ಇಂಡೋನೇಷ್ಯಾವು ನೂರಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಜೀವಿಗಳಿಗೆ ನೆಲೆಯಾಗಿದೆ. ಏಷ್ಯಾದ ಕಳೆದುಹೋದ ಜಗತ್ತು ಎನ್ನುವ ವಿಶೇಷ ಹೆಸರನ್ನು ಹೊಂದಿದೆ ಇಂಡೋನೇಷ್ಯಾ. ಬೇರೆ ಕಡೆಗಳಲ್ಲಿ ಕಂಡುಬರದ, ಈಗಾಗಲೇ ಅಳಿದುಹೋದ ಅಪರೂಪದ ಜೀವಿಗಳು ಇಲ್ಲಿ ಕಂಡುಬರುತ್ತವೆ. ಸುಮಾತ್ರನ್ ಘೇಂಡಾಮೃಗ, ಒರಾಂಗ್-ಉಟಾನ್ಸ್, ಅನೋವಾ, ಸುಮಾತ್ರಾನ್ ಹುಲಿ, ಸಮುದ್ರ ಆಮೆಗಳು, ಟಾರ್ಸಿಯಸ್ ಟಾರ್ಸಿಯರ್, ಕೊಮೊಡೊ ಡ್ರ್ಯಾಗನ್, ಮೆರಾಕ್ ಮೊದಲಾದವು ಇಲ್ಲಿ ಕಾಣಸಿಗುವ, ಬೇರೆಲ್ಲೂ ಹೆಚ್ಚಾಗಿ ಕಾಣಸಿಗದ ಜೀವಿಗಳು. ಇವುಗಳಲ್ಲಿ ಅನೋವಾ ಎನ್ನುವುದು ವಿಶ್ವದ ಅತ್ಯಂತ ಚಿಕ್ಕ ಎಮ್ಮೆ ಎನಿಸಿಕೊಂಡಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಇಂಡೋನೇಷ್ಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ
ಹತ್ತೊಂಬತ್ತನೇ ಶತಮಾನದ ವೇಳೆಗೆ ಇಂಡೋನೇಷ್ಯಾ ಡಚ್ಚರ ಆಳ್ವಿಕೆಗೆ ಒಳಪಟ್ಟಿತ್ತು. 1824ರಲ್ಲಿ ನೆದರ್ಲ್ಯಾಂಡ್ ಟ್ರೇಡಿಂಗ್ ಸೊಸೈಟಿ ಸ್ಥಾಪನೆಯಾಯಿತು. ಇದನ್ನು ಡಚ್ ಭಾಷೆಯಲ್ಲಿ ನೆದರ್ಲ್ಯಾಂಡ್ಶ್ಚೆ ಹ್ಯಾಂಡೆಲ್ ಮ್ಯಾಟ್ಶ್ಚಫಿಜಿ ಎಂದು ಕರೆಯಲಾಗುತ್ತಿತ್ತು. ಇದರ ಸ್ಥಾಪನೆಯಾದ ಬಳಿಕ ಡಚ್ಚರು ತಮ್ಮ ಅಧೀನದಲ್ಲಿದ್ದ ವಸಾಹತುಗಳನ್ನು ವ್ಯಾಪಾರದ ನೆಲೆಯಲ್ಲಿ ಮತ್ತಷ್ಟು ಶೋಷಿಸಿ, ಲಾಭವನ್ನು ಹೆಚ್ಚುಪಡಿಸಿಕೊಳ್ಳುವುದರ ಕಡೆಗೆ ಆಸಕ್ತಿ ತೋರಿದರು. 1830ರಲ್ಲಿ ಇಂಡೋನೇಷ್ಯಾದ ಹೊಸ ಗವರ್ನರ್ ಜನರಲ್ ಆಗಿ ಆಯ್ಕೆಯಾದವರು ಜೋಹಾನ್ಸ್ ವ್ಯಾನ್ ಡೆನ್ ಬಾಷ್ ಅವರು. ಇವರು ಇಂಡೋನೇಷ್ಯಾದ ನೈಸರ್ಗಿಕ ಸಂಪನ್ಮೂಲಗಳು ನೆದರ್ಲ್ಯಾಂಡ್ ಸೊಸೈಟಿಯ ಪ್ರಯೋಜನಕ್ಕೆ ಒದಗಿಬರುವ ರೀತಿಯಲ್ಲಿ ಹೊಸ ನಿಯಮವೊಂದನ್ನು ಇಂಡೋನೇಷ್ಯಾದಲ್ಲಿ ಜಾರಿಗೆ ತಂದರು. ಇದನ್ನು ಸಂಸ್ಕೃತಿ ವ್ಯವಸ್ಥೆ ಅಥವಾ ಕೃಷಿ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಡಚ್ ಭಾಷೆಯಲ್ಲಿ ಇದನ್ನು ಕಲ್ಚರ್ಸ್ಟೆಲ್ಸೆಲ್ ಎಂದು ಕರೆಯಲಾಗುತ್ತಿತ್ತು. ಈ ಪದದಲ್ಲಿ ಕಲ್ಚರ್ ಎಂದರೆ ಕೃಷಿ ಎಂದರ್ಥ. ಹಿಂದಿನ ಕಾಲದಲ್ಲಿ ಕೃಷಿಯನ್ನೇ ಸಂಸ್ಕೃತಿಯಾಗಿ ಪರಿಗಣಿಸಲಾಗುತ್ತಿತ್ತು ಎನ್ನುವುದು ಸ್ಪಷ್ಟ.
