ಇಂದೀಗ ಫ್ರಾನ್ಸಿಸ್ಸನು ಬಿಡುಗಡೆ ಹೊಂದಿ ಊರ ಮೈದಾನಿನತ್ತ ಬರುತ್ತಿದ್ದಾನೆ. ಅಂದು ಸರಕಾರದ ವಿರುದ್ಧ ಭಾಷಣವೀಯಲು ಹೂಮಾಲೆಗಳಿಂದ ಅಲಂಕೃತನಾಗಿ ಜನರ ಜಯ ಜಯಕಾರದೊಡನೆ ಜನಸಂದಣಿಯ ಮಧ್ಯದಲ್ಲಿ ಅರಳಿದ ಮುಖದಿಂದ ಮೈದಾನಿನತ್ತ ತೆರಳಿದ್ದ ಮಾರ್ಗದಲ್ಲಿಯೆ ಇಂದು ಕಂದಿದ ಮುಖದಿಂದ ಒಬ್ಬಂಟಿಗನಾಗಿ ಹೋಗುತ್ತಿದ್ದಾನೆ. ಅವನನ್ನು ಕಂಡು ಮಾತಾಡಿಸುವವರಿಲ್ಲ. ಅವನ ತ್ಯಾಗಕ್ಕೆ ತಣಿದ ಒಂದೇ ಒಂದು ವ್ಯಕ್ತಿ ಕಂಡುಬರುವುದಿಲ್ಲ. ಒಮ್ಮೆ ಫ್ರಾನ್ಸಿಸ್ಸನು ತಲೆಯೆತ್ತಿ ನಾಲ್ಕು ಕಡೆಗೂ ದಿಟ್ಟಿಸಿದನು. ಇಲ್ಲ; ಒಂದೇ ಒಂದು ಪ್ರೇಮದೃಷ್ಟಿ ಅವನನ್ನು ಇದಿರುಗೊಳ್ಳಲಿಲ್ಲ. ಅವನಿಂದ ತಡೆಯಲಿಕ್ಕಾಗಲಿಲ್ಲ.
ಡಾ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕಥಾಸರಣಿಯಲ್ಲಿ ಫ್ರಾನ್ಸಿಸ್ ದಾಂತಿ ಬರೆದ ಕಥೆ “ಕನಸು”
ಎರಡು ವರುಷಗಳ ಹಿಂದೆ ಸತ್ಯಾಗ್ರಹ ಮಾಡಿ ಜೈಲು ಸೇರಿದ್ದ ಫ್ರಾನ್ಸಿಸ್ಸನು ಜೈಲು ಕೋಣೆಯೊಂದರಲ್ಲಿ ಬಿದ್ದುಕೊಂಡಿದ್ದಾನೆ. ರಾತ್ರಿ ಹನ್ನೊಂದು ಘಂಟೆ ಆಗಿರಬಹುದು. ಒಂದೆಡೆ ನುಸಿ – ತಗಣೆಗಳ ಕಾಟ; ಇನ್ನೊಂದೆಡೆ ತನ್ನ ಭಾವೀ ಜೀವನದ ಚಿಂತನೆ; ಇವುಗಳಿಂದ ಅವನಿಗೆ ನಿದ್ರೆಯೇ ಹತ್ತಲಿಲ್ಲ. ಬಹು ಸಮಯದವರೆಗೆ ಆಚೆ – ಈಚೆ ಹೊರಳಾಡಿದನು. ತಂಪಾದ ಗಾಳಿಯು ಮೆಲ್ಲನೆ ಬೀಸತೊಡಗಿದ್ದುದರಿಂದ ಇನ್ನಾದರೂ ನಿದ್ರಾಂಗನೆಯು ಒಲಿದಾಳು ಎಂದು ಭಾವಿಸಿ, ಕಣ್ಣುಗಳನ್ನು ಮುಚ್ಚಿಕೊಂಡು ಬಿದ್ದುಕೊಂಡನು.
