ಕ್ಲೀಷೆಯಲ್ಲದ, ಚರ್ವಿತಚರ್ವಣವಲ್ಲದ ಇಲ್ಲಿನ ಕವಿತೆಗಳ ವಿಸ್ತಾರ, ಭಿತ್ತಿ, ಆಧುನಿಕೋತ್ತರ ಕನ್ನಡ ಕಾವ್ಯ ಮೀಮಾಂಸೆಗೆ ಒಂದು ಕೊಡುಗೆ. ಅದರ ದಾರಿಯನ್ನು ಇನ್ನಷ್ಟು ಮುಂದಕ್ಕೆ ಸ್ಪಷ್ಟಮಾಡುವಲ್ಲಿ ಪ್ರೀತಿಯ ಪ್ರಯತ್ನ. ಅದು ಸಫಲವೂ ಕೂಡ ಇಲ್ಲಿ. ಓದುತ್ತ ಹೋದಲ್ಲಿ ಕವಿತೆಗಳ ಸಾಲುಗಳ, ಮನಗಾಣಬಹುದು. ಹೊಸ ಚೈತನ್ಯದಿಂದ ತುಂಬಿ ತುಳುಕುವವು. ಜೊತೆಗೆ ವ್ಯಕ್ತಗೊಂಡಿರುವ ವಸ್ತು ಕಡುವಾಸ್ತವದ ನಿಗಿನಿಗಿ ಕೆಂಡದಂತಿವೆ. ಆಧುನಿಕೋತ್ತರ ಕನ್ನಡ ಕಾವ್ಯವಂತೂ ಹೊಸ ರೂಪಕ, ಭಾಷೆ, ಸಂವೇದನೆಗಳಿಗೆ ಹಪಹಪಿಸುತ್ತಿದೆ. ಹುಡುಕುತ್ತಿದೆ. ಸಂಕಲನ ನಿಜಕ್ಕೂ ಅದನ್ನು ಪೂರೈಸುವುದು.
ಎಸ್. ದಿವಾಕರ್ ಅವರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಕವನ ಸಂಕಲನದ ಕುರಿತು ಎಚ್. ಆರ್. ರಮೇಶ್ ಬರಹ

 

ಕಲೆ ನಿಸರ್ಗದ ಅನುಕರಣೆ. ಪ್ಲೇಟೋನ ಮಾತು. ಅಂದರೆ ಬದುಕಿನ ಅನುಕರಣೆಯೇ. ಇದು ಅರ್ಧಸತ್ಯ. ಸಂಪೂರ್ಣವಾಗಿ ಒಪ್ಪಿದರೆ ಮನುಷ್ಯನ ಸೃಜನಶೀಲತೆ, ಸೋಪಜ್ಞತೆಗಳಿಗೆ ಪ್ರಾಮುಖ್ಯತೆಯೇ ಇಲ್ಲವೆ ಎನ್ನುವ ಪ್ರಶ್ನೆಗಳು ಏಳುತ್ತವೆ. ಇದು ತಾತ್ವಿಕ ಪ್ರಶ್ನೆ. ಕವಿ ಯಾ ಕಲಾವಿದ ಇರುವುದನ್ನೋ ಅಥವಾ ಇಲ್ಲದಿರುವುದನ್ನೋ ಸೃಷ್ಟಿಮಾಡುವುದು. ಅಥವಾ ಸೃಷ್ಟಿಮಾಡಿ ಇಡಲಾಗುತ್ತದೆಯೋ ಅಥವಾ ಅಭಿವ್ಯಕ್ತಿಗೊಂಡಿರುವುದು ಈಗಾಗಲೇ ಇದ್ದದ್ದೋ ಅಥವಾ ಇದ್ದಿರುವುದನ್ನೋ. ‘ಹೀಗೆ ಇತ್ತು’ ಎಂದು ಗೆರೆ ಕೊಯ್ದು ಒಂದು ಆಕಾರದಲ್ಲಿ ಇಡುವುದೋ. ಈ ಥರ ಯೋಚಿಸುವುದು ಸೊಗಸಿನ, ಕುತೂಹಲದ ಸಂಗತಿ. ‘ಬರವಣಿಗೆ ಎಂದರೇನು?’ ಎಂಬುದು ಅರ್ಥಕ್ಕೆ ಸುಲಭದಲ್ಲಿ ಸಿಗದಂತಹದ್ದಲ್ಲ. ಆದರೆ ಅದು ಬದುಕಿನಲ್ಲಿ ಏನೋ ಅವ್ಯಕ್ತವಾದುದನ್ನು ಹುಡುಕುತ್ತಿರುತ್ತದೆ, ಹುಡುಕುತ್ತ ಸೃಜನಶೀಲತೆಯ ಕುಲುಮೆಯಲ್ಲಿ ರೂಪಿಸಲು ಪ್ರಯತ್ನಿಸುತ್ತದೆ. ಹೀಗೆ ಬದುಕನ್ನು ಬಗೆಯುವ, ಅನುಭವಿಸಿದ್ದನ್ನು ಬಗೆಬಗೆಯಲ್ಲಿ ತಿರುಗಿ, ತಿರುಗಿ ಕಾಣಿಸುವುದು. ಸತ್ಯಕ್ಕೆ ಮುಖಾಮುಖಿಯಾಗುವ ಅವಕಾಶ ಮತ್ತು ಅದೃಷ್ಟ ಸಿಗಬಹುದಾ ಎಂದು. ಸಂವೇದನೆ ಸ್ವಂತದ್ದಾದರೂ ಅದು ಒಳಗೊಳ್ಳುವ ಭಾಷೆ ಲೋಕದಲ್ಲಿ ಅನಾದಿಕಾಲದಿಂದಲೂ ಕಾಲದ ನದಿಯಲ್ಲಿ ಜನರ ನುಡಿಯಲ್ಲಿ ಹರಿಯುತ್ತ ಬಂದಿರುವುದು. ಹಾಗೂ ಕಲೆಯಲ್ಲಿ ವ್ಯಕ್ತಗೊಳ್ಳುವುದು ಸ್ವಂತದ್ದೆಷ್ಟೋ ಸಮಾಜದ್ದೂ, ಪ್ರಪಂಚದ್ದೂ ಅಷ್ಟೇ ಇದೆ.

