ಏಳನೇ ತರಗತಿಗೆ ಹೋಗುವ ವೇಳೆಗೆ ನಾನು ಓದುವುದರಲ್ಲಿ ತರಗತಿಗೇ ಮೊದಲಿಗನಾಗಿದ್ದೆ. ಅದರಲ್ಲೂ 7 ನೇ ತರಗತಿಯಲ್ಲಿ ಬುಡೇನ್ ಸಾಬ್ ಮೇಷ್ಟ್ರು ಗಣಿತ ತೆಗೆದುಕೊಂಡ ಮೇಲೆ ನನಗೆ ಗಣಿತ ತುಂಬಾ ಇಷ್ಟದ ವಿಷಯವಾಯಿತು. ಮೇಷ್ಟ್ರು, ಮೇಡಂ ಪ್ರೇರಣೆಯಿಂದ ಅಲ್ಲದೇ ಮನೆಯಲ್ಲಿ ಹೇಳುತ್ತಿದ್ದ ‘ನಿನ್ನ ಕೈಲಿ ಹೊಲ ಮನೆಯ ಕೆಲಸ ಮಾಡೋಕೆ ಆಗೋಲ್ಲ, ಓದಿ ಕೆಲಸ ತಗೋ’ ಎಂಬ ಮಾತು ನನ್ನ ಮನದಲ್ಲಿ ಹೊಕ್ಕಿ ಓದಿನ ವಿಷಯದಲ್ಲಿ ತುಂಬಾ ಸೀರಿಯಸ್ ಆಗಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

ಆಗೆಲ್ಲಾ ಮನೋರಂಜನೆಗೆ ಊರಲ್ಲಿ ಜಾತ್ರೆ ಬಂತೆಂದರೆ ಊರವರೆಲ್ಲಾ ಸೇರಿ ನಾಟಕದವರನ್ನು‌ ಕರೆಸ್ತಾ ಇದ್ರು. ಸರ್ಕಸ್ ಕಂಪೆನಿಗಳವರು ಊರಲ್ಲಿ ಬಂದು ಟೆಂಟ್ ಹಾಕ್ತಾ ಇದ್ರು. ಹೀಗೆ ಒಮ್ಮೆ ಸರ್ಕಸ್ ಕಂಪೆನಿಯವರು ಟೆಂಟ್ ಹಾಕಿದಾಗ ನಾವು ಏಳು ಘಂಟೆಗೆ ಊಟ ಮಾಡಿ ಸರ್ಕಸ್ ನೋಡೋಕೆ ಜಮಾಯಿಸುತ್ತಿದ್ವಿ. ಅವರು ನೀರು ತುಂಬಿದ ಕೊಡಪಾನವನ್ನು ಹಲ್ಲುಗಳಲ್ಲಿ ಎತ್ತಿಕೊಂಡು ಸೈಕಲ್ ಹೊಡೆಯುತ್ತಿದ್ದುದು, ಟ್ಯೂಬ್ ಲೈಟನ್ನು ತೆಗೆದುಕೊಂಡು ಮೈಮೇಲೆ ಬಾರಿಸಿಕೊಳ್ಳುತ್ತಿದ್ದುದು ನೋಡಿ ನಮಗೆ ಆಶ್ಚರ್ಯವೆನಿಸುತ್ತಿತ್ತು. ಅನಂತರ ಫಿಲಂ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದರು. ಅದರಲ್ಲೂ ‘ಈ ಪೇಟಕು ನೀನೇ ಮೇಸ್ತರಿ’ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದರೆ ಜನ ಕೇಕೆ ಹಾಕಿ ಡ್ಯಾನ್ಸ್ ಮಾಡಿದವನಿಗೆ ದುಡ್ಡನ್ನು ಸೇಫ್ಟಿ ಪಿನ್ನಲ್ಲಿ ಸಿಕ್ಕಿಸಿ ಅವರ ಅಂಗಿಗೆ ಹಾಕಿ ಬರುತ್ತಿದ್ದರು! ಹೀಗೆ ಇವರು ಹದಿನೈದು ದಿನ ಕ್ಯಾಂಪ್ ಹಾಕಿ ಪ್ರತಿದಿನ ಬೇರೆ ಬೇರೆ ರೀತಿಯ ಸರ್ಕಸ್ ಮಾಡಿ ನಮಗೆ ರಂಜಿಸುತ್ತಿದ್ದರು. ಇಲ್ಲಿ ಅವರು ಟಿಕೆಟ್ ಇಟ್ಟಿರಲಿಲ್ಲವಾದರೂ ಕೊನೆಗೆ ಪ್ರೇಕ್ಷಕರು ಖುಷಿಗೆ ಕೊಡುವ ಹಣವೇ ಅವರ ಜೀವನಾಧಾರವಾಗುತ್ತಿತ್ತು.

