ರಹಮಾನ್ ಖಾನ್ ಅದೇನೋ ಹೇಳಿದ. ನಂತರ ನನಗೆ ಮಾತನಾಡಲು ತಿಳಿಸಿದ. ಅದು ನನ್ನ ಕೊನೆಯ ಭಾಷಣ ಎಂದು ಭಾವಿಸಿದೆ. ಬದುಕುಳಿಯುವ ಯಾವ ಸಾಧ್ಯತೆಯೂ ಇಲ್ಲ ಎನಿಸಿತು. ಅವರೆಲ್ಲ ‘ಏನು ಮಾತನಾಡ್ತಿಯೋ ನೋಡೋಣ’ ಎಂದು ಅಂದುಕೊಂಡವರ ಹಾಗೆ ಕುಳಿತಿದ್ದರು. ಅಂದೇ ಪ್ರಕಟವಾದ ಸಾಪ್ತಾಹಿಕ ಪುರವಣಿಯ ಪ್ರತಿ ಕೈಯಲ್ಲಿತ್ತು. ಆ ನನ್ನ ಲೇಖನ ಇಡೀ ಮುಖಪುಟ ತುಂಬಿತ್ತು. ಮೇಲೆ ಕೆಂಪು ಬಣ್ಣದಲ್ಲಿ ಕಲಾವಿದ ಸೂರಿ ಬರೆದ ಮುಸ್ಲಿಂ ಮಹಿಳೆಯ ಚಿತ್ರ ಲೇಖನದಲ್ಲಿನ ನೋವಿಗೆ ಪೂರಕವಾಗಿದ್ದು ಹೃದಯಸ್ಪರ್ಶಿಯಾಗಿತ್ತು. ನಾನು ಆ ಪುರವಣಿಯನ್ನು ಹಿಡಿದುಕೊಂಡೇ ಭಾಷಣ ಪ್ರಾರಂಭಿಸಿದೆ. ಗಂಟಲು ಒಣಗುತ್ತಿದ್ದರೂ ಮಾತಿನ ಓಘಕ್ಕೆ ಕೊರತೆ ಇರಲಿಲ್ಲ. ರಂಜಾನ್ ದರ್ಗಾ ಬರೆಯುವ ಆತ್ಮಕತೆ ಸರಣಿ ನೆನಪಾದಾಗಲೆಲ್ಲ ಸರಣಿಯ 65ನೇ ಕಂತು ಇಂದಿನ ಓದಿಗಾಗಿ.
ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರ ಜ್ಞಾನದ ಹಸಿವು ಅನನ್ಯವಾಗಿತ್ತು. 40 ವರ್ಷಗಳ ಹಿಂದಿನ ದಸಂಸ ಅಧ್ಯಯನ ಶಿಬಿರಗಳು ಅವರ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಒದಗಿಸುವತ್ತ ಹೆಚ್ಚಿನ ಗಮನ ಹರಿಸುತ್ತಿದ್ದವು. ಅವರ ಅನೇಕ ಅಧ್ಯಯನ ಶಿಬಿರಗಳಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ನೆನಪುಗಳು ಇಂದಿಗೂ ಖುಷಿ ಕೊಡುತ್ತವೆ. ಈ ಶಿಬಿರಗಳಲ್ಲಿ ಭಾಗವಹಿಸಲು ರಾಜ್ಯದ ಮೂಲೆಮೂಲೆಗಳಿಂದ ಶಿಬಿರಾರ್ಥಿಗಳು ಬರುತ್ತಿದ್ದರು. ಅವರ ತಿಳಿದುಕೊಳ್ಳುವ ಹಂಬಲ ಮತ್ತು ಪ್ರಶ್ನಿಸುವ ಮೂಲಕ ಉತ್ತರ ಕಂಡುಕೊಳ್ಳುವ ಕಾತರ ನನ್ನ ಮೇಲೆ ಆಳವಾದ ಪರಿಣಾಮ ಬೀರಿದವು. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಕ್ಷರದಿಂದ ವಂಚಿತರಾದವರು ಅಕ್ಷರ ಜ್ಞಾನ ಪಡೆದರೆ ಎಂಥ ಹೊಸತನವನ್ನು ಪಡೆಯಬಲ್ಲರು ಎಂಬುದಕ್ಕೆ ಈ ಯುವಕರು ಸಾಕ್ಷಿಯಾಗಿದ್ದರು.
ಇಂಥ ಅಧ್ಯಯನ ಶಿಬಿರಗಳಲ್ಲಿ ನಾನು ಗಂಟೆಗಟ್ಟಲೆ ಮಾತನಾಡುತ್ತಿದ್ದೆ. ಪ್ರಶ್ನೋತ್ತರ ನನ್ನ ಉಪನ್ಯಾಸದ ಅವಿಭಾಜ್ಯ ಅಂಗವಾಗಿರುತ್ತಿತ್ತು. ಅವರಿಗೆ ಮರುಪ್ರಶ್ನೆ ಹಾಕುತ್ತ ಅವರ ಬದುಕಿನ ಅನೇಕ ಘಟನೆಗಳನ್ನು ಅರಿತುಕೊಳ್ಳುತ್ತಿದ್ದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ನಡೆದ ಅಧ್ಯಯನ ಶಿಬಿರವೊಂದರ ಕುರಿತು ಹೇಳಬೇಕೆನಿಸುತ್ತದೆ.
ರಾತ್ರಿ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಶಿವಮೊಗ್ಗ ತಲುಪಿದೆ. ಅಲ್ಲಿಂದ ಖಾಸಗಿ ಬಸ್ಸಲ್ಲಿ ಕುಳಿತು ಸ್ವಾತಂತ್ರ್ಯ ಹೋರಾಟಗಾರರ ಪ್ರೀತಿಯ ಈಸೂರು ಮುಟ್ಟಿದೆ. ಹಳ್ಳದ ನೀರು ನಿಂತ ಪ್ರದೇಶದಲ್ಲಿ ಶಿಬಿರಾರ್ಥಿಗಳು ಸ್ನಾನ ಮಾಡುತ್ತಿದ್ದ ಸ್ಥಳಕ್ಕೆ ನನ್ನನ್ನೂ ಸಂಘಟಕರು ಕರೆದುಕೊಂಡು ಹೋದರು. ಹಸಿರಿನಿಂದ ಆವೃತವಾದ ಹೊಂಡದಂಥ ಆ ಸ್ಥಳದಲ್ಲಿ ಖುಷಿಯಿಂದ ಸ್ನಾನ ಮಾಡಿ ಶಿಬಿರ ನಡೆಯುವ ಸ್ಥಳಕ್ಕೆ ಬರುವುದರೊಳಗಾಗಿ ನಾಷ್ಟಾ ರೆಡಿ ಇತ್ತು. ಎಲ್ಲ ಶಿಬಿರಾರ್ಥಿಗಳು ತಿಂಡಿ ತಿಂದ ಕೂಡಲೆ ಶಿಬಿರ ನಡೆಯುವ ಸ್ಥಳಕ್ಕೆ ಬಂದು ಶಿಸ್ತಿನಿಂದ ಕುಳಿತರು. ಶಿಬಿರದಲ್ಲಿ ದಿನಕ್ಕೆ ಎರಡೇ ಉಪನ್ಯಾಸಗಳಿರುತ್ತಿದ್ದವು. ಮಧ್ಯಾಹ್ನ ಊಟದ ವರೆಗಿನ ಶಿಬಿರವನ್ನು ನಾನು ನಡೆಸಬೇಕಿತ್ತು. ಕ್ರಾಂತಿಯ ಹಾಡುಗಳ ನಂತರ ಉಪನ್ಯಾಸ ಶುರುವಾಯಿತು. ಆಗ ಬೆಳಗಿನ ಹತ್ತು ಗಂಟೆಯಾಗಿತ್ತು. ಮಧ್ಯಾಹ್ನ ಎರಡು ಗಂಟೆಯ ವರೆಗೆ ಉಪನ್ಯಾಸ ಮತ್ತು ಚರ್ಚೆ ನಡೆಯಿತು. ಎರಡು ಗಂಟೆಯ ನಂತರ ಊಟ ಮುಗಿಸಿ ಮೂರು ಗಂಟೆಗೆ ಇನ್ನೊಂದು ಉಪನ್ಯಾಸ ಪ್ರಾರಂಭವಾಗಬೇಕಿತ್ತು. ಆಗ ಡಿ.ಐ.ಜಿ. ಹುದ್ದೆಯಲ್ಲಿದ್ದ ಮರಿಸ್ವಾಮಿ ಅವರು ಉಪನ್ಯಾಸ ನೀಡಬೇಕಿತ್ತು. ಆದರೆ ಕಚೇರಿ ಕಾರ್ಯನಿಮಿತ್ತ ಅನಿರೀಕ್ಷಿತವಾಗಿ ಅವರು ಬರಲಿಕ್ಕಾಗದು ಎಂದು ಹೇಳಿ ಕಳುಹಿಸಿದ್ದರು. ಹೀಗಾಗಿ ಮಧ್ಯಾಹ್ನ ಕೂಡ ನಾನೇ ಮಾತನಾಡಬೇಕಾಯಿತು. ಹೋರಾಟದ ಹಾಡುಗಳ ನಂತರ ಎರಡನೇ ಉಪನ್ಯಾಸ ಪ್ರಾರಂಭಿಸಿದೆ. ನಾನು ಸಾಯಂಕಾಲ 5.30 ವರೆಗೆ ಮಾತ್ರ ಶಿಬಿರ ನಡೆಸುವುದಾಗಿ ಮೊದಲೇ ತಿಳಿಸಿದೆ. ಏಕೆಂದರೆ ಅಲ್ಲಿಂದ ಶಿವಮೊಗ್ಗೆಗೆ ಬಂದು, ರಾತ್ರಿ ಊಟ ಮುಗಿಸಿದ ನಂತರ ಬಸ್ ಹತ್ತಿ ಬೆಂಗಳೂರಿಗೆ ವಾಪಸ ಹೋಗಬೇಕಿತ್ತು.