ಆಗ ಇಂಡೋನೇಷ್ಯಾದಲ್ಲಿ ಕೃಷಿ ಕ್ಷೇತ್ರ ಪ್ರಬಲವಾಗಿತ್ತು. ಕೃಷಿ ಉತ್ಪಾದನೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ರೂಪಿಸಿದ್ದರು ಡೆನ್ ಬಾಷ್. ಇದರ ಪ್ರಕಾರ ಪ್ರತಿಯೊಂದು ಗ್ರಾಮವೂ ಸಹ ಕೃಷಿಯೋಗ್ಯ ಭೂಮಿಯ ಐದನೇ ಒಂದು ಭಾಗವನ್ನು ರಫ್ತು ಬೆಳೆಗಳ ಉತ್ಪಾದನೆಗೆ ಮೀಸಲಿಡಬೇಕಾಗಿತ್ತು. ಹೀಗೆ ಬೆಳೆದದ್ದನ್ನು ಭೂಮಿಯ ಗೇಣಿಯಾಗಿ ಪರಿಗಣಿಸಿ ಅದನ್ನು ಡಚ್ ಸರ್ಕಾರಕ್ಕೆ ಸಲ್ಲಿಸಬೇಕಿತ್ತು. ನಿರ್ಣಯಿಸಲ್ಪಟ್ಟ ಗೇಣಿಗಿಂತ ಹೆಚ್ಚು ಸಲ್ಲಿಸುವ ಗ್ರಾಮಕ್ಕೆ ಮುಂದಿನ ಅವಧಿಯಲ್ಲಿ ಭೂಮಿಯ ಗೇಣಿಯನ್ನು ಹೇರಲಾಗುತ್ತಿರಲಿಲ್ಲ. ಒಂದು ವೇಳೆ ಕಡಿಮೆ ಸಲ್ಲಿಕೆಯಾದರೆ, ಕಡಿಮೆಯಾದದ್ದನ್ನು ಆ ಗ್ರಾಮವೇ ಭರ್ತಿ ಮಾಡಬೇಕು. ಇದು ಇಂಡೋನೇಷ್ಯಾದಲ್ಲಿದ್ದ ಡಚ್ ಸರ್ಕಾರವು ರೂಪಿಸಿದ ಕೃಷಿ ವ್ಯವಸ್ಥೆಯಾಗಿತ್ತು. ಈ ಬಗೆಯ ನಿಯಮವನ್ನು ರೂಪಿಸುವಾಗ ಡೆನ್ ಬಾಷ್ ಯಾವ ರೀತಿಯ ಮುಂದಾಲೋಚನೆಗಳನ್ನು ಇಟ್ಟುಕೊಂಡಿದ್ದರೋ ಅದೇ ಮಾದರಿಯಲ್ಲಿ ಇದು ಡಚ್ ಸರ್ಕಾರಕ್ಕೆ ಲಾಭ ತಂದಿತು. ಕೃಷಿ ವಸ್ತುಗಳ ರಫ್ತು ಪ್ರಮಾಣ ಅತೀವವಾಗಿ ಏರಿಕೆ ಕಂಡಿತು. 1830ರ ವೇಳೆಗೆ ಡಚ್ ಸರ್ಕಾರದ ಆದಾಯ ಒಂದು ಕೋಟಿಯಷ್ಟಿದ್ದರೆ ಹತ್ತು ವರ್ಷಗಳಲ್ಲಿಯೇ ಏಳು ಕೋಟಿಗಿಂತಲೂ ಹೆಚ್ಚಾಯಿತು. ಇಂಡೋನೇಷ್ಯಾದ ಕೃಷಿ ಉತ್ಪನ್ನಗಳು ನೆದರ್ಲ್ಯಾಂಡ್ಸ್ ಟ್ರೇಡಿಂಗ್ ಸೊಸೈಟಿಯ ಮೂಲಕವೇ ವಿಲೇವಾರಿಯಾಗುತ್ತಿದ್ದವು. ಡಚ್ ಸರ್ಕಾರದ ಬೊಕ್ಕಸಕ್ಕೆ ವರ್ಷದಲ್ಲಿ ಎರಡು ಕೋಟಿಗಳಷ್ಟು ಲಾಭ. ಇದು ಸುಮಾರು ನಲುವತ್ತು ವರ್ಷಗಳವರೆಗೂ ಮುಂದುವರಿಯಿತು.
ಆ ಕಾಲದಲ್ಲಿ ಡಚ್ ಸರ್ಕಾರದ ಬಜೆಟ್ನ ಮೂರನೇ ಒಂದು ಭಾಗದಷ್ಟು ಮೊತ್ತಕ್ಕೆ ಈ ಲಾಭದ ಮೊತ್ತ ಸಮನಾಗಿತ್ತು. ಹೀಗೆ ನಿಯಮವು ಡಚ್ಚರಿಗೆ ನಿರೀಕ್ಷಿತ ಲಾಭವನ್ನು ಒದಗಿಸಿಕೊಟ್ಟಿತು. ಆದರೆ ಇಂಡೋನೇಷ್ಯಾದ ಕೃಷಿಕರನ್ನು ಶೋಷಣೆಗೀಡುಮಾಡಿತು. ಈ ನೂತನ ವ್ಯವಸ್ಥೆಯಿಂದ ಕೃಷಿಕರಿಗೆ ಲಾಭ ದೊರಕುತ್ತದೆ ಎಂಬ ನಂಬಿಕೆಯನ್ನು ಡಚ್ಚರು ಹುಟ್ಟುಹಾಕಿದ್ದರು. ಆ ಬಗೆಯ ನಿರೀಕ್ಷೆ ಕೃಷಿಕರಲ್ಲಿಯೂ ಇತ್ತು. ಆದರೆ ಇದು ಕೃಷಿಕರ ಬದುಕನ್ನು ಕಠಿಣಗೊಳಿಸಿತು. ಅವರ ಪಾಲಿಗೆ ಈ ವ್ಯವಸ್ಥೆ ಹೊರೆಯಾಗಿ ಪರಿಣಮಿಸಿತು. ಆದರೆ ಕೆಲವಾರು ಪ್ರಯೋಜನಗಳೂ ಲಭಿಸಿದವು. ಗ್ರಾಮಮಟ್ಟದಲ್ಲಿ ಕೃಷಿ ಉತ್ಪಾದನೆ ಹೆಚ್ಚಾಯಿತು. ಕೃಷಿಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಅರುವತ್ತು ಲಕ್ಷಗಳಿಂದ ತೊಂಬತ್ತೈದು ಲಕ್ಷಗಳಿಗೆ ಏರಿತು. ರಫ್ತು ಮಾಡುವುದಕ್ಕೆಂದು ನಿಗದಿಪಡಿಸಲಾಗಿದ್ದ ವಸ್ತುಗಳನ್ನು ಹೆಚ್ಚಿಸಲಾಯಿತು. ಮೊದಲಿಗೆ ಇಂಡಿಗೋ ಹೆಸರಿನ ನೀಲಿ ಬಣ್ಣದ ಬೆಳೆಗಳು ಮತ್ತು ಸಕ್ಕರೆಯನ್ನು ಮಾತ್ರವೇ ರಫ್ತು ಮಾಡುವ ಸರಕುಗಳಾಗಿ ನಿಗದಿಗೊಳಿಸಲಾಗಿತ್ತು. ನಂತರ ತಂಬಾಕು, ಟೀ, ಕಾಫಿ ಮತ್ತು ಕಾಳುಮೆಣಸುಗಳನ್ನು ಸೇರಿಸಿಕೊಳ್ಳಲಾಯಿತು. ಇದರಿಂದಾಗಿ ಲಾಭ ಅನುಭವಿಸಿದ್ದು ಡಚ್ ಸರ್ಕಾರ. ಹೆಚ್ಚುವರಿ ಕೆಲಸದ ಒತ್ತಡ ಬಿದ್ದದ್ದು ಇಂಡೋನೇಷ್ಯಾದ ಕೃಷಿಕರ ಮೇಲೆ. ಈ ವ್ಯವಸ್ಥೆಯಿಂದಾಗಿ ಗ್ರಾಮೀಣ ಭಾಗದ ಜನರ ಮಧ್ಯೆ ಸಾಮಾಜಿಕ ಮತ್ತು ಆರ್ಥಿಕ ಅಂತರ ಹೆಚ್ಚಾಯಿತು. ಬಡವರು ಶ್ರೀಮಂತರು ಎನ್ನುವ ವರ್ಗಾಧಾರಿತವಾದ ಸಮಾಜ ವ್ಯವಸ್ಥೆ ರೂಪುಗೊಳ್ಳುವಂತಾಯಿತು.
