“ಕೃಷಿಯ ಬಗೆಗಿನ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ನೆದರ್ ಲ್ಯಾಂಡ್ಸ್ ತುಂಬಾ ಒತ್ತುನೀಡುತ್ತದೆ ಮತ್ತು ಸಾಕಾಗುವಷ್ಟು ಹಣ ಸುರಿಯುತ್ತದೆ.ಕೆಲವು ತರಕಾರಿ ಮತ್ತು ಹಣ್ಣುಗಳನ್ನು ಬಿಟ್ಟು ಉಳಿದೆಲ್ಲವುಗಳನ್ನೂ ಹಸಿರುಮನೆಯಲ್ಲಿಯೇ ಬೆಳೆಸಲಾಗುತ್ತದೆ.ಈ ಹಸಿರುಮನೆಗಳು ಸುಮಾರು ಹತ್ತು ಸಾವಿರ ಹೆಕ್ಟೇರ್ ಗಿಂತ ಹೆಚ್ಚು ಜಾಗದಲ್ಲಿ ನಿರ್ಮಿಸಲ್ಪಟ್ಟಿರುವಂಥವು.ಎಕರೆಗಟ್ಟಲೆ ವಿಸ್ತಾರವಾಗಿರುವ ಒಂದೊಂದು ಹಸಿರುಮನೆಯನ್ನೂ ಒಬ್ಬಿಬ್ಬರು ಮಾತ್ರ ನಿರ್ವಹಿಸುತ್ತಾರೆ. ಏಕೆಂದರೆ ಎಲ್ಲವೂ ಕಂಪ್ಯೂಟರ್ ಚಾಲಿತ ಮತ್ತು ಯಾಂತ್ರೀಕೃತವಾಗಿವೆ”
ಸೀಮಾ ಎಸ್. ಹೆಗಡೆ ಬರೆಯುವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

ಈ ಬಾರಿ ನೆದರ್ ಲ್ಯಾಂಡ್ಸ್ ನ ಇನ್ನೊಂದು ಮಜಲಿನ ಪರಿಚಯ ಮಾಡಿಕೊಡಲಿದ್ದೇನೆ. ನಾನು ಪ್ರತೀ ಬಾರಿ ಈ ದೇಶದ ಉತ್ತಮ ಅಂಶಗಳ ಬಗ್ಗೆ ಬರೆಯುವುದನ್ನು ನೋಡಿ ನೀವು ಈ ದೇಶದಲ್ಲಿ ಯಾವುದೇ ಕೆಟ್ಟ ಅಂಶಗಳು ಇಲ್ಲವೇ ಇಲ್ಲ ಎಂದು ಭಾವಿಸಬೇಡಿ. ಅವೂ ಕೂಡ ಇವೆ, ಇತರ ಎಲ್ಲ ದೇಶಗಳಲ್ಲಿಯೂ ಇರುವಂತೆ! ಆದರೆ ಬರೆಯುವಾಗ ಒಳ್ಳೆಯ ಅಂಶಗಳನ್ನೇ ಆರಿಸಿ ಬರೆಯುವುದು ನನ್ನ ರೂಡಿ. ಈ ಬಾರಿ ಇಲ್ಲಿನ ಕೃಷಿ ಮತ್ತು ಕೃಷಿ ಉತ್ಪನ್ನಗಳ ಬಗ್ಗೆ ಬರೆಯಬೇಕೆನಿಸುತ್ತಿದೆ.