ಆ ದಿನ ಒಟ್ಟು 7 ಗಂಟೆಗಳ ವರೆಗೆ ಮಾತನಾಡಿದ್ದು ಮತ್ತು ಪ್ರಶ್ನೋತ್ತರಗಳಲ್ಲಿ ತಲ್ಲೀನನಾಗಿದ್ದು ಮರೆಯಲಾರೆ. ಶಿಬಿರಾರ್ಥಿಗಳ ಅದಮ್ಯ ಉತ್ಸಾಹ ನನ್ನಲ್ಲಿ ಶಕ್ತಿ ತುಂಬಿತ್ತು.
ಹಳ್ಳಿಯ ಮಕ್ಕಳು ತಮ್ಮ ಹಳ್ಳಿಯಿಂದ ಕಾಲ್ನಡಿಗೆಯಲ್ಲಿ ಮೇನ್ ರೋಡ್ ವರೆಗೆ ಬಂದು ರೆಡ್‌ಬೋರ್ಡ್ ಬಸ್ ಹತ್ತಬೇಕು. ಮೇಲ್ಜಾತಿ ಶ್ರೀಮಂತರ ಮಕ್ಕಳು ಚಕ್ಕಡಿಯಲ್ಲಿ ಬರುತ್ತಾರೆ. ಅವರ ಕೆಳಜಾತಿಗಳ ಬಡವರು ನಡೆಯುತ್ತ ಬರುತ್ತಾರೆ. ಚಕ್ಕಡಿ ಖಾಲಿ ಇದ್ದರೂ ಕೆಳಜಾತಿ ಮಕ್ಕಳಿಗೆ ಅದರೊಳಗೆ ಕೂಡುವ ಭಾಗ್ಯವಿಲ್ಲ. ಆದರೆ ನಂತರ ಆ ಸರ್ಕಾರಿ ಕೆಂಪು ಬಸ್ಸಲ್ಲಿ ಎಲ್ಲರೂ ಕೂಡಿಯೆ ಕುಳಿತುಕೊಳ್ಳುತ್ತಾರೆ!
ಬಸ್‌ಗಳು ಮತ್ತು ನಗರದ ಹೊಟೇಲ್‌ಗಳು ಎಲ್ಲ ಜಾತಿ, ಧರ್ಮ ಮತ್ತು ವರ್ಗದವರನ್ನು ಒಂದೆಡೆ ಬಂದು ಕೂಡುವಂತೆ ಮಾಡಿವೆ. ಯಾವ ಧರ್ಮಗಳೂ ಮಾಡದ ಕೆಲಸವನ್ನು ಇವು ಮಾಡಿವೆ ಎಂದು ಹೇಳಿದಾಗ ಅವರ ಮುಖದಲ್ಲಿ ಉತ್ಸಾಹ ತುಂಬಿದ್ದು ಮರೆಯಲಾರದಂಥ ಅನುಭವ.
ಈ ವಿಚಾರ ಹೇಳುವಾಗ ಇನ್ನೊಂದು ಶಿಬಿರದಲ್ಲಿ ಶಿಬಿರಾರ್ಥಿಯೊಬ್ಬ ಹೇಳಿದ ಘಟನೆ ನೆನಪಿಗೆ ಬರುತ್ತಿದೆ. ಬಗರ್ ಹುಕುಂ ಸಾಗುವಳಿದಾರರು ‘ಉಳುವವನೇ ಭೂಮಿಯ ಒಡೆಯ’ ಮುಂತಾದ ಘೋಷಣೆಗಳನ್ನು ಕೂಗುತ್ತ ಜಿಲ್ಲಾ ಕೇಂದ್ರವೊಂದಕ್ಕೆ ಪಾದಯಾತ್ರೆ ನಡೆಸಿದ್ದರು. ಮಧ್ಯೆ ಸಿಗುವ ಹಳ್ಳಿಯೊಂದರಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಪಾದಯಾತ್ರೆ ಮುಂದುವರಿಸಿ, ಜಿಲ್ಲಾ ಕೇಂದ್ರ ತಲುಪಿದ ನಂತರ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸುವ ಕಾರ್ಯಕ್ರಮ ಅವರದಾಗಿತ್ತು.
