ಸಂಜೆ ಆಯಿತು; ನೆರಳು ಉದ್ದುದ್ದವಾಗಿ ಎಲ್ಲಾ ಕಡೆಗಳಲ್ಲಿಯೂ ಕತ್ತಲಿಸುತ್ತಿದೆ. ಮನುಷ್ಯ ಸಂಚಾರ ಕಡಿಮೆಯಾಗುತ್ತಿದೆ. ದೂರದೂರದಲ್ಲಿ ಯಾರೋ ಯಾರನ್ನೋ ಕರೆಯುವ ಒಂದೊಂದು ಧ್ವನಿ ಅಲೆಯಾಗಿ ಮಾತ್ರ ಕಿವಿಯನ್ನು ಹೊಡೆಯುತ್ತಿದೆ. ಇತರರಲ್ಲಿ ಕರೆಯುವವರೂ ಇದ್ದಾರೆ. ಕರೆಯಿಸಿಕೊಳ್ಳುವವರೂ ಇದ್ದಾರೆ ! ಬಡ ಕುಟುಂಬದಲ್ಲಿ ಮಾತ್ರ ಅಂಥವರು ಯಾರೂ ಇಲ್ಲವೆ? ಅನ್ಯಾಯವಿದು. ಲಿಂಗಪ್ಪ ಇನ್ನೂ ಬರಲಿಲ್ಲ. ಹುಡುಕಲೇ ಬೇಕು; ಕೂಡಲೇ ಹೊರಡಬೇಕು; ಎಂದು ತಟ್ಟನೆ ಎದ್ದುನಿಂತು ಸೋಮಪ್ಪ ದಾರಿಯ ಕಡೆಗೆ ಕಣ್ಣಿಟ್ಟು ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ದೂರದಲ್ಲಿ ಯಾರೋ ಬರುತ್ತಿದ್ದಂತೆ ತೋರಿತು.
ಡಾ
.ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕತೆಗಳ ಸರಣಿಯಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಬರೆದ ಕತೆ “ದುಡಿಯುವ ಮಕ್ಕಳು”

 

ಬಾಳೂರು ಗ್ರಾಮದಲ್ಲಿ ಮೊತ್ತಮೊದಲಾಗಿ ಚಿಕ್ಕ ಪ್ರಾಥಮಿಕ ಶಾಲೆಯೊಂದನ್ನು ತೆರೆಯಬೇಕೆಂದು ಸರಕಾರದ ಅಪ್ಪಣೆ ಹೊರಟಾಗ ಒಕ್ಕಲು ಸೋಮನ ಮುಖದಲ್ಲಿ ಮೂಡಿಬಂದ ನಗುವನ್ನು ಯಾರೂ ಕಂಡಿರಲಾರರು. ನಗುವ ಅಧಿಕಾರ ಆ ಮುಖಕ್ಕೆ ಎಲ್ಲಿಯದು? ಮೂರು ಬಳ್ಳ ಭತ್ತಕ್ಕಾಗಿ ದುಡಿಯುವಾತನಿಗೆ ಗ್ರಾಮ ಶಾಲೆಯಿದ್ದರೇನು? ಇಲ್ಲದಿದ್ದರೇನು? ದುಡಿತಕ್ಕೆ ಓದು ಬರಹ ಬೇಕೆ? ಕಲಿಯುವ ಮಕ್ಕಳಿಗಾಗಿ ಶಾಲೆ. ಅಂತಹ ಮಕ್ಕಳು ಪಣ್ಯಮಾಡಿ ಹುಟ್ಟುತ್ತಾರೆ. ಸೋಮಪ್ಪನಂತಹ ಜೀತದಾಳಿನ ಸಂತತಿಯಾಗಿ ಹುಟ್ಟುವುದುಂಟೆ?

ತಿಮ್ಮಣ್ಣ ನಾಯಕರ ಮೂಲದ ಒಕ್ಕಲು ಸೋಮ – ಸೋಮಪ್ಪನೆಂದೂ ಅವನನ್ನು ಕರೆಯುವ ವಾಡಿಕೆಯಿತ್ತು. ಅವನ ಮೂಲ ಎಲ್ಲಿ? ಅವನ ಮೂಲ ಪುರುಷರಲ್ಲಿ ಯಾರು, ಎಂದು ನಾಯಕರ ಪೂರ್ವಜರನ್ನು ಆಶ್ರಯಿಸಿದರು? ಎಂಬ ಸಂಗತಿ ಸ್ಥಳ ಪುರಾಣಕ್ಕೆ ತಿಳಿಯದು. ಹಲ ವರ್ಷಗಳಿಂದ ಬಹುಶಃ ಆ ಕಾಲದಲ್ಲಿ ಬಾಳುತ್ತಿದ್ದ ಹಳಬರಿಗೆ ನೆನಪಿರುವಷ್ಟು ಸಮಯದಿಂದ ಆ ಒಕ್ಕಲುಮನೆ ಹಾಗೆಯೇ ಇತ್ತು. ಸೋಮಪ್ಪನ ಪೂರ್ವ ಪರಂಪರೆ ಅವನಿಗೇ ತಿಳಿಯದು; ನಾಯಕರಿಗೆ ತಿಳಿಯಬೇಕಾದ ಅವಶ್ಯಕತೆಯಂತೂ ಇಲ್ಲ. ನಾಯಕರಿಗೆ ವಿಸ್ತಾರವಾದ ನೆಲಹೊಲಗಳಿವೆ. ಅವುಗಳಲ್ಲಿ ಬೆವರು ಸುರಿಸುವ ಸೋಮಪ್ಪನೂ ಇದ್ದಾನೆ. ಹಟ್ಟಿ ಕೊಟ್ಟಿಗೆಯಲ್ಲಿರುವ ದನಕರುಗಳಿಗೆ ಅನುದಿನವೂ ಮೇವು ಸಲ್ಲುತ್ತದೆ. ಅದರಂತೆ ಸೋಮಪ್ಪನಿಗೂ ಸಲ್ಲುತ್ತದೆ. ಹುಟ್ಟಿಯಲ್ಲೊಂದು ಕರು ಹುಟ್ಟುತ್ತದೆ. ಒಕ್ಕಲು ಮನೆಯಲ್ಲೊಂದು ಮಗು ಜನ್ಮ ತಾಳುತ್ತದೆ. ವ್ಯತ್ಯಾಸವೇನುಂಟು? ಸೋಮಪ್ಪನ ಮಗ ಲಿಂಗಪ್ಪ ಪ್ರಪಂಚದ ಬೆಳಕನ್ನು ಕಂಡಾಗ ವಿದ್ಯಾರ್ಜನೆಗೆ ಬೇಕಾದ ಅರ್ಹತೆಯುಳ್ಳವನಾಗಿ ಹುಟ್ಟಲಿಲ್ಲವೆಂಬುದು ನಿಶ್ಚಯ. ಹೀಗಿದ್ದರೂ ಗ್ರಾಮಶಾಲೆಯ ಹೆಸರನ್ನು ಕೇಳಿದೊಡನೆ ಸೋಮನಿಗಾದ ಸಂತೋಷ ಬೇರೆ ಯಾರಿಗೂ ಆಗಿರಲಿಲ್ಲ. ಕತ್ತಲೆಮನೆಯಲ್ಲಿ ಹಣತೆಯುರಿದಂತೆ, ಅವನ ಮುಖದಲ್ಲಿ ಆಶೆಯ ಬೆಳಕು ಮೂಡಿತು; ಅದನ್ನು ಅವನ ಹೆಂಡತಿ ಕೆಂಚಿಯಲ್ಲದೆ ಬೇರೆ ಯಾರೂ ಕಂಡಿರಲಾರರು.

“ಏನಿದು ಹುಚ್ಚರಂತೆ ನಗುತ್ತೀರಿ?” ಎಂದು ಕೆಂಚಿ ಕೇಳಿದಳು.

“ನಮ್ಮ ಮನೆಯೊಳಗೂ ಬೆಳ್ಳಿ ಮೂಡಬಹುದೆಂಬ ಸಂತೋಷದಿಂದ ನಗು ಬಂತು” ಎಂದು ಸೋಮ ನುಡಿದ.

ಕೆಂಚಿಗೆ ಅರ್ಥವಾಗಲಿಲ್ಲ. ಗ್ರಾಮದಲ್ಲಿ ಬೇಗನೆ ಶಾಲೆಯೇರ್ಪಡುವುದು. ಅದರ ಕಟ್ಟಡವನ್ನು ಕಟ್ಟುವುದಕ್ಕೆ ತಾನೇ ಮಣ್ಣು ಹೊತ್ತಿದ್ದಾನೆ. ಒಂದರ ಮೇಲೊಂದಾಗಿ ಏರಿ ಕುಳಿತ ಪ್ರತಿಯೊಂದು ಗೋಡೆಕಲ್ಲಿಗೂ ಅವನ ಆಯಾಸದ ಉಸಿರಿನ ಬಿಸಿ ತಿಳಿದಿದೆ. ಧನಿಗಳ ಪಾರುಪತ್ಯದಲ್ಲಿ ನಡೆಯಬೇಕಾದ ಶಾಲೆ. ಅವರಿಗೆ ಕೈಮುಗಿಯಬಹುದು; ಕಾಲಿಗೆ ಅಡ್ಡ ಬೀಳಬಹುದು; ಕೊಟ್ಟರೆ ಎರಡೇಟನ್ನು ಸಹಿಸಿಕೊಳ್ಳಲೂಬಹುದು; ಧನಿಗಳಲ್ಲಿ ಒಪ್ಪಿಗೆ ಕೇಳಿ ಮಗನನ್ನು ಶಾಲೆಗೆ ಕಳುಹಿಸಬಹುದಲ್ಲ! ತನ್ನ ಆಯುಷ್ಯವಂತೂ ಮಣ್ಣಿನಲ್ಲಿಯೇ ಸವೆದುಹೋಯಿತು. ಲಿಂಗಪ್ಪನದೂ ಹಾಗಾಗಬೇಕೆ? ಅವನ ಆಕಾರ ದುಡಿತದ ಆಳಿನದರಂತೆ ಇದೆಯೆ? ಅವನನ್ನು ಕಂಡರೆ ಒಕ್ಕಲುಮಗನೆಂದು ಯಾರಾದರೂ ಹೇಳಬಹುದೆ? ಅಂತಹ ಮಗುವಿಗೆ ಎರಡಕ್ಷರ ಬಂದರೆ, ಸೋಮ – ಕೆಂಚಿಯರ ಭಾಗ್ಯಕ್ಕೆ ಮತ್ತೇನು ಕುಂದು? – ಹೀಗಿದ್ದ ತನ್ನ ಯೋಚನೆಗಳನ್ನು ಬಿಚ್ಚಿ ಕೆಂಚಿಗೆ ಹೇಳುತ್ತಿದ್ದಾಗ ಸೋಮಪ್ಪನ ಸ್ವರ ನಡುಗಿತು. ಕಣ್ಣು ಒದ್ದೆಯಾಗಿದ್ದಿರಬೇಕು.

“ಕನಸಿನ ಗಂಟು!” – ಎನ್ನುತ್ತಾ ಕೆಂಚಿ ವಿಕಟವಾಗಿ ನಕ್ಕಳು.

“ಆಗಲಿ, ನೋಡೋಣ!” ಎಂದು ಸೋಮಪ್ಪ ಬಾವಿಯ ಕಡೆಗೆ ಸಾಗಿದ.

ಕತ್ತಲಾಗುವ ಮುಂಚೆ ದನಿಗಳ ತೋಟದ ಕೆಲ ಅಡಿಕೆ – ತೆಂಗಿನ ಮರಗಳಿಗೆ ನೀರು ಹೊಯ್ಯಬೇಕಿತ್ತು. ಆ ಕಾಲದ ಬೇಸಿಗೆ ಬಲು ಬಿರುಸಾಗಿದ್ದು ಕುಡಿಯುವ ನೀರಿನ ಬಾವಿಗಳು ಕೂಡ ಆರಿಹೋಗಿದ್ದವು. ಒಕ್ಕಲಿಗೆ ನೀರಿಲ್ಲದಿದ್ದರೂ ಧನಿಗಳ ತೋಟ ಒಣಗಿ ಹೋಗಬಾರದು. ಮಣಭಾರದ ಕೊಡವನ್ನು ಹೆಗಲ ಮೇಲಿಟ್ಟುಕೊಂಡು ನೀರನ್ನು ಹೊತ್ತು ಹೊಯ್ಯುತ್ತಿದ್ದಾಗ, ಅವನ ಮನಸ್ಸು ಎಷ್ಟೋ ವರ್ಷಗಳ ಹಿಂದಿನ ಘಟನೆಯೊಂದರ ಕಡೆಗೆ ಹಾರಿಹೋಯಿತು.

•••

1

ಸೋಮ ಹುಡುಗ. ಕಲ್ಲು ತಿಂದು ಕರಗಿಸುವ ಪ್ರಾಯ. ಕೆಂಚಿ ಅವನಿಗೊಪ್ಪಿದ ಹೆಣ್ಣು; ತಾನಾಗಿ ಒಲಿದು ವರಿಸಿದ ಸೊಗಸುಗಾರ್ತಿ. ಪರಸ್ಪರವಾಗಿ ಒಲುಮೆಯುಳ್ಳವರು ಹೇಗೆ ಮದುವೆಯಲ್ಲಿ ಒಂದಾಗಬೇಕೋ ಹಾಗೆಯೇ ಅವರೂ ಆದುದು.

ಧನಿಗಳ ಗದ್ದೆಯಲ್ಲಿ ಕೈನೆಡುವ ಸಮಾರಂಭವೆಂದರೆ, ಊರಿನ ದೊಡ್ಡಜಾತ್ರೆಯೆಂದರೂ ಸರಿಯೆ. ಹರೆಯದ – ಹರೆಯ ಮೀರಿದ ಗಂಡು ಹೆಣ್ಣುಗಳು ಅಲ್ಲಿ ಕಲೆಯುತ್ತವೆ. ಹೇಳುವ ‘ಓಬೇಲೆ’ ಪ್ರಾಯಮೀರಿದವರಿಗೆ ಪೂರ್ವಾನುಭವದ ರಸಾಯನವನ್ನು ಊಡಿಸುತ್ತಿದ್ದರೆ, ಪ್ರಾಯದ ಮೊದಲ ಮೆಚ್ಚಿನಲ್ಲಿ ಕಾಲಿಟ್ಟವರಿಗೆ ಭವಿಷ್ಯ ಜೀವನದ ವರ್ಣರಂಜಿತ ಚಿತ್ರವನ್ನು ಕಣ್ಣಮುಂದೆ ಕಾಣಿಸುವಂತಿತ್ತು. ಅಂತಹ ಒಂದು ಸನ್ನಿವೇಶವದು. ಸೋಮಪ್ಪ ಒಂದು ಗದ್ದೆಯಲ್ಲಿ ಉಳುತ್ತಿದ್ದ. ಪಕ್ಕದ ಗದ್ದೆಯಲ್ಲಿ ಅಗೆ ನೆಡುತ್ತಿದ್ದ ಹೆಂಗಸರ ಮಧ್ಯದಿಂದ ಒಂದು ಕಲನಾದವೆದ್ದು ಅವನ ಕಿವಿಯನ್ನು ಹೊಡೆಯಿತು; ಎದೆಯನ್ನು ಅಲುಗಾಡಿಸಿತು; ಹಾಡಿನ ವ್ಯಕ್ತಿಯ ಕಡೆಗೆ ದೃಷ್ಟಿಯನ್ನು ಸೆಳೆಯಿತು. ಸೆಳೆದ ದೃಷ್ಟಿಯನ್ನು ಹಿಂತಿರುಗಬಿಡಲಿಲ್ಲ. ಹೀಗೆ ಪ್ರೇಮದ ಸುಲಿಗೆ ಮಾಡಿದವಳು ಮತ್ತಾರೂ ಅಲ್ಲ – ಕೆಂಚಿ! ಸೋಮಪ್ಪನಂತಹ ಜವ್ವನಿಗ-ಹೊಂತಗಾರ – ದುಡಿಯುವ ಶಕ್ತಿಯುಳ್ಳ ಗಂಡಿನ ನೋಟ ಕೆಂಚಿಯ ಮೇಲೆ ಬಿದ್ದಿರಲು, ಅವಳನ್ನು ಕೈಗೆ ನೀರೆರೆದು ಕೊಡುವುದು ವಾಸಿಯೆಂದು ಕೆಂಚಿಯ ತಂದೆಗೆ ಗೋಚರವಾದರೆ ತಪ್ಪುಂಟೆ? ಕೆಂಚಿಯ ತಂದೆ ತಾನಾಗಿ ಮಾತಾಡಿಸಿ ಹುಡುಗಿಯನ್ನು ಮದುವೆ ಮಾಡಿಕೊಟ್ಟ.

ಅವನಾದರೂ ಗಟ್ಟದ ಆಳು; ಹೆಂಡತಿ ಮಕ್ಕಳನ್ನು ಹಿಂದೆ ಬಿಟ್ಟು ವರ್ಷದಲ್ಲಿ ಆರು ತಿಂಗಳು ಗಟ್ಟದ ತೋಟಗಳಲ್ಲಿ ಮೈಮುರಿದು ಕೆಲಸ ಮಾಡಬೇಕು. ಆದುದರಿಂದ ಎಳೆಯ ವಯಸ್ಸೂ ಬಲವಾದ ರಟ್ಟೆಗಳೂ ಉಳ್ಳ ಸೋಮನಲ್ಲಿ ಅಳಿಯನಾಗುವ ಸಕಲ ಯೋಗ್ಯತೆಗಳೂ ಗೋಚರಿಸಿದುದರಲ್ಲಿ ಆಶ್ಚರ್ಯವಿಲ್ಲ.

ಗಂಡ – ಹೆಂಡಿರೋ! ನಾಲ್ಕು ಜನರ ಮಧ್ಯದಲ್ಲಿ ಎದ್ದು ಕಾಣಿಸುವಂಥವರೇ…. ಹೀಗಿರುವ ಸೌಭಾಗ್ಯ ತಮಗುಂಟೆ? ಎಂದು ನೋಡುವವರಲ್ಲಿ ನಿಟ್ಟುಸಿರಿಗೆ ಕಾರಣವಾಗುವ ಸರಿಯಾದ ಜೋಡಿಯದು. ಅವರ ಅನ್ಯೋನ್ಯ ಪ್ರೇಮಕ್ಕೆ ಆಗಲಿಕೆಯ ಅರಿವಿರಲಿಲ್ಲ. ಇಬ್ಬರೂ ಶ್ರಮಪಟ್ಟು ಹೊಟ್ಟೆ ತುಂಬಿಸಬೇಕು. ಒಟ್ಟಾಗಿಯೇ ಕೂಡಿ ದುಡಿಯಬೇಕು, ಅವನು ನೇಗಿಲಿಗೆ ಕೈ ಕೊಟ್ಟರೆ ಇವಳು ‘ಓಬೇಲೆ’ಗೆ ದನಿ ಕೂಡಿಸಬೇಕು. ಅವನು ಗೊಬ್ಬರದ ಹೆಡಿಗೆಗಳನ್ನು ತಲೆಗೇರಿಸುವುದಿದ್ದರೆ ಈಕೆ ಏರಿಸುವುದಕ್ಕೆ ಕೈ ಕೊಡಬೇಕು. ಪ್ರಪಂಚದ ಪ್ರತಿಯೊಂದು ಕಾರ್ಯವೂ ಹಾಗೆಯೇ ಗಂಡಿಗೆ ಅರೆಪಾಲು; ಹೆಣ್ಣಿಗೆ ಅರೆ ಪಾಲು; ಈ ವಿಭಾಗವನ್ನು ಯಾರೂ ಮಾಡಿದುದಲ್ಲ; ವಿಧಿಸಿದುದಲ್ಲ; ಕಲಿಸಿದುದಲ್ಲ – ಪ್ರಕೃತಿಯಲ್ಲಿ ತನ್ನಿಂದ ತಾನೇ ನಡೆದು ಬಂದುದು. ಹೀಗೆ ಪ್ರಕೃತಿಯ ಸಂವಿಧಾನದಂತೆ ತಾನಾಗಿ ನಡೆದು ಬಂದ ಸಂಪ್ರದಾಯದ ಪ್ರತೀಕಗಳಾಗಿ ಆ ಗಂಡೂ ಆ ಹೆಣ್ಣೂ ತಮ್ಮ ವ್ಯಕ್ತಿತ್ವವನ್ನೂ ಭಿನ್ನತೆಯನ್ನೂ ಮರೆತು, ಒಂದಾಗಿ ದುಡಿದು ತೃಪ್ತಿಯ ಜೀವನವನ್ನು ನಡೆಸುತ್ತಿದ್ದರು.

ಧನಿಗಳ ಗದ್ದೆಯಲ್ಲಿ ನಾಟಿ ಮಾಡುವ ಉತ್ಸವದಲ್ಲಿ ಭಾಗವಹಿಸುವುದೆಂದರೆ ಇಬ್ಬರಿಗೂ ಪರಮಾನಂದ. ಸೋಮಪ್ಪ ಆ ದಿನದ ವೀರನಾಗುತ್ತಿದ್ದ. ಧನಿಗಳ ಕೋಣಗಳಿಗೆ ಹಲಗೆಕಟ್ಟಿ ಏರುವುದೆಂದರೆ ಸಾಮಾನ್ಯದ ಕೆಲಸವಲ್ಲ. ಅದಕ್ಕೆ ಅವನೊಬ್ಬನೆ ಶಕ್ತ. ಅವನ ಓಟ ಮುಗಿಸಿ, ಹಲಗೆಯಿಂದಿಳಿದು ನೋಡಿದ ಕೂಡಲೇ, ಬಳಿಯಲ್ಲೇ ಕೈ ನೀಡುತ್ತಿರುವ ಕೆಂಚಿ ಕಿರುನಗುವಿನ ಪ್ರೇಮದ ಕಾಣಿಕೆಯನ್ನಿತ್ತರೆ, ಸೋಮಪ್ಪನ ಜೀವನಕ್ಕೆ ಸೌಭಾಗ್ಯ ಕಲಶವಿಟ್ಟ ಹಾಗೆ.

ಎಂದಿನಂತೆ ಒಮ್ಮೆ ಕೆಂಚಿ ನೇಜಿ ನೆಡುತ್ತಿದ್ದಳು. ಸೋಮಪ್ಪ ತುಂಟ ಕೋಣಗಳಿಗೆ ಹಲಗೆ ಕಟ್ಟಿ ಏರುವುದಕ್ಕೆ ಅಣಿಮಾಡುತ್ತಿದ್ದ. ಅಷ್ಟರಲ್ಲಿ ಗದ್ದೆಯ ಅಂಚಿನಲ್ಲಿ ಹಾದುಬಂದ ಅಂಚೆಪೇದೆ ಅಣ್ಣಯ್ಯ ಸ್ವಲ್ಪ ದೂರದಲ್ಲಿ ನಿಂತು “ತಿಮ್ಮಣ್ಣ ನಾಯಕರ ಒಕ್ಕಲು ಸೋಮಪ್ಪ – ನೀನೇ?” ಎಂದು ಕೇಳುತ್ತ ದಫ್ತರಿನೊಳಗೆ ಕೈಹಾಕಿ ಪತ್ರವೊಂದನ್ನು ಎತ್ತಿಹಿಡಿದ. ಪತ್ರ ಬರೆಯಿಸಿಕೊಳ್ಳುವಷ್ಟು ಯೋಗ್ಯತೆ ನನಗೆ ಬಂತೆ? ಎಂದು ತನ್ನಲ್ಲಿ ತಾನೇ ಬೆಪ್ಪುಗೊಂಡು, ಕೋಣಗಳನ್ನು ಇದ್ದಲ್ಲಿಯೇ ಬಿಟ್ಟು ಅಣ್ಣಯ್ಯನ ಕಡೆಗೆ ಓಡಿ, ಕೈಚಾಚಿ ನಿಂತ. ಅಣ್ಣಯ್ಯ ಪತ್ರಕೊಟ್ಟ; ಪತ್ರ ಕೈಗೆ ಬಂದೊಡನೆ ಎದೆ ಬಡಿಯಿತು. ಮೈ ಬಿಸಿಯೇರಿತು. ಇದರೊಳಗೆ ಏನಿರಬಹುದೋ? ಇದರೊಳಗಿನ ಅಕ್ಷರಗಳ ಜೋಡಣೆಯಲ್ಲಿ ಯಾವ ಎದೆಯ ಯಾವ ಸುಖವೊ ದುಃಖವೊ ಯಾರು ಬಲ್ಲರು? ಇದರ ಅರ್ಥವನ್ನು ತಿಳಿಯುವುದು ಈ ಜನ್ಮದಲ್ಲುಂಟೆ? ಹೀಗೆ ಯೋಚನೆ ಬಂದು ಅಣ್ಣಯ್ಯನಿಂದಲೇ ಓದಿಸಿ ಕೇಳಿದರಾಗಬಹುದೆಂದು ತೋರಿತು. “ಅಯ್ಯಾ ಅಣ್ಣಯ್ಯನವರೇ” ಎಂದಾತ ಪೇದೆಯನ್ನು ಸಂಬೋಧಿಸಿದುದೇ ತಡ, ಪೇದೆಗೆ ಅದರರ್ಥ ತಿಳಿಯಿತು. “ಅಣ್ಣಯ್ಯ! ಗಿಣ್ಣಯ್ಯ! ಎದೆ ಸೀಳಿದರೆ ಎರಡಕ್ಷರ ಕಾಣಿಸುವ ಹಾಗಿಲ್ಲ; ಅಂಥವರಿಗೆ ಪತ್ರವೇಕೆ? ಬಟವಾಡೆಯೇಕೆ? ಬೇಕಿದ್ದರೆ ಕಾಗದವನ್ನಿಟ್ಟುಕೋ; ಯಾರಿಂದಲಾದರೂ ಓದಿಸಿ ತಿಳಿದುಕೋ. ನಮಗೆ ಬಡವಾಡೆಗೆ ಮಾತ್ರ ಸಂಬಳ ಕೊಡುವುದು ಸರಕಾರ!” ಎಂದು ಅಣ್ಣಯ್ಯ ಗದ್ದೆಯಂಚಿನಲ್ಲಿ ಬಿರುನುಡಿಯನ್ನು ಬಿಕ್ಕಿ, ಸಿಡಿಮಿಡಿಗೊಂಡ, ಸರ್ಪದಂತೆ ಸರ್ರನೆ ಓಡಿಹೋದ. ಸೋಮಪ್ಪನ ಮುಖಕ್ಕೊಂದು ಏಟು ಕೊಟ್ಟ ಹಾಗಾಯಿತು. ಬರಹ ಬಾರದವರಿಗೆ ಖಾಲಿ ಕಾಗದ ಕೂಡ ತನ್ನಲ್ಲಿರುವ ಗುಟ್ಟನ್ನು ಬಿಚ್ಚಿ ಹೇಳುವುದಿಲ್ಲ ಎಂದ ಮೇಲೆ ಯಾವ ಪ್ರಾಣಿ ಮರ್ಯಾದೆಯನ್ನು ಕೊಟ್ಟೀತು? ಕೊಡಬೇಕು? ತನ್ನಂತಹ ನೀಚರಿಗೆ ಆಗಬೇಕಾದುದೇ ಹೀಗೆ ಎಂಬ ಆತ್ಮನಿಂದೆಯ ಭಾವ ಒಂದೆಡೆ. ಪತ್ರದೊಳಗೆ ಏನೋ ಒಂದು ಸೋಜಿಗವಿದೆ. ಯಾರೋ ಬಂಧುಗಳ ಮೂಕಧ್ವನಿ ಅದರೊಳಗೆ ಅಡಗಿ ಕುಳಿತಿದೆ; ಅದೇನೆಂದು ಕೇಳಬೇಕಾಗಿತ್ತು; ಎನ್ನುವ ಕುತೂಹಲ ಒಂದೆಡೆ. ಹೀಗೆ ಅವನ ಮನಸ್ಸು ತೂಗುಯ್ಯಾಲೆಯಂತೆ ಅತ್ತಿತ್ತ ತೊನೆಯುತ್ತಿತ್ತು.