ವಿಸ್ತಾರವಾದ ಭೂಮಿಯನ್ನು ಹೊಂದಿದ್ದ ಬಲಿಷ್ಠ ರೈತರು, ಗ್ರಾಮಗಳಲ್ಲಿ ಗಣ್ಯರಾಗಿದ್ದವರು ಜಾಣತನದಿಂದ ಈ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡರು. ಕೃಷಿ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರಾಟ ವ್ಯವಸ್ಥೆಗೆ ಒಳಪಡಿಸಿದಾಗಲೂ ಡಚ್ ಈಸ್ಟ್ ಇಂಡಿಯಾ ಕಂಪೆನಿಯು ಅತಿ ಬುದ್ಧಿವಂತಿಕೆ ತೋರಿತು. ಇಂಡೋನೇಷ್ಯಾ ಮತ್ತು ಉಳಿದ ರಾಷ್ಟ್ರಗಳ ವ್ಯಾಪಾರಿಗಳ ನಡುವಿನ ಮಧ್ಯವರ್ತಿಯಂತೆ ನಡೆದುಕೊಂಡಿತು. ಈ ಮೂಲಕವೂ ಲಾಭ ಅದರ ಖಜಾನೆಯನ್ನು ಸೇರುವಂತಾಯಿತು. ಇದರಿಂದಾಗಿ ಇಂಡೋನೇಷ್ಯಾ ಮತ್ತಷ್ಟು ದಬ್ಬಾಳಿಕೆಗೆ ಸಿಲುಕಿಕೊಂಡಿತು ಎನ್ನುವುದು ನಿಜ. ಹಣಕಾಸಿನ ನೆಲೆಯಲ್ಲಿ ಇಂಡೋನೇಷ್ಯಾದ ಜನರು ಬೆಳೆಯುವುದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸದ ಡಚ್ ಸರ್ಕಾರ, ಚೀನಾದಿಂದ ಇಂಡೋನೇಷ್ಯಾಕ್ಕೆ ವಲಸೆ ಬಂದವರಿಗೆ, ಲೇವಾದೇವಿದಾರರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಲಾಭಕ್ಕೆ ಅನುವು ಮಾಡಿಕೊಟ್ಟಿತು. ಕೃಷಿಕರಿಂದ ಕೃಷಿ ಉತ್ಪನ್ನಗಳನ್ನು ಪಡೆದು ಅದನ್ನು ಡಚ್ ಸರ್ಕಾರಕ್ಕೆ ನೀಡುವ ಜವಾಬ್ದಾರಿಯನ್ನು ರಾಜಪ್ರತಿನಿಧಿ ನಿರ್ವಹಿಸಬೇಕಾಗಿತ್ತು.
ಹೀಗೆ ರಾಜಪ್ರತಿನಿಧಿಗಳಾಗಿ ನೇಮಕಗೊಂಡವರು ಕೃಷಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ತಮಗೆ ಡಚ್ ಸರ್ಕಾರದ ಬೆಂಬಲವಿದೆ ಎಂಬ ಅಹಂಕಾರಕ್ಕೆ ಒಳಗಾದ ಈ ರಾಜಪ್ರತಿನಿಧಿಗಳು ಬೇಕಾಬಿಟ್ಟಿಯಾಗಿ ನಡೆದುಕೊಳ್ಳಲಾರಂಭಿಸಿದ್ದರು. ಇಂಡೋನೇಷ್ಯಾದ ಕೃಷಿ ಕ್ಷೇತ್ರವನ್ನು ಮೂಲವಾಗಿರಿಸಿಕೊಂಡು ಡಚ್ಚರು ಇಂಡೋನೇಷ್ಯಾವನ್ನು ಶೋಷಣೆಗೆ ಗುರಿಮಾಡಿದ ಪರಿ ಯಾವ ರೀತಿಯದ್ದು ಎನ್ನುವುದಕ್ಕೆ ಇದು ಒಂದು ಪ್ರಮುಖ ನಿದರ್ಶನವಾಗಿದೆ. 1949ರಲ್ಲಿ ಸ್ವಾತಂತ್ರ್ಯ ಪಡೆಯುವ ಮೂಲಕ ಇಂಡೋನೇಷ್ಯಾ ನೆದರ್ಲ್ಯಾಂಡ್ನ ಕಪಿಮುಷ್ಟಿಯಿಂದ ಪಾರಾಯಿತು.
ಯುವಜನತೆಯನ್ನು ಹೊಂದಿರುವ ವಿಚಾರದಲ್ಲಿ ಇಂಡೋನೇಷ್ಯಾ ಭಾರತವನ್ನೇ ಹೋಲುತ್ತದೆ. ಯುವ ರಾಷ್ಟ್ರವಾಗಿ ಇದನ್ನು ಗುರುತಿಸಬಹುದು. ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ 165 ಮಿಲಿಯನ್ ಜನರು ಇಲ್ಲಿದ್ದಾರೆ. ಇಲ್ಲಿ ವೃದ್ಧರ ಸಂಖ್ಯೆ ಕಡಿಮೆ. ಅರುವತ್ತು ವರ್ಷ ದಾಟಿದವರ ಸಂಖ್ಯೆ ಕೇವಲ ಎಂಟು ಶೇಕಡಾ ಮಾತ್ರ. 1964ರ ವೇಳೆಗೆ ಇಂಡೋನೇಷ್ಯಾದಲ್ಲಿ ಕುಟುಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೂ ಸಹ ಇಂಡೋನೇಷ್ಯಾದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಯುವಜನತೆ ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಭಾಷೆಯ ದೃಷ್ಟಿಯಿಂದ ಸಮೃದ್ಧವಾಗಿರುವ ದೇಶ ಇಂಡೋನೇಷ್ಯಾ. ಅಲ್ಲಿರುವ ಭಾಷೆಗಳ ಸಂಖ್ಯೆಯನ್ನು ಕೇಳಿದರೆ ಆಶ್ಚರ್ಯ ಆಗುವುದು ಖಚಿತ. ಏಳುನೂರಕ್ಕೂ ಹೆಚ್ಚು ಭಾಷೆಗಳು, ಉಪಭಾಷೆಗಳು ಇಲ್ಲಿವೆ. ಬಹುಸಾ ಎನ್ನುವುದು ಇಂಡೋನೇಷ್ಯಾದ ಅಧಿಕೃತ ಭಾಷೆಯಾಗಿದೆ. ಪಪುವಾ ಎನ್ನುವುದು ಇಂಡೋನೇಷ್ಯಾದ ಪ್ರಮುಖ ಪ್ರಾಂತ್ಯ. ಈ ಒಂದೇ ಪ್ರಾಂತ್ಯದಲ್ಲಿ ಸುಮಾರು ಇನ್ನೂರ ಎಪ್ಪತ್ತಕ್ಕೂ ಹೆಚ್ಚು ಉಪಭಾಷೆಗಳಿವೆ. ಇಂಡೋನೇಷ್ಯಾದಲ್ಲಿ ಮುಸ್ಲಿಂ ಜನರು ಬಹುಸಂಖ್ಯಾತರಾಗಿದ್ದಾರೆ. ಅಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ 242 ಮಿಲಿಯನ್ಗಳಷ್ಟು ಜನರು ಇಸ್ಲಾಮಿಕ್ ಧರ್ಮಕ್ಕೆ ಸೇರಿದವರಾಗಿದ್ದಾರೆ.
