ಸರಿ ಸುಮಾರು ಹತ್ತು ವರ್ಷಗಳ ನಾನು ಬರೆದ ಬರಹವೊಂದರ ಅಂಧ ಗಾಯಕಿಯನ್ನು ನಿನ್ನೆ ಸಂಜೆ ಭೇಟಿಯಾದಾಗ ಆಕೆ ಎಲ್ಲವನ್ನೂ ಮರೆತು ಹೋಗಿದ್ದಳು. ಎಲ್ಲವನ್ನು ಅಂದರೆ ಎಲ್ಲವನ್ನೂ. ಆಕೆಯ ತಾಯಿ, ಒಡಹುಟ್ಟಿದ ಮೂವರು ಸಹೋದರಿಯರು, ಭಾಲ್ಯಕಾಲದ ಒಂದಿಬ್ಬರು ಗೆಳತಿಯರ ಹೆಸರುಗಳು ಮತ್ತು ಹೈಸ್ಕೂಲಿನಲ್ಲಿ ಎಲ್ಲರೂ ಒಂದಾಗಿ ಎದ್ದುನಿಂತು ಹಾಡುತ್ತಿದ್ದ ಕನ್ನಡದ ಒಂದು ಪ್ರಾರ್ಥನಾ ಗೀತೆ ಇಷ್ಟು ಬಿಟ್ಟರೆ ಆಕೆ ಬೇರೆಲ್ಲವನ್ನೂ ಮರೆತಿದ್ದಳು. ಹುಟ್ಟಿನಿಂದಲೇ ಅಂಧಳಾಗಿದ್ದ ಈಕೆಯ ಮಿದುಳಿನ ಒಳಕ್ಕೆ ಸೋಂಕಿನ ವೈರಾಣುಗಳು ಹೊಕ್ಕು ಆಕೆ ಉಳಿದ ಎಲ್ಲವನ್ನೂ ಮರೆತು ಹೋಗಿದ್ದಳು. ಬಹಳ ಚಿರಪರಿಚಿತನಾಗಿದ್ದ. ನನ್ನ ಹೆಸರನ್ನೂ, ಉದ್ಯೋಗವನ್ನೂ, ವಿದ್ಯಾಭ್ಯಾಸವನ್ನೂ ಮತ್ತು ಆಕೆಗೆ ನಾನು ಹೇಗೆ ಪರಿಚಿತ ಎಂಬುದನ್ನೂ ಮತ್ತೆ ಮತ್ತೆ ಕೇಳಿ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಳು. ಎಷ್ಟು ನೆನಪಿಟ್ಟುಕೊಂಡರೂ ಅದು ಮರೆತು ಹೋಗುತ್ತಿದೆ ಎಂದು ಗೊತ್ತಾದಾಗ ಆಕೆ ಬೋರೆಂದು ಅಳಲು ಶುರು ಮಾಡಿದ್ದಳು.
ಮೈಸೂರಿನ ಒಂದು ಮುಸಲ್ಮಾನ ಮೊಹಲ್ಲಾದ ಬೀದಿ. ಆಷಾಡದ ಮೂರನೇ ಶುಕ್ರವಾರವೂ ರಮಜಾನಿನ ಮೂರನೇ ಶುಕ್ರವಾರವೂ ಒಂದಾಗಿರುವ ಜಿಟಿಜಿಟಿಮಳೆಯ ಸಂಜೆ. ಉಪವಾಸದ ಹಸಿವೂ, ಆಷಾಡದ ಭಕ್ತಿಯೂ ಒಂದಾದಂತಿರುವ ಕೋಣೆಯೊಳಗಿನ ಮಂಕು ಮಂಕು ಬೆಳಕು. ತನಗೆ ಏನೂ ನೆನಪಾಗುತ್ತಿಲ್ಲ ಎಂದು ಅಳುತ್ತಿದ್ದವಳು ಅಳು ನಿಲ್ಲಿಸಿ ‘ಅದೆಲ್ಲ ಹೋಗಲಿ ಬಿಡಿ, ನಾನು ನೋಡಲು ಚಂದವಿದ್ದೇನಾ ಅದನ್ನಾದರೂ ಹೇಳಿ’ ಎಂದು ಕೇಳಿದಳು.
