“ಮಗನೆ ಏಳು!” ಎಂದೆ. “ಎಷ್ಟು ಗಂಟೆ” ಎಂದು ನಿದ್ರೆಗಣ್ಣಲ್ಲಿಯೇ ಅವನು ಕೇಳಿದ “ಏಳು” ಎಂದೆ. “ಗಂಟೆ ಏಳಾಗಿದೆ ಎದ್ದೇಳು” ಎನ್ನಬಹುದಾಗಿತ್ತು. ಅವನ ಪ್ರಶ್ನೆ ಮತ್ತು ನನ್ನ ಕಮಾಂಡ್ ಒಂದೇ ಪದದಲ್ಲಿ ಮುಗಿಯಿತು. ಇಂಥ ಬ್ಯಾಡ್ ಅಲ್ಲ ಬೆಡ್ ತರಲೆಗಳು ಸಹಜವೇ ಅಲ್ವೆ! ಅವನು ಒಂದ್ನಿಮಿಷ ಒಂದ್ನಿಮಿಷ ಎಂದು ಕಾಲುಗಂಟೆ ಕಳೆದು ಅಂತೂ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಬಂದ. ಇರಲಿ!
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನಾರನೆಯ ಬರಹ ನಿಮ್ಮ ಓದಿಗೆ
ಇವತ್ತು ಭಾನುವಾರ ತಾನೆ! ಮಗನನ್ನು ತಡವಾಗಿ ಎಚ್ಚರಿಸಿದರೆ ಸಾಕು! ಎನ್ನುತ್ತಾ ದಿನಪತ್ರಿಕೆ ಬಂದಿದೆಯಾ ಎಂದು ದಿನಪತ್ರಿಕೆಯನ್ನು ನಿರೀಕ್ಷಿಸುತ್ತಿದ್ದೆ. ಸರಿಯಾಗಿ ಏಳು ಗಂಟೆಗೆ “ಅಯ್ಯೋ ಇವತ್ತು ಮ್ಯಾರಥಾನ್ ಇದೆ ಮಗನನ್ನು ಬೇಗ ಏಳಿಸಬೇಕು” ಎಂದು ಗಂಟೆ ಬಾರಿಸಿದಂತೆ ಅನ್ನಿಸಿದ್ದೆ ತಡ “ಮಗನೆ ಏಳು!” ಎಂದೆ. “ಎಷ್ಟು ಗಂಟೆ” ಎಂದು ನಿದ್ರೆಗಣ್ಣಲ್ಲಿಯೇ ಅವನು ಕೇಳಿದ “ಏಳು” ಎಂದೆ. “ಗಂಟೆ ಏಳಾಗಿದೆ ಎದ್ದೇಳು” ಎನ್ನಬಹುದಾಗಿತ್ತು. ಅವನ ಪ್ರಶ್ನೆ ಮತ್ತು ನನ್ನ ಕಮಾಂಡ್ ಒಂದೇ ಪದದಲ್ಲಿ ಮುಗಿಯಿತು. ಇಂಥ ಬ್ಯಾಡ್ ಅಲ್ಲ ಬೆಡ್ ತರಲೆಗಳು ಸಹಜವೇ ಅಲ್ವೆ! ಅವನು ಒಂದ್ನಿಮಿಷ ಒಂದ್ನಿಮಿಷ ಎಂದು ಕಾಲುಗಂಟೆ ಕಳೆದು ಅಂತೂ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಬಂದ. ಇರಲಿ!