ಭೌಗೋಳಿಕವಾಗಿ ಜಗತ್ತಿನ ಅತಿದೊಡ್ಡ ರಾಷ್ಟ್ರಗಳ ಪೈಕಿ ನೆದರ್ ಲ್ಯಾಂಡ್ಸ್ ಗೆ 133 ನೇ ಸ್ಥಾನ. ಭಾರತಕ್ಕಿಂತ 79 ಪಟ್ಟು ಚಿಕ್ಕ ದೇಶವಿದು! ಈ ದೇಶದ 26 ಶೇಕಡಾ ಭೂಭಾಗ ಸಮುದ್ರ ಮಟ್ಟಕ್ಕಿಂತ ಕೆಳಗಿದೆ- ಅಂದರೆ ಅದು ಸಮುದ್ರವನ್ನು ಹಿಂದಕ್ಕೆ ತಳ್ಳಿ ಅದರಿಂದ ಕಿತ್ತುಕೊಂಡಿರುವ ಜಾಗ. ಆ ಜವುಗು ಜಾಗದಲ್ಲಿ ಹುಲ್ಲಿನ ಹೊರತಾಗಿ ಇನ್ನೇನೂ ಬೆಳೆಯಲಾರದು. ಇಷ್ಟು ಚಿಕ್ಕ ದೇಶ, ಜೊತೆಗೆ ಇಷ್ಟೆಲ್ಲಾ ಬಂಜರುಭೂಮಿ- ಈ ದೇಶದಲ್ಲಿ ಇನ್ನೇನು ಕೃಷಿ ಸಾಧ್ಯ ಎನ್ನುತ್ತೀರಾ? ಓದಿ ಬೆಚ್ಚಿಬೀಳದಿರಿ- ಯೂರೋಪಿನಲ್ಲಿಯೇ ಅತಿಹೆಚ್ಚು ಮತ್ತು ಅಮೆರಿಕವನ್ನು ಹೊರತುಪಡಿಸಿ ಜಗತ್ತಿನಲ್ಲಿಯೇ ಅತಿಹೆಚ್ಚು ಕೃಷಿ ಉತ್ಪನ್ನಗಳನ್ನು ರಫ್ತುಮಾಡುತ್ತಿರುವ ದೇಶ ನೆದರ್ ಲ್ಯಾಂಡ್ಸ್! ಪ್ರಪಂಚದ ಒಂದು ಮೂರಂಶಕ್ಕಿಂತ ಹೆಚ್ಚು ತರಕಾರಿ ಬೀಜಗಳು ಉತ್ಪಾದನೆಯಾಗುವುದು ಇಲ್ಲಿಯೇ! ಇಷ್ಟೆಲ್ಲಾ ಇರುವಾಗ ಈ ದೇಶದ ಕೃಷಿಯ ಬಗ್ಗೆ ಬರೆಯಲೇಬೇಕು.