‘ನೀನು ಮೊದಲಿನಿಂದಲೇ ಚಂದವಿದ್ದವಳು. ಈಗ ಇನ್ನೂ ಚಂದವಾಗಿದ್ದೀಯಾ’ ಎಂದು ಹೇಳಿದೆವು. ‘ಹೌದಾ ಹೌದಾ’ ಎಂದು ಆಕೆ ಸಂಭ್ರಮಿಸತೊಡಗಿದಳು. ಆಮೇಲೆ ಇದ್ದಕ್ಕಿದ್ದಂತೆ ಮೌನವಾದಳು. ‘ಇಲ್ಲ ಇಲ್ಲ ನಾನು ನಯಾ ಪೈಸ ಚಂದವಿಲ್ಲ. ನಾನು ಚಂದವೂ ಇಲ್ಲ.ಯಾರಿಗೂ ಪ್ರಯೋಜನವೂ ಇಲ್ಲ. ನಾವು ನಾಲ್ಕು ಜನ ಅಂಧ ಹಾಡುಗಾರ್ತಿಯರಲ್ಲಿ ನಾನೇ ಎಲ್ಲರಿಗಿಂತ ನಿಷ್ಪ್ರಯೋಜಕಿ’ ಎಂದು ಎದೆ ಬಡಿದುಕೊಂಡು ಅಳಲು ತೊಡಗಿದ್ದಳು. ‘ಕಳೆದ ಎರಡು ವರ್ಷಗಳಿಂದ ಇವಳ ಅಳುವೂ ಆಟವೂ ಹೀಗೆಯೇ ದಿನವೂ ನಡೆಯುತ್ತಿದೆ. ನನಗಂತೂ ಸಾಕು ಸಾಕಾಗಿ ಹೋಗಿದೆ.. ಅಲ್ಲಾ ಏನು ಮಾಡುವುದೋ ಗೊತ್ತಾಗುತ್ತಿಲ್ಲ. ’ ಎಂದು ಒಂದು ಕಾಲದ ನವಾಬೀ ಸುಂದರಿಯಂತೆ ಕಾಣಿಸುತ್ತಿದ್ದ ಆಕೆಯ ಅಮ್ಮ ತಾನೂ ನಿಟ್ಟುಸಿರುಬಿಟ್ಟಳು.
ಅಮ್ಮನ ನಿಟ್ಟುಸಿರು ಕೇಳಿದ ಮಗಳು ಅಳು ನಿಲ್ಲಿಸಿ. ‘ನಿನ್ನ ಹೆಸರೇನು?’ ಎಂದು ಮತ್ತೆ ಕೇಳಿದಳು. ಹೇಳಿದೆ. ‘ನಿಮ್ಮ ಹೆಸರಿನ ಅರ್ಥವೇನು?’ ಎಂದು ಕೇಳಿದಳು. ಹೇಳಿದೆ. ‘ನನ್ನ ಹೆಸರು ಗೊತ್ತಾ?’ ಕೇಳಿದಳು. ಹೇಳಿದೆ. ‘ನನ್ನ ಹೆಸರಿನ ಅರ್ಥವೇನು ಗೊತ್ತಾ?” ಕೇಳಿದಳು.
ಅದನ್ನೂ ಮತ್ತೆ ಹೇಳಿದೆ. ‘ನೀವು ನನಗೆ ಏನಾಗಬೇಕು ಹೇಳಿ. ಬೇಸರ ಮಾಡಬೇಡಿ. ನನಗೆ ಏನೋ ಮಿದುಳಿನ ಕಾಯಿಲೆಯಾಗಿದೆ. ಹಾಗಾಗಿ ದಯವಿಟ್ಟು ಹೇಳಿ’ ಎಂದು ಕೇಳಿದಳು. ‘ನಾನು ಒಂದು ಕಾಲದಲ್ಲಿ ನೀವು ಹಾಡುತ್ತಿದ್ದ ಭಾವಗೀತೆಗಳ ಗುಲಾಮನಾಗಿದ್ದೆ. ಕೇಳಲು ಬರುತ್ತಿದ್ದೆ. ನಿಮ್ಮನ್ನು ರೇಡಿಯೋದಲ್ಲಿ ಹಾಡಿಸಿದ್ದೆ. ಅದನ್ನು ಕೇಳಿದ ಬಹಳಷ್ಟು ಜನ ಮೆಚ್ಚಿದ್ದರು. ನೀವು ಮೈಸೂರಿನ ಖ್ಯಾತ ಹಾಡುಗಾರ್ತಿ ಸಹೋದರಿಯಾಗಿದ್ದಿರಿ. ಆಮೇಲೆ ನಿಮ್ಮ ಬಗ್ಗೆ ನಾನು ಅಂಕಣವನ್ನೂ ಬರೆದಿದ್ದೆ. ಓದುಗರು ಅದನ್ನೂ ಓದಿ ಖುಷಿಪಟ್ಟಿದ್ದರು. ಈಗ ನೆನಪಾಗುತ್ತಿದೆಯಾ?’ ಎಂದು ಕೇಳಿದೆ. ಆಕೆಗೆ ಏನೇನೂ ನೆನಪಾಗುತ್ತಿರಲಿಲ್ಲ. ಆದರೆ ಆಕೆಯ ಅಮ್ಮನೂ ಸಹೋದರಿಯರೂ ನೆನಪಿಟ್ಟುಕೊಂಡು ಈಕೆಯ ಮರೆಗುಳಿತನಕ್ಕೆ ಮರುಗುತ್ತಿದ್ದರು.ಮತ್ತು ಈಕೆಯ ನಿರಂತರ ಪ್ರಶ್ನೆಗಳಿಗೆ ಒಳಗೊಳಗೆ ನಗುತ್ತಿದ್ದರು. ಏಕೆಂದರೆ ಈಕೆ ಸ್ವಲ್ಪ ಹೊತ್ತಿಗೆ ಮೊದಲು ‘ಓ ನೀನಲ್ಲವಾ ನನಗೆ ಪ್ರೇಮ ಪತ್ರಗಳನ್ನು ಬರೆಯುತ್ತಿದ್ದವನು’ ಎಂದು ತಪ್ಪಿ ಕೇಳಿಬಿಟ್ಟಿದ್ದಳು. ‘ಅಯ್ಯೋ ಅದು ನಾನಲ್ಲ’ ಎಂದಾಗ ತಪ್ಪಿನ ಅರಿವಾಗಿ ನಾಚಿಕೊಂಡಿದ್ದಳು.
ಸುಮಾರು ಹತ್ತು ವರ್ಷಗಳ ಹಿಂದೆ ಇಂತಹದೇ ಒಂದು ಸಂಜೆ. ಆಗಲೂ ಆಕೆ ನನ್ನ ಹೆಸರಿನ ಅರ್ಥ ಕೇಳಿದ್ದಳು. ನಾನು ‘ನನ್ನ ಹೆಸರಿನಲ್ಲಿರುವ ಮೊದಲ ಪದಕ್ಕೆ ಗುಲಾಮ ಎಂಬ ಅರ್ಥ. ಎರಡನೆಯದಕ್ಕೆ ಸನ್ಮಾರ್ಗದಲ್ಲಿ ನಡೆಯುವವನು ಎಂದರ್ಥ ಎಂದಿದ್ದೆ. ಅಂದರೆ ನಾನು ಸನ್ಮಾರ್ಗದಲ್ಲಿ ನಡೆಯುವವರ ಗುಲಾಮ ಆದರೆ ಸ್ವತಃ ಸನ್ಮಾರ್ಗಿ ಅಂತ ಅಲ್ಲ’ ಅಂದಿದ್ದೆ. ಆಕೆಯೂ ಆಕೆಯ ಹೆಸರು ಹೇಳಿ ಅದರ ಅರ್ಥ ಸ್ವರ್ಗದಲ್ಲಿರುವ ಸುಂದರ ಉದ್ಯಾನವನ ಎಂದು ಎಂದಿದ್ದಳು.
‘ನೋಡುವವರಿಗೆ ಉದ್ಯಾನವನ ಕಾಣಲು ಕಣ್ಣಿದ್ದರೆ ಸಾಕು. ಉದ್ಯಾನವನಕ್ಕೆ ಕಣ್ಣು ಕಾಣಿಸಬೇಕು ಎಂದೇನೂ ಇಲ್ಲವಲ್ಲ’ ಎಂದು ನಕ್ಕಿದ್ದಳು. ‘ಕಣ್ಣು ಕಾಣಿಸದ ಉದ್ಯಾನವನ ಮತ್ತು ಸನ್ಮಾರ್ಗಿಯಲ್ಲದ ಗುಲಾಮ’ ಎಂದು ನಾವೆಲ್ಲರೂ ನಕ್ಕಿದ್ದೆವು. ಹತ್ತು ವರ್ಷಗಳ ಹಿಂದೆ ನಾನು ಅವರ ಬಳಿ ಹೋಗಿದ್ದು ಇನ್ನು ಮುಂದೆ ಕನ್ನಡದಲ್ಲಿ ಹಾಡುವುದೇ ಇಲ್ಲ ಎಂದು ಹಠತೊಟ್ಟಿದ್ದ ಅವರನ್ನು ಕಾಡಿಬೇಡಿ ಮತ್ತೆ ರೇಡಿಯೋದಲ್ಲಿ ಹಾಡಿಸಲು. ಆದರೆ ಎಷ್ಟು ಬೇಡಿದರೂ ಅವರು ಹಾಡಲು ಒಪ್ಪದೆ ನಿನಗೆ ಬೇಕಾದರೆ ಹಾಡುತ್ತೇವೆ. ಆದರೆ ರೇಡಿಯೋದಲ್ಲಿ ಹಾಡಲಾರೆವು ಎಂದು ಖಡಾಖಂಡಿತವಾಗಿ ನುಡಿದಿದ್ದರು.
