ರಾಧಾಕೃಷ್ಣನು ಬಂದ ಹದಿನೈದು ದಿವಸಗಳಲ್ಲಿ, ತನ್ನ ಗುಡಿಸಲಿನ ಸಲುವಾಗಿ ಸಾಮಗ್ರಿಗಳನ್ನು ದೊರಕಿಸಿಕೊಳ್ಳಲು ಊರಲ್ಲಿ ಅಲೆದಾಡಿದನು. ಒಬ್ಬಿಬ್ಬರ ಪರಿಚಯವೂ ಆಯಿತು. ಆಗ ಅವರಲ್ಲಿ ಹೋಗುವ ಎಂದು ಹೊರಟನು. ಆ ದಿನದ ಗ್ರಾಸಕ್ಕೆ ಬೇರೆ ದಾರಿ ಇದ್ದಿರಲಿಲ್ಲ. ಅದಕ್ಕಾಗಿ ಹೊರಟಿದ್ದ ಅವನು ಹಿಂದೀ ರಣಾಗ್ರದಲ್ಲಿ ಸಿಲುಕಿಕೊಂಡನು. ಕೊನೆಗೆ ಶ್ಯಾಮ, ನೀಲ ಎಂದು ಇಬ್ಬರು ಹಿರಿಯ ಹುಡುಗರನ್ನು ಕರೆದುಕೊಂಡು ಗ್ರಾಮದಲ್ಲಿ ಭಿಕ್ಷಾಟನೆಗೆ ಹೊರಟನು. ಮೊದಲ ಬಾರಿ ಅಲ್ಲವೇ? ಹೋದ ಇವರಿಗೆ ಭಿಕ್ಷೆ ಎತ್ತಲು ಸಂಕೋಚವಾದರೂ, ತಮ್ಮ ಊರಿನ ಹೊಸ ಸಂಸ್ಥೆಗಾಗಿ ದಾನ ಮಾಡುವುದರಲ್ಲಿ ಊರವರಿಗೆ ಉತ್ಸಾಹವೇ ಬಂತು.
ಡಾ.ಜನಾರ್ದನ ಭಟ್ ಸಾದರಪಡಿಸುತ್ತಿರುವ ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಕೆ. ಶಿವರಾಮ ಕಾರಂತರು ಬರೆದ ಕತೆ ‘ದಯಾನಂದರಾಯರ ದಲಿತಾಶ್ರಮ’

 

ಆಲೆಮನೆಯಲ್ಲಿ ರಾಧಾಕೃಷ್ಣ ಮೂರು ತಿಂಗಳ ಕಾಲವನ್ನು ಕಳೆದುದಾಯಿತು. ಚಾವಡಿಯಲ್ಲೇ ಶಾಲೆ ನಡೆಯುತ್ತಿರುವಾಗ, ಸಮಯ, ಪಾಠ ಹೇಳಿಕೊಡುವುದರಲ್ಲಿ ಹೇಗೂ ಹೋಗುತ್ತಿದೆ. ಸಂಜೆ ಅವರೊಡನೆ ಸೇರಿ ಆಟವಾಡುತ್ತಾನೆ. ಬೆಳಿಗ್ಗೆ ಒಬ್ಬಂಟಿಗನಾಗಿ ಊರಲ್ಲಿ ಅಲೆದಾಡಿ ಗ್ರಾಮಸ್ಥರ ಪರಿಚಯ ಮಾಡಿಕೊಳ್ಳುತ್ತಾನೆ. ಅವರಿಗೆ “ನೀವಿಷ್ಟು ಹತ್ತಿಯ ಗಿಡ ನೆಟ್ಟು, ನೂಲು ಮಾಡುತ್ತ ಬಂದರೆ ನಿಮ್ಮ ಖರ್ಚಿಗೆ ಬೇಕಾದ ಅರಿವೆಯನ್ನು ಮಾಡಿಕೊಳ್ಳಬಹುದಲ್ಲಾ” ಎಂದು ಉಪದೇಶಿಸುತ್ತಾನೆ. ಈ ನಡುವೆ ಊರಿನ ಬಳಿ ಯಾರಾದರೂ ಜೇಡರಿದ್ದಾರೆಯೇ ಎಂದು ವಿಚಾರಿಸುತ್ತಿದ್ದಾನೆ. ಅಲ್ಲಿಗೆ ಬಂದು ಹರಿದಾರಿ ದೂರದಲ್ಲಿ ಒಬ್ಬ ನೇಕಾರನಿರುವುದನ್ನು ತಿಳಿದುಕೊಂಡು, ಅವನ ಮನೆಗೆ ಹೋಗಿಬರುತ್ತ ನೇಯ್ಗೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದಾನೆ. ದಿನಗಳು ಹೀಗೆ ಸರಿದರೆ, ಕತ್ತಲು ಸಮಯ, ಮಂಜಯ್ಯನವರ ತಾಯಿ ಶೇಷಮ್ಮನೊಡನೆ ಕುಳಿತು ಲೋಕಾಭಿರಾಮವಾಗಿ ಹರಟೆ ಕೊಚ್ಚುತ್ತಾನೆ. ಅವರ ಜತೆಗೆ ಮನೆಯ ಮಕ್ಕಳು ಕುಳಿತಿರುವುದುಂಟು.

ಅವರೆದುರಿಗೆ ನಿತ್ಯವೂ ದೇಶದ ಪರಿಸ್ಥಿತಿಯನ್ನು ಕುರಿತು ರಾಧಾಕೃಷ್ಣ ಮಾತನಾಡುತ್ತಿದ್ದ. ಅನೇಕ ವಿಷಯಗಳಲ್ಲಿ ಆ ಮುದುಕಿ ಆತನ ಅಭಿಮತವನ್ನು ಒಪ್ಪುತ್ತಿದ್ದಳು. “ಜನ ಬರಿದೆ ಹೊತ್ತು ಕಳೆಯುವುದಕ್ಕಿಂತ ನೂತದರಿಂದ ಹಾನಿ ಇಲ್ಲ” ಎಂದು ಒಪ್ಪುತ್ತಾಳೆ. ಆದರೆ, ಒಂದು ವಿಷಯದಲ್ಲಿ ಖಂಡಿತವಾಗಿ ತೀರ್ಮಾನ “ನೀನೇನೂ ಹೇಳು ಮಗು – ನಿನ್ನ ಗಾಂಧಿ ಬ್ರಾಹ್ಮಣರನ್ನೂ ಹೊಲೆಯರನ್ನೂ ಒಂದುಮಾಡುವುದನ್ನು ಮಾತ್ರ ನಾನು ಒಪ್ಪುವುದಿಲ್ಲ” ಎಂದು ಬಿಡುತ್ತಾಳೆ.

“ಒಂದು ಮಾಡುವುದೆಂದರೆ, ಒಂದೇ ಮನೆಯಲ್ಲಿರುವುದಲ್ಲ.”

“ಅವರನ್ನು ಮುಟ್ಟುವುದು, ಮಾಡುವುದು ಸಮವೇ? ಕೊರಗರು, ಕೂಸಾಳು ಎಂದು ಯಾರು ಮಾಡಿದ್ದು? ದೇವರೇ ಅಲ್ಲವೇ? ಯಾವ ಪಾಪ ಮಾಡಿ ಆ ಜನ್ಮ ಬಂದಿದೆಯೋ ಅವಕ್ಕೆ.”

“ಅದನ್ನು ದೇವರೆಲ್ಲಿ ಮಾಡುತ್ತಾನೆ ಅಜ್ಜೀ? ಮನುಷ್ಯ ಮಾಡುವುದು ಅದನ್ನೆಲ್ಲ. ದೇವರಿಗೆ ತನ್ನ ಮಕ್ಕಳಲ್ಲಿ ಭೇದವಿದ್ದೀತೇ? ವೇದಗಳಲ್ಲಿ ಈ ಅಸ್ಪೃಶ್ಯತೆಗೆ ಆಧಾರವಿಲ್ಲ.”

“ಹಾ, ವೇದ ಗೀದ ನನಗೇನು ಗೊತ್ತು. ನಮ್ಮ ಹಿರಿಯರ್ಯಾರಿಗೂ ವೇದ ಗೊತ್ತಿಲ್ಲ ಅನ್ನುತ್ತಿಯ? ವೇದ, ಶಾಸ್ತ್ರ ನಿನ್ನ ಗಾಂಧಿ ಒಬ್ಬನಿಗೇ ಗೊತ್ತು ಎನ್ನುತ್ತೀಯಾ” ಎಂದು ಮುದುಕಿ ತನ್ನ ಹಟ ಹಿಡಿದರೆ, ಆತನ ಹಟ ಮುಣ್ಣು ಮುಕ್ಕುವುದು.

ಅವನು ನಿರುತ್ತರನಾಗುತ್ತಾನೆ. ಕೊನೆಗೆ ಉಪಾಯವಾಗಿ “ಒಂದೊಂದು ಕಾಲದಲ್ಲಿ ಒಂದೊಂದು ತರಹ ಅಜ್ಜಿ; ಆಗಿನ ಕಾಲಕ್ಕೆ ಅದು ಸಮನಾಗಿರಬಹುದು. ಈಗಿನ ಕಾಲಕ್ಕೆ ಅದು ಒಪ್ಪುವುದಿಲ್ಲ” ಎಂದು ಹೇಳುತ್ತಾನೆ. ಅಲ್ಲಿಂದ ಮಾತು ಬೇರೆ ಕಡೆಗೆ ಹೊರಳುತ್ತದೆ. ಹಾಗೇನೆ ಒಂದು ದಿವಸ ಆಚೀಚೆ ಮೊಮ್ಮಕ್ಕಳಿಲ್ಲದ್ದನ್ನು ಕಂಡು ಮುದುಕಿಯು ಪ್ರಸ್ತಾಪಿಸಿದಳು: “ಹೌದಾ ಇವರೇ, ನಾನು ಒಂದು ಸಂಗತಿ ಕೇಳುತ್ತೇನೆ, ಕೂಡದು ಎನ್ನಬಾರದು” ಎಂದಳು.
“ಏನು ಹೇಳಿ; ನನ್ನಿಂದಾಗುವುದಾದರೆ ಮಾಡುತ್ತೇನೆ” ಎಂದನು.

“ಆಮೇಲೆ ಅಲ್ಲ ಅಂದರೆ?’’

“ಆಯಿತು ಅಂದ ಮೇಲೆ ಇಲ್ಲ ಅನ್ನುತ್ತೇನೆಯೇ? ಆಗುವ ಕೆಲಸವಾದರೆ ಮಾಡಬಹುದಲ್ಲ’’ ಎಂದನು. ಅವನ ಮನಸ್ಸಿನಲ್ಲಿ ಆ ಮುದುಕಿ ತನ್ನ ಬೇನೆಯ ವೇಳೆಯಲ್ಲಿ ಮಾಡಿದ ಉಪಚಾರಗಳನ್ನು ನೆನೆದು, ಕೃತಜ್ಞತೆ ಸಲ್ಲಿಸುವ ಸಂದರ್ಭ ದೊರಕಿದರೆ ಸಂತೋಷ ಅನಿಸಿತು.

ಮುದುಕಿ ತುಸು ಸಮಯ ಬಾಯಿ ಬಿಗಿ ಹಿಡಿದು, “ಅಲ್ಲ ಮಗು, ನೀನೇನೆಂದು ತಿಳಿಯುತ್ತೀಯೋ! ನಮ್ಮ ಸತ್ಯನಿಗೆ ನೀನೆಂದರೆ ತುಂಬಾ ಆಸೆ. ಅವಳಿಗೆ ಲಗ್ನವಾಗುವ ಪ್ರಾಯ ಮೀರಿತು. ನಮಗೂ ಈ ಒಂದು ಸಂಬಂಧ ದೇವರು ನಡೆಯಿಸಿದರೆ ಆಗುತ್ತಿತ್ತು’’ ಎಂದಳು. ರಾಧಾಕೃಷ್ಣ ವಿಚಾರಮಗ್ನನಾಗಿ ಕುಳಿತನು. ಆಯಿತೆಂದು ಸುಲಭದಲ್ಲಿ ಉತ್ತರಿಸುವ ಪ್ರಶ್ನೆ ಅದಲ್ಲ.

“ಏನು, ಬೇಸರವಾಯಿತೇ?’’ ಎಂದು ಆಕೆ ಕೇಳಿದಳು.

“ಬೇಸರವಿಲ್ಲ. ಹೆಣ್ಣು ಮಕ್ಕಳಿದ್ದವರು ಆ ಮಾತನ್ನು ಎತ್ತುವುದರಲ್ಲಿ ಆಶ್ಚರ್ಯವೂ ಇಲ್ಲ. ಆದರೆ ನಾನು ಮಾತ್ರ ಥಟ್ಟನೆ ಉತ್ತರ ಹೇಳುವುದು ಕಷ್ಟದ ಕೆಲಸ.’’
“ಆಗಲಿ, ಯೋಚಿಸಿ, ಮನೆಯವರನ್ನು ಕೇಳಿ ಹೇಳು.’’

•••

ಆ ರಾತ್ರಿಯ ಸಭೆಯಲ್ಲಿ ಶೇಷಮ್ಮನವರ ಬಯಕೆಗೆ ಪರಿಪೂರ್ಣ ವಿಜಯ. ಮಂಜಯ್ಯನವರು ಈ ಸಂಧಾನದ ಫಲಿತಕ್ಕೆ ಕಿವಿ ನಿಮಿರಿಸಿಕೊಂಡು ಕಾದಿದ್ದರು. ಹಾಗೂ ಹೀಗೂ, ಈ ಒಬ್ಬ ಮಗಳನ್ನು ನೀಗಿಸಿಕೊಂಡರೆ ಮುಂದೆ ಕಷ್ಟ ಬರಲಾರದು. ಉಳಿದ ಮಕ್ಕಳ ಜಾತಕಗಳು ಒಳ್ಳೆಯವು – ಎಂದು ಉಸಿರುಗರೆದರು. ಹಿರಿಯಾಕೆ ಸತ್ಯ ಅವರ ಮೆಚ್ಚಿನ ಹುಡುಗಿ. ಅವಳ ಮದುವೆಯನ್ನು ಬಹಳ ವಿಜೃಂಭಣೆಯಿಂದ ಜರುಗಿಸಬೇಕೆಂದು ಅವರ ಆಪೇಕ್ಷೆ. ಆದರೆ ಶೇಷಮ್ಮಗೂ, ರಾಧಾಕೃಷ್ಣನಿಗೂ ನಡೆದ ಸಂಭಾಷಣೆಯ ರೀತಿ ಬೇರೆಯೇ ಹಾದಿಯನ್ನು ಹಿಡಿದಿತ್ತು.

“ಮದುವೆಗೇನೋ ಒಪ್ಪಿಗೆ. ಆದರೆ ಲಗ್ನ ನನ್ನಿಷ್ಟದಂತೆ ಆಗಬೇಕು. ನಾನು ತಂದೆಯನ್ನು ಕೇಳುವುದಿಲ್ಲ. ಅವರನ್ನು ಒಲಿಸುವ, ಇಲ್ಲವೆ ಬಿಡುವ ಕೆಲಸ ಮಂಜಯ್ಯನವರದ್ದು.’’

“ಅದಿರಲಿ’’

“ಇನ್ನು ಲಗ್ನದ ವಿಚಾರ. ಅದನ್ನು ಎಷ್ಟು ಸುಲಭದಲ್ಲಿ, ಎಷ್ಟು ಕಡಿಮೆ ಖರ್ಚಿನಲ್ಲಿ ಮಾಡುತ್ತೀರೋ ಮಾಡಬೇಕು. ಹಾಗೆ ಮಾಡಿ ಆದ ಉಳಿತಾಯವನ್ನೆಲ್ಲ ಗಾಂಧೀ ಫಂಡಿಗೆ ಕೊಡಬೇಕು. ಮದುವೆಯ ಮನೆಗೆ ಸಕ್ಕರೆ ಬರಕೂಡದು. ಮದುಣವಣಿಗಿತ್ತಿಗೆ ಖಾದಿ ಉಡಿಸಬೇಕು’’ ಎಂದು ಒಂದೊಂದಾಗಿ ಗಾಂಧಿ ಕರಾರುಗಳನ್ನು ಹಾಕಿದನು. ಮುದುಕಿ ಅದನ್ನೆಲ್ಲ ಸುಲಭದಲ್ಲಿ ಒಪ್ಪಿಕೊಂಡರೂ, ಈ ನಿರ್ಣಯಗಳೆಲ್ಲ ಮಂಜಯ್ಯನವರ ಉತ್ಸಾಹವನ್ನು ಮುಕ್ಕಾಲು ಮೂರು ವೀಸದಷ್ಟು ಅಪಹರಿಸಿದುವು. ಆಲೆಮನೆಯವರ ಹಿರಿಯ ಮಗಳ ಲಗ್ನವಲ್ಲವೇ! ಅದು ಇಷ್ಟು ಸಪ್ಪೆಯಾಗಿ ನಡೆಯಬೇಕೆಂಬ ವಿಚಾರ ಅವರ ಗಾಂಭೀರ್ಯಕ್ಕೆ ಕಡಿಮೆ. `ಇಂಥ ನೂರು ಅಳಿಯಂದಿರನ್ನು ಕ್ರಯಕ್ಕೆ ಕೊಂಡೇನು,’ ಎನ್ನುವ ಠೀವಿ ಮಗಳ ಜಾತಕದ ಕೇಡು ನಕ್ಷತ್ರದಿಂದ ನಿಮಿತ್ತವಾಗಿ ನಮ್ರವಾಗಬೇಕಾಯಿತು.

•••

ರಾಧಾಕೃಷ್ಣನ ಬೇಸರದ ದಿವಸಗಳು ಹೊಸ ದಾಂಪತ್ಯದಿಂದಾಗಿ ಹರ್ಷವಾಗಿಯೇ ಸಾಗಿದುವು. ಪ್ರತಿದಿನ ಕೆಲವು ಸಮಯವನ್ನಾದರೂ ಸತ್ಯಳೊಡನೆ ಕುಳಿತು ಭವಿಷ್ಯ ಚಿಂತನೆ ಮಾಡುವುದರಲ್ಲಿ ಕಳೆಯುತ್ತಾನೆ, ನವಯುಗಕ್ಕೆ ತಕ್ಕಂತೆ ತನ್ನ ಜೀವನ ಸಂಗ್ರಾಮದ ಪಾಲುಗಾರ್ತಿಯಾಗಲು, ಅವಳಲ್ಲಿ ತನ್ನ ಏನೇನು ಬಯಕೆಗಳಿವೆಯೋ, ಅವನ್ನು ಪ್ರಕಟಿಸುತ್ತಿದ್ದ. ಬಾಹ್ಯಜಗತ್ತಿಗೆ, ಹೊಸಬಳಾದ ಅವಳು, ಅವನೆನ್ನುವುದೆಲ್ಲವನ್ನೂ ಕುತೂಹಲದಿಂದ ಕೇಳುತ್ತಾಳೆ. ಸ್ವತಃ ಅವಳಿಗೆ ಏನು ಅನ್ನುವುದಕ್ಕೂ ಬಾರದು. ಅವನ ಮನವನ್ನು ಒಲಿಸುವುದರ ಸಲುವಾಗಿ ದಿನದಲ್ಲಿ ತಾಸು, ಎರಡು ತಾಸು ಕಾಲ ನೂಲು ಮಾಡುತ್ತಾಳೆ. ಅದನ್ನು ಹೆಗ್ಗಳಿಕೆಯಿಂದ ಅವನ ಮುಂದಕ್ಕೆ ಇರಿಸುತ್ತಾಳೆ. ಅದನ್ನು ರಾಧಾಕೃಷ್ಣ ಮಾವನಿಗೆ ತೋರಿಸಿ “ನಾಳೆ ನಿಮ್ಮ ಹುಣಿಸೆ ಬೆಟ್ಟಿನ ಜೇಡರವನಿಂದ ಇದನ್ನು ನೇಯಿಸಿ ನಿಮ್ಮ ಮಗಳಿಗೆ ಇದರಿಂದ ಒಂದು ಸೀರೆ ಮಾಡಿಸುತ್ತೇನೆ” ಎನ್ನುತ್ತಾನೆ. “ಇಷ್ಟು ಸ್ವಲ್ಪ ನೂಲಲ್ಲೇ” ಎಂದು ಅವರು ವಿಸ್ಮಯಪಟ್ಟರೆ “ಇನ್ನೂ ಒಂದು ತಿಂಗಳ ಕಾಲ ಅವಳು ಹೀಗೇ ನೂಲಬೇಕು. ಮಗ್ಗ ಸಿಕ್ಕಿದರೆ ನಾನೇ ನೆಯ್ದೇನು. ಆದರೆ ಮಗ್ಗಕ್ಕೆ ಎಲ್ಲಿ ಹೋಗಲಿ” ಅನ್ನುತ್ತಾನೆ. ಮಗ್ಗದ ನೆನಪಾಗುವಾಗ ಇನ್ನೊಂದು ನೆನಪಾಗುತ್ತದೆ. ಅದು ಗಿರಣಿ ಹಿಂಜಿದ ಹತ್ತಿ. ಅದನ್ನು ನಂಬಿದರೆ ಕೆಲಸ ಅರ್ಧಕ್ಕೆ ಅರ್ಧ. ಈಗ ಕಲಿಯುತ್ತಿರುವ ಮಕ್ಕಳಿಗೆ ಕೊಡುವುದಕ್ಕೆ ಹತ್ತಿ ಇಲ್ಲ. ಸಾಕಷ್ಟು ನೂಲು ಜಮಾಯಿಸದೆ ಬಟ್ಟೆ ಆಗುವಂತಿಲ್ಲ. ನೂತ ನೂಲು ಅಭ್ಯಾಸದ ನೂಲು. ಒಂದೊಂದು ಒಂದೊಂದು ತೆರ. ನೇಯುವುದಕ್ಕೂ ಕಷ್ಟ.

