Advertisement
ಓದುತ್ತಿದ್ದಾಗಲೇ ನಾನು ಮೇಷ್ಟ್ರು ಎಂಬ ಸುಳ್ಳಿನ‌ ಕತೆ ಕಟ್ಟಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ

ಓದುತ್ತಿದ್ದಾಗಲೇ ನಾನು ಮೇಷ್ಟ್ರು ಎಂಬ ಸುಳ್ಳಿನ‌ ಕತೆ ಕಟ್ಟಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ

ಅವಳು “ನಿಮ್ಮ ತರಹದವರನ್ನೇ ನಾನು ಕಾಲೇಜಿನಲ್ಲಿ ನೋಡಿದೆ” ಎಂದಾಗ ನಾನು ನಗುತ್ತಾ “ಹೋ.. ಹೋ… ಅವನಾ? ನನ್ನ ತಮ್ಮ, ಅವನನ್ನು ನೋಡಿ ನೀನು ನಾನೇ ಎಂದು ಭಾವಿಸಿದೆಯಾ” ಎಂದು ಹೊಸ ಕಥೆ ಕಟ್ಟಿದೆ. ಆಗ ಅವಳು “ಅದ್ಹೇಗೆ? ನೀವಿಬ್ಬರೂ ಒಂದೇ ಕ್ಲಾಸಲ್ಲಿ ಇರಬೇಕಿತ್ತಲ್ವಾ?” ಎಂದಾಗ “ಹೋ ಹೋ ಅದಾ ಅವನು ಫೇಲ್ ಆಗೀ ಆಗೀ ಹಿಂದಕ್ಕೆ ಉಳಿದುಕೊಂಡ ನಾನು ಪಾಸ್ ಆಗೀ ಆಗೀ ಮುಂದಕ್ಕೆ ಹೋದೆ” ಎಂದೆ. ಅವಳು ನಂಬಿದಳು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೈದನೆಯ ಕಂತು ನಿಮ್ಮ ಓದಿಗೆ

ನಾನು ಓದುವಾಗ ನಮ್ಮದೇ ಕ್ಲಾಸ್ ಮೇಟ್ಸ್‌ಗಳಿಗಿಂತ ನನಗಿಂತಲೂ ಮುಂದಿನ ತರಗತಿಯವರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದೆ. ಅದರಲ್ಲೂ ಒಳ್ಳೇ ಅಂಕ ಪಡೆದವರು, ಕ್ಲೋಸ್ ಆಗಿ ಇರುವವರ ಜೊತೆ ಹೆಚ್ಚೇ ಬೆರೆಯುತ್ತಿದ್ದೆ. ನಮ್ಮ ಬ್ಯಾಚಿನಲ್ಲಿದ್ದವರು ಉತ್ತಮ ಅಂಕಗಳನ್ನು ಪಡೆದು ಈ ಶಿಕ್ಷಕ ವೃತ್ತಿಯ ಕೋರ್ಸ್‌ಗೆ ಬಂದಿದ್ದರಿಂದ ನಮ್ಮಲ್ಲಿ ಸಿಕ್ಕಾಪಟ್ಟೆ ಸ್ಪರ್ಧೆ ಇತ್ತು. ಪ್ರತಿಯೊಂದು ಸ್ಪರ್ಧೆಗಳಲ್ಲಿ ಗೆಲುವು ಕಷ್ಟವಾಗುತ್ತಿತ್ತು. ನಾವು ಶಿಕ್ಷಕ ವೃತ್ತಿಗೆ ಸೇರಬೇಕಾದ್ದರಿಂದ ನಮಗೆ ಪ್ರಾರಂಭದಲ್ಲಿ ಯಾವುದೇ ಕಾರ್ಯಕ್ರಮದ ಆಯೋಜನೆ, ಕಾರ್ಯಕ್ರಮದ ರೂಪುರೇಷೆಗಳು ಹೇಗಿರಬೇಕೆಂದು ನಮಗೆ ತಿಳಿಸಿಕೊಡುತ್ತಿದ್ದರು. ‘ಮೂಗಿಗಿಂತ ಮೂಗುತಿ ಭಾರ’ ಎಂಬಂತೆ ನಮ್ಮ ಕಾಲೇಜಿನಲ್ಲಿ ಪಾಠ ಪ್ರವಚನಗಳಿಗಿಂತ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತಿದ್ದವು.