ಮೊದಲೆಲ್ಲಾ ಇಲ್ಲಿ ಹೆಚ್ಚು ಚಿಕ್ಕ ಹಿಡುವಳಿಗಳಿದ್ದವಂತೆ. ಆದರೆ ಈಗ ಕೃಷಿಯ ಸ್ವರೂಪ ಬದಲಾಗಿದೆ. ಸಂಪೂರ್ಣ ಯಾಂತ್ರೀಕೃತ. ಈಗೀಗ ಕಾರ್ಪೋರೇಶನ್ ಗಳು ಬೃಹತ್ ಪ್ರಮಾಣದಲ್ಲಿ ಕೃಷಿಯನ್ನು ನಿಯಂತ್ರಿಸುತ್ತವೆ. ಈ ದೇಶದಲ್ಲಿ ಮುಖ್ಯವಾಗಿ ಬೆಳೆಯುವಂಥವು ಗೋಧಿ, ಬಾರ್ಲಿ, ಬೀಟ್ ರೂಟ್, ಆಲೂಗಡ್ಡೆ, ಮತ್ತು ಮೇವಿಗೆಂದು ಬೆಳೆಯುವ ಜೋಳ. ಇವುಗಳ ಹೊರತಾಗಿ ಎಷ್ಟೋ ಬಗೆಯ ತರಕಾರಿಗಳನ್ನು, ಹಣ್ಣುಗಳನ್ನು ಮತ್ತು ಹೂಗಳನ್ನು ಹಸಿರುಮನೆಗಳಲ್ಲಿ ಬೆಳೆಯುತ್ತಾರೆ. ಎಷ್ಟೊಂದು ಬಗೆಯ ಆಲೂಗಡ್ಡೆ, ಟೊಮೇಟೊ ಮತ್ತು ದೊಣ್ಣೆಮೆಣಸಿನಕಾಯಿಗಳನ್ನು ಬೆಳೆಯುತ್ತಾರೆ ಎಂಬುದನ್ನು ಊಹಿಸಲೂ ಅಸಾಧ್ಯ. ಯಾವ ಸೂಪರ್ ಮಾರ್ಕೆಟ್ ನ ಶೆಲ್ಫ್ ನೋಡಿದರೂ ಹತ್ತೆಂಟು ಬಗೆಯ ತರಾವರಿ ಬಣ್ಣ ಬಣ್ಣದ ಟೊಮೇಟೊ, ಆಲೂಗಡ್ಡೆಗಳು! ಚಿಕ್ಕದು, ದೊಡ್ಡದು, ಬಣ್ಣಬಣ್ಣದ್ದು, ಬೇಗ ಬೇಯುವಂಥದು, ನಿಧಾನಕ್ಕೆ ಬೇಯುವಂಥದು ಹೀಗೆ ಹಲವಾರು. ತಮಾಷೆಯೆನಿಸಬಹುದು ಆದರೆ ನಿಜ- ಇಲ್ಲಿ ಬೆಳೆಯಲಾಗುವ ಬೀಟ್ ರೂಟ್ ನ ಸ್ವಲ್ಪ ಪ್ರಮಾಣ ಮಾತ್ರ ಜನರ ಬಳಕೆಗೆ ಆದರೆ, ಇನ್ನುಳಿದ ಬೀಟ್ ರೂಟ್ ಜಾನುವಾರುಗಳ ಮೇವಿಗಾಗಿ ಉಪಯೋಗಿಸಲ್ಪಡುತ್ತದೆಯಂತೆ! ಹೈನುಗಾರಿಕೆಯನ್ನೂ ಸೇರಿಸಿ 2017 ರಲ್ಲಿ ಈ ದೇಶ ರಫ್ತು ಮಾಡಿದ ಕೃಷಿ ಉತ್ಪನ್ನಗಳ ಮೊತ್ತ ಸರಿಸುಮಾರು 92 ಬಿಲಿಯನ್ ಯೂರೋಗಳಷ್ಟು! ಇದು ಈ ದೇಶದ ರಫ್ತಿನ ಶೇಕಡಾ ಇಪ್ಪತ್ತರಷ್ಟು. ನನಗಂತೂ ಇದು ನಂಬಲಸಾಧ್ಯ ಎನಿಸಿತ್ತು. ಆದರೆ ಹಸಿರುಮನೆಗಳಲ್ಲಿ ಬೆಳೆಸುವ ಬೆಳೆಗಳ ಇಳುವರಿ ಹೊರಗಿನ ಜಾಗದಲ್ಲಿ ಸಿಗುವ ಇಳುವರಿಗಿಂತ ಹಲವಾರು ಪಟ್ಟು ಹೆಚ್ಚಿರುತ್ತದೆ. ಹಾಗಾಗಿ ಜಾಗ ಕಡಿಮೆಯಿದ್ದರೂ ಆ ಮಟ್ಟದ ಉತ್ಪಾದನೆ ಸಾಧ್ಯ. ಇಷ್ಟೆಲ್ಲಾ ಧನಾತ್ಮಕ ಅಂಶಗಳ ಜೊತೆಗೆ ಈ ಹಸಿರುಮನೆಗಳಿಂದಲೂ ಅನಾನುಕೂಲತೆ ಇಲ್ಲದಿಲ್ಲ. ಅಲ್ಲಿನ ತಾಪಮಾನವನ್ನು ಕಾಯ್ದುಕೊಳ್ಳಲು ತುಂಬಾ ಶಕ್ತಿಯ ವ್ಯಯವಾಗುತ್ತದೆ. ಅದೃಷ್ಟವಶಾತ್ ಶಕ್ತಿಯ ಬಳಕೆಯನ್ನು ಸಾಂಪ್ರದಾಯಿಕ ವಿಧಾನದ ಬದಲಾಗಿ ಹೆಚ್ಚೆಚ್ಚು ಸೌರಶಕ್ತಿಯ, ಬಯೋ ಫ್ಯುಯೆಲ್ ಗಳ ಕಡೆ ಬದಲಾಯಿಸಲು ಈಗಾಗಲೇ ಹೆಜ್ಜೆಯಿಟ್ಟಾಗಿದೆ. 2020 ರ ವೇಳೆಗೆ ಎಲ್ಲಾ ಹಸಿರುಮನೆಗಳನ್ನೂ ಕಾರ್ಬನ್ ಮೋನಾಕ್ಸೈಡ್ ನಿಂದ ಮುಕ್ತ ಮಾಡಲು ನೆದರ್ ಲ್ಯಾಂಡ್ಸ್ ಸರಕಾರ ಆಗಲೇ ಕ್ರಮ ಕೈಗೊಂಡಿದೆ.

(Van Reeuwijk Fruits & Flowers ತೋಟದ ಅಂಗಡಿ)

