ಭಾರತ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆದಿಶೇಷರನ್ನು ಆಯ್ಕೆ ಮಾಡಲಾಗಿತ್ತು. ಆ ದಿನಗಳಲ್ಲಿ ಹೆಚ್ಚು ಕಡಿಮೆ ತಂಡದ ಸದಸ್ಯರೆಲ್ಲಾ ಬೊಂಬಾಯಿನವರಾಗಿದ್ದರು. ಬೇರೆ ರಾಜ್ಯಗಳಿಂದ ಒಬ್ಬರೋ ಇಬ್ಬರನ್ನೋ ಆಯ್ಕೆ ಮಾಡುತ್ತಿದ್ದರು. ಆಗ ತಂಡದಲ್ಲಿ ತಾರತಮ್ಯ ಮತ್ತು ಭೇದ ಭಾವನೆಗಳಿದ್ದು ಎಷ್ಟೋಸಲ ಬೇರೆ ರಾಜ್ಯದವರು ಟೀಮಿನ ಜೊತೆಗೆ ಪ್ರವಾಸಕ್ಕೆ ಹೋಗಲು ಹಿಂಜರಿಯುತ್ತಿದ್ದರು. ಈ ಕಾರಣದಿಂದ ಮದರಾಸಿನ ಗೋಪಿನಾಥ್, ಹೈದರಾಬಾದಿನ ಘುಲಾಮ್ ಮೊಹಮ್ಮದ್ ತಂಡದ ಜೊತೆ ಹೋಗಲು ನಿರಾಕರಿಸಿದರು ಎನ್ನಲಾಗಿದೆ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಐವತ್ತರ ದಶಕದ ಕ್ರಿಕೆಟ್‌ನ ಧೀಮಂತರ ಕುರಿತ ಬರಹ ನಿಮ್ಮ ಓದಿಗೆ
ಕರ್ನಾಟಕ ರಾಜ್ಯವನ್ನು 1956ರ ಮುಂಚೆ, ಮೈಸೂರುರಾಜ್ಯ ಎಂದು ಕರೆಯುತ್ತಿದ್ದರು. ಒಡೆಯರ್ ಆಳ್ವಿಕೆಯಲ್ಲಿದ್ದ ಮೈಸೂರು ರಾಜ್ಯಕ್ಕೆ ಮೊದಲಿನಿಂದಲೂ ಉತ್ತಮ ಆಡಳಿತ ಸಿಕ್ಕಿ ರಾಜ್ಯದ ಯಾವುದೇ ವಿಷಯವಿರಲಿ, ರಾಜರಿಗೆ ದಕ್ಷ ದಿವಾನರ ಸಹಾಯದಿಂದ ಭಾರತದಲ್ಲೇ ಒಂದು ಒಳ್ಳೆ ಮಾದರಿ ರಾಜ್ಯವೆಂದು ಸಾಬೀತಾಗಿತ್ತು. ಪ್ರಜೆಗಳಿಗೆ ಎಲ್ಲಾ ರೀತಿಯ ಪ್ರೋತ್ಸಾಹ ದೊರೆಯುತ್ತಿತ್ತು.
ಮೈಸೂರು ರಾಜ್ಯ ಅನೇಕ ವಿಷಯಗಳಲ್ಲಿ ರಾಷ್ಟ್ರದಲ್ಲೇ ಪ್ರಸಿದ್ಧಿಯಾಗಿತ್ತು. ಒಂದು ಕಡೆ ಕೈಗಾರಿಕೆ ಉದ್ಯಮಗಳಲ್ಲಿ ಮುಂದಿದ್ದರೆ, ಕಲೆ, ಸಂಸ್ಕೃತಿ ಮತ್ತೆ ಆಟೋಪಾಟದಲ್ಲೂ ಮುಂದಿತ್ತು. ರಾಜ್ಯದಲ್ಲಿ ಕ್ರಿಕೆಟ್ ಆಡುವ ಅನೇಕ ಟೀಮ್‌ಗಳಿದ್ದವು. ಅದರ ಏಳಿಗೆಗಾಗಿ ರಾಜ್ಯದ ಕಿಕೆಟ್ ಸಂಸ್ಥೆ ಜೂನಿಯರ್ ಟೀಮ್‍ನಿಂದ ಹಿಡಿದು ಸೀನಿಯರ್ ಟೀಮ್‌ಗಳಿಗೆ ಬೇರೆ ಬೇರೆ ಟೂರ್ನಮೆಂಟ್‌ಗಳನ್ನು ರಚಿಸಿದ್ದರು.
ಮೆಟ್ರೊ, ನಸ್ಸೂರ್, ಮಿರ್ಜಾ ಇಸ್ಮಾಯಿಲ್ ಅನ್ನುವ ಹೆಸರಿನ ಲೀಗ್‌ಗಳಿದ್ದವು. ಆಮೇಲೆ ಸಬ್-ಮೆಟ್ರೊ, ಮತ್ತು ಎಮ್. ಏ. ಟಿ. ಆಚಾರ್ಯ ಅನ್ನುವ ಗ್ರೂಪನ್ನೂ ಸೇರಿಸಿದರು. ಇದರಿಂದ ರಾಜ್ಯದಲ್ಲಿ ಎಲ್ಲಾ ವಯಸ್ಸಿನ ಆಟಗಾರರಿಗೂ ಕ್ರಿಕೆಟ್ ಬೆಳವಣಿಗೆಗೆ ಉತ್ತೇಜನ ಸಿಗುತ್ತಿತ್ತು.
ಕೈಗಾರಿಕಾ ಸಂಸ್ಥೆಗಳು ಅವರದೇ ಕ್ರಿಕೆಟ್ ಟೀಮ್‌ಗಳನ್ನು ಶುರುಮಾಡಿ ಅನೇಕ ಪ್ರತಿಭಾವಂತ ಯುವಕರನ್ನು ಕೆಲಸಕ್ಕೆ ತೆಗೆದುಕೊಂಡರು. ರಾಷ್ಟ್ರೀಯ ಬ್ಯಾಂಕುಗಳು ಶ್ರೇಷ್ಟ ಆಟಗಾರರಿಗೆ ಕೆಲಸಕೊಟ್ಟು ಅವರ ಆರ್ಥಿಕ ಪರಿಸ್ಥಿತಿಯನ್ನು ಬಹಳ ಮಟ್ಟಿಗೆ ಸುಧಾರಿಸಿದರು.
ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವ ಟೀಮ್‌ಗಳಲ್ಲಿ ಬ್ಯಾಂಗಳೂರ್ ಕ್ರಿಕೆಟರ್ಸ್, ಬ್ಯಾಂಗಳೂರ್ ಯುನೈಟೆಡ್ ಕ್ರಿಕೆಟ್ ಕ್ಲಬ್, ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್, ಸ್ವಸ್ಥಿಕ್ ಯೂನಿಯನ್ ಹೀಗೆ ಹಲವಾರು ಟೀಮುಗಳಿದ್ದವು. ಇವೆಲ್ಲಾ ಮಿರ್ಜಾ ಇಸ್ಮಾಯಿಲ್ ಷೀಲ್ಡ್‌ಗೆ ಆಡುವ ಟೀಮ್‌ಗಳಾಗಿದ್ದವು. ಈ ತರಹ ಸೀನಿಯರ್ ಟೀಮ್‌ಗಳಿಂದಲೇ ಮೈಸೂರು ರಾಜ್ಯಕ್ಕೆ ಆಡುವ ಆಟಗಾರರ ತಂಡವನ್ನು ರಚಿಸಲಾಗುತ್ತಿತ್ತು.
