ಆ ಮಂಗಾಡಳ್ಳಿಯವನ ನಿಮ್ಮಪ್ಪ ಹಿಡಿಸಿ ಕಡಿಸಿಬಿಟ್ಟನಂತಲ್ಲಾ… ಪ್ರಾಣ ಮಿತ್ರಾ ಅಂತಿದ್ದ. ಪ್ರಾಣ ಮಿತ್ರನೇ ಪ್ರಾಣ ತಿಂದು ಬಿಟ್ಟನಲ್ಲಾ… ತಂದೆ ತಾಯಿ ಮಾಡಿದ ಪಾಪ ಮಕ್ಕಳಿಗೆ ಶಾಪವಾಗಿ ಬಡಿಯುತ್ತದಂತೇ… ಯಾರ ತಪ್ಪಿಗೆ ಯಾರ ಶಿಕ್ಷೆಯೋ ನಿನ್ನ ನೋಡಿದರೆ ಅಯ್ಯೋ ಅನಿಸುತ್ತದೆ. ನಿಮ್ಮಪ್ಪನ ಮೇಲಿನ ಸಿಟ್ಟಿಗೆ ನಿಮ್ಮಜ್ಜಿಯೆ ಕತ್ತು ಮುರಿಯಲು ಮುಂದಾಗಿದ್ದಳಂತಲ್ಲಾ… ನಿಮ್ಮಜ್ಜಿಯೇ ನನ್ನ ಜೊತೆ ಹೇಳಿಕೊಂಡು ಕಣ್ಣೀರು ಹಾಕಿದ್ದಳು. ಸಂತೆಗೆ ಹೋದರೆ ನಿಮ್ಮಜ್ಜಿಯ ಮಾತಾಡಿಸೂ.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಒಂಭತ್ತನೇ ಕಂತು. 

 

ತಾತನಿಗೆ ಮನುಷ್ಯರ ಭಾಷೆಯೆ ಸುಳ್ಳೆನಿಸಿತ್ತೇನೋ ಹಾಗಾಗಿಯೆ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ. ಚಳಿಗೆ ಬೇಗ ಎಚ್ಚರವಾಗಿತ್ತು. ಹಕ್ಕಿಗಳ ಇಂಚರವೊ ಇಂಚರ. ಮೂಡುತ್ತಿದ್ದ ಸೂರ್ಯ. ಹಿತಮಿತಬಿಸಿ ಚಳಿಗಾಳಿ ಹವೆ. ಎಲೆ ಉದುರಿ ಚಿಗುರುತ್ತಿದ್ದ ಮರಗಳು ಬಿಸಿಲಿಗಾಗಿ ಕಾತರಿಸುತ್ತಿದ್ದವು. ಕೆರೆ ಕಾಲುವೆಯ ನೀರು ಬೆಚ್ಚಗೇ ಇದ್ದವು. ಮೈ ತೊಳೆದುಕೊಂಡೆವು. ಅಲ್ಲೇ ಎಲಚಿ ಹಣ್ಣು ಉದುರಿದ್ದವು. ಬೇಕಾದವನ್ನು ಆಯ್ದು ತಿಂದೆವು. ತಾತ ಯಾವತ್ತು ತಾನೆ ನಗುನಗುತ್ತಾ ಇದ್ದ? ಅವನ ಗಂಭೀರ ಮುಖವ ನೋಡುವುದು ಕಷ್ಟ. ಆದರೂ ಅವನೆಂದರೆ ನಮಗೆ ಅಷ್ಟು ಇಷ್ಟು. ತಮ್ಮನೊ ಮನೆಯತ್ತ ನಡೆಯಲು ತಾತನ ಒತ್ತಾಯಿಸುತ್ತಿದ್ದ. ನನಗೆ ಮನೆಯೇ ಬೇಡ ಎನಿಸುತ್ತಿತ್ತು. ತಾತ ಅಲೆಮಾರಿ. ಅವನ ಹಿಂಬಾಲಿಸಿದರೆ ಅದೇ ಸುಖ… ತಾತ ಮುಂದೇನು ಮಾಡಬಹುದು ಎಂದು ಕಲ್ಪಿಸುತ್ತಿದ್ದೆ. ಅವನ ತಲೆಯೊ ಆಕಾಶವನ್ನು ಹೊತ್ತಂತಿತ್ತು. ಗುರಿ ಇಲ್ಲದೆ ಎಲ್ಲಿಗಾದರೂ ಹೊರಡುವುದು ಅವನ ಜಾಯಮಾನ. ಗುರಿಯ ಬೆನ್ನ ಹಿಂದೆ ನಡೆದವರೆಲ್ಲ ಗುರಿ ಮುಟ್ಟಿದರೊ ಎಲ್ಲಿ ಹೋದರೊ… ಗೊತ್ತಿಲ್ಲ; ‘ತಾತ ಎಲ್ಲಿಗೆ ಹೋಗುತ್ತಾನೆಂದು ತಾತನನ್ನು ಬಿಟ್ಟು ನಾವೇ ಮನೆಗೆ ವಾಪಸ್ಸು ಹೋಗುವ ಬಾ’ ಎಂದು ಮಂಗ ತಮ್ಮ ಕೈ ಹಿಡಿದು ಎಳೆಯುತಿದ್ದ. ಬಿಡಿಸಿಕೊಂಡು ಅತ್ತ ತಳ್ಳಿದೆ. ತಾತ ಹೊರಟ. ಹಿಂಬಾಲಿಸಿದೆ. ತಮ್ಮ ಬ್ಯಾಡ ಬಾ ಎಂದು ಕೂಗಿದ. ನನ್ನ ಹಿಂದೆ ಇವನು ಬರುವನೆಂಬ ಅಂದಾಜು ತಾತನಿಗೆ ಇರಲಿಲ್ಲ. ಬೆತ್ತ ತೋರಿ ಎಚ್ಚರಿಸಿದ. ಆತ ಅದೇ ಮೊದಲು ಹಾಗೆ ಮಾಡಿದ್ದು. ತಾತಾ! ಎಂದೆ. ಬರಬೇಡ ಹೊರಟು ಹೋಗು ಎಂದು ಕಲ್ಲು ಎಸೆದ. ಅರೇ; ತಾತನಿಗೆ ಏನಾಯಿತು? ರಾತ್ರಿ ಪೂರ ಕಾದಿದ್ದನಲ್ಲಾ; ಅಷ್ಟು ಪ್ರೀತಿಯಲ್ಲಿ ಊಟ ಮಾಡಿಸಿದ್ದನಲ್ಲಾ… ನಾವೇನು ತಪ್ಪು ಮಾಡಿದೆವು?

ಎಂತಹ ವಿಕಟ ನಾಟಕ! ತಾತ ಆ ಗೋಮಾಳವೇ ಪ್ರತಿಧ್ವನಿಸುವಂತೆ ಅಬ್ಬರಿಸಿದ. ಭಯವಾಯಿತು. ತಮ್ಮ ಹಿಂತಿರುಗಿ ನೋಡದೆ ಊರಿನತ್ತ ಓಡಿ ಹೋಗುತ್ತಿದ್ದ. ನಾನೂ ಹಾಗೇ ಮಾಡಿದೆ. ನಿಂತು ನೋಡಿದೆ. ತಮ್ಮ ಕಾಣಿಸಲಿಲ್ಲ. ತಾತ ದೂರಕ್ಕೆ ಒಂದು ನೆರಳಂತೆ ಕಾಣುತಿದ್ದ. ಎಲ್ಲಿಗೆ ಹೋಗಲೀ. ಆ ವಯಸ್ಸಿನಲ್ಲಿ ಯಾವ ಗುರಿ, ಯಾವ ಭರವಸೆ? ದಾರಿಬದಿ ಸುಮ್ಮನೆ ಕೂತೆ. ಅವನೊಬ್ಬ ಸಾಧು. ಊರೂರ ಭಿಕ್ಷುಕ ಬಂದ. ನೋಡಿದ. ಯಾಕೆ ಒಬ್ಬನೇ ಎಂದ. ಯಾರಾದರೂ ಹಾಗೆ ಮರುಕ ತೋರಿದರು ಎಂದ ಕೂಡಲೆ ಬೇರೆ ಆಗಿಬಿಡುತ್ತಿದ್ದೆ. ಯಾವತ್ತೂ ನಾವು ಅಸಹಾಯಕರು ಗತಿ ಇಲ್ಲದವರು ಎಂದು ತೋರಿಸಿಕೊಳ್ಳಬಾರದು ಎಂದು ದೊಡ್ಡ ತಾತ ಹೇಳುತ್ತಿದ್ದ. ದೇವರ ಸೇವೆಗೆ ಹೋಗಿದ್ದೋ… ನಮ್ಮ ತಾತ ವಾಪಸ್ಸು ಹೋಗು ಎಂದು ಕಳಿಸಿ ಮುಂದೆ ಯಾರನ್ನೋ ನೋಡಿ ಬರುವುದಿದೆ ಎಂದು ಹೊರಟುಹೋದ ಎಂದೆ. ಆ ಸಂತನೂ ಮರದಡಿ ಕೂತ. ಚಿಕ್ಕ ತಾತನ ಬಗ್ಗೆ ಅವನಿಗೆ ಗೊತ್ತಿತ್ತು. ಅವನನ್ನೇ ಹುಡುಕಿಕೊಂಡು ಊರಿಗೆ ಹೋಗಿದ್ದೆ. ಸಿಗಲಿಲ್ಲ. ಈಗೆಲ್ಲಿಗೆ ಹೋದನೋ ನನ್ನನ್ನೇನಾದರೂ ಕಾಣಲು ಮುಂದೆ ಹೋದನೊ ಏನೊ… ಏನಾದರೂ ಹೇಳಿದನೇ ಎಂದು ಸಾಧು ಕೇಳಿದ. ಇಲ್ಲ ಎಂದೆ. ಆ ಸಾಧು ನನ್ನ ತಾಯ ಊರ ಕಡೆಯವನು. ಸಾಧು ಆದರೇನಂತೆ ಲೌಖಿಕದ ಎಲ್ಲ ಸಂಗತಿಗಳೂ ಅವನಿಗೆ ತಿಳಿದಿದ್ದವು.