ಕೃಷಿಯ ಬಗೆಗಿನ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ನೆದರ್ ಲ್ಯಾಂಡ್ಸ್ ತುಂಬಾ ಒತ್ತುನೀಡುತ್ತದೆ ಮತ್ತು ಸಾಕಾಗುವಷ್ಟು ಹಣ ಸುರಿಯುತ್ತದೆ. ಕೆಲವು ತರಕಾರಿ ಮತ್ತು ಹಣ್ಣುಗಳನ್ನು ಬಿಟ್ಟು ಉಳಿದೆಲ್ಲವುಗಳನ್ನೂ ಹಸಿರುಮನೆಯಲ್ಲಿಯೇ ಬೆಳೆಸಲಾಗುತ್ತದೆ. ಈ ಹಸಿರುಮನೆಗಳು ಸುಮಾರು ಹತ್ತು ಸಾವಿರ ಹೆಕ್ಟೇರ್ ಗಿಂತ ಹೆಚ್ಚು ಜಾಗದಲ್ಲಿ ನಿರ್ಮಿಸಲ್ಪಟ್ಟಿರುವಂಥವು. ಎಕರೆಗಟ್ಟಲೆ ವಿಸ್ತಾರವಾಗಿರುವ ಒಂದೊಂದು ಹಸಿರುಮನೆಯನ್ನೂ ಒಬ್ಬಿಬ್ಬರು ಮಾತ್ರ ನಿರ್ವಹಿಸುತ್ತಾರೆ. ಏಕೆಂದರೆ ಎಲ್ಲವೂ ಕಂಪ್ಯೂಟರ್ ಚಾಲಿತ ಮತ್ತು ಯಾಂತ್ರೀಕೃತವಾಗಿವೆ. ಬೆಳೆಯನ್ನು ಕಟಾವು ಮಾಡುವ ಸಮಯದಲ್ಲಿ ಮಾತ್ರ ಹಲವು ಜನ ಅಲ್ಲಿ ಕೆಲಸಮಾಡುತ್ತಾರೆ.

(ಹಸಿರುಮನೆಯಲ್ಲಿ ಬೆಳೆದ ಟೊಮೇಟೊ)

ಈ ಎಲ್ಲ ಚಟುವಟಿಕೆಗಳ ಮಾಹಿತಿಯನ್ನು ಸಾಮಾನ್ಯ ಜನರಿಗೆ ಸರಕಾರ ಒದಗಿಸುವ ರೀತಿಯೂ ವಿಭಿನ್ನ. ಪ್ರತಿವರ್ಷ ವಸಂತದಲ್ಲಿ ಏಪ್ರಿಲ್ ಮೊದಲನೇ ಶನಿವಾರ ಮತ್ತು ಭಾನುವಾರದಂದು ನೂರಾರು ಹಸಿರುಮನೆಗಳಿಗೆ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ. ಈ ಸಂದರ್ಭವನ್ನು ‘Kom in de kas’ ಎಂದು ಕರೆಯುತ್ತಾರೆ, ಅಂದರೆ ‘ಹಸಿರುಮನೆಯೊಳಗೆ ಬನ್ನಿ’ ಅಥವಾ ‘ಹಸಿರುಮನೆಗೆ ಸ್ವಾಗತ’ ಎಂದೆನ್ನಬಹುದು. ಕಳೆದ ಏಪ್ರಿಲ್ ನಲ್ಲಿ ತೋಟಗಾರಿಕೆ ಇಲಾಖೆ ನಡೆಸುವ ಈ ಕಾರ್ಯಕ್ರಮದಲ್ಲಿ ಸುಮಾರು ನೂರೈವತ್ತು ಕೃಷಿಕರು ತಮ್ಮ ಹಸಿರುಮನೆಗಳನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟಿದ್ದರು. ಎರಡು ದಿನಗಳಲ್ಲಿ 2,05,500 ಜನರು ಅಲ್ಲಿಗೆ ಭೇಟಿಯಿತ್ತು ಹಸಿರುಮನೆಗಳ ಬಗ್ಗೆ, ತರಕಾರಿ, ಹಣ್ಣು, ಹೂಗಳ ಕೃಷಿಯ ಬಗ್ಗೆ ಮಾಹಿತಿಪಡೆದರು, ಸ್ವತಃ ನೋಡಿ ಆನಂದಿಸಿದರು. ಈ ಕೃಷಿ ಚಟುವಟಿಕೆಗಳಲ್ಲಿ ಯಾವ ರೀತಿಯ ಆಧುನಿಕ ತಂತ್ರಜ್ಞಾನ ತಮ್ಮ ಊಹೆಯನ್ನೂ ಮೀರಿ ಬಳಕೆಯಾಗುತ್ತಿದೆ ಎಂಬುದನ್ನು ನೋಡಿ ಆಶ್ಚರ್ಯಪಟ್ಟರು.