1956 ರಲ್ಲಿ ಮೈಸೂರು ಕರ್ನಾಟಕವಾಗಿ ಇನ್ನೇನು 2026ಕ್ಕೆ 70 ವರ್ಷಗಳ ಹತ್ತಿರಕ್ಕೆ ಬಂತು. ಈ ಅವಧಿಯಲ್ಲಿ ರಾಜ್ಯದಿಂದ ಅನೇಕ ಆಟಗಾರರು ರಾಜ್ಯವನ್ನು ಹಾಗೂ ದೇಶವನ್ನ ಪ್ರತಿನಿಧಿಸಿದ್ದಾರೆ. ದೇಶಕ್ಕೆ ಆಡಿ, ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಇವರ ಕೊಡುಗೆಯನ್ನು ಮರೆಯುವಹಾಗೇ ಇಲ್ಲ; ಇದನ್ನು ಆಗಾಗ್ಗೆ ನಾವು ಸ್ಮರಿಸಬೇಕು. ಇವರ ಕೊಡುಗೆ ಎಷ್ಟರ ಮಟ್ಟಿಗೆ ಎಂದರೆ ಮುಂಬೈ (ಮುಂಚೆ ಬೊಂಬಾಯಿ) ಆದಮೇಲೆ ಕರ್ನಾಟಕ ರಾಜ್ಯ ರಣಜಿ ಟ್ರೋಫಿ ಗೆದ್ದವರ ಪೈಕಿ ಎರಡನೇ ಸ್ಥಾನದಲ್ಲಿದೆ.
ಸ್ಕೂಲಿನಿಂದ ವಯಸ್ಸು-14, ವಯಸ್ಸು-19, ಕಾಲೇಜಿನ ಟೂರ್ನಮೆಂಟಾದ ರೊಹಿಂಗ್ಟನ್ ಬ್ಯಾರಿಯ, ಪಿ. ರಾಮಚಂದ್ರ ರಾವ್, ರಣಜಿ, ದುಲೀಪ್ ಟ್ರೋಫಿಗಳು, ದೇಶಕ್ಕೆ ಆಡಿದ ವೀರರಲ್ಲಿ ಎಲ್ಲರ ಕೊಡುಗೆ ಒಂದೇ. ಯಾವುದರಲ್ಲೂ ಯಾರು ಮುಂದು ಯಾರು ಹಿಂದೆ ಎನ್ನುವ ಮಾತಿಲ್ಲ. ಪ್ರತಿಯೊಬ್ಬರ ಕೊಡುಗೆಯೂ ಅಸಮಾನ್ಯವಾದದ್ದು. ರಾಜ್ಯದ ಏಳಿಗೆಗೆ ಶ್ರಮಿಸಿದಿವರ ಸಂಖ್ಯೆ ಸಾವಿರಾರು ಜನ. ಇದರಲ್ಲಿ ಆಟಗಾರರಿರಬಹುದು, ಆಡಳಿತ ವರ್ಗದವರಿರಬಹುದು, ಕೋಚ್‌ಗಳಿರಬಹುದು… ಅಂಪೈರ್‌ಗಳಿರಬಹುದು. ಇವರೆಲ್ಲರ ನಿಸ್ವಾರ್ಥ ಸೇವೆಗೆ ಕ್ರಿಕೆಟಾಯ ನಮಃ ಅವರಿಗೆ ಕೈಮುಗಿಯುತ್ತೆ.
ಇಂದು ನಾವು ಮೊಟ್ಟ ಮೊದಲು ರಾಜ್ಯದಲ್ಲಿ ಕ್ರಿಕೆಟ್ ಅಂಬೆಗಾಲು ಹಾಕಲು ಶುರುಮಾಡಿದಾಗ ಆಗ ಅವರು ಮಾಡಿದ ಸೇವೆಯನ್ನು ಸ್ಮರಿಸುತ್ತೇವೆ. ಇದರಲ್ಲಿ ಬಹಳ ಆಟಗಾರರಿದ್ದಾರೆ. ಇವರೆಲ್ಲರ ಪರವಾಗಿ ಇಂದು ಮೂರು ಆಟಗಾರರನ್ನು ಸ್ಮರಿಸುತ್ತೇವೆ. ಅವರು ಎಲ್.ಟಿ. ಆದಿಶೇಷ್, ಕೆ. ಕಸ್ತೂರಿರಂಗನ್ ಮತ್ತು ಬಾಲಾಜಿ ಕೆ. ಶ್ರೀನಿವಾಸನ್. ಇವರೆಲ್ಲರೂ ಒಂದೇ ಟೀಮ್ – ಬ್ಯಾಂಗಳೂರ್ ಕ್ರಿಕೆಟರ್ಸ್‌ಗೆ ಆಡಿದವರು ಮತ್ತು ಅದರ ಸಂಸ್ಥಾಪಕರೂ ಹೌದು. ಆದಿಶೇಷ್, ಕಸ್ತೂರಿರಂಗನ್ ಮತ್ತು ಬಾಲಾಜಿ ಶ್ರೀನಿವಾಸನ್ ಒಂದು ಕಾಲದಲ್ಲಿ ರಾಜ್ಯದ ಕ್ರಿಕೆಟರ್ಸ್‌ನ ತ್ರಿಮೂರ್ತಿಗಳಾಗಿದ್ದರೆಂದು ಹೇಳಬಹುದು.
*****
ಬೆಂಗಳೂರಿನ ‘ಬ್ಯಾಂಗಳೂರ್ ಕ್ರಿಕೆಟರ್ಸ್’ ಸಂಸ್ಥೆ ಕ್ರಿಕೆಟ್ ಆಡುವುದನ್ನು ಕಲಿಯುವುದಕ್ಕೆ ಇರುವ ಒಂದು ಗುರುಕುಲಕ್ಕೆ ಹೋಲಿಸಬಹುದು. ಇಲ್ಲಿ ಬಹಳ ಸಣ್ಣ ವಯಸ್ಸಿನಿಂದಲೇ ಹುಡುಗರು ಕ್ರಿಕೆಟ್‌ನ ಅ, ಆ, ಇ, ಈ ಯಿಂದ ಕಲಿತು ಮುಂದೆ ಪದವೀಧರರಾಗಿ ತಮ್ಮದೇ ಆದ ಜೀವನದ ಹಾದಿಯನ್ನು ಕಲ್ಪಿಸಿಕೊಂಡಿದ್ದಾರೆ. ಈ ಕ್ಲಬ್‌ನಲ್ಲಿ ಆಡಿ ಪಳಗಿದವರು ಮುಂದೆ ರಾಜ್ಯಕ್ಕೆ ಮತ್ತು ದೇಶಕ್ಕೂ ಆಡಿದ್ದಾರೆ.
ಬ್ಯಾಂಗಳೂರ್ ಕ್ರಿಕೆಟರ್ಸ್ ಕ್ಲಬ್ ಬೆಂಗಳೂರಿನ ಬುಲ್ ಟೆಂಪಲ್ ರೋಡಿನಲ್ಲಿ- ಅದು ಎಲ್.ಟಿ. ಆದಿಶೇಷ್ ಮತ್ತು ಅವರ ತಮ್ಮ ಎಲ್.ಟಿ. ಸುಬ್ಬು – ಅವರ ಮನೆಯಲ್ಲಿ ಶುರುವಾಯಿತು. 94, ಬುಲ್ ಟೆಂಪಲ್ ರಸ್ತೆಯಲ್ಲಿರುವ ಮನೆಯಲ್ಲಿ ಕ್ರಿಕೆಟ್ ಕಲಿಯುವರೆಲ್ಲರೂ ಸೇರುವ ದೇವಾಲಯವಾಯಿತು ಎನ್ನಬಹುದು. ಟೀಮ್ ಮೊಟ್ಟ ಮೊದಲು ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಮಹಿಳಾಸೇವ ಸಮಾಜ ಸ್ಕೂಲಿನ ಪಕ್ಕದ ಕಡೆಯಿಂದ ಜಾಗದಲ್ಲಿ ‘ನೆಟ್ಸ್’ ಹಾಕಿ ಅಲ್ಲಿ ಅಭ್ಯಾಸ ಶುರುಮಾಡಿದರು. ಅಲ್ಲಿಂದ ಶುರುವಾದ ಅಭ್ಯಾಸ ನಿರಂತರವಾಗಿ ನಡೆದು ಸತತವಾಗಿ 7 ವರ್ಷಗಳ ಕಾಲ ರಾಜ್ಯದ ಕ್ರಿಕೆಟ್ ಲೀಗ್‌ನ ಚಾಂಪಿಯನ್ಸ್ ಆದರು.
