ಅಚ್ಚಿಯ ಬನವಾಸಿ ಅಕ್ಕಯ್ಯ ನಾಗವೇಣಿಯ ಬದುಕು ಬಂಜೆಯೆಂಬ ಕಾರಣಕ್ಕೆ ಭಗ್ನವಾದ ರೀತಿ ಹೆಣ್ಣಿನ ಅಸ್ತಿತ್ವದ ಕುರಿತು ಹಲವು ಪ್ರಶ್ನೆಗಳನ್ನೆಬ್ಬಿಸುತ್ತದೆ. ಹೆಣ್ಣು ಅಂದರೆ ತಾಯಿ. ಅದೇ ಅಸ್ತಿತ್ವ. ತಾಯಿಯಾಗದ ನಾಗವೇಣಿ ತನ್ನೊಳಗೇ ತಾನು ಖಾಲಿಯಾಗುತ್ತ ಹೋಗುವುದು, ಹಾಗೆಯೇ ಇಡೀ ಕುಟುಂಬ ಅವಳನ್ನು ಕಡೆಗಣಿಸುವುದು, ಅವಳ ಖಿನ್ನತೆ ಉನ್ಮಾದಕ್ಕೆ ತಿರುಗುವುದು ಇದೆಲ್ಲ ಅವಳ ಮನೋಲೋಕಕಕ್ಕೆ ಪಾತಾಳಗರಡಿ ಹಾಕಿದಂತಿದೆ. ಅಚ್ಚಿಯ ಶಿಶುವನ್ನು ಬಾವಿಕಟ್ಟೆಯ ಮೇಲೆ ಮಲಗಿಸಿ ಮಾತಾಡಿಸುವ ಅವಳ ‘ಹುಚ್ಚು’ ಎದೆ ಝಲ್ಲೆನಿಸುವಂತೆ ಮಾಡುತ್ತದೆ.
ಡಾ. ಚಂದ್ರಮತಿ ಸೋಂದಾ ಕಾದಂಬರಿ “ದುಪಡಿ”ಗೆ ಡಾ. ಗೀತಾ ವಸಂತ ಬರೆದ ಮುನ್ನುಡಿ

ಮಲೆನಾಡಿನ ಹಿಡಿದು ಬಿಡದಂತೆ ಹೊಯ್ಯುವ ಮಳೆಯಂತೆ ನೆನಪುಗಳ ಒರತೆ ಎಬ್ಬಿಸುತ್ತಾ ನಡೆವ ವಿಶಿಷ್ಟ ಕಾದಂಬರಿಯನ್ನು ಚಂದ್ರಮತಿಯವರು ಬರೆದಿದ್ದಾರೆ. ಸೊರಬ, ಬನವಾಸಿ ಸೀಮೆಯ ಬದುಕು, ಭಾಷೆಯ ಬನಿಯನ್ನು ‘ದುಪಡಿ’ ಯಲ್ಲಿ ತುಂಬಿ ನೀಡಿದ್ದಾರೆ. ಹವ್ಯಕ ಸಮುದಾಯದ ಅನನ್ಯ ರೀತಿ ನೀತಿಗಳ ಎಳೆಯಲ್ಲಿ ಹೆಣೆದ ಕಥನವು ನಿಧಾನವಾಗಿ ಅದರಾಚೆ ವಿಸ್ತರಿಸುತ್ತಾ ಬದಲಾವಣೆಯ ಬಣ್ಣಗಳನ್ನು ಹೀರಿಕೊಳ್ಳುತ್ತಾ ಹರಿಯುತ್ತದೆ. ಹವ್ಯಕ ಬ್ರಾಹ್ಮಣರು ಸಾಂಸ್ಕೃತಿಕವಾಗಿ ಒಂದು ವಿಶಿಷ್ಟ ಸಮುದಾಯ. ಬ್ರಾಹ್ಮಣರಾದರೂ ಮಡಿವಂತರಲ್ಲ. ಅಪ್ಪಟ ಕೃಷಿಕರು. ನೆಲಕ್ಕಂಟಿದವರು. ಶ್ರಮಜೀವಿಗಳು. ಜೊತೆಯಲ್ಲೇ ಕಾವ್ಯ ತತ್ವಜ್ಞಾನ ಪ್ರಿಯರು. ಯಕ್ಷಗಾನ, ತಾಳಮದ್ದಲೆಯಂಥ ಕಲಾಪ್ರಕಾರಗಳಲ್ಲಿ ಅವರ ಮನೋಧರ್ಮ ಕಾಣಿಸುತ್ತದೆ. ಅವರದೇ ಆಹಾರ ಕ್ರಮ, ಆಚರಣೆಗಳು, ಹಾಡು ಹಸೆ, ಬದುಕಿನ ಅನನ್ಯ ಲಯಗಳು ಕಾಲಾನುಕ್ರಮದಲ್ಲಿ ರೂಪುಗೊಂಡಿವೆ. ಅದಕ್ಕೆ ಕಾಡು ಮಳೆ ಕಣಿವೆಗಳ ಅಗಾಧ ಏಕಾಂತದ ಸಾಂಗತ್ಯವಿದೆ. ಅವರ ಮನೋಧರ್ಮವನ್ನು ರೂಪಿಸುವಲ್ಲಿ ಪ್ರಕೃತಿಯ ಪಾಲೂ ಅಧಿಕವಿದೆ. ಅಧಿಕಾರ ರಾಜಕೀಯದಿಂದ ಬಹುದೂರ ಯಾರೂ ತಲುಪಲಾಗದ ಗಿರಿ ಕಣಿವೆಗಳಲ್ಲಿ ಪರಂಪರಾಗತ ಅಡಿಕೆ ಕೃಷಿಯನ್ನು ರೂಪಿಸಿಕೊಂಡು ಅದನ್ನು ಮಾರುವ ಅಥವಾ ಅಗತ್ಯವಸ್ತುಗಳನ್ನು ಕೊಳ್ಳುವ ಸಲುವಾಗಲಷ್ಟೇ ಪೇಟೆಯ ಮುಖನೋಡುವ ಲೆಕ್ಕಾಚಾರಗಳಿಲ್ಲದ ಸರಳ ಬದುಕು ಅವರದು.  ಅಲ್ಪತೃಪ್ತರೆನಿಸಿದರೂ ಬದುಕನ್ನು ತಿದ್ದಿ ರೂಪಿಸಿಕೊಳ್ಳುವ ಛಲದಲ್ಲಿ ಹಿಂದೆಬಿದ್ದವರಲ್ಲ. ಎಲ್ಲ ಕಷ್ಟಗಳನ್ನೂ ಧಾರಣಮಾಡಿ ಮುನ್ನಡೆಯುವ ಚಲನಶೀಲ ಸಮುದಾಯವಿದು.

(ಡಾ. ಚಂದ್ರಮತಿ ಸೋಂದಾ)

ಕತೆಯ ಕಾಲ ಸ್ವಾತಂತ್ರ್ಯ ಪೂರ್ವದಿಂದ ಆರಂಭವಾಗಿ ಸ್ವಾತಂತ್ರೋತ್ತರ ಕಾಲದಲ್ಲೂ ಚಲಿಸುತ್ತ ಹೋಗುತ್ತದೆ. ಸ್ಥಳೀಯ ವಿಶ್ವದ ಪುಟ್ಟ ಕ್ಯಾನ್ವಾಸಿನಲ್ಲಿ ಇಡೀ ಇಪ್ಪತ್ತನೆಯ ಶತಮಾನದ ಜೀವನ ಕ್ರಮವೊಂದು ವಿಕಾಸವಾಗುತ್ತಾ, ಕೆಲವೊಂದನ್ನು ಕಳೆದುಕೊಳ್ಳುತ್ತಾ, ಹೊಸದನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ. ಶ್ರೀಪಾದ ಮತ್ತು ಅಚ್ಚಿ ಎಂಬ ದಂಪತಿಗಳ ಬದುಕಿನ ದ್ರವ್ಯವನ್ನು ನೇಯುತ್ತಾ ಹೋಗುವ ಕತೆಯಲ್ಲಿ ಅವರ ಸುತ್ತಲಿನ ಅನೇಕರ ಬದುಕು  ಬಿಚ್ಚಿಕೊಳ್ಳುತ್ತದೆ.  ಹೆಣ್ಣು ಬದುಕಿನ ಒಳ ಸಂಕಟಗಳು, ಪುಟ್ಟ ಸಂಭ್ರಮಗಳು, ಮಕ್ಕಳನ್ನು ಹೆರುವ ಸಲಹುವ ಅವರ ಹೋರಾಟಗಳು ಕುಟುಂಬ ಪ್ರಜ್ಞೆಯ ಮಹಾಕಥನಗಳಂತೆ ತೆರೆದುಕೊಳ್ಳುತ್ತವೆ. ಹೆರಿಗೆಮನೆ ಹಾಗೂ ಅಡಿಗೆಮನೆಯಿಂದ ಹೊಮ್ಮುವ ಕಥನವು ಬೆಳೆಯುತ್ತಾ ಇಡೀ ವಿಶ್ವವನ್ನೇ ಸುತ್ತಿಬರುವ ವ್ಯಾಪ್ತಿ ಬೆರಗು ಮೂಡಿಸುತ್ತದೆ. ತಾಯ್ತನದ ಕಣ್ಣಲ್ಲಿ ಮೂಡುವ ಈ ಕಥನವು ಸಹಜವಾಗಿಯೇ ಆರ್ದ್ರವೂ ಸಾಂದ್ರವೂ ಆಗಿದೆ.

ಈ ಕಾದಂಬರಿ ಬಂಧುತ್ವದ ಬಂಧದಲ್ಲಿ ತನ್ನನ್ನು ಕಟ್ಟಿಕೊಂಡಿದೆ.
ಬದುಕು ಛಿದ್ರವಾಗದಂತೆ ಜೋಡಿಸುವ ಕಲೆಯಲ್ಲೇ ಬದುಕಿನ ಸಾಫಲ್ಯವಿದೆ ಎಂಬುದು ಕಾದಂಬರಿಯ ದರ್ಶನವೂ ಹೌದು.  ಕೂಡು ಕುಟುಂಬದಲ್ಲಿ ಮನಸುಗಳು ಒಡೆಯದಂತೆ ಕಾಪಿಟ್ಟುಕೊಳ್ಳುವ ಹದ ತುಂಬ ಮಹತ್ವದ್ದು. ಅತ್ತೆ ಸೊಸೆ ಅತ್ತಿಗೆ ನಾದಿನಿ ಮೈದುನ… ಮನೆಗೆ ಬಂದುಹೋಗುವ ನೆಂಟರಿಷ್ಟರು, ಹೊತ್ತಲ್ಲದ ಹೊತ್ತಲ್ಲಿ ಹಸಿದು ಬರುವ ದಾರಿಹೋಕರು.. ಹೀಗೆ ಎಲ್ಲರನ್ನೂ ಹೊಟ್ಟೆಯಲ್ಲಿಟ್ಟುಕೊಂಡು ಪೊರೆಯುವ ಅಗಾಧ ಬಂಧುತ್ವದ ಪ್ರಜ್ಞೆ ಮಲೆನಾಡ ಒಂಟಿಮನೆಗಳದು. ಈ ಮನೆಗಳ ಯಜಮಾನರೆಂದರೆ ಅಧಿಕಾರ ಚಲಾಯಿಸುವುವರಲ್ಲ. ಎಲ್ಲರ ಅರೆಕೊರೆಗಳನ್ನು ಸರಿದೂಗಿಸಿಕೊಂಡು ಸಂಸಾರದ ನೊಗ ಹೊರುವವರು. ತಮ್ಮ ಸ್ವಂತ ಸುಖದುಃಖಗಳ ಪರಿವೆಯಿಲ್ಲದೆ ಎಲ್ಲರನ್ನು ಸಲಹುವವರು. ಹವ್ಯಕರ ಬದುಕಿನ ಜೊತೆ ಬೆಸೆದುಕೊಂಡ ಹಸಲರು, ಶೂದ್ರರ ಜಗತ್ತೂ ಇಲ್ಲಿ ಅಲ್ಲಲ್ಲಿ ಇಣುಕುತ್ತದೆ. ದನ ಕಟ್ಟಲು ಪುಂಡಿನಾರಿನ ಹಗ್ಗ ಹೊಸೆಯುವ, ಹಿಟ್ಟಂಡೆ ಹುಲ್ಲು ಕೊಯ್ದು ಹಿಡಿ ಮಾಡುವ, ಪರಿಣತಿಯಿಂದ ಹೆರಿಗೆ ಮಾಡಿಸುವ ವಿವಿಧ ಕೌಶಲಗಳ ಆ ಲೋಕ ಗಮನ ಸೆಳೆಯುತ್ತದೆ. ಹಿಟ್ಟಂಡೆ ಹಿಡಿಯಂತೂ ಅಡಿಗೆ ಮನೆಯನ್ನು ಗುಡಿಸಲೆಂದೇ ನಾಜೂಕಾಗಿ ತಯಾರಾದ ಪುಟ್ಟ ಕಸಬರಿಗೆ, ಇದನ್ನು ತಯಾರಿಸುವುದು ಹೆಂಗಸರೇ. ಮನೆ ತೋಟ, ಗದ್ದೆ, ಹಿತ್ತಲು ಕೊಟ್ಟಿಗೆ ಇಲ್ಲಿನವರ ಜೀವ ಕೇಂದ್ರಗಳು. ಕೃಷಿಯೊಂದಿಗೆ ವಿಕಾಸವಾದ ಬದುಕಿನ ಭಿತ್ತಿಯು ಕಾದಂಬರಿಗೆ ಸಾಂಸ್ಕೃತಿಕ ಆಯಾಮವನ್ನು ನೀಡಿದೆ.