“ಹತ್ತಿಗೇನು ಬರಗಾಲ? ನಮ್ಮ ಊರಲ್ಲಿಯೇ ಎಷ್ಟೋ ಗಿಡಗಳಿವೆಯಲ್ಲ’’ ಎನ್ನುತ್ತಾರೆ ಮಂಜಯ್ಯನವರು.

“ಗಿಡ ಇವೆ. ಈ ವರ್ಷ ಹಲವರು ನಟ್ಟಿದ್ದಾರೆ. ಆದರೆ, ಗಿಡ ಬೆಳೆದು ಹತ್ತಿ ಆಗುವುದಕ್ಕೆ ಇನ್ನೂ ಒಂದು ವರ್ಷ ಬೇಕು. ಊರಿನ ಹತ್ತಿ ಜನಿವಾರಕ್ಕೋ, ದೇವರ ದೀಪಕ್ಕೋ ಸಾಕಾಗಬಹುದು. ನೂಲು ಮಾಡುವುದಕ್ಕೆ ಸಾಲದು’’ ಎಂದು ಉತ್ತರವೀಯುತ್ತಾನೆ.

ಅಂತೂ, ನೂಲುವ ಒಂದೇ ವಿಷಯದೊಳಗೆ ಅವನ ಗ್ರಾಮ ಸುಧಾರಣೆಯ ಕೆಲಸ ನಿಂತುಬಿಟ್ಟಿದೆ. ಅವನ ಮನಸ್ಸಿಗೇನೇ ತಾನು ಬರಿಯ `ಹೆಣ್ಣು ಕೆಲಸ’ದಲ್ಲಿ ಇದ್ದೇನೆ ಎಂದು ಅನಿಸುತ್ತಿದೆ. ತನ್ನಂತಹ ಓದು ಬಲ್ಲವ – ಬರಿಯ ಒಂದೆರಡು ತಾಸು ನೂತರೇ ಸಾಕೇ, ಇತರರಿಗೆ ನೂಲಲು ಹೇಳಿಕೊಟ್ಟರೆ ಸಾಕೇ – ಎಂಬ ವಿಚಾರ ತಾಳುತ್ತಾನೆ. ಅದಕ್ಕೂ ಹೆಚ್ಚಿಗೆ ಏನು ಮಾಡಲಿ – ಎಂದು ಯೋಚಿಸಿ, ಯೋಚಿಸಿ ಬಟ್ಟೆಗೆಡುತ್ತಾನೆ. ಅವನ ಹಂಬಲ – ಒಂದು ಪಂಚಮರ ಶಾಲೆಯನ್ನೂ, ರಾಷ್ಟ್ರೀಯ ಶಾಲೆಯನ್ನೂ ತೆರೆಯಬೇಕೆಂದು. ಹೊಲೆಯರ ಹುಡುಗರಿಗೆ ಬರಗಾಲವಿಲ್ಲ. ಶಾಲೆ ಎಲ್ಲರಿಗೂ ಬೇಕು. ಆದರೆ, ಆಲೆಮನೆಯಲ್ಲಿ ಅವರ ಆಶೆ ಸಫಲವಾಗುವುದುಂಟೇ? ಅಲ್ಲಿ ರಾಷ್ಟ್ರೀಯ ಶಾಲೆಯನ್ನು ತೆರೆದರೂ ಅಷ್ಟರಮಟ್ಟಿಗೆ ಜನ ದೂರಗಾಲಿಟ್ಟಾರು. ಊರಿನ ಸ್ಥಿತಿ ತಿಳಿದೇ ಆ ತೆರನ ಹಂಬಲ ಪ್ರಯೋಜನವಿಲ್ಲವೆಂದು ಚಿಂತಿಸುತ್ತಾನೆ.

“ಇಲ್ಲ, ಒಮ್ಮೆ ಮಂಗಳೂರಿಗೆ ಹೋಗಿ, ದಯಾನಂದರಾಯರನ್ನು ಸಂಧಿಸಿ, ಮುಂದಿನ ದಾರಿ ನಿಶ್ಚಯಿಸಿ ಬರುತ್ತೇನೆ. ತಮ್ಮ ತಾಲೂಕಿನಲ್ಲಿ ಯಾವುದಕ್ಕೂ ಸಹಾಯ ದೊರೆಯದು’’ ಎಂದು ಬೇಸರಿಸುತ್ತಾನೆ. ಮಾವನ ಆದರ, ಅಜ್ಜಿಯ ಒತ್ತಾಯ, ಸತ್ಯಳ ಮೋಹದ ಸೆರೆಯಲ್ಲಿ ಸಿಲುಕಿ, ಅವನ ವಿಚಾರ, ನಿರ್ಧಾರಗಳು ಆರು ತಿಂಗಳ ಅವಧಿಯಲ್ಲಿಯೂ ತಡಿಯನ್ನು ಸೇರದೆ ಹೋದುವು. ಈ ನಡುವೆ ಒಂದು ದಿನ ಅವನಿಗೆ ತೀರ ಎಚ್ಚರವಾಯಿತು. ತಾನು ಇದಿರು ಕಾದ ವರ್ಷಾಂತ್ಯ ಬಂದಿದೆ. ಪ್ರಪಂಚ ಹೇಗಿದ್ದರೂ – ಭರತಖಂಡಕ್ಕೆ ಸ್ವರಾಜ್ಯವನ್ನು ದೊರಕಿಸಿಕೊಡುವ ದಿನ ಸನ್ನಿಹಿತವಾಗಿದೆ. ಎಲ್ಲ ದಿನಗಳಂತೆ ಆ ದಿನವೂ ಬಂದು ಸರಿಯಿತು; ವಾರ ಸಂದಿತು; ತಿಂಗಳೊಂದಾಯಿತು ಶುಭದ ಒಸಗೆ ಬರಲೇ ಇಲ್ಲ. ಕೃಷ್ಣಪ್ಪನವರೆಂದ ನುಡಿಗೆ ಅವನ ಕಣ್ಣು ತೆರೆಯಿತು. ಅಷ್ಟು ಸುಲಭದಲ್ಲಿ ಅಷ್ಟು ತೀವ್ರದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕೀತೇ ಎಂಬ ಕಟು ಸತ್ಯ ಅವನ ಕಣ್ಣ ಮುಂದೆ ಹಾಯ್ದಿತು. ಗಾಂಧೀಜಿಯವರ ಆಶ್ವಾಸನೆ ಬೆಳಗಿನ ಮಂಜಿಗಿಂತ ಸುಲಭವಾಗಿ ಮಾಯವಾಯಿತು. “ಇಲ್ಲ, ಅವರೆಂದಂತೆ ಜನರೆಲ್ಲರೂ ಒಮ್ಮತವಾಗಿ ಅಸಹಕಾರ ಹೂಡಿದ್ದರೆ, ಆ ಸುದಿನ ಬರುತ್ತಿತ್ತೋ ಏನೋ! ಹಾಗೆ ಯಾರೂ ಮಾಡಲಿಲ್ಲ. ಬೆರಳಿಂದೆಣಿಸುವಷ್ಟು ಮಂದಿ ಮಾಡಿರಬೇಕು. ಆಲೆಮನೆಯವರಂತೆ, ತಮ್ಮ ತಾಲೂಕಿನರವಂತೆ, ಹೊಸ ಕೆರೆಗೆ ಹಾಲು ತುಂಬಿಸುವ ಬದಲು ನೀರನ್ನು ತುಂಬಿಸಿದವರೇ ಬಹಳ, ಪತ್ರಿಕೆಗಳಲ್ಲಿ ತಾನು ಓದಿ ತಿಳಿದ ಚಳವಳಿ, ಕೋಲಾಹಲ ತೀರ ಮೇಲಿನ ಬರುಗು. ಆದುದರಿಂದ, ನಮ್ಮ ಕೆರೆ ಹಾಲಿನ ಕೆರೆಯಾಗುವ ಬದಲು ನೀರಿನ ಕೆರೆಯೇ ಆಗಿ ಉಳಿದಿದೆ’’ ಎಂದು ತನಗೆ ತಾನೇ ಸಮಾಧಾನವನ್ನು ತಂದುಕೊಳ್ಳುವ ಪಾಡು ಬಂತು.

ರಾಧಾಕೃಷ್ಣನದೇ ಒಂದು ದಾರಿ. ಸೋಲಿನ ಕಾರಣಗಳನ್ನು ಅಳೆಯುವ ಶೀಲ ಅವನದು. ಅವನ ಮಾರ್ಗದರ್ಶಕರೂ, ಮುಖ್ಯಗುರುಗಳೂ ಆದ ಮಹಾನುಭಾವರು ಮಂಗಳೂರಿನ ದಯಾನಂದ ರಾಯರು. ಅವರು ನಾಡಿನ ಧುರೀಣರು. ಹಲವರ ಆದರ್ಶರು. ದೇವರು ಅವರಿಗೆ ಸಂಪತ್ತು, ಸಂತಾನ, ಸುಖ ಎಲ್ಲವನ್ನೂ ಕೊಟ್ಟಿದ್ದಾನೆ. ಅಂಥ ಜೀವನದಿಂದ ಅವರ ಮನಸ್ಸು ಸೇವಾಜೀವನಕ್ಕೆ ಹರಿಯಿತು. ತ್ಯಾಗಕ್ಕೆ ಮುಂದುವರಿಯಿತು. ಗಾಂಧೀಜಿಯವರ ಪ್ರಿಯ ದರ್ಶನದಿಂದ, ಸಂಭಾಷಣೆಗಳಿಂದ ಮೈಯಲ್ಲಿ ರಾಷ್ಟ್ರೀಯತೆಯ ಹುರುಪು ಉದಯಿಸಿತು. ಅದರ ಜತೆಯಲ್ಲಿ ನೂರಾರು ತರುಣರು ಕಲೆತರು. ಔದಾರ್ಯ ಹೀನರು ಉದಾರಿಗಳಾದರು. ಮಂಗಳೂರಿನಲ್ಲಿ ಅವರು ಯುವಗಾಂಧಿಯವರೇ ಆದರು. ತೆರೆಗೈಯ್ಯ ಕರ್ಣನಂತೆ, ತಮ್ಮ ಬೊಕ್ಕಸವನ್ನು ರಾಷ್ಟ್ರ ಸೇವೆಗೆ ಮೀಸಲಿತ್ತರು. ಅವರ ವರ್ಚಸ್ಸು ಮೇರೆವರಿಯಿತು. ಹಲಸಿನ ತೊಳೆಗೆ ಮುತ್ತುವ ಸೊಳ್ಳೆಗಳಂತೆ ಸೋಮಾರಿಗಳೂ, ಸೋಗಿನವರೂ ಅವರನ್ನು ಸುತ್ತುವರಿದರು. ಜನತೆಯ ಮಾತಿಗೂ ಮನಕ್ಕೂ ಇರುವ ಅಂತರವನ್ನು ಅರಿಯದ ಅವರು ಎಲ್ಲರನ್ನೂ ನಂಬಿದರು. “ಅಲ್ಲಿ ಹತ್ತುನೂರು ಜನ ಶಾಲೆಗಾಗಿ ಕಾದಿದ್ದಾರೆ. ಅಲ್ಲಿ ಐನೂರು ಹೊಲೆಯರು ಮದ್ಯಪಾನ ತ್ಯಾಗದ ಪ್ರತಿಜ್ಞೆ ಮಾಡಿದ್ದಾರೆ. ಮತ್ತೊಂದು ಕಡೆ ಊರಿನ ಪ್ರಮುಖರೆಲ್ಲರೂ ಕಾಯಿದೆ ಭಂಗಕ್ಕೆ ಅನುವಾಗಿದ್ದಾರೆ’’ ಎಂದರೆ, ಎಲ್ಲವನ್ನೂ ನಂಬಿದರು. ಅಲ್ಲಿ, ಇಲ್ಲಿ ಓಡಾಡಿದರು. ತಮ್ಮ ಸಂಪತ್ತು ತಮ್ಮದಲ್ಲವೆಂಬಷ್ಟು ಉದಾರವಾಗಿ ಹಣ ವ್ಯಯಿಸಿದರು.
ಅವರಿಗೆ ವರ್ಷಾಂತ್ಯದಲ್ಲಿ ಸ್ವರಾಜ್ಯ ಕರಗತವಾಗುತ್ತದೆ – ಎಂಬುದರಲ್ಲಿ ಅಖಂಡ ವಿಶ್ವಾಸವಿತ್ತು.

ಯಾವನಾದರೂ ತರುಣ, ದೇಶಭ್ರಮಣದಿಂದ ನಿರಾಶನಾಗಿ ಬಂದರೆ, ಯಾವನಾದರೂ ವಿದ್ಯಾರ್ಥಿ ಮನೆಯವರ ಒತ್ತಾಯಕ್ಕೆ ಬಿಟ್ಟ ಶಾಲೆಯನ್ನು ತಿರುಗಿ ಸೇರುವೆನೆಂದರೆ – ಅವರದು ಒಂದೇ ಮಾತು :“ಇನ್ನೆಷ್ಟು ಸಮಯವಿದೆ. ಆರು ತಿಂಗಳಾಯಿತು. ಇನ್ನು ಆರು ತಿಂಗಳು ಉಳಿದಿದೆ. ಅಲ್ಲಿಯ ತನಕ ನಡೆಯಿಸಿ. ಶಾಲೆಗೆ ಆ ಮೇಲೆ ಸೇರುವುದಂತೆ. ಅಷ್ಟರೊಳಗೆ ದೇಶದ ಎಲ್ಲ ಶಾಲೆಗಳೂ ರಾಷ್ಟ್ರೀಯ ಶಾಲೆಗಳು ಆಗಿಯೇ ಆಗುತ್ತವೆ’’ ಎಂದು ಅವರ ಆಸೆಯ ದೀವಿಗೆಯನ್ನು ಪೋಷಿಸುತ್ತಿದ್ದರು. ಅಂಥವರ ಪತ್ರಮುಖದ ಪ್ರೇರಣೆ, ಬೆಂಬಲ – ರಾಧಾಕೃಷ್ಣನಿಗಿತ್ತು. ಆತ ಹಣಕಾಸಿನ ಅಭಾವವನ್ನು ತೋರಿಸಿಕೊಂಡಿದ್ದರೆ ಅವರು ಸಹಾಯ ಮಾಡುತ್ತಿದ್ದರೋ ಏನೋ. ಆದರೆ, ಅವರ ಸುತ್ತಲೂ ಸ್ತುತಿಪಾಠಕರು, ಕೊರಗು ನಟಿಸುವವರು, ಕೆಲಸದ ನೆಪದಿಂದ ಹಣ ಸುಲಿಯುವವರು ಸೇರಿಕೊಂಡಿರುವಾಗ, ದೂರದಲ್ಲಿ ಬಾಯಿ ಮುಚ್ಚಿ ಕುಳಿತ ಕೆಲಸಗಾರನೊಬ್ಬನ ಕಡೆಗೆ ಅವರ ಗಮನ ಹರಿಯುವುದು ಸಾಧ್ಯವಿದ್ದಿಲ್ಲ.

ಗಾಂಧಿ ಭವಿಷ್ಯದ ಕೊನೆಗಾಲ ಬಂದಾಗಲಂತೂ ದಯಾನಂದ ರಾಯರು ತುದಿಗಾಲಿನ ಮೇಲೆ ನಿಂತು ಅನುಪಮದ ಪವಾಡವನ್ನು ನಿರೀಕ್ಷಿಸುತ್ತಿದ್ದಾರೆ. ಆಶೆಯ ಆ ದಿವಸ ಬಂದು ಹೋಯಿತು. ಪವಾಡ ಮಾತ್ರ ಸಂಭವಿಸಲಿಲ್ಲ. ಯಾಕೆ ಹಾಗಾಯಿತು – ಎಂದು ಅವರೂ ಯೋಚಿಸಿದರು. ಕೊನೆಗೆ ಒಂದು ದಿವಸ ಗಾಂಧಿಯವರ ನುಡಿಗಳನ್ನು ಎತ್ತಿಕೊಂಡು ಅವರ ಸಂದೇಶದಂತೆ ಯಾವತ್ತು ಜನ ನಡೆಯದಿದ್ದುದರಿಂದ ಹಾಗಾಗಿರಬೇಕೆಂಬ ತೀರ್ಮಾನಕ್ಕೆ ಬಂದರು. “ಓಹೋ, ಅದರ ಅರ್ಥ ಹಾಗಿತ್ತೇ? ನಿಜ, ಅವರ ಮಾತೇ ಸಮ. ನಾವು ಅರ್ಥಮಾಡಿದುದೇ ತಪ್ಪು” ಎಂದುಕೊಂಡರು.

ಸರಿ, ಪವಾಡ ನಿರೀಕ್ಷಣೆಯಿಂದ ಕಾದು ಕುಳಿತ ಶಾಲೆ, ನೇಯಿಗೆ ಶಾಲೆ, ಚಿಕಿತ್ಸಾ ಶಾಲೆಗಳು ಬರಿದೆ ನಡೆಯುತ್ತವೆಯೇ? ಕೆಲವು ದಿನ ಅವು ಜನರ ಬೆಂಬಲದಿಂದ ನಡೆದುದು ನಿಜ. ಬಹು ದಿನ ಮುಂದೆ ಸಾಗಿದ್ದು ರಾಯರ ಔದಾರ್ಯದಿಂದ ಅಳತೆ ಮೀರಿದ ಔದಾರ್ಯ ಮಾತಿನ ಉರುಳಿಗೆ ಬಲಿಯಾಗುವ ಅವರ ಸರಳತನ, ಅವರನ್ನು ಬಹುಬೇಗ ಸಾಲಿಗರ ಕೈಗೆ ಒಪ್ಪಿಸಿದುವು. ಆದರೂ ಎಲ್ಲವನ್ನೂ ನಡೆಯಿಸಿಕೊಂಡು ಹೋಗುವೆನೆಂಬ ಧೈರ್ಯ. ದಿನ ಸರಿಯಿತು, ತಿಂಗಳು ಸರಿಯಿತು. ಇವರಿಂದ ಹಣ ಸರಿಯಿತು, ಜನರಿಂದ ಉತ್ಸಾಹ ಸರಿಯಿತು. ತಮ್ಮ ಅನುಯಾಯಿಗಳನ್ನು ಜನರಲ್ಲಿ ಧನಸಹಾಯಕ್ಕಾಗಿ ಕಳುಹಿಸಿದರು. ಕಾಲ ಸರಿದಂತೆ ಅವರೂ ಕಣ್ಮರೆಯಾದರು. ಜನರ ಸಹಾಯವೂ ಕಾಣದಾಯಿತು. ಅವರ ದೇಶಪ್ರೇಮ, ಹಡೆದ ಕೂಸುಗಳೆಲ್ಲವೂ – ಕಾಮಾಲೆ, ಗ್ರಹಿಣಿ, ಅಪಸ್ಮಾರ ಬೇನೆಗಳಿಗೆ ಬಲಿಯಾದವು.

