ಮುಗ್ಧ ಮಗು ಸಚ್ಚಿದಾನಂದನನ್ನು ಭವಿಷ್ಯದ ಪೀಠಾಧಿಪತಿಯನ್ನಾಗಿ ಮಾಡಬೇಕೆನ್ನುವ ತಂದೆ- ತಾಯಿಗಳ ಆಸೆ, ಅಧಿಕಾರ ಲಾಲಸೆ, ಆಶ್ರಮದಲ್ಲಿನ ಅನೈತಿಕ ಚಟುವಟಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಪರಿ, ದೇವರ ಸನ್ನಿಧಾನ, ದೇವರ ಸೇವೆ ಮುಗ್ಧ ಮಗುವಿನ ಕಣ್ಣಲ್ಲಿ ಕಾಣುತ್ತವೆ. ಸಮಾಜವನ್ನು ತಿದ್ದುವ, ಆದರ್ಶ ವಟುಗಳನ್ನು ಬೆಳೆಸುವ ಸನ್ನಿಧಾನಗಳೇ ದುರ್ಮಾರ್ಗ ಹಿಡಿದಿರುವುದು ‘ದೇವರ ಮಗು’ ಕತೆಯಲ್ಲಿ ವ್ಯಕ್ತವಾಗಿದೆ. ‘ಮುಳ್ಳು’ ಕಥೆಯಲ್ಲಿ ಬಶೀರನ ಮನಸ್ಸಿನ ತೊಳಲಾಟವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ.
ದಯಾನಂದ ಅವರ ಕಥಾ ಸಂಕಲನ “ಬುದ್ಧನ ಕಿವಿ”ಯ ಕುರಿತು ಮಂಜಯ್ಯ ದೇವರಮನಿ ಬರಹ
ಕತೆಗಾರ, ಮಾಧ್ಯಮ ಅಧ್ಯಾಪಕ ದಯಾನಂದ ಅವರ ಎರಡನೇ ಕಥಾ ಸಂಕಲನ ‘ಬುದ್ಧನ ಕಿವಿ’. ಸಮಕಾಲೀನ ಸಂಗತಿಗಳಿಗೆ ಧ್ವನಿಯಾಗುವ ಕತೆಗಾರ ದಯಾನಂದ ಅವರು ಈ ಸಂಕಲನದ ಕಥೆಗಳಲ್ಲಿ ಅದನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ.
‘ದೇವರ ಮಗು’ ಕಥೆ ಇದಕ್ಕೆ ಉತ್ತಮ ಉದಾರಹಣೆ. ಮುಗ್ಧ ಮಗು ಸಚ್ಚಿದಾನಂದನನ್ನು ಭವಿಷ್ಯದ ಪೀಠಾಧಿಪತಿಯನ್ನಾಗಿ ಮಾಡಬೇಕೆನ್ನುವ ತಂದೆ- ತಾಯಿಗಳ ಆಸೆ, ಅಧಿಕಾರ ಲಾಲಸೆ, ಆಶ್ರಮದಲ್ಲಿನ ಅನೈತಿಕ ಚಟುವಟಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಪರಿ, ದೇವರ ಸನ್ನಿಧಾನ, ದೇವರ ಸೇವೆ ಮುಗ್ಧ ಮಗುವಿನ ಕಣ್ಣಲ್ಲಿ ಕಾಣುತ್ತವೆ. ಸಮಾಜವನ್ನು ತಿದ್ದುವ, ಆದರ್ಶ ವಟುಗಳನ್ನು ಬೆಳೆಸುವ ಸನ್ನಿಧಾನಗಳೇ ದುರ್ಮಾರ್ಗ ಹಿಡಿದಿರುವುದು ‘ದೇವರ ಮಗು’ ಕತೆಯಲ್ಲಿ ವ್ಯಕ್ತವಾಗಿದೆ.
‘ಮುಳ್ಳು’ ಕಥೆಯಲ್ಲಿ ಬಶೀರನ ಮನಸ್ಸಿನ ತೊಳಲಾಟವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ. ಕತೆಯ ಕೊನೆ ಸಾಲು ‘ಗಂಟಲಲ್ಲಿ ಒತ್ತುತ್ತಿದ್ದ ಮುಳ್ಳು ಎದೆಯಲ್ಲೂ ಒತ್ತುತ್ತಿತ್ತು’ ಚಿಂತನೆಗೆ ಹಚ್ಚುತ್ತದೆ.