ಹೀಗೆ ಸಮರ್ಥಿಸಿಕೊಂಡಲ್ಲಿ ಕವಿಯ ಸ್ವಂತದ್ದೆನ್ನುವ ಅಭಿವ್ಯಕ್ತಿ ಎಲ್ಲೋ ಒಂದು ಕಡೆ ಬೇರೆಯವರದ್ದೂ ಆಗಿರುತ್ತದೆ. ಆದರೆ ‘ಥರ’ ಬೇರೆಯಾಗಿರಬಹುದು. ಸ್ಪಂದನೆಗಳು ಒಮ್ಮೊಮ್ಮೆ ಏಕಕಾಲದಲ್ಲಿ ಒಂದೇ ತೆರನಾಗಿಯೂ ಇರಬಹುದು. ನಿಸರ್ಗಸಹಜವಾದ ಕೋಇನ್ಸಿಡೆನ್ಸು! ವೇಸ್ಟ್ ಲ್ಯಾಂಡಿನ ಭಿತ್ತಿ, ಧಾತು, ಅಡಿಗರಲ್ಲಿ ಮೂಡಿರುವುದು. ಅಂಗಳ ಬೇರೆ. ಆಂತರ್ಯದಲ್ಲಿ ಸಾಮ್ಯತೆ. ಪ್ರಭಾವ ಪ್ರಜ್ಞಾಪೂರ್ವಕವೆಷ್ಟೋ ಅಪ್ರಜ್ಞಾಪೂರ್ವಕವೂ ಅಷ್ಟೇ ಇದೆ. ಸಾಮ್ಯತೆ ಮತ್ತು ಭಿನ್ನತೆ ಜೊತೆಗೆ ಅನನ್ಯತೆ. ಹೇಗಿದ್ದರೂ ಸೃಜನಶೀಲ ಮನಸ್ಸು ಇರುತ್ತದಲ್ಲ, ಅದು ಕಾಲದ ಪರೀಕ್ಷೆಗೆ ಒಡ್ಡುವುದಕ್ಕೆ. ಉಪ್ಪಾಕಿ ಕಾಪಿಡಲು ಮುಂದಕ್ಕೆ, ಇನ್ನೂ ಮುಂದಕ್ಕೆ. ಅಲ್ಲದೆ, ಬದುಕಿನ, ಲೋಕದ ಸಂಬಂಧ ಒಂದಕ್ಕೊಂದು ಸಾವಯವವಾಗಿ ಹೆಣೆದುಕೊಂಡಿದೆಯಲ್ಲ… ಹಾಗಾಗಿ ‘ಪ್ರಭಾವ’, ‘ಪ್ರೇರಣೆ’ ಸಹಜವಾದುದು. ಇದಕ್ಕೆ ಅಳುಕೇತಕೆ. ಮತ್ತು ಅದನ್ನು ಜರಿಯುವುದಾದರೂ ಬೇಡ. ಹೇಗಿದ್ದರೂ ಪರಂಪರೆಯೆನ್ನುವುದು ಇದೆಯಲ್ಲ ಮುಳುಗಿಸಲು ಮತ್ತು ತೇಲಿಸಲು, ಹಾಗೇ ದಡಕ್ಕೆ ರಪ್ಪಂಥ ಬಿಸಾಕಲು.

(ಎಸ್. ದಿವಾಕರ್)

ಕಲೆಯ ಅಭಿವ್ಯಕ್ತಿಯಲ್ಲಿ ಮುಖಾಮುಖಿಯಾಗುವುದು ಸತ್ಯಕ್ಕೆ. ಈ ಎಲ್ಲ ಲಹರಿ, ಯೋಚನೆ, ಅನಿಸಿಕೆಗಳು ಬಂದದ್ದು ಮೋಹಕ ಕನ್ನಡದ ಕಥಾಲೋಕವನ್ನು ಜಗದ ಬೇರೆ ಬೇರೆ ಹೂವುಗಳನ್ನು ತಂದು ಇನ್ನಷ್ಟು ಸಿಂಗರಿಸಿರುವ ಎಸ್. ದಿವಾಕರರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಓದುತ್ತಾ ಹೋದಹಾಗೆ. ‘ಸ್ವಂತ’ದ್ದು ಮತ್ತು ‘ಅನ್ಯ’ರದ್ದು ಎರಡನ್ನು ಮಿಕ್ಸ್ ಮಾಡಿ, ಹದಗೊಳಿಸಿ ಇಲ್ಲಿಯದನ್ನಾಗಿಸಿರುವುದ ಕಾಣಬಹುದು.