ರಾತ್ರಿ ತಂಗುವ ಹಳ್ಳಿಯಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಪಾದಯಾತ್ರಿಕರಲ್ಲಿ ಕೆಲ ಭೂರಹಿತ ಬಡ ಲಿಂಗಾಯತರೂ ಇದ್ದರು. ಅವರೂ ಎಲ್ಲರ ಜೊತೆ ಊಟ ಮಾಡಿದರು. ಪಾದಯಾತ್ರೆಯಲ್ಲಿ ದಣಿದು ಹಸಿದಿದ್ದ ಎಲ್ಲರೂ ಊಟ ಮಾಡಿದ ಕೂಡಲೆ ಎಲ್ಲೆಂದರಲ್ಲಿ ಮಲಗಿದರು. ಬೆಳಿಗ್ಗೆ ಎದ್ದು ನೋಡಿದರೆ ಆ ಲಿಂಗಾಯತರು ಕಾಣಲಿಲ್ಲ. ಆದರೆ ಸ್ವಲ್ಪ ಹೊತ್ತಾದ ಮೇಲೆ ಬಂದರು. ಅವರು ಬೆಳಿಗ್ಗೆ ಎದ್ದು ಆ ಹಳ್ಳಿಯಲ್ಲಿನ ಪರಿಚಿತ ಲಿಂಗಾಯತರ ಮನೆ ಹುಡುಕಿಕೊಂಡು ಹೋಗಿದ್ದರು. ರಾತ್ರಿ ದಲಿತರ ಮನೆ ಊಟ ಮತ್ತು ವಸತಿ ನಡೆಯುತ್ತದೆ. ಆದರೆ ಹಗಲುಹೊತ್ತು ನಡೆಯುವುದಿಲ್ಲ! ಆ ಹಳ್ಳಿಯ ಲಿಂಗಾಯತರ ಮನೆಯಲ್ಲಿ ಅವರು ತಿಂಡಿ ತಿಂದು ಬಂದಿದ್ದರು. ಜಾತಿ ವ್ಯವಸ್ಥೆಗೆ ಕಟ್ಟುಬೀಳುವ ಎಲ್ಲರೂ ಮಾನಸಿಕವಾಗಿ ಗುಲಾಮರೇ ಆಗಿರುತ್ತಾರೆ. ಹೀಗೆ ಜಾತಿ ಎಂಬುದು ಟೊಳ್ಳುತನದಿಂದ ಕೂಡಿದ್ದರೂ ಅದು ಏಳು ಪದರಿನ ಚರ್ಮದ ಕೆಳಗೂ ನಮ್ಮ ರಕ್ತ ಮಾಂಸ ಹೃದಯ ಮತ್ತು ಮೆದುಳಿಗೆ ಅಂಟಿಕೊಂಡಿದೆ.
ಅಂದು ಈಸೂರಲ್ಲಿ ಸಾಯಂಕಾಲ 5.30ಕ್ಕೆ ಉಪನ್ಯಾಸ ಮತ್ತು ಪ್ರಶ್ನೋತ್ತರ ಮುಗಿಸಿ ಬಸ್ ನಿಲ್ಲುವ ಸ್ಥಳಕ್ಕೆ ಬಂದೆ. ಜೊತೆಗೆ ಎಲ್ಲ ಶಿಬಿರಾರ್ಥಿಗಳು ಖುಷಿಯಿಂದ ಬೀಳ್ಕೊಡಲು ಬಂದರು. ನಾನು ಬಸ್ ಕಾಯುವಾಗ ಕೂಡ ಆಸಕ್ತಿದಾಯಕ ಪ್ರಶ್ನೆಗಳು ಬರುತ್ತಲೇ ಇದ್ದವು. ನಾನು ಉತ್ತರ ಕೊಡುತ್ತಲೇ ಇದ್ದೆ. ಸ್ವಲ್ಪ ಹೊತ್ತಿನ ನಂತರ ಬೇರೊಂದು ಹಳ್ಳಿಯಿಂದ ಖಾಸಗಿ ಬಸ್ಸೊಂದು ಬಂದಿತು. ಒಬ್ಬ ಯುವಕ ಒಳಗೆ ನುಗ್ಗಿ ಕಿಟಕಿ ಪಕ್ಕದ ಸೀಟು ಹಿಡಿದ. ನಾನು ಹೋಗಿ ಕುಳಿತೆ. ಬಸ್ ಬಿಡುವವರೆಗೆ ಯುವಕರು ಪ್ರಶ್ನೆ ಕೇಳುತ್ತಲೇ ಇದ್ದರು. ಕೊನೆಗೂ ಬಸ್ ಬಿಟ್ಟಿತು. ನೂರಾರು ಕೈಗಳು ಟಾಟಾ ಮಾಡುತ್ತಿದ್ದವು. ಆ ದಿನಗಳು ಎಲ್ಲಿ ಹೋದವು?