ಮಂಗಳೂರಿನಲ್ಲಿ ಧೂಮಕೇತುವಿನಂತೆ ಬೃಹದಾಕಾರವನ್ನು ತಾಳಿ ಬಾಲ ಬೆಳೆಯಿಸಿ ಮೆರೆದ ರಾಷ್ಟ್ರೀಯ ಚಳವಳದ ಅಬ್ಬರ, ಮಳೆ ಕಳೆದ ಬಾನಿನಂತೆ ಬರಿದಾಯಿತು. ದಯಾನಂದರಾಯರು ತಮ್ಮ ಭೂಮಿ, ಮನೆಗಳನ್ನೆಲ್ಲ ಅಡವು ಮಾಡಿಕೊಂಡು ಸಾಲಕ್ಕೆ ಸಿಕ್ಕಿದ್ದೇ ಬಂದಿತು. ಅವರ ದೇಶಭಕ್ತಿಯ ಈ ಘಟ್ಟದಲ್ಲಿ ಹತ್ತಿರದ ಪರಿಚಿತನಾದ ರಾಧಾಕೃಷ್ಣ ಅವರಲ್ಲಿಗೆ ಯೋಚನೆಗಾಗಿ ಬಂದನು. ತುಂಬ ನೆಚ್ಚಿನ ಗೆಳೆತನ ಅವರದ್ದು. ಇಬ್ಬರದೂ ನಿಷ್ಕಲ್ಮಶ ಹೃದಯ. ಬಹುಕಾಲದ ಬಳಿಕ ಆದ ದರ್ಶನ.

ಮೊದಲಿನ ಸುದ್ದಿಯೆಂದು ಅಳುಕಿನಿಂದ ರಾಧಾಕೃಷ್ಣ ಅವರಿಗೆ ತನ್ನ ವಿವಾಹದ ವಾರ್ತೆಯನ್ನು ತಿಳಿಸಿದನು. ಅವರು “ನೀವು ಹೊಸತಾಗಿ ಆ ತಪ್ಪು ಮಾಡಿದಿರೆ? ಸಂಸಾರಿಯಾಗಿದ್ದ ನಾನೇ ದೇಶಸೇವೆಗೆ ಸಂಸಾರವೆಂಬುದು ಒಂದು ಬಂಧನ – ಎಂದು ಮನಗಾಣುತ್ತಿದ್ದೇನೆ” ಎಂದರು.

ರಾಧಾಕೃಷ್ಣನ ಮುಖ ಸಪ್ಪಗಾಯಿತು. ಅವನು ನೊಂದುಕೊಂಡನೆಂದು ತಿಳಿದು, ತಮ್ಮ ಮಾತಿನ ಉದ್ದೇಶವನ್ನು ವಿವರಿಸತೊಡಗಿದರು. “ನೋಡಿ, ನಾನು ಬೇರೆ ಅರ್ಥದಲ್ಲಿ ಹೇಳಿದ್ದಲ್ಲ. ನನಗೂ ಸಂಸಾರ ಇದೆ. ದೇವರು ಚೆನ್ನಾದ ಅನುಕೂಲತೆ ಕೊಟ್ಟುದರಿಂದ ಮೊನ್ನೆಮೊನ್ನೆಯ ತನಕ ಯಾವ ಯೋಚನೆಯೂ ಇಲ್ಲದೇನೆ ಇದ್ದೆ. ದೇಶಸೇವೆಯೇ ನನ್ನ ಸರ್ವಸ್ವವಾಗಿತ್ತು. ಅದಕ್ಕಾಗಿ ಹಣ ವ್ಯಯಿಸಿದೆ. ನನ್ನ ಎಲ್ಲವನ್ನೂ ವೆಚ್ಚಮಾಡಿದೆ. ಬರಿಯ ಸ್ವಲ್ಪ ಕಾಲ, ತಾನು ಪ್ರೇರಿಸಿದ ಸಂಸ್ಥೆಗಳನ್ನೆಲ್ಲ ತಾನು ಸಾಕಿ ಬಂದರೆ, ಮುಂದೆ ಅವನ್ನು ಸಾಕುವ ಭಾರ ಸ್ವರಾಜ್ಯ ಸರಕಾರದ್ದು ಎಂದು ತಿಳಿದೆ. ಈಗ ನೋಡಿ. ನನ್ನ ಹಣ ಬರಿದಾಯಿತು. ಜನಸಹಾಯಕ್ಕೆ ಕಟ್ಟು ಬಿದ್ದುದಾಯಿತು. ಈಗ ಎಲ್ಲದಕ್ಕೂ ನಿಸ್ಸಹಾಯನಾಗಿ ಕುಳಿತಿದ್ದೇನೆ. ಸಂಸಾರದ ಹೊರೆ ಏನು ಎಂಬುದು ಈಗ ಒಂದೊಂದಾಗಿ ಕಾಣುತ್ತಿದೆ” ಎಂದರು. “ಹೋಗಲಿ, ಆ ಮಾತು, ಈಗ ಏನು ಬಂದಿರಿ? ಇನ್ನೇನು ವಿಶೇಷ? ನಿಮ್ಮೂರಲ್ಲಿ ಈಗ ಏನೇನು ನಡೆದಿದೆ” ಎಂದು ವಿಚಾರಿಸಿದರು. ಅವನಿಗೆ, ಹಿಂದುಳಿದ ಕುಂದಾಪುರದಲ್ಲಿ ಚೈತನ್ಯ ತುಂಬಿಸಬೇಕೆಂಬ ಪ್ರೇರಣೆ ಅವರಿಂದ ಆಗಾಗ ಬರುತ್ತಲೇ ಇತ್ತು. `ಯಾಕೆ ರಾಷ್ಟ್ರೀಯ ಶಾಲೆಯನ್ನು ತೆರೆಯಬಾರದು? ಯಾಕೆ ಖಾದೀ ಕೇಂದ್ರ ನಡೆಯಿಸಬಾರದು? ಹಿರಿಯಡ್ಕದವರು ಮಾಡಿದ್ದಾರೆ. ಉಡುಪಿಯವರು ಮಾಡಿದ್ದಾರೆ. ನೀಲೇಶ್ವರದಲ್ಲಿ ಜೋರಾವರಿಯಿಂದ ಕೆಲಸ ನಡೆಯುತ್ತಿದೆ’ ಎಂದು ಬರೆಯುತ್ತಲೇ ಇದ್ದರು. ಅಂಥವರ ಮುಂದೆ ತನ್ನ ಕ್ಷುದ್ರ ಊರಿನ ವಿಚಾರ ಏನು ಹೇಳಬೇಕು? ಅವರ ಪತ್ರಕ್ಕೆ ಉತ್ತರ ಬರೆಯುವುದೇ ನಾಚಿಕೆಯಾಗುತ್ತಿತ್ತು.

ಈಗ ಅವನ ಮನಸ್ಸಿನ ಚಾಂಚಲ್ಯ ತುರೀಯಕ್ಕೇರಿದೆ. ಪರರ ಸಹಾಯ ನಿರೀಕ್ಷಿಸಿ ಆಯಿತು. ಹೆರವರ ಮುಖದ ಮುಂದೆ ಕತ್ತು ಬಗ್ಗಿಸಿ ಬೇಡಿ ಆಯಿತು. ಇನ್ನು ಒಬ್ಬಂಟಿಗನಾಗಿ ಆದರೂ, ಒಂದು ಸಂಸ್ಥೆಯನ್ನು ತೆರೆಯಬೇಕೆಂಬ ನಿರ್ಧಾರಕ್ಕೆ ಬಂದಿದ್ದಾನೆ. ಬರಿಯ ನೂಲುವ, ನೇಯುವ ಕೆಲಸಗಳಿಂದ ಅವನ ಮನಸ್ಸಿಗೆ ತೃಪ್ತಿ ಬರುವಂತಿರಲಿಲ್ಲ. ಮನುಷ್ಯ ಕುಲದ ಸ್ನೇಹವನ್ನು ಅದು ಸದಾ ಬಯಸುತ್ತಿತ್ತು. ಆಲೆಮನೆಯಲ್ಲಿದ್ದು, ಹತ್ತು ಜನ ಬಡಬಗ್ಗರ ಮನೆಯನ್ನು ಹೊಕ್ಕು ಹೊರಟ ಪರಿಣಾಮವಾಗಿ, ಅವನ ಮನಸ್ಸು ಅವರ ದಾರಿದ್ರ್ಯವನ್ನು ಕುರಿತು ಚಿಂತಿಸುತ್ತಿತ್ತು. ಹೊಲೆಯರ ತುಂಬು ದಾರಿದ್ರ್ಯಕ್ಕಾಗಿ, ಅಜ್ಞಾನಕ್ಕಾಗಿ ಅವನ ಮನಸ್ಸು ನೋಯುತ್ತಿತ್ತು. ಅಜ್ಜಿಗೂ, ಮಾವನಿಗೂ ತಿಳಿಸದಂತೆ ಅವರ ಗುಡಿಸಲುಗಳಿಗೆ ಕದ್ದು ಹೋಗಿ “ಮದ್ಯಪಾನ ಬಿಡಿ, ಮಾಂಸಾಹಾರ ಬಿಡಿ. ಉಚ್ಚಿಷ್ಟ ಭೋಜನ ಬಿಡಿ” ಎನ್ನುತ್ತಿದ್ದ ಅವನ ಕೂಗು ಯಾವ ಪರಿಣಾಮವನ್ನೂ ಮಾಡಲಿಲ್ಲ. ಅದಕ್ಕೆಲ್ಲ ಕಾರಣ, ಅವರ ಅಪಾರ ಅಜ್ಞಾನವೆಂದು ತಿಳಿದ. ಈ ಜನಕ್ಕೆ ತಮ್ಮ ಬಾಳುವೆಯನ್ನು ಸಾಗಿಸುವ ಆರ್ಥಿಕ ಪುಷ್ಟಿಯನ್ನು ಕೊಡದ ಹೊರತು, ಉಳಿದೆಲ್ಲ ಮಾತುಗಳು ಅರಣ್ಯರೋದನ ಎಂಬ ಅಸ್ಪಷ್ಟ ಕನಸಿನ ತಂದೆಯಾದ, ಆ ಕನಸಿನ ಕೂಸನ್ನು ಹೊತ್ತುಕೊಂಡು ರಾಯರೊಡನೆ ಚರ್ಚಿಸಲು ಬಂದಿದ್ದಾನೆ. ತನ್ನ ಆ ಯೋಚನೆಗೆ ಅವರ ಆರ್ಥಿಕ ಬೆಂಬಲ ದೊರೆತೀತೆಂದು ನಂಬಿ ಬಂದಿದ್ದಾನೆ. ಅದು ಫಲಿಸುವ ದಾರಿ ಕಾಣಸಲಿಲ್ಲ. “ಏನು ಬಂದಿರಿ” ಎಂದು ಅವರು ಕೇಳಿದ್ದಕ್ಕೆ ಮನಸ್ಸನ್ನು ಬಿಚ್ಚಿ ಹೇಳಿದ.

ದಯಾನಂದ ರಾಯರು ಉತ್ಸಾಹಶೀಲರು. ಉತ್ಸಾಹ ತುಂಬಿದ ಗಳಿಗೆಯಲ್ಲಿ ನೆಲಬಿಟ್ಟು ಮುಗಿಲಾಗಿ, ಬಾನಲ್ಲಿ ತೇಲುವುದು ಅವರ ಸ್ವಭಾವ. “ಅಯ್ಯೋ, ಈ ನಿಮ್ಮ ಯೋಚನೆಗಳನ್ನು ನನಗೆ ಮೊದಲೇ ತಿಳಿಸಿದ್ದರೆ! ನೂರಾರು ಮಂದಿ ಠಕ್ಕರನ್ನು ನಂಬಿ, ನನ್ನ ಹಣ ಸುರಿಯುವ ಬದಲು ಅಂಥ ಆಶ್ರಮಕ್ಕೆ ಸುರಿಯುತ್ತಿದ್ದೆ. ಆಗಲಿ ನೋಡುವ. ಯಾರೋ ಒಬ್ಬನಿಂದ ಸಾವಿರ ರೂಪಾಯಿ ಸಾಲ ಬರುವುದು ಇದೆ. ಇನ್ನೂ ಮೂರು ತಿಂಗಳಲ್ಲಿ ಅದು ಬಂದೇ ತೀರಬೇಕು. ನೀವು ನೆನಪು ಮಾಡಿ ಕಾಗದ ಬರೆದರೆ, ನೆಟ್ಟಗೆ ಅದನ್ನು ನಿಮಗೆ ಕಳುಹಿಸುತ್ತೇನೆ. ಆ ಸಾವಿರ ರೂಪಾಯಿಯಿಂದ ಎರಡು ವರ್ಷದ ಖರ್ಚು, ವೆಚ್ಚ ಹೇಗೂ ಸಾಗಿಸಬಹುದು. ಮುಂದೆ ದೇವರು ಇದ್ದಾನೆ, ನೋಡುವ” ಎಂದರು. ಅವನೊಡನೆ ಭಾವೀ ಆಶ್ರಮದ ನಾಮಕರಣ, ಸ್ಥಳ, ಕಾರ್ಯಕ್ರಮಗಳನ್ನು ಕುರಿತಾಗಿ ಚರ್ಚೆ ನಡೆಯಿಸಿದರು. ಮೂರು ದಿವಸಗಳ ಕಾಲ, ಅವನನ್ನು ಜತೆಯಲ್ಲಿ ಇರಿಸಿಕೊಂಡರು. ಎಂಥೆಂಥವರನ್ನು ನಂಬಿದ ಅವರಿಗೆ ರಾಧಾಕೃಷ್ಣನಂತಹ ಸರಳ ವ್ಯಕ್ತಿಯು ಮೆಚ್ಚುಗೆಯಾದುದರಲ್ಲಿ ಸೋಜಿಗವಿಲ್ಲ. “ಛೀ, ಛೀ, ಇಂಥ ಅಮೂಲ್ಯ ಕೆಲಸಗಾರನೊಬ್ಬ ಇದ್ದೂ ನನಗೆ ತಿಳಿಯದೆ ಹೋಯಿತೇ” ಎಂದು ನೊಂದುಕೊಂಡರು.

ನಾಲ್ಕನೆಯ ದಿನ ರಾಧಾಕೃಷ್ಣನು ಕುಂದಾಪುರಕ್ಕೆ ಹೊರಡಲು ಸಿದ್ಧನಾದನು. ರಾಯರ ಆರ್ಥಿಕ ಸ್ಥಿತಿಯ ಚೆನ್ನಾದ ಅರಿವು ಇಲ್ಲದ ಅವನಿಗೆ ಅವರ ಬೆಂಬಲದಲ್ಲಿ ಅವಿಶ್ವಾಸ ಇರಲಿಲ್ಲ. ತನ್ನದೇ ಅವಿಶ್ವಾಸ ಅವನಿಗೆ. ತನ್ನ ಕಾರ್ಯಕ್ಕೆ ರಂಗ ಯಾವುದು ಎಂದು ತೋರಿರಲಿಲ್ಲ. ಪರಿಚಿತವಾದ ಊರಿನಿಂದ ಅಪರಿಚಿತವಾದ ಊರಿಗೆ ಹೋಗಲು ಧೈರ್ಯವಿರಲಿಲ್ಲ. ಅಲ್ಲದೆ ತನ್ನೂರಿನ ವಿಷಯವಾದ ಅಭಿಮಾನ ಬೇರೆ. ತನ್ನ ಗ್ರಾಮಗಳ ಉದ್ಧಾರವನ್ನು ತಾನು ಮಾಡದೆ, ಪರರು ಮಾಡುವುದುಂಟೇ ಎಂಬ ತರ್ಕ. “ಇಲ್ಲ, ಮಾವನಿಂದ ಭೂಮಿಯ ಒಂದು ತುಣುಕನ್ನು ಗೇಣಿಗೆ ಪಡೆದು ಅಲ್ಲಿಯೇ ಕೆಲಸ ತೊಡಗುತ್ತೇನೆ. ತಂದೆಯಿಂದ ಪಾಲು ಪಡೆದಾದರೂ ತನ್ನ ಆಶ್ರಮ ಕಟ್ಟುತ್ತೇನೆ. ತಾನೇನು ಮಾಡುವುದು ಇದೆಯೋ ಅದನ್ನು ತನ್ನ ಊರಿನಲ್ಲೇ ಮಾಡುತ್ತೇನೆ” ಎಂಬ ನಿರ್ಧಾರವನ್ನು ಆತ ಮಾಡುತ್ತಿರುವ ಗಳಿಗೆಯಲ್ಲೇ ಅವನ ಮಾರ್ಗದರ್ಶಿಗಳಾದ ದಯಾನಂದ ರಾಯರಿಗೆ ಬೇರೆಯೇ ಯೋಚನೆ ಹೊಳೆಯುತ್ತಿದೆ. ಯಾವ ದೊಡ್ಡ ಕೆಲಸವಾಗುವುದಿದ್ದರೂ, ಮುಖ್ಯ ನಗರವಾದ ಮಂಗಳೂರಿನಲ್ಲಿಯೇ ಆಗಬೇಕೆಂಬುದು ಅವರ ತರ್ಕ ಸರಣಿ.

ಜಾಗದ ವಿಚಾರ ಬಂದಾಗ, ರಾಧಾಕೃಷ್ಣ ಅನುಮಾನಿಸುತ್ತಿದ್ದುದನ್ನು ಕಂಡು, ಒಮ್ಮೆಗೇ ನಿದ್ರೆಯಿಂದ ಎಚ್ಚೆತ್ತವರಂತೆ ಅಂದರು. “ಅದಕ್ಕೆ ಇಷ್ಟು ಗೊಂದಲವೇ, ಕಿರಿಪದವಿನಲ್ಲಿ ನನ್ನದೇ ಒಂದು ಭೂಮಿ ಇದೆ. ಸುಮಾರು ಐವತ್ತು ಮುಡಿ ಗೇಣಿ ಬರುವ ಒಮ್ಮಟ್ಟಾದ ಜಾಗ. ತುಂಬ ಬೆಟ್ಟು ಭೂಮಿಯೂ ಇದೆ. ನೀರಿನ ಆಶ್ರಯವಿದೆ. ಒಂದು ಕಡೆ ಎತ್ತರವಾದ ಗುಡ್ಡ, ಬಹಳ ಸುಂದರವಾದ ಸ್ಥಳ. ಆಶ್ರಮಕ್ಕೆ ಹೇಳಿ ಮಾಡಿದ್ದು. ಬಹಳ ದೂರವೂ ಇಲ್ಲ” ಎಂದು ತಿಳಿಸಿದರು. ಅದೇ ದಿನವೇ ಒಂದು ಬಾಡಿಗೆ ಮೋಟಾರಿನಲ್ಲಿ ಕುಳಿತುಕೊಂಡು ಮಂಗಳೂರಿನಿಂದ ಆರು ಮೈಲು ದೂರದಲ್ಲಿರುವ ಆ ಸ್ಥಳಕ್ಕೆ ರಾಧಾಕೃಷ್ಣನನ್ನು ಕರೆದೊಯ್ದರು. ಮೋಟಾರು, ಉನ್ನತವಾದ ಪದವು ಒಂದರ ಮೇಲೆ ಹೋಗಿ ನಿಂತಿತು. ಅಲ್ಲಿಂದ ನಾಲ್ಕು ಸುತ್ತಲೂ ಸುಂದರವಾದ ಗುಡ್ಡಗಳ ಸಾಲು ಕಾಣಿಸುತ್ತಿದೆ. ತೆಂಕು ದಿಕ್ಕಿನಲ್ಲಿ ಬರಿಯ ಒಂದು ಮೈಲು ದೂರದಲ್ಲಿ, ಮಂದಗಮನೆ ನೇತ್ರಾವತಿಯ ನೋಟವಿದೆ. ಪದವಿನಿಂದ ನೇರ ಕೆಳಕ್ಕಿಳಿದೊಡನೆಯೇ ಬರುವುದು ಅವರ ಭೂಮಿ.