‘ಏಳು’ ಎನ್ನುವ ಎರಡಕ್ಷರ ಸಮಯ ಸೂಚಕವಾಗಿಯೂ ಬಳಕೆಯಾಯಿತು. ಹಾಗೆ ಗಂಭೀರವಾಗಿ ಯೋಚಿಸಿದಾಗ ಕನಕದಾಸರ ಮುಂಡಿಗೆಗಳಲ್ಲಿ ಲೌಕಿಕವಾಗಿ ತರಕಾರಿಗಳ ಹೆಸರುಗಳನ್ನು ಮತ್ತು ಅಧ್ಯಾತ್ಮವನ್ನು ಒಟ್ಟಿಗೆ ಬೆಸೆದ ‘ಕಾಯಿ’ ಪದ ನೆನಪಾಯಿತು. ಪರಮಪುರುಷ ನೀನೆಲ್ಲಿಕಾಯಿ, ಕೂಗಲು ಕಾಯಿ, ನಿನ್ನವರು ಅವರೆಕಾಯಿ, ನುಗ್ಗೆಕಾಯಿ, ಭಕ್ತವತ್ಸಲನೆಂಬ ಹೆಸರುಕಾಯಿ, ಬಾಳೆಕಾಯಿ, ವ್ಯಾಧಿಗಳೆಲ್ಲ ಹೀರೇಕಾಯಿ, ನಾಮ ಮೆಣೆಸೆಕಾಯಿ… ಮುಂತಾಗಿ. ಇದೇ ಗುಂಗಿನಲ್ಲಿ ಹಾಗೆ ದಿನಪತ್ರಿಕೆಯನ್ನು ತಿರುವಿ ಹಾಕುತ್ತಿರಬೇಕಾದರೆ ಸಾರಿಗೆ ಬಸ್ ಬಿದ್ದು ನಾಲ್ವರಿಗೆ ಗಾಯ… ಎನ್ನುವ ಸುದ್ದಿ ಇತ್ತು. ಊಟದ ಸಾಂಬಾರ್ ಅಲ್ಲ; ಕರ್ನಾಟಕ ರಸ್ತೆ ಸಾರಿಗೆ ಬಸ್ ಆಯ ತಪ್ಪಿ ಕೆಳಗೆ ಬಿದ್ದು ಕೆಲವರಿಗೆ ಗಾಯ ಎಂದು ಓದಿಕೊಂಡೆ. ಈ ಸಾಂಬಾರ್ ಮತ್ತು ಸಾರು ಎರಡಕ್ಕೂ ವ್ಯತ್ಯಾಸವಿರುವುದು ಎಲ್ಲರಿಗೂ ತಿಳಿದಿರುವುದೆ. ‘ಸಾರು’ ಇದು ನಾಮಪದವಾದಾಗ ಊಟಕ್ಕೆ ಬಡಿಸುವ ವ್ಯಂಜನ ಎಂದಾಗುತ್ತದೆ. ಕ್ರಿಯಾ ಪದವಾದಾಗ ಎಂದರೆ ‘ಸುದ್ದಿಯನ್ನು ಎಲ್ಲರಿಗೂ ಹೇಳು’ ಎಂತಲೂ ಆಗುತ್ತದೆ. ತಿಳಿಸಾರು ಎಂಬ ಪದ ನಮ್ಮಲ್ಲಿ ಬಹಳ ಫೇಮಸ್. ಇದನ್ನು ‘ರಸಂ’ ಎನ್ನುವುದೂ ಇದೆ. ಹೆಸರೇ ಹೇಳುವಂತೆ ಹುಳಿಯಾದ, ಖಾರವಾದ ರುಚಿಯಾದ ‘ರಸ’ವೆಂದು sum ತರಕಾರಿ ಬೇಳೆ ಹಾಕಿ ಗಟ್ಟಿಯಾಗಿ ಮಾಡಿದ ಸಾಂಬಾರ್ ಇದ್ದರೂ ಬಹಳ ತಿಳಿಯಾಗಿ, ಬಿಸಿಯಾಗಿ ಘಮಘಮಿಸುವ ತಿಳಿಸಾರಿದ್ದರೆ ಊಟ ಸಂಪೂರ್ಣವಾಗುತ್ತದೆ. ‘ತಿಳಿಸಾರು’ ಹಗುರವಾದದ್ದು ಆದರೆ ಇದರ ಒಳಾರ್ಥ ಬೇರೆಯೇ ಇದೆ. ಅಂದರೆ ಜೀವನ ಎಂದರೆ ಏನೆಂದು ತಿಳಿಯಬೇಕು. ತಿಳಿದಿದ್ದನ್ನು ಇತರರಿಗೆ ಸಾ(ರು)ರಬೇಕು ಎಂಬುದಾಗಿ. ನಮ್ಮ ಹಳಗನ್ನಡದ ಕಾವ್ಯಗಳಲ್ಲಿ ಸಾರ್ದು, ಸಾರ್ದ, ಹತ್ತಿರ ಹೋಗು ಎಂಬ ಅರ್ಥದಲ್ಲಿಯೂ ಬಳಕೆಯಲ್ಲಿದೆ
ಪಂಪನ ತ್ರಯೋದಶಾಶ್ವಸದಲ್ಲಿಯ “ಕವಲಂಬುರೆಂಬ ಅಂಕದಂಬು ಎತ್ತಲುಂ ತುರುಗಿ ನಡುವಿನಂ ಸಾರ್ದು ಎಚ್ಚೆಚ್ಚು ಕಾದಿದರು ಅತಿರಥರೊಂದುಜಾವಂ” ಎಂಬ ಪದ್ಯದ ಸಾಲುಗಳನ್ನು ಉದಾಹರಣೆಯಾಗಿ ಕೊಡಬಹುದು. ಕವಲಂಬು ಅರ್ಥಾತ್ ಎರಡು ಮೊನೆಗಳಿರುವ ಪ್ರಸಿದ್ಧವಾದ ಬಾಣಗಳು ಎಲ್ಲ ಕಡೆಯೂ ನುಗ್ಗಿ ಹೋಗಿ ನಾಟಿಕೊಳ್ಳುವ ಹಾಗೆ ನೋಡಿ ನೋಡಿ ಹೊಡೆದು ಹೊಡದು ಅತಿರಥರು ಒಂದು ಜಾವದ ಕಾಲ ಯುದ್ಧ ಮಾಡಿದರು ಎಂಬ ತಾತ್ಪರ್ಯ ಇದಕ್ಕಿದೆ.
ಜೈಮಿನಿ ಭಾರತದ ಐದನೆಯ ಸಂಧಿಯಲಿ
ದ್ವೇಷಮಂ ಬಿಟ್ಟು ಕೆಂದಾವರೆಯ ಚೆಲ್ವಿನ ವಿ|ಶೇಷಮಂ
ನೋಡಲ್ ಸಮೀಪಮಂ ಸಾರ್ದ ಪೀ|
ಪಿಯೂಷಕರಬಿಂಭಮೆನೆಲಾ ಪ್ರಭಾವತಿಯ
ಮೊಗವಂಘ್ರಿದೇಶದೊಳಪ್ಪಿರೆ|| ಭೂಷಣಮಂ ಚಲಿಸೆ ಮಣಿದೆತ್ತಿ ಬಿಗಿಯಪ್ಪಿ ಎಂಬ ಸಾಲುಗಳು ಬರುತ್ತವೆ.
ದ್ವೇಷಮಂ ಬಿಟ್ಟು ಕೆಂಪು ತಾವರೆಯ ವಿಶೇಷ ಸೊಬಗನ್ನು ನೋಡಲು ಸಮೀಪಕ್ಕೆ ಹೋದ, ಚಂದ್ರನ ಅಮೃತಕಿರಣದಂತಿರುವ ನಮಸ್ಕರಿಸಿದ ಆ ಪ್ರಭಾವತಿಯನ್ನು ಬಿಗಿದಪ್ಪಿ ಉಪಚರಿಸಿದರು ಎಂಬ ತಾತ್ಪರ್ಯ ಇದಕ್ಕಾಗುತ್ತದೆ. ಇನ್ನು