ಬೆಂಗಳೂರಿನ ಕಂಟೋನ್ಮೆಂಟ್ ಬಳಿಯ ಕ್ರೈಸ್ತ ಸಂಸ್ಥೆಯೊಂದರಲ್ಲಿ ಎರಡು ದಿನಗಳ ಬಂಡಾಯ ಸಾಹಿತ್ಯ ಸಂಘಟನೆ ಶಿಬಿರ ನಡೆಯಿತು. ಕಾಮ್ರೇಡ್ ಇ.ಎಂ.ಎಸ್. ನಂಬೂದರಿಪಾಡ್ ಅವರು ಶಿಬಿರದ ಉದ್ಘಾಟನೆ ಮಾಡಿದರು. ರಾಜ್ಯಾದ್ಯಂತ ಬಂದ ಬಂಡಾಯದ ಗೆಳೆಯರು ಆ ಶಿಬಿರದಲ್ಲಿ ಭಾಗವಹಿಸಿದ್ದರು. ಅಂದು ನಾನು ‘ನನ್ನ ಪರಿಸರ ಮತ್ತು ಕಾವ್ಯ’ ಕುರಿತು ಮಾತನಾಡಿದೆ. ಶಿಬಿರಾರ್ಥಿಗಳೆಲ್ಲ ಬಹಳ ಖುಷಿಪಟ್ಟರು.
ಐಎಎಸ್ ಅಧಿಕಾರಿಯಾಗಿದ್ದ ವ್ಯಕ್ತಿಯೊಬ್ಬ ಮಲಯಾಳಂ ಭಾಷೆಯಲ್ಲಿ ಬರೆದ ‘ಯಂತ್ರಂ’ ಕಾದಂಬರಿ ಕುರಿತು ನಂಬೂದರಿಪಾಡ್ ಅವರು ಉದ್ಘಾಟನೆಯ ವೇಳೆ ಹೇಳಿದರು. ಐಎಎಸ್ ಅಧಿಕಾರಿಗಳ ಯಾಂತ್ರಿಕ ಕಾರ್ಯವಿಧಾನಗಳ ಬಗ್ಗೆ ಆ ಕಾದಂಬರಿ ತಿಳಿಸುತ್ತದೆ. ಅಧಿಕಾರಿ ಯಾಂತ್ರಿಕವಾದಾಗ, ಆಡಳಿತ ಯಂತ್ರ ತನ್ನ ಮಾನವೀಯ ಗುಣಗಳನ್ನು ಕಳೆದುಕೊಳ್ಳುತ್ತದೆ ಎಂದು ಮುಂತಾಗಿ ಅವರು ವಿವರಿಸಿದ ನೆನಪು.
1986ನೇ ಜನವರಿ 12 ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ‘ಷರಿಯತ್ ಮತ್ತು ಮುಸ್ಲಿಂ ಮಹಿಳೆ’ ಲೇಖನ ಪ್ರಕಟವಾಯಿತು. ಹಿಂದಿನ ದಿನ ಶನಿವಾರ ಪ್ರಜಾವಾಣಿಯಲ್ಲಿ ನಾನು ರಾತ್ರಿ ಪಾಳಿಯಲ್ಲಿದ್ದೆ. ಮರುದಿನ ಬೆಳಿಗ್ಗೆ ಭಾನುವಾರ ಆ ಲೇಖನ ಓದುಗರ ಕೈ ಸೇರುತ್ತದೆ ಎಂಬ ಖುಷಿ ಇತ್ತು. ಆದರೆ ರಾತ್ರಿ 9 ಗಂಟೆ ಸುಮಾರಿಗೆ ಗೆಳೆಯ ರಹಮಾನ್ ಖಾನ್ ಫೋನ್ ಮಾಡಿದ. ‘ನಾಳೆ ಬೆಳಿಗ್ಗೆ 10 ಗಂಟೆಗೆ ನಿಮ್ಮ ಅಧ್ಯಕ್ಷತೆಯಲ್ಲಿ ಷಾ ಬಾನೂಗೆ ಬೆಂಬಲ ವ್ಯಕ್ತಪಡಿಸಿ ಪತ್ರಕರ್ತರ ಸಂಘದ ಸಭಾಭವನದಲ್ಲಿ ಸಭೆ ನಡೆಯಲಿದೆ. ಪತ್ರಿಕೆಗಳಿಗೂ ಕಳಿಸಿದ್ದೇನೆ. ನಿಮಗೆ ತಿಳಿಸಲು ತಡವಾಯಿತು’ ಎಂದು ಮುಂತಾಗಿ ಹೇಳಿದ. ‘ಅಲ್ಲಾ ಮಾರಾಯಾ ರಾತ್ರಿ ಪಾಳಿ ಮುಗಿದು ವಾಹನ ಮನೆ ತಲುಪುವುದರೊಳಗಾಗಿ ನಸುಕಿನ ಮೂರು ಗಂಟೆಯಾಗುತ್ತದೆ. ಕಣ್ಣುಜ್ಜಿಕೊಳ್ಳುತ್ತ ಅದು ಹೇಗೆ ಬೆಳಿಗ್ಗೆ ಬರಲಿ’ ಎಂದು