”ಕನಸಲ್ಲಿ ಬಂದ ಅವಳು ಮರಳಿ ಹೋಗುವಾಗ ನನಗೆ ಎದೆ ನೋವಾದ ಹಾಗೆ ಅನಿಸುತ್ತಿತ್ತು. ನನ್ನದೊಂದು ಪುಪ್ಪುಸ ಕತ್ತರಿಸಿ ಹೋದಂತೆ, ಜೀವನಪೂರ್ತಿ ಜೊತೆಗಿರಬೇಕಾಗಿದ್ದ ಅನುರಾಗವೊಂದು ನಡುವಲ್ಲಿ ನೊಂದುಕೊಂಡು ಕೈ ತಿರುಗಿಸಿ ಹೊರಟು ಹೋದಂತೆ ಅನಿಸಿ ಕನಲಿ ಹೋಗಿದ್ದೆ. ನನ್ನ ಕಥೆ ಹೇಳುವ ಹುಚ್ಚು ನನ್ನ ಪ್ರೇಮಿಸುವ ಹುಚ್ಚಿನಷ್ಟೇ ನೋವಿನದ್ದು ಅನಿಸುತ್ತಿತ್ತು. ಕಥೆ ಹೇಳುವುದು ಮತ್ತು ಕಥೆಗಳನ್ನು ಬರೆಯುವುದು ಸಾಮಾಜಿಕವೋ ರಾಜಕೀಯವೋ ಪ್ರಜ್ಞಾಪೂರ್ವಕವೋ ಆದ ಒಂದು ಕಸುಬಲ್ಲ; ಅದು ಪ್ರೇಮಿಸುವ ಮತ್ತು ಕಾಮಿಸುವ ಹಾಗೇ ಇರುವ ಒಂದು ಪಡೆದುಕೊಳ್ಳುವ ಮತ್ತು ಕಳೆದುಕೊಳ್ಳುವ ಮನೋವ್ಯಾಧಿ ಎಂದೂ ಅನಿಸಲು ಹತ್ತಿತ್ತು”
ಅಬ್ದುಲ್ ರಶೀದ್ ಬರೆದ ಒಂದು ಕಥಾ ಪ್ರಸಂಗ ಈ ಭಾನುವಾರದ ನಿಮ್ಮ ಓದಿಗಾಗಿ.

 

ಕಥೆಗಳನ್ನು ಹೇಳುವುದೆಂದರೆ ನನಗೆ ಬಾಲ್ಯದಿಂದಲೂ ಒಂದು ರೀತಿ ಅನುರಾಗದ ಹಾಗೆ ಬಹಳ ಮೋಹದ ಕೆಲಸ. ಬಹಳ ಇತ್ತೀಚಿನವರೆಗೂ ಅಷ್ಟೇ, ಬೇರೆ ಏನಕ್ಕೋ ಅವರವರ ಕೆಲಸಕ್ಕಾಗಿ ನನ್ನ ಎದುರಿಗೆ ಬಂದು ಕುಳಿತವರೂ ನನ್ನ ಕಥೆಗಳನ್ನು ಕೇಳಲೆಂದೇ ಬಂದವರೆಂದು ತಿಳಿದುಕೊಂಡು ಬಿಡುತ್ತಿದ್ದೆ. ಒಂದು ರಾಗಾಲಾಪನೆಯ ಹಾಗೆ ಅವರಿಗೆ ಕಥೆಗಳನ್ನು ಬಣ್ಣಿಸುತ್ತಾ ಹೇಳುವುದು ದೈವ ನನಗೆ ವಿಧಿಸಿರುವ ಅಣತಿಯೆಂದೇ ಅಂದುಕೊಂಡು ಗಂಟೆಗಟ್ಟಲೆ ಅವರಿಗೆ ಕಥೆ ಹೇಳುತ್ತಾ ಕುಂತಿರುತ್ತಿದ್ದೆ ಅಥವಾ ಮಲಗಿರುತ್ತಿದ್ದೆ. ಕಥೆಗಳನ್ನು ಹೇಳುವಾಗ ಉಯ್ಯಾಲೆಯಂತೆ ಚಲಿಸುವ ನನ್ನ ಮಿದುಳೊಳಗಿನ ಚಕ್ರದಂತಹ ಆ ನೆನಪ ಚಿತ್ರಗಳು, ಆ ಹೊತ್ತಿನ ಆ ಒನಪುಗಳು, ಆ ವಯ್ಯಾರಗಳು ನನಗೆ ಅನುಪಮವಾದ ಸುಖ ಸಂತೋಷಗಳನ್ನು ನೀಡುತ್ತಿದ್ದವು. ನನ್ನ ಸಣ್ಣ ಪುಟ್ಟ ಸೋಲುಗಳನ್ನು ಕಥೆಗಳೊಳಗಿನ ಅನಿರೀಕ್ಷಿತ ತಿರುವುಗಳ ಮೂಲಕ ಮರೆಮಾಚಿ ಹೇಳುವುದು,ನನ್ನ ಪುಟ್ಟ ಪುಟ್ಟ ಗೆಲುವುಗಳನ್ನು ಹೇಳಲು ಸಂಕೋಚವಾಗಿ ಇದ್ದಕ್ಕಿದ್ದಂತೆ ನಿಲ್ಲಿಸಿ ಇನ್ನೊಂದು ಕತೆಯತ್ತ ದಾಂಗುಡಿಯಿಡುವುದು ಇದೆಲ್ಲ ನನಗೆ ಕಥೆ ಬರೆಯುವುದಕ್ಕಿಂತ ಇಷ್ಟದ ವಿಷಯಗಳಾಗಿದ್ದವು. ಕಥೆ ಹೇಳುವಾಗ ಕೇಳುವವರು ಕಣ್ಣೆದುರು ಇರುತ್ತಾರೆ. ಕೇಳುತ್ತ ಕೇಳುತ್ತ ಕಾಣಿಸುವ ಅವರ ಕಣ್ಣಿನ ಮಿಂಚುಗಳು, ಅವರ ಹಣೆಯ ಮೇಲೆ ಮೂಡುವ ನಗು, ವ್ಯಕ್ತವಾಗಿ ಮೂಗಿನ ನೇರಕ್ಕೇ ಕಾಣಿಸುವ ಅವರ ಅಪನಂಬಿಕೆ ಅಥವಾ ಕುತೂಹಲ, ಆಗಾಗ ಸ್ಪೋಟಗೊಳ್ಳುವ ಅಟ್ಟಹಾಸದಂತಹ ನಗು, ಇವೆಲ್ಲವನ್ನೂ ನಾನೂ ಅನುಭವಿಸಿ ಕಥೆ ಹೇಳುವುದು ಬೇರೆಯಲ್ಲ ಕೇಳುವುದು ಬೇರೆಯಲ್ಲ ಎಂಬಂತಹ ಒಂದು ಅನೂಹ್ಯ ಕಾಲವೇ ಅಲ್ಲಿ ಸೃಷ್ಟಿಯಾಗುತ್ತಿದೆ ಅನ್ನಿಸುತ್ತಿತ್ತು.

