Advertisement
ಏಳು ಸುತ್ತಿನ ಕೋಟೆಯ ನಡುವೆ ಜಾಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಏಳು ಸುತ್ತಿನ ಕೋಟೆಯ ನಡುವೆ ಜಾಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಜಾಂಬಿಯಾದ ಸುಮಾರು ಅರುವತ್ತೇಳು ಸಾವಿರ ಚದರ ಕಿಲೋಮೀಟರ್‌ಗಳಷ್ಟು ಕಾಡನ್ನು ಮೀಸಲು ಅರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಕಾಪರ್‌ಬೆಲ್ಟ್‌ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿಯೇ ಮರಗಳನ್ನು ನೆಡಲಾಗಿದೆ. ಇಲ್ಲಿ ಪ್ರಮುಖವಾಗಿ ಸಾಫ್ಟ್‌ವುಡ್ ಮರಗಳಿವೆ. ನೈಋತ್ಯ ಭಾಗದಲ್ಲಿ ಜಾಂಬೆಜಿ ನದಿತೀರದ ಪ್ರದೇಶಗಳಲ್ಲಿ ತೇಗದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಜಾಂಬಿಯಾದಲ್ಲಿ ಅರಣ್ಯ ನಾಶವಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅಡುಗೆಗಾಗಿ ಇದ್ದಿಲಿನ ಬಳಕೆ. ಈಗಲೂ ಕೆಲವು ಹಳ್ಳಿಯ ಮನೆಗಳಲ್ಲಿ ಆಹಾರ ತಯಾರಿಗಾಗಿ ಇದ್ದಿಲುಗಳನ್ನು ಉಪಯೋಗಿಸಲಾಗುತ್ತಿದೆ. ಇದರಿಂದಾಗಿ ವ್ಯಾಪಕ ಪ್ರಮಾಣದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಜಾಂಬಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

ಏಳು ದೇಶಗಳಿಂದ ಸುತ್ತುವರಿದಿರುವ ದೇಶ ಜಾಂಬಿಯಾ. ಕಾಂಗೋ ರಿಪಬ್ಲಿಕ್, ತಾಂಜಾನಿಯಾ, ಮಲಾವಿ, ಮೊಜಾಂಬಿಕ್, ಅಂಗೋಲಾ, ನಮೀಬಿಯಾ ಮತ್ತು ಜಿಂಬಾಬ್ವೆ ಈ ಏಳು ರಾಷ್ಟ್ರಗಳು ಇದರ ಸುತ್ತ ಇವೆ. ಏಳು ದೇಶಗಳಿಂದ ಆವೃತವಾಗಿರುವ ಜಾಂಬಿಯಾ ದೇಶವು ತನ್ನ ಅಭಿವೃದ್ಧಿಗಾಗಿ ಉಳಿದ ದೇಶಗಳ ಸಹಕಾರವನ್ನು ನೆಚ್ಚಿಕೊಂಡಿದೆ. ತನ್ನದೇ ಆದ ಆರ್ಥಿಕ ನೀತಿಗಳನ್ನು ರೂಪಿಸಿಕೊಂಡಿದೆ. ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ರಾಷ್ಟ್ರಗಳ ಜೊತೆಗೆ ಉತ್ತಮ ಸ್ನೇಹಸಂಬಂಧವನ್ನು ಕಾಯ್ದುಕೊಂಡಿದೆ. ವಿಶ್ವಸಂಸ್ಥೆ ಮತ್ತು ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳ ಜೊತೆಗೆ ಗಟ್ಟಿಯಾದ ಬಾಂಧವ್ಯವನ್ನು ಮೊದಲಿನಿಂದಲೂ ಉಳಿಸಿಕೊಂಡೇ ಬಂದಿದೆ. ಆಫ್ರಿಕನ್ ಯುನಿಯನ್ ಜೊತೆಗೆ ಗುರುತಿಸಿಕೊಂಡಿರುವ ಜಾಂಬಿಯಾ ದೇಶವು ವಿಶ್ವ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮೊದಲಾದ ಜಾಗತಿಕ ಮಟ್ಟದ ಸಂಸ್ಥೆಗಳಿಂದ ಹಣಕಾಸಿನ ನೆರವನ್ನು ಪಡೆದುಕೊಳ್ಳುತ್ತಿದೆ. ಈ ಮೂಲಕ ತನ್ನ ಆರ್ಥಿಕ ಸ್ಥಿತಿಗತಿಯನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ.

ವಿದೇಶೀ ಬ್ಯಾಂಕುಗಳನ್ನೂ ಒಳಗೊಂಡಂತೆ ಜಾಂಬಿಯಾವು ಅನೇಕ ಹಣಕಾಸು ಸಂಸ್ಥೆಗಳಿಗೆ ನೆಲೆಯಾಗಿದೆ. ಬ್ಯಾಂಕ್ ಆಫ್ ಜಾಂಬಿಯಾ ಎನ್ನುವುದು ಇಲ್ಲಿಯ ಕೇಂದ್ರ ಬ್ಯಾಂಕ್ ಆಗಿದೆ. ಹೆಚ್ಚಿನ ಹಣಕಾಸು ಸಂಸ್ಥೆಗಳು ಇರುವುದು ಲುಸಾಕಾ ಪ್ರದೇಶದಲ್ಲಿ. ಷೇರು ವಿನಿಮಯ ಕೇಂದ್ರ ಇರುವುದು ಇದೇ ಪ್ರದೇಶದಲ್ಲಿ. ಇದು ಸ್ಥಾಪನೆಯಾದದ್ದು 1994ರಲ್ಲಿ. ಜಾಂಬಿಯನ್ ಕ್ವಾಚಾ ಎನ್ನುವುದು ಜಾಂಬಿಯಾ ದೇಶದ ಕರೆನ್ಸಿಯಾಗಿದೆ.