‘ಮಡ್ಳಕ್ಕಿ’ ಕಥೆಯಲ್ಲಿ ಜಬೀನಕ್ಕ ತನ್ನ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಆಫೀಸಿಗೆ ಅಲೆಯುವ ಸನ್ನಿವೇಶ, ನಮ್ಮ ಈಗಿನ ವ್ಯವಸ್ಥೆ ಹಾಗೂ ಭ್ರಷ್ಟಾಚಾರವನ್ನು ಒಂಟಿ ಕಾಗೆಯಂತೆ ಅರಚುವ ಮೂಲಕ ಕಟ್ಟಿಕೊಟ್ಟಿದ್ದಾರೆ.
‘ವಾಟ್ಸ್ ಇನ್ ಎ ನೇಮ್’ ಕಥೆಯಂತೂ ತುಂಬಾ ಮೆಚ್ಚುಗೆ ಆಯಿತು. ತುಂಬಾ ಸಂಕೀರ್ಣವಾದ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಅತ್ಯಂತ ನಾಜೂಕಾಗಿ ಕೆತ್ತಿ ನಿಲ್ಲಿಸಿದ್ದಾರೆ ಈ ಕಥೆಯಲ್ಲಿ. ಸೂಕ್ಷ್ಮವೊಂದನ್ನು ಮನವರಿಕೆ ಮಾಡಿದ ಸಂಗತಿ ಇಷ್ಟವಾಯಿತು.
‘ಜಗತ್ತಿನ ಕೊನೇ ದಿನಗಳ ಒಂದು ಬೆಳಗು’ ಎಂಬ ಕಥೆಯಲ್ಲಿ ಪ್ರೀತಿಸಿ, ಮನೆಬಿಟ್ಟ ಹುಡುಗ- ಹುಡುಗಿ ಸಾಮಾಜಿಕ ವ್ಯವಸ್ಥೆಯಿಂದ ನಿಸರ್ಗದ ಮಡಿಲಲ್ಲಿ ಪ್ರಣಯ ಪಕ್ಷಿಗಳಂತೆ ವಿಹರಿಸುವ ಭಾವಲೋಕ ಸೊಗಸಾಗಿ, ಕಾವ್ಯಾತ್ಮಕವಾಗಿ ಚಿತ್ರಿತವಾಗಿದೆ. ಕತೆಯ ಅಂತ್ಯ ವಿನೋದವೋ… ಇಲ್ಲವೇ ವಿಷಾದವೋ… ಎಂಬುದನ್ನು ನೀವು ಕಥೆ ಓದಿಯೇ ತಿಳಿಯಬೇಕು. ನನ್ನನ್ನು ತುಂಬಾ ಕಾಡಿದ ಕಥೆ ಇದು. ಉಳಿದಂತೆ ‘ಬೈಬಲ್ ಬಂಪ್’, ‘ಸರ್ವೈವಲ್ ಬೆನಿಫಿಟ್’, ‘ಬುದ್ಧನ ಕಿವಿ’ ಒಪ್ಪುವಂಥ ಕಥೆಗಳು.
ದಯಾನಂದ ಅವರು ತುಂಬಾ ಸೂಕ್ಷ್ಮ ಸಂವೇದಿ ಕಥೆಗಾರರು. ಅವರು ಕಥೆಯನ್ನು ನಿಭಾಯಿಸುವ ಶೈಲಿ ಮೆಚ್ಚುಗೆಯಾಯಿತು. ಈ ಕಥೆಗಳು ನಮ್ಮ ಜೊತೆಗೆ ಮಾತನಾಡುತ್ತವೆ. ಕೆ.ವಿ. ನಾರಾಯಣ ಅವರು ಹೇಳಿರುವಂತೆ ನಿಜಕ್ಕೂ ಯಾವ ನೆರವಿನ ಅಗತ್ಯವೂ ಈ ಕತೆಗಳಿಗಿಲ್ಲ!
(ಕೃತಿ: ಬುದ್ಧನ ಕಿವಿ (ಕಥಾ ಸಂಕಲನ), ಲೇಖಕರು: ದಯಾನಂದ, ಪ್ರಕಾಶಕರು: ಅಲೆ ಕ್ರಿಯೇಟಿವ್ಸ್, ಪುಟಗಳು: 142, ಬೆಲೆ: 186/-)
ಮಂಜಯ್ಯ ದೇವರಮನಿ ರಾಣೇಬೆನ್ನೂರಿನವರು. ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಕರಿಜಾಲಿ ಮರ’ ಪ್ರಕಟಿತ ಕಥಾಸಂಕಲನ. ಚಾರಣ ಮತ್ತು ಚಿತ್ರಕಲೆ ಇವರ ಹವ್ಯಾಸಗಳು.