ಮಲೆನಾಡು ಎಂದರೆ ಮಳೆಗಾಲ. ಗೊರಬು, ಕಂಬಳಿಕೊಪ್ಪೆಗಳನ್ನು ಹಾಕಿಕೊಂಡು ಓಡಾಡುವ, ಮನೆಯೊಳಗೇ ಹೊಡತಲ ಹಾಕಿಕೊಂಡು ಅದರ ಬೆಂಕಿಗೆ ಮೈಯೊಡ್ಡಿ ಬೆಚ್ಚಗಾಗುವ, ಅದರ ಮೇಲೆ ಕಂಬಳಿ ಒಣಗಿಸುವ, ಹುಳಹುಪ್ಪಡಿಗಳ ಜೊತೆಗೇ ಅನುಸರಿಸಿಕೊಂಡು ಬದುಕುವ ವಿಶಿಷ್ಟ ಅನುಭೂತಿ ಅದು. ಮಳೆಗಾಲ ಬರುವ ಮೊದಲೇ ಹಲಸಿನ ಹಪ್ಪಳ ಮಾಡುವದು, ಬೀಜಗಳನ್ನು ಸಂಗ್ರಹಿಸಿಕೊಳ್ಳುವದು, ಕಾಳುಕಡಿಗಳನ್ನು ಸ್ವಚ್ಛಗೊಳಿಸಿ ಬೆಚ್ಚಗೆ ದಾಸ್ತಾನುಮಾಡುವದು, ಎಲ್ಲ ನೇಮದಂತೆ ನಡೆಯುತ್ತದೆ. ಹೊಳೆಹಳ್ಳಗಳಿಗೆ ನೆಗಸು ಬರುವುದರಿಂದ ಹವ್ಯಕರ ಬದುಕು ಮಳೆಗಾಲದಲ್ಲಿ ಒಂದು ದ್ವೀಪವೇ ಆಗಿಬಿಡುತ್ತದೆ. ಮಳೆ ಕಳೆದು ಆಡಬಿಸಿಲು ಬರತೊಡಗಿದಾಗ ಬರುವುದೆ ದೊಡ್ಡಬ್ಬ. ಹವ್ಯಕರಿಗೆ ‘ದೊಡ್ಡಬ್ಬ’ ಅಂದ್ರೆ ದೀಪಾವಳಿ. ದನದ ಕೊಟ್ಟಿಗೆಯೇ ಅದರ ಕೇಂದ್ರ. ಬತ್ತ, ಅಡಕೆ, ಸಿಂಗಾರ, ಪಚ್ಚೆತೆನೆ, ದನಗಳ ಕೊರಳಿಗೆ ಅಡಿಕೆಸರ, ಹೂದಂಡೆ ಇಂಥ ಸಂಭ್ರಮಗಳಲ್ಲಿ ತಾದಾತ್ಮ್ಯಗೊಂಡ ಜಗತ್ತು ಅದು. ದೀಪಾವಳಿಯಲ್ಲಿ ಗೋಪೂಜೆ ಮಾಡುವಾಗ ಗೋಗ್ರಾಸ ಕೊಡುವವಳು ಸಾಕ್ಷಾತ್ ದ್ರೌಪದಿಯೇ. ಹವ್ಯಕರ ಹಾಡುಗಳಲ್ಲಿ ಪುರಾಣ ಕಥನಗಳು ಹಾಸುಹೊಕ್ಕಾಗಿರುತ್ತವೆ. ಅವೆಲ್ಲವು ಬಹುತೇಕವಾಗಿ ಹೆಂಗಳೆಯರು ಕಟ್ಟಿದ ಹಾಡುಗಳೇ. ಇಹದ ಬದುಕಿಗೆ ಪರದ ಸಂಪನ್ನತೆಯನ್ನು ಹೊದಿಸಿ ಸಂಭ್ರಮಪಡುವ ಹಾಡುಗಳವು. ಹಬ್ಬ, ಮದುವೆ, ಮುಂಜಿ, ಚೌಲ ಇಂಥ ಸಂದರ್ಭಗಳಲ್ಲೆಲ್ಲ ಇಲ್ಲಿನ ಹೆಂಗಳೆಯರು ಹಾಡಿನ ಬುಗ್ಗೆಗಳೇ ಆಗಿರುತ್ತಾರೆ.
 ತಂದಿಡೆ ದ್ರೌಪತಿ ಗೋಗ್ರಾಸವಾ..
ಚಂದದಿಂದೆಮಸೂನು ಗೋಪೂಜೆ ಮಾಡುವ
ಆ ಕಮಲಾಕ್ಷನು ಶ್ರೀಲಕ್ಷ್ಮಿ ಸಹಿತಲೆ
ಗೋಸಾವಿತ್ರಿಯ ಪೂಜೆಯ ಮಾಡಿದ
ಅದ ತಿಳಿದು ಧರ್ಮಜ ಪುರೋಹಿತರಿಂದ
ಜ್ಞಾನ ಧರ್ಮರಾಯ ಗೋಪೂಜೆ ಮಾಡುವ
ತಂದಿಡೆ ದ್ರೌಪದಿ ಗೋಗ್ರಾಸವ…
ಸಂದರ್ಭಕ್ಕನುಸಾರವಾಗಿ ಲಕ್ಷ್ಮಿ, ಪಾರ್ವತಿ, ಸೀತೆ, ಸಾವಿತ್ರಿ ಎಲ್ಲರೂ ಆಗುವ ಪುರಾಣ ಲೋಕವೇ ಇವರ ಎದೆಯಲ್ಲಿದೆ. ಶಾಸ್ತ್ರ, ಸಂಪ್ರದಾಯಗಳನ್ನು ಸದಾ ಕಾಪಿಟ್ಟುಕೊಳ್ಳುವ ಹೆಂಗಳೆಯರು ಸಾಂಸ್ಕೃತಿಕ ಕೋಶವೇ ಆಗಿ ಕಾಣಿಸುತ್ತಾರೆ. ಸಾಮಾಜಿಕವಾಗಿ ತಮ್ಮ ಬದುಕಿನ ಸಣ್ಣ ಚೌಕಟ್ಟುಗಳಿಂದ ಹೊರಬಂದೂ ಬದುಕನ್ನು ಈ ಹೆಂಗಳೆಯರು ನೋಡುವುದಿದೆ. ರಾತ್ರಿ ‘ಅಂಟ್ಗೇರು’ ಬಂದು ಹೇಳುವ ಪದ ಕೇಳುವ, ಎಲ್ಲರೂ ಸೇರಿ ಮಾರಿಗುಡಿಗೆ ಹೋಗಿ ಬರುವ ನಡೆಗಳು ಇಲ್ಲಿವೆ. ಹಾಗೆ ನೋಡಿದರೆ ಇದೊಂದು ಸಹಜ ಜಾನಪದ ಜಗತ್ತು. ಸಾಮಾಜಿಕ ಶ್ರೇಣೀಕರಣಗಳನ್ನು ಪ್ರಜ್ಞಾಪೂರ್ವಕವಾಗಿ ಸ್ಥಾಪಿಸುವ ಹಠ ಈ ಹೆಣ್ಣು ಜಗತ್ತಿಗಿಲ್ಲ. ಆದರೆ ಅದನ್ನು ಮೀರುವ ಅವಕಾಶವೂ ಅವರಿಗಿಲ್ಲ. ಕಾದಂಬರಿ ಈ ತರತಮಗಳನ್ನು ಸೂಕ್ಮವಾಗಿ ಕಾಣಿಸುತ್ತದೆ. ಪರ ಊರಿನಿಂದ ಸುದ್ದಿಹೊತ್ತುತಂದ ಆಳುಮಗನೊಬ್ಬ “ನಾನು ಮುಟ್ಟಾಳಲ್ರಾ ದೀವರವನು” ಎಂದು ತನ್ನ ಶ್ರೇಷ್ಠತೆಯನ್ನು ಬಿಂಬಿಸಿಕೊಳ್ಳುವದು, ಅವನಿಗೆ ಹಿತ್ತಾಳೆ ಲೋಟದಲ್ಲಿ ಸಿಹಿಬಿಸ್ನೀರು ಸಿಗುವುದು ಇವೆಲ್ಲ ಉಪಕತೆಗಳಂತೆ ಸರಿದುಹೋಗುತ್ತಲೇ ಸಮಾಜದ ಗತಿಬಿಂಬವೊಂದನ್ನು ತೋರಿಸುತ್ತವೆ.

