Advertisement
ಕತೆಗಳ ಬೆನ್ನತ್ತಿ….: ಎಚ್.‌ ಗೋಪಾಲಕೃಷ್ಣ ಸರಣಿ

ಕತೆಗಳ ಬೆನ್ನತ್ತಿ….: ಎಚ್.‌ ಗೋಪಾಲಕೃಷ್ಣ ಸರಣಿ

ಕವನಗಳು ನನ್ನ ಮನೆ ಅಡ್ರೆಸಿಗೆ ಬಂದು ಸೇರುವ ಹಾಗೆ ಯೋಜಿಸಿದ್ದೆವು. ಕವನಗಳ ಮಹಾಪೂರ ಹೇಗೆ ಬಂದವು ಅಂದರೆ ಪ್ರಪಂಚದಲ್ಲಿ ಪ್ರತಿ ಮೂರನೇ ಮನುಷ್ಯ ಒಂದು ಕವಿ ಅನಿಸುವ ಮಟ್ಟಿಗೆ! ಅದರ ಆಯ್ಕೆ, ಅವುಗಳಲ್ಲಿ ಯಾವುದಕ್ಕೆ ಬಹುಮಾನ ಮೊದಲಾದವುಗಳನ್ನು ನಾವು ನಾವೇ ನಿರ್ಧಾರ ಮಾಡುತ್ತಿದ್ದೆವು. ಕವನ ಸಂಕಲನದ ಹಸ್ತಪ್ರತಿ ಹಿಡಿದು ಬೆಂಗಳೂರಿನ ಅರಳೆ ಪೇಟೆಯ ಹಲವು ಮುದ್ರಣಾಲಯ ಮತ್ತು ಪೇಪರ್ ಮಾರಾಟದ ಅಂಗಡಿಗಳ ಸರ್ವೇ ಮಾಡಿದೆವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೬ನೇ ಬರಹ ನಿಮ್ಮ ಓದಿಗೆ

ಹಿಂದಿನ ಎಪಿಸೋಡು ಹೀಗೆ ಮುಗಿದಿತ್ತು…..

……………ನಮ್ಮ ಬಜೆಟ್‌ಗೆ ನಿಲುಕುವಂತಹ ಸಭಾಭವನ ಅಂದರೆ ಆಗ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದ ಹಾಲ್ ಒಂದೇ. ಇಪ್ಪತ್ತೈದು ರೂಪಾಯಿ ಅದರ ಬಾಡಿಗೆ. ಅದರಲ್ಲೇ ಎಲ್ಲವೂ ಅಂದರೆ ಮೈಕು, ಲೈಟು ಸೇರುತ್ತಿತ್ತು. ಕೈಯಿಂದ ಹಾಕುವ ಪುಡಿಗಾಸು ತಾನೇ ಎಲ್ಲವೂ ಸರಾಗವಾಗಿ ಅಂತ್ಯ ಕಾಣುತ್ತಿತ್ತು. ನಮ್ಮ ಕಾರ್ಯಕ್ರಮಗಳೂ ಸಹ ವೈವಿಧ್ಯತೆಯಿಂದ ಕೂಡಿರುತ್ತಿತ್ತು. ಕವನ ಸಂಕಲನ, ಕವಿಗೋಷ್ಠಿ, ಹಾಸ್ಯ ಸಂಜೆ, ಪುಸ್ತಕ ಬಿಡುಗಡೆ(ಮುಂದೆ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೊಸ ಹೆಸರು ಕೊಟ್ಟೆವು… ಬಿಡುಗಡೆ ಪದ ಜೈಲಿನಿಂದ ಖೈದಿಗಳ ಬಿಡುಗಡೆ, ಕೊಲೆ ಆರೋಪಿಗಳ ಬಿಡುಗಡೆ.. ಇಂತಹ ಪದಗಳ ಜತೆಗೆ ಹೆಚ್ಚು ಹೊಂದಾಣಿಕೆ ಯಾಗಿ ಬಿಡುಗಡೆ ಪದಕ್ಕೆ ಪರ್ಯಾಯ ಹುಡುಕ ಬೇಕಾದ ಸಂದರ್ಭ ಹುಟ್ಟಿತು. ಆಗ ಹುಟ್ಟುಹಾಕಿದ ಪದ ಲೋಕಾರ್ಪಣೆ! ನಂತರ ಇದೇ ಪದ ಸರ್ವವ್ಯಾಪಿ ಆಯಿತು), ಸಮಗ್ರ ಸಾಹಿತ್ಯ ಅವಲೋಕನ.. ಹೀಗೆ. ಇದರ ಬಗ್ಗೆ ಎಷ್ಟೊಂದು ಮಾಹಿತಿ ಇದೆ ಅಂದರೆ ಈಗಿನ ಸುಮಾರು ಖ್ಯಾತನಾಮರು ನಮ್ಮ ಸಾಹಿತ್ಯ ವೇದಿಕೆಯಲ್ಲಿ ಭಾಗವಹಿಸಿದ ನೆನಪುಗಳು ಇವೆ. ಅವರುಗಳೇ ವಾಹನ ಮಾಡಿಕೊಂಡು ಬಂದು ಒಂದೇಒಂದು ರೂಪಾಯಿ ಸಂಭಾವನೆ ಪಡೆಯದೇ ಮೂರು ನಾಲ್ಕು ತಾಸು ನಮ್ಮ ಸಂಗಡ ಕೂತು ಅವರ ಜ್ಞಾನ ನಮ್ಮೊಂದಿಗೆ ಹಂಚಿಕೊಂಡ ನೆನಪುಗಳು ಈಗಲೂ ನೆನೆಸಿಕೊಂಡರೆ ಕಣ್ಣಾಲಿಗಳು ತೇವವಾಗುತ್ತವೆ. ಇಂತಹ ಸಹೃದಯಿಗಳ ಜತೆ ಕಳೆದ ಹಲವು ಗಂಟೆಗಳು, ಅವರ ಜತೆ ಮತ್ತೆ ಮತ್ತೆ ಭೇಟಿಸಿದ ಸಂದರ್ಭಗಳು ಇವು ನಮ್ಮ ನೆನಪಿನ ಗಣಿಯಲ್ಲಿ ಆಳವಾಗಿ ಹೂತು ಹೋಗಿವೆ. ನಮ್ಮಷ್ಟೇ ಅಥವಾ ನಮಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದ ಹಲವು ವಿದ್ವಾಂಸರು, ಒಂದು ನಿಗದಿತ ಆದಾಯವಿಲ್ಲದೇ ಕನ್ನಡದ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಹಲವಾರು ವ್ಯಕ್ತಿಗಳ ಬದ್ಧತೆ ನೆನೆದು ಆಶ್ಚರ್ಯ ಪಡುವ ಹಾಗೂ ನಮ್ಮ ಕಾಲ ಚೆನ್ನಿತ್ತು ಎನ್ನುವ ಭಾವ ಹುಟ್ಟುತ್ತದೆ. ಈ ನೆನಪುಗಳನ್ನು ಮುಂದೆ ನಿಮ್ಮ ಸಂಗಡ ಹಂಚಿಕೊಳ್ಳುವ ಮಹದಾಸೆ ನನ್ನದು.