ಪ್ರಶ್ನಿಸಿದೆ. ಅದೆಲ್ಲ ಗೊತ್ತಿಲ್ಲ. ಆ ಹೆಣ್ಣುಮಗಳಿಗೆ ನಾವು ಬೆಂಬಲ ವ್ಯಕ್ತಪಡಿಸಲೇಬೇಕು. ಪರಿಸ್ಥಿತಿ ಕೈ ಮೀರುತ್ತಿದೆ. ನಮ್ಮ ವೈಯಕ್ತಿಕ ಕಾನೂನಿನಲ್ಲಿ ಕೈ ಹಾಕಲಾಗುತ್ತಿದೆ, ಇಸ್ಲಾಂ ಗಂಡಾಂತರದಲ್ಲಿದೆ ಎಂದು ಕೋಮುವಾದಿಗಳು ದೇಶದ ತುಂಬೆಲ್ಲ ಕಿರಚಾಡುತ್ತಿದ್ದಾರೆ. ನಾವು ಪ್ರತಿರೋಧ ವ್ಯಕ್ತಪಡಿಸುವುದು ಅವಶ್ಯವಾಗಿದೆ ಎಂದು ಮುಂತಾಗಿ ಹೇಳಿದ. ಆತ ಹುಂಬನಾಗಿದ್ದ. ಆದರೆ ಪ್ರಾಮಾಣಿಕನೂ ವಿಚಾರವಾದಿಯೂ ಕನ್ನಡಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧನಾದವನೂ ಅಸಾಧ್ಯ ಜೀವನ ಪ್ರೀತಿಯುಳ್ಳವನೂ ಆಗಿದ್ದ. (ಆ ಸುಂದರ ಪುರಷ ಮುಂದೆ ಕೆಲ ವರ್ಷಗಳ ನಂತರ ಬೆಂಗಳೂರಲ್ಲಿ ರಸ್ತೆ ದಾಟುವಾಗ ಸಂಭವಿಸಿದ ಅಪಘಾತದಲ್ಲಿ ಅಕಾಲಿಕವಾಗಿ ಅಸು ನೀಗಿದ್ದು ಕನ್ನಡಕ್ಕೆ ಮತ್ತು ಮಾನವೀಯತೆಗೆ ಆದ ದೊಡ್ಡ ಹಾನಿ.)
ಅವನ ಸಾಮಾಜಿಕ ಕಾಳಜಿಗೆ ತಲೆ ಬಾಗಲೇಬೇಕಾಯಿತು. ಅರ್ಧಮರ್ಧ ನಿದ್ದೆಯಿಂದ ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ಪತ್ರಕರ್ತರ ಭವನಕ್ಕೆ ಹೋದೆ. ಅದಾಗಲೇ ಪೊಲೀಸ್ ವ್ಯಾನ್ ಬಂದು ನಿಂತಿತ್ತು. ಪರಿಸ್ಥಿತಿ ಗಂಭೀರವಾಗಿದೆ, ಹೆದರಬೇಕಿಲ್ಲ, ಪೊಲೀಸ್ ಅಧಿಕಾರಿಗಳಿಗೆ ತಿಳಿಸಿ ಪೊಲೀಸ್ ಬಂದೋಬಸ್ತಿ ಮಾಡಿದ್ದೇನೆ ಎಂದು ಮುಂತಾಗಿ ತಿಳಿಸಿದ. ಇಬ್ಬರೂ ಜೊತೆಗೂಡಿ ಆ ಪುಟ್ಟ ಸಭಾಭವನಕ್ಕೆ ಹೋದೆವು. ಯಾವ ಅತಿಥಿಯೂ ಬಂದಿರಲಿಲ್ಲ. ನಮ್ಮ ಸಭಿಕರಾರೂ ಬಂದಿರಲಿಲ್ಲ. ಆದರೆ ಇಡೀ ಸಭೆ ಮುಸ್ಲಿಮರಿಂದ ತುಂಬಿತ್ತು. ಅವರೆಲ್ಲ ಈ ಸಭೆಯ ಬಗ್ಗೆ ತಿರಸ್ಕಾರಭಾವದಿಂದಲೇ ಬಂದವರು ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತಿತ್ತು.
70 ವರ್ಷದ ವೃದ್ಧೆ ಷಾ ಬಾನೂ ಇಂದೂರಿನ ನ್ಯಾಯಾಲಯದ ಮೊರೆಹೊಕ್ಕರು. ಆಗಲೆ ತನ್ನ ಅಸಿಸ್ಟಂಟ್ ವಕೀಲೆಯನ್ನು ಮರುಮದುವೆಯಾಗಿದ್ದ ಖಾನ್ ಈ ವೃದ್ಧ ಹೆಂಡತಿಗೆ ತಲಾಖ್ ಕೊಟ್ಟ!