`ಅಲ್ಲೋ ಮಗೂ; ಆ ಮಂಗಾಡಳ್ಳಿಯವನ ನಿಮ್ಮಪ್ಪ ಹಿಡಿಸಿ ಕಡಿಸಿಬಿಟ್ಟನಂತಲ್ಲಾ… ಪ್ರಾಣ ಮಿತ್ರಾ ಅಂತಿದ್ದ. ಪ್ರಾಣ ಮಿತ್ರನೇ ಪ್ರಾಣ ತಿಂದು ಬಿಟ್ಟನಲ್ಲಾ… ತಂದೆ ತಾಯಿ ಮಾಡಿದ ಪಾಪ ಮಕ್ಕಳಿಗೆ ಶಾಪವಾಗಿ ಬಡಿಯುತ್ತದಂತೇ… ಯಾರ ತಪ್ಪಿಗೆ ಯಾರ ಶಿಕ್ಷೆಯೋ ನಿನ್ನ ನೋಡಿದರೆ ಅಯ್ಯೋ ಅನಿಸುತ್ತದೆ. ನಿಮ್ಮಪ್ಪನ ಮೇಲಿನ ಸಿಟ್ಟಿಗೆ ನಿಮ್ಮಜ್ಜಿಯೆ ಕತ್ತು ಮುರಿಯಲು ಮುಂದಾಗಿದ್ದಳಂತಲ್ಲಾ… ನಿಮ್ಮಜ್ಜಿಯೇ ನನ್ನ ಜೊತೆ ಹೇಳಿಕೊಂಡು ಕಣ್ಣೀರು ಹಾಕಿದ್ದಳು. ಸಂತೆಗೆ ಹೋದರೆ ನಿಮ್ಮಜ್ಜಿಯ ಮಾತಾಡಿಸೂ; ಸಮಾಧಾನ ಆಗಲಿ ಅವಳಿಗೆ’ ಎಂದು ಬುತ್ತಿಯ ಬಿಚ್ಚಿದ ಕರ್ಜೂರ ಕಲ್ಲು ಸಕ್ಕರೆಯ ಕೊಟ್ಟ… `ತಕೋ ಈ ಚಿಲ್ಲರೆ ಕಾಸು ನಿನ್ನವು. ನಿನಗೆಂದು ನಿನ್ನ ಅಜ್ಜಿಕೊಟ್ಟಿದ್ದು. ಬಹಳ ದಿನವಾಯಿತು. ಹಾಗೇ ಇಟ್ಟಿದ್ದೆ. ಅವರವರ ಪಾಲು ಅವರವರದೇ ಮಗೂ! ಯಾರೂ ಅದನ್ನು ತಪ್ಪಿಸಲಾರರು… ಕಿತ್ತುಕೊಳ್ಳಲಾಗದು. ನಾಲ್ಕು ಅಕ್ಷರ ಕಲಿತಿಕೊ ನಿನ್ನ ತಾತನಿಗೇ ವಿದ್ಯೆ ಗೊತ್ತು! ನಿಮ್ಮಜ್ಜಿ ನಿನಗಾಗಿ ಕೊಟ್ಟ ಚಿಲ್ಲರೆ ಕಾಸುಗಳಿವಪ್ಪಾ… ತಕೋ; ಬೇಡ ಅನ್ನಬಾರದೂ. ನಿನ್ನ ತಾತನ ಹುಡುಕಾಡಿ ಬಂದರೆ ನೀನು ನನಗೆ ಸಿಕ್ಕಿದೆ. ಇಂತಲ್ಲಿ ಇಂತಾ ದಿನ ಇಂತಾ ಸ್ಥಿತೀಲಿ ಸಿಗಬೇಕು ಅಂತಾ ಇತ್ತು; ಸಿಕ್ಕಿದೆ. ನನಗೇನೊ ಬಿಡುಗಡೆ. ನಿಮ್ಮಜ್ಜಿ ಕೊಟ್ಟ ಚಿಲ್ಲರೆ ಕಾಸು ಗಂಟಲಲ್ಲಿ ನನ್ನ ಚುಚುತ್ತಿದ್ದವು… ಸಮಾಧಾನವಾಯ್ತು.

ಇರ್ತದೆ ಕೇಡು ಸದಾ ನೆರಳಂತೆ ಬೆನ್ನ ಹಿಂದೆಯೇ… ಹಾಗಂತ ಬೆನ್ನು ಬಿಟ್ಟು ಬದುಕೋಕೆ ಆಗುತ್ತಾ. ಇರ್ತವೆ ನೋವು ಸಂಕಟ ಅಪಮಾನ… ಅವು ಇರ್ಬೇಕು; ನಾವು ಮನುಷ್ಯರಾಗೋಕೇ. ಅವು ಇದ್ದೇ ಇರ್ತವೇ… ನರಕದಿಂದ ಸ್ವರ್ಗ ಕಣಪ್ಪಾ… ಸ್ವರ್ಗದಿಂದ ಸ್ವರ್ಗ ಅಲ್ಲಾ… ಬೆಳಕಿನಿಂದ ಬೆಳಕಲ್ಲ ಮಗೂ; ಕತ್ತಲಿಂದ ಬೆಳಕೂ… ದುಃಖದಿಂದ ಸುಖ ಕಣಪ್ಪಾ! ಯಾಕೊ ಬಾಯಲ್ಲಿ ಏನೇನೊ ಬಂದವು. ನಾನೊಬ್ಬ ಅರಿವಿಲ್ಲದವನು. ಬರಿದೇ ಒಲೆಯಿದ್ದಂತೆ. ಒಲೆ ಇದ್ದರೆ ಅಡುಗೆ ಆಗಿಬಿಡುತ್ತದೆಯೇ… ಸಾಮಾಗ್ರಿಗಳೆಲ್ಲ ಬೇಕಲ್ಲಪ್ಪಾ. ಬೆಂಕಿ ಬೇಕು ನೀರುಬೇಕು. ಕಾಳುಕಡ್ಡಿ ಬೇಕು. ಪಾತ್ರೆ ಪಗಡಿ ಇರಬೇಕು… ಒಲೆ ಒಂದಿದ್ದರೆ ಸಾಕೇ ಮಗೂ ಪಾಯಸ ಆಗಬೇಕು ಎಂದರೆ ಎಷ್ಟೆಲ್ಲ ಬೇಕಲ್ಲಪ್ಪಾ… ಎಲ್ಲಿಯ ಸಿಹಿ ಎಲ್ಲಿಯ ಸವಿ… ದೇವರನ್ನೂ ಹಾಗೇ ಕಾಣಬೇಕಪ್ಪಾ. ಸಣ್ಣ ಹುಡುಗ ನೀನು… ನಾಳೆ ದೊಡ್ಡವನಾಗುತ್ತೀಯೆ. ಅವತ್ತಿಗೆ ನಾನು ಇರ್ತೀನಿ ಅಂತಾ ಯಾವ ಗ್ಯಾರಂಟಿಯೂ ಇಲ್ಲಾ… ಹೋಗೋದರಲ್ಲಿರೋ ಸುಖಾ ಬರೋದರಲ್ಲಿ ಇಲ್ಲ ಮಗೂ. ಬರೋದೆಲ್ಲ ಹೋಗೋದಿಕ್ಕಾಗಿಯೇ… ಯಾರೊ ಒಬ್ಬ ಸಾಧು ನನಗೆ ಇಂಗೆ ಹೇಳಿದ್ದ ಅಂತಾ ನಾಳೆ ಬೆಳೆದ ಮೇಲೆ ನೆನಪು ಮಾಡಿಕೊ… ಆಗ; ಆಗ… ಆಗಾ; ನಾನೀಗ ನಿನಗೆ ಕೊಟ್ಟೆನಲ್ಲಾ ಕರ್ಜುರ ಸಕ್ಕರೇ; ಅವು ನನ್ನ ಆತ್ಮಕ್ಕೆ ಬಂದು ನೀನು ಬಾಳಿ ಬೆಳಗೋದನ್ನು ತಿಳಿಸ್ತವೆ… ಹೋಗಿ ಬಾ… ನಿನ್ನ ಚಿಕ್ಕ ತಾತ ಸಿಕ್ಕರೆ ನೆನಪಿಸುವೆ…’ ಎಂದು ಆ ಸಾಧು ಮೈ ಮರೆತು ಮಾತಾಡಿದ್ದ. ನನ್ನ ಮನದಲ್ಲಿ ಸಾಧುವಿನ ಗೂಡಾರ್ಥಗಳು ಗುಂ ಎನ್ನುತ್ತಿದ್ದವು. ಆತ ಹೊರಟು ಹೋದ. ನನಗೇನೂ ಹೊಳೆಯಲಿಲ್ಲ. ಖಾಲಿ ಖಾಲಿ, ಬೆಂಕಿಯನ್ನೆ ಕಾಣದ ಒಲೆಯಂತೆ ನನ್ನ ಮನಸ್ಸು ಗತಕಾಲದ ಬೂದಿ ಮೆತ್ತಿಕೊಂಡಂತೆ ಆಗಿತ್ತು.