ನಮಗೆ ಆಗ ಕಾಲೇಜಿನಲ್ಲಿ ಇದ್ದ ವಿಷಯವಾರು ಸಂಘಗಳಲ್ಲಿ ನಮಗಿಷ್ಟವಾದ ಸಂಘವನ್ನು ಸೇರಬಹುದಿತ್ತು. ಆಗ ನಾನು ಗಣಿತ ಸಂಘವನ್ನು ಸೇರಿದ್ದೆ. ವಿಷಯವಾರು ಸಂಘಗಳಿಂದ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಮಾಡಲಾಗುತ್ತಿತ್ತು. ಕನ್ನಡ ಸಂಘಗಳಿಂದ ತುಸು ಹೆಚ್ಚೇ ಕಾರ್ಯಕ್ರಮಗಳು ನಡೆಯುತ್ತಿದ್ದವು. ನನಗೆ ಆಗ ತುಂಬಾ ನಾಚಿಕೆ ಸ್ವಭಾವ ಇತ್ತು. ಕಾಲೇಜಿನ ದಿನಗಳಲ್ಲಿ ನಾನು ವೇದಿಕೆಯನ್ನು ಬಳಸಿದ್ದೇ ಕಮ್ಮಿ. ಒಂದೊಮ್ಮೆ ಹೋದರೂ ಹೆಚ್ಚು ಹೊತ್ತು ನಿಲ್ಲುತ್ತಿರಲಿಲ್ಲ. ವೇದಿಕೆಯ ಮೇಲೆ ಮಿಂಚಿದರೆ ನಮಗೆ ಆಂತರಿಕ ಅಂಕಗಳಲ್ಲಿ ಲಾಭವಾಗುತ್ತದೆ ಎಂಬ ಐಡಿಯಾ ನನಗಿರಲಿಲ್ಲ. ಈ ಅಂಕಗಳ ವಿಷಯದಲ್ಲಿ ನಾನು ಎಡವಟ್ಟು ಮಾಡಿಕೊಂಡಿದ್ದೆ. ನಾನು ಯಾರಿಗೇ ಆಗಲೀ, ಯಾವುದೇ ಲೆಕ್ಚರ್‌ಗಳಿಗೇ ಆಗಲಿ ನೇರವಾಗಿ ಮಾತನಾಡುತ್ತಿದ್ದುದು ನನಗೆ ಮುಳುವಾಗಿತ್ತು. ಆದರೂ ಈ ಗುಣವನ್ನು ನಾನು ತಿದ್ದಿಕೊಳ್ಳಲೇ ಇಲ್ಲ. ಸಮಾಜದಲ್ಲಿ ಇಂದು ಅನೇಕರಿಗೆ ನೇರವಾಗಿ ಮಾತನಾಡುವವರನ್ನು ಕಂಡರೆ ಯಾರೂ ಇಷ್ಟಪಡುವುದಿಲ್ಲ. ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಸಿದ್ದಪ್ಪನಿಗೆ ಸಿಡಿಲು ಹೊಡೆದಂಗೆ ಆಗಿತ್ತಂತೆ ಎನ್ನುವಂತೆ ನೇರವಾದಿಗಳಿಗೆ ವಿರೋಧಿಗಳು ಜಾಸ್ತಿ!! ಇದಕ್ಕೆ ಸಂಬಂಧಿಸಿದಂತೆ ಒಂದು ಕಥೆ ಈ ರೀತಿ ಇದೆ.