ಮುಸ್ಲಿಂ ಬಾಹುಳ್ಯವಿರುವ ಇಂಡೋನೇಷ್ಯಾದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯಿದೆ. ಇಂಡೋನೇಷ್ಯಾದ ಕಲೆ ಸಂಸ್ಕೃತಿಗಳು ಅಲ್ಲಿಯ ಪರಂಪರೆ ಮತ್ತು ಧರ್ಮದಿಂದ ಪ್ರಭಾವಿತವಾಗಿರುವಂತೆಯೇ ಪಾಶ್ಚಿಮಾತ್ಯ ಚಿಂತನೆಗಳ ಪ್ರಭಾವಕ್ಕೂ ಒಳಗಾಗಿದೆ. ಬದುಕನ್ನು ಸುಸಂಗತವಾಗಿ ನಡೆಸುವುದಕ್ಕೆ ಅನುಕೂಲವಾದ ತತ್ವ ಬೋಧನೆಗೆ ಇಂಡೋನೇಷಿಯನ್ ಸಂಸ್ಕೃತಿಯಲ್ಲಿ ಪ್ರಾಧಾನ್ಯತೆಯಿದೆ. ಈ ಮಾದರಿಯ ಕೆಲವು ಪರಿಕಲ್ಪನೆಗಳು ಅಲ್ಲಿಯ ಪ್ರಾಚೀನ ಸಮಾಜ ವ್ಯವಸ್ಥೆಯಲ್ಲಿ ಕಂಡುಬರುತ್ತವೆ.
ಗೋಟಾಂಗ್ ರಾಯಾಂಗ್ ಎನ್ನುವ ಪರಿಕಲ್ಪನೆಯು ಪರಸ್ಪರ ಸಹಾಯದ ಮೂಲಕ ಜೀವನವನ್ನು ಮುನ್ನಡೆಸುವ ಬಗೆಯನ್ನು ತಿಳಿಸಿಕೊಡುತ್ತದೆ. ಜೀವನದಲ್ಲಿ ಧೈರ್ಯಗುಂದಿದಾಗ ಮತ್ತೆ ಜೀವನೋತ್ಸಾಹ ನೀಡುವ ಸಮಾಲೋಚನೆಗಳನ್ನು ಮುಸ್ಯವರಾಹ್ ಮತ್ತು ಮುಫಕತ್ ಪರಿಕಲ್ಪನೆಗಳು ಒಳಗೊಂಡಿವೆ. ಇಂಡೋನೇಷ್ಯಾದ ಕಲೆಗಳಲ್ಲಿ ಪ್ರಮುಖವಾಗಿ ಚಿತ್ರಕಲೆ, ಮರದ ಕೆತ್ತನೆ, ನೃತ್ಯ, ಸಂಗೀತ, ಬೊಂಬೆಯಾಟ ಇವುಗಳನ್ನು ಹೆಸರಿಸಬಹುದು. ಇಸ್ಲಾಮಿಕ್ ಕಟ್ಟುಪಾಡುಗಳು ಕಲೆಗಳ ವಿಚಾರದಲ್ಲಿ ಕೆಲವು ವಿಧಿನಿಷೇಧಗಳನ್ನು ಒಳಗೊಂಡಿದೆ. ಮಹಿಳೆಯರು ನೃತ್ಯದಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಮಾನವರು ಮತ್ತು ಪ್ರಾಣಿಗಳ ಚಿತ್ರಣಗಳನ್ನು ಕೆಲವು ಕಲೆಗಳಲ್ಲಿ ತರುವಂತಿಲ್ಲ. ಇಂಡೋನೇಷ್ಯಾ ದೇಶದ ಮಧ್ಯ ಭಾಗದಲ್ಲಿ ಬೊರೊಬುದೂರ್ ಹೆಸರಿನ ಬೌದ್ಧ ದೇವಾಲಯವಿದೆ. ಇದು ನಿರ್ಮಿಸಲ್ಪಟ್ಟಿರುವುದು ಒಂಭತ್ತನೇ ಶತಮಾನದಲ್ಲಿ. ವಿಶ್ವದ ಅತೀ ದೊಡ್ಡ ಬೌದ್ಧ ದೇವಾಲಯವೆಂಬ ಹೆಗ್ಗಳಿಕೆ ಇದಕ್ಕಿದೆ. ಇದರ ಗೋಡೆಗಳ ಮೇಲೆ ಸುಮಾರು 1460 ಪರಿಹಾರ ಫಲಕಗಳಿವೆ. ಇಷ್ಟು ಅಪಾರ ಪ್ರಮಾಣದ ಪರಿಹಾರ ಫಲಕಗಳನ್ನು ಹೊಂದಿರುವ ಏಕೈಕ ಬೌದ್ಧ ದೇವಾಲಯವಾಗಿಯೂ ಇದು ಗುರುತಿಸಲ್ಪಟ್ಟಿದೆ. ಐನೂರಕ್ಕಿಂತಲೂ ಹೆಚ್ಚು ಬುದ್ಧ ಪ್ರತಿಮೆಗಳಿವೆ ಈ ದೇವಾಲಯದಲ್ಲಿ.
ವಿಶ್ವದ ಅತೀ ದೊಡ್ಡ ಹೂವು ಇಂಡೋನೇಷ್ಯಾದಲ್ಲಿ ಕಂಡುಬರುತ್ತದೆ. ರಾಫ್ಲೆಸಿಯಾ ಅರ್ನಾಲ್ಡಿಯಾ ಹೆಸರಿನ ಹೂವು ಪ್ರಪಂಚದ ಅತೀ ದೈತ್ಯ ಹೂವು ಎನಿಸಿಕೊಂಡಿದೆ. ಇದು ವಿಪರೀತ ದುರ್ವಾಸನೆಯಿಂದ ಕೂಡಿದ್ದು, ಈ ಕಾರಣದಿಂದಲೇ ‘ಶವದ ಲಿಲಿ’ ಎಂದು ಇದನ್ನು ಕರೆಯಲಾಗುತ್ತದೆ. ಈ ಬೃಹತ್ ಹೂವು ಇಂಡೋನೇಷ್ಯಾದ ಮಳೆಕಾಡುಗಳಲ್ಲಿ ಬೆಳೆಯುತ್ತದೆ. ಇದರಿಂದ ಹೊರಹೊಮ್ಮುವ ದುರ್ಗಂಧದ ಮೂಲಕವೇ ಇದು ಕಾಡಿನ ಯಾವ ಭಾಗದಲ್ಲಿದೆ ಎನ್ನುವುದನ್ನು ಪತ್ತೆಹಚ್ಚಬಹುದು. ಮೊಗ್ಗು ಹೂವಾಗಿ ಅರಳಿದ ಬಳಿಕ ಹೆಚ್ಚು ದಿನಗಳ ಕಾಲ ಇದು ಇರುವುದಿಲ್ಲ. ಕಿತ್ತಳೆ, ಕೆಂಪು ಬಣ್ಣದಲ್ಲಿರುವ ಹೂವು ಐದು ದಳಗಳನ್ನು ಹೊಂದಿರುತ್ತದೆ. ಬಲಿಷ್ಠವಾದ ಕಾಂಡವಾಗಲಿ, ದಟ್ಟ ಎಲೆಗಳನ್ನಾಗಲಿ ಈ ಹೂವಿನ ಗಿಡ ಹೊಂದಿಲ್ಲ. ಮೂರು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಇದರ ತೂಕ ಸುಮಾರು ಹತ್ತು ಕಿಲೋಗ್ರಾಮ್ಗಳಷ್ಟಿರುತ್ತದೆ. ಈ ಹೂವನ್ನು ಮೊದಲಿಗೆ ಕಂಡುಹಿಡಿದವರು ಇಟಲಿಯ ಸಸ್ಯಶಾಸ್ತ್ರಜ್ಞರು. ಒರೊರ್ಡೊ ಬೆಕಾರಿ ಅವರು ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಈ ಹೂವನ್ನು ಮಧ್ಯ ಸುಮಾತ್ರಾ ದ್ವೀಪದಲ್ಲಿ ಮೊದಲಿಗೆ ಪತ್ತೆಹಚ್ಚಿದ್ದಾರೆ.