ನಾವು ಆಗ ಆಟದ ಸಾಮಾನುಗಳು ಅಂತಾ ತೆಂಗಿನಗರಿಯಲ್ಲಿ‌ ವಾಚು, ಪೀಪಿ ಮಾಡಿಕೊಳ್ತಾ ಇದ್ವಿ. ಇನ್ನು ಅಂಗಡಿಯಲ್ಲಿ‌ ಕಡ್ಡಿಗೆ ಸಿಕ್ಕಿಸಿದ ಗಟ್ಟಿಯಾದ ಪೇಪರ್‌ನಲ್ಲಿ ಗೊಂಬೆಯಾಕಾರದಲ್ಲಿ ಕತ್ತರಿಸಿದ ಆಟಿಕೆಗಳು ಸಿಗ್ತಾ ಇದ್ದವು. ಅವನ್ನು‌ ಅಂಗೈನಲ್ಲಿ‌ ಸಿಕ್ಕಿಸಿಕೊಂಡು ತಿರುಗಿಸಿದರೆ ಬೇರೆ ಬೇರೆ ಆಕಾರದಲ್ಲಿ‌ ಕುಣಿದಂತೆ ಕಾಣ್ತಾ ಇದ್ದವು. ಇವನ್ನಂತೂ ನಾವು ಬಹಳ ಆಡ್ತಿದ್ವಿ. ಇದರ ಜೊತೆಗೆ ಅಂಗಡಿಯಲ್ಲಿ ಸಿಗುತ್ತಿದ್ದ ದಾರದ ಜೊತೆಯಿರೋ ತಿರುಗುವಂತೆ ವೃತ್ತಾಕಾರದಲ್ಲಿ ಇರುವ ರಂಧ್ರವಿರುವ ಶುಂಠಿಪೆಪ್ಪರಮೆಂಟಿನ ರುಚಿಯಿರುವ ಸಿಹಿತಿನಿಸು ಸಿಗುತ್ತಿತ್ತು. ಇದನ್ನು ಚೆನ್ನಾಗಿ ತಿರುಗಿಸಿ ಎರಡೂ ಬದಿಯ ದಾರವನ್ನು ಎಳೆಯುತ್ತಾ ಗಿರಗಿಟ್ಲೆ ಆಡ್ತಾ ಇದ್ವಿ.. ಇನ್ನೂ‌ ಕೆಲವರು ಒಣ ಕೊಬ್ಬರಿಯನ್ನು ವೃತ್ತಾಕಾರದಿ ಕತ್ತರಿಸಿ ಅದಕ್ಕೆ ರಂಧ್ರ ಮಾಡಿ ಅದರಲ್ಲಿ‌ ಆಡ್ತಾ ಇದ್ರು. ಇನ್ನೂ‌ ಕೆಲವರು ಮಣ್ಣನ್ನು ಉದ್ದಕ್ಕೆ ಗುಡ್ಡೆಯಾಕಾರದಿ ಇಟ್ಟು ಅದರಲ್ಲಿ‌ ಕಡ್ಡಿ ಅಡಗಿಸಿಟ್ಟು ಎದುರಿನವನು ಕಡ್ಡಿ ಹುಡುಕೋ‌ ಆಟ ಆಡ್ತಿದ್ವಿ. ಇನ್ನು ಶಾಲೆಯಲ್ಲಿ‌ ಕುಳಿತಾಗ ಚುಕ್ಕಿಗಳನ್ನಿಟ್ಟು ಅದರಲ್ಲಿ‌ ಗೆರೆಯನ್ನು‌ ಹಾಕ್ತಾ ‘ಚೌಕಾಕಾರ’ ಯಾರದ್ದು ಮುಟ್ಟುತ್ತದೆಯೋ ಅವರ ಇನ್ಷಿಯಲ್ ಬರೆಯುತ್ತಾ ಇದ್ವಿ. ಯಾರು ಜಾಸ್ತಿ ಚೌಕಾಕಾರ ಮಾಡ್ತಾರೋ ಅವರು ಗೆದ್ದಂತೆ ಎಂಬ ಆಟ ಆಡ್ತಿದ್ವಿ. ಗೋಲಿ ಆಟದಲ್ಲಿ ಸೈ ಬಿಡೋದು, ಕಂಚಿ‌ ಕಳಿಸೋದು, ಕಿವಿಗುಡಕ ಎಂಬ ಆಟ ಆಡ್ತಿದ್ವಿ. ನಾವು ಆಗ ಬಿಲ್ಲು ಬಾಣವನ್ನು ಮರದ ತೆಳುವಾದ ಕಡ್ಡಿಗಳಿಂದ ಮಾಡಿಕೊಳ್ಳುತ್ತಿದ್ವಿ. ಆಗ ಬಿಲ್ಲಿಗೆ ಒಂದು ದಾರವನ್ನು ಕಟ್ಟಿಕೊಂಡರೆ ಬಾಣವಾಗಿ ಜೋಳದ ಸಪ್ಪೆ ದಂಟಿನ ಕಡ್ಡಿಯನ್ನು ಬಳಸಿಕೊಳ್ಳುತ್ತಿದ್ವಿ. ಬುಗುರಿ, ಚಿನ್ನಿ ದಾಂಡು, ಲಗೋರಿ ಇವುಗಳೂ ಸಹ ನಮ್ಮ ಆಟಗಳಾಗಿರುತ್ತಿದ್ದವು. ಬರ್ತಾ ಬರ್ತಾ ಕ್ರಿಕೆಟ್ ಆಟವನ್ನು ಪುಸ್ತಕ ಬಳಸಿಕೊಂಡೇ ಆಡಲು ಶುರು ಮಾಡಿದೆವು. ಇದು ಹೇಗೆಂದರೆ ಎದುರಿನವರು ಅವರಿಗಿಷ್ಟ ಬಂದ ನಾಲ್ಕು ಹೆಸರು, ನಾವು ನಾಲ್ಕು ಜನರ ಹೆಸರನ್ನು ಬರೆದುಕೊಂಡು ದಪ್ಪನೆಯ ಪುಸ್ತಕ ತೆಗೆದುಕೊಂಡು ಅದರಲ್ಲಿ ಒಂದು ಪುಟ ತೆಗೆಯುತ್ತಾ ಇದ್ದೆವು. ಆಗ ಪುಟದ ಸಂಖ್ಯೆ ಎಷ್ಟು ಬರುತ್ತೋ ಅಷ್ಟು ರನ್ನು ಎಂದು ಅವರ ಹೆಸರಿನ ಮುಂದೆ ನಮೂದಿಸಿಕೊಳ್ಳುತ್ತಿದ್ದೆವು. ಉದಾಹರಣೆಗೆ ಪುಟದ ಸಂಖ್ಯೆ 4 ಅಥವಾ 24 ಬಂದರೆ ಪುಸ್ತಕ ಪುಟ ತೆಗೆದವರ ಟೀಮಿಗೆ 4 ರನ್ನು, 6 ಅಥವಾ 36 ಬಂದರೆ 6 ರನ್ನು ಹಾಕಿಕೊಳ್ಳಬೇಕು. ಒಂದೊಮ್ಮೆ 0 ಅಥವಾ ಕೊನೆಗೆ ಸೊನ್ನೆ ಇರುವ ನಂಬರ್ ಬಂದರೆ ಆಗ ಆ ಬ್ಯಾಟ್ಸ್ ಮ್ಯಾನ್ ಔಟ್ ಎಂದು ಬರೆದುಕೊಳ್ಳುತ್ತಿದ್ದೆವು. ಒಂದೊಮ್ಮೆ 5 ಇರುವ ಸಂಖ್ಯೆ ಬಂದರೆ ವೈಡ್ ಎಂದು ಪರಿಗಣಿಸುತ್ತಿದ್ದೆವು! ಹೀಗೆ ನಾಲ್ಕೂ ಜನರೂ ಔಟ್ ಆಗೋವರೆಗೂ ಆಡಿ ನಂತರ ಎದುರಿನವರು ಇದೇ ರೀತಿ ಮಾಡಿ ಹೆಚ್ಚು ರನ್ನು ಆದರೆ ಗೆದ್ದಂತೆ, ಕಡಿಮೆ ರನ್ ಹೊಡೆದರೆ ಸೋತಂತೆ ಎಂದು ಆಡುತ್ತಿದ್ದೆವು.

