ರಂಗಭೂಮಿ ಮೇಲ್ನೋಟಕ್ಕೆ ಕಾಣುವ ಹಾಗೆ ಕೇವಲ ಬಣ್ಣದ ಲೋಕದ ಹೊರಮೈ ಅಲ್ಲ. ಇದು ತಿಳಿಯುವುದು ಆ ರಂಗದ ಒಳಹೊಕ್ಕಾಗ ಮಾತ್ರ. ಕಲೆ ಮತ್ತು ಕಲಾವಿದರನ್ನು ತುಂಬು ಆದರ ಭಾವದಿಂದ ಕಾಣುವವರಿಗೆ ಆ ಎಲ್ಲವನ್ನು ಒಟ್ಟು ಮಾಡಿ ಚಿತ್ರ ಕಟ್ಟಿಕೊಡುವವನಿಗೆ ಅಸಲಿ ಚಿತ್ರ ತಿಳಿದಿರುತ್ತದೆ. ಅವನು ಪ್ರೇಕ್ಷಕರ ಚಪ್ಪಾಳೆಯ ಜೊತೆಗೆ ಕುಹಕವನ್ನೂ ಸೈರಿಸಿಕೊಳ್ಳಬೇಕಿರುತ್ತದೆ. ಮತ್ತೆ ಎಲ್ಲವನ್ನೂ ಕೇವಲ ಶೋಕಿಗೆ ಮಾಡುತ್ತ ಮಾರ್ಕೆಟಿಂಗ್ ಸರಕಾಗಲು ಹವಣಿಸುವವರನ್ನೂ ಅನಿವಾರ್ಯವಾಗಿ ಸೈರಿಸಿಕೊಂಡು ಮುಂದೆ ಸಾಗಬೇಕಿರುತ್ತದೆ. ಇದೆಲ್ಲ ಕಷ್ಟ ಅನಿಸುವವರು ರಂಗದ ಬಗೆಗೆ ಯೋಚಿಸಬಾರದು.
‘ರಂಗ ವಠಾರ’ ಅಂಕಣದಲ್ಲಿ ಕೋವಿಡ್‌ ಸಮಯದಲ್ಲಿ ರಂಗ ತಂಡಗಳು ಅನುಭವಿಸುವ ತಳಮಳಗಳ ಬಗ್ಗೆ ಬರೆದಿದ್ದಾರೆ ಎನ್.ಸಿ. ಮಹೇಶ್‌

 

ಕೆಲವರು ಪರಿಸ್ಥಿತಿಯ ಅರಿವಿದ್ದೂ ಪ್ರಶ್ನೆ ಕೇಳುತ್ತಾರೆ. ಬಹಳ ಸಲ ಇದು ವಿಚಿತ್ರ ಅನಿಸುತ್ತದೆ. ಆದರೆ ಕೆಲವು ಸಲ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಕೋವಿಡ್ ನೀಡಿದ ಬಿಡುವಿನಲ್ಲಿ ಹಲವು ರಂಗತಂಡಗಳು ಮತ್ತೆ ಚಿಗಿತುಕೊಳ್ಳಲು ಆರಂಭಿಸಿದ್ದವು. ಇನ್ನೇನು ಎಲ್ಲ ಒಂದು ಹಂತಕ್ಕೆ ಬರುತ್ತಿದೆ ಅನಿಸುವಷ್ಟರಲ್ಲೇ ಪರಿಸ್ಥಿತಿ ಮತ್ತೆ ಬಿಗಡಾಯಿಸಿದೆ. ರಂಗಮಂದಿರಗಳಿಗೆ ನಿರ್ಬಂಧ. ಹೆಚ್ಚುತ್ತಿರುವ ಸೋಂಕು. ಸದ್ಯ ಸಾವಿನ ಪ್ರಮಾಣ ಕಡಿಮೆ ಆಗಿದೆ ಅಂತ ಲೆಕ್ಕಾಚಾರ ಹಾಕಿ ಸಮಾಧಾನಪಡುವ ಕ್ರೌರ್ಯ ನಮ್ಮನ್ನು ಹೊಕ್ಕಿದೆ. ಅಲ್ಲೊಂದು ಇಲ್ಲೊಂದು ರಿಪೋರ್ಟ್ ಆಗುತ್ತಿರುವ ಸಾವು ನಮ್ಮನ್ನು ತಟ್ಟಲಾರದಷ್ಟು ನಾವು ಜಡರಾಗಿದ್ದೇವೆ. ಜೊತೆಗೆ ನಮ್ಮನ್ನು ಆವರಿಸಿಕೊಳ್ಳುತ್ತಿರುವ ಸ್ವಾರ್ಥದ ಚಿತ್ರವೂ ನಮ್ಮ ಅಂತರಂಗಕ್ಕೆ ವೇದ್ಯವಾಗುತ್ತಿಲ್ಲ.

ಎಲ್ಲ ಸರಿಯಿದ್ದ ಕಾಲದಲ್ಲಿ- ಅಂದರೆ ರಂಗ ಪ್ರದರ್ಶನಗಳನ್ನು ನೀಡಲು ಅನುಕೂಲಗಳಿದ್ದ ಕಾಲದಲ್ಲೇ ಪ್ರೇಕ್ಷಕರು ಬರುತ್ತಾರೆಯೇ ಅಂದುಕೊಳ್ಳುತ್ತ ತಳಮಳದಲ್ಲೇ ರಂಗದ ಮೇಲೆ ನಾಟಕವಾಡುತ್ತಿದ್ದ ಸಂದರ್ಭ ಇತ್ತು. ಈಗ ರಂಗಮಂದಿರದಲ್ಲಿ ಅರ್ಧ ಮಾತ್ರ ಭರ್ತಿಗೆ ಅವಕಾಶ ಅಂತ ನಿರ್ಬಂಧವಿರುವಾಗ ಕೆಲವರು ‘ಸೊ ನಿಮ್ಮ ತಂಡದಿಂದ ಮುಂದಿನ ಪ್ರದರ್ಶನ ಯಾವಾಗ..?’ ಎಂದು ಕೇಳುತ್ತಾರೆ. ಅಂಥವರನ್ನು ಹಾಗೇ ಕೆಲ ಕ್ಷಣ ದಿಟ್ಟಿಸಿ ನೋಡಬೇಕು ಅನಿಸುತ್ತದೆ. ಆದರೆ ಪ್ರಶ್ನೆಗೆ ಉತ್ತರಿಸದಿರುವುದು ಉದ್ಧಟತನವಾಗಬಹುದು. ಉತ್ತರಿಸೋಣ ಅಂದರೆ ಇಂಥ ಪ್ರಶ್ನೆಗಳು ಎದುರಾಗುತ್ತವೆ. ಪ್ರಶ್ನೆ ಕೇಳುತ್ತಿರುವವರು ಯಾರು ಮತ್ತು ಅವರ ಟೋನ್ ಎಂಥದ್ದು ಎಂದು ಅರಿತುಕೊಳ್ಳುವುದು ಮುಖ್ಯ. ಆಗ ಉತ್ತರಿಸುವುದು ಸುಲಭವಾಗಬಹುದು. ಯಾಕೆಂದರೆ ಹೀಗೆ ಪ್ರಶ್ನೆ ಕೇಳುತ್ತಿರುವವನು ನಮ್ಮ ಎದುರಾಳಿಯಾಗಿರುತ್ತಾನೆ. ಅವನು ನಮ್ಮನ್ನು ಚೇಳಿನಂತೆ ಕುಟುಕಬೇಕು. ಆಗಲೇ ಅವನಿಗೆ ಸಮಾಧಾನ. ಹೀಗೆ ಅವನು ಚೇಳಾಗಲಿಕ್ಕೆ ನಮ್ಮ ತಂಡ ಹಾಗೂ ಅದರ ಪ್ರದರ್ಶನಗಳು ಬಹಳ ಸಲ ಕಾರಣವಾಗಿರುತ್ತವೆ.