******
ಇಂದೀಗ ಫ್ರಾನ್ಸಿಸ್ಸನು ಬಿಡುಗಡೆ ಹೊಂದಿ ಊರ ಮೈದಾನಿನತ್ತ ಬರುತ್ತಿದ್ದಾನೆ. ಅಂದು ಸರಕಾರದ ವಿರುದ್ಧ ಭಾಷಣವೀಯಲು ಹೂಮಾಲೆಗಳಿಂದ ಅಲಂಕೃತನಾಗಿ ಜನರ ಜಯ ಜಯಕಾರದೊಡನೆ ಜನಸಂದಣಿಯ ಮಧ್ಯದಲ್ಲಿ ಅರಳಿದ ಮುಖದಿಂದ ಮೈದಾನಿನತ್ತ ತೆರಳಿದ್ದ ಮಾರ್ಗದಲ್ಲಿಯೆ ಇಂದು ಕಂದಿದ ಮುಖದಿಂದ ಒಬ್ಬಂಟಿಗನಾಗಿ ಹೋಗುತ್ತಿದ್ದಾನೆ. ಅವನನ್ನು ಕಂಡು ಮಾತಾಡಿಸುವವರಿಲ್ಲ. ಅವನ ತ್ಯಾಗಕ್ಕೆ ತಣಿದ ಒಂದೇ ಒಂದು ವ್ಯಕ್ತಿ ಕಂಡುಬರುವುದಿಲ್ಲ. ಒಮ್ಮೆ ಫ್ರಾನ್ಸಿಸ್ಸನು ತಲೆಯೆತ್ತಿ ನಾಲ್ಕು ಕಡೆಗೂ ದಿಟ್ಟಿಸಿದನು. ಇಲ್ಲ; ಒಂದೇ ಒಂದು ಪ್ರೇಮದೃಷ್ಟಿ ಅವನನ್ನು ಇದಿರುಗೊಳ್ಳಲಿಲ್ಲ. ಅವನಿಂದ ತಡೆಯಲಿಕ್ಕಾಗಲಿಲ್ಲ. ಊರ ಮುಂದಾಳು, ಪ್ರಸಿದ್ಧ ದೇಶ ಪ್ರೇಮಿ; ಲಕ್ಷಾಧಿಪತಿ, ವಿ. ಪಿ. ರಾಯರ ಮನೆಯು ಸಮೀಪಿಸಿತು. ನೆಟ್ಟಗೆ ಅವರ ಮನೆಯನ್ನು ಸೇರಿದನು. ಫ್ರಾನ್ಸಿಸ್ಸನ ಆಗಮನವು ಪತ್ರಿಕೆಯೊಂದನ್ನೋದುತ್ತಾ ಕುಳಿತಿದ್ದ ರಾಯರಿಗೆ ತಿಳಿದರೂ ತಿಳಿಯದವನಂತೆ ನಟಿಸತೊಡಗಿದರು. ತಲೆಯನ್ನು ಬಗ್ಗಿಸಿಕೊಂಡು ಪತ್ರಿಕೆಯನ್ನು ಓದುವುದರಲ್ಲೇ ಮಗ್ನನಾಗಿದ್ದ ರಾಯರನ್ನು ಫ್ರಾನ್ಸಿಸ್ಸನೇ ಮಾತಾಡಿಸಬೇಕಾಯಿತು.
‘ನಮಸ್ಕಾರ ರಾಯರೇ.’
‘ಯಾರು?’
‘ನಾನು ಫ್ರಾನ್ಸಿಸ್ಸ್’
‘ಏಕೆ ಬಂದೆ?’
‘ತಮ್ಮನ್ನು ಕಾಣಲು.’
‘ಇಗೋ ಸರಿಯಾಗಿ ನೋಡು.’
‘ತಮಗೆ ನನ್ನ ಗುರುತು ಹತ್ತಲಿಲ್ಲವೆಂದು ಕಾಣುತ್ತದೆ. ನಾವು ಅಂದು ತಮ್ಮ ಸಲಹೆಯಂತೆ ಸತ್ಯಾಗ್ರಹ ಮಾಡಿದ್ದ ಫ್ರಾ….!’
‘ನನ್ನ ಸಲಹೆಯಂತೆ! ತಾನೂ ಒಬ್ಬ ಕಾಂಗ್ರೆಸ್ ಧುರೀಣನೆನಿಸಿಕೊಂಡು ಕೀರ್ತಿಗಳಿಸಬೇಕೆಂಬ ಅಪೇಕ್ಷೆಯಿಂದ ಎಂದರೆ ನಾಚಿಕೆಯಾಗುತ್ತದೆಯೇ?’