ಈಗ ಮುಂದಕ್ಕೆ ಓಡಲು ಅನುಮತಿ ಇದೆ ತಾನೇ..

ಈ ನಡುವೆ ನನ್ನ ಸಾರಸ್ವತ ಲೋಕದ ಮೊದಲ ಪ್ರೇಮದ ನಿವೇದನೆ ತಮಗೆ ಮಾಡಿದ್ದೆ ತಾನೇ. ಮೊದಲ ಪ್ರೇಮ ಅಂದರೆ ಇದ್ಯಾವುದು ಹೊಸಾ ಹೆಣ್ಣು ಪಾತ್ರವೊಂದು ನುಸುಳುತ್ತಿದೆ ಎಂದು ತಲೆ ಬೇನೆಗೆ ಒಳಗಾಗಬೇಡಿ! ಸಾರಸ್ವತ ಲೋಕದ ಮೊದಲ ಪ್ರೇಮ ಅಂದರೆ ನನ್ನ ಮೊದಲ ಒಲವು ಎನ್ನುವ ಅರ್ಥದಲ್ಲಿ ಹೇಳಿದೆ. ಸಾರಸ್ವತ ಲೋಕಕ್ಕೆ ಕತೆಗಾರ ಆಗಿ ನಾನು ಪ್ರವೇಶ ಪಡೆದಿದ್ದು ಅಂತ ಆಗಲೇ ಹೇಳಿದ್ದೆ ಅಲ್ಲವೇ. ಈ ಹಿನ್ನೆಲೆಯಲ್ಲಿ ಆಗಾಗ ಕತೆ ಬರೆಯುವ ಉಮೇದು ಒದ್ದು ಕೊಂಡು ಬರ್ತಾ ಇತ್ತು. ಕತೆ ಸಹ ಬರೀತಾ ಇದ್ದೆ. ದೆಹಲಿ ಮತ್ತಿತರ ಕಡೆ ನಡೆದಿದ್ದ ಗಲಭೆಗಳು ಸಿಖ್ ಜನಾಂಗದ ಮೇಲೆ ಒಂದು ಕಹಿ ಭಾವನೆಯನ್ನು ಆಗ ಅಂದರೆ ತೊಂಬತ್ತರ ಪೂರ್ವಾರ್ಧದಲ್ಲಿ ಹುಟ್ಟು ಹಾಕಿತ್ತು. ಸರ್ದಾರ್‌ಜಿ ಗಳ ಬಗ್ಗೆ ಇದ್ದ ಈ ಒಂದು ಕಹಿ ಭಾವನೆಯನ್ನು ಮೂಲವಾಗಿ ಇರಿಸಿಕೊಂಡು ಬರೆದ ಪ್ರೇಮ ಕತೆ ಒಂದನ್ನು ಉತ್ಥಾನ ಪತ್ರಿಕೆಗೆ ವಾರ್ಷಿಕ ಸ್ಪರ್ಧೆಗೆ ಕಳಿಸಿದ್ದೆ. ಅದರ ಶೀರ್ಷಿಕೆ ಸಹ ವಿಚಿತ್ರ ಅನಿಸುವ ಹಾಗಿತ್ತು. ಲಲ್ಲೂ…..ಬಲ್ಲೂ….ಲೂ ಲೂ ಲೂ….. ಎಂದಿರಬೇಕು! ಹೀಗೆ ಬರೆದ ಆ ಕತೆ ಉತ್ಥಾನ ಮಾಸ ಪತ್ರಿಕೆಯ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಒಂದು ಸಾವಿರ ರೂಪಾಯಿಗಳ ಬಹುಮಾನ ಗೆದ್ದಿತು! ಮಿಡಲ್ ಬರಹಕ್ಕೆ ಆಗ ಐವತ್ತು ರೂಪಾಯಿ ಸಂಭಾವನೆ. ಹಾಸ್ಯ ಲೇಖನ ಸುಧಾದಲ್ಲಿ ಪ್ರಕಟವಾದರೆ ಎಪ್ಪತ್ತೈದು ರೂಪಾಯಿ ಸಂಭಾವನೆ… ಮಂಗಳಾ ಪತ್ರಿಕೆ ಮಾತ್ರ ಸಂಭಾವನೆ ಬೇಗ ಕಳಿಸುತ್ತಿತ್ತು ಮತ್ತು ಅಲ್ಲಿಯೂ ಐವತ್ತು ರೂಪಾಯಿ ಪ್ರತಿ ಲೇಖನಕ್ಕೆ! ಹೀಗೆ ಇರಬ

ಎದ್ದಿರಬೇಕು?

ಮೂವತ್ತೈದು ನಲವತ್ತು ವರ್ಷಗಳ ಹಿಂದೆ ಸಾವಿರ ರೂಪಾಯಿ ಅಂದರೆ ಎಷ್ಟು? ಆಕಾಶ ಮುಟ್ಟಿದೆ ಅನಿಸಿಬಿಟ್ಟಿತು. ಕೆಲವು ಕತೆಗಳು ಹಲವು ಪತ್ರಿಕೆಗಳಲ್ಲಿ ಬೆಳಕು ಕಂಡಿದ್ದವು. ಈ ಪುರಾಣ ಯಾಕೆ ಹೇಳ್ತಾ ಇದಾನೆ ಇವನು ಅಂತ ತಲೆ ಕೆಡಿಸ್ಕೊ ಬೇಡಿ. ಮುಂದಿನ ಕತೆಗೆ ಇದು ಒಂದು ಪೀಠಿಕೆ ಅಷ್ಟೇ..