ಎಲ್.ಟಿ. ನಾಗರಾಜ್, ಅಶ್ವಥ್, ಆದಿಶೇಷ್ ಮತ್ತು ಸುಬ್ಬು ಅಣ್ಣ ತಮ್ಮಂದಿರು, ಬಾಲಾಜಿ ಕೆ ಶ್ರೀನಿವಾಸನ್ ಮತ್ತು ಕೆ. ಕಸ್ತೂರಿರಂಗನ್ ಈ ಸಂಸ್ಥೆಯನ್ನು ಕಟ್ಟಿದರು. ತರುವಾಯ ಟೀಮ್‌ನ ಅಭ್ಯಾಸ ನ್ಯಾಷನಲ್ ಕಾಲೇಜಿನ ಮೈದಾನದಲ್ಲೇ ಬಿ ಯು ಎಫ್ ಸಿ – ಫುಟ್ಬಾಲ್ ಟೀಮಿನ ಪಕ್ಕದ ಜಾಗದಲ್ಲಿ ಶುರುವಾಯಿತು. ಅದನ್ನು ನೋಡುವುದಕ್ಕೆ ಬಸವನಗುಡಿ, ಶಂಕರಪುರಂ, ಚಾಮರಾಜಪೇಟೆಯಿಂದ ಜನಸ್ತೋಮ ಸೇರುತ್ತಿದ್ದರು. ರಣಜಿ ಟ್ರೋಫಿಗೆ ಆಡುತ್ತಿದ್ದ ಮೈಸೂರು/ಕರ್ನಾಟಕಕ್ಕೆ ಅರ್ಧಕ್ಕೆ ಅರ್ಧ ಬ್ಯಾಂಗಳೂರ್ ಕ್ರಿಕೆಟರ್ಸ್ ಟೀಮಿನಿಂದಲೇ ಆಯ್ಕೆಯಾಗುತ್ತಿತ್ತು. ಆದಿಶೇಷ್, ಕಸ್ತೂರಿ ರಂಗನ್, ಬಾಲಾಜಿ ಶ್ರೀನಿವಾಸನ್, ಎಸ್. ವಿ. ರಂಗರಾಜ್, ಪಿ.ಎಸ್. ವಿಶ್ವನಾಥ್, ಸಿ.ಎಮ್ ವರದರಾಜ್, ದೀಪಕ್ ದಾಸ್ ಗುಪ್ತ, ಕೆ.ಆರ್. ರಾಜಗೋಪಾಲ್, ಛಬ್ಬಿ ಎನ್. ಸದಾಶಿವನ್ ಎಲ್, ಪಿ.ಶ್ಯಾಮ್, ವೆಂಕಟಾದ್ರಿ, ಸಿ.ಆರ್. ಲಕ್ಷ್ಮಿ ನಾರಾಯಣ, ಮತ್ತು ಇತರರು ಈ ಟೀಮಿನಲ್ಲಿ ಆಡುತ್ತಿದ್ದರು.
ಸ್ವಲ್ಪ ವರ್ಷಗಳನಂತರ ಅವರು ಬೆಂಗಳೂರು ಹೈಸ್ಕೂಲ್ ಮತ್ತು ಕಿಮ್ಸ್ ಮೆಡಿಕಲ್ ಕಾಲೇಜಿನ ಬದಿಯಲ್ಲಿ ಇದ್ದ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದರು.
ಒಂದು ಕಾಲದಲ್ಲಿ ಕಸ್ತೂರಿರಂಗನ್ ರಾಜ್ಯದಲ್ಲೇ ಮತ್ತು ದೇಶದಲ್ಲೇ ಅತ್ಯಂತ ವೇಗದ ಬೋಲರ್ ಎಂದು ಹೆಸರುವಾಸಿಯಾಗಿದ್ದರು. ಅವರು ನೆಟ್ಸ್‌ನಲ್ಲಿ ಬೋಲಿಂಗ್ ಮಾಡುವಾಗ ಅದನ್ನು ಎದುರಿಸಲು ಅವರ ತಂಡದ ಸದಸ್ಯರು ಹೆದರುತ್ತಿದ್ದರು. ಆದರೆ ಟೀಮಿನ ನಾಯಕ ಆದಿಶೇಷ್ ಬ್ಯಾಟ್ಸ್ಮನ್ ಹಿಂದೇನೇ ಒಂದು ಬ್ಯಾಟ್ ಹಿಡಿದು ಅವರನ್ನು ಹೆದರದೆ ಆಡಲು ತರಪೇತಿ ಕೊಡುತ್ತಿದ್ದರು. ಮೈಗೆ, ಕೈ ಕಾಲುಗಳಿಗೆ ಏಟು ಬಿದ್ದರೂ ಆಡಲೇಬೇಕು ಎಂಬ ಶಿಸ್ತಿನಿಂದ ತಂಡದ ಆಟಗಾರರಿಗೆ ತರಪೇತಿ ಕೊಟ್ಟಿದ್ದರಿಂದ ಬ್ಯಾಂಗಳೂರ್ ಕ್ರಿಕೆಟರ್ಸ್‌ನ ಆಟಗಾರರು ಒಳ್ಳೆಯ ಆಟಗಾರರಾಗಿ ಬಹಳ ಪಂದ್ಯಗಳಲ್ಲಿ ಗೆಲ್ಲಲು ಸಹಾಯವಾಯಿತು. ಈ ತಂಡದ ಆಟ, ಪ್ರತಿಭೆ ಕಂಡು ಆಶ್ಚರ್ಯ ಪಟ್ಟವರೇ ಎಲ್ಲರೂ. ಆದರೆ ಇದೆಲ್ಲವೂ ಅದರ ಹಿಂದೆ ಇದ್ದ ಪರಿಶ್ರಮ ಆದಿಶೇಷ್ ಅವರ ಧ್ಯೇಯ, ತಂಡದಲ್ಲಿ ಪ್ರತಿಯೊಬ್ಬರೂ ಶಿಸ್ತಿನಿಂದ ಅಭ್ಯಾಸ ಮಾಡಿದ್ದರ ಫಲ ಎಂದು ಹೇಳಬೇಕು.
*****
ಲಿಂಗನಾಥ ತಮ್ಮಯ್ಯ ಆದಿಶೇಷ್ ಮೇ 11, 1927ರಲ್ಲಿ ಜನಿಸಿದರು. ಅವರು ಸ್ಕೂಲಿನಿಂದ ಕ್ರಿಕೆಟ್ ಆಡಿ, ಮನೆಯಲ್ಲಿ ಆಟ ಕಲಿಯುವುದಕ್ಕೆ ಒಳ್ಳೆಯ ವಾತಾವರಣ, ಅಣ್ಣಂದಿರಾದ ನಟರಾಜ್ ಮತ್ತು ಅಶ್ವಥ್ ಅವರ ಉತ್ತೇಜನದಿಂದ ಒಳ್ಳೆಯ ಆಲ್- ರೌಂಡರ್ ಆದರು. ಅವರನ್ನು ಎಲ್ಲರೂ ಆದಿ ಎಂದು ಕರೆಯುತ್ತಿದ್ದರು. ಬಹಷಃ ಕರ್ನಾಟಕದಲ್ಲಿ ಕ್ರಿಕೆಟ್ ಮುಂದೆ ಬರಲು ಕಾರಣ ಒಂದು ಕುಟುಂಬ ಅದರ ಹಿಂದೆ ಇತ್ತು ಅಂದರೆ ಅದು ಆದಿಶೇಷ್ ಅವರ ಕುಟುಂಬ. 94 ಬುಲ್ ಟೆಂಪಲ್ ರಸ್ತೆ ರಾಜ್ಯದ ಕ್ರಿಕೆಟ್‌ನ ಟೆಂಪಲ್ ಆಯಿತು ಅಂದರೆ ಅದು ಅತಿಶಯೋಕ್ತಿಯಲ್ಲ.