ನನ್ನ ಊರಿನ ಕಾಡುದಾರಿಯ ಬದಿಯ ಒಂದು ಸಣ್ಣ ಕಲ್ಲು ಬೆಂಚಿನ ಮೇಲೆ, ಮೈಸೂರಿನ ಮುಸ್ಲಿಂ ಹಾಸ್ಟೆಲಿನ ನೀಲಗಿರಿ ಮರಗಳ ಕೆಳಗಿನ ಕಲ್ಲ ಹಾಸಿನ ಮೇಲೆ, ಕುಕ್ಕರಹಳ್ಳಿ ಕೆರೆಯ ಲತಾ ಮಂಟಪಗಳಲ್ಲಿ, ಮಂಗಳೂರಿನ ತಣ್ಣೀರುಬಾವಿಯ ಕಡಲ ತೀರದ ಗಾಳಿ ಮರಗಳ ಅಡಿಯಲ್ಲಿ, ಮಡಿಕೇರಿಯ ರಾಜಾಸೀಟಿನ ಮೇಲಿನ ಸ್ಟೋನ್ ಹಿಲ್ ಗುಡ್ಡಗಳ ನೆರಳ ಹಾಸಿನ ಕೆಳಗೆ –  ಕಾಲ ದೇಶ ಕತ್ತಲು ಬೆಳಕುಗಳ ಪರಿವೆಯಿಲ್ಲದೆ ಗಂಟೆಗಟ್ಟಲೆ ಕಥೆಗಳನ್ನು ಹೇಳುತ್ತಿದ್ದ ದಿನಗಳನ್ನು ನೆನೆದುಕೊಂಡರೆ ಈಗಲೂ ಬಾಲ್ಯದಂತಹ ಎಳೆಬಿಸಿಲೊಂದು ಮಾಯವಾಗಿ ಮರೆಯಾದಂತೆ ಸಂಕಟವಾಗುತ್ತದೆ. ನನ್ನ ಕಥೆ ಹೇಳುವ ಕಾಲ ಕಳೆದು ಹೋಗಿರದಿದ್ದರೂ ಕಥೆ ಕೇಳುತ್ತಿದ್ದವರು ಆ ರೋಮಾಂಚನವನ್ನು ಕಳೆದುಕೊಂಡಿರುವುದು ನನಗೆ ದೂರದಿಂದಲೇ ಗೊತ್ತಾಗಿಬಿಡುತ್ತಿದೆ. ಒಂದು ಸಣ್ಣಗಿನ ವಿಷಾದ, ಒಂದು ತಣ್ಣಗಿನ ಕ್ರೌರ್ಯದಂತಹ ಸ್ವ ಎಚ್ಚರ ನನ್ನನ್ನು ಇತ್ತೀಚೆಗೆ ಕಥೆ ಹೇಳುವುದರಿಂದ ವಿಮುಖನನ್ನಾಗಿಸುತ್ತಿದೆ. ಎಂತೆಂತಹ ಗೆಳೆಯರು, ಕವಿಗಳು, ಕಥೆಗಾರರು, ಸುಂದರಿಯರು, ಸುಂದರರು ಒಬ್ಬ ರಾಜಕುಮಾರನ ಹಾಗೆ ನನ್ನನ್ನು ಕಣ್ಣಲ್ಲೇ ಆರಾಧಿಸುತ್ತಾ ಕಥೆ ಕೇಳುತ್ತಿದ್ದುದು! ಈಗ ಅವರೆಲ್ಲರೂ ಅವರವರ ಲೋಕದಲ್ಲಿ ವಿರಾಜಮಾನರಾಗಿರುವುದ ನೋಡುತ್ತಿದ್ದರೆ ಕಥೆ ಹೇಳುವುದು ಎಷ್ಟು ದೊಡ್ಡ ಯಾಮಾರಿಸಿಕೊಳ್ಳುವ ಕೆಲಸವಾಗಿತ್ತು ಎಂದು ವ್ಯಗ್ರನಾಗುತ್ತೇನೆ ಜೊತೆಗೆ ಲೋಕದ ಜೊತೆಗೆ ವಿನಾಕಾರಣ ಕಠಿಣನಾಗುತ್ತಿದ್ದೇನೆ.

ಇದಕ್ಕಿಂತಲೂ ದೊಡ್ಡದಾದ ಕ್ರೂರವಾದ ಮತ್ತು ತಮಾಷೆಯಾದ ವಿಷಯವೆಂದರೆ ನನ್ನ ಕಥೆ ಹೇಳುವ ಕಲೆಯನ್ನೇ ಬಳಸಿಕೊಂಡು ನನಗೆ ರಾಜಕೀಯ ಪಾಠಗಳನ್ನು ಕಲಿಸುವ ವ್ಯವಸ್ಥೆಯೊಂದನ್ನು ನನ್ನ ಯೌವನದ ಕಾಲದಲ್ಲಿ ರೂಪಿಸಲಾಗಿತ್ತು. ಏಕಕಾಲದಲ್ಲಿ ಕ್ರಾಂತಿಕಾರಿಯೂ ಕಥೆಗಾರನೂ ಆಗಿದ್ದ ನಾನು ಗುಪ್ತವಾಗಿ ಒಬ್ಬ ದೊಡ್ಡ ಪ್ರೇಮಿಯೂ ಆಗಿದ್ದೆ. ಕಥೆ ಹೇಳುವುದನ್ನೂ, ಬರೆಯುವುದನ್ನೂ, ಓದುವುದನ್ನೂ, ಕ್ರಾಂತಿಯ ಕೆಲಸಗಳನ್ನೂ ಬಿಟ್ಟು ಇದ್ದಕ್ಕಿದ್ದಂತೆ ಯಾರಿಗೂ ಗೊತ್ತಾಗದಂತೆ ದಿನಗಟ್ಟಲೆ ಮಾಯವಾಗಿ ಬಿಡುತ್ತಿದ್ದೆ. ಅದೊಂದು ತರಹದ ಬೆಳಗಿನ ಹೊತ್ತಿನ ಇಬ್ಬನಿಯ ಹನಿಯಂತಹ ಚುಮುಚುಮು ಪ್ರೇಮ. ಅವಳಿಗೂ ನನಗೂ ಸುಮಾರು ನೂರು ಹರದಾರಿಗಿಂತ ಹೆಚ್ಚು ದೂರವಿತ್ತು. ಇಬ್ಬರಿಗೂ ಕವಿತೆ ಅಂದರೆ ಇಷ್ಟ. ಇಬ್ಬರಿಗೂ ಸಿಕ್ಕಾಪಟ್ಟೆ ಭಯ ಮತ್ತು ನಾಚುಗೆ. ನೂರಾರು ಹರದಾರಿ ದೂರವಿದ್ದ ಅವಳನ್ನು ಸುಮ್ಮನೆ ನೋಡಿ ಬರಲು ನಾನು ಆಗಾಗ ಭೂಗತನಾಗಿ ಬಿಡುತ್ತಿದ್ದೆ. ಹೋದವನು ಅಲ್ಲೂ ಮೈಲಿಗಟ್ಟಲೆ ಕಥೆ ಹೇಳಿ ಕಥೆ ಕೇಳಿ ಅವಳ ಕಣ್ಣ ಅಚ್ಚರಿಗಳನ್ನು ನೋಡಿ ಬರುತ್ತಿದ್ದೆ. ಬಂದವನು ಎಲ್ಲಿ ಹೋಗಿದ್ದೆ ಎಂಬ ಗುಟ್ಟನ್ನು ಯಾರಿಗೂ ಹೇಳುತ್ತಿರಲಿಲ್ಲ. ನನ್ನ ಈ ರೀತಿಯ ಧಿಡೀರ್ ಮಾಯವಾಗುವಿಕೆ ನನ್ನ ಕ್ರಾಂತಿಕಾರೀ ಸಂಗಾತಿಗಳಿಗೆ ಒಂದು ಸವಾಲಾಗಿತ್ತು. ರಾಜಕೀಯ ಕಾರಣಗಳಿಗಾಗಿ ಭೂಗತವಾಗುವುದನ್ನು ಸಕಾರಣವಾಗಿ ಬೆಂಬಲಿಸುವವರಾಗಿದ್ದ ಅವರಿಗೆ ವಿನಾಕಾರಣ ಮಾಯವಾಗುತ್ತಿದ್ದ ನನ್ನ ಕಾಣದಾಗುವಿಕೆ ಒಂದು ವೈಚಾರಿಕವಾದ ಕಗ್ಗಟ್ಟಿನಂತೆ ತೋರತೊಡಗಿತ್ತು. ಇದನ್ನು ಹೇಗಾದರೂ ಬಗೆಹರಿಸಬೇಕೆಂದು ಉನ್ನತಮಟ್ಟದಲ್ಲಿ ತೀರ್ಮಾನಿಸಿದ ಅವರು ಕಥೆ ಹೇಳುವ ನನ್ನ ದೌರ್ಭಲ್ಯವನ್ನು ಬಳಸಿಕೊಂಡರು.