ಸುಮಾರು ಇದೇ ಸಮಯದಲ್ಲಿ ಮಾಸ್ತಿ ಅವರ ಕುಟುಂಬ ಮತ್ತು ಹಿತೈಷಿಗಳು ಒಂದು ಟ್ರಸ್ಟ್ ಅಥವಾ ಪ್ರತಿಷ್ಠಾನ ಸ್ಥಾಪಿಸಿದ್ದರು. ಪೂಜ್ಯ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಕನ್ನಡ ಸಾಹಿತ್ಯ ಲೋಕದ ಹೆಸರಾಂತ ಸಾಹಿತಿಗಳು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನ್ನಡ ಸಣ್ಣ ಕತೆಗಳ ಪಿತಾಮಹ ಎಂದು ಹೆಸರು ಮಾಡಿದ್ದವರು(ಈ ಒಕ್ಕಣೆ ಪಿತಾಮಹ ಎನ್ನುವ ಪದದಲ್ಲಿ ಕೊಂಚ ಭಿನ್ನಾಭಿಪ್ರಾಯ ಇರಬಹುದು. ಕನ್ನಡ ಭಾಷೆಯಲ್ಲಿ ಸಣ್ಣ ಕತೆಗಳ ಹುಟ್ಟಿಗೆ ಒಂದು ವಿಶಿಷ್ಟ ಹಾಗೂ ಹೊಸ ಆಯಾಮವನ್ನು ಮಾಸ್ತಿ ಅವರು ಕೊಟ್ಟರು ಎನ್ನುವುದು ಸಾಹಿತ್ಯ ಲೋಕ ಗುರುತಿಸಿತ್ತು)ಅದರ ಅಂದರೆ ಪ್ರತಿಷ್ಠಾನದ ಮೂಲ ಉದ್ದೇಶಗಳಲ್ಲಿ ಒಂದು ಸಣ್ಣ ಕತೆಗಳಿಗೆ ಮತ್ತು ಕತೆಗಾರರಿಗೆ ಪ್ರೋತ್ಸಾಹ ಕೊಡುವುದು. ಈ ಉದ್ದೇಶಕ್ಕೆ ಪೂರಕವಾಗಿ ವಾರ್ಷಿಕವಾಗಿ ಈವರೆಗೂ ಪುಸ್ತಕ ರೂಪದಲ್ಲಿ ಬಂದಿರದ ಆದರೆ ಅಚ್ಚಾಗಿರುವ ಸಣ್ಣ ಕತೆಗಳ   ಪ್ರತಿಗಳನ್ನು ಕತೆಗಾರರಿಂದ ಆಹ್ವಾನಿಸುತ್ತಿತ್ತು. ಒಂದು ತೀರ್ಪುಗಾರರ ಮಂಡಳಿ ಇದ್ದು ಅವರು ಹೀಗೆ ಬಂದ ಕತೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದರು. ಅದರಲ್ಲಿ ಉತ್ತಮ ಎಂದು ತೀರ್ಮಾನವಾದ ಸಂಕಲನದ ಆಯ್ಕೆ ನಡೆಯುತ್ತಿತ್ತು. ಮತ್ತು ಅಂತಹ ಸಂಕಲನ ಪ್ರಕಟಿಸಲು  ಐದು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡುತ್ತಿತ್ತು. ಆಯ್ಕೆಗೊಂಡ ಸಣ್ಣ ಕತೆಗಳ ಮುದ್ರಿತ ಸಂಕಲನವನ್ನು  ಒಪ್ಪಿಸಿ ಈ ಹಣ ಪಡೆಯ ಬೇಕಿತ್ತು. ಅಂದರೆ ಆಯ್ಕೆಗೆ ಒಪ್ಪಿಸಿದ ಸಂಕಲನ ಪುಸ್ತಕ ರೂಪದಲ್ಲಿ ಬರಬೇಕು. ಅದನ್ನು ಆಯ್ಕೆ ಸಮಿತಿಗೆ ಒಪ್ಪಿ

ಪತ್ರಿಕೆಯಲ್ಲಿ ಮಾಸ್ತಿ ಟ್ರಸ್ಟ್ ಅವರು ಪ್ರಕಟಣೆ ನೀಡಿದ್ದರು. ಈ ಪ್ರಕಟಣೆ ಸಹಜವಾಗಿ ನಮ್ಮ ಗುಂಪಿನಲ್ಲಿ ಅಲೆದಾಡಿತು. ನನ್ನ ಸಹೋದ್ಯೋಗಿಗಳು ಶ್ರೀಮತಿ ಲಲಿತಾ(ಭಾಷ್ಯಂ ತನುಜೆ)ಮತ್ತು ಶ್ರೀ ರಾಮಮೂರ್ತಿ(ಗೌತಮ) ಇವರು ಆಗಾಗಲೇ ಸುಮಾರು ಕತೆಗಳನ್ನು ಬರೆದು ದೊಡ್ಡ ಹೆಸರು ಮಾಡಿದ್ದರು. ನಾನಿನ್ನೂ ಆಗತಾನೇ ಕಣ್ಣು ಬಿಡುತ್ತಿರುವ ಕೂಸು ಅವರ ಮುಂದೆ. ನನಗೂ ಹಸ್ತಪ್ರತಿ ಸಲ್ಲಿಸಲು ಅವರು ಹೇಳಿ ಒತ್ತಾಯ ಮಾಡಿದರು. ಹೀಗೆ ನನ್ನ ಹಸ್ತಪ್ರತಿ ಸಹ ಅವರು ಮತ್ತು ಇತರ ಸುಮಾರು ಅಂದಿನ ಸಾಹಿತಿಗಳ ಜತೆಗೆ ಪ್ರತಿಷ್ಠಾನದ ಕಚೇರಿ ತಲುಪಿತು. ಅದನ್ನು ಕಳಿಸಿದ್ದು ನಾನು ಮರೆತೂ ಆಯಿತು.