ಅಜ್ಜಿಗೆ ನನ್ನ ಮೆಲೆ ನಿಜವಾಗಿಯೂ ಕರುಣೆ ಬಂದಿದೆಯೋ ಎಂದು ಹೊಳೆಯಲ್ಲಿ ಕಾಲು ಬಿಟ್ಟುಕೊಂಡು, ಜೊಂಡಿನಲ್ಲಿ ಗೂಡ ಕಟ್ಟಿಕೊಂಡು ಝೇಂಕರಿಸುತ್ತಿದ್ದ ಗೀಜಗನ ಹಕ್ಕಿಗಳ ಸುಖವ ಒದ್ದೆಯಾದ ಕಣ್ಣುಗಳಲ್ಲಿ ನೋಡುತ್ತಿದ್ದೆ. ಅಜ್ಜಿ ಕೊಟ್ಟಿದ್ದ ಕಾಸುಗಳು ಸದ್ದು ಮಾಡಿದವು. ಜೇಬಿಂದ ತೆಗೆದೆ. ಒಂದು ಪೈಸೆ, ಎರಡು, ಮೂರು ಪೈಸೆ… ಐದು ಹತ್ತು ಪೈಸೆ… ಕೈ ತುಂಬ ಇದ್ದವು. ತರಾವರಿ ವಿನ್ಯಾಸದ ಚಂದದ ಕಾಸುಗಳು. ಮಂಡಿಯಷ್ಟುದ್ದದ ನೀರ ತಡಿ. ಮರಳು ತುಂಬಿದ ಹೊಳೆ. ಸಣ್ಣ ಬೆಳ್ಳಿ ಮೀನುಗಳು ನನ್ನ ಕಾಲ ಬಳಿಯೇ ಆಡುತ್ತಿದ್ದವು. ಏನೋ ಸಂಕಟ ಗಂಟಲ ತನಕ ಬಂದು ದುಃಖಳಿಸಿದೆ. ಒಂದೊಂದಾಗಿ ಆ ಕಾಸುಗಳ ನೀರಿಗೆ ಎಸೆದೆ. ಯಾಕೆಂದು ಗೊತ್ತಾಗಲಿಲ್ಲ. ಏನೊ ಸುಖ ಕಿಚ್ಚಿನಲ್ಲೂ… ಕಳೆದುಕೊಳ್ಳುವುದರಲ್ಲೂ ಸುಖವಿದೆ! ಆ ಚಿಲ್ಲರೆ ಕಾಸುಗಳಿಗಿಂತಲೂ ಭಯಂಕರವಾದ ಆ ಪಾತಕಿಯ ನೋಟುಗಳು ಇನ್ನೂ ಭದ್ರವಾಗಿ ಜೇಬಿನಲ್ಲಿ ಮಲಗಿದ್ದವು. ಅವತ್ತವನು ಹಸಿವು ತಾಳಲಾರದೆ ಏನಾದರು ತಂದುಕೊಡು ಎಂದು ಹತ್ತು ರೂಪಾಯಿಯ ಮೂರು ನೋಟುಗಳ ಕೊಟ್ಟಿದ್ದ. ಬಿಚ್ಚಿ ನೋಡಿಯೇ ಇರಲಿಲ್ಲ. ಅಪ್ಪನಿಗೆ ಈ ದುಡ್ಡು ಕೊಟ್ಟು ಬಿಡಬೇಕು ಎನಿಸಿ; ಹಿಂಜರಿದು ಬಚ್ಚಿಟ್ಟುಕೊಂಡಿದ್ದೆ. ಇಷ್ಟೋಂದು ದುಡ್ಡು ಯಾಕೆ ಕೊಟ್ಟ… ನಿಜವೊ ಸುಳ್ಳೋ… ನೀನೇ ಎಲ್ಲಿಯಾದರೂ ಕದ್ದೆಯೋ ಎಂದು ಅನುಮಾನದ ಪಿಶಾಚಿ ಅಪ್ಪ ಬಡಿದರೆ ಬಿಡಿಸುವವರು ಯಾರೊ ಎಂದು ಸುಮ್ಮನಾಗಿದ್ದೆ. ಆ ನೋಟುಗಳ ಸುತ್ತ ಗಮನಿಸಿ ಮೆಲ್ಲಗೆ ತೆಗೆದೆ. ಬೆರಳು ಕಂಪಿಸಿದವು. ನೋಟುಗಳಿಗೆ ನೆತ್ತರು ಅಂಟಿದಂತಿತ್ತು. ಆ ಕೂಡಲೇ ನೀರೊಳಗೆ ಆ ಮೂರೂ ನೋಟುಗಳ ತುಳಿವಂತೆ ಕಾಲಲ್ಲಿ ನೂಕಿದೆ. ಆ ನೋಟುಗಳು ನಮ್ಮನ್ನು ಯಾರೂ ಕೊಲ್ಲಲಾರರು ಎಂಬಂತೆ ತೇಲುತ್ತ ನಿಧಾನವಾಗಿ ಹೊಳೆಯ ಮಧ್ಯೆ ಸೇರಿ ಮುನ್ನಡೆದವು. ಜೀವ ಬಂದಂತಾಗಿತ್ತು. ಕಣ್ಮರೆಯಾಗುವ ತನಕ ನೋಡಿ ದಂಡೆ ಮೇಲೆ ಬಂದೆ. ಆ ಹಣ ಹೆಣದಂತೆ ಕಂಡಿತ್ತು.

ಅದೇ ದಾರಿ. ಒಬ್ಬನೇ ಇರುವುದು ಎಷ್ಟು ಚೆಂದ ಎನಿಸಿತು. ಬೇಲದ ಹಣ್ಣಿನ ಮರ ಹಣ್ಣು ಬೀಳಿಸಿತ್ತು. ತಿಂದೆ ಮನೆಯತ್ತ ಬಂದೆ. ಏನೋ ಹರುಷ ಅಹಾ! ಕುದುರೆ ಗಾಡಿ! ಅಲಂಕಾರದ ಕುದುರೆ. ಎಂಥ ಚೆಂದವಿದೆ. ಕ್ಷಣವೇ ತಿಳಿದಿತ್ತು. ದೊಡ್ಡಣ್ಣ ಬಂದಿದ್ದಾನೆಂದು. ಅವನು ನನ್ನಪ್ಪನ ಅಣ್ಣ. ದೊಡ್ಡ ಮನುಷ್ಯ. ಅವನ ಹೆಂಡತಿ ಮಗಳು ಪಲ್ಲಂಗದಲ್ಲಿ ಕೂತಿದ್ದರು. ಜನವೊ ಜನ. ದೊಡ್ಡವರು ಬಂದಿದ್ದಾರೆ ಎಂದರೆ ನೆರೆನೊರೆ ಹೋಗಿ ಗೌರವಿಸಬೇಕಿತ್ತು. ನನ್ನ ತಾಯಿಗೆ ಕೀಳರಿಮೆ. ವಾಸ್ತವ ಹಾಗಿತ್ತು. ಪಡಸಾಲೆಯಲ್ಲಿ ದೊಡ್ಡಣ್ಣ ಕೂತು ಕೇರಿಯವರ ವಿಚಾರಿಸುತ್ತಿದ್ದ. ಆಗ ತಾನೆ ಬಂದಿದ್ದರು. ಎಲ್ಲರಿಗೂ ಶರಬತ್ತು ನೀಡಿದ್ದರು. ಅಪ್ಪ ನನ್ನ ತಮ್ಮನನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದ. ಅವನ ಪ್ರತಿರೂಪವೆ ಅವನಾಗಿದ್ದ. ಅವನತ್ತ ನೋಡಿದೆ. ‘ಹೋಗಲೊ’ ಎಂಬಂತೆ ತಮ್ಮ ನಿರ್ಲಕ್ಷ್ಯ ತೋರಿದ. ಅವರ ಮೆಚ್ಚುಗೆ ಗಳಿಸಲು ಏನೇನೊ ಕೆಲಸಗಳಿಗೆ ಮುಂದಾದೆ. ತಾತ, ಚಿಕ್ಕ ತಾತನ ವಿಚಾರಿಸಲಿಲ್ಲ. ಮೈಸೂರಿನ ಮಹಾರಾಜನಂತೆ ಮನೆಗೆ ಬಂದಿರುವ ಹಿರಿ ಮಗನ ಐಭೋಗದ ಮುಂದೆ ಚಿಕ್ಕ ತಾತನ ವಿಷಯ ಯಕಶ್ಚಿತ್ ಆಗಿತ್ತು. ಆ ರೇಜಿಗೆಯನ್ನು ನೆನೆಯುವುದೇ ಬೇಡ ಎನಿಸಿ ಅಪ್ಪನತ್ತ ಕಿರುಗಣ್ಣಲ್ಲಿ ತಲೆ ತಗ್ಗಿಸಿದಂತೆ ಮರೆಯಿಂದ ನೋಡಿದೆ. ನಾನೆಂದೂ ಅಪ್ಪನನ್ನು ದಿಟ್ಟಿಸಿ ನೇರವಾಗಿ ನೋಡುವಂತಿರಲಿಲ್ಲ. ನಾನು ಹಾಗೆ ನೋಡುವುದು ಅಪ್ಪನಿಗೆ ಅವಮಾನವಂತೆ! ತಂದೆಯ ಮುಖವ ಮಗ ನೋಡುವಂತಿಲ್ಲ. ನನಗೂ ಇಷ್ಟವಿರಲಿಲ್ಲ. ಅವನು ವಿನಾಕಾರಣ ಯಾವಾಗ ಬಂದು ಒದ್ದು ಬಿಡುವನೊ ಎಂಬ ಭಯದಿಂದ ಹಾಗೆ ಎಚ್ಚರಿಕೆ ವಹಿಸುತಿದ್ದೆ. ದೊಡ್ಡಣ್ಣ ನನ್ನ ತಮ್ಮನ ಕರೆದು ತಲೆ ಸವರಿ ಏನೋ ಕೇಳುತಿದ್ದ. ಒಣಗಲು ಹಾಕಿದ್ದ ಸೌದೆಗಳ ಸೌದೆ ಮನೆಗೆ ತುಂಬಲು ಅಜ್ಜಿ ಹೇಳಿದಳು. ಎಲ್ಲಿ ಚಾಡಿ ಹೇಳಿಬಿಡುವಳೊ ಎಂದು ಹಿತ್ತಲಿಗೆ ಹೋಗಿ ಆ ಕೆಲಸವ ಆ ಕ್ಷಣದಲ್ಲಿ ಮಾಡಿ ಬಂದೆ. ಶರಬತ್ತಿನ ಗ್ಲಾಸುಗಳ ಎತ್ತಿಕೊಂಡು ಹೋಗಿ ಎಲ್ಲಾ ಗ್ಲಾಸುಗಳ ತಳದಲ್ಲೂ ಇದ್ದ ಒಂದಿಷ್ಟು ಶರಬತ್ತನ್ನು ಇನ್ನೊಂದು ಎಂಜಲಿನ ಗ್ಲಾಸಿಗೆ ಸುರಿದುಕೊಂಡೆ. ಅರ್ಧಗ್ಲಾಸು ಶರಬತ್ತು! ಅಹಾ ಎಂದು ಕಣ್ಣು ಮುಚ್ಚಿ ಆನಂದದಿಂದ ಕುಡಿದೆ.