(ವಿಕ್ಟೋರಿಯಾ ಜಲಪಾತ)

ಜಾಂಬಿಯಾದಲ್ಲಿ ವಿಕ್ಟೋರಿಯಾ ಹೆಸರಿನ ಜಲಪಾತವಿದೆ. ಮೋಸಿ ಓ ತುನ್ಯಾ ಎನ್ನುವುದು ಇದರ ಸಾಂಪ್ರದಾಯಿಕ ಹೆಸರಾಗಿದೆ. ಈ ಹೆಸರಿನ ಅರ್ಥ ಗುಡುಗು ಹೊಗೆ. ಕೆನಡಾದ ಪ್ರಸಿದ್ಧ ಜಲಪಾತವಾದ ನಯಾಗರಕ್ಕಿಂತಲೂ ಈ ಜಲಪಾತ ಹೆಚ್ಚು ಎತ್ತರವಾಗಿದೆ. ಸುಮಾರು ನೂರಾ ಎಂಟು ಮೀಟರ್‌ಗಳಷ್ಟು ಎತ್ತರವಾಗಿದೆ. ಇದು ಹೆಚ್ಚು ಕಡಿಮೆ ನಯಾಗರ ಜಲಪಾತದ ಎರಡು ಪಟ್ಟಿನಷ್ಟು ಎತ್ತರ ಎನ್ನುವುದು ಸ್ಪಷ್ಟ. ಇಲ್ಲಿರುವ ಕರಿಬಾ ಸರೋವರವು ವಿಶ್ವದ ಅತೀ ದೊಡ್ಡ ಮಾನವ ನಿರ್ಮಿತ ಸರೋವರಗಳಲ್ಲಿ ಒಂದೆನಿಸಿಕೊಂಡಿದೆ. ಇಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಮೀನುಗಾರಿಕೆ ನಡೆಯುತ್ತದೆ. ಇಲ್ಲಿ ಜಲವಿದ್ಯುತ್ ಉತ್ಪಾದನೆಯೂ ನಡೆಯುತ್ತದೆ. ಹೀಗೆ ಉತ್ಪಾದನೆಯಾದ ಜಲವಿದ್ಯುತ್‌ನ್ನು ಜಾಂಬಿಯಾ ತನ್ನ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುತ್ತದೆ. ಜೊತೆಗೆ ಜಿಂಬಾಬ್ವೆ ದೇಶಕ್ಕೆ ಸರಬರಾಜು ಮಾಡುತ್ತದೆ. ಜಾಂಬಿಯಾದಲ್ಲಿರುವ ಪ್ರಸಿದ್ಧ ನದಿ ಜಾಂಬೆಜಿ. ಇದು ಆಫ್ರಿಕಾದ ನಾಲ್ಕನೇ ಅತೀ ಉದ್ದದ ನದಿ ಎನಿಸಿಕೊಂಡಿದೆ. ಐದು ಬಗೆಯ ವನ್ಯಜೀವಿಗಳನ್ನು ‘ಆಫ್ರಿಕನ್ ಬಿಗ್ ಫೈವ್’ ಎನ್ನುವ ಹೆಸರಿನಿಂದ ಗುರುತಿಸಲಾಗುತ್ತದೆ. ಇವುಗಳಲ್ಲಿ ಸಿಂಹ, ಆನೆ, ಘೇಂಡಾಮೃಗ ಮೊದಲಾದ ಪ್ರಾಣಿಗಳು ಸೇರಿಕೊಂಡಿವೆ. ಈ ಐದೂ ಪ್ರಭೇದದ ಪ್ರಾಣಿಗಳಿಗೆ ನೆಲೆಯಾಗಿದೆ ಜಾಂಬಿಯಾ ದೇಶ. ಸೌತ್ ಲುವಾಂಗ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಗ್ ಫೈವ್ ಪ್ರಾಣಿಗಳನ್ನು ನೋಡಬಹುದಾಗಿದೆ.