ಇದಾಗಿ ಒಂದೆರೆಡು ತಿಂಗಳು ಕಳೆದ ನಂತರ ನನಗೊಂದು ಪತ್ರ ಪ್ರತಿಷ್ಠಾನದಿಂದ ಬಂತು. ನನ್ನ ಕತೆಗಳು ಪ್ರಶಸ್ತಿಗೆ ಆಯ್ಕೆ ಆಗಿದೆ ಎಂದು ಒಕ್ಕಣೆ (ಇದೇ ರೀತಿ ಬರೆದಿದ್ದಿರಬಹುದು ಎಂದು ನನ್ನ ಅನಿಸಿಕೆ. ಕಾರಣ ಯಾವುದೇ ಸಭೆ ಸಮಾರಂಭ ಈ ಪ್ರಶಸ್ತಿ ವಿತರಣೆ ಅಥವಾ ಆಯ್ಕೆಗಾಗಿ ನಡೆಯಲಿಲ್ಲ) ಪತ್ರ ತೆಗೆದುಕೊಂಡು ಮಾಸ್ತಿ ಅವರ ಮನೆ ಹುಡುಕಿ ಹೊರಟೆ. ಅದು ಬೆಂಗಳೂರಿನ ಆ ತುದಿ ಗವಿಪುರ ಅಂತಲೋ ಏನೋ ಹೆಸರು. ರಾಮಕೃಷ್ಣ ಆಶ್ರಮಕ್ಕೆ ಹತ್ತಿರ ಎಂದು ನೆನಪು. ಮಾಸ್ತಿ ಅವರ ಮನೆಯಲ್ಲಿ ಅವರ ಮೊಮ್ಮಗ ಡಾಕ್ಟರ್ ಲಕ್ಷ್ಮಣ್ ಸಿಕ್ಕಿದರು. ಟ್ರಸ್ಟ್ ಕಾರ್ಯ ಅವರೇ ನೋಡಿಕೊಳ್ಳುತ್ತಿದ್ದರು. ಅವರು ಎಂಡೋಸ್ಕೋಪಿ ತಜ್ಞ ವೈದ್ಯರು. ಹಣ ಪಡೆಯಲು ನಾವು ಮಾಡಬೇಕಾದ ಪೂರ್ವಭಾವಿ ಕಾರ್ಯದ ವಿವರ ಕೊಟ್ಟರು. ಹಾಗೇ ನಾನು ಸಲ್ಲಿಸಿದ್ದ ಹಸ್ತಪ್ರತಿಯನ್ನು ಒಂದು ಕವರ್‌ನಲ್ಲಿ ಹಾಕಿ ಅದನ್ನೂ ಕೊಟ್ಟರು. ಪುಸ್ತಕ ಮುದ್ರಿತವಾದ ಮೇಲೆ ಅದರ ಪ್ರತಿ ಕೊಡಿ. ನಿಮ್ಮ ಬಹುಮಾನದ ಮೊತ್ತ ಆಗ ನಿಮಗೆ ಕೊಡುತ್ತೇವೆ.. ಎಂದರು. ಕವರ್ ತೆಗೆದುಕೊಂಡು ಮನೆ ಸೇರಿದೆ. ಈಗ ಇದಕ್ಕೊಂದು ಪೂರಕ ಕತೆ.

…….ಈ ವೇಳೆಗೆ ನನ್ನ ಪರಿಚಿತರ ಗುಂಪು ಬೆಳೆದಿತ್ತು. ಅವರೆಲ್ಲರೂ ನನಗೆ ಆಪ್ತರೂ ಆಗಿದ್ದರು. ಕರಾವಳಿ ಕಡೆಯಿಂದ ಒಂದು ಪತ್ರಿಕೆ ಪ್ರಕಟ ಆಗುತ್ತಿತ್ತು. ಅದರಲ್ಲಿ ಹೊಸಬ ಬರಹಗಾರರ ಬವಣೆಗಳು, ಅವರ ಲೇಖನಗಳು ಪ್ರಕಟವಾಗಲು ಪಡುವ ಪಾಡು ಮೊದಲಾದವು ವಿಶೇಷವಾಗಿ ಚರ್ಚೆ ಆಗುತ್ತಿತ್ತು. ಈ ಪತ್ರಿಕೆಯ ವರದಿಗಾರ ಚಂದ್ರ ಮೊಗೇರ ನಮ್ಮ ಕಾರ್ಖಾನೆ ಸೇರಿದ್ದರು. ಅವರೂ ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿದ್ದರು. ಹೀಗಿದ್ದಾಗ ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ಯೋಚನೆಗಳು ಆಗಾಗ ಹುಟ್ಟುತ್ತಿದ್ದವು. ನಮ್ಮ ಲಲಿತಮ್ಮ (ಆಗ ಅವರಿನ್ನೂ ಲಲಿತ, ಲಲಿತಮ್ಮ ಅಂದರೆ ಅವರಿಗೆ ಆಗ ಕೋಪ ಉಕ್ಕುತ್ತಿತ್ತು. ಈಗ ಲಲಿತಾ ಅಂದರೆ ನಾಚಿ ನೀರಾಗುತ್ತಾರೆ, ಹತ್ತಿರ ಹತ್ತಿರ ನೂರಕ್ಕೆ ಇಪ್ಪತ್ತು ಕಡಿಮೆ ಅವರಿಗೆ ಈಗ)ಆಗಲೇ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು. ಪುಸ್ತಕ ಪ್ರಿಂಟ್ ಮಾಡಿ ಮಾರಿದರೆ ದುಡ್ಡು ಬರುತ್ತೆ ಎನ್ನುವ ಆಲೋಚನೆ ಹರಿಸಿದರು ಒಂದು ಮೀಟಿಂಗ್‌ನಲ್ಲಿ. ಒಂದು ಕಥಾ ಸಂಕಲನ ತರೋಣ ಕತೆ ಆಹ್ವಾನಿಸೋಣ, ಬಹುಮಾನ ಇಡೋಣ, ಬಹುಮಾನಿತರಿಗೆ ಕನಿಷ್ಠ ಇಷ್ಟು ಪುಸ್ತಕ ತಗೊಳ್ಳಿ ಅಂತ ಹೇಳೋಣ.. ದುಡ್ಡು ಸೇರಿಸಬಹುದು.. ಇದು ಅವರ ಮಾತಿನ ಜಿಸ್ಟು! ಈ ಯೋಚನೆ ಯೋಜನೆ ಆಗಿ ಒಂದು ಸಂಕಲನ ತರಬೇಕು ಎಂದುಕೊಂಡಾಗ ಕತೆ ಗಿಂತಲೂ ಕವನ ಸಂಕಲನ ತಂದರೆ ವಾಸಿ ಎನ್ನುವ ಅಭಿಪ್ರಾಯ ಮೂಡಿತು. ಕಾರಣ ಇದು ನಿಮ್ಮಲ್ಲೇ ಇರಲಿ. ಕತೆ ಅಂದರೆ ಮಿನಿಮಮ್ ಹತ್ತು ಹದಿನೈದು ಪುಟ ಬರೆದು ಬಿಡ್ತಾರೆ, ಕೆ