`ಅವನು ಯಾಕೊ ಅಂಗಿದ್ದಾನೇ… ನಿನ್ನ ಮಗನೇ ತಾನೇ?’ ದೊಡ್ಡಣ್ಣ ಕೇಳಿದ

`ಅದೊಂದು ಹಂದಿ; ಬಿಸಾಕಣ್ಣ ಅದಾ’

`ಸ್ಕೂಲಿಗೆ ವೋಗ್ತಾನಾ… ಏನಾರ ತಲೇಲಿ ಇದ್ದದಾ’

`ಅವುನ್ಗೆ ಯಾಕೆ ಸ್ಕೂಲೂ… ಬ್ಯಾಡಾ ಅಂದಿದ್ದೆ. ಅಪ್ಪ ಕರ್ಕಂಡೋಗಿ ಸೇರವನೆ.

`ಅವುನ್ ತಲೆಲಿ ಏನಿದ್ದಾದೂ; ಹಂದಿ ಲದ್ದಿ ಅಷ್ಟೇ’

`ಇಲ್ಲಕನೊ ರಂಗನಾಥೂ… ಏನೋ ನಾಕಕ್ಸರ ಬತ್ತವೇ… ಯದುರ್ತನೆ ಅಷ್ಟೇ’

ತಾತ ನನ್ನ ಬಗ್ಗೆ ಒಂದೆರೆಡು ಮಾತ ಹೇಳಿದಂತೆಯೇ ಅಪ್ಪ ಸಿಟ್ಟಾಗಿ;

`ಯೇಯ್, ತೊಲ್ಗತ್ತಾಗೆ ಇಲ್ಬಂದು ನಿಂತ್ಕೊಳೊ ದೈರ್ಯನೇ ನಿನಗೇ’ ಎಂದು ಕಣ್ಣು ಮೆಡರಿಸಿದ ಕೂಡಲೆ ನಾನು ಅಲ್ಲಿಂದ ಮಾಯವಾಗಿದ್ದೆ. ನನ್ನ ತಾಯಿ ಆ ಮಾತುಗಳ ಕೇಳಿಸಿಕೊಂಡಿದ್ದಳು. ಏನು ತಾನೆ ಮಾಡಲು ಸಾಧ್ಯ. ಅವಳ ಕಣ್ಣಲ್ಲಿ ನೀರು ಬಟ್ಟಾಡುತಿದ್ದವು. ನನಗೆ ನನ್ನ ತಾಯಿ ಹಂದಿಯೇ ಆಗಿದ್ದರೂ ಅವಳ ಎದೆ ಹಾಲನ್ನೇ ತಾನೆ ಕುಡಿದಿದ್ದುದೂ… `ಎಲ್ಲಿದ್ದಿಯಮ್ಮಿ’ ಎಂದು ಅಜ್ಜಿ ಕೂಗಿದಳು. ಅಜ್ಜಿ ಸರ್ವಾಧಿಕಾರಿ ಎಷ್ಟೋ ಬಾರಿ ತಾತನೇ ಬಾಯಿ ಮುಚ್ಚಿಕೊಳ್ಳುತ್ತಿದ್ದ. ಮೈಸೂರಿಂದ ದೊಡ್ಡಣ್ಣ ದೊಡ್ಡ ಮಟ್ಟದಲ್ಲಿ ಬರುತ್ತಿದ್ದ. ವಿವರಿಸಲಾಗದು ಅದನ್ನೆಲ್ಲ. ಮನೆ ಮಂದಿಗೆಲ್ಲ ಬಟ್ಟೆ. ಬಣ್ಣ ಬಣ್ಣದ ಹೂವಿನ ತೆಳು ಸೀರೆಗಳು. ಹಜ್ಹಾರದಲ್ಲಿ ಅವೆಲ್ಲವ ಬಿಚ್ಚಿ ಬಟ್ಟೆ ದಾನ ಮಾಡುತ್ತಿದ್ದರು. ಹೆಂಡತಿ ಮಗಳ ಮೂಲಕ ಕೊಡಿಸುತ್ತಿದ್ದ. ಗಂಡಸರಿಗೆ ಅಂಗಿ ಪಂಚೆ ಬನಿಯನ್ನು ಟವಲ್ಲು! ಊರ ಬೋರೇಗೌಡರು ಹರುಕು ಬಟ್ಟೆಯಲ್ಲಿ ಹೊಲದಲ್ಲಿ ದುಡಿಯುತಿದ್ದರು. ಅಂತವರ ಮುಂದೆ ದೊಡ್ಡಣ್ಣ ಬಟ್ಟೆ ಕೊಡಿಸಿ ಮೆರೆಯುತಿದ್ದ. ಸೂಟುಬೂಟಿನ ಮನುಷ್ಯ. ದೊಡ್ಡ ರೆವಿನ್ಯೂ ಅಧಿಕಾರಿ ಅಲ್ಲವೇ; ಆ ಕಾಲಕ್ಕೇ ಎಸೆಲ್ಸಿ ಓದಿದ್ದವನು. ಸರ್ಕಾರವೆ ಕರೆದು ಕೆಲಸ ಕೊಟ್ಟಿತ್ತು.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ಯಾರಾದರೂ ಹಾಗೆ ಮರುಕ ತೋರಿದರು ಎಂದ ಕೂಡಲೆ ಬೇರೆ ಆಗಿಬಿಡುತ್ತಿದ್ದೆ. ಯಾವತ್ತೂ ನಾವು ಅಸಹಾಯಕರು ಗತಿ ಇಲ್ಲದವರು ಎಂದು ತೋರಿಸಿಕೊಳ್ಳಬಾರದು ಎಂದು ದೊಡ್ಡ ತಾತ ಹೇಳುತ್ತಿದ್ದ. ದೇವರ ಸೇವೆಗೆ ಹೋಗಿದ್ದೋ… ನಮ್ಮ ತಾತ ವಾಪಸ್ಸು ಹೋಗು ಎಂದು ಕಳಿಸಿ ಮುಂದೆ ಯಾರನ್ನೋ ನೋಡಿ ಬರುವುದಿದೆ ಎಂದು ಹೊರಟುಹೋದ ಎಂದೆ.

ಅಪ್ಪ ಅಣ್ಣನ ಕಾಲ ಬುಡದಲ್ಲೇ ಕೂತಿದ್ದ. ಅವರ ಕಣ್ಣಿಗೆ ಬೀಳ ಬ್ಯಾಡಾ.. ಅವರೆಲ್ಲಾ ದೊಡ್ಡೋರು. ಯೀತರ ಹರುಕ್ಲು ಬಟ್ಟೆ ಹಾಕಂದು ಅವರ ಮುಂದೆ ನಿಂತ್ಕಬ್ಯಾಡ. ಕರುಳ ಕಿತ್ತಂಗಾಯ್ತದೆ’ ಎಂದು ತಾಯಿ ದುಃಖಿಸಿದಳು. ನನಗೂ ಹೊಸ ಬಟ್ಟೆ ಕೊಡುತ್ತಾರೆ ಎಂದು ಕಾತರಿಸುತಿದ್ದೆ. ನನ್ನ ನೆನಪೇ ಅವರಿಗೆ ಆಗಿರಲಿಲ್ಲ. ಯಾರದೊ ದೊಡ್ಡವರ ಅಳತೆಯ ಪಟಾಪಟಿ ಚಡ್ಡಿ ಅಂಗಿಯ ಕೊಟ್ಟರು. ಸಡಗರದಿ ಹಾಕಿಕೊಂಡೆ. ಅಂತಹ ಪಟಾಪಟಿ ಲಾಡಿ ಚಡ್ಡಿಯ ಬಿಗಿದು ತಾಯಿ ಕಟ್ಟಿದಳು. ನನ್ನ ಕಾಲುಗಳ ಆ ಚಡ್ಡಿ ಮುಳುಗಿಸಿಕೊಂಡಿತ್ತು. ಆ ಅಂಗಿಯೊ ದೊಗಳೆ. `ಹೇ ಅಳತೆ ಅಲ್ಲದ್ದ ಅಳತೆ ಅಂತಾ ಹಾಕೊಬಾರದು. ಮುಂದಿನ ಸಲ ಬಂದಾಗ ತಂದುಕೊಡುವೆ’ ಎಂದು ಬಿಚ್ಚಿಸಿ ಬೇರೆಯವರಿಗೆ ಕೊಡಿಸಿ ಬಿಟ್ಟಿದ್ದ ದೊಡ್ಡಣ್ಣ. ಆದರೂ ನನಗೆ ಅವನ್ನೆ ಹಾಕಿಕೊಳ್ಳಬಹುದಿತ್ತು ಎನಿಸಿತ್ತು. ಅಷ್ಟರಲ್ಲಿ ಹರಿದು ತಿಕಾ ಕಾಣುತಿದ್ದ ಚಡ್ಡಿಯನ್ನು ತಾಯಿ ದಿಡೀರನೆ ಹೊಲೆದು ಹಾಕಿಸಿದ್ದಳು. ತನ್ನ ನನ್ನ ಮಾನ ಕಾಯಲು ತಾಯಿ ಎಷ್ಟೋಂದು ಪರದಾಡುತ್ತಿದ್ದಳು. ಅವಳಿಗೂ ಒಂದು ಸೀರೆ ರವಿಕೆ ಕೊಟ್ಟಿದ್ದರು. ಅಜ್ಜಿ ಆಯ್ಕೆ ಮಾಡಿದ್ದು. ಮುದುಕಿಯರು ತೊಡುವ ಸಾಧಾರಣ ದೊಡ್ಡ ಸೀರೆ. ಬೇಡ, ಬೇರೆಯದೆ ಕೊಡಿ ಎನ್ನುವಂತಿಲ್ಲಾ. ಹಾಗೆಂದುಬಿಟ್ಟರೆ ಅಲ್ಲಿಗೆ ಕಥೆ ಮುಗೀತು ಅಂತಲೇ. ತಾಯಿ ಹಣೆಗೆ ಒತ್ತಿಕೊಂಡು ಅವಳ ಗತಕಾಲದ ನಜ್ಜುಗುಜ್ಜಾದ ಪುಟ್ಟ ಟ್ರಂಕಲ್ಲಿ ಆ ಸೀರೆಯನ್ನು ಇಟ್ಟುಕೊಂಡಳು. ಗತಿಗೆಟ್ಟವರಿಗೆ ಅಂದ ಚಂದವೇ? ಕೊಟ್ಟದ್ದೇ ಪಡೆದದ್ದೇ ಪುಣ್ಯ!