ಆದರೆ ಮಾಡುವುದೇನು? ಧನಿಯ ಸೇವೆ ಎಲ್ಲ ಕೆಲಸಕ್ಕಿಂತಲೂ ಮೇಲು, ಸೂರ್ಯದೇವ ನೆತ್ತಿಗೆ ಮುಟ್ಟಿದ್ದಾನೆ. ನೆರಳು ಪೂರ್ವಕ್ಕೆ ವಾಲುವ ಮೊದಲು ಎತ್ತುಗಳನ್ನು ಬಿಚ್ಚಿ, ಮೈತೊಳೆದು, ಮಾಲೀಸುಮಾಡಿ, ಹಟ್ಟಿಯಲ್ಲಿ ಕಟ್ಟಿ ಹುಲ್ಲು ಹಾಕಬೇಡವೆ? ಸುಬ್ರಹ್ಮಣ್ಯದ ಸಂತೆಯಿಂದ ತಂದ ಜೋಡಿ. ದೇವರನ್ನು ಕಾಣುವಂತೆ ಕಂಡಿದ್ದಾರೆ, ತಿಮ್ಮಣ್ಣ ನಾಯಕರು. ಒಳ್ಳೆಯ ಸೊಕ್ಕಿನ ಕೋಣಗಳು. ಸೋಮಪ್ಪನಲ್ಲದೆ ಇತರರ ನೆರಳನ್ನು ಕೂಡ ಸಮೀಪಕ್ಕೆ ಆನಿಸಬಿಡವು. ಇಂತಹ ಸ್ಥಿತಿಯಲ್ಲಿ ಪತ್ರದ ‘ವಾಚಕ’ವೇನೆಂದು ಇತರರೊಡನೆ ಕೇಳಿ ಸಮಯ ಹಾಳು ಮಾಡುವುದಕ್ಕಿಂತ ಹಿಡಿದ ಕೆಲಸವನ್ನು ಮುಗಿಸುವುದೇ ಯುಕ್ತವಾಗಿ ತೋರಿತು.

ಇದೇನು ಹೀಗೆ! ಸೋಮಪ್ಪ ಎತ್ತುಗಳನ್ನು ಬಿಟ್ಟು ಗದ್ದೆಯಂಚಿನಲ್ಲಿ ನಿಂತಿರುವುದೇಕೆ? ಎಂದು ಶಿಲಾಮೂರ್ತಿಯಂತೆ ಸ್ತಬ್ಧಳಾಗಿ ಎವೆಯಿಕ್ಕದ ನೋಟದಿಂದ ನೋಡುತ್ತಿದ್ದಳು ಕೆಂಚಿ. ಎತ್ತುಗಳಾದರೋ ತಮಗೂ ಸೋಮಪ್ಪನಿಗೂ ಇರುವ ಕೂಡುಕಟ್ಟನ್ನು ಯಾರು ಕಡಿದು ಹಾಕಿದರು? ತಮ್ಮ ಹಿಂದೆ ಹಲಗೆಯೇರುವ ವೀರ ಏಕೆ ಬರಲಿಲ್ಲ? ಬಂದಿದ್ದರೆ ತಮ್ಮ ಓಟದ ಬಲವನ್ನು ತೋರಿಸಿಬಿಡುತ್ತಿದ್ದೆವಲ್ಲ! ಎನ್ನುವಂತೆ ಗದ್ದೆಯ ನಡುವೆ ಕಿವಿಯನ್ನು ಅಲ್ಲಾಡಿಸದೆ ಏನನ್ನೋ ಆಲಿಸುವಂತೆ, ಏನನ್ನೋ ನಿರೀಕ್ಷಿಸುವಂತೆ, ಕದಲದೆ ನಿಂತಿದ್ದುವು. ಈ ಸ್ಥಿತಿ ಹೀಗೆಯೇ ಇರುವುದು ಸರಿಯಲ್ಲವೆಂದು ಸೋಮಪ್ಪ ಕೂಡಲೆ ಎತ್ತುಗಳ ಕಡೆಗೆ ಓಡಿಬಂದು ಹಲಗೆ ಹತ್ತಿ “ಓಓಓ” ಎಂದು ರಾಗ ಎಳೆಯುತ್ತಾ, ಓಡುವ ಹುರುಪು ಹುಟ್ಟಿಸುವುದಕ್ಕಾಗಿ ಬಾಲ ಹಿಡಿದು, ಎತ್ತುಗಳ ಬೆನ್ನಿಗೆ ಎರಡೇಟುಗಳನ್ನು ಕೊಟ್ಟುದೇ ತಡ! ಅವು ಯಾವ ವೇಗದಿಂದ ಓಡಿದುವು? ಹೇಗೆ ಹಾರಿದುವು? ಏನು ಮಾಡಿದುವು? ಎಂದು ನೋಡುವುದಕ್ಕೂ ಅವಕಾಶವಿರಲಿಲ್ಲ. ಸೋಮಪ್ಪ ಗದ್ದೆಯ ಕೆಸರಲ್ಲಿ ಉದ್ದಂಡವಾಗಿ ಬಿದ್ದಿದ್ದ. ಕೋಣಗಳು ಕಟ್ಟಿದ ಹಲಗೆ ನೊಗಗಳೊಂದಿಗೆ ಗದ್ದೆಯಲ್ಲಿ ಬತ್ತದ ಸಸಿ ನೆಡುತ್ತಿದ್ದ ಹೆಂಗಸರ ಮಧ್ಯಕ್ಕೆ ಹಾರಿ, ಅಂಚನ್ನು ದಾಟಿ ತೋಡಿಗೆ ಇಳಿದು ಪಕ್ಕದ ಮಜಲು ಗದ್ದೆಗೆ ಸಾಗಿದ್ದುವು. ಇತ್ತ ಈ ದೃಶ್ಯವನ್ನು ಕಂಡು ನೂರಾರು ಕಂಠಗಳು ಅಯ್ಯೋ! ದೇವರೇ! ಎಂದು ಕೂಗಿದವು. ಎಲ್ಲ ಸ್ವರಗಳಲ್ಲಿ ಕೆಂಚಿಯದು ಉಚ್ಚವಾಗಿತ್ತೆಂದೂ ಕರುಣಾದ್ರ್ರವಾಗಿತ್ತೆಂದೂ ಹೇಳಬೇಕಾಗಿಲ್ಲ. ಕೆಲವರು ಅತ್ತ ಓಡಿದರು. ಕೆಲವರು ಜಿಗಿದರು. ಕೆಂಚಿ ಸೋಮಪ್ಪ ಬಿದ್ದಿದ್ದ ಗದ್ದೆಯ ಕೆಸರಿನಲ್ಲಿ ಓಡುತ್ತಾ ಬಂದು “ದೇವರೇ! ನನ್ನ ಕೊರಳ ನೂಲನ್ನು ಕಡಿದು ಹಾಕಬೇಡ” ಎಂದು ಎದೆಯೊಡೆಯುವಂತೆ ಬೇಡುತ್ತಾ ಸೋಮಪ್ಪನನ್ನು ಎತ್ತುವುದಕ್ಕೆ ಬಗ್ಗಿದಳು. ಬಗ್ಗಿ ನೋಡಿದಳು; ಎಬ್ಬಿಸುವುದಕ್ಕೆ ಕೈಕೊಟ್ಟಳು; ಕೈಯನ್ನು ಎತ್ತಿದಳು; ಕಾಲನ್ನು ಕುಲುಕಿದಳು, ಏನು ಮಾಡಿದರೂ ಎತ್ತಿ ಎಬ್ಬಿಸುವುದಕ್ಕಾಗಲಿಲ್ಲ. ಕಣ್ಣೀರು ಹರಿದು ಸೋಮಪ್ಪನ ಮೈಯ ಕೆಸರನ್ನು ತೊಳೆಯಿತು. ಇಷ್ಟರಲ್ಲಿ ನಸುನಿದ್ದೆಯಿಂದ ಎಚ್ಚತ್ತವನಂತೆ ಸೋಮಪ್ಪ ಮೈಕೈಗಳನ್ನು ಅಲ್ಲಾಡಿಸಿ ಹೊರಳಿದ ಕಣ್ಣನ್ನು ಮುಚ್ಚಿದ ಕೆಸರನ್ನು ಒರಸಿಕೊಂಡು, “ನನಗೇನಾಯಿತು ಕೆಂಚಿ? ನೀನೇಕೆ ಕೈ ನೆಡುವುದನ್ನು ಬಿಟ್ಟು ಇಲ್ಲಿಗೆ ಬಂದೆ?” ಎಂದು ಪ್ರಶ್ನಿಸಿದ. ಉತ್ತರ ಅವಶ್ಯವಿರಲಿಲ್ಲ. ಸೋಮಪ್ಪನಿಗೆ ತಿಳಿವು ಬಂತು. ಮಲಗಿದ ಚಾಪೆಯಿಂದ ಏಳುವವನಂತೆ ಗದ್ದೆಯಿಂದೆದ್ದು “ಎತ್ತುಗಳೆಲ್ಲಿ?” ಎಂದು ಕೇಳಿದ. “ನೋಡಿ ಅಲ್ಲಿವೆ! – ಆ ಮಜಲು ಗದ್ದೆಯಲ್ಲಿ!” ಎಂದು ಕೆಂಚಿ ಬೆರಳೆತ್ತಿ ತೋರಿಸಿದಳು. “ನಿಮಗೇನಾಗಿದೆ?” ಎಂದು ಕೇಳಬೇಕಾದ ಅವಶ್ಯಕತೆಯಿರಲಿಲ್ಲ; ಅವಕಾಶವೂ ಇರಲಿಲ್ಲ. ಮೈಯಲ್ಲಿ ಅಂಟಿಕೊಂಡಿರುವ ಕೆಸರನ್ನು ಉಜ್ಜಿಕೊಳ್ಳುತ್ತಾ ಅಲ್ಲೇ ಕೆಸರಲ್ಲಿ ಬಿದ್ದು ಭಾರವಾಗಿದ್ದ ಚಾಟಿಯನ್ನು ಕಂಕುಳಿಗೆ ಸೇರಿಸಿಕೊಂಡು ಸೋಮಪ್ಪ ಎತ್ತುಗಳನ್ನು ಬೆಂಬತ್ತಿಕೊಂಡು ಓಡಿದ. ಸೋಮಪ್ಪನ ಬರವನ್ನು ಕಂಡ ಎತ್ತುಗಳು ಮುಖ ತಿರುಗಿಸಿ ಅವನನ್ನೇ ನೋಡುತ್ತಾ ನಿಂತುವು. ಹೂಟೆಬಿಡುವ ಕಾಲವಾಗಿತ್ತು. ಎತ್ತುಗಳು ಹಸಿದಿದ್ದುವು. ಅವುಗಳ ಹೆಗಲಿನಿಂದ ನೊಗವನ್ನೂ ಹಲಗೆಯನ್ನೂ ಬಿಚ್ಚಿ – ಎರಡನ್ನೂ ಹೊಡೆದು ಕೊಂಡು, ತೋಟದ ಒತ್ತಿನಲ್ಲಿದ್ದ ಹಳ್ಳದಲ್ಲಿ ಮೈತೊಳೆದಾಯಿತು. ಧನಿಗಳ ಹಟ್ಟಿಯಲ್ಲಿ ಕಟ್ಟಿ ಆಯಿತು. ತಿನಿಸು ಹಾಕಿಯೂ ಆಯಿತು. ಆ ಮೇಲೆ ಸೋಮಪ್ಪ ಹಿಂದೆ ಬಂದು ಮಜಲು ಗದ್ದೆಯಲ್ಲಿ ಬಿಟ್ಟಿದ್ದ ನೊಗ ಹಲಗೆಗಳನ್ನು ತಂದು ಹಟ್ಟಿಯ ಅಟ್ಟದಲ್ಲಿ ಇಟ್ಟು ತನ್ನ ಮನೆಗೆ ನಡೆದ.

ಎತ್ತುಗಳ ಓಟದ ರಭಸದಲ್ಲಿ ಸೋಮಪ್ಪನಿಗೆ ಮೈನೋವು ಮರೆತು ಹೋಗಿತ್ತು. ಈಗ ಮೈಯನ್ನು ಅತ್ತಿತ್ತ ಚಾಚುತ್ತಾನೆ. ಒಂದು ಅಳ್ಳೆ ನೋಯುತ್ತದೆ. ಕಾಲಸಂದಿಗೆ ಪೆಟ್ಟಾದಂತೆ ತೋರುತ್ತದೆ. ಇಷ್ಟರಲ್ಲಿ ಕೆಂಚಿಯೂ ಮನೆಗೆ ಬಂದಿದ್ದಳು “ವಿಶೇಷವೇನಾದರೂ ಇದೆಯೇ?” ಎಂದು ಕೆಂಚಿ ಕೇಳಿದಳು. “ಹಾಗೇನೂ ಇಲ್ಲ, ಮೈಗೇನೂ ನೋವಾಗಲಿಲ್ಲ. ಆದರೆ ಧನಿಗಳು ಇನ್ನು ಮುಂದೆ ಈ ಕೋಣಗಳನ್ನು ಮುಟ್ಟಬೇಡ ಎಂದು ತಾಕೀತು ಮಾಡಿದರು. ಅದರಿಂದ ಎದೆಗೆ ಅದೆಷ್ಟು ನೋವು ಮೈಗೆ ಆಗಲಿಲ್ಲ” ಎಂದ ಸೋಮಪ್ಪ ಕೆಂಚಿಯ ಕಣ್ಣರೆಪ್ಪೆಗಳಿಂದ ಎರಡು ಹನಿಗಳು ಉದುರಿದವು. “ಮಾಡುವುದೇನು? ಗ್ರಹಚಾರ” ಎಂದಳು.

ಅಂದು ಗ್ರಹಚಾರ ಹಿಡಿದು ಮಲಗಿದ ಸೋಮಪ್ಪ ಎರಡು ದಿನ ಅರೆ ಕನಸು ಅರೆ ನನಸುಗಳಲ್ಲಿ ಮಲಗಿದ ಚಾಪೆಯನ್ನು ಬಿಡಲಿಲ್ಲ. ಕೆಂಚಿ ಗಾಬರಿಗೊಂಡಿದ್ದಳು. ಆದರೆ ಸುತ್ತು ಮುತ್ತಲಿನ ಗಾಳಿ ಬೆಳಕುಗಳ ಉಪಚಾರದಿಂದ ಸೋಮಪ್ಪ ಬೇಗನೆ ಗುಣಹೊಂದಿ ಗೈಮೆಗೆ ಹೋಗುವಷ್ಟು ಬಲವುಳ್ಳವನಾದ. ಆದರೆ ಆ ಪತ್ರದ ವಿಷಯ…. ಮರೆತೇ ಹೋಗಿತ್ತು.

ಹದಿನೈದು ದಿವಸಗಳು ಅನಂತರ ಗಟ್ಟದಿಂದ ಬಂದ ಯಾರೋ ಒಬ್ಬರು ಕೆಂಚಿಯ ತಂದೆ ಮರದಿಂದ ಬಿದ್ದು ಕಠಿನವಾಗಿ ಗಾಯ ಗೊಂಡನೆಂದೂ, ಆಸ್ಪತ್ರೆಗೆ ಸಾಗಿಸಲಾಯಿತೆಂದೂ, ಅಲ್ಲಿ ಹತ್ತು ದಿನಗಳಲ್ಲಿ ತೀರಿ ಹೋದನೆಂದೂ, ಅಳಿಯನಿಗೆ ಪತ್ರ ಬರೆದಿದ್ದರೂ ಮುಖ ತೋರಿಸಲಿಲ್ಲ – ಎಂಬ ಚಿಂತೆಯಲ್ಲೇ ಕಣ್ಣು ಮುಚ್ಚಿದನೆಂದೂ ಹೇಳಿದರು. ಇದನ್ನು ಕೇಳಿ ಸೋಮಪ್ಪನ ತಲೆಗೆ ಸಿಡಲೆರಗಿದಂತಾಯಿತು. ಕೆಂಚಿಯ ಆಳುವಿಗೆ ಕೊನೆಯಿರಲಿಲ್ಲ.

ಅದೇ ದಿನ ರಾತ್ರಿ ಮಲಗುವಾಗ ಸೋಮಪ್ಪ “ಕೆಂಚಿ! ಸಾಯುವ ತಂದೆಯನ್ನು – ಮಾವನನ್ನು ಕಣ್ಣಿನಿಂದ ನೋಡುವ ಪುಣ್ಯ ನಿನಗೂ ನನಗೂ ಇಲ್ಲದಂತಾಯಿತಲ್ಲ. ಇದಕ್ಕೆ ಕಾರಣವೇನು ಬಲ್ಲೆಯಾ?” ಎಂದು ಕೇಳಿದ.

“ಇಲ್ಲ” ಎಂದಳು ಕೆಂಚಿ.

“ನಮಗೆ ಅಕ್ಷರವಿಲ್ಲದುದು. ಅಂದು ಆ ಅಣ್ಣಯ್ಯ ತಂದು ಕೊಟ್ಟ ಕಾಗದವೇ ಅದು ನಿನ್ನ ಅಪ್ಪನದು. ಹಲಗೆಯೇರಿ ಕೋಣಗಳ ನ್ನೋಡಿಸಿದಾಗ ಕೆಸರಿನಲ್ಲಿ ಬಿದ್ದೆನಲ್ಲ! ಆ ಗದ್ದೆಯ ಕೆಸರು ಕಾಗದವನ್ನು ತಿಂದು ಬಿಟ್ಟಿತ್ತು. ಅಕ್ಷರ ಬರುತ್ತಿದ್ದ ಕೂಡಲೇ ಓದುತ್ತಿದ್ದೆನಲ್ಲವೆ? ದೇವರು ಹಾಗೆ ಹಣೆಯಲ್ಲಿ ಬರೆಯಲಿಲ್ಲ. ನಮ್ಮ ಜೀವನ ಈ ಕೆಸರಿನ ಪಾಲಿಗೆ! ಗೊಬ್ಬರದ ಪಾಲಿಗೆ!” ಎಂದು ಸೋಮಪ್ಪ ನುಡಿದಾಗ ಕೆಂಚಿಯ ಮುಖವೂ ಬಣ್ಣ ಕೆಟ್ಟಿತು.

“ಕಾಗದ ಮರೆತು ಹೋಯಿತೆ?” ಎಂದು ಕೇಳಿದಳು ಕೆಂಚಿ.

“ಮರೆಯದಿರುತ್ತಿದ್ದರೆ, ಕೂಡಲೇ ಹುಡುಕುತ್ತಿದ್ದೆನಲ್ಲವೆ?” ಎಂದ ಸೋಮಪ್ಪ.

ಇಬ್ಬರಿಗೂ ಒಂದು ವಿಷಯ ಖಚಿತವಾಯಿತು. ಓದುಬಲ್ಲ ಮನುಷ್ಯರಿಗಿರುವ ಪ್ರಪಂಚದ ಹಲವು ಅನುಭವಗಳು ನಿರಕ್ಷರರಿಗಿಲ್ಲ! “ಕೆಂಚಿ! ದೇವರು ದಯಮಾಡಲಿ! ನಮಗೊಂದು ಗಂಡುಮಗುವನ್ನು ಕೊಡಲಿ! ಅದಕ್ಕೆ ನಾಲ್ಕು ಅಕ್ಷರ ಕಲಿಸದಿದ್ದರೆ ನಾನು ಗಂಡೇ?” ಎಂದು ಸೋಮಪ್ಪ ಮೂವತ್ತು ವರ್ಷಗಳ ಹಿಂದೆ ಮಾಡಿದ ಪ್ರತಿಜ್ಞೆ ಇಂದೂ ಅವನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು.

ಕೆಂಚಿ ನಾಲ್ಕಾರು ಮಕ್ಕಳನ್ನು ಹೆತ್ತಳು. ಮೂರು ನಾಲ್ಕು ವರ್ಷ ಪ್ರಾಯ ಆಗುವುದರೊಳಗಾಗಿ ಎಲ್ಲ ಮಕ್ಕಳನ್ನು ದೇವರು ಕರೆಯಿಸಿಕೊಂಡರು. ಕೊನೆಗೆ ದೇವರಿಗೂ ಕರೆಯಿಸಿಕೊಳ್ಳುವ ಕಷ್ಟ ಸಾಕಾಯಿತೆಂದು ತೋರುತ್ತದೆ. ಲಿಂಗಪ್ಪ ಹನ್ನೆರಡು ವರ್ಷದ ಹುಡುಗನಾಗಿದ್ದಾನೆ. ತಂದೆಯ ಗಟ್ಟಿಮುಟ್ಟಾದ ದೇಹ, ತಾಯಿಯ ಬಣ್ಣ, ನುಣುಪು – ಎಲ್ಲ ಲಿಂಗಪ್ಪನಲ್ಲಿ ಕಾಣಿಸಿಕೊಂಡಿವೆ. ಇದುವರೆಗೆ ಧನಿಯ ಮನೆಗೆ ಒಂದು ಹೊರೆ ಹುಲ್ಲನ್ನೊ ಒಂದು ಬುಟ್ಟಿ ತರಕಾರಿಯನ್ನೊ ಕೊಂಡೊಯಿದು ಅಲ್ಲಿ ದೊರೆತುದನ್ನು ಬಗಲೊಳಗೆ ಸೇರಿಸಿಕೊಂಡು ಬರುವ ಕ್ರಮವಿತ್ತು.

ಇನ್ನು ಹಾಗಿರಬೇಕಾಗಿಲ್ಲ. ಲಿಂಗಪ್ಪ ಓದಿ ಕಲಿತು ಗಟ್ಟಿಗನಾಗುತ್ತಾನೆ. ಮತ್ತೆ ತನ್ನಂತೆ ಅಡಿಕೆ ಹಾಳೆಯನ್ನು ತಲೆಗಿಡಬೇಕೆ? ಉಪಾಧ್ಯಾಯರ ಟೊಪ್ಪಿಯೋ! ಮಣೆಗಾರರ ಮುಂಡಾಸೋ! ನಾಲ್ಕು ಅಕ್ಷರವೋದಿ ಕೆಲಸ ಸಂಪಾದಿಸಿದರೆ ಯಾವುದೆನ್ನಿಡುವುದು ಅಸಾಧ್ಯ? – ಹೀಗೆ ಸೋಮಪ್ಪನ ಕಲ್ಪನೆಗಳು ಒಂದರ ಮೇಲೊಂದು ಏಳುತ್ತಿದ್ದುವು.

ಬಾಳೂರಿನಲ್ಲಿ ಶಾಲೆಯ ಸ್ಥಾಪನೆಯಾಗುವುದೆಂದು ತಿಳಿದಾಗ ಸೋಮಪ್ಪ ಉಲ್ಲಾಸದಿಂದ ನಕ್ಕುದಕ್ಕೆ ಇದೇ ಕಾರಣ, ಸೋಮಪ್ಪ – ಕೆಂಚಿಯರ ಹಿನ್ನೆನಪಿನ ಆಳದಿಂದ ಎದ್ದು ಬಂದ ಆತ್ಮ ಸಂತೋಷವು ಸೋಮಪ್ಪನ ಮುಖದಲ್ಲಿ ನಗುವಾಗಿಯೂ ಕೆಂಚಿಯ ತುಟಿಯಲ್ಲಿ ಗಂಭೀರ ಪ್ರಶ್ನೆಯಾಗಿಯೂ ಕಾಣಿಸಿಕೊಂಡಿತು!

