ಉತ್ತರ ದಿಕ್ಕಿನ ಅಂಗಳದ ಎಡಭಾಗದಲ್ಲಿ ಎರಡು ಹಿಂಡುವ ಎಮ್ಮೆ ಮತ್ತು ಇನ್ನೊಂದು ವಯಸ್ಸಾದ ಮುರುಕುಕೋಡಿನ ಗೊಡ್ಡೆಮ್ಮೆ. ದಕ್ಷಿಣದ ಬಾಗಿಲಿನ ಹಿತ್ತಲಿನಲ್ಲಿ ಜೋಳದ ದಂಟಿನಿಂದ ಮರೆಮಾಚಿದ ಸ್ನಾನಕ್ಕೆಂದು ಮರೆಮಾಡಿದ ಎರಡಗಲದ ಒಂದು ಜಾಗ, ಸ್ನಾನದ ನೀರು ಹೋಗಿ ಇಂಗುವಲ್ಲಿ ತಿಪ್ಪೆ, ಆ ತಿಪ್ಪೆಯಲ್ಲಿ ಎಮ್ಮೆ ಆಡುಗಳ ಯಥೇಚ್ಛ ಗೊಬ್ಬರ ಇಂತಹ ಊರಿನಲ್ಲಿ ಬಹುಬೇಗ ಬೆಳೆಯುವಂತವು ಒಂದು ತಿಪ್ಪೆಗಳು ಮತ್ತು ಇನ್ನೊಂದು ಮೈ ನೆರೆದ ಹುಡುಗಿಯರು. ಅಚ್ಚರಿಯೆಂದರೆ ನೋಡ ನೋಡುತ್ತಿದ್ದಂತೆ ಮೈ ನೆರೆದ ಹುಡುಗಿಯರನ್ನು ಬೇಗ ಬೇಗ ಮದುವೆ ಮಾಡಿ ಕಳಿಸುತ್ತಿದ್ದರು. ಮತ್ತು ಅವರೂ ಕೂಡ ಅವಸರಕ್ಕೆ ಬಿದ್ದವರಂತೆ ಮರುವರ್ಷವೇ ಬಸುರಿ ಬಾಣಂತನವೆಂದು ತವರಿಗೆ ಬಂದು ಬಂದು ನಮಗೆಲ್ಲಾ ಒಂದು ನಮೂನಿ ಆತಂಕ ಹುಟ್ಟಿಸುವವರು.
ಡಾ. ಲಕ್ಷ್ಮಣ ವಿ.ಎ. ಅಂಕಣ

 

ಅದೊಂದು ಕಚ್ಚಾ ಹಾಳೆಯಂತಹ ಈ ಊರಿನ ಬದುಕು, ಏನಾದರೂ ಬರೆಯಬಹುದಿತ್ತು, ಬರೆದಿದ್ದು ತಪ್ಪಾಗಿದ್ದರೆ ಅದನ್ನು ಅಳಿಸಿ ಮತ್ತೆ ಬರೆಯಬಹುದಾಗಿತ್ತು, ಅಷ್ಟಕ್ಕೂ ಅಲ್ಲಿ ಬರೆಯುವಂತದ್ದು ಮತ್ತು ನೀವು ಓದುವಂತಹ ಏನೇನೂ ವಿಶೇಷವಲ್ಲದ ತಿಂಗಳಾನುಗಟ್ಟಲೇ ಬ್ರೇಕಿಂಗ್ ನ್ಯೂಜಿನಂತೆ ಪ್ರತಿ ಕ್ಷಣಕ್ಕೂ ಘಟಿಸುವಂತಹ ಪ್ರಮೇಯಗಳಿಗೆ ಆಸ್ಪದವೇಯಿಲ್ಲದ ಭೂಗೋಳದ ಮೇಲಿನ ಸೂಜಿಮೊನೆಯಷ್ಟೇ ಚಿಕ್ಕದಾದ ಹಳ್ಳಿ ನಮ್ಮೂರು. ನಮ್ಮ ಬದುಕು. ಇಲ್ಲಿ ಸಂಕೇತಿಸಿರುವ ನನ್ನ ಹಳ್ಳಿ ನಮ್ಮ ನಿಮ್ಮೆಲ್ಲರ ಹಳ್ಳಿಗಳೂ ಹೌದು.