ಆ ಸಂಜೆ ನನಗೆ ಇನ್ನೂ ನೆನಪಿದೆ. ಪರದೆ ಇಳಿಬಿಟ್ಟ ಸಣ್ಣಗಿನ ಬೆಳಕಿನ ಇಂತಹದೇ ಆ ಸಂಜೆ ಈ ಮುಸಲ್ಮಾನ ಸಹೋದರಿಯರು ಒಂದೇ ದನಿಯಲ್ಲಿ ಒಂದೇ ಮನಸ್ಸಿನಲ್ಲಿ ಒಂದೇ ಆತ್ಮ ಹಾಡುತ್ತಿದೆ ಎನ್ನುವ ಹಾಗೆ ಕನ್ನಡದ ಒಂದೊಂದೇ ಹಾಡುಗಳನ್ನು ಮಗುವೊಂದನ್ನು ಎತ್ತಿಕೊಳ್ಳುವಂತೆ, ಆ ಮಗುವನ್ನು ತೋಳಿನಿಂದ ತೋಳಿಗೆ ಬದಲಿಸುತ್ತಿರುವಂತೆ, ಆ ಮಗುವಿನ ಕಣ್ಣುಗಳನ್ನು ಒಬ್ಬೊಬ್ಬರಾಗಿ ದಿಟ್ಟಿಸಿ ನೋಡುತ್ತಿರುವಂತೆ ಹಾಡಿದ್ದರು. ನಾನು ಕಣ್ಣು ತುಂಬಿಕೊಂಡು ಅವರನ್ನು ನೋಡುತ್ತಿದ್ದೆ. ಈ ಹಾಡುಗಳು ಯಾವುದೂ ಅರ್ಥವಾಗದೇ ಹೋಗಿದ್ದಿದ್ದರೆ, ಕಣ್ಣುಗಳು ಮಸುಕಾಗಿರುವ ನನಗೆ ಅವರ ಹಾಡಿನ ಕಣ್ಣುಗಳು ಬಂದಿದ್ದರೆ, ಇವರ ಹಾಗೆ ನಾನೂ ಒಂದು ಕೊಳೆಯಿಲ್ಲದ ಆತ್ಮವಾಗಿ ಎಲ್ಲ ಕಡೆ ಸುಳಿದಾಡುವಂತಿದ್ದರೆ ಎಂದು ಹಂಬಲಿಸಿಕೊಂಡು ಕೂತಿದ್ದೆ. ಅವರು ಹಾಡುವುದನ್ನು ನಿಲ್ಲಿಸಿ ‘ಎಲ್ಲರಿಗಾಗಿ ಇನ್ನು ಹಾಡುವುದಿಲ್ಲ. ನಮ್ಮಷ್ಟಕ್ಕೆ ಹಾಡುತ್ತಿರುತ್ತೇವೆ, ನಿನಗೆ ಬೇಕಿದ್ದರೆ ಬಂದು ಕೇಳಿಕೊಂಡು ಹೋಗು’ ಎಂದು ಕಳಿಸಿದ್ದರು.