ಕವಿತೆ ಮಿಡಿಯುವುದು ನೋವಿಗೆ. ಅದು ಅದರ ಫಿಲಾಸಪಿ, ಬದ್ಧತೆ. ಆದರೂ ತನ್ನ ಸೌಂದರ್ಯ ಪ್ರಜ್ಞೆಯನ್ನು ಕವಿತೆ ಅಂತರ್ಗಾಮಿನಿಯಾಗಿ ಇಟ್ಟುಕೊಂಡಿರುತ್ತದೆ. ಬ್ಯೂಟಿ ಮತ್ತು ಡಿಕೆಡೆನ್ಸ್ ಜೊತೆ ಜೊತೆಗೆ. ನೋವು ಕವಿತೆಯ ಪ್ರಾಣ. ಯು.ಜಿ.ಹೇಳುತ್ತಾರಲ್ಲ ‘ಯು ಆರ್ ನಾಟ್ ಅಟ್ ಪೀಸ್ ವಿಥ್ ಯುವರ್ಸೆಲ್ಫ್. ಹೌ ಕ್ಯಾನ್ ಯು ಕ್ರಿಯೇಟ್ ಪೀಸ್ ಇನ್ ದ ವರ್ಲ್ಡ್?’ ನೋವು ಎಲ್ಲಿದ್ದರೂ ನೋವೇ. ಟೈಟಾನಿಕ್ ನ ರೋಸ್, ಕಾಳಿದಾಸನ ಶಾಕುಂತಲೆ, ಇಬ್ಬರದೂ ಹತಾಶೆ, ಕಣ್ಣೀರು. ಅಲ್ಲಿಯ ಕವಿತೆಗಳಿಂದ ಸ್ಫೂರ್ತಿಗೊಂಡು ಇಲ್ಲಿ ರಚಿಸಿದ್ದರೂ ನೋವು ಇಲ್ಲಿಯದೇ. ನೋವಿಗೆ ನೋವು ಎಂಥಾ ಸಾಥ್! ಹೇಳುವ ದುಃಖ, ಕೇಳುವ ದುಃಖ ಹೋಮೋ ಸೇಪಿಯನ್ನರದೆ. ಕನ್ನಡ ಭಾಷೆಯ ಹಿಗ್ಗು. ನಿನ್ನನ್ನು ನಾನು ನನ್ನೊಳಗೆ ಎಳೆದುಕೊಂಡೆ ಎನ್ನುವ ಸಿರಿಯ ಹಿಗ್ಗು. ಒಳಗುಮಾಡಿಕೊಂಡಷ್ಟೂ ವಿಸ್ತಾರ. ಮೇಲಾಗಿ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ದ ಕವಿ ಮೂಲತಃ ಜಗದ ಕತೆಗಳನ್ನು ಇಲ್ಲಿ ಹೇಳಿದ ಕತೆಗಾರ.

ಕತೆ ಮಾತು; ಕವಿತೆ ಪಿಸುಮಾತು. ಇಲ್ಲಿನ ಕವಿತೆಗಳು ಹೇಳುತ್ತವೆ, ಜಗದ ಅವನತಿಗೆ ಮನುಷ್ಯನೇ ಮಾಡಿಕೊಂಡ ಅವಾಂತರಗಳು. ಯಾರು ಹೊಣೆ, ಅವನೇ ಎಂದು. ನೋಡಿ ಇಲ್ಲಿ ಒಂದು ಕವಿತೆಯ ಸಾಲುಗಳನ್ನು: ಪ್ರತಿಯೊಂದು ಯುದ್ಧ ನಡೆದ ಮೇಲೂ / ಶುದ್ಧೀಕರಿಸಬೇಕು ಯಾರಾದರೂ / ಚೆಲ್ಲಾಪಿಲ್ಲಿಯಾದದ್ದು ತನಗೆ ತಾನೇ ಓರಣಗೊಳ್ಳುವುದಿಲ್ಲ ಎಷ್ಟೆಂದರೂ/ ಯಾರಾದರೂ ಕಲ್ಲು ಮಣ್ಣು ರಾಶಿಯನ್ನು /ಸರಿಸಬೇಕು ರಸ್ತೆಯ ಬದಿಗೆ /ಹೆಣ ತುಂಬಿದ ಗಾಡಿಗಳು /ಮುಂದೆ ಸಾಗುವುದಕ್ಕೆ. ಯುದ್ಧ ಎಲ್ಲೆಯೇ ನಡೆದರೂ ಎಂದೇ ನಡೆದರೂ ನಾಗರೀಕತೆಗೆ ಕಳಂಕವೇ. ಮನುಷ್ಯತ್ವಕ್ಕೆ ಮನುಷ್ಯರೇ ಬಳಿಯುವ ಮಸಿ. ಅದು ಸಿರಿಯಾ ಆಗಿರಬಹುದು, ಪಕ್ಕದ ಪಾಕಿಸ್ತಾನ ಆಗಬಹದು, ನಮ್ಮ ತಲೆಯ ಮೇಲಿರುವ ಕಾಶ್ಮೀರವೂ ಆಗಬಹುದು.

ಸರ್ಕಾರಿ ಲೆಕ್ಕದಲ್ಲಿ ಅರ್ಥಶಾಸ್ತ್ರದ ಅಭಿವೃದ್ಧಿಯ ಸೂಚ್ಯಂಕ ಮೇಲಕ್ಕೆ ‘ಏರಿಸಬಹುದು’, ಆದರೆ ನಮ್ಮೊಳಗೆ ಇರುವ ಕ್ರೌರ್ಯ, ಹಿಂಸಾ-ಪ್ರವೃತ್ತಿಗಳ ಯಾವ ಸೂಚ್ಯಂಕಗಳಲ್ಲಿ ಹೇಳುವುದು? ಎಲ್ಲಾ ಕಡೆಯೂ ಕವಿತೆಯು ಅವಿರತವಾಗಿ ಲೋಕವು ಮನುಷ್ಯತ್ವವನ್ನು ಮರೆಯದಿರುಲು ತಿವಿಯುತ್ತಲೇ ಬಂದಿದೆ. ಆದರೆ ಆಳುವ ದೊರೆಗಳ ಚರ್ಮ ದಪ್ಪವಾಗಿದೆಯಲ್ಲ. ಎದೆಯಿದ್ದರಷ್ಟೇ ಸಾಲದು, ಹೃದಯವೂ ಇರಬೇಕಲ್ಲ ಒಳಗೆ! ಹಾಗೆಂದು ಸುಮ್ಮನೆ ಬಿಡುವುದಕ್ಕೆ ಆಗುತ್ತದೆಯೇ? ದಿವಾಕರ ಅವರು ಹೇಳುತ್ತಾರೆ ‘ನೇರ ಹೃದಯಕ್ಕೆ ನುಗ್ಗುವ ಹಾಡು ಬರಿ’ ಎಂದು. ಹೌದಲ್ಲವೇ. ಅದನ್ನೇ ಮಾಡುತ್ತ ಬಂದಿರುವುದು. ಅಂದೂ , ಇಂದು ಮತ್ತು ಮುಂದೂ. ಭಿತ್ತಿ ಒಂದೇ, ಆಶಯ, ಭಾವ ಒಂದೇ. ರಚನೆ ಬೇರೆಯಿರಬಹುದು. ಹೂಮರ್, ಕುವೆಂಪು ಅಥವಾ ಈ ಸಂಕಲನದ ಮೂಲಕ ಕನ್ನಡಕ್ಕೆ ಬಂದಿರುವ ವಿಸ್ವಾವಾ ಶಿಂಬೋರ್ ಸ್ಕ ಇರಬಹುದು. ದನಿಗಳು ಕಾಲಾತೀತವಾಗಿ ನಿಲ್ಲುವುವು.