ಒಂದು ರಾಜ್ಯದ ರಾಜ ತನ್ನ ಮಗನ ಭವಿಷ್ಯವನ್ನು ಕೇಳಲು ಒಬ್ಬ ಜ್ಯೋತಿಷಿಯ ಬಳಿ ಹೋದನಂತೆ. ಅವನು ಅವನ ಜಾತಕ ನೋಡಿ ನಿನ್ನ ಮಗನಿಂದಲೇ ನಿನಗೆ ಸಾವು ಇದೆ ಎಂದಾಗ ರಾಜನಿಗೆ ಸಿಟ್ಟು ಬಂದು ಆ ಜ್ಯೋತಿಷಿಗೆ ಶಿಕ್ಷೆಗೆ ಗುರಿಪಡಿಸಲು ಆದೇಶವಿತ್ತನಂತೆ. ಅವನು ಮತ್ತೊಬ್ಬ ಜ್ಯೋತಿಷಿಯ ಬಳಿ ಹೋದಾಗ ಅವನು “ನಿನ್ನ ಮಗ ಚಿಕ್ಕ ವಯಸ್ಸಿನಲ್ಲಿಯೇ ರಾಜನ ಪಟ್ಟವನ್ನು ಅಲಂಕರಿಸುತ್ತಾನೆ” ಎಂದು ಹೇಳಿದನಂತೆ. ಆಗ ರಾಜ ಆ ಜ್ಯೋತಿಷಿಗೆ ಬಹುಮಾನ ಕೊಟ್ಟನಂತೆ!! ಇಲ್ಲಿ ಇಬ್ಬರೂ ಜ್ಯೋತಿಷಿಗಳೂ ಹೇಳಿದ್ದು ಒಂದೇ ಆದರೂ ಹೇಳಿದ ದಾರಿ ಮಾತ್ರ ವಿಭಿನ್ನವಾಗಿತ್ತು.
ಈ ಮಾತಿಗೆ ಸಂಬಂಧಪಟ್ಟಂತೆ ಸಂಸ್ಕೃತ ಶ್ಲೋಕದಲ್ಲಿ “ಪ್ರಿಯವಾಕ್ಯ ಪ್ರಧಾನೇನ ಸರ್ವೇ ತುಷ್ಯಂತಿ ಜಂತವಃ ತಸ್ಮಾತ್ತದೈವ ವಕ್ತವ್ಯಂ ವಚನೇಕ ದರಿದ್ರತಾ” ಎಂಬ ಶ್ಲೋಕವಿದೆ. ಇದರರ್ಥ ಪ್ರಿಯವಾಕ್ಯದಿಂದ ಸರ್ವ ಪ್ರಾಣಿಗಳನ್ನು ಸಂತುಷ್ಟಗೊಳಿಸಬಹುದು.ಇಂ ತಹ ಮಾತನಾಡಲು ನಿನಗೇಕೆ ಬಡತನ?! ಎಂದು.. ಇದನ್ನು ತಿಳಿದಿದ್ದೂ ಸಹ ಆಗ ನನಗೇಕೋ ನೇರವಾದಿಯಾಗಿರೋದು ತುಂಬಾ ಇಷ್ಟವಾಗುತ್ತಿತ್ತು. ಕೆಲ ವಿಷಯಗಳಲ್ಲಿ ಕಾಲೇಜಿನಲ್ಲಿ ಕೆಲವರಿಗೇ ಮಾತ್ರ ಕೊಡುತ್ತಿದ್ದ ಆದ್ಯತೆಯ ಬಗ್ಗೆ ವಿರೋಧಿಸುತ್ತಿದ್ದಾಗ ನನ್ನನ್ನು ಕಂಡರೆ ಕೆಲ ಲೆಕ್ಚರರ್‌ಗಳಿಗೆ ಆಗ್ತಾ ಇರಲಿಲ್ಲ. ಕೆಲವರಿಗೆ ಈ ಗುಣದಿಂದಲೇ ಇಷ್ಟವಾಗಿದ್ದೆ.

ನಮಗೆ ಆಗ 1 ರಿಂದ 7 ನೇ ತರಗತಿಯ ಪಠ್ಯಪುಸ್ತಕ ವಿಶ್ಲೇಷಣೆ ಮಾಡಲು ಕೊಡುತ್ತಿದ್ದರು. ನಾವಂತೂ ತುಂಬಾ ಉತ್ತಮವಾಗಿ ಇಡೀ ಪಠ್ಯಪುಸ್ತಕದ ಎಲ್ಲಾ ವಾಕ್ಯಗಳೂ, ಚಿತ್ರಸಮೇತವಾಗಿ ವಿಶ್ಲೇಷಣೆ ಮಾಡುತ್ತಿದ್ದೆವು. ಯಾವ ಅಂಶಗಳು ಚೆನ್ನಾಗಿವೆ, ಅಂಶಗಳನ್ನು ಸೇರಿಸಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು ಎಂಬ ಅಂಶಗಳ ಬಗ್ಗೆಯೂ ಚರ್ಚಿಸಿ ಅವನ್ನೆಲ್ಲಾ ಒಂದು ಪುಸ್ತಕ ಮಾಡಿ ಅದನ್ನು ಲೆಕ್ಚರರ್‌ಗೆ ಕೊಟ್ಟಿದ್ದೆವು.