ಇಪ್ಪತ್ತನೇ ಶತಮಾನದ ಹೊತ್ತಿಗೆ ಜಾಂಬಿಯಾದಲ್ಲಿ ಪಾಶ್ಚಿಮಾತ್ಯ ಶೈಲಿಯ ಕ್ರೀಡೆಗಳು ಪರಿಚಯಗೊಂಡವು. ಇದಕ್ಕೂ ಮೊದಲು ಇಲ್ಲಿದ್ದದ್ದು ಸ್ಥಳೀಯವಾದ, ಸಾಂಪ್ರದಾಯಿಕವಾದ, ಜನಪದ ಮಾದರಿಯ ಆಟಗಳು. ಹೀಗೆ ಯುರೋಪಿನ ವಸಾಹತುಶಾಹಿಗಳ ಮೂಲಕ ಪರಿಚಯವಾದ ಕ್ರೀಡೆಗಳಲ್ಲಿ ಜಾಂಬಿಯಾದ ಜನರಿಗೆ ಭಾಗವಹಿಸುವ ಅವಕಾಶ ಇರಲಿಲ್ಲ. ಯುರೋಪಿಯನ್ನರು ಮಾತ್ರವೇ ಪಾಲು ಪಡೆಯಬಹುದಾಗಿತ್ತು. ಆದರೆ ಆಟವನ್ನು ವೀಕ್ಷಿಸುವ ಅವಕಾಶ ಎಲ್ಲರಿಗೂ ಇತ್ತು. ಗಣಿಗಾರಿಕೆ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಜಾಂಬಿಯಾದ ಕಾರ್ಮಿಕರು ಆಟವನ್ನು ನೋಡುತ್ತಿದ್ದರು. ಇದರಿಂದಾಗಿ ಅವರಿಗೆ ಯುರೋಪಿಯನ್ ಕ್ರೀಡೆಗಳ ಬಗೆಗೆ ತಿಳುವಳಿಕೆ ದೊರಕಿತು. ಆಸಕ್ತಿ ಬೆಳೆಯಿತು. ಪಾಶ್ಚಿಮಾತ್ಯ ಶೈಲಿಯ ಕ್ರೀಡೆಗಳನ್ನು ಜಾಂಬಿಯಾದ ಜನರೂ ಆಡುವಂತಾದದ್ದು ಹೀಗೆ.

ಜಾಂಬಿಯಾದ ಪಾಲಿಗೆ ಫುಟ್‌ಬಾಲ್ ರಾಷ್ಟ್ರೀಯ ಕ್ರೀಡೆಯಾಗಿದೆ. ಬಾಕ್ಸಿಂಗ್, ವಾಲಿಬಾಲ್, ರಗ್ಬಿ, ಗಾಲ್ಫ್ ಮೊದಲಾದ ಆಟಗಳೂ ಜನಪ್ರಿಯವಾಗಿವೆ. ಫುಟ್‌ಬಾಲ್ ಪಂದ್ಯ ಜಾಂಬಿಯಾದಲ್ಲಿ ಮೊದಲಿಗೆ ನಡೆದದ್ದು ಲಿವಿಂಗ್‌ಸ್ಟೋನ್ ಪ್ರದೇಶದಲ್ಲಿ. ಇಂದು ಇಲ್ಲಿನ ಜನರಿಗೆ ಫುಟ್‌ಬಾಲ್ ಬಗೆಗೆ ಯಾವ ಪರಿಯ ಕ್ರೇಜ಼್ ಇದೆಯೆಂದರೆ, ಮಹತ್ವದ ಪಂದ್ಯಗಳು ನಡೆದಾಗ ಇಲ್ಲಿನ ಬೀದಿಗಳು ಖಾಲಿ ಹೊಡೆಯುತ್ತವೆ. ವ್ಯಾಪಾರ ಚಟುವಟಿಕೆಗಳೆಲ್ಲಾ ಬಂದ್ ಆಗಿಬಿಡುತ್ತವೆ. 1993ನೇ ಇಸವಿ ಜಾಂಬಿಯಾದ ಫುಟ್‌ಬಾಲ್ ತಂಡದ ಪಾಲಿಗೆ ಕಹಿಯಾದ ನೆನಪೊಂದನ್ನು ಉಳಿಸಿರುವ ವರ್ಷ. ಇಲ್ಲಿಯ ರಾಷ್ಟ್ರೀಯ ಫುಟ್‌ಬಾಲ್ ತಂಡವು ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡುವುದಕ್ಕಾಗಿ ವಿಮಾನ ಪ್ರಯಾಣ ನಡೆಸುತ್ತಿತ್ತು. ಆಟಗಾರರ ಜೊತೆಗೆ ತರಬೇತುದಾರರು ಮತ್ತು ಅಧಿಕಾರಿಗಳಿದ್ದರು. ದಾರಿಮಧ್ಯೆ ವಿಮಾನ ಅಪಘಾತಕ್ಕೀಡಾಯಿತು. ಇದ್ದವರಲ್ಲಿ ಬಹುತೇಕರು ಪ್ರಾಣ ಕಳೆದುಕೊಂಡರು. ಬದುಕಿ ಉಳಿದವರು ಕೇವಲ ಮೂರು ಮಂದಿ ಮಾತ್ರ. ಕಲುಶಾ ಬ್ವಾಲ್ಯ ಮತ್ತು ಗಾಡ್ಫ್ರೇ ಚಿತಾಲು ಎಂಬ ಇಬ್ಬರು ಆಟಗಾರರು ಜಾಂಬಿಯಾದ ಜನರ ಪ್ರೀತಿಗೆ ಪಾತ್ರರಾದ ಪ್ರಖ್ಯಾತ ಕ್ರೀಡಾಪಟುಗಳು. ಇವರಲ್ಲಿ ಕಲುಶಾ ಅವರನ್ನು ಜನರು ಪ್ರೀತಿಯಿಂದ ‘ಗ್ರೇಟ್ ಕಲು’ ಎಂದು ಕರೆಯುತ್ತಿದ್ದರು. ಇವರು ಸಿಯೋಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ರಾಷ್ಟ್ರದ ಫುಟ್‌ಬಾಲ್ ತಂಡದ ನಾಯಕರಾಗಿದ್ದರು. ಚಿತಾಲು ಅವರು 1993ರ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರು. ಜಾಂಬಿಯಾ ದೇಶವು ಮೊದಲು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು 1964ರಲ್ಲಿ. ಆ ಸಮಯದಲ್ಲಿ ದೇಶವು ಉತ್ತರ ರೊಡೇಶಿಯಾ ಎನ್ನುವ ಹೆಸರನ್ನು ಹೊಂದಿತ್ತು. ಆದರೆ ನಂತರದ ಕಾಲಘಟ್ಟದಲ್ಲಿ ಜಾಂಬಿಯಾ ಎನ್ನುವ ಹೆಸರಿನಿಂದಲೇ ಸ್ಪರ್ಧಿಸಿದೆ. 1976ರಲ್ಲಿ ನಡೆದ ಮಾಂಟ್ರಿಯಲ್ ಗೇಮ್ಸ್‌ನ ಹೊರತುಪಡಿಸಿ ಉಳಿದೆಲ್ಲಾ ಪಂದ್ಯಾವಳಿಗಳಲ್ಲಿಯೂ ಭಾಗವಹಿಸಿದೆ ಜಾಂಬಿಯಾ.