‘ಜಿರಾಫೆ’ ಎನ್ನುವ ಒಂದು ಮೋಹಕ ಕವಿತೆ ಇದೆ ಇಲ್ಲಿ. ಅದು ಸ್ವಂತದ್ದು. ಹೇಳುವುದು ಏನನ್ನು? ಲೋಕದ ಅತಿರೇಕಗಳನ್ನು ಮತ್ತು ಬದುಕಿನ ಮೀಮಾಂಸೆಯನ್ನು. ಉತ್ಕೃಷ್ಟವಾದ ಸೃಜನಶೀಲವಾದ ಮನಸ್ಸೊಂದು ಬದುಕಿನ ಸತ್ಯಗಳಿಗೆ ಮುಖಾಮುಖಿಯಾಗುವುದು ಇಲ್ಲಿ. ಇಂತಹ ಒಂದು ಕವಿತೆ ಕನ್ನಡಕ್ಕೆ ಸಿಕ್ಕಿದೆ. ಇದು ನಮ್ಮ ಅದೃಷ್ಟ. ಹೆಗ್ಗಳಿಕೆ. ಇದರ ಸಾಲುಗಳು ಒಳಗೆ ಹೇಗೆ ಇಳಿಯುತ್ತವೆ ಕಾಣಿ: ದೇವರು ತಿದ್ದಿಕೊಳ್ಳುವುದಿಲ್ಲ ತಾನು ಮಾಡಿದ ತಪ್ಪು/ ಸಾಮಾನ್ಯವಾಗಿ ಒಮ್ಮೊಮ್ಮೆ ತಿದ್ದಿಕೊಂಡರೆ ಅಪರೂಪಕ್ಕೆ/ ಹೆಚ್ಚು ಕಮ್ಮಿ ಅವನ ಕೈಚಳಕಕ್ಕೆ/ ಜಿರಾಫೆಯಂಥ ಪ್ರಾಣಿಯೇ ಸಿಕ್ಕಿ ಜಖಂ ಆದೀತು ಆಕಾಶಕ್ಕೆ/.. ನೀರಡಿಕೆಯಾದಾಗ ದೂರದೂರಕ್ಕಿಟ್ಟು ಕೋಲು ಕೋಲು/ ಮುಂಗಾಲು/ಆಕಾಶ ಕುತ್ತಿಗೆಯ ಕೆಳಕ್ಕಿಳಿಸಿ ಬಾಯಿಡುತ್ತೆ ಹೊಳೆಯಲ್ಲಿ/ ನೆಲದಲ್ಲಿ ಕೂತ ಜಿರಾಫೆ ಮೇಲೆದ್ದು ನಿಲ್ಲುವುದಕ್ಕೆ / ಏನೆಲ್ಲ ಪ್ರಯಾಸ, ಪ್ರಾಣ ಸಂಕಟ/ ನಿಂತು ನೋಡುವ ಕಣ್ಣುಗಳಿಗೊಂದು ದೊಂಬರಾಟ.

ಯಾಕೋ ದೊಂಬರಾಟ ಎನ್ನುವ ಪದ ಸರಿಯಿಲ್ಲ ಅನ್ನಿಸುತ್ತೆ. ಲೋಕದ ಸಂವೇದನಾ ರಹಿತ ಕಣ್ಣುಗಳನ್ನು ಒಂದು ಸಮುದಾಯಕ್ಕೆ ಹೋಲಿಕೆಮಾಡಿ(ಆರೋಪಿಸಿ) ಹೇಳುವುದು ಒಪ್ಪಿಕೊಳ್ಳಲು ಆಗುವುದಿಲ್ಲ. ಇರಲಿ, ಕವಿಯ ಉದ್ದೇಶ ಹಾಗಿಲ್ಲದಿರಬಹುದು. ಆದರೆ ಭಾಷೆ ಈ ತರಹದ ಧ್ವನಿಯನ್ನು ಕೊಡುತ್ತದೆಯಲ್ಲ. ಧರ್ಮನಿರಪೇಕ್ಷವಾಗಿ ಜಾತ್ಯಾತೀತವಾಗಿ ಯೋಚಿಸಿದರೂ ಇಲ್ಲಿ ಜಾತಿ ಒಂದು ರಿಯಾಲಿಟಿಯೇ ಈ ನಮ್ಮ ಭವ್ಯ ಪರಂಪರೆಯಿರುವ ದೇಶದಲ್ಲಿ! ಇರಲಿ. ಮುಂದಕ್ಕೆ ಹೋಗೋಣ..

ಮತ್ತೆ ಮುಂದಕ್ಕೆ ಹೋದರೆ ಮೊದಲೆಲ್ಲೋ ನೆನಪಿಸಿಕೊಳ್ಳಲಾಗಿದೆಯಲ್ಲಾ, ಯಾಸ್ಲಾ ಬಳಿಯ ಯಾತನಾ ಶಿಬಿರದಲ್ಲಿ ಕವಿತೆ ರಪ್ಪಂತೆ ಕಣ್ಣಿಗೆ ರಾಚುವುದು. ಪ್ರೀತಿ ಪಾತ್ರರರನ್ನು ಕಳೆದುಕೊಂಡವರ ಆಕ್ರಂದನ, ರೋಧನೆ, ಅಸಹಾಯಕತೆ ಮತ್ತು ಮನುಷ್ಯನ ಅಂತರಾಳದಲ್ಲಿ ಮನುಷ್ಯತ್ವದ ಪಕ್ಕವೇ ಹುದುಗಿರುವ ಅಮಾನುಷತೆ. ಇವೆರಡು: ಕ್ರೌರ್ಯ ಮತ್ತು ಮಾನವೀಯತೆ ಎಂತಹ ಪ್ರತಿಸ್ಪರ್ಧಿಗಳು! ಗೆಲ್ಲಬೇಕು ಮನುಷ್ಯತ್ವ. ಅದಕ್ಕೆ ಕವಿತೆ, ಕಲೆ, ತತ್ವ ಇರುವುದು. ಮನುಷ್ಯತ್ವವ ಗೆಲ್ಲಿಸುವ ಹೊಣೆಗಾರಿಕೆ ಇವುಗಳದು ಹೆಚ್ಚಾಗಿಯೇ ಇದೆ. ಇರಬೇಕು. ಇಲ್ಲದಿದ್ದರೆ ಕವಿತೆ ಕವಿತೆಯಲ್ಲ, ಕಲೆ ಕಲೆಯಲ್ಲ.