ನಮ್ಮ ಶಾಲೆಯಲ್ಲಿ ಆಗ ಮೇಷ್ಟ್ರು ಪಾಠ ಮುಗಿಸಿದ ನಂತರ ಆ ಪಾಠದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ರೀತಿ ಪ್ರಶ್ನೆ ಕೇಳಿದಾಗ ಹುಡುಗರು ಉತ್ತರ ಹೇಳಲಾಗದೇ ಹುಡುಗಿ ಹೇಳಿದರೆ ಅವಳಿಂದ ಉತ್ತರ ಹೇಳದವರಿಗೆ ಕಪಾಳ ಮೋಕ್ಷ ಮಾಡಿಸುತ್ತಿದ್ದರು. ಒಂದೊಮ್ಮೆ ಹುಡುಗಿಯರು ಹೇಳಲು ಅಸಮರ್ಥರಾದರೆ ಅವರಿಗೆ ಹುಡುಗರಿಂದ ಬೆನ್ನ ಮೇಲೆ ಗುದ್ದಿಸುತ್ತಿದ್ದರು. ನಾನು ಯಾವತ್ತೂ ಈ ರೀತಿ ಹುಡುಗಿಯರಿಂದ ಹೊಡೆತ ತಿನ್ನಲಿಲ್ಲ. ಹುಡುಗರಿಗೂ ಹುಡುಗಿಯರಿಗೂ ಓದುವುದರಲ್ಲಿ ಆಗ ಬಹಳ ಸ್ಪರ್ಧೆ ಇತ್ತು. ಲೋಕಪ್ಪ ಮೇಷ್ಟ್ರು ನಮಗೂ ಹುಡುಗಿಯರಿಗೂ ಖೋ ಖೋ ಆಡಲು ಬಿಡುತ್ತಿದ್ದರು.

ಆರನೇ ತರಗತಿ‌ ಓದುತ್ತಿದ್ದಾಗ ನವೋದಯ ಫಲಿತಾಂಶ ಬಂದಾಗ ಅದರಲ್ಲಿ ನಮ್ಮ ಶಾಲೆಯ ಪರ್ಮಿ, ನಾಗಮಂಜುಳ ಆಯ್ಕೆ ಆಗಿದ್ರು. ನಾನು ಆಗಿಲ್ಲ ಅಂತಾ ನನಗೆ ತುಂಬಾ ಬೇಜಾರಾಗಿತ್ತು. ಆದ್ರೆ ನನಗೆ ಗಣಿತದಲ್ಲಿ ಸಹಾಯ ಮಾಡುತ್ತಿದ್ದ ಪರ್ಮಿ ಆಯ್ಕೆ ಆದಾಗ ಮುಂದೆ ‘ಗಣಿತದ ಲೆಕ್ಕಗಳನ್ನು ಹೇಗಪ್ಪ ಈಗ ಮಾಡೋದು?’ ಎಂಬ ಚಿಂತೆ ಶುರು ಆಗಿತ್ತು. ಆದರೆ ಇದು ಪರೋಕ್ಷವಾಗಿ ನನಗೆ ಗಣಿತದಲ್ಲಿ ಸ್ವಾವಲಂಬನೆ ಸಾಧಿಸೋಕೆ ಸಹಾಯ ಅಗಿತ್ತು. ಲಕ್ಷ್ಮೀ‌ ಮೇಡಂ‌ ಗಣಿತ ಮಾಡುತ್ತಿದ್ದರಾದರೂ ಅಷ್ಟು ಕ್ಲಿಯರ್ ಆಗಿ ನನಗೆ ಗಣಿತದ ಕಾನ್ಸೆಪ್ಟ್‌ಗಳು ಅರ್ಥ ಆಗ್ತಾ ಇರಲಿಲ್ಲ. ಆದ್ರೆ ಲೆಕ್ಕಗಳನ್ನು ಕಂಠಪಾಠ ಮಾಡಿಕೊಂಡು ಹೋಗಿ ಟೆಸ್ಟ್‌ಗಳಲ್ಲಿ ಉತ್ತಮ ಅಂಕ ಪಡೆಯುತ್ತಿದ್ದೆ. ಹಿಂದಿನಂತೆ ಪ್ರಸಕ್ತ ವರ್ಷ ಭಾಷಣ ಸ್ಪರ್ಧೆಯಲ್ಲಿ ಸಂತೆಬೆನ್ನೂರಿಗೆ ಹೋಗಿ ನಾನು ಎರಡನೇ ಪ್ರೈಜ್ ಪಡೆದುಕೊಂಡಿದ್ದೆ. ಆದರೆ ನಮ್ಮನ್ನು ಕರೆದುಕೊಂಡು ಹೋಗಿದ್ದ ಕಲಾವತಿ ಮೇಡಂ‌ ಅಕ್ಕನ ಮಗಳು ಬಹುಮಾನ ಪಡೆದಿಲ್ಲವೆಂದು ಅವರು ಅವರ ಪಾಡಿಗೆ ವಾಪಸ್ಸು ಹೋಗಿದ್ದರು. ನನಗೆ ಅಲ್ಲಿ ಯಾರೋ ಒಬ್ಬರು ಪರಿಚಯವಾಗಿ‌ ನನ್ನ ಬಗ್ಗೆ ಕೇಳಿ ಅದೇ ಊರಿಂದ ನಮ್ಮ ಶಾಲೆಗೆ ಬರುತ್ತಿದ್ದ ಬಸವಂತಪ್ಪ ಮೇಷ್ಟ್ರು ಮನೆಗೆ ಕರೆದುಕೊಂಡು ಹೋಗಿ ಬಿಟ್ಟರು. ಅವರು ಅವರ ಮನೆಯಲ್ಲಿದ್ದ ಹುಡುಗನ ಜೊತೆಗೆ ಅದೇ ಊರಲ್ಲಿದ್ದ ಟೆಂಟಿಗೆ ಫಿಲ್ಮ್ ನೋಡೋಕೆ ನನಗೆ ಕಳಿಸಿದರು. ಆಗ ನೋಡಿದ ಫಿಲಮ್ಮೇ ‘ಒಡಹುಟ್ಟಿದವರು’. ರಾಜಣ್ಣ ಅಂಬರೀಷ್ ಅಭಿನಯದ ಆ ಸಿನೆಮಾವನ್ನು ನಾವು ನೆಲದ ಮೇಲೆ ಕುಳಿತು ನೋಡಿದ್ದೆವು. ಆಗ ನೆಲ, ಬೆಂಚು, ಕುರ್ಚಿ ಈ ರೀತಿ ಬೇರೆ ಬೇರೆ ದರಗಳನ್ವಯ ನಾವು ಫಿಲಂ ನೋಡೋಕೆ ಹೋಗಬೇಕಾಗಿತ್ತು. ಮೊದ ಮೊದಲು ನನ್ನ ತಂದೆಯೇ ಚನ್ನಗಿರಿ ಟಾಕೀಸ್ಸಿಗೆ ಫಿಲಂ‌ ನೋಡೋಕೆ ಕರೆದುಕೊಂಡು ಹೋಗ್ತಿದ್ರು. ಹೀಗೆ ನೋಡಿದ ಮೊದಲ ಫಿಲಮ್ಮೇ ಪರಶುರಾಮ.

ಗೋಲಿ ಆಟದಲ್ಲಿ ಸೈ ಬಿಡೋದು, ಕಂಚಿ‌ ಕಳಿಸೋದು, ಕಿವಿಗುಡಕ ಎಂಬ ಆಟ ಆಡ್ತಿದ್ವಿ. ನಾವು ಆಗ ಬಿಲ್ಲು ಬಾಣವನ್ನು ಮರದ ತೆಳುವಾದ ಕಡ್ಡಿಗಳಿಂದ ಮಾಡಿಕೊಳ್ಳುತ್ತಿದ್ವಿ. ಆಗ ಬಿಲ್ಲಿಗೆ ಒಂದು ದಾರವನ್ನು ಕಟ್ಟಿಕೊಂಡರೆ ಬಾಣವಾಗಿ ಜೋಳದ ಸಪ್ಪೆ ದಂಟಿನ ಕಡ್ಡಿಯನ್ನು ಬಳಸಿಕೊಳ್ಳುತ್ತಿದ್ವಿ. ಬುಗುರಿ, ಚಿನ್ನಿ ದಾಂಡು, ಲಗೋರಿ ಇವುಗಳೂ ಸಹ ನಮ್ಮ ಆಟಗಳಾಗಿರುತ್ತಿದ್ದವು.