ಇಂಡೋನೇಷ್ಯಾವು ನೂರಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಜೀವಿಗಳಿಗೆ ನೆಲೆಯಾಗಿದೆ. ಏಷ್ಯಾದ ಕಳೆದುಹೋದ ಜಗತ್ತು ಎನ್ನುವ ವಿಶೇಷ ಹೆಸರನ್ನು ಹೊಂದಿದೆ ಇಂಡೋನೇಷ್ಯಾ. ಬೇರೆ ಕಡೆಗಳಲ್ಲಿ ಕಂಡುಬರದ, ಈಗಾಗಲೇ ಅಳಿದುಹೋದ ಅಪರೂಪದ ಜೀವಿಗಳು ಇಲ್ಲಿ ಕಂಡುಬರುತ್ತವೆ. ಸುಮಾತ್ರನ್ ಘೇಂಡಾಮೃಗ, ಒರಾಂಗ್-ಉಟಾನ್ಸ್, ಅನೋವಾ, ಸುಮಾತ್ರಾನ್ ಹುಲಿ, ಸಮುದ್ರ ಆಮೆಗಳು, ಟಾರ್ಸಿಯಸ್ ಟಾರ್ಸಿಯರ್, ಕೊಮೊಡೊ ಡ್ರ್ಯಾಗನ್, ಮೆರಾಕ್ ಮೊದಲಾದವು ಇಲ್ಲಿ ಕಾಣಸಿಗುವ, ಬೇರೆಲ್ಲೂ ಹೆಚ್ಚಾಗಿ ಕಾಣಸಿಗದ ಜೀವಿಗಳು. ಇವುಗಳಲ್ಲಿ ಅನೋವಾ ಎನ್ನುವುದು ವಿಶ್ವದ ಅತ್ಯಂತ ಚಿಕ್ಕ ಎಮ್ಮೆ ಎನಿಸಿಕೊಂಡಿದೆ. ಇಡೀ ಭೂಮಿಯಲ್ಲಿ ಇಂಡೋನೇಷ್ಯಾದ ಪಾಲು ಕೇವಲ ಒಂದು ಶೇಕಡಾ ಮಾತ್ರ. ಆದರೆ ಪ್ರಪಂಚದ ಸಸ್ತನಿಗಳಲ್ಲಿ ಹನ್ನೆರಡು ಶೇಕಡಾದಷ್ಟು ಸಸ್ತನಿಗಳಿರುವುದು ಇಲ್ಲಿಯೇ. ಜಗತ್ತಿನ ಪಕ್ಷಿಗಳಲ್ಲಿ ಹದಿನೇಳು ಶೇಕಡಾದಷ್ಟು ಪಕ್ಷಿಗಳು, ಹತ್ತು ಶೇಕಡಾದಷ್ಟು ಸಸ್ಯ ಪ್ರಭೇದಗಳು ಇಲ್ಲಿವೆ. ಜಗತ್ತಿನ ಜೀವ ವೈವಿಧ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಂಡೋನೇಷ್ಯಾ ಪ್ರಮುಖ ಪಾತ್ರ ವಹಿಸಿದೆ. ಕೊಮೊಡೊ ಡ್ರ್ಯಾಗನ್ ಎನ್ನುವುದು ವಿಶ್ವದ ಅತೀ ದೊಡ್ಡ ಹಲ್ಲಿ ಪ್ರಭೇದ ಎನಿಸಿಕೊಂಡಿದೆ. ಸುಮಾರು ಮೂರು ಮೀಟರ್ಗಳಷ್ಟು ಉದ್ದವಿರುವ ಇದು ನೋಡುವುದಕ್ಕೆ ಭೀಕರವಾಗಿ ಕಾಣಿಸುತ್ತದೆ. ಇದು ಭೂಮಿಯ ಬೇರೆ ಯಾವ ಪ್ರದೇಶದಲ್ಲಿಯೂ ಕಾಣಸಿಗುವುದಿಲ್ಲ. ಇದು ಕಂಡುಬರುವುದು ಇಂಡೋನೇಷ್ಯಾದ ಐದು ದ್ವೀಪಗಳಲ್ಲಿ ಮಾತ್ರ. ಕೊಮೊಡೊ, ಗಿಲಿ, ಮೊಟಾಂಗ್, ಫ್ಲೋರ್ಸ್ ಮತ್ತು ಪಾದರ್ ಎಂಬ ದ್ವೀಪಗಳಲ್ಲಿ ಈ ದೈತ್ಯ ಹಲ್ಲಿ ಪ್ರಭೇದ ಅಸ್ತಿತ್ವ ಉಳಿಸಿಕೊಂಡಿದೆ. ವಿಷಕಾರಿಯಾಗಿರುವ ಈ ಹಲ್ಲಿ ತನಗಿಂತ ದೊಡ್ಡ ಗಾತ್ರದ ಜೀವಿಗಳನ್ನೂ ಸಹ ಬೇಟೆಯಾಡಿ ಕೊಂದು ತಿನ್ನುತ್ತದೆ.
ಒರಾಂಗುಟಾನ್ ಎನ್ನುವುದು ದೈತ್ಯ ಮಂಗ ಪ್ರಭೇದದ ಜೀವಿಗಳಾಗಿದ್ದು, ನೋಡುವುದಕ್ಕೆ ಹೆಚ್ಚು ಕಡಿಮೆ ಚಿಂಪಾಂಜಿಗಳಂತೆಯೇ ಇರುತ್ತವೆ. ಒರಾಂಗ್ ಮತ್ತು ಉಟಾನ್ ಎಂಬೆರಡು ಪದಗಳು ಸೇರಿಕೊಂಡು ಈ ಪದ ರೂಪುಗೊಂಡಿದೆ. ಒರಾಂಗ್ ಎಂದರೆ ಮನುಷ್ಯ ಎಂಬ ಅರ್ಥವಿದ್ದು, ಉಟಾನ್ ಎಂದರೆ ಕಾಡು. ಕಾಡಿನ ಮನುಷ್ಯ ಎಂಬ ಅರ್ಥವನ್ನು ಈ ಪದ ಕೊಡುತ್ತದೆ. ಈ ಒರಾಂಗುಟಾನ್ಗಳು ಮಲೇಷ್ಯಾ ದೇಶವನ್ನು ಬಿಟ್ಟರೆ ಕಾಣಸಿಗುವುದು ಇಂಡೋನೇಷ್ಯಾದ ಕಾಡುಗಳಲ್ಲಿ ಮಾತ್ರ. ಇಂಡೋನೇಷ್ಯಾದ ಲಾವಾಂಗ್ ಗ್ರಾಮದ ಸಮೀಪದಲ್ಲಿ ಗುನುಂಗ್ ಲ್ಯೂಸರ್ ರಾಷ್ಟ್ರೀಯ ಉದ್ಯಾನವನವಿದೆ. ಇಲ್ಲಿ ಒರಾಂಗುಟಾನ್ಗಳನ್ನು ಸಂರಕ್ಷಿಸಲಾಗಿದೆ.
