ಸಣ್ಣ ಸಣ್ಣ ನುಣುಪಾದ ಕಲ್ಲುಗಳು ಆ ನುಣುಪನ್ನು ಪಡೆಯಲಿಕ್ಕೆ ಅದೆಷ್ಟು ನೀರಿನ ಹೊಡೆತವನ್ನು ತಿಂದಿರಬೇಕು… ನಾವೆಲ್ಲಾ ನೀರಿನಲ್ಲಿ ನುಣುಪಾದ ಕಲುಗಳನ್ನು ಎಸೆಯುತ್ತಾ ಆಡುತ್ತೇವೆ. ಚಪ್ಪಟೆಯಾದ ನುಣುಪುಗಲ್ಲುಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ, ಅದಕ್ಕೇನೋ ಶಕ್ತಿ ಬಂತೆಂದು ಭಾವಿಸಿ, ‘ನಾವು ಆದಷ್ಟು ಬೇಗ ತಲೆ ಮೇಲೊಂದು ಸೂರು ಮಾಡಿಕೊಳ್ಳುವಂತಾಗಲಿ ಶಕ್ತಿಯೇ’ ಎಂದು ಬೇಡಿ, “ಮತ್ತೊಮ್ಮೆ ಬರುವವರೆಗೂ ಹೀಗೆ ಇರಲಿ” ಎಂದು ಕೇಳಿಕೊಂಡು ಪ್ರಾರ್ಥನೆಯನ್ನು ಕೊನೆಗೊಳ್ಳಿಸಿಕೊಳ್ಳುತ್ತೇವೆ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ
ಆಗು ಗೆಳೆಯಾ ಆಗು ನೀನು
ಭರವಸೆಯ ಪ್ರವಾದಿ…
ಹತಾಶೆಯಲ್ಲೇನಿದೆ
ಬರೀ ಶೂನ್ಯ ಬರೀ ಬೂದಿ…”
-ಬಿ.ಆರ್.ಎಲ್.
ಅಂದು ಕಾಡು ಮೇಡು ಅಲೆಯುತ್ತಾ ಸಾಗುವಾಗ ಎದುರಾದ ಸಣ್ಣ ಸಣ್ಣ ಹುಳ ಹುಪ್ಪಟೆಗಳು, ಅದರ ಬಣ್ಣ, ಕಣ್ಣು, ಮೂಗು, ಕೊಂಬು, ಬಾಲ ಎಲ್ಲವನ್ನೂ ಮುಟ್ಟುತ್ತಾ, ಸಣ್ಣ ಸಣ್ಣ ಹೂಗಳು… ಅದರ ಬಣ್ಣ, ಪಕಳೆ, ಕೇಸರ, ಶಲಾಕೆ… ಎಲ್ಲವೂ ಈ ಪುಟ್ಟ ಹೂವಿನಲ್ಲಿ ಹೇಗೆ ಹುದುಗಿಸಲ್ಪಟ್ಟಿವೆ ಎಂದು ಆಶ್ವರ್ಯಪಡುತ್ತಾ, ಪುಟ್ಟ ಪುಟ್ಟ ಸಸಿಗಳು, ಸಸಿಗಳ ಅಮ್ಮಂದಿರು, ಸಂಸಾರೊಂದಿಗರು ಎಲ್ಲರೂ ಒಂದಾಗಿ ಬದುಕಿದ್ದರಿಂದ ಆದ ಕಾಡು… ಈ ಪುಟ್ಟ ಪ್ರಪಂಚದಲ್ಲಿ ಅಗಾಧ ರಹಸ್ಯಗಳನ್ನು ಹುದುಗಿಸಿದ್ದು ಹೇಗಿರಬಹುದು, ಯಾರಿರಬಹುದು?! ಎಂಬ ಏನೆಲ್ಲ ಪುಟ್ಟ ಪುಟ್ಟ ಅಚ್ಚರಿಗಳು ಕಾದಿದ್ದವು ಕಾಲು ಹಾದಿಯ ಬದಿಯಲ್ಲಿ. ಯಾವುದೂ ನಿರೀಕ್ಷಿತವಾಗಿರಲಿಲ್ಲ. ನಾನವನ್ನೆಲ್ಲ ಭೇಟಿ ಮಾಡುವೆನೆಂಬ ವಿಷಯವೂ ಗೊತ್ತಿರಲಿಲ್ಲ.
