ ತನಗೇನೂ ಅರಿವೇ ಇಲ್ಲ ಎಂಬಂತೆ ನೀರವ ಮೌನದಲ್ಲಿ ನಿಸ್ತೇಜವಾಗಿರುತ್ತಿತ್ತು. ಮಾರುಕಟ್ಟೆಗೆ ಅಂಟಿಕೊಂಡಂತಿದ್ದ ಮೂರು ದೇವಸ್ಥಾನಗಳಿಗೆ, ಬೆಳಗ್ಗೆ ತರಕಾರಿಗೆ ಬರುವ ಜನರೇ ಜೀವಾಳ. ಇತ್ತೀಚೆಗೆ ಸ್ನಾನ ಮಾಡದೇ ಮಾರುಕಟ್ಟೆಗೆ ಬರುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಕಾಯಕದಲ್ಲಿ ಅಷ್ಟೇನೂ ನಂಬಿಕೆಯಿಲ್ಲದ ನವೀನ ಪೀಳಿಗೆಯು ಪ್ರವರ್ಧಮಾನಕ್ಕೆ ಬಂದು ದೇವಸ್ಥಾನದ ಅರ್ಚಕರು ಕೂಡಾ ಮಂಗಳಾರತಿ ತಟ್ಟೆ ಬಿಟ್ಟು ಹೊರಗೆ ಬಂದು ಬೆಳಗಿನ ಜಾವದ ಮಾರುಕಟ್ಟೆಯ ರಮಣೀಯ ದೃಶ್ಯಗಳನ್ನು ನೋಡುತ್ತಾ ಹೊರ ಬಾಗಿಲಿನಲ್ಲಿ ನಿಂತು ಬಿಡುತ್ತಿದ್ದರು.

ನಮ್ಮೂರಿನ ಕುಂಚ ಕಲಾವಿದರೆಲ್ಲರೂ ಮಾರುಕಟ್ಟೆಯ ಚಿತ್ರ ಬರೆದು ದೊಡ್ಡವರಾದವರೇ… ಬೆಳಗೆದ್ದು ಐದು ಬಣ್ಣ, ಆರು ಬ್ರಶು, ಒಂದು ಕ್ಯಾನ್ವಾಸು ಹಿಡಿದು ಕೆದರಿದ ತಲೆಯಲ್ಲಿ ಹಳೆ ಶರ್ಟು ಹಾಕಿಕೊಂಡು ಬಂದು ಚಕ್ಕಳಂಬಳ್ಳಿ ಹಾಕಿ ಕೂತುಬಿಟ್ಟರೆ, ನಡು ಮಧ್ಯಾಹ್ನ 12:00 ಗಂಟೆಗೆ ಮಾರುಕಟ್ಟೆಯ ಒಂದಿಷ್ಟು ಸಜೀವ ಚಿತ್ರಗಳನ್ನು ಕ್ಯಾನ್ವಾಸಿನ ಮೇಲೆ ಅಚ್ಚು ಹಾಕಿಕೊಂಡೇ ಹಿಂದಿರುಗುತ್ತಿದ್ದರು. ಸಲಿಲವಾಗಿ ಕೈಯಾಡಿಸುತ್ತಾ ಏನೇನೋ ಗೆರೆಗಳನ್ನು ಭಿತ್ತಿಯ ಮೇಲೆ ಮೂಡಿಸಿ ಕಡೆಗೆ ಅದಕ್ಕೆ ಜೀವ ತುಂಬುವರು. ನಮ್ಮಂಥ ಮಕ್ಕಳ ಹಿಂಡೊಂದು ಅವರ ಸುಲಲಿತವಾದ ಬೆರಳುಗಳ ಓಟ ಹಾಗೂ ಬರೆದ ಕಣ್ಣುಗಳಲ್ಲಿ ಅವರು ತುಂಬುತ್ತಿದ್ದ ಜೀವ ಎಲ್ಲವನ್ನು ಆಶ್ಚರ್ಯಚಕಿತ ಕಂಗಳಿಂದ ಎದೆಗಿಳಿಸಿಕೊಳ್ಳುತ್ತಾ ಅವರ ಹಿಂದೆಯೇ ನಿಂತಿರುತ್ತಿದ್ದೆವು. ಮನೆಯನ್ನು ಮರೆತು ಸಿಕ್ಕಸಿಕ್ಕವರ ಹಿಂದೆ ನಿಲ್ಲಲು ನಾಚಿಕೆ ಆಗುವುದಿಲ್ಲವೇ ಎಂದು ಹಿಗ್ಗಾಮುಗ್ಗಾ ಬೈಸಿಕೊಳ್ಳದ ದಿನ ನಮಗೇನೋ ಖಾಲಿ ಖಾಲಿ ಅನಿಸುತ್ತಿತ್ತು. ದೊಡ್ಡವರಿಂದ ಬೈಸಿಕೊಳ್ಳುವುದು ನಮ್ಮ ಸಾಂಸ್ಕೃತಿಕ ದಿನಚರಿಯ ಭಾಗವಾಗಿಬಿಟ್ಟಿತ್ತು. ಬೈಯ್ಯದೆ ಬೆಳೆಸುವುದು ಒಂದು ಲೋಪವೆಂಬಂತೆ, ಮಕ್ಕಳನ್ನು ಬಯ್ಯುವವರೇ ನಾಡು-ನುಡಿ ಹಾಗೂ ಸಂಸ್ಕೃತಿಯ ಹಿತಚಿಂತಕರೆಂಬಂತೆ ಪೋಷಕರು ಪರಿಭ್ರಮಿಸುತ್ತಿದ್ದ ಕಾಲ ಅದು. ಹಾಗಾಗಿ ನಾವು ಏನು ಮಾಡಿದರೂ ಅದರಲ್ಲೊಂದು ತಪ್ಪು ಖಂಡಿತ ಹೇಗಾದರೂ ಇಣುಕುತ್ತಿತ್ತೆಂದು ನಮಗೆ ಅದಾಗಲೇ ಗೊತ್ತಿರುತ್ತಿತ್ತು. ಬೈಗುಳಕ್ಕೆ ತುತ್ತಾಗುವ ಕ್ಷಣಗಣನೆಯನ್ನು ಮಾಡುತ್ತಲೇ ದಿನ ದೂಡುತ್ತಿದ್ದೆವು.