ಪ್ರತಿವರ್ಷ ಏಪ್ರಿಲ್ ನಲ್ಲಿ ನಡೆಯುವ ಈ ಕಾರ್ಯಕ್ರಮ ಒಂದುವೇಳೆ ತಪ್ಪಿಹೋಯಿತೆಂದರೆ ಬೇಸರಿಸಬೇಕಿಲ್ಲ. ಹಲವಾರು ಕೃಷಿಕರು ತಮ್ಮ ಹಸಿರುಮನೆಗಳನ್ನು, ತೋಟಗಳನ್ನು ವರ್ಷವಿಡೀ ಜನರಿಗೆಂದು ತೆರೆದಿಡುತ್ತಾರೆ. ಭಾನುವಾರವೊಂದನ್ನು ಬಿಟ್ಟು ಉಳಿದೆಲ್ಲದಿನವೂ ಪ್ರವೇಶ ಸಾಧ್ಯ. ನಮಗೆ ಬೇಕಾದುದನ್ನು ನಾವೇ ಕಿತ್ತು ಮನೆಗೆ ತರಬಹುದು. ಅದನ್ನು zelfpluk (ಸ್ವತಃ ಕೀಳುವಂತದ್ದು) ಎಂದು ಕರೆಯುತ್ತಾರೆ. ಇಂಥ ಹಲವಾರು ತೋಟಗಳು, ಹಸಿರುಮನೆಗಳು ನೆದರ್ ಲ್ಯಾಂಡ್ಸ್ ನಲ್ಲಿವೆ. Van Reeuwijk Fruits & Flowers ಎಂಬ ಹೆಸರಿನ ಅಂಥ ಒಂದು ತೋಟಕ್ಕೆ ಮೊನ್ನೆ ಭೇಟಿಯಿತ್ತಿದ್ದೆವು. ಆ ತೋಟದಲ್ಲಿ ಎಷ್ಟೊಂದು ವಿಧದ ಹಣ್ಣು , ತರಕಾರಿ, ಹೂಗಳನ್ನು ಬೆಳೆಸಿದ್ದರು. ಮುಖ್ಯವಾಗಿ ಸ್ಟ್ರಾಬೆರಿ- ಅದನ್ನು ಹಸಿರುಮನೆಯಲ್ಲಿ ಬೆಳೆಸಿದ್ದರು. ಅದರ ಹೊರತಾಗಿ ಪ್ಲಮ್, ಬ್ಲಾಕ್ ಬೆರಿ, ಬ್ಲೂ ಬೆರಿ, ರಾಸ್ಪ್ ಬೆರಿ, ಚೆರ್ರಿ ಹೀಗೆ ಹಲವಾರು ರೀತಿಯ ಹಣ್ಣುಗಳನ್ನು ತೋಟದಲ್ಲಿ ಬೆಳೆಸಿದ್ದರು. ಅಷ್ಟೇ ಅಲ್ಲದೆ ಅವರೆಕಾಯಿ, ಬೀಟ್ ರೂಟ್ ಹಾಗೂ ಅನೇಕೆ ಬಗೆಯ ಹೂವುಗಳನ್ನೂ ಸಹ ಅವರು ಬೆಳೆದಿದ್ದರು.

(ಹಸಿರುಮನೆಯಲ್ಲಿ ಸ್ಟ್ರಾಬೆರಿ ಹಣ್ಣುಗಳು)

ಇವರ ವ್ಯಾಪಾರ ಮಾದರಿಯೇ ಕುತೂಹಲಕಾರಿ, ನಮಗಂತೂ ತುಂಬಾ ಇಷ್ಟವಾಯಿತು. ಈ ವಾರ ಏನೇನು ಹಣ್ಣು, ತರಕಾರಿ, ಹೂಗಳು ನಮಗೆ ಕಿತ್ತು ಕೊಂಡೊಯ್ಯಲು ಲಭ್ಯ ಎಂಬುದನ್ನು ಮೊದಲೇ ಅವರ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿರುತ್ತಾರೆ. ನಮ್ಮಿಷ್ಟದ ಹಣ್ಣು, ತರಕಾರಿ ಲಭ್ಯವಿದ್ದರೆ ನಾವು ಅಲ್ಲಿಗೆ ಹೋಗಬಹುದು. ಅವರ ತೋಟದಲ್ಲಿ ಒಂದು ಅಂಗಡಿ- ಅದರಲ್ಲಿ zelfpluk ಬಗ್ಗೆ ಮಾಹಿತಿ ಕೊಡುತ್ತಾರೆ, ನಮಗೆ ಬೇಕಾದ ತರಕಾರಿ ಅಥವಾ ಹಣ್ಣುಗಳಿಗೆ ಯಾವ ಹಸಿರುಮನೆಗೆ ಹೋಗಬೇಕು, ಅಥವಾ ತೋಟದಲ್ಲಿ ಎಲ್ಲಿ ಹೋಗಬೇಕು ಎಂದು ವಿವರಣೆ ಕೊಟ್ಟು ಕೈಗೊಂದು ಬುಟ್ಟಿಯನ್ನು ಕೊಡುತ್ತಾರೆ. ನಂತರ ನಮ್ಮ ಪಾಡಿಗೆ ನಾವು ತೋಟದಲ್ಲಿ, ಹಸಿರುಮನೆಯಲ್ಲಿ ಸುತ್ತಾಡಿ ನಮ್ಮಿಷ್ಟದ ಹಣ್ಣು, ತರಕಾರಿ, ಹೂಗಳನ್ನು ಕೀಳಬಹುದು. ಆದರೆ ಅಲ್ಲಿಯೇ ತಿನ್ನುವಂತಿಲ್ಲ.