ಅತೀ ಉದ್ದದ ಕರಾವಳಿಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇಂಡೋನೇಷ್ಯಾಕ್ಕೆ ಎರಡನೇ ಸ್ಥಾನ. ಇದರ ಕರಾವಳಿಯು 54,716 ಕಿಲೋಮೀಟರ್ಗಳಷ್ಟು ಉದ್ದಕ್ಕೆ ವಿಸ್ತರಿಸಿಕೊಂಡಿದೆ. ಹವಳದ ದ್ವೀಪ, ತಾಳೆ ಮರದ ಸಾಲುಗಳನ್ನೊಳಗೊಂಡ ಇಂಡೋನೇಷಿಯನ್ ಕರಾವಳಿಯು ಆಕರ್ಷಕವಾಗಿದೆ. ಇಂಡೋನೇಷ್ಯಾದ ಕರಾವಳಿಯು ಇಷ್ಟು ಉದ್ದವಾಗಿರುವುದಕ್ಕೆ ಪ್ರಬಲವಾದ ಕಾರಣವಿದೆ. ಹದಿನೇಳು ಸಾವಿರಕ್ಕೂ ಹೆಚ್ಚು ದ್ವೀಪಗಳು ಇಲ್ಲಿವೆ. ಈ ಕಾರಣದಿಂದಲೇ ಸುದೀರ್ಘವಾದ ಕರಾವಳಿಯನ್ನು ಹೊಂದುವಂತಾಗಿದೆ ಇಂಡೋನೇಷ್ಯಾ. ಭೂಮಿಯ ಮೇಲಿನ ಅತೀ ಎತ್ತರದ ದ್ವೀಪ ಶಿಖರ ಕಂಡುಬರುವುದು ಇಂಡೋನೇಷ್ಯಾದಲ್ಲಿ. ಇಲ್ಲಿಯ ಪಪುವಾ ಪ್ರಾಂತ್ಯದಲ್ಲಿ ಜಯ ವಿಜಯ ಹೆಸರಿನ ಪರ್ವತವಿದೆ. ಈ ಪರ್ವತದಲ್ಲಿ ಕಂಡುಬರುವ ಪನ್ಕಾಕ್ ಜಯ ಎಂಬ ಶಿಖರವು ವಿಶ್ವದ ಅತ್ಯಂತ ಎತ್ತರದ ದ್ವೀಪ ಶಿಖರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮುದ್ರ ಮಟ್ಟದಿಂದ 4884 ಮೀಟರ್ಗಳಷ್ಟು ಎತ್ತರದಲ್ಲಿದೆ ಈ ಶಿಖರ.
ಟೋಬಾ ಸರೋವರದ ಮಧ್ಯಭಾಗದಲ್ಲಿ ಪುಲಾವ್ ಸಮೋಸಿರ್ ಹೆಸರಿನ ದ್ವೀಪವಿದೆ. ಈ ದ್ವೀಪ ಒಂದು ಕಾಲಕ್ಕೆ ನರಭಕ್ಷಕ ದ್ವೀಪವೆಂದು ಗುರುತಿಸಿಕೊಂಡಿತ್ತು. ಪ್ರಾಚೀನ ಕಾಲದಲ್ಲಿ ಇಲ್ಲಿ ಬದುಕುತ್ತಿದ್ದವರು ಬಟಾಕ್ ಹೆಸರಿನ ಬುಡಕಟ್ಟು ಜನರು. ಇವರು ಮನುಷ್ಯರ ಮಾಂಸ ಸೇವನೆಯ ಅಭ್ಯಾಸ ಇಟ್ಟುಕೊಂಡಿದ್ದರು. ಜೊತೆಗೆ ತಲೆಬೇಟೆಯ ವಿಲಕ್ಷಣ ಅಭ್ಯಾಸ ಇವರದ್ದಾಗಿತ್ತು. ಒಬ್ಬ ವ್ಯಕ್ತಿಯ ಕುತ್ತಿಗೆ ಕತ್ತರಿಸಿ ಕೊಂದ ಬಳಿಕ ತಲೆಬುರುಡೆಯನ್ನು ಎತ್ತಿಟ್ಟುಕೊಂಡು ಪ್ರದರ್ಶಿಸುವುದನ್ನು ತಲೆಬೇಟೆ ಎಂದು ಕರೆಯಲಾಗುತ್ತದೆ. ಈ ವಿಚಿತ್ರ ಅಭ್ಯಾಸದ ಮೂಲಕ ಗುರುತಿಸಿಕೊಂಡಿದ್ದರು ಬಟಾಕ್ ಬುಡಕಟ್ಟಿನ ಮಂದಿ. ಇವರು ವಿಪರೀತ ಕ್ರೂರಿಗಳಾಗಿದ್ದರು. ದ್ವೀಪಕ್ಕೆ ಹೊಸದಾಗಿ ಬಂದ ಯಾರ ಮೇಲೂ ದಯೆ ತೋರುತ್ತಿರಲಿಲ್ಲ. ಅವರನ್ನು ಹಿಂಸಾತ್ಮಕವಾಗಿ ಕೊಂದು, ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಿದ್ದರು. ಈಗಲೂ ಸಹ ಇಲ್ಲಿ ಇದೇ ಬುಡಕಟ್ಟಿನ ಜನರು ವಾಸಿಸುತ್ತಿದ್ದಾರೆ. ಅವರು ತಮ್ಮ ಹಿಂದಿನವರ ರೀತಿಯ ಅಭ್ಯಾಸ ಇಟ್ಟುಕೊಂಡಿಲ್ಲ. ಆದರೆ ಅವರು ಪೂರ್ವಜರು ಜನರನ್ನು ಕೊಂದು ಸಂಪಾದಿಸಿದ ತಲೆಬುರುಡೆಗಳು ಈಗಲೂ ಅವರ ಬಳಿಯಿವೆ. ಹಾಗೆಂದು ಅವರಲ್ಲಿ ಕ್ರೂರತೆ ಕಾಣುವುದಿಲ್ಲ. ದ್ವೀಪಕ್ಕೆ ಭೇಟಿ ಕೊಟ್ಟ ಜನರ ಜೊತೆಗೆ ಆತ್ಮೀಯವಾಗಿ ವರ್ತಿಸುತ್ತಾರೆ.