ನನಗೆ ಗಣಿತ ಇಷ್ಟದ ವಿಷಯ. ಹೀಗಾಗಿ ನಾನು ಗಣಿತ ಸಂಘವನ್ನು ಸೇರಿದ್ದೆ. ಗಣಿತ ಸಂಘದಿಂದ ಮಾಡುವ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮೊದಲ ಬಹುಮಾನವನ್ನೂ ಸಹ ಗಿಟ್ಟಿಸಿಕೊಂಡಿದ್ದೆ. ನನ್ನ ಗಣಿತದ ಆಸಕ್ತಿಯನ್ನು ಗುರುತಿಸಿದ ನಮ್ಮ ಗಣಿತ ಪ್ರಶಿಕ್ಷಕರಾದ ವೈ.ಬಿ.ವನಜಾಕ್ಷಮ್ಮನವರು ನನ್ನನ್ನು ಅವರ ಮನೆಗೆ ಕರೆದೊಯ್ದರು. ಅವರ ಮಗಳಾದ ಕಾವ್ಯ ಆಗ 5 ನೇ ತರಗತಿಯನ್ನು ಓದುತ್ತಿದ್ದಳು. ಅವಳಿಗೆ ಗಣಿತ ಹೇಳಿಕೊಡುವ ಜವಾಬ್ದಾರಿ ಕೊಟ್ಟರು. ಅವಳು ತುಂಬಾ ಜಾಣೆ ಇದ್ದಳು. ಒಬ್ಬಳೇ ಮಗಳಾಗಿದ್ದುದರಿಂದ ಮುದ್ದಾಗಿ ಬೆಳೆಸಿದ್ದುದ್ದರಿಂದ ಅವಳಿಗೆ ಸ್ವಲ್ಪ ಹಠದ ಸ್ವಭಾವ ಇತ್ತು. ಆದರೆ ನನ್ನ ಮಾತಿಗೆ ಉತ್ತಮವಾಗಿ ಸ್ಪಂದಿಸುವುದನ್ನು ನೋಡಿ ಮೇಡಂ ನನಗೆ ಪ್ರತಿದಿನವೂ ಬಂದು ಅವರ ಮಗಳಿಗೆ ಗಣಿತ ವಿಷಯವನ್ನು ಹೇಳಿಕೊಡುವ ಜವಾಬ್ದಾರಿಯನ್ನು ಕೊಟ್ಟರು.

ನಾನು ಸಂಜೆ 6 ರಿಂದ 7 ಘಂಟೆಯವರೆಗೂ ಅವರ ಮನೆಗೆ ಹೋಗಿ ಅವರ ಮಗಳಿಗೆ ಪಾಠ ಮಾಡಿ ಬರುತ್ತಿದ್ದೆ. ಶಿಕ್ಷಕ ಕೋರ್ಸನ್ನು ಮುಗಿಸದಿದ್ದರೂ ಈಗಾಗಲೇ ಶಿಕ್ಷಕನಾಗಿದ್ದೇನೆ ಎಂಬ ಹೆಮ್ಮೆಯಿಂದ ನಾನು ಅವರ ಮನೆಗೆ ಹೋಗಿ ಪಾಠ ಹೇಳಿಕೊಟ್ಟು ಬರುತ್ತಿದ್ದೆ. ಒಂದು ದಿನ ನಾನು ಅಂದಾಜು ಗಣನೆ ಪಾಠ ಮಾಡುತ್ತಿದ್ದೆ. ಅವಳಿಗೆ ಲೆಕ್ಕದಲ್ಲಿ 14 ಇದ್ದರೆ ಇದರ ಅಂದಾಜು ಬೆಲೆ 10 ಎಂದೂ…. 15 ಇದ್ದರೆ 20 ಎಂದೂ ಹೇಳಬೇಕು. ಇದೇ ರೀತಿ ಎಲ್ಲಾ ಲೆಕ್ಕದಲ್ಲೂ 5 ಕ್ಕಿಂತ ಕಮ್ಮಿ ಇದ್ದರೆ ಹಿಂದಿನ ಹತ್ತರ ಸ್ಥಾನಕ್ಕೂ, 5 ಕ್ಕಿಂತ ಹೆಚ್ಚಿದ್ದರೆ ಮುಂದಿನ ಸಂಖ್ಯೆಯನ್ನೂ ಹೇಳಬೇಕು ಎಂದು ಹೇಳಿದೆ. ಅವಳಿಗೆ ಬೇರೆಬೇರೆ ಲೆಕ್ಕಗಳನ್ನೂ ಕೊಟ್ಟೆ. ಅವಳು ಅವನ್ನು ಸುಲಭವಾಗಿ ಬಿಡಿಸಿದಳು. ಕೊನೆಗೆ ಮನೆಗೆ ಬರುವಾಗ ಈ ಪಾಠದಿಂದ ನೀನು ಕಲಿತಿದ್ದೇನು? ಎಂದು ಪ್ರಶ್ನಿಸಿದಾಗ ಅವಳು ನಾನು ಸುಳ್ಳು ಹೇಳುವುದನ್ನು ಕಲಿತೆ ಎಂದು ಹೇಳಿದಳು. ಆಗ ನಾನು ಹೇಗೆ ಎಂದೆ. ಅದಕ್ಕವಳು ಒಂದು ಗುಂಪಿನಲ್ಲಿ 14 ಜನರಿದ್ದರೆ ಅಂದಾಜು 10 ಎಂದು ಹೇಳಬೇಕು ಎಂದು ಹೇಳಿದಿರಲ್ಲ? ಇದು ನಾವು ಹೇಳುವ ಸುಳ್ಳಲ್ಲವೇ ಎಂದಾಗ ನನಗೆ ವಿಪರೀತ ನಗು ಬಂತು. ಮನಸ್ಸಿನೊಳಗೆ ನಗುತ್ತಾ ಅದು ಹಾಗಲ್ಲಾ ಲೆಕ್ಕದಲ್ಲಿ ಮಾತ್ರ ಹೀಗೆ ಎಂದು ಹೇಳಿ ಅವಳಿಗೆ ಹೋಂ ವರ್ಕ್ ಕೊಟ್ಟು ಮನೆಗೆ ಹೋದೆ.