ಆಗಸ್ಟ್ 1979ರಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು 25 ರೂಪಾಯಿ ಮಾಸಾಶನ ನಿಗದಿ ಮಾಡಿದರು. ಷಾ ಬಾನೂ ಮಧ್ಯಪ್ರದೇಶ ಹೈಕೋರ್ಟ್‌ಗೆ ಮನವಿ ಸಲ್ಲಿಸಿದರು. ಅಲ್ಲಿ ಮಾಸಾಶನ 177.20 ರೂಪಾಯಿ ಎಂದು ನಿಗದಿಯಾಯಿತು.
ರಹಮಾನ್ ಖಾನ್ ಅದೇನೋ ಹೇಳಿದ. ನಂತರ ನನಗೆ ಮಾತನಾಡಲು ತಿಳಿಸಿದ. ಅದು ನನ್ನ ಕೊನೆಯ ಭಾಷಣ ಎಂದು ಭಾವಿಸಿದೆ. ಬದುಕುಳಿಯುವ ಯಾವ ಸಾಧ್ಯತೆಯೂ ಇಲ್ಲ ಎನಿಸಿತು. ಅವರೆಲ್ಲ ‘ಏನು ಮಾತನಾಡ್ತಿಯೋ ನೋಡೋಣ’ ಎಂದು ಅಂದುಕೊಂಡವರ ಹಾಗೆ ಕುಳಿತಿದ್ದರು. ಅಂದೇ ಪ್ರಕಟವಾದ ಸಾಪ್ತಾಹಿಕ ಪುರವಣಿಯ ಪ್ರತಿ ಕೈಯಲ್ಲಿತ್ತು. ಆ ನನ್ನ ಲೇಖನ ಇಡೀ ಮುಖಪುಟ ತುಂಬಿತ್ತು. ಮೇಲೆ ಕೆಂಪು ಬಣ್ಣದಲ್ಲಿ ಕಲಾವಿದ ಸೂರಿ ಬರೆದ ಮುಸ್ಲಿಂ ಮಹಿಳೆಯ ಚಿತ್ರ ಲೇಖನದಲ್ಲಿನ ನೋವಿಗೆ ಪೂರಕವಾಗಿದ್ದು ಹೃದಯಸ್ಪರ್ಶಿಯಾಗಿತ್ತು. ನಾನು ಆ ಪುರವಣಿಯನ್ನು ಹಿಡಿದುಕೊಂಡೇ ಭಾಷಣ ಪ್ರಾರಂಭಿಸಿದೆ. ಗಂಟಲು ಒಣಗುತ್ತಿದ್ದರೂ ಮಾತಿನ ಓಘಕ್ಕೆ ಕೊರತೆ ಇರಲಿಲ್ಲ.
ಷಾ ಬಾನೂ ಹಿನ್ನೆಲೆ ಹೀಗಿದೆ: ಷಾ ಬಾನೂ ಮದುವೆ ಇಂದೂರಿನ ವಕೀಲ ಮಹಮ್ಮದ್ ಅಹಮದ್ ಖಾನ್ ಜೊತೆ 1932ರಲ್ಲಿ ಆಯಿತು. ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳಾದವು. 43 ವರ್ಷಗಳ ವೈವಾಹಿಕ ಜೀವನದ ನಂತರ 1975ರಲ್ಲಿ ಗಂಡ ಅವಳನ್ನು ಹೊರಹಾಕಿದ.
70 ವರ್ಷದ ವೃದ್ಧೆ ಷಾ ಬಾನೂ ಇಂದೂರಿನ ನ್ಯಾಯಾಲಯದ ಮೊರೆಹೊಕ್ಕರು. ಆಗಲೆ ತನ್ನ ಅಸಿಸ್ಟಂಟ್ ವಕೀಲೆಯನ್ನು ಮರುಮದುವೆಯಾಗಿದ್ದ ಖಾನ್ ಈ ವೃದ್ಧ ಹೆಂಡತಿಗೆ ತಲಾಖ್ ಕೊಟ್ಟ!
ಆಗಸ್ಟ್ 1979ರಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು 25 ರೂಪಾಯಿ ಮಾಸಾಶನ ನಿಗದಿ ಮಾಡಿದರು. ಷಾ ಬಾನೂ ಮಧ್ಯಪ್ರದೇಶ ಹೈಕೋರ್ಟ್‌ಗೆ ಮನವಿ ಸಲ್ಲಿಸಿದರು. ಅಲ್ಲಿ ಮಾಸಾಶನ 177.20 ರೂಪಾಯಿ ಎಂದು ನಿಗದಿಯಾಯಿತು.