ಹಗಲಿನ ಸೂರ್ಯ ಪ್ರಖರತೆಯ ಶಿಖರ ಹತ್ತುತ್ತಲಿದ್ದ. ನಮ್ಮ ನೆತ್ತಿಗಳು ಬೆಚ್ಚಗಾಗತೊಡಗಿದ್ದವು. ಆಗಾಗ ಆಕಾಶ ಮುಟ್ಟುವ ಹುಚ್ಚು ಸಹಾಸ ಮಾಡುವ ಮರಗಳ ಅಡಿಯಲ್ಲಿ ಸಾವರಿಸಿಕೊಳ್ಳಲು ನಿಂತೆವು. ಕೆಮ್ಮಣ್ಣು ಹುಡಿಯಾಗಿ ಎಲ್ಲೆಡೆಯೂ ಎಲ್ಲವನ್ನೂ ಆವರಸಿ ಇಡೀ ವಾತಾವರಣಕ್ಕೆ ಕೆಂಬಣ್ಣದ ಶೇಡ್ ನೀಡಿತ್ತು. ನಮ್ಮ ಕಾಲುಗಳು ಸೋಲುತ್ತಿದ್ದವು. ಆದರೆ ಮನಸಿನಲ್ಲಿ ಎಂಥದೋ ಹುರುಪು. ಕಾಲುಗಳ ದಣಿವು ಮನಸಿಗೆ ಗೊತ್ತಾಗಲಿಲ್ಲ. ನಾವೆಲ್ಲ ಕನಸುಗಳ ಬಗ್ಗೆ ಮಾತಾಡುತ್ತಾ ಹೊರಟಿದ್ದೆವು. ಈಗ ಇಳಿಯುತ್ತಿರುವ ಈ ಪ್ರಪಾತವೂ ಒಂದು ಕನಸಿನಂತೇ ಎಂದು ಭಾವಿಸುತ್ತಾ.
ಒಬ್ಬೊಬ್ಬರಿಗೆ ಒಂದೊಂದು ಕನಸು. ಕೆಲವರದು ರಾತ್ರಿಯ ಕನಸು. ಮತ್ತೆ ಕೆಲವರದು ಹಗಲುಗನಸು. ಮತ್ತೆ ಕೆಲವರದು ಹುಚ್ಚುಗನಸು. ಮತ್ತೆ ಕೆಲವರದು ಪೆಚ್ಚುಗನಸು. ಕೆಲವರದು ನನಸಾಗುವ ಕನಸು, ಕೆಲವರದು ನನಸಾಗದ ಕನಸು. ನಮ್ಮ ಗುಂಪಿನಲ್ಲಿದ್ದ ಕೆಲವರಿಗೆ ತಮ್ಮ ವಾದದಲ್ಲಿ ಸೋತೂ ಸೋತೂ ದಣಿವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಒಂದು ರೀತಿಯ ಆಕ್ರೋಶ ಸಿಡಿಯುವ ಹಂತಕ್ಕೆ ಏರತೊಡಗಿತ್ತು. ನನಸಾಗದ ಕನಸು ಎಂದಾಗ ಅದರ ಕಟ್ಟೆ ಒಡೆದು ಹೋಯಿತು. ನನಸಾಗದ್ದು ಎಂದು ಯಾವುದಿದೆ ಇಲ್ಲಿ?! ಎನ್ನುವ ವಾದ ಅವರದ್ದು. ಅದೂ ನಿಜವೇ… ಇಲ್ಲಿ ನನಸಾಗದ್ದು ಎನ್ನುವುದು ಯಾವುದೂ ಇಲ್ಲ.