ಕವಿಗಳಿಂದ ಕವನ ಆಹ್ವಾನಿಸಿ ಪತ್ರಿಕೆಗಳ ವಾಚಕರ ವಾಣಿಗೆ, ಸಂಕ್ಷಿಪ್ತ ಸುದ್ದಿಗೆ ಪ್ರಕಟಣೆ ಹೊರಡಿಸಿದೆವು. ಈ ವೇಳೆಗೆ ವೇದಿಕೆಯಲ್ಲಿ ಒಂದೆರೆಡು ಬದಲಾವಣೆ ಆಗಿತ್ತು. ಪಾತಣ್ಣ ಅವರ ಜಾಗಕ್ಕೆ ನಾನು ಬಂದಿದ್ದೆ. ಹದಿನೈದು ದಿವಸಕ್ಕೆ ಒಂದು ಕಾರ್ಯಕ್ರಮ ಅದು ಹೇಗೋ ನಡೆಯುತ್ತಿತ್ತು. ನಿಧಾನಕ್ಕೆ ವೇದಿಕೆ ಹೆಸರು ಮಾಡುತ್ತಿತ್ತು. ಕವನ ವಾಚನ ಕಾರ್ಯಕ್ರಮ ಸೊಗಸಾಗಿ ನಡೆದ ನೆನಪು ಇನ್ನೂ ಇದೆ. ಈಗಿನ ಹಲವು ಪ್ರಸಿದ್ಧ ಕವಿಗಳಿಗೆ ಆಗ ವೇದಿಕೆ ಒದಗಿಸಿದ ಹೆಮ್ಮೆ ನಮ್ಮ ಗುಂಪಿನದ್ದು. ಕೆಲವು ಕವಿಗಳು ಅವರ ಕವನ ಓದಿ ಕೂಡಲೇ ಅರ್ಜೆಂಟ್ ಕೆಲಸ ಇದೆ ಎಂದು ಜಾಗ ಖಾಲಿ ಮಾಡುತ್ತಿದ್ದರು. ನಾವು ಬೆಪ್ಪರು, ಬೆಪ್ಪು ಬಡಿದ ಗೊರಿಲ್ಲಾ ಹಾಗೆ ಅವರು ಓಡುವುದು ನೋಡುತ್ತಾ ತೆಪ್ಪಗಿರಬೇಕಿತ್ತು. ಕೊನೆಯವರೆಗೂ ಅವರನ್ನು ಸಭೆಯ ಒಳಗೆ ಇರಿಸಿಕೊಳ್ಳುವ ನಮ್ಮ ಯಾವ ಉಪಾಯ ಅಥವಾ ಪ್ರಯೋಗವೂ ಸಕ್ಸೆಸ್ ಆಗಲೇ ಇಲ್ಲ! ಮತ್ತೆ ಕವನ ಸಂಕಲನದ ವಿಷಯಕ್ಕೆ..

ಕವನಗಳು ನನ್ನ ಮನೆ ಅಡ್ರೆಸಿಗೆ ಬಂದು ಸೇರುವ ಹಾಗೆ ಯೋಜಿಸಿದ್ದೆವು. ಕವನಗಳ ಮಹಾಪೂರ ಹೇಗೆ ಬಂದವು ಅಂದರೆ ಪ್ರಪಂಚದಲ್ಲಿ ಪ್ರತಿ ಮೂರನೇ ಮನುಷ್ಯ ಒಂದು ಕವಿ ಅನಿಸುವ ಮಟ್ಟಿಗೆ! ಅದರ ಆಯ್ಕೆ, ಅವುಗಳಲ್ಲಿ ಯಾವುದಕ್ಕೆ ಬಹುಮಾನ ಮೊದಲಾದವುಗಳನ್ನು ನಾವು ನಾವೇ ನಿರ್ಧಾರ ಮಾಡುತ್ತಿದ್ದೆವು. ಕವನ ಸಂಕಲನದ ಹಸ್ತಪ್ರತಿ ಹಿಡಿದು ಬೆಂಗಳೂರಿನ ಅರಳೆ ಪೇಟೆಯ ಹಲವು ಮುದ್ರಣಾಲಯ ಮತ್ತು ಪೇಪರ್ ಮಾರಾಟದ ಅಂಗಡಿಗಳ ಸರ್ವೇ ಮಾಡಿದೆವು. ಲಲಿತಮ್ಮ ಅವರು ಆಗಲೇ ಈ ವಿಷಯದಲ್ಲಿ ಅನುಭವ ಹೊಂದಿದ್ದರಿಂದ ಇಂತಹ ಅಂಗಡಿಗೆ ಹೋಗಿ, ಇಂತಹವರನ್ನು ಭೇಟಿ ಮಾಡಿ, ಇಂತಹ ಪ್ರೆಸ್ ನಲ್ಲಿ ವಿಚಾರಿಸಿ… ಹೀಗೆ ಸಲಹೆ ಸೂಚನೆ ಕೊಡುತ್ತಿದ್ದರು. ಮೊಗೇರ ಸಂಕಲನದ ಮುನ್ನುಡಿ ಬರೆದರೆ ಅದರ ಪ್ರೂಫ್ ಮತ್ತು ಮುಖಪುಟದ ಜವಾಬ್ದಾರಿ ನನ್ನದು. ಹೀಗೆ ಬೆಟ್ಟಕ್ಕೆ ಕಲ್ಲು ಹೊತ್ತು ಒಂದು ಕವನ ಸಂಕಲನ ಬಂತು. ಅದಕ್ಕೆ ಚಿತ್ತಾರ ಎನ್ನುವ ಸುಂದರವಾದ ಹೆಸರೂ ಇಟ್ಟೆವು. ಅದರ ಬಿಡುಗಡೆ, ಬಹುಮಾನಿತರಿಗೆ ಬಹುಮಾನ.. ಹೀಗೆ ಒಂದು ಕಾರ್ಯಕ್ರಮ ಗಾಂಧಿ ಸಂಘದಲ್ಲಿ ನಡೆಯಿತು. ಯಾರ್ಯಾರ ಕವನ ಪ್ರಕಟ ಆಗಿದೆಯೋ ಅವರೆಲ್ಲ ತಲಾ ಐವತ್ತು ಪ್ರತಿ ಕೊಳ್ಳಿ ಎನ್ನುವ ಸಂದೇಶ ಸಹ ಕಳಿಸಿದೆವು! ಯಾರೋ ಒಬ್ಬರೋ ಇಬ್ಬರೋ ಹತ್ತತ್ತು ಪ್ರತಿ ಕೊಂಡ ನೆನಪು. ಕಾರ್ಯಕ್ರಮದ ನಂತರ ಆಯವ್ಯಯ ಲೆಕ್ಕ ನೋಡಿದಾಗ ಋಣಭಾರ ಹೆಚ್ಚಿತ್ತು! ನಮ್ಮ ಲೆಕ್ಕ ಪೂರ್ಣ ಉಲ್ಟಾ ಆಗಿತ್ತು. ಆದರೂ ಇದು ಒಂದು ಅನುಭವದ ಪಾಠ ನಮಗೆ ಅಂತ ಅರಗಿಸಿಕೊಂಡೆವು! ಈ ಸಾಹಸದಲ್ಲಿ ಒಳಗೊಂಡ ಚಂದ್