ಹೊಳೆಹಳ್ಳಗಳಿಗೆ ನೆಗಸು ಬರುವುದರಿಂದ ಹವ್ಯಕರ ಬದುಕು ಮಳೆಗಾಲದಲ್ಲಿ ಒಂದು ದ್ವೀಪವೇ ಆಗಿಬಿಡುತ್ತದೆ. ಮಳೆ ಕಳೆದು ಆಡಬಿಸಿಲು ಬರತೊಡಗಿದಾಗ ಬರುವುದೆ ದೊಡ್ಡಬ್ಬ. ಹವ್ಯಕರಿಗೆ ‘ದೊಡ್ಡಬ್ಬ’ ಅಂದ್ರೆ ದೀಪಾವಳಿ. ದನದ ಕೊಟ್ಟಿಗೆಯೇ ಅದರ ಕೇಂದ್ರ. ಬತ್ತ, ಅಡಕೆ, ಸಿಂಗಾರ, ಪಚ್ಚೆತೆನೆ, ದನಗಳ ಕೊರಳಿಗೆ ಅಡಿಕೆಸರ, ಹೂದಂಡೆ ಇಂಥ ಸಂಭ್ರಮಗಳಲ್ಲಿ ತಾದಾತ್ಮ್ಯಗೊಂಡ ಜಗತ್ತು ಅದು. ದೀಪಾವಳಿಯಲ್ಲಿ ಗೋಪೂಜೆ ಮಾಡುವಾಗ ಗೋಗ್ರಾಸ ಕೊಡುವವಳು ಸಾಕ್ಷಾತ್ ದ್ರೌಪದಿಯೇ.

ಸಾಂಸ್ಕೃತಿಕ ಶ್ರೀಮಂತಿಕೆಯ ನೇಪಥ್ಯದಲ್ಲಿ ಇರುವ ಅಂದಿನ ಹವ್ಯಕರ ಬದುಕು ಬಡತನದ್ದೇ ಆಗಿತ್ತು. ಮನೆತುಂಬ ಮಕ್ಕಳು, ಎಲ್ಲರಿಗೂ ಹೊಟ್ಟೆ ತುಂಬಿಸುವುದೇ ಹೆಂಗಸರಿಗೆ ಸವಾಲು. ಬೆಳಗ್ಗೆ ತಿಂಡಿ ತಿನ್ನುವುದು ಎಂದರೆ ಶ್ರೀಮಂತರು ಮಾತ್ರ. ಹಪ್ಪಳವೋ ಹಲಸಿನ ಹಣ್ಣೋ ತಿಂದು ಹಸಿವು ನೀಗಿಸಿಕೊಳ್ಳುವುದೂ ಇತ್ತು. ಮಕ್ಕಳ ಜತೆ ಗಂಜಿಯೋ ನಿನ್ನೆಯ ತಂಗಳೋ ತಿಂದು ಗೆಯ್ಯುವದಷ್ಟೇ ಹೆಂಗಸರ ಕೆಲಸ. ಹಲಸಿನ ಬೇಳೆಯೋ, ಬಾಳೆಕಾಯಿಯೋ ಬಚ್ಚಲೊಲೆಯ ಬೂದಿಯಲ್ಲಿ ಬೇಯಿಸಿ ಮಕ್ಕಳ ಹಸಿವು ಹಿಂಗಿಸುವ ಜಾಣ್ಮೆಯನ್ನೂ ಬಡತನವೇ ಅವರಿಗೆ ಕಲಿಸಿದ್ದು. ಸಂತಾನ ನಿಯಂತ್ರಣದ ಸಾಧನಗಳಿಲ್ಲದ ಆ ಕಾಲದಲ್ಲಿ ಹತ್ತು ಹನ್ನೆರಡು ಮಕ್ಕಳನ್ನು ಹೆರುತ್ತಾ ಅವರನ್ನು ಖಾಯಿಲೆ ಕಸಾಲೆಗಳಂದ ರಕ್ಷಿಸಿಕೊಳ್ಳಲು, ಹೊಟ್ಟೆ ತುಂಬಿಸಲು ಹೋರಾಡುವ ತಾಯಂದಿರ ಬದುಕು ನಿಜಕ್ಕೂ ಸವಾಲಿನದು. ಗಂಡಸರ ಜಗಲಿಯ ಜಗತ್ತಿಗೆ ತಮ್ಮ ಸಂಕಟಗಳೊಂದೂ ಗೊತ್ತಾಗದಂತೆ ನಿರ್ವಹಿಸುವ ಜಾಣ್ಮೆ ಈ ಹಿತ್ತಲು ಜಗತ್ತಿನದು. ಈ ಜಗತ್ತಿನಲ್ಲಿಯೂ ಹಲವು ಒಳಸುಳಿಗಳುಂಟು. ಇಲ್ಲೂ ಅತೃಪ್ತ ಹೆಂಗಸರಿದ್ದಾರೆ. ಅಸೂಯೆ ಅಸಹನೆಗಳಿವೆ. ಈ ಅಂತರ್ಯುದ್ಧದ ಸುಳಿವು ಅಲ್ಲಲ್ಲಿ ಕಾಣುತ್ತದೆ. ತಾಯಿಯಾಗುವುದು ಅಲ್ಲಿ ಪ್ರತಿಷ್ಠೆಯ ಸಂಗತಿ. ಧ್ವನಿಯಿಲ್ಲದ ಹೆಣ್ಣುಮಕ್ಕಳಿಗೆ ಅವರ ತಾಯ್ತನವೇ ಚೂರು ಮರ್ಯಾದೆಯನ್ನೂ ಅಧಿಕಾರವನ್ನೂ ಕೊಡುತ್ತದೆಯೆಂಬುದು ಆ ಜೀವನದ ಸೂಕ್ಷ್ಮ.