ರಂಗತಂಡಗಳಿಗೆ- ಅದರಲ್ಲೂ ಇನ್ನೂ ಆರಂಭಿಕ ಹಂತದಲ್ಲಿ ತನ್ನ ಲಯ ಕಂಡುಕೊಳ್ಳಲು ಮಾರ್ಗಗಳನ್ನು ಹುಡುಕಿಕೊಳ್ಳುತ್ತಿರುವ ತಂಡಗಳಿಗೆ ಯಶಸ್ಸು ಸಿಕ್ಕಿಬಿಟ್ಟರೆ ಅದು ಒಂದು ಮೆಟ್ಟಿಲು ಮೇಲೆ ಹತ್ತಲೂ ಕಾರಣವೂ ಆಗುತ್ತದೆ ಹಾಗೂ ಬ್ರ್ಯಾಂಡಿನ ಮುದ್ರೆ ಹಾಕಿಸಿಕೊಳ್ಳುವ ಅಪಾಯವನ್ನೂ ತಂದುಕೊಳ್ಳುತ್ತದೆ. ಈ ಮುದ್ರೆ ಹಾಕುವ ಪ್ರಭೃತ್ರಿಗಳನ್ನು ಅನೇಕ ಸಲ ನಾನು ಅಭ್ಯಸಿಸಿದ್ದೇನೆ. ಅವರು ತಮ್ಮ ತಂಡದ ಪ್ರಯೋಗಗಳಿಗೆ ಜನ ಕಡಿಮೆ ಆಗುತ್ತಿದ್ದಂತೆ ನಿರಾಶರಾಗಿ ಜನ ಬರುವ ತಂಡಗಳ ಕಡೆಗೆ ದೃಷ್ಟಿ ಹಾಯಿಸಿ ಮುದ್ರೆ ಇಟ್ಟುಕೊಂಡು ಒತ್ತುತ್ತ ಕೂರುತ್ತಾರೆ.


ನಮ್ಮ ತಂಡ ಕಟ್ಟುವಾಗ ನಮಗೊಂದು ಮನಸ್ಥಿತಿ ಮತ್ತು ಮನೋಧರ್ಮ ಇತ್ತು. ಗಂಭೀರ ನಾಟಕಗಳನ್ನು ನಾವು ನಿಲುಕಿಸಿಕೊಳ್ಳುವುದು ಕಷ್ಟದ ಸಂಗತಿ; ಹಾಗೆ ನಿಲುಕಿಸಿಕೊಂಡರೂ ಅದನ್ನು ಸಮರ್ಥವಾಗಿ ತಲುಪಿಸುವ ರಿಸೋರ್ಸ್ ನಮ್ಮಲ್ಲಿಲ್ಲ. ನಮಗೆ ಕಾಮಿಡಿ ನಾಟಕಗಳು ಮನಮುಟ್ಟುವಷ್ಟು ಬೇರೆ ನಾಟಕಗಳು ಮುಟ್ಟುವುದಿಲ್ಲ. ಕಾಮಿಡಿಗಳಲ್ಲೂ ರೇಂಜ್‌ಗಳಿವೆ. ಸೊಂಟದ ಕೆಳಗಿನದ್ದು ಹಾಗೂ ತಲೆಯಲ್ಲಿರುವ ಮಿದುಳಿನ ಎಳೆಗಳಿಗೆ ಕಚಗುಳಿ ಕೊಡುವಂಥದ್ದು. ನಮಗೆ ಸೊಂಟದ ಕೆಳಗಿನ ವಿಚಾರ ಬೇಡ ಅನಿಸಿತು. ಗಂಭೀರ ನಾಟಕಗಳನ್ನು ಮಾಡುವವರು ಪ್ರೇಕ್ಷಕರ ಮಿದುಳಿನ ಎಳೆಗಳನ್ನು ಬೇರೆ ಬಗೆಯಲ್ಲಿ ಮೀಟಲು ಆರಂಭಿಸುತ್ತಾರೆ. ನಾವು ವಿಡಂಬನೆಗಳಿಂದ ನಗಿಸೋಣ ಅಂದುಕೊಂಡೆವು. ಬೀಚಿ ಅವರ ನಗೆ ಸಾಹಿತ್ಯಕ್ಕೆ ಅಂಥ ಶಕ್ತಿ ಇದೆ ಅನಿಸಿ ಅದನ್ನ ರಂಗಕ್ಕೆ ಅಳವಡಿಸುವ ಕಾರ್ಯಕ್ಕೆ ತೊಡಗಿದೆವು. ತಂಡ ಕಟ್ಟುವಾಗ ನನ್ನ ಮನಸ್ಸಿನಲ್ಲಿದ್ದ ವಿಚಾರವೇ ಅದು.