2

ಜೀತದಾಳಿಗೂ ಒಂದು ‘ಜೀವನ’ ಇದ್ದರೆ, ಆ ಜೀವನದಲ್ಲಿಯೂ ಸಂಧಿಕಾಲ ಎನ್ನುವಂತಹ ಕಾಲ ಇದ್ದರೆ – ಸೋಮಪ್ಪನ ಜೀವನಕ್ಕೂ ಆ ಸಂದು ಕಟ್ಟು ಬಂದಿತೆನ್ನಬಹುದು. ಶಾಲೆ ತೆರೆಯಿತು. ಆ ದಿನದ ಸಮಾರಂಭಕ್ಕೆ ತಿಮ್ಮಣ್ಣ ನಾಯಕರು ಅಧ್ಯಕ್ಷರಾಗಿದ್ದರು. ಪೇಟೆಯಿಂದ ದೊಡ್ಡ ಮನುಷ್ಯರು ಬಂದಿದ್ದರು. ವಿದ್ಯಾಧಿಕಾರಿಗಳು ಭಾಷಣ ಕೊಟ್ಟಿದ್ದರು. ಎಲ್ಲರೂ ತಿಮ್ಮಣ್ಣ ನಾಯಕರಿಗೂ ಒಕ್ಕೊರಳಿನ ಪ್ರಶಂಸೆಯನ್ನು ಸಲಿಸಿದ್ದರು. ಅವರ ಧುರೀಣತೆಯಲ್ಲಿ ಬಾಳೂರು ಗ್ರಾಮವು ಆದರ್ಶ ಗ್ರಾಮವಾಗಬಹುದೆಂದು ಕೋರಿದ್ದರು. ದೊಡ್ಡ ಸಭೆ ಸೇರಿತ್ತು. ಊರಿನ ಹತ್ತು ಸಮಸ್ತರೆಲ್ಲ ನೆರೆದಿದ್ದರು. ಶಾಲಾ ಸಮಾರಂಭದ ದಿನ, ಹಿರಿಯರೂ ಕಿರಿಯರೂ ಮುದುಕರೂ ಮಕ್ಕಳೂ ಎಲ್ಲರೂ ಒಂದಾಗಿ ಸೇರಿ, ಗ್ರಾಮ ದೇವಸ್ಥಾನಕ್ಕೆ ಮೆರವಣಿಗೆಯಿಂದ ನಡೆದು, ಗಂಧ ಪ್ರಸಾದವನ್ನು ಸ್ವೀಕರಿಸಿ ತಂತಮ್ಮ ಮನೆಗಳಿಗೆ ಮರಳಿದ್ದರು. ಎಲ್ಲದರಲ್ಲಿಯೂ ತಿಮ್ಮಣ್ಣ ನಾಯಕರ ಕೈ; ತಿಮ್ಮಣ್ಣ ನಾಯಕರ ಮುತುವರ್ಜಿ; ತಿಮ್ಮಣ್ಣ ನಾಯಕರ ಶಿಸ್ತು; ತಿಮ್ಮಣ್ಣ ನಾಯಕರ ಮೇಲ್ಮೆ! ಸೋಮಪ್ಪ ದೂರದಲ್ಲಿ ನಿಂತು ತನ್ನ ಧನಿಯ ಹೆಮ್ಮೆಯನ್ನು ಕಂಡು ಹಿಗ್ಗಿದ. ಊರ ಮಕ್ಕಳಿಗೆ ವಿದ್ಯಾದಾನ ಮಾಡಿಸುವ ಪುಣ್ಯ ಕಟ್ಟಿಕೊಂಡವರು ಮೂಲದ ಒಕ್ಕಲು ಹುಡುಗನನ್ನು ಆ ಪುಣ್ಯದಿಂದ ಹೊರಗಾಗಿಸುವರೇ? ಖಂಡಿತವಾಗಿಯೂ ಇಲ್ಲ – ಎಂದು ಸೋಮಪ್ಪನ ಅಂತರಾತ್ಮ ಹೇಳಿತು. ಸೋಮಪ್ಪನಿಗೆ ಕೂಡ ಒಂದು ಅಂತರಾತ್ಮ ಇದ್ದಿತೆಂಬುದನ್ನು ಮರೆಯಬಾರದು. ಧನಿಗಳ ದೊಡ್ಡಸ್ತಿಕೆ, ಹೊರಗೆ ನಿಷ್ಠುರವಾದರೂ ಒಳಗೆ ಮೃದುವಾದ ಮನಸ್ಸು, ಹೊಟ್ಟೆಗೆ ಹೊಡೆಯಲಾರದ ಔದಾರ್ಯ, ಅವರ ಆಶ್ರಯ ತಪ್ಪಿದರೆ ತನಗೆ ಗತಿಯಿಲ್ಲವೆಂಬ ಸತ್ಯ ಸ್ಥಿತಿ ಪರಿಜ್ಞಾನ….. ಇವೆಲ್ಲ ಒಂದಾಗಿ ಸೋಮಪ್ಪನ ಅಂತರಾತ್ಮವನ್ನು ಒಂದಿಷ್ಟು ಮಸುಕು ಮಾಡಿಬಿಟ್ಟುವೆಂದರೆ ತಪ್ಪಲ್ಲ. ಬಂದುದೆಲ್ಲ ಬರಲಿ ಎಂಬ ಭಾವದಿಂದ ಅವನು ಒಂದು ದಿನ ಪ್ರಾಂತಃಕಾಲ ಮುಂಜಾವದ ನೆರಳು ಕಾಣಿಸುವ ಮುಂಚೆಯೇ ಧನಿಗಳ ಚಾವಡಿಯ ಮುಂದೆ ಕಾಣಿಸಿಕೊಂಡ.

ಸೂರ್ಯೋದಯಕ್ಕೆ ಮುಂಚಿತವಾಗಿ ಏಳುವ ಅಭ್ಯಾಸವುಳ್ಳ ನಾಯಕರು ಚಾವಡಿಯ ಹಾಸುಹಲಗೆಯ ಮೇಲೆ ಕುಳಿತಿದ್ದರು. ಸೊಂಟಕ್ಕೊಂದು ಲುಂಗಿ; ಭುಜದ ಮೇಲೆ ಬಹಿರ್ವಾಸ; ಬೀಗದಕ್ಕೆ ಗೊಂಚಲಲ್ಲಿ ಸಿಕ್ಕಿಸಿಕೊಂಡಿದ್ದ ಹಲ್ಲು ಕಡ್ಡಿಯನ್ನು ತೆಗೆದು ಹಲ್ಲೆಡೆಗೆ ತುರುಕಿಸುತ್ತಾ, ಇದಿರಲ್ಲಿಯೇ ಚಾಪೆಯ ಮೇಲೆ ಕುಳಿತಿದ್ದ ಶೀನಪ್ಪಯ್ಯ ಮಾಸ್ತರರ ಕೂಡ ಏನೋ ಪ್ರಸ್ತಾಪವೆತ್ತಿ ಮಾತಾಡುತ್ತಿದ್ದರು. ಅವರ ಕೆಂಪೇರಿದ ಮುಖ, ಉಬ್ಬಿದ ಕಣ್ಣು, ಚೂಪಾದ ಹುಲಿಮೀಸೆ…. ಇವುಗಳನ್ನು ಕಂಡರೆ ಒಕ್ಕಲುಗಳಿಗೆ ಒಂದಿಷ್ಟು ತಳ್ಳಂಕ ಆಗದಿರದು. ಆದರೆ ಸೋಮಪ್ಪನಿಗೆ ಹೆಚ್ಚು ಕಡಿಮೆ ಹುಟ್ಟಿದಂದಿನಿಂದ ಕಾಣಿಸಿಕೊಂಡಿದ್ದ ಮುಖ ಇದೊಂದೇ ಆದುದರಿಂದ ಮುಖ ತಾರತಮ್ಯ…. ಸ್ವಭಾವ ವ್ಯತ್ಯಾಸ….. ಇವೊಂದೂ ತಿಳಿದಿರಲಿಲ್ಲ. ಏನಾದರೂ ಕೇಳಿದರೆ ಒಮ್ಮೆ ಗದರಿಸುತ್ತಾರೆ. ಕೆಡು ಮಾತುಗಳನ್ನಾಡುತ್ತಾರೆ. ಅವುಗಳನ್ನು ಕೇಳಿ ತನಗೆ ಬೇಸರಾಗಲಿಲ್ಲ; ಸಂತೋಷವೇ ಆಗಿದೆ ಎಂದು ತೋರಿಸಿಕೊಂಡರೆ ಕೇಳಿದುದರ ಎರಡು ಪಾಲು ಕೊಡುತ್ತಾರೆ. ಬಿರುನುಡಿಗಳನ್ನಾಡಿ ಅತ್ಯಂತ ಕರುಣಾಶಾಲಿಗಳಂತೆ ನಡೆದುಕೊಳ್ಳುತ್ತಾರೆ; ಎಂಬುದೊಂದೇ ಅವನಿಗೆ ಗೊತ್ತು. ನಾಯಕರ ಅನುಗ್ರಹ ಸಂಪಾದಿಸಲು ಹೇಗೆ ನಿಲ್ಲಬೇಕು? ಹೇಗೆ ಆಡಬೇಕು? ಏನು ಮಾಡಬೇಕು? ಸೋಮಪ್ಪನಿಗಾರೂ ತಿಳಿಸಬೇಕಾಗಿರಲಿಲ್ಲ. ಚಾವಡಿಯಿಂದ ಕೆಳಗೆ ಕಿರುಜಗಲಿ; ಕಿರುಜಗಲಿಯಿಂದಾಚೆಗೆ ಹತ್ತು ಗಜ ದೂರದಲ್ಲಿ ಸೋಮಪ್ಪನ ಆರಡಿಯುದ್ದದ ಲೋಹದಲ್ಲಿ ಕಡೆದು ಮಾಡಿದಂತಹ ಭುಜ, ಎದೆ, ತೊಡೆ, ಮಡ, ಕೈ ಕಾಲು ಕೊರಳುಗಳ ಏರು ತಗ್ಗಿನ ರೂಪರೇಖೆಯನ್ನು ಒಳಗೊಂಡ ಗಟ್ಟಿ ಮುಟ್ಟಿನ ಶರೀರ ಕಾಣಿಸಿತು. ಎದೆಯ ಮೇಲೆ ಕೈಗಳನ್ನಿಟ್ಟು ತಲೆಬಾಗಿ ಭಯದಿಂದ ಮುಚ್ಚಿ ಹೋದಂತಿದ್ದ ನಗುವೊಂದನ್ನು ಮುಖದಲ್ಲಿ ಅರಳಿಸುತ್ತಾ, ನಾಯಕರ ಮುಂದೆ ಆತ ನಿಂತಿದ್ದ.

ಶೀನಪ್ಪಯ್ಯನವರೊಡನೆ ಆಡುತ್ತಿದ್ದ ಮಾತನ್ನು ನಡುವಿನಲ್ಲಿಯೇ ನಿಲ್ಲಿಸಿ ನಾಯಕರು “ಏನೋ ಸೋಮ! ಬೆಳಗಾತವೇ ಏಕೆ ಬಂದೆ? ತೋಟಕ್ಕೆ ಏತಹಾಕಿ ನಾರು ಹೊಯ್ಯಬೇಕು ಎಂದು ನಿನ್ನೆಯೇ ಹೇಳಿದ್ದೆನಲ್ಲ!” ಎಂದರು.

“ಹೌದು ಬುದ್ಧಿ!” ಎಂದವನು ಲಜ್ಜೆಯಿಂದಲೋ ಎಂಬಂತೆ ತಲೆಬಾಗಿಸಿ ಸುಮ್ಮನೆ ನಿಂತ.

“ಮತ್ತೇನಾಗಬೇಕು? ಹೇಳು”
ಸೋಮ ಹೇಳಲಿಲ್ಲ.

“ಈ ದರಿದ್ರ ಜಾತಿಯ ಸ್ವಭಾವವೇ ಹೀಗೆ ಶೀನಪ್ಪಯ್ಯ! ಇಕ್ಕುಳ ಹಾಕಿ ನಾಲಗೆಯನ್ನು ಹೊರಗೆಳೆಯದೆ ಮಾತಾಡಲಾರರು” ಎಂದು ಶೀನಪ್ಪಯ್ಯನ ಗಮನವನ್ನೂ ಆ ಕಡೆಗೆಳೆದರು.

“ಎಲ್ಲ ಒಕ್ಕಲುಗಳ ಸ್ವಭಾವವೂ ಒಂದೇ” ಎಂದು ಶೀನಪ್ಪಯ್ಯನವರು ತಲೆಯಲ್ಲಾಡಿಸಿದರು.

“ಹೇಳೋ! ಹೇಳಬೇಕಾದುದನ್ನು ಬೊಗಳೊ….. ಬೊಗಳದಿದ್ದರೆ ನಡುಬೆನ್ನಿಗೆ ಗುದ್ದಿ ಎದೆಯೊಳಗಿನಿಂದ ಮಾತನ್ನು ಕಾರಿಸುತ್ತೇನೆ ನೋಡು!” ಎಂದು ಕೃತಕ ದರ್ಪದಿಂದ ಆಡಿ, ಮಾಸ್ತರ್ ಶೀನಪ್ಪಯ್ಯನವರಲ್ಲಿ ಇದರಿಂದ ಯಾವ ಪರಿಣಾಮವಾಗುವುದೆಂಬುದನ್ನು ನಿರೀಕ್ಷಿಸುವಂತೆ, ಅವರನ್ನು ನಸುನಗುತ್ತಾ ನೋಡಿದರು. ಆದರ ಆಶ್ಚರ್ಯಗಳನ್ನು ಮುಖಭಾವದಿಂದ ತೋರಿಸುವ ಸಂದರ್ಭ ಇದು…. ಎಂದು ಶೀನಪ್ಪಯ್ಯನಿಗೆ ತಿಳಿದೇ ಇತ್ತು!

“ಬೇರೇನೂ ಇಲ್ಲ” ಎಂದು ಹಣೆ ತುರಿಸುತ್ತಾ ಹೇಳತೊಡಗಿದ ಸೋಮಪ್ಪ.

“ಬೊಗಳೋ ಬೊಗಳು ಬೇಗನೆ…..” ಎಂದರು ನಾಯಕರು.

“ಲಿಂಗಪ್ಪ…. ಸಾಲೆ…..” ಈ ಎರಡೇ ಶಬ್ದಗಳು ಸೋಮಪ್ಪನ ಬಾಯಿಯಿಂದ ಹೊರಟವು.

ನಾಯಕರಿಗೆ ಅರ್ಥವಾಯಿತು. ಲಿಂಗಪ್ಪನನ್ನು ಶಾಲೆಗೆ ಕಳುಹಿಸುವ ಯೋಚನೆ! ಕಲಿಕಾಲ ಮೀರಿದೆ…. ಹೊಟ್ಟೆ ತುಂಬಿಸುವುದಕ್ಕೂ ಗತಿಯಿಲ್ಲದವರಿಗೂ ಬರಹಬೇಕು! ಬರಹ ಅನ್ನ ಕೊಡುತ್ತದೆಯೇ? ನಾಯಕರು ಸೋಮಪ್ಪನಲ್ಲಿ ಗದರಿಸುವ ಸ್ವರದಲ್ಲಿ ಆಡಿದರು. “ಸೋಮ! ನೀನು ಎಲ್ಲಿರುವೆ? ಯಾರಲ್ಲಿ ಮಾತಾಡುತ್ತಿರುವೆ? ಯೋಚಿಸಿಕೊ. ಧನಿಯ ಮಗನೂ ಕಲಿಯುವುದು! ನಿನ್ನ ಮಗನೂ ಕಲಿಯುವುದು! ನಿಮ್ಮ ಮಕ್ಕಳೂ ಶಾಲೆಗೆ ಹೋಗಿ ಕಲಿತು ಮಾಸ್ತರಿಕೆ ಮಾಡುವಂತಾದರೆ ಗೊಬ್ಬರ ಹೊರುವ ಮಕ್ಕಳಾರು? ಎತ್ತುಗಳನ್ನು ಕಟ್ಟುವವರಾರು? ಸೌದೆಸೊಪ್ಪು ತರುವವರಾರು? ಉಳುವವರಾರು? ಕೊಯ್ಯುವವರಾರು? ಹಿಂದೆ ಮುಂದೆ ನೋಡದೆ ಹೀಗೆಲ್ಲ ಆಡುವುದೇ?…. ಏನು ಮಾಸ್ತರರೆ?” ಎಂದು ಶೀನಪ್ಪಯ್ಯನ ಕಡೆಗೆ ಮುಖ ತಿರುಗಿಸಿ ಅವರ ತೀರ್ಮಾನವನ್ನು ನಿರೀಕ್ಷಿಸಿದರು. ಶೀನಪ್ಪಯ್ಯನವರು “ನೀವು ಹೇಳುವುದೇನೋ ಸರಿ ನಾಯಕರೆ….. ಆದರೆ ಕಾಲ ಧರ್ಮವಲ್ಲವೇ? ನೇಗಿಲಿಗೆ ಯಾರ ಕೈಯೂ ಹೋಗುವುದಿಲ್ಲ” ಎಂದು ಉತ್ತರ ಕೊಟ್ಟರು.

“ಎಲ್ಲರೂ ಓದಿ ಮಾಡುವುದೇನು” ಎಂದು ನಾಯಕರ ದೊಡ್ಡ ಪ್ರಶ್ನೆ. ಇದಕ್ಕೆ ಶೀನಪ್ಪಯ್ಯನವರ ಉತ್ತರವೇ ಇಲ್ಲ.

ನಾಯಕರು ಎರಡು ನಿಮಿಷ ಮೌನವಾಗಿದ್ದರು. ಮತ್ತೆ ಬಹುಶಃ ಮಾಸ್ತರ್ ಶೀನಪ್ಪಯ್ಯನವರೇ ಸೋಮಪ್ಪನನ್ನು ಪುಸಲಾಯಿಸಿದುದು ಎಂದೆಣಿಸಿ, ಹೀಗೆಂದರು : “ಶಾಲೆಯಲ್ಲಿ ಮಕ್ಕಳ ಲೆಕ್ಕ ಭರ್ತಿಯಾಗಬೇಕಲ್ಲ. ಅದಕ್ಕಾಗಿ ಈ ರೀತಿಯ ತಂತ್ರ; ಅಲ್ಲವೇ ಮಾಸ್ತರರೆ? ಆಗಲಿ; ನಾನು ಒಂದು ವಿಷಯವನ್ನು ಒತ್ತಿ ಹೇಳುತ್ತೇನೆ. ನೀವೇ ನೋಡಿ. ಗೊಬ್ಬರ ಹೊರುವ ತಲೆ ಗೊಬ್ಬರವನ್ನೆ ಹೊರಬೇಕಲ್ಲ? ಈ ವಿಧಿಯನ್ನು ತಪ್ಪಿಸುವ ಅಧಿಕಾರ ಯಾರಿಗಿದೆ? ಆಗಲಿ…. ಲಿಂಗಪ್ಪ ಶಾಲೆಗೆ ಹೋಗಲಿ…. ಕಲಿಯಲಿ. ಎಷ್ಟು ಕಲಿಯುತ್ತಾನೋ ನಾನು ನೋಡುವೆನಲ್ಲ! ಆದರೆ ಒಂದು ಎಚ್ಚರದ, ಮಾತಿದೆ. ನಾಲ್ಕು ಅಕ್ಷರ ಕಲಿತವರಿಗೆ ಹೆಮ್ಮೆ ನೆತ್ತಿಗೇರುತ್ತದೆ. ಅದಾಗದಂತೆ ನೋಡಿಕೊಳ್ಳವುದು ಕಷ್ಟ. ಇದಕ್ಕೆ ನೀವು ಹೊಣೆಯಾದರೆ….. ಅವನು ಹೋಗಲಿ. ಶಾಲೆಯಲ್ಲಿ ಎಲ್ಲ ಮಕ್ಕಳೂ ಒಂದೆ…. ಹಿಟ್ಟು ಬೂದಿಯೆಲ್ಲ ಒಂದೆ…. ಕಿಟ್ಟ ಧನಿಯ ಮಗ ಲಿಂಗಪ್ಪ ಒಕ್ಕಲ ಮಗ…. ಇಬ್ಬರೂ ಒಂದೇ ದರ್ಜೆಯಲ್ಲಿದ್ದಾರೆ….. ಎಂಬುದನ್ನು ಮರೆಯಬಾರದು ನೀವು! ಊರ ಶಾಲೆಯಲ್ಲಿ ಕಲಿಯುವುದನ್ನೆಲ್ಲ ಕಲಿತ ಮೇಲೆ ಮತ್ತೂ ಹೊಟ್ಟೆ ತುಂಬಿಸಬೇಕಲ್ಲ; ಹೊಟ್ಟೆ ತುಂಬಿಸುವುದಕ್ಕೆ ಈ ಮನೆ ಬಾಗಿಲಿಗೇ ಬರಬೇಕಲ್ಲ! ವಸ್ತುಸ್ಥಿತಿಯನ್ನು ಮರೆತರೆ ಯಾರಿಗೇನು ಲಾಭವಿದೆ?’’ ಎಂದು ನಾಯಕರು ತಡೆದರು.

‘ಹೌದು’ ಎಂದು ಶೀನಪ್ಪಯ್ಯನವರು ಒಪ್ಪಿಗೆ ಕೊಟ್ಟರು.

ಸ್ವಲ್ಪ ಕಾಲ ಯೋಚಿಸುವಂತೆ ನಟಿಸಿ – “ಹಾಗಾದರೆ ನಾನು ಹೇಳುತ್ತೇನೆ” ಎಂದು ನಾಯಕರು ಮುಂದುವರಿಸಿದರು :- “ಆಗಲಿ; ಲಿಂಗಪ್ಪ ನಮ್ಮ ಕಿಟ್ಟನೊಂದಿಗೆ ಶಾಲೆಗೆ ಹೋಗಲಿ. ಕಿಟ್ಟನ ಚೀಲ ಹೊರಲು ಜನ ಬೇಕು. ದಾಟುವ ತೋಡುಗಳಿವೆ; ಏರಿಳಿಯುವ ಊರು ಬೇಲಿಗಳಿವೆ. ಚಿಕ್ಕ ಹುಡುಗ ಕೈ ಕೊಡಬೇಕಾಗುತ್ತದೆ. ನಮ್ಮ ಅನ್ನ ತಿಂದು ದಪ್ಪವಾಗಿ ಲಿಂಗಪ್ಪ ಬೆಳೆದಿದ್ದಾನೆ. ಅದರ ಪ್ರಯೋಜನ ನಮಗೆ ಸಿಕ್ಕಲಿ. ಶಾಲೆಯೊಳಗೂ ಧನಿ ಒಕ್ಕಲುಗಳು ಹೇಗೆ ಇರಬೇಕೊ ಹಾಗೆಯೇ ಇರುವುದು ಸಾಧ್ಯವಾದರೆ…. ಇಬ್ಬರೂ ಒಟ್ಟಾಗಿ ಹೋಗುತ್ತಾ ಬರುತ್ತಾ ಇರಬಹುದು.” “ಸಾಧ್ಯವಾಗದೆ ಏನು!” ಶೀನಪ್ಪನವರು ಹಿಗ್ಗಿ ಉದ್ಗರಿಸಿದರು.

ಇಷ್ಟಾದರೆ ಸಾಕೆಂದು ಸೋಮಪ್ಪ “ದಮ್ಮಯ್ಯ ಬುದ್ಧಿ …. ನೀವು ನಮ್ಮ ಒಡೆಯರೆಂಬುದನ್ನು ಮರೆತರೆ ತನ್ನ ತಲೆ ನೂರು ಹೋಳಾಗಿ ಬೀಳದೆ? ನನಗೆ ಬೇಕಾದುದು ಅಷ್ಟೆ …. ಚಿಕ್ಕ ಧನಿ ಒಬ್ಬರೇ ಹೋಗುತ್ತಾರೆ. ಅವರ ಹಿಂದೆ ಕಾಯುವ ನಾಯಿಯಾಗಿರಲಿ ಲಿಂಗಪ್ಪ ….. ಇಷ್ಟೆ” ಎಂದು ನಗುತ್ತಾ ಹಣೆ ತುರಿಸುತ್ತಾ ನುಡಿದ.

ತಾವು ಎಂದಂತೆ ಎಲ್ಲವೂ ನಡೆದ ಕಾರಣದಿಂದ ನಾಯಕರು ಮುಂದೆ ಆಗಬೇಕಾದುದನ್ನೂ ತಾನೇ ವಿವರಿಸಿ ಹೇಳಿದರು. “ಹೌದು; ಲಿಂಗಪ್ಪ ಶಾಲೆಗೆ ಹೋಗಲಿ …. ಹೋಗುವಾಗ ಉಟ್ಟುಕೊಳ್ಳುವುದಕ್ಕೆ ಬಟ್ಟೆಯೂ ಇಲ್ಲದಿರಬಹುದು. ಸೋಮಪ್ಪ! ಅಮ್ಮ (ನಾಯಕರ ಪತ್ನಿ) ನಲ್ಲಿ ಕೇಳಿ ಹಳೆಯ ಅಂಗಿ ಬಟ್ಟೆಗಳಿದ್ದರೆ ಪಡೆದುಕೊಳ್ಳಬೇಕು. ಶಾಲೆಯಿರುವ ದಿನಗಳಲ್ಲಿ ಶಾಲೆಯಾಯಿತು. ಇಲ್ಲದ ದಿನಗಳಲ್ಲಿ ಎಂದಿನಂತೆ ಲಿಂಗಪ್ಪ ಒಂದು ಹೊರೆಹುಲ್ಲನ್ನು ತಂದು, ಹುರುಳಿ ಬೇಯಿಸಿ ಎತ್ತುಗಳ ಹೊಟ್ಟೆ ತುಂಬಿಸಬೇಕು. ಮನುಷ್ಯ ಬೇರೇನನ್ನು ಮರೆತರೂ ತಾನು ಯಾವುದಕ್ಕಾಗಿ ಜನನಕ್ಕೆ ಬಂದುದು ಎಂಬುದನ್ನು ಮರೆಯಬಾರದು”. ನಾಯಕರ ಕೋಣಗಳ ಆರೈಕೆಗಾಗಿ ಅಲ್ಲದೆ ಬೇರಾವ ಕರ್ತವ್ಯವನ್ನು ಮಾಡುವುದಕ್ಕಾಗಿಯೂ ಲಿಂಗಪ್ಪನನ್ನು ದೇವರು ಈ ಪ್ರಪಂಚಕ್ಕೆ ಕಳುಹಿಸಿರಲಾರ. ಕುಲದ ವೃತ್ತಿ – ಕರ್ತವ್ಯ ಕರ್ಮ ಮರೆಯಬಾರದಷ್ಟೆ! ರಜೆಯ ದಿನಗಳಲ್ಲಿ ಕೂಲಿ ಕೆಲಸ ಮಾಡಲೇಬೇಕು ಲಿಂಗಪ್ಪ ….. ಹೀಗೆ ಸೋಮಪ್ಪ ಸ್ವತಃ ಕೇಳಿ ಪಡೆಯಬೇಕಾಗಿದ್ದ ಅನುಗ್ರಹಗಳನ್ನು ನಾಯಕರು ಸ್ವತಃ ಕರುಣಿಸಿದರು.