ಅಚ್ಚಿಯ ಬನವಾಸಿ ಅಕ್ಕಯ್ಯ ನಾಗವೇಣಿಯ ಬದುಕು ಬಂಜೆಯೆಂಬ ಕಾರಣಕ್ಕೆ ಭಗ್ನವಾದ ರೀತಿ ಹೆಣ್ಣಿನ ಅಸ್ತಿತ್ವದ ಕುರಿತು ಹಲವು ಪ್ರಶ್ನೆಗಳನ್ನೆಬ್ಬಿಸುತ್ತದೆ. ಹೆಣ್ಣು ಅಂದರೆ ತಾಯಿ. ಅದೇ ಅಸ್ತಿತ್ವ. ತಾಯಿಯಾಗದ ನಾಗವೇಣಿ ತನ್ನೊಳಗೇ ತಾನು ಖಾಲಿಯಾಗುತ್ತ ಹೋಗುವುದು, ಹಾಗೆಯೇ ಇಡೀ ಕುಟುಂಬ ಅವಳನ್ನು ಕಡೆಗಣಿಸುವುದು, ಅವಳ ಖಿನ್ನತೆ ಉನ್ಮಾದಕ್ಕೆ ತಿರುಗುವುದು ಇದೆಲ್ಲ ಅವಳ ಮನೋಲೋಕಕಕ್ಕೆ ಪಾತಾಳಗರಡಿ ಹಾಕಿದಂತಿದೆ. ಅಚ್ಚಿಯ ಶಿಶುವನ್ನು ಬಾವಿಕಟ್ಟೆಯ ಮೇಲೆ ಮಲಗಿಸಿ ಮಾತಾಡಿಸುವ ಅವಳ ‘ಹುಚ್ಚು’ ಎದೆ ಝಲ್ಲೆನಿಸುವಂತೆ ಮಾಡುತ್ತದೆ. ಗಂಡಸಿನ ಉದಾಸೀನದಲ್ಲಿ ನಲುಗುವ ಹೆಣ್ಣು ಜೀವಗಳ ಬೂದಿ ಮುಚ್ಚಿದ ಕೆಂಡದಂತಹ ಸಂಕಟಗಳು ಇಂಥಲ್ಲಿ ಸುಳಿಯುತ್ತವೆ. ಗಂಡ ಕರೆದಾಗ ಮಾತ್ರ ಹಾಸಿಗೆಗೆ ಹೋಗುವ ಉಳಿದಂತೆ ಶೂನ್ಯವಾಗಿರುವ, ಮುಟ್ಟು, ಬಸಿರು, ಬಾಣಂತನಗಳ ಚಕ್ರದಲ್ಲಿ ಸುತ್ತುವ ಹೆಣ್ಣುಬದುಕಿನ ಅನೇಕ ಸೂಕ್ಷ್ಮ ಚಹರೆಗಳನ್ನು ಕಾದಂಬರಿ ತೋರಿಸುತ್ತದೆ. ಹಾಗೆಯೇ ವಿಧವೆಯರ ಬದುಕಿನ ತಲ್ಲಣಗಳು ಇಲ್ಲಿವೆ. ಎಷ್ಟೋ ಫಣಿಯಮ್ಮಂದಿರ ಮೌನ ಚೀತ್ಕಾರ ಇಲ್ಲಿ ಅನುರಣಿಸುತ್ತದೆ. ಕೆಂಪುಸೀರೆಯುಟ್ಟು ಒಪ್ಪತ್ತೂಟ ಮಾಡುತ್ತಾ ಗೆಯ್ಯವ ಯಂತ್ರಗಳಂತೆ ಬದುಕು ಮುಗಿಸಿ ಹೋದ ಹೆಣ್ಣುಗಳ ಬದುಕಿನ ಹಿಂದಿರುವ ಕ್ರೌರ್ಯವನ್ನು ತಣ್ಣನೆ ದನಿಯಲ್ಲಿ ಚಂದ್ರಮತಿಯವರು ಸೂಚಿಸುತ್ತಾರೆ. ಬದುಕು ತಮ್ಮನ್ನು ವಿರೂಪಗೊಳಿಸಿದರೂ ಅಂಜದೇ ದಿಟ್ಟತನದಿಂದ ಬದುಕುವ ಲಕ್ಷ್ಮಕ್ಕನಂಥ ವಿಧವೆಯರೂ ಕಾದಂಬರಿಯಲ್ಲಿದ್ದಾರೆ.
ವಿಧವೆಯರು ಹೆತ್ತ ಮಕ್ಕಳನ್ನು ‘ಮಾಲೇರು’ ಎಂದು ಕರೆಯುತ್ತಾ ಒಂದು ಹೊಸಜಾತಿಯನ್ನೇ ಸೃಷ್ಟಿಸಿ  ಸಮಾಜದಿಂದ ಬಹಿಷ್ಕರಿಸುವ ಧರ್ಮವಿಕಾರವೂ ಇಲ್ಲಿದೆ. ಕಾದಂಬರಿ ಘಟಿಸುವ ಕಾಲಘಟ್ಟದಲ್ಲಿಯೇ ಸಮಾಜ ಸುಧಾರಣಾ ಚಳುವಳಿಗಳ ಉಲ್ಲೇಖವೂ ಬರುತ್ತದೆ. ವಿಧವೆಯರ  ಸ್ಥಿತಿಯನ್ನು ಬದಲಿಸುವ ಪ್ರಯತ್ನಗಳು ಅಂದು ಆರಂಭವಾಗಿದ್ದವು. ಸಾಂಪ್ರದಾಯಿಕ ಸಮಾಜ ಬದಲಾವಣೆಯನ್ನು ಇನ್ನೂ ಒಳಗೊಂಡಿರಲಿಲ್ಲ.