ನಮ್ಮ ತಂಡ ಆಸ್ಥಾನ ಕವಿಗಳ ಪಾಂಡಿತ್ಯದ ರೀತಿ ಆಗಬಾರದು. ಆಸ್ಥಾನ ವಿದ್ವಾಂಸರ ಬಗೆಗೆ ಗೌರವವಿದೆ. ಆದರೆ ನಮ್ಮದೇನಿದ್ದರೂ ಅಣ್ಣ ಬಸವಣ್ಣನ ಪಂಥ. ಹಲವರಿಗೆ ತಲುಪಬೇಕು. ಹಲವರು ನಮ್ಮ ಬಳಿ ನಿರಾಳವಾಗಿ ಬರುವಂಥ ವಾತಾವರಣ ಇರಬೇಕು. ಬಂದಾಗ ನಕ್ಕು ಹಗುರಾಗಬೇಕು. ಜೊತೆಗೆ ವಿಚಾರದ ಹೂರಣವೂ ಅದರಲ್ಲಿ ಇರಬೇಕು. ಈ ಉದ್ದೇಶವನ್ನು ಇಟ್ಟುಕೊಂಡು ಆರಂಭವಾದದ್ದು ನಮ್ಮ ತಂಡ. ನಮ್ಮ ನಾಟಕಗಳಲ್ಲಿ ಸೊಂಟದ ಕೆಳಗಿನ ವಿಚಾರಗಳ ಬಗೆಗೆ ಮಾತಿರಲಿಲ್ಲ. ಆದರೂ ಜನ ನಕ್ಕರು. ಮಿಕ್ಕವರಿಗೂ ತಿಳಿಸಿದರು.

ನಾವು ಏನೆಲ್ಲ ಕಸರತ್ತು ಮಾಡಬಹುದು, ಸಿದ್ಧಾಂತ ಮಂಡಿಸಬಹುದು.. ವಾದ ಮಂಡಿಸಬಹುದು.. ಹೇಗೆಲ್ಲಾ ಪ್ರಚಾರ ಮಾಡಬಹುದು… ಆದರೆ ಕಟ್ಟಕಡೆಗೆ ಒಂದು ನಾಟಕ ಯಶಸ್ಸುಗಳಿಸುವುದು ಜನರು ಮಾಡುವ ಪ್ರಚಾರದಿಂದಲೇ. ಅವರ ಮೆಚ್ಚುಗೆಯ ಒಂದು ಮಾತು ನೂರು ಬೇರೆ ಜನರನ್ನು ಕರೆತರಬಲ್ಲುದು. ಹಾಗೇ ಅವರ ಒಂದು ತಿರಸ್ಕಾರ ರಂಗಮಂದಿರವನ್ನು ಭಣಗುಟ್ಟಿಸಲೂಬಹುದು. ಬೀಚಿ ಅವರ ಸಾಹಿತ್ಯವನ್ನು ಹೂರಣವಾಗಿಸಿಕೊಂಡು ನಾವು ನಾಟಕ ಕಟ್ಟಿದಾಗ ಜನ ಬಂದು ನಕ್ಕು ಹರಸಿದರು. ಜೊತೆಗೆ ಅವರೇ ಪ್ರಚಾರ ಮಾಡಿದರು. ಬೀಚಿ ಅವರ ಸಾಹಿತ್ಯವನ್ನು ನಾಟಕ ರೂಪದಲ್ಲಿಯೂ ಸ್ವೀಕರಿಸುತ್ತಿದ್ದಾರೆ ಅಂತ ಮನವರಿಕೆ ಆದಾಗ ನಮ್ಮಲ್ಲಿ ಮತ್ತಷ್ಟು ಹುರುಪು ಹೆಚ್ಚಿತು. ಬೇಡಿಕೆಯನ್ನು ಈಡೇರಿಸುವುದು ಮಾರ್ಕೆಟಿಂಗ್ ತಿಳಿದಿರುವವರು ಅನುಸರಿಸುವವರು ಕ್ರಮ. ಅದನ್ನೇ ನಾವು ಮಾಡಿದೆವು ಅಷ್ಟೇ. ಇಷ್ಟಕ್ಕೇ ನಮಗೆ ಮುದ್ರೆ ಹಾಕಿದರು. ನಮ್ಮ ತಂಡದ್ದು ನಾಟಕಗಳೇ ಅಲ್ಲ ಅಂದರು. ವಿನ್ಯಾಸ ಇಲ್ಲ… ಬರೀ ಮಾತು ಅಂತ ಮತ್ತೆ ಮುದ್ರೆ.

ಬಸವಣ್ಣನವರು ತಮ್ಮದೊಂದು ವಚನದಲ್ಲಿ ‘ಕಿವುಡನ ಮಾಡಯ್ಯ ತಂದೆ’ ಎಂದಿರುವುದು ಯಾಕೆ ಎಂದು ನಾನು ನಿಧಾನಕ್ಕೆ ಅರಿತುಕೊಂಡೆ. ಆದರೆ ಬಸವಣ್ಣ ನನ್ನಲ್ಲಿ ಮಾಯವಾದಾಗ ಮುದ್ರೆ ಹಾಕುವವರ ಬಗೆಗೆ ಸಿಟ್ಟುಬರುತ್ತಿತ್ತು. ಯಾಕೆಂದರೆ ಅವರ ಕಣ್ಣುಗಳಲ್ಲಿ ನಾಟಕಗಳ ಬಗೆಗೆ ಒಂದು ಡಿಸೈನ್ ಅಥವಾ ವಿನ್ಯಾಸ ನೆಲೆ ನಿಂತಿರುತ್ತದೆ. ಹಾಗೆ ವಿನ್ಯಾಸಗೊಳಿಸಲಿಕ್ಕೆ ಅವರಿಗೆ ಸರ್ಕಾರಾದಿ ಬೇರೆ ಮೂಲಗಳಿಂದ ಸಂಪನ್ಮೂಲಗಳು ಇರುತ್ತವೆ. ಹಾಗಾಗಿ ಅವರು ನಾಟಕಗಳನ್ನು ಹಾಗೆ ಕಟ್ಟುತ್ತಾರೆ.