ಅಲ್ಲಿನ ಹೊಲದ ಬಳಿ ಕಾಲಿಡುತ್ತಲೇ, ದಯಾನಂದರಾಯರ ಒಕ್ಕಲು ಬಿರುಮ ಮರಕಾಲ ಅವರನ್ನು ಸಂಧಿಸಿದ. ಬಿರುಮ ವಂದಿಸಿದ, ಮರ ಏರಿ ಏರಡು ಎಳನೀರುಗಳನ್ನು ತಂದಿರಿಸಿದ. ರಾಯರನ್ನು ಕಂಡಾಗಲೆಲ್ಲಾ ವಂದಿಸಿ, ಎಳನೀರು ಸಲ್ಲಿಸಿ, ತನ್ನ ದುಃಖದ ಹಾಲಾಹವಾಲೆಗಳನ್ನು ಹೇಳಿಕೊಂಡು ಗೇಣಿ ಸಲ್ಲಿಸದೆ ಇರುವ ಕದೀಮ ಆತ. ಆತನಲ್ಲಿ ರಾಯರಿಗೆ ತುಂಬಾ ನಂಬುಗೆ. ಆ ದಿನವೂ ಅವರ ಮುಂದೆ ತನ್ನ ತಾಪತ್ರಯಗಳನ್ನು ತೋಡಿಕೊಳ್ಳಲು ಹಿಂದಾಗಲಿಲ್ಲ. ರಾಧಾಕೃಷ್ಣನು ಆ ಸ್ಥಳದಲ್ಲಿ ತುಂಬಾ ಅಡ್ಡಾಡಿದ. ಅಲ್ಲಿನ ಜಲಾಶ್ರಮ, ಕೃಷಿಗೆ ಅನುಕೂಲವಾದ ಭೂಮಿ, ಈಗಾಗಲೇ ಉತ್ತು ಬಿತ್ತಿದ ಹೊಲ ನೆಲಗಳನ್ನು ಕಂಡನು. ತನ್ನ ಉದ್ದೇಶಕ್ಕೆ ಇದು ಪ್ರಶಸ್ತ ಸ್ಥಳವೆಂದು ಒಪ್ಪಿಕೊಳ್ಳಬೇಕಾಯಿತು. ಆ ಸ್ಥಳದಲ್ಲಿ ಒಂದೆರಡು ಪುಟ್ಟ ಗುಡಿಸಲುಗಳು ಇದ್ದವು. ಆಶ್ರಮ ನಿರ್ಮಾಣಕ್ಕೆ ಹೆಚ್ಚೇನು ಬೇಕು? ಅವನ ಮನಸ್ಸು ಪರಿವರ್ತನೆಗೊಂಡಿತು. ಆ ಜಾಗಕ್ಕೆ ಒಲಿಯಿತು. ಈ ತೆರನ ಅನುಕೂಲ ಪ್ರದೇಶ, ರಾಯರ ಬೆಂಗಾವಲು ಸುಲಭದಲ್ಲಿ ದೊರೆಯುವಾಗ ಅವನ್ನು ಅಲ್ಲಗಳೆಯುವುದು ತಪ್ಪೆಂದು ತೋರಿತು. ಮಂಗಳೂರು ಒಂದು ಪರದೇಶವಲ್ಲವಷ್ಟೆ. ಅವನ ಎದುರಿಗೇನೆ ರಾಯರು ಮರಕಾಲನನ್ನು ಕರೆದು “ಬಿರುಮ, ಎಂಟು ವರ್ಷಗಳಿಂದ ನೀನು ಗೇಣಿಯನ್ನು ಬಾಕಿ ಇರಿಸಿಕೊಂಡೆ, ಅದನ್ನು ನೀನು ಕೊಡುತ್ತೀ ಎಂದು ನಾನು ನಂಬುವುದೂ ಇಲ್ಲ. ಕೊಡಬೇಕೆಂದರೂ ನಿನ್ನಲ್ಲಿ ಅದು ಇರಲಿಕ್ಕಿಲ್ಲ. ನನಗೆ ಮೊದಲಿನ ಅನುಕೂಲತೆ ಈಗ ಉಳಿದಿಲ್ಲ. ನಾನೂ ಸೋತವನೇ. ಈ ತಿಂಗಳಿನಿಂದ ಈ ರಾಯರಿಗೆ ಒಂದು ಒಳ್ಳೆಯ ಕೆಲಸಕ್ಕೆ ಈ ಭೂಮಿಯನ್ನು ಕೊಡುತ್ತೇನೆ ಅಂದಿದ್ದೇನೆ. ನೀನು ಬೇರೆಯೇ ಜಾಗವನ್ನು ಹುಡುಕಬೇಕಾಗುತ್ತದೆ. ಕೂಡಲೇ ಈ ಸ್ಥಳವನ್ನು ಬಿಡಬೇಕೆಂದು ನಾನು ಹೇಳುವುದಿಲ್ಲ. ಆದರೆ ಈ ವರ್ಷದಿಂದ, ಈ ಭೂಮಿ ಸಾಗುವಳಿಗೆ ನಿನಗೆ ಸಿಗುವ ಹಾಗಿಲ್ಲ” ಎಂದುಬಿಟ್ಟರು.

ಅಲ್ಲಿಂದ ಅವರು ಮರಳಿ ಮಂಗಳೂರಿಗೆ ಬಂದರು. ರಾಧಾಕೃಷ್ಣನ ಮನಸ್ಸು ಸವಿಗನಸುಗಳಲ್ಲಿ ತೇಲತೊಡಗಿತು. ತನ್ನ ಕೆಲಸ ಕೈಗೂಡುವುದೆಂದು ತಿಳಿದನು. ಇನ್ನು ಹೆಂಡತಿಯನ್ನು, ಮಾವನನ್ನು ಒಲಿಸಿಕೊಳ್ಳಬೇಕಾದುದು ಮುಂದಿನ ಕೆಲಸ. ಸತ್ಯ ತನ್ನ ಗಾನಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಕಲಿತೇ ಇದ್ದಾಳೆ ಎಂಬ ವಿಶ್ವಾಸ. ಮಾವನನ್ನು ಕೇಳುವುದು ಕೇವಲ ಔಪಚಾರಿಕ – ಎಂದುಕೊಂಡನು. ಆತ ಮುಂದಿನ ಸಿದ್ಧತೆಗಾಗಿ ಆಲೆಮನೆಗೆ ಮರಳಿ ಬಂದನು.

ಇತ್ತ ದಯಾನಂದ ರಾಯರು, ತಮ್ಮ ನಷ್ಟವಾದ ಎಲ್ಲ ಸಾಹಸ, ನೋವುಗಳನ್ನು ಮರೆಯುವುದಕ್ಕೆ ಎಂಬಂತೆ, ಈ ಹೊಸ ಕನಸನ್ನೇ ಮೆಲುಕಾಡುತ್ತಿದ್ದರು. ಮನಸ್ಸಿನ ಯಾವ ವಿಚಾರವನ್ನೂ ಬಹಳ ಹೊತ್ತು ಬಚ್ಚಿಟ್ಟುಕೊಳ್ಳುವ ಸ್ವಭಾವ ಅವರದ್ದಲ್ಲ. ಅವರಲ್ಲಿಗೆ ಕಾಲಯಾಪನೆಗಾಗಿಯೋ, ಸ್ವಕಾರ್ಯಸಾಧನೆಗಾಗಿಯೋ ಬಂದು ಹೋಗುತ್ತಿದ್ದ ಅನೇಕ ದೇಶಭಕ್ತರು ಇದ್ದಾರೆ. ಅವರೊಡನೆ ತಮ್ಮ ಯೋಚನೆಗಳನ್ನು ಹಂಚಿ ಉಣ್ಣುವುದು ರಾಯರ ಸ್ವಭಾವ. ಅದರಂತೆ, ಈ ವಿಷಯವನ್ನೂ ಅವರ ಮುಂದಕ್ಕೆ ಇರಿಸಿದರು. ರಾಯರು ಮುಗಿಲ ಅರಮನೆ ಕಟ್ಟುವುದರಲ್ಲಿ ಮೊದಲೇ ನಿಪುಣರು. ಸಣ್ಣಪುಟ್ಟ ಯೋಚನೆಗಳು ಅವರ ಮುಂದೆ ಹಾಯುವುದೆಂದೇ ಇಲ್ಲ. ಆದುದರಿಂದ, ಮುಂದೆ ತೆರೆಯಲಿರುವ ತಮ್ಮ “ದಲಿತಾಶ್ರಮದಲ್ಲಿ ಕನಿಷ್ಠ ಐವತ್ತು ಬಡ ಜನರಿಗೆ ಉದ್ಯೋಗ ಕಲ್ಪಿಸಬೇಕು. ವಿದ್ಯೆ ಒದಗಿಸಬೇಕು” ಎಂಬ ಹವಣಿಕೆ ಹಾಕಿದರು. “ಅಷ್ಟು ಸ್ವಲ್ಪ ಭೂಮಿಯಿಂದ ಅಷ್ಟೊಂದು ಕೆಲಸ ಸಾಧ್ಯವೇ” ಎಂದು ಗೆಳೆಯರು ಅನುಮಾನಿಸಿದರೆ, `ಆಚೀಚೀನ ಭೂಮಿಗಳನ್ನು ಕೊಂಡರಾಯಿತು’ ಎನ್ನುತ್ತಾರೆ. `ಗೇಣಿ ಕೊಟ್ಟು ಬರುವ ಉಳಿತಾಯದಲ್ಲಿ ಏನು ಸಾಧ್ಯ’ ಎಂಬ ಅನುಮಾನವಿತ್ತರೆ, `ಈಗ ಎಷ್ಟೆಲ್ಲ ಆಶ್ರಮಗಳು ಜಮೀನು ಇಲ್ಲದೆಯೆ ನಡೆಯುತ್ತಲಿಲ್ಲ?’ ಎನ್ನುತ್ತಾರೆ. ಯಾವೊಂದು ಆಶ್ರಮದ ಸ್ಪಷ್ಟವಾದ ಪರಿಚಯವೂ ಅವರಿಗಿರಲಿಲ್ಲ. ಅವರಿಗೆ ಗೊತ್ತಿದ್ದ ಖಂಡಿತವಾದ ಒಂದು ಮಾತು ಎಂದರೆ, ಅವರ ತಾಯಿ ಹೇಳುತ್ತಿದ್ದ ಮಾತು : “ಕಿರಿ ಪದವಿನ ಆಸ್ತಿ ಬಂಗಾರದಂಥ” ದ್ದೆಂದು. ಅದರ ಮೇಲೆ ನಿಂತಿದೆ, ಅವರ ಮುಗಿಲ ಗೋಪುರ.

ತಮ್ಮ ಈ ಕನಸು ಕೃತಿಗೆ ಬರಲು ಹತ್ತೆಂಟು ಮಂದಿ ಕೆಲಸಗಾರರಾದರೂ ಬೇಡವೇ – ಎಂದು ತೋರಿತು. ಈ ತನಕ ಅವರ ಆಶ್ರಯದಲ್ಲಿ ದುಡಿದದ್ದು, ಕೆಲಸ ನೆರವೇರಿಸಲಾರದೆ, ಹೊಸ ಉದ್ಯೋಗ ದೊರಕಿಸಿಕೊಳ್ಳಲಾರದೆ ಮಾತಿನಲ್ಲೇ ಕಾಲ ಕಳೆಯುತ್ತಿದ್ದ ಕೆಲವು ಸ್ವಯಂ ಸೇವಕರು. ಮನಸ್ಸಿಗೆ ಯೋಚನೆ, ಹೊಳೆದ ಒಡನೆಯೇ ರಾಯರು ಅಂಥ ನಾಲ್ಕಾರು ಮಂದಿಯನ್ನು ಕರೆಯಿಸಿ ಕೆಲಸಕ್ಕೆ ನೇಮಕ ಮಾಡಿಯೂ ಆಯಿತು. ಅವರಾದರೂ, ನಾಳೆ ಬೇರೊಂದು ಉದ್ಯೋಗ ಸಿಗುವ ತನಕ ಇದಾದರೂ ಇದು ಎಂದುಕೊಂಡರು. ಈ ಯಾವ ಏರ್ಪಾಡುಗಳೂ ರಾಧಾಕೃಷ್ಣಗೆ ತಿಳಿದಿರಲಿಲ್ಲ.

ರಾಧಾಕೃಷ್ಣ ಊರನ್ನು ಬಿಟ್ಟು ದಲಿತಾಶ್ರಮವನ್ನು ಸೇರಿದ್ದಾನೆ. ಬಂದು ಸೇರಿ ನಾಲ್ಕು ತಿಂಗಳ ಕಾಲ ಕಳೆದಿದೆ. ಅವನ ಪ್ರತಿಯೊಂದು ದಿನವೂ ನೆನೆಯುವಂತಿತ್ತು. ಕೂಸು ಹುಟ್ಟುವ ಮೊದಲೇ, ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು ಬಂದರೆ ಹೇಗಿರಬಹುದೋ – ಹಾಗಿತ್ತು ಅವನ ಸಂಸಾರ. ತಂದೆಯ ಮರಣದಿಂದಾಗಿ, ಆತ ಅಲ್ಲಿಗೆ ಬಂದು ಸೇರಲು ತುಸು ನಿಧಾನವಾಯಿತು. ಬರುವುದರೊಳಗಾಗಿ, ದಯಾನಂದರಾಯರು ತಮಗೆ ತಿಳಿದಂತೆ ಎಲ್ಲಾ ಕೆಲಸ ನಡೆಯಿಸಿದ್ದರು. ಅವನು ಅಲ್ಲಿಗೆ ಬಂದು ಸೇರುವಾಗ ಆ ಜಾಗದಲ್ಲಿದ್ದ ಎರಡು ಹುಲ್ಲು ಚಾವಣಿಯ ಮನೆಗಳಲ್ಲಿ ಜನ ತುಂಬಿದ್ದರು. ಒಂದರಲ್ಲಿ ಹತ್ತೆಂಟು ಮಂದಿ ಬಾಲಕರು; ಇನ್ನೊಂದರಲ್ಲಿ ಮೂರು ಮಂದಿ ಸಹ ಅಧ್ಯಾಪಕರು. ಈತ ಆ ಬಳಗಕ್ಕೆ ಮುಖ್ಯ ಆಚಾರ್ಯ. ಸಪತ್ನಿಕನಾಗಿ ಬಂದಿದ್ದಾನೆ. ಬಂದವರಿಗೆ ನೆಲೆಸಲು ಬೇರೆ ಜಾಗವಿಲ್ಲ. ಇವರು ಬಂದು ಹೋಗುವಾಗಲೆಲ್ಲ, ಮನೆಯ ಜನ ಎದ್ದು, ಕುಳಿತು, ಸರಿಯುವುದಾಯಿತು. ತಾನು ಅಲ್ಲಿಗೆ ಒಮ್ಮೆಗೇ ಸಂಸಾರಿಯಾಗಿ ಬಂದುದು ತಪ್ಪಾಯಿತು – ಎಂದು ಅವನಿಗೆ ತೋರಿತು. ಆದರೆ, ಅವರಿಬ್ಬರ ಆಗಮನದಿಂದ ಉಳಿದವರಿಗೆ ಅಷ್ಟೊಂದು ತೊಂದರೆ ಆಗಿರಬೇಕಿಲ್ಲ. ಕಾರಣವಿಷ್ಟೆ, ಆಶ್ರಮ ಪ್ರಾರಂಭವಾದ ಬಹು ದಿವಸಗಳ ತನಕ ಅಲ್ಲಿನ ಮುಖ್ಯ ಚಟುವಟಿಕೆ ಎಂದರೆ ಅಡುಗೆಯ ಕೆಲಸ. ಹತ್ತಾರು ಮಂದಿಗೆ ಅಡುಗೆ ಮಾಡಿಸಿ, ಬಡಿಸಿ ಉಣ್ಣುವಾಗ ಉಪಾಧ್ಯಾಯರ ಉತ್ಸಾಹ ಬರಿದಾಗುತ್ತಿತ್ತು. ಈಗ ಇನ್ನಿಬ್ಬರು ಹೆಚ್ಚಿಗೆ ಸೇರಿದರು. ಹೆಂಗಸು ಒಬ್ಬಳು ಬಂದುದರಿಂದ ಅಡುಗೆಯ ಪಟ್ಟವನ್ನು ಅವಳಿಗೆ ಒಪ್ಪಿಸಿ, ತಾವು ಹಾಯಾಗಿ ಇರಬಹುದಲ್ಲಾ ಎಂದು ಇವರು ಯೋಚಿಸಿದರು.

ರಾಧಾಕೃಷ್ಣನಿಗೆ ಏನು ಮಾಡುವುದಕ್ಕೂ ತೋಚಲಿಲ್ಲ. ಕುಳಿತಿರಲು ಜಾಗವಿಲ್ಲದೇನೇ ಇಷ್ಟೊಂದು ಜನರನ್ನು ಪ್ರಾರಂಭದಲ್ಲಿಯೇ ತುಂಬಿಸಬಾರದಿತ್ತು – ಎಂದುಕೊಂಡ. ಅಧ್ಯಾಪಕರು ಒಬ್ಬರು “ನೀವೇಕೆ ಹೇದರುತ್ತೀರಿ? ದಯಾನಂದ ರಾಯರು ಹೇಳಲಿಲ್ಲವೇ -ಶಾಲೆಗಾಗಿ ಬೇರೆಯೇ ಒಂದು ದೊಡ್ಡ ಚಾವಣಿಯನ್ನು ಹಾಕಿಸುತ್ತೇನೆ – ಎಂದು. ನಿಮಗೇನೂ ಯೋಚನೆ ಬೇಡ” ಎಂದರು. ಈತ ಬಂದೊಡನೆಯೆ, ಉಳಿದವರು ತಮ್ಮ ಶೈಕ್ಷಣಿಕ ಠೀವಿಯನ್ನು ಚಲಾಯಿಸಿದರು. ಪಾಕಶಾಲೆಯಲ್ಲಿ ಸತ್ಯಳ ಶ್ರಮವನ್ನು ತಗ್ಗಿಸುವ ಕೆಲಸ ರಾಧಾಕೃಷ್ಣನಿಗೆ ಸಂದಿತು. ಮೂವರು ಉಪಾಧ್ಯಾಯರು ತಮ್ಮ ಕೆಲಸಗಳನ್ನು ತಾವೇ ನಿರ್ಣಯಿಸಿಕೊಂಡಿದ್ದರು. ಒಬ್ಬರು ಚರಖಾ ಮಾಸ್ತರರು, ಒಬ್ಬರು ಹಿಂದೀ ಅಧ್ಯಾಪಕರು; ಮತ್ತೊಬ್ಬರು ಸರ್ವತ್ರ ಉಪನ್ಯಾಸಕರು. ಅಷ್ಟು ಮಂದಿ ಬಾಲಕರಲ್ಲಿ ವಿಭಿನ್ನ ವಯಸ್ಸಿನವರೂ ಸೇರಿದ್ದರು. ತಿಳಿವಿನಲ್ಲಿಯೂ ಅದೇ ಬಗೆಯ ಅಂತರವಿತ್ತು. ಇವರೆಲ್ಲರನ್ನು ಗುಂಪು ಕೂಡಿಸಿಯೋ, ಸಂದರ್ಭಕ್ಕೆ ಸಮನಾಗಿ ಗುಂಪು ಬಿಡಿಸಿಯೋ, ಪಾಠ ಕಲಿಸುವ ವ್ಯವಸ್ಥೆ ಆಗಬೇಕಾಗಿದೆ.