ಹಾಗಿರುವಾಗ ಇನ್ನು ಜಮಾಲನಿಂದ ಗುಲಾಬಿ ಪಡೆದು ಮನೆಗೆ ಹೋದರೆ ಕೇವಲ ಬೈಗುಳ ಮಾತ್ರ ಸಿಗುತ್ತಿತ್ತು ಎಂದು ಹೇಗೆ ಎಣಿಸಲಿ? ಅವನು ಗುಲಾಬಿ ಹಿಡಿದು ಕೈಚಾಚಿದರೆ ನನ್ನ ತಲೆಯಲ್ಲಿ ಮನೆಯೊಳಗೆ ಗುಂಡಿ ತೋಡಿ ಮಗಳನ್ನು ಹೂತ ನಿರ್ದಯಿ ಪಾಲಕರ ರಣ ಘೋರ ಚಿತ್ರವೇ ಕಣ್ಣ ಮುಂದೆ ಬರುತ್ತಿತ್ತು. ಮತ್ತು ನಾನು ಸಮಾಧಿಯಾದ ಗುಂಡಿಯ ಒಳಗಿನಿಂದ ಉಸಿರಾಡುತ್ತಿರುವೆನೆಂದೂ, ಎಲ್ಲರ ಕೂಗು ನನಗೆ ಕೇಳಿಸುತ್ತಿದ್ದು ನನ್ನ ಕೂಗು ಯಾರಿಗೂ ಕೇಳುತ್ತಿಲ್ಲವೆಂದೂ ಭಾಸವಾಗಿ ಭಯವಾಗುತ್ತಿತ್ತು. ಅವನು ಗುಲಾಬಿ ತೋರಿಸಿದ ಕೂಡಲೇ ನಾನು ನಿಂತ ಜಾಗದಿಂದ ಕಾಲು ಕೀಳುತ್ತಿದ್ದುದಕ್ಕೆ ಈ ಘನಘೋರ ವಿಭ್ರಮೆಯೂ ಕಾರಣವಾಗಿತ್ತು.

ಈಗ ಮನೆಯಲ್ಲಿ ಹಬ್ಬ-ಹುಣ್ಣಿಮೆಗಳೆಂದರೆ ಉದ್ದುದ್ದದ ಮಲ್ಲಿಗೆ ಮುಡಿಯುವ ಹುಡುಗಿಯರಿಗಿಂತ ಕಿವಿ ಹಿಂದೆ ಚಂದಗೆ ಕಾಣುವಂತೆ ಒಂದೇ ಒಂದು ಕೆಂಪು ಗುಲಾಬಿ ಮುಡಿಯುವ ಮಕ್ಕಳೇ ಹೆಚ್ಚು. ದೇವರ ಪೂಜೆಗೂ ಕಳಸದ ತಲೆಗೂ ಈಗ ಗುಲಾಬಿ ಸಲ್ಲುತ್ತದೆ. ಮೊನ್ನೆ ಕಳೆದ ಯುಗಾದಿಗೆ ಅಂಗಳದಲ್ಲೇ ಬೆಳೆದಿದ್ದ ಚಂದದ ಕೆಂಪು ಗುಲಾಬಿಗಳು ಮನೆಯ ತುಂಬಾ ರಾರಾಜಿಸಿದವು. ಜಮಾಲನ ನಗು ಮುಖವೂ ಅವನ ಕೆಂಪು ಹಲ್ಲೂ ಅವನ ಕುಚೋದ್ಯವೂ ನೆನಪಾಗಿ ಒಬ್ಬೊಬ್ಬಳೇ ನಗುತ್ತಿದ್ದೆ. ಮನೆಯಲ್ಲಿ ಮಕ್ಕಳು ಅಮ್ಮನಿಗೆ ಇತ್ತೀಚೆಗೆ ಮತಿಭ್ರಮಣೆ ಎಂದೂ ಒಬ್ಬೊಬ್ಬಳೇ ನಗುತ್ತಾಳೆಂದೂ, ಕೇಳಿದರೆ ಉದ್ದುದ್ದ ಕಥೆ ಹೇಳುತ್ತಾಳೆ ಎಂದೂ ಒಳಗೊಳಗೇ ಮುಸಿಮುಸಿ ನಗುತ್ತಿದ್ದರು. ಅವರ ಪಾಡಿಗೆ ಅವರು ಅವರದೇ ಲೋಕದಲ್ಲಿ ಚಿತ್ರಿಸಿಕೊಂಡಿದ್ದ ಪೆದ್ದು ಅಮ್ಮನ ಬಗ್ಗೆ ಕಿತಾವಣೆ ನಡೆಸುತ್ತಿದ್ದರು. ನಾನು ಇಡೀ ಮಾರುಕಟ್ಟೆಯ ಚಿತ್ರವನ್ನು ಹರಡಿಕೊಂಡು ನನ್ನ ನೆನಪಿನ ಬಣ್ಣಗಳಿಂದ ಮನಸ್ಸಿನ ಕ್ಯಾನ್ವಾಸಿನ ಮೇಲೆ ಬಿಡಿಸುತ್ತಾ ನಿಂತೆ.