ನಮಗೆ ಸಂಪನ್ಮೂಲಗಳನ್ನು ಕಲೆ ಹಾಕುವ ಕಲೆ ಇಲ್ಲ. ನಾವು ಬದುಕನ್ನು ಕಂಡಂತೆ ನಾಟಕ ಕಟ್ಟುತ್ತೇವೆ. ಅಲ್ಲಿನ ಪಾತ್ರಗಳು ನಮ್ಮ ನಡುವಿನ ಪಾತ್ರಗಳೇ ಆಗಿರುತ್ತವೆ. ಮನೆಯಲ್ಲೇ ಇರುತ್ತವೆ. ಮಾತಲ್ಲೇ ಎಲ್ಲ ವ್ಯವಹಾರ ಮುಗಿಸುತ್ತವೆ. ಮಾತು ನಮಗೆ ಬಂಡವಾಳ. ಮಿಕ್ಕವರಿಗೆ ಬೇರೆ. ಇಷ್ಟೇ ವ್ಯತ್ಯಾಸ. ಇಷ್ಟಕ್ಕೆ ಮುದ್ರೆ ಹಾಕಿಸಿಕೊಳ್ಳಬೇಕು. ಜೊತೆಗೆ ಅವರ ನಗುವಿಗೆ ಗುರಿಯಾಗಬೇಕು. ಮತ್ತು ನಮ್ಮನ್ನು ಕಟಕಿ ಆಡಲಿಕ್ಕೆ ಅಂತಲೇ ಕೋವಿಡ್ ಹೆಚ್ಚಳದ ನಡುವೆಯೂ ಪರಿಸ್ಥಿತಿಯ ಅರಿವಿದ್ದೂ ‘ನಿಮ್ಮ ತಂಡದಿಂದ ಪ್ರದರ್ಶನ ಯಾವಾಗ?’ ಎಂದು ಕೇಳಬೇಕು. ಆಗ ಅವರಿಗೊಂದು ರೀತಿ ನೆಮ್ಮದಿ.

ಅಂಥ ಸಮಯದಲ್ಲಿ ಸಿಟ್ಟು ಸರ್ರನೆ ತಲೆಗೇರುತ್ತದೆ. ಅಂಥ ಸಮಯದಲ್ಲಿ ನನ್ನ ಆರಾಧ್ಯ ಬಸವಣ್ಣ ತನ್ನ ವಚನ ನೆನಪಿಸುತ್ತಾನೆ. ‘ಕುರಡನಾಗು ಕಿವುಡನಾಗು’ ಅನ್ನುತ್ತಾನೆ. ಆದರೆ ಅಣ್ಣನನ್ನು ಮೀರಿ ಕೆಲವೊಮ್ಮೆ ಹೋದಾಗ ನಾನು ವೈರ ಕಟ್ಟಿಕೊಂಡಿದ್ದೇನೆ. ಅಣ್ಣನ ಮಾತನ್ನು ಅನುಸರಿಸಿದ ವೇಳೆ ಪರಿಸ್ಥಿತಿಯನ್ನು ನಿಭಾಯಿಸಿದ್ದೇನೆ. ಯಾರ ವೈರವನ್ನೂ ಕಟ್ಟಿಕೊಂಡದ್ದು ಇಲ್ಲ.

ಮಾತಿಗೆ ಮಾತು ಬೆಳೆದು ನಾನೂ ಕೊಂಚ ತಾಳ್ಮೆ ಕಳೆದುಕೊಂಡು ಮಾತನ್ನು ತೀಕ್ಷ್ಣವಾಗಿಯೇ ಆಡಿದಾಗ ಅದು ಎದುರಾಳಿಯನ್ನು ಸಹಜವಾಗಿಯೇ ಕೆಣಕುತ್ತದೆ. ಆಗ ಅವರು ಮುದ್ರಾಪುರಾಣ ತೆಗೆಯುತ್ತಾರೆ. ಕಟಕಿ ಆಡುತ್ತಾರೆ. ಆಗ ನನಗೆ ಮತ್ತಷ್ಟು ರೇಗುತ್ತದೆ.

ರಂಗತಂಡಗಳಿಗೆ- ಅದರಲ್ಲೂ ಇನ್ನೂ ಆರಂಭಿಕ ಹಂತದಲ್ಲಿ ತನ್ನ ಲಯ ಕಂಡುಕೊಳ್ಳಲು ಮಾರ್ಗಗಳನ್ನು ಹುಡುಕಿಕೊಳ್ಳುತ್ತಿರುವ ತಂಡಗಳಿಗೆ ಯಶಸ್ಸು ಸಿಕ್ಕಿಬಿಟ್ಟರೆ ಅದು ಒಂದು ಮೆಟ್ಟಿಲು ಮೇಲೆ ಹತ್ತಲೂ ಕಾರಣವೂ ಆಗುತ್ತದೆ ಹಾಗೂ ಬ್ರ್ಯಾಂಡಿನ ಮುದ್ರೆ ಹಾಕಿಸಿಕೊಳ್ಳುವ ಅಪಾಯವನ್ನೂ ತಂದುಕೊಳ್ಳುತ್ತದೆ.

ಇಷ್ಟೆಲ್ಲ ಆಗುವಾಗ ಯಾಕೆ ಹೀಗಾಗುತ್ತದೆ ಎಂದು ನಾನು ಯೋಚಿಸಿದ್ದಿದೆ. ರಂಗಭೂಮಿಯನ್ನು ಏನೆಲ್ಲಾ ದೈವೀಕತೆಗೆ ಸಮೀಕರಿಸಿ ಮಾತಾಡಿದರೂ ಅದರಲ್ಲೂ ಸ್ಪರ್ಧಾ ಮನೋಭಾವ, ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್ ಸಿದ್ಧಾಂತ ಮಿಳಿತವಾಗೇ ಇದೆ. ಸ್ಪರ್ಧೆ ತಪ್ಪಲ್ಲ. ಆದರೆ ಜಿದ್ದು ತಪ್ಪು. ತುಳಿದು ಮುಂದೆ ಹೋಗಲು ಬಯಸುವುದು ತಪ್ಪು. ನಾವು ಏನು ಹೇಳಿದರೂ ಇವೆಲ್ಲ ಘಟಿಸುತ್ತಲೇ ಇರುತ್ತವೆ ಮತ್ತು ಹಿಂದೆ ಘಟಿಸಿಯೂ ಇವೆ.