ಇಲ್ಲಿ ಎಲ್ಲವೂ ಸೂರ್ಯನ ಸುತ್ತುವ ಗ್ರಹಗಳಂತೆ ಒಂದು ನಿರ್ದಿಷ್ಟ ವೇಗಕ್ಕೆ ಒಳಪಟ್ಟು, ನಿರ್ದಿಷ್ಟ ಪಥದಲ್ಲಿ ಬದಲಾಗುತ್ತಲೇ ಇರುತ್ತವೆ. ಎಲ್ಲದರ ಹಣೆ ಬರಹವೂ ಪೂರ್ವನಿರ್ಧರಿತ. ಅದು ತನ್ನ ಸರತಿ ಬರುವವರೆಗೂ ಕಾಯುತ್ತಿರುತ್ತದೆ. ಅವೇ ಬಹುಶಃ ರಾತ್ರಿಯ ಕನಸುಗಳಾಗಿ ಮನಸನ್ನು ಪ್ರವೇಶಿಸುತ್ತವೆ. ಅಥವಾ ಮನಸಿನ ಕಲ್ಪನೆಯ ಪದರದೊಳಗೆ ಸೇರಿ ಹಗಲುಗನಸುಗಳಾಗುತ್ತವೆ. ಹಾಗಾಗಿ ಧ್ಯಾನಿಸಿದರೆ ಸಾಕು; ನಡೆಯದೆ ಇರುವುದಾದರೂ ಎಲ್ಲಿದೆ?! ಧ್ಯಾನಿಸಬೇಕು ನಾವು. ಧ್ಯಾನವೆಂದರೆ ಎಂತಹ ಧ್ಯಾನ? ನಾವು ಕಣ್ಣು ಮುಚ್ಚಬೇಕು, ಮುಚ್ಚಿ ಜಗವನ್ನು, ಜಗದ ಶಬ್ದವನ್ನು, ಶಬ್ದದ ಚಿತ್ರವನ್ನು, ಚಿತ್ರದ ಮಾತನ್ನು ಮರೆಯಬೇಕು. ನಮಗೆ ಕಣ್ಣು, ಮೂಗು, ಬಾಯಿ, ಕಿವಿ, ಚರ್ಮಗಳೆನ್ನುವ ಪಂಚೇಂದ್ರಿಯಗಳು ಇರುವವೆಂಬುದನ್ನೂ ಮರೆತಂತಹ ಧ್ಯಾನವಾಗಬೇಕು ಅದು. ಕಣ್ಣು ಮುಚ್ಚಿದಾಗ ಪ್ರಕಾಶಮಾನ ಬೆಳಕೊಂದನ್ನು ಹೊರತುಪಡಿಸಿ ಬೇರಾವುದೂ ಕಣದಾಗಬೇಕು… ಅದು ಧ್ಯಾನ. ನಮಗೀಗ ಯಾರ ಮೇಲೂ ಕೋಪವಿಲ್ಲ, ಅಸೂಯೆಯಿಲ್ಲ. ಮನಸ್ಸು ನಿರ್ಮಲವಾಗಿದೆ. ಹಸಿರು ಪತ್ರದ ಮೇಲೆ ನಸುನಗುತ್ತ ಹೊಳೆಯುತ್ತಿರುವ ಶುಭ್ರ ಜಲಬಿಂದುವಿನಂತೆ… ಅದು ಧ್ಯಾನದ ಶಕ್ತಿ. ಮನಸ್ಸನ್ನು ತೊಳೆಯುವ ಮಾರ್ಜಕವದು… ತೊಳೆದಾದ ನಂತರ ಆ ಶುಭ್ರ ಪಾತ್ರೆಯನ್ನು ಪ್ರೀತಿ, ಮಮತೆ, ಕರುಣೆ, ಅಂತಃಕರಣದಂತಹ ಜೀವದ್ರವ್ಯಗಳಿಂದ ತುಂಬಿಸಿಕೊಳ್ಳಬೇಕು…
ಯಾಕೆ ಆಗುವುದಿಲ್ಲ?! ಸಾಧ್ಯವಿಲ್ಲ ಎನ್ನುವುದೇ ಒಂದು ಸುಳ್ಳು. ಅಲ್ಲೊಂದು ಸಣ್ಣಾತಿ ಸಣ್ಣ ಇರುವೆಯಿದೆ. ಅದರ ಬಣ್ಣ ಬೇರೆ ಕಪ್ಪು. ಅದು ಯಾರದಾದರೂ ಕಣ್ಣಿಗೆ ಬೀಳುವುದೇ ಕಷ್ಟ. ಹೀಗಿರುವಾಗ ಅದು ಬದುಕುಳಿಯಲಿ ಎಂದು ಆಶಿಸುವುದಾದರೂ ಯಾರು?! ಆದರೆ ಕಪ್ಪಿರುವೆ ನಿತ್ಯ ನಾಳೆಗಾಗಿ ಆಹಾರವನ್ನು ಸಂಗ್ರಹಿಸುತ್ತದೆ. ಅದಕ್ಕೆ ಎಂಥದೋ ವಿಶ್ವಾಸ ನಾಳೆಯ ಬಗ್ಗೆ. ಒಂದು ದಿನ ಜೋರು ಮಳೆ. ಕಪ್ಪಿರುವೆ, ಸುನಾಮಿಯಂಥ ಪ್ರವಾಹದಲ್ಲಿ ತೇಲಿ ತೇಲಿ ತೇಲಿ ಸತ್ತೇ ಹೋಯಿತು ಎನ್ನುವ ಹೊತ್ತಿಗೆ ತರಗೆಲೆಯೊಂದು ಅಡ್ಡ ಬಂದು, ನೀರಿನ ವೇಗ ಅದನ್ನು ಎಲೆಯ ಮೇಲಕ್ಕೆ ತಳ್ಳಿ, ಅದು ನಿಟ್ಟುಸಿರಿಡುವಂತಾಗಿದ್ದು ನಾಳೆಯ ಭರವಸೆಯೇ ಇರಬಹುದು.