ಹೆಚ್ಚಿನ ಜಾಂಬಿಯನ್ನರು ಮಾತನಾಡುವುದು ಬಂಟು ಭಾಷೆಯನ್ನು. ನೈಜರ್ ಕಾಂಗೋ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಯಿದು. ಈ ಪ್ರದೇಶದಲ್ಲಿ ನೆಲೆಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದ, ಲೋಹದ ಬಳಕೆ ತಿಳಿದಿದ್ದ ಜನಾಂಗದವರು ಎರಡು ಸಾವಿರ ವರ್ಷಗಳಷ್ಟು ಹಿಂದಿನಿಂದಲೇ ಈ ಭಾಷೆಯನ್ನು ಬಳಸುತ್ತಿದ್ದರು ಎನ್ನುವುದಕ್ಕೆ ಪುರಾವೆಯಿದೆ. ಜಾಂಬಿಯಾದ ಈಶಾನ್ಯ ಮತ್ತು ವಾಯುವ್ಯ ಭಾಗದಲ್ಲಿ ಕಂಡುಬರುವ ಸಂಸ್ಕೃತಿ, ಸಂಪ್ರದಾಯಗಳು ಕಾಂಗೋದ ಸಂಸ್ಕೃತಿ, ಸಂಪ್ರದಾಯಗಳನ್ನು ಹೋಲುತ್ತವೆ. ಅಲ್ಲಿಂದ ವಲಸೆ ಬಂದ ಜನರಿಂದಾಗಿ ಈ ಬಗೆಯ ಸಾಮ್ಯತೆ ಉಂಟಾಗಿದೆ ಎನ್ನುವುದು ಒಂದು ಅಂದಾಜು. ಜಾಂಬಿಯಾಕ್ಕೆ ಆಕ್ರಮಣಕಾರರ ಪ್ರವೇಶವಾದದ್ದು ಹತ್ತೊಂಬತ್ತನೇ ಶತಮಾನದಲ್ಲಿ. ದೇಶದ ದಕ್ಷಿಣ ಭಾಗದಿಂದ ಆಗಮಿಸಿದ ಧಾಳಿಕೋರರು ಕೆಲವು ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸಿದರು. ಹತ್ತೊಂಬತ್ತನೆಯ ಶತಮಾನದ ಕೊನೆಗೆ ಬಂದ ಯುರೋಪಿಯನ್ನರು ದೇಶದ ಮೇಲೆ ಗಮನಾರ್ಹ ಪ್ರಭಾವ ಬೀರಿದ್ದಾರೆ. ಜಾಂಬಿಯಾದ ಮೂಲನಿವಾಸಿಗಳು ಬಂಟು ಜನಾಂಗಕ್ಕೆ ಸೇರಿದವರು. ಅದೇ ಹೆಸರಿನ ಭಾಷೆಯನ್ನು ಮಾತನಾಡುವವರು. ದೇಶಕ್ಕೆ ವಲಸೆ ಬಂದವರಿಂದಾಗಿ ಬೇರೆ ಜನಾಂಗಗಳನ್ನೂ ಇಲ್ಲಿ ಕಾಣುವಂತಾಗಿದೆ. ಬೇರೆ ಭಾಷೆಗಳನ್ನೂ ಕೇಳಿಸಿಕೊಳ್ಳುವಂತಾಗಿದೆ. ಬೆಂಬಾ ಹೆಸರಿನ ಜನಾಂಗೀಯ ಗುಂಪು ಹೆಚ್ಚಿನ ಜನರನ್ನು ಹೊಂದಿದೆ. ಇಪ್ಪತ್ತು ಶೇಕಡಾಕ್ಕಿಂತ ಹೆಚ್ಚಿನ ಜನರು ಈ ಗುಂಪಿಗೆ ಸೇರಿದವರು. ದೇಶದ ಉತ್ತರ ಮತ್ತು ಮಧ್ಯ ಭಾಗದಲ್ಲಿ ಈ ಗುಂಪಿನ ಜನರು ಬದುಕುತ್ತಿದ್ದಾರೆ. ನ್ಯಾಂಜಾ ಮತ್ತು ಟೊಂಗಾ ಗುಂಪುಗಳೂ ಸಹ ಪ್ರಮುಖವಾಗಿವೆ. ಇಪ್ಪತ್ತು ಶೇಕಡಾಕ್ಕಿಂತ ಹೆಚ್ಚು ಜನರು ಈ ಎರಡೂ ಗುಂಪುಗಳಲ್ಲಿದ್ದಾರೆ.