ನೂಲುವ ಮಾಸ್ತರರು, ಅಷ್ಟಕ್ಕೆ ಮಾತ್ರ ಪಂಡಿತರು. ಸುಮಾರು ಐವತ್ತು ವಯಸ್ಸಾಗಿರಬಹುದು. ಉಬ್ಬಸದಿಂದ ಮಾತನಾಡುವುದಕ್ಕೆ ಆಗುತ್ತಿರಲಿಲ್ಲ. ಹೆಂಡತಿ ಮಕ್ಕಳನ್ನು ಕಳೆದುಕೊಂಡ ಸಂಸಾರಿಗಳು. ಯಾವುದೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತುಸು ನಂಬುಗೆ ಕೆಡಿಸಿಕೊಂಡು, ಅಲ್ಲಿಗೆ ಬಂದು ಸೇರಿದರು. ತಮ್ಮ ಉಳಿದ ಉಸಿರನ್ನು ದಯಾನಂದ ರಾಯರ ಗುಣಗಾನದಲ್ಲಿ ಕಳೆಯಲು ಶಕ್ತರಾದುದರಿಂದ, ಈ ಕೆಲಸ ದೊರೆಯಿತು. ರಾಯರ ದೃಷ್ಟಿಯಲ್ಲಿ ನಮ್ಮ “ಜಾರಪ್ಪ ಮಾಸ್ತರರು ನಂ -1 ಜನ! ಹಿಂದೀ ಅಧ್ಯಾಪಕರು ಕರ್ರಗಿನ, ತೆಳ್ಳಗಿನ ತರುಣರು. ಉದ್ಧಾಮ ರಾಷ್ಟ್ರಭಕ್ತಿ ಅವರದು. ಆಶ್ರಮದ ಗಿಡ ಮರಗಳು ಸಹ ಹಿಂದೀ ಭಾಷೆಯನ್ನು ಕಲಿಯಬೇಕೆಂದು ಅವರ ಮತ. ಅಲ್ಲಿನ ಮೂಲನಿವಾಸಿಯಾದ ಬಿರುಮ ಮರಕಾಲನೊಡನೆಯೂ ಅವರು “ಆಯಿಯೇ ಜನಾಬ್” ಎಂದು ಮಾತನಾಡುವರೇ ಹೊರತು, ಮನೆಯ ಮಾತಾದ ತುಳುವನ್ನಾಗಲೀ, ನಾಡುನುಡಿಯಾದ ಕನ್ನಡವನ್ನಾಗಲೀ ಮಾತನಾಡಿ, ನಾಲಿಗೆ ಕೆಡಿಸಿಕೊಂಡವರಲ್ಲ. ಯಾವಾಗ ಕೇಳಿದರೂ – ತುಳಸೀದಾಸ ರಾಮಾಯಣ, ಪ್ರೇಮಚಂದ್ರರ ಕಾದಂಬರಿಗಳ ವಿಚಾರ ಅವರ ನಾಲಿಗೆಯ ಮೇಲೆ ನಲಿಯುತ್ತಿದ್ದುವು. ದಯಾನಂದ ರಾಯರ ಗತ ಇಲ್ಲವೆ ಮೃತ ರಾಷ್ಟ್ರೀಯ ಪಾಠಶಾಲೆಯಲ್ಲಿ ದುಡಿದು ಕೀರ್ತಿ ತಾಳಿದವರು. ಕ್ಷಣಕಾಲಕ್ಕೂ ಅವರು ತಮ್ಮ ಖಾದಿ ಟೋಪಿಯನ್ನು ಬಿಟ್ಟವರಲ್ಲ. ಬಿಟ್ಟರೆ, ಅವರ ಉಸಿರೇ ಅಲುಗಾಡದು. ತುಂಬಿದ ಜುಟ್ಟನ್ನು ಮುಚ್ಚುವರೆ, ರಾತ್ರಿಯೂ ಅದನ್ನು ಬಳಸುತ್ತಾರೆ. ನಖಶಿಖಾಂತ ಅವರು ಖಾದೀಮಯರು, ಉಳಿದವರಂತಲ್ಲ. ಅವರು ಬಂದ ದಿವಸವೇ ಪಾಠ, ಪ್ರವಚನ ತೊಡಗಿದರು. ರಾಧಾಕೃಷ್ಣ ಬಂದು ಸೇರುವಾಗ ಮಕ್ಕಳಿಗೆ ಪಹಿಲಿ ಕಿತಾಬ್ ಮುಗಿದು ಹೋಗಿತ್ತು. ದೂಸರೀ ಕಿತಾಬು ಸಿಗದೆ ಒದ್ದಾಡುತ್ತಿದ್ದರು.

ಅವರು ತಮ್ಮ ಊರಲ್ಲಿ ಶೀನಪ್ಪ ಎಂಬ ಹೆಸರು ಪಡೆದವರಾದರೂ, ರಾಷ್ಟ್ರೀಯತೆಯಿಂದ ಬೀಗಿ, ಶ್ರೀ ಪಂಡಿತ್ ನಿವಾಸ್ ಜೀ ಎಂದು ಕರೆಯಿಸಿಕೊಂಡಿದ್ದಾರೆ. ಬಾಲಕರು `ಪಂಡಿತ್ ಜೀ’ ಎಂದು ಸಂಬೋಧಿಸಲೇ ಬೇಕು. ಅವರ ಮನಸ್ಸಿಗೆ ನಿಜವಾದ ಆಶ್ರಮ ಆಗಬೇಕಾದರೆ, ತನ್ನಂತೆ ರಾಷ್ಟ್ರೀಯತೆಯಲ್ಲಿ ಅದ್ದಿ ತೇಲಿದ ಜನ ಬೇಕೇ ಹೊರತು, ಯಾವುದೋ ಹಳ್ಳಿ ಮೂಲೆಯ ರಾಧಾಕೃಷ್ಣ ತಕ್ಕವನೆಂದು ತೋರಿಬರಲಿಲ್ಲ. ಗಾಂಧೀಜಿಯವರೇ – ಪರದೇಶೀಯ ವಿದ್ಯೆಯಿಂದ ನಮಗೆ ಉಪಯೋಗವಿಲ್ಲ ಎಂದು ಸಾರಿರುತ್ತ, ಅರ್ಧ ಇಂಗ್ಲಿಷ ವಿದ್ಯಾವಂತನಾದ ರಾಧಾಕೃಷ್ಣ ಆಚಾರ್ಯ ಪಟ್ಟಕ್ಕೆ ಬರುವುದು ಏನೂ ಸಮವೆನಿಸಲಿಲ್ಲ. ಬಂದ ಮೇಲೆಯೂ, ಅವನನ್ನು ಒಪ್ಪುವುದು ಅವರ ಮನಸ್ಸಿಗೆ ತುಂಬ ಕಷ್ಟವಾಗಿತ್ತು. ಇನ್ನು, ಮೂರನೆಯ ಮಾಸ್ತರರ ವಿಚಾರ; ಅವರು ಇಂಟರ್ ಓದಿದ್ದಾರಂತೆ. ಹಲವರಿಗೆ ದೇಶಸೇವೆಯಲ್ಲಿ ಬೇಸರ ಬಂದಿರುವಾಗ, ಇವರು ಹೊಸತಾಗಿ ಸೇರಿದವರು. ಅವರ ಮನೆ, ಮಠ ಯಾರಿಗೂ ತಿಳಿಯದು. ಒಂದು ದಿನ ಅವರಾಗಿ ದಯಾನಂದರಾಯರಲ್ಲಿಗೆ ಹೋಗಿದ್ದರು. ನಾಲ್ಕು ದಿವಸಗಳ ಹಿಂದೆ ತಾವು ಓದಿದ್ದ, ಹರಬಿಲಾಸ ಶಾರದಾ ಇವರ ಗ್ರಂಥದ ನೆನಪಿನಿಂದ ಒಂದೇ ಸಮನೆ ಎರಡು ತಾಸು ಮಾತಾಡಿದರು. ಅದರ ಫಲವಾಗಿ `ಸಾಂಸ್ಕೃತಿಕ ಶಿಕ್ಷಣಕ್ಕೆ ಅವರನ್ನು ಬಿಟ್ಟು ಇನ್ನಾರೂ ಸಲ್ಲ’ ಎಂಬ ತೀರ್ಮಾನಕ್ಕೆ ರಾಯರು ಬಂದರು. ಈ ಮೂವರ ಮೇಲೆ ಆಚಾರ್ಯ ರಾಧಾಕೃಷ್ಣನಿದ್ದಾನೆ. ಇವರುಗಳಿಂದ ತಮ್ಮ ದಲಿತಾಶ್ರಮ ಗುರುಕುಲದ ಮಟ್ಟವನ್ನು ಬಹುಬೇಗನೆ ಸೇರುವುದೆಂದು ರಾಯರು ತಿಳಿದಿದ್ದರು.

ಇನ್ನು, ಅಲ್ಲಿ ಕಲೆತ ಬಾಲಕರ ವಿಚಾರ. ಅವು ಆಯ್ದ ಕುಸುಮಗಳು. ಅವರಲ್ಲಿ ಮೂವರು ಐದಾರು ವರ್ಷದ ಮೊದ್ದುಗಳು. ಮಂಗಳೂರಿನ ಬಡ ತಾಯಿತಂದೆಯರಿಂದ ಎರವಲಾಗಿ ತಂದ ವಸ್ತುಗಳು. ಉಳಿದ ಎಂಟು ಮಂದಿಯಲ್ಲಿ ಎಂಟು ವರ್ಷದಿಂದ ತೊಡಗಿ ಹದಿನಾಲ್ಕು ವರ್ಷದ ತನಕ ಇರುವ ಸಮೀಪದ ಗ್ರಾಮಸ್ಥರ ಮಕ್ಕಳು. ರಜೆ ಬಂದರೆ, ಹಬ್ಬ ಬಂದರೆ, ಬೇಸರ ಬಂದರೆ, ಮನೆಯ ನೆನಪು ಬಂದರೆ – ಹೇಳಿಯಾಗಲೀ, ಹೇಳದೆ ಆಗಲೀ ತಮ್ಮ ಮನೆಗೆ ಹೋಗಿ ಬರುವ ಮಕ್ಕಳು. ಅವರಲ್ಲಿ ಹಿರಿಯರಾದ ಇಬ್ಬರು ವರ್ಷ ಹದಿನಾಲ್ಕೆಂದರೂ, ಹದಿನಾರು, ಹದಿನೆಂಟರ ಗಾತ್ರದವರು. ಅವರು ಶಾಲೆಗೆ ಹೋಗಿ ಆಗಬೇಕಾದುದು ಏನಿಲ್ಲ. ಆದರೆ, ಅವರ ಆವಾಂತರ ಸಹಿಸಲಾರದ ತಂದೆತಾಯರು, ಅವರನ್ನು ದಲಿತಾಶ್ರಮಕ್ಕೆ ದಾನಮಾಡಿದ್ದಾರೆ. ಈ ಹನ್ನೊಂದು ಮಂದಿ ಹನ್ನೊಂದು ಜಾತಿಗೆ ಸೇರಿದವರು. ಅವರಲ್ಲಿ ‘ದಲಿತರು’ ಅಂದರೆ ಅಸ್ಪೃಶ್ಯರು ಯಾರೂ ಇರಲಿಲ್ಲ. ಅದಕ್ಕಾಗಿಯೇ ಆಶ್ರಮದ ತೆರೆಯೋಣವನ್ನು ಮುಂದುವರಿಸಲು ರಾಯರಿಗೆ ಇಷ್ಟವಾಗಲಿಲ್ಲ. ದಲಿತಾಶ್ರಮವೆಂದು ಮೊದಲೇ ನಾಮಕರಣ ಮಾಡಿಯಾಗಿತ್ತು. ದಲಿತ ಜನ ಸಿಗುವ ತನಕ, ರಾಯರ ಆತುರ ತಡೆದು ನಿಲ್ಲುವಂತಿಲ್ಲ. ಆಶ್ರಮವನ್ನು ತೆರೆದ ಮೇಲೆ, ಅವರು ಬಂದೇ ಬರುತ್ತಾರೆ ಎಂಬ ಧೈರ್ಯದಿಂದ ಆ ಕೆಲಸವನ್ನು ಪ್ರಾರಂಭಿಸಿಬಿಟ್ಟರು.

ರಾಧಾಕೃಷ್ಣ ಅಲ್ಲಿಗೆ ಬಂದ ಮೊದಲನೆಯ ದಿನ, ಸುತ್ತಲೂ ಬಾಲಕರನ್ನು ಕುಳ್ಳಿರಿಸಿಕೊಂಡು, ಪಂಡೀತಜೀಯವರು ಮಕ್ಕಳಿಗೆ ರಾಷ್ಟ್ರಗೀತೆಯ ಪಾಠ ಮಾಡಿಸುತ್ತಿದ್ದರು. ಇವನ ಗುರುತು ಅವರಿಗೆ ಇರಲಿಲ್ಲ. “ಇದರ್ ರಾಸ್ತಾ ನಹೀಂ” ಎಂದು ಅವನನ್ನು ಕಂಡು ಹೇಳಿದರು. ಆತ ಮೆಲ್ಲಗೆ ಬಂದು “ನಾನೂ ಇಲ್ಲಿಗೆ ಬಂದವನೇ, ದಯಾನಂದರಾಯರ ಹೇಳಿಕೆ ಮೇರೆಗೆ” ಎಂದ ಮೇಲೆ ಸುಮ್ಮನಾಗಿ, ಹೆಚ್ಚಿಗೆ ಮಾತನಾಡದೆ ತಮ್ಮ ಪಾಠವನ್ನು ಮುಂದುವರಿಸಿದರು.
ಒಂದು ವಾರದ ತನಕ ಅವನು, ಯಾರೊಡನೆಯೂ ಅಲ್ಲಿನ ಶಿಕ್ಷಣವನ್ನು ಕುರಿತು ಚರ್ಚೆ ಮಾಡಲಿಲ್ಲ. ಬದಲು, ತಮ್ಮಿಬ್ಬರಿಗಾಗಿ ತೆಂಗಿನ ಸೋಗೆಗಳಿಂದ ಗುಡಿಸಲೊಂದನ್ನು ಕಟ್ಟುವುದರಲ್ಲಿ ಸಮಯ ಕಳೆದ. ಸತ್ಯ ಆರಂಭದಲ್ಲಿ ಅಡುಗೆ ಮಾಡುತ್ತಿದ್ದ ಮಕ್ಕಳಿಗೆ ನೆರವಾದಳು. ಮುಂದೆ ಅವರ ನೆರವನ್ನು ಕೊಂಡು ತಾನೇ ಅಡುಗೆ ಕೆಲಸ ತೊಡಗಿದಳು. ಆ ಕೆಲಸಕ್ಕೆ ಬೇಕಾದ ಸಾಮಗ್ರಿಗಳಾಗಲಿ, ಜಿನಸುಗಳಾಗಲೀ ಅಲ್ಲಿ ಸಮವಾಗಿರಲಿಲ್ಲ. ಅಡುಗೆಯ ಕೆಲಸ ಆಕೆಗೆ ತಿಳಿದುದೂ ಅಷ್ಟರಲ್ಲಿಯೇ. ಆದರೂ ಹೇಗೆ ಹೇಗೆಯೋ ದಿನ ಸಾಗಿಸಿದಳು. ಒಂದು ಪಕ್ಷ ಕಳೆದರೂ ಬರುತ್ತೇನೆ ಎಂದಿದ್ದ ದಯಾನಂದರಾಯರು ಬರಲೇ ಇಲ್ಲ.

ಅಂತೂ, ನೂಲುವ ಒಂದೇ ವಿಷಯದೊಳಗೆ ಅವನ ಗ್ರಾಮ ಸುಧಾರಣೆಯ ಕೆಲಸ ನಿಂತುಬಿಟ್ಟಿದೆ. ಅವನ ಮನಸ್ಸಿಗೇನೇ ತಾನು ಬರಿಯ `ಹೆಣ್ಣು ಕೆಲಸ’ದಲ್ಲಿ ಇದ್ದೇನೆ ಎಂದು ಅನಿಸುತ್ತಿದೆ. ತನ್ನಂತಹ ಓದು ಬಲ್ಲವ – ಬರಿಯ ಒಂದೆರಡು ತಾಸು ನೂತರೇ ಸಾಕೇ, ಇತರರಿಗೆ ನೂಲಲು ಹೇಳಿಕೊಟ್ಟರೆ ಸಾಕೇ – ಎಂಬ ವಿಚಾರ ತಾಳುತ್ತಾನೆ. ಅದಕ್ಕೂ ಹೆಚ್ಚಿಗೆ ಏನು ಮಾಡಲಿ – ಎಂದು ಯೋಚಿಸಿ, ಯೋಚಿಸಿ ಬಟ್ಟೆಗೆಡುತ್ತಾನೆ.

ರಾಧಾಕೃಷ್ಣನು ಕಾತರನಾದನು. ಸಮನಾದ ವ್ಯವಸ್ಥೆ ಇಲ್ಲದೆ ಇದೇ ರೀತಿಯಲ್ಲಿ ಕೆಲಸ ಮಾಡಿದರೆ, ಬಟ್ಟೆಗೆಟ್ಟೀತೆಂದು ತರ್ಕಿಸಿ, ಅದಕ್ಕೊಂದು ಯೋಜನೆ ಮಾಡುವ ಸಲುವಾಗಿ, ಉಳಿದ ಅಧ್ಯಾಪಕರ ಸಹಾಯವನ್ನು ಕೋರಿದ. “ಇಷ್ಟು ಹುಡುಗರಿದ್ದಾರೆ. ಎಲ್ಲರಿಗೂ ಬೇರೆ, ಬೇರೆ ವಯಸ್ಸು, ಒಂದೊಂದು ತರಗತಿ. ಅವರನ್ನು ಹೇಗೆ ಹಂಚಬೇಕು, ಯಾವ ಪಾಠ ಹೇಳಿಕೊಡಬೇಕು, ಯಾರಿಗೆ ಏನೇನು ಕೆಲಸ, ಅದನ್ನೆಲ್ಲ ನಿಷ್ಕರ್ಷಿಸಬೇಡವೇ?” ಎಂದು ಅವರನ್ನು ಕರೆದ.
ಚರ್ಚೆಗೆ ಆ ನಾಲ್ಕು ಮಂದಿಯೂ ಕುಳಿತರು. ಪಂಡಿತಜೀಯವರು ಅಖಂಡ ಹಿಂದಿಯಲ್ಲಿ ಭಾಷಣ ಮಾಡಿದರು. ಅದೇ ರಾಷ್ಟ್ರೀಯ ಶಿಕ್ಷಣಕ್ಕೆ ಮೂಲ ಮಂತ್ರ – ಎಂದರು. ರಾಧಾಕೃಷ್ಣನಿಗೆ ತಡೆಯದಾಯಿತು. “ಪಂಡಿತರೇ ಸಿಟ್ಟಾಗಬೇಡಿ; ಈ ಮಕ್ಕಳಿಗೆ ಮೊದಲು ಅವರ ಊರಿನ ಮಾತು ಬರಲಿ. ಬಿಡುವಿನಲ್ಲಿ ಸ್ವಲ್ಪ ಇಂಗ್ಲಿಷನ್ನೋ, ಹಿಂದಿಯನ್ನೋ ಕಲಿಸುವ, ಮೊದಲು ಈ ಮಕ್ಕಳನ್ನು ಯಾವ ಕೆಲಸಕ್ಕೆ ತಯಾರಿಸುವುದೆಂದು ನಿಷ್ಕರ್ಷೆ ಮಾಡುವ” ಎಂದರು.
ಪಂಡಿತ್ಜೀಯವರು, “ಆಶ್ರಮವನ್ನು ತೆರೆದ ದಯಾನಂದರಾಯರು ಅದನ್ನು ಹೇಳಲಿಲ್ಲವೇ? ಈ ಮಕ್ಕಳನ್ನು ರಾಷ್ಟ್ರಸೇವೆಗೆ ತಯಾರಿಸಬೇಕೆಂದು” ಎಂದರು.
ರಾಧಾಕೃಷ್ಣ “ಈ ಆರೇಳು ವರ್ಷದ ಮಕ್ಕಳನ್ನು ರಾಷ್ಟ್ರಸೇವೆಗೇನು ತಯಾರಿಸುತ್ತೇವೆ? ಈ ಕೆಲಸ ನಾವು ದೊಡ್ಡವರು ಮಾಡಿದರೆ ಸಾಕು. ಅವರನ್ನು ಕಳುಹಿಸಿದ ಹಿರಿಯರು ಏನು ತಿಳಿದುಕೊಂಡಿದ್ದಾರೆಯೋ ಇವರು ನಾಳೆ ಹಳ್ಳಿಯಲ್ಲಿ ಬದುಕಿಕೊಂಡಿರಬೇಕಾದ ಮಕ್ಕಳು. ಅಲ್ಲಿನ ಜೀವನಕ್ಕೆ ಹೊಂದುವಂತೆ ಮಾಡಬೇಕಾದುದು ನಮ್ಮ ಕೆಲಸ.”