ನಾಯಕರ ಇಂಗಿತವನ್ನು ತಿಳಿದು ಅನುವರ್ತಿಸುವುದರಲ್ಲಿ ಶೀನಪ್ಪಯ್ಯನವರು ಅತಿ ಚತುರರು; ಆದುದರಿಂದಲೇ ಶೀನಪ್ಪಯ್ಯನವರು ನಾಯಕರ ಎರಡನೆಯ ಪ್ರಾಣ. ಸೋಮಪ್ಪನಿಗೆ ಪ್ರೇರಣೆ ಕೊಟ್ಟುದು ಶೀನಪ್ಪಯ್ಯ ಎಂಬ ಸಹಜವಾದ ಸಂದೇಹವೂ ಇತ್ತು. ನಾಯಕರಿಗೆ ಪ್ರೇರೇಪಿಸಿದರೆ ತಪ್ಪೇನು? ಬಡ ಮಾಸ್ತರನಲ್ಲವೆ? ಹೇಗಾದರೂ ಹೊಟ್ಟೆ ತುಂಬಿಸಿಕೊಳ್ಳ ಬೇಕಷ್ಟೆ? ಎನ್ನುವ ಸಹಾನುಭೂತಿಯೂ ಇತ್ತು. ಹೀಗಾಗಿ ಒಕ್ಕಲಮಗ ಧನಿಯ ಮಗನೊಡನೆ ಕಲಿಯುವುದು ಮಹಾ ಪಾಪವಾಗಿದ್ದರೂ ಈ ಪಾಪಕ್ಕೆ ಒಪ್ಪದೆ ನಿರ್ವಾಹವಿರಲಿಲ್ಲ. ಕೊನೆಗೆ ನಾಯಕರು “ಶೀನಪ್ಪಯ್ಯ, ಕಲಿಸುವುದು ಗಿಲಿಸುವುದೆಲ್ಲ ಸರಿಯೆ…. ಅಲ್ಪನಿಗೆ ಐಶ್ವರ್ಯ ಬಂದರೇನಾಗುತ್ತದೆ? ನಾಯಿಯನ್ನು ದಂಡಿಗೆಗೇರಿಸುವುದರ ಪರಿಣಾಮವೇನು? ನಿಮಗೆ ನಾನು ಪ್ರತ್ಯೇಕ ಹೇಳಬೇಕಾಗಿಲ್ಲ. ಓದು ಕಲಿವ ಮಕ್ಕಳಿಗೆ ಫಕ್ಕನೆ ಅನ್ನ ಸೊಕ್ಕುತ್ತದೆ ನೋಡಿ. ಅದಾಗದಂತೆ ಎಷ್ಟು ಜಾಗ್ರತೆ ವಹಿಸಿದರೂ ಸಾಲದು” ಎಂದು ನಾಯಕರು ಎಚ್ಚರಿಸಿದರು.

“ಅದನ್ನೆಲ್ಲ ನನಗೆ ಬಿಟ್ಟು ಕೊಡಿ” ಎಂದು ಶೀನಪ್ಪಯ್ಯನವರು ಗೆಲುವಿನ ದನಿಯಲ್ಲಿ ಆಡಿದರು.

“ಹಾಗಾದರೆ ಸರಿ; ಮತ್ತೇನು?” ಎಂದರು ನಾಯಕರು.

ಸೋಮಪ್ಪ ಕುರುಬಾಗಿಲಿನತ್ತ ಸಾಗಿದ. ಅಮ್ಮನವರಲ್ಲಿ ಹಳೆಯ ಅಂಗಿ ಚಲ್ಲಣಗಳಿಗಾಗಿ ಅರ್ಜಿ ಮಾಡಬೇಕಾಗಿತ್ತು!

3

ಲಿಂಗಪ್ಪ ಶಾಲೆಗೆ ಸೇರಿ ಎಷ್ಟೋ ದಿನಗಳು ಸಂದವು. ಇಷ್ಟರಲ್ಲಿ ಒಕ್ಕಲು ಮನೆಯಲ್ಲಿ ಹಲವು ಪರಿವರ್ತನೆಗಳಾಗಿದ್ದುವು. ಇದುವರೆಗೆ ಧನಿಗಳ ಮನೆಯನ್ನೆ ತನ್ನದೆಂದು ಭಾವಿಸುತ್ತಿದ್ದ ಸೋಮಪ್ಪನ ಹೃದಯಕ್ಕೆ ಈಗ ತನ್ನ ಮನೆಯೇ ಕೇಂದ್ರವಾಯಿತು. ಎರಡು ವರ್ಷಕ್ಕೊಮ್ಮೆ ಹೊದಿಕೆಯನ್ನು ನೋಡದ ಮನೆಗೆ ಹೊಸ ಮಳೆಗಾಲ ಬರುವ ಮುಂಚೆ ಚಂದವಾಗಿ ಹುಲ್ಲನ್ನು ಹೊದಿಸಿದ್ದಾನೆ. ಧನಿಗಳಲ್ಲಿ ಕೇಳಿ, ಬಿದಿರನ್ನು ಕಡಿದು, ಅಲ್ಲಿ ಇಲ್ಲಿ ಮುರಿದು ಹೋಗಿ ಕುಪ್ಪರಿಸಿ ಬೀಳಲು ಸಿದ್ಧವಾಗಿದ್ದ ಮಾಡನ್ನು ಹೊಸತು ಮಾಡಿದ್ದಾನೆ. ಎಲ್ಲ ಲಿಂಗಪ್ಪನಿಗಾಗಿ! ತಾನಾದರೊ ಹಳೆಯ ಜೀವ, ಸೊಪ್ಪು ತಿಂದು, ನೀರು ಕುಡಿದು ಬಾಳಬಲ್ಲಾತ. ಲಿಂಗಪ್ಪನು ಹಾಗಾಗ ಬೇಕಾದುದಿಲ್ಲ. ಅವನ ಜೀವನಕ್ಕಾದರೂ ನಯ ನಾಜೂಕು ಏಕೆ ಇರಬಾರದು? ಮಳೆ ಜಡಿದು ಬರುವಾಗ ಮನೆಯೊಳಗೆ ನೀರು ಸೋರಿ ಲಿಂಗಪ್ಪನ ಮೈ ಒದ್ದೆಯಾಗಿ ಶೀತ ಜ್ವರ ಹಿಡಿದರೆ ಶಾಲೆ ತಪ್ಪೀತಲ್ಲ! ಶಾಲೆ ತಪ್ಪಿದರೆ ತನ್ನ ಮಗ ಎಲ್ಲರಂತೆ ಒಂದು ಜನವಾಗಿ ಹೇಗೆ ಮೆರೆಯಬಲ್ಲ? ಆದುದರಿಂದ ಹಳೆಯ ಮಾಡನ್ನು ಸರಿಮಾಡಬೇಕಾಯಿತು. ಇದುವರೆಗೆ ಮನೆಯ ಜಗಲಿಯೂ ಅಂಗಳವೂ ಒಂದೇ ರೀತಿಯಲ್ಲಿದ್ದುವು. ಅಲ್ಲಿ ಕಸ, ಇಲ್ಲಿ ಕೋಳಿಯ ಪಿಟ್ಟೆ; ಇನ್ನೊಂದೆಡೆ ಏರು. ಈಗ ಆ ಸ್ಥಿತಿ ಹೋಗಿ ನೆಲ ನುಣ್ಣಗಾಗಿದೆ. ಸೋಮಪ್ಪ ಕೆಂಚಿಯರು ಹಗಲಿರುಳು ಪ್ರಯತ್ನ ಪಟ್ಟು ಉರುಟಾದ ಕಲ್ಲಿನ ಗುಂಡಿನಿಂದ ಒರೆದು ನೆಲವನ್ನು ಕೆಮ್ಮಣ್ಣ ಸಾರಣೆಯಿಂದ ಕನ್ನಡಿಯ ಹಾಗೆ ಮಾಡಿದ್ದಾರೆ. ಲಿಂಗಪ್ಪ ಬತ್ತಲೆಯಾಗಿ ನೆಲದ ಮೇಲೆ ಹೊರಳಾಡಿದರೂ ಮೈಗೆ ಒಂದಿಷ್ಟು ಕೊಳೆಯಾಗುವಂತಿಲ್ಲ. ಈ ಮೊದಲು ಮನೆಯ ಹೊರ ಜಗಲಿಯ ಮೂಲೆಯೊಂದರಲ್ಲಿ ಎತ್ತರವಾದ ಮಣ್ಣ ತಿಟ್ಟೆಯಿತ್ತು. ಅದರ ಅಡಿಯಲ್ಲಿ ಕೋಳಿಯ ಗೂಡು; ಮೇಲೆ ಹರಕು ಬಟ್ಟೆ, ಮೆಟ್ಟುಕತ್ತಿ, ಚಾಪೆ ಚಕ್ಕಣ ಮನೆಯೊಳಗೆ ಹಿಡಿಯದ ಸಾಮಾನುಗಳ ಪ್ರದರ್ಶನಾಲಯ ಅದಾಗಿತ್ತು. ಈಗ ಅವೊಂದೂ ಇಲ್ಲ. ಆ ಸ್ಥಳದಲ್ಲಿ ಲಿಂಗಪ್ಪನಿಗೆ ಓದುವ ವ್ಯವಸ್ಥೆ. ಪುಸ್ತಕಗಳನ್ನಿಡುವುದಕ್ಕೆ ದೇವದಾರದ ಪೆಟ್ಟಿಗೆಯೊಂದು. ಗೋಡೆಯಲ್ಲಿ ಎತ್ತರವಾಗಿ ಹೊಡೆದ ಕೀಲುಗಳೆರಡು ಅಂಗಿ ಬಟ್ಟೆಗಳನ್ನಿಡುವುದಕ್ಕೆ. ಮೊಳೆಯೊಂದು ದೀಪವನ್ನು ನೇಲಿಸುವುದಕ್ಕೆ. ಕುಳಿತುಕೊಳ್ಳುವುದಕ್ಕೆ ಹುಲ್ಲು ಚಾಪೆ. ಮನೆಯೊಳಗೂ ಹೊರಗು ‘ಕೊಕ್ ಕೊಕ್’ ಎಂದು ಸುಳಿದಾಡುತ್ತಿದ್ದ ಕೋಳಿಗಳನ್ನೆಲ್ಲ ನಿರ್ನಾಮ ಮಾಡಿದ್ದಾನೆ – ಲಿಂಗಪ್ಪನು ಓದುವ ಕಾಲದಲ್ಲಿ ಸದ್ದು ಮಾಡುತ್ತವೆ – ಎಂಬ ಕಾರಣದಿಂದ. ಮನೆಯೊಳಗೆ ಪರಿಷ್ಕಾರವಾಗಿತ್ತು. ಹಕ್ಕಿ ಗೂಡಿನಂತೆ ಎಲ್ಲ ಕಡೆಗಳಲ್ಲಿಯೂ ತೂಗಾಡುತ್ತಿದ್ದ ಸಾಮಾನುಗಳು ಒಂದು ಮೂಲೆಯಲ್ಲಿ ಚೊಕ್ಕಟವಾಗಿ ಬಿದ್ದಿವೆ. ತಾನು ಕೆಲಸಕ್ಕೆ ಹೋಗುವಾಗ ಉಟ್ಟುಕೊಳ್ಳತಕ್ಕ ಚಿಂದಿ, ತಲೆಯ ಮೇಲೆ ಧರಿಸುವ ಮುಟ್ಟುಹಾಳೆ – ಇವುಗಳನ್ನು ಒಟ್ಟಾಗಿ ಹುರಿಹಗ್ಗದಿಂದ ಕಟ್ಟಿ ಕುರುಬಾಗಿಲಿನಿಂದಾಚೆಗೆ ಗಳುವಿಗೆ ನೇತಾಡಿಸಿದ್ದಾನೆ. ನೆಲ ಸ್ವಚ್ಛವಾಗಿದೆ. ಅಡಿಗೆ ಮಾಡುವ ಮಣ್ಣಿನ ಮಡಿಕೆಗಳು ಕೂಡ ಶುಚಿಯಾಗಿವೆ. ಹೆಚ್ಚೇನು? ಸೋಮಪ್ಪನಿಗೆ ಈಗ ತನ್ನ ಮನೆಯೇ ಒಂದು ದೇವಾಲಯವಾಗಿದೆ. ಅಲ್ಲಿಯ ದೇವರು ಲಿಂಗಪ್ಪ.

ಮುಂಜಾನೆ ಕೋಳಿ ಕೂಗುವ ಮುಂಚೆ ಗಂಡ ಹೆಂಡತಿ ಇಬ್ಬರೂ ಏಳುತ್ತಾರೆ. ನಿದ್ದೆ ಹೊಡೆವ ಲಿಂಗಪ್ಪನ ಮೈಯನ್ನು ಕುಲುಕಿಸಿ ಎಬ್ಬಿಸುತ್ತಾರೆ. ಅವನು ಮುಖ ತೊಳೆದು ಓದಬೇಕು. ಇವರು ಗೃಹಕೃತ್ಯಕ್ಕೆ ತೊಡಗಬೇಕು. ಲಿಂಗಪ್ಪ ತಂಗಳನ್ನು ತಿನ್ನುವ ಸಂಪ್ರದಾಯ ಈಗ ಇಲ್ಲವಾಗಿದೆ. ಅವನಂತೆ ಶಾಲೆಗೆ ಹೋಗುವ ನಾಯಕರ ಮನೆ ಮಕ್ಕಳು ಗಂಜಿಯೂಟ ಮಾಡುತ್ತಿವೆ. ಲಿಂಗಪ್ಪನೂ ಹಾಗೆ ಮಾಡಬೇಡವೆ? ಹಿಂದೆ ನಟ್ಟಿಗೆ ನೀರು ಹೊಯ್ಯುವ ಸಂಪ್ರದಾಯವಿತ್ತು. ಈಗ ಓದಿಗೆ ಭಂಗ ಬರಬಹುದೆಂಬ ಕಾರಣದಿಂದ ಅದು ಕೂಡದೆಂದು ಸೋಮಪ್ಪನ ಹುಕುಂ. ಲಿಂಗಪ್ಪ ಗುದ್ದಲಿ – ಹಾರೆಗಳಿಗೆ ಕೈ ಹಾಕಿದರೆ …. ನಿನ್ನ ಕೈ ಆ ಕೆಲಸಕ್ಕೆ ಇರುವುದಲ್ಲ ಎಂದು ಕೈಯಿಂದ ಕಿತ್ತು ತೆಗೆಯುತ್ತಾನೆ ಸೋಮಪ್ಪ. ಸಂಜೆ ಆಕಳನ್ನು ಧನಿಯ ಹಟ್ಟಿಗೆ ಓಡಿಸುವ ಕೆಲಸವಿಲ್ಲ. ರಜೆಯ ಸಮಯದಲ್ಲೂ ಹುಲ್ಲನ್ನು ಹೆರೆದು ತರುವ ಸಂಪ್ರದಾಯವಿಲ್ಲ. ಬಿಡುವಿರುವಾಗ ಈ ಕೆಲಸವನ್ನು ಮಾಡಲೇಬೇಕೆಂದು ಧನಿಗಳು ಹೇಳಿದುದೇನೋ ನಿಜ. ಆದರೆ ಸೋಮಪ್ಪ ಕೆಂಚಿ ಇಬ್ಬರೂ ಸೇರಿ ಮಗನ ಕೆಲಸವನ್ನು ತಾವೇ ಮಾಡುತ್ತಿದ್ದ ಕಾರಣ ಆಗಬೇಕಾದ ಕೆಲಸದಲ್ಲಿ ಲೋಪವಿರುತ್ತಿರಲಿಲ್ಲ ಎಂದ ಮೇಲೆ ಧನಿಗಳಾಗಲಿ ಯಜಮಾನಿಯಾಗಲಿ ದೂರುವುದಕ್ಕೆ ಅವಕಾಶವೆಲ್ಲಿ? ಅಷ್ಟು ಮಾತ್ರವಲ್ಲ ತನ್ನ ಮಗನನ್ನು ಶಾಲೆಗೆ ಕಳುಹಿಸುವ ವಿಷಯದಲ್ಲಿ ನಾಯಕರೆಂದು ಉದಾರ ಮನಸ್ಕರಾದರೋ ಅಂದಿನಿಂದ ಸೋಮಪ್ಪ ದ್ವಿಗುಣಿತವಾದ ಹುರುಪಿನಿಂದ ಧನಿಗಳ ಬಿಟ್ಟಿ ಬಿರಾಡಗಳನ್ನು ತಾನೇ ಕೇಳಿ ಕೇಳಿ ಮಾಡುತ್ತಿದ್ದ. ಇದರಿಂದ ಧನಿಗಳಿಗೆ ಲಿಂಗಪ್ಪನೆಂಬ ಪ್ರಾಣಿಯ ಮರವೆಯಾಗುವುದಕ್ಕೆ ಅನುಕೂಲವಾಯಿತು. ತನ್ನ ಮಗನನ್ನು ಹೀನ ಕಾರ್ಯಗಳಿಂದ ದೂರವಿರಿಸುವುದಕ್ಕೆ ಸೋಮಪ್ಪನಿಗೂ ಅನುಕೂಲವಾಯಿತು.

ಆದರೆ, ಧನಿಯ ಮಗ ಕಿಟ್ಟಣ್ಣನ ಹಿಂದೆ ಲಿಂಗಪ್ಪ ಚೀಲ ಹೊತ್ತು ಹೋಗಬೇಕಾಗುತ್ತಿತ್ತು. ಮೊದಮೊದಲು ಧನಿಯ ಮನೆಗೆ ಲಿಂಗಪ್ಪ ಸ್ವತಃ ಹೋಗಿ ಕಿಟ್ಟನನ್ನು ಕರೆತರುತ್ತಿದ್ದ. ಮತ್ತೆ ಮತ್ತೆ ಹೋಗುವುದು ಕಷ್ಟವಾಯಿತು. ಸಕಾಲದಲ್ಲಿ ಬೇಯದ ‘ಗಂಜಿ’ ಅಡ್ಡಿ ಮಾಡಿತು. ಕಿಟ್ಟ ಮನೆಯ ಮುಂದೆ ನಿಂತು ‘ಕೂ’ ಹಾಕಬೇಕು. ಲಿಂಗಪ್ಪ ಹೊರಟು ಬಂದು ಚೀಲಕ್ಕೆ ಕೈಕೊಟ್ಟು ಬೆನ್ನಹಿಂದೆ ಓಡಬೇಕು. ಒಮ್ಮೊಮ್ಮೆ ಈ ನೋಟವನ್ನು ಸೋಮಪ್ಪನೂ ನೋಡುವ ಸಂದರ್ಭ ಬರುತ್ತಿತ್ತು. ತಾನು ಹುಟ್ಟಿದ ಗಳಿಗೆಯೇನು? ಲಿಂಗಪ್ಪ ಹುಟ್ಟಿದ ಗಳಿಗೆಯೇನು? ತಾನು ಲಿಂಗಪ್ಪನ ವಯಸ್ಸಿನಲ್ಲೆ ಇದ್ದಾಗ ಧನಿಗಳ ಮಕ್ಕಳನ್ನು ಹೆಗಲಮೇಲೆ ಹೊತ್ತು ಕೊಂಡು ಹೋಗಬೇಕಾಗುತ್ತಿತ್ತು. ಲಿಂಗಪ್ಪನಾದರೋ ಹಾಗಲ್ಲ…. ಚಿಕ್ಕ ಧನಿಗಳ ಹಿಂದೆಯೇ ಹೋಗುತ್ತಾನೆ. ಕೆಲ ಸಂದರ್ಭದಲ್ಲಿ ಅವರ ಹೆಗಲಿಗೆ ಕೈಹಾಕಿ ನಡೆಯುತ್ತಾನೆ. ಮೈ ಮುಟ್ಟಿ ಮಾತಾಡಿಸುತ್ತಾನೆ. ಅವನ ಮೈಗಿಂತ ಇವನ ಮೈ ಸ್ವಚ್ಛವಾಗಿದೆ. ಅವನ ಬಟ್ಟೆಗಿಂತ ಇವನ ಬಟ್ಟೆ ಬೆಳ್ಳಗಾಗಿದೆ. ಓದುವುದರಲ್ಲಿಯೂ ಹಾಗೆಯೇ – ಚಿಕ್ಕ ಧನಿಯ ನಾಲಗೆಯಿಂದ ಒಂದಕ್ಷರ ಹೊರಡುವುದಿಲ್ಲ. ಲಿಂಗಪ್ಪ ಇಡೀ ಶಾಲೆಯಲ್ಲಿ ಗಟ್ಟಿಗನಂತೆ! ಶೀನಪ್ಪಯ್ಯನವರೂ ತನ್ನಲ್ಲಿ ಗುಟ್ಟಾಗಿ ಈ ಮಾತನ್ನು ಹೇಳಿದ್ದಾರೆ! ಒಂದೋ ಎರಡೋ ವರ್ಷ ಹೀಗೆಯೇ ಇದ್ದರಾಯಿತು. ಲಿಂಗಪ್ಪ ಓದುಬರಹದಲ್ಲಿ ಪಾರಂಗತನಾಗಿ ಸರಕಾರಿ ನೌಕರನಾಗುತ್ತಾನೆ. ಮತ್ತೆ ಎತ್ತುಗಳ ಬಾಲ ಹಿಡಿವ ಕೆಲಸ ತನಗಾದರೂ ಏಕೆ? ತಂದೆ ತಾಯಂದಿರನ್ನು ಮಗನೇ ನೋಡಿಕೊಳ್ಳುವನಲ್ಲವೆ? ಹೀಗೆ ಸೋಮಪ್ಪನ ಮನಸ್ಸಿನಲ್ಲಿ ಯೋಚನೆ ಮೂಡುವುದು; ಕಣ್ಣು ಒದ್ದೆಯಾಗುವುದು; ಮುಖ ಕೆಂಪೇರುವುದು.

ಒಂದು ವರ್ಷದ ಓದಿನ ಪರಿಣಾಮವು ಲಿಂಗಪ್ಪನಲ್ಲಿ ಬಲವಾಗಿ ಕಾಣಿಸಿಕೊಂಡಿತು. ತಾನು ಒಕ್ಕಲ ಮಗ; ಕಿಟ್ಟ ಧನಿಯ ಮಗ; ಎನ್ನುವುದೇನೋ ನಿಜ. ಆದರೆ ಶಾಲೆಯೊಳಗೆ ಹಾಗೇನೂ ಇಲ್ಲ. ಮಗ್ಗಿ ಹೇಳುವುದರಲ್ಲಿ ತಾನೇ ಮೊದಲು; ಪಾಠ ಓದುವುದರಲ್ಲಿ ತಾನೇ ಗಟ್ಟಿಗ; ಶಾಲಾ ಪರೀಕ್ಷಕನು ಬಂದು ಪರೀಕ್ಷೆ ಮಾಡಿದಾಗಲೂ ತನಗೆ ಎಲ್ಲರಿಗಿಂತ ಮೊದಲನೆಯ ಸ್ಥಾನ ದೊರೆಯುತ್ತಿತ್ತು. ಚಿಕ್ಕಧನಿಗಳು ಬೆಂಚಿನ ಕೊನೆಯಲ್ಲಿ ಕುಳಿತು ಕೊಳ್ಳಬೇಕಾಗಿತ್ತು. ಆಟದಲ್ಲಿಯೂ ಅಷ್ಟೆ! ತಾನು ದನ – ಕಿಟ್ಟ ಹುಲಿಯಾದ ದಿನ ಹುಲಿಗೆ ದನ ಸಿಕ್ಕುವುದೇ ಇಲ್ಲ. ತಾನು ಹುಲಿಯಾದರೆ ಕೇಳುವುದೇನು? ಕಿಟ್ಟ ದನವಾಗಿ ಬದುಕುವ ಹಾಗಿಲ್ಲ. ಆದರೆ, ಧನಿಗಳ ಮನೆಯ ಮುಂದೆ ತಾನು ನಿಂತಿರುವಾಗ ಆ ಕ್ರಮವೇ ಬೇರೆ. ಚಿಕ್ಕಧನಿ ಹೊಡೆದರೆ ನೋವಾಗಲಿಲ್ಲ; ಎನ್ನಬೇಕು. ಓಟದ ಪಂಥದಲ್ಲಿ ತಾನಾಗಿ ಹಿಂದುಳಿಯಬೇಕು. ಅವನು ನಕ್ಕರೆ ತಾನೂ ನಗಬೇಕು. ಅವನು ಅತ್ತರೆ ತಾನೂ ಅಳಬೇಕು. ಈ ಕಾರಣದಿಂದ ಧನಿಯ ಮನೆಯಿಂದ ಸಾಧ್ಯವಾದಷ್ಟು ಕಾಲ ದೂರ ಇರುವುದೇ ಲೇಸೆಂದು ಲಿಂಗಪ್ಪನಿಗೆ ತೋರಿತು. ಅನಿರ್ವಾಹ ಪಕ್ಷದಲ್ಲಿ ಮಾತ್ರ ಅಲ್ಲಿ ಮುಖ ಕಾಣಿಸಿಕೊಳ್ಳಬೇಕಾಗುತ್ತಿತ್ತು. ತಾಯಿತಂದೆಗಳು ಉಪಾಯದಿಂದ ಇಂತಹ ಅನಿರ್ವಾಹಗಳನ್ನು ತಪ್ಪಿಸುತ್ತಲೂ ಇದ್ದರು. ಕಿಟ್ಟನಿಗಿಂತ ತಾನು ಕಡಿಮೆಯೆ? ಅವನು ಚಿವುಟಿದರೆ ತಾನೇಕೆ ಚಿವುಟಬಾರದು? ಅವನ ಗುದ್ದಿಗೆ ತಾನೇಕೆ ಗುದ್ದು ಕೊಡಬಾರದು? ಎಂದು ಒಮ್ಮೊಮ್ಮೆ ತೋರುತ್ತಲೂ ಇತ್ತು. ಈ ಕಾರಣದಿಂದ ಶೀನಪ್ಪಯ್ಯನವರು ಒಂದೆರಡು ಬಾರಿ ಲಿಂಗಪ್ಪನ ಕಿವಿಯವರೆಗೆ ಕೈಯನ್ನು ಕೊಂಡುಹೋಗಿದ್ದರು. ಇದು ಅನ್ಯಾಯವೆಂದು ಕಂಡಿದ್ದರೂ ಲಿಂಗಪ್ಪ ಮರುಮಾತಾಡದೆ, ಮುಖ ಮುರಿದುಕೊಂಡು ವೇದನೆಯನ್ನು ಸಹಿಸಿದ್ದ. ಧನಿಗಳ ಮನೆಗೆ ಹೋಗದೆ ಇರಲೂಬಹುದು. ಆದರೆ ಮಾಸ್ತರರ ಶಾಲೆ ಬಾಗಿಲಿಗೆ ಹೋಗದೆ ಅಕ್ಷರ ಬರುತ್ತದೆಯೇ? ಅವರು ಶಾಲೆಯಿಂದ ಓಡಿಸಿದರೆ ತಂದೆಯ ಹಾಗೆ ಗೊಬ್ಬರ ಹೊಂಡದಲ್ಲಿ ಹೊರಳಾಡುವುದೊಂದೇ ಗತಿ. ಆದುದರಿಂದ ಮಾಸ್ತರರಲ್ಲಿ ‘ದಮ್ಮಯ್ಯ!’ ಎಂದು ಬೇಡಿ, ಚಿಕ್ಕ ಧನಿಗಳಲ್ಲಿ ಕ್ಷಮೆ ಬೇಡಿ ಲಿಂಗಪ್ಪ ಹೇಗೂ ಕಾಲ ಕಳೆಯುತ್ತಿದ್ದ.