ಅದಾಗ ಬಟ್ಟೆ ಹಂಚಿ ಆಗಿತ್ತು. ಮೈಸೂರು ಎಂದರೆ ಮಹರಾಜರ ಮೈಸೂರು ತಾನೇ… ಎಷ್ಟೋಂದು ಸಿಹಿ ತಿಂಡಿಗಳು. ಮೈಸೂರು ಪಾಕು, ಜಿಲೇಬಿ, ಜಹಾಂಗೀರು, ಬಾದುಶಹಾ! ಲಾಡು, ಬೂಂದಿ… ಎಂತದೊ ದಿಲ್‌ಪಸಂದ್, ಜಾಮೂನು… ಅವೆಲ್ಲ ಹೆಸರು ಗೊತ್ತಿಲ್ಲ. ನನ್ನ ಆ ವಯಸ್ಸಿಗೆ ಇಷ್ಟೆಲ್ಲ ಸಿಹಿ ತಿಂಡಿಗಳ ಹೆಸರು ಗೊತ್ತಿತ್ತು ಎಂಬುದೇ ನನ್ನ ಪುಣ್ಯ ಇರಬಹುದು. ಅವನ್ನು ಮನೆಮಂದಿಗೆಲ್ಲ ಹಂಚಿಸುತ್ತಿದ್ದರು. ನನ್ನ ಉಸಿರಾಟ ನನಗೇ ಗೊತ್ತಿಲ್ಲದೆ ಆನಂದದ ಉದ್ವೇಗದಲ್ಲಿ ತೀವ್ರವಾಗಿ ಏರಿಳಿಯುತ್ತಿತ್ತು. ತಿಂಡಿಗಳನೆಲ್ಲ ಹಂಚುವವಳು ಅಜ್ಜಿ. ತಮ್ಮ ಬಾಯಿ ತುಂಬ ಮೈಸೂರು ಪಾಕು ಸವಿಯುತಿದ್ದ. ತಾಯತ್ತ ಗಮನಿಸಿದೆ. ಅವಳಿಗೆ ಕೊಟ್ಟರೆ ನನಗೇ ಕೊಟ್ಟು ತಿನ್ನಿಸಿ ಬಿಡುತ್ತಾಳೆ ಎಂಬ ಆಸೆಯಿಂದ! ಕಾಣಲಿಲ್ಲ. ಹಿತ್ತಲತ್ತ ಬಂದೆ. ರಾಶಿ ಪಾತ್ರೆಗಳ ಬೆಳಗುತ್ತಿದ್ದಳು. ತಾಯನ್ನು ಕಂಡರೆ ಅಜ್ಜಿಗೆ ಅಷ್ಟಕ್ಕಷ್ಟೇ. ಹೆಚ್ಚು ಮಾತೇ ಆಡುತ್ತಿರಲಿಲ್ಲ. ‘ಬಂದು ಕೈ ಒಡ್ಡಿ ಪಡಕಬೇಕು… ಅವಳ ಮುಂದಕ್ಕೆ ಹೋಗಿ ನಾನು ಅವಳಿಗೆ ತಿಂಡಿಕೊಡಬೇಕೇ… ಅವರಪ್ಪನ ಮನೇಲಿ ಕಂಡಿದ್ಲೆ ಇಂತೆದ್ನೆಲ್ಲಾ… ಕೊಪ್ಪೆ ಮಸಿಯವಳು, ತಿಪ್ಪೆಗುಂಡಿಯವಳು… ನನ್ ಮಗನ ಐಬೋಗ ನೋಡ್ಲಾರೆ ಇತ್ಲುಗೆ ಹೋಗವಳೆ’ ಎಂದು ಅಜ್ಜಿ ಗೊಣಗುತ್ತಿದ್ದಳು. ತಾಯೋ, ಸುಖ ಸಡಗರ ಎಂದರೆ ಎದರುತ್ತಿದ್ದಳು. ಸದಾ ಸಂತೋಷದ ಬೆನ್ನ ಹಿಂದೆ ಬೆಟ್ಟದಂತ ನೋವು ಹೊಂಚು ಹಾಕುತ್ತ ಕಾಯುತ್ತಿರುತ್ತದೆ ಎಂದು ತಿಳಿದಿದ್ದಳು; ಅಂತಹ ಯಾವ ಸಿಹಿ ತಿನಿಸುಗಳ ಬಗೆಗೂ ತಾಯಿಗೆ ಆಸೆಯೇ ಇರಲಿಲ್ಲ. ಒಂದಿಷ್ಟು ಒಣಕಾರ ರಾಗಿರೊಟ್ಟಿ ಇತ್ತು ಎಂದರೆ ಅದೇ ಅವಳ ಪಾಲಿಗೆ ದೇವಲೋಕದ ಮೃಷ್ಟಾನ್ನ. ತಾಯಿಯ ಆ ಗುಣ ನನಗೂ ಅನಿವಾರ್ಯವಾಗಿ ಬರುತ್ತಿತ್ತು. ಮೂರು ತರದ ಕಾರದ ತಿಂಡಿಗಳಿದ್ದವು. ಅಜ್ಜಿ ಕೊನೆಗೆ ಒಂದಿಷ್ಟು ಕಾರಾಸೇವು ಕೊಟ್ಟಳು. ಇಷ್ಟಾದರೂ ಸಿಕ್ಕಿತಲ್ಲಾ ಎಂದು ಒಮ್ಮೆಗೆ ಬಾಯಿ ತುಂಬ ಹಾಕಿಕೊಂಡು ತಿಂದು ನೀರು ಕುಡಿದೆ.

ದೊಡ್ಡಣ್ಣ ಬರುವುದು ಮೊದಲೆ ಗೊತ್ತಿತ್ತು. ಮನೆಯ ಮೂಲೆಗಳನೆಲ್ಲ ತಾಯಿ ಗುಡಿಸಿ ತೊಳೆದು ದಣಿದಿದ್ದಳು. ದೊಡ್ಡಮ್ಮನಾಗ ಬೇಕಿದ್ದ ಅವಳು ತಮ್ಮನನ್ನು ಪರೀಕ್ಷಿಸುವಂತೆ ಏನೇನೊ ಕೇಳುತ್ತಿದ್ದಳು. ಸದ್ಯ ಚಿಕ್ಕ ತಾತನ ಆ ಘಟನೆಯನ್ನು ಆತ ಹೇಳಲಿಲ್ಲ. ಚೂಟಿಯಾಗಿದ್ದ. ಕೆಂಪಗಿದ್ದ. ಕೆಂಚುಗೂದಲು, ನೀಳ ಕೈ ಕಾಲು, ನನಗಿಂತ ಚಿಕ್ಕವನಾಗಿದ್ದರೂ ಎತ್ತರದಲ್ಲಿ ಎಲ್ಲ ರೀತಿಯಲ್ಲು ಉದ್ದವಾಗಿದ್ದ. ಗಮಾರ ನಾನಾಗಿದ್ದೆ. ಏನಾದರು ಕೇಳಿದರೆ ಏನು ಹೇಳಬೇಕು ಎಂದು ಹತ್ತು ಸಲ ಯೋಚಿಸುತ್ತಿದ್ದರೆ; ನನ್ನ ತಮ್ಮ ಆಗಲೇ ಹತ್ತು ತರದ ಮಾತುಗಳ ಆಡುತಿದ್ದ. ಅಪ್ಪನಿಗೆ ಹೆಮ್ಮೆ, ತಮ್ಮನ ಮೇಲೆ ಏನೋ ಸಿಟ್ಟು ನನಗೆ ಇವನಿಂದ ನಾನು ದಡ್ಡ ಎನಿಸಿಕೊಂಡು ಏಟು ತಿನ್ನಬೇಕಲ್ಲಾ ಎಂದು ಅಸಹಾಯಕನಾಗುತ್ತಿದ್ದೆ. ನನ್ನ ತಾಯಿಗೆ ಇಬ್ಬರ ಮೇಲೂ ಅಪಾರ ಪ್ರೀತಿ, ಆದರೆ ನನ್ನ ಮೇಲೆ ಕರುಣೆ… ಇವನು ಚೂಟಿ ಅಲ್ಲ… ನಾಳೆ ಕಷ್ಟ ಬಂದರೆ ಬದುಕಲಾರ ಎಂದು ವಿಶ್ವಾಸ ತುಂಬಲು ಬಹಳ ಪ್ರಯತ್ನ ಪಡುತ್ತಿದ್ದಳು.

ನನಗಾಗಲೇ ಅಕಾಲ ಜಿಗುಪ್ಸೆ. ಜೀವನದ ಬಗ್ಗೆ ನಿರಾಶಕ್ತಿ. ಹಜಾರದ ತುಂಬ ನೆಂಟರು. ಕಾಲದ ಪರಿವೆ ಇಲ್ಲದೆ ಮಾತಾಡುತ್ತಿದ್ದರು. ನನ್ನ ತಾಯಿ ಉಂಡಳೊ ಇಲ್ಲವೊ ಎಂದು ಮೆಲ್ಲಗೆ ಹೋಗಿ `ಅಕ್ಕಾ’ ಎಂದು ಕರೆದೆ. ಕೈ ಹಿಡಿದುಕೊಂಡಳು ಹಣೆ ಮುಟ್ಟಿದೆ. ವಿಪರೀತ ಜ್ವರ, ತೋರಿಸಿಕೊಳ್ಳುವಂತಿಲ್ಲ. ತಣ್ಣೀರು ಬಟ್ಟೆಯ ಹಣೆಗೆ ಹಾಕುವೆ ಅಕ್ಕಾ ಎಂದೆ. ಬೇಡ ಎಂದು ಪಕ್ಕದಲ್ಲೇ ಮಲಗಿಸಿಕೊಂಡಳು.