ವೃತ್ತಿರಂಗಭೂಮಿಯಲ್ಲಿ ಈ ಸ್ಪರ್ಧಾ ಗುಣ ಹೆಚ್ಚಿತ್ತು. ಕೇಳಿದರೆ ಅವರು ಕೊಡುತ್ತಿದ್ದ ಉತ್ತರ ಹೊಟ್ಟೆಪಾಡು ಎಂದು. ಅದು ನಿಜವೂ ಹೌದು. ಕಂಪನಿಯ ಪ್ರಸಿದ್ಧ ನಟ ಅಥವಾ ನಟಿಯನ್ನ ವಶೀಲಿಬಾಜಿಗೆ ಗುರಿಪಡಿಸಿ ತಮ್ಮ ಕಂಪನಿಗೆ ಸೆಳೆದುಕೊಂಡು ಬಿಡುವ ಹುನ್ನಾರ ನಡೆದೇ ಇತ್ತು. ಆ ಸಲುವಾಗಿಯೇ ತಾರಾಪತ್ನಿಯರು ಅನಿವಾರ್ಯವಾಗಿ ಸೃಷ್ಟಿಯಾಗುತ್ತಿದ್ದರು.

ವೃತ್ತಿರಂಗದವರ ಅನಿವಾರ್ಯ ಮಾನ್ಯಮಾಡುವಂಥದ್ದಲ್ಲವಾದರೂ ಬೇರೆ ಸಾಧ್ಯತೆಗಳು ಹೊಳೆಯುವುದೂ ಇಲ್ಲ. ಆದರೆ ಹವ್ಯಾಸಿಗಳಿಗೆ ಏನಾಗಿದೆ? ಅವರು ನಾಟಕಗಳಿಂದಲೇ ಅನ್ನ ಹೊಂಚಿಕೊಂಡು ಕ್ಯಾಂಪು ಮುನ್ನಡೆಸಬೇಕು ಎನ್ನುವ ಅನಿವಾರ್ಯಕ್ಕೆ ಪಕ್ಕಾದವರಲ್ಲ. ತಂಡ ಕಟ್ಟಿದವರಿಗೆ ತಮ್ಮ ತಂಡದ ನಾಟಕಗಳಿಗೆ ಜನ ಬರಬೇಕು; ಕಲೆಕ್ಷನ್ ಆಗಬೇಕು. ಹೆಚ್ಚಲ್ಲದಿದ್ದರೂ ಅವತ್ತಿನ ಖರ್ಚು ತೂಗಿ ಮುಂದಿನ ಪ್ರದರ್ಶನಕ್ಕೆ ರಂಗಮಂದಿರ ನಿಗದಿ ಮಾಡುವಷ್ಟು ಹಣ ಬರಬೇಕು. ಅಷ್ಟೂ ಬರದಿದ್ದರೆ ಅವರು ಎಂಥ ನಾಟಕವಾದರೂ ಅನುಮಾನದಿಂದಲೇ ನೋಡುತ್ತಾರೆ. ಅದು ತಪ್ಪು ಅನಿಸುವುದಿಲ್ಲ. ಉಳಿದಂತೆ ಹವ್ಯಾಸಿ ತಂಡಗಳಿಗೆ ಬರುವ ನಟ ನಟಿಯರು ರಂಗಭೂಮಿಯನ್ನು ಅನಿವಾರ್ಯದ ಮೊದಲ ಮೆಟ್ಟಿಲಾಗಿಸಿಕೊಳ್ಳುವ ಇರಾದೆ ಇರುತ್ತದೆ. ಅವರಿಗೆ ರಂಗಕ್ಕಿಂತ ಕೆಮರಾದ ಸೆಳೆತ ಹೆಚ್ಚು. ಆದರೆ ಕೆಮರಾ ಎದುರು ನಟನೆ ಸರಾಗ ದೊರಕಿಸಿಕೊಳ್ಳಬೇಕಿದ್ದರೆ ರಂಗದಲ್ಲಿ ತಾಲೀಮುಗಳು ಅಗತ್ಯ. ಹಾಗಾಗಿ ರಂಗಭೂಮಿ ಅವರ ಅನಿವಾರ್ಯದ ಫ್ರಿಫರೆನ್ಸು. ಬರುತ್ತಾರೆ, ಭಾಗಿಯಾಗುತ್ತಾರೆ, ಕೆಮರಾ ಜಗತ್ತಿನ ಕಡೆ ಕಣ್ಣು ನೆಟ್ಟಿರುತ್ತಾರೆ.

ಮತ್ತೆ ಕೆಲವರಿಗೆ ಕೆಮರಾ ಸೆಳೆತ ಇರದೇ ಇರಬಹುದು. ಆದರೆ ಅವರಿಗೆ ರಂಗದ ಮೇಲಿನ ಪಾತ್ರಕ್ಕೆ ಜನರಿಂದ ಚಪ್ಪಾಳೆ ಬೇಕು. ಹಾಗಾಗಿ ದೊಡ್ಡ ಪಾತ್ರಬೇಕು. ಚಪ್ಪಾಳೆ ಗಿಟ್ಟಿಸಿಕೊಳ್ಳುವ ಹಾಗೆ ನಾಟಕದ ಆಶಯ ಮೀರಿ ಹೇಗೆ ನಟಿಸಬೇಕು ಎಂದು ಕಂಡುಕೊಳ್ಳುವ ಬಗೆಯೂ ಅವರಿಗೆ ತಿಳಿದಿರುತ್ತದೆ. ಇವರೆಲ್ಲ ಹವ್ಯಾಸಿಗಳು. ಬಹುತೇಕರು ಉದ್ಯೋಗಿಗಳು. ಸಂಜೆ ಹೊತ್ತು ರಂಗಕ್ಕೆ ಮೀಸಲು ಅಂದುಕೊಂಡು ಬರುತ್ತಾರೆ. ತಂಡದ ನಿರ್ವಹಣಾಕಾರರಿಗೆ ನಾಟಕ ಯಾವುದೇ ಇರಲಿ, ಅವರಿಗೆ ಕಲೆಕ್ಷನ್ ಮೇಲೆ ನಿಗಾ. ನಟರಿಗೆ ಕೆಮರಾ ಹಾಗು ಚಪ್ಪಾಳೆ. ಇಷ್ಟರ ಮೊತ್ತ ಹವ್ಯಾಸಿ ತಂಡ. ಯಾರ ಅನ್ನುವನ್ನು ಯಾರೂ ಇಲ್ಲಿ ಸೆಳೆದುಕೊಳ್ಳುವ ಭಯವಿಲ್ಲ. ಆದರೂ ತಮ್ಮ ನಾಟಕಗಳಿಗೆ ಜನ ಬರದೆ ರಂಗಮಂದಿರ ಭಣಗುಟ್ಟಲು ಆರಂಭಿಸಿದಾಗ ಅದರ ಬಗೆಗೆ ಗಂಭೀರ ಆತ್ಮಾವಲೋಕನಕ್ಕೆ ಅವರು ತೊಡಗುವುದಿಲ್ಲ. ಬದಲಿಗೆ ಜನ ಬರುವ ಬೇರೆಯವರ ನಾಟಕಗಳಿಗೆ ಮುದ್ರೆ ಹಿಡಿದು ಒತ್ತುತ್ತಾ ಕೂರುತ್ತಾರೆ. ನಮ್ಮನ್ನು ಪ್ರೊವೋಕ್ ಮಾಡುತ್ತಾರೆ. ನಾವು ಕಟಕಿ ಆಡಲಿ ಎಂದು ಕಾಯುತ್ತಿರುತ್ತಾರೆ. ಹಾಗೆ ಒಂದು ಮಾತು ಬಾಯಿ ತಪ್ಪಿ ಬಂದರೆ ವ್ಯಂಗ್ಯದ ಮೊನೆ ತಾಗಿಸಲು ಸಜ್ಜಾಗಿರುತ್ತಾರೆ.