ಒಮ್ಮೆ ಯಾರಿಗೂ ತಿಳಿಸದೆ ಪರೀಕ್ಷಾಧಿಕಾರಿಗಳು ಶಾಲಾ ಸಂದರ್ಶನಕ್ಕೆ ಬಂದಿದ್ದರು. ಆ ದಿನ ಶೀನಪ್ಪಯ್ಯ ಮಾಸ್ತರರು ಮಾತ್ರ ಅರ್ಧ ಘಂಟೆ ತಡ. ಪರೀಕ್ಷಾಧಿಕಾರಿಗಳನ್ನು ಕಂಡೊಡನೆ ಅವರ ಮುಖ ಬಿದ್ದು ಹೋದಂತಾಯಿತು. ಅಧಿಕಾರಿಗಳು ಏನೂ ಹೇಳಲಿಲ್ಲ. ಮಾಸ್ತರರ ಹೃದಯದಲ್ಲಿ ಸಮುದ್ರಮಥನ ಆಗದೆಯೂ ಇರಲಿಲ್ಲ. ಬಂದ ಅಧಿಕಾರಿಗಳು ಸುಮ್ಮನೆ ಕುಳಿತಿರಲಿಲ್ಲ. ಸಹಾಯಕ ಶಿಕ್ಷಕರನ್ನು ಕರೆದು, ಪಾಠಗಳನ್ನು ತೊಡಗಹೇಳಿ ಲಿಂಗಪ್ಪನ ದರ್ಜೆಗೆ ಬಾಯಿಲೆಕ್ಕದ ಪ್ರಶ್ನೆಗಳನ್ನು ಹಾಕುತ್ತಿದ್ದರು. ಲಿಂಗಪ್ಪ ಎಲ್ಲದಕ್ಕೂ ಸರಿಯಾದ ಉತ್ತರಕೊಟ್ಟ, ಚಿಕ್ಕಧನಿ ಎಲ್ಲವನ್ನೂ ತಪ್ಪು ಮಾಡಿದ. ಉಳಿದ ಮಕ್ಕಳು ಕೆಲವು ಸರಿ; ಕೆಲವು ತಪ್ಪು. ಪರೀಕ್ಷಕರು ಲಿಂಗಪ್ಪನನ್ನು ಕರೆದು ಎಲ್ಲ ತಪ್ಪು ಮಾಡಿದ ಮಕ್ಕಳಿಗೆ ಲೆಕ್ಕ ಕಲಿಸಹೇಳಿದರು. ಎಲ್ಲವನ್ನೂ ತಪ್ಪು ಮಾಡಿದ ‘ಖ್ಯಾತಿ’ ನಾಯಕರ ಮಗನಿಗೆ ಮಾತ್ರ! ಧನಿಯ ಮಗನಿಗೆ ಒಕ್ಕಲ ಮಗ ಕಲಿಸುವುದು! ಏನನ್ಯಾಯ! ಲಿಂಗಪ್ಪನ ನಾಲಗೆಯೂ ಒಮ್ಮೆ ತಡವರಿಸಿತು. ಪರೀಕ್ಷಕರು ‘ಕಲಿಸೊ’ ಎಂದು ಗದರಿಸಿದರು; ಉಪಾಯವಿಲ್ಲ. ಇಡೀ ಶಾಲೆಯ ಎಲ್ಲ ಮಕ್ಕಳು ನೋಡುತ್ತಿರುವಂತೆ ತಿಮ್ಮಣ್ಣ ನಾಯಕರ ಮೂಲದ ಒಕ್ಕಲ ಮಗ ಲಿಂಗಪ್ಪ – ನಾಯಕರ ಮಗನಿಗೆ ಗುರುವಾದ. ಇದನ್ನು ನೋಡಿ ಕೆಲವರು ನಕ್ಕರು; ಕೆಲವರು ಮನಸ್ಸಿನೊಳಗೆ ಹಿಗ್ಗಿದರು. ಹಲಮಕ್ಕಳಿಗೆ ಅಸೂಯೆಯಾಯಿತು. ಮಾಸ್ತರ್ ಶೀನಪ್ಪಯ್ಯನವರ ರಕ್ತವೇ ಹೆಪ್ಪುಗಟ್ಟಿದಂತಾಯಿತು. ಈ ಸುದ್ದಿ ನಾಯಕರ ಕಿವಿಗೆ ಮುಟ್ಟಿದರೇನಾದೀತು? ಅವರು ಅಂದು ಹೇಳಿದ ಮಾತೇನು? ತಾವು ಕೊಟ್ಟ ಭರವಸೆಯೇನು? ಈಗ ಆದುದೇನು? ಈ ಶನಿ ಲಿಂಗಪ್ಪ ಇಂದು ಶಾಲೆಗೆ ಗೈರು ಹಾಜರಿಯಾಗಲಿಲ್ಲವೇಕೆ? ಅಥವಾ ತಾವಾದರೂ ಸಕಾಲದಲ್ಲಿ ಬಂದು ಯಾವುದಾದರೊಂದು ಉಪಾಯದಿಂದ ಈಗ ಆದ ಸಂಭವವನ್ನು ತಪ್ಪಿಸಲಿಲ್ಲವೇಕೆ? ಪರೀಕ್ಷಕರು ಬಂದಾರು! ಹೋದಾರು! ಆದರೆ ಬಾಳೂರು ಗ್ರಾಮದ ಪಠೇಲರೂ ನಿಗ್ರಹಾನುಗ್ರಹ ಸಮರ್ಥರೂ ಅನ್ನದಾತರೂ ಆದ ನಾಯಕರು ಮುನಿದರೆ ಮಾಸ್ಟರ್ ಶೀನಪ್ಪಯ್ಯನವರು ಹೋಗುವುದಾದರೂ ಎಲ್ಲಿಗೆ? ಪರೀಕ್ಷಕರು ಕಣ್ಣ ಮುಂದೆ ನಿಂತಿದ್ದಂತೆಯೇ ಶೀನಪ್ಪಯ್ಯನವರ ಮುಖ ಮುದುಡಿಹೋಯಿತು. ಭವಿಷ್ಯ ಮಸುಕಾಗಿ ಹೋಯಿತು.

ಇನ್ನೊಂದು ದರ್ಜೆಯ ಪರೀಕ್ಷಣಕ್ಕಾಗಿ ಅವರ ದೃಷ್ಟಿಯನ್ನೆಳೆಯುವುದಕ್ಕೆ ಪ್ರಯತ್ನಿಸಿದರು. ಪರೀಕ್ಷಕರು ಹೀಗೆಂದರು :- “ಮಾಸ್ತರೇ! ಕಲಿಸುವ ಉಪಾಧ್ಯಾಯರಿಗೆ ಪುಸ್ತಕವನ್ನು ಓದಲು ತಿಳಿದಿದ್ದರಾಯಿತೇ? ಮನಸ್ಸನ್ನು ಓದುವ ವಿದ್ಯೆ ಗೊತ್ತಿರ ಬೇಡವೇ? ಈ ಹುಡುಗನನ್ನೂ (ಲಿಂಗಪ್ಪನನ್ನೂ) ಆ ಹುಡುಗನನ್ನೂ (ಕಿಟ್ಟನನ್ನೂ) ಒಂದೇ ದರ್ಜೆಯಲ್ಲಿ ಇರಿಸಿದವರ ಬುದ್ಧಿಗೆ ಏನೆನ್ನಬೇಕು? ಹಿಟ್ಟು ಬೂದಿಗಳನ್ನು ಒಟ್ಟಾಗಿ ಕಲಸಬಹುದೆ?”

ಈ ಮಾತಿನಿಂದ ಶೀನಪ್ಪಯ್ಯನವರ ಗಲಿಬಿಲಿ ಮತ್ತಷ್ಟು ಹೆಚ್ಚಿತು. ಹಿಟ್ಟು ಬೂದಿಗಳನ್ನು ಒಂದು ಮಾಡಬಾರದೆಂದು ನಾಯಕರು ಎಚ್ಚರ ಕೊಟ್ಟಿದ್ದರು; ಅದೇ ಎಚ್ಚರವನ್ನು ಇಂದು ಪರೀಕ್ಷಕರೂ ಕೊಟ್ಟರಲ್ಲ! ನಾಯಕರಿಗೆ, ಮಗ ಹಿಟ್ಟು; ಒಕ್ಕಲ ಮಗ ಬೂದಿ. ಪರೀಕ್ಷಕರಿಗೆ ಅದರ ವಿಪರೀತ. “ಸ್ವಾಮೀ! ಹಳ್ಳಿಯ ಸಮಸ್ಯೆಗಳೇ ಬೇರೆ” ಎಂದು ಮಾಸ್ತರರು ವಿನಯದಿಂದ ಆಡಿದರು. “ಏನು ದೊಡ್ಡ ಶಬ್ದ ಪ್ರಯೋಗ ಮಾಡುತ್ತೀರಿ? ಮಕ್ಕಳ ಮೆದುಳಿನ ಶಕ್ತಿಯನ್ನು ಪರೀಕ್ಷಿಸದೆ ವರ್ಗದಲ್ಲಿ ಸೇರಿಸುವುದೇ? ಶಿಕ್ಷಣ ಶಾಸ್ತ್ರದ ಕಾಬಳ್ಳಿ ಗೊತ್ತಿಲ್ಲದವರಂತೆ ಆಡುತ್ತೀರಲ್ಲ? ಈ ಹುಡುಗನನ್ನು – ಲಿಂಗಪ್ಪನನ್ನು ಇಂದೇ ಮೇಲಿನ ದರ್ಜೆಗೆ ಹಾಕಿರಿ; ನೋಡೋಣ” ಪರೀಕ್ಷಕನು ಕೊಟ್ಟ ಸುಗ್ರೀವಾಜ್ಞೆ ಹೀಗಿತ್ತು.

ಶೀನಪ್ಪಯ್ಯನವರು ಬೆಪ್ಪಾದರೂ ಮನಸ್ಸಿನೊಳಗೆ ಒಂದಿಷ್ಟು ಸಮಾಧಾನವಾಯಿತು. ಲಿಂಗಪ್ಪ ಮೇಲಿನ ವರ್ಗಕ್ಕೆ ಅರ್ಹನೆಂಬುದು ಅವರಿಗೆ ತಿಳಿಯದ ವಿಷಯವಾಗಿರಲಿಲ್ಲ. ಆದರೆ, ಅದು ಹೇಳುವ ವಿಷಯವಾಗಿ ಮಾತ್ರ ಇರಲಿಲ್ಲ. ತಿಮ್ಮಣ್ಣ ನಾಯಕರ ಸಿಡುಕಿನ ಮೋರೆಯನ್ನು ನೋಡುವುದು ಹೇಗೆ ? ಎನ್ನುವ ಭೀತಿಯಿಂದ ಆಗಬೇಕಾದುದನ್ನವರು ಮಾಡಿರಲಿಲ್ಲ. ಇಂದು ಪರೀಕ್ಷಕರು ಅವರ ಅಭಿಪ್ರಾಯವನ್ನೇ ಸಮರ್ಥಿಸಿ, ಬಹಿರಂಗವಾಗಿ ಹೇಳಿ ಅವರ ನಿಷ್ಠುರ ಕಾರ್ಯದ ಹೊಣೆಯನ್ನು ತಾವೇ ಹೊತ್ತರು. “ಕಿಟ್ಟ ಅದೇ ವರ್ಗದಲ್ಲಿರುವಾಗ ಲಿಂಗಪ್ಪನನ್ನು ಮೇಲೆ ಹಾಕಿದಿರಲ್ಲ?” ಎಂಬ ಪ್ರಶ್ನೆ ಬಂದರೆ ಪರೀಕ್ಷಕರನ್ನು ಬೆರಳೆತ್ತು ತೋರಿಸಿ ತಮ್ಮ ಪರಾಧವೇನೂ ಇಲ್ಲವೆಂದು ಹೇಳಿಬಿಡಬಹುದಲ್ಲ? ಆದರೆ, ಇದೆಲ್ಲ ತಾತ್ಕಾಲಿಕ ಸಮಾಧಾನವನ್ನು ಹೊಂದುವ ಕ್ರಮವಲ್ಲದೆ ಮತ್ತೇನೂ ಅಲ್ಲ. ನಾಯಕರನ್ನು ಇದಿರಿಸುವಾಗಲೇ ಪರಿಸ್ಥಿತಿಯ ಭೀಕರತೆ ಅನುಭವಕ್ಕೆ ಬಂದೀತಷ್ಟೆ. ಮಾಸ್ತರರ ಎದೆ ಕುದಿಯುತ್ತಲೆ ಇತ್ತು.

ಸಂಜೆಯ ಆಟದ ಸಮಯಕ್ಕೆ ಇನ್ನೊಂದು ಘಟನೆ ನಡೆಯಿತು. ಪರೀಕ್ಷಕರು ಮಕ್ಕಳ ಆಟವನ್ನು ನೋಡಬೇಕೆಂದರು. ಆಟಗಳು ಹಳ್ಳಿಯ ಆಟಗಳೇ ಆಗಿರಬೇಕೆಂದರು. ಶೀನಪ್ಪಯ್ಯನವರು ಹುಲಿ ದನಗಳ ಆಟದಲ್ಲಿ ಅಪಾಯವುಂಟೆಂದು ಭಾವಿಸಿ ಕೊರಡೆಯಾಟವನ್ನು ಆಡಿಸಿದರು. ಮಕ್ಕಳೆಲ್ಲ ವರ್ತುಲವಾಗಿ ಕುಳಿತಿರಬೇಕು. ಒಬ್ಬನು ಸುತ್ತಲೂ ಓಡುತ್ತಾ ಬಂದು ಒಬ್ಬನ ಬೆನ್ನ ಹಿಂದೆ ಕೊರಡೆಯನ್ನಿಟ್ಟು ಹೋಗಬೇಕು. ತನ್ನ ಬೆನ್ನ ಹಿಂದೆ ಕೊರಡೆಯಿದೆ ಎಂದು ತಿಳಿಯದವನ ಬೆನ್ನಿಗೆ ಎರಡೇಟು ಬೀಳುತ್ತದೆ. ತಿಳಿದ ಪಕ್ಷದಲ್ಲಿ ಅವನು ಎದ್ದು ಹೋಗಿ ಕೊರಡೆಯಿಡುವ ಕೆಲಸವನ್ನು ತಾನೇ ಮಾಡುತ್ತಾನೆ. ಇನ್ನೊಬ್ಬರ ಬೆನ್ನಿಗೆ ಹೊಡೆಯುವ ಹಂಚಿಕೆ ಹೂಡುತ್ತಾನೆ. ಶೀನಪ್ಪಯ್ಯನವರಿಗೆ ಈ ಆಟದಲ್ಲಾದರೂ ಕಿಟ್ಟನ ಕೈಯಿಂದ ಲಿಂಗಪ್ಪನ ಬೆನ್ನಿಗೆ ಬಲವಾಗಿ ಎರಡೇಟು ಕೊಡಿಸಬೇಕೆಂಬ ಉದ್ದೇಶವಿತ್ತು. ಓದುವ ವಿಷಯದಲ್ಲಿ ಅಪಮಾನ ಹೊಂದಿದ ಕಿಟ್ಟನಿಗೆ ಆಟದಲ್ಲಾದರೂ ಕೌಶಲವುಂಟೆಂದು ತೋರಿಸುವುದು ಮಾತ್ರವಲ್ಲ; ಒಕ್ಕಲು ಮಗನಿಂದಾದ ಅಪಮಾನಕ್ಕೆ ಪ್ರತೀಕಾರವೂ ಆಗಬೇಕಾಗಿದ್ದಿತು. ಅದೂ ಪರೀಕ್ಷಕರ ಸನ್ನಿಧಿಯಲ್ಲಿ! ಆದರೆ ಈ ಸಂದರ್ಭದಲ್ಲಿಯೂ ಆದುದು ವಿಪರೀತ. ತನ್ನ ಬೆನ್ನ ಹಿಂದೆ ಇಟ್ಟ ಕೊರಡೆಯನ್ನು ಲಿಂಗಪ್ಪ ಬೇಗನೆ ಕಂಡುಕೊಂಡ. ಕಿಟ್ಟನು ಬೆಪ್ಪನಂತೆ ಎಲ್ಲಿಗೋ ನೋಡುತ್ತಾ ಕುಳಿತು, ಲಿಂಗಪ್ಪನ ಬಲವಾದ ಕೊರಡೆಯೇಟನ್ನು ತಿಂದು ಮುಖವನ್ನು ಹುಳ್ಳಗೆ ಮಾಡಿಕೊಂಡ! ಶೀನಪ್ಪಯ್ಯನ ಪ್ರಾಣಪಕ್ಷಿಯ ರೆಕ್ಕೆ ಮುರಿದಂತಾಯಿತು. ತಿಮ್ಮಣ್ಣ ನಾಯಕರ ಹುಲಿಮೀಸೆ ಕಣ್ಣಮುಂದೆ ಹೊಳೆಯುತ್ತಿತ್ತು. ಆಟವೆಲ್ಲ ಮುಗಿದ ಮೇಲೆ ಪರೀಕ್ಷಕರು ಶಾಲೆಯನ್ನು ಕೊಂಡಾಡಿದರು. ಶೀನಪ್ಪಯ್ಯನವರ ಕಾರ್ಯಶ್ರದ್ಧೆಯನ್ನು ಹೊಗಳಿದರು. ಈ ಗುಡ್ಡಗಾಡಿನಲ್ಲಿ ಶಾಲೆಯನ್ನು ಸ್ಥಾಪಿಸಿದ ನಾಯಕರನ್ನು ಮುಕ್ತಕಂಠವಾಗಿ ಸ್ತುತಿಸಿ, ನಾಯಕರನ್ನು ನೋಡಬೇಕೆಂಬ ಅಪೇಕ್ಷೆಯನ್ನು ಪ್ರಕಟಿಸಿದರು. ಆದರೆ ನಾಯಕರು ಊರಲ್ಲಿ ಇರಲಿಲ್ಲ. ಇನ್ನೊಮ್ಮೆ ಬಂದಾಗ ಕಾಣುತ್ತೇನೆ ಎಂದರು. ಈ ಹುಡುಗನ ವಿಷಯದಲ್ಲಿ – ಲಿಂಗಪ್ಪನ ವಿಷಯದಲ್ಲಿ – ಹೆಚ್ಚು ಆಸಕ್ತಿ ವಹಿಸಿರಿ ಎಂದು ಶೀನಪ್ಪಯ್ಯನವರಿಗೆ ಪ್ರತ್ಯೇಕ ಸುಚನೆ ಕೊಟ್ಟರು. ಸೂಚನೆಗೇನೋ ಹುಂ ಎಂದರು ಶೀನಪ್ಪಯ್ಯ. ಆದರೆ ಮನಃಪಟದಲ್ಲಿ ಲಿಂಗಪ್ಪ ಕಿಟ್ಟನಿಗೆ ಕಲಿಸಿದ ಚಿತ್ರ! ಕೊರಡೆಯಿಂದ ಏಟು ಕೊಟ್ಟ ಚಿತ್ರ! ಇದರ ಫಲವಾದ ಅನೇಕ ಭಯಾನಕ ಪರಿಸ್ಥಿತಿಗಳ ಚಿತ್ರ. ಎಂದೂ ಕೆಡದ ಶೀನಪ್ಪಯ್ಯನ ತಲೆ ಆ ದಿನ ಸಂಪೂರ್ಣ ಕೆಟ್ಟುಹೋಯಿತು.

ಶಾಲೆಯಲ್ಲಿ ನಡೆದ ಸಂಗತಿ ಲಿಂಗಪ್ಪನಿಗಿಂತ ಮುಂಚಿತವಾಗಿ ಅವನ ಮನೆಗೆ ತಲುಪಿತ್ತು. ಕೆಂಚಿ, “ಲಿಂಗ! ಚಿಕ್ಕ ದನಿಗಳಿಗೆ ಏನುಮಾಡಿಬಿಟ್ಟೆ?” ಎಂದು ಕಣ್ಣೀರು ಸುರಿಸಿದಳು. ಸೋಮಪ್ಪನಿಗೆ ಮಗನ ನಡತೆಯಲ್ಲಿ ತಪ್ಪೇನೂ ತೋರಲಿಲ್ಲ. ಪರೀಕ್ಷಕರು ಎಂದರೆ ಸರಕಾರದವರಲ್ಲವೇ? ಸರಕಾರದವರು ಹೇಳಿದಂತೆ ಮಾಡಿದರೆ ತಪ್ಪೇನು? ಆದರೆ ಎಲ್ಲ ಸಮಯದಲ್ಲಿಯೂ ಹೇಳುವುದಕ್ಕೂ ಕೇಳುವುದಕ್ಕೂ ಸರಕಾರದವರು ಇರುವುದಿಲ್ಲ. ತಿಮ್ಮಣ್ಣ ನಾಯಕರು ಸೋಮಪ್ಪನನ್ನು ಸಜೀವವಾಗಿ ಹೂಳಿದರೂ ಈ ಗ್ರಾಮದಲ್ಲಿ ಕೇಳುವ ಸರಕಾರವಿಲ್ಲ; ನಾಯಕರ ಸರಕಾರವಲ್ಲದೆ ಬೇರೆ ಸರಕಾರ ಇಲ್ಲಿಲ್ಲ! ಸೋಮಪ್ಪನ ರಕ್ತ ಕಣಗಳಲ್ಲಿಯೂ ಭಯ ಅಡಸಿತು. “ಅನ್ನ ಕೊಡುವ ಧನಿಯಲ್ಲವೆ ಲಿಂಗು! ನೀನು ಹಾಗೆ ಮಾಡಬಹುದೆ? ” ಎಂದು ಮಾತ್ರ ಕೇಳಿದ ಸೋಮಪ್ಪ. ಲಿಂಗಪ್ಪನಿಂದು ಒಕ್ಕಲ ಮಗನಾಗಿರಲಿಲ್ಲ. “ನನಗೆ ಅವರ ಅನ್ನ ಬೇಕಾಗಿಲ್ಲ” ಎಂದು ಒಂದು ಬಗೆಯ ಠೇಂಕಾರದಿಂದ ಲಿಂಗಪ್ಪ ಉತ್ತರ ಕೊಟ್ಟ. ಉತ್ತರದಲ್ಲಿ ತಪ್ಪೇನೂ ತೋರಲಿಲ್ಲ. ಆದರೆ, ಅವನ ಹಾವಭಾವ ಸೋಮಪ್ಪನಿಗೆ ಮೆಚ್ಚಲಿಲ್ಲ. ಮಾಡುವುದೇನು? ಓದಿನ ಕಷ್ಟಸುಖ ಅವನಿಗಲ್ಲದೆ ತನಗೆ ಗೊತ್ತ್ತೆ? ಶಾಲೆಗೆ ಹೋದ ಮೇಲೆ ಅಲ್ಲಿಯ ರಿವಾಜಿಯಂತೆ ನಡೆದುಕೊಳ್ಳಬೇಕಾಗುತ್ತದೆ. ಲಿಂಗಪ್ಪ ಮಾಡಿದುದು ಅಷ್ಟನ್ನೇ! ಆದುದು ಆಗುತ್ತದೆ! ಎಂದಿಷ್ಟೆ ಮನಸ್ಸಿನಲ್ಲಿ ಯೋಚಿಸಿದ.

ಇನ್ನು ಹಾಗಿರಬೇಕಾಗಿಲ್ಲ. ಲಿಂಗಪ್ಪ ಓದಿ ಕಲಿತು ಗಟ್ಟಿಗನಾಗುತ್ತಾನೆ. ಮತ್ತೆ ತನ್ನಂತೆ ಅಡಿಕೆ ಹಾಳೆಯನ್ನು ತಲೆಗಿಡಬೇಕೆ? ಉಪಾಧ್ಯಾಯರ ಟೊಪ್ಪಿಯೋ! ಮಣೆಗಾರರ ಮುಂಡಾಸೋ! ನಾಲ್ಕು ಅಕ್ಷರವೋದಿ ಕೆಲಸ ಸಂಪಾದಿಸಿದರೆ ಯಾವುದೆನ್ನಿಡುವುದು ಅಸಾಧ್ಯ? – ಹೀಗೆ ಸೋಮಪ್ಪನ ಕಲ್ಪನೆಗಳು ಒಂದರ ಮೇಲೊಂದು ಏಳುತ್ತಿದ್ದುವು.