ಈ ಪುಟ್ಟ ಪ್ರಪಂಚದಲ್ಲಿ ಅಗಾಧ ರಹಸ್ಯಗಳನ್ನು ಹುದುಗಿಸಿದ್ದು ಹೇಗಿರಬಹುದು, ಯಾರಿರಬಹುದು?! ಎಂಬ ಏನೆಲ್ಲ ಪುಟ್ಟ ಪುಟ್ಟ ಅಚ್ಚರಿಗಳು ಕಾದಿದ್ದವು ಕಾಲು ಹಾದಿಯ ಬದಿಯಲ್ಲಿ. ಯಾವುದೂ ನಿರೀಕ್ಷಿತವಾಗಿರಲಿಲ್ಲ. ನಾನವನ್ನೆಲ್ಲ ಭೇಟಿ ಮಾಡುವೆನೆಂಬ ವಿಷಯವೂ ಗೊತ್ತಿರಲಿಲ್ಲ.
ಒಂದು ದಿನ ಅರಣ್ಯಕ್ಕೇ ಬೆಂಕಿ ಬಿತ್ತು. ಇನ್ನು ಎಕಶ್ಚಿತ್ ಇರುವೆ ಸತ್ತಂತೇ.. ಕಪ್ಪಿರುವೆ ಎಂದಿನಂತೇ ನಾಳೆಗಾಗಿ ಆಹಾರ ಹುಡುಕಿ, ಹೊತ್ತು ಒಯ್ಯುತ್ತಾ ಇರುವಾಗಲೇ ಬೆಂಕಿಯ ಕೆನ್ನಾಲಿಗೆ ಇತ್ತಲೇ ಧಪಾ ಧಪಾ ಹೆಜ್ಜೆ ಹಾಕಿ ಬರುತ್ತಿತ್ತು. ಇರುವೆಗೇನು ಅದರಿಂದ?! ಅದಕ್ಕೆ ನಾಳೆಯ ಚಿಂತೆ ಅಷ್ಟೇ. ಓಡಿ ಹೋಗುತ್ತಿದ್ದ ಜಿಂಕೆಯೊಂದರ ಕಾಲಿಗೆ ಸಿಕ್ಕಿಕೊಂಡಿದ್ದ ಹುಲ್ಲಿನಲ್ಲಿ ಅಚಾನಕ್ ನಮ್ಮ ಕಪ್ಪಿರುವೆ ಸಿಕ್ಕಿಕೊಳ್ಳಬೇಕೇ?! ಜಿಂಕೆ ಓಡಿದಷ್ಟೂ ದೂರ ಇರುವೆ ಸಾಗಿತು. ಈಗದು ಸುರಕ್ಷಿತ ನೆಲೆ ತಲುಪಿಬಿಟ್ಟಿದೆ?! ನಾಳೆಗೆಂದು ತಂದಿದ್ದ ತಿಂಡಿಯೂ ಹಾಗೇ ಇದೆ. ಸೂರ್ಯ ಪಶ್ಚಿಮದ ಮೆಟ್ಟಿಲು ಇಳಿಯುತ್ತಿದ್ದಾನೆ. ಕಣ್ಣ ರೆಪ್ಪೆಗಳು ಕೂಡುತ್ತಿವೆ. ವಿಶ್ರಾಂತಿ ದೇಹಕ್ಕೆ. ಕಾಯುವವನಷ್ಟೇ ದೊಡ್ಡವನು… ಹೊಂಚು ಹಾಕುವ ಕೊಲ್ಲುವವನಿಗಿಂತಾ ದೊಡ್ಡವನು… ಭರಸೆ ಎನ್ನುವುದೊಂದಿಲ್ಲವಾದರೆ ನಾಳೆಗಳೇ ಖುದ್ದು ಸಾಯುತ್ತವೆ.
