ಬೆಳೆಯುವ ಕಾಲದಲ್ಲಿ ಮಕ್ಕಳಿಗೆ ಕಷ್ಟ ಗೊತ್ತಾಗಬಾರದು. ನಾವು ಪಟ್ಟ ಕಷ್ಟ ಅವರಿಗೆ ಸೋಕಬಾರದು ಎಂದು ಶ್ರಮಿಸಿದ ತಂದೆತಾಯಿಯರಿಗೆ ಈ ಬಗೆಯ ಸವಾಲುಗಳು ಹೆಚ್ಚು. ಚೆನ್ನಾಗಿ ಓದಿಸಬೇಕು. ಒಳ್ಳೆಯ ಊಟ, ಬಟ್ಟೆ, ಗಾಡಿ ಕೊಡಿಸಬೇಕು. ಅನುರೂಪ ಜೋಡಿಯನ್ನು ಹುಡುಕಬೇಕು. ಅವರ ಬಾಳು ಬಂಗಾರವಾಗಬೇಕು. ಎಂಬ ವಿಷಯಗಳೇ ಪ್ರಾಧಾನ್ಯತೆ ಪಡೆದು, ಮಕ್ಕಳಿಗೆ ತಮ್ಮ ಹೆತ್ತವರ ಹಿನ್ನೆಲೆ, ಕಷ್ಟ, ಅವಮಾನ, ಅಸಹಾಯಕತೆಗಳ ಪರಿಚಯವೇ ಇರುವುದಿಲ್ಲ. ಬದುಕಿನ ಸುಂದರ ಮುಖವನ್ನೇ ಕಂಡು ಬೆಳೆದವರಿಗೆ ಹೊರಜಗತ್ತಿನ ಸಂಕೀರ್ಣತೆ ಅರಿವಿಗೆ ನಿಲುಕುವುದಿಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

“ಇರುವುದು ಒಬ್ಬಳೇ ಮಗಳು. ಮುಚ್ಚಟೆಯಿಂದ ಮದುವೆ ಮಾಡಿ ಅವಳು ಸುಖಸಂಸಾರ ನಡೆಸುವುದನ್ನು ಕಣ್ತುಂಬಿಕೊಂಡು, ಮೊಮ್ಮಕ್ಕಳ ಜೊತೆ ಆಡುತ್ತಾ ಸಮಯ ಕಳೆಯಬೇಕೆನ್ನುವ ಆಸೆ ನೆರವೇರುವ ಲಕ್ಷಣವೇ ಇಲ್ಲ. ಎರಡು ಮಕ್ಕಳ ತಂದೆ, ಇವಳಿಗಿಂತ ಹದಿನೈದು ಇಪ್ಪತ್ತು ವರುಷ ದೊಡ್ಡವನು, ಊರಲ್ಲಿ ಹೆಸರು ಕೆಡಿಸಿಕೊಂಡಿರುವವನ ಮೇಲೆ ಇವಳಿಗೆ ಪ್ರೇಮವಂತೆ. ಅವನು ವಿಚ್ಚೇದನಕ್ಕೆ ಅರ್ಜಿ ಹಾಕಿ ಹತ್ತು ವರ್ಷವಾಯಿತು. ಮೊದಲನೇ ಹೆಂಡತಿ ಚಾಲಾಕಿ. ಒಪ್ಪಿಗೆ ನೀಡದೆ ದಿನಕ್ಕೊಂದು ಕಗ್ಗಂಟು ಸೃಷ್ಟಿಸಿ, ಕೇಸ್ ಮುಗಿಯದ ಹಾಗೆ ಆಡಿಸುತ್ತಿದ್ದಾಳೆ. ಇಷ್ಟಾಗಿಯೂ ನಮ್ಮ ಮಗಳಿಗೆ ಅವನ ಮೇಲಿನ ಆಸೆ‌ ತೀರಿಲ್ಲ. ಕೈತುಂಬ ಸಂಪಾದಿಸ್ತಾಳೆ. ಒಳ್ಳೆ ಹುದ್ದೆಯಲ್ಲಿದ್ದಾಳೆ. ಏನೂ ಹೇಳುವಂತಿಲ್ಲ. ನೆಂಟರ ಕೊಂಕು ಮಾತಿಗೂ ಚರ್ಮ ದಪ್ಪವಾಗಿ ಕಾಲವಾಯ್ತು. ನಾವು ಸತ್ತ ಮೇಲೆ ಯಾರನ್ನಾದರೂ ಕಟ್ಟಿಕೋ. ಬದುಕಿರುವ ತನಕ ಅವನೊಂದಿಗೆ ಮದುವೆ ಸಾಧ್ಯವಿಲ್ಲ ಎಂದಿದ್ದೇವೆ. ಇವಳ ಯೋಚನೆಯಲ್ಲಿ ನನ್ನ ಹೆಂಡತಿಯ ಬಿಪಿ, ಶುಗರ್ ಯದ್ವಾತದ್ವಾ ಏರತ್ತೆ. ನನಗೂ ಹಾರ್ಟ್ ಪ್ರಾಬ್ಲಂ ಶುರುವಾಗಿದೆ. ಯಾರಿಗೆ ಹೇಳೋಣ?” ಅವರು ಬಹಳ ಅಪರೂಪಕ್ಕೆ ಮನಬಿಚ್ಚಿ ತಮ್ಮ ಸ್ನೇಹಿತರ ಹತ್ತಿರ ಮಾತನಾಡುತ್ತಿದ್ದರು.

“ಹುಟ್ಟಿಸಿದ ಮಾತ್ರಕ್ಕೆ ನಮ್ಮ ಮಕ್ಕಳ ಮೇಲೆ ನಮಗೆ ಹಕ್ಕು ಬರುವುದಿಲ್ಲ. ಅವರನ್ನು ಓದಿಸಿ, ಬೆಳೆಸಿ, ಕಷ್ಟಸುಖ ತಿಳಿಸಿ ದೊಡ್ಡವರನ್ನಾಗಿ ಮಾಡುವುದಷ್ಟೇ ನಮ್ಮ ಕೆಲಸ. ನಂತರದ್ದು ಅವರ ಹಣೆಬರಹ ಇದ್ದಂಗೆ ಅಂತ ಸಮಾಧಾನ ಮಾಡ್ಕೋಬೇಕು. ಎಷ್ಟೆಲ್ಲ ತಿಳುವಳಿಕೆ ಇದ್ದೂ ಯಾವುದೋ ಅಪಾಪೋಲಿಯನ್ನು ಕಟ್ಕೋತೀನಿ ಅಂತ ಹದಿನೈದು ವರ್ಷದಿಂದ ಹಠ ಹಿಡಿದು ಕೂರುತ್ತಾಳಂದ್ರೆ ಅದು ವಿಧಿಯ ಕೈವಾಡ ಅನ್ಕೊಳ್ಳದೆ ಬೇರೆ ದಾರಿಯಿಲ್ಲ. ನಿಜ. ನೋವಾಗತ್ತೆ. ಆದರೆ ಎಷ್ಟು ದಿನ ಅಂತ ಇದೇ ವಿಷಯವಾಗಿ ಕೊರಗ್ತಾ ಕೂತ್ಕೋತೀರಿ? ನಿಮ್ಮ ಕರ್ತವ್ಯ ನೀವು ಮಾಡಿದ್ದಾಗಿದೆ. ಮಿಕ್ಕಿದ್ದು ಭಗವಂತ ನಡೆಸಿದ ಹಾಗಾಗಲಿ ಅಂತ ನಿಶ್ಚಿಂತೆಯಿಂದ ಇರುವುದನ್ನು ಅಭ್ಯಾಸ ಮಾಡಿ.” ಅವರ ಸ್ನೇಹಿತರು ಸಮಾಧಾನ ಹೇಳುತ್ತಿದ್ದರು.

ಈ ರೀತಿಯ ಗೋಜಲು ಈಗ ಪ್ರತಿ ಮನೆಗೊಂದರಂತೆ ಇದೆ. ಓದನ್ನು ಅರ್ಧಕ್ಕೇ ನಿಲ್ಲಿಸಿ ಪಡಪೋಶಿಯಂತೆ ಊರೂರು ಸುತ್ತುವ, ಹಣಕ್ಕಾಗಿ ಪೀಡಿಸಿ ಕೆಟ್ಟಚಟ ಹಚ್ಚಿಕೊಳ್ಳುವ, ಪ್ರೀತಿಪ್ರೇಮದ ಗುಂಗಿನಲ್ಲಿ ಬೇಡದ ಅಪಾಯ ಮೈಮೇಲೆ ಎಳೆದುಕೊಳ್ಳುವ, ತಮ್ಮ ಸಂಸಾರದ ಗೋಳಿಗೆ ನೀವೇ ಕಾರಣವೆಂದು ದೂಷಿಸುವ ಮಕ್ಕಳು ತಂದೆತಾಯಿಯ ಬದುಕನ್ನು ದುರ್ಭರಗೊಳಿಸುತ್ತಾರೆ.