ಬ್ರಿಟಿಷ್ ವಸಾಹತುಶಾಹಿಯ ಪರಿಣಾಮದಿಂದ ದೇಶವು ನಲುಗಿಹೋದ ಕಾಲಘಟ್ಟವದು. ಕಾಡಿನ ನೀರವತೆಯಲ್ಲಿ ಮುಳುಗಿದ ಹವ್ಯಕ ಸಮುದಾಯಕ್ಕೂ ಅದರ ಬಿಸಿ ತಟ್ಟದೇ ಇರಲಿಲ್ಲ. ಸ್ವಾತಂತ್ರ್ಯ ಚಳುವಳಿಯ ಕಾವು ನಿಧಾನಕ್ಕೆ ಇಲ್ಲಿನ ತಣ್ಣಗಿನ ಬದುಕಿನಲ್ಲೂ ಕಿಡಿ ಹೊತ್ತಿಸಿತು. ಈ ಯಾವ ವಿವರಗಳೂ ಇಲ್ಲಿ ರಾಜಕೀಯ ವರದಿಗಳಾಗದೇ ಕತೆಯ ಸಾವಯವ ಹೆಣಿಗೆಯೊಳಗೆ ಬೆರೆತುಕೊಂಡೆ ಅನುಭವಕ್ಕೆ ಬರುತ್ತವೆ. ಲೇಖಕಿ ಕಾದಂಬರಿಯುದ್ದಕ್ಕೂ ಇಂಥ ಸೂಕ್ಷ್ಮಗಳನ್ನು ಕಾಪಿಟ್ಟುಕೊಂಡಿದ್ದಾರೆ. ಹಬ್ಬಕ್ಕೆ ಮನೆಗೆ ಸಾಮಾನು ತಂದಾಗ ಉಪ್ಪಿನ ಪ್ರಮಾಣ ಕಡಿಮೆಯಿರುವುದು ಮನೆಯ ಹೆಂಗಸರ ಗಮನಕ್ಕೆ ಬರುತ್ತದೆ, ಸರ್ಕಾರ ಉಪ್ಪಿಗೂ ಕರ ವಿಧಿಸಿರುವುದರಿಂದ ಉಪ್ಪು ದುಬಾರಿಯಾಗಿದೆಯೆಂಬುದು ಹೆಬ್ಬಾಗಿಲಿನಲ್ಲಿ ನಡೆಯುವ ಗಂಡಸರ ಮಾತುಕತೆಯಲ್ಲಿ ಅಲ್ಲಿನ ಹೆಣ್ಣುಮಕ್ಕಳ ಕಿವಿಗೂ ಬೀಳುತ್ತದೆ. “ಕಾನೂನುಭಂಗ ಚಳುವಳಿಗೆ ಮಹಾತ್ಮರು ಕರೆಕೊಟ್ಟಿದ್ದ. ಹಂಗಾಗಿ ಗೋಕರ್ಣದ ಸುತ್ತಮುತ್ತ ಅಂಕೋಲ ಎಲ್ಲಕಡೆ ಸರಕಾರದ ಕಾನೂನ ವಿರೋಧಿಸಿ ಜನವೇ ಉಪ್ಪು ತಯಾರ‍್ಸಕ್ಕೆ ಹೊಂಟಿದ್ದ ಅನ್ನ ಸುದ್ದಿ ಎಲ್ಲ ಊರಲ್ಲೂ ಹಬ್ಬಿತ್ತು” ಹೀಗೆ ನಿಧಾನಕ್ಕೆ ಅಡಿಗೆಮನೆಯಲ್ಲೊಂದು ಕಿಟಕಿ ಮೂಡುತ್ತಾ ಹೆಂಗಸರೂ ರಾಜಕೀಯ ಅರಿವಿನ ಭಾಗವಾಗುವ ಸಣ್ಣ ಚಲನೆ ಆರಂಭವಾಗುತ್ತದೆ.
ಮಹಾತ್ಮ ಗಾಂಧಿಯ ನೆರಳು ಇಲ್ಲಿಯೂ ಆವರಿಸುತ್ತದೆ. ಊರಲ್ಲಿ ಕರಪತ್ರಗಳು ಹರಿದಾಡುತ್ತವೆ. ಚಳುವಳಿಗಾರರು ತಲೆಮರೆಸಿಕೊಳ್ಳಲು ಮಲೆನಾಡಿನ ಒಂಟಿಮನೆಗಳಲ್ಲಿ ಆಶ್ರಯ ಪಡೆಯುತ್ತಾರೆ. ಪಣತದ ಮನೆ ಕಾರ್ಯಕರ್ತರ ಚರ್ಚಾಕೇಂದ್ರವಾಗುತ್ತದೆ. ಬಿಳಿಟೋಪಿಯ ಆಗಂತುಕರನ್ನು ಪೋಲೀಸರು ಹುಡುಕಿಕೊಂಡು ಬರುವುದೂ, ಊರಿನವರು ರಕ್ಷಿಸುವುದೂ ಸಾಮಾನ್ಯ ವಿದ್ಯಮಾನವೇ ಆಗಿಬಿಡುತ್ತದೆ. ವೈಯಕ್ತಿಕವಾಗಿಯೂ ಹಲವರು ಕರ ಪಾವತಿಸದೇ ಅಸಹಕಾರ ಚಳವಳಿಯ ಭಾಗವಾಗುತ್ತಾರೆ. ಕರಪತ್ರ ಮುದ್ರಿಸುವ ಕಲ್ಲಚ್ಚು ಯಂತ್ರದ ಪ್ರಸ್ತಾಪ ಕಾದಂಬರಿಯಲ್ಲಿ ಬರುತ್ತದೆ. ಹೀಗೆ ಯಂತ್ರ ಜಗತ್ತು ನಿಧಾನವಾಗಿ ಒಳ ಪ್ರವೇಶಿಸತ್ತದೆ. ಜಗಲಿಯಲ್ಲಿ ಕುಳಿತು ‘ಸದ್ಭೋದ ಚಂದ್ರಿಕೆ’ ಯನ್ನು ಗಂಡಸರು ಓದುವ ಚಿತ್ರವನ್ನೂ ಕಾದಂಬರಿ ಕಟ್ಟಿಕೊಡುತ್ತದೆ. ಇಂಥ ಐತಿಹಾಸಿಕ ಬೆಳವಣಿಗೆಗಳಿಗೆ ಕತೆ ಜಾಗ ಮಾಡಿಕೊಟ್ಟಿದೆ. ಮುರ ಬೇಯಿಸುತ್ತಾ, ಕೊಟ್ಟಿಗೆ ಕೆಲಸ ಮಾಡುತ್ತಾ ಮಳೆಯೊಂದಿಗೆ ಸೆಣಸುವ ಅಚ್ಚಿಗೆ ಭಾವ ಓದುತ್ತಿರುವ ಪತ್ರಿಕೆಯ ಬಗ್ಗೆಯೇನೋ ಕುತೂಹಲವಿದೆ, ಆದರೆ ಜಗುಲಿಯ ಜಗತ್ತಿಗೆ ಅದರ ಅರಿವಿದ್ದಂತಿಲ್ಲ. ಮುಂದಿನ ತಲೆಮಾರಿನ ಹೆಣ್ಣುಮಕ್ಕಳು ಶಿಕ್ಷಣಕ್ಕೆ ನಿಧಾನವಾಗಿ ತೆರೆದುಕೊಳ್ಳುವ ನಡಿಗೆ ಕಾಣುತ್ತದೆ.  ಬೇರೆ ಊರಿಗೆ ಹೋಗಲು ಎತ್ತಿನ ಗಾಡಿ ಹೂಡುವ ಅಂದಿನ ಸಂದರ್ಭದಲ್ಲಿ ಅಲ್ಲಲ್ಲಿ ಮೋಟಾರು ಗಾಡಿಗಳ ಆಗಮನವಾಗುತ್ತದೆ. ಬಸ್ಸು ಎಂಬ ಹೊಸಪದ ಕೇಳಬರುತ್ತದೆ. ಕಷಾಯ, ಸಿಹಿಬಿಸ್ನೀರು, ಹೆಸ್ರುಹಣಿಗಳ ಜೊತೆ ಚಹವೆಂಬ ಹೊಸ ಪಾನೀಯ ನಿಧಾನವಾಗಿ ಸೇರ್ಪಡೆಯಾಗುತ್ತದೆ, ಮೊದಲು ಗಂಡಸರ ಜಗಲಿಗಿಳಿದು ಅದು ನಿಧಾನವಾಗಿ ಹೆಂಗಸರ ಒಳಮನೆಯನ್ನೂ ತಲುಪುತ್ತದೆ!