ಇಕ್ಕಟ್ಟಾದ ಬೀದಿಗಳು. ಬದಿಯಲ್ಲಿ ಒಂದಕ್ಕೊಂದು ತೆಕ್ಕೆ ಬಡಿದು ನಿಂತ ಅಥವ ಕುಂತಲ್ಲೇ ಕುಂತಿರುವ ಕಬ್ಬಿನ ಸೋಗೆಯಗುಡಿಸಲುಗಳು ಅಥವ ಮಣ್ಣು ಗೋಡೆಯ ಎಲ್ಲೋ ಅಪರೂಪಕ್ಕೆ ಒಂದೆರಡು ಮಂಗಳೂರು ಹೆಂಚಿನ ಮನೆಗಳು. ಮನೆಯೆದರು ಎಷ್ಟೇ ಬಡವರಾಗಿದ್ದರೂ ಒಂದೆರಡು ಕಪ್ಪೆಂದರೆ ಕಪ್ಪು ಬಣ್ಣದ ಎಮ್ಮೆಗಳು, ನಾಲ್ಕೈದು ಆಡುಗಳು ಅದರ ಹಿಂದೆ ಮುಂದೆ ಓಡಾಡುವ ನಾಯಿ ಬೆಕ್ಕುಗಳು, ಬೆಕ್ಕಿನಂತಹ ಬಿಡಾರಗಳು.

ನನಗೆ ಬುದ್ದಿ ಬರುವ ಹೊತ್ತಿಗೆ ಇಂತಹುದೆ ಬೀದಿಯ ಒಂದು ಹತ್ತು ಅಡಿ ಉದ್ದದ ಮಂಗಳೂರು ಹೆಂಚಿನ ಮನೆಯಲ್ಲಿ ನಾನು ದೊಡ್ಡವನಾಗುತ್ತಿದ್ದೆ. ಮತ್ತು ಬದುಕು ಚಿಕ್ಕದಾಗುತ್ತ ಸಾಗುತಿತ್ತು. ಉತ್ತರಕ್ಕೊಂದು ಬಾಗಿಲು ದಕ್ಷಿಣಕ್ಕೊಂದು ಬಾಗಿಲು ಪಶ್ಚಿಮಕ್ಕೆ ಒಂದು ಮಣ್ಣಿನ ಗೋಡೆ ಪೂರ್ವಕ್ಕೆ ಅರ್ಧಗೋಡೆ ಕಟ್ಟಿ ಅರ್ಧ ಸೋಗೆ ಹೊದಿಸಿದಂತಹದು. ಉತ್ತರ ದಿಕ್ಕಿನ ಅಂಗಳದ ಎಡಭಾಗದಲ್ಲಿ ಎರಡು ಹಿಂಡುವ ಎಮ್ಮೆ ಮತ್ತು ಇನ್ನೊಂದು ವಯಸ್ಸಾದ ಮುರುಕುಕೋಡಿನ ಗೊಡ್ಡೆಮ್ಮೆ. ದಕ್ಷಿಣದ ಬಾಗಿಲಿನ ಹಿತ್ತಲಿನಲ್ಲಿ ಜೋಳದ ದಂಟಿನಿಂದ ಮರೆಮಾಚಿದ ಸ್ನಾನಕ್ಕೆಂದು ಮರೆಮಾಡಿದ ಎರಡಗಲದ ಒಂದು ಜಾಗ, ಸ್ನಾನದ ನೀರು ಹೋಗಿ ಇಂಗುವಲ್ಲಿ ತಿಪ್ಪೆ, ಆ ತಿಪ್ಪೆಯಲ್ಲಿ ಎಮ್ಮೆ ಆಡುಗಳ ಯಥೇಚ್ಛ ಗೊಬ್ಬರ ಇಂತಹ ಊರಿನಲ್ಲಿ ಬಹುಬೇಗ ಬೆಳೆಯುವಂತವು ಒಂದು ತಿಪ್ಪೆಗಳು ಮತ್ತು ಇನ್ನೊಂದು ಮೈ ನೆರೆದ ಹುಡುಗಿಯರು. ಅಚ್ಚರಿಯೆಂದರೆ ನೋಡ ನೋಡುತ್ತಿದ್ದಂತೆ ಮೈ ನೆರೆದ ಹುಡುಗಿಯರನ್ನು ಬೇಗ ಬೇಗ ಮದುವೆ ಮಾಡಿ ಕಳಿಸುತ್ತಿದ್ದರು. ಮತ್ತು ಅವರೂ ಕೂಡ ಅವಸರಕ್ಕೆ ಬಿದ್ದವರಂತೆ ಮರುವರ್ಷವೇ ಬಸುರಿ ಬಾಣಂತನವೆಂದು ತವರಿಗೆ ಬಂದು ಬಂದು ನಮಗೆಲ್ಲಾ ಒಂದು ನಮೂನಿ ಆತಂಕ ಹುಟ್ಟಿಸುವವರು.