ಮಾರನೇ ದಿನ ಅವಳು ಅವರಮ್ಮನ ಜೊತೆ ಕಾಲೇಜಿಗೆ ಬಂದಿದ್ದಾಳೆ. ಅವಳು ನನ್ನನ್ನು ನೋಡಿ “ನೀವು ಬಸವನಗೌಡ ಸರ್ ಅಲ್ವಾ?” ಎಂದು ಮಾತನಾಡಿಸಲು ಬಂದಳು. ‘ನಾನವನಲ್ಲ’ ಎಂಬಂತೆ ಅವಳು ಪರಿಚಯವೇ ಇಲ್ಲದ ರೀತಿ ನಡೆದುಕೊಂಡು ಹೋದೆ. ಅವಳಿಗೆ ಯಾವುದೇ ಅನುಮಾನ ಬರದಂತೆ ನಾನು ವರ್ತಿಸಿದೆ. ಹೀಗೆ ವರ್ತಿಸಲು ಕಾರಣವೆಂದರೆ ಮೇಡಂ ನನಗೆ “ನೀನು ನನ್ನ ಸ್ಟೂಡೆಂಟ್ ಅಂತಾ ಯಾವುದೇ ಕಾರಣಕ್ಕೂ ಗೊತ್ತಾಗಬಾರದು. ಹಾಗೇ ಗೊತ್ತಾದರೆ ಅವಳು ನಿನ್ನ ಮಾತು ಕೇಳೋದಿಲ್ಲ. ನಾನು ನಮ್ಮ ಮನೆಗೆ ಬರುವ ಮೇಷ್ಟ್ರು ಬೇರೆ ಊರಿಂದ ಬರ್ತಾರೆ” ಅಂತಾ ಹೇಳಿದ್ದೇನೆ ಎಂದು ಹೇಳಿದ್ದರಿಂದ ನಾನು ಈ ರೀತಿ ವರ್ತಿಸಿದೆ. ಅಂದು ಸಂಜೆ ಹೋದಾಗ ಅವಳಿಗೆ ಪಾಠ ಮಾಡಲು ಶುರು ಮಾಡಬೇಕು ಎನ್ನುವಷ್ಟರಲ್ಲಿ ಅವಳು “ನೀವು ನಮ್ಮಮ್ಮನ ಸ್ಟೂಡೆಂಟ್ ಅಲ್ವಾ” ಎಂದು ಕೇಳಿದಳು. ಅದಕ್ಕೆ “ನಾನು ಇಲ್ಲ” ಎಂದೆ. ಆಗ ಅವಳು “ನಿಮ್ಮ ತರಹದವರನ್ನೇ ನಾನು ಕಾಲೇಜಿನಲ್ಲಿ ನೋಡಿದೆ” ಎಂದಾಗ ನಾನು ನಗುತ್ತಾ “ಹೋ.. ಹೋ… ಅವನಾ? ನನ್ನ ತಮ್ಮ, ಅವನನ್ನು ನೋಡಿ ನೀನು ನಾನೇ ಎಂದು ಭಾವಿಸಿದೆಯಾ” ಎಂದು ಹೊಸ ಕಥೆ ಕಟ್ಟಿದೆ. ಆಗ ಅವಳು “ಅದ್ಹೇಗೆ? ನೀವಿಬ್ಬರೂ ಒಂದೇ ಕ್ಲಾಸಲ್ಲಿ ಇರಬೇಕಿತ್ತಲ್ವಾ?” ಎಂದಾಗ “ಹೋ ಹೋ ಅದಾ ಅವನು ಫೇಲ್ ಆಗೀ ಆಗೀ ಹಿಂದಕ್ಕೆ ಉಳಿದುಕೊಂಡ ನಾನು ಪಾಸ್ ಆಗೀ ಆಗೀ ಮುಂದಕ್ಕೆ ಹೋದೆ” ಎಂದೆ. ಅವಳು ನಂಬಿದಳು. ಆದರೂ ಅವಳಿಗೆ ಎಲ್ಲೋ ಒಂದು ಕಡೆ ಅನುಮಾನ ಬರುತ್ತಿತ್ತು. ಆದರೆ ನಾನು ಕಾಲೇಜಲ್ಲಿ ಸಿಕ್ಕಾಗ ಗೊತ್ತಿಲ್ಲದವನಂತೆ ವರ್ತಿಸುವುದನ್ನು ನೋಡಿ ಅವಳು ನಂಬಿದ್ದಳು!! ಈಗ ಅವಳು ಎಂ.ಟೆಕ್ ಮುಗಿಸಿದ್ದಾಳಂತೆ. ಅವರಮ್ಮ ಯಾವಾಗ್ಲೂ ಈ ಸುದ್ದಿ ಹೇಳ್ತಾ ನಗ್ತಾ ಇರ್ತಾರೆ.