ಇಲ್ಲಿನ ಹೆಂಗಸರ ಬದುಕೇ ಒಂದು ಮಹಾಕಾವ್ಯದಂತಿದೆ. ಕುವೆಂಪು ಅವರ ಕಾನೂರು ಹೆಗ್ಗಡತಿಯಲ್ಲಿ “ಕಡಗೋಲು ಕಂಬದ ಸಾಕ್ಷಿಯಲ್ಲಿ” ಎಂಬ ಪರಿಕಲ್ಪನೆಯಿದೆಯಲ್ಲ! ಹಾಗೆಯೇ ಈ ಕಾದಂಬರಿಯೂ ಹೆಣ್ಣು ಬದುಕಿನ ಮೂಲಕ ಸಂಬಂಧಗಳ ಶಕ್ತಿ ಹಾಗೂ ವಿಘಟನೆಯ ದೌರ್ಬಲ್ಯಗಳೆರಡನ್ನೂ ದರ್ಶನಮಾಡಿಸುತ್ತದೆ. ಮನುಷ್ಯರ ರಾಗದ್ವೇಶಗಳ ಕತೆ ಹೇಳುತ್ತಲೇ ಬದುಕಿನ ವಿಕಾಸದ ಚೆಲುವನ್ನೂ ತೋರಿಸುತ್ತದೆ. ಈ ಕಥನ ಶುರುವಾಗುವುದೇ ಅಜ್ಜಿ ಮೊಮ್ಮಗಳಿಗೆ ಕತೆ ಹೇಳುವ ತಂತ್ರದ ಮೂಲಕ. ಹಣ್ಣುಹಣ್ಣು ಮುದುಕಿಯಾದ ಅಚ್ಚಿ ತನ್ನ ಬಾಲ್ಯ, ಯೌವನ, ಮಧ್ಯವಯಸ್ಸುಗಳನ್ನು ನೆನಪುಗಳಲ್ಲಿ ದಾಟುತ್ತಾ ಹೋಗುವ ಚಲನೆಯಿಲ್ಲಿದೆ. ಬದುಕಿನುದ್ದಕ್ಕೂ ಎದುರಾಗುವ ಜಡಕು (ಗಂಟು) ಬಿಡಿಸುತ್ತಾ ತಮ್ಮ ತ್ಯಾಗ ಹಾಗೂ ವಿಶಾಲ ಮನಸ್ಸಿನಿಂದ ಕೂಡು ಕುಟುಂಬವನ್ನು ಕಟ್ಟುತ್ತಲೇ ಬಂದ ಶ್ರೀಪಾದ ಅಚ್ಚಿಯರ ಬದುಕು ಸಾಮರಸ್ಯದ ಬಾಳ್ವೆಯ ದ್ಯೋತಕ. ಪಡೆದ ಹತ್ತುಮಕ್ಕಳಲ್ಲಿ ಕೆಲವರನ್ನು ಕಳೆದುಕೊಂಡು ಹಲವರನ್ನು ಉಳಿಸಿಕೊಂಡು ದೊಡ್ಡ ಬಾಳ್ವೆಗೆ ತನ್ನನ್ನು ತೆತ್ತುಕೊಂಡವಳು ಅಚ್ಚಿ. ತಾನು ಮದುವೆಯಾಗಿ ಬಂದ ಮನೆಯ ಹಿರಿಸೊಸೆ ಸರಸ್ವತಕ್ಕಯ್ಯನನ್ನು ಸಹೋದರಿತ್ವದ ಬಂಧದಲ್ಲಿ ಬೆಸೆದು ಮನೆಯ ಆಧಾರವಾಗಿ ನಿಂತವಳು. ಅಗತ್ಯ ಸಂದರ್ಭಗಳಲ್ಲಿ ಒಬ್ಬರ ಮಕ್ಕಳಿಗೆ ಇನ್ನೊಬ್ಬರು ಮೊಲೆಹಾಲು ಕುಡಿಸಿ ತಮ್ಮ ಏಕತೆಯನ್ನು ಅವರು ಮೆರೆಯುತ್ತಾರೆ. ಆದರೂ ಆಸ್ತಿಪಾಸ್ತಿಯ ವಿಚಾರ ಬಂದಾಗ ಮನೆ ಹಿಸೆಯಾಗುತ್ತದೆ. ಬದುಕು ವಿಘಟನೆಯ ನೋವಿಗೆ ಪಕ್ಕಾಗುತ್ತದೆ. ಮತ್ತೆ ಹೊಸಮನೆ ಕಟ್ಟಿ, ಹೊಸ ತೋಟ ಬೆಳೆಸಿ ಮಕ್ಕಳನ್ನೆಲ್ಲ ಓದಿಸಿ ತನ್ನ ಕಡೆಗಾಲದಲ್ಲಿ ಮೈಸೂರು, ಮುಂಬೈ ಶಹರದ ಬದುಕನ್ನು ಅಚ್ಚಿ ಕಂಡಳು. ಅಷ್ಟೇ ಅಲ್ಲ ವಿಮಾನವೇರಿ ವಿದೇಶಕ್ಕೂ ಪಯಣಿಸಿದಳು. ಮಕ್ಕಳು ಮೊಮ್ಮಕ್ಕಳೊಟ್ಟಿಗೆ ತುಂಬು ಬದುಕನ್ನು ಬಾಳಿದಳು. ಮಕ್ಕಳು ತಮ್ಮ ಜಾತಿಯಾಚೆಗೆ ಮದುವೆಯಾದಾಗ ಅದನ್ನೂ ಸಹಜವಾಗಿಯೇ ಸ್ವೀಕರಿಸಿದಳು, ಹೊಸ ತಲೆಮಾರಿನ ಭಿನ್ನ ಮನೋಧರ್ಮವನ್ನು ಸಹನೆಯಿಂದ ಅರಿತಳು. ಹಲವು ಬಿಳಲುಗಳ ಆಲದ ಮರದಂತೆ ದೃಢವಾಗಿ ನಿಂತಳು.

(ಡಾ. ಗೀತಾ ವಸಂತ)

ಪರಿಪಕ್ವವಾದ ಬದುಕೊಂದು ಹಣ್ಣಾಗಿ ಸಹಜವಾಗಿ ಕಳಚಿಬೀಳುವಂತೆ ಶ್ರೀಪಾದ ನಂತರ ಅಚ್ಚಿ ಕೊನೆಯಾದರು. ತನುವಿನೊಳಗಿದ್ದ ಹಂಸೆ ಮನಕ್ಕೆ ಹೇಳದೇ ಹೊರಟುಹೋದಂತೆ ಅನಾಯಾಸವಾದ ಮರಣ ಅವರ ಬದುಕಿಗೊಂದು ಪೂರ್ಣವಿರಾಮ ಹಾಕಿತು, ಯಾವ ತಾತ್ವಿಕ ಪ್ರಶ್ನೆಗಳನ್ನೆತ್ತದೇ, ಸಂಘರ್ಷಗಳನ್ನು ಎದುರಿಗಿಡದೇ, ನಿರುಮ್ಮಳವಾಗಿ ಹರಿಯುವ ಹೊಳೆಯಂತೆ ಕಥನವು ಹರಿಯತ್ತದೆ, ಬಾಳ್ವೆಯೆಂಬುದನ್ನು ಅಂಗುಲಂಗುಲ ಬದುಕಿಯೇ ಕಟ್ಟಬೇಕು. ಒಡಲ ತಪನೆಯಲ್ಲೇ ಸತ್ಯಗಳು ಹೊಮ್ಮಬೇಕು. ಇದು ಕಾದಂಬರಿಯ ಮನೋಧರ್ಮ.