ಈ ನಡುವೆ ನಾನೂ ಎಲ್ಲರನ್ನೂ ಎಲ್ಲವನ್ನೂ ಮರೆತು ಯಾವ್ಯಾವುದೋ ಮೋಹಗಳ ಹಿಂದೆ ದನಗಾಹಿಯಂತೆ ಅಲೆಯುತ್ತಾ ಇಷ್ಟು ವರ್ಷಗಳನ್ನು ಕಳೆದುಬಿಟ್ಟಿದ್ದೆ. ಈ ನಡುವೆ ಕಳೆದು ಹೋಗುತ್ತಿರುವ ಇರುಳುಗಳನ್ನು ಹಿಡಿದಿಟ್ಟುಕೊಳ್ಳಲೋ ಎಂಬಂತೆ ಬಂದಿರುವ ಫೇಸ್ ಬುಕ್. ಫೇಸ್ ಬುಕ್ಕಿನಲ್ಲಿ ನನ್ನನ್ನ ಕಂಡು ಹಿಡಿದ ಹಿರಿಯ ಅಂಧ ಸಹೋದರಿ ನನಗೊಂದು ಸಂದೇಶವನ್ನು ಕಳಿಸಿದ್ದಳು. ನಿನ್ನನ್ನು ಸದಾ ನೆನೆದುಕೊಳ್ಳುತ್ತಿದ್ದ ನನ್ನ ತಂಗಿ ಉದ್ಯಾನವನದ ಹೆಸರಿನವಳಿಗೆ ಮಿದುಳಿನ ಸೋಂಕು ತಗಲಿ ಎಲ್ಲ ಮರೆತು ಹೋಗಿದೆಯೆಂದೂ ಗುಲಾಮನ ಹೆಸರಿನವನಾದ ನೀನು ಒಂದು ಸಲ ಬಂದು ನೋಡಿದ್ದರೆ ಒಳಿತಾಗುತ್ತಿತ್ತೆಂದೂ ಆ ಸಂದೇಶದಲ್ಲಿ ಹೇಳಿದ್ದಳು. ನಿನ್ನೆ ಹೋಗಿ ನೋಡಿದರೆ ಆಕೆ ಉದ್ಯಾನವನ್ನೂ ಸನ್ಮಾರ್ಗವನ್ನೂ ಎಲ್ಲವನ್ನೂ ಮರೆತು ಪುಟ್ಟ ಬಾಲಕಿಯಂತೆ ನನಗೆ ಚಾಕೋಲೇಟ್ ತಂದುಕೊಡು ಎಂದು ಪೀಡಿಸುತ್ತಿದ್ದಳು.
`ಒಂದಾದರೂ ಹಾಡು ಹೇಳಿದರೆ ತಂದುಕೊಡುವೆ’ ಅಂದೆ. ಆಕೆಗೆ ಒಂದು ಹಾಡೂ ನೆನಪಾಗುತ್ತಿರಲಿಲ್ಲ. ರಮಜಾನಿನ ಪವಿತ್ರ ತಿಂಗಳಾದುದರಿಂದ ಉಳಿದ ಸಹೋದರಿಯರೂ ಹಾಡಲಿಲ್ಲ. ಕೊನೆಗೆ ‘ಆಯಿತು ಹಾಡುತ್ತೇನೆ’ ಎಂದು ಆಕೆ ತನಗೆ ನೆನಪಿದ್ದ ಒಂದೇ ಒಂದು ಚರಣ ಹಾಡಿದಳು. ಆದು ಆಕೆಯ ಸಹಪಾಠಿ ಎಂಟನೇ ಕ್ಲಾಸಿನಲ್ಲಿ ಹಾಡುತ್ತಿದ್ದ ಹಾಡು ‘ಹರಿ ನೀನೆ ಗತಿಯೆಂದು ನೆರೆನಂಬಿ ಬದುಕಿರುವೆ ಮರೆತಿರುವುದು ನ್ಯಾಯವೇ’ ಅದು ಯಾಕೆ ಗೊತ್ತಿಲ್ಲ, ಆಕೆಗೆ ನೆನಪಿರುವುದು ಅದೊಂದೇ ಹಾಡು. ಅದನ್ನೇ ಮತ್ತೆ ಮತ್ತೆ ಹಾಡಿದಳು. ಆಕೆಗೆ ಒಂದು ಒಳ್ಳೆಯ ಚಾಕೋಲೇಟು ಕೊಟ್ಟೆ. ಉಪವಾಸ ಮುಗಿಸಿ ಸಂಜೆ ತಿನ್ನುವೆನೆಂದು ಇಟ್ಟುಕೊಂಡಳು. ಬೀಳ್ಕೊಡುವಾಗ ತಲೆಯ ಮೇಲೆ ಕೈ ಇಟ್ಟು ಹರಸು ಎಂದು ಕೇಳಿದಳು. ಆಕೆಯ ತಲೆಯ ಮೇಲೆ ಕೈಯಿಟ್ಟು ಏನೋ ಬೇಡಿಕೊಂಡೆ. ಅದೇನು ಬೇಡಿಕೊಂಡೆ ಎಂದು ನನ್ನ ಉಸಿರಿರುವರೆಗೆ ಯಾರಿಗೂ ಗೊತ್ತಾಗದಿರಲಿ ಎಂದೂ ಬೇಡಿಕೊಂಡೆ.
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.