ಸಂಜೆಯ ಹೊತ್ತು. ಮುಖಕ್ಕೆ ಮಂಜಿನ ಸೆರಗು ಎಳೆದುಕೊಂಡು ಪತಿವ್ರತೆಯರಂತೆ ತಲೆತಗ್ಗಿಸಿ ನಿಂತಿರುವ ಗಾಳಿ ಮರಗಳು ತಾವು ಇರುವೆವೋ ಇಲ್ಲವೋ ಎಂಬಂತೆ ಮರೆಯಾಗಲು ಹವಣಿಸುತ್ತಿದ್ದವು. ಅಷ್ಟು ಹೊತ್ತಿಗೆ ಆ ಬೆಟ್ಟದ ಮಣ್ಣುದಾರಿ ಏರಿಕೊಂಡು ಬಂದ ಅತ್ಯಾಧುನಿಕ ವಾಹನವೊಂದು ತಾನೂ ಆ ಮಂಜನ್ನು ಸರಿಸಿಕೊಂಡು ರಾಕ್ಷಸನಂತೆ ಆರ್ಭಟಿಸಿ ನಿಂತಿತು. ಅದಾಗ ತಾನೇ ತನ್ನ ಮಾಂಸಖಂಡಗಳನ್ನು ಹುರಿಗೊಳಿಸಿ ಬಂದಂತೆ ಕಾಣುತ್ತಿದ್ದ ದುಡುಕುಮುಖದ ಯುವಕ ಅದರೊಳಗಿಂದ ಮೊದಲು ಇಳಿದ.
ಅವನ ಜೊತೆಗಿರಲು ತಾನೂ ಕಠಿಣಳಾಗಬೇಕೆಂದೇನಿಲ್ಲ. ತನ್ನ ಮಂದನಡಿಗೆಯೊಂದೇ ಸಾಕು ಅವನು ಅಳುವಂತೆ ಮಾಡಲು ಎಂಬ ಅತೀವ ಆತ್ಮವಿಶ್ವಾಸವಿದ್ದ ಯುವತಿಯೊಬ್ಬಳು ತಾನೂ ಇಳಿದಳು. ಇಬ್ಬರೂ ಜೋರಾಗಿ ನಿದ್ದೆ ಹೊಡೆದು ಇದೀಗ ತಾನೇ ಮಂಜು ನೋಡಲು ಎದ್ದು ಬಂದಿರುವರು ಎಂಬಂತೆ ಅವರಿಬ್ಬರ ಮುಖದಲ್ಲೂ ನಿದ್ದೆ ಹಾಗೇ ಉಳಿದುಕೊಂಡಿತ್ತು. ಸಣ್ಣಗೆ ರಾಚುವ ಮಳೆ ಹನಿಗಳು ಮತ್ತು ತಬ್ಬಿಕೊಳ್ಳುತ್ತಿರುವ ಮಂಜು. ಅವರಿಬ್ಬರೂ ಪ್ರಕೃತಿಯ ಈ ವ್ಯಾಪಾರ ತಮ್ಮ ಬರುವಿಕೆಗಾಗಿಯೇ ಕಾಯುತ್ತಿತ್ತೇನೋ ಎಂಬಂತೆ ಕೈಗೆ ಕೈ ಕೋಸಿಕೊಂಡು ಯಾವುದೋ ಮಳೆ ಸಿನೆಮಾದ ನಾಯಕ ನಾಯಕಿಯರಂತೆ ಅಲ್ಲಿ ಅಭಿನಯಿಸಲು ತೊಡಗಿದರು. ಗಲ್ಲದ ಮೇಲೆ ಕೈಯಿಟ್ಟುಕೊಂಡು, ತೋಳಿನ ಮೇಲೆ ಗದ್ದ ಊರಿಕೊಂಡು ಹನಿಯುತ್ತಿದ್ದ ಮರದ ರೆಂಬೆಗೆ ಒರಗಿಕೊಂಡು ಅವರಿಬ್ಬರೂ ತಾವು ಯಾವತ್ತೋ ನೋಡಿದ್ದ ಸಿನೆಮಾ ಒಂದನ್ನು ನೆನಪಿಸಿಕೊಂಡು ಅಭಿನಯಿಸುತ್ತಿದ್ದರು. ನಾನು ಮಂಜು ಕರಗುವುದನ್ನೇ ಕಾಯುತ್ತಿದ್ದೆ.
ಮಂಜು ಕರಗಿದ ಮೇಲೆ ಬೀಸಿ ಬರುವ ಗಾಳಿ ಮತ್ತು ಅದರ ಜೊತೆಗೇ ಹಾರಿ ಬರುವ ಬಿಸಿಲು. ಆ ಬಿಸಿಲಲ್ಲಿ ಹೊಳೆಯುವ ಶಿಖರದ ತುದಿಗಳು ಮತ್ತು ಆಕಾಶದಲ್ಲಿ ಬಣ್ಣ ಬದಲಾಯಿಸುತ್ತ ಅಭಿನಯಿಸಲು ತೊಡಗುವ ಮೋಡಗಳು. ಒಂದೊಂದು ದಿನವೂ ಬೇರೆಯೇ ತರಹ ಕಾಣಿಸುವ ಆಕಾಶದ ಫೋಟೋ ತೆಗೆಯಲು ಅಲ್ಲಿ ಬಂದಿದ್ದೆ. ಆದರೆ ಈವತ್ತು ಈ ಜೋಡಿಗಳ ಅಭಿನಯ ಮುಗಿದ ಮೇಲೆಯೇ ತಾನು ಮರೆಯಾಗುವುದು ಎಂದು ಮಂಜು ಅಲ್ಲಿ ಕರಗದೆ ನಿಂತುಕೊಂಡಿತ್ತು.