ನನ್ನ ಕಥೆಗಳನ್ನು ಕೇಳಲೆಂದೇ ದೂರದ ಹೈಕಮಾಂಡಿನಿಂದ ಒಬ್ಬರು ಬಂದರು. ಒಂದು ಇರುಳೆಲ್ಲಾ ಕುಕ್ಕರಹಳ್ಳಿ ಕೆರೆಯ ಲತಾಮಂಟಪದಲ್ಲಿ ಅವರು ನನ್ನ ಪಕ್ಕದಲ್ಲಿ ಮಗುವಿನಂತೆ ಕುಳಿತು ನನ್ನೆಲ್ಲ ಕಥೆಗಳನ್ನು ಕೇಳಿಸಿಕೊಂಡರು. ಅವಳನ್ನು ಹುಡುಕಿಕೊಂಡು ಹೋಗುತ್ತಿದ್ದ ಹಾದಿಯಲ್ಲಿ ಮೂಡುತ್ತಿದ್ದ ಚಂದ್ರ, ಏಳುತ್ತಿದ್ದ ಕಾವಳ, ಹಾರುತ್ತಿದ್ದ ತೇನೆ ಹಕ್ಕಿಗಳು, ಅವಳ ಕದಪುಗಳಲ್ಲಿ ಮೂಡುತ್ತಿದ್ದ ಗುಲಗಂಜಿಯಂತಹ ಪ್ರೇಮದ ಕುರುಹುಗಳು ಮತ್ತು ಮಾಂಸಾಹಾರಿಯಾಗಿದ್ದ ನನ್ನ ಮತ್ತು ಸಸ್ಯಾಹಾರಿಯಾಗಿದ್ದ ಅವಳ ನಡುವೆ ನಡೆಯುತ್ತಿದ್ದ ವೈಚಾರಿಕ ಪ್ರೇಮ ಕಲಹಗಳ ಕುರಿತು ನಾನು ಅರೆನಿಮೀಲಿತ ನೇತ್ರಗಳಿಂದ ಅವರಿಗೆ ಆ ಇರುಳಿನಲ್ಲಿ ಕಥೆ ಹೇಳಿಬಿಟ್ಟಿದ್ದೆ. ಒಂದು ರೀತಿಯಲ್ಲಿ ಹೇಳಿದ್ದು ಒಳ್ಳೆಯದೇ ಆಯಿತು. ಏಕೆಂದರೆ ಇರುಳಿಡೀ ನನ್ನ ಕಥೆ ಕೇಳಿದ ಅವರು ಕೇಂದ್ರಸ್ಥಾನಕ್ಕೆ ತೆರಳಿ ಹೈಕಮಾಂಡಿಗೆ ನನ್ನ ಬಗ್ಗೆ ಒಂದು ವಿವರವಾದ ವರದಿಯನ್ನು ಕೊಟ್ಟುಬಿಟ್ಟಿದ್ದರು. ಅದರಲ್ಲಿ ನನ್ನಲ್ಲಿ ಕ್ರಾಂತಿಕಾರಿಯ ಗುಣಗಳಿಗಿಂತ ಒಬ್ಬ ಮಧ್ಯಮ ವರ್ಗದ ಬೂರ್ಜ್ವಾ ಪ್ರೇಮಿಯ ಗುಣಗಳೇ ಹೆಚ್ಚಿರುವುದೆಂತಲೂ ನನ್ನಿಂದ ಸಮಾಜಕ್ಕೆ ಹೆಚ್ಚಿನ ಪ್ರಯೋಜನಗಳಾಗುವ ಸಾಧ್ಯತೆ ಇಲ್ಲವೆಂದೂ ಹೇಳಲಾಗಿತ್ತು. ಹಾಗಾಗಿ ಕ್ರಾಂತಿಯ ದಾರಿಯಿಂದ ವಿಮುಖನಾದ ನಾನು ಇನ್ನು ಪ್ರೇಮಕ್ಕೆ ಜೈ ಎಂದು ತೀರ್ಮಾನಿಸಿ ಅವಳಲ್ಲಿಗೆ ಮರಳಿ ಹೋಗಿದ್ದೆ. ಆದರೆ ಅಷ್ಟು ಹೊತ್ತಿಗೆ ಆಕೆಯೂ ಒಂದು ಕಠಿಣವಾದ ತೀರ್ಮಾನ ತೆಗೆದುಕೊಂಡು ಬಿಟ್ಟಿದ್ದಳು. (ಅದು ಏನೆಂಬುದು ಇಲ್ಲಿ ಬೇಡ ಬಿಡಿ!)

ಆದರೆ ಆ ನಂತರ ರಾಜಕೀಯ ಕಾರಣಗಳಿಗಾಗಿ ಕಥೆ ಹೇಳುವುದನ್ನು ಮತ್ತು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ. ಕಥೆ ಹೇಳುವುದಾದರೆ ಪ್ರೇಮ ಯಾಚನೆಯ ಕಾರಣಕ್ಕಾಗಿ ಅಥವಾ ಪ್ರೇಮ ವೈಫಲ್ಯದ ಖಿನ್ನತೆಯಿಂದ ಹೊರಬರುವುದಕ್ಕಾಗಿ ಎಂಬುದು ನನ್ನ ಆನಂತರದ ದಿನಗಳ ಆಲೋಚನೆಯಾಗಿತ್ತು. ಆನಂತರದ ಕಾಲಘಟ್ಟಗಳಲ್ಲಿ ಅದೂ ಬದಲಾಗುತ್ತಾ ಬಂತು. ಕಲೆ, ಕಥೆಗಾರಿಕೆ, ಕಾವ್ಯ ಮತ್ತು ಸೌಂದರ್ಯಗಳನ್ನು ಮಿಕಗಳಂತೆ ಅಟ್ಟಿಸಿಕೊಂಡು ಬೇಟೆಯಾಡುವ ಬೇಟಗಾರನಂತಹ ಖದೀಮ ಕಾಲ ಇದು. ಕಾಲವೆಂಬವನ ಅಸಾಧ್ಯ ಆಟಗಳ ಈ ಕಾಲದಲ್ಲಿ ಕಥೆ ಹೇಳುವುದೂ, ಬರೆಯುವುದೂ, ಕಥೆಯನ್ನು ಆಲಿಸುವವರ ಕಣ್ಣಮಿಂಚಿಗೆ ಕಾಯುವುದೂ, ಓದುಗನ ಪುಳಕಗಳ ನೆನೆದು ರೋಮಾಂಚಿತನಾಗುವುದು ಈ ಎಲ್ಲವೂ ಕೃತಕ ಅನ್ನಿಸಲು ನನಗಂತೂ ತೊಡಗಿದೆ. ಇದನ್ನೆಲ್ಲ ಹೆಚ್ಚು ವಿವರಿಸಲು ಹೋಗದೆ ಗುಣಪಡಿಸಲಾಗದ ಕಾಯಿಲೆಯಂತಾಗಿ ಹೋಗಿದ್ದ ಕಥೆ ಹೇಳುವ ನನ್ನ ಬಾಲ್ಯದ ದಿನಗಳ ಮನೋಹರವೂ ದುರಂತಪೂರ್ವಕವೂ ಆದ ವೃತ್ತಾಂತವೊಂದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವೆ. ನಾನು ಹೋದ ಮೇಲೂ ನನ್ನೊಳಗೆ ಮಣ್ಣಲ್ಲಿ ಮಣ್ಣಾಗಿ ಇದು ಉಳಿದುಕೊಳ್ಳಲಿ ಎಂದು ನಾನು ಬೇಡಿಕೊಳ್ಳುವ ವೃತ್ತಾಂತ ಇದು. ಒಂದು ಅನೂಹ್ಯ ಮಿಂಚಿನಂತೆ ಒಂದು ಅಸಾಧ್ಯ ನೋವಿನಂತೆ ಇದು ಯಾವಾಗಲೂ ನನ್ನನ್ನು ಇರಿಯುವುದು. ಹೆಚ್ಚು ಭಾವುಕನಾಗದೆ ಹೆಚ್ಚು ವಿವರಿಸಲು ಹೋಗದೆ ಇದನ್ನು ಹೇಳಲು ತೊಡಗುವೆನು.