ಮುಂಚೆ ದಕ್ಷಿಣ ವಲಯದಲ್ಲಿ ಹೈದರಾಬಾದ್ ಮತ್ತು ಮದ್ರಾಸ್ ಟೀಮ್‌ಗಳು ಮಾತ್ರ ಇದ್ದವು. ವರ್ಷಕ್ಕೆ ಎರಡೋ ಮೂರೋ ರಣಜಿ ಪಂದ್ಯಗಳಾಡಿದರೆ ಹೆಚ್ಚು. ತದನಂತರ ಕೇರಳ, ಆಂಧ್ರ ತಂಡಗಳ ರಚನೆಯಾಯಿತು. ಆಮೇಲೆ ವಲಯಗಳು ಆಡುವ ದುಲೀಪ್ ಟ್ರೋಫಿ ಶುರುವಾಯಿತು. ಅಷ್ಟರೊಳಗೆ ಆದಿಶೇಷ್ ಮತ್ತು ಅವರ ಸಂಗಡಿಗರು ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.
ಆದಿಶೇಷ್ ಒಟ್ಟು 18 ರಣಜಿ ಪಂದ್ಯಗಳನ್ನಾಡಿ ಸರಾಸರಿ 38.07 ಯಲ್ಲಿ 990ರನ್ ಹೊಡೆದರು. ಅದರಲ್ಲಿ 1 ಶತಕ ಮತ್ತು 6 ಅರ್ಧ ಶತಕಗಳಿದ್ದವು. ಅವರ ಉತ್ತಮ ಸ್ಕೋರ್ 183 ಆಗಿತ್ತು. ಸ್ಲಿಪ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಆದಿ 10 ಕ್ಯಾಚ್ ಹಿಡಿದಿದ್ದರು.
ಬೋಲಿಂಗ್‌ನಲ್ಲಿ 29.78 ಸರಾಸರಿಯಲ್ಲಿ ಅವರು 685 ರನ್‌ಗೆ 23 ವಿಕೆಟ್ ಪಡೆದರು. ಅವರ ಅತ್ತ್ಯುತ್ತಮ ಬೋಲಿಂಗ್ 4/33 ಆಗಿತ್ತು. ಅವರು ಮಧ್ಯಮ ಗತಿಯಲ್ಲಿ ಬೋಲಿಂಗ್ ಮಾಡುತ್ತಿದ್ದರು. ಆದಿಶೇಷ್ 1947-48ರಲ್ಲಿ ಶುರುಮಾಡಿ 1955/56 ತನಕ ಆಡಿದರು.
ಆದಿಶೇಷ್ ವ್ಯಾಸಂಗದಲ್ಲಿ ಎಂಬಿಬಿಎಸ್ ಓದಿ ಇಂಗ್ಲೆಂಡ್‍ನ ಲಿವರ್ಪೂಲ್‌ನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿಯ ಲ್ಯಾಂಕಷೈರ್ ಲೀಗ್‌ನಲ್ಲೂ ಕ್ರಿಕೆಟ್ ಆಡುತ್ತಿದ್ದರು.
ಭಾರತ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆದಿಶೇಷರನ್ನು ಆಯ್ಕೆ ಮಾಡಲಾಗಿತ್ತು. ಆ ದಿನಗಳಲ್ಲಿ ಹೆಚ್ಚು ಕಡಿಮೆ ತಂಡದ ಸದಸ್ಯರೆಲ್ಲಾ ಬೊಂಬಾಯಿನವರಾಗಿದ್ದರು. ಬೇರೆ ರಾಜ್ಯಗಳಿಂದ ಒಬ್ಬರೋ ಇಬ್ಬರನ್ನೋ ಆಯ್ಕೆ ಮಾಡುತ್ತಿದ್ದರು. ಆಗ ತಂಡದಲ್ಲಿ ತಾರತಮ್ಯ ಮತ್ತು ಭೇದ ಭಾವನೆಗಳಿದ್ದು ಎಷ್ಟೋಸಲ ಬೇರೆ ರಾಜ್ಯದವರು ಟೀಮಿನ ಜೊತೆಗೆ ಪ್ರವಾಸಕ್ಕೆ ಹೋಗಲು ಹಿಂಜರಿಯುತ್ತಿದ್ದರು. ಈ ಕಾರಣದಿಂದ ಮದರಾಸಿನ ಗೋಪಿನಾಥ್, ಹೈದರಾಬಾದಿನ ಘುಲಾಮ್ ಮೊಹಮ್ಮದ್ ತಂಡದ ಜೊತೆ ಹೋಗಲು ನಿರಾಕರಿಸಿದರು ಎನ್ನಲಾಗಿದೆ. ಮೈಸೂರಿನಿಂದ ಆದಿಶೇಷ್ ಮತ್ತು ಕಸ್ತೂರಿರಂಗನ್ ಕೂಡ ಟೀಮಿನ ಜೊತೆ ಪ್ರವಾಸ ಮಾಡಲು ನಿರಾಕರಿಸಿದರು. ಆದರೆ ಮೈಸೂರಿನ ಬಗ್ಗೆ ಇದು ಇಲ್ಲಿಗೇ ಮುಗಿಯಲಿಲ್ಲ.
ಇದರಿಂದ ಬೇಸರಗೊಂಡ ಮೈಸೂರು ರಾಜ್ಯದ ಕ್ರಿಕೆಟ್ ಸಂಸ್ಥೆ ಭಾರತದ ಕ್ರಿಕೆಟ್ ಸಂಸ್ಥೆಗೆ ಒಂದು ಕಾಗದ ಬರೆದು ಇವರಿಬ್ಬರನ್ನೂ ಮುಂದೆ ಯಾವ ಕಾರಣಕ್ಕೂ ಆಯ್ಕೆ ಮಾಡಬಾರದೆಂದು ಬರೆದರು ಎಂದು ಎನ್ನಲಾಗಿದೆ. ಆದರೆ ಮದರಾಸ್ ಮತ್ತು ಹೈದರಾಬಾದ್ ಅಲ್ಲಿಯ ಕ್ರಿಕೆಟರ್ಸ್ ಪ್ರವಾಸಮಾಡದಿರುವ ವಿಷಯವನ್ನು ಅಷ್ಟು ದೊಡ್ಡದು ಮಾಡಲಿಲ್ಲ. ಆದ್ದರಿಂದ ಅಲ್ಲಿನ ಆಟಗಾರರ ಭವಿಷ್ಯಕ್ಕೆ ಏನೂ ಧಕ್ಕೆಯಾಗಲಿಲ್ಲ. ಅವರನ್ನು ಭಾರತದ ತಂಡಕ್ಕೆ ಆಡಲು ಮತ್ತೆ ಆಯ್ಕೆ ಮಾಡಿದರು. ಅವರು ಮುಂದೆ ಪ್ರವಾಸಕ್ಕೂ ಹೋದರು. ಆದರೆ ಆದಿಶೇಷ್ ಮತ್ತು ಕಸ್ತೂರಿರಂಗನ್ ಚೆನ್ನಾಗಿ ಆಡಿದರೂ ಮತ್ತೆ ಅವರನ್ನು ಭಾರತ ತಂಡಕ್ಕೆ ಆಡಲು ಆಮಂತ್ರಿಸಲೇ ಇಲ್ಲ. ಇದು ನಿಜವಾದ ಪಕ್ಷದಲ್ಲಿ ಬಹಳ ದುರದೃಷ್ಟಕರ ಮತ್ತು ನಮ್ಮ ಕಾಲಿಗೆ ನಾವೇ ಕೊಡಲಿಯಿಂದ ಹೊಡೆದುಕೊಂಡ ಹಾಗಾಯಿತು. ಅ ತರಹದ ಕಾಗದ ಬರೆಯಲಾಗಿತ್ತು ಅನ್ನುವ ವಿಷಯ ಬಹಳ ವರ್ಷಗಳದಮೇಲೆ ಹೊರಗೆಬಂತು. ಅಷ್ಟರಲ್ಲಿ ಈ ಧೀಮಂತ ಆಟಗಾರರ ಭವಿಷ್ಯ ಮುಗಿದುಹೋಗಿತ್ತು. ಇದೆಲ್ಲವೂ ನಿಜವಾದ ಪಕ್ಷದಲ್ಲಿ ಇದೊಂದು ಅತ್ಯಂತ ದುರಂತದ ವಿಷಯವೆಂದು ಹೇಳಲೇಬೇಕಾಗಿಲ್ಲ. ಈ ಪೆಟ್ಟಿನಿಂದ ಕರ್ನಾಟಕದ ಕ್ರಿಕೆಟ್ ಚೇತರಿಸಿಕೊಳ್ಳಲು ಬಹಳ ವರ್ಷಗಳು ಬೇಕಾಯಿತು.