ಭಾಗಶಃ ನನ್ನ ಜೀವಿತದ ಕೊನೆಯ ಉಸಿರಿರುವ ತನಕ ತಾಯ ಜ್ವರದ ಆ ರಾತ್ರಿಯ ನರಳಿಕೆ, ಕನವರಿಕೆ, ಆಗಾಗ ಅರೆನಿದ್ದೆಯಲ್ಲೂ ತಲೆ ಸವರಿ ಹತ್ತಿರಕ್ಕೆ ಎಳೆದುಕೊಂಡು ಮಲಗಿಸಿಕೊಂಡಿದ್ದನ್ನು ಮರೆಯಲಾರೆ. ತಾಯ ಅಷ್ಟೋಂದು ಜ್ವರವ ಕಂಡೇ ಇರಲಿಲ್ಲ. ಆ ದೊಡ್ಡವರು ಬಂದಾಗ ತಾಯಿ ಹಿತ್ತಲ ಸೌದೆ ಮನೆಯಲ್ಲಿ ಆ ಒಣ ಸೌದೆಗಳ ಜೊತೆ ನಾಳೆ ಉರಿದು ಹೋಗುವ ಒಂದು ಸೌದೆ ಕೊಂಟಿನಂತೆ ಬಿದ್ದಿರುತ್ತಿದ್ದಳು. ಬೇರೆ ದಿನಗಳ ಅಷ್ಟು ಪುಟ್ಟ ಅಡುಗೆ ಮನೆಯಲ್ಲಿ ಮಸಿಕಸ ಬೂದಿಯಂತೆ ಬಿದ್ದಿರುತ್ತಿದ್ದಳು. ತಾಯಿಗೆ ಇಷ್ಟವಾದ ಕಥೆ ಕೊಳಕಮ್ಮನ ಕಥೆ. ಅವಳ ಬಾಯಿಂದ ಹಲವು ಬಾರಿ ಕೇಳಿದ್ದೆ. ಆ ಕಥೆಯಲ್ಲಿ ತಾಯಿಯೇ ಪಾತ್ರವಾಗಿ ಬರುತ್ತಿದ್ದಳು. ಅವೆಲ್ಲ ಹಳೆ ಜಮಾನದ ಕತೆಗಳು. ಈಗ ನೆನೆದು ಫಲವಿಲ್ಲ. ಮೆಲ್ಲಗೆ ಕಾಲ ಅದಾಗಲೆ ಯಾರ್ಯಾರನ್ನೊ ದೂರ ಕರೆದೊಯ್ಯಲು ಆಯ್ಕೆ ಪಟ್ಟಿ ಸಿದ್ಧ ಮಾಡಿಕೊಂಡಿತ್ತು. ಆ ನರಕದಿಂದ ಪಾರಾಗಲು ಹಲವರು ಪ್ರಾಣವನ್ನೇ ಪಣಕ್ಕಿಡುತ್ತಿದ್ದರು. ಅಂತಹ ರವಿನ್ಯೂ ಅಧಿಕಾರಿಯ ಕೃಪಾಕಟಾಕ್ಷಕ್ಕೆ ಕನಿಷ್ಟ ಒಮ್ಮೆ ಬಿದ್ದರೂ ಸಾಕಿತ್ತು. ಅಂತವರು ಮೈಸೂರು ಬೆಂಗಳೂರಿನ ಗಲ್ಲಿಗಳಲ್ಲಿ ಬಿದ್ದು ಎದ್ದು ನಿಲ್ಲುತ್ತಿದ್ದರು. ಆ ಮೇಲೆ ಅವರ ಗತಿಯೇ ದೆಸೆಯೆ ಬೇರೆ ಆಗಿಬಿಡುತ್ತಿತ್ತು. ಆ ನಮ್ಮ ಅಜ್ಜಿ ಮಗನ ಕಟಾಕ್ಷಕ್ಕೆ ಯಾರೂ ಒಳಗಾಗದಂತೆ ತಡೆಯುತ್ತಿದ್ದಳು.

ತಾಯ ಮಗ್ಗುಲಲ್ಲಿ ಬೆಳಗಾನ ನಿದ್ದೆ ಇರಲಿಲ್ಲ. ಯಾಂತ್ರಿಕವಾಗಿ ಎದ್ದಳು. ಸಕಲೆಂಟು ಕೆಲಸಗಳ ನಿರ್ವಹಿಸಿದಳು. ಆಹಾ! ದೇವರೇ; ತಾಯ ಮುಖದಲ್ಲಿ ನಂಜೇ ಇಲ್ಲಾ. ಸೇವಾನು ಸೇವಕಿಯಂತೆ ಆಗಲೆ ಎದ್ದು ಬಾವಿಯಿಂದ ನೀರು ಸೇದಿ ತಂದು ನೀರು ಕಾಯಿಸಿ ಎಲ್ಲರಿಗೂ ಸ್ನಾನಕ್ಕೆ ಅಣಿ ಮಾಡಿದ್ದಳು. ತಾಯಿ ಇಟ್ಟಿದ್ದ ಸೀಗೆಕಾಯಿ ಪುಡಿಯ ಕಂಟವ ಅತ್ತ ಬಿಸಾಡಿ ಮೈಸೂರು ಸ್ಯಾಂಡಲ್ ಸೋಪಿನಲ್ಲಿ ಘಮ್ಮನೆ ಸ್ನಾನ ಮಾಡಿದ್ದರು. ಆ ಸೋಪನ್ನು ಒಮ್ಮೆ ಕೈಯಿಂದ ಮುಟ್ಟಿ ಗಮಲು ಆಸ್ವಾದಿಸಲೂ ನಮಗೆ ಅವಕಾಶ ಇರಲಿಲ್ಲ. ನೀರು ನಿಡಿಗೆಲ್ಲ ನನ್ನ ತಾಯಿಯೇ ಅಲ್ಲಿ ಹಿತ್ತಲಲ್ಲಿ ಸ್ನಾನಮಾಡುವಾಗ ಅವರ ಕಾಯುತ್ತಿರಬೇಕಿತ್ತು. `ಅಕ್ಕಾ… ಒಂದೇ ಒಂದು ಸಾರಿ; ಆ ಮೈಸೂರು ಸೋಪಲ್ಲಿ ನನ್ನ ತಲೆಯ ತೊಳೆದುಕೊಡಕ್ಕ’ ಎಂದು ಬೇಡಿದ್ದೆ. ಸಾಧ್ಯವಿರಲಿಲ್ಲ. ಅವರು ಸ್ನಾನ ಮುಗಿಸಿ ಹೋದ ನಂತರ ಮರೆಯ ಸಂದಿ ಬಚ್ಚಲಿಂದ ನೊರೆ ನೊರೆಯಾಗಿ ಹೋಗಿ ನಿಂತಿರುತ್ತಿದ್ದ ಮೈ ತೊಳೆದ ಅವರ ಮೈಸೂರಿನ ಸೋಪಿನ ಬುರುಗ ಎರಡೂ ಕೈಗಳಿಂದ ಎತ್ತಿ ಅಹಾ! ಎಂದು ಆಸ್ವಾದಿಸಿ ಮುಖಕ್ಕೆ ಹಚ್ಚಿಕೊಂಡು ತೊಳೆದುಕೊಳ್ಳುತ್ತಿದ್ದೆ. ಬಚ್ಚಲ ನೀರಲ್ಲೇ! ತಾಯಿ ಅದನ್ನು ಕಂಡು ಅಸಾಧ್ಯ ಸಿಟ್ಟಿನಿಂದ ಒದ್ದುಬಿಟ್ಟಿದ್ದಳು. ಅರಿವಾಗಿ; ತಪ್ಪಾಯ್ತು ಅಕ್ಕಾ ಎಂದೆ. ಹೊಸ ನೀರಲ್ಲಿ ನನ್ನ ಮುಖ ತೊಳೆದು ತನ್ನ ಸೆರಗಿಂದ ಮುಖ ಒರೆಸಿ; ಇನ್ನೂ ಸುಡುತ್ತಿದ್ದ ಜ್ವರದ ಗಂಟಲಲ್ಲಿ ಮಾತಾಡಲು ಆಗದೆ ಎಲ್ಲಿಯಾದರೂ ಮರೆಯಾಗಿರು ಎಂದು ಕಳಿಸಿಬಿಟ್ಟಳು.