ಇಂಥ ನಿರುದ್ವಿಗ್ನ ಶೈಲಿಯಲ್ಲಿ ಕತೆ ಹೇಳುವಿಕೆ ಎಂ.ಕೆ.ಇಂದಿರಾ ಅವರ ಕಥನವನ್ನು ನೆನಪಿಸುತ್ತದೆ. ಕಾಲದ ಕನ್ನಡಿಯಂತೆ ಯುಗಧರ್ಮವನ್ನು ಕಟ್ಟಿಕೊಡುವ ಕಥನವಿದು. ಜಾಗತಿಕ ಮಹಾಯುದ್ದ, ಕಾಲರಾದಂತ ಮಹಾರೋಗ, ಬರಗಾಲ, ಸ್ವಾತಂತ್ರ್ಯ ಹೋರಾಟ, ಗಾಂಧಿಹತ್ಯೆ ಹೀಗೆ ಚರಿತ್ರೆಯ ಪುಟಗಳನ್ನು ತನ್ನ ಗರ್ಭದಲ್ಲಿಟ್ಟುಕೊಂಡು ಹವ್ಯಕರ ಬದುಕಿನ ಪುಟ್ಟ ಕ್ಯಾನ್ವಾಸಿನಲ್ಲಿ ಗಹನವಾದ ಚಿತ್ರವನ್ನು ಚಂದ್ರಮತಿಯವರು ಬಿಡಿಸುತ್ತಾರೆ. ಕಾದಂಬರಿ ಕಟ್ಟಿಕೊಡುವ ಪ್ರಾದೇಶಿಕ ಹಾಗೂ ಭಾಷಿಕ ಅನನ್ಯತೆಯ ಬಗ್ಗೆ ಒಂದು ಮಾತು ಹೇಳದೇ ಈ ಓದಿನ ಅನುಭವ ಪೂರ್ಣವಾಗುವುದಿಲ್ಲ. ಇಂಥ ಅನನ್ಯತೆಯನ್ನು ಕನ್ನಡದಲ್ಲಿ ಎಂ.ಕೆ. ಇಂದಿರಾ, ವೈದೇಹಿ, ಗೀತಾ ನಾಗಭೂಷಣ, ನಾಗವೇಣಿ. ಮಿತ್ರಾ ವೆಂಕಟರಾಜ, ಎಂ.ಎಸ್.ವೇದಾ ಮುಂತಾದವರು ಸೃಷ್ಟಿಸಿದ್ದಾರೆ, ಮಲೆನಾಡಿನ ಅದರಲ್ಲೂ ಸೊರಬದ ಸುತ್ತಮುತ್ತಲಿನ ಹವ್ಯಕರ ಸಾಂಸ್ಕೃತಿಕ ಬದುಕಿನ ವಿವರಗಳಲ್ಲಿ ಕಾದಂಬರಿ ಅರಳಿದೆ. ಹವ್ಯಕ ಭಾಷೆಯಲ್ಲೇ ಪ್ರತೀ ಹತ್ತಿಪ್ಪತ್ತು ಕಿಲೋಮೀಟರುಗಳಲ್ಲಿ ವ್ಯತ್ಯಾಸಗಳಾಗುತ್ತವೆ. ಅಡಿಗೆ ಊಟ ವೃತ ನೇಮಗಳಲ್ಲೂ ವ್ಯತ್ಯಾಸ ಸಹಜ. ಇಂಥ ಸೂಕ್ಷ್ಮಗಳನ್ನೆಲ್ಲ ಚಂದ್ರಮತಿಯವರು ಗಮನಿಸಿದ್ದಾರೆ. ಇಲ್ಲಿ ಬರುವ ಹವ್ಯಕರಷ್ಟೇ ಬಳಸುವ ವಿಶಿಷ್ಟ ಪದಗಳು ಹಾಗೂ ನುಡಿಗಟ್ಟುಗಳನ್ನು ಸಂಗ್ರಹಿಸಿದರೆ ಒಂದು ಪದಕೋಶವೇ ಆದೀತು! ಅಷ್ಟರ ಮಟ್ಟಿಗೆ ಕಾದಂಬರಿಯ ಭಾಷೆ ಅನನ್ಯವಾಗಿದೆ, ಆದರೆ ಸಂವಹನಕ್ಕೆ ಕಿಂಚಿತ್ತೂ ತೊಡಕಾಗದಂತೆ ಚಂದ್ರಮತಿಯವರು ಕಾದಂಬರಿಯನ್ನು ನಿರ್ವಹಿಸಿದ್ದಾರೆ.
ಅಂತರಂಗ ಹಾಗೂ ಬಹಿರಂಗದ ಎಲ್ಲ ವಿದ್ಯಮಾನಗಳನ್ನು ಹೆಣ್ಣಿನ ಕಣ್ಣಿನಲ್ಲಿ ಕಂಡು ಕಟ್ಟಿದ ಕಥನವಿದು. “ನಾಯಿ ಮರಿ ಹಾಕ್ದಂಗೆ ಮಕ್ಕಳನ್ನ ಹಡದ್ದೆ ಅನ್ನಿಸಿಗ್ಯಂಡೋಳು” ಹಡೆದ ಮಕ್ಕಳನ್ನೆಲ್ಲ ಬದುಕಿನ ದಡ ಸೇರಿಸಿದ ಸಂತೃಪ್ತಿಯಲ್ಲಿ ತೆರಳುವದು ಬದುಕಿನ ಸಾರ್ಥಕ್ಯ. ಯಾವ ರಾಜಕೀಯ ಮಹತ್ವಾಕಾಂಕ್ಷೆಯಿಲ್ಲದ ಅಪ್ಪಟ ಬದುಕು ಅಷ್ಟೇ ಇದು!. ಕಾಲಕ್ಕೆ ತಕ್ಕಂತೆ ಬದಲಾಗುತ್ತ ಯಾವ ಪೂರ್ವಗ್ರಹಗಳಿಲ್ಲದೇ ಬದುಕಿ ನಿರ್ಗಮಿಸಿದ  ಜೀವಗಳ ಘನತೆಯ ಕಥನವಿದು. ತನ್ನ ನೆನಪುಗಳಲ್ಲಿ ಕಾಲ ದೇಶಗಳ ವಿವರಗಳನ್ನು ಅದರ ನೆರಳು ಬೆಳಕಿನೊಟ್ಟಿಗೆ ಮೆರವಣಿಗೆ ಹೊರಡಿಸಿದ ಚಂದ್ರಮತಿಯವರ ಬರಹದ ಧಾರಣಶಕ್ತಿಯೂ ದೊಡ್ಡದೇ. ಕನ್ನಡ ಕಾದಂಬರಿ ಲೋಕಕ್ಕೆ ಇದೊಂದು ವಿಶಿಷ್ಟ ಸೇರ್ಪಡೆ.