ಈ ಕಚ್ಚಾ ಹಾಳೆಯಂತಹ ಊರಿನ ಮುತ್ತೈದೆಯರು ನಿತ್ಯ ಕೋಳಿ ಕೂಗುವ ಹೊತ್ತಿಗೆ ಎದ್ದು ಕಸ ಮುಸುರೆ ಅಡುಗೆ ಮಾಡಿ ಮಕ್ಕಳ ಮೈ ತೊಳೆದು ಮಾರು ಹೊತ್ತು ಏರುವ ಗಳಿಗೆಗೆಲ್ಲಾ ಹತ್ತಿ ಬಿಡಿಸಲು ಜೋಳ ಕುಯ್ಯಲು ಶೇಂಗಾದಲ್ಲಿ ಕಸ ತೆಗೆಯಲು ತಲೆ ಮೇಲೆ ಬುತ್ತಿ ಹೊತ್ತುಕೊಂಡು ಸಾಲಾಗಿ ಹೊಲಗಳತ್ತ ಹೆಜ್ಜೆ ಹಾಕುವವರು. ಗಂಡಾಳುಗಳು ಮುರುಕು ಸೈಕಲ್ ತುಳಿಯುತ್ತ ಊರ ಗೌಡರ ಬಾವಿ ತೆಗೆಯಲೊ, ಹೊಲಗಳಿಗೆ ಒಡ್ಡು ಹಾಕಲೊ ಹೊರಡುವವರು. ನಮ್ಮಂತ ಚಳ್ಳೆ ಪಿಳ್ಳೆಗಳು ಸಾಲಿಯೆಂದರೆ ಸಾಲಿ ಇಲ್ಲವೋ ಒಂದು ಆಡೊ ಎಮ್ಮೆಯ ಹಿಂದೋ ಸಾಗಿ ಅವುಗಳನ್ನು ಮೇಯಿಸಲು ಬಿಟ್ಟು ಅವುಗಳಿಗೆ ಬಾಯಾರಿಕೆಯೆಂದು ನೀರಿಗಿಳಿದಾಗ ಎಮ್ಮೆಯ ಡುಬ್ಬದ ಮೇಲೆ ಕುಳಿತು ಸಾಧ್ಯವಾದರೆ ಅವೇ ನೀರಿನಲ್ಲಿ ಎಮ್ಮೆ ಮೈ ತೊಳೆಯುವ ನೆವದಲ್ಲಿ ನಾವೂ ಈಜು ಹೊಡೆದು ಮಟ ಮಟ ಮಧ್ಯಾನ್ಹದ ಹೊತ್ತಿಗೆಲ್ಲಾ ಮನೆಗೆ ಬಂದು ಊಟ ಮಾಡಿ ಮತ್ತೆ ಸಂಜೆ ದೊಡ್ಡವರು ಮರಳುವ ತನಕ ಆಟ ಆಟ ಮತ್ತು ಆಟ.