(ಹಸಿರುಮನೆಯಲ್ಲಿ ಕಟಾವಾದ ನಂತರ ಸೌತೇಕಾಯಿಗಳು)

ನಮಗೆ ಸಾಕೆನಿಸಿದಾಗ ಪುನಃ ಅವರ ಅಂಗಡಿಯ ಬಳಿಬಂದು ನಾವು ಕಿತ್ತಿದ್ದನ್ನು ತೂಕ ಮಾಡಿಸಿಕೊಂಡು, ಹಣ ಕೊಟ್ಟು, ತಾಜಾ ಹಣ್ಣುಗಳನ್ನು ಮನಸಾರೆ ಸವಿಯಬಹುದು. ಅವರ ತೋಟ ಬೆಳಿಗ್ಗೆ ಎಂಟರಿಂದ ಸಂಜೆ ಐದು ಗಂಟೆಯವರೆಗೂ ತೆರೆದಿರುತ್ತದೆ. ಅವರ ತೋಟದಲ್ಲಿಯೇ ಒಂದು ಚಿಕ್ಕ ಕೆಫೆ ಇರುತ್ತದೆ. ಅಲ್ಲಿ ಬಗೆಬಗೆಯ ಕೇಕುಗಳು, ಬ್ರೆಡ್ ಸ್ಯಾಂಡ್ವಿಚ್, ಚಹಾ, ಕಾಫಿ ಎಲ್ಲವೂ ದೊರೆಯುವುದರಿಂದ ಹಸಿವೆಯ ಗೊಡವೆಯಿರುವುದಿಲ್ಲ. ಅದ್ಯಾವುದನ್ನೂ ತಿನ್ನಲಿಷ್ಟವಿಲ್ಲದಿದ್ದರೂ ಆಗ ತಾನೇ ಕೈಯ್ಯಾರೆ ಕಿತ್ತ ತಾಜಾ ಹಣ್ಣುಗಳನ್ನೇ ಹೊಟ್ಟೆತುಂಬಾ ತಿಂದುಬಿಡಬಹುದು! ಅಂಥ ತೋಟದಲ್ಲಿಯೂ ಚೊಕ್ಕಟವಾಗಿಟ್ಟ ಟಾಯ್ಲೆಟ್ ಗಳು ಬೇರೆ ಇರುತ್ತವೆ! ಬೆಳಿಗ್ಗೆ ಹೋದೆವೆಂದರೆ ಸಂಜೆಯತನಕ ಹಾಯಾಗಿ ತೋಟದಲ್ಲಿ ಸಮಯಕಳೆದು ಬರಬಹುದು. ನಾವು ಭೇಟಿಯಿತ್ತ ದಿನ ಎಷ್ಟೋ ಜನರು ಬಂದು ತಾವೇ ಕಿತ್ತ ಹಣ್ಣು, ತರಕಾರಿಗಳನ್ನು ಕೊಂಡೊಯ್ಯುತ್ತಿದ್ದುದು ಕಂಡುಬಂತು. ಮಕ್ಕಳಿಗಂತೂ ಈ ಜಾಗವೆಂದರೆ ತುಂಬಾ ಇಷ್ಟ. ಹಣ್ಣು ತರಕಾರಿಗಳು ಸೂಪರ್ ಮಾರ್ಕೆಟ್ ನಲ್ಲಿಯೇ ತಯಾರಾಗುತ್ತವೆ ಎಂದು ಕಲ್ಪನೆಯನ್ನಿಟ್ಟುಕೊಂಡು ಬೆಳೆಯುತ್ತಿರುವ ಇಂದಿನ ಶಹರದ ಮಕ್ಕಳಿಗೆ ಈ ವಿಧಾನ ನಿಜವಾಗಿಯೂ ಕೃಷಿಯ ಬಗೆಗೆ ಅವರಿಗೆ ಶಿಕ್ಷಣವನ್ನೊದಗಿಸುತ್ತದೆ, ಪ್ರಕೃತಿಯನ್ನು ಪ್ರೀತಿಸುವುದನ್ನು ಕಲಿಸುತ್ತದೆ. ಹಾಗಾಗಿ ಇಂಥ ತೋಟಗಳ ಸಂಖ್ಯೆ ಜಾಸ್ತಿಯಾದಷ್ಟೂ ಒಳ್ಳೆಯದು ಎನಿಸಿತು.