ದಕ್ಷಿಣ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಟೊಂಗಾ ಭಾಷೆಯನ್ನಾಡುವ ಜನರಿದ್ದರೆ, ಪೂರ್ವ ಮತ್ತು ಮಧ್ಯ ಪ್ರಾಂತ್ಯಗಳಲ್ಲಿ ನ್ಯಾಂಜಾ ಭಾಷಿಕರಿದ್ದಾರೆ. ಪಶ್ಚಿಮ ಪ್ರಾಂತ್ಯದಲ್ಲಿ ಲೋಝಿ ಜನಾಂಗದ ಪ್ರಾಬಲ್ಯವಿದೆ. ಜಾಂಬೆಜಿ ನದಿತೀರದ ಪ್ರದೇಶಗಳಲ್ಲಿ ವಾಸಿಸುವ ಇವರು ದೇಶದ ನಾಯಕತ್ವ ನಿರ್ಧಾರ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ಲಿತುಂಗಾ ಸಮುದಾಯವು ಪ್ರತ್ಯೇಕ ಸ್ಥಾನಮಾನದ ಬೇಡಿಕೆಯನ್ನು ಇಟ್ಟುಕೊಂಡಿದ್ದು, ದೇಶದ ಆಡಳಿತ ವ್ಯವಸ್ಥೆಗೆ ಬಹುದೊಡ್ಡ ಸವಾಲಾಗಿದೆ. ದೇಶದ ವಾಯುವ್ಯ ಪ್ರಾಂತ್ಯಗಳಲ್ಲಿ ಯಾವುದೇ ಪ್ರಬಲ ಗುಂಪುಗಳಿಲ್ಲ. ಲುಂಡಾ, ಲುವಾಲೆ, ಚೋಕ್ವೆ, ಲುಚಾಜಿ, ಎಂಬುಂಡಾ ಮೊದಲಾದ ಗುಂಪುಗಳಿಗೆ ಸೇರಿದ ಜನರು ಇಲ್ಲಿದ್ದು, ಈ ಗುಂಪುಗಳು ಹೆಚ್ಚೇನೂ ಪ್ರಾಮುಖ್ಯತೆ ಗಳಿಸಿಕೊಂಡಿಲ್ಲ. ಇಲಾ ಟೋಂಗಾ ಜನಾಂಗಕ್ಕೆ ನೆಲೆಯಾಗಿರುವ ದಕ್ಷಿಣ ಪ್ರಾಂತ್ಯದಲ್ಲಿ ಹನ್ನೆರಡು ಪ್ರತ್ಯೇಕ ಗುಂಪುಗಳಿವೆ. ಇವುಗಳಿಗೆ ಸಂಬಂಧಿಸಿದ ಉಪಭಾಷೆಗಳಿವೆ. ಪಟ್ಟಣಗಳಲ್ಲಿ ನೆಲೆಸಿರುವ ಬಹುತೇಕರು ಬಂಟು ಜನಾಂಗಕ್ಕೆ ಸೇರದವರು. ಇವರಲ್ಲಿ ಹೆಚ್ಚಿನವರು ಯುರೋಪ್ ಮೂಲದವರಾಗಿದ್ದಾರೆ. ಕೆಲವರು ಜಾಂಬಿಯಾದ ಪೌರತ್ವವನ್ನು ಪಡೆದುಕೊಂಡಿದ್ದರೆ, ಇನ್ನೂ ಕೆಲವರು ತಮ್ಮ ಮೂಲನೆಲದ ಪೌರತ್ವವನ್ನೇ ಉಳಿಸಿಕೊಂಡಿದ್ದಾರೆ. 1964ರಲ್ಲಿ ಜಾಂಬಿಯಾ ಸ್ವಾತಂತ್ರ್ಯ ಗಳಿಸಿಕೊಂಡಾಗ ಯುರೋಪಿಯನ್ನರಲ್ಲಿ ಹೆಚ್ಚಿನವರು ತಮ್ಮ ತಮ್ಮ ದೇಶಗಳಿಗೆ ಹಿಂದಿರುಗಿದ್ದರು. ಹೀಗೆ ಜಾಂಬಿಯಾ ತೊರೆದವರ ಸಂಖ್ಯೆ ಸುಮಾರು ನಲುವತ್ತು ಸಾವಿರ. ಇಂಗ್ಲಿಷ್ ಭಾಷೆಯು ಜಾಂಬಿಯಾದ ಅಧಿಕೃತ ಭಾಷೆಯಾಗಿದೆ. ಸರ್ಕಾರದ ಆಡಳಿತದ ಬೇರೆ ಬೇರೆ ಹಂತಗಳಲ್ಲಿ ಇದಕ್ಕೆ ಪ್ರಾಮುಖ್ಯತೆಯಿದೆ. ಇದಕ್ಕೆ ಹೊರತಾಗಿ ಹಲವು ಭಾಷೆಗಳು, ಉಪಭಾಷೆಗಳು ಇಲ್ಲಿವೆ. ಬೆಂಬಾ, ನ್ಯಾಂಜಾ, ಲೋಜಿ, ಲುವಾಲೆ, ಲುಂಡಾ, ಕಾವೊಂಡೆ ಮತ್ತು ಟೊಂಗಾ ಭಾಷೆಗಳು ಅಧಿಕೃತವಾದ ಏಳು ಸ್ಥಳೀಯ ಭಾಷೆಗಳೆನಿಸಿಕೊಂಡಿವೆ.