ಸಂಜೆ ಆರಕ್ಕೆಲ್ಲಾ ಎಲ್ಲರ ಹಟ್ಟಿಗಳ ಒಲೆಗಳು ಉರಿದು ಒಂದು ತರಹದ ಹೊಗೆ ಮತ್ತು ಆ ಹೊಗೆಯೊಂದಿಗೇ ತೇಲಿ ಬರುತ್ತಿದ್ದ ವಗ್ಗರಣೆಯ ಘಮ, ನಮ್ಮ ಎದುರುಗಡೆ ಮನೆ ಮುಸ್ಲಿಂ ಕುಟುಂಬವಿದ್ದಿತು. ಅವರು ವಾರಕ್ಕೆರಡು ಸಲ ಮಟನ್ ಇಲ್ಲದೆ ಊಟ ಮಾಡುತ್ತಿರಲಿಲ್ಲ, ಹೀಗಾಗಿ ಅದರ ಸ್ವಲ್ಪ ಪಾಲು ನನಗೂ ಬರುತ್ತಿತ್ತು. ನಮ್ಮ ಮನೆಯ ಎಮ್ಮೆಯ ಹಾಲು ಹೈನು ಮಜ್ಜಿಗೆ ಅವರ ಮನೆಗೆ ಕೊಡುತ್ತಿದ್ದೆವು. ನಮ್ಮ ಮನೆಯ ಹಿತ್ತಲಿನ ಬೀದಿಯಲ್ಲಿ ನಾಲ್ಕು ನಾವಲಿಗರ (ಕ್ಷೌರಿಕರ)ಕುಟುಂಬಗಳಿದ್ದವು. ಅವರ ಮನೆಯ ಸಾರು ಪಲ್ಯ ನಮಗೆ ಕೊಡುತ್ತಿದ್ದರು. ಆದರೆ ಅವರು ಪಕ್ಕಾ ಸಸ್ಯಾಹಾರಿಗಳು. ಮನೆಯ ಮುಂದೆ ಮಾಲಗಾರರ ಕುಟುಂಬಗಳಿದ್ದವು. ಮತ್ತು ಉಪ್ಪಾರರ ನಮ್ಮ ಬೀದಿಯಲ್ಲಿ ಎಂಟತ್ತು ಮನೆಗಳು, ಈ ಮಾಲಗಾರರೂ ಕೂಡಾ ಸಸ್ಯಾಹಾರಿಗಳು ಇವರ ಮನೆಗಳಿಗೆ ನಮ್ಮ ಮನೆ ಗೋಡೆ ಅಂಟಿಕೊಂಡಿದ್ದರೂ ನಮ್ಮ ಊಟ ಆಚಾರ ವಿಚಾರಗಳ ಬಗ್ಗೆ ಇವರೆಂದೂ ತಲೆಕೆಡಿಸಿಕೊಂಡದ್ದು ನನ್ನ ಅನುಭವಕ್ಕೆ ಬಂದಿಲ್ಲ ಮತ್ತು ಕಚ್ಚಾ ಹಾಳೆಯಂತಹ ನನ್ನೂರಿನ ಈ ಎಲ್ಲ ಜಾತಿಯ ನಿತ್ಯ ಮುತ್ತೈದೆಯರು ಬೆಳಕು ಹರಿಯುವ ಹೊತ್ತಿಗೆಲ್ಲ ಬುತ್ತಿಕಟ್ಟಿಕೊಂಡು ಹೊಲದಲ್ಲಿ ಕೂಲಿ ಮಾಡುತ್ತ, ಹಾಡು ಹೇಳುತ್ತ, ಊಟ ಉಪಚಾರ ತಿಂಡಿ ತೀರ್ಥ ಪರಸ್ಪರ ಹಂಚಿಕೊಂಡು ಸುಖವಾಗಿ ಬಾಳುತ್ತಿದ್ದ ಅದೊಂದು ಕಾಲದಲ್ಲಿ ನನ್ನ ಬಾಲ್ಯ ಸೋರಿಹೋಗಿತ್ತು.

ನನಗೆ ಬುದ್ದಿ ಬರುವ ಹೊತ್ತಿಗೆ ಇಂತಹುದೆ ಬೀದಿಯ ಒಂದು ಹತ್ತು ಅಡಿ ಉದ್ದದ ಮಂಗಳೂರು ಹೆಂಚಿನ ಮನೆಯಲ್ಲಿ ನಾನು ದೊಡ್ಡವನಾಗುತ್ತಿದ್ದೆ. ಮತ್ತು ಬದುಕು ಚಿಕ್ಕದಾಗುತ್ತ ಸಾಗುತಿತ್ತು.