‘ರಾಯರೇ, ಇಂತಹ ಮಾತುಗಳು ತಮ್ಮಂತಹರ ಬಾಯಿಯಿಂದ ಬರತಕ್ಕವಲ್ಲ. ನೀನು ಮುಂದೆ ಹೋಗು ನಾನು ನಿನಗಿಂತ ಮುಂದಾಗಿ ಸತ್ಯಾಗ್ರಹಮಾಡಿ ಜೈಲು ಸೇರಿದರೆ ಚಳವಳಿಯೇ ನಿಂತು ಹೋಗುವುದು’ ಎಂದು ಪುಸಲಾಯಿಸಿ, ಸಾರ್ವಜನಿಕರೆದುರಲ್ಲಿ ತಾನೊಬ್ಬ ದೊಡ್ಡ ದೇಶ ಪ್ರೇಮಿಯೆಂದು ತೋರ್ಪಡಿಸುತ್ತಾ ಪರಿಸ್ಥಿತಿಯ ವಿಪರೀತಕ್ಕೆ ಕಾಲಿಟ್ಟೊಡನೆ ಬಾಲ ಮಡಚಿ ಕುಳಿತುಬಿಟ್ಟಿರಿ. ನಿಮ್ಮಂತಹ ಗೋಮುಖ – ವ್ಯಾಘ್ರರಿಂದಲೇ ಭಾರತಕ್ಕೆ ಈ ದುರ್ಗತಿಯೆಂದು ತಿಳಿಯಿರಿ. ನಿಮ್ಮನ್ನು ದೇಶ – ಪ್ರೇಮಿಗಳೆಂದರೆ ಹೆತ್ತ ತಾಯಿಯನ್ನು ಕಯ್ಯಾರೆ ಕೊಂದ ಮಗನನ್ನು ಮಾತೃ – ಪ್ರೇಮಿ ಎಂದಂತಾದೀತು. ನಿಮ್ಮೋರ್ವರ ಸ್ವಾರ್ಥಕ್ಕೋಸುಗ ನಿಮ್ಮನ್ನು ನಂಬಿಕೊಂಡಿರುವ ಜನ ಸಾಮಾನ್ಯರನ್ನು ವಂಚಿಸಲು….’
‘ರಾಸ್ಕಲ್!’ ರಾಯರು ಕುಳಿತಲ್ಲಿಂದ ಧಡಕ್ಕನೆ ಎದ್ದು ನಿಂತರು. ‘ಹೊರಡಿಲ್ಲಿಂದ. ಇಲ್ಲದಿದ್ದರೆ ದೂಡಿಸುತ್ತೇನೆ ಬೀದಿಗೆ!’
ಫ್ರಾನ್ಸಿಸ್ಸನು ಅಲ್ಲಿಂದ ಹೊರ ಹೊರಡುತ್ತಾ ‘ಭಾರತಾಂಬೇ, ಇದು ನಿನ್ನ ದೌರ್ಭಾಗ್ಯ’ ಎಂದವನೇ ನಿಟ್ಟುಸಿರೊಂದನ್ನು ಬಿಟ್ಟನು.
‘ರಾಯರೇ, ಇಂತಹ ಮಾತುಗಳು ತಮ್ಮಂತಹರ ಬಾಯಿಯಿಂದ ಬರತಕ್ಕವಲ್ಲ. ನೀನು ಮುಂದೆ ಹೋಗು ನಾನು ನಿನಗಿಂತ ಮುಂದಾಗಿ ಸತ್ಯಾಗ್ರಹಮಾಡಿ ಜೈಲು ಸೇರಿದರೆ ಚಳವಳಿಯೇ ನಿಂತು ಹೋಗುವುದು’ ಎಂದು ಪುಸಲಾಯಿಸಿ, ಸಾರ್ವಜನಿಕರೆದುರಲ್ಲಿ ತಾನೊಬ್ಬ ದೊಡ್ಡ ದೇಶ ಪ್ರೇಮಿಯೆಂದು ತೋರ್ಪಡಿಸುತ್ತಾ ಪರಿಸ್ಥಿತಿಯ ವಿಪರೀತಕ್ಕೆ ಕಾಲಿಟ್ಟೊಡನೆ ಬಾಲ ಮಡಚಿ ಕುಳಿತುಬಿಟ್ಟಿರಿ.