*****************

ನನಗೆ ನೆನಪಿರುವಂತೆ ಸಣ್ಣದಿರುವಾಗ ನಾನು ಹೇಳುವ ಕಥೆಗಳನ್ನು ಕೇಳಲೆಂದೇ ನನ್ನ ತಮ್ಮ ತಂಗಿಯರು ಅವರ ನಡುವೆ ಜಾಗ ಮಾಡಿಕೊಂಡು ನನ್ನನ್ನು ಮಲಗಿಸಿಕೊಳ್ಳುತ್ತಿದ್ದರು. ಜೊತೆಗೆ ದೂರದ ಮಲೆಯೊಂದರ ನಡುವಿನ ಮನೆಯಿಂದ ಕತ್ತಲ ಹೊತ್ತಲ್ಲಿ ಹಸುವಿನ ಹಾಲು ತರುತ್ತಿದ್ದ ಸುಂದರಿಯಾಗಿದ್ದ ಹುಡುಗಿಯೊಬ್ಬಳೂ ಅವರ ನಡುವೆ ಜಾಗ ಮಾಡಿಕೊಂಡು ನನ್ನನ್ನು ಒತ್ತರಿಸಿಕೊಂಡು ಮಲಗಿರುತ್ತಿದ್ದಳು. ಜೊತೆಗೆ ಸಣ್ಣ ವಯಸ್ಸಿನ ನನ್ನ ತಾಯಿಯೂ ಮಲಗಿರುತ್ತಿದ್ದಳು. ಅವರೆಲ್ಲರನ್ನೂ ಏಕಕಾಲಕ್ಕೆ ಒಂದು ಕಥೆಯ ಮೂಲಕ ಮೆಚ್ಚಿಸುವುದು ನನ್ನ ಆ ಇರುಳುಗಳ ಬಹಳ ದೊಡ್ಡ ಕಲೆಗಾರಿಕೆಯಾಗಿತ್ತು. ತಾಯಿಗೂ ಮಗನ ಮೇಲೆ ಮೆಚ್ಚುಗೆಯಾಗಬೇಕು, ತಮ್ಮ ತಂಗಿಯಂದಿರಿಗೂ ಪುಟ್ಟ ಅಣ್ಣನ ಮೇಲೆ ಅಭಿಮಾನ ಬರಬೇಕು, ಜೊತೆಗೆ ಪಕ್ಕದಲ್ಲಿ ಮಲಗಿದ್ದ ನನಗಿಂತ ಕೊಂಚ ದೊಡ್ಡವಳಾಗಿದ್ದ ಆ ಬಾಲಕಿಯೂ ನನ್ನ ಅನುರಾಗದಲ್ಲಿ ಬೀಳಬೇಕು ಎಂದು ಇರುವ ಒಂದು ಕಥೆಯಲ್ಲೇ ಎರಡು ಮೂರು ಉದ್ದೇಶಗಳನ್ನು ಇಟ್ಟುಕೊಂಡು ಕಥೆ ಹೇಳುತ್ತಿದ್ದೆ. ಸಣ್ಣಪುಟ್ಟ ತಿರುವುಗಳು, ದೊಡ್ಡದಾದ ಘಟನೆಗಳು, ಕಣ್ಣೀರು ಬರಿಸುವಂತಹ ಅಂತ್ಯಗಳು, ನಡುನಡುವೆ ಸಂಭವಿಸುವ ತಮಾಷೆಗಳು, ಕುಹಕಗಳು ಮತ್ತು ಮಾನವ ಸಹಜ ಮಲಬಾಧೆ, ಮೂತ್ರಶಂಕೆ, ಹಸಿವು ಇತ್ಯಾದಿ ಮಾನವ ಸಹಜ ವಿದ್ಯಮಾನಗಳು ಇವೆಲ್ಲವನ್ನೂ ಹೇಳುತ್ತ ಹೇಳುತ್ತಲೇ ನಾನು ಆ ಹುಡುಗಿಯ ಅನುರಾಗಕ್ಕಾಗಿ ಕಾತರಿಸುತ್ತಿದ್ದೆ. ಕಥೆ ಕೇಳುತ್ತ ಕಣ್ಣೀರುಗರೆಯುತ್ತಿದ್ದ ಆಕೆಯ ಕಣ್ಣೀರನ್ನು ಆ ಕತ್ತಲೆಯಲ್ಲಿಯೇ ಒರೆಸುವುದು, ಅವಳ ಬೆರಳಲ್ಲಿದ್ದ ತಂಗೀಸಿನ ಉಂಗುರವನ್ನು ಮೆಲ್ಲಗೆ ಕಳಚಿ ನನ್ನ ಬೆರಳಿಗೆ ಬದಲಿಸಿಕೊಳ್ಳುವುದು, ಮತ್ತೆ ಅವಳ ಬೆರಳಿಗೆ ತೊಡಿಸುವುದು, ಭಯಗೊಂಡಿರಬಹುದಾದ ಅವಳ ತೋಳುಗಳಿಗೆ ಆ ಕತ್ತಲೆಯಲ್ಲಿಯೇ ನನ್ನ ಕೆನ್ನೆಗಳನ್ನು ಸೋಕಿಸಿ ಅವಳ ಭಯ ಹೋಗಿರಬಹುದೆಂದು ಭ್ರಮಿಸುವುದು – ಹೀಗೆ ಅವರೆಲ್ಲರೂ ಕಥೆ ಕೇಳುತ್ತ ಕೇಳುತ್ತ ಅವರವರ ಲೋಕದೊಳಕ್ಕೆ ನಿದ್ದೆ ಹೋದಮೇಲೆ ಉಳಿದ ನನ್ನ ಒಂಟಿತನವನ್ನು ಹೇಗೆ ನೀಗಿಕೊಳ್ಳುವುದು ಎಂದು ಯೋಚಿಸುತ್ತಾ ನನಗೂ ತುಂಬ ಹೊತ್ತಿನ ನಂತರ ನಿದ್ದೆ ಬಂದು ಬಿಡುತ್ತಿತ್ತು.