ನಿವಾಸಜೀಯವರು ತಾಳ್ಮೆಗೆಟ್ಟು ಎದ್ದು ನಿಂತರು. “ಯಾವುದಕ್ಕೂ ದಯಾನಂದರಾಯರು ಬಂದು ಇತ್ಯರ್ಥಪಡಿಸಲಿ. ಹಿಂದೀ ಪಾಠಗಳ ವಿಷಯದಲ್ಲಿ ನನ್ನನ್ನು ಕೇಳಿ. ಉಳಿದ ವಿಷಯಗಳಿಗೆ ನಾನಿಲ್ಲ” ಎಂದರು.

ದಯಾನಂದರಾಯರು ಮಾತ್ರ ಇನ್ನೂ ಹತ್ತು ದಿವಸ ಕಳೆದರೂ ಅಲ್ಲಿಗೆ ಬರಲಿಲ್ಲ! ಪ್ರಾಯಶಃ ಎ.ಐ.ಸಿ.ಸಿ., ಕೆ.ಪಿ.ಸಿ.ಸಿ. ಸಭೆಗಳಿಗೆ ಅಲೆದಾಡುತ್ತಿರಬೇಕು. ಇಲ್ಲಿ ಮಾತ್ರ ಉಗ್ರಾಣದಲ್ಲಿ ಅಕ್ಕಿಯೂ ಉಳಿದಿರಲಿಲ್ಲ. ಅದನ್ನು ಕುರಿತು ರಾಧಾಕೃಷ್ಣ ಯೋಚಿಸಿ, “ಪಂಡಿತರೇ, ಪಾಠದ ವಿಚಾರ ಹಾಗಿರಲಿ, ಇಲ್ಲಿನ ದಿನದಿನದ ಕೆಲಸಗಳಿವೆಯೆಲ್ಲಾ, ಅವನ್ನು ಹಂಚಿಕೊಳ್ಳುವ. ಇಲ್ಲಿಗೆ ಬೇಕಾಗುವ ಖರ್ಚು ಎಷ್ಟು? ಇದನ್ನು ಹೇಗೆ ಕೂಡಿಸಬೇಕು? ಆರ್ಥಿಕ ದೃಷ್ಟಿಯಿಂದ ಇದು ಆದಷ್ಟು ಸ್ವತಂತ್ರ ಆಗುವ ಹಾಗೆ ಹೇಗೆ ಮಾಡಬೇಕು” ಎಂದನು. ಅದಕ್ಕೆ ಕೆಮ್ಮುತ್ತ, ಕೆಮ್ಮುತ್ತ ಜಾರಪ್ಪ ಮಾಸ್ತರರು, “ಆ ಚಿಂತೆ ನಿಮಗೆ ಯಾಕೆ? ದಯಾನಂದರಾಯರು ಅದನ್ನೆಲ್ಲ ತಾವೇ ಮಾಡುತ್ತೇವೆ ಅಂದಿಲ್ಲವೇ?” ಅಂದರು. ಈತ ಅಸಮಾಧಾನಗೊಂಡು “ಅವರು ಬಂದು ಮಾಡುವ ತನಕ ನಾವು ನಿದ್ರಿಸುತ್ತ ಕುಳಿತಿರುವುದೇ? ಇಷ್ಟು ಮಕ್ಕಳನ್ನು ಇರಿಸಿಕೊಂಡು, ಸಾಕಬೇಡವೇ? ಇಲ್ಲಿರುವ ಅಕ್ಕಿ ನಾಳೆಗೆ ಸಾಲದು. ಇಲ್ಲಿ ಒಂದು ತೊಟ್ಟು ಹಾಲಿಗೂ ವ್ಯವಸ್ಥೆ ಇಲ್ಲ. ಯಾರ ಮಕ್ಕಳಾದರೂ ಸರಿಯೇ, ನಮ್ಮ ಜವಾಬ್ದಾರಿ ಇರುವಷ್ಟು ದಿನ, ಅವರಿಗೆ ಸಮನಾಗಿ ಹೊಟ್ಟೆಗೆ ಹಾಕಬೇಡವೇ?” ಎಂದು ಕೇಳಿದ.
“ಅಕ್ಕಿ ಇಲ್ಲ” ಎಂಬ ಮಾತನ್ನು ಕೇಳಿ ಜಾರಪ್ಪನವರು ಯೋಚನೆಗೆ ಈಡಾದರು. ಸತ್ಯ ಪಾಕಶಾಲೆಯನ್ನು ಹೊಕ್ಕಂದಿನಿಂದ ಅವರು ಅಲ್ಲಿ ಸುಳಿದವರಲ್ಲ. ಈಗ ತುಸು ಗಾಬರಿಯಲ್ಲಿ “ರಾಯರೇ, ನನ್ನ ಆರೋಗ್ಯ ನೋಡಿದಿರಿ. ಖಂಡಿತ, ಓಡಾಟಕ್ಕೆ ನಾನು ಆಳಲ್ಲ. ಇಲ್ಲಿನ ಮಕ್ಕಳ ಮೇಲು ವಿಚಾರಣೆ ನನಗಿರಲಿ. ಅವರಿಗೆ ಸದಾ ನೂಲು ಮಾಡುವುದನ್ನು ಹೇಳಿಕೊಡುವ ಕೆಲಸ ನನ್ನದು” ಎಂದರು. ಅದಕ್ಕೆ ರಾಧಾಕೃಷ್ಣ “ನೂಲು ಮಾಡುವುದನ್ನು ಹೇಳುವುದಕ್ಕೆ ಎಷ್ಟು ಸಮಯ ಬೇಕು – ವರ್ಷವೇ, ತಿಂಗಳೆ? ಒಮ್ಮೆ ಹೇಳಿತು ಎಂದರೆ ಮುಂದೆ ಅವರಷ್ಟಕ್ಕೆ ಅವರೇ ಮಾಡಲಾರರೆ? ಇಲ್ಲಿರುವ ಮಕ್ಕಳಲ್ಲಿ ದೊಡ್ಡವರಿಗೆ ನಾವು ನೇಯುವುದನ್ನೋ, ಕೃಷಿಯನ್ನೋ ಹೇಳಿಕೊಡಬಹುದು. ಬೇರೆ ಯಾವ ಪಾಠ ಹೇಳಬೇಕು, ಹೇಗೆ – ಎಂಬುದರ ತೀರ್ಮಾನ ಮಾಡಬೇಡವೇ? ಒಬ್ಬರ ಗಮನ ಇಲ್ಲಿನ ವರಮಾನವನ್ನು ಹೆಚ್ಚಿಸುವುದಕ್ಕೇ ಇರಬೇಕು. ಮೊದಲನೆಯ ವರ್ಷ ನಾವು ಹೊರಗಿನಿಂದ ವಂತಿಗೆ, ವರಾಡಗಳನ್ನು ಬೇಡಬೇಕಾದೀತು. ಆದರೆ ಆ ಕಟ್ಟಿಕೊಟ್ಟ ಬುತ್ತಿ ಬಹುದಿನಕ್ಕೆ ಬರಲಿಕ್ಕಿಲ್ಲ. ಇಲ್ಲಿ ಇಷ್ಟು ಚೆನ್ನಾದ ಗದ್ದೆಗಳಿವೆ, ನೀರಿದೆ. ನಮಗೆ ಬೇಕೆನ್ನುವಷ್ಟು ಅಕ್ಕಿಯನ್ನು ನಾವೇ ಬೆಳೆಯಿಸಲು ಸುಲಭ” ಎಂದನು.

ಅಂಥ ಆಪತ್ತೇನಾದರೂ ತಮ್ಮ ಮೇಲೆ ಬಿದ್ದೀತು – ಎಂದು ಅಂಜಿ ಸಂಸ್ಕೃತಿ ಅಧ್ಯಾಪಕರಾದ ದತ್ತಪ್ಪನವರು “ಬೌದ್ಧಿಕ ಶಿಕ್ಷಣದ ಸಂಪೂರ್ಣ ವ್ಯವಸ್ಥೆ ನನಗೆ ಇರಲಿ. ನನ್ನಿಂದ ಬೇಸಾಯ ಗೀಸಾಯ ಆಗುವಂತಿಲ್ಲ” ಎಂದರು. ಇನ್ನು ಜಾರಪ್ಪನವರಿಂದಲೂ ಮಾತು ಬರಲಿಲ್ಲ. ಪಂಡಿತಜೀಯವರು ಸುಮ್ಮಗೇ ಇದ್ದಾರೆ. ಆದುದರಿಂದ ದತ್ತಪ್ಪನವರು “ಹೋಗಲಿ, ಇನ್ನು ಒಂದುಕೆಲಸ ಹೆಚ್ಚಿಗೆ ಮಾಡುತ್ತೇನೆ, ಅಡುಗೆಯ ಮನೆ, ಉಗ್ರಾಣ, ಭೋಜನಶಾಲೆಗಳ ಮೇಲು ತನಿಖೆ ನಾನು ನೋಡಿಕೊಂಡಿರುತ್ತೇನೆ” ಎಂದರು.

“ಮೇಲು ತನಿಖೆಯೇನೂ ಬೇಕಿಲ್ಲ. ಅಂದರೆ, ನಾವೇ ಮಾಡಿ ಮುಗಿಸಬೇಕಾದ ಕೆಲಸಗಳು ಎಲ್ಲ. ನನ್ನ ಹೆಂಡತಿ ಏನೋ ಒಳಗಿನ ಕೆಲಸ ಮಾಡುತ್ತಾಳೆ. ಇಷ್ಟೊಂದು ಚಿಕ್ಕ ಮಕ್ಕಳಿದ್ದಾರೆ. ಅವರನ್ನು ನಿತ್ಯ ಮೀಯಿಸುವವರು ಬೇಕು. ಅಡುಗೆ ಮಾಡುವವರು ಬೇಕು, ಚಿಕ್ಕವರ ಬಟ್ಟೆಗಳನ್ನು ಒಗೆದು ಕೊಡಬೇಕು. ತಲೆಯ ಹೇನನ್ನು ಸಹ ತೆಗೆಯಬೇಕು, ಅಡುಗೆ ಆದ ಮೇಲೆ ಬಡಿಸುವವರು ಬೇಕು. ನೀರು ತರುವ ಕೆಲಸ, ಕಟ್ಟಿಗೆ ತರುವ ಕೆಲಸ – ಇನ್ನೂ ಹತ್ತೆಂಟು ಸಣ್ಣಪುಟ್ಟ ಕೆಲಸಗಳಿಗೆ ನಾವೇ ಕೈ ಹಾಕಿ ಮಾಡಿದರೆ, ಮಕ್ಕಳು ನಮಗೆ ಸಹಾಯವಾದಾರು. ಇದಕ್ಕೆಲ್ಲ ನಾವು ಇನ್ನೊಬ್ಬರ ಮುಖ ನೋಡಿ ಪ್ರಯೋಜನವಿಲ್ಲ” ಎಂದನು.

ಆ ಎಲ್ಲ ವಿಚಾರಗಳೂ ಕಮಿಟಿಯಲ್ಲಿಯೇ ನಿರ್ಧಾರವಾಗಬೇಕೆಂದೂ, ಅಧ್ಯಕ್ಷ ದಯಾನಂದರು ಇಲ್ಲದೇ ಅದು ಆಗುವಂತಿಲ್ಲವೆಂದೂ ಅಂದಿನ ಸಭೆಯು ಬರ್ಕಾಸ್ತು ಆಯಿತು. ಆ ಸಂಜೆ ರಾಧಾಕೃಷ್ಣನು ಮಂಗಳೂರಿನ ತನಕ ಹೋಗಿ, ರಾಯರ ದಾರಿಯನ್ನು ಕಾದನು. ರಾಯರು ಊರಲ್ಲಿ ಇದ್ದಿರಲಿಲ್ಲ. ಎಂದು ಬರುವರೆಂದೂ ತಿಳಿಯಲಿಲ್ಲ. ಕಲ್ಕತ್ತೆಗೆ ಹೋದ ಹಾಗಿದೆ ಎಂದು ಯಾರೋ ಅಂದದ್ದನ್ನು ಕೇಳಿ ಆಶ್ರಮಕ್ಕೆ ಬಂದನು. ಈ ಸುವಾರ್ತೆ ಎಲ್ಲರ ಕಿವಿಗೂ ಮುಟ್ಟಿತು. ಮರುದಿವಸ ಪಂಡಿತ್ ಜೀಯವರು ತಮಗೆ ಬೇರೆ ತಂಟೆ ಬೇಡವೆಂದು, ಎಲ್ಲ ಬಾಲಕರನ್ನು ಸುತ್ತು ಕುಳ್ಳರಿಸಿಕೊಂಡು, ಹಿಂದೀ ಸಂಭಾಷಣೆ ತೊಡಗಿದರು. ರಾಧಾಕೃಷ್ಣ ಅಲ್ಲಿಗೆ ಬಂದ. ಅವರನ್ನು ಈಚೆ ಕರೆದು “ನೀವು ಕನ್ನಡ ಚೆನ್ನಾಗಿ ಬಂದ ಹುಡುಗರಿಗೆ ಹಿಂದೀ ಪಾಠವನ್ನು ಹೇಳಿ; ಯಾವ ಪರ ಭಾಷೆಯನ್ನೂ ಹೇಳಿ. ಕನ್ನಡವೇ ಬಾರದ ಮಕ್ಕಳಿಗೆ ಯಾವ ಪರ ಭಾಷೆಯ ಪೀಡೆಯೂ ಬೇಡ” ಎಂದ. ಅವರು ಆತನನ್ನು ದುರುದುರನೆ ನೋಡುತ್ತ. ತಿರುಗಿ ನಮ್ಮ ಹಟವನ್ನು ನಡೆಯಿಸಿಯೇ ಬಿಟ್ಟರು.

ರಾಧಾಕೃಷ್ಣನು ಬಂದ ಹದಿನೈದು ದಿವಸಗಳಲ್ಲಿ, ತನ್ನ ಗುಡಿಸಲಿನ ಸಲುವಾಗಿ ಸಾಮಗ್ರಿಗಳನ್ನು ದೊರಕಿಸಿಕೊಳ್ಳಲು ಊರಲ್ಲಿ ಅಲೆದಾಡಿದನು. ಒಬ್ಬಿಬ್ಬರ ಪರಿಚಯವೂ ಆಯಿತು. ಆಗ ಅವರಲ್ಲಿ ಹೋಗುವ ಎಂದು ಹೊರಟನು. ಆ ದಿನದ ಗ್ರಾಸಕ್ಕೆ ಬೇರೆ ದಾರಿ ಇದ್ದಿರಲಿಲ್ಲ. ಅದಕ್ಕಾಗಿ ಹೊರಟಿದ್ದ ಅವನು ಹಿಂದೀ ರಣಾಗ್ರದಲ್ಲಿ ಸಿಲುಕಿಕೊಂಡನು. ಕೊನೆಗೆ ಶ್ಯಾಮ, ನೀಲ ಎಂದು ಇಬ್ಬರು ಹಿರಿಯ ಹುಡುಗರನ್ನು ಕರೆದುಕೊಂಡು ಗ್ರಾಮದಲ್ಲಿ ಭಿಕ್ಷಾಟನೆಗೆ ಹೊರಟನು. ಮೊದಲ ಬಾರಿ ಅಲ್ಲವೇ? ಹೋದ ಇವರಿಗೆ ಭಿಕ್ಷೆ ಎತ್ತಲು ಸಂಕೋಚವಾದರೂ, ತಮ್ಮ ಊರಿನ ಹೊಸ ಸಂಸ್ಥೆಗಾಗಿ ದಾನ ಮಾಡುವುದರಲ್ಲಿ ಊರವರಿಗೆ ಉತ್ಸಾಹವೇ ಬಂತು. ಆದರಿಂದ ಹತ್ತೆಂಟು ಸೇರು ಅಕ್ಕಿ ಸಂಪಾದನೆ ಆಯಿತು. ಹೆಚ್ಚಿನ ದೂರ ಅವರು ನಡೆಯಲಿಲ್ಲವಾದರೂ ಹೆಚ್ಚಿನ ವೇಳೆಯನ್ನು ಮಾತುಗಳಲ್ಲಿ ಕಳೆಯದೆಯೇ ಅಷ್ಟೆಲ್ಲ ದೊರೆಯಲಿಲ್ಲ. ಆ ಅಕ್ಕಿಯನ್ನು ತಂದು, ಸತ್ಯಗೆ ಒಪ್ಪಿಸಲು, ಆಕೆಯು ಸಣ್ಣಗೆ ಮುಖ ಮಾಡಿಕೊಂಡು “ಏನು ಹತ್ತು ಸೇರು ಇದೆಯೇ! ಇರಬಹುದೆ? ಊಟಕ್ಕೆ ಹದಿನೈದು ಬಾಯಿಗಳಿವೆ. ಬೇರೆ ಏನೂ ಇಲ್ಲದಿದ್ದರೂ ಬರಿಯ ಅನ್ನವನ್ನಾದರೂ ಬಡಿಸಬೇಕಲ್ಲ. ಇದು ಎರಡು ದಿವಸಕ್ಕೆ ಬಂದೀತು. ಇದೇ ರೀತಿ ನಿತ್ಯವೂ ಜೋಳಿಗೆ ಹಾಕಿಕೊಂಡು ಹೊರಡಬೇಕಾದೀತೇ” ಎಂದು ನುಡಿಯುತ್ತಲೇ ರಾಧಾಕೃಷ್ಣ ನಕ್ಕನು. “ಯಾಕೆ ಹೆದರುತ್ತೀಯೆ? ಏನಾದರೂ ಒಂದು ವ್ಯವಸ್ಥೆ ಮಾಡದಿರುತ್ತಾರೆಯೇ? ನೀನು ಅವಸರ ಮಾಡಿದರೆ ಹೇಗೆ” ಎಂದ.

ಆತ ಭಿಕ್ಷಾವೃತ್ತಿಗೆ ಎರಡು ದಿನಕ್ಕೊಮ್ಮೆ ಓಡಬೇಕಾಯಿತು. ರಾಧಾಕೃಷ್ಣ ಅವನ ಜತೆಗೆ ಪಾಠಕ್ಕಿಂತ ತಿರುಗಾಟದ ಮೇಲೆ ಪ್ರೀತಿ ಇರುವ ಒಬ್ಬಿಬ್ಬರು ಬಾಲಕರು ಹೋಗುತ್ತಿದ್ದರು. ಹೀಗೆ ಹದಿನೈದು ದಿವಸಗಳ ಕಾಲ ಸರಿಯಿತು. ರಾಯರು ಮಂಗಳೂರಿಗೆ ಬಂದ ವರ್ತಮಾನ ದೊರೆಯಿತು. ಅದನ್ನು ಕೇಳುತ್ತಲೇ ಪಂಡಿತಜೀಯವರು “ನಾನು ಅವರನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ” ಎಂದು ಓಡಿದರು. ಅಲ್ಲಿ ಹೋಗಿ ರಾಧಾಕೃಷ್ಣನನ್ನು ದೂರುವಷ್ಟೆಲ್ಲಾ ದೂರಿದರು. ತಮ್ಮಿಬ್ಬರ ಭಿನ್ನ ಆದರ್ಶಗಳನ್ನು ಅವರಿಗೆ ಬಣ್ಣಿಸಿ ಹೇಳಿದರು. “ನೀವು ಬಂದು ಎಲ್ಲವನ್ನು ಖಂಡುತುಂಡು ಮಾಡದೆ ಹೋದರೆ ಎಂಟು ದಿವಸಗಳಲ್ಲಿ ಈ ಆಶ್ರಮ ಮುಚ್ಚುವ ಸ್ಥಿತಿಯು ಬಂದೀತು” ಎಂದು ಬೆದರಿಕೆ ಹಾಕಿದರು. ದಯಾನಂದರಾಯರು ಬಿಡುವಲ್ಲಿ ಬಿಡುವು ಮಾಡಿಕೊಂಡು, ಮರುದಿನವೇ ಅಲ್ಲಿಗೆ ಬಂದರು. ಮೊದಲು ಅಂಥವರನ್ನು ನಂಬುವ ಪದ್ಧತಿ ಅವರದು. ಹೀಗಾಗಿ, ಹಿಂದೀ ಪಂಡಿತರು ಹೇಳಿದ ಎಲ್ಲಾ ಮಾತುಗಳನ್ನು ಹದಿನಾರಾಣೆ ಸತ್ಯವೆಂದು ನಂಬಿಯೇ ಬಂದಿದ್ದರು.