ನಾವು ಸುಳ್ಳನ್ನು ಹೇಳಿದ್ದರೂ ಇಲ್ಲಿ ಒಂದು ಉದ್ದೇಶ ಸಾಧನೆಗಾಗಿ ಹೇಳಿದ್ದು ಎಂಬ ಸಾರ್ಥಕತೆಯಿದೆ. ಕಾಲೇಜಲ್ಲಿ ನಾನು ಮೇಡಂ ಮನೆಗೆ ಹೋಗಿ ಪಾಠ ಮಾಡೋದು ಅನೇಕರಿಗೆ ತಿಳಿದು ಕೆಲವರು ನಿನಗೆ ಈ ವರ್ಷ ಮೇಡಂ ಕಡೆಯಿಂದ ಫುಲ್ ಇಂಟರ್ನಲ್ ಬಿಡಪ್ಪ ಅಂತಾ ಹೇಳ್ತಿದ್ರು. ಆದರೆ ನಾನು ಇದಕ್ಕೆ ಅಂತಾನೇ ನಾನು ಹೋಗಿ ಪಾಠ ಮಾಡ್ತಾ ಇಲ್ಲ ಅಂತಾ ನನ್ನ ಆತ್ಮಸಾಕ್ಷಿಗೆ ಗೊತ್ತಿದ್ದರಿಂದ ನಾನು ಇದರ ಬಗ್ಗೆ ತಲೆಕೆಡಿಸಿಕೊಳ್ಳೋಕೆ ಹೋಗಲಿಲ್ಲ. ಆದರೆ ವರ್ಷಾಂತ್ಯದಲ್ಲಿ ಅವರು ನನಗೆ ಎಲ್ಲರಿಗೆ ಕೊಡುವಷ್ಟೇ ಅಂಕವನ್ನು ಇಟ್ಟಿದ್ದು ತುಂಬಾ ಬೇಸರ ತರಿಸಿತು. ನನ್ನ ಸಾಮರ್ಥ್ಯದಷ್ಟಾದ್ರೂ ಅಂಕವನ್ನು ಕೊಡಬಹುದಿತ್ತು ಎಂದು ನಾನು ಬಯಸಿದ್ದೆ. ಆ ಒಂದು ವಿಷಯದಿಂದ ಅವರಿಗೆ ಮೊದಲಿನಷ್ಟು ಕ್ಲೋಸ್ ಆಗಿ ಇರೋದನ್ನು ಸೆಕೆಂಡ್ ಈಯರ್‌ನಿಂದ ಬಿಟ್ಟೆ.