ಆಗ ನಮ್ಮ ಶಾಲೆಗೆ ಪಕ್ಕದ ಊರು ಶ್ಯಾಗಲೆ ಕ್ಯಾಂಪಿನಿಂದ ಹುಡುಗ ಹುಡುಗಿಯರು ಬರ್ತಾ ಇದ್ದರು. ಅವರು ಮಧ್ಯಾಹ್ನದ ಊಟಕ್ಕೆಂದು ಬಾಕ್ಸ್ ತರುತ್ತಿದ್ದರು. ಅದರಲ್ಲಿ ಅವರು ತರುತ್ತಿದ್ದ ಆಂಧ್ರ ಉಪ್ಪಿನಕಾಯಿ ನಮಗೆ ಬಹಳ ಇಷ್ಟವಾಗುತ್ತಿತ್ತು. ಅದರಲ್ಲೂ ಅವರು ತರುತ್ತಿದ್ದ ಸಾಂಬಾರ್ ‘ಪಪ್ಪು’ ಬಹಳಾನೇ ರುಚಿ ಇರುತ್ತಿತ್ತು. ಇದಕ್ಕಾಗಿ ನಾನು ಅವರ ಊರಿನಲ್ಲಿ ಯಾವುದೇ ಫಂಕ್ಷನ್ ಆದರೂ ಬಿಡುತ್ತಿರಲಿಲ್ಲ. ಅವರಿಗೆ ತೆಲುಗು ಕಲಿಸಿಕೊಡಿ ಎಂದು ಎಷ್ಟೇ ಕೇಳಿಕೊಂಡರೂ ಅವರು ಕಲಿಸಿಕೊಟ್ಟದ್ದು ಒಂದೇ ವಾಕ್ಯ ‘ನೀಕು ಬುದ್ಧಿ ಲೇದು!’. ನನ್ನಜ್ಜನ ಹೊಲದ ಹತ್ತಿರವೇ ಅವರ ಊರು ಇತ್ತು. ನಾನು ಹೊಲಕ್ಕೆ ಬುತ್ತಿ ಕೊಡೋಕೆ ಹೋದಾಗ ಅವರ ಊರಿಗೆ ಹೋಗುತ್ತಿದ್ದೆ. ಅವರ ಊರುಗಳು ಮಲೆನಾಡ ಸೀಮೆಯಂತಿರುತ್ತಿತ್ತು. ಅಲ್ಲಲ್ಲಿ ಒಂದು ಮನೆ, ಮನೆಯೆಂದರೆ ಹುಲ್ಲಿನ ಹೊದಿಕೆ ಇರುವ ಚಿಕ್ಕ ಗುಡಿಸಲಿನ ರೀತಿಯ ಮನೆ,ಮನೆ ಮುಂದೆ ಗಿಡ, ಹಣ್ಣಿನ ಮರಗಳು, ಅದೇ ಊರಲ್ಲಿ ಹರಿಯುವ ಭದ್ರಾ ನದಿಯ ದೊಡ್ಡ ಚಾನೆಲ್, ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರು, ಊರಲ್ಲೊಂದು ವೆಂಕಟೇಶನ ದೇಗುಲ, ಗದ್ದೆಗೆ ನೀರು ಹಾಯಿಸಲು ಚಿಕ್ಕ ಚಿಕ್ಕ ಚಾನೆಲ್‌ಗಳು, ಜುಳು ಜುಳು ಹರಿಯುವ ನೀರಿನ ಶಬ್ದ ತುಂಬಾ ಖುಷಿ ಕೊಡುತ್ತಿತ್ತು. ಅಲ್ಲೇ ಇದ್ದ ನನ್ನ ಗೆಳೆಯ ಪ್ರದೀಪನ ತೋಟದಲ್ಲಿ ಅವರ ತಂದೆ ಕೊಡುತ್ತಿದ್ದ ಎಳನೀರು, ತೋತಾಪುರಿ ಮಾವಿನ ಕಾಯಿ, ಪೇರಲಹಣ್ಣು, ಈಜು ಬಾರದ ನನಗೆ ಈಜುವ ಆಸೆ ಈಡೇರಿಸಲು ಚಿಕ್ಕ ಚಾನೆಲ್… ಹೀಗೆ ಅವನ್ನೆಲ್ಲಾ ನೆನಪಿಸಿಕೊಂಡರೆ ಮನಸ್ಸಿಗೆ ಮುದ ನೀಡುತ್ತೆ. ನಾನು ಆ ನೀರಲ್ಲಿ ಬಹಳ ಹೊತ್ತು ಆಟ ಆಡಿ ಹೊಲಕ್ಕೆ ತೆಗೆದುಕೊಂಡು ಹೋಗಿದ್ದ ಬುತ್ತಿ ತಿಂದು ಸಂಜೆಯವರೆಗೂ ಅಲ್ಲಿಯೇ ಇರುತ್ತಿದ್ದೆ. ಸಂಜೆ ಆದ ಮೇಲೆ ಮನೆಗೆ ಬರುತ್ತಿದ್ದೆ.