ಈ ತೀರ್ಪಿನ ವಿರುದ್ಧ ಖಾನ್ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಹೋದರು. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ತಲಾಖ್ ಕೊಟ್ಟ ನಂತರ ಮಾಜಿ ಹೆಂಡತಿಗೆ ಜೀವನಾಂಶ ನೀಡಬೇಕಿಲ್ಲ. ಮೆಹ್ರ್ (ಸ್ತ್ರೀಧನ) ಮತ್ತು ಇದ್ದತ್ ಹಣ ಕೊಟ್ಟರೆ ಆಯಿತು, ಅದನ್ನು ಕೊಟ್ಟಾಗಿದೆ ಎಂದು ವಾದಿಸಿದ.
ಸುಪ್ರೀಂ ಕೋರ್ಟ್ 1983ನೇ ಏಪ್ರಿಲ್ 23ರಂದು ಮಧ್ಯಪ್ರದೇಶ ಹೈಕೋರ್ಟ್ ಆಜ್ಞೆಯನ್ನು ಎತ್ತಿಹಿಡಿಯಿತು. ತನ್ನ ವಾದದ ಪುಷ್ಟೀಕರಣಕ್ಕೆ ಕುರಾನ್ ಅನ್ನು ಬಳಸಿತು. ಅಪರಾಧ ದಂಡ ಸಂಹಿತೆಯ 125ನೇ ವಿಧಿ ಪ್ರಕಾರ ವಿವಾಹ ವಿಚ್ಛೇದನ ಹೊಂದಿದ ಹೆಂಡತಿಗೆ ಗಂಡನಾಗಿದ್ದವನು ಆಕೆ ಬೇರೆ ಮದುವೆಯಾಗುವವರೆಗೆ ಜೀವನಾಂಶ ಕೊಡಬೇಕು. ಈ 125ನೇ ವಿಧಿಗೆ ಮತ್ತು ಎರಡನೇ ಸೂರಾ(ಅಧ್ಯಾಯ)ದ 241ನೇ ಆಯತ್(ಸೂಕ್ತ)ಗೆ ಯಾವುದೇ ವೈರುಧ್ಯವಿಲ್ಲವೆಂದು ಸಾರಿತು. ಆದರೆ 1985ನೇ ನವೆಂಬರ್ 15ರಂದು ‘ಈ ತೀರ್ಪು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುವಂಥದ್ದಾಗಿರುವುದರಿಂದ ಹಿಂತೆಗೆದುಕೊಳ್ಳಬೇಕೆಂದು ಷಾ ಬಾನೂ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದರು. (ತಮ್ಮ ಪರವಾದ ತೀರ್ಪಿನ ವಿರುದ್ಧ ಇಡೀ ದೇಶದಲ್ಲಿ ಭುಗಿಲೆದ್ದ ಅಹಿತಕರ ವಾತಾವರಣದ ಬಗ್ಗೆ ಅವರು ನೊಂದುಕೊಂಡಿದ್ದರು.) ಹಿಂತೆಗೆದುಕೊಳ್ಳಬೇಕೆಂದು ಹೇಳುವ ಹಕ್ಕು ಅಪೀಲುದಾರರಿಗೆ ಇಲ್ಲ ಎಂದು ಈ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಚಂದ್ರಚೂಡ ಅವರು ನವೆಂಬರ್ 27ರಂದು ಸ್ಪಷ್ಟಪಡಿಸಿದರು.
ಈ ಎಲ್ಲ ವಿಚಾರಗಳನ್ನು ಸಭೆಯಲ್ಲಿ ತಿಳಿಸಿದೆ. ಈ ತೀರ್ಪಿಗೆ ಪೂರಕವಾಗಿ ಕುರಾನ್‌ನಲ್ಲಿ ಇರುವ ಸೂಕ್ತಗಳನ್ನು ನನ್ನ ಲೇಖನದಿಂದ ಓದಿ ಹೇಳಿದೆ. ಮುಸ್ಲಿಮರ ಬಡತನ, ಮಹಿಳೆಯ ಅಸಹಾಯಕ ಸ್ಥಿತಿ, ಹೊಟ್ಟೆ ಬಟ್ಟೆಗಾಗಿ ಅವರು ಕಷ್ಟಕರ ಪರಿಸ್ಥಿತಿಯಲ್ಲಿ ದುಡಿಯುವ ವಿಚಾರಗಳನ್ನು ಸೋದಾಹರಣವಾಗಿ ವಿವರಿಸಿದೆ. ನನ್ನ ಕೂಡ ವಾಗ್ವಾದವೋ ಹೊಡೆದಾಟವೋ ಮಾಡಲು ಬಂದವರ ಮನಸ್ಸು ಆರ್ದ್ರವಾಗಿತ್ತು. ಅವರೆಲ್ಲ ಮೌನವಾಗಿ ಎದ್ದುಹೋದರು. ಹೀಗೆ ಕಣ್ಣ ಮುಂದೆ ಕುಳಿತ ಸಾವು ಕರಗಿತ್ತು.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.