ಜಾಂಬಿಯಾವು ಕ್ರೈಸ್ತ ಧರ್ಮ ಪ್ರಧಾನವಾದ ದೇಶ. ಬ್ರಿಟೀಷರು ಇಲ್ಲಿ ಆಳ್ವಿಕೆ ಮಾಡುತ್ತಿದ್ದ ಕಾಲದಲ್ಲಿ ಆಗಮಿಸಿದ ಕ್ರೈಸ್ತ ಮಿಶನರಿಗಳು ಧರ್ಮದ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ಸು ಪಡೆದರು. ಇರುವ ಕ್ರಿಶ್ಚಿಯನ್ನರಲ್ಲಿ ಎಪ್ಪತ್ತೈದು ಪ್ರತಿಶತ ಜನರು ಪ್ರೊಟೆಸ್ಟೆಂಟರು. ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರು ಇಪ್ಪತ್ತು ಶೇಕಡಾದಷ್ಟು ಜನರು ಮಾತ್ರ. ಈ ಎರಡು ಪಂಗಡಗಳ ಮಧ್ಯೆ ನಿರಂತರವಾದ ಘರ್ಷಣೆಯಿದೆ. ಜಾಂಬಿಯಾದ ಚರ್ಚುಗಳೂ ಸಹ ತಮ್ಮದೇ ಆದ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಇಲ್ಲಿರುವ ಏಷ್ಯನ್ ಸಮುದಾಯಗಳಲ್ಲಿ ಹಿಂದೂ ಧರ್ಮೀಯರು ಮತ್ತು ಮುಸ್ಲಿಂ ಧರ್ಮದವರು ಸೇರಿಕೊಂಡಿದ್ದಾರೆ.

ಜಾಂಬಿಯಾದ ಆರ್ಥಿಕತೆ ನಿಂತಿರುವುದು ಗಣಿಗಾರಿಕೆಯ ಮೇಲೆ. ತಾಮ್ರದ ಗಣಿಗಾರಿಕೆ ಇಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ತಾಮ್ರದ ನಿಕ್ಷೇಪ ಹೇರಳವಾಗಿದೆ. ತಾಮ್ರವು ಜಾಂಬಿಯಾದ ಮುಖ್ಯ ರಫ್ತು ಎನಿಸಿಕೊಂಡಿದೆ. ಜಾಂಬಿಯಾದಲ್ಲಿ ಪ್ರತೀ ವರ್ಷ ಸುಮಾರು ಹದಿನೈದು ಲಕ್ಷ ಟನ್‌ಗಳಷ್ಟು ತಾಮ್ರ ಉತ್ಪಾದನೆಯಾಗುತ್ತದೆ. ಆದರೆ ಕೆಲವು ಗಣಿ ಪ್ರದೇಶಗಳಲ್ಲಿ ತಾಮ್ರದ ಅದಿರಿನ ನಿಕ್ಷೇಪಗಳು ಖಾಲಿಯಾಗುತ್ತಿವೆ. ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ವಿಶ್ವ ಮಾರುಕಟ್ಟೆಯಲ್ಲಿ ಹಲವು ಬಗೆಯ ಏರಿಳಿತಗಳು ನಡೆಯುತ್ತಿವೆ. ಆದ್ದರಿಂದ ಜಾಂಬಿಯಾ ತಾಮ್ರದ ವ್ಯಾಪಾರವನ್ನು ಬಲು ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ. ಇಲ್ಲಿ ಕೃಷಿಯ ಕ್ಷೇತ್ರದಲ್ಲಿ ಯಾವ ಬೆಳವಣಿಗೆಯೂ ಇಲ್ಲ. ಕೃಷಿ ಅಭಿವೃದ್ಧಿ ಕುಂಠಿತಗೊಂಡಿದೆ. ಇಲ್ಲಿನ ಸರ್ಕಾರ ಕೈಗಾರಿಕೆಗಳ ಬೆಳವಣಿಗೆಯ ಕಡೆಗೆ ಹೆಚ್ಚು ಗಮನ ಹರಿಸಿದೆ. ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸಲಾಗಿದೆ. ಸ್ವಾತಂತ್ರ್ಯ ಪಡೆದುಕೊಂಡ ಬಳಿಕ ಜಾಂಬಿಯಾದ ಸರ್ಕಾರವು ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿತ್ತು. ಈ ಮೂಲಕ ಬೇರೆ ಬೇರೆ ಕ್ಷೇತ್ರಗಳಲ್ಲಿ ದೇಶವನ್ನು ಮುಂದಕ್ಕೆ ತರುವ ಪ್ರಯತ್ನವನ್ನು ನಡೆಸಿತು. ಸರಿಯಾದ ರೀತಿಯಲ್ಲಿಯೇ ಯೋಜನೆಯನ್ನು ಜಾರಿಗೊಳಿಸಲಾಯಿತು. ಆದರೂ ಸಹ ಈ ಯೋಜನೆ ಹೆಚ್ಚಿನ ಯಶಸ್ಸನ್ನು ಗಳಿಸಿಕೊಳ್ಳಲಿಲ್ಲ.