ಆ ವಯಸಿನಲ್ಲಿ ನಾನು ಈಗಿರುವುದಕ್ಕಿಂತಲೂ ಕೆಟ್ಟ ಹುಡುಗನಾಗಿದ್ದೆ, ಬಹಳ ಕಥೆಗಳನ್ನು ಓದುತ್ತಿದ್ದೆ ಮತ್ತು ಕದ್ದು ಸಿನೆಮಾ ನೋಡುತ್ತಿದ್ದೆ. ಆಗ ನಮ್ಮ ಊರಿಗೆ ಹತ್ತಿರವಿದ್ದ ಸುಳ್ಯ ಪೇಟೆಯಲ್ಲಿ ಎರಡು ಸಿನೆಮಾ ಥಿಯೇಟರುಗಳಿದ್ದವು ಮತ್ತು ಆಗಲೇ ನನ್ನ ಬಳಿಯಲ್ಲಿ ಹಣ ಓಡಾಡುತ್ತಿತ್ತು. ಆ ವಯಸ್ಸಲ್ಲೇ ನಾನು ನಮ್ಮದೇ ತೋಟದಿಂದ ಗೇರುಬೀಜವನ್ನೂ, ಕರಿಮೆಣಸನ್ನೂ ಸ್ವಲ್ಪಸ್ವಲ್ಪ ಕದ್ದು ಅಡಗಿಸಿಟ್ಟು ಅವುಗಳನ್ನು ಅರ್ಧ ಬೆಲೆಗೆ ಮಾರಿ ಆ ಹಣವನ್ನು ನನ್ನ ಸಿನೆಮಾ ಮತ್ತು ಹೋಟೆಲಿನಲ್ಲಿ ತಿನ್ನುವ ಚಟಕ್ಕಾಗಿ ಬಳಸಿಕೊಳ್ಳುತ್ತಿದ್ದೆ. ಜೊತೆಗೆ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ನನ್ನ ನಿರಕ್ಷರಿ ಗೆಳೆಯರಿಗೆ ಡೈನಮೇಟ್ ಕೊಂಡುಕೊಳ್ಳಲು ಹಣ ನೀಡುತ್ತಿದ್ದೆ. ಅವರು ಬಹಳ ಸುಂದರವೂ ಪ್ರಶಾಂತವೂ ಆಗಿದ್ದ ನಮ್ಮ ಬಾಲ್ಯದ ಊರಿನ ನದಿಯ ಆಳದ ಗುಂಡಿಗಳಲ್ಲಿ ಡೈನಮೇಟ್ ಸಿಡಿಸಿ ಸತ್ತು ತೇಲುವ ಮೀನುಗಳನ್ನು ಮುಳುಗಿ ಮೇಲೆತ್ತಿ ದಡಕ್ಕೆ ತಂದು ಹಾಕುತ್ತಿದ್ದರು. ಈಗ ಯೋಚಿಸಿದರೆ ಅದೆಲ್ಲವೂ ಬಹಳ ದುಷ್ಟವಾದ ಕೃತ್ಯಗಳೆಂದು ನನಗೆ ಅನಿಸಬಹುದು. ನನ್ನದೇ ತೋಟದ ಉತ್ಪತ್ತಿಯನ್ನು ಕದ್ದು ಮಾರುವುದು, ಒಂದೇ ದಿನದಲ್ಲಿ ಎರಡು ಮೂರು ಸಿನೆಮಾಗಳನ್ನು ಕದ್ದು ನೋಡುವುದು, ಸ್ಪೋಟಕಗಳನ್ನು ಬಳಸಿ ಮೀನುಹಿಡಿಯುವುದು, ಹೊಟ್ಟೆ ಬಿರಿಯುವಂತೆ ಹೋಟೆಲ್ಲುಗಳಲ್ಲಿ ತಿನ್ನುವುದು.ಬಹಳ ಒಳ್ಳೆಯವರೂ ಪಾಪದವರೂ ಆಗಿದ್ದ ನನ್ನ ತಂದೆ (ಅವರು ಈಗ ಇಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ) ವಾರಕ್ಕೊಮ್ಮೆ ನನಗೆ ಕನ್ನಡದ ಕಥೆ ಪುಸ್ತಕಗಳನ್ನೂ ಪತ್ರಿಕೆಗಳನ್ನೂ ತಂದು ಕೊಡುತ್ತಿದ್ದರು. ಅವೆಲ್ಲವನ್ನೂ ನಾನು ನೆಲದ ಮೇಲೆ ಹರಡಿ ಕುಕ್ಕುರುಗಾಲಲ್ಲಿ ಕುಳಿತು ನೆಲಕ್ಕೆ ಕಣ್ಣು ಕೀಲಿಸಿ ಓದುತ್ತಿದ್ದೆ. ಮನಸೊಳಗೆ ಕದ್ದು ನೋಡಿದ ಕನ್ನಡ ತಮಿಳು ಸಿನೆಮಾದ ಕಥೆಗಳು, ಮಿದುಳೊಳಗೆ ಅಪ್ಪ ತಂದಿರಿಸುತ್ತಿದ್ದ ಅರೇಬಿಯಾದ ಸಾವಿರದೊಂದು ರಾತ್ರಿಯ ಕತೆಗಳು, ಹಾತಿಮತಾಯಿಯ ಕಥೆಗಳು, ಜಾತಕದ ಕಥೆಗಳು, ರಾಮಾಯಣ ಮಹಾಭಾರತದ ಕಥೆಗಳು, ಮೀನು ಹಿಡಿಯುತ್ತಿದ್ದಾಗ ಕೇಳುತ್ತಿದ್ದ ಅನೈತಿಕವೂ ಹಾದರದವೂ ಆದ ಪುಳಕದ ಕಥೆಗಳು, ಮದ್ರಸಾದಲ್ಲಿ ಅರಬಿಯಲ್ಲಿ ಕುರಾನು ಕಲಿಯುವಾಗ ಕೇಳುತ್ತಿದ್ದ ಕಣ್ಣೀರಿಟ್ಟು ನ್ಯಾಯ ಕೇಳುವ ಒಂಟೆಗಳ, ಹಾರುವ ಕುದುರೆಗಳ, ತಾವೇ ತಾವಾಗಿ ಚಲಿಸುತ್ತಿದ್ದ ರಕ್ತಸಿಕ್ತ ಖಡ್ಗಗಳ ಕಥೆಗಳು – ನೋಡಿದ, ಕೇಳಿದ, ಅನುಭವಿಸಿದ ಮತ್ತು ಓದಿದ ಆ ದಿನದ ಎಲ್ಲವನ್ನೂ ಒಂದು ಕಥೆಯನ್ನಾಗಿಸಿ ಹೆಚ್ಚುಕಡಿಮೆ ಹಾದರದಂತಿದ್ದ ಅದರಲ್ಲಿ ಸಣ್ಣಗಿನದೊಂದು ನೈತಿಕ ಎಳೆಯನ್ನು ಸೇರಿಸಿ ಇರುಳು ಹೊತ್ತಲ್ಲಿ ಅಮ್ಮನಿಗೂ, ತಮ್ಮ ತಂಗಿಯರಿಗೂ ಮತ್ತು ತಣ್ಣಗಿನ ಚಂದಿರನ ತುಂಡಿನ ಹಾಗಿದ್ದ ಅವಳಿಗೂ ಹೇಳುವುದಿತ್ತಲ್ಲ ಅದು ಬಹಳ ಆಪ್ಯಾಯಮಾನವೂ, ರೋಚಕವೂ ಹಾಗೂ ಹಸಿವು ಮೈಥುನದಷ್ಟೇ ಅಗತ್ಯದ್ದೂ ಆಗಿತ್ತು.

ಹಾಗಾಗಿ ಕಥೆ ಹೇಳುವುದನ್ನು ನನ್ನ ಸ್ವಾರ್ಜಿತ ಸ್ಥಿರ ಆಸ್ತಿಯೆಂದೇ ಅಂದುಕೊಂಡಿದ್ದೆ ಮತ್ತು ಈಗಲೂ ಅಂದುಕೊಂಡಿರುವೆ, ಆದರೆ ಕಥೆ ಬರೆಯುವುದಿದೆಯಲ್ಲಾ ಅದು ಬಹಳ ಕಷ್ಟದ ಕೆಲಸ. ಅದರಲ್ಲೂ ಕನ್ನಡದ ಈಗಿನ ಸಾಹಿತ್ಯಿಕ, ಸಾಂಸ್ಕೃತಿಕ ಹೊತ್ತಿನಲ್ಲಿ ಇನ್ನೂ ಕಷ್ಟ. ನಾನು ಎಮ್ಮೆ ಎಂದು ಬರೆದರೆ ಕೋಣನೆಂದು ತಿಳಿದುಕೊಂಡು ಅದರ ಹಿಂಬಾಗದಲ್ಲಿ ಇಲ್ಲದನ್ನು ಹುಡುಕುವ ಅಥವಾ ಊಹಿಸುವ ಸಾಂಸ್ಕೃತಿಕ ರಾಜಕಾರಣದ ಈ ಹೊತ್ತಲ್ಲಿ ನನಗೆ ಯಾಕೋ ನಾನು ಪೂರ್ವಸೂರಿಗಳ ಕಾಲದವನು ಅನಿಸುತ್ತದೆ. ಮೊದಲೇ ಕಥೆ ಬರೆ ಎಂದು ಯಾರಾದರೂ ಹೇಳಿದರೆ ಕೊಲ್ಲಲು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಭಯಪಡುವ ನನಗೆ ಕಥೆಯೊಂದನ್ನು ಬರೆದಾದ ಮೇಲೆ ಆಗುವ ಮುಜುಗರಗಳು ಇನ್ನೂ ತಮಾಷೆಯಾಗಿರುತ್ತದೆ. ಬೇಡ ಬಿಡಿ. ಯಾರನ್ನೂ ಇನ್ನು ಮುಂದೆ ಲೇವಡಿ ಮಾಡಬಾರದು ಎಂದು ಯಾವಾಗಲೋ ತೀರ್ಮಾನಿಸಿದ್ದೇನೆ. ಆದರೆ ನಲ್ಲೆಯರಂತಹ ತಮ್ಮ ತಂಗಿಯರಂತಹ ತಾಯಿಯಂತಹ ಓದುಗರ ನೆನೆದುಕೊಂಡು ಕಥೆಗಳನ್ನು ಬರೆಯುವ ಕನಸನ್ನು ಈಗಲೂ ಕಾಣುತ್ತಿರುತ್ತೇನೆ.