ಮರುದಿನ ನಾಯಕರು ಮಂಗಳೂರಿನಿಂದ ಬಂದರು. ಶೀನಪ್ಪನವರನ್ನು ಬರಮಾಡಿದರು. ಎಲ್ಲವನ್ನೂ ವಿವರ ವಿವರವಾಗಿ ಕೇಳಿದರಂತೆ. ಅವರೊಳಗೆ ಏನೆಲ್ಲ ನಡೆಯಿತೆಂದು ಯಾರಿಗೂ ತಿಳಿದಿಲ್ಲ. ಶೀನಪ್ಪಯ್ಯ ನಾಯಕರ ಮನೆಯಿಂದ ಹೊರಟು ಬರುವಾಗ ಅವರ ಮುಖ ಕಪ್ಪಾಗಿದ್ದುದನ್ನು ಕಂಡವರಿದ್ದಾರೆ. ಅಂದಿನಿಂದ ನಾಯಕರು ಸೊರಗಿ ಹೋಗಿದ್ದರು. ಗ್ರಾಮದಲ್ಲಿ ಶಾಲೆಯನ್ನು ತೆರೆಯುವಾಗ ತಮ್ಮ ಮಗನಿಗೂ ವಿದ್ಯೆ ದೊರಕುವುದಲ್ಲ – ಎನ್ನುವ ಉದ್ದೇಶವಿತ್ತು ಅವರಲ್ಲಿ. ಆದರೆ ಈಗ ವಿಚಾರಿಸುವಲ್ಲಿ ಶಾಲೆಯನ್ನು ತೆರೆದುದೇ ತಪ್ಪಾಗಿ ತೋರಿತು. ತಮ್ಮ ಮಕ್ಕಳನ್ನು ಮಂಗಳೂರಿಗೋ ಪುತ್ತೂರಿಗೋ ಕಳುಹಿಸಿಕೊಡಬಹುದಾಗಿತ್ತು. ಇಡೀ ಗ್ರಾಮವನ್ನೇ ತಮ್ಮ ಸಂಸಾರವೆಂದು ಭಾವಿಸಿದ ಕಾರಣ ಅಲ್ಲವೆ ಹೀಗಾಯಿತು? ಊರಲ್ಲೀಗ ಮುಖ ತೋರಿಸುವ ಹಾಗಿಲ್ಲ. ಸೋಮಪ್ಪನನ್ನು ದೂರಿ ಫಲವಿಲ್ಲ. ಹುಡುಗನನ್ನು ಶಾಲೆಗೆ ಕಳುಹಿಸಲು ತಮ್ಮ ಒಪ್ಪಿಗೆಯನ್ನಾತ ಪಡೆದಿದ್ದನಲ್ಲವೆ? ಲಿಂಗಪ್ಪನಿಗೂ ಎಷ್ಟು ಬುದ್ದಿ ಇದ್ದೀತು? ತಪ್ಪು ಮಾಡಿದವರು ಮಾಸ್ತರ್ ಶೀನಪ್ಪಯ್ಯ – ಮತ್ತು ಶಾಲಾ ಪರೀಕ್ಷಕರು. ಕಲಿಯುವದರಲ್ಲಿ ಯಾರೆಷ್ಟು ಹೆಡ್ಡರು ಅಥವಾ ಗಟ್ಟಿಗರಾಗಿದ್ದರೂ ಧನಿಯ ಮುಖಕ್ಕೆ ಏಟು ಕೊಡುವಂತೆ ಒಕ್ಕಲಿನಿಂದ ಪಾಠ ಹೇಳಿಸಬಹುದೇ? ಸಾಲದುದಕ್ಕೆ ಕೊರಡೆಯಾಟದ ನೆವದಲ್ಲಿ ಹೊಡೆಯಿಸಬಹುದೇ? ಒಕ್ಕಲು ಇಂದೂ ಒಕ್ಕಲು ನಾಳೆಯೂ ಒಕ್ಕಲೆ. ಅವನನ್ನು ಎಂದೂ ಏನೂ ಮಾಡಬಹುದು. ಆದರೆ ಈ ಇಬ್ಬರನ್ನು? ಪರೀಕ್ಷಕರು ಬಾಯಿಗೆ ಬಂದಂತೆ ಬೊಗಳಿಯಾರು. ಶೀನಪ್ಪಯ್ಯ ಅವರ ತಾಳಕ್ಕೆ ತಕ್ಕಂತೆ ಕುಣಿದಾರು. ಆದರೆ ಈ ಗ್ರಾಮದಲ್ಲಿ ಮುಖ ಎತ್ತಿ ನಡೆಯಬೇಕಾದವರು ತಾವು! ನೋಡೋಣ! ಇನ್ನೆಷ್ಟು ಕಾಲ ಈ ಆಟ ನಡೆಯುತ್ತದೆ? ಗ್ರಾಮಕ್ಕೆ ಇನ್ಸ್ಪೆಕ್ಟರರು ಹೇಗೆ ಬಂದಾರು? ಮಾಡಿದ ಅಪಮಾನಕ್ಕೆ ಪ್ರಾಯಶ್ಚಿತ್ತ ಮಾಡದೆ ಶೀನಪ್ಪಯ್ಯನವರು ಹೇಗೆ ಕಾಲಕ್ಷೇಪ ಮಾಡಿಯಾರು? ನೋಡೋಣ! ಎಂದು ನಾಯಕರು ತಮ್ಮ ಆಪ್ತರೊಬ್ಬರಲ್ಲಿ ಹೇಳಿದರೆಂದೂ ಗುಜ ಗುಜ ಸುದ್ದಿಯಿತ್ತು.

ಎಲ್ಲರೂ ಕೇಳುವ ಮಟ್ಟಿಗೆ ನಾಯಕರು ಇಷ್ಟೇ ಹೇಳುತ್ತಿದ್ದರು. ತಮ್ಮ ಗುತ್ತಿನ ಮನೆ ಅತಿ ಪುರಾತನದ ಮನೆ. ಅಂದಿನಿಂದ ಇಂದಿನವರೆಗೆ ನಡೆವಳಿ ತಪ್ಪಲಿಲ್ಲ. ಹಟ್ಟಿ ತುಂಬ ದನಕರುಗಳು. ಹೊಲ ತುಂಬ ಒಕ್ಕಲುಗಳು. ಇವು ಎಷ್ಟೋ ಸತ್ತಿವೆ, ಸತ್ತಂತೆ ಹುಟ್ಟುತ್ತ ಬಂದಿವೆ. ಗೋಪೂಜೆಯ ದಿನ ಆಕಳಿಗೆ ಹಬ್ಬ , ವಿಷುವಿನ ಕಣಿಯ ದಿನ ಒಕ್ಕಲುಗಳಿಗೆ ಪಾಯಸ. ಇದಕ್ಕಿಂತ ಹೆಚ್ಚಿನ ರಿವಾಜಿಯನ್ನು ಮಾಡಬಾರದಿತ್ತು. ದುಡಿಯುವವರಿಗೆ ಕೈಗೆ ಹಾರೆ ಕೊಡ ಬೇಕಾಗಿತ್ತಲ್ಲದೆ ಬಳಪ ಕೊಡಬಾರದಿತ್ತು. ಮಾಡಿದುದು ತಪ್ಪಾಯಿತು. ಇನ್ನು ಇತರರನ್ನು ದೂರಿ ಫಲವುಂಟೆ?
ನಾಯಕರ ಸ್ವಭಾವ ಗೊತ್ತಿದ್ದವರಿಗೆ ಇಂತಹ ಮಾತಿನ ಅರ್ಥವೇನೆಂಬುದು ಚೆನ್ನಾಗಿ ಗೊತ್ತು.

4

ತಿಂಗಳು ಕಳೆದು ಹೋಯಿತು. ಶೀನಪ್ಪಯ್ಯ – ನಾಯಕರ ಭೆಟ್ಟಿ ನಡಿಯದೆ ಎಷ್ಟೋ ದಿನವಾಗಿತ್ತು . ಶೀನಪ್ಪಯ್ಯ ತಾನಾಗಿ ಹಾರಯಿಸಿ ಹೋಗಲಿಲ್ಲ. ನಾಯಕರು ಕರೆಯಿಸಲಿಲ್ಲ. ಮೈಗೆ ಹಚ್ಚಿಕೊಂಡ ಕೆಸರನ್ನು ತೊಳೆಯದೆ ನಾಯಕರ ಮುಖ ನೋಡುವುದು ಹೇಗೆ? ಎಂದು ಶೀನಪ್ಪಯ್ಯ; ನೋಡೋಣ ಹೊಟ್ಟೆ ಹೊರೆಯುವುದಕ್ಕಾಗಿ ವೇಷ ಹಾಕಿಕೊಳ್ಳುವ ಉಪಾಧ್ಯಾಯನಿಗೆ ತನ್ನ ದೋಷದ ಅರಿವಾಗುವುದೊ? ಅರಿತ ಮೇಲೆ ಏನು ಮಾಡುತ್ತಾನೆ ನೋಡೋಣ …. ತಾವು ಸ್ವತಃ ಕಾರ್ಯಕ್ರಮ ಕೈಕೊಳ್ಳುವುದಿದ್ದರೆ ಮತ್ತೆ ಅಲ್ಲವೆ? ಎಂದು ನಾಯಕರು. ಹೀಗೆ ಒಬ್ಬರು ಇನ್ನೊಬ್ಬರ ಸಂಪರ್ಕವನ್ನು ತಾತ್ಕಾಲ ದೂರ ಮಾಡಿದ್ದರು.

ಈ ಮಧ್ಯದಲ್ಲಿ ನಾಯಕರ ಮಗ ಕಿಟ್ಟಣ್ಣ ಒಮ್ಮೊಮ್ಮೆ ಮಾತ್ರ ಶಾಲೆಗೆ ಬರುತ್ತಿದ್ದ. ಫಕ್ಕನೆ ಬರುವುದನ್ನು ನಿಲ್ಲಿಸಿದರೆ ಒಕ್ಕಲಿಗ ಸೋತನೆಂಬ ಅರ್ಥವಾಗುವುದಿಲ್ಲವೇ? ಆದುದರಿಂದ ವಾರಕ್ಕೆ ಎರಡು ಮೂರು ಬಾರಿ ಬರುವುದು; ಅಷ್ಟೇ ಬಾರಿ ಗೈರ್ ಹಾಜರಿಯಾಗುವುದು ರೂಢಿಯಾಗಿತ್ತು. ಯಾಕೆ ಸರಿಯಾಗಿ ಬರುವುದಿಲ್ಲ? ಎಂದು ಕೇಳುವ ಉಪಾಧ್ಯಾಯರಿಲ್ಲ. ಕಾರಣ ಎಲ್ಲರಿಗೂ ಗೊತ್ತಿದೆ. ಮೊದಲೇ ಕಲಿಯುವುದರಲ್ಲಿ ದಡ್ಡ. ಇತ್ತೀಚೆಗೆ ಶಾಲೆಗೆ ಬಂದು ತಂಟೆಯನ್ನಲ್ಲದೆ ಬೇರೇನೂ ಮಾಡದ ಕಿಟ್ಟಣ್ಣನಲ್ಲಿ ಆಕ್ಷೇಪಿಸಿ ಮಾತಾಡುವವರೂ ಇಲ್ಲ. ಹಿಂದೆ – “ನಮ್ಮ ಹುಡುಗ ಮಹಾಪೋಕರಿ, ಜಾಗ್ರತೆ ನೋಡಿಕೊಳ್ಳಿ ಮಾಸ್ತರರೇ!” ಎಂದು ನಾಯಕರು ಎಚ್ಚರಿಸಿದ್ದರು. ಇಂದು ಪೋಕರಿಯಲ್ಲಿ ಪಿಟ್ಟೆಂದು ಮಾತಾಡುವ ಎದೆಯುಳ್ಳವರು ಶಾಲೆಯಲ್ಲಿ ಯಾರೂ ಇಲ್ಲ. ಶಾಲೆ ನಾಯಕರದು ; ಆ ನೆಲ ನಾಯಕರದು; ಶಾಲೆಯೊಳಗಿರುವ ಪ್ರತಿಯೊಂದು ಒಡವೆ ಅವರದು. ಉಪಾಧ್ಯಾಯರ ಕೈಮೈಗಳು ಮಾತ್ರ ನಾಯಕರಿಗೆ ಸೇರಿದುದಲ್ಲ. ಇಂತಹ ಸ್ಥಿತಿಯಲ್ಲಿ ನಾಯಕರ ಮಗ ಒಂದಿಷ್ಟು ಹೆಚ್ಚು ಕಡಿಮೆ ಮಾಡಿದರೆ ಹೇಳುವುದಕ್ಕೇನಿದೆ?

ಲಿಂಗಪ್ಪನ ಮನಸ್ಸೂ ಈಗ ಬಹಳ ಬದಲಾವಣೆ ಹೊಂದಿದೆ. ಧನಿಗಳ ಮಗನಾಗಿ ಹುಟ್ಟಿದುದರಿಂದ ಕಿಟ್ಟನಿಗೆ ಮರ್ಯಾದೆ ಕೊಡದೆ ನಿರ್ವಾಹವಿಲ್ಲ ಎನ್ನುವ ಅಭಿಪ್ರಾಯ ಹೋಗಿ, ಅವನಿಗೇನು ಕೋಡು ಬಂದಿದೆಯೆ? ಎನ್ನುವಂತೆ ರೂಪಾಂತರ ಹೊಂದಿತ್ತು. ಶಾಲಾ ಪರೀಕ್ಷೆ ನಡೆದು ತನಗೆ ಇನ್ಸ್ಪೆಕ್ಟರರ ಪ್ರಶಂಸೆ ದೊರೆತ ಮೇಲಂತೂ ಅವನು ಬೇರೆ ಹುಡುಗನಾಗಿದ್ದ. ಮಾತಿಗೆ ಮಾತು; ಕೈಗೆ-ಕೈ! ಏಕೆ ಹೆದರಬೇಕು? ಎಂಬ ದಿಟ್ಟತನವನ್ನು ಕೆಲವೊಮ್ಮೆ ಹೊರಗೆ ಕಾಣಿಸಿಕೊಳ್ಳಲು ಪೇಚಾಡಿದಾಗ ನಾಯಕರ ಮನೆತನದ ಮರ್ಯಾದೆಯನ್ನು ಕಾಪಾಡುವ ಕಾವಲುಗಾರ ಶೀನಪ್ಪಯ್ಯನವರು, ಬೆಚ್ಚಗೆ ಬೆನ್ನಿಗೆ ಎರಡೇಟು ಕೊಡುತ್ತಿದ್ದರು. ಇದರಿಂದ ಲಿಂಗಪ್ಪನಿಗೆ ತನ್ನ ನೆಲೆಯೇನೆಂದು ತಿಳಿದು ಬರುತ್ತಿತ್ತು. ನಾಯಕರು ತಮಗೆ ಉಪಕಾರ ಮಾಡಿದ್ದಾರೆ, ಅವರ ಉಪಕಾರಕ್ಕೆ ತಮ್ಮಿಂದ ಅಪಕಾರವಾಗಿದೆ. ಇದನ್ನು ಹೋಗಲಾಡಿಸುವುದಕ್ಕಾಗಿ ನೆವ ಇದ್ದೂ ಇಲ್ಲದೆಯೂ ಶೀನಪ್ಪಯ್ಯನವರು ಲಿಂಗಪ್ಪನ ಮೇಲೆ ತಮ್ಮ ಕೋಪದ ಮುದ್ರೆಯನ್ನು ಹೊಡೆಯುತ್ತಲೇ ಇದ್ದರು. ವಾರಕ್ಕೆ ಒಮ್ಮೆಯಾದರೂ ಮೈಯೆಲ್ಲ ನೋವು ಎಂದು ಲಿಂಗಪ್ಪ ಹುಯಿಲಿಡದೆ ಇರುತ್ತಿರಲಿಲ್ಲ. ಕೆಂಚಿ ಎಣ್ಣೆ ಕಾಯಿಸಿ ಮೈಗೆ ಉಜ್ಜಿ ಬಿಸಿನೀರಿನಲ್ಲಿ ಸ್ನಾನ ಮಾಡಿಸುತ್ತಿದ್ದಳು. ಇವೆಲ್ಲ ಓದಿನಲ್ಲಿರುವ ಕಷ್ಟಗಳೆಂದೂ ಇವುಗಳನ್ನು ಸಹಿಸದೆ ಓದು ಬರುವುದೇ? ಎಂದೂ ಆ ಗಂಡ ಹೆಂಡಿರು ಭಾವಿಸುತ್ತಿದ್ದರು. ಲಿಂಗಪ್ಪ ಹೀಗೆ ಎಣಿಸಿದ – ಎಲ್ಲರೂ ಧನಿಗಳ ಪಕ್ಷಪಾತಿಗಳು. ಒಕ್ಕಲಾಗಿ ಹುಟ್ಟಿದವನು ಪಾಠ ಕಲಿಯಬೇಕಾದ ಕ್ರಮವೇ ಇದು. ಶಾಲೆಗೆ ಹೋಗುವುದಿಲ್ಲ ಎಂದು ಕುಳಿತರೆ ಆದೀತೆ? ಶಾಲೆಗೆ ಹೋದ ಮೇಲೆ ಎಲ್ಲವನ್ನೂ ಸಹಿಸಲೇಬೇಕು! ಆಗಲಿ; ಇನ್ನೆಷ್ಟು ವರ್ಷ ಈ ಕಷ್ಟವಿದ್ದೀತು!

ಇನ್ನೊಮ್ಮೆ ಪರೀಕ್ಷಕರು ಬರುವಾಗ ಇನ್ನೆರಡು ದರ್ಜೆ ಮೇಲಕ್ಕೆ ಹಾರಿಬಿಟ್ಟರೆ ಎರಡೇ ವರ್ಷಗಳೊಳಗೆ ಇಲ್ಲಿ ಕಲಿಯ ಬೇಕಾದುದನ್ನೆಲ್ಲ ಮುಗಿಸಿಬಿಡಬಹುದಲ್ಲ! ಮತ್ತೆ ಯಾರ ಮುಲಾಜಿಯೇನು? ಗದ್ದೆಯುಳುವಾಗ ಓಡಲಾರದ ಕೋಣದೊಡನೆ ಓಡುವ ಕೋಣದ ಬೆನ್ನಿಗೂ ಚಡಿ ಬೀಳುತ್ತದೆ. ಇದರಿಂದ ಓಡುವ ಕೋಣ ಇನ್ನಷ್ಟು ಓಡಿ ಗದ್ದೆಯನ್ನು ಬೇಗನೆ ಉತ್ತು ಬಿಡುವುದಲ್ಲವೆ? ಅದೇ ರೀತಿಯಲ್ಲಿ ತನಗೂ ಪೆಟ್ಟು ಬಿದ್ದರೇನಾಯಿತು? ಇದರಿಂದ ಪಾಠ ಕಲಿತು ಬೇಗನೆ ಗಟ್ಟಿಗನಾಗಬಹುದು. ಗಟ್ಟಿಗನಾದಷ್ಟು ಬೇಗನೆ ಪೆಟ್ಟಿನಿಂದ ದೂರವಾಗಬಹುದು. ಅಂತೂ ಶಾಲೆಯನ್ನು ಬಿಡುವ ಹಾಗಿಲ್ಲ! ಕಿಟ್ಟಣ್ಣನ ಅಧಿಕಪ್ರಸಂಗವನ್ನು ಸಹಿಸುವಂತೆಯೂ ಇಲ್ಲ.

ಮಕ್ಕಳೆಲ್ಲ ಶಾಲೆಯೊಳಗಿರುವಾಗಲೆ ಯಾರೇನು ಮಾಡಿದರೆಂದು ಪರಾಂಬರಿಸಿ, ಅವರವರ ತಪ್ಪಿಗೆ ತಕ್ಕಂತೆ ಶಿಕ್ಷೆಯನ್ನು ವಿಧಿಸುವುದು ಕಷ್ಟ. ಅವರು ಹೊರಗೆ ಮಾಡಿದುದನ್ನೆಲ್ಲ ವಿಚಾರಿಸಲಾಗುತ್ತದೆಯೇ? ಹೀಗಿದ್ದರೂ, ನಾಯಕರ ಮಗ ಕಿಟ್ಟಣ್ಣ ಗುತ್ತಿನ ಮನೆಯಿಂದ ಹೊರಗೆ ಕಾಲಿಟ್ಟು ಪುನಃ ಬಂದು ಸೇರುವವರೆಗೆ ಅವನ ಮಾನರಕ್ಷಣೆಯ ಭಾರ ತಮ್ಮದು ಎನ್ನುವಂತೆ ಶೀನಪ್ಪನವರು ಪ್ರತಿದಿನ ಅವನ ದೂರುಗಳನ್ನು ಕೇಳುವರು. ಒಂದು ದಿನ ಅಣಕಿಸಿದ ಕತೆ; ಇನ್ನೊಂದು ದಿನ ಕಲ್ಲೆಸೆದ ದೂರು; ಮಗದೊಂದು ದಿನ ಗದ್ದೆಯ ಅಂಚಿನಲ್ಲಿ ಬರುವಾಗ ಲಿಂಗಪ್ಪ ದಾರಿಯನ್ನು ಬಿಟ್ಟು ಕೊಡಲಿಲ್ಲ ಎಂಬ ಚಾಡಿ! ತಪ್ಪಿಗೆ ತಕ್ಕಂತೆ ಪ್ರಾಯಶ್ಚಿತ್ತ ವಿಧಿಸುತ್ತಿದದರು ಶೀನಪ್ಪಯ್ಯನವರು. ಒಂದು ದಿನ ಬಲುದೊಡ್ಡ ಫಿರ್ಯಾದಿಯೊಂದು ಬಂತು.

ಮಳೆಗಾಲವದು. ಗುತ್ತಿನ ಮನೆಯಿಂದ ಶಾಲೆಗೆ ಹೋಗುವ ದಾರಿಯ ನಡುವೆ ಒಂದು ತೋಡು ಹಾದುಹೋಗುತ್ತಿದೆ. ಮಳೆ ಬಂದರೆ ನಿಮಿಷದಲ್ಲಿ ಆ ತೋಡು ತುಂಬಿ ಹರಿಯುತ್ತದೆ. ಅದನ್ನು ದಾಟುವುದಕ್ಕೆ ಎರಡು ಅಡಿಕೆ ಮರದ ತುಂಡುಗಳ ಸಂಕ. ಒಬ್ಬ ನಡೆಯುವಾಗಲೂ ಅದು ತಕಪಕ ಕುಣಿಯುತ್ತದೆ. ಜಾಗ್ರತೆಯಿಂದ ಎಡಬಲಗಳ ಭಾರವನ್ನು ಸಮ ತೂಕದಲ್ಲಿಟ್ಟು ಸಂಕದ ಮೇಲೆ ಹೆಜ್ಜೆಯಿಡಬೇಕು. ಮಳೆಯಿಲ್ಲದಾಗ ಸಂಕದಿಂದ ತೋಡಿನ ತಳದಲ್ಲಿರುವ ಮರಳರಾಶಿಗೆ ಮಕ್ಕಳು ಹಾರಿ ಏರಿಹೋಗುತ್ತಿದ್ದರು. ಮಳೆಗಾಲದಲ್ಲಿ ಮಾತ್ರ ಜಾಗರೂಕತೆ ಎಷ್ಟಿದ್ದರೂ ಸಾಲದು. ಆ ದಿನ ಸ್ವಲ್ಪ ಮಳೆ ಬಂದಿತ್ತು. ತೋಡಿನಲ್ಲಿ ಮೊಣಕಾಲಿನವರೆಗೆ ಕೆಂಪುನೀರು ಹರಿದಿರಬಹುದು. ಸಂಜೆಗೆ ಪಾಠ ಬಿಟ್ಟು ಮನೆಯ ಕಡೆಗೆ ಬರುವ ಮಕ್ಕಳು ಒಂದೊಂದಾಗಿ ಅವಸರದಿಂದ ಸಂಕದಾಟಿ ಹೋದುವು. ಕಿಟ್ಟಣ್ಣ ಹಾದುಹೋಗುವ ಠೀವಿಯೇ ಬೇರೆ. ಅವನು ಬಲು ಜಾಗ್ರತೆಯಿಂದ ದಾಟುವವನಂತೆ ನಟಿಸುತ್ತಿದ್ದ. ಬೆನ್ನ ಹಿಂದೆ ಲಿಂಗಪ್ಪನಂತೂ ಇದ್ದನೆಂದರೆ ಆ ಜಾಗ್ರತೆಗೆ ಮಿತಿಯೇ ಇಲ್ಲ. ಲಿಂಗಪ್ಪನನ್ನು ಹಿಂದೆ ತಡೆದಷ್ಟು ಆತನಿಗೆ ಸಂತೋಷ. ಬೇರೆ ಮಕ್ಕಳು ಜೊತೆಯಲ್ಲಿ ಬಂದರೆ ಅಕ್ಷೇಪವಿಲ್ಲ. ಲಿಂಗಪ್ಪನು ಮಾತ್ರ ಬರಕೂಡದು. ಬರಲೇ ಕೂಡದು! ಆ ದಿನ ಕಿಟ್ಟಣ್ಣ ನಡುಸಂಕದಲ್ಲಿ ನಿಂತು ಕೈ ತಾಂಗನ್ನು ಆಧರಿಸಿಕೊಂಡು ಹರಿಯುವ ಬೊಳ್ಳದ ಚಂದವನ್ನು ನೋಡುತ್ತಾ ನಿಂತಿದ್ದ ; ಒಮ್ಮೊಮ್ಮೆ ಹಿಂದೆ ನಿಂತಿದ್ದ ಲಿಂಗನ ಮುಖನೋಡಿ – ಅವನ ಹೆಮ್ಮೆಗಿದು ಪ್ರತೀಕಾರ ಎಂಬ ಅರ್ಥವನ್ನು ಹೊಳೆಯಿಸುತ್ತಿದ್ದ. ಹೀಗೆ ಹತ್ತೆಂಟು ನಿಮಿಷಗಳು ಕಳೆದುವು. ಮಳೆ ಹೊಡೆಯುವುದಕ್ಕೆ ಆರಂಭವಾಯಿತು. ಲಿಂಗಪ್ಪ ತಾಳ್ಮೆ ಕೆಟ್ಟ. ಚಿಕ್ಕ ಧನಿ ನಿಂತಿದ್ದಂತೆಯೇ ಹಿಂದೆ ಸಂಕಕ್ಕೆ ಕಾಲಿಟ್ಟ. ಚಿಕ್ಕ ಧನಿ ಸಿಡಿಮಿಡಿಗೊಂಡು “ಏ! ನಿಲ್ಲಲ್ಲಿ?” ಎಂದು ಆರ್ಭಟಿಸಿದುದೂ ಸುಂಕ ಅಲುಗಾಡಿ ಕೆಳಗೆ ಬಿದ್ದುದೂ ಏಕ ಕಾಲದಲ್ಲಾಯಿತು. ಅಯ್ಯೊ! ಎಂದು ಕಿಟ್ಟಣ್ಣ ತೋಡಿಗೆ ಬಿದ್ದ. ಲಿಂಗಪ್ಪ ತಟ್ಟನೆ ಜೂಲು ನಾಯಿಯಂತೆ ಕೆಳಗೆ ಹಾರಿ ಅವನನ್ನು ಎಬ್ಬಿಸಿ ಮೇಲಕ್ಕೆ ತಂದ. ಕೊಚ್ಚಿಕೊಂಡು ಹೋಗುವಷ್ಟು ಪ್ರವಾಹವಿರಲಿಲ್ಲ. ತನ್ನ ದೋಷದಿಂದ ತಾನು ಬಿದ್ದೆನೆಂದೂ ಲಿಂಗಪ್ಪ ಎತ್ತಿದನೆಂದೂ ಹೇಳುವುದಾದರೂ ಹೇಗೆ? ಸಂಕದಲ್ಲಿ ಬರುತ್ತಿದ್ದಾಗ, ಲಿಂಗಪ್ಪ ಹಿಂದಿನಿಂದ ದೂಡಿದ; ತಾನು ಬಿದ್ದು ಬದುಕಿ ಬರುವುದೇ ಕಷ್ಟವಾಯಿತೆಂದು ಕಿಟ್ಟ ತಂದ ವಾರ್ತೆಯನ್ನು ಕೇಳಿ ನಾಯಕರು ರೋಷಾವೇಶದಿಂದ ಅಳೆತ್ತರ ನೆಗೆದು – ಶೀನಪ್ಪಯ್ಯ ಮಾಸ್ತರರೇನು ಬದುಕಿದ್ದಾರೆಯೇ? ಸತ್ತಿದ್ದಾರೆಯೇ? ಎಂದು ಗರ್ಜಿಸಿದರು.