ದಿನಂಪ್ರತಿ ತಪ್ಪದೆ ಬರುತ್ತಿದ್ದ ಮೈದಾನವನ್ನು ಫ್ರಾನ್ಸಿಸ್ಸನು ಎರಡು ವರುಷಗಳ ನಂತರ ಪುನಹ ಪ್ರವೇಶಿಸುತ್ತಿದ್ದಾನೆ. ತನ್ನ ಜೀವನದ ಒಂದು ವಿಶೇಷ ಸ್ಥಳವಾದ ಆ ‘ಸೋಫಾ’ಗಳೆರಡರ ಕಡೆಗೆ ಒಮ್ಮೆ ದೃಷ್ಟಿಯನ್ನು ಹರಿಯಿಸಿದ. ತಾನು ಕುಳಿತುಕೊಳ್ಳುತ್ತಿದ್ದ ‘ಸೋಫಾ’ವು ಇಂದು ಬರಿದಾಗಿದೆ. ಎದುರು ಕಡೆಯಲ್ಲಿರುವ ಆ ಸೋಫಾದ ಮೇಲೆ ಸ್ತ್ರೀಯೋರ್ವಳು ಆಸೀನಳಾಗಿದ್ದಾಳೆ. ಯಾರೀಕೆ? ಲಿಲ್ಲಿಯಾಗಿರಬಹುದೇ? ಎಂದಾಲೋಚಿಸುತ್ತಾ ಬೇಗ ಬೇಗ ನಡೆಯತೊಡಗಿದ. ಹೌದು; ಲಿಲ್ಲಿಯೇ ಹೌದು.
‘ಲಿಲ್ಲೀ’
ಲಿಲ್ಲಿಯು ಹಿಂತಿರುಗಿ ನೋಡಿದಳು. ಫ್ರಾನ್ಸಿಸ್ಸನೂ ಅವಳನ್ನು ದಿಟ್ಟಿಸಿದ. ಆದರೆ ಲಿಲ್ಲಿಯ ಕಂಗಳಿಗೆ ಫ್ರಾನ್ಸಿಸ್ಸನ ಕಣ್ನೋಟವನ್ನು ಇದಿರಿಸುವ ಶಕ್ತಿಯೆಲ್ಲಿಂದ ಬರಬೇಕು. ಆಕೆ ತಲೆತಗ್ಗಿಸಿದಳು.
‘ಏನು ಲಿಲ್ಲೀ, ನನ್ನ ಗುರುತಾಗಲಿಲ್ಲವೇ?’
‘ಇಲ್ಲ’
‘ಏನು? ಇದೇ ‘ಸೋಫಾ’ದ ಮೇಲೆ ಕುಳಿತು ನೀನು ಯಾರೊಡನೆ ‘ನನ್ನ ಕೈ ಬಿಡಬೇಡ’ ಎಂದು ಯಾಚಿಸಿದ್ದೆಯೋ ಆ ಫ್ರಾನ್ಸಿಸನ ಗುರುತಾಗಲಿಲ್ಲ! ದಿನಕ್ಕೆರಡರಂತೆ ಪತ್ರಗಳನ್ನು ಯಾರಿಗೆ ಕಳುಹಿಸುತ್ತಿದ್ದೆಯೋ ಅವನ ಗುರುತಾಗಲಿಲ್ಲ! ‘ಬೇಡ, ನನ್ನ ದಾರಿಗೆ ಅಡ್ಡ ಬರಬೇಡ! ಸ್ತ್ರೀಯರು ಚಂಚಲೆಯರು. ಅವರನ್ನು ನಂಬಬಾರದು’ ಎಂದು ಅನೇಕ ತಡವೆ ಹೇಳಿದರೂ ‘ಪವಿತ್ರ ಪ್ರೇಮ, ನಿಷ್ಕಾಮ ಪ್ರೇಮ, ನಿನ್ನ ಹೊರತು ಅನ್ಯ ಪುರುಷರು ನನಗೆ ಭ್ರಾತೃಸಮಾನರು’ ಎಂದು ಯಾರೊಡನೆ ಹೇಳಿದ್ದೆಯೋ ಅಂತಹ ಫ್ರಾನ್ಸಿಸ್ಸನ ನೆನಪಾಗಲಿಲ್ಲ!’