***************

ಕಥೆಗಳನ್ನು ಕೇಳುತ್ತಾ ಇರುಳೆಲ್ಲ ಪಕ್ಕದಲ್ಲಿ ಮಲಗಿರುತ್ತಿದ್ದ ಆಕೆ ಕೆಲವು ರಾತ್ರಿ ಹಗಲುಗಳಗಳ ಕಾಲ ಮಾಯವಾಗಿದ್ದಳು. ಹಲವು ದಿನಗಳ ಕಾಲ ಹುಡುಕಿದ ಯಾರಿಗೂ ಅವಳು ಸಿಕ್ಕಿರಲೇ ಇಲ್ಲ. ಅವಳು ಎಲ್ಲಿ ಕಾಣೆಯಾಗಿರಬಹುದು ಎಂದು, ಏನು ಕಥೆ ಹೇಳುವುದು ಎಂದು ಗೊತ್ತಾಗದೆ ನಾನೂ ಅಸ್ತವ್ಯಸ್ತವಾಗಿದ್ದೆ. ಅವಳ ಪೂರ್ಣ ಚಂದ್ರನಂತಹ ಸ್ನಿಗ್ಧ ಬೆಳಕನ್ನು ಎದುರಿಸಲಾಗದೇ ಆಕಾಶದಿಂದ ಇಳಿದ ಜಿನ್ನುಗಳೆಂಬ ದೇವದೂತರು ಅವಳನ್ನು ಕೆಲವು ಹಗಲು ರಾತ್ರಿಗಳ ಕಾಲ ದೇವಲೋಕದಲ್ಲಿ ಅಡಗಿಸಿಟ್ಟುಕೊಂಡು ಮರಳಿ ಭೂಮಿಗೆ ತಂದುಬಿಟ್ಟರು ಎಂದು ಕಥೆಗಾರನಾದ ನನಗೇ ನನ್ನ ತಾಯಿ ರೇಲು ಹತ್ತಿಸಿದ್ದಳು. ಆದರೆ ಭೂಮಿಗೆ ಮರಳಿದ ಆಕೆ ಅಸ್ತವ್ಯಸ್ತವಾಗಿದ್ದಳು. ಆದರೂ ಇರುಳು ನಮ್ಮೆಲ್ಲರ ನಡುವೆ ಮಲಗಲು ಬರುತ್ತಿದ್ದಳು. ಆದರೆ ಯಾವಾಗಲೂ ಕಥೆ ಕೇಳುತ್ತಾ ಕಂಪಿಸುತ್ತಿದ್ದ ಆಕೆಯ ಬೆನ್ನು ಯಾಕೋ ನಿಶ್ಚಲವಾದಂತೆ ಅನಿಸಿ ನಾನು ಆಕೆಯನ್ನು ಮುಟ್ಟಲು ಹೋದರೆ ಆಕೆ ಆ ಇರುಳಲ್ಲಿ ನನ್ನ ಕೆನ್ನೆಗೆ ಸದ್ದಾಗದ ಹಾಗೆ ಹೊಡೆದಿದ್ದಳು. ನನಗೆ ಅಳು ಬಂದಿತ್ತು. ಕಥೆ ಕೇಳುತ್ತಾ ಕೇಳುತ್ತಾ ನನ್ನ ಕಥೆಗಳ ರಾಜಕುಮಾರಿಯೇ ಆಗಿದ್ದವಳು ಕಥೆಗಾರನ ಕೆನ್ನೆಗೇ  ಹೊಡೆದಿದ್ದಳು. ನನಗೆ ಅಳುವೂ ಬರದಷ್ಟು ಅವಮಾನವಾಗಿತ್ತು. ಆನಂತರ ಪುಟ್ಟವಳಾಗಿದ್ದ ಆಕೆಯನ್ನು ಒಬ್ಬ ನಡುವಯಸ್ಸಿನ ಮುಲ್ಲಾನೊಬ್ಬನಿಗೆ ಕೊಟ್ಟು ಮದುವೆ ಮಾಡಿಸಿದ್ದರು. ಮದುವೆಯಾದ ನಂತರ ಆಕೆ ಗಂಡನೊಡನೆ ನಮ್ಮ ಮನೆಗೆ ಔತಣಕ್ಕೆ ಬಂದಿದ್ದಳು. ಆಗ ನನಗೆ ಅಳು ಬಂದಿತ್ತು. ಕಥೆ ಹೇಳುತ್ತಾ ಏಳು ಆಕಾಶಗಳ ಮೇಲೆ ಹಾರಾಡುತ್ತಿದ್ದ ನಾನು ಆಗ ಏಳನೆಯ ಪಾತಾಳವನ್ನೂ ಅನುಭವಿಸಿದ್ದೆ. ಇನ್ನೂ ಮೀಸೆ ಮೂಡದ ಎಳೆಯ ಬಾಲಕನೊಬ್ಬನ ದಾವಾಗ್ನಿಯಂತಹ ವಿರಹ ಮತ್ತು ಆಕ್ರೋಶ (ಈಗ ನನಗೆ ವಯಸ್ಸು ಐವತ್ತು ದಾಟಿದೆ. ಆದರೂ ತಮಾಷೆಯೆಂದರೆ ಆ ಹೊತ್ತಿನ ಅವಮಾನದ ಆ ದಾವಾಗ್ನಿ ಇನ್ನೂ ಹಾಗೇ ಇದೆ!) ಎಂಟನೇ ತರಗತಿಯಲ್ಲಿದ್ದಾಗ ಆದ ಈ ಅವಮಾನವನ್ನು ನೆನೆದುಕೊಂಡು ಹತ್ತನೇ ತರಗತಿಯಲ್ಲಿರುವಾಗ ಒಂದು ಕಥೆ ಬರೆದಿದ್ದೆ. ಬಹುಶಃ ಅದು ನನ್ನ ಮೊದಲ ಕಥೆ. ದೇವರೇ ಎಷ್ಟೊಂದು ಆಕ್ರೋಶ ಮತ್ತು ಕ್ರೋಧ ಮತ್ತು ದುಃಖ ಆ ಕಥೆಯೊಳಗಿತ್ತು. ಕಥೆಯ ಹೆಸರು ಹೇಳಲೂ ಈಗ ನನಗೆ ಸಂಕೋಚವಾಗುತ್ತದೆ.

ಕಥೆಗಳನ್ನು ಕೇಳುತ್ತಾ ಇರುಳೆಲ್ಲ ಪಕ್ಕದಲ್ಲಿ ಮಲಗಿರುತ್ತಿದ್ದ ಆಕೆ ಕೆಲವು ರಾತ್ರಿ ಹಗಲುಗಳಗಳ ಕಾಲ ಮಾಯವಾಗಿದ್ದಳು. ಹಲವು ದಿನಗಳ ಕಾಲ ಹುಡುಕಿದ ಯಾರಿಗೂ ಅವಳು ಸಿಕ್ಕಿರಲೇ ಇಲ್ಲ. ಅವಳು ಎಲ್ಲಿ ಕಾಣೆಯಾಗಿರಬಹುದು ಎಂದು ಏನು ಕಥೆ ಹೇಳುವುದು ಎಂದು ಗೊತ್ತಾಗದೆ ನಾನೂ ಅಸ್ತವ್ಯಸ್ತವಾಗಿದ್ದೆ. ಅವಳ ಪೂರ್ಣ ಚಂದ್ರನಂತಹ ಸ್ನಿಗ್ಧ ಬೆಳಕನ್ನು ಎದುರಿಸಲಾಗದೇ ಆಕಾಶದಿಂದ ಇಳಿದ ಜಿನ್ನುಗಳೆಂಬ ದೇವದೂತರು ಅವಳನ್ನು ಕೆಲವು ಹಗಲು ರಾತ್ರಿಗಳ ಕಾಲ ದೇವಲೋಕದಲ್ಲಿ ಅಡಗಿಸಿಟ್ಟುಕೊಂಡು ಮರಳಿ ಭೂಮಿಗೆ ತಂದುಬಿಟ್ಟರು ಎಂದು ಕಥೆಗಾರನಾದ ನನಗೇ ನನ್ನ ತಾಯಿ ರೇಲು ಹತ್ತಿಸಿದ್ದಳು.