ಕತ್ತಿಗೆ ಕ್ಯಾನ್ಸರ್ ಬಂದು ಆದಿಶೇಷ್ ಅವರ 89ನೇ ವಯಸ್ಸಿನಲ್ಲಿ 24, ನವೆಂಬರ್ 2016ರಲ್ಲಿ ಕಾಲವಾದರು. ಲಿವರ್ಪೂಲ್ ಕ್ರಿಕೆಟ್ ಸಂಸ್ಥೆ ಅವರ ದೇಹವನ್ನು ಕ್ಲಬ್‌ನಲ್ಲಿಟ್ಟು ಅಭಿಮಾನಿಗಳು ಬಂದು ನೋಡಲು ವ್ಯವಸ್ಥೆ ಮಾಡಿದ್ದರು.
94, ಬುಲ್ ಟೆಂಪಲ್ ರಸ್ತೆಯಲ್ಲಿರುವ ಮನೆಯಲ್ಲಿ ಕ್ರಿಕೆಟ್ ಕಲಿಯುವರೆಲ್ಲರೂ ಸೇರುವ ದೇವಾಲಯವಾಯಿತು ಎನ್ನಬಹುದು. ಟೀಮ್ ಮೊಟ್ಟ ಮೊದಲು ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಮಹಿಳಾಸೇವ ಸಮಾಜ ಸ್ಕೂಲಿನ ಪಕ್ಕದ ಕಡೆಯಿಂದ ಜಾಗದಲ್ಲಿ ‘ನೆಟ್ಸ್’ ಹಾಕಿ ಅಲ್ಲಿ ಅಭ್ಯಾಸ ಶುರುಮಾಡಿದರು. ಅಲ್ಲಿಂದ ಶುರುವಾದ ಅಭ್ಯಾಸ ನಿರಂತರವಾಗಿ ನಡೆದು ಸತತವಾಗಿ 7 ವರ್ಷಗಳ ಕಾಲ ರಾಜ್ಯದ ಕ್ರಿಕೆಟ್ ಲೀಗ್‌ನ ಚಾಂಪಿಯನ್ಸ್ ಆದರು.
ಗೋಪಾಲಸ್ವಾಮಿ ಕಸ್ತೂರಿರಂಗನ್ ಅಕ್ಟೋಬರ್ 12 1930ರಲ್ಲಿ , ಮದ್ರಾಸ್, ಈಗಿನ ಚೆನ್ನೈನಲ್ಲಿ ಹುಟ್ಟಿದರು. ಅವರು ಬಲಗೈ ವೇಗದ ಬೋಲರ್ ಆಗಿದ್ದರು.
ಭಾರತದಲ್ಲಿ ವೇಗದ ಬೋಲರ್‌ಗಳ ಕೊರತೆ ಯಾವಾಗಲೂ ಇರುತ್ತಿತ್ತು. ಮೊಹಮ್ಮದ್ ನಿಸ್ಸಾರ್, ಅಮರ್ ಸಿಂಗ್ ನಂತರ ಎಷ್ಟೊ ದಶಕಗಳು ನಮಗೆ ಒಳ್ಳೆ ವೇಗದ ಬೋಲರ್‌ಗಳಿರಲಿಲ್ಲ. ಇದರ ಪರಿಣಾಮ ನ್ಯೂನತೆ ನಮ್ಮ ಬ್ಯಾಟಿಂಗ್‌ನಲ್ಲೂ ಕಾಣಿಸಿಕೊಂಡಿತ್ತು. ಒಳ್ಳೆ ವೇಗದ ಬೋಲರ್‌ಗಳಿಲ್ಲದೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯದ ಬೋಲರ್‌ಗಳು ಇಲ್ಲಿಗೆ ಬಂದಾಗ, ಅಥವ ನಮ್ಮ ತಂಡ ಅಲ್ಲಿ ಹೋದಾಗ ಅವರನ್ನು ಎದುರಿಸಲು ನಮ್ಮ ಆಟಗಾರರು ಹಿಂಜರಿಯುತ್ತಿದ್ದರು. ಅಭ್ಯಾಸವಿಲ್ಲದಿರುವ ಕಾರಣದಿಂದ ಏಟು ಬೀಳಬಹುದೆಂಬ ಭಯವೂ ಇರುತ್ತಿತ್ತು. ಪ್ರತಿ ಪ್ರವಾಸದಲ್ಲೂ ಸೋಲನ್ನು ಅನುಭವಿಸಬೇಕಾಗಿತ್ತು.
ಇಂತಹ ಪರಿಸ್ಥಿತಿಯಲ್ಲಿ ಕಸ್ತೂರಿರಂಗನ್ ವೇಗದ ಬೋಲರ್ ಆಗಿ ಆಗಿನ ಮೈಸೂರಿನ ತಂಡವನ್ನು 1948-49ರಲ್ಲಿ ಪ್ರವೇಶ ಮಾಡಿದರು. 1951-52ರಲ್ಲಿ 12 ವಿಕೆಟ್‌ಗಳನ್ನು ತಲಾ 10.33 ಸರಾಸರಿಯಲ್ಲಿ ತೆಗೆದುಕೊಂಡರು. 1952-53 ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರು ಅದನ್ನು ತಿರಸ್ಕರಿಸಿದರು. ಅವರ ಬದಲು ತಮಿಳುನಾಡಿನ ಕನ್ನೈರಾಮ್ ಹೋದರು. ಅವರು 1961-62ರಲ್ಲಿ ಟೀಮಿನ ನಾಯಕತ್ವ ವಹಿಸಿದರು. 1963ರಲ್ಲಿ ಅವರು ಆಟದಿಂದ ವಿಶ್ರಾಂತಿ ಪಡೆದರು.
ಕಸ್ತೂರಿ ಒಟ್ಟು 36 ಪಂದ್ಯಗಳಾಡಿ ಒಳ್ಳೆ ಸರಾಸರಿಯಾದ 22.02 ಕ್ಕೆ 94 ವಿಕೆಟ್ ಪಡೆದರು. ಅವರು ಎರಡು ಬಾರಿ 5 ವಿಕೆಟ್‌ಗಿಂತ ಜಾಸ್ತಿ ಪಡೆದರು. ಅವರ ಅತ್ಯುತ್ತಮ ಬೋಲಿಂಗ್ 6/42 ಆಗಿತ್ತು. ಅವರು 36 ಪಂದ್ಯಗಳಲ್ಲಿ 429ರನ್ ಹೊಡೆದರು. ಒಮ್ಮೆ ಅವರು 41 ರನ್ ಸ್ಕೋರ್ ಮಾಡಿದರು. ಅವರು 18 ಕ್ಯಾಚ್‌ಗಳನ್ನು ಹಿಡಿದಿದ್ದರು.