‘ಅಂಕಲ್, ನಮ್ಮ ಫೋಟೋ ತೆಗೆಯುತ್ತೀರಾ? ನಾವು ಕ್ಯಾಮರಾ ಮರೆತು ಬಂದಿದ್ದೇವೆ’ ಎಂದು ಆ ಯುವತಿ ಉಲಿದಳು. ಇದಕ್ಕೆ ತನ್ನದೂ ಸಮ್ಮತಿ ಇದೆ ಎಂಬಂತೆ ಆ ಯುವಕನೂ ನಕ್ಕ. ಹೊಸತಾಗಿ ಮದುವೆಯಾಗಿ ಬಂದಿರಬೇಕು. ಇಬ್ಬರ ನೊಸಲಲ್ಲೂ ಕುಂಕುಮ ಚೆಲ್ಲಿಕೊಂಡಿತ್ತು. ‘ಆಯಿತು ತೆಗೆಯುತ್ತೇನೆ’ ಎಂದು ಕ್ಲಿಕ್ಕಿಸತೊಡಗಿದೆ. ಅವರಿಬ್ಬರೂ ಸಹಜ ಅಭಿನಯಗಾರರಂತೆ ಒಬ್ಬರ ಕಣ್ಣಲ್ಲಿ ಕಣ್ಣಿಟ್ಟು, ಹೆಗಲಿಗೆ ಹೆಗಲು ತಾಗಿಸಿ, ತಾವೆಲ್ಲಾದರೂ ಒಬ್ಬರನ್ನೊಬ್ಬರು ಬಿಟ್ಟು ಅಗಲಿದರೆ ತೀರಿಯೇ ಹೋಗಿ ಬಿಡುವೆವೋ ಎಂಬಂತೆ ಪ್ರೀತಿ ತೋರಿಸುತ್ತಾ ಫೋಸು ಕೊಡುತ್ತಿದ್ದರು.
ಆವರ ಚಂದವೋ ಅಥವಾ ಮುತ್ತಿರುವ ಆ ಮಂಜಿನ ಮೃದುತ್ವವೋ ಗೊತ್ತಿಲ್ಲ. ಆ ಹೊತ್ತಲ್ಲಿ ಅಲ್ಲಿ ಒಂದು ಕೃತಕ ನಂದನವನವಂತೂ ಸೃಷ್ಟಿಯಾಗಿತ್ತು. ಅವರಿಗೆ ತಡವಾಯಿತು ಅಂತ ಕಾಣುತ್ತದೆ. ‘ಅಂಕಲ್ ಹೋಗಬೇಕು ಫೋಟೋಗಳನ್ನು ಮೈಲ್ ಮಾಡುತ್ತೀರಾ ನಾವು ಹೋಗಬೇಕು’ ಎಂದು ತಮ್ಮ ಕಾರ್ಡನ್ನು ಕೈಗೆ ತುರುಕಿ ವಾಹನವನ್ನು ಆರ್ಭಟಿಸುತ್ತಾ ಅಲ್ಲಿಂದ ಹೊರಟರು. ಅವರು ಹೊರಡುವುದನ್ನೇ ಕಾಯುತ್ತಿತ್ತು ಎಂಬಂತೆ ಮಳೆ ಹನಿಯಲು ಶುರುವಾಯಿತು. ಕೊಡೆ ಬಿಡಿಸಿಕೊಂಡು ನಿಂತೆ. ಸುರಿಯುವ ಮಳೆ ಅವರಿಗೆ ಹೋಗಲು ಅನುವು ಮಾಡಿಕೊಟ್ಟು ಮತ್ತೆ ವಿನಾಕಾರಣ ಸುರಿಯಲು ತೊಡಗಿತು.
ಒಂದು ಬೆಳಗು ಶುರುವಾಗಿ ಅದೇ ಹಗಲು ಸಂಜೆಯಾಗುವುದರೊಳಗೆ ಎಷ್ಟೊಂದು ಬಾರಿ ನಿಂತು ಮತ್ತೆ ಸುರಿಯುವ ಮಳೆ. ಬೆಟ್ಟದ ಕೆಳಗಿಂದ ಬೆಳ್ಳಕ್ಕಿಗಳು ಹಾರಿ ಬಂದು ಗಾಳಿ ಮರಗಳ ಮೇಲೆ ಕೂರಲು ತೊಡಗಿದ್ದವು, ಮರದ ತುದಿಯಲ್ಲಿ ಕರಗದೆ ಉಳಿದುಕೊಂಡ ಮಂಜಿನ ತುಣುಕುಗಳಂತೆ ಕಾಣಿಸುತ್ತಿರುವ ಬೆಳ್ಳಕ್ಕಿಗಳು. ಮಳೆಯೂ ನಿಂತು ಬಿಸಿಲು ಹೊಳೆಯುತ್ತ ಆಕಾಶವೂ ತನ್ನ ಎಂದಿನ ಬಣ್ಣಬಣ್ಣದ ಅಭಿನಯಕ್ಕೆ ಸಿದ್ದವಾಗುತ್ತಿತ್ತು. ಯಾಕೋ ಫೋಟೋ ತೆಗೆಯುವುದೂ ಬೇಡಾ ಏನೂ ಬೇಡಾ ಎಂದು ವಾಪಾಸು ಹೊರಟು ಬಂದೆ
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.