‘ಹೋ ಫ್ರಾನ್ಸಿಸ್ಸನೇ? ಹೇಗೆ ಗುರುತು ಹಚ್ಚಬೇಕು? ಅಂದಿನ ಆ ಫ್ರಾನ್ಸಿಸ್ಸೆಲ್ಲಿ? ಇಂದಿನ ನೀನೆಲ್ಲಿ? ಅಂದಿನ ಆ ಫ್ರಾನ್ಸಿಸ್ಸನು ಕ್ಲಾಸಿನಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದ ವಿದ್ಯಾರ್ಥಿ; ಜಮೀನುದಾರ ಅಂತೋನಿ ಪ್ರಭುಗಳ ಆಸ್ತಿಯ ಹಕ್ಕುದಾರನಾಗಿದ್ದ ಫ್ರಾನ್ಸಿಸ್ಸನು. ಇಂದಿನ ಫ್ರಾನ್ಸಿಸ್ಸನು ಬೀದಿಯ ಭಿಕಾರಿಗಿಂತಲೂ ಕಡೆಯಾಗಿ ಕಾಣುತ್ತಿರುವ, ಜೈಲಿನಿಂದ ಹೊರಬಿದ್ದ ಫ್ರಾನ್ಸಿಸ್ಸನು! ಫ್ರಾನ್ಸಿಸ್ಸ್, ಎಚ್ಚರದಿಂದ ಮಾತನಾಡು. ಏನೋ ಹುಡುಗಾಟಿಕೆಯ ಮರುಳು ಬುದ್ಧಿಯಿಂದ ನಿನ್ನೊಡನೆ ಅಂದು ಆಡಿರಬಹುದು. ಪತ್ರ ಬರೆದಿರಬಹುದು; ಅವನ್ನೆಲ್ಲಾ ನೆನೆಸಿ ಈಗ ಫಲವಿಲ್ಲ . ಈಗ ನಿನ್ನ ಮುಂದೆ ಕುಳಿತಿರುವವಳು ವಿದ್ಯಾರ್ಥಿನಿ, ಅವಿವಾಹಿತೆ ಲಿಲ್ಲಿಯಲ್ಲ. ಲಕ್ಷಾಧೀಶ ಡಿ. ಜೆ. ಜೋಸೇಫರ ಪತ್ನಿ ಎಂದು ತಿಳಿದು ಮರ್ಯಾದೆಯಿಂದ ಮಾತನಾಡು.’
‘ಏನು? ಡಿ. ಜೆ. ಜೋಸೇಫರ ಪತ್ನಿಯೇ? ಆದ್ದರಿಂದಲೇ ನಿನಗೆ ನನ್ನ ಗುರುತಾಗಲಿಲ್ಲ. ಮನೋವಾಕ್ಕಾಯಗಳಿಂದ ಕಠಿಣ ವೃತವನ್ನಾಚರಿಸಿ, ಸ್ವದೇಶಸೇವೆಗಾಗಿ ಪುರುಷರನ್ನು ಹುರಿದುಂಬಿಸುತ್ತಿದ್ದ ಭಾರತೀಯ ಸ್ತ್ರೀಯರ ಆ ಕಾಲವು ಕಾಲವಾಗಿರುವಾಗ ನಿನ್ನಂತಹರು ಹೀಗೆ ವರ್ತಿಸುವುದರಲ್ಲಿ ತಪ್ಪೇನಿದೆ? ಆದರೆ ಲಿಲ್ಲೀ, ಶ್ರೀಮಂತಿಕೆಯನ್ನು ಇಷ್ಟೊಂದು ಪ್ರೀತಿಸುತ್ತಿದ್ದ ನೀನು ನನ್ನನ್ನು ಬಗೆ ಬಗೆಯಾಗಿ ಪುಸಲಾಯಿಸಿ ನನ್ನ ಜೀವನಪಥದಲ್ಲಿ ಕಲ್ಲು ಮುಳ್ಳುಗಳನ್ನೇಕೆ ಒಡ್ಡಿದೆ?’
‘ಅಂದು ನಾನೆಣಿಸಿದ್ದೆ, ಫ್ರಾನ್ಸಿಸ್ಸನೆಂದರೆ, ಮುಂದೆ ಶಿಕ್ಷಣವನ್ನು ಸಂಪೂರ್ಣಗೊಳಿಸಿ, ‘ಸರ್ಟಿಫೀಕೇಟು’ ಪಡೆದು ಉದ್ಯೋಗವನ್ನು ಸಂಪಾದಿಸಿಕೊಂಡು, ತಂದೆಯ ಆಸ್ತಿಯನ್ನನುಭವಿಸಿಕೊಂಡು ಶ್ರೀಮಂತಿಕೆಯಿಂದ ಮೆರೆಯಬಹುದಾದ ವ್ಯಕ್ತಿಯೆಂದು! ಹುಚ್ಚನಂತೆ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿ ಜೈಲು ಸೇರಿ ಬೀದಿಯ ಭಿಕಾರಿಯಾಗಿ ಅಲೆಯುತ್ತಿರುವ ನಿನ್ನಂತಹ ಪುರುಷನೊಬ್ಬನ ಕೈಹಿಡಿಯಲು ನನ್ನಂತಹ ನವನಾಗರಿಕ ಸ್ತ್ರೀಯೋರ್ವಳು ಮುಂದೆ ಬರಬಹುದೆಂಬುದನ್ನು ಮರೆತುಬಿಡು.’