ಕೃಷಿಗೆ ಯೋಗ್ಯವಾಗಿರುವ ತನ್ನ ಒಟ್ಟು ಭೂಮಿಯಲ್ಲಿ ಜಾಂಬಿಯಾ ಹದಿನೇಳು ಪ್ರತಿಶತ ಭೂಮಿಯನ್ನು ಮಾತ್ರವೇ ಸಾಗುವಳಿಗೆ ಬಳಸಿಕೊಂಡಿದೆ. ಇಲ್ಲಿ ಮುಖ್ಯವಾಗಿ ಜೋಳ, ಕಬ್ಬು, ರಾಗಿ, ಮರಗೆಣಸು, ಕಡಲೆಕಾಯಿ ಮುಂತಾದವುಗಳನ್ನು ಬೆಳೆಸುತ್ತಾರೆ. ಜಾಂಬಿಯಾ ಶುಗರ್ ಕಂಪೆನಿಯು ಸುಮಾರು ಇಪ್ಪತ್ತೈದು ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬನ್ನು ಬೆಳೆಸುತ್ತದೆ. ಹೀಗೆ ತಯಾರಾಗುವ ಸಕ್ಕರೆಯು ದೇಶದ ಒಳಗಿನ ಅಗತ್ಯಗಳನ್ನು ಪೂರೈಸುತ್ತದೆ. ಜೊತೆಗೆ ಹೊರದೇಶಗಳಿಗೂ ರವಾನೆಯಾಗುತ್ತದೆ. ಬೆಳೆಯುವ ಬಹುತೇಕ ಹತ್ತಿಯನ್ನು ಇಲ್ಲಿಯ ಬಟ್ಟೆ ಉದ್ಯಮದಲ್ಲಿ ಬಳಸಲಾಗುತ್ತದೆ. ಜೊತೆಗೆ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಎಂಪೊಂಗ್ವೆ ಎನ್ನುವ ಪ್ರದೇಶದಲ್ಲಿ ನೀರಾವರಿ ಯೋಜನೆಯನ್ನು ರೂಪಿಸುವ ಮೂಲಕ ಸಮೃದ್ಧ ಕೃಷಿಗೆ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ಪ್ರಮುಖವಾಗಿ ಗೋಧಿ ಮತ್ತು ಕಾಫಿಯನ್ನು ಬೆಳೆಸಲಾಗುತ್ತದೆ. ಕಸಾಮಾವು ಪ್ರದೇಶದಲ್ಲಿ ಅರೇಬಿಕಾ ತಳಿಯ ಕಾಫಿ ಗಿಡಗಳನ್ನು ಬೆಳೆಸಲಾಗಿದೆ. ಉತ್ತರ ಭಾಗದ ಕವಾಂಬ್ವಾ ಪ್ರದೇಶದಲ್ಲಿ ಟೀ ಎಸ್ಟೇಟ್ ಇದೆ. ಗ್ವೆಂಬೆ ಕಣಿವೆಯಲ್ಲಿ ಹತ್ತಿ ಮತ್ತು ಗೋಧಿ ಕೃಷಿಗೆ ಹೆಚ್ಚಿನ ಪ್ರಾಶಸ್ತ್ಯ. ಇದಕ್ಕಾಗಿ ಕರಿಬಾ ಸರೋವರದ ನೀರನ್ನು ಬಳಸಿಕೊಳ್ಳಲಾಗುತ್ತದೆ. ದೊಡ್ಡ ಮಟ್ಟಿಗೆ ಕೃಷಿ ಮಾಡುವ ರೈತರು ಸುಧಾರಿತ ಬೀಜ, ರಸಗೊಬ್ಬರ ಮೊದಲಾದವುಗಳನ್ನು ಉಪಯೋಗಿಸುವ ಮೂಲಕ ಹೆಚ್ಚು ಇಳುವರಿ ಪಡೆದುಕೊಳ್ಳುತ್ತಾರೆ. ಇವತ್ತಿಗೂ ಸಹ ಹೆಚ್ಚು ಲಾಭ ತಂದುಕೊಡುವ ಭೂಮಿಗಳು ಯುರೋಪಿಯನ್ನರ ಒಡೆತನದಲ್ಲಿವೆ.