ಕಸ್ತೂರಿರಂಗನ್ ಸಸ್ಯ ಶಾಸ್ತ್ರದಲ್ಲಿ ಪರಿಣಿತಿಯನ್ನು ಹೊಂದಿ ದೇಶದಲ್ಲೇ ದೊಡ್ಡ ಗುಲಾಬಿ ಹೂವಿನ ತೋಟವನ್ನು ಬೆಳೆಸಿದ್ದರು. ಅದರಲ್ಲಿ ನಾನಾ ಜಾತಿಯ ಗುಲಾಬಿಯನ್ನು ಬೆಳೆಸಿ ಅದರಲ್ಲಿ ಸಂಶೋಧನೆ ಮಾಡಿ ಗುಲಾಬಿಗಳನ್ನು ರಫ್ತು ಮಾಡುತ್ತಿದ್ದರು. ದೇಶದಿಂದ ನಾನಾ ಕಡೆಯಿಂದ ಅವರನ್ನು ಸಂಪರ್ಕಿಸಿ ಅವರ ಸಲಹೆಯನ್ನು ಪಡೆಯುತ್ತಿದ್ದರು.
ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ಕ್ರೆಕಿಟ್ ಪಿಚ್ ತಯಾರು ಮಾಡುವುದರಲ್ಲಿ ತಾಂತ್ರಿಕ ಸಹಾಯವನ್ನು ಮಾಡಿ ಭಾರತದ ಕ್ರಿಕೆಟ್ ಸಂಸ್ಥೆ ಅವರ ಸಲಹೆಯನ್ನು ಪಡೆದು ಅವರನ್ನು ಪಿಚ್ ಕಮಿಟಿಯ ಅಧ್ಯಕ್ಷರನ್ನಾಗಿ ಮಾಡಿದ್ದರು. ಭಾರತದಲ್ಲಿ ಅನೇಕ ಪಿಚ್ ತಯಾರಿ ಮಾಡುವುದರಲ್ಲಿ ಕಸ್ತೂರಿರಂಗನ್ ತಮ್ಮ ಅಮೂಲ್ಯ ಸಲಹೆಗಳನ್ನು ಕೊಟ್ಟಿದ್ದಾರೆ. ಕಸ್ತೂರಿರಂಗನ್ 19 ಆಗಸ್ಟ್ 2020ರಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ಕಾಲವಾದರು.
*****
ಬ್ಯಾಂಗಳೂರ್ ಕ್ರಿಕೆಟರ್ಸ್‌ನ ಮೂರನೇ ಸ್ಥಂಭ ಎಂದು ಪ್ರಸಿದ್ಧಿಯಾದ ಬಾಲಾಜಿ ಕೆ. ಶ್ರೀನಿವಾಸನ್ 1949-50ರಲ್ಲಿ ಮೈಸೂರಿಗೆ ರಣಜಿ ಟ್ರೋಫಿಯಲ್ಲಿ ಭಾಗವಹಿಸಿದರು.
1957ರಲ್ಲಿ ಬಾಲಾಜಿ ಇಂಗ್ಲೆಂಡಿಗೆ ಹೋಗಿ ಅಲ್ಲಿ ಡಿಡ್ಸಬರಿ ಮತ್ತು ನ್ಯಾನ್ಟ್ವಿಚ್ ಕ್ಲಬ್‌ಗಳಿಗೆ ಮ್ಯಾನ್ಚೆಸ್ಟರ್ ಮತ್ತು ನಾರ್ಥ್ ಸ್ಟಾಫರ್ಡ್ಷೈರ್ ಲೀಗ್‌ನಲ್ಲಿ ಭಾಗವಹಿಸಿದರು.
ಅವರು ಪಂಕಜ್ ರಾಯ್ ಜೊತೆ ಓಪನಿಂಗ್ ಪ್ಲೇಯರ್ ಆಗಿ ಆಡಿದರು. ಜನವರಿ 13 1954 ರಿಂದ ಶುರುವಾದ ಟೆಸ್ಟ್ ಪಂದ್ಯದಲ್ಲಿ ಬಾಲಾಜಿ ಶ್ರೀನಿವಾಸನ್ ಕರ್ನಾಟಕದ ಮೊದಲನೇ ಟೆಸ್ಟ್ ಆಟಗಾರನಾಗಿ ಮೈದಾನಕ್ಕೆ ಇಳಿದರು. ಭಾರತದ ಟೀಮ್ ಈ ಪಂದ್ಯವನ್ನು ಇನಿಂಗ್ಸ್ ಮತ್ತು 50 ರನ್ನಿಂದ ಗೆದ್ದರು. ಪಂಕಜ್ ರಾಯ್ ಜೊತೆಗೆ ಓಪನಿಂಗ್ ಮಾಡಲು ಇಳಿದ ಶ್ರೀನಿವಾಸನ್ 11 ರನ್ ಹೊಡೆದು ಲೋಡರ್ ಅವರ ಬೋಲಿಂಗಿಗೆ ವಾಟ್ಕಿನ್ಸ್ ಅವರಿಗೆ ಕ್ಯಾಚ್ ಕೊಟ್ಟು ಔಟಾದರು. ರಾಯ್ 141 ರನ್ ಹೊಡೆದರು. ಭಾರತ 440 ರನ್ ಹೊಡೆಯಿತು. ಕಾಮನ್ವೆಲ್ತ್ ಟೀಮ್ 22ಕ್ಕೆ ಆಲ್ ಔಟ್ ಆಗಿ ಫಾಲೊ ಆನ್‌ನಲ್ಲಿ 168ಕ್ಕೆ ಕುಸಿದು ಬಿದ್ದರು. ಈ ಟೆಸ್ಟ್‌ನಲ್ಲಿ ಘುಲಾಮ್ ಅಹಮದ್ ಒಟ್ಟು 12 ವಿಕೆಟ್, ಮತ್ತು ಶುಭಾಷ್ ಗುಪ್ತೆ 7 ವಿಕೆಟ್ ತೆಗೆದು ಭಾರತ ಭರ್ಜರಿ ವಿಜಯವನ್ನು ಸಾಧಿಸಿದರು.
ಬಾಲಾಜಿ ಶ್ರೀನಿವಾಸನ್ ಅಕ್ಟೋಬರ್ 5 ರಂದು 1929ರಲ್ಲಿ ಮದ್ರಾಸಿನಲ್ಲಿ ( ಈಗ ಚೆನ್ನೈ ) ಹುಟ್ಟಿದರು. ಬಾಲಾಜಿ ಮತ್ತು ಕಸ್ತೂರಿ ರಂಗನ್ ಒಂದೇ ಕುಟುಂಬದವರು, ಅಣ್ಣ ತಮ್ಮಂದಿರ ಮಕ್ಕಳಾಗಿ ಒಟ್ಟಿಗೆ ಬೆಳೆದವರು. ಒಂದೂವರೆ ವರ್ಷ ದೊಡ್ಡವರಾದ ಬಾಲಾಜಿ ಬೆಂಗಳೂರಿನ ಫೋರ್ಟ್ ಹೈ ಸ್ಕೂಲಿನಲ್ಲಿ ಓದಿ ಮುಂದೆ ಇಂಜಿನಿಯರ್ ಆದರು. ಬ್ಯಾಂಗಳೂರ್ ಹೈಸ್ಕೂಲಿನಲ್ಲಿ ಓದಿದ ಕಸ್ತೂರಿ ಕೃಷಿ ವಿಜ್ಞಾನದಲ್ಲಿ ಪದವೀಧರರಾದರು.