(Van Reeuwijk Fruits & Flowers ತೋಟದಲ್ಲಿ ಬೆಳೆದ ಪ್ಲಮ್ ಹಣ್ಣುಗಳು)

ಜನರಿಗೆ ಸಣ್ಣಪುಟ್ಟ ಕೃಷಿಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು, ಮಕ್ಕಳಿಗೆ ಈ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡುವಂತಾಗಲು ಮತ್ತು ಆ ಚಟುವಟಿಕೆಗಳಲ್ಲಿ ಸ್ವತಃ ಭಾಗವಹಿಸುವಂತಾಗಲು ನೆದರ್ ಲ್ಯಾಂಡ್ಸ್ ಸರಕಾರ ನಡೆಸುವ ಒಂದು ಯೋಜನೆಯೆಂದರೆ ಸಾಮೂಹಿಕ ಹೂದೋಟ (community garden). ನಗರಗಳಲ್ಲಿ ಒಂದಿಷ್ಟು ಖಾಲಿಯಿರುವ ಜಾಗದಲ್ಲಿ ಪುಟ್ಟ ಪ್ಲಾಟ್ (plot) ಗಳನ್ನು ಮಾಡಿ ಅದನ್ನು ಜನರಿಗೆ ಹಂಚಿಕೆ ಮಾಡಿರುತ್ತಾರೆ. ಅಲ್ಲಿ ಕುಟುಂಬಸಮೇತ ಬಂದು ತಮಗೆ ಇಷ್ಟದ ತರಕಾರಿ, ಹಣ್ಣು, ಹೂವುಗಳನ್ನು ಬೆಳೆದುಕೊಳ್ಳಬಹುದು. ಮಕ್ಕಳಂತೂ ಈ ಕೆಲಸದಲ್ಲಿ ಖುಷಿಯಿಂದ ಭಾಗವಹಿಸುತ್ತಾರೆ. ಅನೇಕ ಬಾರಿ ಆ ಜಾಗದಲ್ಲಿ ಕೃಷಿ ಮಾಡುತ್ತಿರುವವರೆಲ್ಲಾ ಸೇರಿ ಗಿಡಗಳನ್ನು ಬೆಳೆಸುತ್ತಾರೆ, ಜೊತೆಯಾಗಿ ಕೆಲಸಮಾಡುವ ಮೂಲಕ ಪರಸ್ಪರ ಬಾಂಧವ್ಯ ಬೆಳೆಸಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ಅಲ್ಲಿ ಒಟ್ಟಾಗಿ ಹಲವಾರು ಉತ್ಸವಗಳನ್ನು ಆಚರಿಸುತ್ತಾರೆ. ಇದೆಲ್ಲದರಿಂದಾಗಿ ಮಕ್ಕಳಿಗೆ ಜನರ ಜೊತೆ ಬೆರೆಯುವುದು, ಗುಂಪಿನಲ್ಲಿ ಕೆಲಸ ಮಾಡುವುದು ಕೂಡ ಅಭ್ಯಾಸವಾಗುತ್ತದೆ.

(ಸಮುದಾಯ ತೋಟವೊಂದರಲ್ಲಿ ಕೀಟಗಳಿಗೆಂದು ನಿರ್ಮಿಸಿದ ಮನೆ: ಚಿತ್ರಗಳು: ಚೈತ್ರಾ ಹೆಗಡೆ ಮತ್ತು ರಾಜೀವ ಭಟ್)