“ಕೊಚ್ಚಿದಷ್ಟು ಹೆಚ್ಚಿ ಬರುವ ಸೃಷ್ಟಿಶೀಲ ಪ್ರಕೃತಿ
ಹುಬ್ಬಿಯಲ್ಲು ಹುಳಿನೀಗಿದ ಸಿಹಿ ಹಣ್ಣಿನ ಪ್ರೀತಿ
ಅದುಮಿದಷ್ಟು ಚಿಮ್ಮಿ ಬರುವ ಚೈತನ್ಯದ ಚಿಲುಮೆ
ಇಂದು ನಮ್ಮ ಯತ್ನಗಳಿಗೆ ಅದೇ ತಕ್ಕ ಪ್ರತಿಮೆ”
-ಬಿ.ಆರ್.ಎಲ್.
ಪ್ರಕೃತಿಯ ವಿಶ್ವ ದರ್ಶನ ಮಾಡುತ್ತಾ ಮಾಡುತ್ತಾ ತಲುಪಿದ ಮೇಲೆ ಪ್ರಪಾತ ನಮ್ಮನ್ನು ಮತ್ತಷ್ಟು ವಿಸ್ಮಯಗೊಳಿಸುತ್ತದೆ. ಈ ಪ್ರಪಾತದ ಎದಿರು ಎತ್ತರ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ ಎಂದುಕೊಳ್ಳುತ್ತೇವೆ. ನಮಗೆ ಇದರ ವ್ಯತ್ಯಾಸ ಮೇಲು ಕೀಳಿನಂತೆ ಭಾಸವಾದರೆ ಅದು ನಮ್ಮ ಕರ್ಮ. ಒಂದು ಜಲಪಾತಕ್ಕೆ ಮಾತ್ರ ಗೊತ್ತು; ಈ ಎತ್ತರ ಮತ್ತು ಪ್ರಪಾತವೆರೆಡರ ಪ್ರಾಮುಖ್ಯತೆ. ಎತ್ತರ ಮತ್ತು ಪ್ರಪಾತಗಳೆರೆಡೂ ಇಲ್ಲದೆ ಜಲಪಾತಕ್ಕೆ ಅಸ್ತಿತ್ವವೆಲ್ಲಿದೆ… ನಾವು ಎರಡಕ್ಕೂ ಕೃತಜ್ಞರಾಗುಳಿಯಬೇಕು. ಜೊತೆಗೆ ತಂಪೆರೆಯುವ ಜಲಪಾತಕ್ಕೂ…
ಸಣ್ಣ ಸಣ್ಣ ನುಣುಪಾದ ಕಲ್ಲುಗಳು ಆ ನುಣುಪನ್ನು ಪಡೆಯಲಿಕ್ಕೆ ಅದೆಷ್ಟು ನೀರಿನ ಹೊಡೆತವನ್ನು ತಿಂದಿರಬೇಕು… ನಾವೆಲ್ಲಾ ನೀರಿನಲ್ಲಿ ನುಣುಪಾದ ಕಲುಗಳನ್ನು ಎಸೆಯುತ್ತಾ ಆಡುತ್ತೇವೆ. ಚಪ್ಪಟೆಯಾದ ನುಣುಪುಗಲ್ಲುಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ, ಅದಕ್ಕೇನೋ ಶಕ್ತಿ ಬಂತೆಂದು ಭಾವಿಸಿ, ‘ನಾವು ಆದಷ್ಟು ಬೇಗ ತಲೆ ಮೇಲೊಂದು ಸೂರು ಮಾಡಿಕೊಳ್ಳುವಂತಾಗಲಿ ಶಕ್ತಿಯೇ’ ಎಂದು ಬೇಡಿ, “ಮತ್ತೊಮ್ಮೆ ಬರುವವರೆಗೂ ಹೀಗೆ ಇರಲಿ” ಎಂದು ಕೇಳಿಕೊಂಡು ಪ್ರಾರ್ಥನೆಯನ್ನು ಕೊನೆಗೊಳ್ಳಿಸಿಕೊಳ್ಳುತ್ತೇವೆ. ಯಾವ ಶಕ್ತಿಯಾದರೂ ಸರಿ ಸಿಕ್ಕರೆ ಸಾಕು ನಾವು ಬೇಡದೆ ಬಿಡುವುದಿಲ್ಲ. ಅಥವಾ ನಮ್ಮ ಬೇಡಿಕೆಗಳು ಬದಲಾಗುವುದೂ ಇಲ್ಲ, ಮುಗಿಯುವುದೂ ಇಲ್ಲ. ಮತ್ತೆ ನಮ್ಮ ಉದ್ಧಾರವಲ್ಲದೆ ಬೇರೆ ಏನಕ್ಕೂ ಬೇಡುವವರಾಗಲಾರೆವು ನಾವು…