ನಮ್ಮ ಗ್ರಾಮ್ಯರಲ್ಲಿ ಕವಗೋಲು ಎಂಬ ವಸ್ತುವು ಬಳಕೆಯಲ್ಲಿತ್ತು. ಹೆಸರೆ ಹೇಳುವಂತೆ ಇದು ಕವಲುಗಳಿರುವ ಕೋಲುರಾಗಿ ಮುದ್ದೆ ತೊಳೆಸುವಾಗ ಪಾತ್ರೆ ಬೀಳದಂತೆ ಪಾತ್ರೆಯ ಕತ್ತಿಗೆ ಈ ಕೋಲನ್ನು ಕೊಟ್ಟು ಅದನ್ನು ಕಾಲಲ್ಲಿ ಮೆಟ್ಟಿಕೊಂಡು ಮುದ್ದೆ ಮಾಡುವುದಿತ್ತು. ಬಳಸುವ ವಸ್ತುಗಳನ್ನು ಚರ್ಯೆಯನ್ನು ಅವುಗಳ ಹೆಸರಿನಲ್ಲಿಯೇ ಬಳಸುವ ಕ್ರಮ ಎಷ್ಟು ಸೊಗಸಾಗಿದೆ ನೋಡಿ! ಅಷ್ಟೆ ಅಲ್ಲ ಅಡುಗೆ ಮಾಡುವ ವಿಧಾನವೂ ನಮ್ಮ ಮಾತಿನಲ್ಲೇ ಬಂದುಬಿಡುತ್ತದೆ. ಉದಾ ರೊಟ್ಟಿ ತಟ್ಟಿದ್ದೆ, ಚಪಾತಿ ಅರೆದಿದ್ದೆ, ಕಾಫಿ ಕಾಯಿಸಿದ್ದೆ, ದೋಸೆ ಹುಯ್ದಿದ್ದೆ, ಇಡ್ಲಿ ಬೇಯಿಸಿದ್ದೆ, ಪುಳಿಯೋಗರೆ ಕಲಸಿದ್ದೆ, ಶ್ಯಾವಿಗೆ ಒತ್ತಿದ್ದೆ… ಹೀಗೆ ಸರೀಸೃಪಗಳು ಪ್ರಾಣಿಗಳ ಗುಣಗಳನ್ನೂ ಅವುಗಳ ರೀತಿಯಲ್ಲೆ ಹೇಳುತ್ತೇವೆ. ಉದಾ ಹಾವು ಕಚ್ಚುತ್ತದೆ, ಚೇಳು ಕುಟುಕುತ್ತದೆ, ನಾಯಿ ಬೊಗಳುತ್ತದೆ, ಕತ್ತೆ ಒದೆಯುತ್ತದೆ, ಕುದುರೆ ಕೆನೆಯುತ್ತದೆ, ಕೋಣ ತಿವಿಯುತ್ತದೆ. ಎಂದು ಅಂದಹಾಗೆ ಕೋಡಿದ್ದರೆ ಅಲ್ವೆ ಕೋಣ ತಿವಿಯುವುದು. ಈ ‘ಕೋಡು’ ಕನ್ನಡದಲ್ಲಿ ನಾಮಪದ ಅರ್ಥಾತ್ ಪ್ರಾಣಿಗಳ ತಲೆಯಮೇಲಿರುವ ಕೊಂಬು. ಮಾತಿಗೆ ಯಾರಾದರೂ ದೊಡ್ಡಸ್ತಿಕೆ ಮಾಡಿದರೆ “ನಿನ್ನ ತಲೆಯ ಮೇಲೆ ಕೊಂಬು ಇದೆಯಾ?’’ ಎನ್ನುವುದಿದೆ. “ತುಂಬಾ ಜಂಭ ಬಂದಿದೆ” ಎನ್ನುವುದಕ್ಕೆ “ಕೋಡು ಬಂದಿದೆ ಈಗ’’ ಎನ್ನುವುದಿದೆ. ಇಂಗ್ಲಿಷಿನಲ್ಲಿ ಈ “ಕೋಡ್” ಎಂದರೆ ‘ಅಂಕಗಳ ಸೂಚಿ’. ಕ್ಯೂ ಆರ್ ಕೋಡ್, ಪಾಸ್ ಕೋಡ್, ಬಾರ್‌ಕೋಡ್, ಪಿನ್‌ಕೋಡ್ ಮೊದಲಾಗಿ. ಅಂಚೆ ಸೂಚ್ಯಂಕವನ್ನು ಭಾರತದಲ್ಲಿ ಪೋಸ್ಟಲ್ ಕೋಡ್ ಎನ್ನುತ್ತಾರೆ. 1972 ರಲ್ಲಿ ಆಗ ಕೆಂದ್ರ ಸಂವಹನ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಶ್ರೀರಾಮ್ ಭಿಕಾಜಿ ಅವರು ಇದನ್ನು ಪರಿಚಯಿಸಿದರು. ಪಿನ್ ಕೋಡ್ ಎಂದರೆ ಪೋಸ್ಟಲ್ ಇಂಡೆಕ್ಸ್ ಎಂಬುದಾಗಿ. ನಿಖರವಾದ ವಿಳಾಸಕ್ಕೆ ಕಾಗದವನ್ನು ತಲುಪಿಸುವ ವಿಧಾನ ಇದರಲ್ಲಿ ಬಳಸುವ ಮೊದಲನೆ ಅಂಕಿಯು ಭಾರತದ ಪ್ರದೇಶವನ್ನು ಪ್ರತಿನಿಧಿಸುತ್ತದೆ. ಇವುಗಳಲ್ಲಿ ಒಂಬತ್ತು ಪಿನ್ ಪ್ರದೇಶಗಳಿವೆ. ಇದೇ ಮಾದರಿಯಲ್ಲಿ ಎಸ್ಟಿಡಿ ಕೋಡ್ ಕೂಡ ಪರಿಚಯವಾಯಿತು. ಈಗ ಎಸ್ಟಿಡಿ ಕೋಡ್ ಅನುಸರಿಸುವ ಫೋನ್‌ಗಳು ಕಛೇರಿಗಳಿಗೆ ಮಾತ್ರ ಸೀಮಿತವಾಗಿವೆ. ನಮ್ಮ ಹಳಗನ್ನಡದಲ್ಲಿ ಈ ‘ಕೋಡು’ ಎಂಬ ಪದ ಕಡುಚಳಿಗೆ ಬಳಕೆಯಾಗುತ್ತಿತ್ತು. ಇದರ ಜೊತೆಗೆ ‘ಕೋಡಗ’ ಪದವೂ ಇದೆ. ‘ಕೋಡಗ’ ಎಂದರೆ ಕಪಿಯ ಸ್ವಭಾವದವರು, ಚಪಲ ಬುದ್ಧಿಯುಳ್ಳವರು ಎಂಬ ಅರ್ಥವಿದೆ.
ಉದಾಹರಣೆಗೆ ರನ್ನ ಗಧಾಯುದ್ಧದಲ್ಲಿ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿರುವಾಗ ಭೀಮ ಬಂದು ಜಳದೊಳ್ ಮೀನಿರ್ಪವೊಲ್ ನೀಂ ಕೊಳದೊಂಡ ಮುಳುಗಿರ್ದೆಅಕ್ಕಟಾಕೋಡಸೇಡಿಂಗೊಳಗಾದಯ್ ಎನ್ನುವಲ್ಲಿಯೂ ಕೋಡಸೇಡು ಚಳಿಯ ಸೆಳೆತಕ್ಕೆ ಒಳಗಾದೆ ಎಂಬುದನ್ನು ಹೇಳುತ್ತದೆ.