‘ಹಾಗಾದರೆ ನೀನು ಅಥವಾ ನಿನ್ನಂತಹ ಸ್ತ್ರೀಯರು ಪ್ರೀತಿಸುವುದು ಸಂಪತ್ತನ್ನು; ವ್ಯಕ್ತಿಯನ್ನಲ್ಲ. ನಿನ್ನ ಮುಖಾವಲೋಕನವೂ ಪಾಪಕರ. ನೀನು ನನಗೆ ಬರೆದಿದ್ದ ಪತ್ರಗಳಲ್ಲಿ ಇದೊಂದನ್ನು ಜೋಪಾನವಾಗಿಟ್ಟಿದ್ದೆ. ನಿನ್ನದನ್ನು ನೀನು ತೆಗೆದುಕೊ.’
ನಿಟ್ಟುಸಿರೊಂದನ್ನು ಬಿಡುತ್ತಾ ಪತ್ರವನ್ನು ಲಿಲ್ಲಿಯ ಕಡೆಗೆ ಎಸೆದು ನಡೆಯತೊಡಗಿದನು. ಮತ್ತೆ ಹಿಂದಿರುಗಿ ನೋಡಲಿಲ್ಲ.
(ಅಂತರಂಗ; 1945)
ಟಿಪ್ಪಣಿ:
‘ಶ್ರೀದಾಂತಿ’ ಎಂಬ ಹೆಸರಿನಲ್ಲೇ ಪ್ರಸಿದ್ಧರಾಗಿರುವ ಫ್ರಾನ್ಸಿಸ್ ದಾಂತಿ (1922-1991) ಅವರು ಅವಿಭಜಿತ ದಕ್ಷಿಣ ಕನ್ನಡದ ಮೊದಲ ಕ್ರೈಸ್ತ ಲೇಖಕರು. ಅವರು ದಾಂತಿ, ಸಿದ್ಧಾಂತಿ, ಶ್ರೀ ದಾಂತಿ ಮತ್ತು ಚಾಣಕ್ಯ ಎಂಬ ಕಾವ್ಯನಾಮಗಳಲ್ಲಿ ಬರೆಯುತ್ತಿದ್ದರು. ಮೂಡುಬೆಳ್ಳೆ ಸಮೀಪದ ಮಣಿಪುರ ಗ್ರಾಮದಲ್ಲಿ ಜನಿಸಿದ ದಾಂತಿಯವರು ಅಲೆವೂರಿನ ಸುಬೋಧಿನಿ ಹಾಯರ್ ಪ್ರೈಮರಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ನಂತರ ಸಿಂಡಿಕೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತರಾದರು.
ಅವರು ‘ಸುಬೋಧಿನಿ’ ಎಂಬ ತ್ರೈಮಾಸಿಕ ಪುಸ್ತಕ ಮಾಲೆಯನ್ನು ಪ್ರಾರಂಭಿಸಿ ಉದಯೋನ್ಮುಖ ಲೇಖಕರಿಗೆ ಪ್ರೋತ್ಸಾಹ ನೀಡಿದರು. ಅವರು ಪುಸ್ತಕ ವಿಮರ್ಶೆ ಹಾಗೂ ಕತೆಗಳನ್ನು ಜಿಲ್ಲೆಯ ಪತ್ರಿಕೆಗಳಲ್ಲಿ ನಿಯಮಿತವಾಗಿ ಬರೆಯುತ್ತಿದ್ದರು. 4 ನಾಟಕ ಕೃತಿಗಳು, 2 ಪದ್ಯ ಕೃತಿಗಳು ಹಾಗೂ 7 ಜೀವನ ಚರಿತ್ರೆಯ ಕೃತಿಗಳನ್ನು ಶ್ರೀದಾಂತಿಯವರು ಪ್ರಕಟಿಸಿದ್ದಾರೆ. ಅವರ ನೂರಾರು ಲೇಖನಗಳು ಹಾಗೂ ಕತೆಗಳು ಸಂಕಲನರೂಪದಲ್ಲಿ ಬಂದಿಲ್ಲ. ಪ್ರಸ್ತುತ ಕತೆ ‘ಅಂತರಂಗ’ ಪತ್ರಿಕೆಯಲ್ಲಿ 1945ರಲ್ಲಿ ಪ್ರಕಟವಾಗಿತ್ತು.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.