ನೀರಿನ ಸಂಭ್ರಮ ಮುಗಿದಿಲ್ಲದೆ ಹೋದರು ಪ್ರಪಾತವನ್ನು ಅಲ್ಲಿಯೇ ಬಿಟ್ಟು ಹೊರಡುವಾಗ ಇಕ್ಕೆಲಗಳ ಜಗತ್ತು ಮತ್ತೂ ವಿಸ್ಮಯದ ಮೂಟೆಯನ್ನು ತೆರೆದುಕೊಂಡು ಕೂತಿತ್ತು. ಇಳಿಯುವಾಗಿದ್ದ ಉತ್ಸಾಹ ಹತ್ತುವಾಗ ತುಸುವೇ ತುಸು ಕಡಿಮೆಯಾಗಿತ್ತಾದರೂ ಕುತೂಹಲ ಬಾಕಿ ಇತ್ತು. ಹತ್ತುವಾಗ ಕಾಲುಗಳು ವಿಚಿತ್ರವಾಗಿ ನೋಯುತ್ತಿದ್ದವು. ಮೊಣಕಾಲಿನ ಮೇಲೆ ಭಾರ ಬಿದ್ದಾಗ, ಮೊಣಕಾಲಿಂದ ಕೆಳಗಿನ ಭಾಗ ಅದುರುತ್ತಿತ್ತು. ಕೆಲವೊಮ್ಮೆ ದೇಹದ ಭಾರವನ್ನು ಹೊರಲಾರದಂತಾಗಿ ಕಾಲು ಜಾರುತ್ತಿತ್ತು. ಕೆಳಗಿನ ಪ್ರಪಾತ ಯಾವುದೋ ಆಕರ್ಷಣ ಶಕ್ತಿಯನ್ನು ಅಲ್ಲೆಲ್ಲಾ ಹರಡಿರಬೇಕು. ತನ್ನಲ್ಲಿಗೆ ಬಂದವರನ್ನು ಬಿಟ್ಟುಕೊಡುವ ಮನಸದಕ್ಕೆ ಇಲ್ಲದಿರಬಹುದು. ನಮ್ಮ ದೇಹದ ಲವಣಗಳ ರುಚಿ ಸಿಕ್ಕಿರಬೇಕು ಜಲಪಾತಕ್ಕೆ. ಹತ್ತಲು ಕಷ್ಟವಾಗುತ್ತಿತ್ತು. ಆದರೆ ನಮ್ಮ ಮನಸ್ಸು ಮತ್ತು ಮನಸಿನ ಕನಸು ಏನೇನೋ… ನಾಳೆಯ ಬಂಡಿಯಲ್ಲಿ ಏನೇನೋ ಕಾರ್ಯಕ್ರಮಗಳಿವೆ. ಇಂದಿನದನ್ನು ಶತಾಯ ಗತಾಯ ಮುಗಿಸಿ ಹೊರಡಬೇಕಿದೆ ಎಂದುಕೊಳ್ಳುವಾಗ ಕಾಲುಗಳಿಗೆ ಹೊಸ ಹುರುಪು ಕೂಡಿತು… ಕಾಲದ ಚಲನೆಯನ್ನು ಬದಿಗೆ ಸರಿಸಿ, ಉಸಿರು ಬಿಗಿಹಿಡಿದು ಮೇಲೆ ಬಂದಾಗ ನಸುಗತ್ತಲು ತನ್ನ ಚಾದರವನ್ನು ಬಿಡಿಸಿ ಹೊದೆಸಲು ತಯಾರಾಗಿ ನಿಂತಿತ್ತು… ನಾವು ಕಾಲು ಚಾಚಿ ಮಲಗಿದೆವು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”