ದೇಶೀಯ ಉಪಗ್ರಹ ವ್ಯವಸ್ಥೆಯನ್ನು ಹೊಂದಿರುವ ಪ್ರಪಂಚದ ಮೊದಲ ಅಭಿವೃದ್ಧಿಶೀಲ ರಾಷ್ಟ್ರ ಎಂಬ ಕೀರ್ತಿ ಇಂಡೋನೇಷ್ಯಾದ್ದು. ಇಪ್ಪತ್ತನೇ ಶತಮಾನದಲ್ಲಿಯೇ ಈ ಯಶಸ್ಸನ್ನು ಮುಡಿಗೇರಿಸಿಕೊಂಡಿದೆ ಈ ದ್ವೀಪ ರಾಷ್ಟ್ರ. 1976ರ ಜುಲೈ 8ರಂದು ಅಂತರಿಕ್ಷವನ್ನು ಸೇರಿದ ಪಾಲಪಾ ಹೆಸರಿನ ಬಾಹ್ಯಾಕಾಶ ನೌಕೆಯು ಇಂಡೋನೇಷ್ಯಾದ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲೆನಿಸಿಕೊಂಡಿದೆ. ತನ್ನದೇ ಆದ ದೇಶೀಯ ಉಪಗ್ರಹ ವ್ಯವಸ್ಥೆಯನ್ನು ನಡೆಸುವ ವಿಶ್ವದ ಮೊದಲ ರಾಷ್ಟ್ರ ಎನಿಸಿಕೊಂಡಿದೆ ಇಂಡೋನೇಷ್ಯಾ.
ಇಂಡೋನೇಷ್ಯಾದ ಧ್ವಜವು ಮೊನಾಕೊದ ಧ್ವಜವನ್ನೇ ಹೋಲುತ್ತದೆ. ಮೇಲ್ಭಾಗದಲ್ಲಿ ಕೆಂಪು ಪಟ್ಟಿ ಮತ್ತು ಕೆಳಭಾಗದಲ್ಲಿ ಬಿಳಿ ಪಟ್ಟಿ ಕಂಡುಬರುತ್ತದೆ. ಅತ್ಯಂತ ಸರಳ ಧ್ವಜವಾಗಿ ಇಂಡೋನೇಷ್ಯಾದ ಧ್ವಜವನ್ನು ಗುರುತಿಸಿಕೊಳ್ಳಬಹುದು. ಮೊನಾಕೊದ ಧ್ವಜಕ್ಕಿಂತ ಇಂಡೋನೇಷ್ಯಾದ ಧ್ವಜವು ಅಗಲವಾಗಿರುತ್ತದೆ. ಪೋಲೆಂಡ್ನ ಧ್ವಜದ ಜೊತೆಗೂ ಇದು ಸಾಮ್ಯತೆಯನ್ನು ಹೊಂದಿದೆ. ಪೋಲೆಂಡ್ ಧ್ವಜದಲ್ಲಿಯೂ ಕೆಂಪು-ಬಿಳಿ ಪಟ್ಟಿಗಳಿವೆ. ಆದರೆ ಕೆಂಪು ಪಟ್ಟಿ ಕೆಳಭಾಗದಲ್ಲಿದ್ದರೆ, ಬಿಳಿ ಪಟ್ಟಿ ಮೇಲ್ಭಾಗದಲ್ಲಿರುತ್ತದೆ.
ಅತೀ ದೊಡ್ಡ ನೂಡಲ್ಸ್ ಪ್ಯಾಕೆಟನ್ನು ತ್ವರಿತಗತಿಯಲ್ಲಿ ತಯಾರಿಸುವ ಮೂಲಕ ಇಂಡೋನೇಷ್ಯಾದ ಆಹಾರ ತಯಾರಿಕಾ ಸಂಸ್ಥೆಯೊಂದು ವಿಶ್ವದಾಖಲೆ ಸೃಷ್ಟಿಸಿದೆ. ಇದು ರೂಪುಗೊಂಡದ್ದು 2005ನೇ ಇಸವಿಯಲ್ಲಿ. ಈ ಸಂಸ್ಥೆ ತಯಾರಿಸಿದ ನೂಡಲ್ಸ್ ಪ್ಯಾಕೆಟ್ 664 ಕಿಲೋಗ್ರಾಮ್ಗಳಷ್ಟು ತೂಕವಿದೆ. ಸಾಮಾನ್ಯ ನೂಡಲ್ಸ್ ಪ್ಯಾಕೆಟ್ಗೆ ಹೋಲಿಸಿದರೆ ಎಂಟು ಸಾವಿರ ಪಟ್ಟು ದೊಡ್ಡದಾಗಿದೆ. ಸಾಮಾನ್ಯವಾಗಿ ಈ ಸಂಸ್ಥೆಯ ಜನಪ್ರಿಯ ನೂಡಲ್ಸ್ನಲ್ಲಿ ಬಳಸಲಾಗಿರುವ ಪದಾರ್ಥಗಳನ್ನೇ ಇದರಲ್ಲಿಯೂ ಬಳಸಲಾಗಿತ್ತು. ಮಸಾಲೆಯ ಸ್ಯಾಚೆಟ್ ಸಹ ಇದರಲ್ಲಿತ್ತು. ಗಿನ್ನಿಸ್ ರೆಕಾರ್ಡ್ ಗೌರವಕ್ಕೆ ಪಾತ್ರವಾದ ಇದು ಕೇವಲ ದಾಖಲೆ ನಿರ್ಮಿಸುವ ಉದ್ದೇಶಕ್ಕೆ ಸೀಮಿತವಾಗದೆ ಮನುಷ್ಯ ಬಳಕೆಗೆ ಯೋಗ್ಯವೆನಿಸುವ ರೀತಿಯಲ್ಲಿತ್ತು.