ನಲ್ಕುದ್ರೆಯಲ್ಲಿ ಊರ ಮುಂದಣ ಈರಣ್ಣನ ಗುಡಿಯಲ್ಲಿ ಬೆಳಗ್ಗೆ 5 ಗಂಟೆಗೆಯೇ ದೇವರ ಹಾಡುಗಳನ್ನು ಹಾಕುತ್ತಿದ್ದರು. ಅದರ ಬಳಿಯಲ್ಲಿಯೇ ಮನೆ ಇದ್ದುದರಿಂದ ನನಗೆ 5 ಕ್ಕೆ ಎಚ್ಚರವಾಗುತ್ತಿತ್ತು. ಆಗ ಎದ್ದು ಓದಿಕೊಳ್ಳುತ್ತಿದ್ದೆ. ಭಾನುವಾರ ಮಾತ್ರ ಬಾಕ್ಸ್‌ನಲ್ಲಿ ಊಟ ತೆಗೆದುಕೊಂಡು ಊರ ಹೊರಗಿನ ಪ್ರದೀಪನ ತೋಟಕ್ಕೆ ಹೋಗಿ ಓದಿಕೊಳ್ಳುತ್ತಿದ್ದೆ. ಸಂಜೆಯವರೆಗೂ ಅಲ್ಲಿ ಓದಿಕೊಂಡು ಸಂಜೆಯ ನಂತರ ಮನೆಗೆ ಹಿಂತಿರುಗುತ್ತಿದ್ದೆ. ಏಳನೇ ತರಗತಿಗೆ ಹೋಗುವ ವೇಳೆಗೆ ನಾನು ಓದುವುದರಲ್ಲಿ ತರಗತಿಗೇ ಮೊದಲಿಗನಾಗಿದ್ದೆ. ಅದರಲ್ಲೂ 7 ನೇ ತರಗತಿಯಲ್ಲಿ ಬುಡೇನ್ ಸಾಬ್ ಮೇಷ್ಟ್ರು ಗಣಿತ ತೆಗೆದುಕೊಂಡ ಮೇಲೆ ನನಗೆ ಗಣಿತ ತುಂಬಾ ಇಷ್ಟದ ವಿಷಯವಾಯಿತು. ಮೇಷ್ಟ್ರು, ಮೇಡಂ ಪ್ರೇರಣೆಯಿಂದ ಅಲ್ಲದೇ ಮನೆಯಲ್ಲಿ ಹೇಳುತ್ತಿದ್ದ ‘ನಿನ್ನ ಕೈಲಿ ಹೊಲ ಮನೆಯ ಕೆಲಸ ಮಾಡೋಕೆ ಆಗೋಲ್ಲ, ಓದಿ ಕೆಲಸ ತಗೋ’ ಎಂಬ ಮಾತು ನನ್ನ ಮನದಲ್ಲಿ ಹೊಕ್ಕಿ ಓದಿನ ವಿಷಯದಲ್ಲಿ ತುಂಬಾ ಸೀರಿಯಸ್ ಆಗಿದ್ದೆ. ‘ಯಾರಿಗಾದರೂ ಸರ್ಕಾರಿ ಕೆಲಸ ಸಿಕ್ಕಿದೆ’ ಎಂದಾಕ್ಷಣ ಅವರನ್ನು ವಿಶೇಷ ರೀತಿಯಲ್ಲಿ ನೋಡುತ್ತಿದ್ದೆ. ನಾನೂ ಅವರಂತಾಗಬೇಕು ಎಂದು ನನ್ನ ಭವಿಷ್ಯ ಹೇಗಿದೆ? ಎಂದು ತಿಳಿಯಲು ಮನೆಯಲ್ಲಿದ್ದ ಶಾಬಾದಿಮಠ ಕ್ಯಾಲೆಂಡರ್ ತೆಗೆದು ಅದರಲ್ಲಿದ್ದ ಹಸ್ತ ಸಾಮುದ್ರಿಕ ಶಾಸ್ತ್ರ ಓದಿ ಅದರಂತೆ ನನ್ನ ಕೈನ ರೇಖೆಗಳು ಯಾವ ರೀತಿ ಇವೆ ಎಂದು ತಿಳಿದುಕೊಳ್ಳುತ್ತಿದ್ದೆ. ಅದರಲ್ಲೂ ಮನೆಗೆ ಬುಡುಬುಡುಕೆಯವರು ಬಂದಾಗ ಅವರು ಹೇಳುವ ಭವಿಷ್ಯವನ್ನು ಕೇಳುತ್ತಿದ್ದೆ. ಅವರು ಹೇಳೋದೆಲ್ಲ ಹೇಳಿಯಾದ ಮೇಲೆ ಮನೆಯ ಹಳೇ ಸೀರೆ ಪಂಜೆ ಕೊಡು ಎಂದಾಗ ಗೊಂದಲಕ್ಕೆ ಸಿಲುಕಿಕೊಳ್ಳುತ್ತಿದ್ದೆ.