ಈ ಕವಿತೆಯ ಕೆಲ ಸಾಲುಗಳು: ಚರಿತ್ರೆಯ ಅಸ್ಥಿಪಂಜರಗಳೆಲ್ಲ ಸಮ ಸಂಖ್ಯೆಗಳಲ್ಲಿ, ಆದರೂ ಹೃದಯಕ್ಕೆ ನೇರವಾಗಿ ನುಗ್ಗುವ ಹಾಡ ಬರೆಯಬೇಕು. ಸಿ.ಏ.ಏ ಮತ್ತು ಎನ್ ಆರ್ ಸಿ ಗಳಿಂದಾಗಿ ಹೀಗೆ ಆಗಬಹುದು ಎನ್ನುವ ಆತಂಕ ಇದೆ ಈಗಲೂ. ಆಗದಿರಲಿ ಹಾಗೆ. ಆದರೆ ಪ್ರಶ್ನೆ ಕೇಳುವುದಕ್ಕೇ ಬಿಡುತ್ತಿಲ್ಲವಲ್ಲ! ಮೂಲವಾಗಿ ಇಲ್ಲಿನ ಎಲ್ಲರೂ ಜಗತ್ತಿನ ನಾಗರೀಕರು. ಇದು ತುಂಬಾ ಆದರ್ಶದ ಮಾತು ಎಂದು ಮುಖ ಅತ್ತ ತಿರುಗಿಸುವರು ಕೆಲವರು. ಅವರೂ ಇರಬೇಕು. ಅಲ್ಲಿಯ ಗಿಯೋಮ್, ಅಪೊಲಿನೇರ್, ಮಾರ್ಜೊರಿ ಎವಾಸ್ಕೋ, ಮಯಕೋವ್ಸ್ಕಿ, ಕೋರ್ತಜಾರ್ ರ ಕವಿತೆಗಳು ಇಲ್ಲಿ ರೂಪಾಂತರಗೊಂಡಿರುವ ಬಗೆ ಅವು ಇಲ್ಲಿಯವೇ ಎಂಬಂತಿವೆ.

ಕಲೆಯ ಅಭಿವ್ಯಕ್ತಿಯಲ್ಲಿ ಮುಖಾಮುಖಿಯಾಗುವುದು ಸತ್ಯಕ್ಕೆ. ಈ ಎಲ್ಲ ಲಹರಿ, ಯೋಚನೆ, ಅನಿಸಿಕೆಗಳು ಬಂದದ್ದು ಮೋಹಕ ಕನ್ನಡದ ಕಥಾಲೋಕವನ್ನು ಜಗದ ಬೇರೆ ಬೇರೆ ಹೂವುಗಳನ್ನು ತಂದು ಇನ್ನಷ್ಟು ಸಿಂಗರಿಸಿರುವ ಎಸ್. ದಿವಾಕರರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಓದುತ್ತಾ ಹೋದಹಾಗೆ.

ಅಪೊಲಿನೇರ್ ಒಂದು ಕವಿತೆ ‘ಝೋನ್’ ದಿವಾಕರರ ಕೈಯಲ್ಲಿ ‘ಮಂಡಲ’ವಾಗಿದೆ. ಅದು ಭೂಮಂಡಲದ ದುಗುಡವನ್ನೇ ಹೇಳುತ್ತಿದೆ. ‘ಕೆಲವರು ನಿರಾಶ್ರಿತರು ಇಲ್ಲೇ ಹಾಕುತ್ತಾರೆ ಠಿಕಾಣಿ ರೈಲ್ವೆ ಸ್ಟೇಷನ್ನಲ್ಲಿ/ ಮರಗಳ ಕೆಳಗೆ ಗಟಾರದ ಪಕ್ಕ ಜೋಪಡಿಗಳಲ್ಲ.. ಅದೋ ಆ ಕಪ್ಪು ಹುಡುಗಿ ಅವಳ ನಗು.. ತಲೆಬಾಗುವೆನು ನಮ್ರವಾಗಿ ಅವಳ ದುಃಖ ಅನೂಹ್ಯ’ ಮತ್ತೆ ಮುಂದಕ್ಕೆ ಕಣ್ಣಾಯಿಸಿದರೆ ಸಿಗುವುವು ಈ ಸಾಲುಗಳು: ಒಂದೊಂದು ಬೀದಿಯಲ್ಲೂ ಒಬ್ಬೊಬ್ಬ ಕಾಣಿಸುತ್ತಾನೆ/ ಎಲ್ಲರಲ್ಲೂ ನೋಡುವುದೇನು ದೇವರನ್ನು ತಾನೆ, ಇಲ್ಲಿ ನಾವು ಮಾತಾಡುವುದಕ್ಕೆ ಏನಿದೆ, ಕವಿತೆಯೇ ಕಾಣಿಸುತ್ತಿದೆ.. ಹೃದಯ, ಮನಸ್ಸುಗಳ ಮೀಟುತ್ತ.