ಬಿಎಮ್‌ಎಸ್ ಕಾಲೇಜಿನಲ್ಲಿ ಓದುತ್ತಿದ್ದ ಬಾಲಾಜಿ ಇಂಟರ್ ಯೂನಿವರ್ಸಿಟಿ ರೋಹಿಂಗ್ಟನ್ ಬಾರಿಯ ಟೂರ್ನಮೆಂಟಿಗೆ ನಾಲ್ಕು ವರ್ಷ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದರು. ಅವರು ರೋಹಿಂಗ್ಟನ್ ಬಾರಿಯ ಟ್ರೋಫಿಗೆ ಆಡುವಾಗ ಉಮ್ರಿಗರ್, ದೀಪಕ್ ಶೋಧನ್, ಎಮ್.ಆರ್. ರೀಗೆ, ಸಿ. ಡಿ. ಗೋಪಿನಾಥ್, ಸುಭಾಷ್ ಗುಪ್ತೆ, ಡಿಕೆ ಗಾಯಕ್ವಾಡ್ ಮುಂತಾದವರು ಇವರ ಸಮಕಾಲೀನರಾಗಿದ್ದರು.
ಇದೇ ಸಮಯದಲ್ಲಿ ಎಲ್.ಟಿ. ಆದಿಶೇಷ್, ಕಸ್ತೂರಿರಂಗನ್, ಸಿ.ಜೆ. ರಾಮ್‍ದೇವ್, ಪಿ.ಎಸ್. ವಿಶ್ವನಾಥ್, ವಿ.ಎಮ್. ಮುದ್ದೈಯ್ಯ, ಎ.ಎಸ್. ಕೃಷ್ಣಸ್ವಾಮಿ, ಟಿ. ತಿಮ್ಮಯ್ಯ ಮುಂತಾದವರು ಇವರ ಜೊತೆ ಬಾರಿಯ ಟ್ರೋಫಿಗೆ ಆಡಿದರು. 1949-50ರಲ್ಲಿ ಬಾಲಾಜಿ ಪಿ. ರಾಮಚಂದ್ರ ರಾವ್ ಟ್ರೋಫಿಗೆ ನಾಯಕನಾದರು. ಈ ಟ್ರೋಫಿ ಸ್ಟೇಟ್ ‘ಬಿ’ ಟೂರ್ನಮೆಂಟ್ ಎಂದು ಹೆಸರುವಾಸಿಯಾಗಿತ್ತು.
ಎಲ್ಲಾ ಪಂದ್ಯಗಳಲ್ಲಿ ಉತ್ತಮ ಆಟ ತೋರಿಸಿದ್ದರಿಂದ ಬಾಲಾಜಿಗೆ ರಣಜಿ ಟ್ರೋಫಿ ಆಡಲು 1949-50ರಲ್ಲಿ ಮದ್ರಾಸಿನ ವಿರುದ್ಧ ಅವಕಾಶ ದೊರೆಯಿತು. ಅದರಲ್ಲಿ ಅವರು 0 ಮತ್ತು 28 ಹೊಡೆದರು. ಜನವರಿ 1951ರಲ್ಲಿ ಮೊದಲನೆಯ ಕಾಮನ್ವೆಲ್ತ್ ಟೀಮ್ ಇಂಡಿಯಾಗೆ ಲೆಸ್ಲಿ ಏಮ್ಸ್, ಫ್ರಾಂಕ್ ವೊರೆಲ್, ಫಿಷ್ಲಾಕ್, ಸೊನಿ ರಾಮಧಿನ್ ಮುಂತಾದವರು ಬಂದಾಗ ಆಡಲು ಬಾಲಾಜಿಗೆ ಅವಕಾಶ ದೊರೆಯಿತು. ವಿಕೆಟ್ ಕೀಪರ್ ಆಗಿ ಆಡಿದ ಬಾಲಾಜಿ ಆ ಮ್ಯಾಚಿನಲ್ಲಿ 1 ಮತ್ತು 46 ಹೊಡೆದು ವಿಕಟ್‌ಕೀಪರ್ ಆಗಿ 4 ಬ್ಯಾಟ್ಸ್‌ಮನ್ ಔಟಾಗಲು ಕಾರಣರಾದರು. ಅದರಲ್ಲಿ 110 ಹೊಡೆದ ನಾಯಕ ಏಮ್ಸ್ ಬಾಲಾಜಿ ಮೂಲಕ ಸ್ಟಂಪ್ ಔಟ್ ಆದರು. ಅವರ 46 ತಂಡದ ಅತ್ಯಧಿಕ ಸ್ಕೋರ್ ಆಗಿತ್ತು.
1953-54ರಲ್ಲಿ ಬಾರ್ನೆಟ್ ನೇತೃತ್ವದಲ್ಲಿ ಮತ್ತೆ ಕಾಮನ್ವೆಲ್ತ್ ಟೀಮ್ ಭಾರತಕ್ಕೆ ಬಂದಾಗ ಮೈಸೂರಿನಿಂದ ಏಕೈಕ ಆಟಗಾರರಾಗಿ ಬಾಲಾಜಿ ಇಂಡಿಯ ಎಲೆವೆನ್‌ಗೆ ಆಡಿದರು.
ಮೈಸೂರು ರಾಜ್ಯದಿಂದ ರಣಜಿಟ್ರೋಫಿ ಆಡಿ ಭಾರತದ ಟೆಸ್ಟ್ ಟೀಮಿನಲ್ಲಿ ಆಡಿದ ಅನಧಿಕೃತ ಟೆಸ್ಟ್ ಮ್ಯಾಚ್ ಆಡಿದ ಮೊದಲನೆಯ ಆಟಗಾರ ಬಾಲಾಜಿ ಶ್ರೀನಿವಾಸನ್.
ಬಾಲಾಜಿ ಶ್ರೀನಿವಾಸನ್ ಮತ್ತು ಅವರ ತಮ್ಮ ಕೆ. ಶ್ರೀಧರ್ ನವೆಂಬರ್ 1953ರಲ್ಲಿ ಒಟ್ಟಿಗೆ ರಣಜಿ ಟ್ರೋಫಿ ಮ್ಯಾಚ್ ಆಡಿದರು. ಆಂಧ್ರದ ಮೇಲೆ ಆಡಿದ ಪಂದ್ಯದಲ್ಲಿ ಮೈಸೂರು ಗೆದ್ದಿತು. ಅಣ್ಣ ಶ್ರೀನಿವಾಸನ್ 12 ಮತ್ತು 10 ಹೊಡೆದರೆ, ಮೊಟ್ಟ ಮೊದಲ ರಣಜಿ ಪಂದ್ಯವಾಡುತ್ತಿದ್ದ ತಮ್ಮ ಶ್ರೀಧರ್ 32 ಹೊಡೆದನು!
ಆ ತರಹ ಭಾರತದಲ್ಲಿ ವಿಜಯ್ ಹಜಾ಼ರೆ, ವಿವೇಕ್ ಹಜಾ಼ರೆ, ವಿಜಯ್ ಮರ್ಚೆಂಟ್ ಮತ್ತು ಅವರ ತಮ್ಮ ಉದಯ್ ಮರ್ಚೆಂಟ್, ಸಿ.ಕೆ. ಮತ್ತು ಅವರ ತಮ್ಮ ಸಿ.ಎಸ್. ನಾಯುಡು ಸಹೋದರರಾಗಿದ್ದರು. ಆ ಮೇಲೆ ಅಶೋಕ್ ಮಂಕಡ್, ಅತುಲ್ ಮಂಕಡ್ ಸಹೋದರರು ರಣಜಿ ಟ್ರೋಫಿಗೆ ತಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
ಬಾಲಾಜಿ ಶ್ರೀನಿವಾಸನ್ ಅವರ ದಾಖಲೆ ಹೀಗಿದೆ. ಅವರ 15 ಪಂದ್ಯಗಳಲ್ಲಿ, 27 ಇನಿಂಗ್ಸ್ ಆಡಿ, 36.76 ಸರಾಸರಿಯಲ್ಲಿ 769 ರನ್ ಹೊಡೆದರು. ಅವರ 106 ರನ್ ಅತ್ಯುತ್ತಮ ಸ್ಕೋರ್ ಆಗಿತ್ತು. ಒಂದು ಶತಕ ಮತ್ತು 4 ಅರ್ಧ ಶತಕಗಳನ್ನು ಹೊಡೆದರು. ವಿಕೆಟ್ ಕೀಪರ್ ಆಗಿ, 25 ಕ್ಯಾಚ್ ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದರು.