ಹೈದರಾಲಿ ಕಾಲದ ಓಣಿಯೊಂದಿತ್ತು ನಮ್ಮೂರಲ್ಲಿ. ಈಗದು ಸ್ಮಶಾನ, ಗತಿಗೆಟ್ಟವರ ಯಾರ ಶವವನ್ನಾದರೂ ಅಲ್ಲಿ ಹೂಳಬಹುದಿತ್ತು. ಅದಾಗಲೇ ಅಲ್ಲಿ ಸೂಫಿ ಸಂತರ ಸಮಾಧಿಗಳಿದ್ದವು. ಅಲ್ಲಿ ಹೋಗಿ ಬಚ್ಚಿಟ್ಟುಕೊಂಡೆ. ಎಂತಹ ವಿಚಿತ್ರ… ಅದೇನೂ ಗೊತ್ತಿಲ್ಲದೆ ಸಂತೆ ಮುಗಿಸಿ ಮಾರ್ನೆ ಬೀದಿ ಹಳೆ ಬಟ್ಟೆಗಳ ತಂದು ಅಜ್ಜಿ ನನ್ನ ತಾಯಿಗೆ ಕೊಡುತ್ತಿದ್ದಳು ಮರೆಯಲ್ಲಿ. ಅವನ್ನು ಕದ್ದು ಮುಚ್ಚಿ ವ್ಯಾಪಾರ ಮಾಡಿ ತಂದು ಉಟ್ಟು ಬೇಗ ಬಿಚ್ಚಿ ಮಡಚಿಟ್ಟುಕೊಳ್ಳಬೇಕಿದ್ದ ಕಳ್ಳ ಮಾಲುಗಳು ಅವೆಲ್ಲ. ತಾಯಿಗೆ ಆ ಗಳಿಗೆಯಲ್ಲಿ ಹೆತ್ತವ್ವ ಬಂದದ್ದು ಇಷ್ಟ ಇರಲಿಲ್ಲ. ಎಲ್ಲ ರೆಡಿ ಆಗಿತ್ತು. ಸುಮ್ಮನೆ ಒಂದು ಪೂಜೆ ಮುಗಿಯಬೇಕಿತ್ತು. ಅಪ್ಪ ಯಾವಾಗಲೊ ಒಪ್ಪಿದ್ದ. ತಾತನಿಗೂ ಸಮ್ಮತಿ ಇತ್ತು. ತಾಯ ತಾಯಿಗೆ ವಿಷಯ ತಿಳಿಯಿತು! ನಾಳೆ ನನ್ನ ಕಿರಿ ಮಗನ ದೊಡ್ಡವರು ದತ್ತು ತೆಗೆದುಕೊಂಡು ಹೋಗುತ್ತಾರೆಂದು! ತಾಯಿ ಹೆಪ್ಪುಗಟ್ಟಿದ್ದ ಕಣ್ಣೀರಿಂದ ಕಂಗಾಲಾದಳು ‘ಅದು ಹೇಗೆ ಸಾಧ್ಯಾ… ನಿನ್ನ ಜೀವ ಅದೂ… ನೀನೇ ಹೆತ್ತಿದ್ದೂ… ಅಷ್ಟು ಸುಲಭವೇ ನೀನೆತ್ತ ಗರ್ಭ’ ಎಂದು ಅಜ್ಜಿ ಒಪ್ಪಿರಲಿಲ್ಲ. ಅವಳಾವ ಹುಣಸೇಕಾಯಿ ಸಿಪ್ಪೇ… ವ್ಯವಹಾರ ಆಗಿ ಹೋಗಿತ್ತು. ಅಪ್ಪನಿಗೆ ಹೆಮ್ಮೆ. ನಾಳೆ ನನ್ನ ಮಗ ಅಣ್ಣನ ಮಗನಾಗಿ ಮೈಸೂರು ದೊರೆ ಎಂದು ಬೀಗುತಿದ್ದ. ನನಗೆ ಅದೇನೂ ಗೊತ್ತಾಗುತ್ತಿರಲಿಲ್ಲ. ನಾನು ಯಾರಾದರೂ ಮನೆಯಲ್ಲಿ ಜೀತಗಾರನಾಗಿರಲು ಹಾತೊರೆಯುತಿದ್ದೆ. ಅಪ್ಪ ದೊಡ್ಡ ಗೌಡರ ಬಳಿ ಮಾತಾಡಿ ಬಂದಿದ್ದ. ‘ಬದುಕು ಕಲಿಯಲಿ ಎಂದು ಜೀತಕ್ಕೆ ಹಾಕುತ್ತಿರುವೆ ಗೌಡರೇ ನಮಗೇನು ಕಡಿಮೇ… ನಿಮ್ಮ ಹದ್ದುಬಸ್ತಿಗೆ ಬಂದರೆ ಒಂದು ನೀತಿಗೆ ಬರುತ್ತಾನೆ ಎಂದು ಜೀತಕ್ಕೆ ಸೇರಿಸುತ್ತಿರುವೆ’ ಎಂದು ಅಪ್ಪ ಪಟೇಲರ ಜೊತೆ ಮಾತಾಡಿ ಬಂದಿದ್ದ. ಆದರೆ ಆಗಿದ್ದೇ ಬೇರೆ! ದೊಡ್ಡಣ್ಣ ನನ್ನ ತಮ್ಮನನ್ನು ದತ್ತು ತೆಗೆದುಕೊಂಡು ಮೈಸೂರಿಗೆ ಹೋಗುವಾಗ ಆ ಪಟೇಲರು ಕರುಣೆ ತೋರಿದ್ದರು.

ಹೇ; ಇವನಿಂದ ನಮ್ಮ ರಾಸುಗಳ ನಿಭಾಯಿಸಲು ಸಾಧ್ಯವಿಲ್ಲಾ… ನಿನ್ನ ತಂದೆ ಮಾರಯ್ಯನಿಗೆ ಹೇಳೂ… ನಿಮ್ಮ ಜಾತಿಯವರಿಗೆ ಎಲ್ಲಾ ಬಿಟ್ಟಿ. ಮೂರು ಅಕ್ಷರ ಕಲಿಸಿ ಪೇಟೆ ಕಡೆ ಹೊಡೆದೋಡಿಸಿ ಬಿಡೂ… ಅಲ್ಲಿಗೆ ಎಲ್ಲ ಸರಿಹೋಗುತ್ತೆ ಎಂದಿದ್ದರು. ಅಂತೆಯೇ ಆಗಿತ್ತು. ತಮ್ಮನನ್ನು ಪಟ್ಟಾಭಿಷೇಕಕ್ಕೆ ಸಜ್ಜು ಮಾಡುವಂತೆ ಸಿಂಗರಿಸಿದ್ದರು. ಮಾರಲಾಗದ ಯಕಶ್ಚಿತ್ ವಸ್ತು ಎಂಬಂತೆ ಅಪ್ಪ ನನ್ನನ್ನು ಆಗಾಗ ಹೊಡೆದು ಊರಾಚೆ ನಿರ್ಜನ ದಾರಿಯಲ್ಲಿ ಕತ್ತು ಮುರಿದು ಹೆದರಿಸುತ್ತಿದ್ದ. ಅಷ್ಟಾದರೂ ಯಾಕೊ ನಾನು ಸತ್ತೇ ಇರಲಿಲ್ಲ. ಈಗ ನೆನೆದರೆ ಆಗಲೇ ಸತ್ತು ಹೋಗಬೇಕಿತ್ತು ಎಂಬ ಖಿನ್ನತೆ ಕಾಡುತ್ತದೆ. ನಗುನಗುತ್ತಿದ್ದ. ಎಲ್ಲರೂ ಉಂಡಿದ್ದರು. ಸಡಗರ ಬೆಡಗಾಡುತಿತ್ತು. ತಮ್ಮ ತೂಕಡಿಸುತಿದ್ದ. ಮರೆಯಲ್ಲಿ ಎಲ್ಲ ಗಮನಿಸುತಿದ್ದೆ. ಊರ ಯಜಮಾನರೆಲ್ಲ ನೆರೆದಿದ್ದರು. ನೆಪದ ಯಜಮಾನರು ಆ ರೆವಿನ್ಯೂ ಅಧಿಕಾರಿ ಮುಂದೆ.

ತಮ್ಮನ ಮಗನ ದತ್ತು ತೆಗೆದುಕೊಳ್ಳುವ ವಿಚಾರ ಬಂತು. ಅದೆಲ್ಲ ಸಂಪ್ರದಾಯದಂತೆ ಆಗಬೇಕಿತ್ತು. ಜನ ಒಹೋ ಆಗಬಹುದು ಎಂದರು. ಮೊದಲೇ ಎಲ್ಲ ಮರೆಯಲ್ಲಿ ಸಿದ್ಧವಾಗಿತ್ತು. ನೆಪಮಾತ್ರದ ತಾಯ ಒಪ್ಪಿಗೆ ದೇವರ ಗುಡಿಯ ಬೇಕಿತ್ತಷ್ಟೇ. ತಾಯನ್ನು ಯಾರೂ ಕೇಳಿರಲಿಲ್ಲ. ಹೆತ್ತ ಒಡಲಿಗೆ ಯಾವ ಅಧಿಕಾರವೂ ಇರಲಿಲ್ಲ. ಕೊಟ್ಟು ಬಿಡಿ ಎಂದರು ಪಂಚಾಯ್ತಿಯವರು. ತಾಯಿಗೆ ಅಲ್ಲಿ ತನಕ ಏನೂ ಗೊತ್ತಿಲ್ಲ. ತಿಳಿಸಬೇಕಾದ ವಿಷಯ ಎಂದೆನಿಸಿರಲಿಲ್ಲ. ಏನು ಏನು ಎಂದು ತಾಯಿ ಹಲವರ ಕೇಳಿದಳು. ಋಣ ಸಂಬಂಧಗಳ ಹುಡುಕಿದಳು. ಮನೆತನದ ಹಿರಿ ಮಗ! ಅವನಿಗೆ ಇನ್ನು ಗಂಡು ಮಕ್ಕಳಾಗುವುದಿಲ್ಲಾ… ಗಂಡು ಸಂತಾನ ಬೇಕಿಲ್ಲವೇ… ವಂಶೋದ್ಧಾರಕನಾಗಿ ಈ ತಮ್ಮನ ಕಿರಿಯ ಮಗನ ದತ್ತು ತೆಗೆದುಕೊಳ್ಳುವ ಎಂದು ಪಂಚಾಯ್ತಿ ನ್ಯಾಯ ಮುಗಿಸುತಿತ್ತು. ಹಿರಿ ಮಗನನ್ನೆ ತೆಗೆದುಕೊಳ್ಳಿ ಎಂದರು ಪಂಚಾಯ್ತಿಯವರು. ತಮ್ಮನಿಗೆ ಇದೇನೂ ಗೊತ್ತಾಗುತ್ತಿರಲಿಲ್ಲ. ಜೋರಾಗಿ ನಕ್ಕು ಬಿಟ್ಟಿತು ಪಂಚಾಯ್ತಿ. ಅಪ್ಪನೂ ಅಸಮ್ಮತಿಯ ವ್ಯಂಗ್ಯದಲ್ಲಿ ತಿರಸ್ಕರಿಸುತ್ತಿದ್ದ. ‘ಆ ಹಂದಿಯ ಯಾರಾದರೂ ದತ್ತು ತಕೊಂಡಾರೆಯೇ… ಹಂದಿ ಹಂದಿಯೇ.. ನಮ್ಮಣ್ಣ ನನ್ನ ಕಿರಿ ಮಗನ ದತ್ತು ತೆಗೆದುಕೊಳ್ಳುತ್ತಿದ್ದಾನೇ… ನನಗೆ ಸರ್ವ ಸಮ್ಮತಿ ಇದೆ. ನನ್ನ ಕಿರಿ ಮಗ ಇವತ್ತಿಂದ ನನ್ನಣ್ಣನ ಮಗ. ಈ ದೇವರ ಸಾಕ್ಷಿಯಲ್ಲಿ’ ಎಂದು ದೇಗುಲದ ಪಂಚಾಯ್ತಿಗೆ ಪ್ರಮಾಣ ಮಾಡಿದ. ಪೂಜಾರಪ್ಪ ಬಂದು ನನ್ನ ತಮ್ಮನ ದೊಡ್ಡಣ್ಣನ ತೊಡೆ ಮೇಲೆ ಕೂರಿಸಿದ. ಪೂಜೆ ಮಾಡಿದ. ಗಂಟೆಯ ಸದ್ದು ಮೊಳಗುತ್ತಿತ್ತು. ನನ್ನ ತಾಯಿ ಇದಕ್ಕೂ ತನಗೂ ಯಾವ ಸಂಬಂಧವೂ ಇಲ್ಲ ಎಂಬಂತೆ ಬೀದಿ ಮನೆಗಳ ನೆರಕೆ ಮರೆಯಲ್ಲಿ ಸೀರೆ ಸೆರಗ ತುದಿಯ ಬಾಯಿಗೆ ಬಲವಾಗಿ ಒತ್ತಿಕೊಂಡು ದಿಕ್ಕೆಟ್ಟಂತೆ ನಿಂತಿದ್ದಳು. ತಾಯ ಸೆರಗ ತುದಿಯ ಅಂತಲ್ಲೆಲ್ಲ ಹಿಡಿದೇ ನಡೆಯುತಿದ್ದೆ.