ಇದೇ ಸಮಯದಲ್ಲಿ ಪರಿಚಿತರಾದ ಮತ್ತೊಬ್ಬರು ಶ್ರೀ ಪ್ರಭಾಕರ್. ಇವರದ್ದು ಸಹ ಒಂದು ಪ್ರಕಾಶನ ಸಂಸ್ಥೆ. ಇವರದು ತಲಕಾಡು ಪ್ರಕಾಶನ ಎಂದಿರಬೇಕು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಉದ್ಯೋಗಿಯಾಗಿದ್ದ ಪ್ರಭಾಕರ ಅವರು ಪ್ರಕಾಶನವನ್ನು ಒಂದು ಹವ್ಯಾಸವಾಗಿ ನಡೆಸುತ್ತಿದ್ದರು.

ಕತೆಯ ಜಾಡಿಗೆ ಬರುವ ಮುನ್ನ ಮತ್ತೊಂದು ಹಿನ್ನೆಲೆ, ಅದರಿಂದ ಆದ ಪರಿಣಾಮ ಇವನ್ನು ನಿಮಗೆ ವಿವರಿಸಲೇ ಬೇಕು. ಈಗ ಅದರ ಬಗ್ಗೆ. ನಮ್ಮ ಕಾರ್ಯಕ್ರಮಕ್ಕೆ ಸುಮಾರು ಸಾಹಿತಿಗಳು ಗಣ್ಯರು ಬಂದು ಕೈ ಜೋಡಿಸುತ್ತಿದ್ದರು ಎಂದು ಹೇಳಿದ ನೆನಪು. ಕಾರ್ಯಕ್ರಮ ಯೋಜಿಸಬೇಕಾದರೆ ಯಾವ ಕಾರ್ಯಕ್ರಮ, ಹೇಗೆ ಮಾಡುವುದು, ಭಾಷಣ ಯಾರಿಂದ… ಮೊದಲಾದ ರೂಪುರೇಷೆ ಸಿದ್ಧವಾಗುತ್ತಿತ್ತು.

ಬೇಲೂರು ರಾಮಮೂರ್ತಿ ಆಗಲೇ ಹಲವು ಕಾದಂಬರಿಗಳು ಮತ್ತು ಸಣ್ಣ ಕತೆಗಳ ಮೂಲಕ ಜನಪ್ರಿಯರಾಗಿದ್ದರು. ನಮ್ಮಲ್ಲೇ ಒಬ್ಬರಾಗಿರುವ ಇವರ ಸಾಹಿತ್ಯ ದರ್ಶನ ಮಾಡಿದರೆ ಹೇಗೆ ಎನ್ನುವ ಐಡಿಯಾ ಹುಟ್ಟಿತು. “ಬೇಲೂರು ರಾಮಮೂರ್ತಿ ಅವರ ಸಾಹಿತ್ಯ …” ಕುರಿತು ಒಂದು ವಿಚಾರ ಸಂಕಿರಣ ಹಮ್ಮಿಕೊಂಡೆವು. ನಮ್ಮ ಅಂದಿನ ಭಾಷಣಕಾರರು ಶ್ರೀ ಈಶ್ವರ ಚಂದ್ರ ಮತ್ತು ಶ್ರೀ ನರಹಳ್ಳಿ ಬಾಲಸುಬ್ರಮಣ್ಯ ಅವರು. ಈಶ್ವರ ಚಂದ್ರ  ಅವರು HAL ಉದ್ಯೋಗಿ ಮತ್ತು ತಮ್ಮ ಸಣ್ಣಕತೆಗಳಿಂದ ಆಗಲೇ ಖ್ಯಾತರಾಗಿದ್ದರು. ನರಹಳ್ಳಿ ಬಾಲಸುಬ್ರಮಣ್ಯ ಅವರು ಶೇಷಾದ್ರಿಪುರದ ಕಾಲೇಜಿನಲ್ಲಿ ಅಧ್ಯಾಪಕರು ಮತ್ತು ವಿಮರ್ಶಕರಾಗಿ ಖ್ಯಾತರು. ಇಬ್ಬರೂ ನಮ್ಮ ಮೇಲಿನ ಪ್ರೀತಿ ವಿಶ್ವಾಸದಿಂದ ಕಾರ್ಯಕ್ರಮಕ್ಕೆ ಬಂದರು ಮತ್ತು ಮೌಲಿಕ ಭಾಷಣ ಮಾಡಿದರು. ಇಬ್ಬರಿಗೂ ಯಾವುದೇ ಸಂಭಾವನೆ, ವಾಹನ ಸೌಲಭ್ಯ ಕೊಡುವ ಆರ್ಥಿಕ ಸಂಪನ್ಮೂಲ ನಮ್ಮಲ್ಲಿ ಇರಲಿಲ್ಲ. ಎರಡು ಗ್ಲೂಕೋಸ್ ಬಿಸ್ಕತ್ತು, ಅರ್ಧ ಲೋಟ ಕಾಫಿ ಇಷ್ಟು ಮಾತ್ರ ನಮ್ಮ ಆತಿಥ್ಯ. ಇದನ್ನು ಈಗ ನೆನಸಿಕೊಂಡರೂ ಅವಮಾನದಿಂದ ತಲೆ ತಗ್ಗಿಸುವ ಹಾಗೆ ಆಗುತ್ತೆ. ಆದರೆ ಆಗ ಈ ರೀತಿಯ ಯೋಚನೆಗಳೇ ತಲೆಯಲ್ಲಿ ಸುಳಿಯುತ್ತಿರಲಿಲ್ಲ!