1955-56 ರಲ್ಲಿ ಬಾಲಾಜಿ ಮತ್ತು ಎಸ್. ವಿ. ರಂಗರಾಜ್ ಹೈದರಾಬಾದ್ ವಿರುದ್ಧ ಮೊದಲನೇ ವಿಕೆಟ್ಟಿಗೆ 119 ರನ್ ಹೊಡೆದರು. ಇದು ಮೈಸೂರಿನ ಮೊದಲನೇ ವಿಕೆಟ್‌ಗೆ ಬಾರಿಸಿದ ಮೊದಲ ಶತಕ. ಬಾಲಾಜಿ ಏಪ್ರಿಲ್ 27, 2012 ತಮ್ಮ 82ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಕಾಲವಾದರು.
*****
ಮೈಸೂರು, ಈಗಿನ ಕರ್ನಾಟಕ- ಕ್ರಿಕೆಟ್ ವಿಷಯಗಳಲ್ಲಿ ಬಹಳಷ್ಟು ಮುಂದುವರಿದಿದೆ. ಅನೇಕ ಆಟಗಾರರು ದೇಶವನ್ನು ಪ್ರತಿನಿಧಿಸಿ, ದೇಶಕ್ಕೆ ನಾಯಕರಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ರಣಜಿ ಟ್ರೋಫಿಯನ್ನು ಬಹಳ ಬಾರಿ ಗೆದ್ದಿದ್ದಾರೆ. ದೇಶದಲ್ಲೇ ಕರ್ನಾಟಕ ಕ್ರಿಕೆಟ್ ಆಟದಲ್ಲಿ, ಆಟದ ಬೆಳವಣಿಗೆಯಲ್ಲಿ, ಸೌಲಭ್ಯಗಳನ್ನು ಒದಗಿಸುವುದರಲ್ಲಿ, ಸ್ಟೇಡಿಯಮ್‌ಗಳನ್ನು ಕಟ್ಟುವುದರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು, ಐಪಿಎಲ್ ಎಲ್ಲಾ ನಡೆಯುತ್ತದೆ. ಭಾರತದ ಬಿಸಿಸಿಐ ತನ್ನ ಕ್ರಿಕೆಟ್ ಅಕಾಡೆಮಿಯನ್ನು ಇಲ್ಲಿ ತೆರೆದಿದೆ. ಇದು ಬಹಳ ಸಂತೋಷದ ವಿಷಯವೇ ಸರಿ.
ಆದರೆ ಅನೇಕ ದಶಕಗಳ ಮುಂಚೆ ಕ್ರಕಿಟ್ ರಾಜ್ಯದಲ್ಲಿ ಅಂಬೆಗಾಲನ್ನಿಡುವಾಗ, ಅನೇಕ ಧೀಮಂತರು ಕ್ರಿಕೆಟ್‌ನ ಬೆಳವಣಿಗೆಗಾಗಿ ತಳಪಾಯಿ ಹಾಕುವುದಕ್ಕೆ ಟೊಂಕ ಕಟ್ಟಿ ನಿಂತರು. ಆರ್ಥಿಕ ಸ್ಥಿತಿ ಆಗ ಅಷ್ಟು ಉತ್ತಮವಿರಲಿಲ್ಲ. ಅನೇಕರು ತಮ್ಮ ಸಮಯ, ದುಡ್ಡು ಹಾಕಿ ಸಂಸ್ಥೆಗಳನ್ನು ಕಟ್ಟಿದರು. ಪ್ರತಿಭೆಯನ್ನು ಕಂಡುಹಿಡಿದು ಅದು ಬೆಳಕಿಗೆ ಬರಲು ಪ್ರೋತ್ಸಾಹಿಸಿದರು. ಅವರೆಲ್ಲರ ಪರವಾಗಿ ಇಂದು ಏಳು ದಶಕಗಳಹಿಂದೆ ಕ್ರಿಕೆಟ್ ಟೀಮನ್ನು ಕಟ್ಟಿ, ಎಷ್ಟೆಷ್ಟೋ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ತಮ್ಮ ವ್ಯಾಸಂಗವನ್ನು ಮುಂದುವರಿಸಿ, ಅದರಲ್ಲೂ ಸಮಾಜ ಸೇವೆಯನ್ನು ಸಲ್ಲಿಸಿದ ಧೀಮಂಥ ತ್ರಿಮೂರ್ತಿಗಳಿಗೆ ಕ್ರಿಕೆಟಾಯ ನಮಃ ನಮೋನಮಃ.
# ಕೊನೆಯ ಮಾತು: 1953-54ರಲ್ಲಿ ರಣಜಿ ಪಂದ್ಯದಲ್ಲಿ ಒಂದು ವಿಸ್ಮಯ ಘಟನೆ ನಡೆಯಿತು. 3 ಜೊತೆ ಅಣ್ಣ-ತಮ್ಮಂದಿರು ಒಂದೇ ಫಸ್ಟ್ ಕ್ಲಾಸ್ ಪಂದ್ಯದಲ್ಲಿ -ರಣಜಿ ಪಂದ್ಯದಲ್ಲಿ ಭಾಗವಹಿಸಿದರು! ಮೈಸೂರಿನ ಪರ ಆಡಿದ ಅಣ್ಣ ತಮ್ಮಂದಿರು -ಬಾಲಾಜಿ ಶ್ರೀನಿವಾಸನ್ ಮತ್ತು ಅವರ ಸಹೋದರ ಕೆ. ಶ್ರೀಧರ್, ಎಲ್. ಟಿ. ಆದಿಶೇಷ್ ಮತ್ತು ಮೊದಲ ಬಾರಿ ರಣಜಿ ಪಂದ್ಯ ಆಡುವುದಕ್ಕೆ ಬಂದ ಅವರ ಸಹೋದರ ಎಲ್. ಟಿ. ಸುಬ್ಬು. ಆಂಧ್ರ ಟೀಮಿನಲ್ಲಿ ಸಿ.ಕೆ. ನಾಯುಡು ಮತ್ತು ಅವರ ಸಹೋದರ ಸಿ.ಎಸ್. ನಾಯುಡು ಪ್ರತಿನಿಧಿಸಿದರು! ಇದೊಂದು ಅಪೂರ್ವ ದಾಖಲೆ!
ಫಿಲಿಪ್ಸ್ ಕಂಪನಿಯಿಂದ ನಿವೃತ್ತರಾದ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು `ಶಂಕರ್ಸ್ ವೀಕ್ಲಿ’ಯಲ್ಲಿ ಹಾಸ್ಯ ಲೇಖನವನ್ನು ಬರೆಯುತ್ತಿದ್ದರು. ಈಗ ಅಪರಂಜಿ ಮಾಸಿಕ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಾರೆ. ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸಿಎನೆನ್ ಮತ್ತು ನ್ಯೂಸ್ ೧೮ ನಲ್ಲಿಯೂ ಅವರ ಲೇಖನಗಳು ಪ್ರಕಟವಾಗಿವೆ. ‘ಅಜ್ಜಿ ಮತ್ತು ಇತರ ಕತೆಗಳು’ ಅವರ ಪ್ರಕಟಿತ ಕೃತಿ.