ನಮ್ಮ ದೊಡ್ಡಮ್ಮ ದತ್ತು ಪುತ್ರನ ಆ ಕ್ರಿಯಾ ವಿಧಿಗಳ ಒಪ್ಪಿದ್ದಳು. ಹರುಷದಿ ದೊಡ್ಡಣ್ಣ ದೊಡ್ಡಮ್ಮ ತಮ್ಮನ ಮಗನ ಮುದ್ದಾಡಿ ತೊಡೆ ಮೇಲೆ ಕೂರಿಸಿಕೊಂಡು ವೋಲಾಡಿದ್ದರು. ತಾಯಿಯೂ ನಾನೂ ಕತ್ತಲ ಮರೆಯಲ್ಲಿ ದೊಡ್ಡವರಿಗೆ ಹೆದರಿ ನಾವು ಯಾರೊ; ನಮಗೆ ಸಂಬಂಧ ಇಲ್ಲದ ಸಂಗತಿ ಎಂಬಂತೆ ಕತ್ತಲಿಗೆ ಕತ್ತಲಾಗಿ ಅಂಟಿಕೊಂಡು ನಿಂತಿದ್ದೆವು. ತಮ್ಮನಿಗೆ ಸಿಂಗರಿಸಿದ್ದರು. ಪಟ್ಟಾಭಿಷೇಕ ಮಾಡುವಂತೆ. ಅಲ್ಲೂ ತಾಯಿಗೆ ಏನೊ ಸಂತೋಷ. ಅವಳಲ್ಲಿದ್ದ ಭಾವನೆಯೇ ಬೇರೆ ”ನಿನಗೆ ಆಶೀರ್ವಾದಾ… ನೀನು ಆ ದೊಡ್ಡವರ ಜೊತೆ ಹೊರಟು ಹೋಗು” ಎಂದಿದ್ದಳು. ಅವಳ ಸಂಕಟವೇ ತಿಳಿದಿರಲಿಲ್ಲ. ಇವನು ಯಡ್ಡ ದಡ್ಡ.. ಮಾತೇ ಬರೋದಿಲ್ಲ. ಪಟ್ಟಣ ಸೇರಿ ಅಲ್ಲಿ ಬದುಕಿದರೆ ಬದುಕಲೀ; ಸತ್ತರೆ ಸಾಯಲೀ… ಈ ಪಾಪಿಗಂಡನಿಂದ ಯಾಕೆ ಇವನು ಪ್ರಾಣ ಬಿಡಬೇಕೂ… ಎಲ್ಲಾದರೂ ಎಂಜಲೆತ್ತಿ ಬದುಕಿಕೊಳ್ಳಲಿ’ ಎಂಬುದು ತಾಯ ಅಪೇಕ್ಷೆಯಾಗಿತ್ತು. ಹಿರಿ ಮಗನ ಕರಕೊಳ್ಳಿ ಎಂದು ಬಂದಿದ್ದ ಮಾತ ಅಪಮಾನದಲ್ಲಿ ನುಂಗಿಕೊಂಡಿದ್ದಳು. ಹಿರಿ ಮಗನ ಪರವಾಗಿ ಉಸಿರೇ ಬಿಟ್ಟಿರಲಿಲ್ಲ. ನನ್ನಕ್ಕ ನನ್ನಪ್ಪನ ಚಂದದ ಗೊಂಬೆ. ಅವಳೂ ಅಲ್ಲೇ ಆ ದೊಡ್ಡವರ ಆ ವ್ಯವಹಾರಗಳಲ್ಲಿ ಮುಗ್ದವಾಗಿ ಆಟವಾಡುತ್ತಿದ್ದಳು. ದೊಡ್ಡಣ್ಣಗೆ ಏಕ ಮಾತ್ರ ಪುತ್ರಿ ಇದ್ದಳು. ಇನ್ನು ಮಕ್ಕಳಾಗುವುದಿಲ್ಲ; ಗುರುಗಳು ಹೇಳಿದ್ದರು. ಎಷ್ಡು ಸಲ ಭಕ್ತಿಯಲಿ ಪೂಜಿಸಿ ಮಲಗಿದರೂ ಮಕ್ಕಳೇ ಆಗಿರಲಿಲ್ಲ. ದತ್ತು ತೆಗೆದುಕೊಳ್ಳಲೇ ಬೇಕಾಗಿತ್ತು. ದತ್ತು ಪೂಜೆಗೆ ತಾಯಿಯೂ ಬೇಕು. ಕರೆದರು. ಹರುಕು ಮುರುಕು ಕೊಳಕು ಸೀರೆಯ ಹೆಂಗಸು. ಸ್ನಾನ ಮಾಡಿ ದಿನವೆಷ್ಟಾಗಿತ್ತೋ. ಪೂಜಾರಿ ಕೇಳಿದ…

‘ಶುದ್ಧವಾಗಿದ್ದಿಯಾ!’ ‘ಹೌದು ಸ್ವಾಮೀ… ಮನದಲ್ಲಿ ಏನೂ ಕ್ಲೇಶ ಇಲ್ಲವೇ; ವಂಚನೆ ಆಸೆಗಳಿಲ್ಲವೇ?… ‘ಇಲ್ಲ ಸ್ವಾಮೀ’ ‘ನಿನ್ನ ಮಗನ ಪರರಿಗೆ ಕೊಡಲು ದೇವರಾಣೆ ಸ್ವಚಿತ್ತದಲ್ಲಿ ನಿನಗೊಪ್ಪಿಗೆಯೇ’… ‘ಒಪ್ಪಿಗೆ ಬುದ್ದೀ’ ಇನ್ನು ಮುಂದೆ ನಿನ್ನ ಕರುಳು ನಿನ್ನದಲ್ಲಾ…’ ತಾಯಿ ಉತ್ತರಿಸಲು ತಡವರಿಸಿದಳು. ಅಂದರೇ ನಿನ್ ಮಗನ ಮೇಲೆ ನಿನಗೆ ಯಾವ ಅಧಿಕಾರವೂ ಈ ಕ್ಷಣದಿಂದ ಇಲ್ಲಾ… ಇನ್ನಿವನು ನಿನ್ನ ಮಗನಲ್ಲ ದೇವರಿಂದ ಸ್ಥಾನಾಂತರವಾದ ಮತ್ತೊಬ್ಬರ ಮಗಾ… ಅವನಿಂದ ಬರತಕ್ಕ ಯಾವ ಆಸ್ತಿ ಪಾಸ್ತಿಗೂ ನಿನಗೆ ಸಂಬಂಧವಿಲ್ಲಾ… ನೀನಾರೋ; ಅವನಾರೊ… ಕರುಳ ಬಳ್ಳಿಯ ಒಡ್ಡಬಾರದೂ; ದೇವರ ಮುಂದೆ ಏನೂ ಕೇಳಬಾರದೂ… ಬಿಟ್ಟೆ ಬಿಟ್ಟೆ ಬಿಟ್ಟೆ ಎಂದು ಮೂರು ಸಲ ಹೇಳು’ ಎಂದು ಪೂಜಾರಿ ಶಪಥ ಮಾಡಿಸಿದಂತೆ ದೇಗುಲದಲ್ಲಿ ಜನರೆದುರು ಪ್ರಮಾಣ ಮಾಡಿಸಿದ.

ಅಲ್ಲಿಗೆ ಎಲ್ಲ ಮುಗಿದಿತ್ತು. ಆ ಮರ್ಕಟ ತಮ್ಮ ನಮ್ಮಿಂದ ಬೇರೆ ಆಗಿ ಬಿಟ್ಟಿದ್ದ. ಅವನ ಸಿಂಗರಿಸಿದ್ದರು. ಚಿನ್ನದ ಸರವ ಕೊರಳಿಗೆ ಹಾಕಿದ್ದರು. ಅವರು ಮೈಸೂರಿಗೆ ಅವನನ್ನು ಕರೆದುಕೊಂಡು ಹೋಗುವುದು ಖಚಿತವಿತ್ತು. ಮರುದಿನ ಅದೇ ಸವಿ ಸಿಹಿ ಊಟದ ದತ್ತು ಮಗನ ಹಬ್ಬ. ಅದೆಲ್ಲ ನಮ್ಮಂತಹ ಗುಗ್ಗುಗಳಿಗೆ ಗೊತ್ತೇ ಇರಲಿಲ್ಲ. ಮರುದಿನ ಊರಿಗೆಲ್ಲ ಸಿಹಿ ಊಟ ಸಿದ್ಧವಾಗಿತ್ತು. ಉಂಡೇ ಉಂಡರು. ನಾನೂ ಉಂಡೆ. ನನ್ನ ತಾಯಿ ಮಾತ್ರ ನಾಲಿಗೆಯ ಮೇಲೆ ಏನನ್ನೂ ಇಟ್ಟುಕೊಳ್ಳಲಿಲ್ಲ. ಕೇಳುವ ಧೈರ್ಯ ಇರಲಿಲ್ಲ. ಕೇರಿ ಊರೆಲ್ಲ ಒಪ್ಪಿ ಸಡಗರಿಸಿತ್ತು. ನನ್ನ ತಾಯನ್ನು ನೆಪಕ್ಕಾದರೂ ದತ್ತು ವಿಷಯದಲ್ಲಿ ಯಾರೂ ಒಂದು ಒಪ್ಪಿಗೆಯ ಕೇಳಿರಲಿಲ್ಲ.