ಅವರು ಬರುತ್ತಲೇ ಜಾರಪ್ಪ ಮಾಸ್ತರರು, ಅವರೊಡನೆ ಅಲ್ಲಿನ ಆಹಾರ ಪರಿಸ್ಥಿತಿಯನ್ನು ಬಣ್ಣಿಸಿದರು. ಈ ಹದಿನೈದು ದಿವಸಗಳ ಕಾಲ ಭಿಕ್ಷೆಯೆತ್ತಿ ತಮಗೆ ಅನ್ನ ಹಾಕಿದ ರಾಧಾಕೃಷ್ಣನ ವಿಷಯದಲ್ಲಿ ತುಂಬ ಆದರವನ್ನು ವ್ಯಕ್ತಪಡಿಸಿದರು. ದತ್ತಪ್ಪ ಮಾಸ್ತರರದ್ದು ಕೇವಲ ಬೌದ್ಧಿಕ ಪ್ರಪಂಚವಷ್ಟೆ. “ಮೊದಲಿಗೆ ಕರಿಕ್ಯುಲಂ ಮಾಡದೆ ತೊಂದರೆಯಾಗಿಬಿಟ್ಟಿದೆ. ಕೆಲಸ ಮಾಡುವ ಹಾಗೆಯೇ ಇಲ್ಲ” ಎಂದು ಅವರು ತೀರ್ಮಾನವಿತ್ತರು. ಪಂಡಿತರು – ಎದುರಿನಲ್ಲಿ ಯಾವ ಮಾತನ್ನೂ ಆಡಲಿಲ್ಲ. ರಾಧಾಕೃಷ್ಣನು ಬಹಳ ಹೊತ್ತು ಮೌನವಾಗಿದ್ದ. ಉಳಿದವರ ಮಾತುಗಳು ಮುಗಿದುವು. ಜಾರಪ್ಪ ಮಾಸ್ತರರೊಡನೆ ರಾಯರು “ನನಗೆ ಈ ಮೊದಲು ಆಕಸ್ಮಾತ್ ಹೊರಗೆ ಹೋಗಬೇಕಾಗಿದ್ದು, ಇಲ್ಲಿಗೆ ಬರಲು ಆಗಲಿಲ್ಲ. ಇನ್ನು ಅಂಥ ಸ್ಥಿತಿ ಬರಲಾರದು, ಆರು ತಿಂಗಳ ಸಾಮಗ್ರಿಗಳನ್ನು ದಾಸ್ತಾನು ಇರಿಸುವ. ಮಕ್ಕಳ ಹಾಲಿಗಾಗಿ ಒಂದೆರಡು ಎಮ್ಮೆಗಳನ್ನು ಕಟ್ಟಲೇಬೇಕು. ಕೇಳಿದರೆ, ಯಾರೂ ದಾನ ಮಾಡಿಯಾರು” ಎಂದು ಸುಲಭವಾದ ಭರವಸೆ ಕೊಟ್ಟರು. ರಾಧಾಕೃಷ್ಣನು ಅವರನ್ನು ತನ್ನ ಪರ್ಣಕುಟೀರಕ್ಕೆ ಕರೆದೊಯ್ದನು. ಅಲ್ಲಿ ಕ್ರಮವಾಗಿ ತನ್ನ ಮನಸ್ಸಿನ ಅಭಿಪ್ರಾಯಗಳನ್ನು ಅವರ ಮುಂದೆ ಬಿಡಿಸಿ ಹೇಳಿದನು. “ರಾಯರೇ, ನೀವು ಇದರ ಪೂರ್ಣವಾದ ಜವಾಬ್ದಾರಿ ವಹಿಸಿದರೆ ಚೆನ್ನ. ಈ ಆಶ್ರಮದ ಉದ್ದೇಶ ಹೀಗೆ; ಇಲ್ಲಿನ ಕಾರ್ಯಕ್ರಮ ಹೀಗೆ, ಯಾರು ಯಾರು ಯಾವ್ಯಾವ ಕೆಲಸ ಮಾಡಬೇಕು – ಎಂಬ ವಿವರವನ್ನು ಹಾಕಿಕೊಟ್ಟಲ್ಲಿ, ಅದರಂತೆ ನಾವು ನಮ್ಮ ಕೆಲಸವನ್ನು ಮಾಡುವುದು ಸುಲಭವಾಗುತ್ತದೆ. ಇಲ್ಲಿನ ಅನುಭವ ನನಗಿರುವುದು ಬರಿಯ ಸ್ವಲ್ಪ ಸಮಯದ್ದು. ಅದರ ಮೇಲಿಂದ ಹೇಳುವುದಾದರೆ, ಇಲ್ಲಿರುವ ನಾಲ್ಕು ಮಂದಿಯಲ್ಲಿ, ನಾಲ್ಕು ದಾರಿ, ನಾಲ್ಕು ಗುರಿಗಳು ಇದ್ದ ಹಾಗೆ ಕಾಣುತ್ತದೆ. ನಮ್ಮ ಅಭಿಪ್ರಾಯ ಭೇದಗಳಿಂದ ಶಾಲೆಯ ಕೆಲಸ ಕೆಡಬಾರದಷ್ಟೆ. ಇದರ ಶ್ರೇಯಸ್ಸು ನಿಮಗೆ. ನೀವು ಮುಂದಾಳಾದರೆ ಆಗ ನಮಗೆ ಚರ್ಚೆ ಮಾಡುವ ಕೆಲಸವಿಲ್ಲ. ಹೇಳಿದ್ದನ್ನು ಒಪ್ಪಿಸಿ ಮಾಡುವ ಕೆಲಸ ಮಾತ್ರ” ಎಂದು ಸಂಗತಿಗಳನ್ನು ವಿವರಿಸಿದನು.

“ರಾಧಾಕೃಷ್ಣ, ನಾನು – ಈ ಜವಾಬ್ದಾರಿಗೆ ನೀವು ತಕ್ಕವರೆಂದು ಯೋಚಿಸಿ ಕೆಲಸ ತೊಡಗಿದ್ದೇನೆ. ನನ್ನ ನೂರಾರು ತಾಪತ್ರಯಗಳಲ್ಲಿ ಇದರ ಕಡೆಗೆ ಹೆಚ್ಚಿನ ಗಮನ ಕೊಡುವುದಕ್ಕೆ ಆಗಲಾರದು. ಇದರ ಆಚಾರ್ಯಪಟ್ಟ ನಿಮಗೆ. ಇದಕ್ಕೆ ಏನೇನು ಸಲಕರಣೆ ಆಗಬೇಕು? ಎಷ್ಟು ಹಣ ಬೇಕು? ಅಷ್ಟನ್ನು ತಿಳಿಸಿದರೆ ನನ್ನಿಂದ ಆಗುವಷ್ಟು ಬೆಂಬಲ ಕೊಡುತ್ತೇನೆ.”

“ನೀವು ನನ್ನನ್ನು ಬರಲು ಹೇಳಿದ್ದಂತೂ ಸರಿಯೇ. ನಾನೂ ಬಂದಿದ್ದೇನೆ; ಸಂಸಾರ ಸಹಿತನಾಗಿ, ಕೆಲಸ ಮಾಡಬೇಕೆಂಬ ಉದ್ದೇಶದಿಂದಲೇ ಬಂದಿದ್ದೇನೆ. ನಾನು ಬರುವ ಮೊದಲೇ ನೀವು ಅವಸರ ಮಾಡಿ ಇಲ್ಲಿನ ಸಹಾಯಕರನ್ನು ನೇಮಿಸಿದಿರಿ. ನಮ್ಮ ಕೆಲಸದ ರೂಪ ನಿಶ್ಚಯವಾಗದೆ ಜನರನ್ನು ಕೊಟ್ಟರೆ ಏನು ಪ್ರಯೋಜನ? ಉದ್ದೇಶಕ್ಕೆ ತಕ್ಕ ಜನ ದೊರಕಬೇಕೇ ಹೊರತು ಜನಕ್ಕೆ ಒಪ್ಪುವ ಉದ್ದೇಶವಾಗಬಾರದಲ್ಲ? ಅಲ್ಲದೆ, ಹಣಕಾಸಿನ ವಿಚಾರ ಮುಖ್ಯವಾದದ್ದು. ಇಷ್ಟೊಂದು ಮಂದಿಯ ಜೀವನ ಹೋಗಬೇಕು. ಈ ಹದಿನೈದು ದಿವಸ, ಬೇರೆ ದಾರಿ ಕಾಣದೆ, ಭಿಕ್ಷೆಯನ್ನು ಎತ್ತಿ ದಿನ ಕಳೆಯಬೇಕಾಯಿತು. ಆ ರೀತಿಯಿಂದ ಬಹಳ ದಿನ ಗ್ರಾಮಸ್ಥರ ಸಹಾಯ ದೊರಕೀತು – ಎನ್ನುವ ಹಾಗಿಲ್ಲ. ಅಲ್ಲದೆ, ಈಗಾಗಲೇ – “ನಮ್ಮ ಮಕ್ಕಳಿಗೆ ಮನೆ, ಮನೆ ಬೇಡುವ ಪಾಠ ಬೇಡ” ಎಂಬ ದೂರೂ ಬಂದಿದೆ.

“ಹಣಕಾಸಿನ ವಿಚಾರ ನಾನು ಮಾಡುತ್ತೇನೆಂದೆನಲ್ಲ. ಮಂಗಳೂರಿನಲ್ಲಿ ಒಂದು ರೌಂಡು ಸುತ್ತಿದರೆ ಜನ ಎಷ್ಟೂ ಕೊಟ್ಟಾರು, ಏನೂ ಕೊಟ್ಟಾರು; ಮೊದಲಾದರೆ ನಾನೇ ತೆರುತ್ತಿದ್ದೆ.”

“ನೀವು ಹಾಗೆ ಹೇಳುತ್ತಿದ್ದೀರಿ. ನನಗೆ ಆ ಧೈರ್ಯವಿಲ್ಲ. ಅದು ಸಾಧ್ಯವಿದ್ದರೆ ನಿಮ್ಮ ಮಂಗಳೂರಿನ ಶಾಲೆಯನ್ನು ಮುಚ್ಚುವ ಅಗತ್ಯ ಬೀಳುತ್ತಿರಲಿಲ್ಲ. ನನ್ನ ವಿಚಾರ ಹೀಗೆ – ಆರಂಭದಲ್ಲಿ ಪರರಿಗೆ ಕೈಯೊಡ್ಡುವುದು ಅನಿವಾರ್ಯವಾದರೂ, ಮುಂದೆ ಈ ಸಂಸ್ಥೆ ತನ್ನ ಕಾಲಿನ ಮೇಲೆ ತಾನು ನಿಲ್ಲಬೇಕು.”

“ಅದು ಯೋಗ್ಯವಾದ ವಿಚಾರ. ನಾವು ಅಮೇರಿಕದ ಟಸ್ಕೆಜಿ ಇನ್ಸ್ಟಿಟ್ಯೂಟಿನ ಆದರ್ಶ ಇರಿಸಿಕೊಳ್ಳುವ. ಅದರ ವಿವರಗಳೂ ಕಾರ್ಯಭಾರಗಳೂ ನಿಮ್ಮವು. ಇಲ್ಲಿನ ಒಳ ಆಡಳಿತಕ್ಕೆ ಕೈಹಚ್ಚುವ ಇಷ್ಟವು ನನಗಿಲ್ಲ. ಅದು ಚೆನ್ನಾಗಿ ನಡೆಯಬೇಕು, ಬಹಳ ಕಾಲ ನಡೆಯಬೇಕು; ಇಷ್ಟೇ ನನ್ನ ಆಶೆ.”

“ಹಾಗಿದ್ದರೆ, ನೀವು ಎಲ್ಲರನ್ನೂ ಕರೆಯಿಸಿ ಆ ಮಾತನ್ನು ಹೇಳಬೇಕು.”

“ಸರಿಯಲ್ಲವೇ!”

“ಇಲ್ಲಿ ಈ ಸ್ಥಳದ ಅನುಕೂಲತೆಯನ್ನು ನೋಡಿದರೆ ಕೃಷಿಯನ್ನು ಮುಖ್ಯವಾಗಿ ನಾವು ಇರಿಸಿಕೊಳ್ಳಬಹುದು. ಅದರಿಂದ ಆರ್ಥಿಕ ಸ್ಥಿತಿಗೂ ಸಹಾಯವಾದೀತು. ಇಲ್ಲಿಗೆ ಬರುವ ಮಕ್ಕಳೂ ನಾಳೆ ತಮ್ಮ ಹಳ್ಳಿಗಳಿಗೆ ಹೋಗಿ, ತಮ್ಮ ತಮ್ಮ ಪಾಡಿನ ಜೀವನ ನಡೆಯಿಸಬೇಕಾದವರು. ಅದಕ್ಕೆ ನಮ್ಮಿಂದಾದ ರೂಪ ಕೊಡಬೇಕು. ನಮ್ಮ ಹಿಂದೀ ಪಂಡಿತರು ಅನ್ನುತ್ತಾರೆ. ಇಲ್ಲಿ ರಾಷ್ಟ್ರಸೇವಕರನ್ನು ನಾವು ನಿರ್ಮಿಸಬೇಕೆಂದು. ಈ ಮಕ್ಕಳಿಗೆ ಅಷ್ಟು ದೊಡ್ಡ ಯಾವ ಮಾತೂ ಬೇಡ. ನಮ್ಮ ಜೀವನದಿಂದ ಮಕ್ಕಳು ತನ್ನಂತೆಯೇ ಆ ಆದರ್ಶವನ್ನು ಕಲಿಯಬೇಕಾಗಿದೆ. ಅದೇನು ಹೇಳಿಕೊಟ್ಟು ಬರುವ ಪಾಠವಲ್ಲ. ಬೇಡ, ಇನ್ನೂ ಮಕ್ಕಳಿಗೆ ಕನ್ನಡ ಬರುವ ಮೊದಲೇ, ಹಿಂದೀ ಭಾಷೆಯ ಒತ್ತಾಯ. ತಮ್ಮ ಆವರಣದ ಪರಿಚಯ ಆಗುವ ಮೊದಲೇ ಆಕಾಶ ಪುರಾಣಗಳನ್ನು ಹೇಳಿ, ಗೊಂದಲ ಎಬ್ಬಿಸಿ ಪ್ರಯೋಜನವಿಲ್ಲ. ನಮ್ಮ ಉಪಾಧ್ಯಾಯರು ಬರಿಯ ಉಪನ್ಯಾಸಕರಾದರೆ, ಕಾಲೇಜು ನಢೇಯಿಸಬಹುದೇ ಹೊರತು, ಮಕ್ಕಳಿಗೆ ಪ್ರಯೋಜನವಾಗಲಾರದು. ದಿನದಲ್ಲಿ ಸ್ವಲ್ಪ ಸಮಯವನ್ನು ಶರೀರ ಶ್ರಮಕ್ಕಾಗಿ ವಿನಿಯೋಗಿಸದೆ ಕೆಲಸ ಸಾಗುವ ಹಾಗಿಲ್ಲ.”

“ನಿಮಗೆ ಯಾಕೆ ಅಂಥ ಅನುಮಾನ? ನಿಮ್ಮ ವಿಚಾರಗಳೆಲ್ಲ ನನಗೆ ಒಪ್ಪುತ್ತವೆ. ನಮ್ಮ ಪಂಡಿತರಿಗಾಗಲೀ, ದತ್ತಪ್ಪನವರಿಗಾಗಲೀ, ಶಿಕ್ಷಣದ ವಿಷಯದಲ್ಲಿ ಸಾಕಷ್ಟು ವಿಚಾರ ತಿಳಿದಿದೆ. ಆದರೂ ಈ ಮಾತನ್ನು ಒಪ್ಪುವವರೇ.”

“ಅದನ್ನು ತಿಳಿದೇ ಈ ಮಾತು ಹೇಳುತ್ತಿದ್ದೇನೆ.”

“ಹಾಗಾದರೆ, ನಿಮಗೆ ಏನೇನು ಆಗಬೇಕೆಂದು ಹೇಳಿ.”

“ಇಲ್ಲಿ ಈ ಸಂಸ್ಥೆ ಬೆಳೆಯಬೇಕಾಗಿದ್ದರೆ, ಈ ಭೂಮಿಯ ಸಂಪೂರ್ಣ ಉಪಯೋಗವನ್ನು ನಾವು ಪಡೆಯುವಂತಿರಬೇಕು. ಈ ಜಮೀನು ನಿಮ್ಮದೇ ಆದರೂ, ಅದು ತಾತ್ಕಾಲಿಕವಾಗಿ ಪರರಿಗೆ ಅಡವು ಆಗಿದೆ ಎಂದು ಕೇಳಿದೆ.”

ರಾಧಾಕೃಷ್ಣನ ಈ ಮಾತು ರಾಯರನ್ನು ಅಸಮಾಧಾನಗೊಳಿಸಿತು.

“ನಿಮಗೆ ನನ್ನಲ್ಲಿ ಅಪನಂಬಿಕೆಯೇ?” ಎಂದು ಕೇಳಿದರು ಅವರು.

“ಹಾಗಲ್ಲ ನಾಳೆ ಅಡವುದಾರರು ನಮ್ಮನ್ನು ಏಕಾಏಕಿ ಓಡಿಸುವ ಸ್ಥಿತಿ ಬರಬಾರದು ಎಂಬುದಕ್ಕೆ ಹೇಳುತ್ತಿದ್ದೇನೆ.”

“ಹಾಗೆ ಓಡಿಸುವವರು ಯಾರು? ಅವರ ಸಾಲವನ್ನು ನಾನು ಮುಟ್ಟಿಸುವುದಿಲ್ಲವೆಂದು ತಿಳಿಯುತ್ತೀರಾ? ಭೂಮಿ ಅವರ ಸ್ವಾಧೀನ ಆಗುತ್ತದೆಂದು ತಿಳಿಯುತ್ತೀರಾ? ನನಗೆ ಇನ್ನೂ ಇಲ್ಲಿಯೇ ಹಣ ಸುರಿಯುವ ಯೋಚನೆ ಇದೆ. ಒಂದೆರಡು ಕಟ್ಟಡಗಳನ್ನು ಕಟ್ಟಿಸಬೇಕು ಎಂದಿದೆ. ಯಾವುದಕ್ಕೂ ಆ ದಿನ ಹೇಳಿದ್ದೆನಲ್ಲಾ – ಅದೊಂದು ಸಾಲದ ವಸೂಲಿಯಾಗದೆ ಕಾದು ಕುಳಿತಿದ್ದೇನೆ.”

“ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುತ್ತೇನೆ. ಆ ಮೇಲೆ ತೊಡಕು ಬರಬಾರದು ಎಂಬುದು ನನ್ನ ಉದ್ದೇಶ. ನೀವೂ ಅಡವುದಾರರೂ ಸೇರಿ ಈ ಆಶ್ರಮವನ್ನು, ಇಲ್ಲಿಂದ ಹತ್ತು ವರ್ಷ ಕಾಲವಾದರೂ ಕದಲಿಸುವುದಿಲ್ಲ ಎಂಬ – ಭರವಸೆ ನಮಗಿರಬೇಕು. ಆಗ ಮಾತ್ರ ನಾನು ಇಲ್ಲಿ ಇರಬಲ್ಲೆ. ಇಲ್ಲವಾದರೆ ಏನು ಮಾಡುವುದೂ ಕಷ್ಟದ ಕೆಲಸ – ಎಂದು ನನಗೆ ಅನಿಸುತ್ತದೆ.”