ಮೊದಲಾಗಿದ್ದರೆ ರಂಗತಂಡಗಳು ಬೆರಳೆಣಿಕೆಯಷ್ಟಿದ್ದವು. ಒಬ್ಬ ಪ್ರಬುದ್ಧ ನಟ ತನ್ನ ದೀರ್ಘ ತಪಸ್ಸಿನಿಂದ ಹೊರಹೊಮ್ಮುತ್ತಿದ್ದ. ಈ ಹಿಂದೆ ಒಬ್ಬ ಲೇಖಕನಾಗಿ ರೂಪುತಳೆಯುವುದು ಅಂದರೆ, ನಾಟಕಕಾರನಾಗಿ ಹೊರಹೊಮ್ಮುವುದು ಅಂದರೆ ಅದು ಪವಾಡದಂತೆ ಇತ್ತು. ಹಾಗೆ ಗಟ್ಟಿತನದಲ್ಲಿ ಹೊರಹೊಮ್ಮಿದವನ ಬಗೆಗೆ ಅಚ್ಚರಿಯೂ ಗೌರವವೂ ಮೂಡುತ್ತಿತ್ತು. ಹೀಗೆ ಹೊರಹೊಮ್ಮುವುದು ಸಾಧಾರಣದ ಕೆಲಸವಲ್ಲ ಅನಿಸುತ್ತಲೂ ಇತ್ತು.

ನಿರ್ದೇಶಕನಿಗೆ ಸಾಹಿತ್ಯದ ಒಡನಾಟವಿದ್ದರೆ..

ಆದರೆ ಇಂದಿನ ಸೋಷಿಯಲ್ ಮೀಡಿಯಾಗಳ ಕಾಲ ಅಂದಿನ ಚಿತ್ರವನ್ನು ಪೂರಾ ಕಲಕಿಬಿಟ್ಟಿದೆ. ಇಂದು ಯಾರು ಬೇಕಾದರೂ ಬರೀಬಹುದು. ಬರೀಲಿಕ್ಕೆ ಬಾರದವರೂ ಬರೀಬಹುದು. ಯಾಕೆಂದರೆ ಸ್ಪೇಸ್ ಇದೆ. ಜೊತೆಗೆ ಬರೆದವರನ್ನು ಅಲ್ಲೇ ಕಟಕಿಯಾಡುವ ಅವಕಾಶಗಳೂ ಇವೆ. ನಾಟಕ ಬರೆಯುವುದು ಸುಲಭವಲ್ಲದಿರಬಹುದು, ಆದರೆ ಬರೆಯಲಿಕ್ಕೆ ಇಂದು ಅವಕಾಶಗಳಿವೆ. ರಂಗತಂಡಗಳನ್ನು ಕಟ್ಟಲಿಕ್ಕೆ ಹಿಂದೆ ಅವಕಾಶಗಳಿಲ್ಲದಿರಬಹುದು. ಇಂದು ಹೇರಳವಾಗಿ ಇವೆ. ಬರೆವವನ ಜಗತ್ತನ್ನು ಜನರ ಕಣ್ಣುಗಳಿಗೆ ಕಲಾತ್ಮಕವಾಗಿ ನಿಲುಕಿಸುವುದು ನಿರ್ದೇಶಕನ ಕೆಲಸ. ಬರೆವವನಿಗೆ ಸಾಹಿತ್ಯದ ಜೊತೆ ಸಾತತ್ಯ ಇರುವಂತೆ ನಿರ್ದೇಶಕನಿಗೂ ಇಂದು ಸಾಹಿತ್ಯದ ಜೊತೆ ಒಂದು ಬಗೆಯ ಸಾತತ್ಯವಿರಲೇಬೇಕು ಅಂತೇನಿಲ್ಲ. ಸಾಹಿತ್ಯ ಅರ್ಥೈಸಿಕೊಳ್ಳಲಿಕ್ಕೆ ಬಾರದವರೂ ಇಂದು ರಂಗಭೂಮಿಯಲ್ಲಿ ನಿರ್ದೇಶಕರಾಗಿಬಿಡಬಹುದು. ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಬದಲಿಗೆ ನಾನು ಕಂಡ ಪರಿಮಿತಿಯಲ್ಲಿ ಹೇಳುತ್ತಿದ್ದೇನೆ. ಯಾಕೆಂದರೆ ನಾನು ರಂಗಭೂಮಿಯಲ್ಲಿ ನಾಟಕವೊಂದನ್ನು ಓದಿಕೊಳ್ಳುವ ಕ್ರಮಗಳ ಬಗೆಗೆ ಅದ್ಭುತ ಪಾಠ ಹೇಳಿದ ನಿರ್ದೇಶಕರನ್ನೂ ಕಂಡಿದ್ದೇನೆ, ಅವರ ಜೊತೆ ಒಡನಾಡಿದ್ದೇನೆ ಮತ್ತು ಕಲಿತಿದ್ದೇನೆ. ಹಾಗೇ ಯಾವ ಓದಿನ ಹಿನ್ನೆಲೆ, ಅದನ್ನು ಗ್ರಹಿಸುವ ಕ್ರಮಗಳ ಬಗೆಗೆ ಭಯ ಯಾವುದೂ ಇಲ್ಲದೆ ಸುಮ್ಮನೆ ತಿಂಗಳಿಗೆ ಒಂದಿಷ್ಟು ದುಡ್ಡು ಕ್ರೋಡೀಕರಿಸುವುದರಿಂದ ತಂಡ ಕಟ್ಟಿಕೊಂಡು ಅದಕ್ಕೆ ನಾಟಕಗಳನ್ನು ನಿರ್ದೇಶಿಸುವವರನ್ನೂ ಕಂಡಿದ್ದೇನೆ. ನಿರ್ದೇಶನ ಅನ್ನುವುದು ಅದು ಸಾಹಿತ್ಯದೊಂದಿಗೆ ಅನುಸಂಧಾನ ಮಾಡಿಕೊಂಡಿರುವ ಬಗೆಯ ಕಾಣ್ಕೆ ಎನ್ನುವ ಪ್ರಾಥಮಿಕ ತಿಳುವಳಿಕೆ ಕೂಡ ಇರುವುದಿಲ್ಲ. ಹತ್ತು ನಾಟಕಗಳನ್ನು ನೋಡಿ ಬರಿದೇ ಸ್ಫೂರ್ತಗೊಂಡು ನಿರ್ದೇಶಕರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ರಂಗದ ಮೇಲೆ ನಟಿಸುವುದು ಬೇರೆ, ನಿರ್ದೇಶಿಸುವುದು ಬೇರೆ ಎನ್ನುವುದೂ ತಿಳಿದಿರುವುದಿಲ್ಲ. ಇಂಥವರಿಗೆ ರಂಗ ಮತ್ತು ತಾಲೀಮು ಅಂದರೆ ಕೇವಲ ಸ್ಟ್ರಿಕ್ಟ್‌ನೆಸ್ಸು, ಡಿಸಿಪ್ಲೀನು ಮತ್ತು ಬೈದು ಓಡಿಸುವುದು ಅಷ್ಟೇ. ಸಾಹಿತ್ಯದ ಕಾಣ್ಕೆಯ ಜೊತೆಗಿರದವರು ಹೀಗೆ ಮಿಡುಕುತ್ತಾರೇನೊ ಎಂದು ನನಗೆ ಸಾಕಷ್ಟು ಸಲ ಅನಿಸಿದೆ.