ಬೇಲೂರರ ಸಾಹಿತ್ಯದ ಬಗ್ಗೆ ಮಾತು ಭಾಷಣವಾಯಿತು. ವಂದನಾರ್ಪಣೆ ನನ್ನದೇ. ಇಬ್ಬರೂ ಭಾಷಣಕಾರರಿಗೆ ಧನ್ಯವಾದ ಹೇಳಿದೆ. ನಮ್ಮ ಮೇಲಿನ ಪ್ರೀತಿ ವಿಶ್ವಾಸದಿಂದ ಅವರು ತಮ್ಮ ಅಮೂಲ್ಯ ಸಮಯ ನಮಗೆ ಕೊಟ್ಟಿರುವುದು ಮತ್ತು ನಾವು ನಮ್ಮ ಬಡತನದಲ್ಲಿ ಅವರಿಗೆ ಸಾರಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಕೋರಿದೆ. ಇಷ್ಟಕ್ಕೇ ಮುಗಿಸಿದ್ದರೆ ಆಗಿತ್ತು. ಆದರೆ ತಲೆಯಲ್ಲಿನ ಹನುಮಂತ ಅದರ ಬಾಲ ಆಡಿಸಿತು. ಇವತ್ತು ಕಲ್ಲೇಟಿ ಗಿಂತ ಹೂವೇಟು ಹೆಚ್ಚಿರುತ್ತೆ ಅಂತ ಅನಿಸಿದ್ದು ತಿರುಗಮುರುಗ ಆಯಿತು. ಆದರೂ ನಿಮ್ಮ ಅನಿಸಿಕೆ ತನ್ನ ಪ್ರಭಾವ ಬೀರುತ್ತದೆ… ಎಂದೆ. ನಂತರದ ದಿವಸಗಳಲ್ಲಿ ಇದು ನಮ್ಮ ನಮ್ಮೊಳಗೆ ಒಂದು ಚರ್ಚೆಯ ಸಂಗತಿ ಆಯಿತು. ಈ ಸಂಗತಿ ಇಷ್ಟು ವಿಸ್ತಾರವಾಗಿ ಹೇಳಲು ಒಂದು ವಿಶೇಷ ಕಾರಣ ಇದೆ ಅಂತ ಹೇಳಿದ ನೆನಪು. ಈಗ ಅದಕ್ಕೇ ಬಂದೆ.

ಈಶ್ವರ ಚಂದ್ರ ಅವರ ಮನೆ ಕಮಲಾ ನಗರದಲ್ಲಿ. ಅಲ್ಲಿನ ಸೆಂಟ್ರಲ್ ಬ್ಯಾಂಕ್‌ನಲ್ಲಿ ಅವರ ಖಾತೆ ಮತ್ತು ಬ್ಯಾಂಕಿಗೆ ಆಗಾಗ ಭೇಟಿ. ಅಲ್ಲಿಗೆ ಇವರು ಹೋಗಿದ್ದಾಗ ಅಲ್ಲಿನ ಸ್ಟಾಫ್ ಒಬ್ಬರ ಭೇಟಿ ಆಗುತ್ತದೆ. ಅವರು ತಾವೂ ರೈಟರ್ (ಅಂದರೆ ಬರಹಗಾರ ಅಂತ. ಇದರ ಅಂದರೆ ಈ ಪದದ ಬಗ್ಗೆ ಒಂದು ಜೋಕ್ ಇದೆ. ಸಾಹಿತಿ ಒಬ್ಬರು ಪೊಲೀಸ್ ಅಧಿಕಾರಿ ಒಬ್ಬರ ಸಂಗಡ ತಮ್ಮ ಪರಿಚಯ ಹೀಗೆ ಮಾಡಿಕೊಂಡರು.. ನಾನು ರೈಟರ್ ಅಂತ. ಪೊಲೀಸ್ ಅಧಿಕಾರಿ ಯಾವ ಸ್ಟೇಷನ್? ಅಂತ ಕೇಳಿದರು. ಪೊಲೀಸ್ ಸ್ಟೇಷನ್‌ಗಳಲ್ಲಿ ದೂರು ಬರೆಯುವವರನ್ನು ನೇಮಿಸುತ್ತಾರೆ. ಅವರಿಗೆ ರೈಟರ್ ಎನ್ನುವ ಹೆಸರು!) ಅಂತ ಪರಿಚಯಿಸಿಕೊಂಡರು. ಒಂದು ಸಾಹಿತ್ಯ ಆಸಕ್ತರ ಗುಂಪು ಕೆಲಸ ಮಾಡ್ತಾ ಇದೆ… ಅಂತ ನಮ್ಮ ವಿವರ ಈಶ್ವರ ಚಂದ್ರ ಅವರಿಗೆ ನೀಡಿದರು. ಅವರು ಅಂದರೆ ಶ್ರೀ ಕೃಷ್ಣ ಸುಬ್ಬರಾವ್. ಬ್ಯಾಂಕ್ ಕೂಡ ಒಂದು ಕೈಗಾರಿಕೆ. ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆಗೆ ಬ್ಯಾಂಕ್ ಸಿಬ್ಬಂದಿ ಸಹ ಸದಸ್ಯರಾಗಬಹುದು ಎಂದು ಅರ್ಥೈಸಿದರಾ…… ಹೀಗೆ ಕೃಷ್ಣ ನಮ್ಮ ಗುಂಪಿಗೆ ಬಂದದ್ದು. ಈ ಹಿನ್ನೆಲೆಗೂ ನನ್ನ ಸಂಕಲನಕ್ಕೂ ಸಂಬಂಧ ಈಗ ಶುರು.