ರಾಯರು ವಿಚಾರಪರರಾದರು. ಅವರಿಗೆ ತಮ್ಮ ಜವಾಬ್ದಾರಿಯ ಜ್ಞಾನವಾದಂತೆ ಕಂಡಿತು. “ನೀವು ಅನ್ನುವುದು ತೀರ ಸಮ. ಹಾಗೆಯೇ ಮಾಡುವೆ” ಎಂದು ನುಡಿದು, ಉಳಿದವರನ್ನು ಕರೆಯಿಸಿಕೊಂಡರು. ಪಂಡಿತರು ಮರೆಯಲ್ಲಿ ಇದ್ದು, ಮಾತನ್ನು ಕೇಳುತ್ತಿದ್ದವರು, ಈಗ ಸಮ್ಮುಖಕ್ಕೆ ಬಂದರು. ಅವರೆಲ್ಲರ ಎದುರಿಗೆ ರಾಯರು, “ನೋಡಿ, ನನಗೆ ನೂರಾರು ಕೆಲಸಗಳೆಂಬುದು ನಿಮಗೆ ಗೊತ್ತು . ನಿಮಗೆ ಮಿಸ್ಟರ್ ರಾಧಾಕೃಷ್ಣರ ಪರಿಚಯ ಇಲ್ಲದೆ ಹೋದರೂ, ನನಗೆ ತುಂಬಾ ಸಮಯದಿಂದ ಗೊತ್ತು. ಅವರ ಮೇಲಿನ ವಿಶ್ವಾಸದಿಂದ, ನಾನು ಈ ಕೆಲಸವನ್ನು ತೊಡಗಿದ್ದೇನೆ. ಅವರು ಇಲ್ಲಿನ ಆಚಾರ್ಯರಾಗಿ ನಿಂತು, ಕೆಲಸ ಮಾಡಿಸಬೇಕಾದವರು. ನೀವು ಅವರಿಗೆ ಬೆಂಬಲವಾಗಿ ನಿಂತು ಕೆಲಸ ಮಾಡಬೇಕಾದ್ದು ಕರ್ತವ್ಯ. ಅವರು ಹಾಕಿದ ಹಂಚಿಕೆಗೆ ನೀವು ಬದ್ಧರಾಗಿರಬೇಕು” ಎಂದರು.

ಆಗ ನಿವಾಸ್ ಜೀಯವರು “ಅವರ ಪ್ಲೇನಿನಲ್ಲಿ ರಾಷ್ಟ್ರಭಾಷೆಗೇ ಜಾಗವಿಲ್ಲ” ಎಂದರು.

“ಎಳೆಯ ಮಕ್ಕಳಿಗೆ ಅದು ಬೇಡ – ಎಂದಿಷ್ಟೇ ನನ್ನ ಅಭಿಪ್ರಾಯ. ಸರಿಯಾದ ವಯಸ್ಸಿನವರಿಗೆ ಆ ಪಾಠವನ್ನು ಹೇಳಲಿ. ಬರಿಯ ಎರಡು ಇಲ್ಲವೆ ಮೂರು ನಾಲ್ಕು ಮಂದಿಗೆ ಪಾಠ ಹೇಳುವುದರಲ್ಲಿ ಮಾತ್ರ ಕೆಲಸ ಮುಗಿಯಬಾರದು. ಇತರ ಕೆಲಸಗಳ ಹೊಣೆಯನ್ನು ಅವರು ಹೊರಬೇಕು” ಎಂದ ರಾಧಾಕೃಷ್ಣ.
“ಅದು ಸರಿಯಾದ ಮಾತು ಅಲ್ಲವೇ?” ಎಂದರು ರಾಯರು. ರಾಯರ ಒಲವು ಬದಲಾದುದನ್ನು ನೋಡಿ, ಪಂಡಿತರು ಸುಮ್ಮಗಾದರು. ಎದುರಿನಲ್ಲಿ ಚರ್ಚಿಸಿ ಫಲವಿಲ್ಲ ಎಂದು ಕಂಡಿತು ಅವರಿಗೆ.

ರಾಧಾಕೃಷ್ಣ ರಾಯರ ಬೆನ್ನನ್ನು ಬಿಡಲಿಲ್ಲ. ಮಂಗಳೂರಿಗೆ ಅವರೊಂದಿಗೇನೆ ಹೋದನು. ಅವರನ್ನು ಜಿಗಣೆಯಂತೆ ಅಂಟಿಕೊಂಡನು. ಭೂಮಿಯ ಅಡವುದಾರನನ್ನು ಮಾತನಾಡಿಸಿದನು. ಯಾರು ಯಾರನ್ನೋ ದಾಕ್ಷಿಣ್ಯಕ್ಕೆ ಕೆಡವಿ, ಕಿರಿ ಪದವಿನ ಆಸ್ತಿಯನ್ನು ಹತ್ತು ವರುಷಗಳ ವಾಯಿದೆ ಗೇಣಿಗೆ ಪಡೆದುಕೊಂಡೇ ತನ್ನ ಸ್ಥಳಕ್ಕೆ ಮರಳಿ ಬಂದನು. ಇಷ್ಟೆಲ್ಲ ಮಾಡಿ ಅವನು ತನ್ನ ಗುಡಿಸಲನ್ನು ಸೇರುವಾಗ, ನಿವಾಸಜೀಯವರು ಕುಪಿತರಾಗಿ ಹೊರಟೇ ಹೋಗಿದ್ದರು. ಜಾರಪ್ಪನವರೂ ಹೊರಡುವವರಿದ್ದರು. ಉಬ್ಬಸ ಜೋರಾದುದರಿಂದ ಅದು ಗುಣವಾಗುವ ತನಕ ಹೊರಡಲಾಗಲಿಲ್ಲ. ದತ್ತಪ್ಪನವರಿಗೆ ಸಂದಿಗ್ಧ ಮನಸ್ಸು; ಅವರನ್ನು ಹೊರಡಿಸುವುದರಲ್ಲಿ ರಾಧಾಕೃಷ್ಣ ಆತುರಪಡಲೂ ಇಲ್ಲ. ಒಬ್ಬನಿಂದ ಈ ಕೆಲಸ ಸಾಧಿಸದಷ್ಟೆ. ಪಂಡಿತರು ತಾವು ಹೊರಡುವಾಗ, ಇಬ್ಬರು ಬಾಲಕರನ್ನು ತಪ್ಪಿಸಿಯೇ ಹೊರಟರು. ರಾಧಾಕೃಷ್ಣನು ಮಕ್ಕಳನ್ನು ಕಟ್ಟಿಕೊಂಡು, ತೆಂಗಿನ ಗಿಡಕ್ಕೆ ನೀರು ಎರೆಯಲು ತೊಡಗಿದೊಡನೆಯೇ, ಇನ್ನಿಬ್ಬರು ಬಾಲಕರು `ನಮ್ಮ ಮನೆಯ ಗಿಡಕ್ಕೆ ನೀರು ಹಾಕಬಾರದೇ’ ಎಂದು ಹೊರಟು ಹೋದರು. ಆ ಗ್ರಾಮದ ಕೆಲವು ಹಿರಿಯರು “ಅಲ್ಲಿಯೂ ದುಡಿದು ಉಣ್ಣುವುದಾದರೆ ಮನೆಯಲ್ಲೇ ಅಷ್ಟು ಕೆಲಸ ಮಾಡಬಹುದಲ್ಲ” ಎಂದು ನುಡಿಯತೊಡಗಿದರು.

•••

ಈಗ ಆತನ ಆಶ್ರಮದ ನಾಲ್ಕು ತಿಂಗಳ ಬಾಳುವೆ ಸಾಗಿದೆಯಷ್ಟೇ. ಮುಂದಿನ ತಿಂಗಳು, ಜೂನು. ಬೇಸಾಯದ ಸಮಯ. ಆಶ್ರಮದಲ್ಲಿ ರಾಧಾಕೃಷ್ಣನು ಏಕ ಮಾತ್ರ ನಾಯಕ. ಅವರ ಜತೆಗೆ ಇಬ್ಬರು ಅರೆಮನಸ್ಸಿನ ಅಧ್ಯಾಪಕರು, ಹೆಸರು ಉಳಿಸುವುದಕ್ಕೆ ಐವರು ಮಂದಿ ಬಾಲಕರು ಉಳಿದಿದ್ದಾರೆ. ಸಹಾಯಕಿಯಾಗಿ, ಅಭ್ಯಾಸವಿಲ್ಲದೆ, ಮನೆಗೆಲಸದಲ್ಲಿ ಸೋತು ನುಗ್ಗಾಗುತ್ತಿರುವ ಸತ್ಯ ಹೇಗೂ ಜತೆಗೆ ಇದ್ದಾಳೆ.

ಹೆಚ್ಚೇನು, ಸತ್ಯ ಅಲ್ಲಿ ದಣಿದು ಹೋಗುವುದರಲ್ಲಿ ಆಶ್ಚರ್ಯವಿರಲಿಲ್ಲ, ಗಂಡುಸೆನಿಸಿದ ರಾಧಾಕೃಷ್ಣನೂ ಆ ತೆರನ ದುಡಿತಕ್ಕೆ ಆಳಲ್ಲ. ಅವನ ಸಹಾಯಕ್ಕೆ ದೊರೆತ ಇಬ್ಬರು ಅಧ್ಯಾಪಕರು, ಮಾತಿನ ಬುರುಡೆಗಳು. ದತ್ತಪ್ಪ ಮಾಸ್ತರರು ಅಲ್ಲಿಗೆ ಬರುವ ಹಳ್ಳಿಯವರೊಡನೆ ಕರ್ಣಾಟಕ ಗತ ವೈಭವ, ಭಾರತೀಯರ ಮೇಲ್ಮೆಗಳನ್ನು ಕುರಿತಾಗಿ ತಾಸು ತಾಸು ಉಪನ್ಯಾಸ ಮಾಡುತ್ತಾರೆ. ಹುಡುಗರ ಮುಂದೆ ಕುಳಿತರೂ ಹಾಗೇನೆ. ಅದರಿಂದ ಅವರನ್ನು ತಪ್ಪಿಸಿ, ದಿನಕ್ಕೆ ಒಂದೆರಡು ತಾಸು ಬರಿಯ ಓದು ಬರಹಗಳನ್ನು ಹೇಳಿಕೊಡುವುದು ಕಷ್ಟವಾಗುತ್ತಿತ್ತು. ಜಾರಪ್ಪ ಮಾಸ್ತರರು ಮಳೆಗಾಲ ಕಾಲು ಇರಿಸಿದಂದಿಗೆ ಶರತಲ್ಪಶಾಯಿಗಳಾದರು. ಉಬ್ಬಸ ಕೆಮ್ಮುಗಳಿಂದ ಉಳಿದವರಿಗೂ ಭಯಭೀತಿಗಳನ್ನು ಹುಟ್ಟಿಸಿದರು. ರಾಧಾಕೃಷ್ಣ ತಾನು ಹೊತ್ತ ಹೊಣೆಯನ್ನು ಮರೆಯಲಾರನಷ್ಟೆ! ಮರೆತು, ಮನೆಯಲ್ಲಿ ತುಂಬಿದ ಐದಾರು ಮಕ್ಕಳನ್ನು ಉಪವಾಸ ತಳ್ಳಲೇ? ಅವರಲ್ಲಿ, ಇಬ್ಬರು, ಮೂವರು ರಜೆ ಬಂದಾಗ, ಬಂಧುಗಳ ಮನೆಗೆ ಹೋಗಿ ಬರುತ್ತಾರೆ. ಇನ್ನಿಬ್ಬರು ಯಾರಿಗೂ ಬೇಡವಾದ ಮಕ್ಕಳು.

ಆತ ನಿರ್ಧರಿಸಿಯೇ ಬಿಟ್ಟನು! ಇದು ದಲಿತಾಶ್ರಮವೋ? ವಿದ್ಯಾಪೀಠವೋ? ಇನ್ನೇನೋ? ಆ ಹೆಸರು ಕೊಟ್ಟವರಿಗೇನೋ ಆ ಹೊಣೆ. ಮೊದಲು ತಾನು, ಅಲ್ಲಿ ಆದಷ್ಟು ಕಡಿಮೆ ಪರಾವಲಂಬನದಿಂದ ಜೀವನ ಸಾಗಿಸಬಲ್ಲ ದಾರಿಯನ್ನು ಹುಡುಕಬೇಕಾಗಿದೆ. ಸಮಯ ಬಂದರೆ ಇದ್ದ ಉಪಾಧ್ಯಾಯರನ್ನು ಓಡಿಸಿ ತನ್ನ ಕೆಲಸಕ್ಕೆ ಒದಗುವವರನ್ನು ಹುಡುಕಬೇಕಾಗಿದೆ. ಅದಕ್ಕಾಗಿ, ಒಮ್ಮೆ ಮನೆಗೆ ಮಿಂಚಿನ ಓಟ ಹೂಡಿದ. ಊರಿಗೆ ಹೋಗಿ ತಮ್ಮನಿಂದ ಐನೂರು ರೂಪಾಯಿಗಳಷ್ಟು ಹಣವನ್ನು ಸಾಲವಾಗಿ ತಂದನು. ಅದರಲ್ಲಿ ಬಹುಭಾಗವನ್ನು ಆಪತ್ತಿಗೆಂದು ಕಾದಿರಿಸಿ, ಸ್ವಲ್ಪ ಅಂಶದಿಂದ ಬೇಸಾಯಕ್ಕೆ ಬೇಕಾಗುವ ಬಿತ್ತು, ಗೊಬ್ಬರ, ಒಂದು ಜತೆ ಕೋಣಗಳನ್ನು ಬೆಲೆಗೆ ಕೊಂಡುಕೊಂಡನು. ಮಳೆ ಹನಿಯುತ್ತಲೇ ಕಿರಿಪದವಿನ ಮೂಲದ ಒಕ್ಕಲಾದ ಬಿರುಮ ಮರಕಾಲನನ್ನು ಅಂಗಲಾಚಿ ಬೇಡಿ, ಆಳಾಗಿ, ದುಡಿಸಿಕೊಂಡನು. ಮರಕಾಲನಿಗೂ ಅದೇ ಬೇಕಿತ್ತು. ತಾನು ಇದ್ದ ಸ್ಥಿತಿಯಲ್ಲಿ ಆತ ಸ್ವಂತ ಬೇಸಾಯವನ್ನು ಮಾಡಲಾರ. ಗೇಣಿಯನ್ನು ಉಳಿಸಿಕೊಂಡೇ ಜೀವನ ಸಾಗಿಸಿದ ಅವನು, ದುಡಿಯಲು ಕಲಿತವನಲ್ಲ. ಅವನ ರೀತಿಗೆ ಜಿಗುಪ್ಸೆಗೊಂಡು, ಅವನ ಹೆಂಡತಿ, ಮಕ್ಕಳನ್ನು ಕಟ್ಟಿಕೊಂಡು ತವರುಮನೆಗೆ ಹೋಗಿದ್ದಳು. ಒಬ್ಬಂಟಿಗನಾಗಿ ಉಳಿದ ಅವನನ್ನು, ಈಗ ಶಾಲೆಯವರೂ ಓಡಿಸಿಬಿಟ್ಟರೆ “ತಾನು ಎಲ್ಲಿಗೆ ಹೋಗಬೇಕು?” ಎಂದು ಆತ ಕಂಗಾಲಾದ ಗಳಿಗೆಯಲ್ಲೇ, ರಾಧಾಕೃಷ್ಣ ಅವನನ್ನು ಕೆಲಸಕ್ಕೆ ನೇಮಿಸಿಕೊಂಡನು. ಆತನ ಕಾವಲುಗಣ್ಣಿನಲ್ಲಿ ಪರಮಾಲಸಿಯಾದ ಬಿರುಮ ಶಪಿಸುತ್ತ ದುಡಿಯಬೇಕಾಯಿತು.

ಆದರೆ ಆ ದುಡಿತದಿಂದ ಅವನ ದಿನದ ಊಟ ಹೋಗಿ, ಎರಡಾಣೆ ಸಂಬಳ ದೊರೆಯುತ್ತದೆ ಎಂದು ಖಂಡಿತವಾಯಿತು. ಮರಕಾಲನ ಜತೆಗೆ ರಾಧಾಕೃಷ್ಣನೂ ಬಯಲಿಗೆ ಇಳಿದನು. ಐದು ಮಂದಿ ಬಾಲಕರಲ್ಲಿ ಕಿರಿಯರಾದ ಇಬ್ಬರನ್ನು ಬಿಟ್ಟು, ಉಳಿದ ಮೂವರನ್ನು ದಿನಕ್ಕೆ ತಾಸೆರಡು ತಾಸು ತೋಟಗಾರಿಕೆಗೆ ಎಳೆದುಕೊಂಡನು. ಈ ಮಳೆಗಾಲ ಕಳೆದರೆ – ಅನ್ನ, ತರಕಾರಿ, ಮೆಣಸುಗಳ ಮಟ್ಟಿಗೆ ತಾನು ಸ್ವತಂತ್ರನಾದೇನು ಎಂದು ತೋರಿತು. ಈ ಸ್ವಾತಂತ್ರ್ಯ ಅವನಿಗೆ ಬಹಳ ಮುಖ್ಯವಾಗಿತ್ತು. ಅಂತರಂಗದಲ್ಲಿ ಅವನಿಗೆ – ರಾಯರ ಸಹಾಯದ ವಿಶ್ವಾಸ ಹೋಗಿದೆ. ತನ್ನ ಎದೆಗಾರಿಕೆಯ ಮೇಲೆಯೇ ತಾನು ಬದುಕಬೇಕೆಂದು ನಿಶ್ಚಯ ತೋರಿದೆ.

ಬೇಸಾಯದ ಈ ದಿನಗಳಲ್ಲಿ ಅವನಿಗೆ ಬಿಡುವು ಎಂದರೆ, ಸಂಜೆ ಊಟವಾದ ಬಳಿಕ. ಸಂಜೆಗೆ ಮುಂಚೆಯೇ ಆ ಊಟ, ಸಾಬರ್ಮತಿ ಆಶ್ರಮದ ಮಾದರಿಯಲ್ಲಿ. ಅದರಿಂದ ಸತ್ಯಳಿಗೆ ತುಸು ಹೆಚ್ಚಾಗಿ ವಿಶ್ರಾಂತಿ ಸಿಗುತ್ತಿತ್ತು. ಆಗ ಪತ್ನಿಯನ್ನು ಜತೆಗೆ ಕುಳ್ಳಿರಿಸಿಕೊಂಡು, ಆಶ್ರಮದ ಬಾಲಕರಿಗೆ ಏನಾದರೂ ಕತೆ ಹೇಳುತ್ತಾನೆ.
ಶ್ಯಾಮ, ನೀಲ, ನಾಗಪ್ಪ ಇವರು ಮಕ್ಕಳಲ್ಲಿ ಹಿರಿಯರು. ಅವರು, ತಮ್ಮಿಂದ ಕೆಲಸ ಮಾಡಿಸಿಕೊಂಡರೂ, ದೊಡ್ಡ ಮಾಸ್ತರರ ಬಳಿಯಲ್ಲಿಯೇ ಹೆಚ್ಚಾಗಿ ಕಲೆಯುತ್ತಾರೆ. ಕೆಮ್ಮುತ್ತ ಕುಳಿತಿರುವ ಜಾರಪ್ಪನವರಿಗೆ ಮಕ್ಕಳು ಸಮೀಪ ಬಾರದಿದ್ದರೇ ಕ್ಷೇಮ. ಅವರ ರಾಟಿಯ ಶಿಕ್ಷಣ ನಡೆದಾಗ ನಡೆಯುತ್ತದೆ; ಇಲ್ಲವಾದರೆ ಇಲ್ಲ. ಬಾಲಕರು ವೇಳೆ ಇದ್ದಾಗ ನೂಲು ಮಾಡಿಯೇ ಮಾಡುತ್ತಾರೆ.

ದತ್ತಪ್ಪ ಮಾಸ್ತರರಿಗೆ ಸಭೆ ನೆರೆಯಿಸುವಾಗ ಬರುವ ಸ್ಫೂರ್ತಿ ಉಳಿದ ಗಳಿಗೆಯಲ್ಲಿ ಬರುವುದಿಲ್ಲ. ಅವರಿಗೆ ಆಶ್ರಮದ ವಿಷಯದಲ್ಲಿ ತುಂಬ ಅಸಮಾಧಾನ. ಆಗಾಗ ದಯಾನಂದರಾಯರಲ್ಲಿಗೆ ಹೋಗಿ- “ಹುಡುಗರಿಗೆ ಬೌದ್ಧಿಕ ಶಿಕ್ಷಣವಾಗಲೀ ರಾಷ್ಟ್ರೀಯ ಶಿಕ್ಷಣವಾಗಲಿ ಇಲ್ಲದೆ ಬರಿಯ ಬೇಸಾಯದ ಕೆಲಸಕ್ಕೆ ಹಾಕಿದ್ದಾರೆ” ಎಂದು ದೂರು ಹೇಳುತ್ತಾರೆ. ದೂರನ್ನು ಕೇಳಿ ರಾಯರಿಗೆ ಮನಸ್ಸು ಚಂಚಲವಾದರೂ ಹೆಚ್ಚಿನ ಗಮನ ಕೊಡುವ ವಿರಾಮ ಇರಲಿಲ್ಲ.