ದೇಶವನ್ನು ಬ್ರಿಟೀಷರು ಆಳುತ್ತಿದ್ದಾಗ ಜಾಂಬಿಯಾದ ಹಲವು ಜನರನ್ನು ತಾಮ್ರದ ಗಣಿಗಳಲ್ಲಿ ಕೆಲಸ ಮಾಡಲು ನೇಮಿಸಲಾಗಿತ್ತು. ಈ ಸಂದರ್ಭದಲ್ಲಿ ಇಂತಹ ವಾಣಿಜ್ಯ ಪ್ರದೇಶಗಳ ಒಡೆಯರಾಗಿದ್ದವರು ಯುರೋಪಿಯನ್ನರು. ಈಗಲೂ ಸಹ ಇದೇ ಪರಿಸ್ಥಿತಿ ಮುಂದುವರಿದಿದೆ. ಭೂಸುಧಾರಣಾ ಕಾರ್ಯಕ್ರಮಗಳಿಂದಾಗಿ ಒಂದಷ್ಟು ಬದಲಾವಣೆಗಳು ನಡೆದಿವೆಯಾದರೂ ಸಂಪೂರ್ಣ ಮಾರ್ಪಾಡು ನಡೆದಿಲ್ಲ ಎನ್ನುವುದು ವಾಸ್ತವ ಸತ್ಯ. ಜಾಂಬಿಯಾದ ಸುಮಾರು ಅರುವತ್ತೇಳು ಸಾವಿರ ಚದರ ಕಿಲೋಮೀಟರ್‌ಗಳಷ್ಟು ಕಾಡನ್ನು ಮೀಸಲು ಅರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಕಾಪರ್‌ಬೆಲ್ಟ್‌ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿಯೇ ಮರಗಳನ್ನು ನೆಡಲಾಗಿದೆ. ಇಲ್ಲಿ ಪ್ರಮುಖವಾಗಿ ಸಾಫ್ಟ್‌ವುಡ್ ಮರಗಳಿವೆ. ನೈಋತ್ಯ ಭಾಗದಲ್ಲಿ ಜಾಂಬೆಜಿ ನದಿತೀರದ ಪ್ರದೇಶಗಳಲ್ಲಿ ತೇಗದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಜಾಂಬಿಯಾದಲ್ಲಿ ಅರಣ್ಯ ನಾಶವಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅಡುಗೆಗಾಗಿ ಇದ್ದಿಲಿನ ಬಳಕೆ. ಈಗಲೂ ಕೆಲವು ಹಳ್ಳಿಯ ಮನೆಗಳಲ್ಲಿ ಆಹಾರ ತಯಾರಿಗಾಗಿ ಇದ್ದಿಲುಗಳನ್ನು ಉಪಯೋಗಿಸಲಾಗುತ್ತಿದೆ. ಇದರಿಂದಾಗಿ ವ್ಯಾಪಕ ಪ್ರಮಾಣದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ.

ಮೀನುಗಾರಿಕೆಯು ಜಾಂಬಿಯಾದ ಪಾಲಿಗೆ ಪ್ರಮುಖ ಆದಾಯದ ಮೂಲ. ಇಲ್ಲಿನ ಅನೇಕ ಸರೋವರಗಳು ಮತ್ತು ಜೌಗು ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಯುತ್ತದೆ. ಕಾಪರ್‌ಬೆಲ್ಟ್ ಪ್ರದೇಶದಲ್ಲಿ ಮತ್ತು ಲುವಾಪುಲಾ ಕಣಿವೆ ಪ್ರದೇಶಗಳು ಈ ನೆಲೆಯಿಂದ ಪ್ರಾಮುಖ್ಯತೆ ಗಳಿಸಿಕೊಂಡಿವೆ. ಟ್ಯಾಂಗನಿಕಾ ಸರೋವರದಲ್ಲಿ ನೈಲ್ ಪರ್ಚ್ ಮತ್ತು ಕಪೆಂಟಾಗಳಿವೆ. ಸಿಹಿನೀರಿನಲ್ಲಿರುವ ಸಾರ್ಡೀನ್‌ಗಳನ್ನು ವಿಶೇಷ ದೀಪಗಳನ್ನು ಬಳಸಿ ರಾತ್ರಿಯ ವೇಳೆಯಲ್ಲಿ ಸೆರೆಹಿಡಿಯಲಾಗುತ್ತದೆ. ಜಾಂಬೆಜಿ ನದಿಯ ಮೇಲಿನ ಪ್ರದೇಶದಲ್ಲಿ ಮೀನುಗಾರಿಕೆ ಅಷ್ಟಾಗಿ ಕಂಡುಬರುವುದಿಲ್ಲ. ಕರಿಬಾ ಸರೋವರದಲ್ಲಿ ಒಂದು ಕಾಲಕ್ಕೆ ಮೀನುಗಾರಿಕೆ ವ್ಯಾಪಕವಾಗಿತ್ತು. ಆದರೆ ಆ ಬಳಿಕದ ಕಾಲಘಟ್ಟದಲ್ಲಿ ಜಿಂಬಾಬ್ವೆ ಜೊತೆಗಿನ ಸಂಘರ್ಷದಿಂದಾಗಿ ಮೀನುಗಾರಿಕೆಯ ಪ್ರಕ್ರಿಯೆಯೇ ಅಳಿದುಹೋಗಿತ್ತು. ಈಗ ಮತ್ತೆ ಮೀನುಗಾರಿಕಾ ಚಟುವಟಿಕೆಗೆ ಜೀವ ನೀಡಲಾಗಿದೆ.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