ಹೌದು ಕವಿಯಷ್ಟು ಲೋಕವನ್ನು ತಿವಿದವರುಂಟೆ ಜಗತ್ತಿನಲ್ಲಿ? ಆದರೆ ಅದಕ್ಕೆ ಲಜ್ಜೆಯೆಂಬುದಿಲ್ಲವಲ್ಲ. ಹಾಗಂತ ಸುಮ್ಮನಿರುವುದಕ್ಕಾಗುತ್ತಾ. ಕ್ಲೀಷೆಯಾದರೂ ಹಿಂಸೆಯನ್ನು, ಕ್ರೌರ್ಯವನ್ನು ಖಂಡಿಸಲೇಬೇಕು. ಕತ್ತಲೆಯಲ್ಲಿದ್ದಾಗ ಕತ್ತಲೆಯ ಬಗ್ಗೆಯೇ ಬರೆಯಬೇಕು. ಬದುಕನ್ನು, ಪ್ರಪಂಚವನ್ನು ಹದಗೆಡಿಸುತ್ತಿರುವುದು ಮನುಷ್ಯನ ವಿಕೃತಿಗಳೇ. ಬುದ್ಧ ಎರಡುವರೆ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ, ಆಸೆ ಮನುಷ್ಯನ ದುರಂತದ ಹಾದಿ ಎಂದು. ದಿವಾಕರ್ ಅವರು ಇಂತಹ ಅರ್ಥ ಹೊಮ್ಮುವ ಸಾಲುಗಳನ್ನು ಬರೆದಿದ್ದಾರೆ ಹೀಗೆ: ಹರಿದು ಹೋದೀತು ಆಕಾಶ ನೀಲಿಯ ತೊಗಲು ನಮ್ಮಾಸೆಗಳಿಗಾಗಿ ಹಿಗ್ಗುತ್ತ ಹಿಗ್ಗುತ್ತ .

ಕ್ಲೀಷೆಯಲ್ಲದ, ಚರ್ವಿತಚರ್ವಣವಲ್ಲದ ಇಲ್ಲಿನ ಕವಿತೆಗಳ ವಿಸ್ತಾರ, ಭಿತ್ತಿ, ಆಧುನಿಕೋತ್ತರ ಕನ್ನಡ ಕಾವ್ಯ ಮೀಮಾಂಸೆಗೆ ಒಂದು ಕೊಡುಗೆ. ಅದರ ದಾರಿಯನ್ನು ಇನ್ನಷ್ಟು ಮುಂದಕ್ಕೆ ಸ್ಪಷ್ಟಮಾಡುವಲ್ಲಿ ಪ್ರೀತಿಯ ಪ್ರಯತ್ನ. ಅದು ಸಫಲವೂ ಕೂಡ ಇಲ್ಲಿ. ಓದುತ್ತ ಹೋದಲ್ಲಿ ಕವಿತೆಗಳ ಸಾಲುಗಳ, ಮನಗಾಣಬಹುದು. ಹೊಸ ಚೈತನ್ಯದಿಂದ ತುಂಬಿ ತುಳುಕುವವು. ಜೊತೆಗೆ ವ್ಯಕ್ತಗೊಂಡಿರುವ ವಸ್ತು ಕಡುವಾಸ್ತವದ ನಿಗಿನಿಗಿ ಕೆಂಡದಂತಿವೆ. ಆಧುನಿಕೋತ್ತರ ಕನ್ನಡ ಕಾವ್ಯವಂತೂ ಹೊಸ ರೂಪಕ, ಭಾಷೆ, ಸಂವೇದನೆಗಳಿಗೆ ಹಪಹಪಿಸುತ್ತಿದೆ. ಹುಡುಕುತ್ತಿದೆ. ಈ ಸಂಕಲನ ನಿಜಕ್ಕೂ ಅದನ್ನು ಪೂರೈಸುವುದು.

ಆಧುನಿಕೋತ್ತರ ಕಾವ್ಯದ ಜೊತೆಗೆ ಸಾಗಲು ಇದೊಂದು ಸಂಗಾತಿ. ಇದಕ್ಕೆ ಜಗದ ಕಾವ್ಯಗಳ ಘಮಲೂ ಇದೆ. ಗುಣಕ್ಕೆ ಮತ್ಸರವಿಲ್ಲ ಎನ್ನುವ ಮಾತಿದೆ. ಈ ಸಂಕಲನ ಹೊಗಳಿಕೆಗೆ ಅರ್ಹ. ಪ್ರಶಂಸಿಸಿದರೆ ಮೂಲೆಯಲ್ಲಿ ಯಾರಾದರೂ ಮೂತಿ ಸೊಟ್ಟ ಮಾಡಬಹುದು. ಸಿನಿಕತನಕ್ಕೆ ಮದ್ದೆಲ್ಲಿ?
ಮುಂದೊಂದು ಕವಿತೆಯಿದೆ ನೋಡಿ: ‘ಎಲ್ಲಿ ಹೋಯಿತು ರುಂಡ?’ ಇದು ಅತಿವಾಸ್ತವದಂತೆ ಇದ್ದು, ವಾಸ್ತವವನ್ನು, ನಮ್ಮ ನಡುವೆಯೇ ಜರುಗುವ ಕೋಲ್ಡ್ ಬ್ಲಡೆಡ್ ಕ್ರೌರ್ಯವನ್ನು, ಅದು ಎಸಗುವ ದುರಂತವನ್ನು ಹೇಳುತ್ತದೆ ಹೀಗೆ: ಮುಸ್ಸಂಜೆಯ ಕೆಂಪಿನಲ್ಲಿ ಬಿಕೋ ಎನ್ನುವ ಬೀದಿಯಲ್ಲಿ/ ನಿಂತಿದೆಯೊಂದು ಮುಂಡ/.. ಎಲ್ಲಿಹೋಯಿತು ಅದರ ರುಂಡ?/ ಗೋಳಿಡುತ್ತಿದೆ ಎಲ್ಲಿ?.. ಮುಂದಿನದು ಇನ್ನಷ್ಟು ಭೀಕರವಾಗಿದೆ. ಇಂತಹದ್ದು ಜನರಿಗೆ ಸಲೀಸಾಗಿದೆ. ಒಂದು ಸಂಗತಿಯಾಗಿದೆಯಷ್ಟೇ ಅನೇಕ ದೃಶ್ಯಮಾಧ್ಯಮದ ಚಾನಲ್ಲುಗಳ ಹಾವಳಿಯಿಂದಾಗಿ: ಯಾರವರು ಹೀಗೆ ರುಂಡಗಳನ್ನು/ಕೊಂಡೊಯ್ಯುವವರು?.. ರಾತ್ರಿಯ ಬರಮಾಡಿಕೊಳ್ಳುತ್ತಿರುವ ಮುಸ್ಸಂಜೆ ನಂಜೇರುತ್ತಿರುವ ಆಕಾಶ.