ಶೀನಪ್ಪಯ್ಯನವರು ಖಂಡಿತವಾಗಿಯೂ ಸತ್ತಿರಲಿಲ್ಲ. ಸಜೀವವಾಗಿಯೇ ಇದ್ದರು. ಮರುದಿನ ಶಾಲೆಗೆ ಬರುವ ಮುಂಚೆಯೇ ಕಿಟ್ಟಣ್ಣನಿಗೆ ಲಿಂಗಪ್ಪ ಮಾಡಿದ ಘೋರ ಹಿಂಸೆಯ ಕತೆ ಅವರ ಕಿವಿಗೆ ತಲುಪಿತ್ತು. ಆ ದಿನ ಅರ್ಧ ಗಂಟೆಗೆ ಮುಂಚಿತವಾಗಿಯೇ ಶಾಲೆಗೆ ಬಂದಿದ್ದರು; ದೂರದಿಂದ ಬರುತ್ತಿದ್ದಾಗಲೇ ಲಿಂಗಪ್ಪನನ್ನು ಕಂಡು, ಹಳೆಯ ಪೆಟ್ಟಿಗೆಯೊಂದರಲ್ಲಿದ್ದ ನಾಲ್ಕು ಬೆತ್ತಗಳನ್ನು ಹೊರ ತೆಗೆದು ಮೇಜಿನ ಮೇಲೆ ಇಟ್ಟುಕೊಂಡರು. ಕಣ್ಣಿನಿಂದ ಕಡಿದು ತಿನ್ನುವಂತೆ ಲಿಂಗಪ್ಪನನ್ನು ನೋಡುತ್ತಲೇ ಇದ್ದರು. ಅವನು ಬಂದು ತನ್ನ ಸ್ಥಳಕ್ಕೆ ಹೋಗುವ ಮುಂಚೆಯೇ “ಏ ಮುಟ್ಠಾಳ! ಇಲ್ಲಿಗೆ ಬಾರೋ” ಎಂದು ಶೀನಪ್ಪಯ್ಯನವರು ಕರೆದು. ಲಿಂಗಪ್ಪ ಸಮೀಪಕ್ಕೆ ಬಂದ. ‘ಹಿಡಿಕೈ’ ಎಂದರು. ‘ಯಾಕೆ?’ ಎಂದು ಕೇಳಿದ ಲಿಂಗಪ್ಪ. “ತೊತ್ತಿನ ಮಗನೆ! ಯಾಕೆ ಎಂದು ಕೇಳುತ್ತೀಯ? ಧನಿಗಳಲ್ಲಿ ತಿಂದ ಅನ್ನ ಸೊಕ್ಕಿದೆ” ಎನ್ನುತ್ತ ಮತ್ತೂ ಬೆನ್ನಿಗೆ ಬಲವಾಗಿ ಹೊಡೆದರು. ಲಿಂಗಪ್ಪನ ಮೈಮೇಲೆ ಪೆಟ್ಟಿನ ಮಳೆ ಸುರಿದುದಲ್ಲದೆ ಮತ್ತೇನೂ ತಿಳಿಯಲಿಲ್ಲ. “ದಮ್ಮಯ್ಯ ಮಾಸ್ತರರೇ ನಾನೇನು ತಪ್ಪು ಮಾಡಲಿಲ್ಲ. ಯಾಕೆ ನನಗೆ ಹೊಡೆಯತ್ತೀರಿ?” ಎಂದು ಲಿಂಗಪ್ಪ ಮಾಸ್ತರರ ಕೈಯನ್ನು ಬಲವಾಗಿ ಹಿಡಿದುಕೊಂಡ. ಇದು ಮತ್ತೂ ದೊಡ್ಡ ಅಪರಾಧ. ನಾಯಕರ ಮಗನನ್ನು ಹಿಂದಿನ ಸಾಯಂಕಾಲ ತೋಡಿಗೆ ತಳ್ಳಿದುದಲ್ಲದೆ, ಇಂದು ಮಾಸ್ತರರ ಮೇಲೆಯೂ ಕೈ ಮಾಡುತ್ತಾನೆ! ಎನ್ನುತ್ತಾ ಶೀನಪ್ಪಯ್ಯನವರು “ಇವನನ್ನು ಪಿಚಂಡಿ ಬಿಗಿಯಿರೋ!” ಎಂದು ಕೂಗಿದರು. ಹೆಚ್ಚಿನ ಮಕ್ಕಳು ಹೊರಗೆಯೇ ನಿಂತು ಈ ದೃಶ್ಯವನ್ನು ನೋಡುತ್ತಿದ್ದರು. ಎರಡನೆಯ ಮಾಸ್ತರ್ ರಾಮಣ್ಣನವರು ಒಂದು ಹುರಿ ಹಗ್ಗವನ್ನು ತಂದರು. ಕೈಯನ್ನು ಪಿಚಂಡಿ ಬಿಗಿದ ಕೆಲಸ ಸಾಂಗವಾಗಿ ಜರುಗಿತು.

ಏನೂ ಅಪರಾಧ ಮಾಡದೆ ಇಂತಹ ಶಿಕ್ಷೆ ಯಾಕೆ? ತಾನೂ ಮನುಷ್ಯನಲ್ಲವೆ? ಎಂದು ಲಿಂಗಪ್ಪನಿಗೂ ತೋರಿರಬೇಕು. ಅವನು ಒದ್ದಾಡಿದ. ಪ್ರಯೋಜನವಾಗಲಿಲ್ಲ. ಎಲ್ಲರ ಮುಂದೆ ಚರ್ಮ ಸುಲಿಯುವುದು ಬೇಡವೆಂದೇನೋ, ಶಾಲೆಯಲ್ಲಿದ್ದ ಒಂದೇ ಒಂದು ಕತ್ತಲೆ ಕೋಣೆಗೆ ಲಿಂಗಪ್ಪನನ್ನು ಒಯಿದು ಕೊಂಡುಹೋದರು. ಅವನು ಹೋಗಲೊಪ್ಪಲಿಲ್ಲ. ಒಬ್ಬ ಉಪಾಧ್ಯಾಯರು ಒಳಗೆ ನಿಂತು ಎಳೆದರು; ಇನ್ನೊಬ್ಬರು ಬಲವಾಗಿ ದೂಡಿ ಕೋಣೆಯೊಳಗೆ ತಳ್ಳಿದರು, ಬಹಿರಂಗವಾಗಿ ಕೊಡದಿದ್ದ ಶಿಕ್ಷೆಯನ್ನು ಕತ್ತಲೆ ಕೋಣೆಯೊಳಗೆ ಕೊಟ್ಟರು. ಅನಂತರ ಕೋಣೆಯ ಬಾಗಿಲು ಬಿಗಿದು ಪಾಠವನ್ನು ಆರಂಭಿಸಲಾಯಿತು. ಲಿಂಗಪ್ಪ ಒಂದೆರಡು ಬಾರಿ ಉಚ್ಚಧ್ವನಿಯಲ್ಲಿ ಅಯ್ಯೋ! ಎಂದು ಕೂಗಿದ್ದ. ಇದೇನೂ ಆಶ್ಚರ್ಯವಲ್ಲ. ಹೆಚ್ಚಿನ ಶಾಲೆಗಳಲ್ಲಿಯೂ ಬೆತ್ತದ ಭಯವೇ ಜ್ಞಾನದ ಆರಂಭ! ಶಾಲೆಯ ಹೊರಗೆ ಹೋಗುತ್ತಿದ್ದವರು – “ಇದರಲ್ಲೇನೂ ಹೊಸತಿಲ್ಲ” ಎಂದು ಭಾವಿಸಿ ಯಾವ ಗೊಡವೆಯೂ ಇಲ್ಲದೆ ಹೊರಗಿನಿಂದ ಹೊರಗೇ ದಾಟಿ ಹೋದರು. ಮಕ್ಕಳಿಗೆ ಆ ದಿನ ಉಪಾಧ್ಯಾಯರಲ್ಲಿ ವಿಶೇಷ ಭಕ್ತಿ, ಭಾವವಿತ್ತು. “ಇಂದು ಲಿಂಗಪ್ಪನ ಸರತಿ! ಇನ್ನು ಯಾವಾಗ ನಮ್ಮದೋ” ಎಂದು ಹೆದರಿ ತಮ್ಮ ತಮ್ಮ ಪಾಠ ಪ್ರವಚನದಲ್ಲಿಯೇ ಮಗ್ನರಾಗಿದ್ದರು.

ಪಾಠಗಳ ಮಧ್ಯೆದಲ್ಲಿಯೂ ಶೀನಪ್ಪಯ್ಯನವರು, ಕೆಲಬಾರಿ ನರಳುವ ಶಬ್ದಕೇಳಿ ಕೋಣೆಯ ಬಾಗಿಲು ತೆರೆದು ಒಳಗೆ ಹೋಗಿ ಹೊರಗೆ ಬಂದರು. ಕೋಪದಿಂದ ಕದಡಿಹೋಗಿದ್ದ ಅವರ ಮುಖಭಾವ ಶುದ್ಧವಾಗಿರದ ಕಾರಣ ಒಳಗೆ ಹೊರಗೆ ಹೋಗುತ್ತಾ ಬರುತ್ತಾ ಇದ್ದ ಅವರ ಮನಸ್ಸಿನಲ್ಲಿ ಏನಿತ್ತು ಎಂದು ಯಾರಿಗೂ ತಿಳಿಯಲಿಲ್ಲ. ಹೀಗಿದ್ದರೂ ಏನೋ ಒಂದು ಭಯ, ಏನೋ ಒಂದು ಅಶಾಂತಿ ಇದ್ದಿತೆನ್ನುವುದರಲ್ಲಿ ಸಂದೇಹವಿರಲಿಲ್ಲ. ಆ ದಿನ ಅರ್ಧ ಘಂಟೆಗೆ ಮುಂಚೆಯೇ ಪಾಠ ಮುಗಿದು ಘಂಟೆ ಹೊಡೆಯಿತು. ಮಧ್ಯಾಹ್ನ ರಜೆಯಿರುವುದಾಗಿಯೂ ತಿಳಿಸಲಾಯಿತು. ಕಟ್ಟವನ್ನೊಡೆದು ಹರಿಯುವ ಪ್ರವಾಹದಂತೆ ಮಕ್ಕಳು ನಾಲ್ಕು ದಿಕ್ಕಿಗೆ ಚೆದರಿ ಓಡಿಹೋದರು!

5

ಸೋಮಪ್ಪನಿಗೆ ಆ ದಿನ ಮನಸ್ಸಿಗೇನೋ ಮಂಕು ಹಿಡಿದಂತಿತ್ತು. ಯಾವ ಕೆಲಸಕ್ಕೂ ಮನಸ್ಸು ಒಗ್ಗುವುದಿಲ್ಲ. ತನ್ನ ಜೀವನದಲ್ಲಿ ಇಂತಹ ಜಾಡ್ಯ ಹಿಡಿದುದು ಅವನಿಗರಿಯದು. ಮಧ್ಯಾಹ್ನ ಕೆಲಸವಿಟ್ಟು ಬಂದವನು ಕೆಲಸಕ್ಕೆ ಹೋಗಲೇ ಇಲ್ಲ. ಹುಡುಗ ಬರುವ ಹೊತ್ತಾಯಿತು. ಬರಲಿಲ್ಲ! ಇದರಿಂದ ಮತ್ತಷ್ಟು ವ್ಯಥೆ ಹೆಚ್ಚಿತು. ಏಕೆ ಬರಲಿಲ್ಲ? ಶಾಲೆಯವರೆಗೆ ಹೋಗಿಬರೋಣವೆ? ಎಂದು ತೋರಿತು. ಅದೂ ತಪ್ಪಾದೀತು. ಶೀನಪ್ಪಯ್ಯ ಒಳ್ಳೆಯ ಕರುಣಾಳು. ಅವರ ಶಾಲೆ ಅದು. ಅವರ ಶಿಷ್ಯ ಲಿಂಗಪ್ಪ ಸಕಾಲದಲ್ಲಿ ಹುಡುಗ ಮನೆಗೆ ಬರಲಿಲ್ಲವೆಂದು ಹುಡುಕುತ್ತಾ ಹೋದರೆ ಶೀನಪ್ಪಯ್ಯನವರನ್ನು ಅಪಮಾನಿಸಿದಂತಾಗಲಿಲ್ಲವೆ? ಇದಕ್ಕಿಂತಲೂ ದೊಡ್ಡ ಚಿಂತೆ ನಿನ್ನೆ ನಡೆದ ಸಂಗತಿಯದು. ಲಿಂಗಪ್ಪ ಕಿಟ್ಟನನ್ನು ತೋಡಿಗೆ ದೂಡಿ ಹಾಕಿದನಂತೆ. ಲಿಂಗಪ್ಪ ತಾನು ಹಾಗೆ ಮಾಡಿಲ್ಲ ಎನ್ನುತ್ತಾನೆ. ಧನಿಗಳ ಮನೆಯವರು ಅವನೇ ತಪ್ಪುಗಾರನೆಂದು ಹೇಳುತ್ತಾರೆ. ತಪ್ಪು ಯಾರದೂ ಇರಲಿ, ಏನೇ ಆಗಿರಲಿ ಅದರ ಪರಿಣಾಮವನ್ನು ಅವನೇ ಅನುಭವಿಸಬೇಕಾಗಿತ್ತು. ಇದನ್ನೆಲ್ಲಾ ಯೋಚಿಸಿ ಸೋಮಪ್ಪನಿಗೆ ಹುಚ್ಚು ಹಿಡಿದಂತಾಯಿತು.ಒಮ್ಮೆ ಮನೆಯೊಳಗೆ ಹೋಗುತ್ತಾನೆ. ಒಮ್ಮೆ ಹೊರಗೆ ಬರುತ್ತಾನೆ. ಕೊನೆಗೆ ಹೀಗೆ ಗುರಿಯಿಲ್ಲದೆ ಓಡಾಡಿ ಬೇಸತ್ತು ಮನೆಯ ಮುಂಗಡೆಯಲ್ಲಿ ಎತ್ತರವಾದ ನೆಲದಲ್ಲಿ ತಾನೇ ಕಟ್ಟಿದ ಅಶ್ವತ್ಥದ ಕಟ್ಟೆಯ ಮೇಲೆ ಮರಕ್ಕೆ ಬೆನ್ನೊರಗಿಸಿ ಮಗನು ಬರುವ ದಾರಿಯಲ್ಲೆ ಕಣ್ಣಿಟ್ಟುಕೊಂಡು ಮನಸ್ಸನ್ನು ಆಲೋಚನೆಗೆ ಬಿಟ್ಟುಕೊಟ್ಟಿದ್ದಾನೆ.

ಧನಿಗೆ ಸಿಟ್ಟಾಗಿರಬಹುದೆ? ಸಿಟ್ಟಾದರೆ, ತಾನೀ ಮನೆಯನ್ನು ಬಿಡಬೇಕಾಗುವುದೇ? ಎನ್ನುವುದಕ್ಕೆ ಮೊದಲು ಉತ್ತರಬೇಕಾಗಿತ್ತು. ಸೋಮಪ್ಪ ಇಂದು ನಿನ್ನೆಯ ಜನವಲ್ಲ. ಅವನ ಪೀಳಿಗೆ ಇಂದು ನಿನ್ನೆಯದಲ್ಲ. ಅವನು ಊರಲ್ಲಿ ಹುಟ್ಟಿದ ಸಸಿಯಲ್ಲ. ತಂದು ನಟ್ಟು ಸಾಕಿದ ಸಸಿ. ಹಲವು ತಲೆ ಮೊರೆಯಿಂದ ಅಲ್ಲಿಯೆ ಬಾಳಿ ಬಂದ ಸಂಸಾರ ಅವನದು. ಅವನಿಂದಲಾದರೂ ಏನೆಲ್ಲ ಕೆಲಸ ನಡೆದಿಲ್ಲ! ನಾಯಕರ ಮತ್ತು ಅವರ ಮನೆಗದ್ದೆ ಹೊಲಗಳ ಚಿಕ್ಕ ಚರಿತ್ರೆಯನ್ನು ಯಾರಾದರೂ ಬರೆದಲ್ಲಿ , ಮುಕ್ಕಾಲುಪಾಲು ಅವನ ಸಾಹಸ ಕೃತಿಗಳಿಂದಲೆ ತುಂಬಿಹೋದೀತು. ನಾಯಕರು ಚಿಕ್ಕವರಾಗಿದ್ದರು. ಆಗ ಒಮ್ಮೆ ಗದ್ದೆಯ ಬಿಳಿಯ ನೀರ ಗುಂಡಿಗೆ ಬಿದ್ದಿದ್ದರು. ಆಳವಾದ ಹೊಂಡ; ಇಳಿಯುವ ಧೈರ್ಯ ಯಾರಿಗೂ ಇರಲಿಲ್ಲ. ಉಳಿದವರು ಗಂಟಲೊಯುವಷ್ಟು ಬೊಬ್ಬೆ ಹೊಡೆದರಲ್ಲದೆ ಮತ್ತೇನನ್ನೂ ಮಾಡಲಿಲ್ಲ. ಚಿಕ್ಕ ಹುಡುಗನಾಗಿದ್ದರೂ, ಧೊಪ್ಪನೆ ಹಾರಿ ತೇಲಿ ಮುಳುಗುತ್ತಿದ್ದ ನಾಯಕರನ್ನು ಹಿಡಿದು ಮೇಲೆತ್ತಿ ತಂದವನು ಸೋಮಪ್ಪ. ನಾಯಕರ ಮನೆಯ ಮುಖಮಂಟಪವನ್ನು ಕಟ್ಟುತ್ತಿದ್ದಾಗ ತೊಲೆಯೊಂದನ್ನು ಮೇಲಕ್ಕೇರಿಸಲಾರದೆ ದಡಿಗ ಆಳುಗಳೆಲ್ಲ ಬೆವರು ಸುರಿಸುತ್ತಿದ್ದರು. ಸೋಮಪ್ಪ ಹೆಗಲು ಕೊಟ್ಟುದೇ ತಡ. ಹಗುರ ಗರಿಯಂತದು ಮೇಲೇರಿತು!

ಅವನು ನೇಗಿಲು ಹಿಡಿದು ಒಂದು ಸಾಲನ್ನಾದರೂ ಉಳದಿದ್ದರೆ ನಾಯಕರ ಗದ್ದೆಯಲ್ಲಿ ಆಗಬೇಕಾದ ಬೆಳೆ ಆಗದು. ಅವನ ಹೆಂಡತಿ ಕೆಂಚಿಯ ಓಬೇಲೆಯನ್ನು ಕೇಳದೆ ಬತ್ತದ ಸಸಿಯಲ್ಲಿ ತನೆ ತುಂಬದು. ಕಣ್ಣಿಗೆ ಕಾಣದಷ್ಟು ವಿಸ್ತಾರವಾದ ಹೊಲದಲ್ಲಿ ಅವನ ಕೈವಾಡವನ್ನು ಕಂಡು ಮೆಚ್ಚದವರಾರು? ಗದ್ದೆಯಂಚುಗಳಲ್ಲಿ ನೆಟ್ಟ ತೆಂಗಿನ ಸಾಲು; ತೋಟದಲ್ಲಿ ಉರಿದ ಸಸಿಬಾಳೆ; ಗುಡ್ಡದ ಬದಿಯಲ್ಲಿ ಕುಳಿ ಮಾಡಿ ಇಟ್ಟ ಹಲಸು; ಮಾವಿನ ಗಿಡಗಳು; ಅಗೆದ ಅಗಳು; ತೋಡಿದ ಕೆರೆ ಬಾವಿ; ಎಲ್ಲದರಲ್ಲಿಯೂ ಅವನ ಕೈಗುಣ; ಎಲ್ಲದರಲ್ಲಿಯೂ ಅವನ ಕರ್ತೃತ್ವ; ಎಲ್ಲದರಲ್ಲಿಯೂ ಅವನ ಶ್ರಮ! ಅವನ ಬಾಳು ಬೇರೆ – ಈ ಹೊಲದ ಸೊಗಸು ಬೇರೆ ಎಂದು ಹೇಳುವ ಧೈರ್ಯ ಯಾರಿಗೆ? ಸೋಮಪ್ಪನಿಗಂತೂ ಅವುಗಳ ಸಮೀಪಕ್ಕೆ ಹೋದರೆ ಲೋಕವೇ ಇಲ್ಲವೆಂದಾಗುವುದು. ಸ್ಮರಿಸಿದರೆ ಸಾಕು; ಸಕಲ ದುಃಖಗಳೂ ಮರೆತು ಹೋಗುವುವು. ತನಗೂ ಈ ಹೊಲಕ್ಕೂ ಅಭೇದ ಸಂಬಂಧ. ತನ್ನ ಗೈಮೆಯಿಲ್ಲದೆ ತೆಂಗಿನ ಸಸಿಯಲ್ಲಿ ಹೇಗೆ ಕೊಂಬು ಹೊಡೆದೀತು? ಹಲಸು ಹೇಗೆ ಕಳ್ಳಿಕೆ ಬಿಟ್ಟೀತು? ಮಾವು ಹೇಗೆ ಚಿಗುರೀತು ದ ಹೀಗೆಲ್ಲ ಯೋಚನೆ ಬಂದಾಗ ಧನಿಗೆ ತನ್ನ ಮೇಲೆ ಸಿಟ್ಟಾದರೂ ಎಬ್ಬಿಸುವ ಮನಸ್ಸು ಬಾರದೆಂದೆ ನಂಬಿಕೆ ಹುಟ್ಟುವುದು. ಒಂದು ವೇಳೆ ಕಷ್ಟವೇ ಬಂತೆನ್ನೋಣ. ಧನಿಗಳು ಹೊಡೆಯಲಿ, ಬಡಿಯಲಿ, ಗುಂಡು ಕಲ್ಲಿನಂತೆ ಬಿದ್ದುಕೊಂಡರಾಯಿತು. ಕೋಣಗಳನ್ನು ತೊಳೆಯುವಾಗ ಅವುಗಳ ಮೈಗೆ ಅಂಟಿಕೊಳ್ಳುವ ಉಣ್ಣೆಗಳಿಂದ ಅವನು ಪಾಠ ಕಲಿತಿದ್ದಾನೆ. ಎಷ್ಟು ಉಜ್ಜಿದರೂ ಅವು ಕಚ್ಚಿದ ಕಡಿತವನ್ನು ಬಿಡುವುದಿಲ್ಲ. ಹಾಗೆ ಧನಿಯೇನು ಮಾಡಿದರೂ ಕದಲದಿದ್ದರಾಯಿತು. ಒಂದು ವರ್ಷ ಹೋಗುತ್ತದೆ, ಎರಡು ವರ್ಷ ಹೋಗುತ್ತದೆ. ದೇವರು “ಬಿಸಾಡಿ” ಹೋದರೆ, ಲಿಂಗಪ್ಪ ಕಲಿತು ಗಟ್ಟಿಗನಾಗುತ್ತಾನೆ. ಕೈ ಬಾಯಿಗೆ ಹೋಗುವಷ್ಟು ಸಂಪಾದನೆ ಮಾಡಲು ಶಕ್ತನಾಗುತ್ತಾನೆ. ಆಗ ಒಂದು ವೇಳೆ, ಇಚ್ಚೆಗೆ ವಿರುದ್ಧವಾಗಿ ಬುಡ ಕೀಳಬೇಕಾಗಿ ಬಂದರೂ, ಲಿಂಗಪ್ಪನ ಹೆಗಲ ಮೇಲೆ ಕೈಯಿಟ್ಟು ಅವನು ಕರೆದೊಯ್ಯುವಲ್ಲಿಗೆ ಹೋದರಾಯಿತು! ಅಶ್ವತ್ಥದ ಕಟ್ಟೆಯಲ್ಲಿ ಕುಳಿತು ಸುತ್ತಲೂ ಕಣ್ಣು ಹಾಯಿಸುವಾಗ ತನ್ನ ಮತ್ತು ಧನಿಗಳ ಸಂಬಂಧ ಅಭೇದ್ಯವಾದುದೆಂಬ ಅರಿಕೆಯಾಗಿ, ಒಮ್ಮೆ ಆನಂದ ಸಾಮ್ರಾಜ್ಯದಲ್ಲಿ ಅಲೆದಾಡಿದಂತಾಯಿತು!