ಕುಮಾರವ್ಯಾಸನಲ್ಲಿ
ಹರಿ ಬಲದಿಂದ ಪಾಂಡವರನು
ವರಮಂ ಪೊತ್ತಿಸಿದರನ್ನೊಳಾಂ ಕರಮರೆದಾ
ಹರಿಯಂ ಕೋಡಗಗಟ್ಟಾ
ಗಿರೆ ಕಟ್ಟಿದಡೊಂದು ನೀಮೆ ಬಿಡಿಸಿದರಲ್ತೆ
ಆ ಪಾಂಡವರು ಕೃಷ್ಣನ ಬಲದಿಂದ ನಮ್ಮಲ್ಲಿ ಯುದ್ಧವನ್ನು ಹತ್ತಿಸಿದ್ದಾರೆ. ಇದನ್ನು ನಾನು ತಿಳಿದೇ ಅಂದು ಕೃಷ್ಣನನ್ನು ಕಪಿಯನ್ನು ಕಟ್ಟುವ ರೀತಿ ಕಟ್ಟಿದರೆ ಆ ದಿನ ನೀವೆ ಬಿಡಿಸಿದರಲ್ಲವೆ? ಎಂದು ಭೀಷ್ಮರಿಗೆ ದುರ್ಯೋಧನನು ಹೇಳುವ ಮಾತು ನೆನಪಾಗುತ್ತದೆ. ಇದೇ ಸರದಿಯಲ್ಲಿ ಸಂತ ಶಿಶುನಾಳ ಷರೀಫರ ‘ಕೋಡಗನ ಕೋಳಿ ನುಂಗಿತ್ತಾ ಹೇಳವ್ವಾ ತಂಗಿ ಕೋಡಗನ ಕೋಳಿ ನುಂಗಿತ್ತಾ’ ಎಂಬ ರಚನೆ ನೆನಪಾಗುತ್ತದೆ. ಕೋಳಿಯನ್ನು ಇಲ್ಲಿ ಬೆಳಗಿಗೆ ಅನ್ವಯಿಸಿದ್ದಾರೆ. ಜ್ಞಾನವೆಂಬ ಕೋಳಿಯು ವಿಷಯಲಂಪಟ ಕೋಡಗನನ್ನು ನುಂಗಿತ್ತಾ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಅದೇ ಕೋಡಗದಲ್ಲಿನ ದೀರ್ಘವನ್ನು ಬಿಟ್ಟರೆ ‘ಕೊಡಗ’ ಎಂದಾಗುತ್ತದೆ. ‘ಕೊಡಗ’ ಎಂದರೆ ಒಂದು ಸಮುದಾಯ. ‘ಕೊಡಗ’ ಪದಕ್ಕೆ ‘ಉ’ಕಾರ ಸೇರಿ ಕೊಡಗು ಆಗಿದೆ. ಅಂದರೆ ಇದೊಂದು ಪ್ರದೇಶ. ಇಲ್ಲಿರುವವರು ಕೊಡವರು ಎನ್ನುತ್ತಾರೆ. ‘ಕೊಡಗು’ ಪದ ‘ಕೊಡಿ’ ಎಂಬ ಪದದಿಂದ ಬಂದಿದೆ ಇಂಗ್ಲೀಷಿನಲ್ಲಿ strenght, stong, powefull hill country, forested high land country ಎಂಬ ಅರ್ಥವಿದೆ. ಕೊಡವ ಭಾಷೆಯಲ್ಲಿ ‘ಕೊಡಿ” ಎಂದರೆ ಎತ್ತರವಾದ ದಟ್ಟ ಪರ್ವತಗಳ ಸಾಲು ಎಂದರ್ಥ. ಪುರಾಣಗಳಲ್ಲಿ ಕ್ರೋಢ ದೇಶ, ಕೊಡಿಮಲೆನಾಡು ಎಂದು ಉಲ್ಲೇಖವಿದೆ. ಕೊಡವ ಭಾಷೆಯಲ್ಲಿ ಇಂದಿಗೂ ಕೊಡಗು ಪದ ಪ್ರಯೋಗವಿಲ್ಲ. ಬದಲಾಗಿ “ಕೊಡವನಾಡ್” ಪದ ಬಳಕೆಯಿದೆ. ಭತ್ತ, ಕಾಫಿ, ಸಾಂಬಾರು ಪದಾರ್ಥಗಳಿಗೆ, ಹೆಸರಾಗಿರುವ ಈ ಜಿಲ್ಲೆ ರಾಜ್ಯ ಹೊರರಾಜ್ಯಗಳ ಪ್ರವಾಸಿಗರ ನೆಚ್ಚಿನ ತಾಣ. ಹೇಗೂ ಈಗ ರಜೆ ನಾವೂ ಕೊಡಗಿಗೆ ಪ್ರವಾಸ ಹೋಗೋಣವೆ! ನನಗಂತೂ ಪ್ರವಾಸದ mood ಬಂದಿದೆ. ಇನ್ನೂ ಮತ್ತಷ್ಟು ಪದಗಳು ಮನಸ್ಸಿನಲ್ಲಿ ಮೂಡುತ್ತವೆ… ಅವುಗಳನ್ನು ಮುಂದಿನ ಬರಹದಲ್ಲಿ ಹಂಚಿಕೊಳ್ಳುವೆ.

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.