ವರ್ಷಕ್ಕೊಂದು ಸಲ ನಡೆಯುತ್ತಿದ್ದ ಮುಸ್ಲಿಮರ ಉರುಸಿನಲ್ಲಿ ನಮ್ಮ ಅಣ್ಣ ಕಿಚ್ಚು ಹಾಯುತ್ತಿದ್ದ. ಅದಕ್ಕಾಗಿ ಒಂದು ವಾರ ಉಪವಾಸವಿರುತ್ತಿದ್ದ. ಅಕಸ್ಮಾತ್ ಹಾಯ್ದ ಕಿಚ್ಚಿನಿಂದೇದಾರೂ ಕಾಲಿಗೆ ಬೊಬ್ಬೆಗಳಾಗಿ ರಕ್ತ ಕೀವು ಯಾರಿಗಾದರೂ ಸೋರಿದರೆ, ಏನೋ ಅನಾಚಾರವಾಗಿದೆಯೆಂಬಂತೆ ಅದೇ ಊರಿನ ಮುಲ್ಲಾನ ಬಳಿ ಹೋಗಿ ತಾಯತ ಕಟ್ಟಿಸಿಕೊಂಡು ಬರುತ್ತಿದ್ದರು. ಶ್ರಾವಣದ ಕಡೆಯ ಸೋಮವಾರ ನಡೆಯುವ ಸಿದ್ದೇಶ್ವರನ ಜಾತ್ರೆಗೆ ಎಲ್ಲರೂ ದುಡ್ಡು ಕೊಟ್ಟು ದೂರದ ರಬಕವಿ ಬನಹಟ್ಟಿ ಊರುಗಳಿಂದ ಬಯಲಾಟದವರನ್ನು ಕರೆಸಿ ಆಟ ಆಡಿಸುತ್ತಿದ್ದರು.

ಶ್ರೀ ಕೃಷ್ಣ ಪಾರಿಜಾತದ ಬಯಲಾಟ ನಡೆಯುತ್ತಿದ್ದದ್ದು ಇದೇ ಮುಸ್ಲಿಮರ ದೇವರ ಕೂಡ್ರಿಸುತ್ತಿದ್ದ ಎದರಿನ ಬಯಲಿನಲ್ಲಿ. ಅದರ ಎದುರುಗಡೆ ಹಣುಮಪ್ಪನ ಗುಡಿ, ಅದರ ಪಕ್ಕದಲ್ಲಿ ಪಂಢರಪುರದ ವಿಠೋಬಾ ರುಕ್ಮಬಾಯಿಯ ಗುಡಿ, ನಮ್ಮ ಊರಿನ ಜನರಂತೆ ನಮ್ಮೂರಿನ ದೇವರುಗಳು ಭಾರೀ ಒಳ್ಳೆಯವರು ಪಾಪ! ಒಂದು ದಿನ ಕೂಡ ನನ್ನ ಜಾತಿ ಮತ ಪಂಥ ಅಂತ ಜಗಳ ಮಾಡಿದ್ದು ಯಾರೂ ನೋಡಿಲ್ಲ.

ಈ ಇಂತಹ ಗಟ್ಟಿ ತಳವೂರಿದ ಊರಿಗೆ ಸವಾಲುಗಳೇ ಇಲ್ಲವೆಂತಲ್ಲ, ನೆರೆಗೂ ಬರಕ್ಕೂ ನೇರವಾಗಿ ದೇವರನ್ನೇ ಆರೋಪಿಸುತ್ತಾರೆ. ಹಾಗೆ ಇವರೊಂದಿಗೆ ಜಗಳವಾಡಲು ಬಹುಶಃ ದೇವರಿಗೂ ಪ್ರೀತಿ. ಬರದಲ್ಲೂ ಹಸಿವಿನಿಂದ ತಲ್ಲಣಿಸಿದರೂ ಅಂಬಲಿ ಗಂಜಿ ಕುಡಿದು ದಿನ ದೂಡಿದವರಿದ್ದಾರೆ. ಪ್ಲೇಗು ಮಾರಿ ಊರಿಗೆ ಬಂದು ಇಡೀ ಊರಿಗೆ ಊರೇ ಊರು ಬಿಡದೆ ದೇಶಾಂತರ ಹೋಗದೆ ಅಮ್ಮನ ಹರಕೆ ತೀರಿಸಿ ನಾಗರೀಕತೆಯ ಮುಂದಿನ ಇತಿಹಾಸ ಬರೆದವರಿದ್ದಾರೆ. ಕಳಕೊಂಡವರ ನೋವು ಉಡಿಯಲ್ಲಿಟ್ಟುಕೊಂಡು ಊರ ಮಾರಮ್ಮನ ಕೆಂಡ ತುಳಿದಿದ್ದಾರೆ, ಯುದ್ಧ ಇವರನ್ನು ಕಂಗೆಡಿಸದಿದ್ದರೂ ಊರ ಜವಾನರ ಕಳೇಬರಹ ಹೊತ್ತ ಕಫನುಗಳು ಊರಿಗೆ ಬಂದಾಗ ಮಾತ್ರ ಕನಲಿ ಹೋಗಿದ್ದಾರೆ.