ಆಕಾಶ ದಯಪಾಲಿಸಿರುವ ಪ್ರಪಂಚ ಇದು. ಅದು ಮನುಷ್ಯನ ಮತ್ತು ಎಲ್ಲ ಚರಾಚರಗಳ ತಾವು. ಅದೇ ನಂಜಾದರೆ, ಬದುಕುವುದು ಎಲ್ಲಿ? ಮನುಷ್ಯನೊಳಗಿನ ಆತ್ಮಘಾತುಕತನ ಕಾರಣ ಇದಕ್ಕೆಲ್ಲ. ತತ್ವ ಸಾವಿರಸಲ ಹೇಳಿದೆ ಎರಡು ದಿನದಲ್ಲೇ ಈ ಪಾಟಿ, ಇನ್ನ ಸಾವಿರ ವರ್ಷ ಬದುಕುವಂತಿದ್ದರೆ, ಕಲ್ಪಿಸಿ ಏನಾಗಬಹುದು.

ಈ ಸಂಕಲನದ ಮೊದಲ ಕವಿತೆಯ ಮೊದಲ ಸಾಲು ಕವಿತೆಗಳೇ ಎದ್ದು ತಬ್ಬಿಕೊಳ್ಳುತ್ತವೆ ನಮ್ಮನ್ನು ಎಂಬಂತಿವೆ: ಪುಸ್ತಕ ಬೆಳೆಸಿಕೊಳ್ಳುತ್ತೆ ಕೈಯಿ/ ಪುಳಕಗೊಳ್ಳುತ್ತವೆ ಅಕ್ಷರಗಳು ವಾಕ್ಯಗಳು.. ಈ ಸಂಕಲನದ ಕವಿತೆಗಳು ಮನುಷ್ಯ ಬಗೆಯುವ ಕೇಡನ್ನು ಹೇಳಿದರೂ ಅಂತರಾಳದಲ್ಲಿ ಅವು ಸಾರುವುದು ಜೀವನ ಪ್ರೀತಿಯನ್ನು. ಎಲ್ಲ ಉತ್ಕೃಷ್ಟ ಕವಿತೆಗಳೂ ಅಷ್ಟೇ ಅಲ್ಲವೆ. ಅದನ್ನೇ ಹೇಳುವುದು. ಅದು ಅದರ ರೀತಿ ಮತ್ತು ನೀತಿ. ಮತ್ತು ತತ್ವ. ಇಲ್ಲೊಂದು ‘ಝೀಬ್ರಾ’ ಎನ್ನುವ ಕವಿತೆಯಿದೆ ಕೇಳಿ: ಆಫ್ರಿಕಾದಲ್ಲೂ ಅಪರೂಪವಂತೆ/ಝೀಬ್ರಾ ಈ ದಿನಗಳಲ್ಲಿ/ ಬಿಳಿಯ ಮೈಮೇಲೆ ಕಪ್ಪು ಪಟ್ಟೆಗಳೋ/ಕಪ್ಪು ಮೈಮೇಲೆ ಬಿಳಿಯ ಪಟ್ಟೆಗಳೋ/ ಇಲ್ಲಿದಿದ್ದರೆ/ಝೀಬ್ರಾವೊಂದು ಕತ್ತೆಯಷ್ಟೇ. ಕವಿ ಕತ್ತೆಯನ್ನು ‘ಕತ್ತೆ’ಯಷ್ಟೇ ಎನ್ನುವುದು ಯಾಕೋ ಸರಿಕಾಣಲಿಲ್ಲ. ಕತ್ತೆಯೆಂದರೆ ಏನು, ನಿಕೃಷ್ಟವಾ? ಶೇಕ್ಸ್ಪಿಯರ್ ನ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಲ್ಲಿ ಅಪ್ಸರೆಯೊಬ್ಬಳು ಕತ್ತೆಯ ಮುಖದವನನ್ನು ದೈವ ಪುರುಷನೆಂಬಂತೆ ರಮಿಸುತ್ತಾಳೆ. ಶೇಕ್ಸ್ಪಿಯರ್ ಕಿಲಾಡಿ. ಯಾರನ್ನು ಎಲ್ಲಿ ಹೇಗೆ ಸರಿಯಾಗಿ ತುಳಿಯಬೇಕೋ ಅಲ್ಲಿ ಸರಿಯಾಗಿಯೇ ತುಳಿಯುತ್ತಾನೆ.

ಕತ್ತೆಯನ್ನು ಒಂದು ಡಿವೈನ್ ಎಲಿಮೆಂಟಾಗಿ ಚಿತ್ರಿಸುತ್ತಾನೆ. ಗಲ್ಲಿ ಗಟಾರಗಳಲ್ಲಿ ಅಲೌಕಿಕದ ಎಳೆಗಳನ್ನು ತೋರಿಸುತ್ತಾನೆ. ಯಾಕೋ ಕುವೆಂಪು ಅವನನ್ನು ‘ಮರ್ತ್ಯದ ಕವಿ’ ಎಂದು ಜರಿಯುತ್ತಾನೆ. ಹೌದು ಅವನು ಜನರ ಕವಿ. ಮನುಷ್ಯನ ನೀಚತನ, ಸಣ್ಣತನ, ದುರಾಸೆಗಳೇ ಅವನ ದ್ರವ್ಯ. ಎಲ್ಲವೂ ಅವನಿಗೆ ಇಲ್ಲಿಯೇ ಸಂಭವಿಸಬೇಕು. ಲೌಕಿಕ, ಅಲೌಕಿಕಗಳ ಡಿಕ್ಕಿ ಹೊಡೆಸುತ್ತಾನೆ ಇದೇ ಮಣ್ಣಿನಲ್ಲಿ. ನಾವು ಓಡಾಡುವಲ್ಲಿ. ಈ ಕವಿತೆಯನ್ನು ಹಾದು ಮುಂದಕ್ಕೆ ಹೋದರೆ ಕಾಣುತ್ತದೆ ಅಲ್ಲಿ ಒಂದು ಅಸಮಾನ ಸಮಾಜ. ಓದಿದ ಮೇಲೆ ಅನ್ನಿಸುತ್ತದೆ ನಾಗರೀಕತೆ ನಿಜಕ್ಕೂ ನಾಗರೀಕವಾಗಿದೆಯಾ ಎಂದು.