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿಗಳೂ ಇವೆ; ಭೂಕಂಪಗಳೂ ಸಂಭವಿಸುತ್ತವೆ. ವಿಶ್ವದ ಬೇರೆ ಬೇರೆ ಪ್ರದೇಶಗಳ ಭೂಕಂಪಗಳನ್ನು ಗುರುತಿಸುವ ಅತೀ ದೊಡ್ಡ ಪಟ್ಟಿಯೊಂದಿದ್ದು, ಇದನ್ನು ಪೆಸಿಫಿಕ್ ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ. ಸರ್ಕಮ್ ಪೆಸಿಫಿಕ್ ಬೆಲ್ಟ್ ಎನ್ನುವ ಹೆಸರೂ ಇದಕ್ಕಿದೆ. ಚಿಲಿ, ಜಪಾನ್, ಆಗ್ನೇಯ ಏಷ್ಯಾದ ಬಹುತೇಕ ಪ್ರದೇಶಗಳನ್ನು ಈ ಪಟ್ಟಿ ಒಳಗೊಳ್ಳುತ್ತದೆ. ಪೆಸಿಫಿಕ್ ರಿಂಗ್ ಆಫ್ ಫೈರ್ ಪ್ರಕಾರ ಇಂಡೋನೇಷ್ಯಾವು ಭೂಮಿಯ ಮೇಲಿನ ಅತ್ಯಂತ ಬಿಸಿ ಸ್ಥಳವಾಗಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿ ಆಗಾಗ ಕಾಣಿಸಿಕೊಳ್ಳುವ ಭೂಕಂಪಗಳು ಮತ್ತು ಇಂದಿಗೂ ಸಕ್ರಿಯವಾಗಿರುವ ಜ್ವಾಲಾಮುಖಿಗಳು. ಇಂಡೋನೇಷ್ಯಾದಲ್ಲಿ ಪ್ರತೀ ದಿನ ನಾಲ್ಕು ಸಣ್ಣ ಸಣ್ಣ ಭೂಕಂಪಗಳು ಸಂಭವಿಸುತ್ತವೆ. ಸುಮಾರು ನೂರಾ ಮೂವತ್ತು ಸಕ್ರಿಯ ಜ್ವಾಲಾಮುಖಿಗಳು ಇಲ್ಲಿವೆ. ಭೂಮಿಯ ಮೇಲಿನ ಅತ್ಯಂತ ಸಕ್ರಿಯ ಭೂಕಂಪನ ಪ್ರದೇಶದ ನಡುವೆ ಇದೆ ಇಂಡೋನೇಷ್ಯಾ. ಇಂಡೋನೇಷ್ಯಾದ ಟೋಬಾ ಸರೋವರವು ನೈಸರ್ಗಿಕ ಜ್ವಾಲಾಮುಖಿ ಸರೋವರವಾಗಿದೆ. ಉತ್ತರ ಸುಮಾತ್ರಾದ ಸೂಪರ್ ಜ್ವಾಲಾಮುಖಿಯಲ್ಲಿ ಕಂಡುಬರುವ ಇದು ವಿಶ್ವದ ಅತೀ ದೊಡ್ಡ ನೈಸರ್ಗಿಕ ಜ್ವಾಲಾಮುಖಿ ಸರೋವರ ಎನಿಸಿಕೊಂಡಿದೆ. ವಿಶಾಲವಾಗಿರುವ ಸರೋವರವು ನೂರು ಕಿಲೋಮೀಟರ್ ಉದ್ದ ಮತ್ತು ಮೂವತ್ತು ಕಿಲೋಮೀಟರ್ ಅಗಲವಿದೆ. ಐನೂರು ಮೀಟರ್ಗಳಷ್ಟು ಆಳವಾಗಿದೆ. ಈ ಸರೋವರ ಸುಮಾರು ಏಳು ಸಾವಿರ ವರ್ಷಗಳಷ್ಟು ಹಿಂದೆ ಭಯಂಕರವಾದ ಜ್ವಾಲಾಮುಖಿ ಸ್ಫೋಟದಿಂದ ರೂಪುಗೊಂಡಿದೆ. ಈ ಸ್ಫೋಟವು ಜಗತ್ತು ಕಂಡ ಭೀಕರ ಸ್ಫೋಟವಾಗಿದ್ದು, ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳುವಂತಾಗಿತ್ತು.
ಅತೀ ದೊಡ್ಡ ಆಧುನಿಕ ಜ್ವಾಲಾಮುಖಿಯ ಸ್ಫೋಟವನ್ನು ಕಂಡ ಪ್ರಪಂಚದ ರಾಷ್ಟ್ರಗಳಲ್ಲಿ ಇಂಡೋನೇಷ್ಯಾವೂ ಒಂದಾಗಿದೆ. ವಿಶ್ವದಲ್ಲಿ ಅತೀ ಹೆಚ್ಚು ಜ್ವಾಲಾಮುಖಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಇಂಡೋನೇಷ್ಯಾಕ್ಕೆ ಮೂರನೇ ಸ್ಥಾನ. ಜಾವಾ ಮತ್ತು ಸುಮಾತ್ರಾ ಇವುಗಳು ಇಂಡೋನೇಷ್ಯಾದ ಪ್ರಮುಖ ದ್ವೀಪಗಳು. ಇವುಗಳ ಮಧ್ಯೆ ಪ್ರಸಿದ್ಧ ಜ್ವಾಲಾಮುಖಿ ದ್ವೀಪವೊಂದಿದ್ದು, ಕ್ರಾಕಟೋವಾ ಎನ್ನುವುದು ಅದರ ಹೆಸರು. ಇಲ್ಲಿ 1883ರಲ್ಲಿ ದೊಡ್ಡ ಜ್ವಾಲಾಮುಖಿಯೊಂದು ಸ್ಫೋಟಿಸಿತು. ಈ ಜ್ವಾಲಾಮುಖಿಯ ರೌದ್ರತೆ ಹೇಗಿತ್ತೆಂದರೆ, ಎರಡು ದೈತ್ಯಾಕಾರದ ಸುನಾಮಿಗಳನ್ನೂ ಅದು ಮೀರಿಸುವಂತಿತ್ತು ಎನ್ನುವುದು ತಜ್ಞರ ಅಭಿಪ್ರಾಯ. ಈ ಸ್ಫೋಟದಿಂದಾಗಿ ಮೂವತ್ತಾರು ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ನೂರಾ ಅರುವತ್ತೈದು ಹಳ್ಳಿಗಳು ನಾಶಗೊಂಡವು. ಸ್ಫೋಟದ ಸಂದರ್ಭದಲ್ಲಿ ಕೇಳಿಬಂದ ದೊಡ್ಡ ಧ್ವನಿಯು ಇದುವರೆಗೆ ಕೇಳಲ್ಪಟ್ಟ ಭೀಕರ ಧ್ವನಿ ಎಂಬ ಪರಿಗಣನೆಗೆ ಒಳಗಾಗಿದೆ. ಈ ಧ್ವನಿ 4653 ಕಿಲೋಮೀಟರ್ಗಳಷ್ಟು ದೂರಕ್ಕೂ ವ್ಯಾಪಿಸಿತ್ತಂತೆ. ಭೂಮಿಯ ಮೇಲ್ಮೈಯ ಹದಿಮೂರನೇ ಒಂದಕ್ಕಿಂತ ಹೆಚ್ಚು ಭಾಗವನ್ನೂ ಆಕ್ರಮಿಸಿತ್ತಂತೆ. ಸ್ಫೋಟದ ಬೂದಿ ಇಂಡೋನೇಷ್ಯಾದ ಉತ್ತರ ಭಾಗಕ್ಕಿರುವ ಸುಮಾರು 840 ಕಿಲೋಮೀಟರ್ಗಳಷ್ಟು ದೂರ ಸಿಂಗಾಪುರಕ್ಕೆ ಹೋಗಿಬಿದ್ದಿತ್ತು. ಈ ಎಲ್ಲಾ ಸಂಗತಿಗಳು ಈ ಜ್ವಾಲಾಮುಖಿ ಅದೆಷ್ಟರಮಟ್ಟಿನ ಭೀಕರತೆಯನ್ನು ಹೊಂದಿತ್ತು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಇಂಡೋನೇಷ್ಯಾದಲ್ಲಿ ಜನಸಂಖ್ಯೆ ಅಧಿಕವಾಗಿದೆ. ಆದರೆ ಭೂಪ್ರದೇಶ ವಿಸ್ತಾರವಾಗಿಯೇನೂ ಇಲ್ಲ. ಇದರಿಂದ ಜನದಟ್ಟಣೆ ಅಧಿಕ. ಭೂಕಂಪ, ಜ್ವಾಲಾಮುಖಿ ಮೊದಲಾದ ಸಮಸ್ಯೆಗಳೇನೇ ಇದ್ದರೂ ಅದರ ಮಧ್ಯೆಯೇ ಅಪಾಯವನ್ನು ಸದಾ ನಿರೀಕ್ಷಿಸುತ್ತಾ ಬದುಕಬೇಕಾದದ್ದು ಇಲ್ಲಿಯ ಜನರ ಅನಿವಾರ್ಯತೆಯಾಗಿದೆ.

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.