ಮಾಸ್ತಿ ಟ್ರಸ್ಟ್ ಅವರು ನನಗೆ ನೀಡಿರುವ ಪುಸ್ತಕ ಪ್ರಕಟಣಾ ಆಹ್ವಾನ ಗೆಳೆಯರೆಲ್ಲರಿಗೂ ಹಬ್ಬಿತು. ಕೆಲವು ಕೆಲವೇನು ಹಲವಾರು ಐಡಿಯಾಗಳು ಹೊರಹೊಮ್ಮಿದವು. ಯಾರಾದರೂ ಪಬ್ಲಿಷರ್‌ಗೆ ಒಪ್ಪಿಸಿಬಿಡೋಣ. ಅವರು ಪಬ್ಲಿಷ್ ಮಾಡಲಿ ಸ್ವಲ್ಪ ಹಣ ನಮಗೆ ಕೊಡಲಿ ಇಂದ ಹಿಡಿದು ಕಾಸು ಹಾಕಿ ಪಬ್ಲಿಷ್ ನಾವೇ ಮಾಡೋಣ, ನಾವೇ ಮಾರಾಟ ನೋಡಿಕೊಳ್ಳೋಣ, ನಮಗೂ ಅನುಭವ ಆಗುತ್ತೆ. ನಮ್ಮನ್ನ ಗೈಡ್ ಮಾಡೋಕ್ಕೆ ನಮ್ಮ ಎಕ್ಸ್ಪರ್ಟ್‌ಗಳು ಇರ್ತಾರೆ, ಮುಂದೆ ಇದನ್ನೇ ನಮ್ಮ ಮುಖ್ಯ ಕಾಯಕ ಮಾಡ್ಕೋಬಹುದು….. ಹೀಗೆ ಐಡಿಯಾಗಳ ಮಹಾಪೂರ ಸಪ್ತ ಸಾಗರದ ಹಾಗೆ ಹರಿದು ಬಂತಾ?

ಒಂದು ರಫ್ ಅಂದಾಜಿನಂತೆ ಪುಸ್ತಕ ಪ್ರಕಟಣೆಗೆ ಆಗ ಕಡಿಮೆ ಎಂದರೂ ಎಂಟು ಸಾವಿರ ಬೇಕಿತ್ತು. ಕೈಯಿಂದ ದುಡ್ಡು ಹಾಕಿಕೊಂಡು ಸಾಹಸ ಮಾಡುವ ಮನಸ್ಸಿಲ್ಲ, ಬಹುಮಾನದ ಚೆಕ್ ಬೇಡ ಅಂತ ವಾಪಸ್ ಮಾಡುವ ನನ್ನ ಲೌಡ್ ಥಿಂಕಿಂಗ್ ಹರಿಯಬಿಟ್ಟೆ.

“ಅಯ್ಯೋ ಹಾಗೆ ಮಾತ್ರ ಮಾಡಬೇಡಿ. ಎಷ್ಟೊಂದು ಜನ ಇಂತಹ ಅವಕಾಶಕ್ಕೆ ಮುಗಿ ಬೀಳ್ತಾರೆ ಗೊತ್ತಾ? ವಶೀಲಿ ಮಾಡ್ತಾರೆ. ನಿಮಗೆ ಅದೆಲ್ಲಾ ತರಲೇ ತಾಪತ್ರಯ ಇಲ್ಲದೆ ಅಯಾಚಿತವಾಗಿ ಸಿಕ್ಕಿರೋ ಅವಕಾಶ ಇದು..

ನಿಮ್ಮದು ಕಾಸಿನ ಪ್ರಾಬ್ಲಮ್ ಆದರೆ ಅದಕ್ಕೊಂದು ಉಪಾಯ ಇದೆ. ಒಬ್ಬರು ಪಬ್ಲಿಷರ್ ನನಗೆ ಗೊತ್ತು. ಹೋಗಿ ಅವರ ಹತ್ರ ನೀವು ಮಾತಾಡಿ. ನಾನೂ ಮಾತಾಡ್ತೀನಿ. ದುಡ್ಡು ಆಮೇಲೆ ಕೊಡುವ ಪ್ಲಾನ್ ಮಾಡೋಣ ಅಂದರು, ಲಲಿತಮ್ಮ. ಸುಮಾರು ಪುಸ್ತಕದ ಲೇಖಕಿ, ಪ್ರಕಾಶಕಿ ಆಗಿದ್ದ ಅವರಿಗೆ ಈ ಉದ್ಯಮದ ಲೋಕ ಚಿರಪರಿಚಿತವಾಗಿತ್ತು.

ಇದೂ ಒಳ್ಳೇ ಸಲಹೆ ಅನಿಸಿತು. ಮುಂದೆ ಒಬ್ಬರು ಪ್ರಿಂಟರ್ ಪಬ್ಲಿಷರ್ ಮತ್ತು ಕನ್ನಡ ಸಾಹಿತ್ಯ ಲೋಕದ ಅಪ್ರತಿಮ ಪ್ರತಿಭೆ ಒಬ್ಬರ ಪರಿಚಯ ಆಯಿತು, ಅವರ ಮೂಲಕ ನನ್ನ ಲೋಕದ ಹರವೂ ಹೆಚ್ಚಿತು… ಮತ್ತು ಒಂದು ಹೊಸಾ ಚಟ ಅಂಟಿತು! ಈ ಹೊಸಾ ಚಟದ ಬಗ್ಗೆ ಮತ್ತು ಹೊಸಾ ಪರಿಚಯದ ಕುರಿತು ಮುಂದೆ ಹೇಳುತ್ತೇನೆ. ಅಲ್ಲಿಯ ಗಂಟ ಸರ, ಮೇಡಮ್ಮೊರಾ ಗುಡ್ ಬೈ ರೀ……

ಇನ್ನೂ ಉಂಟು…

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