ಒಮ್ಮೆ ಮೇಡಂನವರು ಅಕ್ಟೋಬರ್ ರಜೆಗೆಂದು ಊರಿಗೆ ಹೋದಾಗ ಅವರ ಮನೆಯ ಕೀಯನ್ನು ನನ್ನ ಕಡೆ ಕೊಟ್ಟು ಹೋಗಿದ್ದರು. ನಾನು ಹೊರಗಡೆ ರೂಮನ್ನು ಮಾಡಿಕೊಂಡಿದ್ದರೂ ಸಹ ಅವರು ಇಲ್ಲದೇ ಇದ್ದುದ್ದರಿಂದ ರಾತ್ರಿ ನಾನು ಮೇಡಂ ಮನೆಯಲ್ಲೇ ಮಲಗಲು ಹೋಗುತ್ತಿದ್ದೆ. ಹೀಗೇ ಇರಬೇಕಾದ್ರೆ ನನಗೆ ನನ್ನ ಪ್ರೌಢಶಾಲಾ ಗಣಿತ ಮೇಷ್ಟ್ರಾಗಿದ್ದ ಎ.ವೆಂಕಟೇಶ್ ಸರ್ ರವರು ನನ್ನನ್ನು ಕರೆದು “ನಿನಗೆ ಊಟದ ವ್ಯವಸ್ಥೆಯನ್ನು ಬೇಕಾದರೆ ಮಾಡುವೆ ನನ್ನ ಮನೆಯಲ್ಲಿ ಉಳಿದುಕೋ” ಎಂದು ಹೇಳಿದ್ದರು. ನಾನು ಹೊರಗಡೆ ಮೆಸ್ಸಿನಲ್ಲಿ ದುಡ್ಡು ಕೊಟ್ಟು ಊಟ ಮಾಡುವ ಅನಿವಾರ್ಯತೆ ಇದ್ದುದ್ದರಿಂದ ನಾನು ಅವರ ಮನೆಯಲ್ಲಿ ಮಲಗಿದರೆ ಒಂದು ತಿಂಗಳ ಮೆಸ್ ಬಿಲ್ ಉಳಿಸಬಹುದೆಂಬ ಕಾರಣಕ್ಕೆ ಅವರ ಮನೆಯಲ್ಲಿ ಮಲಗೋಕೆ ಶುರು ಮಾಡಿದೆ. ಆದರೆ ಒಂದು ದಿನ ಮೇಡಂ ಮನೆಗೆ ಕಳ್ಳರು ನುಗ್ಗಿ ಮನೆಯಲ್ಲಿ ಸ್ವಲ್ಪ ಹಣವನ್ನು ತೆಗೆದುಕೊಂಡು ಹೋಗಿದ್ದರಂತೆ. ಅವರು ಬಂದ ಮೇಲೆ ಈ ವಿಷಯ ನನ್ನ ಮೇಲೆ ಗರಂ ಆದರು. ಅಂದಿನಿಂದ ಅವರ ಮನೆಗೆ ಹೋಗುವುದನ್ನು ಬಿಟ್ಟೆ. ನನ್ನ ಬದಲು ನನ್ನ ಗೆಳೆಯ ತಿಪ್ಪೇಸ್ವಾಮಿ ಹೋಗಲು ಶುರು ಮಾಡಿದ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

1 Comment

  1. G s shsshidhar

    ಸಹಜ ಶೈಲಿಯಲ್ಲಿ ಓದಿಸಿಕೊಂಡು ಹೋಗುವ ಬರಹ.
    ನೀವು ಪ್ರಶಿಕ್ಷಕರಾಗಿ, ಶಿಕ್ಷಕರಾಗಿ ಶಂಕರ್ ಗುರು ರೋಲ್ ( ಪಾತ್ರ ) ಸಹ ಮಾಡಿದಿರಿ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