ಆದರೆ ಆಕೆ ಆಮೇಲೆ ಕೆಲವು ವರ್ಷಗಳಲ್ಲಿ ತೀರಿಹೋದಳು. ತೀರಿಹೋಗುವ ಮೊದಲು ನನ್ನನ್ನು ನೋಡಬೇಕು ಎಂದು ಹೇಳುತ್ತಿದ್ದಳಂತೆ. ಆದರೆ ಆಗ ನಾನು ದೊಡ್ಡವರಿಗೆ ಕಥೆ ಹೇಳುತ್ತಾ, ನನ್ನ ಬಾಲ್ಯದ ಸರಕುಗಳನ್ನು ಅಕ್ಷರಗಳಿಗೆ ವಿನಿಮಯ ಮಾಡುತ್ತಾ, ಕ್ರಾಂತಿಕಾರಿಯಂತೆ ಭಾಷಣ ಮಾಡುತ್ತಾ, ಹಾಡು ಹೇಳುತ್ತಾ ಆ ರೋಮಾಂಚನದಲ್ಲಿ ಅವಳನ್ನು ಮರೆತಿದ್ದೆ. ಇತ್ತೀಚೆಗೆ ಅವಳು ಕನಸಲ್ಲಿ ಬಂದಿದ್ದಳು. ‘ನಾನು ಯಾರು ನೆನಪಿದೆಯಾ?’ ಎಂದು ಕೇಳಿದ್ದಳು. ‘ನೀನು ಬಹಳ ದೊಡ್ಡ ಮನುಷ್ಯನಾಗಿದ್ದೀಯಾ ಆದರೆ ನಿನ್ನ ತಲೆ ನದಿಯ ಕಲ್ಲಿನ ಹಾಗೆ ನುಣುಪಾಗಿದೆಯಲ್ಲಾ’ ಎಂದು ತಮಾಷೆ ಮಾಡಿದ್ದಳು, ನನಗೆ ಅಚ್ಚರಿಯಾಗುವ ಹಾಗೆ ಆಕೆ ತೀರಿಹೋಗಿದ್ದರೂ ಪೂರ್ಣಚಂದ್ರನಂತೆ ಬೆಳಗುತ್ತಿದ್ದಳು. ಆಕೆ ಬದುಕಿದ್ದಾಗ ತನ್ನ ತಲೆಯ ವಸ್ತ್ರವನ್ನು ಬಿಚ್ಚಿ ಆಕಾಶಕ್ಕೆ ತೋರಿಸಿ ನನಗೆ ಚಂದ್ರನನ್ನು ಎಣಿಸಲು ಹೇಳುತ್ತಿದ್ದಳು. ಒಂದನೆಯ ಚಂದ್ರ, ಹತ್ತನೆಯ ಚಂದ್ರ, ಹದಿನಾಲ್ಕನೆಯ ಚಂದ್ರ. ಆಯಾ ಇರುಳಂದು ಅವಳ ಕನ್ನಡಿಕನ್ನಡಿಯ ತಲೆವಸ್ತ್ರದಲ್ಲಿ ಕಾಣಿಸುತ್ತಿದ್ದ ಅಷ್ಟಷ್ಟೇ ಚಂದ್ರಗಳು. ತೀರಿಹೋದ ಮೇಲೆ ಎಷ್ಟೋ ದಶಕಗಳ ನಂತರ ಕನಸಲ್ಲಿ ಬಂದಿದ್ದ ಅವಳಿಗೆ ವಯಸ್ಸೇ ಆಗಿರಲಿಲ್ಲ. ಅವಳಿಗೆ ನಾನು ಹೇಳುತ್ತಿದ್ದ ಕಥೆಗಳು ಇನ್ನೂ ನೆನಪಿರಬಹುದು. ಆದರೆ ಕಥೆ ಹೇಳುತ್ತಿದ್ದ ನನಗೆ ಅವುಗಳು ಮರೆತೇ ಹೋಗಿ ಆ ಜಾಗದಲ್ಲಿ ಹೊಸ ಬಗೆಯ ಕಥೆಗಳು, ಹೊಸ ರೂಪಕಗಳು, ಜಾಗತಿಕ ತಲ್ಲಣಗಳು, ಓದುಗರನ್ನೂ ವಿಮರ್ಶಕರನ್ನೂ ದೆವ್ವದಂತೆ ಕಾಡಿಸುವ ಪ್ರತಿಮೆಗಳು, ಸಾಹಿತ್ಯದ ಅಗಾಧವಾದ ಓದು, ಜ್ಞಾನ, ಮಣ್ಣಾಂಗಟ್ಟಿ ಇತ್ಯಾದಿ ದುಸ್ವಪ್ನಗಳಂತೆ ಕಾಡುತ್ತಿದ್ದವು. ಕನಸಲ್ಲಿ ಬಂದ ಅವಳು ಮರಳಿ ಹೋಗುವಾಗ ನನಗೆ ಎದೆ ನೋವಾದ ಹಾಗೆ ಅನಿಸುತ್ತಿತ್ತು. ನನ್ನದೊಂದು ಪುಪ್ಪುಸ ಕತ್ತರಿಸಿ ಹೋದಂತೆ, ಜೀವನಪೂರ್ತಿ ಜೊತೆಗಿರಬೇಕಾಗಿದ್ದ ಅನುರಾಗವೊಂದು ನಡುವಲ್ಲಿ ನೊಂದುಕೊಂಡು ಕೈತಿರುಗಿಸಿ ಹೊರಟು ಹೋದಂತೆ ಅನಿಸಿ ಕನಲಿ ಹೋಗಿದ್ದೆ. ನನ್ನ ಕಥೆ ಹೇಳುವ ಹುಚ್ಚು ನನ್ನ ಪ್ರೇಮಿಸುವ ಹುಚ್ಚಿನಷ್ಟೇ ನೋವಿನದ್ದು ಅನಿಸುತ್ತಿತ್ತು. ಕಥೆ ಹೇಳುವುದು ಮತ್ತು ಕಥೆಗಳನ್ನು ಬರೆಯುವುದು ಸಾಮಾಜಿಕವೋ ರಾಜಕೀಯವೋ ಪ್ರಜ್ಞಾಪೂರ್ವಕವೋ ಆದ ಒಂದು ಕಸುಬಲ್ಲ; ಅದು ಪ್ರೇಮಿಸುವ ಮತ್ತು ಕಾಮಿಸುವ ಹಾಗೇ ಇರುವ ಒಂದು ಪಡೆದುಕೊಳ್ಳುವ ಮತ್ತು ಕಳೆದುಕೊಳ್ಳುವ ಮನೋವ್ಯಾಧಿ ಎಂದೂ ಅನಿಸಲು ಹತ್ತಿತ್ತು.