ಕುಳಿತಲ್ಲೇ ಕುಳಿತು ಸೋಮನಿಗೆ ಸಮಯ ಕಳೆದುದು ತಿಳಿಯಲಿಲ್ಲ. ಸಂಜೆ ಆಯಿತು; ಆಗಿದೆ! ನೆರಳು ಉದ್ದುದ್ದವಾಗಿ ಎಲ್ಲಾ ಕಡೆಗಳಲ್ಲಿಯೂ ಕತ್ತಲಿಸುತ್ತಿದೆ. ಹಸುಗಳು ಹೊಲಬಿಟ್ಟು ಮರಳಿವೆ; ಹಕ್ಕಿಗಳು ಗೂಡನ್ನು ಸೇರಿವೆ. ಮನುಷ್ಯ ಸಂಚಾರ ಕಡಿಮೆಯಾಗುತ್ತಿದೆ. ದೂರದೂರದಲ್ಲಿ ಯಾರೋ ಯಾರನ್ನೋ ಕರೆಯುವ ಒಂದೊಂದು ಧ್ವನಿ ಅಲೆಯಾಗಿ ಮಾತ್ರ ಕಿವಿಯನ್ನು ಹೊಡೆಯುತ್ತಿದೆ. ಇತರರಲ್ಲಿ ಕರೆಯುವವರೂ ಇದ್ದಾರೆ. ಕರೆಯಿಸಿಕೊಳ್ಳುವವರೂ ಇದ್ದಾರೆ ! ಈ ಬಡ ಕುಟುಂಬದಲ್ಲಿ ಮಾತ್ರ ಅಂಥವರು ಯಾರೂ ಇಲ್ಲವೆ? ಅನ್ಯಾಯವಿದು. ಲಿಂಗಪ್ಪ ಇನ್ನೂ ಬರಲಿಲ್ಲ. ಹುಡುಕಲೇ ಬೇಕು; ಕೂಡಲೇ ಹೊರಡಬೇಕು; ಎಂದು ತಟ್ಟನೆ ಎದ್ದುನಿಂತು ಸೋಮಪ್ಪ ದಾರಿಯ ಕಡೆಗೆ ಕಣ್ಣಿಟ್ಟು ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ದೂರದಲ್ಲಿ ಯಾರೋ ಬರುತ್ತಿದ್ದಂತೆ ತೋರಿತು; ಹೌದು ಛಾಯೆಯೊಂದು ಬಂದ ಹಾಗೆ ತೋರಿತು. “ಒಂದಲ್ಲ ಎರಡು ನೆರಳುಗಳು … ಮೆಲ್ಲಮೆಲ್ಲನೆ ಬರುತ್ತಿವೆ; ಹೌದು ಬಲು ಮೆಲ್ಲನೆ! ಆಯಾಸದಿಂದ ಬರುವಂತೆ ಬರುತ್ತಿವೆ. ಆಯಾಸವೇಕೆ? ಬರುವವರು ಯಾರು? ಇಬ್ಬರ ನಡುವೆ ಏನೋ ಒಂದು ಭಾರವಾದ ವಸ್ತು ತೊನೆಯುವಂತೆ ತೋರುತ್ತಿದೆಯಲ್ಲ ! ಸ್ವಲ್ಪ ಹತ್ತಿರಕ್ಕೆ ಬರುತ್ತಾರೆ. ಕತ್ತಲೆಯ ಮರೆಯಲ್ಲಿಯೂ ಒಂದು ಮುಖದ ರೇಖೆ ಎದ್ದು ಕಾಣಿಸುತ್ತದೆ. ಇದು ಯಾರು? ಶೀನಪ್ಪಯ್ಯ ಮಾಸ್ತರು! ಅವರು ಒಬ್ಬರೇ ಅಲ್ಲ ! ಹಿಂದೆ ರಾಮಣ್ಣನವರೂ ಇದ್ದಂತೆ ತೋರುತ್ತದೆ. ಇವರು ಏನನೋ ಎತ್ತಿಕೊಂಡು ಬರುತ್ತಿದ್ದಾರೆ. ಏನನ್ನು ? ಮರದ ತುಂಡಿನಂತಹ ಜಡವಸ್ತುವನ್ನಲ್ಲ ! ಜಡ ಪದಾರ್ಥವಾಗಿದ್ದರೆ ಇಷ್ಟೇಕೆ ಜತನ! ಶಾಲೆಬಿಟ್ಟು ಎಷ್ಟೋ ಹೊತ್ತಾಯಿತು. ಮಕ್ಕಳೆಲ್ಲ ಮನೆ ಸೇರಿ ತಮ್ಮ ತಾಯಿ ತಂದೆಗಳ ಪಕ್ಕದಲ್ಲಿ ದಿನದ ಸಂಗತಿಯನ್ನು ಹೇಳುತ್ತ ಕುಳಿತಿರಬಹುದು. ಬೇರೆ ಮಕ್ಕಳು ಹೇಗೋ …. ತನ್ನಮಗ ಲಿಂಗಪ್ಪ ಹಾಗೆ ಮಾಡದಿರುತ್ತಿರಲಿಲ್ಲ. ಇಂದು ಇದುವರೆಗೂ ಅವನೊಬ್ಬನೇ ಮನೆಗೆ ಬರಲಿಲ್ಲ. ಏಕೆ? ಅವನಿಗೆ ಏನಾದರೂ ಆಗಿರಬಹುದೆ? ಸಜೀವ ಪ್ರಾಣಿಯಂತೆ ತೋರುತ್ತದಲ್ಲ ಅವರು ಹೊರುವ ವಸ್ತು! ಲಿಂಗಪ್ಪನಲ್ಲವಷ್ಟೆ! ದೇವರೇ! ಲಿಂಗಪ್ಪನಿಗೆ ಕೇಡು ಬಾರದಿರಲಿ! ಮಾಸ್ತರ್ ಶೀನಪ್ಪಯ್ಯನ ಮುಖ ಸ್ಪಷ್ಟವಾಗುತ್ತಿದೆ. ಹಿಂದೆ ರಾಮಣ್ಣಯ್ಯ….ಇಬ್ಬರ ಹೆಜ್ಜೆಗಳೂ ಮನೆಯ ಕಡೆಗೇ ತಿರುಗುತ್ತಿವೆ. ನಡುವೆ ಜೋತಾಡುವ ದೇಹ ಲಿಂಗಪ್ಪನದು ಅಲ್ಲವೆಂದು ಯಾರು ಹೇಳಿದರು? ಅದೇ ಮುಖ, ಅದೇ ಕಣ್ಣು , ಅದೇ ಬಾಯಿ, “ಅಯ್ಯೊ! ಲಿಂಗಪ್ಪ ನಿನಗೇನಾಯಿತು! ಮಗು?” ಎನ್ನುತ್ತಾ ಸೋಮ ಬರುವವರಿಗೆ ಇದಿರಾಗಿ ಓಡಿದ.

“ಸಮಾಧಾನ! ಸಮಾಧಾನ!” ಎಂದು ಎರಡು ಕಂಠಗಳು ಗಂಭೀರವಾಗಿ ಕೂಗಿದವು.

ಸೋಮಪ್ಪ ಹೋಗಿ ಲಿಂಗಪ್ಪನ ಶರೀರವನ್ನು ಎತ್ತುವುದಕ್ಕೆ ಪ್ರಯತ್ನಿಸಿದ. “ಬೆಳಿಗ್ಗೆ ಶಾಲೆಗೆ ಹೋಗುವಾಗ ಹೇಗಿದ್ದೆ ಮಗು! ಈಗ ಏನಾದೆ?’ ಎಂದು ಹಲುಬುವುದಕ್ಕೆ ತೊಡಗಿದ ಸೋಮಪ್ಪ.

“ಸಮಾಧಾನ! ಗಾಬರಿಗೆ ಕಾರಣವಿಲ್ಲ !” ಎಂದರು ಶೀನಪ್ಪಯ್ಯನವರು…

“ಇವನ ಬಾಯಿಯಿಂದ ಒಂದು ಮಾತು ಹೊರಡುವುದಿಲ್ಲ ! ನೀವು ಸಮಾಧಾನ ಹೇಳುತ್ತೀರಿ!” ಎಂದು ಬಿರುಸಾದ ಧ್ವನಿಯಲ್ಲಿ ಆಡುತ್ತ ಸೋಮಪ್ಪ ಅವರ ಕೈಯಿಂದ ತನ್ನ ಮಗನನ್ನು ಬಿಡಿಸಬೇಕೆಂದಿದ್ದ. ಆಗ ಕೆಂಚಿಯೂ ಓಡಿಬಂದು ರಾಗವನ್ನು ಸೇರಿಸಿದಳು.

“ಗಡಿಬಿಡಿ ಮಾಡಬೇಡ ಸೋಮ. ಆದುದು ಆಗಿಹೋಯಿತು.” ಎಂದರು ಶೀನಪ್ಪಯ್ಯನವರು.

“ಆದುದು ಏನು ?” ಎಂದು ಇಬ್ಬರೂ ಗಟ್ಟಿಯಾಗಿ ಕೂಗಿ ಮಗನನ್ನು ತಾವೆ ಎತ್ತಿಕೊಂಡರು.

“ಹೆಚ್ಚೇನೂ ಇಲ್ಲ . ಮಧ್ಯಾಹ್ನ ಮನೆಗೆ ಹೊರಟಿದ್ದ . ಶಾಲೆಯ ಪಕ್ಕದ ಬಿದಿರು ಹಿಂಡಿನ ಸಮೀಪಕ್ಕೆ ಬಂದವನೇ ಅಯ್ಯೋ ಎಂದು ಕೂಗುತ್ತಾ ಅಲ್ಲೆ ಬಿದ್ದುಬಿಟ್ಟ” … ತಾಯಿತಂದೆಗಳು ಚಿಕ್ಕ ಮಕ್ಕಳಂತೆ ಅಳುತ್ತಿದ್ದರು.

“ಏನೋ ಸೋಂಕು ತಗಲಿದಂತೆ ತೋರುತ್ತದೆ. ಅಲ್ಲಿ ಈ ಮೊದಲು ಹಾಗಾದುದುಂಟು. ”

“ಹಗಲಲ್ಲೆ?….” ಎಂದು ಸೋಮಪ್ಪ ಸಂದೇಹ ಧ್ವನಿಯಲ್ಲಿ ಪ್ರಶ್ನಿಸಿದ.

“ದೈವ ಮುನಿದರೆ ಹಗಲೆಂದೇನು ರಾತ್ರಿಯೆಂದೇನು?” ಎಂದು ಶೀನಪ್ಪಯ್ಯ ಮಾಸ್ತರರು ಅಂಜುಕುಳಿಯಂತೆ ನಡುಗುವ ಸ್ವರದಲ್ಲಿ ಪ್ರಶ್ನಿಸಿದರು. ಮಾತನ್ನು ನಿಲ್ಲಿಸದೆ ಮುಂದುವರಿಸಿದರು. ಶಾಲೆಗೆ ಬಂದಿದ್ದ ಹುಡುಗನ ಶರೀರವನ್ನು ತಾಯಿತಂದೆಗಳ ವಶಕ್ಕೊಪ್ಪಿಸಿದರೆ ಉಪಾಧ್ಯಾಯರ ಹೊಣೆಗಾರಿಕೆ ತಪ್ಪಿತು. ಆ ಕೆಲಸವನ್ನು ಬೇಗನೆ ಮುಗಿಸೋಣ ಎಂದು ಭಾವಿಸುತ್ತ ಇಬ್ಬರು ಉಪಾಧ್ಯಾಯರೂ ಒಟ್ಟಾಗಿ ಬೋಧಿಸಿದರು. “ಬಹಳ ಜಾಗ್ರತೆಯಿಂದ ಶಾಲೆಗೆ ಎತ್ತಿ ತಂದೆವು; ಬೋಧ ಬರುವುದೋ ಎಂದು ನೋಡಿದೆವು. ನಮ್ಮಿಂದ ಏನೂ ಆಗಲಿಲ್ಲ. ಮಂತ್ರವಾದಿ ಶಿವಣ್ಣನವರಿಂದ ಏನಾದರೂ ಮಾಡಿಸು. ಬೇಕಿದ್ದರೆ ಪರಮೇಶ್ವರಯ್ಯನವರಲ್ಲಿಗೆ ಹೋಗು. ನಾರು ಬೇರುಗಳನ್ನು ಕೊಟ್ಟಾರು. ನಾವೂ ಹೇಳುತ್ತೇವೆ. ವೆಚ್ಚವಿಲ್ಲದೆ ಮದ್ದುಕೊಟ್ಟಾರು. ನಾಲ್ಕು ದಿನಗಳಲ್ಲಿ ಗುಣವಾಗುತ್ತದೆ. ಮತ್ತೇನು? ಗಾಬರಿಗೇನಾಗಿದೆ ?” ಎಂದು ಅವಸರವಾಗಿ ಹೇಳುತ್ತಾ ತಮ್ಮ ಹೆಗಲ ಮೇಲೇರಿದ ಭಾರವೊಂದನ್ನು ಕೆಳಗಿಳಿಸಿದಷ್ಟು ನಿರ್ಭೀತಿಯಿಂದ ಅವರಿಬ್ಬರೂ ಅಲ್ಲಿಂದ ಕಾಲು ಕಿತ್ತರು.

ಶಿವಣ್ಣ ಬಂದ. ಪರಮೇಶ್ವರಯ್ಯನವರ ಬೇರುಗಳು ಬಂದವು. ಶಿವಣ್ಣ ನಾಯಕರು ಸ್ವತಃ ಹುಡುಗನ ಸ್ಥಿತಿಗತಿಯನ್ನು ವಿಚಾರಿಸಬಂದರು. ಒಕ್ಕಲು ಮನೆಯೊಳಗೆ ಆಗಬೇಕಾದ ಶುಶ್ರೂಷೆಯೆಲ್ಲ ನಡೆಯಿತು. ಬರಬೇಕಾದುದೆಲ್ಲ ಬಂತು. ಆದರೆ, ಲಿಂಗಪ್ಪನ ಮುಖದಲ್ಲಿ ಜೀವಕಳೆಯೊಂದು ಬರಲಿಲ್ಲ. ಬೆಳಿಗ್ಗೆ ಮಕ್ಕಳೆಲ್ಲ ಶಾಲೆಗೆ ಹೊರಡುವ ಕಾಲಕ್ಕೆ ಲಿಂಗಪ್ಪನ ಶರೀರದಲ್ಲಿದ್ದ ಪ್ರಾಣವಾಯು ಹೊರಟುಹೋಗಿತ್ತು. ಸೋಮಪ್ಪ ಕೆಂಚಿಯರು ಸ್ವಲ್ಪಕಾಲ ಹೀಗಾದುದನ್ನು ಒಪ್ಪಿಕೊಳ್ಳಲಿಲ್ಲ. ನಾಯಕರು ಬಂದು ತಿಳಿಯಹೇಳಿದ ಮೇಲೆ ಲಿಂಗಪ್ಪನ ಶವಸಂಸ್ಕಾರವನ್ನು ಮಾಡಬೇಕಾಯಿತು. ಸೋಮಪ್ಪನ ಹೃದಯದಲ್ಲಿ ಆಶಾನಿರಾಶೆಗಳ ಮಧ್ಯದಲ್ಲಿ ಬೆಳೆದು ಬಂದಿದ್ದ ಬಯಕೆ ಅಂದು ಸಮೂಲವಾಗಿ ಕಿತ್ತುಹೋಯಿತು. ತಾನು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡಿದ್ದ ಮಗನ ದೊಡ್ಡಸ್ತಿಕೆಯ ಚಿತ್ರ ಉಜ್ಜಿ ಒರಸಿಹೋಯಿತು. ಆ ಹರಕು ಗುಡಿಸಲು ಎಂದಿನಂತೆಯೇ ಅಲ್ಲಿಯೇ ನಿಂತಿದ್ದರೂ ಅದರೊಳಗೆ ಕೆಲವರ್ಷಗಳಿಂದ ಕಳೆಯೇರಿ ಬೆಳಗುತ್ತಿದ್ದ ಜೀವ ಹಾರಿಹೋದ ಕಾರಣ ಎಲ್ಲ ಕಡೆ ಕತ್ತಲೆ, ಮೌನ; ನಿರಾಶೆ!

ಶೀನಪ್ಪಯ್ಯ ಮಾಸ್ತರರು ಅವಿವೇಕ ಮಾಡಿದರೆಂದು ನಾಯಕರು ತಮ್ಮಲ್ಲಿ ತಾವೇ ಉದ್ಗರಿಸಿಕೊಂಡಿರಬಹುದು. ಆ ಒಕ್ಕಲು ಹುಡುಗನ ಬದಲಾಗಿ ಇನ್ನೊಬ್ಬ ಹುಡುಗನಾಗಿದ್ದರೆ ನಮ್ಮ ಅವಸ್ಥೆಯೇನಾಗುತ್ತಿತ್ತು? ಎಂದು ಉಪಾಧ್ಯಾಯರಿಬ್ಬರೂ ತಮ್ಮ ದಶಾನಾಥನನ್ನು ಕೊಂಡಾಡಿರಬಹುದು. ಆದರೆ, ಆ ಮನೆಯೊಳಗೆ ಆಶೆಯನ್ನೂ, ಉತ್ಸಾಹವನ್ನೂ ಪುನಃ ತುಂಬಿಸುವ ದಶೆಯೂ ಬರಲಿಲ್ಲ; ನಾಥವೂ ಇರಲಿಲ್ಲ.

ಒಂದೆರಡು ತಿಂಗಳು ಕಳೆಯಿತು. ಸೋಮಪ್ಪ ಗೈಮೆಗೆ ಬರುವುದಿಲ್ಲ. ಬಾರದಿದ್ದರೇನು? ನಾಯಕರ ಧಾರಾಳ ಮರ್ಜಿ ಅವನನ್ನು ಉಪವಾಸ ಬೀಳಬಿಡುವುದೇ? ಏಕೆ ಬರುವುದಿಲ್ಲ? ಎಂದು ನಾಯಕರು ಕೇಳಲಿಲ್ಲ. ಧನಿಗಳ ಮನೆಯಿಂದ ಪಡಿಯಿಕ್ಕಿ ಬರುತ್ತಿದ್ದಷ್ಟು ಕಾಲ, ಸೋಮಪ್ಪ ತನ್ನ ಕಷ್ಟವನ್ನು ನೆನೆದು ಗೋಳಿಡುವುದಕ್ಕೆ ಆತಂಕವೂ ಬಂದಿರಲಿಲ್ಲ.

ಒಂದು ದಿನ ಸಂಧ್ಯಾಕಾಲ ಲಿಂಗಪ್ಪನ ಒಡಲು ಮಲಗಿದ್ದ ಬೆಟ್ಟು ಗದ್ದೆಯ ಕಡೆಗೆ ಸೋಮಪ್ಪನ ಭಾರವಾದ ಹೆಜ್ಜೆಗಳು ಸಾಗುತ್ತಿದ್ದುವು. ಕಂಕುಳಲ್ಲಿ ಒಂದು ಹೊರೆಯನ್ನು ಇಟ್ಟುಕೊಂಡಂತೆಯೂ ತೋರುತ್ತಿತ್ತು. ಹೆಗಲ ಮೇಲೆ ಹಾರೆಯಿತ್ತು. ಹಿಂದೆ ಮುಂದೆ ಯಾರಾದರೂ ಸುಳಿಯುತ್ತಿದ್ದಾರೋ ಎಂದು ಸ್ತುಲೂ ಕಣ್ಣು ತಿರುಗಿಸಿ ನೋಡುತ್ತಾ ಸೋಮಪ್ಪನ ಆ ಸ್ಥಳಕ್ಕೆ ಬಂದ. ಮೆಲ್ಲಗೆ ಕಂಕುಳಲ್ಲಿದ್ದ ಕಟ್ಟನ್ನು ತೆಗೆದು ಅದನ್ನು ಅಲ್ಲೇ ನೆಲದಲ್ಲಿರಿಸಿದ. ಹಾರೆಯಿಂದ ಚಿಕ್ಕದೊಂದು ಕುಳಿಯನ್ನು ಅಗೆದ. ಆ ಗಂಟನ್ನು ಅದರೊಳಗಿಟ್ಟ. ಅದರ ಮೇಲೆ ಮಣ್ಣು ಕಲ್ಲುಗಳನ್ನು ಅಡಕಿದ. ತಾನು ಹೂಳಿದ ವಸ್ತು ಅದೇ ಆಗಿರಬಹುದೇ? ಎಂಬುದನ್ನು ದೃಢಪಡಿಸುವುದಕ್ಕಾಗಿ ಮತ್ತೊಮ್ಮೆ ಮಣ್ಣು ಕಲ್ಲುಗಳನ್ನು ಅಗೆಯ ತೆಗೆದು ಗಂಟನ್ನು ಮೇಲೆತ್ತಿ ಬಿಚ್ಚಿನೋಡಿ ಮುತ್ತಿಟ್ಟ. ಮೊದಲಿನಂತೆಯೇ ಗಂಟು ಮಾಡಿ, ಅದೇ ಕುಳಿಯಲ್ಲಿಟ್ಟು ಹಿಂದಿನಂತೆಯೇ ಮುಚ್ಚಿದ. ನಸು ಕತ್ತಲಾಗಿದ್ದ ಕಾರಣ ಅವನ ಮುಖವಿಕಾರ ಯಾರಿಗೂ ಗೋಚರಿಸಿರಲಿಲ್ಲ. ಆದರೆ ತಡೆಯಲಾರದೆ ಉಕ್ಕಿ ಹರಿಯುವ ಈ ದುಃಖೋದ್ಗಾರವನ್ನು ಸಮೀಪದಲ್ಲಿ ನಿಂತವರು ಕೇಳಬಹುದಾಗಿತ್ತು.

ಲಿಂಗು! ನೀನಿದ್ದಾಗ ಇದೆಲ್ಲವೂ ಬೇಕಿತ್ತು ಮಗು! ಇನ್ನು ನಮಗೇಕೆ? ಆ ಚೀಲವನ್ನು ಕಂಡರೆ ಅದನ್ನು ಹಿಡಿಯುತ್ತಿದ್ದವನ ನೆನಪಾಗುತ್ತದೆ. ಅದರೊಳಗಿದ್ದ ಪುಸ್ತಕಗಳು ನಿನ್ನೊಡನೆ ಮಾತಾಡುತ್ತಿದ್ದುವಲ್ಲವೆ? ನೀನು ಅವುಗಳೊಡನೆ ಮಾತಾಡುತ್ತಿದ್ದೆಯಲ್ಲವೆ? ನಿನ್ನ ಜೀವವಿತ್ತು ಅವುಗಳಲ್ಲಿ, ನಿನ್ನೊಳಗೆ ಅವುಗಳ ಜೀವವಿತ್ತು … ಮಗು! ನೀನು ಎದ್ದು ಹೋದ ಮೇಲೆ ಅವೇಕೆ ಇರಬೇಕು? ಮಂಗನ ಕೈಯಲ್ಲಿ ಮಾಣಿಕ್ಯವೇಕೆ ಮಗು? ನಿನ್ನನ್ನು ತಿಂದ ನೆಲ ಈ ಗಂಟನ್ನೂ ಕೊಳ್ಳಲಿ! ನಿನ್ನ ಶರೀರ ಮಲಗಿದಲ್ಲಿಯೇ ನಿನ್ನ ತಿಳಿವಿನ ಗಂಟಲೂ ಮಲಗಲಿ. ನಮಗೆ ಅದರ ಮೇಲೆ ಅಧಿಕಾರವೇನು?… ಎಂದು ಗದ್ಗದ ಸ್ವರದಲ್ಲಿ ಅವನಾಡುತ್ತಿದ್ದಾಗ ಯಾರದೋ ಕಾಲ ಸಪ್ಪಳವಾಯಿತು.

ಸೋಮಪ್ಪ ಸ್ವಲ್ಪ ಬೆಚ್ಚಿದವನಂತೆ ಕಂಪಿತನಾದ. ಹತ್ತಿರದಲ್ಲೇ ನಾಯಕರು ನಿಂತಿದ್ದರು. ಎಷ್ಟೋ ತಿಂಗಳಿನಿಂದ ದುಡಿತಕ್ಕೆ ಹೋಗದಿದ್ದರೂ ಅನ್ನ ಕೊಡುತ್ತಿದ್ದ ಧನಿಗಳ ಮುಂದೆ, ತಾನು ಮಹಾಪರಾಧಿಯೆಂಬ ಮನೋಭಾವದಿಂದ ಮುಖ ತಗ್ಗಿಸಿ ನಿಂತಿದ್ದ ಸೋಮಪ್ಪ. ಅವನ ಬಾಯಿಯಿಂದ ಒಂದು ಶಬ್ದವೂ ಹೊರಡಲಿಲ್ಲ.

ನಾಯಕರು ಸಹ ಏನನ್ನೂ ಆಡದೆ ಒಂದೆರಡು ನಿಮಿಷ ಸುಮ್ಮನೆ ನಿಂತಿದ್ದು , ಮತ್ತೆ ನಿಟ್ಟುಸಿರೊಂದನ್ನು ಎಳೆಯುತ್ತಾ “ಆದುದೆಲ್ಲ, ಆಗಿಹೋಯಿತು. ಇನ್ನು ವ್ಯಸನಪಟ್ಟು ಫಲವೇನು ಸೋಮಪ್ಪ?” ಎಂದರು,

“ಹೌದು ಧನಿ!” ಎಂದು ಸೋಮಪ್ಪ ನುಡಿದ.

“ಸಾಯುವವರು ಸಾಯುತ್ತಾರೆಂದು ಬದುಕುವವರು ಸಾಯಲಾಗುವುದೆ?”

“ಇಲ್ಲ ಧನಿ!” ಎಂದ ಸೋಮಪ್ಪ .
“ಇದೆಲ್ಲ ಪ್ರಪಂಚದಲ್ಲಿ ಇರುವುದೇ.”
“ಹೌದು ಧನಿ!” ಎಂದ ಸೋಮಪ್ಪ
“ಎಲ್ಲವನ್ನೂ ಮರೆತುಬಿಡು; ಹೋದವನಿಗಾಗಿ ಗೋಳಿಡಬೇಡ!”
“ಇಲ್ಲ ಧನಿ” ಎಂದ ಸೋಮಪ್ಪ.

“ಹಾಗಾದರೆ ನಾಳೆಯ ಕೆಲಸಕ್ಕೆ ಬಾ. ತೋಟದಲ್ಲಿ ಸಸಿ ನಡುವ ಕೆಲಸ ಹಿಂದೆ ಬಿದ್ದಿದೆ. ಮಳೆ ಮುಗಿಯುತ್ತಾ ಬಂತು. ಇನ್ನಾದರೂ ನೆಡಬೇಡವೇ?” ಎಂದು ನಾಯಕರು ನಯವಾಗಿ ಪ್ರಶ್ನಿಸುತ್ತಾ ಅವನ ಕರ್ತವ್ಯ ಲೋಪವನ್ನು ಉಪಾಯದಿಂದ ಸೂಚಿಸಿದರು.

“ಹೌದು ಧನಿ! ನಾಳೆಯೇ ಬರುತ್ತೇನೆ ; ಸಸಿಗಳನ್ನು ಮಾತ್ರವಲ್ಲ ಈ ಹಳೆಯ ಮರವನ್ನೂ – ಈ ಸೋಮಪ್ಪನ ಶರೀರವನ್ನೂ ನಿಮ್ಮ ನೆಲದಲ್ಲಿಯೇ ನೆಟ್ಟು ಬಿಡುತ್ತೇನೆ – ಒಡೆಯಾ!” ಎಂದು ಸೋಮಪ್ಪ ಬಿಕ್ಕಿ ಬಿಕ್ಕಿ ಅಳತೊಡಗಿದ.

*****

( 1953 )