ಬೆಳೆಯುವ ಕಾಲದಲ್ಲಿ ಮಕ್ಕಳಿಗೆ ಕಷ್ಟ ಗೊತ್ತಾಗಬಾರದು. ನಾವು ಪಟ್ಟ ಕಷ್ಟ ಅವರಿಗೆ ಸೋಕಬಾರದು ಎಂದು ಶ್ರಮಿಸಿದ ತಂದೆತಾಯಿಯರಿಗೆ ಈ ಬಗೆಯ ಸವಾಲುಗಳು ಹೆಚ್ಚು. ಚೆನ್ನಾಗಿ ಓದಿಸಬೇಕು. ಒಳ್ಳೆಯ ಊಟ, ಬಟ್ಟೆ, ಗಾಡಿ ಕೊಡಿಸಬೇಕು. ಅನುರೂಪ ಜೋಡಿಯನ್ನು ಹುಡುಕಬೇಕು. ಅವರ ಬಾಳು ಬಂಗಾರವಾಗಬೇಕು. ಎಂಬ ವಿಷಯಗಳೇ ಪ್ರಾಧಾನ್ಯತೆ ಪಡೆದು, ಮಕ್ಕಳಿಗೆ ತಮ್ಮ ಹೆತ್ತವರ ಹಿನ್ನೆಲೆ, ಕಷ್ಟ, ಅವಮಾನ, ಅಸಹಾಯಕತೆಗಳ ಪರಿಚಯವೇ ಇರುವುದಿಲ್ಲ. ಬದುಕಿನ ಸುಂದರ ಮುಖವನ್ನೇ ಕಂಡು ಬೆಳೆದವರಿಗೆ ಹೊರಜಗತ್ತಿನ ಸಂಕೀರ್ಣತೆ ಅರಿವಿಗೆ ನಿಲುಕುವುದಿಲ್ಲ. ಮನೆಯಲ್ಲಿ ಸಾಧ್ಯವಾಗದ ಮುಕ್ತ ಮಾತುಕತೆ, ಮತ್ತೆಲ್ಲೋ ಬೇರೆ ರೂಪದಲ್ಲಿ ಸಿಕ್ಕಾಗ ಮುಗ್ಧವಾಗಿ ಬಲೆಯೊಳಗೆ ಬೀಳುತ್ತಾರೆ. ತಂದೆತಾಯಿಗಳು ಇರುವುದೇ ನಮ್ಮ ಅಗತ್ಯಗಳನ್ನು ಪೂರೈಸಲು ಎಂಬ ಭಾವನೆ ಅಷ್ಟರಲ್ಲಾಗಲೇ ಬಲವಾಗಿರುತ್ತದೆ. ಹದಿನೈದು- ಇಪ್ಪತ್ತು ವರ್ಷ ಬರಿಯ ಸಿಹಿಮಾತನ್ನೇ ಕೇಳಿ ಬೆಳೆದವರಿಗೆ ಹೆತ್ತವರ ವಿರೋಧ ಸಿಟ್ಟಿಗೇಳಿಸುತ್ತದೆ. ನನ್ನ ಮಾತೇ ನಡೆಯಬೇಕೆಂದು ಹಠ ಹಿಡಿಯುತ್ತಾರೆ. ಮಕ್ಕಳು ಕೈತಪ್ಪಿ ಹೋದ ದುಃಖವೊಂದೇ ಕೊನೆಗೆ ಉಳಿಯುತ್ತದೆ.

ಮನೆಯ ಕಷ್ಟಸುಖದಲ್ಲಿ ಮಕ್ಕಳನ್ನೂ ಭಾಗಿಯಾಗಿಸುತ್ತಾ, ವಾಸ್ತವದ ಅರಿವು ಮೂಡಿಸುತ್ತಾ, ಆಗೀಗ ಸಣ್ಣಪುಟ್ಟ ಶಿಕ್ಷೆ, ಬುದ್ಧಿಮಾತಿಗೂ ಜಾಗ ನೀಡಿದಲ್ಲಿ ಇಂತಹ ಸನ್ನಿವೇಶಗಳು ಕಡಿಮೆಯಾಗಬಹುದೇನೋ. ನೀವೇನಂತೀರಿ?