ಕವಿತೆಯ ಹೆಸರು: ಬಂಗಲೆಯೂ ಜೋಪಡಿಯೂ. ಇದರೊಳಗೆ ಇಣುಕಿದರೆ ಕಾಣುತ್ತದೆ ನಯನಾಜೂಕಿನ ನಾಗರೀಕ ಸಮಾಜ. ಅಲ್ಲಿ ಮರೆಯಾಗಿದೆ ಮಣ್ಣಿನವಾಸನೆ. ವ್ಯಂಗ್ಯದ ದಂಡವನ್ನು ಇಡೀ ಕವಿತೆಯ ಉದ್ದಕ್ಕೂ ಕವಿ ಸವರಿ ಆಧುನಿಕ ಬದುಕಿನ ಪ್ರೀತಿ ರಹಿತ ಬದುಕಿನ ಅನಾವರಣ ಮಾಡುತ್ತಾರೆ: ಬಂಗಲೆಯ ಸುತ್ತ ಬಂಗಲೆಯಷ್ಟಾದರೂ ಬೇಕು ಜಾಗ / ಗಾರ್ಡನ್ನಿಗೆ ಇರಬೇಕು ಕಾಲಿಗೆ ಮಕಮಲ್ಲಾಗುವ ಹುಲ್ಲು/ ಕೋಳಿ ತಿನ್ನಬಹುದೇ ಹೊರತು ಬೀಳಬಾರದು / ಕಣ್ಣಿಗೆ.. ಬಂಗಲೆಗೆ ಬೇಕು ಊರಿನೆಲ್ಲ ಬೆಳಕು/ ಹೀರಿಕಣ್ಣಿನ ಕಿಟಕಿ…

ಪಕ್ಕದಲ್ಲಿ ಮತ್ತೊಂದು ಚಿತ್ರಣ: ಜೋಪಡಿಗಿಲ್ಲ ಕಿಟಕಿ; ಮುರುಕಲು ತಟ್ಟಿ/ ಬಾಗಿಲಿಗೆ. ಹುಲ್ಲುಮಾಡಿನಡಿ ಕುಕ್ಕುವ ಕತ್ತಲು/ ಅದು ಇರುತ್ತೆ ಜೋಪಡಿಮರದ ಕೆಳಗೆ/ ಸುತ್ತ ಸಾಕಷ್ಟು ಕಡ್ಡಿಕಸ ಕೋಳಿ ಕೆದಕುವುದಕ್ಕೆ/ ಕಂತ್ರಿ ನಾಯಿ ಫ್ರೀಯಾಗಿ ತಿರುಗಬಲ್ಲದು ಸುತ್ತೆಲ್ಲ ಕಡೆ.

ಇಲ್ಲಿಯ ಕವಿತೆಗಳೆಲ್ಲ ಲೋಕದ ಸಂಗತಿಗಳೇ. ಅವು ಕವಿಯನ್ನು ಖಾಸಗೀ ನೋವಂತೆ ಬಾಧಿಸಿವೆ. ‘ಪೋಸ್ಟ್ ಟ್ರುಥ್ ಕಾಲಘಟ್ಟ’ದ ಆತಂತಕಗಳಾದ ಸತ್ಯವನ್ನು ಸುಳ್ಳಿನ ಪರದೆಯಲ್ಲಿ ಮುಚ್ಚಿ ಸುಳ್ಳನ್ನೇ ಪುನರಾವರ್ತಿಸುತ್ತ ಸುಳ್ಳನ್ನೇ ಸತ್ಯವೆಂದು ಬಿಂಬಿಸುತ್ತಿರುವ, ಧರ್ಮದ ಹೆಸರಿನಲ್ಲಿ ಮನುಷ್ಯರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತ ಜನರ ನಿಗವನ್ನು ದಿಕ್ಕುತಪ್ಪಿಸುತ್ತಿರುವ, ಊಹಾಧಾರಿತ ಅಭಿಪ್ರಾಯಗಳನ್ನೇ ನೈಜ ಸಂಗತಿಗಳೆಂದು ಬಿಂಬಿಸುತ್ತಿರುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಿಂಸೆಯ ಮೂಲಕ ಹತ್ತಿಕ್ಕುತ್ತಿರುವ ರಾಜಕೀಯದ ಹಿಪಕ್ರಸಿಗಳು ಕೊಂಚಮಟ್ಟಿಗಾದರೂ ಇಲ್ಲಿನ ಕವಿತೆಗಳಲ್ಲಿ ಕಾಣಬಹುದು. ಅಷ್ಟರಮಟ್ಟಿಗೆ ಇದು ಸದ್ಯದ ವಿಲಕ್ಷಣ ಕಾಲಕ್ಕೆ ಮಿಡಿಯುವ ಒಂದು ಗಮನಾರ್ಹ ಸಂಕಲನ ಇದು. ಇನ್ನೇನು ಇಷ್ಟೇ. ಓದಿ ನೀವೂ. ನನಗೆ ಕಂಡಿರದಿರುವುದು, ಕಾಣದಿರುವುದು ಕಾಣಬಹುದು ನಿಮಗೆ. ಹೇಳಿ ಆಮೇಲೆ.