ಇಂದಿನ ಸೋಷಿಯಲ್ ಮೀಡಿಯಾಗಳು ಕಲೆಯ ಕುರಿತಾದ ಧ್ಯಾನಸ್ಥ ಮನಸ್ಥಿತಿಯನ್ನು ಅರಿಯಲು ಬಿಡದ ಪೀಡೆಗಳಾಗಿದ್ದಾವೇನೋ ಎಂದು ಬಹಳ ಸಲ ನನಗೆ ಅನಿಸಿದೆ. ಸೋಷಿಯಲ್ ಮೀಡಿಯಾಗಳು ಹೆಚ್ಚಾದ ಮೇಲೆ ಹಲವರಿಗೆ ತಮ್ಮೊಳಗಿನ ಸರಕನ್ನು ನಿಕಷಕ್ಕೆ ಒಡ್ಡಿಕೊಳ್ಳುವ ಗುಣ ಹೊರಟುಹೋದಂತಿದೆ. ತಮ್ಮದು ಗಟ್ಟಿ ಸರಕೋ ಅಥವಾ ಟೊಳ್ಳೋ ಅದು ಬೇಡದ ವಿಚಾರ. ತಾವೂ ಮಾರ್ಕೆಟಿಂಗ್ ಸರಕು ಆಗಲಿಕ್ಕೆ ಸಕಲ ಸಾಧನಗಳಿವೆ; ಅವನ್ನು ಬಳಸಿಕೊಂಡು ತಾವು ಹಲವರ ಕಣ್ಣುಗಳಿಗೆ ನಿಲುಕಬೇಕು ಅಷ್ಟೇ. ಪ್ರಶ್ನಿಸಲು ಹೋದರೆ ತಿರುಗುಬಾಣಗಳಿಗೆ ಎದೆಯೊಡ್ಡಿ ನಿಲ್ಲಬೇಕಾಗುತ್ತದೆ. ಜೊತೆಗೆ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.

ರಂಗಭೂಮಿ ಮೇಲ್ನೋಟಕ್ಕೆ ಕಾಣುವ ಹಾಗೆ ಕೇವಲ ಬಣ್ಣದ ಲೋಕದ ಹೊರಮೈ ಅಲ್ಲ. ಇದು ತಿಳಿಯುವುದು ಆ ರಂಗ ಒಳಹೊಕ್ಕಾಗ ಮಾತ್ರ. ಕಲೆ ಮತ್ತು ಕಲಾವಿದರನ್ನು ತುಂಬು ಆದರ ಭಾವದಿಂದ ಕಾಣುವವರಿಗೆ ಆ ಎಲ್ಲವನ್ನು ಒಟ್ಟು ಮಾಡಿ ಚಿತ್ರ ಕಟ್ಟಿಕೊಡುವವನಿಗೆ ಅಸಲಿ ಚಿತ್ರ ತಿಳಿದಿರುತ್ತದೆ. ಅವನು ಪ್ರೇಕ್ಷಕರ ಚಪ್ಪಾಳೆಯ ಜೊತೆಗೆ ಕುಹಕವನ್ನೂ ಸೈರಿಸಿಕೊಳ್ಳಬೇಕಿರುತ್ತದೆ. ಮತ್ತೆ ಎಲ್ಲವನ್ನೂ ಕೇವಲ ಶೋಕಿಗೆ ಮಾಡುತ್ತ ಮಾರ್ಕೆಟಿಂಗ್ ಸರಕಾಗಲು ಹವಣಿಸುವವರನ್ನೂ ಅನಿವಾರ್ಯವಾಗಿ ಸೈರಿಸಿಕೊಂಡು ಮುಂದೆ ಸಾಗಬೇಕಿರುತ್ತದೆ. ಇದೆಲ್ಲ ಕಷ್ಟ ಅನಿಸುವವರು ರಂಗದ ಬಗೆಗೆ ಯೋಚಿಸಬಾರದು. ಅದರಿಂದ ನಿವೃತ್ತಿ ಪಡೆದುಕೊಳ್ಳಬೇಕು. ಮತ್ತು ಯಾವತ್ತೂ ರಂಗದ ಬಗೆಗೆ ಯೋಚಿಸಬಾರದು. ಆದರೆ ಇದು ನನ್ನಿಂದ ಸಾಧ್ಯವಾಗುತ್ತಿಲ್ಲ. ರಂಗಭೂಮಿ ಒಂದು ರೀತಿ ಬಿಡದ ಮಾಯೆಯಾಗಿ ನನ್ನನ್ನ ಆವರಿಸಿಕೊಂಡಿದೆ. ಹಾಗಾಗಿ ನಾನು ಶೋಕಿಲಾಲರನ್ನ, ಸರಕು ಬರಿದಾಗಿದ್ದರೂ ಮಾರ್ಕೆಟಿಂಗ್ ಸರಕಾಗಲು ತುಡಿವವರನ್ನ ಕಾಣುತ್ತ ಕಂಡೂ ಕಾಣದಂತೆ ಸರಿದು ಹೋಗುವ ಅನಿವಾರ್ಯತೆಗೆ ಪಕ್ಕಾಗಿದ್ದೇನೆ.