ಕನಸಲ್ಲಿ ಅವಳು ಬಂದು ಹೋದ ಮೇಲೆ ನಾನು ಟೆರೇಸಿನ ಮೇಲೆ ಬಂದು ಯಾವಾಗಲೂ ನೋಡುವ ಒಂದು ನಕ್ಷತ್ರವನ್ನು ನೋಡುತ್ತಿದ್ದೆ. ಅದು ಉತ್ತರದ ಆಕಾಶದಲ್ಲಿ ಅಲುಗದೆ ನಿಂತಿರುವ ದ್ರುವ ನಕ್ಷತ್ರ. ಅದು ಅಲುಗುವುದಿಲ್ಲ ಎಂದು ನನಗೆ ಗೊತ್ತೇ ಇರಲಿಲ್ಲ. ಮೋಡಗಳಿರುವ ಆಕಾಶದಲ್ಲಿ ಅದು ಕಾಣಿಸದಿದ್ದರೆ ಅದು ಯಾಕೋ ಇಂದು ಬಂದಿಲ್ಲ ಅಥವಾ ಸೂರ್ಯನ ಜೊತೆ ಅದೂ ಮುಳುಗಿಹೋಗಿದೆ ಅಂದುಕೊಳ್ಳುತ್ತಿದ್ದೆ. ಆದರೆ ಖಗೋಳಶಾಸ್ತ್ರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಗಳು ‘ಹುಚ್ಚಪ್ಪಾ ನಾವು ನಿಂತಿರುವ ಭೂಮಿ ತಿರುಗಬಹುದು, ಚಂದ್ರ ತಿರುಗಬಹುದು ಸೂರ್ಯನೂ ತಿರುಗಬಹುದು, ಆದರೆ ಪೋಲ್ ಸ್ಟಾರ್ ಅಚರ’ ಅಂದಳು. ಮಗ ಶೇಕ್ಸ್ ಪಿಯರನ ಜೂಲಿಯಸ್ ಸೀಸರನನ್ನು ಉಲ್ಲೇಖಿಸಿ, ‘ಪೆದ್ದು ನಿಂಗೆ ಅಷ್ಟೂ ಗೊತ್ತಿಲ್ವಾ ಅವನೂ ಉತ್ತರದ ಧ್ರುವ ನಕ್ಷತ್ರದಂತೆ ಅಚಲನಾಗಿದ್ದವನು’ ಅಂದನು. ಆದರೂ ನಾನು ಈಗಲೂ ಅದು ಇರುಳು ಹೊತ್ತಲ್ಲಿ ಉತ್ತರದ ಆಕಾಶದಲ್ಲಿ ಕಾಣಿಸದಿದ್ದರೆ ಮೋಡಗಳಿರುವ ಕಾರಣ ಈ ಇರುಳು ಆ ನಕ್ಷತ್ರ ಬರದೇ ಇರುವುದು ಎಂದುಕೊಳ್ಳುವೆನು. ಆದರೆ ಆವತ್ತು ಅವಳು ಕನಸಲ್ಲಿ ಕಂಡ ಆ ಇರುಳು ಧ್ರುವನಕ್ಷತ್ರ ಒಂದು ದುಗುಡ ತುಂಬಿದ ಆಕಾಶಬುಟ್ಟಿಯಂತೆ ಆಕಾಶದಲ್ಲಿ ತೂಗುತ್ತಿತ್ತು. ಎಲ್ಲೋ ಏನೋ ಕೆಡುಕಾಗುತ್ತಿದೆ ಅನಿಸುತ್ತಿತ್ತು. ಕನಸಲ್ಲಿ ಬಂದವಳು ಅವಳಿರಲಿಕ್ಕಿಲ್ಲ ಅನಿಸುತ್ತಿತ್ತು. ಅವಳಿಗಿಂತಲೂ ಅನೂಹ್ಯ ಸೌಂದರ್ಯದ ಖನಿಯೊಂದು, ಅವಳಿಗಿಂತಲೂ ಅಸಾಧ್ಯ ವೇದನೆಯನ್ನು ಅನುಭವಿಸಿದ ನನ್ನ ಪ್ರಾಣದಂತೊಂದು ಅವಳ ರೂಪದಲ್ಲಿ ಬಂದು ಒಂದು ಆಕಾಶಬುಟ್ಟಿಯ ಹಾಗೆ ತೂಗುತ್ತಾ ಹೋಗುತ್ತಿದೆ ಅನಿಸಿತ್ತು ಆ ಇರುಳು. ನನ್ನನ್ನು ಎಷ್ಟೋಂದು ಒಂಟಿಯಾಗಿಸಿ ಹೋದ ಆ ಆಕಾಶ ನಕ್ಷತ್ರ ಬುಟ್ಟಿ. ಈ ಕೊರೆಯುವ ಒಂಟಿತನದಿಂದ ಯಾವ ಕಥೆಗಾರಿಕೆಯೂ, ಯಾವ ಖ್ಯಾತಿಯೂ ನನ್ನನ್ನು ಮೇಲೆತ್ತಲಾರವು ಎಂದು ಎಂದು ಅರುಹಿ ಹೋದ ಆ ಇರುಳು.

ನಾನೆಷ್ಟು ಭಯಂಕರ ಖ್ಯಾತ ಕಥೆಗಾರ ಎಂದು ನಾನು ಅಂದುಕೊಂಡರೂ ಅದು ಎಷ್ಟು ದೊಡ್ಡ ಸುಳ್ಳು ಎಂಬುದನ್ನು ಇಂತಹ ಇರುಳುಗಳು ಅರುಹಿ ಹೋಗುತ್ತಿರುತ್ತವೆ. ಕಥೆ ಹೇಳುತ್ತಾ ಸಾವಿನಿಂದ ತಪ್ಪಿಸಿಕೊಳ್ಳುವ ಅರೆಬಿಯನ್ ಇರುಳುಗಳ ಷಹಜಾದೆಯ ಕಥೆ ನನ್ನ ಪಾಲಿಗೆ ನಿಜವಾಗಿದೆ. ಆದರೆ ನನ್ನ ಕಥೆಗಳನ್ನು ಕೇಳುತ್ತಾ ನನ್ನ ದೇಹದ ಅಂಗವೇ ಆಗಿದ್ದ ಆಕೆ ಈಗ ಉಳಿದಿಲ್ಲ ಎಂಬುದು ಅದಕ್ಕಿಂತಲೂ ದೊಡ್ಡ ನಿಜವಾಗಿದೆ. ಆಕೆಯನ್ನು ನನ್ನ ಕಥೆಗಳಿಂದ ಉಳಿಸಿಕೊಳ್ಳಲಾಗಲಿಲ್ಲ ಎನ್ನುವ ವಿಷ ಸವರಿದ ಖಡ್ಗದ ಮೊನೆಯಂತಹ ಸತ್ಯ ನನ್ನನ್ನು ಈಗಲೂ ಕೊಲ್ಲುತ್ತಿರುತ್ತದೆ.

********

ಯಾವ ಬರಹಗಾರನಿಗೂ ಆ ಕಾಲದ ಮೇಲೆ ತನ್ನನ್ನು ತಾನು ಹೇರಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ದೊಡ್ಡ ಸತ್ಯ. ಕಾಲ ಮಾತ್ರ ಸಾಹಿತ್ಯವನ್ನೂ ಕಥೆಗಾರರನ್ನೂ ಕವಿಗಳನ್ನೂ ಸೃಷ್ಟಿಸಬಲ್ಲದು. ಅಕಾಲದಲ್ಲಿ ಬರೆಯುವವನು ಎಂತಹ ಅಭಿಜಾತ ಪ್ರತಿಭಾವಂತನಾಗಿದ್ದರೂ ಕಾಲ ಆತನನ್ನು ಅಂಡು ಒರೆಸುವ ಕಾಗದದಂತೆ ಬಳಸಿಕೊಳ್ಳುತ್ತದೆ. ಹಾಗಾಗಿ ತಂತ್ರಗಾರಿಕೆ, ಕಲಾತ್ಮಕತೆ ಇತ್ಯಾದಿಗಳಿಂದ ಸುಸ್ತು ಹೊಡೆಸಿಕೊಳ್ಳದೆ ಬದುಕಿನ ಇತರ ಸೌಂದರ್ಯಗಳತ್ತ ಮುಖ ಮಾಡುವುದು ಜಾಣತನ ಎಂಬುದು ನನ್ನ ಅನುಭವ. ಇದೆಲ್ಲ ಚಿಂತೆಗಳನ್ನು ಬಿಟ್ಟು ಪೂರ್ಣಚಂದ್ರನಂತಹ ಅವಳನ್ನು ಒಲಿಸಿಕೊಳ್ಳಲು ಅಷ್ಟು ಸಣ್ಣ ವಯಸಿನಲ್ಲೇ ಅದೆಷ್ಟು ಒದ್ದಾಡುತ್ತಿದ್ದೆನಲ್ಲಾ ಮತ್ತು ಈಗಲೂ ಹಾಗೆಯೇ ಓಡಾಡುತ್ತಿರುವೆನಲ್ಲಾ ಎಂಬುದು ನನಗೆ ಅತ್ಯಂತ ಹೆಮ್ಮೆಯ ವಿಷಯ. ನಕ್ಷತ್ರದಂತೆ ಕನಸಲ್ಲಿ ಬಂದಿದ್ದ ಅವಳು ಮತ್ತೆ ನಿಜವಾಗಿಯೂ ದುಡುದುಡು ಓಡಿಕೊಂಡು ಬಂದು ಪಕ್ಕದಲ್ಲಿ ಕುಳಿತು ಕಿವಿ ನಿಮಿರಿಸಿದರೆ ಅವಳಿಗೆ ಹೇಳಲು ಎಷ್ಟೊಂದು ಕಥೆಗಳಿವೆಯಲ್ಲಾ ಎಂದು ಇದೀಗ ಮತ್ತೆ ಹುಮ್ಮಸ್ಸುಗೊಳ್ಳುತ್ತಿದ್ದೇನೆ.

(ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟಿತ)
(ಚಿತ್ರಗಳು: ರೂಪಶ್ರೀ ಕಲ್ಲಿಗನೂರ್)