6 ನೇ ತರಗತಿಯವರೆಗೆ ಭವಿಷ್ಯದ ಬಗ್ಗೆ ಅರಿವಿಲ್ಲದೇ ಚೆಂದಿದ್ದ ಬಾಲ್ಯ ಯಾಕೋ ಏನೋ 7 ನೇ ತರಗತಿಗೆ ಬಂದಾಗ ಮುಂದಿನ ಜೀವನದ ಬಗ್ಗೆ ಯೋಚಿಸೋಕೆ ಶುರು ಮಾಡಿತೇನೋ ಗೊತ್ತಿಲ್ಲ. ಬರೀ ಓದಿನ ಕಡೆ ಮನಸ್ಸು ಹರಿಸೋಕೆ ಶುರು ಮಾಡಿದೆ. ಓದು ಓದು ಓದು ಅದನ್ನು ಬಿಟ್ಟರೆ ಬೇರೇನೂ ಇಲ್ಲವೇನೋ ಎಂಬಂತೆ ವರ್ತಿಸೋಕೆ ಶುರು ಮಾಡಿದೆ. ಇದಕ್ಕೆ ಕಾರಣ ಹಲವು ಇವೆ. ಅದರಲ್ಲೂ ಮುಖ್ಯವಾಗಿ ನನ್ನ ಹುಟ್ಟಿದ ಮನೆಯಲ್ಲಿ ತುಂಬಾ ಬಡತನ ಇದೆ. ಅಜ್ಜನ ಮನೆಯಲ್ಲಿ ಸಿರಿವಂತಿಕೆಯ ಸುಖ ಜೀವನ ಪೂರ್ತಿ ಇರೋಲ್ಲ ಎಂದು ಅರಿವಾಗುತ್ತಿದ್ದಂತೆ ಓದಿ ನೌಕರಿ ಹಿಡಿಯಬೇಕೆನ್ನುವುದು ನನ್ನ ಹೆಬ್ಬಯಕೆಯಾಯಿತು. ಮುಂದೆ ಅದನ್ನು ಸಾಧಿಸಿದೆ. ಆದರೆ ಎಲ್ಲೋ ಒಂದು ಕಡೆ ಬಾಲ್ಯವನ್ನು ಕಳೆದುಕೊಂಡೆನೇನೋ ಎಂದು ಯಾವಾಗಲೂ ಅನಿಸುತ್ತಿರುತ್ತಿದೆ. ಪಾಸ್ಟ್ ಈಸ್ ಪಾಸ್ಟ್. ಈಗ ಅದರ ಬಗ್ಗೆ ಯೋಚಿಸಿದರೆ ಫಲವಿಲ್ಲ.

ಡಿಯರ್ ಫ್ರೆಂಡ್ಸ್, ಯಾರೇ ಆಗಲಿ ತಮ್ಮ ಮಕ್ಕಳಿಗೆ ಅವರ ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸಲು ಬಿಡಬೇಕು. ಇದು ಅವರ ಬೌದ್ಧಿಕ ಬೆಳವಣಿಗೆಗೆ ತುಂಬಾ ಸಹಕಾರ ಆಗುತ್ತೆ. ಹಾಗಂತ ಅವರನ್ನು ಸ್ವೇಚ್ಛೆಯಾಗಿ ಇರಲು ಬಿಡದೇ ‘ಆಡುವಾಗ ಆಡು, ಓದುವಾಗ ಓದು’ ಎಂಬಂತೆ ಬೆಳೆಸಬೇಕು. ಅವರಾದಂತೆ ಅವರಾಗಲಿ. ನೀವು ನಿಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರದಿರಿ.. ‘ತಾವು ಅನುಭವಿಸಿದ್ದೇ ಸಾಕು ತಮ್ಮ ಮಕ್ಕಳು ತಮ್ಮಂತೆ ಕಷ್ಟ ಅನುಭವಿಸೋದು ಬೇಡ’ ಎಂದು, ಕೇಳಿ ಕೇಳಿದ್ದೆಲ್ಲವನ್ನೂ ಕೊಡಿಸಿ ಹಾಳು ಮಾಡುವುದೂ ಬೇಡ. ಒಂದು ರೂಪಾಯಿ ಕೊಟ್ಟರೂ ಅದರ ಹಿಂದಿನ ನಿಮ್ಮ ಶ್ರಮ ಅವರಿಗೂ ತಿಳಿಯಲಿ.