ವೃತ್ತಿ ನಾಟಕ ಕಂಪನಿಗಳವರ ಹೊಟ್ಟೆಪಾಡಿನ ತಳಮಳದ ರೂಪಗಳು ಹಾಗೂ ಹವ್ಯಾಸಿಗಳ ಪೊಳ್ಳು ಮಾರ್ಕೆಟಿಂಗ್ ಗೀಳು ಎಲ್ಲ ಬಿಟ್ಟು ನಾಟಕದ ಚೆಂದದ ಅಸಲಿ ವಾತಾವರಣ ತೆರೆದುಕೊಳ್ಳುವುದು ಎಲ್ಲಿ ಎಂದು ಯೋಚಿಸುವಾಗಲೆಲ್ಲ ನನಗೆ ನೆನಪಾಗುವುದು ಹಳ್ಳಿಗಳಲ್ಲಿನ ಪೌರಾಣಿಕ ನಾಟಕಗಳು. ಅಲ್ಲಿ ಜಟಾಪಟಿ ಇಲ್ಲವೆಂದಲ್ಲ. ರಾಜಕಾರಣ ಇಲ್ಲವೆಂದಲ್ಲ. ಅವು ಎಲ್ಲ ಕಡೆಯೂ ಇರುತ್ತವೆ. ಆದರೆ ಅಲ್ಲಿ ವೃತ್ತಿ ನಾಟಕ ಕಂಪನಿಗಳವರ ಅನಿವಾರ್ಯಗಳಿಲ್ಲ. ಅಲ್ಲಿ ದುರ್ಯೋಧನನ ಪಾತ್ರದ ನಿಗದಿ ಆಗುವುದೇ ಒಂದು ಮಜವಾದ ಮತ್ತು ಗಮ್ಮತ್ತಿನ ವಿಚಾರ. ಅಲ್ಲಿ ನಟರೇ ದುಡ್ಡು ಹಾಕಿ ಪಾತ್ರದ ಡಿಮ್ಯಾಂಡು ಮಾಡುವ ಮೋಜು ನೋಡುವುದು ಮಸ್ತಾಗಿರುತ್ತದೆ. ನಟಿಯರನ್ನು ಕರೆಸುವಾಗ ಅವರು ನಡೆಸುವ ಮೀಟಿಂಗು, ಉತ್ಸಾಹ.. ಅವರಿಗೆ ಪ್ರಾಂಪ್ಟ್ ಮಾಡಲು ಇರುವವರು ಎಲ್ಲ ಎಲ್ಲ ಚೆಂದ. ಹವ್ಯಾಸಿಗಳಲ್ಲಿರುವ ಅತಿಬೌದ್ಧಿಕತೆ ಅವರಲ್ಲಿ ಇರುವುದಿಲ್ಲ. ನಾಟಕಗಳೆಂದರೆ ಯಾರು ಚೆನ್ನಾಗಿ ಹಾಡುತ್ತಾರೆ ಎನ್ನುವುದು ಅಷ್ಟೇ. ಶೃತಿ ಕೂಡುತ್ತದೊ ಬಿಡುತ್ತದೋ ಜೋರಾಗಂತೂ ಹಾಡುತ್ತಾರೆ, ದೃಢವಾಗಿ ತಪ್ಪು ಮಾಡುತ್ತಲೇ ಇಷ್ಟವಾಗುತ್ತಾರೆ.


ಈ ಹವ್ಯಾಸಿ ತಂಡಗಳಿಂದ ಬಿಡಿಸಿಕೊಂಡು ಅತ್ಲಾಗಿ ಯಾವುದಾರೂ ಹಳ್ಳಿಗೆ ಹೋಗಿ ಪೂರಾ ರಾತ್ರಿ ನಿದ್ದೆಗೆಟ್ಟು ಒಂದು ಚೆಂದದ ನಾಟಕ ನೋಡಿಕೊಂಡು ಬರೋಣವೆಂದರೆ ಈ ಹಾಳು ಕೊರೋನ ಹಾವಳಿ ಮುಗಿದಿಲ್ಲ. ಜೊತೆಗೆ ನಾನು ನೋಡಿದ ಕಾಲಕ್ಕೆ ಹಳ್ಳಿಗಳಲ್ಲಿ ನಡೆಯುತ್ತಿದ್ದ ನಾಟಕಗಳು ಹಾಗೇ ತಾಜಾತನ ಉಳಿಸಿಕೊಂಡಿವೆಯೋ ಅಥವಾ ಅವೂ ಹವ್ಯಾಸಿಗಳ ತೆವಲುಗಳಿಗೆ ಸಿಲುಕಿಕೊಂಡಿವೆಯೊ ಅದರ ಅಂದಾಜು ನನ್ನಲ್ಲಿ ಇಲ್ಲ. ಮೊದಲು ಈ ಉಸಿರುಕಟ್ಟಿಸುವ ವಾತಾವರಣದಿಂದ ಪಾರಾದರೆ ಸಾಕು ಅನಿಸುತ್ತಿದೆ. ಮಾಸ್ಕ್ ಮುಖದಿಂದ ಜಾರಿದರೆ ಮುಂದಿನ ನಿರಾಳದ ಬಗೆಗೆ ಯೋಚಿಸಬಹುದು. ಆದರೆ ಆಗಾಗ ಇಂಥ ಉದ್ದೇಶಪೂರ್ವಕ ಕಟಕಿ ಪ್ರಶ್ನೆಗಳನ್ನು ಸೈರಿಸಿಕೊಳ್ಳುವುದು ಹೇಗೆ ಎನ್ನುವುದು ಸದ್ಯದ ಮಹತ್ತರ ಪ್ರಶ್ನೆ.