ಕಾಲ ಕಾಲಕ್ಕೆ ಬರುವ ಚುನಾವಣೆಗಳು ಬಂದು ಇವರ ಮಧ್ಯ ತಾತ್ಕಾಲಿಕ ಗೋಡೆಗಳೆನ್ನಿಬ್ಬಿಸಿದರೂ ಇವರ ಧಾರಣ ಶಕ್ತಿ ದೊಡ್ಡದು. ಅವರು ಕೊಡುವ ದುಡ್ಡು ಕೊಟ್ಟೂ ತಾನು ನಂಬಿದ ಪಾರ್ಟಿಗೆ ಓಟು ಮಾಡುತ್ತಾರೆ. ಟೈಂ ಎಷ್ಟಾಯಿತು ಎಂದು ಕೇಳಿದರೆ ಬಾರಾ ಎಂದು ಮರಾಠಿಯಲ್ಲೇ ಹೇಳಿ ಮಕ್ಕಳನ್ನು ತಪ್ಪದೇ ಕನ್ನಡ ಶಾಲೆಗೇ ಕಳುಹಿಸುತ್ತಾರೆ.

ಮಸೀದಿಯಿಂದ ಬರುವ ಆಜಾನು ಕೂಗೇ ಇವರ ಜೈವಿಕ ಗಡಿಯಾರ. ಮಂದಿರ ಮಸೀದಿ ಕಟ್ಟುವ ಯಾ ಕೆಡಹುವ ವಿಚಾರಗಳ ಬಗ್ಗೆ ಧರ್ಮ ಸಂಸತ್ತುಗಳು ನಡೆಯುವಾಗ, ನಾಗರೀಕತೆ ಸೋಂಕದ ಅನಕ್ಷರಸ್ಥ ಹಳ್ಳಿಗಳು ಇನ್ನೂ ಜಾತ್ಯಾತೀತೆ, ಬಹುತ್ವವನ್ನು ಕಾಪಿಟ್ಟುಕೊಂಡು ಬದುಕುತ್ತಿವೆಯೆಂದಾದರೆ ಅದು ಯಾವ ಧರ್ಮ ಬೋಧನೆಯಿಂದಲೂ ಅಲ್ಲ ಬದಲಾಗಿ ಕೂಡಿ ಬದುಕುವ ಜೀವನೋತ್ಸಾಹವಾಗಿ ಮಾತ್ರ.

ಮನುಷ್ಯ ಹೆಚ್ಚು ಹೆಚ್ಚು ಓದಿದಂತೆಲ್ಲಾ ಜ್ಞಾನ ಸಂಪಾದನೆಯಾದಂತೆಲ್ಲಾ ತನ್ನ ಸುತ್ತ ಮುತ್ತಲಿನ ಪ್ರಪಂಚದ ಬದುಕನ್ನು ಸುಂದರವಾಗಿ ಸಹ್ಯವಾಗಿ ವಿಶಾಲ ದೃಷ್ಟಿಯಿಂದ ನೋಡುವ ಒಳಗಣ್ಣು ಇರಬೇಕಿತ್ತು, ಬದಲಾಗಿ ಇಲ್ಲಿ ಹೆಚ್ಚು ಓದಿದವರೇ ಈ ನಾಡಿನ ದುಷ್ಟರಾಗುತ್ತಿದ್ದಾರೆ. ಜಾತಿಗೊಂದು ಮಠ, ಧರ್ಮಕ್ಕೊಂದು ಶಾಲೆ, ಸಮುದಾಯಕ್ಕೊಂದು ಪ್ರತ್ಯೇಕ ಮದುವೆ ಮಂಟಪಗಳು ಕೊನೆಗೆ ಅವರವರ ಜಾತಿಗೆಂದೇ ಮೀಸಲಾದ ಸ್ಮಶಾನ ಭೂಮಿ ಮಾಡಿಕೊಂಡು
ನಾಗರಿಕತೆಯನ್ನು ಇನ್ನಷ್ಟು ಹಿಮ್ಮುಖವಾಗಿ ಚಲಿಸುವಂತೆ ಮಾಡುವಾಗ ಇದೆಲ್ಲ ಎಲ್ಲಿ ಹೋಗಿ ಮುಟ್ಟುತ್ತದೆಯೆಂದು ನೆನೆದು ಜೀವ ಝಲ್ಲೆನ್ನುತ್ತದೆ.