ನಾನಂತೂ ಮಲೆನಾಡಿನಲ್ಲಿ ಅಪ್ಪನ ತೋಟ ಗದ್ದೆಗಳಲ್ಲಿ ಅಲೆದಾಡಿ ಬಾಲ್ಯವನ್ನು ಕಳೆದವಳು. ಕಾಡಿನ ದಾರಿಯಲ್ಲಿ ನಡೆದು ಶಾಲೆಗೆ ಹೋಗುವಾಗ ಹಲವಾರು ಬಗೆಯ ಹಣ್ಣುಗಳನ್ನು ಗಿಡದಿಂದಾಗಲೀ ಅಥವಾ ಮರ ಹತ್ತಿಯಾಗಲೀ ಕಿತ್ತು ತಿಂದು ಬೆಳೆದವಳು. ಮಳೆಗಾಲದಲ್ಲಿ ಬೆಟ್ಟದಲ್ಲಿ ದನ ಮೇಯಿಸುವುದನ್ನು, ಗದ್ದೆ ನಾಟಿಮಾಡುವುದನ್ನು ಮನಸಾರೆ ಆನಂದಿಸಿದವಳು. ಹಲವಾರು ಗಿಡಗಳನ್ನು ಕೈಯ್ಯಾರೆ ನೆಟ್ಟು, ನೀರುಣಿಸಿ, ಅವು ಬೆಳೆದು ಹೂವು, ಕಾಯಿ ಬಿಡುವುದನ್ನು ನೋಡಿ ಖುಷಿಪಟ್ಟವಳು. ಆದರೆ ಈಗಿನ ನಗರದ ಭರಾಟೆಯ ಜೀವನದಲ್ಲಿ ಮಕ್ಕಳಿಗೆ ಪ್ರಕೃತಿಯ ಜೊತೆಗೆ ನಂಟೇ ಬರುವುದಿಲ್ಲ, ಎಲ್ಲೋ ಅಲ್ಪಸ್ವಲ್ಪ ಇದ್ದರೂ ಅದು ಕಾರು, ಕಂಪ್ಯೂಟರ್, ಮೊಬೈಲ್ ಫೋನ್ ಗಳ ಉಪಯೋಗದ ನಡುವೆಯೇ ಕಳೆದುಹೋಗಿರುತ್ತದೆ. ಇಂದಿನ ಮಕ್ಕಳನ್ನು ‘ಹಾಲು ಎಲ್ಲಿಂದ ಬರುತ್ತದೆ’ ಎಂದು ಕೇಳಿದರೆ ‘ಫ್ರಿಡ್ಜ್ ನಿಂದ’ ಎಂದೋ ಅಥವಾ ‘ಸೂಪರ್ ಮಾರ್ಕೆಟ್’ ನಿಂದ ಎಂದೋ ಹೇಳುವುದನ್ನು ನೋಡಿದರೆ ನನಗೆ ತೀವ್ರ ಕಳಕಳಿಯಾಗುತ್ತದೆ. ನಮ್ಮಲ್ಲಿಯ ನಗರಗಳಲ್ಲಿ ಬೆಳೆಯುತ್ತಿರುವ ಮಕ್ಕಳ ಬಳಿ ಒಮ್ಮೆ ಕೇಳಿ ನೋಡಿ – ‘ಸೌತೆಕಾಯಿ ಎಲ್ಲಿ ಬಿಡುತ್ತದೆ’ ಎಂದು. ಅದು ಮರದಲ್ಲಿಯೋ, ಗಿಡದಲ್ಲಿಯೋ ಅಥವಾ ಬಳ್ಳಿಯಲ್ಲಿಯೋ ಎಂದು ಅರ್ಧದಷ್ಟು ಮಕ್ಕಳಿಗೆ ಗೊತ್ತಿರುವುದಿಲ್ಲ.


ಮೊನ್ನೆ ನನ್ನ ನಾಲ್ಕು ವರ್ಷದ ಮಗ ಮಾಧವ ‘ಜೇನು ಹುಳು ಬಂದರೆ ಅದನ್ನು ಷೂ ಷೂ ಎಂದು ಓಡಿಸಿಬಿಡುತ್ತೇನೆ’ ಎಂದ. ನಾನು ಅವನ ಬಳಿ ‘ನೀನದನ್ನು ಓಡಿಸಿದರೆ ನಿನಗೆ ಜೇನುತುಪ್ಪ ಹೇಗೆ ಸಿಗುತ್ತದೆ’ ಎಂದು ಕೇಳಿದೆ. ಅದಕ್ಕವ ‘ಸೂಪರ್ ಮಾರ್ಕೆಟ್ ನಿಂದ ತಂದರಾಯಿತು’ ಎಂದ. ವರ್ಷಕ್ಕೊಮ್ಮೆ ಮಲೆನಾಡಿನ ಅಜ್ಜನಮನೆಗೆ ಹೋಗಿಬಂದರೆ ಮಾತ್ರ ಸಾಲದು, ಅವನು ಅಲ್ಲಿಯೇ ಬೆಳೆಯಬೇಕು ಎಂಬ ವಿಷಯ ನನಗೆ ಖಚಿತವಾಯಿತು. ಹಾಗಾಗಿ ನಾವಿನ್ನು ಇಲ್ಲಿರುವ ಕೆಲವರ್ಷಗಳಲ್ಲಿ Van Reeuwijk ತೋಟಗಳಂತ ಜಾಗಕ್ಕೆ ಸಾಧ್ಯವಾದಷ್ಟು ಬಾರಿ ಭೇಟಿನೀಡುತ್ತಿರಬೇಕೆಂದು ನಿರ್ಧರಿಸಲು ಒಂದು ಕ್ಷಣಕ್ಕಿಂತ ಜಾಸ್ತಿ ಬೇಕಾಗಲಿಲ್ಲ!